ಮಾರ್ಬಲ್ ಆರ್ಚ್ ಕೇವ್ಸ್

ಅಮಿತಾ ರವಿಕಿರಣ್ 

 ಮನುಷ್ಯನ ತಣಿಯದ ಕುತೂಹಲ ಅದೆಷ್ಟೋ ಆವಿಷ್ಕಾರಗಳಿಗೆ ಕಾರಣ ವಾಗಿದೆ, ಮಾನವನ ಪ್ರತಿ ಹೊಸ ಹುಡುಕಾಟದ ಅಂತ್ಯದಲ್ಲಿ ನಿಸರ್ಗ ಮತ್ತೊಂದು ಒಗಟನ್ನು ಬಿಸಾಕಿ ನಗುತ್ತ ನಿಲ್ಲುತ್ತದೆ. ಮಾನವ ಮತ್ತೆ ಹುಡುಕುತ್ತಾನೆ ಹುಡುಕುತ್ತಲೇ ಇರುತ್ತಾನೆ.  ನಿಸರ್ಗದ ಚಲುವು ಮತ್ತು ಮಾನವನ ಕೌಶಲ್ಯ ಎರಡೂ ಜೊತೆಗೆ ನಿಂತು ಮಾತನಾಡುವುದು ಅಪರೂಪಕ್ಕೆ ಕಾಣಸಿಗುವ ದೃಶ್ಯ. ಅಂಥದ್ದೊಂದ್ದು ನಿಸರ್ಗದ ವಿಸ್ಮಯ ಮತ್ತು ಮಾನವನು ಅತಿ ಜತನದಿಂದ ಅದರ ಮೂಲರೂಪಕ್ಕೆ ಧಕ್ಕೆ ಬಾರದಂತೆ ಕಾದುಕೊಂಡಿರುವ ಅಪರೂಪದ ಸ್ಥಳವೇ  ನಾರ್ದರ್ನ್ ಐರ್ಲ್ಯಾಂಡಿನಲ್ಲಿರುವ 'ಮಾರ್ಬಲ್ ಆರ್ಚ್ ಕೇವ್ಸ್'.  

 ಭೂಮಿಯ ಮೇಲ್ಪದರಿನಲ್ಲಿ ರೂಪುಕೊಳ್ಳುವ ಅನೇಕ ರೀತಿಯ ಗುಹೆಗಳನ್ನು ತಜ್ಞರು ಗುರುತಿಸುತ್ತಾರೆ ಮತ್ತು ಅವುಗಳು ರೂಪುಗೊಂಡಿರುವ ರೀತಿ, ವಿನ್ಯಾಸ, ಲಕ್ಷಣಗಳನ್ನ ಗಮನಿಸಿ ಈ ಗುಹೆಗಳನ್ನು ಈ ೫ ಪ್ರಕಾರವಾಗಿ  ವಿಂಗಡಿಸುತ್ತಾರೆ ಅವುಗಳಲ್ಲಿ ಕೆಲವು ಇಲ್ಲಿವೆ .
೧. ಸೊಲ್ಯುಶನ್ ಕೇವ್ಸ್(Solution caves)
ಸುಣ್ಣದ ಕಲ್ಲು ಮತ್ತು ನೀರಿನ ನಿರಂತರ ಸಹಚರ್ಯ ರೂಪಿಸುವ ಗುಹೆಗಳು. 

೨.ವೋಲ್ಕಾ ಕೇವ್ಸ್( volcanic caves) 
ಭೂಮಿಯೊಳಗಿಂದ ಉಕ್ಕುವ ಲಾವಾ , ಜ್ವಾಲಾಮುಖಿಗಳು ತಣಿದು ಹೋದಮೇಲೆ ಉಂಟಾದ ಗುಹೆಗಳು. ಹವಾಯಿಯನ್ ದ್ವೀಪದಲ್ಲಿ ಇರುವ Kazumara caves ಸುಮಾರು ೪೬ಮೈಲು ಗಳಷ್ಟು ಉದ್ದದ ಗುಹೆ ಆಗಿದ್ದು  ಜಗತ್ತಿನಲ್ಲಿ ಅತ್ಯಂತ ದೊಡ್ಡ ಜ್ವಾಲಾಮುಖಿ ಗುಹೆ ಎಂದು ಹೆಸರಾಗಿದೆ.   

೩.ತಲಸ್ ಕೇವ್ಸ್ (Talus caves)
ಎತ್ತರ ಪರ್ವತ ಪ್ರದೇಶದಿಂದ ನೈಸರ್ಗಿಕ ವೈಪರಿತ್ಯ ಗಳಿಂದ  ಕಲ್ಲುಗಳು ಉರುಳಿ ಪರ್ವತದ ಕೆಳಭಾಗದಲ್ಲಿ ಉಂಟುಮಾಡುವ ಗುಹೆಗಳು.

೪.ಸೀ ಕೇವ್ಸ್ (Sea caves) 
ಸಮುದ್ರದ ನೀರು ಮತ್ತು ದಡ ದಲ್ಲಿರುವ ಕಲ್ಲುಬಂಡೆಗಳ ಘರ್ಷಣೆ ಮತ್ತು ಮರಳು ತೆರೆಯೊಂದಿಗೆ ಸ್ಥಳಾಂತರ ಗೊಳ್ಳುವಾಗ ಉಂಟಾಗುವ ಗುಹೆಗಳು. ಇಂಥಹ ಹಲವು ಗುಹೆಗಳನ್ನು ನಾವು ಯುಕೆ, ಫ್ರಾನ್ಸ, ಅಮೇರಿಕ ಮತ್ತು  ಹವಾಯಿಯನ್ ದ್ವೀಪಗಳಲ್ಲಿ ನೋಡಬಹುದು. 

