ಹೀಗೊಂದು ಹರಟೆ

ನಮಸ್ಕಾರ ಅನಿವಾಸಿ ಬಳಗಕ್ಕೆ. 
ಮೇ ಮಾಸ( ತಿಂಗಳಿನ) ದಲ್ಲಿ ಕವೀಂದ್ರ ರವೀಂದ್ರರ ಜನುಮದಿನದ ಸಂಭ್ರಮಾಚರಣೆಯ ಜೊತೆಗೇ ಭಾರತದಲ್ಲಿ 'ತಾಯಂದಿರ ದಿನ' ದ ಸಡಗರವೂ. ಈ ಬಳಗದೆಲ್ಲ ತಾಯಂದಿರಿಗೂ, ತಾಯಂಥಕರಣದ ಎಲ್ಲ ಸಹೃದಯರಿಗೂ ಶುಭಾಶಯಗಳು. ಸುಜಲಾಂ ಸುಫಲಾಂ ವಂದೇ ಮಾತರಂ ಎಂದು ತಾಯ್ನಾಡಿಗೆ ವಂದಿಸುತ್ತ ' ಜಡೆಯಾಚೆ ಮೊಗದಿರುಹಿಯೂ' ಜಗವನ್ನೆಲ್ಲ ಪೊರೆಯುತ್ತಿರುವ ಜಗನ್ಮಾತೆಗೆ ಮಣಿಯುತ್ತ ನನ್ನದೊಂದು ಹಳೆಯ ಬರಹವನ್ನು ಹಂಚಿಕೊಳ್ಳುತ್ತಿರುವೆ..

~ ಸಂಪಾದಕಿ.

ಹೆರಳು – ಮಾರಿ. 

ಏನಪಾ ಇದು ಅಂತ ನೀವು ತಲಿ ತುರಸಕೊಳ್ಳೂದರಾಗೇ  ನಾನೇ ಹೇಳಿಬಿಡತೀನಿ. ನಮ್ಮ ಉತ್ತರ ಕರ್ನಾಟಕದ ಮಂದಿಗೆ ಈ ಪದ ಚಿರಪರಿಚಿತ. ಇನ್ನ ಉಳದವರಿಗೆ ಹೆರಳು ಗೊತ್ತಿರತದ. ಮಾರಿ ತಿಳೀಲಿಕ್ಕಿಲ್ಲ. ಆದ್ರೂ ಇಲ್ಲಿನ ಸದಸ್ಯರೆಲ್ಲ ಬೇಂದ್ರೆ ಅಜ್ಜನ ‘ ಮುಗಿಲ ಮಾರಿಗೆ ರಾಗರತಿಯ’ ಕೇಳೇ ಇರತೀರಿ. ಹೂಂ.. ನಾನೂ ಅದೇ ಮಾರಿ ಅಂದ್ರ ಮುಖದ ಬಗ್ಗೆನೇ ಹೇಳುತ್ತಿರುವುದು.  

ಈ ‘ ಹೆರಳು – ಮಾರಿ’ ದು ಒಂದು ದೊಡ್ಡ ಸುದ್ದಿ. ಮುಂಜಾನಿ ಆಗತಿದ್ದ ಹಂಗೇ “ ಕ್ಯಾಮಾರಿ ಮಾಡಕೊಂಡು ಕೂಡಬ್ಯಾಡ್ರಿ. ಲಗೂ ಲಗೂ ಹೆರಳು-ಮಾರಿ ಮಾಡಕೋರಿ” ಅನ್ನಾಕಿ ನಮ್ಮಾಯಿ. ಮಧ್ಯಾಹ್ನ 4 ಆಯಿತಿಲ್ಲೋ “ ಮೂರುಸಂಜಿ ಆಗಲಿಕ್ಕೆ ಬಂತು, ಎದ್ದು ಹೆರಳು-ಮಾರಿ ಮಾಡಕೋರಿನ್ನ” ಅನ್ನಾಕಿ. ಹೀಂಗs ಮುಂಜಾನೆದ್ರ ಹೆರಳು-ಮಾರಿ, ಸಂಜಿ ಆದ್ರ ಹೆರಳು-ಮಾರಿ, ಹೊರಗ ಹೊಂಟ್ರ ಹೆರಳು-ಮಾರಿ, ಯಾರರೇ ಮನಿಗೆ ಬರತಾರಂದ್ರ ಹೆರಳು-ಮಾರಿ.. ಹೆರಳು-ಮಾರಿ ಸಂಭ್ರಮವೇ ಸಂಭ್ರಮ.

ಸಣ್ಣವರಿದ್ದಾಗ ಅಮ್ಮನೋ, ಮಾಮಿಯೋ, ಮಾಂಶಿಯೋ ಯಾರೋ ಒಬ್ಬರು ಜಿಪುಣತನ ಮಾಡದೇ ಛಂದಾಗಿ ಖೊಬ್ರಿ ಎಣ್ಣಿ ಹಚ್ಚಿ, ಹಣಗೀಲೇ ತೀಡಿ ತೀಡಿ ಹಿಕ್ಕಿ ಬಿಗತಾನ ಬಿಗದು ಎರಡು ಹೆರಳು ಹಾಕಿ ರಿಬ್ಬನ್ನು ಕಟ್ಟಿದರಂದ್ರ ಎಂಥ ಗಾಳಿಗೂ ಆ ಕೂದಲನ್ನ ಹಾರಾಡಿಸೋ ಶಕ್ತಿ ಇರತಿರಲಿಲ್ಲ. ಮುಂಗುರುಳು- ಪಿಂಗುರುಳು, ಪುಡಿಗೂದಲು ಎಲ್ಲ ಮಾಯ ಆಗಿಬಿಟ್ಟಿರತಿದ್ವು. ಎಷ್ಟೋ ಸಲ ಕುತಿಗಿ ಸೈತ ಅಲ್ಲಾಡಿಸಲಿಕ್ಕೆ ಬರತಿರಲಿಲ್ಲ. ಹಿಂತಲೆಯ ಕೂದಲು ಜಗ್ಗಿ ಗುಳ್ಳೆಗಳೆದ್ದು ಬಿಡಬೇಕು ಹಂಗ ಹೆರಳು ಹಾಕಿರತಿದ್ರು. “ ಮ್ಯಾಲ ಕಟ್ಟಬ್ಯಾಡ, ಕೆಳಗೇ ಬಿಡು, ರಿಬ್ಬನ್ ನಾಗ 4 ಅಲ್ಲ 6 ಹೂವು ಮಾಡು, ಅಷ್ಟ ಬಿಗಿ ಬ್ಯಾಡ ಸ್ವಲ್ಪ ಸಡಿಲ ಹಾಕು” ಅಂತೆಲ್ಲ ನಾವು ಏನು ಹೇಳಿದರೂ ‘ಹಾಂ ಹೂಂ’ ಸಹಿತ ಅನ್ನದೇ ತಮ್ಮದೇ ಮನಮಾನಿ ಮಾಡತಿದ್ರು. “ ನಿಮಗೇನ ತಿಳೀತದ? ನೀವು ಹೇಳಿದ್ಹಾಂಗ ಮಾಡಿದ್ರ ಮುಗೀತು. ತಲ್ಯಾಗ ಎರಡು ಕೂದಲ ಉಳ್ಯಂಗಿಲ್ಲ ಆಮ್ಯಾಲೆ” ಅಂತ ಹೆದರಸತಿದ್ರು. ಬಾಬ್ ಕಟ್, ಪೋನಿ ಟೇಲ್, ಸ್ಟೆಪ್ ಕಟ್ ಗಳಾಗಲಿ, ಶಾಂಪೂ ಮಾಡಿಕೊಂಡು ಸಿಲ್ಕಿ ಸಿಲ್ಕಿ ಕೂದಲಾ ಹಾರಾಡಿಸೂದಾಗಲಿ, ಬೆನ್ನಹಿಂದ ಕೂದಲ ಹರವಿಕೊಂಡು ಅಡ್ಡಾಡೂದಾಗಲಿ, ಮುಂಗುರುಳು ತೀಡಿಕೊಳ್ಳೂದಾಗಲಿ ಬಿಲ್ಕುಲ್ ಮಾಡೂಹಂಗಿರಲಿಲ್ರೀ.
ಒಮ್ಮೆ ಯಾರೋ ತಿರುಪತಿಗೆ ಹೋಗಿದ್ವಿ ಅಂತ ಪ್ರಸಾದದ ಲಾಡು ಕೊಡ್ಲಿಕ್ಕೆ ಬಂದಿದ್ದರು. ಅವರು ಹಂಗs ಮಾತಾಡಕೋತ ಅವರ ಮನೆಯಾಗ ತಿರುಪತಿಗೆ ಹೋದರೆ ಹೆಣ್ಣು ಮಕ್ಕಳು ಗಂಡಸರು ಅನ್ನಲಾರದೆ ಎಲ್ಲಾರು ಮುಡಿ ಒಪ್ಪಿಸೋ ಪದ್ಧತಿ ಅದ ತಮ್ಮ ಮನ್ಯಾಗ ಅಂತ ಹೇಳುತ್ತಿದ್ದರು. ಅವರು ಹೋದಮೇಲೆ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ನನ್ನ ಮಗ “ ನೀನೋ! ನಿನ್ನ ವೆಂಕಪ್ಪನೋ!” ಎಂದು ನಗೆಯಾಡಿ “ ಏನೇ ಅನ್ನು ಅವನ ಲಡ್ಡು ಮಾತ್ರ ಮಸ್ತ ಇರ್ತಾವ” ಅಂತ ನನಗೆ ಅಣಕಿಸಿ ಉಂಡಿ ಮೆದ್ದು ಎದ್ದು ಹೋದ. ಆಮೇಲೆ ‘ಓ ಮೈ ಗಾಡ್’ ಸಿನಿಮಾದಾಗ ಇದೇ ಮುಡಿ ಕೊಡುವ ಪದ್ಧತಿಯ ಬಗ್ಗೆ ಪರೇಶ್ ರಾವಲ್ ‘ಮುಂಜಾನೆದ್ದು ಬಾಗಲ ತೆಗೆದು ಕೂಡಲೇ ರಾಶಿ ರಾಶಿ ಕೂದಲು ನಿಮ್ಮ ಮನೆ ಮುಂದೆ ಹರಡಿದ್ದರೆ ನಿಮಗೆ ಖುಷಿ ಅನಿಸುವುದೇ’ ಎಂಬರ್ಥ ಬರುವ ಮಾತಿನ ಮೂಲಕ ವ್ಯಂಗ್ಯವಾಡುವ ಸೀನ್ ಅದ. ಆಗಾಗ ಹೌದು, ಯಾಕಿರಬಹುದು ಇಂಥ ಪದ್ಧತಿ ಅಂತ ಯೋಚಿಸಿದಾಗಲೆಲ್ಲ ಅನ್ನಿಸುವುದಿಷ್ಟೇ. ಮನುಷ್ಯ ಅಥವಾ ಭಕ್ತ ಅಲ್ಲಿ ಮುಡಿ ಕೊಡುತ್ತಿರುವುದು ಬರಿ ತನ್ನ ಕೂದಲಿನ ರಾಶಿಯನ್ನಲ್ಲ, ತನ್ನ ರೂಪವನ್ನು.. ಸೌಂದರ್ಯವನ್ನು. ಒಂದರ್ಥದಾಗ ತನ್ನತನವನ್ನು, ತನ್ನ ಅಸ್ತಿತ್ವವನ್ನು ಅಂತ. ನೋಡಿ ಕೂದಲು ದೇಹದ ನಿರ್ಜೀವವಾದ ಒಂದು ಭಾಗ. ಆದರೆ ಅದು ನಮಗೆ ಕೊಡುವ ಖುಷಿ, ಆತ್ಮವಿಶ್ವಾಸ, ಹೆಮ್ಮೆಗಳು ಅಷ್ಟಿಷ್ಟಲ್ಲ. ಕನ್ನಡಿ ಮುಂದೆ ನಿಂತು ಕೂದಲು ತೀಡದ, ಮುಂಗುರುಳನ್ನು ಬೆರಳಲ್ಲಿ ಸುತ್ತದ ಒಂದೇ ಒಂದು ಮಾನವ ಜೀವಿಯನ್ನು ತೋರಿಸಿ ಬಿಡಿ ಸಾಕು. ಹುಡುಗಿಯರಿಗಂತೂ ಅವರ ಜಡೆ, ಕೂದಲು ಸರ್ವಸ್ವ. ಹಂಗಂತ ಹುಡುಗರೇನೂ ಕಮ್ಮಿ? ದಿನಕ್ಕ ನೂರು ಸಲ ಹೋಗುತ್ತಾ ಬರುತ್ತಾ ಕನ್ನಡಿ ಮುಂದೆ ನಿಂದ್ರೋದೇನು? ಒಮ್ಮೆ ಕೈಯಿಂದ, ಒಮ್ಮೆ ಬ್ರಷ್ ನಿಂದ, ಒಮ್ಮೆ ಪಾಕೆಟ್ ನ ಪುಟ್ಟ ಬಾಚಣಿಕೆಯಿಂದ ಕ್ರಾಪ್ ತೀಡಿದ್ದೇ ತೀಡಿದ್ದು. ಹಿಂಗ ಕೂದಲು ಸೌಂದರ್ಯದ ಪ್ರತೀಕ. ಅದನ್ನೇ ತೆಗೆದು ದೇವನಡಿ ಇಡುವುದು ನಾವು ನೀವು ಚ್ಯಾಷ್ಟಿ ಮಾಡಿ ನಕ್ಕಷ್ಟು ಸುಲಭದ ಕೆಲಸ ಏನಲ್ಲ.

