ಕನ್ನಡ ಪ್ರಜ್ಞೆ ಮತ್ತು ಜನಪದ – ವಿನತೆ ಶರ್ಮ

janapada
ಸೌಜನ್ಯ: http://padmasridhara.blogspot.in

ಕನ್ನಡ ಪ್ರಜ್ಞೆ ಮತ್ತು ಜನಪದ ಎಂದು ಏನನ್ನ ಬೆಸೆಯುವುದು? ಯಾವುದು ಮುಖ್ಯವಾಗುತ್ತದೆ? ಕನ್ನಡತನದಲ್ಲಿ ಅಡಗಿರುವ ನಮ್ಮ ಜನ ಪ್ರಜ್ಞೆಯೋ, ‘ಪದ’ವೋ ಅಥವಾ ‘ಜನ’ ದಲ್ಲಿರುವ ಕನ್ನಡತನವೋ? ಕಗ್ಗಂಟು ಇದು. ಹೌದು, ಜನಪದವೆಂದರೆ ಸುಲಭಕ್ಕೆ ಸಿಗುವ ಅರ್ಥವಿಲ್ಲ. ನಮ್ಮ ಒಂದು ಸಮುದಾಯದ ಮಾತು, ಮನಸ್ಸು, ಇರುವಿಕೆ ಎಲ್ಲವನ್ನೂ ಸಮಷ್ಟಿಯಾಗಿ ನೋಡುವುದು ‘ಜನಪದ’ ವಾಗುತ್ತದೆ. ನಾವು ಕನ್ನಡ ಜನರು – ಕರ್ನಾಟಕ ಎಂಬ ಭೌಗೋಳಿಕ ಪ್ರದೇಶದಲ್ಲಿ ವಿವಿಧ ಬೇರುಗಳನ್ನು ಬಿಟ್ಟುಕೊಂಡು ಬಂದಿರುವ ನಾವು – ಒಂದು ಭಾಷೆಯಿಂದ ಮಾತ್ರ ‘ ಕನ್ನಡ ಜನ’ ಎಂದು ಕರೆಸಿಕೊಳ್ಳುತ್ತೇವೆ. ಆದರೆ ನಮ್ಮ ‘ಪದ’ ಕ್ಕೆ ಇರುವ ವಿವಿಧತೆಗಳು ಸಾವಿರಾರು. ಉದಾಹರಣೆಗೆ ನಮ್ಮ ಕನ್ನಡ ಬಳಗದಲ್ಲೇ ಎಷ್ಟು ಬಗೆಯ ಕನ್ನಡಿಗರಿದ್ದೀವಿ!! ಕರ್ನಾಟಕದಿಂದ ಬಂದಿರುವ ನಾವು ನಮ್ಮೊಡನೆ ವಿವಿಧ ರೂಪಾಂತರಗಳ ಕನ್ನಡ ಭಾಷೆಯನ್ನೂ, ತಿಂಡಿತಿನಿಸುಗಳನ್ನು, ಆಚಾರ ವಿಚಾರಗಳನ್ನು, ಉಡುಗೆ-ಆಭರಣ, ಸಂಕೇತಗಳು, ಸಂಗೀತ, ಆಟಗಳು… ಎಷ್ಟೆಲ್ಲವನ್ನು ದಿನನಿತ್ಯದ ಆಚರಣೆಯಲ್ಲಿ ಇಟ್ಟುಕೊಂಡು ಜೀವಿಸುತ್ತಿದ್ದೀವಿ. ಅದೆಲ್ಲಾ ನಮ್ಮತನ. ಅಂದರೆ ಕನ್ನಡ ಜನಪದ.
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದ ಹಾ.ಮಾ.ನಾಯಕರು ‘ಜನಪದ’ ಎಂಬ ಬಳಕೆಯನ್ನು Folk ಪದ-ಸಂವಾದಿಯಾಗಿ ರೂಢಿಗೆ ತಂದರು. ಒಂದು ನಿರ್ದಿಷ್ಟ ಜನಸಮುದಾಯವು ತಮ್ಮದೇ ಆದ ಒಂದು ಭಾಷೆ, ಆಚರಣೆ-ನಂಬಿಕೆ ಬದ್ಧರಾದಾಗ ಅಲ್ಲಿ ಜನಪದ ಜನ್ಮತಾಳುತ್ತದೆ. ಅದು ಅಧಿಕಾರ ವರ್ಗದ ಯಾಜಮಾನ್ಯಕ್ಕೆ ಸಿಕ್ಕಿಕೊಳ್ಳದೆ ಸಮಾಜದ ಕೆಳಗಿನ ಸ್ತರವಾಗಿ ತನ್ನದೇ ಪ್ರತ್ಯೇಕವಾದ ‘ಸಮೂಹ’ ಗುಣವನ್ನು ಪಡೆದುಕೊಂಡು ಸಂಪ್ರದಾಯ, ಕಲೆ, ಗುಡಿ ಕೈಗಾರಿಕೆ, ನಂಬಿಕೆಗಳನ್ನು