ವಿವಿಧ ಚಿತ್ತಸ್ಥಿತಿಗಳು: ವಿಜಯನಾರಸಿಂಹರ ಕವನಗಳು

ವಿಜಯನಾರಸಿಂಹ ನಿಮಗೆಲ್ಲ ಪರಿಚಯವಿರುವ ಕವಿ. ಅವರು ಭಾವನಾತ್ಮಕ ವ್ಯಕ್ತಿ. ಅದನ್ನಿಲ್ಲಿ ಅವರ ಕವನಗಳನ್ನೋದಿದಾಗ ಎದ್ದು ಕಾಣುವುದು. ಮೊದಲ ಕವನ “ನೆನಪು” ನಿಮ್ಮನ್ನು ಸಾಕಷ್ಟು ಕಾಡಬಹುದು. ಅದರ ಹಿನ್ನಲೆಯನ್ನು ಅವರ ಮಾತುಗಳಲ್ಲೇ ಓದಿ.
“ಬರಹದ ಸೋಜಿಗ” ಅವರಿಗೆ ಕಾವ್ಯ ಮಾಧ್ಯಮದ ಮೇಲೆ ಅವರಿಗಿರುವ ಹಿಡಿತವನ್ನು ಪ್ರದರ್ಶನಕ್ಕಿಡುತ್ತಿದೆ. ಅದರೊಂದಿಗೆ ಶಬ್ದಗಳ ಚಮತ್ಕಾರವನ್ನೂ ಕಾಣುತ್ತೀರಿ. ಕವನ ಸುಲಿದ ಬಾಳೆ ಹಣ್ಣಿನಂತಿರಬೇಕಂತೆ. ಈ ಕವನವೂ ಆ ಭಾವನೆಯನ್ನು ವ್ಯಕ್ತಿಸುತ್ತ ನಿಮ್ಮ ಮನವನ್ನು ಮುದಗೊಳಿಸುತ್ತಿದೆ.
“ಸದಾನುರಾಗಿ” ಮುತ್ತು ಪೋಣಿಸಿದಂತ ಪ್ರೇಮಕವನ. ಹನಿಗವನದ ಮಟ್ಟು ಇಲ್ಲಿದೆ. ಓದಿ ಮತ್ತೇರಿದರೆ ಆಶ್ಚರ್ಯವಿಲ್ಲ.
ಕರುಣಾರಸದಿಂದ ಪ್ರಾರಂಭವಾಗಿ ಶೃಂಗಾರ ರಸದಲ್ಲಿ ಮುಕ್ತಾಯವಾಗುವ ಈ ವಾರದ ಕಾವ್ಯ ಸರಣಿ ಕವಿಯ ಅನುಭವದ ಹರವನ್ನು ಹರಡಿಟ್ಟಿದೆ ನಿಮ್ಮೆದುರು. (ಸಂ)

 

ನೆನಪು

ಈ ಕವನ ಅತ್ಯಂತ ನೋವನ್ನುಂಡ ಮನಸಿನ ಅಳಲು ನನ್ನ ಆತ್ಮೀಯ ಸ್ನೇಹಿತರೂ , ಅಣ್ಣನ ಸಮಾನರೂ ಆದ ನನ್ನ ಸಹೋದ್ಯೋಗಿಯೊಬ್ಬರ 4ವರ್ಷದ ಬೊಗಸೆಗಣ್ಗಳ , ಅತ್ಯುತ್ಸಾಹದ , ಮುಗ್ಧ ಮನಸ್ಸಿನ ಮಗಳು cancer ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ಆ ನನ್ನ ಅಣ್ಣನ ಕಣ್ಣಲ್ಲಿ ಮಡುಗಟ್ಟಿದ ದುಃಖವನ್ನು ನೋಡಿದಾಗ ಬರೆದದ್ದು

 

ನಿನ್ನ ನೆನಪು ಅಡಿಗಡಿಗೆ ಕಾಡಿದೆ
ಮನದಲ್ಲಿ ದುಗುಡವು ಮನೆಮಾಡಿ ಕೂಡಿದೆ

ಹೆತ್ತಮ್ಮಳ ಒಡಲ ಕಡಲನ್ನು ಬರಿದು ಮಾಡಿದೆ ನೀನು
ಎತ್ತಾಡಿದ ತೋಳಿನ ತೆಕ್ಕೆಯಲಿ ಮತ್ತೆ ಬಾರೆಯೇ ನೀನು?