ಈ ಕೂದಲಿನ ರಗಳೆ ಇರಲಿಲ್ಲ ಅಂದರೆ 108 ತರದ ಹೇರ್ ಆಯಿಲ್ ಗಳು, ಸಾವಿರಾರು ತರದ ಶಾಂಪೂ, ಕಂಡಿಷನರ್, ಹೇರ್ ಜೆಲ್,ಹೇರ್ ಕ್ರೀಮ್, ಹೇರ್ ಡೈಗಳು ಇತ್ಯಾದಿಗಳನ್ನೆಲ್ಲ ಉತ್ಪಾದಿಸುವ ಕಾರ್ಖಾನೆಗಳು, ಅವುಗಳ ಮೂಲಕ ಅನ್ನ ಸಂಪಾದಿಸುವ ಲಕ್ಷಾಂತರ ಕುಟುಂಬಗಳ ಗತಿ ಏನಾಗುತ್ತಿತ್ತು? ಸಲೂನ್ ಗಳು, ಹೇರ್ ಹೆಡ್ ಮಸಾಜ್ ಸೆಂಟರ್ ಗಳು, ಹೇರ್ ಸ್ಪಾ, ಬ್ಯೂಟಿ ಪಾರ್ಲರ್ ಗಳು ಇವುಗಳೆಲ್ಲ ಬಾಗಿಲು ಬಂದ್ ಮಾಡಿಕೊಂಡು ಹೋಗಬೇಕಾಗುತ್ತಿತ್ತು. ನಾನಾ ತರದ ಹೂವುಗಳು, ಕಸ್ತೂರಿದವನಗಳು, ಕ್ಯಾದಿಗೆಗಳು, ಆಭರಣಗಳು, ನೂರಾರು ತರದ ಫ್ಯಾಶನೇಬಲ್ hair accessories, ಕ್ಲಿಪ್ಸ್, ರಬ್ಬರ್ ಬ್ಯಾಂಡ್, ಹೇರ್ ಪಿನ್ ಕೇಳುವವರಿಲ್ಲದೆ ಅನಾಥವಾಗುತ್ತಿದ್ದವು. ಕವಿಗಳಿಗೆ ಬರೆಯಲು ಮುಖ್ಯವಾದ ಒಂದು ವಿಷಯ ಕಮ್ಮಿಯಾಗುತ್ತಿತ್ತು. ನಲ್ಲ ಬಂದು ಹೂ ಮುಡಿಸಿ ನಲ್ಲೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲಾಗುತ್ತಿರಲಿಲ್ಲ. ಮೊಗ್ಗಿನ ಜಡೆ ಹೆಣೆಯುವವರ, ದಂಡೆ ಮಾಲೆ ಕಟ್ಟುವವರ ಕಸುಬಿಗೆ ಕಲ್ಲು ಬೀಳುತ್ತಿತ್ತು.
ಎಲ್ಲೆರೇ ಊಟ ತಿನಿಸಿನಲ್ಲಿ ಒಂದೆಳೆ ಕೂದಲು ಕಂಡರೆ ಕಸಿವಿಸಿ ಪಡ್ತೀವಿ. ಆದರೆ ಕೂದಲವಿಲ್ಲದ ಜೀವನ ಊಹಿಸಿಕೊಳ್ಳುವುದು ಕಷ್ಟ. ಈ ಕೇಶದ ಮಹಿಮೆ, ಸಾಮರ್ಥ್ಯ ಅಗಾಧವಾದದ್ದು. ಪುರಾಣ, ಇತಿಹಾಸಗಳು ಇದಕ್ಕೆ ಸಾಕ್ಷಿಯಾಗಿವೆ. ಸುರಗಂಗೆ ಭೂಲೋಕಕ್ಕೆ ಅವತರಿಸಬೇಕಾದರೆ ಶಿವನ ಜಡೆಯೇ ಬೇಕಾಯಿತು. ರಭಸದಿಂದ ಧಮ್ಮಿಕ್ಕುವ ಅವಳನ್ನು ತಡೆಯಲು ಶಿವನ ಜಡೆ ಇರದಿದ್ದರೆ ಆ ಮಂದಾಕಿನಿಯ ರಭಸದ ಸೊಕ್ಕಿಗೆ ಜಗತ್ತೇ ದಿಕ್ಕೇಡಿಯಾಗುತ್ತಿತ್ತೇನೋ? ಪಕ್ಷಕ್ಕೊಮ್ಮೆ ಬಿಳಿ ಪತ್ತಲ ನೇಯುವ ಹುಣ್ಣಿಮೆ ಹಸ್ತದ ಚಂದ್ರನಿಗೂ ಆಶ್ರಯ ಈ ಜಡೆಯೇ. ನಮ್ಮ ನಾಡಿನ ಅನೇಕ ಮನೆತನಗಳ ಕುಲದೈವವಾದ ವೀರಭದ್ರನೂ ಕೂಡ ಶಿವನ ಜಟೆಯಿಂದಲೇ ಹುಟ್ಟಿದವನೆಂಬ ಪ್ರತೀತಿ.

ಇನ್ನು ಮಹಾಭಾರತ ನಡೆದದ್ದೇ ದ್ರೌಪದಿಯ ಮುಡಿಯಿಂದ. ಅವಳು ಮುಡಿಬಿಚ್ಚಿದಾಗ ಭಾರತ ಆರಂಭವಾಯಿತು, ಕಟ್ಟಿದಾಗ ಮುಕ್ತಾಯವಾಯಿತೆಂಬ ಮಾತಿದೆ. ತನ್ನ ಕೂದಲಿಗೆ ಕೈ ಹಾಕಿ ಎಳೆದೊಯ್ದ ದುರುಳನ ಕರುಳ ಬಿಗಿದು ಅವನ ರಕ್ತದಿಂದ ಅದನ್ನುತೊಯ್ಯಿಸದೇ ತಾನು ಮುಡಿ ಕಟ್ಟಲಾರೆನೆಂಬ ದ್ರೌಪದಿಯ ಪ್ರತಿಜ್ಞೆಗೆ 18 ಅಕ್ಷೋಹಿಣಿ ಸೈನ್ಯದ ಭಾರತ ಯುದ್ಧವೇ ನಡೆಯಬೇಕಾಯಿತು. ಹೌದಲ್ಲವೇ? ದುಶ್ಯಾಸನ ಕೈ ಹಾಕಿದ್ದು ಬರೀ ಹೆಣ್ಣೋರ್ವಳ ತಲೆ ಕೂದಲಿಗೆ ಅಲ್ಲ, ಯುಗದ ಅಸ್ಮಿತೆಗೆ.. ಸ್ತ್ರೀತನದ ಗರಿಮೆಗೆ.. ಸಂಸ್ಕಾರ ಸಂಸ್ಕೃತಿಗಳ ಬುಡಕ್ಕೇ ಕೈ ಹಾಕಿದ್ದ. ಅದಕ್ಕೆಂದೇ ಅದಕ್ಕೆ ಸಾಕ್ಷಿಯಾದ, ನೇರವಾಗಿ ಪರೋಕ್ಷವಾಗಿ ಭಾಗಿಯಾದ ಎಲ್ಲರೂ ಅದಕ್ಕೆ ಬೆಲೆ ತೆರಲೇಬೇಕಾಯಿತು ಮಾಡಿದ್ದುಣ್ಣೋ ಮಹಾರಾಯ ಅನ್ನೋ ಹಂಗ.

ಧನನಂದನಿಂದ ಅಪಮಾನಕ್ಕೆ ಒಳಗಾದ ಆಚಾರ್ಯ ಚಾಣಕ್ಯನೂ ಸಹ ವೈರಿಯನ್ನು ಅಮೂಲಾಗ್ರವಾಗಿ ನಾಶ ಮಾಡದೆ ಶಿಖೆ ಕಟ್ಟಲಾರೆನೆಂದು ಪ್ರತಿಜ್ಞೆಗೈದು ಶಿಖೆಯ ಕೂದಲು ಬಿಟ್ಟದ್ದು. ಯಾವ ಅಸ್ತ್ರಗಳಿಗೂ ಇರದ ಮೊನಚನ್ನು ಅವನ ಶಿಖೆಯ ಕೇಶದಲ್ಲಿ ಕಂಡಿತು ಮನುಕುಲದ ಇತಿಹಾಸ. ಭಾರತದ ಇತಿಹಾಸಕ್ಕೆ ಚಂದ್ರಗುಪ್ತ ಮೌರ್ಯ, ಅಶೋಕರಂತಹ ಅರಸರ ಸುವರ್ಣ ಯುಗವನ್ನು ದಯಪಾಲಿಸಿದ್ದು ಇದೇ ಕೇಶ ಎಂದಾಯಿತಲ್ಲವೇ?

ಕೆಡುವ ಗಂಡರನ್ನು ತೊರೆದು ಚೆನ್ನಮಲ್ಲಿಕಾರ್ಜುನನತ್ತ ಮೊಗದಿರುಹಿ ಹೊರಟ ಅಕ್ಕಳನ್ನು ಸಂರಕ್ಷಿಸಿದ್ದೇ ಈ ಕೇಶ ರಾಶಿ. ಇನ್ನು ನಮ್ಮ ಸಾಹಿತ್ಯದಲ್ಲಿ ಈ ಜಡೆಯ, ಕೇಶರಾಶಿಯ, ಮುಂಗುರುಳಿನ ವರ್ಣನೆಗಳು ಹೇರಳವಾಗಿ ದೊರೆಯುತ್ತವೆ. ನೀಲವೇಣಿ, ನಾಗವೇಣಿ ಇತ್ಯಾದಿ ಹೆಸರುಗಳನ್ನು ಕೇಳಿದೊಡನೆ ತೊನೆದಾಡುವ ಜಡೆಗಳ ಚಿತ್ರ ಕಣ್ಮುಂದೆ ಬರುತ್ತದೆ. “ ಅವಳೊಮ್ಮೆ ಹರಳಕೆದರಿ ಕಪ್ಪು ಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ” ಎಂದು ಮನದನ್ನೆಯನ್ನು ವರ್ಣಿಸುವ ಕೆ ಎಸ್ ಎನ್ “ನಾಗರ ಕುಚ್ಚಿನ ನಿಡು ಜಡೆಯವಳು ಈಕೆಯು ಬಂದುದು ಎಲ್ಲಿಂದ” ಎಂದು ಅಚ್ಚರಿ ಪಡುತ್ತಾರೆ. “ ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ ಸಿಂಗಾರ ಕಾಣದ ಹೆರಳು “ ಎಂದು ಅಕ್ಕಿ ಆರಿಸುವಾಗ ಕವಿತೆಯಲ್ಲಿ ಬಣ್ಣಿಸುತ್ತಾರೆ.

