ಹಾಫ್ ಸರ್ಕಲ್ – ಪೂರ್ಣಿಮಾ ಭಟ್ಟ ಅವರು ಬರೆದ ಕಥೆ 

ಅನಿವಾಸಿ ಓದುಗರಿಗೆಲ್ಲ ನಮಸ್ಕಾರ,
ಈ ವಾರದ ಸಂಚಿಕೆಯಲ್ಲಿ ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರು ತಾವು ಬರೆದ ಕಥೆಯೊಂದನ್ನು  ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಾರೆ.ಪೂರ್ಣಿಮಾ ಅವರ ಹೊಸ  ಪುಸ್ತಕ ”ರಸಮಲಾಯಿ” ಇತ್ತೀಚಿಗೆ ಬಿಡುಗಡೆಯಾಗಿದೆ. ಅವರಿಗೆ ಹಾರ್ದಿಕ ಅಭಿನಂದನೆಗಳು.
ಜೊತೆಗೆ ಅವರ ಈ ಕಥೆಯನ್ನು ಓದುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು.ಈ ಕತೆ ಓದುವಾಗ ನಮ್ಮ ಸುತ್ತ ಮುತ್ತಲಿನ ಅದೆಷ್ಟೋ ಆಪ್ತ ಮುಖಗಳು, ಜಾಗಗಳು, ಸಂದರ್ಭಗಳು ಕಣ್ಣೆದುರು ಸುಳಿಯಬಹುದು. ಅದ್ಯಾರೋ ಒಮ್ಮೆಗೆ ನೆನಪಾಗಬಹುದು. ಎಲ್ಲೋ ಏನೋ ಕಳೆದು ಹೋದಂತೆ ಅನ್ನಿಸಿ, ಮತ್ತೆ ಸಿಕ್ಕಿತು ಅನ್ನಿಸಬಹುದು. ಕಾಡುವ ಕಥೆಯಿದು.ಕಥೆಯನ್ನು ಓದಿ ತಪ್ಪದೆ ತಮ್ಮ ಅನಿಸಿಕೆಗಳನ್ನು ತಿಳಿಸಿ.

– ಅಮಿತಾ

ಹಾಫ್‌ಸರ್ಕಲ್

  • ಪೂರ್ಣಿಮಾ ಭಟ್ಟ ಸಣ್ಣಕೇರಿ


ಉಷೆ ಮತ್ತು ಅವಳ ಗಂಡ ವಿನಯ ಪೈ, ಲಂಡನ್ನಿಗೆ ಪರಾಶರಿ ಜೇಪಿಯಷ್ಟು ಹೊಸಬರಾಗಿರಲಿಲ್ಲ.
ಉಷೆಯಂತೂ ಆ ಊರನ್ನ ತನ್ನ ತವರುಮನೆ ಹಳದೀಪುರದಂತೆಯೇ ಪ್ರೀತಿಸುವವಳು ಮಾತ್ರವಲ್ಲ ಅದೇ ಭಾವನೆ
ಎಲ್ಲರಲ್ಲೂ ಪ್ರತಿಫಲನವಾಗುವಂತೆ ಆಸ್ಥೆ ವಹಿಸುವವಳು. ಮುದುಡಬೇಕಾದಲ್ಲಿ ಮುದುಡಿ ಅರಳಬೇಕಾದಲ್ಲಿ
ಕಂಪನ್ನೂ ಸೂಸಿ ಮೋಡಿ ಮಾಡುವ ಕಲೆ ಅವಳು ಬೇಕಂತ ಸಿದ್ಧಿಸಿಕೊಂಡದ್ದಲ್ಲ. ಅವಳ ಇರುವೇ ಹಾಗೆ. ಬಾಕಿ
ಗಂಡಹೆಂಡಿರಂತೆ ಒಂದಷ್ಟು ಪ್ರೀತಿ ಒಂದಷ್ಟು ಮುನಿಸು ಎಲ್ಲವೂ ವಿನಯ ಉಷೆಯ ನಡುವಿತ್ತು. ಆದರೆ
ಪ್ರತಿಯೊಂದನ್ನೂ ಸಮತೋಲನದಲ್ಲಿ ಇಡುವ ಹಿಡಿತ ಉಷೆಯ ಇರುವಿಕೆಗಿತ್ತು.


ವೀಕೆಂಡ್ ಷಾಪಿಂಗ್, ಫ್ರೈಡೇ ನೈಟ್ ಔಟ್, ಬ್ಯಾಂಕ್ ಹಾಲಿಡೇ ಸ್ಲೀಪ್ ಓವರ್ ಹೀಗೆ ಹೊಸ ಹೊಸ
ಹೆಸರುಗಳನ್ನಿಟ್ಟುಕೊಂಡು ಭೇಟಿ ಮಾಡಿದ ಪರಾಶರಿ ಮತ್ತು ಉಷೆ ವರ್ಷವೆರಡು ಕಳೆಯುತ್ತಿದ್ದಂತೆ ಸಾಕಷ್ಟು
ಹತ್ತಿರವಾದರು. ಸದಾ ಕುಟುಂಬ ಸಮೇತರಾಗಿ ಸಿಗಲು ಸಾಧ್ಯವಾಗದಿದ್ದರೂ ಇವರಿಬ್ಬರ ಭೇಟಿಗೆ ಎಂದೂ
ತೊಂದರೆ ಮಾಡಿಕೊಳ್ಳುತ್ತಿರಲಿಲ್ಲ. ವಾರದ ಸುದ್ದಿಯನ್ನೆಲ್ಲ ಒಟ್ಟಾಕಿಟ್ಟುಕೊಂಡು ಲೇಕ್ ಸೈಡಿನ ವಾಕಿಂಗ್ ಪಾಥಿನಲ್ಲಿ
ಈ ಜಗದ ಪರಿವೆಯಿಲ್ಲದವರಂತೆ ಹರಟುತ್ತಿದ್ದರು. ಸವಿತಾ ಭಾಭಿ ವೀಡಿಯೋಗಳು, ಶುಗರ್ ಡ್ಯಾಡಿ ಕತೆಗಳು ಪಬ್ಬಿನ
ಮೂಲೆಯಲ್ಲಿ ಹಗುರವಾಗುತ್ತ ಕೂತ ಇವರಿಬ್ಬರ ಅನೇಕ ಸಂಜೆಗಳನ್ನು ರೋಚಕವಾಗಿಸುತ್ತಿತ್ತು. ಗಂಡಂದಿರಿಗೆ
ಅಂಡೀಸ್ ಶಾಪಿಂಗ್ ಕೂಡ ತಾವೇ ಮಾಡಬೇಕಾದ ಬಗ್ಗೆ ಹೇಳುತ್ತ ತ್ಚ್ ತ್ಚ್ ಎನ್ನುವ ಇವರು, ಮರುಕ್ಷಣವೇ ಆ ಬಗ್ಗೆ
ಬೀಗುತ್ತಿದ್ದರು. ‘ಪೈ ಮಾಮೀ, ಮೀನ್ ತಿನ್ನೂ ತಲೆ ಉಪ್ಯೋಗ್ಸಿ ಈ ಸುಡೊಕು ಬಿಡ್ಸು ನೋಡ್ವಾ’ ಎಂದು ತನ್ನ
ಫೋನು ತೋರಿಸಿ ಪರಾಶರಿ ಸವಾಲು ಹಾಕಿದರೆ ‘ನಾನು ತಿನ್ನೂ ಮೀನ್ ಮೇಲೂ ಕಣ್ಣಾಕಬೇಡ್ವೆ ಪಾರೋ, ಮೀನಿಗ್
ಹೊಟ್ಟೆಲ್ಲಿ ಜೀವ ಬಂದ್ರೆ ನಂಗೆ ತ್ರಾಸು ಮಾರಾಯ್ತಿ’ ಎಂದು ಬಾಯೆಳೆಯುತ್ತಿದ್ದಳು ಉಷೆ. ಒಮ್ಮೆ ನಕ್ಕು, ಇನ್ನೊಮ್ಮೆ
ಬೇಜಾರೆಂಬ ಆಲೆಒಲೆಯಂಥ ಉರಿಗೆ ಕೊಡಪಾನ ನೀರು ಸುರಿದು, ಮಗದೊಮ್ಮೆ ಜೀವನದರ್ಶನವಾದಂತೆ
ಫಿಲಾಸಫಿ ಚಚ್ಚುತ್ತ ಆತ್ಮಸಖಿಯರೇ ಆಗಿಹೋದರು. ಸ್ವಾತಂತ್ರದ ಸ್ವಾಯತ್ತೆಯ ಸ್ವಂತಿಕೆಯ ಪರಿಭಾಷೆ ಇಬ್ಬರಿಗೂ
ಅವರವರದೇ ರೀತಿಯಲ್ಲಿ ದಾಟುತ್ತ ಹೋಯಿತು.