ವರ್ಗಾಯಿಸುತ್ತದೆ. ಜನಪದವು ಶಿಷ್ಟ ಭಾಷೆಯ, ಯಾಜಮಾನ್ಯಕ್ಕೆ ಹೊರತಾದ ಬೇರೆ ದಿಕ್ಕಿನಲ್ಲಿ ನಿಂತ ಜನಶಕ್ತಿ. ಮುಖ್ಯವಾಗಿ ಜನಪದವು ಮೌಖಿಕ ಸಂಕಥನದಲ್ಲಿ ಸಂಗ್ರಹವಾಗಿರುವ ಲೋಕಜ್ಞಾನ, ಅರಿವು, ತಿಳುವಳಿಕೆ, ಸಂಸ್ಕೃತಿ, ಮತ್ತು ಪರಂಪರಾನುಗತವಾಗಿ ದಾಖಲಾದ ಜೀವನ ವಿಧಾನ. ಕೇಳುವುದು-ನೆನಪಿಡುವುದು, ನೋಡುವುದು-ಅನುಕರಣೆ ಮಾಡುವುದು ಎಂಬ ಸೂತ್ರಗಳ ಮೇಲೆ ಜನಪದವು ನಿಂತಿದೆ. ಹಾಗಾಗಿ ಅದು ಓದು-ಬರಹವನ್ನು, ಲಿಪಿ ಜ್ಞಾನವನ್ನು ಬೇಡುವುದಿಲ್ಲ. ಅದೇ ಕಾರಣಕ್ಕಾಗಿ ಸಂಕೇತಗಳನ್ನು ಬಳಸುತ್ತಾ ಮೌಖಿಕ ಸಂಸ್ಕೃತಿಯನ್ನು ಬೆಳೆಸಿ ಸಮೂಹ ಪ್ರಜ್ಞೆಯನ್ನು ಕಾಪಿಡುತ್ತದೆ.
ಜನಪದ ಎಂದರೆ ನಾವು, ನಮ್ಮ ಜೀವನ, ನಮ್ಮ ಕತೆಯನ್ನ ಓದು ಬರಹಗಳ ಗೋಜಿಲ್ಲದೆ, ಲಿಪಿಯನ್ನ ಬಳಸದೆ ಸರಳವಾಗಿ ಸಾಂಕೇತಿಕವಾಗಿ ಹಂಚಿಕೊಂಡ ಬಗೆಗಳು. ಉದಾಹರಣೆಗಳು: ಡೊಳ್ಳು ಕುಣಿತ, ಯಕ್ಷಗಾನ, ಬೀಸುಕಂಸಾಳೆ, ಮದುವೆಹಾಡುಗಳು, ಸೋಬಾನೆಹಾಡು, ರಂಗೋಲಿ, ತೊಗಲು ಬೊಂಬೆಯಾಟ, ಲಾವಣಿ, ಗಮಕ, ಕೋಲಾಟ, ಹಗಲು ವೇಷದವರು, ಕುಂಬಾರ ಕಲೆ, ಬಿದರಿ ಕಲೆ, ಕರಗ, ಬೊಂಬೆಹಬ್ಬ, ವೀರಗಾಸೆ, ದೇವರುಗಳು, ಭೂತ ಪೂಜೆ, ಶಿಲ್ಪಕಲೆ, ಬೆಲ್ಲ ಮಾಡುವ ಆಲೆಮನೆ, ಹಿಟ್ಟಿನ ಮಣೆ, ರುಬ್ಬುಕಲ್ಲು, ಒನಕೆ, ತಿಂಡಿ-ತಿನಿಸುಗಳು, ನಮ್ಮ ಉಡುಪು, ಕೀಲು ಗೊಂಬೆ, ಮೈ ಮೇಲಿನ ಹಚ್ಚೆ… ಒಂದೇ ಎರಡೇ!
ಬಹುಭಾಷಾ ಸಂಸ್ಕೃತಿಯ ದೇಶ ನಮ್ಮ ಭಾರತ. ಬಹುಸಂಸ್ಕೃತಿಗಳು ತಮ್ಮದೇ ಆದ ಭಿನ್ನತೆಯನ್ನು, ವಿವೇಕವನ್ನು, ಲೋಕದೃಷ್ಟಿಯನ್ನು ಹೊಂದಿರುತ್ತವೆ. ಯಾವುದೇ ಒಂದು ಜನಸಮುದಾಯದಲ್ಲಿ ಇರುವ ಲೋಕದೃಷ್ಟಿ ಬೆಳೆದು ಬಂದದ್ದು ಒಂದು ನಿರ್ದಿಷ್ಟ ಪರಿಸರದಲ್ಲಿ ಬದುಕಿಬಂದ, ಬಾಳಿದ ಅನೇಕಾನೇಕ ಪೀಳಿಗೆಗಳು ತಾವು ರೂಪಿಸಿಕೊಂಡ ಜೀವನ. ಆ ಜೀವನವೇ ಅವರ ಜನಪದ. ಅದಲ್ಲದೆ, ಯಾವುದೇ ನಾಡಿನ ಜೀವಂತಿಕೆಯನ್ನು, ಆ ನೆಲದ, ಜನಜೀವನದ ಶ್ರೀಮಂತಿಕೆಯನ್ನು ಅರಿಯಬೇಕೆಂದರೆ ಆ ನಾಡಿನ ಸಂಸ್ಕೃತಿ ಮತ್ತು ಪರಂಪರೆ, ಅಲ್ಲಿಯ ಜೀವನ ವಿಧಾನ ಮತ್ತು ಜನರು ಅನುಸರಿಸುವ ಮೌಲ್ಯಾದರ್ಶಗಳು ಸಹಾಯವಾಗುತ್ತವೆ.