೫ ಗ್ಲೇಸಿಯರ್  ಕೇವ್ಸ್ (Glacier caves)
ಗ್ಲೇಸಿಯರ್ ಹಿಮಬಂಡೆ ಗಳಿಂದ ಉಂಟಾಗುವ ಗುಹೆ , ಕಾಣಲು ಮಂಜಿನ ಮಹಲಿನಂತೆ ಕಂಡರೂ ವಾಸ್ತವದಲ್ಲಿ ಇದು ಸಶಕ್ತ ಗುಹೆಯಾಗಿರುತ್ತದೆ . ಇಂಥ ಗ್ಲೇಸಿಯರ್ ಹಿಮದ ನಡುವೆಯೇ ೪೦೦ ವರ್ಷಗಳ ಕಾಲ ನಮ್ಮ ಕೇದಾರನಾಥ್ ದೇವಸ್ತಾನ ಧ್ಯಾನ ಮಾಡುತಿತ್ತು  ಎಂಬುದು ತಜ್ಞರ ಅಂಬೋಣ. ಗ್ಲೇಸಿಯರ್ ಗುಹೆಗಳಿಂದಾಗಿ  ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಇನ್ನೊಂದು ದೇಶ Iceland 

ಮಾರ್ಬಲ್ ಆರ್ಚ್ ಕೇವ್ಸ್
ಉತ್ತರ ಐರ್ಲೆಂಡಿನ ಫರ್ಮಾನಾ ಕೌಂಟಿ ವ್ಯಾಪ್ತಿಯಲ್ಲಿ ಬರುವ ಮಾರ್ಬಲ್ ಆರ್ಚ್ ಕೇವ ಸಂಶೋಧಿಸಿದ್ದು ಫ್ರಾನ್ಸ್ ನ ಸ್ಪೆಲಿಯೋಲೋಜಿಸ್ಟ್ (speleology-study of caves and other karts) ಎಡ್ವರ್ಡ್ ಅಲ್ಫ್ರೆಡ್ ಮಾರ್ಟೆಲ್, ೧೮೯೫ರಲ್ಲಿ ಈತ ಮತ್ತು ಡಬ್ಲಿನ್ ವಾಸಿ ನಿಸರ್ಗ ತಜ್ಞ ಜೆಮೀ ಒಂದು ಕ್ಯಾನ್ವಾಸ್ ಬೋಟಿನಲ್ಲಿ ಆರಂಭ ದ್ವಾರದಿಂದ ಸುಮಾರು ೩೦೦ ಮೀಟರ್ ದೂರದ ಗುಹೆಯ ಮಾರ್ಗ ಕ್ರಮಿಸಿ ನಕ್ಷೆ ಮಾಡಿ ಇಟ್ಟರು. ನಂತರ ಕ್ರಮವಾಗಿ ಹಲವು ಆಸಕ್ತರು ಸೇರಿ ಸುಮಾರು ೪. ೫ ಕಿಲೋಮೀಟರ್ ಗಳಷ್ಟು ಉದ್ದದ ಈ ಗುಹೆಯನ್ನು ಎಲ್ಲರ ಗಮನಕ್ಕೆ ತಂದರು.  

ಮಾರ್ಬಲ್ ಆರ್ಚ್ ಕೇವ ಸುಣ್ಣದ ಕಲ್ಲುಗಳಿಂದ ಉಂಟಾದ ಗುಹೆ . ಈ ಗುಹೆಯ ಒಳಗೆ ಕ್ಲಾಡಾ ಮತ್ತು  ಒವೆನಬ್ರೀನ್  ಹೆಸರಿನ ನದಿಗಳ ಸಂಗಮವಾಗುತ್ತದೆ, ಮತ್ತು ಇಲ್ಲಿ ಉಂಟಾಗಿರುವ ಭೌಗೊಲಿಕ  ಬದಲಾವಣೆಗಳು ,ಕಲ್ಲು ಗಳ ಮೇಲಿನ ವಿನ್ಯಾಸಗಳು ಮಿಲಿಯನ  ವರ್ಷಗಳ ಕಾಲ ನದಿಗಳ ಏರಿಳಿತ ಮತ್ತು ಹರಿಯುವಿಕೆಯ ಪರಿಣಾಮಗಳೇ ಆಗಿವೆ. 

೨೦೦೮ರಲ್ಲಿ ಯುನೆಸ್ಕೋ  ಈ ಪ್ರದೇಶವನ್ನು 'ಗ್ಲೋಬಲ್ ಜಿಯೋ ಪಾರ್ಕ್' ಎಂದು ಘೋಷಿಸಿತು. ೧೯ನೇ  ಶತಮಾನದಿಂದಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಆಗಿದ್ದ ಈ ಸ್ಥಳ ೨೦೦೮ ರ ನಂತರ ಯೂರೋಪಿನ ಮುಖ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಬಂದಿತು.
ಐರ್ಲ್ಯಾಂಡ್ ಗೆ ಭೇಟಿ ಕೊಟ್ಟವರು ಇದನ್ನು ನೋಡದೆ ಮರಳಿದರೆ ಅವರ ಪ್ರವಾಸ ಅಪೂರ್ಣ ಎಂದೇ ಅರ್ಥ. 