ಚೆಂದವಾಗಿ ಸಾಗುತ್ತಿರುವ ದಿನಗಳನ್ನು ಇನ್ನಷ್ಟು ಚೆಂದವಾಗಿಸಲು ಉಷೆ ಮತ್ತು ವಿನಯ್ ಗುಡ್‌ನ್ಯೂಸ್
ಕೊಟ್ಟರು. ಒಂದು ಶುಕ್ರವಾರ ಸಂಜೆ ಅರ್ಧ ಕೇಜಿ ಜಿಲೇಬಿಯ ಪ್ಯಾಕನ್ನು ಹಿಡಿದು ತಂದ ಜೋಡಿ ತುಂಬ
ಖುಶಿಯಾಗಿದ್ದರು. ಮೊದಲೇ ಚೆಲುವೆಯಾದ ಉಷೆಯ ಮುಖದ ಮೇಲೆ ಸಂತಸದ ಉಲ್ಕೆಗಳು ಹಾದಂತೆ
ಕಾಣುತ್ತಿದ್ದವು. ಪರಾಶರಿಯಂತೂ ತಾಯ್ತನವ ಮೈಮೇಲೆ ಆಹ್ವಾನಿಸಿಕೊಂಡಂತೆ ಉಷೆಯ ಸೇವೆಗೆ ನಿಂತಳು.
ದೂರದೂರಿನಲ್ಲಿ ಸಖರೇ ಸಮೀಪದ ಸಂಸಾರ. ಸುಖಕ್ಕೂ ಅವರೇ, ದುಃಖಕ್ಕೂ ಅವರೇ. ಉಷೆ ಯಾವಾಗಲೂ
ಹೇಳುವಂತೆ ‘ಹಾಫ್‌ಸರ್ಕಲ್ ವಿಲ್ ಬೀ ಅ ಫುಲ್‌ಸರ್ಕಲ್‍; ಫುಲ್ ವಿಲ್ ಬೀ ಅ ಹಾಫ್’. ಇಂಥ ಮಾತನ್ನು
ಪರಾಶರಿ ಯಾವತ್ತೂ ನಿಮಿರಿದ ಕಿವಿಯಲ್ಲಿ ಕೇಳುತ್ತಿದ್ದಳು.
ವಾರ, ತಿಂಗಳುಗಳುರುಳಿ ಉಷೆಯ ಹೊಟ್ಟೆ ದುಂಡಗಾಗುತ್ತ ಹೋಯಿತು. ಪರಾಶರಿ ಮತ್ತು ಜೇಪಿ ಜಂಟಿ
ಕಾರ್ಯಾಚರಣೆಯನ್ನು ಗುಪ್ತವಾಗಿ ನಡೆಸಿ ಉಷೆಗೆ ಸರ್‌ಪ್ರೈಸ್ ಬೇಬಿಶವರ್ ಆಯೋಜಿಸಿದರು. ಹತ್ತಿರದ ಸ್ನೇಹಿತರು

ಹುಟ್ಟಲಿರುವ ಮಗುವಿಗಾಗಿ ಉಡುಗೊರೆಗಳನ್ನೂ, ವುಡ್‌ಬೀ ತಂದೆತಾಯಿಗಾಗಿ ಫುಟ್ ಮಸಾಜ್ ವೌಚರ್‌ಗಳನ್ನೂ
ಕೊಟ್ಟುಹೋದರು. ಎಂಟು ತಿಂಗಳು ಎಂಟು ದಿನಗಳಂತೆ ಕಳೆದುಹೋಗಿತ್ತು.
ಇನ್ನೇನು ಉಷೆಯ ಹೆರಿಗೆಗೆ ಎರಡು ವಾರವಿರುವಾಗ ಅವಳ ತಾಯಿ ಹಳದೀಪುರದಿಂದ ಬಂದರು. ಅವರು
ಬಾಣಂತಕಾಡಾದಿಂದ ಮೊದಲಾಗಿ ಜೀರಿಗೆ ಹಿಟ್ಟು, ಬಾಣಂತಿಯ ಸ್ನಾನಕ್ಕಾಗಿ ಎಣ್ಣೆಗಳು, ಮಗುವಿನ ಚರ್ಮಕ್ಕೆ
ಹೊಂದಲು ಮನೆಯಲ್ಲೇ ಕುಟ್ಟಿದ ಅರಿಶಿಣ ಬೆರೆತ ಕಡಲೇಹಿಟ್ಟಿನ ಪುಡಿ, ಕುಂಚಿಗೆ, ಮಿದುವಾದ ಪಂಚೆ ಎಲ್ಲವನ್ನೂ
ನೀಟಾಗಿ ಜೋಡಿಸಿ ತಂದಿದ್ದರು. ಪುಟ್ಟನೆಯ ಕಿಚನ್ನು ಹಾಗೂ ಎರಡೇ ಬೆಡ್‌ರೂಮಿದ್ದರೂ ಬೇಕಾದ್ದನ್ನು ಮಾತ್ರ
ಒಪ್ಪವಾಗಿಟ್ಟ ಉಷೆಯ ಮನೆಯಲ್ಲಿ, ಊರಿಂದ ಬಂದ ಸಕಲ ಸಲಕರಣೆಗಳೂ ತಮ್ಮದೇ ಆಳ್ವಿಕೆಯ ಸ್ಥಳವೆಂಬಂತೆ
ಕೂತವು, ಮಗುವಿನ ಬರುವನ್ನು ಕಾಯುತ್ತ.


ಪರಾಶರಿ ಹೆಚ್ಚುಕಡಿಮೆ ದಿನವೂ ಸಂಜೆ ಉಷೆಯ ಮನೆಗೆ ಬರುತ್ತಿದ್ದಳು. ಉಷೆಯ ತಾಯಿಯನ್ನು
ಅವಳಂತೆಯೇ ‘ಆಯಿ’ ಎಂದಳೆ ಹೊರತಾಗಿ ‘ಆಂಟಿ’ ಎನ್ನಲಿಲ್ಲ. ತಾಯಿಯನ್ನು ಮನೆಯ ಸುತ್ತಮುತ್ತಲೇ
ಅಡ್ಡಾಡಿಸುತ್ತ, ಉಷೆ ಮೆಟರ್ನಿಟಿ ರಜೆಯನ್ನು ಹಾಯಾಗಿ ಕಳೆಯುತ್ತಿದ್ದಳು. ಆವತ್ತು ಮಧ್ಯಾನ್ನದಿಂದ ಉಷೆಗೆ
ಕಿಪ್ಪೊಟ್ಟೆಯಲ್ಲಿ ಸೆಳೆತ. ಅದು ಶುರುವಾದಾಗಲೇ ‘ಇದೇನೋ ಹೊಸ ನಮೂನೆ’ ಎಂದುಕೊಂಡಿದ್ದಳು. ಹಾಗೆಯೇ
ತಡೆದುಕೊಂಡು ತಾಯಿಗೂ ಹೇಳದೆ, ಆಫೀಸಿಗೆ ಹೋದ ವಿನಯನಿಗೂ ಫೋನಿಸದೆ ಅಲ್ಲಿ ಇಲ್ಲಿ ತುಸು ಓಡಾಡಿ
ನೋವು ಸಮಾಧಾನಿಸಲು ಪ್ರಯತ್ನಿಸಿದಳು. ಸಂಜೆ ಏಳು ಗಂಟೆಯ ಹೊತ್ತಿಗೆ ನೋವು ತಡೆಯಲಾಗಲಿಲ್ಲ. ಅದೇ
ಸಮಯಕ್ಕೆ ಮನೆಗೆ ಬಂದ ವಿನಯ, ಉಷೆಯ ಮುಖ ನೋಡಿಯೇ ಆಸ್ಪತ್ರೆಗೆ ಹೊರಡೋಣವೆಂದ. ಆ
ತರಾತುರಿಯಲ್ಲಿ ಪರಾಶರಿಯ ಮೊಬೈಲಿಗೊಂದು ಮೆಸೇಜು ಎಸೆದು ಮೂವರೂ ಆಸ್ಪತ್ರೆಗೆ ಬಂದರು. ಕಾರಿನಿಂದ
ಇಳಿದ ಉಷೆ ನಡೆಯಲೂ ಆಗದೇ ವ್ಹೀಲ್ಚೇರಿನಲ್ಲಿ ಕೂತು ಲೇಬರ್ ರೂಮಿಗೆ ಬಂದಳು. ಹತ್ತಾರು ಟೆಸ್ಟುಗಳ ನಂತರ
ಉಷೆಗೆ ಬಂದದ್ದು ಹೆರಿಗೆ ನೋವಲ್ಲವೆಂದೂ ಬೇರೆ ಯಾವುದೋ ಇನ್‌ಫೆಕ್ಷನ್ನಿನ, ಹೊಟ್ಟೆಯೊಳಗಿನ ಸೋಂಕಿನ
ನೋವು ಎಂದು ಅಭಿಪ್ರಾಯಪಟ್ಟು ಇನ್ನೂ ಕೆಲವು ಟೆಸ್ಟ್‌ಗಳನ್ನು ಮಾಡಿದರು. ಒಂದು ಗಂಟೆಯ ಅಂತರದಲ್ಲಿ
ನಾಟಕೀಯವೋ ಎಂಬಂತೆ ನಂತರದ ಘಟನೆಗಳು ನಡೆದುಹೋದವು.

