ತೋಳ -ಕುರಿ ನ್ಯಾಯ – ಸುದರ್ಶನ ಗುರುರಾಜರಾವ್ ಬರೆದ ಕವನ

ಸುದರ್ಶನ್ ಸಧ್ಯದವರೆಗೂ ಇಂಗ್ಲೆಂಡಿನಲ್ಲಿ ಅರಿವಳಿಕೆ ಶಾಸ್ತ್ರಜ್ಞರಾಗಿ ಕೆಲಸ ಮಾಡಿ ಕೆನಡಾಕ್ಕೆ ಹಾರಿದ್ದಾರೆ. ಅನಿವಾಸಿ ಬಳಗದವರಿಗೆಲ್ಲ ಚಿರಪರಿಚಿತ.  ಅವರ ನೀಳ್ಗವಿತೆಗಳು ಹಿಂದೆಯೂ ಅನಿವಾಸಿ ಅಂಗಳದಲ್ಲಿ ಬೆಳಕು ಕಂಡಿವೆ. ದೂರದೂರಿನಿಂದ ಸುದರ್ಶನ್ ಇಂದಿಗೂ ನಮ್ಮ ಜಾಲತಾಣವನ್ನು ಪ್ರೋತ್ಸಾಹಿಸುತ್ತಿರುವುದು ಅನುಕರಣೀಯ.

ದೇಶಗಳ ಮೇರೆ ಮೀರಿ ಇಂದಿನ ಸಾಮಾಜಿಕ- ರಾಜಕೀಯ ಪರಿಸ್ಥಿತಿಗಳನ್ನು ಪ್ರತಿಧ್ವನಿಸುವಲ್ಲಿ ಈ ಕವನ ಯಶಸ್ವಿಯಾಗಿದೆ. ಕವಿತೆಗೆ ಪೂರಕವಾಗಿ ಅನಿವಾಸಿಯ ‘ನಿವಾಸಿ’ ಕಲಾವಿದ ಲಕ್ಷ್ಮೀನಾರಾಯಣ ಗುಡೂರ್, ಸುಂದರವಾದ ಚಿತ್ರ ರಚಿಸಿದ್ದಾರೆ.

ತೋಳ -ಕುರಿ ನ್ಯಾಯ

ಕುರಿಯು ಒಂದು ನೀರು ಕುಡಿಯಲೆಂದು

ತೊರೆಯ ಬಳಿಗೆ  ಬಂದು

ಹರಿವ ತೊರೆಯ ನೀರಿನಲ್ಲಿ ಬಾಯಿಯಿಟ್ಟಿತು

 

ಹೊಟ್ಟೆ ತುಂಬಿದಂಥ ಕುರಿಯWolf & the Sheep

ದಾಹ ತಣಿಸುವಂಥ ತೊರೆಯ

ನೀರು ಕುಡಿಯೆ ಸ್ವರ್ಗ ಅಲ್ಲೆ ಸಿಕ್ಕಿಬಿಟ್ಟಿತು

 

ಅಷ್ಟರಲ್ಲೆ ಅಲ್ಲಿಗೊಂದು

ದುಷ್ಟತೋಳವೊಂದು ಬಂದು

ದೃಷ್ಟಿಯನ್ನು ಅತ್ತ ಇತ್ತ ಹಾಯ ಬಿಟ್ಟಿತು

 

ಉಂಡು ದುಂಡಗಿತ್ತು ಕುರಿಯು

ಕಂಡು ಕೆರಳಿ ಹೊಟ್ಟೆ ಉರಿಯು

ಭಂಡ ತೋಳ ತಿನ್ನಲದನು ಹೊಂಚು ಹಾಕಿತು

 

ಇಂದು ಕುರಿಯ ಮೇಲೆ ಹಾರಿ

ಕೊಂದು ರಕ್ತವನ್ನು ಹೀರಿ

ತಿಂದುಬಿಡಲು ಧೂರ್ತನೆಂದು ಹೆಸರು ಕೆಡುವುದು

 

ಹೆಸರು ನನ್ನದುಳಿಯಬೇಕು

ಕೆಸರು ಕುರಿಗೆ ಬಳಿಯಬೇಕು

ಹಸಿವು ನನಗೆ ಕಳೆಯ ಬೇಕು ಏನು ಮಾಳ್ಪುದು

 

ಅಲ್ಲೆ ಒಂದು ಹೊಂಚು ಹೊಸೆದು

ಕಾಲು ಕೆರೆದು ಜಗಳ ತೆಗೆದು

ಮೂಲ ದೋಷ ಕುರಿಯ ಮೇಲೆ ಹೇರ ತೊಡಗಿತು

 

ಎಲವೋ ಅಹಂಕಾರಿ ಕುರಿಯೆ

ನೆಲೆಯು ನಿನ್ನದೇನು ಅರಿಯೆ

ಜಲವನೆಲ್ಲ ಎಂಜಲೇಕೆ ಮಾಡುತಿರುವೆಯೊ?