ಸಾಂಪ್ರದಾಯಿಕ  ದ್ವಾರ ಹೊಕ್ಕಿದ ನಂತರ ೧೫೦ ಮೆಟ್ಟಿಲು ಮತ್ತು ಒಂದೂವರೆ ತಾಸಿನ ನಿರಂತರ ನಡಿಗೆ ,  ಗುಹೆಯೊಳಗೆ ಹರಿಯುವ ನದಿಯಲ್ಲಿ ೫ ನಿಮಿಷದ ದೋಣಿಯಾನ, ದೋಣಿಯಲ್ಲಿ ಕುಳಿತಾಗ ಕಲ್ಲಿನ ಕಮಾನುಗಳಿಂದ ಒಸರುವ ನೀರ ಒರತೆ , ಕಡಿದಾದ ಭಾಗದಲ್ಲಿ ನಡೆಯುತ್ತಿರುವಾಗ ಪಟ್ಟನೆ ಎದುರಾಗುವ ಬಂಡೆಗಳು. ಅದೇನೇನೋ ವಿನ್ಯಾಸಗಳು ಅಲ್ಲೇಲ್ಲೊ ಹಿಮ ತುಂಬಿ ಕೊಂಡಂತೆ , ಮತ್ತೊಂದೆಡೆ ಹೂಕೋಸು ಅರಳಿದಂತೆ, ಒಮ್ಮೆ ಆಕಳ ಕೆಚ್ಚಲು, ಮತ್ತೊಮ್ಮೆ ಪುಟ್ಟ ಕುಟೀರ, ಅದೋ ಆ ಕಲ್ಲು ಆಕಳ ಕಿವಿಯಂತಿದೆ ಅಂದು ಕೊಂಡು ಈಚೆ ತಿರುಗಿದರೆ ಭಯಂಕರ ರಾಕ್ಷಸ ಬಾಯಿ ತೆರೆದು ನಿಂತಂತೆ!  ಅದು ಭೂಮಿಯ ಒಳ ಪದರ ಅಮ್ಮನ ಮಡಿಲಿನಂತೆ ತಂಪು ತಂಪು. ನೆಲ ಕಾಣುವ ನೀರು ಹಿತ ನೀಡಿದರೆ ಕೆಲವೊಂದೆಡೆ  ಕಪ್ಪಗಿನ ಕಂದಕ ಭಯ ಹುಟ್ಟಿಸುತ್ತವೆ ಸಧ್ಯಕ್ಕೆ ಈ ಗುಹೆಯ ೧ ಭಾಗ ಮಾತ್ರ ಪ್ರವಾಸಿಗರು ನೋಡಬಹುದು ಉಳಿದ ೩ ಭಾಗದಲ್ಲಿ ನೀರು ತುಂಬಿಕೊಂಡಿದೆ. ಚಳಿಗಾಲದಲ್ಲಿ ಈ ಸ್ಥಳ ಪೂರ್ತಿಯಾಗಿ ಮುಚ್ಚಿರುತ್ತದೆ, ಜೊತೆಗೆ ತಾಪಮಾನ ಮತ್ತು ಏರಿಳಿತದ ದಾರಿಯ ಕಾರಣದಿಂದ ಉಸಿರಾಟದ ತೊಂದರೆ ಇರುವವರಿಗೆ ಈ ಗುಹೆಯಾ ಓಡಾಟ ಅಷ್ಟು ಸೂಕ್ತವಲ್ಲ ಎನ್ನುವುದು ಟಿಕೆಟ್ ಕೌಂಟರಿನಲ್ಲಿ ಕೊಟ್ಟ ಸೂಚನೆಯಾಗಿತ್ತು. ಪುಟ್ಟ ಮಕ್ಕಳನ್ನು ಎತ್ತಿಕೊಂಡಾಗಲಿ, ಪ್ರಾಮ್ ಮೇಲೆ ಆಗಲಿ ಈ ಗುಹೆಯಲ್ಲಿ ಓಡಾಡುವುದು ಕಷ್ಟ. 