ಮುಂಗುರುಳು ದುಂಬಿಗಳಂತೆ ಅಂತಲೂ, ಯೆ ಜುಲ್ಫೆಹೈ ಜೈಸೆ ಕಾಂಧೋ ಪೆ ಬಾದಲ್ ಗಿರೆ ಹುವೆ’ ಅಂತಲೂ, ಉಡೆ ಜಬ್ ಜಬ್ ಜುಲ್ಫೆ ತೇರಿ ಎಂದೂ, ಯೆ ಗೇಸುವೋಂಕಿ ಘನಿ ಛಾವ್ ಹೈ ಮೇರೆ ಖಾತಿರ್ ಅಂತಲೂ ನೂರಾರು ಸಿನೆಮಾ ಹಾಡುಗಳು ಈಗಲೂ ರಸಿಕರ ಹೃದಯಕ್ಕ ಲಗ್ಗೆ ಹಾಕತಾವ. ಸರ್ ಜೋ ತೇರಾ ಚಕರಾಯೆ ಯಾ ದಿಲ್ ಡೂಬಾ ಜಾಯೆ ಆಜಾ ಪ್ಯಾರೆ ಪಾಸ್ ಹಮಾರೆ ಕಾಹೆ ಘಬರಾಯೆ ಅಂತ ಚಂಪಿ ( ಮಸಾಜ್) ಮಾಡತಾ ಹಾಡು ಹೇಳೋ ಜಾನಿ ವಾಕರ್ ನನ್ನು ಮೆಚ್ಚದವರೇ ಇಲ್ಲ.

ಅಣ್ಣ-ತಮ್ಮ, ಅಕ್ಕ ತಂಗಿಯರ ಜಗಳಕ್ಕ ಈ ಕೂದಲ ಬೇಕೇ ಬೇಕು ಅವರ ಜುಟ್ಟು ಇವರ ಕೈಯಾಗ ಇವರ ಜುಟ್ಟು ಅವರ ಕೈಯಾಗ ಅಂದಾಗನೇ ಅದು ಖರೇ ಸೋದರ ಪ್ರೇಮ. ಕೈ ಕೈ ಜಗಳಕ್ಕಿಂತ ಕೂದಲ ಕೂದಲ ಜಗಳಾನೇ ಬಹಳ ಆಗ್ಯಾವರಿ ನಾವು ಸಣ್ಣವರಿದ್ದಾಗ. ಈಗಲೂ ಅಷ್ಟೇ ಬಹಳ ಸಿಟ್ಟು ಬಂತಂದ್ರ ಮೈ ಹರಕೊಂಡು ಕೂದಲ ಕಿತ್ತುಕೊಳ್ಳುವಷ್ಟs ಸಂತಾಪ ಆಗುತದ್ರೀ.

ಇನ್ನೊಂದ ವಿಷಯ.. ಈ ಕೂದಲಾನ್ನ ಕತ್ತರಿಸೂದು ಅಂದ್ರ ಹೇರ್ ಕಟ್ ಎಲ್ಲಾ ಯಾವಾಗ ಬೇಕಂದ್ರ ಆವಾಗ ಮಾಡೂ ಹಂಗಿರಲಿಲ್ರೀ. ಹುಣ್ಣಿಮೆ, ಅಮವಾಸಿ, ಏಕಾದಶಿ, ದ್ವಾದಶಿ, ವೆಂಕಪ್ಪನ ಒಕ್ಕಲದವರಿದ್ರ ಶನಿವಾರ ಹೀಂಗ ದಿನಾ ನೋಡಿ ಸಲೂನ್ ಗೆ ಹೋಗಬೇಕಾಗಿತ್ತು. ಹೆಣ್ಣು ಮಕ್ಕಳಂತೂ ಕೂದಲಿಗೆ ಕತ್ತರಿನೇ ಹಚ್ಚೂ ಹಂಗಿರಲಿಲ್ರೀ. ಗಂಡಸರೂ ಸಹ ಹಜಾಮತಿ ಮಾಡಿಸಿಕೊಂಡು ಬಂದಮ್ಯಾಲೆ ಹಾಕಿದ್ದ ಬಟ್ಟೆ ಎಲ್ಲ ತೊಯ್ಯಿಸಿಟ್ಟು ಕೈಯಾಗ ಒಂದ ಹನಿ ಖೊಬ್ರಿ ಎಣ್ಣಿ ಹಾಕಿಸಿಕೊಂಡು ತಲಿಗೆ ಹಚಗೊಂಡು ಎರಡು ತಂಬಿಗೆ ಯಾರದರೇ ಕಡೆ ನೀರು ಹಾಕಿಸಿಕೊಂಡ ಮ್ಯಾಲೆನೇ ಗಂಗಾಳು – ತಂಬಿಗಿ ಮುಟ್ಟೂದು. ನಮ್ಮ ಮಕ್ಕಳಿಗೆ ಈಗ ಇವನ್ನೆಲ್ಲ ಹೇಳಿದ್ರ’ ಐಯ್’ ಅಂತ ಬಾಯಿ ತಕ್ಕೊಂಡು ನಂಬಲಾರದ ಕೂತಿರತಾರ ಕೇಳಕೋತ. ನಮಗೂ ಅಷ್ಟೇ. ತಲಿಗೆ ಹರಸಿ ಒಂದ್ಹನಿ ಎಣ್ಣಿ ಹಚಗೊಳ್ಳದ ತಲಿಸ್ನಾನ ಮಾಡೂ ಹಂಗಿರಲಿಲ್ಲ. ಒಣ ನೀರು ಹಾಕಿಕೊಳ್ಳೂದು ಅನಿಷ್ಟ ಅಂತ ನಂಬಿಕೆ. ದ್ವಾದಶಿ ಅಂತೂ ಅಪ್ಪಿ ತಪ್ಪಿನೂ ಎರಕೊಳ್ಳೂ ಹಂಗಿರಲಿಲ್ಲ. ಇವಕ್ಕೆಲ್ಲ ಕಾರಣಗಳೂ ಹಲವಾರು ಇದ್ದಾವು! ಹುಡುಕಿ ನೋಡಿದರೆ ಸಿಕ್ಕಾವು!!

ನಮ್ಮ ಬಲಕುಂದ್ಯಾಗ ಒಬ್ಬ ಮುತ್ಯಾ ಬರತಿದ್ದರೀ. ಬಾಂಬೆ ಮಿಠಾಯಿ, ಅಜ್ಜೀ ಕೂದಲಾ ( cotton candy )ಎಲ್ಲಾ ತಗೊಂಡು. ಅವನಿಗೆ ಹೋಗಿ ನಮ್ಮ ಉದುರಿದ ಕೂದಲನ್ನ ಕೊಟ್ರ ಆ ತಿಂಡಿ ತಿನಿಸುಗಳನ್ನೆಲ್ಲ ಪುಗಸೆಟ್ಟೆ ಕೊಡತಿದ್ದ. ಅದಕ್ಕಂತ ಹೆರಳ ಆದ ಕೂಡಲೇ ನಾವೆಲ್ಲ ಮಕ್ಕಳು ಹಣಿಗೆ ಒಳಗಿನ ಕೂದಲಾ ತೆಗೆದು ಸುರಳಿ ಸುತ್ತಿ ನಮ್ಮ ನಮ್ಮ ಕೂದಲನ್ನ ಬ್ಯಾರೆ ಬ್ಯಾರೆ ಮಾಡಿಕೊಂಡು ಮನಿ ಹಿಂದಿನ ಮಾಡದಾಗ ಒಯ್ದು ಇಡತಿದ್ದ ನೆನಪು. ಬಹುಶ: ಅವುಗಳಿಂದ ಚೌರಿ ಇತ್ಯಾದಿಗಳನ್ನು ಮಾಡುತ್ತಿದ್ದರೋ ಏನೋ? ತಿರುಪತಿ – ತಿರುಮಲಗಳಲ್ಲಂತೂ ಈ ಕೂದಲುಗಳದೇ ಕೋಟ್ಯಂತರ ರೂಪಾಯಿಗಳ ಆದಾಯ ಅದ ಅಂತ್ರೀ. ಅದರಿಂದಲೇ ತಿರುಪತಿ _ತಿರುಮಲ ದೇವಸ್ಥಾನದವರು ಅನೇಕ ಆಸ್ಪತ್ರೆ, ಶಾಲಾಕಾಲೇಜುಗಳು ಧರ್ಮಛತ್ರಗಳು, ಪುನರುಜ್ಜೀವನಗಳಂಥ ಚಾರಿಟಿ ಟ್ರಸ್ಟ್ ಗಳನ್ನು ನಡೆಸುತ್ತಾರೆಂದು ಎಲ್ಲೋ ಓದಿದ ನೆನಪು.

ನಾವು ಸಣ್ಣವರಿದ್ದಾಗ ಓದೂ ಚಂದಮಾಮಾ, ಬಾಲಮಿತ್ರ ಕಥಿ ಒಳಗ ಈ ಕೂದಲೆಳೆ ತಗೊಂಡು ಕಾಲಾ ಜಾದೂ, ಮಾಟಮಂತ್ರ, ಭಾನಾಮತಿ ಮಾಡಿದಂಥ ಕಥೆಗಳನ್ನೋದಿ ಮೈ ಜುಮ್ ಅನ್ನಿಸಿಕೊಂಡಿದ್ದೂ ನೆನಪಿದೆ. ಎಲ್ಲೆರೇ ನಮ್ಮ ಕೂದಲೆಳೆಯನ್ನೂ ಯಾರರೇ ತಗೊಂಡು ಕಾಲಾಜಾದೂ ಮಾಡಿದ್ರ ಅನಸತಿತ್ತು. ಆದ್ರ ಹಂಗಾಗಲಿಕ್ಕೆ ನಾವೇನು ರಾಜಕುಮಾರಿಯರೋ, ಶ್ರೀಮಂತ ವಣಿಕ್ ಪುತ್ರಿಯರೋ, ಸುರಸುಂದರಿಯರೋ ಇರಲಿಲ್ಲ ಅನ್ನೋದು ಅರ್ಥವಾಗದ ವಯಸ್ಸು ಅದು.
ತಾಯ ಹೊಟ್ಟೆಯಲ್ಲಿ ಮಗುವಿದ್ದಾಗಲಿಂದಲೇ ಮಗುವಿನ ಕೂದಲಿನ ಅಂದಾಜು ನಡದಿರತದ್ರೀ. ನಮ್ಮ ಕಡೆಯೆಲ್ಲ 7-8 ತಿಂಗಳಿಗೆಲ್ಲ ಸ್ವಲ್ಪ ಎದೆ ಯುರಿ ಎಲ್ಲಾ ಬಂದ್ರ ‘ ಕೂಸಿಗೆ ಜಾವಳ ಭಾಳ ಇರಬೇಕು. ಅದಕ್ಕs ಎದಿ ಉರೀತದ ಅಂತಾರ ಮನ್ಯಾಗಿನ ಹಿರಿಯರು. ಕೂಸು ಹುಟ್ಟಿದ ಮ್ಯಾಲೆನೂ ಅಷ್ಟೇ. ಕೂಸು ಆರಾಂ ಅದನ? ಯಾರಂಗ ಅದ? ಜಾವಳ ಭೇಷ್ ಅವನ?ಅಂತಾನೇ ಎಲ್ಲರ ಪ್ರಶ್ನೆ. ಮುಂದ ಜಾವಳ, ಮುಂಜವಿ ಅಂತ ಈ ಕೂದಲಿಗೆ ಸಂಬಂಧಿಸಿದ ಕಾರ್ಯಕ್ರಮ ಗಳೇ. ಹೆಣ್ಣು ಮಗು ಇದ್ರ ದಿನಕ್ಕೊಂದು ಕೇಶಾಲಂಕಾರ.. ಹೂವು.. ಶೖಂಗಾರ.

