ಯೋಗೀಂದ್ರ ಮರವಂತೆ ಅವರ ಪ್ರಬಂಧಗಳನ್ನು ಓದಿದವರಿಗೆ ಅವರ ಬರಹದ ವಿಶಿಷ್ಟ ಲಯ, ವಿಷಯದಿಂದ ವಿಷಯಕ್ಕೆ ಸಹಜವಾಗಿ ಹರಿಯುವ ಚಿಂತನೆ, ಸಾಮಾನ್ಯವೆನಿಸುವ ಸಂಗತಿಯೊಳಗೆ ಅಸಾಮಾನ್ಯವಾದ ಕಥೆ-ಇತಿಹಾಸಗಳನ್ನು ಹುಡುಕುವ ಕಣ್ಣು ಪರಿಚಿತವೇ. ಆದರೆ ಈ ಪ್ರಬಂಧ ಆ ಎಲ್ಲ ಗುಣಗಳನ್ನೂ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುತ್ತದೆ. ಓದಿದ ನಂತರ ನಿಮಗೆ ಯಾವ ಸಾಲು, ಯಾವ ಕಥೆ, ಯಾವ ಬೀದಿ, ಯಾವ ನೆನಪು ಜೊತೆಯಾಯಿತು ಎಂಬುದನ್ನೂ ಕಾಮೆಂಟ್ನಲ್ಲಿ ಹಂಚಿಕೊಳ್ಳಿ. ಇಂತಹ ಬರಹಗಳ ಸಾರ್ಥಕತೆ ಓದುವುದರಲ್ಲಿ ಮಾತ್ರವಲ್ಲ, ಅವು ಹುಟ್ಟಿಸುವ ಸಂವಾದದಲ್ಲೂ ಇದೆ. – ಕೇಶವ ಕುಲಕರ್ಣಿ (ಈ ವಾರದ ನಿರ್ವಾಹಕ)

ಸತ್ಯಜಿತ್ ರೇ ೧೯೬೪ರಲ್ಲಿ ನಿರ್ಮಿಸಿದ “ಚಾರುಲತಾ” ಚಿತ್ರದ ಆರಂಭಿಕ ದೃಶ್ಯದಲ್ಲಿ, ನಾಯಕಿ ಒಂದು ಕಿಟಕಿಯಿಂದ ಮತ್ತೊಂದು ಕಿಟಕಿಗೆ ಹೋಗುತ್ತ ದಾರಿಹೋಕರನ್ನು ಗಮನಿಸುತ್ತಿರುತ್ತಾಳೆ. ರಸ್ತೆಯಲ್ಲಿ ಮಂಗನನ್ನು ಆಡಿಸುವಾತ ನಡೆಯುತ್ತಿದ್ದಾನೆ .ಪಾತ್ರೆ ಮಾರುವವನು ಕೂಗುತ್ತ ಸಾಗಿದ್ದಾನೆ. ಅವನ ಗಾಡಿಯಲ್ಲಿರುವ ಪಾತ್ರೆಗಳು ಒಂದಕ್ಕೊಂದು ತಾಗಿ ಢಣ ಢಣ ಎನ್ನುತ್ತಿವೆ. ರಸ್ತೆಯ ಆಗುಹೋಗುಗಳನ್ನು ಉಪ್ಪರಿಗೆ ಮನೆಯ ಕಿಟಕಿಗಳಿಂದ ದುರ್ಬೀನು ಹಿಡಿದು ನೋಡಿ ಆಕೆ ಸಮಯ ಕಳೆಯುತ್ತಾಳೆ. ಶ್ರೀಮಂತ ಮತ್ತು ಬಿಡುವಿಲ್ಲದ ಪತಿಯ ಅರಮನೆಯಂತಹ ಮಹಲಿನ ಏಕಾಂಗಿತನದಲ್ಲಿ ಚಾರುಲತಾ ಬೀದಿಯ ಬದುಕಿನ ಜೀವಂತಿಕೆಯ ಜೊತೆಗೆ ಮೂಕ ಸಂವಹನದಲ್ಲಿ ತೊಡಗುತ್ತಾಳೆ. ಬೀದಿಯಲ್ಲಿ ಹುಟ್ಟಿ ಮನೆಯೊಳಗೆ ತಲುಪುವ ಶಬ್ದ ಚಿತ್ರಗಳು ನಿತ್ಯ ಬದುಕಿನ ಮುಖ್ಯ ಭಾಗವಾಗುವುದು ಚಾರುಲತಳಂತಹ ವ್ಯಕ್ತಿ ಮತ್ತು ಸಂದರ್ಭಗಳ ಮೂಲಕ ಕಣ್ಣಿಗೆ ಕಟ್ಟುತ್ತವೆ. ಟ್ಯಾಗೋರರ ಕಾದಂಬರಿಯನ್ನು ಆಧರಿಸಿದ ಸತ್ಯಜಿತ್ ರೇ ಸಿನಿಮಾದ ಚಾರುಲತಳಂತೆ ಒಬ್ಬಂಟಿತನದಲ್ಲಿ ಬೀದಿ ಕಲರವದೊಡನೆ ಮಾತನಾಡುತ್ತ ಜೀವನ ಸಾಗಿಸಿದವರು ಸಾಗಿಸುವವರು ಎಲ್ಲೆಲ್ಲೂ ಇದ್ದಾರು. ಹಾಗಾಗಿಯೇ ಸಿನೆಮಾಗಳು ಕತೆಗಳು ಕಾದಂಬರಿಗಳು ಬೀದಿಯ ಲೋಕಾಂತವನ್ನು ಮನೆಯ ಏಕಾಂತವನ್ನು ಎದುರು ಬದುರಾಗಿ ನಿಲ್ಲಿಸುವ ಉದಾಹರಣೆಗಳು ಅನೇಕ ಇವೆ. ಬೀದಿ ಮತ್ತು ಮನೆ ಅವವುಗಳ ಗಡಿ ಆವರಣ ಹೊಂದಿರುವ ಎರಡು ವಿಭಿನ್ನ ಜಗತ್ತುಗಳಾದರೂ ಒಂದರ ಪಕ್ಕದಲ್ಲಿ ಇನ್ನೊಂದು ಇರುವಾಗ ಇವೆರಡೂ ಸಂಭಾಷಿಸ ತೊಡಗುತ್ತವೆ ಸ್ಪಂದಿಸ ತೊಡಗುತ್ತವೆ. ಒಂದು ಇನ್ನೊಂದರ ಸಂಗ ಸಖ್ಯ ಬೇಡುತ್ತವೆ. ಒಂದನ್ನೊಂದು ದೂಷಿಸುತ್ತವೆ, ಮತ್ತೆ ಹಾತೊರೆಯುತ್ತವೆ. ಜೊತೆಜೊತೆಯಾಗಿ ಬೆಸುಗೆಯಲ್ಲಿ ಕೂಡುಜಗತ್ತನ್ನು ಸೃಷ್ಟಿಸುತ್ತವೆ .
ರಸ್ತೆಗಳು ಎಲ್ಲ ಊರು ಕೇರಿಗಳ ಅಗತ್ಯ ಮತ್ತು ಲಕ್ಷಣವಾದರೂ, ಸದ್ದು ತುಂಬಿದ ಚಟುವಟಿಕೆಯ ಬೀದಿಗಳು ನಗರೀಕರಣದ ಪ್ರಮುಖ ಪರಿಣಾಮಗಳಲ್ಲೊಂದು. ಬಿಡುವಿಲ್ಲದ ರಸ್ತೆಗಳು ಮತ್ತೆ ರಸ್ತೆಯಲ್ಲಿ ಹುಟ್ಟಿ ಬೆಳೆಯುವ ದಟ್ಟ ಜಗತ್ತು ಆಯಾ ನಗರದ ಬೀದಿಬದಿ ಮನೆಗಳ ಎದೆಬಡಿತದಂತೆ ಕೆಲಸ ಮಾಡುತ್ತವೆ. ಬೆಳಗಿನಲ್ಲಿ ಜೋರಾಗುವ ಎದೆಬಡಿತ ರಾತ್ರಿಯಾದಂತೆ ಕ್ಷೀಣಿಸಿ ಕೆಲ ಹೊತ್ತು ಮೌನವೂ ಆವರಿಸುತ್ತದೆ. ಬೀದಿ ಚಟುವಟಿಕೆಯ ಪ್ರಮುಖ ಅಂಗವಾದ , ವ್ಯಾಪಾರ ಮತ್ತು ವ್ಯಾಪಾರಿಗಳ ಕೂಗುಗಳು ದೀರ್ಘ ಕಾಲದಿಂದ ರಸ್ತೆಯಲ್ಲೊಂದು ಪೋಷಕ ಜಗತ್ತನ್ನು ನಿರ್ಮಿಸಿವೆ. ರಸ್ತೆ ಕೆಲವರಿಗೆ ಬರೇ ಸಂಚಾರ ಮಾರ್ಗ , ಕಾಲು ನಡಿಗೆಯ ಹಾದಿಯಾದರೆ ಇನ್ನು ಕೆಲವರಿಗೆ ಬಿರುಬಿಸಿಲಿನಲ್ಲೂ ಮೂಲಭೂತ ಆಸರೆ ಪೋಷಣೆ ನೀಡುವ ನೆಳಲ ತಾಣ.