ಮೊದಲ ಸಲ ನಾವು ಸ್ನೇಹಿತರೊಂದಿಗೆ ಇಲ್ಲಿಗೆ ಹೋದಾಗ, ನಗುವೆಂದರೇನು ಎಂಬುದರ ಪರಿಚಯವೇ ಇಲ್ಲದ ನಮ್ಮ ಗೈಡ್ ನಮ್ಮ ಟ್ರಿಪ್ಪಿನ ಮತ್ತೊಂದು ಆಕರ್ಷಣೆ ಆಗಿದ್ದ. ಭತ್ತ ಹಾಕಿದರೆ ಅರಳಾಗಿ ಬರುವಷ್ಟು ಸಿಡುಕನಾಗಿದ್ದ.  ಪ್ರಯಾಣದಲ್ಲಿ ಮೆಟ್ಟಿಲುಗಳನ್ನು ಕಂಡ ಕೂಡಲೇ ನನಗೆ ಆಗುತ್ತಿದ್ದ ತಳಮಳ !! ಒಂದೂವರೆ ತಾಸಿನ ಈ ಪಯಣದ ನಂತರ ಹಸಿವಿನಿಂದ ಹೈರಾಣಾಗಿ ಬಂದಾಗ ಮನೆಯಿಂದಲೇ ಮಾಡಿ ತಂದ ಬಿಸಿಬೇಳೆ ಭಾತ್ ಮತ್ತು ಸ್ಯಾಂಡ್ವಿಚ್ ನಮ್ಮ ಪಾಲಿಗೆ ಎಂದಿಗಿಂತ ರುಚಿಯಾಗಿದ್ದವು. ಟಿಕೆಟ್ ಕೌಂಟರ್ ಮತ್ತು ಸ್ವಾಗತ ಕಚೇರಿಯ ಜೊತೆಗೆ ಇಲ್ಲೊಂದು ಕೆಫೆಯೂ ಇದೆ. ಅವರು ಮಾಡಿಕೊಡುವ   
ವೆನಿಲ್ಲಾ ಐಸ್ಕ್ರೀಂ ಮತ್ತು ಬಿಸಿ ಬಿಸಿ ಬ್ರೌನಿ ಸವಿಯದಿದ್ದರೆ  ನಮ್ಮ ಪ್ರವಾಸದಲ್ಲಿ ಏನೋ ತಪ್ಪಿ ಹೋದಂತೆ ಅನಿಸುತ್ತದೆ. ಇವನ್ನು ಹೇಳಲೇಬೇಕು ಎನಿಸಿತು ಏಕೆಂದರೆ ಇದೆಲ್ಲ ಆಗಿದ್ದು ನಮ್ಮ ಈ ಗುಹೆಗಳಿಗೆ ಮೊದಲಬಾರಿ ಭೇಟಿ ಕೊಟ್ಟಾಗ. ಆ ನಂತರ ಅದೆಷ್ಟು ಸಲ ಹೋಗಿ ಬಂದಿದ್ದರೂ ಮತ್ತೆ ಮತ್ತೆ ಹೋಗಿ ಬರಬೇಕು ಎನ್ನುವಂತಹ ಜಾಗ ಇದು. 

ಮಾರ್ಬಲ್ ಆರ್ಚ್ ಕೇವ್ಸ್ ಬೆಲ್ಫಾಸ್ಟ್ ನಗರದಿಂದ ೯೧ಮೈಲಿ ದೂರದಲ್ಲಿದೆ. ಹತ್ತಿರದ Enniskillen, Florence court, ಮತ್ತು ಹಲವು ದ್ವೀಪಗಳನ್ನೂ, ಫರ್ಮಾನಾ ಊರಿನ ಹತ್ತಿರ ಇರುವ ಚಂದದ ಜಲಪಾತಗಳನ್ನೂ ನೋಡಬಹುದು. ಇಲ್ಲಿ ಅಕ್ಕ ಪಕ್ಕದ ಹಳ್ಳಿಗಳಲ್ಲಿ  ಒಳ್ಳೆಯ cottage ವಸತಿ ಸೌಲಭ್ಯ ಲಭ್ಯವಿದೆ. ನೀವು ಮೊದಲೇ ಈ ಗುಹೆಯ ಸ್ವಾಗತ ಕಚೇರಿಗೆ ಕರೆ ಮಾಡಿ opening hours ಬಗ್ಗೆ ಪಕ್ಕ ಮಾಹಿತಿ ಪಡೆದು ಹೋಗುವುದು ಒಳ್ಳೆಯದು. ಜೋರಾಗಿ ಮಳೆ ಗಾಳಿ ಇದ್ದ ಹೊತ್ತಲ್ಲಿ ಇದನ್ನು ಯಾವುದೇ ಮೂನ್ಸೂಚನೆ ಇಲ್ಲದೆಯೂ ಮುಚ್ಚಲಾಗುತ್ತದೆ. ಈ ನಿರಾಸೆ ನಮಗೂ ಒಮ್ಮೆ ಆಗಿದ್ದಕ್ಕೆ ಮೊದಲೇ ಪೂರ್ಣ ಮಾಹಿತಿ ತೆಗೆದುಕೊಂಡು ಹೋಗುವುದು ಒಳಿತು.   

ಅಲ್ಲಿ ನಾನು ಫೋಟೋ ಕ್ಲಿಕ್ಕಿಸಲು ಪರದಾಡಿದ್ದು ಮತ್ತೊಂದು ಕತೆ , ನನ್ನ ಕಣ್ಣಿಗೆ ಕಂಡಷ್ಟು ನನ್ನ ಕ್ಯಾಮರಾ ಕಣ್ಣಿಗೆ ಕಾಣಲಿಲ್ಲ. ಅದಕ್ಕೆ ಅಂತರ್ಜಾಲದಲ್ಲಿ ಸಿಕ್ಕ ಚಿತ್ರಗಳನ್ನೇ ಇಲ್ಲಿ ಹಾಕುತ್ತಿದ್ದೇನೆ. 
ನೀವು ಬೆಲ್ಫಾಸ್ಟ್ ಅಥವಾ ಐರ್ಲೆಂಡ್ ಗೆ ಭೇಟಿ ಕೊಟ್ಟರೆ ಮಾರ್ಬಲ್ ಆರ್ಚ್ ಕೇವ್ಸ್ ಗೆ ಮರೆಯದೆ ಭೇಟಿ ಕೊಡಿ. 
Photo credits: The Fermanagh Herald and Wikipedia 

ನಾಗಾಭರಣಾಯಣ

 

ಈ ವಾರ ನಿಮ್ಮ ಮುಂದಿದೆ ಕಳೆದ ಶನಿವಾರ ಹೆಸರಾಂತ ನಿರ್ದೇಶಕ, ರಂಗ ಕರ್ಮಿ ಟಿ. ಎಸ್. ನಾಗಾಭರಣರೊಡನೆ ಅನಿವಾಸಿಗಳು ನಡೆಸಿದ ಸಂವಾದದ ವರದಿ.