“ ಹೆಣ್ಣು ಮಕ್ಕಳಿಗೆ ಕೂದಲು ಉದ್ದಾ ಇದ್ರೆ ನೋಡೋಕೇನೋ ಚಂದ. ಆದ್ರೆ ಆರೈಕೆ ಭಾಳ ಕಷ್ಟ” ಎನ್ನುತ್ತಾರೆ ನಮ್ಮ ಹೆಂಗರುಳ ಕವಿ ಎಚ್ಚೆಸ್ವಿ ತಮ್ಮ ‘ ಉರಿಯ ಉಯ್ಯಾಲೆ’ಯಲ್ಲಿ. “ ರೋಮ ರೋಮಗಳಲ್ಲಿ ಭೀಮರಕ್ಷಿಯ ಬಲ ಕೊರಳಾಗ ಕಟ್ಟೀರಿ ಒಂದಾನ” ಎಂದು ಕರಡಿ ಕುಣಿತದಲ್ಲಿ ಹೇಳುತ್ತಾರೆ ನಮ್ಮ ವರಕವಿ. ಅಂದಹಂಗ ಜಿ. ಎಸ್. ಎಸ್. ರ ಜಡೆ ನಿಮಗೆಲ್ಲ ಗೊತ್ತಿರತದ. ಆದ್ರೂ ನನ್ನ ಖುಷಿಗೆ ಮತ್ತೊಮ್ಮೆ ಇಲ್ಲಿ ಹಂಚಿಕೊಳ್ಳುತ್ತಿರುವೆ.
“ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವ ಜಡೆ ಅತ್ತಿತ್ತ ಹರಿದ ಜಡೆ
ಚೇಳ್ ಕೊಂಡಿಯಂಥ ಜಡೆ ಮೋಟು ಜಡೆ, ಚೋಟು ಜಡೆ ಚಿಕ್ಕವರ ಚಿನ್ನ ಜಡೆ
ಎಣ್ಣೆ ಕಾಣದೇ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ, ಧೂಳಿನಲಿ ನೆನೆದುಕೊಂಡಿರುವ ಗಂಟು ಜಡೆ ಅಕ್ಕತಂಗಿಯ ಮುಡಿಯ ಹಿಡಿದು ನಾನೆಳೆದಂಥ ಮಲ್ಲಿಗೆಯ ಕಂಪು ಜಡೆ
ಮಾತೖಮಮತಾವೖಕ್ಷ ಬಿಟ್ಟ ಬಿಳಲಿನಂತೆ ಹರಿವ ತಾಯ್ ಜಡೆ ‘ ಕುರುಕುಲ ಜೀವಾಕರ್ಷಣ ಪರಿಣತ’ ಆ ಪಾಂಚಾಲಿಯ ಜಡೆ ಸಂಜೆಯಲಿ ಹಗಲು ಕೆದರುವ ಕತ್ತಲೆಯ ಕಪ್ಪು ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ ಬರುವಂಥ ಬೆಳ್ಳಕ್ಕಿಗಳ ಜಡೆ
ಕ್ರೌಂಚಗಳ ಜಡೆ
ಮಾಮರದಿ ಬಳುಕುತಿಹ ಹೂ ಬಿಟ್ಟ ಬಳ್ಳಿ ಜಡೆ
ಕಾಡು ಬಯಲಿನ ಹಸುರು ಹಸುರಲಿ ಹರಿ ಹರಿದು ಮುನ್ನಡೆವ ಹೊಳೆಯ ಜಡೆ
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ
ಗಿರಿಶಿವನ ಶಿರದಿಂದ ಹಬ್ಬಿ ಪಸರಿಸಿದ ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ ಹರಡಿರುವ ಮಳೆಯ ಜಡೆ
ಚಂದ್ರಚೂಡನ ವ್ಯೋಮಕೇಶನ ವಿಶ್ವವನೇ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ, ಕಾವ್ಯಗಳ, ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ! ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ!!

ಒಟ್ಟಿನಾಗ ಈ ಹೆರಳು ಮಾರಿಯಿಂದ ಇಷ್ಟೆಲ್ಲ ಮಾತು ಆತು ನೋಡ್ರಿ. ಓದಿ ಹೆಂಗನ್ನಸ್ತು ಅಂತ ನಿಮ್ಮದೂ ಎರಡು ಮಾತು ಸೇರಸ್ರಿ.

~ ಗೌರಿಪ್ರಸನ್ನ

ಸೀಕ್ರೆಟ್ ಸ್ಯಾಂಟಾ

ಅನಿವಾಸಿ ಓದುಗರಿಗೆಲ್ಲ ನಮಸ್ಕಾರ,
ನೀವೆಲ್ಲರೂ spring season ಆಗಮನವನ್ನು ಖುಷಿಯಿಂದ  ಬರಮಾಡಿಕೊಂಡು, ತಮ್ಮ ಕುಟುಂಬದೊಡನೆ  Easter ರಜೆಯನ್ನು ಕಳೆಯುತ್ತಿರುವ ಈ ಹೊತ್ತಿನಲ್ಲಿ, ವಾರದ ಅನಿವಾಸಿ ಬ್ಲಾಗ್  ಶೀರ್ಷಿಕೆ  ನೋಡಿ ಈಗ್ಯಾಕೆ  ಇಲ್ಲಿ ಸೀಕ್ರೆಟ್  ಸ್ಯಾಂಟಾ ನೆನಪು ಮಾಡ್ತೀರಿ? ಎಂದು ಮನಸಲ್ಲೇ ಅಂದುಕೊಂಡಿರಬಹುದು.ಆದರೆ ಇದು ಡಿಸೆಂಬರ್ ಸಂಭ್ರಮ ನೆನಪಿಸುವ ಪೋಸ್ಟ್ ಖಂಡಿತ ಅಲ್ಲ. ಈ ವಾರ ಅನಿವಾಸಿಯ ಅಂಗಳಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾಗುತ್ತಿದೆ ಮತ್ತವರ ಪರಿಚಯ ಮಾಡಿಕೊಡುವ ಅವಕಾಶ ನನಗೆ ಒದಗಿ ಬಂದಿದ್ದು ಬಹಳ ಖುಷಿಯ ಸಂಗತಿ. 
ಬನ್ನಿ ಅವರ ಪರಿಚಯ ಮತ್ತು ಅವರು ಬರೆದ ಈ ಕಥೆಯನ್ನು ಓದೋಣ.
ಅಮಿತಾ ರವಿಕಿರಣ್

ನಮಸ್ಕಾರ, 
ನನ್ನ ಹೆಸರುಪೂರ್ಣಿಮಾ ಭಟ್ಟ ಸಣ್ಣಕೇರಿ. ಸಣ್ಣಕೇರಿ ಎಂಬ ಪುಟಾಣಿ ಗ್ರಾಮ ನನ್ನೂರು. ಪತ್ರಿಕೋದ್ಯಮದಲ್ಲಿ ಪದವಿ. ಕೆಲ ಕಾಲ ಶಿರಸಿಯ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ. ಪ್ರಜಾವಾಣಿ ಬಳಗದಲ್ಲಿ ಕೆಲವು ವರ್ಷ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಣೆ.
‘ಕತೆ ಜಾರಿಯಲ್ಲಿರಲಿ’ ಮೊದಲ ಕಥಾ ಸಂಕಲನ. ಇದು ‘೨೦೨೫ರ ಈ ಹೊತ್ತಿಗೆ ಪ್ರಶಸ್ತಿ’ ಪಡೆದುಕೊಂಡಿದೆ. ಕತೆ, ಕವಿತೆ, ಲೇಖನ ಪತ್ರಿಕೆಗಳಲ್ಲಿ-ವಿಶೇಷಾಂಕಗಳಲ್ಲಿ ಅಚ್ಚಾಗಿವೆ.  
ಇಂಗ್ಲೆಂಡಿನ ರಾಜಧಾನಿ ಲಂಡನ್ನಿನಲ್ಲಿ ವಾಸ್ತವ್ಯ. ಮ್ಯಾನ್ಯುಫಾಕ್ಚರಿಂಗ್ ಕಂಪನಿಯೊಂದರಲ್ಲಿ ಡೇಟಾ ನಿರ್ವಹಣೆಯ ವೃತ್ತಿ. ಜತೆಗೆ ಬೆಂಗಳೂರಿನಲ್ಲಿನ ಶಾಲಾ ಮಕ್ಕಳಿಗೆ ಆನ್‌ಲೈನ್ ಕನ್ನಡ ಪಾಠ ನೆಚ್ಚಿನ ಕೆಲಸ. 
—————————————————————————————————————————————————–
ಏನ ಹೇಳಲಿ ಈ ಕತೆಯ ಕುರಿತು..?
ಯಾಕೆ ಬರೆದೆ, ಯಾವಾಗ ಬರೆದೆ ಅನ್ನುವುದನ್ನು ಹೇಳತೊಡಗಿದರೆ ಅದು ಇನ್ನೊಂದು ಕಾದಂಬರಿಯಾದೀತು. ಮನಕ್ಕೆ ತುಂಬ ಹತ್ತಿರವಾದ ಕತೆಯಿದು. ಬರೆವ ಸಮಯದಲ್ಲಿ ನಕ್ಕಿದ್ದೇನೆ, ಅಷ್ಟೇ ಬಿಕ್ಕಿದ್ದೇನೆ. ನಿಮಗೆ ಏನನ್ನಿಸಿತು ಅನ್ನುವುದನ್ನು ಹೇಳಿದರೆ, ಈ ಹೊತ್ತಿಗೆ ಅಷ್ಟು ಸಾಕು.
ಸೀಕ್ರೆಟ್ ಸ್ಯಾಂಟಾ
-ಪೂರ್ಣಿಮಾ ಭಟ್ಟ ಸಣ್ಣಕೇರಿ

“ಆರ್ ಯೂ ಔಟ್ ಆಫ್ ಯುವರ್ ಮೈಂಡ್ ಸನ್ನೀ?” ಎಂದು ಸುಮಾರು ಕಿರುಚಿದ ಹಾಗೇ ಮಾತಾಡಿದ ನನ್ನ ಧ್ವನಿ ಇನ್ನೂ ತಾರಕಕ್ಕೇ ಏರತೊಡಗಿತು.
“ಬ್ರೆಸ್ಟ್ ರೀಕನ್‌ಸ್ಟ್ರಕ್ಶನ್, ನಿಪ್ಪಲ್ ಕನ್‌ಸ್ಟ್ರಕ್ಶನ್, ಬೂಬ್ಸ್ ಶೇಪಿಂಗ್... ಇನ್ನೂ ಏನಾದರೂ ಉಳಿದಿದ್ಯಾ ಇಲ್ಲಿಗೇ ಮುಗೀತಾ ನಿನ್ನ ಲಿಸ್ಟು?” ನನ್ನ ಇಡೀ ದೇಹ ಥರಗುಡುತ್ತಿತ್ತು. ಈ ಎರಡು ವರ್ಷಗಳಲ್ಲಿ ಇಷ್ಟು ಧ್ವನಿ ಎತ್ತರಿಸಿ ಮಾತನಾಡಿದ್ದು ಇದು ಮೊದಲನೇ ಸಲವಾಗಿತ್ತು. ಒಂದೇ ಧ್ಯಾನದಲ್ಲಿ ತಾಳ್ಮೆ ಮೀರದಹಾಗೆ ತಾಸುಗಟ್ಟಲೇ ಹಿಡಿದ ಭಾರದ ಡಂಬೆಲ್ಸ್ ಸಮತೋಲನ ತಪ್ಪಿ ಕಾಲ ಮೇಲೆ ಬಿದ್ದ ಅನುಭವ ನನಗೆ.

ಮಂಚದ ಬುಡದಲ್ಲಿನ ಹೆಡ್ ಬೋರ್ಡಿಗೆ ಬೆನ್ನು ಆನಿಸಿದ್ದ ಸನ್ಮುಕ್ತಾ ಇವತ್ತು ಒಂದು ತೀರ್ಮಾನ ಆಗಲೇಬೇಕೆಂದು ಅಲ್ಲಿ ಬೇರುಬಿಟ್ಟು ಕುಳಿತಂತೆ ಇದ್ದಳು. ಬಲಗೈ ಎದೆಯ ನಡುವೆ ಹಾದು ಎಡದೋಳನ್ನು ಮೆಲ್ಲನೆ ಸವರುತ್ತಿತ್ತು. ಚಾಚಿದ ಕಾಲಿನ ಬೆರಳುಗಳನ್ನು ಆಗಾಗ ಸುರುಳಿ ಮಾಡಿ ನೆಟ್ಟಗಾಗಿಸುತ್ತಿದ್ದಳು ಅವಳಿಗೇ ಗೊತ್ತಿಲ್ಲದಂತೆ.
“ನನಗೆ ಜಾಸ್ತಿ ಪೊಯಟಿಕಲೀ ಪೊಲಿಟಿಕಲ್ ಆಗಿ ಮಾತಾಡಲು ಬರೋದಿಲ್ಲ ಕಣೋ. ನನ್ನ ಫೀಲಿಂಗ್ಸ್ ನಿನಗೆ ಹೇಗೆ ಅರ್ಥ ಮಾಡಿಸಲಿ? ನನ್ನ ಕಡೆಯಿಂದ ಡಿಸೈಡ್ ಮಾಡಿಯಾಗಿದೆ. ತಾಸುಗಟ್ಟಲೆ ರಿಸರ್ಚ್ ಮಾಡಿದ್ದೇನೆ. ಎರಡು ಪ್ಲ್ಯಾಸ್ಟಿಕ್ ಸರ್ಜನ್ ಜತೆ ಸಪರೇಟ್ ಆಗಿ ಮಾತಾಡಿದ್ದೇನೆ. ನಿನಗೆ ಕಾಣ್ತಿರೋ ಯಾವ ಕಾಂಪ್ಲಿಕೇಶನ್ನೂ ನನಗೆ ಕಾಣ್ತಿಲ್ಲ. ಹಠ ಯಾಕೆ ಮಾಡ್ತೀಯಾ ಅಮ್ಮೂ?” ಸಮಾಧಾನದಲ್ಲೇ ಹೇಳಿದರೂ ಮಾತುಗಳು ಮಂಜಿನ ಚೂರಿಯಂತೆ ಹರಿತವಾಗಿದ್ದವು.

