ಇಂಗ್ಲೆಂಡಿನ ಕನ್ನಡಿಗ ಮತ್ತು ಹುಟ್ಟುಹಬ್ಬ – ಡಾ. ಪ್ರೇಮಲತ ಬಿ.

“ಹಬ್ಬಗಳಲೆ ಹಿರಿಯ ಹಬ್ಬ ನನ್ನ ಹುಟ್ಟು ಹಬ್ಬವು…..” ಎಂದು ಸಂಭ್ರಮದಿಂದ ಕುಣಿದಾಡುವ ನನ್ನ ಆರು ವರ್ಷದ ಮಗಳ ಹುಟ್ಟುಹಬ್ಬವನ್ನು ಆಚರಿಸುವುದು ನನಗೆ ಅತಿಸುಲಭ! ತನ್ನದೇ ಮೌನ ಲೋಕದೊಳಗೆ ಕಾಲಿಡುತ್ತಿರುವ ಹದಿನಾಲ್ಕು ವರ್ಷದ ಮಗನ ಹುಟ್ಟು ಹಬ್ಬವನ್ನು ಹೇಗೆ ಮಾಡಬೇಕೆಂಬುದು ಬಹಳ ಗೊಂದಲಮಯ!!!

ಕ್ರಮೇಣದ ಮೈಲುಗಲ್ಲಿನ ಹುಟ್ಟುಹಬ್ಬಗಳಾದ ೧೮,೨೧,೫೦,೬೦ ನೇ ಹುಟ್ಟುಹಬ್ಬದ ಕ್ರಮಗಳು ,ಅರ್ಥಗಳು ಬದಲಾಗುವುದು ಅತಿಸಹಜ. ಐವತ್ತರ ಮೇಲ್ಪಟ್ಟ ಹುಟ್ಟುಹಬ್ಬಗಳಲ್ಲಿ ಹುಟ್ಟಿದ ದಿನದ ಆಚರಣೆಗಿಂತ ಹೆಚ್ಚಾಗಿ ಹುಟ್ಟಿದ ನಂತರ ಕಳೆದ ವರ್ಷಗಳ, ಸಾಧನೆಗಳ, ಅನುಭೂತಿಗಳ ಅವಲೋಕನವಾಗುವುದು ವಿಚಾರವಂತರ ವಲಯದಲ್ಲಿ ನಡೆಯುವ ಸಂಗತಿ, ಇದು ವೈಚಾರಿಕತೆಗನುಗುಣವಾಗಿ ಭಿನ್ನ ರೂಪಗಳನ್ನು ಪಡೆಯಬಲ್ಲದು. ಮೈಗೂಡಿಸಿಕೊಂಡ ಹವ್ಯಾಸ, ಪ್ರತಿಭೆಗಳ ಪದರ ಪದರವಾದ ಪಕಳೆಗಳನ್ನು ಹೊತ್ತು ಹಿತವಾಗಿ ಅರಳಿ ಹೊಸ ಅರ್ಥಗಳನ್ನು ಸಾರಬಲ್ಲದು.

enland-kannadigaಸಾಹಿತ್ಯಕ, ವೈಚಾರಿಕ ಮತ್ತು ಪ್ರತಿಭಾವಂತರ ಕುಟುಂಬದಿಂದ ಬಂದಿರುವ ನಮ್ಮೆಲ್ಲರ ಆತ್ಮೀಯ  ಗೆಳೆಯರಾದ ಡಾ. ಎಸ್. ಪ್ರಸಾದರ ೬೦ನೇ ಹುಟ್ಟು ಹಬ್ಬ ಇದೇ ಆಗಷ್ಟ್ ೧೪ ರಂದು ಬೆಂಗಳೂರಿನ ಶ್ರೀಕೃಷ್ಣ ಗ್ರಾಂಡ್ ಹೋಟೆಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಅವರ ಚೊಚ್ಚಲ ಪುಸ್ತಕದ ಬಿಡುಗಡೆಯ ವಿಶೇಷತೆಯಿದ್ದುದರಿಂದ ಅದಕ್ಕೆ ಸಾರಸ್ವತ ಲೋಕದ ಬೆಡಗೂ ತುಂಬಿತ್ತು.

ಒಬ್ಬ ವ್ಯಕ್ತಿಯನ್ನು ನಾವು ಮೊದಲಬಾರಿಗೆ ನೋಡಿದಾಗ ಇಂದ್ರಿಯಗಳು ಗ್ರಹಿಸುವ ಒಂದಷ್ಟು ಅಭಿಪ್ರಾಯಗಳು ಮೂಡುತ್ತವೆ. ಪರಿಚಯದ ಜೊತೆ ಮಿದುಳು ಗ್ರಹಿಸುವುದೂ ಇರುತ್ತದೆ. ಕಾಲಕ್ರಮದ ಒಡನಾಟದೊಂದಿಗೆ  ಹೃದಯ ಸಂಬಂಧಿ ಭಾವನೆಗಳೂ ಮೂಡುತ್ತವೆ.