 

ಕುರಿಯು ಹೆಜ್ಜೆ ಹಿಂದೆ ಹೋಗಿ

ಹಿರಿಯ ವೃಕಕೆ ತಲೆಯ ಬಾಗಿ

ಅರಿಕೆಯನ್ನು ವಿನಯದಿಂದ ತಾನು ಮಾಡಿತು

 

ದೈವ ಕರುಣೆ ಹರಿವ ನೀರು

ತಾವು ಅದನು ಕೇಳಲ್ಯಾರು

ನೀವು ನನ್ನ ಪಾಡಿಗೆನ್ನ ಬಿಡಿರಿ ಎಂದಿತು

 

ಇಷ್ಟು ತಿಳಿಯದೇನೊ ಕುರಿಯೆ

ಎಷ್ಟು ಸೊಕ್ಕು ನಿನಗೆ, ಸರಿಯೆ?

ಅಷ್ಟು ನೀರು ಎಂಜಲಾಗಿ ನನಗೆ ಬಂದಿದೆ

 

ನಿನ್ನ ಎಂಜಲುಣುವ ಜೀವಿ

ನಾನು ಅಲ್ಲ ಎನುವ ಠೀವಿ

ನಿನಗೆ ತಿಳಿಸಲೇನು ಎಂದು ಹುಯಿಲು ಮಾಡಿತು

 

ಕುರಿಯು ಕುಡಿದ ನೀರು ಮುಂದೆ

ಹರಿದು ಹೋಯಿತೆನ್ನ ತಂದೆ

ಹರಿದು ಈಗ ಬರುವ ಜಲವ ಕುಡಿಯಿರೆನ್ನಲು

 

ಕುರಿಯು ಬಾಯಿ ಇಟ್ಟರಾಯ್ತು

ನೀರು ಮಲಿನವಾಗಿ ಹೋಯ್ತು

ಹರಿದು ಕೆಳಗೆ ಬರುವ ನೀರ ಕುಡಿಯಲಾಗದು

 

ಭಂಡವಾದ ಹೂಡಿ ತೋಳ

ಮೊಂಡು ಹಟವ ಮಾಡಿ ಕೊರಳ

ಖಂಡಗಳನು ಉಬ್ಬಿಸುತ್ತ ಕೂಗಿ ಮೊರೆಯಿತು

 

ಕಾಲ ಮಿಂಚಿ ತಪ್ಪು ಆಯ್ತು

ಮೇಲಕೇರಿ ಕುಡಿದರಾಯ್ತು

ನೀವು ಕುಡಿದು ಬಿಟ್ಟ ನೀರ ನಾವು ಕುಡಿವೆವು

 

ನಿನ್ನದೊಂದೆ ಎಂಜಲಲ್ಲ

ನಿನ್ನ ತಂದೆ ತಾತರೆಲ್ಲ

ಮುನ್ನ ತೊರೆಯ ತುಂಬ ಎಂಜಲಾಗಿಸಿರುವರು

 

ನಿಮ್ಮ ವಾದ ಬಹಳ ಜಟಿಲ

ಮೂಲಧ್ಯೇಯವಂತು ಕುಟಿಲ

ಜಲವನರಸಿ ತೊರೆಗೆ ಮುಂದೆ ಬಾರೆನೆನ್ನಲು

 

ಅನ್ನಕಾಗಿ ಹಸಿದ ತೋಳ

ತಿನ್ನಲೆಂದು ರಸದ ಕವಳ

ಇನ್ನು ರೋಷದಿಂದ ಜೋರು ಮಾಡಿ ಕೂಗಿತು

 

ಭಿಕ್ಷೆ ಏನು ಬೇಡ ನನಗೆ

ಶಿಕ್ಷೆಯಾಗಬೇಕು ನಿನಗೆ

ವಕ್ಷವನ್ನು ಸೀಳಿ ನಿನಗೆ ಪಾಠ ಕಲಿಸುವೆ

 