‘ಛೇ! ನಾನ್ಯಾಕೆ ಸವಕಲು ಸಿಮಿಲಿಗಳನ್ನೇ ನೆನಪಿಸಿಕೊಳ್ಳುತ್ತಿದ್ದೇನೆ’ ಎಂದು ಸಶಬ್ದವಾಗಿ ಹಣೆ ಬಡಿದುಕೊಂಡೆ.
“ಅದ್ಯಾಕೆ ಹಣೆ ಚಚ್ಚಿಕೊಳ್ತೀಯಾ? ಮೊದಲ ಸಲ ಬ್ರಾ ಹಾಕಿಕೊಂಡ ಸಂಭ್ರಮ, ಹೈಸ್ಕೂಲಿನಲ್ಲಿ ಯೂನಿಫಾರ್ಮಿನ ಚೌಕುಳಿ ಬ್ಲೌಸಿನ ಸಂದಿಯಲ್ಲಿ ಇಣುಕಿದ ಸ್ಟ್ರಾಪ್ ಒಳತಳ್ಳುವಾಗ ಆದ ನಾಚಿಕೆ, ಧ್ರುವನಿಗೆ ಕೊನೆಯ ಬಾರಿ ಫೀಡ್ ಮಾಡುವಾಗ ನೀನು ಮಾಡಿದ ವಿಡಿಯೋ ನನಗೆ ಕೊಡುವ ಖುಶಿ... ಇದೆಲ್ಲ ಭಾವನೆಗಳನ್ನ - ಹೌ ಕೆನ್ ಐ ಪಾಸ್ ದೆಮ್ ಟೂ ಯೂ? ಹೇಳಿಲ್ವಾ ಕವಿ ಥರ ವಿವರಣೆ ಕೊಡೋದು ನನಗಾಗಲ್ಲ ಅಂತ” ಈ ಬಾರಿ ಅವಳ ಧ್ವನಿ ಆರ್ದ್ರವಾಗಿತ್ತು.

“ಈ ಎರಡು ವರ್ಷ ಅನುಭವಿಸಿದ್ದು ಸಾಲದಾ? ಇನ್ನಷ್ಟು ಆಸ್ಪತ್ರೆ ಓಡಾಟ, ಕೌಂಟ್ಲೆಸ್ ಅಪಾಯಿಂಟ್ಮೆಂಟ್ಸ್, ಫೋನಿನಲ್ಲಿ ಇನ್ನೂ ಒಂದಷ್ಟು ಪಿಲ್ಸ್ ರಿಮೈಂಡರ್ಸ್ ಇದೆಲ್ಲಾ ಬೇಕಾ ಸನ್ನೀ? ಸ್ವಲ್ಪ ಯೋಚನೆ ಮಾಡು. ಹೀಗೆ ಆರಾಮಾಗಿದ್ದುಬಿಡೋಣ” ಮಾತು ಮುಗಿಸೋಣವೆಂದುಕೊಂದಷ್ಟೂ ಮೆದುಳಿಗೂ ನಾಲಿಗೆಗೂ ಲಿಂಕ್ ತಪ್ಪಿದಂತಿತ್ತು ನನಗೆ.
“ಗಂಟೆ ಆಗ್ಲೇ ಎಂಟು. ನಿಂಗೆ ಯಾವತ್ತಿನಂತೆ ಮೆಕ್ಸಿಕನ್ ಬರೀಟೋ ಬೌಲಾ? ನಾನಿವತ್ತು ಸೂಪ್ ಮತ್ತು ಸಲಾಡ್ ಮಾತ್ರ” ಎಂದು ಫೋನಿತ್ತಿಕೊಂಡಳು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲು, ಮುಂದೇನಿದೆ ಮಾತಾಡುವುದಕ್ಕೆ ಎನ್ನುವಂತೆ.
*
ಬಾಲ್ಕನಿಗೆ ಬಂದು ಕೂತೆ. ಎಚ್‌.ಎಸ್‌.ಆರ್ ಲೇಔಟಿನ ಸುತ್ತಮುತ್ತಲಿನ ಐಟಿ ಕಂಪನಿಗಳ ಬಹುಮಹಡಿ ಕಟ್ಟಡಗಳು ದೀಪಗಳಿಂದ ಜಗಮಗಿಸುತ್ತಿದ್ದವು. ಎರಡು ವಾರದ ಹಿಂದೆ ಈ ಬ್ರೆಸ್ಟ್ ರೀಕನ್‌ಸ್ಟ್ರಕ್ಶನ್ ವಿಷಯವನ್ನು ಮೊದಲ ಬಾರಿ ಸನ್ಮುಕ್ತಾ ಪ್ರಸ್ತಾಪ ಮಾಡಿದಾಗ ಅರ್ಧ ವಿಷಯ ತಲೆಯೊಳಗೆ ಹೋಗಲೇ ಇಲ್ಲ. ಒಂದೂವರೆ ದಶಕದ ದಾಂಪತ್ಯದಲ್ಲೂ ಅಷ್ಟೆ, ಅವಳ ಪಾತ್ರ ಜಾಸ್ತಿ ಇದ್ದುದು ಚಿಂತನ ಮಂಥನದಲ್ಲಿ. ನನ್ನ ಪಾತ್ರ ಕಾರ್ಯ ನೆರವೇರಿಸುವಲ್ಲಿ.
ದೊಡ್ಡ ಸಾಫ್ಟ್‌ವೇರ್ ಕಂಪನಿಯಲ್ಲಿ ಲಕ್ಷ ಸಂಪಾದಿಸುತ್ತಿದ್ದರೂ ನನ್ನ ಹುಕಿಗಾಗಿ ಸಣ್ಣದೊಂದು ಪ್ರಾಡಕ್ಟ್ ಶುರುಮಾಡಿ, ಗೆಳೆಯರಿಂದ, ಕಲೀಗ್‌ಗಳಿಂದ ಮೆಚ್ಚುಗೆ ಪಡೆದುಕೊಂಡು ಅಷ್ಟಕ್ಕೇ ಸುಮ್ಮನಾಗಿ ಕುಳಿತಿದ್ದೆ ನಾನು. ಸನ್ಮುಕ್ತಾ ಯಾವ್ಯಾವ ದಾರಿಯಲ್ಲಿ ಹೋದರೆ ಗಮ್ಯ ಸುಗಮವಾಗಬಹುದು, ಎಲ್ಲಿ ನನ್ನ ಪ್ರಾಡಕ್ಟ್ ಒಂದು ಕಂಪನಿಯಾಗಿ ಬೆಳೆಯಬಲ್ಲದು ಎಂಬುದನ್ನೆಲ್ಲ ಲೆಕ್ಕಾಚಾರ ಹಾಕಿದವಳು. ಕೋಟಿಗಟ್ಟಲೆ ಇನ್ವೆಸ್ಟ್‌ಮೆಂಟಿನ ಕಠಿಣ ದಾರಿಯನ್ನು ಹೂಹಾದಿಯನ್ನಾಗಿಸಿದವಳು.
ಎರಡು ವರ್ಷದ ಹಿಂದೆ, ಒಂದು ಸುಡು ಬೇಸಿಗೆಯಲ್ಲಿ ಸನ್ಮುಕ್ತಾಳಿಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾದದ್ದು. ಸ್ವಲ್ಪಕಾಲ ದಿಕ್ಕುತಪ್ಪಿದ ಜೋಡಿಹಕ್ಕಿಗಳಂತೆ ಅಲ್ಲಿಲ್ಲಿ ಅಲೆದರೂ ಹೇಗೋ ಮತ್ತೆ ಗೂಡನ್ನು ಸೇರಿಕೊಂಡಿದ್ದೆವು. ರೇಡಿಯೇಶನ್, ಕೀಮೋ, ಸ್ಕ್ಯಾನುಗಳು, ಡಯೆಟ್ ಪ್ಲ್ಯಾನುಗಳು, ಮಾತ್ರೆಗಳು ಈ ಎಲ್ಲವಕ್ಕೂ ನಮ್ಮ ದಿನಚರಿಯನ್ನು ಹೊಂದಿಸಿಕೊಂಡಿದ್ದೆವು. ದಿನವೂ ಸಂಭವಿಸುವ ರಾತ್ರಿಯ ವಿಹಾರ ನಮ್ಮಿಬ್ಬರಿಗೂ ಥೆರಪ್ಯುಟಿಕ್. ಮಾತ್ರೆಯ ಬಾಧೆ ತಾಳಲಾರದೆ ಗೋಳೆಗುಟ್ಟಿ ಸನ್ಮುಕ್ತಾ ಅತ್ತ ರಾತ್ರಿಗಳಲ್ಲಿ ನಿದ್ದೆ ನನ್ನ ಬಳಿ ಸುಳಿಯುತ್ತಲಿರಲಿಲ್ಲ. ಮಾರನೆಯ ದಿನ ಮತ್ತೆ ಅವಳ ಕಣ್ಣಲ್ಲಿ ಹೊಳಪು ಕಂಡರೆ ನಾನು ಅಂದು ಸ್ವತಃ ಸೂರ್ಯ.
ಕಾಲಕ್ಕೆ ಕೂಡ್ರುವ ಪದ್ಧತಿಯಿಲ್ಲವಲ್ಲ. ಕ್ಯಾನ್ಸರ್‌ಅನ್ನು ಬುಡಸಮೇತ ಕೀಳಲು ಸನ್ಮುಕ್ತಾಳಿಗೆ ಆಸ್ಪತ್ರೆಯಲ್ಲಿ ಮ್ಯಾಸ್ಟೆಕ್ಟಮಿ ಪ್ರೊಸೀಜರ್ ಮಾಡಿದರು. ಅದರ ನಂತರ ಸಪಾಟಾದ ಒಂದು ಭಾಗದ ಎದೆಯನ್ನು ನೋಡಿದಾಗಲೆಲ್ಲ ನಾನು ಸನ್ಮುಕ್ತಾಳ ಕಣ್ಣನ್ನು ತುಸು ತಪ್ಪಿಸಿದ್ದನ್ನು, ಈಗಲೂ ತಪ್ಪಿಸುವುದನ್ನು ಬಿಟ್ಟರೆ ಬಾಕಿ ಎಲ್ಲವೂ ನಾರ್ಮಲ್ ಎಂದುಕೊಂಡಿದ್ದೆವು ನಾವಿಬ್ಬರೂ. ಹದಿನೈದು ವರ್ಷಗಳ ಏರಿಳಿತಗಳ ಬಂಧ ನಮ್ಮನ್ನು ಸದಾ ಹಿತವಾಗಿ ನೇವರಿಸುತ್ತಿತ್ತಲ್ಲ, ಅದಕ್ಕೇ ಉಳಕಿ ಎಲ್ಲ ನಾರ್ಮಲ್ ನಾರ್ಮಲ್.
ಅದೆಲ್ಲಿಂದ ತಲೆಯಲ್ಲಿ ಹುಳು ಬಿಟ್ಟುಕೊಂಡಳೋ ಗೊತ್ತಿಲ್ಲ ಸನ್ಮುಕ್ತಾ. ಸಪಾಟಾದ ಎದೆಗೆ ಬ್ರೆಸ್ಟ್ ರೀಕನ್‌ಸ್ಟ್ರಕ್ಶನ್ ಸರ್ಜರಿ ಆಗಲೇಬೇಕೆಂದು ಹಠ ಹಿಡಿದಿದ್ದಾಳೆ. ಹಾಂ...! ಅವಳೇ ಹೇಳಿದ್ದಲ್ಲವೇ ನನಗೆ, ಅವಳ ಡೆವೆಲಪ್ಮೆಂಟ್ ಟೀಮಿನ ಅಮೇರಿಕನ್ ಕೌಂಟರ್‌ಪಾರ್ಟ್ ಮೆಗ್ ಮೊದಲು ಈ ಬಗ್ಗೆ ಹೇಳಿದ್ದು ಎಂದು..
ಶುರುವಿನಲ್ಲಿ ಸನ್ಮುಕ್ತಾ ಈ ಬಗ್ಗೆ ಮಾತಾಡಿದಾಗ ನಾನೂ ಹಾರಿಕೆಯ ಉತ್ತರ ಕೊಟ್ಟೆ. ಮಾತು ಮರೆಸಲು ನೋಡಿದೆ. ಸನ್ಮುಕ್ತಾಳಲ್ಲಿ ಈ ಬಗ್ಗೆ ಮಾತಾಡುವ ಸಲಿಗೆಯಿಲ್ಲ ಎಂದಲ್ಲ. ಜೀವನ ಇನ್ಮುಂದೆ ಹೀಗೆಯೇ ಎಂದು ನಿರ್ಧರಿಸಿಯಾಗಿತ್ತೇನೋ. ಕಷ್ಟಕಾಲದಲ್ಲಿ ಹೆಂಡತಿಯ ಹಿಂದೆ ನಿಂತವ ಎನ್ನಿಸಿಕೊಳ್ಳುವ ಹಂಬಲವೂ ಎಲ್ಲೋ ಚೂರು ಇದ್ದಿತ್ತೇನೋ. ಇಷ್ಟೆಲ್ಲ ಎದುರಿಸಿದ್ದೇವೆ ಆದರೂ ಜೀವನ ನಾರ್ಮಲ್ ಆಗಿಯೇ ಇದೆ ಎನ್ನುವ ಗಟ್ಟಿತನವನ್ನು ಇನ್ನಷ್ಟು ಕಲ್ಲಾಗಿಸಬೇಕಿತ್ತೇನೋ. ದೇಹದ ಅದೊಂದು ಭಾಗವಿಲ್ಲದಿದ್ದರೆ ಏನು ಮಹಾ? ನಿನ್ನೊಟ್ಟಿಗೆ ಚೆಂದವಾಗಿಯೇ ಬಾಳುವೆ, ಅವರಿವರು ಮಾತಿನ ಕಲ್ಲೆಸೆಯಲು ಬಿಡಲಾರೆ ಎಂಬ ಭಾವನೆಯನ್ನು ಸನ್ಮುಕ್ತಾಳಿಗೆ ದಾಟಿಸುವ ಸೋಗು ಗಾಢವಾಗಿತ್ತೇನೋ.