ಬೇರೆ ಒಂದು ಸಮುದಾಯದಿಂದ ತಾವು ಹೇಗೆ ಭಿನ್ನತೆಯನ್ನು ರೂಡಿಸಿಕೊಂಡಿದ್ದೀವಿ ಎಂದು ಮತ್ತೊಂದು ಸಮುದಾಯ ನಾನಾ ಬಗೆಯಲ್ಲಿ ಪ್ರಚುರಪಡಿಸುತ್ತದೆ. ಅದು ವಿಶಿಷ್ಟ ಬಗೆಯ ತಿನಿಸು, ಸೀರೆ/ಪಂಚೆ ಉಡುವ ಶೈಲಿ, ಬೈಯುವ ಬೈಗಳು (ಉದಾಹರಣೆ- ಪೂರ್ಣ ಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’), ಕಟ್ಟುಕಥೆಗಳು, ಚೇಷ್ಟೆಗಳು, ಹಬ್ಬಹರಿದಿನಗಳು, ಉತ್ಸವಗಳು, ನಂಬುವ ದೇವರುಗಳು, ದೆಯ್ಯಗಳು, ಬಳಸುವ ಮನೆ ಔಷಧಿ, ಆಡುವ ಉಪಭಾಷೆ… ಒಟ್ಟಿನಲ್ಲಿ ಅವೆಲ್ಲಾ ಆ ಒಂದು ಜನಸಮೂಹಕ್ಕೆ ಮಾತ್ರ ಸೇರಿದ್ದು ಎಂಬುದು ಮುಖ್ಯ. ಆ ಸಮೂಹಪ್ರಜ್ಞೆ ಮೌಖಿಕ ರೂಪದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುತ್ತದೆ. ಕನ್ನಡಿಗರಲ್ಲಿ ಆ ಜನಪದಗಳು ಎಷ್ಟೆಲ್ಲಾ ಬಗೆಯವು ಎಂಬುದು ನಮ್ಮ ಗ್ರಾಮೀಣ ಜೀವನದಲ್ಲಿ ಹೊಕ್ಕು ನೋಡಿದಾಗ ನಮಗೆ ತಿಳಿಯುತ್ತದೆ.
ಇಲ್ಲೊಂದು ಸ್ವಾರಸ್ಯಕರವಾದ ಉದಾಹಾರಣೆಯಿದೆ. ಕಣಜ ಎನ್ನುವುದು ಧಾನ್ಯ ಸಂಗ್ರಹಕ್ಕೆ ಬಳಸುವ ವಿಧಾನ. ಆ ಕಣಜ ಎಂಬ ಪದ ಎಷ್ಟು ತರಹ, ಸ್ಥಳಕ್ಕೆ ತಕ್ಕಂತೆ ಬಳಸಲ್ಪಡುತ್ತದೆ ಎನ್ನುವುದು ಈ ಬಳಕೆಗಳನ್ನು ನೋಡಿದಾಗ ಅರ್ಥವಾಗುತ್ತದೆ.
ಕಣಜ ಪದದ ಪರ‍್ಯಾಯ ರೂಪಗಳು ಮತ್ತು ಅವುಗಳ ಧ್ವನಿ ವ್ಯತ್ಯಾಸ ರೂಪಗಳ ಬಳಕೆ (ಸೌಜನ್ಯ: ಡಾ.ಅಶೋಕಕುಮಾರ ರಂಜೇರೆ, http://kannadajaanapada.blogspot.co.uk/2016/06)
೧. ಕಣಜ : ಕಣಜ, ಕಣ್ಜ, ಖಣಜ, ಕನಜ, ಅಮರ‍್ಬಣ
೨. ಕಂದನ
೩. ಪಣ್ತ : ಪಣ್ತ, ಪಳ್ತ, ಪಾಳ್ತ, ಬಣ್ತ
೪. ಪತಾಯ್ : ಪತಾಯ್, ಪತೇಯ
೫. ಪೆಟಾವು
೬. ತಟ್ಟಿ
೭. ಹೆಮ್ಮುಡಿ
೮. ಕೆಡಾತ್ರ
೯. ಗಳಕೆ : ಗಳಕೆ, ಗಳಗೆ
೧೦. ಪೊಳಿ
೧೧. ಕದ್ಗೆ
೧೨. ತುಪ್ಪೆ
೧೩. ತಿರಿ
೧೪. ಗುಮ್ಮಿ
೧೫. ಹಗೇವು
೧೬. ವಾಡೆ
೧೭. ಗೊಡಾವ್