ವಿನಯನ ಮೇಸೇಜು ನೋಡಿ ಅಂದು ಆಸ್ಪತ್ರೆಗೆ ದೌಡು ಬಂದ ಪರಾಶರಿಗೆ ಇಂದಿಗೂ ಅಲ್ಲಿ ನಡೆದ
ಘಟನೆಗಳು ಕಣ್ಣಿಗೆ ಕಟ್ಟಿದಂತಿವೆ. ಯಾವ ಸಂಗತಿಯ ನಂತರ ಏನಾಯಿತು ಎಂಬುದನ್ನು ಪರಾಶರಿ ಇವತ್ತಿಗೂ
ಆಕಾರ ಕಳೆದುಕೊಂಡ ಮುತ್ತುಗಳನ್ನು ಅರ್ಥವತ್ತಾಗಿ ಸಾಲಾಗಿ ಜೋಡಿಸಿಟ್ಟಂತೆ ಇಡಬಲ್ಲಳು.

ರಾತ್ರಿ ಒಂಬತ್ತರ ಹೊತ್ತಿಗೆ ಅಂತೂ ಹತ್ತು ನಿಮಿಷಗಳ ದೀರ್ಘ ಪರೀಕ್ಷೆ ನಡೆಸಿದ ಗೈನಾಕಾಲಜಿಸ್ಟ್ ಹಾಗೂ
ಪೀಡಿಯಾಟ್ರಿಕ್ ಡಾಕ್ಟರ್‌ಗಳಿಬ್ಬರೂ ಉಷೆಯನ್ನು ಆಸ್ಪತ್ರೆಯ ಮಂಚದ ಮೇಲೆ ಒರಗಲು ಹೇಳಿದರು. ವಿನಯನ
ಕಡೆ ತಿರುಗಿ ‘ಮಿಸೆಸ್ ಅಂಡ್ ಮಿಸ್ಟರ್ ಪಾಯ್, ಪ್ಲೀಸ್ ಬೀ ಪ್ರಿಪೇರ್ಡ್ ಫಾರ್ ದಿಸ್ ನ್ಯೂಸ್. ವಿ ಡಿಕ್ಲೇರ್ ದಟ್ ದ
ಬೇಬಿ ಇನ್‌ಸೈಡ್ – ಹ್ಯಾಸ್ ನೋ ಸೈನ್ ಆಫ್ ಲೈಫ್. ಗರ್ಭದೊಳಗಿನ ಮಗುವಿನ ಜೀವ ನಿಂತುಹೋಗಿದೆ.

ಯಾವುದೋ ಸೋಂಕಿನಿಂದಾಗಿ ಈ ರೀತಿಯಾಗಿರಬಹುದೆಂಬುದು ನಮ್ಮ ಅನುಮಾನ. ವಿ ವಿಲ್ ಹ್ಯಾವ್ ಟು
ಅರೇಂಜ್ ಫಾರ್ ಸ್ಟಿಲ್‌ಬರ್ಥ್ ಪ್ರೊಸೀಜರ್ ಆಸ್ ಸೂನ್ ಆಸ್ ಪಾಸಿಬಲ್. ವಿ ಆರ್ ಸಾರಿ ಅಗೇನ್’ ಎಂಬರ್ಥದ
ಮಾತುಗಳನ್ನು ನಿಧಾನವಾಗಿ, ವಾಕ್ಯಗಳ ನಡುವೆ ಸಾಕಷ್ಟು ಅಂತರ ನೀಡಿ ಹೇಳಿದರು. ಈ ಅಂತರವು ವಿನಯನಿಗೆ
ಕಿರಿಕಿರಿಯನ್ನೂ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಸ್ಪೇಸ್‌ಅನ್ನೂ, ಉಷೆಗೆ ಹತಾಶೆಯನ್ನೂ
ಉಂಟುಮಾಡುತ್ತಿದ್ದುದು ಆ ರೂಮಿನಲ್ಲಿದ್ದವರಿಗೆ ಹೇಳದೆಯೇ ಸಂವಹನವಾಗುತ್ತಿತ್ತು.


ಗಂಡ ಹೆಂಡತಿ ಮಾತಾಡಿಕೊಳ್ಳಲು ಕೆಲ ಸಮಯ ಕೊಟ್ಟರು ಆಸ್ಪತ್ರೆಯವರು. ಇನ್‌ಫೆಕ್ಷನ್ ಹರಡುವ
ಸಾಧ್ಯತೆ ಇದ್ದಿದ್ದರಿಂದ ತುಂಬ ಹೊತ್ತು ಕಾಯುವ ಹಾಗಿರಲಿಲ್ಲ. ಲೇಬರ್ ವಾರ್ಡಿನ ಹೊರಗಡೆಯೇ ಕಾಯುತ್ತ
ಕುಳಿತಿದ್ದ ಪರಾಶರಿಗೆ ವಿಷಯ ತಿಳಿಸುವಂತೆ ಉಷೆಯ ತಾಯಿಯನ್ನು ಕಳುಹಿಸಿದ ವಿನಯ. ಹೊರಗೆ ಬಂದ ಅವರು
ಅಳುವುದರ ಹೊರತಾಗಿ ಬೇರೇನೂ ಮಾಡಲಿಲ್ಲ. ಅವರ ಪಕ್ಕ ನಿಂತ ಆಸ್ಪತ್ರೆಯ ಸಿಬ್ಬಂದಿ ಆಯಿಯ ತೋಳನ್ನು
ಭದ್ರವಾಗಿ ಹಿಡಿದಿದ್ದಳು. ಅವಳಿದ್ದ ಕಡುಗಪ್ಪು ಬಣ್ಣಕ್ಕೆ, ಗಡಸು ಸ್ವರಕ್ಕೆ, ಪ್ರತಿ ಉಚ್ಚಾರಣೆಯನ್ನೂ ವಿಚಾರ ಮಾಡಿ
ಆಡುತ್ತಿದ್ದ ರೀತಿಗೆ ಹಾಗೂ ಅವಳು ಸಂವಹಿಸುತ್ತಿದ್ದ ಆರ್ದ್ರ ಭಾವಕ್ಕೆ ತಾಳಮೇಳವಿಲ್ಲದಿದ್ದರೂ ಅದನ್ನು ಲೆಕ್ಕ ಹಾಕುವ
ಪರಿಸ್ಥಿತಿಯಲ್ಲಿ ಪರಾಶರಿ ಇರಲಿಲ್ಲ. ವಾರ್ಡಿನ ಒಂದಂಚಿನಲ್ಲಿ ಮರದ ಕ್ಯಾಬಿನೇಟಿನ ಆಚೆಬದಿ ಕುಳಿತ ಮಿಡ್‌ವೈಫಿಗೆ
ಬಗೆಬಗೆಯಾಗಿ ತಿಳಿಸಿ ಹೇಳಿ, ತಾನು ಒಳಗೆ ಹೋಗಿ ಗೆಳತಿಯನ್ನು ನೋಡಲು ಅನುಮತಿ ಪಡೆಯುವವರೆಗೆ
ಪರಾಶರಿ ಕಲಿತ ವಿದ್ಯೆಯೆಲ್ಲ ಖಾಲಿಯಾಗಿತ್ತು. ‘ಆಯಿ ಬಾ, ಒಳಗೆ ಹೋಗುವ’ ಎಂದು ಅವರ ಕಡೆ ನೋಡಿದರೆ
ಆಯಿ, ಕೈ ಎತ್ತಿ ‘ನೀ ಹೋಗು’ ಎಂಬಂತೆ ಸನ್ನೆ ಮಾಡಿದರು. ಅವರ ಕೈ ಮಣಭಾರವಾದಂತಿತ್ತು.


ಪರಾಶರಿ ರೂಮಿನೊಳಗೆ ಕಾಲಿಡುತ್ತಿದ್ದಂತೆ ಸಶಬ್ದವಾಗಿ ಅಳುತ್ತಿದ್ದ ಉಷೆ ಒಮ್ಮೆಲೇ ಸುಮ್ಮನಾದಳು.
ಕೆನ್ನೆಯ ಮೇಲೆ ಜಾರುತ್ತಿದ್ದ ಹನಿಗಳು ಗುರುತ್ವಾಕರ್ಷಣ ಶಕ್ತಿಗೂ ಸವಾಲು ಹಾಕುವಂತೆ ಅಲ್ಲೇ
ಸರೋವರಗಟ್ಟುತ್ತಿದ್ದವು. ‘ಏನೆಲ್ಲ ಆಗಿಹೋಯ್ತು ನೋಡು’ ವಿನಯನ ಗಂಟಲು ಕಟ್ಟಿತು. ಪರಾಶರಿ ಉಷೆಯ
ಮುಂಗುರುಳು ನೇವರಿಸಿ ಹೊಟ್ಟೆಯ ಮೇಲೆ ಕೈಯಿಟ್ಟಳು. ಉಷೆ ಈಗ ಕಂದಮ್ಮನಂತೆ ಎರಡೂ ಕೈ ಚಾಚಿ
ಬಿಕ್ಕತೊಡಗಿದಳು. ಪರಾಶರಿ ತೆಕ್ಕೆಯನ್ನು ಅಗಲಮಾಡಿ ಅವಳನ್ನು ಒಳಗೆಳೆದುಕೊಂಡಳು. ಅದೆಷ್ಟು ಸಹಸ್ರ
ಭಾವಗಳು ಸಂವಹನವಾದವೋ ಇಬ್ಬರ ನಡುವೆ.
ಮುಂದಿನ ಅರ್ಧ ಗಂಟೆಯಲ್ಲಿ ಡಾಕ್ಟರ್‌ಗಳು ನರ್ಸ್ ಹಾಗೂ ಮಿಡ್‌ವೈಫ್‌ಗಳ ಜತೆ ರೂಮಿಗೆ ಬಂದು
ನಡೆಯಲಿರುವ ಪ್ರೊಸೀಜರನ್ನು ಸಾದ್ಯಂತ ವಿವರಿಸಿದರು. ಲೇಬರ್ ಇಂಡ್ಯೂಸ್ ಮಾಡಿ ಆದಷ್ಟು ಬೇಗ ಮಗುವನ್ನು
ಹೊರಬರುವಂತೆ ನೋಡಿಕೊಂಡು, ಒಳಗಡೆ ಸೋಂಕು ಹರಡದಂತೆ ಎಚ್ಚರವಹಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಸ್ಟಿಲ್‌ಬರ್ತ್ ಮಾಡಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಅವಶ್ಯಕತೆ ಬಿದ್ದರೆ ಸಿಸೇರಿಯನ್ ಕೂಡಾ
ಮಾಡಬೇಕಾಗಬಹುದು ಎಂದೆಲ್ಲ ತಿಳಿ ಹೇಳಿದರು. ಅಗತ್ಯವಿರುವ ಎಲ್ಲ ಕಾಗದಗಳಿಗೆ ಸಹಿ ಮಾಡಿಸಿಕೊಂಡರು.
ವಿನಯನಂತೂ ಎಷ್ಟೋ ಬಾರಿ ಸಹಿ ಮರೆತಂತಿದ್ದ. ಡಾಕ್ಟರುಗಳ ಟೀಮಿನಲ್ಲಿದ್ದ ಸೈಕಾಲಾಜಿಸ್ಟ್,
ಗಂಡಹೆಂಡತಿಯೊಂದಿಗೆ ಸಂವಾದ ನಡೆಸಿ ಉಷೆಯ ಜತೆ ಪ್ರತ್ಯೇಕವಾಗಿ ಸಮಯ ಕಳೆದರು. ಪರಾಶರಿ ಒಂದು
ತ್ರಿಕೋನದಲ್ಲಿ ಪರಿಭ್ರಮಿಸಿದಂತೆ ಉಷೆ, ವಿನಯ ಹಾಗೂ ಆಯಿಯೊಂದಿಗೆ ಅವರ ಬೇಕುಬೇಡಗಳನ್ನು ವಿಚಾರಿಸುತ್ತ
ಕುಳಿತಳು. ಫೋನಿನಲ್ಲಿ ವಿಷಯ ತಿಳಿದುಕೊಂಡ ಜೇಪಿ ಆಸ್ಪತ್ರೆಗೆ ಓಡಿಬಂದು ಲಾಬಿಯಲ್ಲಿ ಕಾಯುತ್ತ ಕುಳಿತ.

ಲೇಬರ್ ಇಂಡಕ್ಷನ್ ಶುರುವಾದ ಹಾಗೇ ಆ ರೂಮಿನ ವಾತಾವರಣವೇ ಬದಲಾಯಿತು. ನಾಲ್ವರಲ್ಲೂ
ಒಂದು ಸಣ್ಣ ಆಶೆ. ಮಗು ಹುಟ್ಟಿದಾಗ ಅಳುತ್ತದೆ, ಅಮ್ಮನ ಮಡಿಲೊಳಗೆ ಆಡುತ್ತದೆ ಎಂದು. ಎದುರಿನ ಡಾಪ್ಲರ್
ಯಂತ್ರ ಬೇರೆಯೇ ಹೇಳಿದರೂ ಅವರೆಲ್ಲ ಅವರದೇ ಭ್ರಮೆಯಲ್ಲಿದ್ದರು. ಆ ಭ್ರಮೆ ಅವರನ್ನು ಹಿತವಾಗಿ
ನೇವರಿಸುತ್ತಿತ್ತು ಕೂಡ. ಮತ್ತೆ ಬಂದ ಸೈಕಾಲಾಜಿಸ್ಟ್ ಹಾಗೂ ಡಾಕ್ಟರ್ ಎಲ್ಲರನ್ನೂ ಹೊರಗೆ ಕಳುಹಿಸಿದರು. ಉಷೆ
ಮತ್ತು ವಿನಯರೊಟ್ಟಿಗೆ ಅರ್ಧ ಗಂಟೆ ಮಾತುಕತೆ ನಡೆಸಿ ರೂಮಿನಿಂದ ಹೊರನಡೆದರು. ಉಷೆಗೆ ಆಕ್ಟಿವ್ ಲೇಬರ್
ಶುರುವಾಗಿದೆಂದು ಹೊರಗಿದ್ದವರಿಗೆ ಸುದ್ದಿ ತಿಳಿಯಿತು. ಒಳಗಡೆಯೇ ಉಸಿರು ನಿಲ್ಲಿಸಿದ್ದ ಹೆಣ್ಣುಮಗು ಬೆಳಗಿಂಜಾವ
ನಾಲ್ಕಕ್ಕೆ ಹೊರಗೆ ಬಂತು.


ಅದೆಷ್ಟು ಧೈರ್ಯವನ್ನು ಒಗ್ಗೂಡಿಸಿಕೊಂಡಿದ್ದರೂ ಪರಾಶರಿಯ ಕಾಲುಗಳು ರೂಮಿನೊಳಗೆ ಹೋಗಲು
ಹಿಂಜರಿಯುತ್ತಿದ್ದವು. ಅಲ್ಲಿರುವ ಮೂವರ ಮುಖವನ್ನು ನೋಡುವ ಛಾತಿ ಇರಲೇಯಿಲ್ಲ. ಅವಳ ಮೈಗೂಡಲ್ಲಿ
ವಾಕರಿಕೆ, ತಲೆಸುತ್ತು, ಅಳು, ಸಿಟ್ಟು, ಹತಾಶೆಗಳ ನಡುವೆ ಕಾಂಪಿಟಿಶನ್ ನಡೆದಂತೆ ಇತ್ತು.
ರೂಮಿನ ಕಿಟಕಿಯ ಪಕ್ಕ ತಳ್ಳಲ್ಪಟ್ಟ ಮಂಚದ ಮೇಲೆ ಒರಗಿದಂತೆ ಕೂತ ಉಷೆ, ಕೈಯಲ್ಲಿನ
ಮಣ್ಮುದ್ದೆಯಂಥ ಮಗುವನ್ನು ದಿಟ್ಟಿಸುತ್ತಿದ್ದಳು. ತುಸು ನೀಲಿಗಟ್ಟಿದ ತುಟಿಯನ್ನು ಬಿಟ್ಟರೆ ಕೂಸು ಮುದ್ದಿನರಗಿಳಿಯೇ.
ಬಿಳಿ ನೀಲಿ ಗೆರೆಗಳಿರುವ ರಿಸೀವಿಂಗ್ ಬ್ಲಾಂಕೆಟ್‌ನಲ್ಲಿ ಸುತ್ತಿದ ಮಗುವಿಗೆ ಆ ಬಟ್ಟೆಯ ಮೃದುತನವೂ ನೋವು
ಮಾಡುವಂತೆ ಕಾಣುತ್ತಿತ್ತು. ಉಷೆಯ ಮುಖದಲ್ಲಿ ವಿಷಣ್ಣತೆ ಇತ್ತಾದರೂ ಅದನ್ನೂ ಮೀರಿಸುವ ಕಾತುರ
ಕಂಡುಬಂತು. ‘ಪಾರೋ, ನೀನಾದರೂ ಈ ಇಬ್ಬರಿಗೆ ತಿಳಿಸಿಹೇಳು’ ಎನ್ನುತ್ತಲೇ ಮಾತು ಶುರು ಮಾಡಿದಳು ಉಷೆ.
ಆಯಿಯ ಕಾಲುಗಳು ಅವರ ಸ್ವಾಧೀನದಲ್ಲಿ ಇಲ್ಲದಂತೆ ಅವರನ್ನೂ ಹೊತ್ತು ಹೊರನಡೆದವು. “ನನ್ನಿಂದ
ಏನಾಗಬೇಕು ಉಷೆ?” ಮೆತ್ತಗೆ ಕೇಳಿದಳು ಪರಾಶರಿ. ‘ನಾನು ಈ ಬಾಲೆಯನ್ನು ಮನೆಗೆ ಕರೆದೊಯ್ಯುವ ನಿರ್ಧಾರ
ಮಾಡಿದ್ದೇನೆ. ಆಯಿಯಂತೂ ಆರ್ಭಟವನ್ನೇ ಮಾಡಿಬಿಟ್ಟಳು. ವಿನಯನಿಗಾದರೂ ನೀನು ತಿಳಿಹೇಳು’ ಎಂದಳು.
ಪರಾಶರಿಗೆ ಕತ್ತಲ ಕೋಣೆಯಲ್ಲಿ ಕಣ್ಕಟ್ಟಿ ನಿಂತಂತ ಅನುಭವ. ಪಾದದ ಕಿರುಬೆರಳಿನಿಂದ ನೆತ್ತಿಯವರೆಗೆ ದೇಹ
ಝುಂ ಅಂದಿತು. ವಿನಯ ಯಾರದೋ ಕರೆಬಂದ ರೀತಿಯಲ್ಲಿ ಹೊರನಡೆದ.