ಇಷ್ಟು ವರ್ಷದ ಜತೆತನದಲ್ಲಿ ಯಾವತ್ತೂ ಎರಡು ದಿನಕ್ಕಿಂತ ಜಾಸ್ತಿ ಮುಂದುವರೆದ ಭಿನ್ನಾಭಿಪ್ರಾಯಗಳು ನಮ್ಮ ನಡುವೆ ಇರಲಿಲ್ಲ. ಈ ಬಾರಿ ಮಾತ್ರ ಎರಡು ವಾರಕ್ಕೂ ಮಿಕ್ಕಿ ತಿಕ್ಕಾಟ ನಡೆಯುತ್ತಿದೆಯಲ್ಲ. ನನ್ನ ನಿರಾಶೆ, ಹತಾಶೆ ಮಿಗುವರೆಯಿತು.
ಬಾಲ್ಕನಿಯಿಂದ ಡೈನಿಂಗ್ ಟೇಬಲಿನತ್ತ ಬಂದಾಗ ಸ್ವಿಗ್ಗಿಯಿಂದ ಬಂದ ಬರೀಟೋ ಬೌಲ್ ಮಾತ್ರ ಕಂಡಿತು. ಒಮ್ಮೆ ಅಡುಗೆಮನೆಯ ಸಿಂಕಿನ ಬಳಿ ಹೋಗಿ ಸನ್ಮುಕ್ತಾ ಊಟ ಮುಗಿಸಿದ್ದಾಳೆ ಎಂಬುದನ್ನು ಖಾತ್ರಿ ಮಾಡಿಕೊಂಡೆ. ಆರನೇ ಫ಼್ಲೋರಿನ ಗೆಳೆಯನ ಮನೆಗೆ ಹೋಗಿದ್ದ ಮಗ ಧ್ರುವ ಕೂಡಾ ಮನೆಗೆ ವಾಪಸ್ಸಾಗಿ ತನ್ನ ರೂಮಿನ ಕಂಪ್ಯೂಟರ್‌ನಲ್ಲಿ ಮುಳುಗಿದ್ದ. ಅವನ ಕಂಪ್ಯೂಟರಿನ ಎಕ್ಸೆಲ್ ಶೀಟಿನ ಮೇಲೆ ‘ಎಕ್ಸಾಂ - ಹೆಡ್ ಆನ್ ಕೊಲಿಶನ್’ ಎಂಬುದು ದಪ್ಪಕ್ಷರದಲ್ಲಿ ಕಾಣುತ್ತಿತ್ತು.
ಬರೀಟೋ ಬೌಲ್ ಬರಿದು ಮಾಡಿ ಮತ್ತೆ ಬಾಲ್ಕನಿಗೆ ಹೋಗಿ ಕುಕ್ಕರಿಸಿದೆ. ಅಸಂಬದ್ಧ ಯೋಚನೆಗಳು, ಇವಳ ಕ್ಯಾನ್ಸರಿನ ವಿಷಯ ಗೊತ್ತಾದಾಗ ಶುರುವಿನ ದಿನಗಳಲ್ಲಿದ್ದಂತೆ. ಸಾಕಾಯಿತಪ್ಪ ಈ ಬಗ್ಗೆಯೇ ಯೋಚಿಸಿ. ನನಗಿಂತ ಜಾಸ್ತಿ ವ್ಯಾಲಿಡೇಶನ್ ಬೇಕಾ ಇವಳಿಗೆ? ನಾನೇ ಇವಳ ಸಪಾಟನ್ನು ಸ್ವೀಕರಿಸಿಯಾಗಿದೆ ಇನ್ನೆಲ್ಲಿಯ ರಗಳೆ ಇವಳದ್ದು ಎಂದು ಛೇಗುಟ್ಟಿದೆ ಶಬ್ದಸಹಿತವಾಗಿ. ತಕ್ಷಣ ನನ್ನ ಮೇಲೇ ನನಗೆ ಹೇವರಿಕೆ ಬಂತು. ಎಂಥ ಕೆಟ್ಟ ವಿಡಂಬನೆಯಪ್ಪಾ ಎಂದು ತಲೆ ಕೊಡವಿದೆ.

ಕುಟುಂಬಕ್ಕೆ ಇಂಬಾದ ಬಾಳಸಂಗಾತಿ ಅನುಭವಿಸಲಿರುವ ಮೆಡಿಕಲ್ ಕಾಂಪ್ಲಿಕೇಶನ್, ತೊಡಕುಗಳೇ ನನ್ನನ್ನು ನಿಜವಾಗಿಯೂ ಕಾಡುತ್ತಿವೆಯಾ ಅಥವಾ ‘ನಾನು ಹೇಳಿದ ಮಾತು ನೀನು ಕೇಳುತ್ತಿಲ್ಲ’ ಎನ್ನುವುದೇ ನನ್ನ ಕೋಪದ ಮೂಲವಾ ಎಂದು ನನ್ನ ಕಾಳಜಿಯ ಉದ್ದೇಶವನ್ನೇ ಮತ್ತೆ ಮತ್ತೆ ಪ್ರಶ್ನಿಸಿಕೊಂಡೆ. ಪ್ರಶ್ನೆಗಳು ಜಟಿಲವಾಗುತ್ತ ನಡೆದವು.

ಹತ್ತು ವರ್ಷದ ಹಿಂದೆ ನಡೆದ ಘಟನೆಯನ್ನು ಇವತ್ತಿಗೆ ತಳುಕು ಹಾಕುವ ಅಗತ್ಯವಿಲ್ಲ. ಆದರೂ ನೆನಪಿಗೆ ಬರುತ್ತಿದೆ. ದೊಡ್ಡ ಐಟಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ನಿರ್ವಹಿಸುತ್ತಿದ್ದ ಕಾಲ. ಆರು ವಾರದ ಸಲುವಾಗಿ ಇಂಗ್ಲೆಂಡಿನ ಬರ್ಮಿಂಗ್ಹಮ್ ಆಫೀಸಿಗೆ ಹೋಗಿದ್ದೆ, ನವೆಂಬರ್ ತಿಂಗಳಿನಿಂದ ಡಿಸೆಂಬರ್‌ವರೆಗೆ. ವರ್ಷಾಂತ್ಯ ಬಂತೆಂದರೆ ಅಲ್ಲಿನವರಿಗೆ ಮೋಜಿನ ಸಮಯ. ಆಫೀಸಿನಲ್ಲಿ ಸೀಕ್ರೆಟ್ ಸ್ಯಾಂಟಾ ಗಿಫ್ಟ್ ಎಕ್ಸ್‌ಚೇಂಜ್ ಸಂಭ್ರಮ ನಡೆದಿತ್ತು. ಆಫೀಸಿನ ಮೂಲೆಯಲ್ಲಿ ಸಿಂಗರಿಸಿಕೊಂಡು ನಿಂತಿದ್ದ ಕ್ರಿಸ್ಮಸ್ ಟ್ರೀಯ ಬುಡದಲ್ಲಿ, ಒಂದು ದಿನ ಮುಂಚಿತವಾಗಿ ಎಲ್ಲರೂ ಉಡುಗೊರೆಗಳನ್ನು ತಂದಿಡಬೇಕು. ಕ್ರಿಸ್ಮಸ್ ಈವ್ ಆದ ಡಿಸೆಂಬರ್ ಇಪ್ಪತ್ನಾಲ್ಕರಿಂದ ಆಫೀಸಿಗೆ ರಜೆ. ಹಾಗಾಗಿ ಇಪ್ಪತ್ಮೂರರಂದು ಸಂಜೆ ತಮ್ಮ ತಮ್ಮ ಹೆಸರಿದ್ದ ಉಡುಗೊರೆಯನ್ನು ಪ್ರತಿಯೊಬ್ಬರೂ ಪಾಳಿಯ ಪ್ರಕಾರ ಎಲ್ಲರೆದುರು ತೆರೆದು ತೋರಿಸಬೇಕು. ವಿಚಿತ್ರ ಸ್ಲೋಗನ್ನುಗಳಿದ್ದ ಜಂಪರ್, ಪೈರೆಟ್ ಐಪ್ಯಾಚ್, ಬೆತ್ತಲೆ ಜೋಡಿಯಿದ್ದ ಕರ್ಟನ್ ಹೀಗೆ ಇನ್ನೂ ಕೆಲವು ಉಡುಗೊರೆಗಳನ್ನು ಸಹೋದ್ಯೋಗಿಗಳು ತೆರೆದಾದ ಮೇಲೆ ನನ್ನ ಸರದಿ ಬಂತು. ನನ್ನ ಹೆಸರು ಯಾರಿಗೆ ಬಂದಿತ್ತು ಗೊತ್ತಿಲ್ಲ... ನಾನು ನಿಧಾನಕ್ಕೆ ಗಿಫ್ಟ್ ಪೇಪರನ್ನು ಬಿಚ್ಚಿ ಪೊಟ್ಟಣವನ್ನು ತೆಗೆದೆ. ಮೆತ್ತಮೆತ್ತಗಿನ ಅನುಭವವಾದಂತಾಯ್ತು. ಕೊನೆಯ ಪದರವನ್ನೂ ಬಿಡಿಸಿದೆ. ನನ್ನ ಮಧ್ಯಮಗಾತ್ರದ ಕೈಯಿಂದ ಹೊರ ತುಳುಕುವಷ್ಟು ದೊಡ್ಡ ಸ್ತನ! ಆರ್ಟಿಫೀಶಿಯಲ್ ಬ್ರೆಸ್ಟ್. ಹೂಬೇಹೂಬ್ ನಿಜವಾದ ಮೊಲೆಯಂತೆಯೇ ಇದೆ. ನನ್ನ ಮುಖವೆಲ್ಲ ಕೆಂಪಡರಿತು. ಸಹೋದ್ಯೋಗಿಗಳೆಲ್ಲ ‘ಹೋ’ ಎಂದು ಕಿರುಚಿ ಕಿಚಾಯಿಸಿದರು. ನಾಚಿಕೆಯೋ, ಕಲ್ಚರಲ್ ಆಘಾತವೋ ಕೆಲವು ನಿಮಿಷಗಳಷ್ಟು ಕಾಲ ಮಾತೇ ಆಡಲಿಲ್ಲ ನಾನು. ನನ್ನ ಸೀಕ್ರೆಟ್ ಸ್ಯಾಂಟಾ ಉಡುಗೊರೆಯನ್ನು ಯಾರೂ ನೋಡೇ ಇಲ್ಲವೇನೋ ಎಂಬಂತೆ ಕದ್ದು ಲ್ಯಾಪ್‍ಟಾಪ್ ಬ್ಯಾಗಿನೊಳಗೆ ಸೇರಿಸಿದೆ. ಮೊದಲೇ ನಿಗದಿಯಾಗಿದ್ದಂತೆ ಮರುದಿನ ಭಾರತಕ್ಕೆ ಹೊರಟುಬಂದೆ. ಮನೆಗೆ ಬಂದ ಮಾರನೆಯ ರಾತ್ರಿ ಧ್ರುವ ಮಲಗಿದ ನಂತರ ಸನ್ಮುಕ್ತಾಳಿಗೆ ಒಮ್ಮೆ ಸ್ಯಾಂಟಾ ಕೊಟ್ಟ ಉಡುಗೊರೆ ತೋರಿಸಿ ಅದನ್ನು ಕವರ್ ಸಮೇತವಾಗಿ ನನ್ನ ವಾರ್ಡ್ರೋಬಿನ ಇನ್ನರ್ ಡ್ರಾದ ಮೂಲೆಯಲ್ಲಿ ತುರುಕಿದೆ. ಸನ್ಮುಕ್ತಾ ಅಂದು ಮನಸೋಯಿಚ್ಛೆ ನಕ್ಕಿದ್ದಳು.