 

ಮತ್ತೊಂದು ಉದಾಹರಣೆ – ಹೆಣ್ಣುಮಕ್ಕಳು, ಮಹಿಳೆಯರು ಒಟ್ಟಾಗಿ ಸೇರಿ ಧಾನ್ಯ ಕುಟ್ಟುವಾಗ, ದೊಡ್ಡ ಅಡಿಗೆ ಮಾಡುವಾಗ ಹಾಡುತ್ತಾರೆ. ಆ ‘ಗರತಿ ಹಾಡು’ ಹೆಂಗಸರ ಜೀವನವನ್ನು ವಿಶದವಾಗಿ ತಿಳಿಸಿಕೊಡುತ್ತದೆ. ಹಾಗೆ ಜಾನಪದದಲ್ಲಿ ಕಂಠಸ್ಥ ಸಂಪ್ರದಾಯ ರೂಢಿಯಾಗಿದ್ದನ್ನ ನಾವು ಗುರುತಿಸಬಹುದು. ಅಲ್ಲಿ ಭಾವನೆಗಳ ಹಂಚಿಕೆಯಿದೆ. ನೋವು, ನಲಿವು, ರಾಗ, ವಿರಾಗ, ಪ್ರೀತಿ, ದ್ವೇಷಗಳ ಸೂಚನೆಯಿದೆ. ಅವನ್ನು ದೊಡ್ಡವರು ಅನುಭವಗಳ ಮೂಲಕ ಚಿಕ್ಕವರಿಗೆ ತಿಳಿಹೇಳುವುದು ಆಗುತ್ತದೆ.
ಮುತ್ತು ಮಾಣಿಕ ಬೇಡ ಮತ್ತೆ ಸಂಪದ ಬೇಡ
ಸುತ್ತ ಕೋಟೆಯ ವೈಭವ ಬೇಡ ನನ್ನವ್ವ
ಸುತ್ತೆಲ್ಲ ಜನಪದ ಹಾಡಿರಲಿ||