ನವೆಂಬರ್ ೨೬ರಂದು ಕನ್ನಡ ಬಳಗ (ಯು.ಕೆ) ಸ್ಟೋಕ್ ಆನ್ ಟ್ರೆಂಟ್ ನಗರದಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದು ಮುಖ್ಯ ಅತಿಥಿಗಳಾಗಿ ಹೆಸರಾಂತ ನಿರ್ದೇಶಕ, ರಂಗಕರ್ಮಿ ಶ್ರೀ. ಟಿ. ಎಸ್. ನಾಗಾಭರಣ ಕರ್ನಾಟಕದಿಂದ ಆಗಮಿಸಿದ್ದರು. ಅವರು ಬರುವ ವಿಚಾರ ನಮಗೆ  ಸಪ್ಟೆಂಬರ್ ತಿಂಗಳಲ್ಲೇ ತಿಳಿದಿತ್ತು. ಅದಕ್ಕನುಗುಣವಾಗಿ ಸಂಪ್ರದಾಯದಂತೆ ಅನಿವಾಸಿ ಹುಟ್ಟಿದಾಗಿನಿಂದ ನಡೆಸಿಕೊಂಡು ಬಂದಿರುವ ಗೋಷ್ಠಿಗೆ ನಾಗಾಭರಣರ ನಾಟಕ ಹಾಗೂ ಸಿನಿಮಾಗಳ ವಿಶ್ಲೇಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೆವು. ಇದರೊಡನೆ, ಅವುಗಳ ಬಗ್ಗೆ ಮಾತಾಡುವ ಸದಸ್ಯರಿಗೆ ನಾಗಾಭರಣರನ್ನು ಪ್ರಶ್ನಿಸುವ ಅವಕಾಶವನ್ನು ಕೊಡಲಾಯಿತು. 

ಅನಿವಾಸಿ ಕಾರ್ಯಕ್ರಮಕ್ಕೆ ಉತ್ತಮವಾದ ವಿಂಡ್ಸರ್ ಕೋಣೆ ಹಾಗು ಸೂಕ್ತವಾದ ಧ್ವನಿ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟವರು ಕನ್ನಡ ಬಳಗದ ಅಧ್ಯಕ್ಷರಾದ ಶ್ರೀಮತಿ ಸುಮನಾ ಗಿರೀಶ್. ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದವರು ಡಾ. ಲಕ್ಷ್ಮೀನಾರಾಯಣ ಗುಡೂರ್. ಆರು ಅನಿವಾಸಿಗಳು ತಮಗೆ ಬೇಕಾದ ಸಿನಿಮಾಗಳನ್ನು ಆರಿಸಿಕೊಂಡು, ವಿಶ್ಲೇಷಿಸಿದರು. ಪ್ರತಿಯೊಬ್ಬರಿಗೂ ಸರಿ ಸುಮಾರು ಹತ್ತು ನಿಮಿಷಗಳ ಕಾಲಾವಕಾಶವಿತ್ತು. ಮೊದಲ ಒಂದೆರಡು ನಿಮಿಷಗಳು ಸಿನಿಮಾ ಕಥೆಯ ವಿವರಣೆಗೆ ಮೀಸಲಿಡಲು ಸೂಚಿಸಲಾಗಿತ್ತು. ನಂತರದ ಎರಡು ನಿಮಿಷಗಳನ್ನು ಸಿನಿಮಾದ ತುಣುಕನ್ನು ತೋರಿಸಲು ಹಾಗು ಉಳಿದ ಸಮಯದಲ್ಲಿ ವಿಶ್ಲೇಷಣೆ ಹಾಗು ನಾಗಾಭರಣರೊಡನೆ ಆ ಸಿನಿಮಾ ಕುರಿತಾದ ಸಂವಾದಕ್ಕೆಂದು ಗುರುತಿಸಿಕೊಂಡಿದ್ದೆವು. ವಿಶ್ಲೇಷಕರಿಗೆ ಬೇಕಾದ ಸಿನಿಮಾ ತುಣುಕುಗಳನ್ನು ಮುತುವರ್ಜಿಯಿಂದ ತಯಾರಿಸಿ ಒದಗಿಸಿದವರು ಡಾ. ಶ್ರೀವತ್ಸ ದೇಸಾಯಿ.