ಎಷ್ಟು ಹೊತ್ತು ಹೊರಗೆ ಕೂತಿದ್ದೆನೋ. ಪಕ್ಕದ ಲೇಔಟಿನಲ್ಲಿ ಗಾರ್ಡ್ ಎಡೆಬಿಡದೆ ಹೊಡೆಯುತ್ತಿದ್ದ ಸೀಟಿ ನನ್ನನ್ನು ಮತ್ತೆ ಈ ಲೋಕಕ್ಕೆ ಕರೆತಂದಿತು. ಬೆಡ್ರೂಮಿಗೆ ಬಂದೆ. ಸನ್ಮುಕ್ತಾ ನಿದ್ದೆ ಮಾಡಿಲ್ಲ ಎಂಬುದು ನನಗೆ ಗೊತ್ತು. ಗಾಢ ನವಿಲು ಬಣ್ಣದ ಕಿಟಕಿಯ ಪರದೆಯ ಕಡೆ ಮುಖ ಮಾಡಿ ಮಲಗಿದವಳ ಮಗ್ಗುಲಿಗೆ ಬಂದು ಕೂತೆ. ‘ಸನ್ನೀ’ ಎಂದು ನಿಧಾನವಾಗಿ ಕರೆದೆ. ಹಣೆಯ ಮೇಲೆ ಬೆರಳಾಡಿಸಿದೆ. ಇಡೀ ದೇಹವನ್ನು ಜರುಗಿಸಿ ಜಾಗ ಮಾಡಿದವಳೇ ಕಾಲರ್ ಹಿಡಿದು ಜಗ್ಗಿ ನನ್ನನ್ನೂ ತನ್ನ ಪಕ್ಕ ಒರಗಿಸಿಕೊಂಡಳು.
“ಸನ್ನೀ, ನಿನ್ನ ಆಪರೇಶನ್ ಆಗಿ ಹದಿನೆಂಟು ತಿಂಗಳಾಯ್ತು. ಅಷ್ಟೊಂದು ತಿಂಗಳು ಆಸ್ಪತ್ರೆಗೆ ಟೆಸ್ಟ್‌ಗಳಿಗೆ ಹೋಗಿದ್ದು, ಪ್ರತೀ ರಿಪೋರ್ಟ್ ಓದುವ ಮೊದಲೂ ಕೈಕಾಲು ತಣ್ಣಗಾಗಿದ್ದು ಎಲ್ಲವೂ ಮರೆತೆಯಾ? ಈಗಲೂ ತುಂಬ ಸುಂದರಿ ನೀನು. ನನಗೆ ಅಪ್ಸರೆಯೇ. ಧ್ರುವನಿಗಂತೂ ದೇವತೆ ನೀನು. ದ್ಯಾಟ್ಸ್ ವಾಟ್ ಹೀ ಸೇಸ್ ರೈಟ್? ಈ ಎರಡು ವಾರ ನಮ್ಮ ಜೀವನದಲ್ಲಿ ಇರಲೇಯಿಲ್ಲ ಎಂದುಕೊಂಡು ಸುಮ್ಮನಾಗಿಬಿಡೋಣ”

“ಐ ಹ್ಯಾವ್ ಕ್ಲೋಸ್ಡ್ ದಿಸ್ ಸಬ್ಜೆಕ್ಟ್. ಸರ್ಜರಿ ಶೆಡ್ಯೂಲ್ ಆಗಿದೆ. ನನ್ನ ಸರ್ಜನ್ನಿನ ನಂಬರನ್ನ ಆಗಲೇ ಶೇರ್ ಮಾಡಿದ್ದೇನೆ. ಒಮ್ಮೆ ನೀನೂ ಮಾತಾಡಿ ನೋಡು” ಅವಳದ್ದೂ ಹಠ.
“ಇಷ್ಟು ಮುಂದುವರೆದ ಮೇಲೆ ಇನ್ನೇನಿದೆ?” ಅಹಂಅನ್ನು ಹತ್ತಿಕ್ಕುವ ಸರ್ವಪ್ರಯತ್ನ ನನ್ನಿಂದ ಜಾರಿಯಲ್ಲಿತ್ತು.
“ಹೊರಗಿನ ಗಾಳಿ ನಿನ್ನ ತಲೆಯನ್ನ ಹಗುರಾಗಿಸಿತು ಎಂದು ಭಾವಿಸಿ ಮಾತಾಡುವ ಎಂದೆ” ಪಟ್ಟು ಬಿಡಲೊಲ್ಲಳು.
“ಯಾಕೆ ಸನ್ನೀ? ಮರೆತೆಯಾ ನಮ್ಮ ಮಾತುಕತೆ... ಬರೀ ಏರುಗತಿಯೇ ಆದರೆ ನಮ್ಮ ಬೇರನ್ನ ಮರೆಯುತ್ತೇವೆಂದು, ಬೇರಿಗೆ ಹುಳಹಿಡಿದು ಬದುಕಿನ ಮರ ಬೀಳುತ್ತದೆಂದು ಅಲ್ಲಲ್ಲಿ ಪಾಸ್ ತೆಗೆದುಕೊಳ್ಳುತ್ತೇವಲ್ಲ? ಅಲ್ಲವ..? ನೀನು ತಿಳಿಹೇಳು ನನಗೆ. ಇಷ್ಟೂ ವರ್ಷ ಕಾಲ ಇದೇ ಅಲ್ಲವೇ ನಾವು ಮಾಡಿದ್ದು?”
“ಅಬಾ, ಎಷ್ಟಪ್ಪ ಮಾತು! ಈ ಬಾರಿ ನಿಂಗೆ ತಿಳಿಹೇಳುವ ವಿವೇಕ ನನ್ನಲ್ಲಿಲ್ಲ” ಅವಳು ಮಾತಾಡಿದ ನಂತರ ವಿಷಾದ ತುಂಬಿತು ರೂಮನ್ನ.
ಪ್ರಯತ್ನಪೂರ್ವಕವಾಗಿ ಕೊರಳ ಇಳಿಜಾರ ನೇವರಿಸಹೋದೆ. ಸಟ್ಟನೆ ಕೈ ತಳ್ಳಿದಳು.
“ಇನ್‍ಟ್ಯಾನ್ಜಿಬಿಲಿಟಿ ಆಫ್ ದಿ ಫೀಲಿಂಗ್ಸ್... ರಿಮೆಂಬರ್? ಹಾಗೇ ಇರಲಿ ಬಿಡು ಅಮ್ಮೂ... ಭಾವನೆಗಳ ಬಂಧವೂ ಬೇಡ”
“ಬದುಕನ್ನ ಬಂದಹಾಗೇ ಅಪ್ಪಿಕೊಂಡಾಗಿದೆ ಸನ್ನೀ, ಕಾಣದ ಇನ್ನೊಂದು ತಿರುವು ಬೇಡ” ಕೊನೆಯ ಪ್ರಯತ್ನವೆಂಬಂತೆ ಹೇಳಿದೆ.
“ನಾನು ದಿನವೂ ಅರಳಲು ಪ್ರಯತ್ನಿಸಿ ನರಳುತ್ತಿರುವುದು ನಿಂಗೆ ಕಂಡಿಲ್ಲ ಎಂದಾದರೆ ನಿನಗೆ ಕಣ್ಣಿದ್ದೂ ಪ್ರಯೋಜನವೇನು...?” ನೇರ ಮಾತು ಅವಳದ್ದು.
“...”
“ವಾರ್ಡ್‌ರೋಬಿನ ಬಟ್ಟೆಗಳು ನನ್ನನ್ನು ಅಣಕಿಸುತ್ತವೆ ಕಣೋ... ಬೋರ್ಡ್‌ರೂಮಿನಲ್ಲಿ ಎಲ್ಲರೆದುರು ಫ್ರೀಜ್ ಆಗಿಬಿಡುತ್ತೀನಿ. ಇದಕ್ಕೆಲ್ಲ ಒಂದು ಫುಲ್‌ಸ್ಟಾಪ್ ಬೇಕಲ್ಲ.”
“ಐ ಥಾಟ್, ವಿ ಹ್ಯಾವ್ ಗಾನ್ ಪಾಸ್ಟ್ ಆಲ್ ದೀಸ್. ಗೋ ಫ್ಲ್ಯಾಟ್ ಫೋಟೋಶೂಟ್ ಬಗ್ಗೆ ಬೇರೆ ಮಾತಾಡಿದ್ದೆವಲ್ಲ...?” ನನಗೆ ಇನ್ನೂ ಇವಳನ್ನು ಇಲ್ಲೇ ತಡೆಹಿಡಿಯುವ ಹುಕಿ.
“ಸೋ ಕಾಲ್ಡ್ ಇನ್‌ಕ್ಲೂಸಿವ್‌ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ...? ಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್ಲಿವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟು ಬಾರಿ ಕಾಂಪ್ಲಿಮೆಂಟ್ ಕೊಟ್ಟಿಲ್ಲ ನೀನು!” ಕಳ್ಳನನ್ನು ಹಿಡಿದಂತೆ ಮಾತಾಡಿದಳು.