ಬೀದಿಯ ಗೌಜುಗದ್ದಲ ಕೂಗುಗಳು ಹತ್ತಿರದ ಮನೆಯವರಿಗೇನೋ ಏಕಾಂತವಿರುವಾಗ ಸಾಂತ್ವನವನ್ನೋ ಅಥವಾ ಶಬಮಾಲಿನ್ಯದ ಏಕತಾನತೆಯ ಕಿರಿಕಿರಿಯನ್ನೋ ನೀಡಬಹುದು. ಆದರೆ ಬೀದಿಯಲ್ಲಿ ವ್ಯಾಪಾರ ಮಾಡುವವರಿಗೆ ಅಲ್ಲಿನ ಅವರ ಅನಿಶ್ಚಿತ ಉಪಸ್ಥಿತಿ ಮತ್ತು ಹೊರಡಿಸುವ ನಾಟಕೀಯ ಸದ್ದುಗಳು ಉಳಿವಿನ ಮೂಲಭೂತ ಪ್ರಕ್ರಿಯೆ. ಶತಮಾನದ ಹಿಂದೆ ಕವಿ ಸರೋಜಿನಿ ನಾಯ್ಡು ಅವರು ಬೀದಿ ವ್ಯಾಪಾರಿಗಳ ಕೂಗು ಎನ್ನುವ ಶೀರ್ಷಿಕೆಯ ಇಂಗ್ಲಿಷ್ ಕವಿತೆಯನ್ನು ಬರೆದಿದ್ದರು. ವ್ಯಕ್ತಿಗಳು, ಮಾರಾಟದ ವಸ್ತುಗಳು , ವ್ಯಾಪಾರೀ ಘೋಷಣೆಗಳು ಅಂದಿಗೂ ಇಂದಿಗೂ ಬದಲಾಗಿದ್ದರೂ, ವ್ಯಾಪಾರದ ಸವಾಲುಗಳು ಮತ್ತು ಅವರ ಕೂಗಿನ ಹಿಂದಿನ ತುರ್ತು ಬಹಳ ಬದಲಾಗಿರಲಿಕ್ಕಿಲ್ಲ.
ಸರೋಜಿನಿ ನಾಯ್ಡು ಅವರ ಕವಿತೆಯು ವ್ಯಾಪಾರಿಗಳ ಕೂಗುಗಳ ಮೂಲಕ ಬೆಳಗಿನಿಂದ ರಾತ್ರಿಯವರೆಗೆ ಒಂದು ಸಾಮಾನ್ಯ ಬೀದಿಯನ್ನು ಅನುಸರಿಸುತ್ತದೆ. ಮುಂಜಾನೆ, ಕೆಲಸಗಾರರು ಆತುರದಿಂದ ಹೊರಟು ಹೋಗುವುದು , ಉಪವಾಸದಲ್ಲಿರುವ ಪುರುಷರು ಧಾವಿಸಿ ಹೋಗುವಾಗ , “ರೊಟ್ಟಿ ಕೊಳ್ಳಿರಿ ” ಎಂಬ ಕೂಗು ಬೀದಿಯಲ್ಲಿ ಕೇಳುತ್ತದೆ . ಮಧ್ಯಾಹ್ನ, ಕಠಿಣ ಬಿಸಿಲಿನಲ್ಲಿ ಪಕ್ಷಿಗಳು ಮೌನವಾಗಿರುವಾಗ , ಗಂಟಲುಗಳು ಒಣಗಿರುವಾಗ, “ಹಣ್ಣು ಕೊಳ್ಳಿರಿ ” ಎಂಬ ಕೂಗು ತಂಪಾದ ನೆಮ್ಮದಿಯ ಭರವಸೆಯಾಗಿ ಕೇಳುತ್ತದೆ . ರಾತ್ರಿಯಲ್ಲಿ, ಬಜಾರ್‌ಗಳ ಮೇಲೆ ನಕ್ಷತ್ರಗಳು ಕಾಣಿಸಿಕೊಳ್ಳುವಾಗ , ಪ್ರೇಮಿಗಳು ಬೆಳಗಿದ ಮೇಲ್ಚಾವಣಿಯಲ್ಲಿ ಕುಳಿತುಕೊಳ್ಳುವಾಗ, “ಹೂವು ಕೊಳ್ಳಿರಿ” ಕೇಳಿಸುತ್ತದೆ . ಈ ಸರಳ ಜನರ ಧ್ವನಿಗಳು ನಗರದ ಲಯಕ್ಕೆ ಸೇರಿಕೊಂಡು ಪ್ರತಿಯೊಂದು ಕೂಗೂ ಒಂದು ನಿರ್ದಿಷ್ಟ ಅಗತ್ಯಕ್ಕೆ ಪ್ರತಿಕ್ರಿಯಿಸುವಂತೆ ಕಾಣಿಸುತ್ತದೆ.