ಸುಮಾರು ಮೂರು ವರ್ಷಗಳ ಹಿಂದೆ ಮೊದಲಬಾರಿಗೆ ಶಿವಪ್ರಸಾದರ ಪರಿಚಯವಾದ್ದು ಯಾರ್ಕ್ ಶೈರ್ ಬಳಗದ ಕನ್ನಡ ಕಾರ್ಯಕ್ರಮದಲ್ಲಿ. ಪ್ರಸಾದರಿಗೆ ಬೇಕಿತ್ತೋ, ಬೇಡವಿತ್ತೋ ನನಗೆ ತಿಳಿದಿಲ್ಲ. ಆದರೆ, ಅವರ ಪರಿಚಯವಾದ್ದು  ರಾಷ್ತ್ತ್ರ ಕವಿ ಜಿ.ಎಸ್. ಶಿವರುದ್ರಪ್ಪನವರ ಪುತ್ರನೆಂಬ ವಿಶೇಷತೆಯೊಂದಿಗೆ. ಈ ವಿಶೇಷಣಗಳು ವ್ಯಕ್ತಿಯ ಬಗ್ಗೆ ಪರವಾಗಿಯೂ-ವಿರುದ್ದವಾಗಿಯೂ ಅಭಿಪ್ರಾಯಗಳನ್ನು ಮೂಡಿಸುವ ಸಾಧ್ಯತೆಗಳಿರುತ್ತವೆ.

ನೀಳನಿಲುವಿನ ,ಗೌರವರ್ಣದ ಪ್ರಸಾದರ ವ್ಯಕ್ತಿತ್ವ ಮಾತ್ರ ತಮ್ಮ ಬಿರುದನ್ನು ಮೀರಿ ಆವರಿಸಿಬಿಡುವುದು ಸರ್ವವೇದ್ಯ. ಯಾರನ್ನೂ ಕೆಣಕದ ಸೌಮ್ಯ , ಸರಳ ಧ್ವನಿ, ನಡವಳಿಕೆಯಿಂದ ಒಬ್ಬ ವಿಚಾರವಂತ –ಸಂಭಾವಿತ-ಸಹೃದಯಿಯೆಂಬ ಅಭಿಪ್ರಾಯವನ್ನು ಶಿವಪ್ರಸಾದರು ಸುಲಭವಾಗಿ ಮೂಡಿಸಿಬಿಡುತ್ತಾರೆ.ಈ ವಿಚಾರವಂತಿಕೆ ಈ ೬೦ ವರ್ಷಗಳಲ್ಲಿ ಪರಿಪಕ್ವವಾಗಿ ಬೆಳೆದಿರುವುದನ್ನು  ಹುಟ್ಟಿದ ಹಬ್ಬದ ಸಂದರ್ಭದಲ್ಲಿ ಅವರು ಮಾಡಿದ ಭಾಷಣ ಮತ್ತೊಮ್ಮೆ ಧ್ರುಢಪಡಿಸಿತು.

groupಈ ೬೦ ನೇ ಹುಟ್ಟುಹಬ್ಬ ಶಿವಪ್ರಸಾದರ ಕುಟುಂಬ ಸದಸ್ಯರೆಲ್ಲ ಸೇರಿ ತಯಾರಿಸಿದ ರಸಾಯನವಾಗಿತ್ತು.ಜೊತೆಗೆ ಕುಟುಂಬದ ಧೀರ್ಘಕಾಲದ ಒಡನಾಡಿಗಳಾಗಿ,ಮಿತ್ರರಾಗಿ, ಹಿತೈಷಿಗಳಾಗಿ ಸಾಗಿಬಂದ ಸಾಹಿತಿಗಳೂ,ಚಿಂತನೆಕಾರರೂ,ಹಾಡುಗಾರರು, ಕಲಾವಿದರು ಎಲ್ಲರೂ ಒಗ್ಗೂಡಿ  ಮಾಡಿದ್ದು ಹಲವಾರು ವರ್ಷಗಳಿಂದ ಸಾವಿರಾರು ಮೈಲಿ ದೂರವಿದ್ದರೂ, ಡಾ.ಪ್ರಸಾದ್ ಮತ್ತು ಪೂರ್ಣಿಮಾ ಉಳಿಸಿಕೊಂಡ ಸಂಭಂಧಗಳ,ಮಿತ್ರತ್ವದ ಮೈಲಿಗಲ್ಲೂ ಆಗಿತ್ತು!

