ಚುಟುಕಗಳು

 

ಸಾಂಗತ್ಯ

ಸೂಜಿ ಮೊನೆಯ ಚೂಪಿನಂತೆ

ನಿನ್ನ ಹೊಳಪು, ಝಳುಪು

ಅದಕ್ಕೆಂದೇ ದಾರವಾಗಿ ಅಂಟಿದ್ದೇನೆ

ಇನ್ನೊಂದು ತುದಿಯಲ್ಲಿ,

ನಯವಾಗಿ ಸಾಗಿದೆ, ಬದುಕು!!!

 

ಮೇಕಪ್ಪು ?!

ಗಂಡಸಿಗೇಕೆ ಬೇಕು ಮೇಕಪ್ಪು

ತಪ್ಪಿ ನುಡಿದಾಗಲೆಲ್ಲ

ಮಾಡುವ ತಪ್ಪುಗಳನ್ನೆಲ್ಲ

ಹೆಂಡತಿ ಸರಿತೂಗಿಸಿ ಮಾಡುವಾಗ make-up ಉ?

 

ತಂತ್ರ

ಗಮನಿಸುವ ಸೂಕ್ಷ್ಮವಿಲ್ಲವೆಂಬ ದೂರು

ತಾನು ತೊಡುವ ಉಡುಗೆ-ತೊಡುಗೆ

ಗಮನಿಸಿದರೆ ಅತಿಯಾಯ್ತು ಎನ್ನುವ ಕೋಪ-ತಾಪ

ಹದಿನಾರು ಸಾವಿರ ಹುಡುಗಿಯರ

ಹೇಗೆ ಗೆದ್ದೆಯೋ, ಹೇಳಿಕೊಡು ಗೋಪ!!?

 

ದೂರು

ಬೇಗ ವಯಸ್ಸಾಗುವುದಿಲ್ಲ ಗಂಡಸರಿಗೆ

ಎನ್ನುತ್ತ ಕೊರಗುವರು ಹೆಂಗಸರು

ಹೆಂಗಸಿನ ತಗಾದೆಗಿಲ್ಲ ಮೊನೆ

ತನ್ನ ಹೆಂಡತಿ ಅವಳಂತಿಲ್ಲ,ಹದಿನಾರಲ್ಲ

ಎನ್ನುತ್ತ ಚಂಚಲರು ಗಂಡಸರು

ಗಂಡಸಿನ ಚಪಲಕ್ಕಿಲ್ಲ ಕೊನೆ!!!

 

ಕಡಿವಾಣ

ನಿಧಾನ ಗತಿ ಗಂಡಸಲ್ಲಿ ವಯಸ್ಸು

ಗೊತ್ತು ಗುರಿಯಿಲ್ಲದ ಹುಮ್ಮಸ್ಸು

ಚಂಚಲ ಚಪಲಚಿತ್ತ ಮನಸ್ಸು

ಕಡಿವಾಣಕ್ಕೆ ಬೇಕೊಬ್ಬ ಹೆಂಗಸು!!!

ಫ಼ೇಸ್ ಬುಕ್ – ಜಿ ಎಸ್ ಎಸ್ ಪ್ರಸಾದ್ ಕವಿತೆ

ಎಂತಹ ವಿಸ್ಮಯ ಈ ಫ಼ೇಸ್ ಬುಕ್ಕು
ತಗೊ ನನ್ನಿಂದ ಒಂದು ಸೂಪರ್ ಲೈಕು

ಬರ್ತಡೆ ಹಾಲಿಡೆ ಫೊಟಗಳ ಥಳಕು
ಶುಭ ಹಾರೈಕೆ ಎಲ್ಲರಿಗು ಬೇಕು

ಲಲನೆಯರ ವಿವಿಧ ಭಂಗಿ ಬಳುಕು
ಲೈಕುಗಳ ಪಟ್ಟಿಗೆ ಹಾತೊರೆಯುವ ಬದುಕು

ಖುಷಿ ಕೊಡುವ ನೂರಾರು ಸರಕು,
ಮಿತಿಯಿಲ್ಲ, ಎಷ್ಟು ಬೇಕಾದರೂ ತುರುಕು!

ಪರಸ್ಪರ ಭೇಟಿಯಾಗದೆ ವೃದ್ಧಿಸಿದ ಗೆಳೆತನ
ಫ಼ೇಸ್ ಬುಕ್ಕಿನಿಂದ ಇನ್ನಿಲ್ಲ ಒಂಟಿತನ

ಕಾಲದೇಶಗಳ ಮಿತಿಯರಿಯದ ಗ್ಲೋಬಲ್ ಸಂತಾನ
ಜಡಗಟ್ಟಿದ ಬದುಕಿಗೆ, ಫೇಸ್ ಬುಕ್; ನೀನೆ ಚೇತನ!

(ಇತ್ತೀಚೆ ನಡೆದ ಹಾಸ್ಯಕವಿಗೋಷ್ಠಿಯಲ್ಲಿ ಓದಿದ್ದು)