“ಮುಂಜಾವಿನ ಮೊದಲ ತಾಳಗಳು ಆಕಾಶವನ್ನು ತಟ್ಟಿದಾಗ ,
ಜಗವನ್ನು ಕೆಲಸದವರ ನಾನಾ ಕೂಗಿಗೆ ಎಬ್ಬಿಸಿ,
ಹಿಂಡನ್ನು ಕಾಯಲು, ಮಾಗುತ್ತಿರುವ ಧಾನ್ಯವನ್ನು ಕಟ್ಟಲು,
ಬೆವರು ಸುರಿಸಿ ಹರಿಸಿ ತುಸು ಸಂಪಾದನೆ ಮಾಡಲು ,
ಮತ್ತು ಖಾಲಿ ಹೊಟ್ಟೆಯಲ್ಲಿ ಜನರು ಆತುರದ ಹೆಜ್ಜೆಗಳಲ್ಲಿ ಹೊರಟಾಗ,
“ರೊಟ್ಟಿ ಕೊಂಡುಕೊಳ್ಳಿ, ರೊಟ್ಟಿ ಕೊಂಡುಕೊಳ್ಳಿ”, ಮೊಳಗುತ್ತದೆ ಕಾತರದ ಬೀದಿಯಲ್ಲಿ.
ಭೂಮಿ ತತ್ತರಿಸಿ ನೀರು ಒಣಗಿ
ಮಧ್ಯಾಹ್ನದ ನಿರ್ದಯಿ ಕಿರಣಗಳಿಂದ ಬಳಲಿದಾಗ,
ನೆರಳಿನ ಆಸರೆಯಲ್ಲಿ ಕೋಗಿಲೆಗಳ ಹಾಡು ಮೌನವಾದಾಗ ,
ಮತ್ತು ಗಂಟಲುಗಳು ಬತ್ತಿ ಬಾಡಿ ಸ್ವರ ಕ್ಷೀಣಿಸಿದಾಗ
ಬಿಸಿಲ ಕ್ರೌರ್ಯಕ್ಕೆ ಜಲಸಾಂತ್ವನವನ್ನು ಹಂಬಲಿಸುವಾಗ,
“ಹಣ್ಣು ಕೊಂಡುಕೊಳ್ಳಿ, ಹಣ್ಣು ಕೊಂಡುಕೊಳ್ಳಿ”, ಏದುಸಿರು ಬಿಡುವ ಬೀದಿಯಲ್ಲಿ ಹರಿಯುತ್ತದೆ ಮೆಲ್ಲಗೆ.