ಹಿರಿಯ ಸಾಹಿತಿಗಲಾದ ಎಚ್.ಎಸ್. ವೆಂಕಟೇಶ ಮೂರ್ತಿ,ಬಿ.ಆರ್.ಲಕ್ಶ್ಮಣರಾಯರು ಸಂಧರ್ಭೋಚಿತವಾಗಿ ಮಾತಾಡಿ ಅಭಿನಂದಿಸಿದರು. ಅಭಿನಂದನೆಯಿಂದ-ಮಾರ್ಕ್ಸಿಷ್ಟ್ ವಾದದವರೆಗೆ ಮಮತಾ ಸಾಗರರು ಮಾತನಾಡಿದರು. ಶ್ರೀನಿವಾಸ್ ಉಡುಪ, ಬಿ.ಆರ್. ಛಾಯ, ಮುದ್ದುಕೃಷ್ಣ,  ಶಂಕರ್ ಶ್ಯಾನುಭೋಗ್ ಇತ್ಯಾದಿ ಹಲವಾರು ಗಾಯಕರು ತಮ್ಮ ಸುಗಮ ಸಂಗೀತದೊಂದಿಗೆ ಹರಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಕ್ಕ ಜಯಂತಿಯವರ ಮಗ, ಸಿನಿಮಾ ನಿರ್ದೇಶಕ, ಭೋಧಕ ಚೈತನ್ಯ ಅವರು ನಡೆಸಿಕೊಟ್ಟರು, ಇವರೆಲ್ಲರ ಹಿಂದೆ ಅಣ್ಣ ಪ್ರೊಫೆಸರ್ ಜಯದೇವ ಅವರು ಮುಖ್ಯ ರೂವಾರಿಗಳಾಗಿ ನಿಂತಿದ್ದರು. ಎರಡು ದಿನಗಳ ಹಿಂದಷ್ಟೇ ಇಂಗ್ಲೆಂಡ್-ದುಬೈಗಳ ಮೂಲಕ ಬಂದಿಳಿದಿದ್ದ ಪೂರ್ಣಿಮ-ಪ್ರಸಾದರ ಜೋಡಿಗೆ ಇಡೀ ಸಂಸಾರ-ಗೆಳೆಯ-ಹಿತೈಷಿ ವ್ರುಂದ ಸಲ್ಲಿಸಿದ ವಿಶೇಷ ಸಂದರ್ಭ ಇದಾಗಿತ್ತು. ೬೦ ನೇ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಹಿತ್ಯಕ ಕೌಟುಂಬಿಕ ಹಿನ್ನೇಲೆಯಲ್ಲಿ ಬೆಳೆದುಬಂದ ಶಿವಪ್ರಸಾದರ ಚೊಚ್ಚ ಲ ಕ್ರುತಿ ‘ಇಂಗ್ಲೆಂಡಿನಲ್ಲಿ ಕನ್ನಡಿಗ’ ಎಂಬ ಪುಸ್ತಕವನ್ನು ಹೊರತರಲಾಯ್ತು.

ksv-mraoಈ ಹಿನ್ನೆಲೆಯಲ್ಲಿ ಶಿವಪ್ರಸಾದರ ಆತ್ಮಾವಲೋಕನವೂ ನಡೆಯಿತು. ತಮ್ಮಲ್ಲಿ ಸದಾಕಾಲ ಜೊತೆಗಿದ್ದ ಬರಹಗಾರನನ್ನು ನೇವರಿಸುತ್ತಲೇ ಬದಿಗಿಟ್ಟು, ವೈದ್ಯವೃತ್ತಿಯ ಬದುಕಿಗೇ ಬಹಳಷ್ಟು ಪ್ರಾಶಸ್ತ್ಯ ಕೊಟ್ಟು ನಡೆದುಬಂದದ್ದನ್ನು ಅವರು ಇಲ್ಲಿ ನೆನೆದರು.

ಬದುಕಿನ ವಿವಿಧ ಹಂತಗಳಲ್ಲಿ ನಾವು ಬೇರೆ ಬೇರೆ ವಿಚಾರಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತ ಬರುತ್ತೇವೆ. ಐವತ್ತನ್ನು ದಾಟುವ ವೇಳೆಗೆ ಮನುಷ್ಯನಿಗೆ ತಾನು ಸಾಧಿಸಿದ್ದನ್ನು ವಿಮರ್ಶಿಸುವ ಸಮಾಧಾನ, ಸೌಭಾಗ್ಯ ಒದಗಿಬರುತ್ತದೆ. ವಿಚಾರವಂತರಲ್ಲಿ ಆತ್ಮವಿಮರ್ಸ್ಝೆಯ ಧೈರ್ಯ ಮೂಡುತ್ತದೆ. ಕೆಲವರಲ್ಲಿ ತಮ್ಮ ಬದುಕಿನ ಮೂಲ ಕಿಡಿಗಳಿಗೆ ಕಾವುಕೊಟ್ಟು ,ಬೆಂಕಿಯನ್ನು ಕಾಯಿಸಿಕೊಳ್ಳುವ ಸಂಕಲ್ಪವೂ ಮೂಡುತ್ತದೆ. ಇದಕ್ಕೆ ಅಲ್ಲಿಯವರೆಗಿನ ಬದುಕು ಸಮನಾಗಿ ಸವೆದು ಒಂದು ಸಮತೋಲನವನ್ನು ಕಾಣುವ ಅಗತ್ಯ ಪೂರೈಸಿರಬೇಕು. ಸಮಯ-ಸಂಧರ್ಭಗಳ ಮತ್ತು ಹಿತೈಷಿಗಳ ಒತ್ತಾಸೆಯ ಅನುಕೂಲವೂ ಇರಕೇಕು.