ಮತ್ತೊಂದು ಉದಾಹರಣೆ. ಬೆಂಗಳೂರಿನ NMKRV ಪದವಿ ಕಾಲೇಜಿನ ಆಗಿನ ಪ್ರಾಂಶುಪಾಲರಾಗಿದ್ದ ಚಿ.ನ.ಮಂಗಳ ‘ಶಾಶ್ವತಿ’ ಎಂಬ ಹೆಸರಿನಲ್ಲಿ ಮಹಿಳೆಗೆ ಸಂಬಂಧಿಸಿದ ವಸ್ತುಸಂಗ್ರಹಾಲಯವನ್ನು ಆರಂಭಿಸಿದರು. ಅಲ್ಲಿ ಸಾವಿರಾರು ಕತೆಗಳಿಗೆ, ಅನುಭವಗಳಿವೆ. ಜಾನಪದವು ಎಷ್ಟು ಜೀವಂತವಾಗಿದೆ! ಬೆಂಗಳೂರಿಗೆ ಹೋದವರು ಅಲ್ಲಿಗೆ ಭೇಟಿ ಕೊಟ್ಟು ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳಬಹುದು.
ಕನ್ನಡ ಅಧ್ಯಯನ ಕೇಂದ್ರದ ಮತ್ತೊಬ್ಬ ವಿದ್ವಾಂಸರಾದ ಪ್ರೊ.ಕಿಕ್ಕೇರಿ ನಾರಾಯಣ ಹೇಳುವಂತೆ “ಜನಪದ ಪಠ್ಯಗಳನ್ನು ಅರ್ಥೈಸುವಾಗ ಒಬ್ಬ ಮನುಷ್ಯ ಚರಿತ್ರಯನ್ನು ಸೃಷ್ಟಿಸುತ್ತಾನೆ ಎಂಬ ಅರ್ಥ ಸಾಧ್ಯವಿಲ್ಲ. ಇಲ್ಲಿ ಚರಿತ್ರೆ ಮನುಷ್ಯನನ್ನು ಸೃಷ್ಟಿಸುತ್ತದೆ. ಚರಿತ್ರೆಕಾರ ಘಟನೆಗಳ ಕಡೆ ದೃಷ್ಟಿ ಬೀರಿದರೆ ಜಾನಪದ ಪಠ್ಯ ಒಂದು ಕಾಲದ ಯಾವುದಾದರೂ ಘಟನೆ ನಡೆಗಾಗ ಆ ಘಟನೆಯ ರಾಚನೀಯ ಸಂವಿಧಾನವನ್ನು ತನ್ನದೇ ರೀತಿಯಲ್ಲಿ ಗಮನಿಸಿ ಮಿಥ್, ಪುರಾಣ ಮತ್ತು ಅವುಗಳ ಅವತರಣಿಗಳ ಮೂಲಕ ಸಾಮಾಜಿಕ ಸತ್ಯಗಳನ್ನು ಆರುಸುವುದು ಜಾನಪದ ಪಠ್ಯಗಳ ಚರಿತ್ರೆಯಾಗಿರುತ್ತದೆ.” (ಕಿಕ್ಕೇರಿ ನಾರಾಯಣರ ಪುಸ್ತಕ: ಸುವರ್ಣ ಜಾನಪದ).
ಕರ್ನಾಟಕದಲ್ಲಿ ಇರುವ ೩೦ ಜಿಲ್ಲೆಗಳಲ್ಲಿ ಸುಮಾರು ೩೬,೦೦೦ ಗ್ರಾಮಗಳಿವೆ. ಅಪ್ಪಟ ದೇಸಿ ಪರಿಸರದಲ್ಲಿ ಇಂದಿಗೂ ಜೀವಂತವಾಗಿರುವ ಗ್ರಾಮಗಳು ನಮ್ಮ ಸಾಂಸ್ಕೃತಿಕ ಕಣಜಗಳು. ಈ ಕಣಜಗಳಲ್ಲಿ ನಮ್ಮ ಹಿರೀಕರು ಭದ್ರ ಮಾಡಿದ್ದು ನಮ್ಮ ನೆಲದ ಜೀವಸಂಕುಲ, ನಮ್ಮ ಪ್ರಕೃತಿಯ ಜೀವದ್ರವ್ಯಗಳು, ನಮ್ಮ ಆಡು ಭಾಷೆಗಳು, ಅವುಗಳನ್ನು ಹೇಗೆ ಬಳಸಬೇಕು ಎಂಬ ನಿತ್ಯ ತಿಳುವಳಿಕೆಯನ್ನು. ಇವೆಲ್ಲವೂ ಅತ್ಯಮೂಲ್ಯ. ಈ ಗ್ರಾಮಜೀವನದಲ್ಲಿ ಜೀವನದ ಅನುಭಗಳು ಕಟ್ಟಿ ಬೆಳೆಸಿದ ಇತಿಹಾಸವಿದೆ, ಸಂಪ್ರದಾಯ-ಧರ್ಮಗಳಿವೆ, ಮನೆ-ಮಠಗಳಿವೆ, ಮೌಲ್ಯ-ಮೌಢ್ಯಗಳಿವೆ, ಶಿಕ್ಷಣ-ಆಡಳಿತಗಳ ಚರಿತ್ರೆಗಳಿವೆ. ದಟ್ಟ ಅನುಭವಗಳು ಪಕ್ವವಾಗಿ ಹಳೆತು ಅನಿಸಿಕೊಂಡು ಹೊಸ ಬೇರುಗಳನ್ನು ಹುಟ್ಟಿಸುತ್ತವೆ. ಕಾಲ ಕ್ರಮೇಣ ಅವನ್ನು ಬೆಳೆಸುತ್ತಾ ಸಮೃದ್ಧಿ ವೃಕ್ಷಗಳಾಗುತ್ತವೆ. ಅಂತಹ ಪ್ರತಿಯೊಂದೂ ವೃಕ್ಷಕ್ಕೂ ತನ್ನದೇ ಆದ ಆತ್ಮವಿದೆ, ವಿಶಿಷ್ಟವಾದ ವ್ಯಕ್ತಿತ್ವವಿದೆ. ಅವು ವೈವಿಧ್ಯಪೂರ್ಣ ದೃಷ್ಟಿಕೋನಗಳನ್ನ ನಮಗೆ ಕೊಡುತ್ತವೆ.
ಆ ದೃಷ್ಟಿಕೋನಗಳನ್ನು ತಮ್ಮ ಅನುಭವಗಳಲ್ಲಿ ಪಡೆದುಕೊಂಡು, ಅವುಗಳ ಸಂಕೇತಗಳನ್ನು, ಮಾತುಗಳನ್ನು ಜನಪದವು ಹಿಡಿದಿಡುತ್ತದೆ. ಅವನ್ನು ದಾಖಲಿಸುವ ಹಾಡುಗಳು, ರಂಗೋಲಿ, ನೃತ್ಯ, ಕಲೆಗಳು, ಗಾದೆಗಳು, ಕ್ರೀಡೆಗಳು, ಹಬ್ಬಗಳು, ಆಟಿಕೆಗಳು, ಜನಜೀವನದ ವಸ್ತುಗಳು, ಸಾಮಗ್ರಿಗಳು, ಉಪಕರಣಗಳು, ಎಲ್ಲವೂ ಒಂದು ಜನಸಮುದಾಯ ಹೇಗೆ ಬೆಳೆಯಿತು ಎಂಬುದನ್ನ ತಿಳಿಸುತ್ತದೆ. ಆ ತಿಳುವಳಿಕೆಯಲ್ಲಿ ಸಾಹಿತ್ಯವಿದೆ, ವಿಜ್ಞಾನವಿದೆ, ಪ್ರಯೋಗಶೀಲತೆಯಿದೆ, ಸಾಹಿತ್ಯವಿದೆ.
ಜನಪದವು ಸದಾ ಹರಿಯುವ ನೀರು. ಜನಪದದ ಸಂಚಲನೆ, ಪರಿವರ್ತನೆ, ಸ್ವೀಕಾರ, ಕೊಳ್ಳುಕೊಡು ಅದರ ಮೂಲ ಮಂತ್ರ ಎಂದು ಕನ್ನಡದ ಅನೇಕ ವಿದ್ವಾಂಸರು ಹೇಳುತ್ತಾರೆ. ಅನಾಮಧೇಯತೆ ಅದರ ಮುಖ್ಯ ಲಕ್ಷಣ. ಅದುವೇ ಜನಸಮುದಾಯದ ಶಕ್ತಿ ಕೂಡ. ಸಾಮಾನ್ಯತೆ, ಸಾಮೂಹಿಕತೆ, ಸರಳತೆ, ಸಜೀವತೆ, ಸೋಪಜ್ಞತೆಯಿಂದ ಕೂಡಿರುವ ಜಾನಪದವು ಎಲ್ಲರ ಆಸ್ತಿ. ಅದನ್ನು ಕಾಪಾಡುವುದು ನಮ್ಮೆಲ್ಲರ ಎಚ್ಚರಿಕೆಯ ಪ್ರಜ್ಞೆ ಮಾತ್ರ.