ಮುಸ್ಸಂಜೆಯ ಬೆಳಕು ಬಜಾರುಗಳ ಮೇಲೆ ಉತ್ಸಾಹದಲ್ಲಿ ಮಿನುಗುವಾಗ ,
ಥಟ್ಟನೆ ನಕ್ಷತ್ರಗಳು ಮೇಲ್ಚಾವಣಿಯನ್ನು ಬಿಚ್ಚಿದಾಗ,
ಸಂಗೀತದ ತಂತಿ ಮೀಟಿ , ಪರಿಮಳದ ದೀಪ ಹಚ್ಚಿದಾಗ,
ಪ್ರಶಾಂತ ಮಾಳಿಗೆಗಳಲಿ ಪ್ರೇಮಿಗಳು ಕುಳಿತು
ಜೀವಪ್ರೇಮ ಸುಧೆಯನ್ನು ಸೇರಿ ಸವಿಯುವಾಗ ,
“ಹೂವು ಕೊಂಡುಕೊಳ್ಳಿ, ಹೂವು ಕೊಂಡುಕೊಳ್ಳಿ”, ತೇಲಿಬರುತ್ತದೆ ಗುನುಗುನಿಸುವ ಬೀದಿಯಲ್ಲಿ.”
ಸರೋಜಿನಿ ನಾಯ್ಡುರವರ ಕವಿತೆಯ ಸಂದರ್ಭ , ಕೋಲ್ಕತ್ತಾದ ಚಾರುಲತಾಳ ಕತೆಯ ಕಾಲ ಮತ್ತು ಸ್ಥಳವನ್ನು ಬಿಟ್ಟು ದೂರ ಸಾಗಿ ನಾವಿರುವ ಲಂಡನ್ನಿನ ಇತಿಹಾಸದ ಪುಟಗಳನ್ನು ತೆರೆದರೆ ೧೭೦೮ರಲ್ಲಿ, ಒಬ್ಬ ಅನಾಮಧೇಯ ಕವಿ ಲಂಡನ್‌ನ ನಿವಾಸಿಗಳಿಗೆ ಮಹತ್ವಪೂರ್ಣವಾದ ಒಂದು ದಿನವನ್ನು ಹೀಗೆ ದಾಖಲಿಸಿದ್ದನಂತೆ:
“ಒಂದು ಸಂಜೆ, ಸೂರ್ಯನು ಆಗಷ್ಟೇ ಅಸ್ತಮಿಸಿದ್ದಾಗ,
ಮತ್ತು ನಾನು ಗದ್ದಲದ ಪಟ್ಟಣದ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ,
ಪ್ರತಿಯೊಂದು ಬೀದಿಯಲ್ಲೂ ಹಠಾತ್ತನೆ ಮೌನ ಆವರಿಸಿತ್ತು,
ಲಂಡನ್‌ನ ಆತ್ಮವೇ ಹೊರಟುಹೋದಂತಿತ್ತು.”
ಹಾಗಾದರೆ ಅಲ್ಲಿ ಏನಾಗಿತ್ತು? ಹಠಾತ್ ಮೌನಕ್ಕೆ ಕಾರಣವೇನು? “ಬೆನೆಟ್” ಎಂದು ಲಂಡನ್ನಿಗರಿಗೆ ಪರಿಚಿತನಾಗಿದ್ದ ಒಬ್ಬ ಬೀದಿ ವ್ಯಾಪಾರಿ ಅಂದು ನಿಧನನಾಗಿದ್ದನಂತೆ. ಅನಾಮಧೇಯ ಕವಿಯ ಸಾಲಿನಂತೆ “ಹೋಮರ್‌ನ ಕಾಲದಿಂದಲೂ ಜಗತ್ತು ಅಂಥ ಧ್ವನಿಯನ್ನು ಕೇಳಿರಲಿಲ್ಲ”. ಆದರೆ ಹೋಮರ್ ಕುರುಡನಾಗಿದ್ದರೆ, “ಸಂಚಾರಿ ವ್ಯಾಪಾರಿಗಳ ರಾಜಕುಮಾರ” ಬೆನೆಟ್‌ಗೆ ಓದಲು ಬರುತ್ತಿರಲಿಲ್ಲ. ಇಂತಹ ಹೃದಯಸ್ಪರ್ಶಿ ಶೋಕಗೀತೆಯನ್ನು ಕವಿಯಿಂದ ಬರೆಸಿಕೊಂಡ ಬ್ರಿಟನ್ನಿನ ಬೆನೆಟ್ , ಎಲ್ಲ ಕಾಲದ ಸಂಚಾರಿ ವ್ಯಾಪಾರಿಗಳ ಅಥವಾ ಬೀದಿ ಮಾರಾಟಗಾರ ಪ್ರತಿನಿಧಿಯಾಗಿ ಕಾಣುತ್ತಾನೆ. ಇಂಗ್ಲೆಂಡಿನ ನೆರೆಯ ಐರ್ಲೆಂಡಿನ ಡಬ್ಲಿನ್‌ನ ಮೊಲಿ ಮ್ಯಾಲೋನ್ ಎನ್ನುವ ಮೀನು ಮಾರಾಟಗಾರ್ತಿ , ಬೀದಿಯಲ್ಲಿ “ತನ್ನ ಚಕ್ರದ ಗಾಡಿಯನ್ನು ಅಗಲ ಕಿರಿದಾದ ಬೀದಿಗಳ ಮೂಲಕ ತಳ್ಳುತ್ತಾ ‘ಮಳಿ ಮತ್ತು ಚಿಪ್ಪುಗಳು ಸಜೀವವಾಗಿವೆ , ಜೀವಂತವಾಗಿವೆ ಓಹೋ !” ಎಂದು ಕೂಗುತ್ತ ತನ್ನ ಗಾಡಿಯಲ್ಲಿರುವ ಸಮುದ್ರಚರಗಳನ್ನು ಮಾರಾಟಮಾಡಲು ಯತ್ನಿಸುತ್ತಿದ್ದಳು ಎನ್ನುವ ಗೀತೆ ಪ್ರಚಲಿತವಿದೆ . ಸಣ್ಣ ಪ್ರಾಯದಲ್ಲಿ ಮೊಲಿ ಜ್ವರದಿಂದ ಸತ್ತಳು, ಆದರೆ ಆ ಗೀತೆ ಮತ್ತು ಅವಳ ಆತ್ಮವನ್ನು , ಐರಿಷ್ ಹಾಸ್ಯ ಮತ್ತು ಗಂಭೀರತೆಯ ವಿಶಿಷ್ಟ ಮಿಶ್ರಣದಲ್ಲಿ, ಡಬ್ಲಿನ್‌ನ ಬೀದಿಗಳ ಮೂಲಕ ಸಾಗುತ್ತಿರುವಂತೆ ಕಲ್ಪಿಸಲಾಯಿತು. ಅವಳು ಆಳಿದ ಮೇಲೂ ಎಂದಿನಂತೆಯೇ ಅದೇ ಕೂಗುಗಳನ್ನು ಹೊರಡಿಸುತ್ತಾಳೆ ಎನ್ನುವ ದಂತಕತೆ ಹುಟ್ಟಿತು. ಜನಪ್ರಿಯ ಐರಿಷ್ ಗೀತೆಯಲ್ಲಿ ಬರುವ ಮೊಲಿ ಎನ್ನುವ ಬೀದಿ ವ್ಯಾಪಾರಿ ನಿಜವಾಗಿ ಇದ್ದಳೋ ಇಲ್ಲವೋ ಎನ್ನುವುದು ಇಪ್ಪತ್ತನೆಯ ಶತಮಾನದಲ್ಲಿ ಮುನ್ನೆಲೆಗೆ ಬಂದು ದೊಡ್ಡ ಚರ್ಚೆಯಾಗಿತ್ತು. ಆ ಚರ್ಚೆ ಇತ್ಯರ್ಥವಾಗದಿದ್ದರೂ ಆಕೆ ಒಂದು ದಂತಕತೆಯಾಗಿ ಈಗಲೂ ಡಬ್ಲಿನ್ ನ ಬೀದಿಯಲ್ಲಿ ಗಾಡಿ ದೂಡಿಕೊಂಡು ಹಾಡುತ್ತ ಜೀವಂತವಾಗಿದ್ದಾಳೆ. ಈಗಲೂ ಡಬ್ಲಿನ್ ನ ಸಫೋಕ್ ರಸ್ತೆಯಲ್ಲಿರುವ ಪ್ರವಾಸಿ ಮಾಹಿತಿ ಕೇಂದ್ರದ ಮುಂದೆ ಗಾಡಿಯಲ್ಲಿ ಬುಟ್ಟಿಗಳನ್ನು ಹೇರಿಕೊಂಡ ಮೊಲಿಯ ಮೂರ್ತಿ ಇದೆ.