ಡಾ. ಪ್ರಸಾದರು ತಮ್ಮ ಭಾಷಣದಲ್ಲಿ, ಕನ್ನಡ ಸಾಹಿತ್ಯ ,ಸಂಸ್ಕೃತಿ ಮತ್ತು ವಿಚಾರ ವೇದಿಕೆಯ ಹುಟ್ಟು ತಮಗೆ ಆ ತಿರುವನ್ನು ನೀಡಿದ್ದನ್ನು ನೆನೆಸಿಕೊಂಡರು.ಆಗಾಗ ಕವನಗಳನ್ನು ಬರೆಯುತ್ತಲೇ ಸಾಗಿದ್ದ ಅವರಿಗೆ ತಮ್ಮದೇ ಪುಸ್ತಕದ  ಬಿಡುಗಡೆಯ ವಿಚಾರ ಮೊಳೆತದ್ದೂ ಆಗಲೇ. ಅದಕ್ಕೆ ನೆರವಾದ್ದು ಈ ಹುಟ್ಟುಹಬ್ಬ. ಇಂಗ್ಲೆಂಡಿಗೆ ಹೊಂದಿಕೊಂಡು ಬೆಳೆದದ್ದು,ಅದರಲ್ಲೂ ತಮ್ಮ ಕನ್ನಡಿಗನನ್ನು ಉಳಿಸಿಕೊಂಡಿದ್ದು, ಆಂಗ್ಲಭಾಷೆಯಲ್ಲಿಯೂ ತಮ್ಮ ಸಂವೇದನೆಗಳಿಗೆ ಉಸಿರು ನೀಡಿದ್ದು ಎಲ್ಲವನ್ನು ಸೇರಿಸಿ ‘ಇಂಗ್ಲೆಂಡಿನಲ್ಲಿ ಕನ್ನಡಿಗ’ ಹೊರಬಂದಿದೆ. ಓದಿ ಆನಂದಿಸಿ, ವಿಮರ್ಷಿಸಿ.

singer-3ಈ ಸಂದರ್ಭದ ಅವರ ಹಿನ್ನೋಟದಲ್ಲಿ ತಮ್ಮ ತಂದೆಯವರೊಡನೆ ಅವರು ನಡೆಸಿದ ಕೆಲವು ಸಾಹಿತ್ಯ ಸಂವಾದಗಳ ವಿಚಾರವೂ ಸೇರಿತ್ತು. ಅವರು ಬದುಕಿದ್ದಾಗಲೇ  ಮತ್ತಷ್ಟು ಸಾಹಿತ್ಯ ವಿಮರ್ಷೆಯನ್ನು ನಡೆಸಿ, ಪುಸ್ತಕ ಬಿಡುಗಡೆಯನ್ನು ಮಾಡಬಹುದಿತ್ತೇನೋ ಎನ್ನುವ ಜಿಜ್ಞಾಸೆಯೂ ಸೇರಿತ್ತು. ಪ್ರಸಿದ್ದ ಕವಿಯನ್ನು ತಂದೆಯಾಗಿ ಪಡೆದರೂ ತಂದೆ ಮಗನ ಸಂಭಂಧವನ್ನು ತಾವು ‘taken for granted’ ಅಂದುಕೊಂಡ ಸರಳ ಸತ್ಯ ಅವರ ನುಡಿಗಳಲ್ಲಿತ್ತು.

ಪ್ರಸಾದರ ಬಗ್ಗೆ ಮಗಳು ಅನನ್ಯ  ಕನ್ನಡದಲ್ಲಿಯೇ ಮಾತಾಡಿ ತನ್ನ ತಂದೆಯ ಜೊತೆಗಿನ ಒಡನಾಟ, ಕುಟುಂಬದ ಹಿನ್ನೆಲೆಯನ್ನು ನೆನೆದಳು. ತಂದೆಯಾಗಿ ಪ್ರಸಾದರು ಮಾಡಿದ ಸಾಧನೆಗಳನ್ನು ಮುಂದುವರೆಸುವ, ಹಿಂದಿಕ್ಕುವ ಜವಾಬ್ದಾರಿಯ ಅರಿವಿರುವುದನ್ನು ತಿಳಿಸಿ ಮಿಂಚಿದಳು.

ಕೇಕ್ ಕತ್ತರಿಸದೆ, ದೀಪವನ್ನಾರಿಸದೆ ಮತ್ತೊಂದು ದೀಪವನ್ನು ಬೆಳಗಿಸುವಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ ಪ್ರಸಾದರ ಹುಟ್ಟುಹಬ್ಬ ಪುಸ್ತಕ ಬಿಡಿಗಡೆ-ಸುಗಮ ಸಂಗೀತದ ಬೆಳಕಿನೊಂದಿಗೆ ಆತ್ಮೀಯವಾದ,ವಿಶೇಷ ಸಂದರ್ಭವಾಗಿತ್ತು.

singerಕನ್ನಡ ಸಾಹಿತ್ಯ ವಲಯದಲ್ಲಿ ಹುಟ್ಟಿದಹಬ್ಬ ಪುಸ್ತಕ ಹೊರತರುವುದರ ಜೊತೆ ನಡೆದಿರುವುದು ಇದೇ ಮೊದಲಲ್ಲ,

ಪುಸ್ತಕ ಬಿಡುಗಡೆಗೊಂದು ದಿನಾಂಕ ನಿಗಧಿ ಪಡಿಸಿ, ಆತ್ಮೀಯರನ್ನೆಲ್ಲ ಒಂದೆಡೆ ಕೂಡಿಸಿ ಪುಸ್ತಕ ಬಿಡುಗಡೆ ಮಾಡುವುದು ಆರಂಭಗೊಂಡಿದ್ದು ೨೫ ವರ್ಷಗಳ ಹಿಂದೆ. ಆರಂಭಿಸಿದ್ದು ‘ಅಂಕಿತ ಪ್ರಕಾಶನ’ ದ ಪ್ರಕಾಶ ಕಂಬತ್ತಳ್ಳಿ. ಅದಕ್ಕಿಂತ ಮೊದಲು ಎಲ್ಲರ ಕೃತಿಗಳು ಸುಮ್ಮನೆ ಹೊರಬರುತ್ತಿದ್ದವು. ಕುವೆಂಪು, ಬೇಂದ್ರೆಯವರ ಕ್ರುತಿಗಳೂ ಇದಕ್ಕೆ ಹೊರತಾಗಿರಲಿಲ್ಲ. ಅಬ್ಬಬ್ಬಾ ಎಂದರೆ ಸಣ್ಣ ಗೆಳೆಯರ ಗುಂಪಿನಲ್ಲಿ ಲೋಕಕ್ಕೆ ಸಮಾರ್ಪಣೆಯಾಗುತ್ತಿದ್ದವು. ಜಿ.ಎಸ್. ಶಿವರುದ್ರಪ್ಪನವರ ಇಪ್ಪತ್ತೈದನೆಯದೋ ಮೂವತ್ತನೆಯದೋ ಕೃತಿ ‘ಕುವೆಂಪು ಪುನರಾವಲೋಕ ‘ನ  ಅಂಕಿತ ಪ್ರಕಾಶನದಲ್ಲಿ ಒಂದು ಕಾರ್ಯಕ್ರಮದ ಮೂಲಕ ಬೆಳಕು ಕಂಡ ಮೊದಲ ಕೃತಿ!

ಇತ್ತೀಚೆಗೆ ಪುಸ್ತಕ ಬಿಡುಗಡೆ ಹೊಸ ರೂಪಗಳನ್ನು ತಳೆಯುತ್ತಿದೆ.

ಬೋಳುವಾರು ಮಹ್ಮದ್ ಕುಂಇ ಯವರ ‘ಓದಿರಿ’ ಪುಸ್ತಕ  face book ನಲ್ಲಿ ಬೆಳಕು ಕಂಡಿತು.

ಹೊಸ ತಲೆಮಾರಿನ ತಾಂತ್ರಿಕತೆಯೊಂದಿಗೆ ತಳುಕು ಹಾಕಿಕೊಂಡ ಸಾಹಿತಿ ವಸುಧೇಂಧ್ರ ತಮ್ಮ ಕ್ರುತಿ ’ಐದು ಪೈಸೆ singer-2ವರದಕ್ಷಿಣ” ಯನ್ನು ಯೂ ಟ್ಯೂಬಿನ ವೀಡೀಯೋ ಮೂಲಕ ,ವಾಟ್ಸಪ್ನಲ್ಲಿ ಸಂದೇಶಗಳನ್ನು ಹರಿಬಿಡುವ ಮೂಲಕ ಬಿಡುಗಡೆ ಮಾಡಿ ಯಾವ ಸಭಾಂಗಣವು ಹಿಡಿಸದ ೩೫೦೦೦ ಜನರನ್ನು ಒಟ್ಟಿಗೆ ತಲುಪಿದ್ದೂ ಉಂಟು. ಆದರೆ, ಸಾಂಪ್ರದಾಯಿಕ ಶೈಲಿಯಲ್ಲಿ ನಡೆವ ಪುಸ್ತಕ ಬಿಡುಗಡೆಯಲ್ಲಿ ಕಾಣಸಿಗುವ ಆತ್ಮೀಯತೆ online ನಿನ ಕಾರ್ಯಕ್ರಮಗಳಲ್ಲಿ ಕಾಣಲಾಗದ್ದನ್ನು ಅವರು ಒಪ್ಪಿಕೊಳ್ಳುತ್ತಾರೆ.

ಆತ್ಮೀಯರ ಜೊತೆ ಕಳೆವ, ಬೆರೆವ ಆನಂದದ ಕ್ಷಣಗಳು ನಮ್ಮಂತಹ ವಿದೇಶಿಯರ ಪಾಲಿಗೆ ಅಪರೂಪವೇ. ಜೊತೆಗೆ ಈ ಪುಸ್ತಕ ಬಿಡುಗಡೆಗೆ ಮಾರುಕಟ್ಟೆಯ ಅಂಕಿ ಅಂಶಗಳ ಮಾನದಂಡಗಳ ಅಗತ್ಯವಿರಲಿಲ್ಲ. ಶಿವಪ್ರಸಾದರ ಈ ಹುಟ್ಟಿದಬ್ಬ ಮತ್ತು ಪುಸ್ತಕ ಬಿಡುಗಡೆಯಲ್ಲಿ ಆತ್ಮಾವಲೋಕನ,ಜಿಗ್ನಾಸೆ,ಆತ್ಮೀಯರ ನಡುವೆ ಕಳೆವ ಕ್ಷಣಗಳ ಸಾರ್ಥಕತೆ, ಸರಳತೆ ಮತ್ತು ನೈಜತೆಗಳು ಒಡಗೂಡಿದ್ದವು.

ಇತರೆ ಉದಾಹರಣೆಗಳನ್ನು ಯಾರು ಬೇಕಾದರೂ ಸಾಧಿಸಬಹುದೇನೋ. ಪ್ರಸಾದರಂತಹ ಹುಟ್ಟುಹಬ್ಬವನ್ನು ಧೀರ್ಘ ಕಾಲದ ಮಾನವೀಯ ಸಂಭಂಧಗಳ ಗಳಿಕೆಯಿಂದ ಮತ್ತು ಹೊಸ ಅರ್ಥಗಳಲ್ಲಿ ಮಿಂದು ಸಾರ್ಥಕತೆಯನ್ನು ಕಾಣುವ ಸರಳತೆಯ ಮೂಲಕ ಮಾತ್ರ ಸಾಧಿಸಬಹುದು.