“ನಾನು ಈ ಬಂಗಾರದ ಗೊಂಬೆಯ ಹೆಸರನ್ನು ಕೂಡಾ ನಿರ್ಧರಿಸಿಯಾಗಿದೆ. ಮಹೀ ಇವಳ ಹೆಸರು.
ತನ್ನಂಶವನ್ನು ನನ್ನಲ್ಲಿ ಉಳಿಸಿ ಭೂಮಿಯಾದವಳು ಇವಳು. ಮಹೀ.. ಚೆಂದ ಇದೆ ಅಲ್ವೇನೆ ಹೆಸರು..?”
ಉಷೆ ಔಷಧಗಳ ಮತ್ತಿನಲ್ಲಿ ಮಾತನಾಡುತ್ತಿದ್ದಾಳಾ ಎಂದುಕೊಂಡಳು ಪರಾಶರಿ.
“ಡಾಕ್ಟರ್ ಜತೆಗೆ, ಆಸ್ಪತ್ರೆಯವರ ಜತೆಗೆ ಎಲ್ಲ ಡೀಟೇಲ್ ಆಗಿ ಮಾತಾಡಿದ್ದೇನೆ ಪಾರೋ. ನನ್ನ ಮಹೀ
ಜತೆ ನನಗೆ ಇವತ್ತಿನ ದಿನವನ್ನು ಕಳೆಯಬೇಕು. ಇವಳನ್ನು ಮನೆಗೆ ಕರೆದೊಯ್ಯಲು ಯಾವುದೇ ತೊಂದರೆ
ಇಲ್ಲವಂತೆ. ಕೆಲವು ಕಾಗದಪತ್ರಗಳಿಗೆ ಸಹಿ ಮಾಡಿಬಿಟ್ಟರೆ ಟೆಂಪರೇಚರ್ ತಣ್ಣಗಿರುವ ಕಾಟಿನೊಂದಿಗೆ ಮನೆಗೆ
ಕಳುಹಿಸುವರಂತೆ. ನಂತರದ್ದು ನಂತರ ನೋಡಿದರಾಯಿತು ಅಲ್ಲವಾ? ಎಷ್ಟೆಲ್ಲ ಪೇರೆಂಟ್ಸ್ ಈ ಅವಕಾಶವನ್ನು
ಬಳಸಿಕೊಳ್ಳುತ್ತಾರಂತೆ. ನಾನು ನಿರ್ಧಾರ ಮಾಡಿಯಾಗಿದೆ. ನನಗೆ ಹಗುರಾಗಲು ಇದೊಂದೇ ಮಾರ್ಗ.
ನನ್ನೊಂದಿಗೆ ಮನೆಗೆ ಬರುತ್ತಾಳೆ ಮಹೀ”

ಕರಾರುವಕ್ಕಾಗಿ ಮಾಹಿತಿಗಳನ್ನು ಕೊಡುತ್ತಿರುವ ಉಷೆ ಔಷಧಗಳ ಮತ್ತಿನಲ್ಲಿ ಇಲ್ಲ ಎಂಬುದು
ಗೊತ್ತಾಯಿತು. “ವಿನಯನಿಗೆ ನನ್ನ ಫೀಲಿಂಗ್ ಅರ್ಥವಾಗುತ್ತಿಲ್ಲ. ಅಥವಾ ನನಗೆ ಅರ್ಥಮಾಡಿಸಲು ಆಗುತ್ತಿಲ್ಲ.
ಹಾಗಂತ ಅಂವ ಬೇಡ ಎನ್ನಲೂ ಇಲ್ಲ. ಸುಮ್ಮನಿದ್ದು ನನ್ನನ್ನು ಕೊಲ್ಲುತ್ತಿದ್ದಾನೆ ಪಾರೋ. ಇದೊಂದು ಹೆಲ್ಪ್ ಮಾಡು.
ಅವನನ್ನು ಒಪ್ಪಿಸು ಪಾರೋ” ಉಷೆಯ ಗೋಗರೆತ ಪರಾಶರಿಯನ್ನು ಅಲ್ಲಾಡಿಸಿಬಿಟ್ಟಿತು.
ವಿನಯನ ಜತೆ ಹಾಗೂ ಆಯಿಯೊಟ್ಟಿಗೆ ಪ್ರತ್ಯೇಕವಾಗಿ ಮಾತನಾಡಿದಳು ಪರಾಶರಿ.

ಒಂದಷ್ಟು ತಿಕ್ಕಾಟ,
ಬೇಡದ ಮಾತುಗಳು, ಅಳು, ಕಿರುಚಾಟಗಳೆಲ್ಲವೂ ನಡೆದು ಉಷೆಯ ಬಿಗಿ ಹಿಡಿತಕ್ಕೆ ಎಲ್ಲರೂ ಸೋತರು.
ಬೆಳಗ್ಗೆ ಏಳರ ನಂತರ ಮತ್ತೊಮ್ಮೆ ಸೈಕಾಲಾಜಿಸ್ಟ್ ಬಂದು ಹೋದರು. ಈ ಬಾರಿ ಭಾರತೀಯ ಮುಖದ
ಛಾಪಿದ್ದ ಅಸಿಸ್ಟಂಟ್ ಜತೆ ಬಂದಿದ್ದರು. ಉಷೆ ಮಾತ್ರ ಮಗುವನ್ನು ತನ್ನ ಕೈತೊಟ್ಟಿಲಿನಿಂದ ಇಳಿಸಲೇ ಇಲ್ಲ. ಇಷ್ಟೆಲ್ಲ
ಧಾರಣ ಶಕ್ತಿಯನ್ನು ತನ್ನ ಮೈಯಲ್ಲಿ ಎಲ್ಲಿ ಹುದುಗಿಸಿಟ್ಟುಕೊಂಡಿದ್ದಳು ಈ ಹುಡುಗಿ ಎಂದು ಮತ್ತೆಮತ್ತೆ ಪರಾಶರಿ
ಯೋಚಿಸಿದಳು. ಕಾಗದಗಳ ಮೇಲೆ ಸಹಿಗಳೆಲ್ಲ ಆದ ಮೇಲೆ ಗೈನಾಕಾಲಜಿಸ್ಟ್ ಬಂದು ಉಷೆಯ ಆರೋಗ್ಯದ ಬಗ್ಗೆ
ಓಕೆ ಕೊಟ್ಟರು. ಅಂತೂ ಹನ್ನೊಂದರ ಸುಮಾರಿಗೆ ಕಡಲೀ ಕೋಲ್ಡ್ ಕಾಟೆಂದು ಕರೆಯುವ ಶೈತ್ಯ ತೊಟ್ಟಿಲಿನೊಂದಿಗೆ
ಎಲ್ಲರೂ ಮನೆಗೆ ಹೊರಟರು ಮಹೀ ಜತೆಗೂಡಿ. ಉಷೆಯ ತಾಯಿ, ಮಗುವಿನೊಂದಿಗೆ ಕಾರಿನಲ್ಲಿ ಕೂಡ್ರಲು
ಒಪ್ಪಲೇಯಿಲ್ಲ. ಜೇಪಿ ತನ್ನ ಕಾರಿನಲ್ಲಿ ಅವರನ್ನು ಮಗಳು ಅಳಿಯನ ಮನೆಗೆ ಕರೆತಂದ.
ಎಲ್ಲರಿಗಿಂತ ಮುಂಚೆ ಕಾರಿಳಿದ ಉಷೆ, ಮನೆಯ ಕೀಲಿ ತೆಗೆದು ಒಳಗಿನಿಂದ ಕುಂಕುಮದ ನೀರಿನ ಇಳಿ
ತೆಗೆಯಲು ಪಾರೋಗೆ ಅಪ್ಪಣೆ ಮಾಡಿದಳು. ಮಗುವಿನ ಜತೆ ಇಳಿ ತೆಗೆಸಿಕೊಳ್ಳಲು ಉಷೆಯ ಪಕ್ಕ ನಿಲ್ಲದ ವಿನಯ
ನಂತರದ ಕಾರ್ಯಗಳಿಗೆಲ್ಲ ಕಮಕ್ ಕಿಮಕ್ ಎನ್ನದೇ ಸಹಕರಿಸಿದ. ಕೊರೆಯುವ ಮಯ್ಯಿಯ ಮಹೀ ತಾಯ್ತನದ
ಬಿಸುಪನ್ನು ಹೊತ್ತ ಉಷೆ ಇವರಿಬ್ಬರ ಜೋರು ಸ್ಪರ್ಧೆ ಪರಾಶರಿಗೆ ಮಾತ್ರ ಕಾಣುತ್ತಿತ್ತು.