ಅನಿವಾಸಿಗಳ ಆಯ್ಕೆ ಈ ಕೆಳಗಿನಂತಿದ್ದವು:

೧. ಡಾ. ಕೇಶವ ಕುಲಕರ್ಣಿ: ಅನ್ವೇಷಣೆ (ಬಿಡುಗಡೆ: ೧೯೮೩)

೨. ಡಾ. ಜಿ.ಎಸ್. ಶಿವಪ್ರಸಾದ: ಅಲ್ಲಮ (ಬಿಡುಗಡೆ: ೨೦೧೭)

೩. ಡಾ. ರಶ್ಮಿ ಮಂಜುನಾಥ: ಚಿನ್ನಾರಿ ಮುತ್ತ (ಬಿಡುಗಡೆ: ೧೯೯೩) 

೪. ಡಾ. ರಾಮಶರಣ ಲಕ್ಷ್ಮೀನಾರಾಯಣ: ನಾಗಮಂಡಲ (ಬಿಡುಗಡೆ: ೧೯೯೭) 

೫. ಡಾ. ಶ್ರೀವತ್ಸ ದೇಸಾಯಿ: ಸಿಂಗಾರೆವ್ವ (ಬಿಡುಗಡೆ: ೨೦೦೩) 

೬. ಡಾ. ಲಕ್ಷ್ಮೀನಾರಾಯಣ ಗುಡೂರ್: ಮೈಸೂರು ಮಲ್ಲಿಗೆ (ಬಿಡುಗಡೆ: ೧೯೯೧) 

ಉತ್ತಮವಾದ ಪ್ರತಿ ಸಿಗದ ಕಾರಣ ಕೇಶವ ಕುಲಕರ್ಣಿಯವರು ಸಿನಿಮಾದ ತುಣುಕನ್ನು ತೋರಿಸದಿದ್ದರೂ, ಅವರ ತಮ್ಮ ಹೇಗೆ ಸಿನಿಮಾದ ಪ್ರಾರಂಭದಲ್ಲಿನ ದೃಶ್ಯವೊಂದರ ಬಳಿಕ ಹೆದರಿ ಪರದೆಗೆ ಬೆನ್ನು ಮಾಡಿ ಕುಳಿತಿದ್ದನೆಂಬುದನ್ನು ಕೇಳಿದವರಿಗೆ ಸಿನಿಮಾ ಟ್ರೇಲರ್ ನೋಡಿದ ಅನುಭವವಾಗಿರಬಹುದು. ಜನಮನದ ಗೀತೆಗಳನ್ನು ಆಧಾರಿಸಿ ನಿರ್ಮಿಸಿದ ಸಿನಿಮಾವಾಗಿದ್ದರಿಂದ ಗುಡೂರರು ಸಿನಿಮಾದ ಹಾಡುಗಳ ಸಂಗೀತವನ್ನು ಕತ್ತರಿಸಿ ಧ್ವನಿ ಕೊಲಾಜನ್ನು ಪ್ರಸ್ತುತ  ಪಡಿಸಿದರು. ಇಡೀ ಹಾಡನ್ನು ನಿರೀಕ್ಷಿಸುತ್ತಿದ್ದವರಿಗೆ, ಒಮ್ಮೆಲೇ ಇನ್ನೊಂದು ಹಾಡು ಶುರುವಾಗಿ ತಬ್ಬಿಬ್ಬಾಗಿದ್ದು (ನಾಗಾಭರಣರನ್ನೂ ಸೇರಿ) ಈ ಪ್ರಯೋಗದ ವೈಶಿಷ್ಠ್ಯ. 

ನಮ್ಮ ಕಾರ್ಯಕ್ರಮದ ವಿಶೇಷ ನಾಗಾಭರಣರೊಂದಿಗಿನ ಸಂವಾದ.  ಅವರ ಸಿನೆಮಾಗಳ ಬೆಳವಣಿಗೆಯ ಹಿಂದಿನ ಕುತೂಹಲಕಾರಿ ಕಥೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು, ಆಶ್ಚರ್ಯಚಕಿತರಾಗಿಸಿದವು. ‘ಅನ್ವೇಷಣೆ’ ನಾಗಾಭರಣರ ಎರಡನೇ ಸಿನೆಮಾ. ಅವರ ಗುರು ಗಿರೀಶ್ ಕಾರ್ನಾಡರು. ಅವರ ಸಲಹೆಯಂತೆ ಸ್ಮಿತಾ ಪಾಟೀಲರನ್ನು ನಾಯಕಿಯಾಗಿ ಆರಿಸಿದ್ದರು ನಾಗಾಭರಣ. ಅದಕ್ಕೆ ಎರಡು ಕಾರಣಗಳು: ಆಕೆ ಚಿತ್ರಕಥೆ ಇಷ್ಟ ಪಟ್ಟು ತಾನೇ ನಾಯಕಿಯಾಗಿ ನಟಿಸುತ್ತೇನೆಂದಿದ್ದು ಹಾಗು ನಾಗಾಭರಣರ ಕಾಸಿನ ಕಷ್ಟ ನೋಡಿ ಸಂಭಾವನೆ ಇಲ್ಲದೇ ಕೆಲಸ ಮಾಡುವೆನೆಂದು ಒಪ್ಪಿದ್ದು. ನಾಯಕ ಅನಂತನಾಗ್ ಪ್ರೇಮದ ಕಡಲಲ್ಲಿ ಈಸುತ್ತ, ನಾಗಾಭರಣರನ್ನು ಇರುಸು-ಮುರಿಸಿನ ಪ್ರಸಂಗಕ್ಕೆ ಸಿಲುಕಿಸಿದ್ದನ್ನು ಹಂಚಿಕೊಂಡರು. ಕೇವಲ ೨.೫ ಲಕ್ಷದಲ್ಲಿ ತಯಾರಿಸಿದ ಚಿತ್ರವಿದಾಗಿತ್ತು. ಮಕ್ಕಳ ಚಿತ್ರ ಜಗತ್ತಿನಲ್ಲೇ ಹೆಚ್ಚು ಕಡೆಗಣಿಸಲ್ಪಟ್ಟ ಪ್ರಕಾರ ಎಂಬುದು ನಾಗಾಭರಣರ ಅಂಬೋಣ. ‘ಚಿನ್ನಾರಿ ಮುತ್ತ’ ಕ್ಕೆ ಪ್ರೇರಣೆ ಡಿಕನ್ಸ್ ನ ಓಲಿವರ್ ಟ್ವಿಸ್ಟ್. ಕವಿ ಎಚ್ಚೆಸ್ವಿಯವರಿಗೆ ಸವಾಲು ಹಾಕಿ ಕಥೆ, ಸಂಭಾಷಣೆ, ಹಾಡು ಬರೆಸಿ ತಯಾರಿಸಿದ ಸಿನಿಮಾ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಹೀಗೇ ನಾಲಕ್ಕು ಮಕ್ಕಳ ಚಿತ್ರಗಳನ್ನು ತಯಾರಿಸಿ, ಪ್ರಶಸ್ತಿ ಪಡೆದ ಹೆಗ್ಗಳಿಕೆ ನಾಗಾಭರಣರದ್ದು. 