 

7 thoughts on “ಇಂಗ್ಲೆಂಡಿನ ಕನ್ನಡಿಗ ಮತ್ತು ಹುಟ್ಟುಹಬ್ಬ – ಡಾ. ಪ್ರೇಮಲತ ಬಿ.

 1. ಡಾ.ಶಿವ ಪ್ರಸಾದ್ ಅವರ 60ನೇ ಹುಟ್ಟುಹಬ್ಬ ಮತ್ತು ಅವರ ಪ್ರಥಮ ಪುಸ್ತಕ ಬಿಡುಗಡೆಯ ವರ್ಣಮಯ ವರ್ಣನೆ ಪ್ರೇಮಲತಾ ಅವರೇ .ನಿಜವಾಗಿಯೂ ಈ 60ರ ಹುಟ್ಟುಹಬ್ಬ ಒಂದು ಮೈಲುಗಲ್ಲು .ಹಿಂದಿರುಗಿ ನೋಡಿ ಬಾಳಿನ ಸಿಂಹಾವಲೋಕನ ಮಾಡಲು ತಕ್ಕ ಸಮಯ .ಭಾಷೆಯಲ್ಲಿಯ ,ಶೈಲಿಯಲ್ಲಿಯ ಬಿಗುವು ಲೇಖನಕ್ಕೆ ಹೊಸ ಸೊಬಗು ನೀಡಿ ,ಆ ಸಂಭ್ರಮದಲ್ಲಿ ಪಾಲ್ಗೊಂಡ ಅನುಭವ ನೀಡುತ್ತದೆ .ಅರಿಯದಂತೆ ನಾನೂ ನಿಮ್ಮ ಅನಿವಾಸಿ ಬಳಗಕ್ಕೆ ತುಂಬಾ ಹತ್ತಿರವಾಗಿ ಬಿಟ್ಟಿದ್ದೇನೆ . ಏನೋ ಒಂದು ಮಧುರ ಬಂಧುರ ಭಾವ. ನಿಮ್ಮ ಈ ಲೇಖನ ಓದಿದ ಮೇಲಂತೂ ನಮ್ಮಲ್ಲಿಯೇ ಕಾರ್ಯಕ್ರಮ ನಡೆಯುತ್ತಿದೆ ,ನಮ್ಮದೇ ಎಂಬನಿಸಿಕೆ .ಅಂತಹ ಆತ್ಮೀಯ ಭಾವ ಮೂಡಿಸುವ ವೈಚಾರಿಕ ವರದಿ ಲೇಖನ ನೀಡಿದ್ದಕ್ಕೆ ಧನ್ಯವಾದಗಳು ಪ್ರೇಮಲತಾ ಅವರೇ . ತಮ್ಮ ಷಷ್ಠಿಪೂರ್ತಿಯನ್ನ ವಿಶಿಷ್ಟ ರೀತಿಯಲ್ಲಿ ,ತಮ್ಮದೇ ನೆಲದಲ್ಲಿ ಆಚರಿಸಿಕೊಂಡ ಡಾ.ಶಿವ ಪ್ರಸಾದ್ ಅವರಿಗೆ ಹೃದಯ ತುಂಬಿ ಅಭಿನಂದಿಸಿ ,ಒಳ್ಳೆಯ ಆಯುರಾರೋಗ್ಯಕ್ಕೆ ನನ್ನ ಹಾರೈಕೆ .ಇನ್ನೂ ,ಮತ್ತೂ ಅಷ್ಟು ಪುಸ್ತಕಗಳ ಬಿಡುಗಡೆಯ. ನಿರೀಕ್ಷೆಯಂತೂ ಖಂಡಿತ .
  ಸರೋಜಿನಿ ಪಡಸಲಗಿ

  Like

 2. “ಕೇಕ್ ಕತ್ತರಿಸದೆ, ದೀಪವನ್ನಾರಿಸದೆ ಮತ್ತೊಂದು ದೀಪವನ್ನು ಬೆಳಗಿಸುವಲ್ಲಿ…” ಈ ಸಾಲನ್ನೇ ಹಿಡಿದು ಹೇಳುವುದಾದರೆ ನೀವೂ ಕೂಡ ಒಬ್ಬರ ಹುಟ್ಟುಹಬ್ಬದ ಸಂಭ್ರಮದ ಸನ್ನಿವೇಶವನ್ನು ಸೊಗಸಾಗಿ ಹಂಚಿಕೊಂಡು ನಿಮ್ಮ ಹೊಸತನದ ಶೈಲಿಯ ಬರಹವನ್ನು ಕೊಟ್ಟಿದ್ದೀರ – ಓದಿದ್ದು ಸಾರ್ಥಕವಾಯಿತು.