ಕುರಿಯ ಮೇಲೆ ಹೊರಿಸಿ ಲೋಪ

ದುರುಳತನಕೆ ಸುಳ್ಳ ಲೇಪ

ಮರುಳುಗೊಳಿಸಿ ಲೋಕಕೆಲ್ಲ ಮಂಕು ಎರಚುವೆ

 

ನನ್ನ ಆಗ ಎಲ್ಲ ಹೊಗಳಿ

ಕುರಿಯ ಬುದ್ಢಿಯನ್ನು ತೆಗಳಿ

ಎನ್ನ ಘನತೆ ಲೋಕದಲ್ಲಿ ವೃದ್ದ್ಧಿಗೊಳಿಸುವೆ

 

ಮಿಂಚಿನಂತೆ ಮೇಲೆ ನೆಗೆದು

ಹೊಂಚಿ ಕುರಿಯ ಪ್ರಾಣ ತೆಗೆದು

ಕಂಚು ಕಂಠದಿಂದ ಜಗಕೆ ಕೂಗಿ ಹೇಳಿತು

 

ಹಾಳು ಕುರಿಯೆ ದುಷ್ಟ ದುರುಳ

ತೋಳ ನೀನು ಬಹಳ ಸರಳ

ಕೊಳಕು ತೊಳೆದ ನ್ಯಾಯ ವಾದಿ ನೀನೆ ಎನ್ನುತ

 

ಅಂಧರಂತೆ ಲೋಕವೆಲ್ಲ

ತೋಳ ಸ್ತುತಿಯ ಮಾಡಿತಲ್ಲ

ಒಳಗೆ ಮೆರೆದು ಮದಿಸುತಿತ್ತು ತೋಳ ಹಿಗ್ಗುತ

 

ಶಕ್ತರೆಂದು ಲೋಕದಲ್ಲಿ

ಯುಕ್ತ ಮಂಕು ಬೂದಿಚೆಲ್ಲಿ

ಮುಕ್ತವಾಗಿ ತಮ್ಮ ಬೇಳೆ ಬೇಯ್ಸಿಕೊಳುತಿರೆ

 

ದೀನರೆಲ್ಲ ಕುರಿಗಳಾಗಿ

ಕಾಯ್ವ ಜನರು ತೋಳವಾಗಿ

ನೀತಿ ನಿಯಮ ತೋಳಕಾಗಿ ಜಗವು ನಡೆದಿರೆ!!!

 

-ಡಾ. ಸುದರ್ಶನ ಗುರುರಾಜರಾವ್

4 thoughts on “ತೋಳ -ಕುರಿ ನ್ಯಾಯ – ಸುದರ್ಶನ ಗುರುರಾಜರಾವ್ ಬರೆದ ಕವನ

 1. ತೋಳ -ಕುರಿಯ ಈ ಕವನ ತುಂಬಾ ಮನೋಜ್ಞವಾಗಿ ಮೂಡಿಬಂದಿದೆ.ನಮ್ಮ ನಿತ್ಯ ಜೀವನದಲ್ಲಿ,ನಮ್ಮಸುತ್ತ ಮುತ್ತ ನೋಡುವ ನೈಜ ಘಟನೆಗಳ ಸುಂದರಸಾಂಕೇತಿಕ ,ಚಿತ್ರಣ.ಶ್ರೀಮಂತರು ಬಡವರನ್ನು, ಬಲಾಢ್ಯರು ಬಲಹೀನ ರನ್ನು ತುಳಿಯುತ್ತಾ , ಅವರನ್ನು ಬಲಿಪಶುಗಳನ್ನಾಗಿಸಿ ತಮ್ಮ ಮೇಲ್ಮೆಯನ್ನು ಸಾಧಿಸುತ್ತಾ ಬಂದಿರುವುದನ್ನು ಕಾಣುತ್ತಲೇ ಬಂದಿದ್ದೇವೆ.ಅದನ್ನ ಮನಮುಟ್ಟುವಂತೆ ,ಕವನ ರೂಪದಲ್ಲಿ ಚಿತ್ರಿಸಿರುವ ಸುದರ್ಶನ್ ಅವರ ವಿಶಿಷ್ಟ ಶೈಲಿ ತಲೆ ದೂಗುವಂತೆ ಮಾಡುತ್ತದೆ.ಇಂಥ ನೈಜತೆ ಯನ್ನು ಸಾರುವ ಸುಂದರ ಕವನ ನೀಡಿದ್ದಕ್ಕೆ ಧನ್ಯವಾದಗಳು.ಇಂಥ ಇನ್ನಷ್ಟು ಕವನಗಳು ಬರಲಿ ಎಂಬ ನಿರೀಕ್ಷೆ.
  ಸರೋಜಿನಿ ಪಡಸಲಗಿ