ಥತ್! ನನ್ನನ್ನ ಡೈಲೆಮಾದಲ್ಲಿ ಹಾಕುತ್ತಿದ್ದಾಳಲ್ಲ ಮತ್ತೆ ಇವಳು ಎನ್ನಿಸಿತು. ಮಾತುಗಳು ಇನ್ನಷ್ಟು ರಾಡಿ ಮಾಡುವ ಮೊದಲು ಬ್ರಶ್ ಮಾಡುವ ನೆಪಮಾಡಿ ಬಾತ್ರೂಮಿಗೆ ನಡೆದೆ. ಹಲ್ಲುಕಿರಿದಂತಾಗಿದ್ದ ಬ್ರಶ್ಶನ್ನು ಮೂಲೆಗೆ ರಪ್ಪನೆ ಎಸೆದೆ. ಅವಳಿಗೆ ಏಕಾಂತ ಬೇಕಿತ್ತೋ ನನಗೆ ಬೇಕಿತ್ತೋ ಗೊತ್ತಿಲ್ಲ, ಮಗನ ರೂಮಿಗೆ ಹೋಗಿ ಅವನ ಮಗ್ಗುಲಿನಲ್ಲಿ ಜಾಗ ಮಾಡಿ ಮಲಗಿದೆ.
ಬೆಳಗ್ಗೆ ಐದಕ್ಕೇ ಎಚ್ಚರವಾಯಿತು. ಊರಿಗೆ ಹೋಗಿ ಬರುವ ನಿರ್ಧಾರ ಮಾಡಿದೆ. ಐದು ಗಂಟೆಗಳ ನಾನ್‌ಸ್ಟಾಪ್ ಡ್ರೈವ್. ಎರಡು ದಿನಗಳ ‘ಓಓಓ’ ಸೆಟ್ಅಪ್ ಮಾಡಿ, ಆಫೀಸಿಗೆ ಬರಲಾಗುವುದಿಲ್ಲ ಎಂದು ಇಮೇಲ್ ಬರೆದು ‘ಸೆಂಡ್ ಆಲ್’ ಬಟನ್ನೊತ್ತಿದೆ. ಬೆಕ್ಕಿನ ಹೆಜ್ಜೆಯಿಟ್ಟು ರೂಮಿನೊಳಗೆ ಹೋಗಿ ವಾರ್ಡ್‌ರೋಬಿನ ಇನ್ನರ್ ಡ್ರಾ ತೆಗೆದು ಹತ್ತುವರ್ಷದಿಂದ ಮುಟ್ಟದೇ ಇದ್ದ ಸಿಕ್ರೇಟ್ ಸ್ಯಾಂಟಾ ಗಿಫ಼್ಟನ್ನು ಎತ್ತಿಟ್ಟುಕೊಂಡೆ.

‘ಸನ್ನೀ, ಅಮ್ಮನನ್ನು ನೋಡಿಬರುವೆ’ ಎಂದು ಮೆಸೇಜಿಸಿ ಕಾರು ಹತ್ತಿದೆ.
ದಣಪೆ ದಾಟಿ ಅಂಗಳಕ್ಕೆ ಬಂದಾಗ ಅಮ್ಮ ಕೊಟ್ಟಿಗೆಯಲ್ಲಿದ್ದಳು. “ಅರೇ...ಯಾರು ಬಂದರು ನೋಡು ಗಿರಿಜೆ” ಎನ್ನುತ್ತ ಅಂಗಳಕ್ಕೆ ಬಂದಳು ಅಮ್ಮ. ಗಿರಿಜೆ ಎಲ್ಲ ಗೊತ್ತಾದವಳಂತೆ ಅಂಗಳದತ್ತ ತಿರುಗಿ ಅಂಬಾ ಅಂದಿತು. ಆಗಲೇ ಹೊಳೆದಿದ್ದು ಊರಿಗೆ ಬಂದು ಆರು ತಿಂಗಳಾಗಿದೆ ಎಂದು. ಅರವತ್ತು ಸೀಮೆಯಲ್ಲರಸಿದ ನೆಮ್ಮದಿ ಅವಿತಿದ್ದು ಮಾತ್ರ ಅಮ್ಮನ ಮಡಿಲಲ್ಲಿ ಅನ್ನುವ ಮಾತು ಮನಸ್ಸಿನಲ್ಲಿ ಹೊಳೆದು ತುಟಿಗಳು ಅಗಲವಾದವು. ಒಳ್ಳೆಯ ಎತ್ತರದ ಅಮ್ಮ ಕೆಂಪು ಸೀರೆ, ಕಪ್ಪು ಪೋಲಕದಲ್ಲಿ ಎಂದಿಗಿಂತ ಚೆಂದ ಕಂಡಳು.
ನಾ ಕಂಡಷ್ಟು ದಿನವೂ ಅಮ್ಮನ ಮೇಲೆ ಕೆಸಕ್ಕನೆ ಹಚಗುಟ್ಟುತ್ತಿದ್ದ ಅಪ್ಪ ಅರವತ್ತಕ್ಕೆ ತೀರಿಕೊಂಡಿದ್ದ.

ಬರೀ ಒಳ್ಳೆಯತನ ಮಾತ್ರ ಮನುಷ್ಯನಲ್ಲಿರಲು ಸಾಧ್ಯವೇ? ಎಂದು ಪ್ರಶ್ನಿಸಿಕೊಂಡ ಅಮ್ಮ ಎಲ್ಲವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡಂತಿದ್ದಳು. ಪರಿಸ್ಥಿತಿ ಯಾವುದೇ ಇರಲಿ, ಜೊತೆಯಿರುವ ಜೀವಗಳ ಅನುತನು ನೋಡುವುದು ಹೇಗೆಂದು ಅಮ್ಮ ಮಾತನಾಡದೇ ಕಲಿಸಿಕೊಟ್ಟಿದ್ದಳು.
ಅಪ್ಪ ಹೋದ ಮೇಲೆ ಕೊಟ್ಟಿಗೆ, ಮನೆ ಸುತ್ತಲ ಜಮೀನು, ಕಾರ್ಯಕಟ್ಟಲೆ, ಆಗೀಗ ನಮ್ಮೊಡನೆ ವಿಡಿಯೋ ಕಾಲ್ಗಳು ಎಂದುಕೊಂಡು ಆರಾಮವಾಗಿದ್ದಳು. ಮೊದಲು ಕಳೆದ ಕಷ್ಟದ ದಿನಗಳ ಕನಸು ಬಿದ್ದು ನಿದ್ದೆ ಕೆಡಿಸದಿರಲಿ ಎಂದು ದಿನವೂ ಅರ್ಧ ನಿದ್ದೆಗುಳಿಗೆ ನುಂಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ.
ವರ್ಷಕ್ಕೊಮ್ಮೆ ವಾರದ ಮಟ್ಟಿಗೆ ನಮ್ಮೊಟ್ಟಿಗೆ ಬಂದಿದ್ದು ಮೊಮ್ಮಗನಿಗೆ ಅಚ್ಚೆ ಮಾಡುತ್ತಿದ್ದಳು. ಅದರಾಚೆಗೆ ಅವಳೂ ಏನೂ ನಿರೀಕ್ಷಿಸುತ್ತಿರಲಿಲ್ಲ, ನಾವೂ ಅವಳನ್ನು ಪರೀಕ್ಷೆಗೊಡ್ಡುತ್ತಿರಲಿಲ್ಲ.

ಒಂದೊಳ್ಳೆಯ ಸ್ನಾನ ಮಾಡಿ ಅಮ್ಮನ ಅಕ್ಕರಾಸ್ಥೆಯ ಜಮೀನಿನಲ್ಲಿ ತಿರುಗಾಡಿದೆ. ತಿಳಿಸಾರನ್ನು ಲೋಟದಲ್ಲಿ ಸೊರಸೊರ ಶಬ್ದಮಾಡಿ ಕುಡಿದೆ. ಗಾಡ್ರೆಜ್ ಬೀರುವಿನ ಬಾಗಿಲನ್ನು ಸಶಬ್ದವಾಗಿ ತೆಗೆದು ಅಮ್ಮ ಜೋಡಿಸಿಟ್ಟುಕೊಂಡ ಸೀರೆಗಳ ಮೇಲೆ ಪ್ರೀತಿಯಿಂದ ಕೈಯಾಡಿಸಿದೆ. ಹಿತ್ತಿಲ ಬಾಗಿಲಲ್ಲಿದ್ದ ಕೈತೊಳೆವ ಸಿಂಕಿನ ಮೇಲ್ಭಾಗದ ಕನ್ನಡಿ ಪಳಪಳ ಹೊಳೆಯುತ್ತಿರುವುದ ನೋಡಿ ಬೆರಗಾದೆ. ಮೊದಲು ಯಾವತ್ತೂ ಈ ಕನ್ನಡಿಯ ಹೊಳಪು ನನ್ನ ಕಣ್ಣಿಗೆ ಬೀಳದ್ದಕ್ಕೆ ಬೇಸರಪಟ್ಟೆ.

‘ನಾಳೆ ಬೆಳಗ್ಗೆ ಒತ್ತು ಶ್ಯಾವಿಗೆ ಮಾಡಲಾ’ ಎಂದು ಕೇಳಿದ ಅಮ್ಮ ನನ್ನ ಉತ್ತರವನ್ನು ಮೊದಲೇ ಊಹಿಸಿದವಳಂತೆ ಎದ್ದು ದೇವರಮನೆಯ ಪಕ್ಕದ ಪಡಸಾಲೆಯಲ್ಲಿ ಮಲಗಿದಳು. ಜಗುಲಿಯಲ್ಲಿ ಟಿ.ವಿ ಚ್ಯಾನೆಲ್ ಬದಲಾಯಿಸುತ್ತ ಬಿದ್ದುಕೊಂಡೇ ಇದ್ದ ನನ್ನ ತಲೆಯಲ್ಲಿ ನೂರು ಆಲೋಚನೆಗಳು ಬಟ್ಟೇಗುಣಿ ತಿರುಗುತ್ತಿದ್ದವು. ಕಟಾಂಜನದ ಮಧ್ಯೆ ಮಾಲೆ ಹಾಕಿ ಕೂತ ಅಪ್ಪನ ಫೋಟೋದ ಮೇಲೆ ಬೇಡವೆಂದರೂ ಕಣ್ಣು ಹೊರಳುತ್ತಿತ್ತು. ನಾನು ಏನೋ ನಿರ್ಧರಿಸಿದಂತೆ ಎದ್ದೆ. ಗಡಿಯಾರ ಹನ್ನೊಂದೂವರೆ ತೋರಿಸುತ್ತಿತ್ತು. ಬ್ಯಾಗಿನಲ್ಲಿದ್ದ ಸೀಕ್ರೆಟ್ ಸ್ಯಾಂಟಾ ಗಿಫ್ಟನ್ನು ಕವರಿನ ಸಮೇತ ತೆಗೆದು ಕೊಟ್ಟಿಗೆಯ ಪಕ್ಕ ಬಂದೆ. ಕೈಗೆ ಸಿಕ್ಕ ಕೋಲಿನ ಸಹಾಯದಿಂದ ಮಣ್ಣು ಕಲ್ಲು ಏನನ್ನೂ ಲೆಕ್ಕಿಸದೇ ಸಣ್ಣದೊಂದು ಗುದ್ದ ತೋಡಿ ಗಿಫ್ಟನ್ನು ಅದರೊಳಗಿಟ್ಟೆ. ಸುತ್ತಲಿದ್ದ ಮಣ್ಣನ್ನು ಗುದ್ದವೇ ಕಾಣದಂತೆ ಮುಚ್ಚಿದೆ. ಎದ್ದು ನಿಂತೆ. ಮೈ ಇದ್ದಕ್ಕಿದ್ದಂತೆ ಹಗುರಾದಂತಾಯಿತು. ಒನ್ನಮೂನೆ ಸ್ಖಲನದ ಸುಖ!
ಮತ್ತೆ ಜಗುಲಿಗೆ ಬಂದು ಹಾಸಿಗೆಯ ಪಕ್ಕದಲ್ಲಿದ್ದ ಮೊಬೈಲನ್ನು ಎತ್ತಿಕೊಂಡು ಸನ್ಮುಕ್ತಾಳ ಸರ್ಜನ್ನರ ನಂಬರನ್ನು ಸೇವ್ ಮಾಡಿಕೊಂಡೆ. ಮೆಸೇಜ್ ಟೈಪ್ ಮಾಡತೊಡಗಿದೆ... ‘ಡಾಕ್, ದಿಸ್ ಇಸ್ ಸನ್ಮುಕ್ತಾಸ್ ಹಸ್ಬಂಡ್ ಅಮಿತ್. ಐ ವಿಲ್ ಬೀ ಇನ್ಫ಼್ರಂಟ್ ಆಫ್ ದ ಥಿಯೇಟರ್ ಡ್ಯೂರಿಂಗ್ ದ ಸರ್ಜರಿ ಟುಮೊರೋ.’



photo credits- AI