  Like

 3. ಡಾ ಎಸ್. ಪ್ರಸಾದ್ ರವರ ಹುಟ್ಟುಹಬ್ಬದಲ್ಲಿ ಬಾಗವಹಿಸುವ ಅವಕಾಶ, ನನಗೂ ಸಿಕ್ಕಿತ್ತು. ಕೇಕು ಇಲ್ಲದ ಬರ್ತ್ಡೇ ಪಾರ್ಟಿಯೇ? ಎಂದು ನನ್ನ ಮಗಳಿಗೆ ಸ್ವಲ್ಪ ಆಶ್ಚರ್ಯವಾಯಿತು. ಸಿಹಿಗಿಂತಲೂ ಸವಿಯಾದ ಕವಿನುಡಿ ಮತ್ತು ಸಂಗೀತವನ್ನು ಕೇಳುವ ಸದವಕಾಶ ಅತಿಥಿಗಳಿಗೆ ಪ್ರಸಾದ್ ದಂಪತಿಗಳು ಒದಗಿಸಿದ್ದರು.
  ಪ್ರೇಮಲತ ಇದರ ವರದಿಯನ್ನು ತಮ್ಮದೇ ಆದಿ ವಿಶಿಷ್ಟವಾದ ಸ್ಟೈಲ್ನಲ್ಲಿ ಬಹಳ ಸೊಗಸಾಗಿ ಬರೆದಿದ್ದಾರೆ

  Like

 4. Well written. Can’t believe that Shivaprasad is 60! I thought he was in his late 40/50s.
  Tightly woven words are a delight to read. Good efforts/congratulations/best wishes and everything.

  Like

 5. ಡಾ ಶಿವಪ್ರಸಾದರ ವೈದ್ಯಕೀಯ ವೃತ್ತಿಯ ಬಗ್ಗೆ ಅನೇಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದನ್ನು ಕೇಳಿದ್ದೇನೆ. ಅವರ ಕವಿ ಹೃದಯದ ಸೃಜನಶೀಲತೆಯನ್ನು ಕಳೆದ ೮ ವರ್ಷಗಳಿಂದ ನೋಡಿರುವ ನನಗೆ, ಅವರ ೬೦ನೆ ಹುಟ್ಟುಹಬ್ಬದ ಆಚರಣೆಯನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಸ್ವಲ್ಪದರಲ್ಲಿ ತಪ್ಪಿಹೋಯಿತು. ಆದರೇನು, ಪ್ರೇಮಲತಾ ಅದನ್ನು ಬಹಳ ಸೊಗಸಾಗಿ ವರ್ಣಿಸಿ, ತಮ್ಮದೇ ಆದ ಝಳಪನ್ನು ನೀಡಿ ಬರೆದಿದ್ದಾರೆ. ೬೦ ವರ್ಷದ ಹುಟ್ಟುಹಬ್ಬವನ್ನು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಆಚರಿಸುವುದನ್ನು ನೋಡಿದ್ದೇನೆ. ಆದರೆ ಶಿವಪ್ರಸಾದ ಅವರು, ತಾವು ಆಂಗ್ಲನಾಡಿನಲ್ಲಿ ಕಳೆದ ೨೧ ವರ್ಷಗಳ ಜೀವನವನ್ನು, ಒಂದು ಪುಸ್ತಕದ ರೂಪದಲ್ಲಿ ಹೊರತಂದು, ತಮ್ಮ ೬೦ನೆಯ ಹುಟ್ಟುಹಬ್ಬಕ್ಕೆ ಅಪರೂಪದ ಮೆರಗನ್ನು ನೀಡಿದ್ದಾರೆನ್ನಬಹುದು. ಸರಳ ಸೌಜನ್ಯಿಕೆಯ ವ್ಯಕ್ತಿ ಶಿವಪ್ರಸಾದರಿಗೆ ತಕ್ಕ ಪತ್ನಿ ಮತ್ತು ಪುತ್ರಿ ಪೂರ್ಣಿಮಾ ಮತ್ತು ಅನನ್ಯ. ಕನ್ನಡ ಸಾಹಿತ್ಯಲೋಕದ ಅತ್ಯುತ್ತಮ ಕವಿ ಮತ್ತು ಸಾಹಿತಿಗಳ ಸಮ್ಮುಖದಲ್ಲಿ ಜರುಗಿದ ಅವರ ಹುಟ್ಟುಹಬ್ಬದ ವಿವರಣೆ ಪ್ರೇಮಲತಾರ ಲೇಖನದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಸಮಾರಂಭಕ್ಕೆ ಹೋಗದಿದ್ದರೂ, ಅಲ್ಲೇ ಇದ್ದ ಅನುಭವವಾಯಿತು. ಧನ್ಯವಾದಗಳು ಪ್ರೇಮಲತಾ. ಇಂಗ್ಲೆಂಡಿನಲ್ಲಿ ಕನ್ನಡಿಗ ಪುಸ್ತಕವನ್ನು ಓದುವ ಅವಕಾಶ ಆದಷ್ಟು ಬೇಗ ದೊರಕುತ್ತದೆ ಎಂದು ಆಶಿಸುತ್ತೇನೆ.
  ಉಮಾ ವೆಂಕಟೇಷ್