ಸಂಗೀತ ನಾಗಾಭರಣರ ಚಿತ್ರಗಳ ಜೀವಾಳ. ಅದಕ್ಕೆ ಅವರಿಗೆ ಹೆಗಲು ಕೊಟ್ಟಿದ್ದು ಹೆಸರಾಂತ ಕಲಾವಿದ ಸಿ. ಅಶ್ವಥ್. ಇವರ ಯಮಳ ಪ್ರಯೋಗಗಳನ್ನು ಹೆಚ್ಚಿನ ಪ್ರಸಿದ್ಧ ಸಿನಿಮಾಗಳಲ್ಲಿ ಕಾಣುತ್ತೇವೆ (ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ನಾಗಮಂಡಲ, ಸಿಂಗಾರೆವ್ವ). ‘ಮೈಸೂರು ಮಲ್ಲಿಗೆ’ ನಾಗಾಭರಣರಿಗೆ ವಿಶೇಷ ಸವಾಲನ್ನು ಒಡ್ಡಿದ ಪ್ರಯೋಗ. ಕೇವಲ ಹಾಡುಗಳನ್ನು ಆಧರಿಸಿ ಹೊಸೆದ ಕಥೆಯಿದು. ಸುಮಾರು ಹದಿನೈದು ಹೆಸರಾಂತ ಕವಿಗಳೊಡನೆ ಸಮಾಲೋಚಿಸಿದರೂ, ದಾರಿ ಕಾಣದಾದಾಗ, ನಾಗಾಭರಣರೇ ಕಥೆಯನ್ನು ಹೊಸೆಯುವ ನಿರ್ಧಾರ ಮಾಡಿದರು. ಹಲವು ಆವೃತ್ತಿಗಳನ್ನು ಕವಿತೃಯರಾದ ಎಚ್ಚೆಸ್ವಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗು ವ್ಯಾಸರಾಯರೊಡನೆ ಚರ್ಚಿಸಿದ್ದರಂತೆ. ಒಂದು ಬೆಳಗಿನ ಝಾವ ಬುಲ್ ಟೆಂಪಲ್ ಎದುರಿನ ಕಟ್ಟೆಯ ಮೇಲೆ ಅಶ್ವಥ್ ಜೊತೆ ಕುಳಿತಿದ್ದಾಗ ಬಲ್ಬ್ ತಟ್ಟನೆ ಫ್ಲಾಶ್ ಆಗಿ ಕಥೆಗೊಂದು ರೂಪ ಬಂದಿತ್ತೆಂದು ವಿವರಿಸಿದರು. ಇದರಲ್ಲಿ ಅವರು ಕಾಣುವುದು ಸಂಘರ್ಷ: ಸ್ವಾತಂತ್ರ್ಯ ಹೋರಾಟ, ಸರಕಾರದ ಪರವಾದ ಶಾನುಭೋಗರೊಂದೆಡೆ, ಸಂಗ್ರಾಮದ ಪರವಾದ ಅವರ ಅಳಿಯ, ಇವರ ನಡುವೆ ಬಳಲುವ ಪದುಮ. ಈ ಸಿನೆಮಾದ ತೆರೆಯ ಮರೆಯಲ್ಲಿ ಆದ ಸಂಘರ್ಷ ನಮಗೆಲ್ಲ ನಾಗಾಭರಣರ ಜಿದ್ದು, ಸಿನಿಮಾ ಕ್ಷೇತ್ರದಲ್ಲಿ ಅವರಿಗಿದ್ದ ಪ್ರಭಾವಗಳನ್ನೂ ಪರಿಚಯ ಮಾಡಿಸಿತು. ಮೈಸೂರು ಮಲ್ಲಿಗೆ ಧ್ವನಿ ಸುರುಳಿಯ ಯಶಸ್ಸಿನ ಹಿಂದಿನ ರೂವಾರಿ ಅಶ್ವಥ್ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ನಾಗಾಭರಣರಿಗೆ ಬೇಕಿದ್ದುದು ಯುವಕನಿಗೆ ಹೊಂದುವ ಧ್ವನಿ. ಹೇಗೆ ಅವರು ಎಸ್ಪಿ ಬಾಲಸುಬ್ರಹ್ಮಣ್ಯರನ್ನು ಅಶ್ವಥ್ ಬದಲು ಅಶ್ವಥ್ ನಿರ್ದೇಶನದಲ್ಲೇ ಹಾಡಿಸಿದರು ಎಂಬುದನ್ನು ಕೇಳಿ ಪ್ರೇಕ್ಷಕರೆಲ್ಲ ದಿಗ್ಭ್ರಂತರಾದರು, ಮನಸಾರೆ ನಕ್ಕರು. 