ಬತ್ತಿಹುದು ಕೊರಳು ಕೊರಗಿ ನಿನ್ನ ಕರೆಯಲಾಗದು ಇನ್ನೆಂದೂ
ಹೊತ್ತಿಹುದು ಉರಿದು ಬೆಂಕಿ , ಆರಿಸಲು ಇನ್ನಾಗದು ಎಂದೂ

ಕಿತ್ತು ತಿಂದಿತೇ ವಿಧಿಯು ನೀ ಇರುವಷ್ಟು ಹೊತ್ತು
ಅತ್ತು ಎಷ್ಟು ಬೇಡಿಕೊಂಡರೂ ತುತ್ತು ಮುಗಿಸಿತ್ತು

ಸೂತಕದ ಛಾಯೆಯು ತಂದಿತು ಆಘಾತದ ನೋವು
ನೀನಿನ್ನು ಬರೀ ನೆನಪೇ ಎಂದು ಸೋತು ಹೋದೆವು ನಾವು

 

ಬರಹದ ಸೋಜಿಗ

 

 

ಬರೆಸುತಿರುವುದೊಂದು ಜ್ಞಾನ

ಬರೆಯುತಿರುವುದೊಂದು ಕೈ

ಪೋಣಿಸುತ ಅಕ್ಷರಕ್ಕೊಂದು ಅಕ್ಷರ

ಅಲ್ಲೊಂದು ಹ್ರಸ್ವ, ಇಲ್ಲೊಂದು ದೀರ್ಘ

ಅಲ್ಲೊಂದು ಅನುಸ್ವಾರ,ಇಲ್ಲೊಂದು ವಿಸರ್ಗ

ಸ್ವರ-ವ್ಯಂಜನಗಳ ಹೆಣೆದು

ಪುಷ್ಪಮಾಲೆಯ ತೆರದಿ

ಜನಿಸಿದ ಪದಗಳೆಷ್ಟು ?

ಕೂಡಿ ಆದ ಸಾಲುಗಳೆಷ್ಟು?

ತಿಳಿಯಲೆತ್ನಿಸಿದಂತೆಲ್ಲಾ ಕಾಡುವುದು ಕುತೂಹಲ

ಏನೀ ಸೋಜಿಗ ಲಿಪಿಯದೊ?

ಭಾಷೆಯದೊ? ಅರ್ಥವದೊ ?

 

ಸುಪ್ತ ಜ್ಞಾನಕೆ ಕವಿಯಾಗುವ ಭರ

ಜಾಗೃತ ಮನಕೆ ಭಾವದ ಭಾರ

ಸರಿದೂಗಿಸಲೆಳೆವ ಶಬ್ದ ಸಾಗರ

ಬರೆದುದೆಲ್ಲ ಗ್ರಂಥವಾಗಿಸುವ ಹಠವೇಕೆ ?

ಪದವಿಯೇಕೆ, ಪದಕವೇಕೆ?

ಸಾಲದೇನು ಒಂದು ಸರಳ ಭಾವಗೀತೆ

ಧಗೆಯ ತಣಿಸುವ ಸೋನೆ ಮಳೆಯಂತೆ

 

ಸದಾನುರಾಗಿ

 

ಕಲೆ: ಲಕ್ಷ್ಮೀನಾರಾಯಣ ಗುಡೂರ್

ನಾನು ಮನವಿ ಸಲ್ಲಿಸುವ ಮೊದಲೇ
ಆಹ್ವಾನವಿತ್ತೆಯಾ ನೀ ಕಣ್ಣಲ್ಲೇ

ನಿನ್ನೆದೆಯ ಅಂತಃಪುರದ ಒಡೆಯ ನಾನು
ಎಂದು ಸನ್ನೆಯಲ್ಲೇ ಬಿನ್ನಹಿಸಿಹೆ ನೀನು

ನನಗೆ ನೀ, ನಿನಗೆ ನಾ ಗೊತ್ತಾಗಿ
ಸಪ್ತಪದಿಯ ಸುತ್ತಾಗಿ
ಮಾತಾಗಿ, ಮುತ್ತಾಗಿ, ಮತ್ತಾಗಿ
ನಡೆದು ಜೊತೆ ಜೊತೆಯಾಗಿ
ನಮಗೆರಡು ಮಕ್ಕಳಾಗಿ
ಸರಿಸಿ ಎಷ್ಟೋ ವರುಷಗಳ ಸಲೀಸಾಗಿ