ಮಲೆಮಹದೇಶ್ವರ ಬೆಟ್ಟ ಜಾನಪದ ಅಧ್ಯಯನ ಕೇಂದ್ರದಲ್ಲಿ ಬೀಸುಕಂಸಾಳೆ, ಗೊರವರ ಕುಣಿತ, ಈರಮಕ್ಕಳ ಕುಣಿತ, ಡೊಳ್ಳು ಕುಣಿತ ಗಳ ಬಗ್ಗೆ ತರಬೇತಿ ಕೊಡುತ್ತಾರೆ. ಅಷ್ಟೇ ಅಲ್ಲ, ಕರ್ನಾಟಕದ ಬೇರೆ ಬೇರೆ ಕಡೆ ಜನಪದ ಗೀತ ಸಂಪ್ರದಾಯ, ಜನಪದ ವೈದ್ಯ , ಬಿದರಿ ಕಲೆ, ಸಮರ ಕಲೆ, ಕಸೂತಿ ಕಲೆ, ಜನಪದ ನೃತ್ಯ, ಜನಪದ ಕ್ರೀಡೆಗಗಳ ಬಗ್ಗೆ ಕೂಡ ತರಬೇತಿ ಶಿಬಿರಗಳನ್ನು ನಡೆಸಲಾಗುವುದು. ಈಗ ಬೆಂಗಳೂರಿನ ಬಡಾವಣೆಗಳಲ್ಲಿ ಮರೆತುಹೋಗಿದ್ದ ದೇಸಿ ಆಟಗಳನ್ನು ಮಕ್ಕಳಿಗೆ ಕಲಿಸಿಕೊಡುವ ಪ್ರಯತ್ನಗಳೂ ನಡೆಯುತ್ತಿವೆ.
ನಾವು ಹೊರದೇಶದಲ್ಲಿರುವ ಕನ್ನಡಿಗರು ನಮ್ಮ ಮೂಲ ಊರುಗಳಿಗೆ ಭೇಟಿಯಿತ್ತಾಗ ನಮ್ಮ ಜಾನಪದದ ವಿಶಿಷ್ಟತೆಯನ್ನು ಗಮನಿಸುತ್ತಾ ಅದನ್ನು ದಾಖಲಿಸಬಹುದು. ಛಾಯಾಚಿತ್ರಗಳು, ವಿಡಿಯೋಗಳು ನಮಗೆ ತಕ್ಷಣಕ್ಕೆ ಲಭ್ಯವಿರುವ ಸುಲಭ ಸಾಧನಗಳು. ಅವನ್ನು ಬಳಸುತ್ತಾ ನಾವು ಜನಪದ ಹಾಡುಗಳನ್ನು, ಕುಣಿತಗಳನ್ನು, ಕಲೆಗಳನ್ನು ನಮ್ಮ ಸ್ವಂತ ಕಲಿಕೆಗೂ ಮತ್ತು ನಮ್ಮ ಮಕ್ಕಳ ಕಲಿಕೆಗೂ ಬಳಸಿಕೊಳ್ಳಬಹುದು. ಊರಿಗೆ ಹೋದಾಗ ಒನಕೆ, ಇದ್ದಿಲ ಓಲೆ, ಹಾರೆ, ಕಲ್ಲಿನ ರುಬ್ಬುಗುಂಡು, ರಾಗಿ ಬೀರುವ ಕಲ್ಲು, ಹಿಂದೆ ಬಳಸುತ್ತಿದ್ದ ಹಂಡೆ, ದೊಡ್ಡ ಪಾತ್ರೆಗಳು, ಕೃಷಿ ಸಲಕರಣೆಗಳು, ಆಟದ ವಸ್ತುಗಳು, ಆಭರಣಗಳು ಮುಂತಾದವನ್ನು ಕಲೆಹಾಕಬಹುದು. ರಂಗೋಲಿ ಕಲೆಯನ್ನು ನಮ್ಮ ಮಕ್ಕಳಿಗೆ ಎಲ್ಲೇ ನಾವಿದ್ದರೂ ಹೇಳಿಕೊಡಬಹುದು. ಮೈಮೇಲಿನ ಹಚ್ಚೆಗಳನ್ನು ಹಿಂದಿನವರು ಯಾಕೆ ಮತ್ತು ಹೇಗೆ ಹಾಕಿಕೊಳ್ಳುತ್ತಿದ್ದರು ಎನ್ನುವುದನ್ನ ಅಭ್ಯಸಿಸಬಹುದು. ಕರ್ನಾಟಕದ ಒಂದೊಂದು ಪ್ರಾಂತ್ಯದಲ್ಲೂ ಅದರದೇ ಆದ ಸೊಗಡಿದೆ, ಸವಿಯಿದೆ. ಅದನ್ನು ನಾವೆಲ್ಲಾ ಗುರುತಿಸಿ ‘ಇದು ನಮ್ಮದು, ನಮ್ಮ ಮೂಲ ನೆಲದ್ದು’ ಎಂದು ನಮ್ಮದಾಗಿಸಿಕೊಂಡಾಗ ಕನ್ನಡ ಜಾನಪದವು ನಮ್ಮಲ್ಲಿ ಮತ್ತೊಷ್ಟು ಚಿಗುರೊಡೆಯುತ್ತದೆ.