ಸ್ನಾನ ಮಾಡಿ ಕೆಂಪನೆಯ ಚೂಡೀದಾರು ಹಾಕಿದ ಉಷೆ ವಿನಯನಿಗೂ ಸ್ನಾನ ಮಾಡೆಂದಳು. ಸ್ವಲ್ಪ
ನಿಧಾನವಾದರೂ ತನ್ನ ಪಾಡಿಗೆ ತಾನೇ ಎಲ್ಲವನ್ನೂ ಹೊಂದಿಸಿಟ್ಟು, ಮಹೀಯನ್ನು ಮಹಡಿಯ ಮೇಲಿನ
ಬಾತ್‌ರೂಮಿಗೆ ಕರೆದೊಯ್ದು, ಮಗುವಿನ ಕೂದಲೂ ಅಲುಗದಂತೆ ಆಸ್ಪತ್ರೆಯಲ್ಲಿ ಸುತ್ತಿದ ಬಟ್ಟೆ ಬಿಚ್ಚಿದಳು. ಗೋಡೆಗೆ
ಬೆನ್ನು ಬಿಚ್ಚಿ ಕಾಲನ್ನು ಉದ್ದಕ್ಕೆ ನೀಡಿ ಮಗುವನ್ನು ತೊಡೆಯ ಮೇಲೆ ಹಾಕಿ, ಶ್ರದ್ಧೆಯಿಂದ ಎಣ್ಣೆ ನೀವಿದಳು. ನಂತರ
ಪುಟಾಣಿ ಕಾಲ್ಮಣೆಯನ್ನು ಹಾಕಿ ಅದರಲ್ಲಿ ಕೂತು, ಬಿಸಿ ನೀರಿನ ಹದವನ್ನು ಎರಡೆರಡು ಬಾರಿ ಮುಟ್ಟಿ ನೋಡಿ
ಮಗುವಿನ ಮೈಯನ್ನು ನೀರಿನಿಂದ ಒರೆಸಿದಳು. ಮೆತ್ತಗಿನ ಪಂಚೆಯಲ್ಲಿ ಮೈಯುದ್ದಿ ತಿಳಿನೀಲಿ ಒಡಲಿನಲ್ಲಿ
ಅಚ್ಚನೀಲಿಯ ಹಕ್ಕಿಗಳಿದ್ದ ಕೈಕಾಲು ಪೂರ್ತಿ ಮುಚ್ಚುವಂಥ ಅಂಗಿಯನ್ನು ಮಗುವಿಗೆ ಹಾಕಿದಳು. ತೀರ ಕಣ್ಣಿರು
ತಡೆಯಲಾಗದಾಗ ಬಾತ್‌ರೂಮಿನ ಹೊರಬಂದು ಕಣ್ಣೊರೆಸಿಕೊಂಡ ಪರಾಶರಿ, ಉಷೆಯ ಪಕ್ಕವನ್ನು ಬಿಟ್ಟು
ಕದಲಲಿಲ್ಲ. ವಿನಯ ಕಿಟಕಿಗೆ ಆತುನಿಂತು ಎಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತಿದ್ದ. ಮಗುವನ್ನು ಎದೆಗಾನಿಸಿಕೊಂಡು
ಅಡುಗೆಮನೆಗೆ ಬಂದು ಕಿಟಕಿಯಲ್ಲಿ ಸ್ಥಾಪಿತವಾಗಿದ್ದ ಗಣೇಶನ ಫೋಟೊದ ಎದುರು ಮಗುವನ್ನು ಮಲಗಿಸಿ ಕೈ
ಮುಗಿದಳು. ವಿನಯ ಅವಳನ್ನು ಅನುಕರಿಸಿದ.

ಪರಿಸ್ಥಿತಿಯನ್ನು ನೋಡಿ ದಿಗ್ಮೂಢನಾಗಿದ್ದ ಜೇಪಿ ಪರಾಶರಿಗೆ ಕಣ್ಣಲ್ಲೇ ಸನ್ನೆ ಮಾಡಿ ಮನೆಗೆ ನಡೆದಿದ್ದ.
ಉಷೆಯ ತಾಯಿ ಆಸ್ಪತ್ರೆಯಿಂದ ಬಂದವರು, ಗೆಸ್ಟ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಅವರು ಹೊರಗೆ
ಬರಲೇಇಲ್ಲ.
ಸೋಫಾದ ಒಂದು ತುದಿಯಲ್ಲಿ ಇಟ್ಟ ಕೋಲ್ಡ್ ಕಾಟಿನಲ್ಲಿ ಮಗುವನ್ನು ಮಲಗಿಸಿ ಅದರ ಪಕ್ಕವೇ ಉಷೆ
ಕುಳಿತಳು. ಅವಳ ಭುಜಕ್ಕಾನಿಕೊಂಡು ವಿನಯನೂ ಕುಳಿತ. ಹೃದಯದಲ್ಲಿ ಮರಳು ಕರಕರಿಸಿಕೊಂಡೇ ಪರಾಶರಿ
ಅನ್ನವನ್ನೂ, ಮೆಣಸಿನ ಸಾರನ್ನೂ ಮಾಡಿದ ಶಾಸ್ತ್ರ ಮಾಡಿದಳು. ಮಗುವಿನ ತೊಟ್ಟಿಲಿನಲ್ಲಿ ತನ್ನ ಎಡಗೈಯ್ಯನ್ನು
ಇಳಿಬಿಟ್ಟಂತೆಯೇ ಮೂರು ತುತ್ತು ತಿಂದಳು ಉಷೆ. ಅವರ ಪಕ್ಕದಲ್ಲೇ ಕೂತು ಪರಾಶರಿ ಕೇಳಿ ಬಡಿಸಿದಳು. ತಟ್ಟೆಯ
ಕಣಪಣ, ತುತ್ತು ಕಲೆಸಿದ ಸದ್ದು, ಬಾಯಿ ತೆಗೆವಾಗಿನ ಸದ್ದನ್ನು ಬಿಟ್ಟರೆ ಅಲ್ಲೊಂದು ಶಾಂತ ನಿರ್ವಾತವಿತ್ತು.
ಊಟವಾದ ಮೇಲೆ ಉಷೆ, ಕಪಾಟಿನಲ್ಲಿದ್ದ ಡಿಜಿಟಲ್ ಕ್ಯಾಮರಾ ತೆಗೆದು ಕೆಲವು ಫೋಟೋ ಕ್ಲಿಕ್ಕಿಸಿದಳು. ಟೈಮರಿನ
ಸಹಾಯದಿಂದ ತೆಗೆದ ಫೋಟೋಗಳಲ್ಲಿ ಎಲ್ಲರೂ ಫ್ರೇಮಿನೊಳಗೆ ಬಂಧಿತರಾದರು. ಫೋಟೋದಲ್ಲಿ ನಗುವಿತ್ತೋ
ಇಲ್ಲವೋ ಪರಾಶರಿಗೆ ಗೊತ್ತಿಲ್ಲ; ಸಮಯವೇ ಉಡುಗೊರೆಯಂತೆ ಕೊಟ್ಟ ಸಹಜತೆಯಂತೂ ಅಲ್ಲಿತ್ತು.


ಸಂಜೆಯ ಮೇಲೆ ಕ್ರಿಮೆಟೋರಿಯಮ್ಮಿನ ಅಪಾಯಿಂಟ್ಮೆಂಟ್ ಪಡೆದು ಉಷೆ, ವಿನಯ ಹಾಗೂ ಪರಾಶರಿ
ಹೋಗಿ ಉಳಿದ ಕೆಲಸ ಮುಗಿಸಿ ಬಂದರು. ಉಷೆ ನಿರೀಕ್ಷೆಗೂ ಮೀರಿ ಶಾಂತವಾಗಿದ್ದಳು. ವಿನಯ, ಭಾವನೆಗಳನ್ನು
ಬಿಟ್ಟುಕೊಡಲಿಲ್ಲ. ಸರಿಯಾಗಿ ಎರಡು ವಾರ ಕಳೆಯುತ್ತಿದ್ದಂತೆಯೇ ಉಷೆಯ ತಾಯಿ ಹಳದೀಪುರಕ್ಕೆ
ವಾಪಸ್ಸಾಗಿಬಿಟ್ಟರು. ನಿಯಮಿತವಾಗಿ ಮನೆಗೆ ಬರುತ್ತಿದ್ದ ಮಿಡ್‌ವೈಫ್‌ಗಳು, ಸೈಕಾಲಾಜಿಸ್ಟ್
ಅಪಾಯಿಂಟ್‌ಮೆಂಟುಗಳು ಇವೆಲ್ಲ ಕೆಲಕಾಲ ನಡೆದು ದಿನಮಾನ ಸುಮಾರು ಹಳಿ ಹತ್ತತೊಡಗಿತು.
ಇದೆಲ್ಲ ನಡೆಯುವಾಗ ಉಷೆಯ ಹಾಗೂ ಪರಾಶರಿಯ ಭೇಟಿ, ಸಂವಹನ ಸ್ವಲ್ಪ ನಲುಗಿತು. ಅದಕ್ಕೆ
ಸರಿಯಾಗಿ ಮುಂದಿನ ಎಂಟು ತಿಂಗಳಿನಲ್ಲಿ ಪರಾಶರಿ ಹಾಗೂ ಜೇಪಿ ಆಫೀಸಿನ ಕಾರ್ಯಕಾರಣ ಭಾರತಕ್ಕೆ
ಮರಳಿಬಿಟ್ಟರು. ಹೊರಡುವ ಮೊದಲು ಒಂದು ಭರ್ಜರಿ ಪಾರ್ಟಿಯನ್ನು ಮಾಡಬೇಕು, ರಾತ್ರಿ ಪೂರ್ತಿ ಹರಟಬೇಕು
ಎನ್ನುವ ಉಷೆಯ ಹಾಗೂ ಪರಾಶರಿಯ ಪ್ಲಾನು ಯಾವ್ಯಾವುದೋ ಕಾರಣಗಳಿಂದಾಗಿ ಕೈಗೂಡಲೇ ಇಲ್ಲ.