‘ನಾಗಮಂಡಲದ’ ಲ್ಲಿ ಅವರು ತೋರಬಯಸುವುದು ರಾಣಿಯ ಬಯಕೆ, ಮುಗ್ಧತೆ, ಸಂವೇದನೆಗಳು. ಇದರಲ್ಲಿ ಬರುವ ಹಲವು ಸನ್ನಿವೇಶಗಳು, ಬದುಕಿನ ವಿಪರ್ಯಾಸಗಳಿಗೆ ರೂಪಕಗಳು. ನಾಗಪ್ಪ – ಅಣ್ಣಪ್ಪ ಎರಡು ಪಾತ್ರಗಳಲ್ಲ. ಒಬ್ಬನೇ ವ್ಯಕ್ತಿಯ ಎರಡು ಮನಸ್ಥಿತಿಗಳ ಸಂಕೇತ, ಅವುಗಳ ನಡುವಿನ ಸಂಘರ್ಷ. ಕೊನೆಯಲ್ಲಿ ಕಂಡುಬರುವುದು ರಾಣಿಯ ಪ್ರೀತಿಯ ಗೆಲುವು. ಕಾರ್ನಾಡರ ಪ್ರಸಿದ್ಧ ನಾಟಕವನ್ನಾಧರಿಸಿದ ನಾಗಮಂಡಲವನ್ನು ನೋಡಿ ಮೆಚ್ಚಿದ ಕಾರ್ನಾಡರು ನೀಡಿದ ಪ್ರತಿಕ್ರಿಯೆಯೇ ನಾಗಾಭರಣರಿಗೆ ಚಿತ್ರಕ್ಕೆ ಸಿಕ್ಕ ಇತರ ಪ್ರಶಸ್ತಿಗಳಿಗಿಂತ ಅತ್ಯಮೂಲ್ಯವಾಗಿದ್ದರಲ್ಲಿ ಸಂದೇಹವೇ ಇಲ್ಲ. ‘ಸಿಂಗಾರೆವ್ವ’ ದಲ್ಲಿ ನಾಗಾಭರಣರು ಕಾಣುವುದು ವರ್ಗ ಸಂಘರ್ಷ, ಇರುವವರ-ಇಲ್ಲದವರ ನಡುವಿನ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ. ಇಲ್ಲಿ ಸಿಂಗಾರೆವ್ವ ಪ್ರಕೃತಿಯ ಸಂಕೇತ. ಪ್ರಕೃತಿ ನಾಶವಾದಂತೆ ಹೇಗೆ ಪುರುಷ ನಾಶವಾಗುತ್ತಾನೆ ಎಂಬುದನ್ನು ಅವರು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ‘ಅಲ್ಲಮ’ ದಲ್ಲಿ ಆತನ ಚಿಂತನೆಗಳನ್ನು ಪ್ರಸ್ತುತಕ್ಕೆ ಹೊಂದಿಸುವ ಪ್ರಯತ್ನ ಮಾಡಿದ್ದಾರೆ. ಅವಧೂತನಾದ ಅಲ್ಲಮನ ವಚನಗಳನ್ನೇ ಸಂಭಾಷಣೆಯನ್ನಾಗಿ ಉಪಯೋಗಿಸಿದ್ದಾರೆ. ಅವನ ವಚನಗಳನ್ನು ದೃಶ್ಯ ರೂಪದಲ್ಲಿ ನೋಡುಗರ ಕಣ್ಮುಂದೆ ತಂದಿದ್ದಾರೆ. ಈ ಪ್ರಯೋಗವು ಅವರಿಗೆ ಹೊಸ ಸವಾಲನ್ನೆಸೆದಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿ ಅವರಿಗಿದೆ. 

ಸುದೀರ್ಘವಾಗಿ, ನಗೆ ಚಾಟಿಕೆಗಳ ನಡುವೆ ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡ ನಾಗಾಭರಣರು, ತಮ್ಮ ಪ್ರತಿಭೆ, ಸರಳತೆ, ಯೋಚನಾ ಲಹರಿಯ ಹರಿವು – ದಿಕ್ಕುಗಳನ್ನು ಪರಿಚಯಿಸಿದರು. ಬಂದ ಪ್ರೇಕ್ಷಕರೆಲ್ಲ ಸಂವಾದವನ್ನು ತುಂಬು ಹೃದಯದಿಂದ ಅನುಭವಿಸಿದರು. ಅವರಿಗೂ ಸಂವಾದಿಸುವ ಅವಕಾಶ ಸಮಯಾಭಾವದಿಂದ ಸಿಗದೇ ನಿರಾಶರಾಗಿದ್ದು ಪ್ರಯೋಜಕರಿಗೆ ವೇದ್ಯವಾಗಿತ್ತು. 

-ರಾಂ