ಇನ್ನು ಲಂಡನ್ ಮ್ಯೂಸಿಯಂನಲ್ಲಿ ಲಂಡನ್‌ನ್ನು ಕೇಂದ್ರೀಕರಿಸಿದ ಬೀದಿ ವ್ಯಾಪಾರದ ಹಲವಾರು ಚಿತ್ರಗಳಿವೆ. ೧೭ನೆಯ ಶತಮಾನದಿಂದ ೧೯ನೆಯ ಶತಮಾನದ ಅಂತ್ಯದವರೆಗಿನ ಈ ಚಿತ್ರಗಳು ನಗರದ ವಾತಾವರಣದ ಒಂದು ಕಿರುನೋಟ ನೀಡುತ್ತವೆ, ಮತ್ತು ಜನರು ಏನು ಖರೀದಿಸುತ್ತಿದ್ದರು, ಮಾರುತ್ತಿದ್ದರು, ಬಳಸುತ್ತಿದ್ದರು ತಿನ್ನುತ್ತಿದ್ದರು ಎಂಬುದನ್ನು ಅರಿಯಲು ಸಹಾಯ ಮಾಡುತ್ತವೆ. ಶತಮಾನಗಳ ಕಾಲ, ಲಂಡನ್‌ನ ಬೀದಿ ವ್ಯಾಪಾರಿಗಳು ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ಬಳಸಿದ ವಿಶಿಷ್ಟ ವಿಧಾನಗಳನ್ನು ಚಿತ್ರಕಲಾವಿದರು ದಾಖಲಿಸಿಸುರುವುದನ್ನು ಈ ಸಂಗ್ರಹಾಲಯದ ಚಿತ್ರಗಳಲ್ಲಿ ನೋಡಬಹುದು. ಪ್ರತಿ ಗದ್ದಲಮಯ ನಗರದಲ್ಲೂ, ವ್ಯಾಪಾರಿಗಳು ಗ್ರಾಹಕರ ಗಮನ ಸೆಳೆಯಲು ಕೂಗುವುದರಿಂದ, ಅಲ್ಲಿನ ಗದ್ದಲದ ಒಂದು ಭಾಗ ಬೀದಿ ವ್ಯಾಪಾರಸ್ಥರದು ಎನ್ನುವುದು ಸಾರ್ವಕಾಲಿಕ ವಾಸ್ತವ. ಯೂರೋಪಿನಲ್ಲಿಯೂ, ೧೫ನೆಯ ಶತಮಾನದಲ್ಲಿ ಕಲಾವಿದರು ಬೀದಿ ವ್ಯಾಪಾರಿಗಳನ್ನು ಚಿತ್ರಿಸಲು ಆರಂಭಿಸಿದರು, ಅವರ ವಿಶಿಷ್ಟ ಪ್ರಾಸಗಳು, ಹಾಡುಗಳು ಮತ್ತು ಗಮನ ಸೆಳೆಯುವ ಘೋಷವಾಕ್ಯಗಳನ್ನು ದಾಖಲಿಸಿದ ಸಮೀಕ್ಷೆಗಳು “street cries” ಎಂದು ಪ್ರಸಿದ್ಧವಾದವು. ನೀವು ಯಾವುದೇ ಬೀದಿ ವ್ಯಾಪಾರಿಯನ್ನು ನೋಡುವುದಕ್ಕಿಂತ ಮುಂಚೆಯೇ ಅವರ ಧ್ವನಿಯನ್ನು ಕೇಳುವ ಸಾಧ್ಯತೆ ಹೆಚ್ಚು . ಈ ಎಲ್ಲ ಸಂಗ್ರಹಾಲಯಗಳ ಕಲಾಕೃತಿಗಳು ಬೀದಿಯ ಧ್ವನಿಯನ್ನು ಸೆರೆಹಿಡಿದು ಕಾಪಿಡುವಲ್ಲಿ ಸೋತರೂ ನೋಡುಗರ ಮನಸ್ಸಿನಲ್ಲಿ ಅವರರಿಗೆ ಪರಿಚಿತವಾದ ಬೀದಿ ವ್ಯಾಪಾರಿಯ ಸ್ವರವನ್ನೋ ಘೋಷವಾಕ್ಯವನ್ನೋ ನೆನಪಿಸಲು ಶಕ್ತವಾಗಿವೆ.