  Liked by 1 person

 6. ಪ್ರೇಮಲತಾ ಅವರೇ ‘ಇಂಗ್ಲೆಂಡಿನ ಕನ್ನಡಿಗ ಮತ್ತು ಹುಟ್ಟು ಹಬ್ಬ’ ಲೇಖನಕ್ಕಾಗಿ ನನ್ನ ಧನ್ಯವಾದಗಳು. ಮೇಲ್ನೋಟಕ್ಕೆ ಒಂದು ವರದಿಯಂತೆ ಕಂಡರೂ ಹುಟ್ಟು ಹಬ್ಬ ಮತ್ತು ಪುಸ್ತಕ ಬಿಡುಗಡೆಯ ಬಗ್ಗೆ ತಮ್ಮ ವಿಚಾರಾತ್ಮಕ ಚಿಂತನೆಗಳು ಎದ್ದು ಕಾಣುತ್ತವೆ. ಪುಸ್ತಕ ಬಿಡುಗಡೆಗೆ Social Media ಗಳನ್ನು ಬಳಸಿ ಕೊಳ್ಳುವುದರಿಂದ ಹೆಚ್ಚಿನ ಪ್ರಚಾರ ಸಿಗಬಹುದು. ಆದರೆ ಸಾಂಪ್ರದಾಯಕವಾಗಿ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಅಥವಾ ಇತರ ವೇದಿಕೆಗಳಲ್ಲಿ ಸಾಹಿತಿಗಳ ನಡುವೆ ಪುಸ್ತಕ ಬಿಡುಗಡೆ ಆಚರಿಸುವ ಪದ್ಧತಿಯಿಂದ ದೊರಕುವ ಸಂತೋಷ ಮತ್ತು ಸಂತೃಪ್ತಿ ಗಳೇ ಬೇರೆ. ಇದಕ್ಕೆ ಒಂದು personal touch ಅಥವಾ ಆತ್ಮೀಯತೆ ಇರುವುದರ ಬಗ್ಗೆ ನೀವು ಪ್ರಸ್ತಾಪ ಮಾಡಿದ್ದೀರಿ. ನಾನು ಮುಜುಗುರ ಹಾಗು ಹೆಮ್ಮೆಯ ಭಾವನೆಗಳಿಂದ ಪ್ರತಿಕ್ರಯಿಸುತ್ತಿದ್ದೇನೆ. ನನ್ನ ಮೇಲಿನ ನಿಮ್ಮ ಅಭಿಮಾನಕ್ಕೆ ನಾನು ಧನ್ಯನಾಗಿದ್ದೇನೆ. ನಮ್ಮ ವೇದಿಕೆಯ ಇತರ ಲೇಖಕರ ಪುಸ್ತಕ ಬಿಡುಗಡೆಯ ಆಹ್ವಾನವನ್ನು ನಿರೀಕ್ಷಿಸುತ್ತಿದ್ದೇನೆ.

  Liked by 1 person

 7. ಪ್ರೇಮಲತಾ ಅವರು ಈ ವೇದಿಕೆಯ ಹಿರಿಯ ಸದಸ್ಯರ ಹುಟ್ಟಿಹಬ್ಬದ ವರದಿ ಒಂದು ಸಾಮಾನ್ಯ  ಅಥವಾ ನೀರಸ ಯಾದಿಯಾಗದಂತೆ ನೋಡಿಕೊಂಡು ಮನುಷ್ಯನ ಜೀವನದ ಮುಖ್ಯ ಮೈಲುಗಲ್ಲುಗಳ ವೈಶಿಷ್ಠ್ಯತೆ ಬಗ್ಗೆ ರಸವತ್ತಾದ ಚರ್ಚೆಯೊಂದಿಗೆ ಅವುಗಳ ಬಗ್ಗೆ ವಿಚಾರವಂತರ ದೃಷ್ಟಿಕೋಣ, ಮತ್ತು ಅದರ ವಿಶ್ಲೇಷಣೆ  ಮಾಡುವ ರೀತಿ ಇವೆಲ್ಲವುಗಳನ್ನು ಅವಲೋಕಿಸಿ ರಿಪೋರ್ಟನ್ನು ವೈಚಾರಿಕ ಲೇಖನದ ಮಟ್ಟಕ್ಕೆ ಏರಿಸಿ ಅದಕ್ಕೆ ತಮ್ಮದೇ ಛಾಪು ಕೊಟ್ಟು ನಮ್ಮವರೇ ಆದ ಶಿವಪ್ರಸಾದರ ಹುಟ್ಟು ಹಬ್ಬ- ಚೊಚ್ಚಲ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆ  ಕೊಟ್ಟಿದ್ದಾರೆ. ಇದರಲ್ಲಿ ನನ್ನಂಥವರು ಇನ್ನೂ ಒಂದು ದಶಕದ ಮುಂದಿರುವಾಗ ನೀನೂ ಹಿಂದಿನ ಜೀವನದ ಸಿಂಹಾವಲೋಕನ ಮಾಡುತ್ತಿರುವೆಯಾ ಎಂದು ಎಚ್ಚರಿಕೆ ಕೊಟ್ಟಂತೆ ಅನಿಸಿದರೆ ಏನೂ ತಪ್ಪಿಲ್ಲವೆ? ಬದುಕಿನಲ್ಲಿ ಈ ಲೇಖನದಂತೆ ಗಾಂಭೀರ್ಯ ಬೇಕು! ಕೊನೆಗೆ,ಒಂದೇ ದಿನದಲ್ಲಿ ಎರಡು ಮೈಲುಗಲ್ಲುಗಳನ್ನು ದಾಟಿದ ಷಷ್ಠ್ಯಬ್ದಿಪೂರ್ತರಿಗಷ್ಟೇ ಅಲ್ಲದೆ ಲೇಖಕಿಗೂ ಅಭಿನಂದನೆಗಳು.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.