ಬೆಂಗಳೂರಿನಲ್ಲಿ ನೆಲೆನಿಂತ ಮೇಲೆ ಆಗೀಗ ಮೆಸೇಜುಗಳ ಕಾಲುಗಳ ವಿನಿಮಯವಾದರೂ ಕಾಣದ
ತೆರೆಯಂತೂ ಇತ್ತು. ಅದೇ ಆತ್ಮೀಯತೆ ಅದೇ ಪ್ರೀತಿ ಮಾತುಗಳಲ್ಲಿ ಕಂಡರೂ ಭಾವಗಳು ತುಸು ಸೊರಗಿದ್ದವು.
ಪಾಸಿಬಲ್ ಮೀಟಿಂಗ್ ಅಪಾಯಿಂಟ್‌ಮೆಂಟುಗಳು ಇಂಪಾಸಿಬಲ್ ಆಗುತ್ತಲೇ ನಡೆದವು. ಕೆಲವು ವರ್ಷ ಹೀಗೇ
ಕುಂಟುತ್ತ ಸಾಗಿದ ಈ ಗೆಳೆತನ, ಪರಾಶರಿಯ ಫೋನಿನಲ್ಲಿ ‘ಪೈ ಮಾಮಿ – ಯುಕೆ’ ಅಂತಲೂ ಉಷೆಯ ಫೋನಿನಲ್ಲಿ
‘ಪಾರೋ – ಇಂಡಿಯಾ’ ಎಂತಲೂ ಹೆಸರುಗಳು ಸೇವ್ ಆಗಿ ಒಂದು ಹಂತವನ್ನು ತಲುಪಿತ್ತು. ನಾಲ್ಕು ವರ್ಷಗಳ
ಕೆಳಗೆ ಉಷೆಗೆ ಮಗ ಹುಟ್ಟಿದ ವಿಷಯವೂ ಸೋಶಿಯಲ್ ಮೀಡಿಯಾದ ಕೃಪೆಯಿಂದ ಗೊತ್ತಾಗಿತ್ತು. ಆ ಫೋಟೋ
ನೋಡಿದ ಪರಾಶರಿ, ಕಮೆಂಟಿನಲ್ಲಿ ಕಂಗ್ರಾಟ್ಸ್ ಎಂದು ಬರೆದು ಪಕ್ಕದಲ್ಲಿ ಹಾರ್ಟ್ ಇಮೋಜಿ ಹಾಕಿದ್ದಳು. ಉಷೆ
ಎಷ್ಟೋ ವಾರಗಳ ನಂತರ ಅದೇ ಕಮೆಂಟಿಗೆ ಹೆಬ್ಬೆರೆಳೆತ್ತಿರುವ ಇಮೋಜಿ ಒತ್ತಿದ್ದಳು.

ಪರಾಶರಿಯ ಜೀವನವಂತೂ ಇತ್ತೀಚಿನ ವರ್ಷಗಳಲ್ಲಿ ಪೂರ್ತಿ ಯೂಟರ್ನ್ ತೆಗೆದುಕೊಂಡಿತ್ತು. ಮೊದಲು
ಐದಾರು ವರ್ಷ ಮಕ್ಕಳಿಗಾಗಿ ಪ್ರಯತ್ನಿಸಿ ‘ಅದು ಆದಾಗ ಆಗಲಿ ಬಿಡು’ ಎಂದು ಗಂಡ ಹೆಂಡತಿ ನಿರ್ಧರಿಸಿದ್ದರು.
ನಂತರ ‘ಇಬ್ಬರಿರುವುದೇ ಲೇಸು, ಮಕ್ಕಳಿದ್ದರೇ ತ್ರಾಸು’ ಎನ್ನುವ ಹಂತಕ್ಕೆ ಬಂದಿದ್ದರು. ನೋಡನೋಡುತ್ತಲೇ
ನಲವತ್ತರ ಗಡಿ ದಾಟಿಯಾಗಿತ್ತು. ‘ಚೆರಿ ಬ್ಲಾಸಂ – ಅರ್ಲಿ ಇಂಟರ್‌ವೆನ್ಶನ್’ ಎಂಬ ಆಟಿಸಂ ಹೆಲ್ಪ್‌ಸೆಂಟರಿನಲ್ಲಿ
ಕೌನ್ಸಲರ್ ಆಗಿ ಕೆಲಸ ಮಾಡುತ್ತಿದ್ದ ಪರಾಶರಿಗೆ ಸದಾ ಹತ್ತಾರು ಮಕ್ಕಳು. ಅಣ್ಣನ ಮಕ್ಕಳು, ಬಾವನ ಮಗಳು
ಇವರೆಲ್ಲ ಆಗಾಗ ಮನೆಗೆ ಬಂದು ಮನೆಮಕ್ಕಳಂತೆಯೇ ಇದ್ದು ಹೋಗುತ್ತಿದ್ದರಿಂದ ಅದೊಂದು ಕೊರತೆ ಎಂದು
ಅನ್ನಿಸಿದ್ದೇ ಇಲ್ಲ ಇವರಿಗೆ. ಮಕ್ಕಳ ಜವಾಬ್ದಾರಿಯೇ ಹಿರಿದಾಗಿ ಕಕ್ಕುಲಾತಿಯ ಮೇಲೆ ಸವಾರಿ ಮಾಡತೊಡಗಿದರೆ
ಅದೂ ಒಂದು ತಲೆನೋವಾದೀತು ಬಿಡು ಎಂದು ಇಬ್ಬರೂ ಮಾತನಾಡಿಕೊಂಡದ್ದು ಉಂಟು. ಇಷ್ಟೆಲ್ಲ ತಾರ್ಕಿಕತೆ
ಹಾಗೂ ಧಾರಣ ಶಕ್ತಿಯನ್ನು ತನಗೆ ದಾಟಿಸಿದ್ದ್ಯಾರು ಎಂದು ಬಹಳ ಬಾರಿ ಪರಾಶರಿ ತಲೆ ಕೆಡಿಸಿಕೊಂಡದ್ದೂ
ಉಂಟು.


ಕೆಲಸ, ಪ್ರವಾಸ, ಪರಾಶರಿಯ ತಬಲಾ ಕಲಿಕೆ, ಸಂಗೀತ ಕಾರ್ಯಕ್ರಮಗಳು, ಜೇಪಿಯ ಸೈಕ್ಲಿಂಗ್ ಹಾಬಿ,
ಅದರ ಗ್ರೂಪುಗಳು ಇದೆಲ್ಲದರಿಂದ ಬಿಝಿಯಾಗಿ ಇತ್ಯಾದಿಗಳಿಗೆ ಸಮಯವಿಲ್ಲದಂತಾಗಿದೆ ಈಗ.
ಇಂತಿಪ್ಪ ದಿನಗಳಲ್ಲಿ ಬಂದ ಉಷೆಯ ಮೆಸೇಜು, ಪರಾಶರಿಯ ದಿನಚರಿಯನ್ನು ಕಂಗಾಲಾಗಿಸಿತು. ‘ಸಂಜೆ
ಫೋನ್ ಮಾಡಲೇ?’ ಎಂಬ ಮೆಸೇಜಿಗೆ ರಿಪ್ಲೈಯಿಸಿದ ಉಷೆ ‘ಪಾರೋ, ಇವತ್ತು ಸಂಜೆ ನಿಂಗೆ ಬಿಡುವಿದ್ದರೆ
ಜಯನಗರದ ಮೂವತ್ತಾರನೇ ಕ್ರಾಸಿನ ಥರ್ಡ್ ವೇವ್ ಕಾಫೀನಲ್ಲಿ ಸಿಗೋಣವೇ’ ಎಂದು ಕೇಳಿದಳು.
ಜೆಪಿನಗರದಲ್ಲಿರುವ ಚೆರಿ ಬ್ಲಾಸ್ಂನಿಂದ ಜಯನಗರಕ್ಕೆ ಇಪ್ಪತ್ತು ನಿಮಿಷದ ಹಾದಿ. ಐದು ಗಂಟೆಗೆ ಸೆಷನ್
ಮುಗಿಸಿದರೂ ಐದೂವರೆಗೆ ಅಲ್ಲಿರಬಹುದು ಎಂದು ಲೆಕ್ಕ ಹಾಕಿ ‘ಶ್ಯೂರ್. ಇವತ್ತು ಐದೂವರೆಗೆ ಸಿಗೋಣ. ಕಾಂಟ್
ವೇಯ್ಟ್ ಟು ಸೀ ಯೂ’ ಎಂದು ಉತ್ತರಿಸಿದಳು.