ನಿನ್ನೊಲವಿನ ಒರತೆ ಹೊರತಾಗಿ
ಮತ್ತೇನೂ ಸೆಳೆಯದಾಗಿ
ಬಾಳು ಬಹಳ ಸರಳವಾಗಿ
ನಾನು ನಿನ್ನ ಸದಾನುರಾಗಿ
ಇರಬಹುದೇ ನಾ ಒಲವ್ ಹೆಚ್ಚಿದ ರೋಗಿ?

 

 • ವಿಜಯನಾರಸಿಂಹ

4 thoughts on “ವಿವಿಧ ಚಿತ್ತಸ್ಥಿತಿಗಳು: ವಿಜಯನಾರಸಿಂಹರ ಕವನಗಳು

 1. ವಿಜಯ ಅವರ ಕವನಗಳು ಸರಳ ಸುಂದರ ಮತ್ತು ಮುಖ್ಯವಾಗಿ ಹೃದಯಂಗಮ. ಸೀದಾ ಹೃದಯದಿಂದ ಲೇಖನಿಗೆ ಇಳಿದುಬಂದ ಸಾಲುಗಳಲ್ಲಿ ಎಲ್ಲೂ ಆಡಂಬರವಿಲ್ಲ, ಅಹಂಕಾರವಂತೂ ಇಲ್ಲವೇ ಇಲ್ಲ. ಮಲ್ಲಿಗೆಯ ಕಂಪು, ಮಾವಿನ ತಂಪು. ತುಂಬ ಬರೆಯಿರಿ. ಪ್ರಾಸದ ಜೊತೆ ಲಯದತ್ತಲೂ ಗಮನವಿರಲಿ ಎಂದಷ್ಟೇ ನನ್ನ ಹಾರೈಕೆ. – ಕೇಶವ

  Like

 2. ನಿಮ್ಮ ’ಸದಾನುರಾಗಿ” ಮತ್ತು ’ಬರಹದ ಸೋಜಿಗ’ ನನಗೆ ಬಹಳ ಇಷ್ಟವಾಯಿತು.
  ”ಮಾತಾಗಿ, ಮತ್ತಾಗಿ, ಮುತ್ತಾಗಿ, ಸಪ್ತಪದಿಯ ಸುತ್ತಾಗಿ” ಭಾವ, ಭಾಷೆ ಎರಡೂ ಬಹಳ ಚೆನ್ನಾಗಿದೆ.
  ಕವನಗಳನ್ನು ರಚಿಸುವ ಕಲೆ ನಿಮ್ಮದಾದ೦ತೆ ಕಾಣುತ್ತದೆ. ಸ೦ಗ್ರಹಿಸಿ ಪ್ರಕಟಿಸುವ ಪ್ರಯತ್ನ ಸಫಲವಾಗಲಿ.

  ದಾಕ್ಷಾಯಿನಿ

  Like

 3. ಬರಹದ ಸೋಜಿಗ ಬಹಳ ಇಷ್ಟ ಆಯ್ತು
  ಸದಾನುರಾಗಿ ಪರವಾಗಿಲ್ಲ, ಆದರೆ ನೆನಪು ಅಷ್ಟೊಂದು ಇಷ್ಟವಾಗಲಿಲ್ಲ ಕಾರಣ ಪ್ರಾಸ ಸಹಜವೆನಿಸಲಿಲ್ಲ.

  Like

 4. ಸೊಗಸಾದ ಕವನಗಳು ವಿಜಯನಾರಸಿಂಹ ಅವರೇ. ವಿವಿಧ ಪರಿಸ್ಥಿತಿಗಳಲ್ಲಿ ಮನುಜನ ಮನಸ್ಸಿನಲ್ಲಿ ಏಳುವ ಭಾವನೆಗಳನ್ನು ಬಹಳ ಸೊಗಸಾಗಿ ಚಿತ್ರಿಸಿದ್ದೀರಿ. ಬರಹದ ಸೋಜಿಗ ಬಹಳ ಹಿಡಿಸಿತು.
  ಉಮಾ ವೆಂಕಟೇಶ್

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.