ಈ ಮೂಲಗಳಿಂದ ಸಹಾಯ ಪಡೆದಿದ್ದು:
ಕನ್ನಡ ಜನಪದ ವಿದ್ಯಾಲಯ, ಹಾವೇರಿ
https://talastara.wordpress.com/2016/07/21/ 
http://kannadajaanapada.blogspot.co.uk/

ಕೆಲವು ಯು-ಟ್ಯೂಬ್ ವಿಡಿಯೋಗಳ ಕೊಂಡಿ:

ಇವತ್ತು ಕ್ರಿಸ್ಮಸ್!

ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ ಆ ಒಂದು ದಿನ ಇವತ್ತು – ಕ್ರಿಸ್ಮಸ್ ಹಬ್ಬ. ಎಲ್ಲೆಲ್ಲೂ ಬಣ್ಣ ಬಣ್ಣದ ದೀಪಾಲಂಕಾರ. ಹಾಡುಗಳು. ಇಡೀ ದೇಶವೇ ಆಚರಿಸುವ ದೊಡ್ಡ ಹಬ್ಬ. ಪ್ರತಿಯೊಂದು ಶಾಲೆಯ ಮಕ್ಕಳು ಒಂದು ತಿಂಗಳು ಕ್ರಿಸ್ಮಸ್ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿ, ಹಾಡುಗಳ ಹೇಳಿ, ಆನಂದಿಸುವ ಕಾಲ. ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಳು. ಮೈಮೇಲೆ ಕಪ್ಪು ಉಡುಗೆಯಿದ್ದರೂ ಮನೆಯಲ್ಲಿ, ಬೀದಿಯಲ್ಲಿ ಬಣ್ಣದ ಓಕುಳಿ. ಕ್ರಿಸ್ತ ಹುಟ್ಟಿದ ಕತೆ. ಬಂಧುಬಳಗ ಬಂದು ಸೇರುವ ಸಂದರ್ಭ. ತಿಂಡಿ ತಿನಿಸು ಊಟ. ಮನ ಬಿಚ್ಚಿ ಕೊಡುವ ದಾನದತ್ತಿಗಳು. ನಮ್ಮೆಲ್ಲರ ಮನೆಗಳಲ್ಲೂ ಒಂದು ಅಲಂಕಾರಿಕ ಕ್ರಿಸ್ಮಸ್ ಟ್ರೀ. ಹಿಮದೇಶಗಳ ಚಳಿ, ಕತ್ತಲು ತುಂಬಿದ ವಾತಾವರಣಕ್ಕೆ ಬೇಕೇ ಬೇಕಿದ್ದ, ಆತ್ಮವನ್ನ ಬೆಚ್ಚಗಿರಿಸುವ ಹಬ್ಬದ ಸೀಸನ್. ಇಲ್ಲಿವೆ ಕೆಲ ವಿಡಿಯೋಗಳು, ನಿಮಗಾಗಿ. -ಸಂ.

img-20161213-wa0010
ಸ್ವರ್ಣ-ವಿಶ್ವನಾಥ್ ಮಂದಗೆರೆ ಮನೆಯಲ್ಲಿ ಕ್ರಿಸ್ಮಸ್ ಟ್ರೀ

ಚಿಕ್ಕ ಮಕ್ಕಳು ಹೇಳುವುದು – Can we have Xmas everyday?

ರುಡೊಲ್ಫ್ ಜಿಂಕೆಯ ಕೆಂಪು ಮೂಗು ಅದಕ್ಕೆ ಕಾರಣವೋ ಎಂಬ ಅನುಮಾನ!

 

ಆ ಮಗು ಹುಟ್ಟುವ ಸಮಯ. ಮೇರಿಯ ಕಂದನೋ, ದೇವಕಿ ತನಯನೋ…

 

ಆಸ್ಟ್ರೇಲಿಯಾದ ಬೇಸಗೆಯಲ್ಲಿ ಬೀಚ್, ಬಾರ್ಬಿಕ್ಯೂ. ಕಾಂಗರೂಗಳ ಜೊತೆ ಈ ಹಾಡು – Six White Boomers…

 

ಈ ವರ್ಷ ನೊಬೆಲ್ ಪ್ರಶಸ್ತಿ ಪಡೆದ ಹಾಡುಗಾರ-ಸಾಹಿತಿ ಬಾಬ್ ಡಿಲೊನ್ ಹಾಡಿದ್ದು – Must Be Santa

 

ಮರೆಯಲಾಗದ ‘ವ್ಹಾಮ್’ -Last Christmas

 

ಜಾನ್ ಲೆನ್ನನ್ ಹಾಡಿದ Happy Xmas, War is Over…