  Like

 2. `ಕುರಿಯ ಮರಿಯ ಮಾರಿ ಮ್ಯಾಗ
  ಹುಲಿಯ ಮುಖವ ಹಾಕಿದಾಗ
  ತೋಳ ಹೆದರಿ ಮುದುರಿ ಬಾಲ ಓಡಿ ಹೋಯಿತು!`
  ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳಬಹುದೇ?

  ನಿಮ್ಮ ಕಥನಕವನಗಳು ತುಂಬ ಚಂದ. ಇಂಗ್ಲೀಷಿನಲ್ಲಿ Ballad ಎಂದು ಕರೆಯಲ್ಪಡುವ ಕಥನಕವನಗಳು, ಕನ್ನಡದಲ್ಲಿ ತುಂಬ ಪ್ರಸಿದ್ಧ. ಪುಣ್ಯಕೋಟಿ ಬಹುಷಃ ಪ್ರಪಂಚದ ಉತ್ಕೃಷ್ಟ ಕಥನಕವನಗಳಲ್ಲಿ ಒಂದು. ಸಿನೆಮಾಗಳಲ್ಲಿ ಕೂಡ ಈ ಬಗೆಯ ಕವನವನ್ನು ತುಂಬ ಶಕ್ತಿಶಾಲಿಯಾಗಿ ಉಪಯೋಗಿಸಿದ್ದಾರೆ. ಒನಕೆ ಓಬವ್ವನನ್ನು ನಮ್ಮ ಕಣ್ಮುಂದೆ ನಿಲ್ಲಿಸಿದ್ದು ಇಂಥದೇ ಕಥನಕವನವಲ್ಲವೇ? `ಹೇಳಿದ್ದು ಸುಳ್ಳಾಗಬಹುದು…` ಎಂಬ ಕಥನಕವನದಲ್ಲಿ ಹಾವು-ಮುಂಗುಸಿ ಕತೆ ಎಷ್ಟು ಸುಂದರವಲ್ಲವೇ? ಕಥನಕವನಗಳು ತುಂಬ ಸಲ ಬರೆಯಲ್ಪಡುವುದು ಮಕ್ಕಳ ಕವನಗಳಾಗಿ. ಮಕ್ಕಳ ಕತೆಯನ್ನೇ ದೊಡ್ಡವರ ಕಥನಕವನವಾಗಿಸುವ ಕಲೆ ಸುದರ್ಶನ್ ಅವರದ್ದು. ಇನ್ನೂ ತುಂಬಾ ಬರೆಯುತ್ತಿರಿ.

  Liked by 1 person

 3. welcome back to Sudarshan !
  ತುಂಬಾ ದಿನಗಳ ನಂತರ ಬರೆದಿದ್ದೀರ. ತೋಳ-ಕುರಿ ನ್ಯಾಯದಲ್ಲಿ ನಾವೆಲ್ಲರೂ ಒಂದಲ್ಲ ಒಂದು ಬಾರಿ ಸಿಲುಕುತ್ತೇವೇನೋ!! ನಮ್ಮ ವಾಟ್ಸಾಪ್ ಗುಂಪಿಗೂ ಸೇರಿ ನಮ್ಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರಿ.
  ಗೂಡುರ್ ಅವರಿಗೂ ಅಭಿನಂದನೆಗಳು.

  Liked by 1 person

 4. ಇಂದಿನ ‘fake news’ ಯುಗಕ್ಕೆ ಕನ್ನಡಿ ಹಿಡಿಯುವ ’ಟಾಪಿಕಲ್’ ಕವನ! ಸುದರ್ಶನ ಅವರಿಗೆ ಪುನರ್ಸ್ವಾಗತ! ಪೂರಕ ಕಾರ್ಟೂನ್ ಒದಗಿಸಿದ ಗುಡೂರ ಅವರಿಗೂ ಅಭಿನಂದನೆಗಳು!

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.