ಮಧ್ಯಾನ್ನದ ಬಿಡುವಿನ ಸಮಯದಲ್ಲಿ ಕೆ‌ಎಸ್‌ಐಸಿ ಅಂಗಡಿಗೆ ಹೋಗಿ ಕೆಂಪನೆ ಸೀರೆಯನ್ನು ಉಷೆಗಾಗಿ
ಕೊಂಡಳು. ಈ ಬೆಂಗಳೂರು ಮೈಸೂರಿಗರು ಉಡುವ ಮೈಸೂರು ಸಿಲ್ಕ್ ಸ್ಯಾರಿ ಎಂದರೆ ಉಷೆಗೆ ಹುಚ್ಚು!
ಐದಕ್ಕೆ ಸರಿಯಾಗಿ ಸೆಷನ್ ಮುಗಿಸಿ, ಸೆಂಟರಿನ ಉಳಿದ ಕೌನ್ಸಲರ್‌ಗಳಿಗೆ ಬಾಯ್ ಕೂಡಾ ಹೇಳದೆ
ಕಾರ್‌ಪಾರ್ಕ್ ಕಡೆ ನಡೆದ ಪರಾಶರಿಯ ನಡಿಗೆಯಲ್ಲಿ ವಸಂತಾಗಮನದ ಲವಲವಿಕೆ. ಐದೂಇಪ್ಪತ್ತೈದಕ್ಕೇ ಥರ್ಡ್
ವೇವ್ ಕಾಫೀ ಸೇರಿದ ಪರಾಶರಿಯನ್ನು ಸ್ವಾಗತಿಸಲೇ ಕುಳಿತಂತಿದ್ದಳು ಉಷೆ. ಮುಂದಲೆಯಲ್ಲಿ ಒತ್ತಾಗಿ ಎದ್ದು
ನಿಂತಿರುವ ಬಿಳಿ ಸುರುಳಿಗೂದಲನ್ನು ಹೊರತುಪಡಿಸಿದರೆ, ಉಷೆ ಒಂದು ಗ್ರಾಂ ಕೂಡಾ ಬದಲಾಗಿರಲಿಲ್ಲ. ಅದೇ
ಪ್ರೀತಿಯಲ್ಲಿ ತೊಯ್ದ ನಗು, ಅದೇ ಒಳಗೊಳ್ಳುವಿಕೆ, ಅದೇ ಬೆಚ್ಚನೆಯ ಅಪ್ಪುಗೆ. ಅಪ್ಪುಗೆಯನ್ನು ಸಡಿಲಿಸಲು ಇಬ್ಬರೂ
ತಯಾರಿಲ್ಲ. ಅಂತೂ ಒಂದೇ ಸೋಫಾದ ಮೇಲೆ ಒತ್ತಿಕೊಂಡಂತೆ ಕೂತಾಗ ಇಬ್ಬರಿಗೂ
ಸಮಾಧಾನವಾದಂತಾಯ್ತು. ಗಂಡ, ಮನೆ, ಸಂಸಾರ, ಕೆಲಸವೆಂದೆಲ್ಲ ಒಂದು ಸುತ್ತು ಸುದ್ದಿ ಮುಗಿದಾಗ ಕೈಲಿದ್ದ
ವೆನಿಲಾ ಫ್ರಾಪೆಯ ಕೊನೆಯ ಗುಟುಕೂ ಖಾಲಿಯಾಯಿತು.

ಆಗ ಪಕ್ಕದಲ್ಲಿದ್ದ ಆಳೆತ್ತರದ ಹೂವಿನಕುಂಡಕ್ಕೆ ಆನಿಸಿಟ್ಟ ತನ್ನ ಬ್ಯಾಗನ್ನು ಮಡಿಲಿಗೆಳೆದುಕೊಂಡಳು ಉಷೆ.
“ಪಾರೋ, ನಾನೇನೋ ಕೊಡಬೇಕು ನಿನಗೆ. ಈ ನಡುವೆ ಈ ವಸ್ತುಗಳ ಭಾರವನ್ನ ನಾನು ತಲೆಯ ಮೇಲೆಯೇ
ಹೊತ್ತು ತಿರುಗಿದಂತೆ ಇದೆ.” ಪೀಠಿಕೆ ಹಾಕಿದಳು.
ಬ್ಯಾಗಿನಿಂದ ಬಿಳಿಯ ಕವರೊಂದನ್ನು ಹೊರಗೆಳೆದು “ಮಹೀ ಫೋಟೋಗಳು ಇವು. ನೆನಪಿದ್ಯಾ..?
ಮೆಣಸಿನ ಸಾರನ್ನ ಊಟ ಮಾಡಿದ ಮೇಲೆ ತೆಗೆದ ಫೋಟೋಗಳು ಇವು. ಪ್ರಿಂಟ್ ಹಾಕಿಸಿ ಎಷ್ಟೋ ವರ್ಷಗಳೇ
ಕಳೆದವು. ನಿನಗೆ ತಲುಪಿಸಲು ಧೈರ್ಯ ಸಾಕಾಗಿರಲಿಲ್ಲ. ಈಗೀಗ ಇಟ್ಟಿಟ್ಟಲ್ಲೇ ಭಾರ ಆಗಿಬಿಟ್ಟಿದೆ ಕಣೇ.. ಮಹೀ
ಬೆಳೀತಿದ್ದಾಳೋ ಏನೋ..” ಎಂದು ತುಸು ಏರಿಕೆಯ ಸ್ವರದಲ್ಲಿ ಹೇಳಿ ತಕ್ಷಣ ನಿಲ್ಲಿಸಿದಳು.
ಪರಾಶರಿಗೆ ಕಣ್ಣುತಪ್ಪಿಸಲು ಸಾಧ್ಯವಾಗಲಿಲ್ಲ.


“ಇನ್ನೂ ಇಟ್ಟರೆ ಎತ್ತಲೂ ಸಾಧ್ಯವಿಲ್ಲದಷ್ಟು ಭಾರ ಆದೀತು ಎಂದುಕೊಂಡು ಈ ಬಾರಿ ನಿನ್ನ ಭೇಟಿಯಾದೆ.
ಹಾಂ! ಇಲ್ನೋಡು” ಇನ್ನೊಂದು ಪೊಟ್ಟಣ ತೆಗೆದಳು. ಅದು ಮೆತ್ತನೆಯ ಟಿಷ್ಯೂ ಪೇಪರಿನ ಪೊಟ್ಟಣ. “ನಾನು
ಬಸಿರಿನಲ್ಲಿ ಇರಬೇಕಾದ್ರೆ ನೀನು ಹೇಳಿದ್ದೆ ಗೊತ್ತ? ಹೊಕ್ಕುಳಬಳ್ಳಿ ಹುಗಿದಲ್ಲಿ ಮಕ್ಕಳು ಮತ್ತೆ ಮತ್ತೆ ಬರುತ್ತಾರೆ ಅಂತ.
ಮಹೀ ಹೊಕ್ಕುಳಬಳ್ಳಿ ಇದು. ನಿನಗೇ ಸಲ್ಲಬೇಕಾದ್ದು. ನನ್ನಲ್ಲಿ ದಿನವೂ ಉಸಿರಾಡುವ ಮಹೀ ನಿನ್ನಲ್ಲಿಗೆ
ಬರಬೇಕಂದ್ರೆ, ನೀ ಈ ಹೊಕ್ಕುಳಬಳ್ಳಿಯನ್ನ ನಿನ್ನ ಮನೆಯಂಗಳದಲ್ಲಿ ಹುಗೀಬೇಕಲ್ಲ.. ಹಾಗಾದ್ರೂ ನಾನು ನಿನ್ನಲ್ಲಿಗೆ
ಪದೇಪದೇ ಬರಬೇಕಲ್ಲ” ನಿಧಾನವಾಗಿ ಹೇಳಿದಳು ಉಷೆ. ಅಲ್ಲಿ ಮುಗ್ಧತೆ ಕೊಂಚ ಸೋಗಾಗಿದ್ದರೂ ಪರಾಶರಿಗೆ
ಮಾರುಹೋಗದೇ ಇರಲಾಗಲಿಲ್ಲ.
ಕೈಕಾಲು ಒಮ್ಮೆಲೇ ತಣ್ಣಗಾದಂತೆ ಅನ್ನಿಸಿ ಮತ್ತೆ ಅಲ್ಲೇ ಸುಧಾರಿಸಿಕೊಂಡು ಉಷೆಯನ್ನು ಬಿಗಿದು
ಅಪ್ಪಿದಳು ಪರಾಶರಿ. “ಹೌದೇ!ಇವು ನನಗೇ ಸೇರಬೇಕಾದವು” ಕಷ್ಟಪಟ್ಟು ಮಾತು ಹೊರದೂಡಿದಳು.

ಮನೆಗೆ ಮರಳಿ ಮೇನುಡೋರಿನ ಕೀಲಿ ತಿರುಪುತ್ತಾ ‘ಮಹೀ ಫೋಟೋಗಳನ್ನು ಫ್ರಿಜ್ಜಿನ ಮೇಲೆ ಅಣ್ಣನ
ಮಕ್ಕಳ, ಬಾವನ ಮಗಳ ಚಿತ್ರಗಳ ಸಾಲಿನಲ್ಲಿ ಇಡುವುದಾ..? ಅಥವಾ ಪಿತೃಗಳ ಸಾಲಿಗೆ ಸೇರಿರುವ ಅಪ್ಪಯ್ಯ,
ಅಜ್ಜಿಯ ನೆನಪಿಗಾಗಿ ಕಪಾಟಿನ ನಾಗಂದಿಗೆಯ ಮೇಲೆ ಬೆಚ್ಚಗೆ ಎತ್ತಿಟ್ಟ ಅವರ ಬಟ್ಟೆಗಳ ಮಡಿಕೆಯಲ್ಲಿ ಇಡುವುದಾ..?’
ಎಂದು ಪರಾಶರಿ ಸಶಬ್ದವಾಗಿ ಹಲುಬಿದಳು.
ಜಗದ ಎಲ್ಲ ಚರಾಚರ ವಸ್ತು ವಿಶೇಷ ಜೀವಭಾವಗಳಿಗೂ ತಮ್ಮ ಸ್ಥಾನವೆಂಬೋದು ಇರಲೇಬೇಕಲ್ಲ.


photo credit: Meta AI

Leave a comment