ಬೀದಿ ವ್ಯಾಪಾರಿಗಳು ಆಧುನಿಕ ನಗರ ಜೀವನದ ಅನೌಪಚಾರಿಕ ಪೂರೈಕೆ ಮಾರ್ಗಗಳು. ಅವರೆಲ್ಲಿದ್ದಾರೋ ಅಲ್ಲಲ್ಲಿ ಆಯಾ ನಗರದಷ್ಟೇ ಹಳಬರೆನೋ ಎನ್ನಿಸುವವರು. ಅವರಿರುವ ಬೀದಿಗಳನ್ನೇ ಹುಡುಕಿ ಬರುವ ದೂರವಾಸಿಗಲಿದ್ದಾರೆ . ಪ್ರವಾಸಿಗಳೂ ದೊಡ್ಡ ಪಟ್ಟಣದ ಯಾವುದೊ ಮೂಲೆಯಲ್ಲಿರುವ ಬಿಡುವಿಲ್ಲದ ಸದ್ದುಗದ್ದಲದ ಪುರಾತನ ಮಾರುಕಟ್ಟೆಯಲ್ಲಿ ಸುತ್ತಾಡುತ್ತಾರೆ, ಮಾರಾಟಕ್ಕಿರುವ ವಸ್ತುಗಳನ್ನು ಕೊಳ್ಳುತ್ತಾರೆ , ಬೀದಿ ತಿನಿಸುಗಳನ್ನು ತಿಂದು ರಸಭೋಜನವೆಂದು ಕೊಂಡಾಡುತ್ತಾರೆ. ಹಾಗಂತ ಆ ವ್ಯಾಪಾರಿಗಳ ಹೆಸರು ಗುರುತನ್ನು ಬಲ್ಲ ಗ್ರಾಹಕರು ವಿರಳ. ಯಾವುದೊ ಒಂದು ರಸ್ತೆಯೇ ಅವರ ಖಾಯಂ ವಿಳಾಸ. ಒಂದು ಕೂಗೇ ಆ ವಿಳಾಸಕ್ಕೆ ಅಲಂಕಾರ. ಹೊರಜಗತ್ತಿಗೆ ಅವರೆಲ್ಲರ ನಿಜವಾದ ಪರಿಚಯ ಮತ್ತು ಗುರುತೇ ಅವರ ಗಾಡಿ, ಬುಟ್ಟಿ ,ಘೋಷಣೆ , ಧ್ವನಿ,ಗೌಜು,ವಾಸನೆ ,ಚಿತ್ರ. ಪ್ರಾಚೀನ ಅಥೆನ್ಸ್‌ನ ಅಗೋರಾದಲ್ಲಿ ಬೀದಿ ವ್ಯಾಪಾರಿಗಳು ಬಟ್ಟೆ, ಸಿಹಿತಿನಿಸು, ಮೀನು, ಗುಲಾಮರು, ಆಭರಣಗಳನ್ನು ಮಾರುತ್ತಿದ್ದರಂತೆ. ದಂಡಯಾತ್ರೆಗಳನ್ನು ಮಾಡಿರುವ ಸ್ಪೇನ್ ದೇಶದ ಹೆರ್ನಾಂಡೊ ಕಾರ್ಟೆಸ್ ಎನ್ನುವ ಸೇನಾಧಿಕಾರಿ ಹದಿನಾರನೆಯ ಶತಮಾನದ ಮೆಕ್ಸಿಕೋ ಕಣಿವೆಯ ಬೃಹತ್ ಚೌಕಗಳಲ್ಲಿ ಪ್ರತಿದಿನ ಅರವತ್ತು ಸಾವಿರಕ್ಕೂ ಹೆಚ್ಚು ಜನರು ಆಹಾರ, ಆಭರಣಗಳು, ಪಕ್ಷಿಗಳು, ಮರ, ಗರಿಗಳು ಮತ್ತು ಇನ್ನಿತರ ವಸ್ತುಗಳನ್ನು ಖರೀದಿಸಿ ಮಾರುತ್ತಿರುವುದನ್ನು ಬೆರಗಿನಿಂದ ವಿವರಿಸಿದ್ದಾನೆ. ಮಧ್ಯಯುಗದ ಯುರೋಪಿನ ನಗರಗಳಲ್ಲಿ ಕೂಗುತ್ತ ಮಾರಾಟ ಮಾಡುವವರು ಸಾಮಾನ್ಯ ದೃಶ್ಯವಾಗಿದ್ದರು, ಅಲ್ಲಿ ಮಾರಬಹುದಾದ ಯಾವುದನ್ನಾದರೂ ಬೆನ್ನಿನ ಮೇಲೆ ಮತ್ತು ಬುಟ್ಟಿಗಳಲ್ಲಿ ಹೊತ್ತು ಬೀದಿಗಳಲ್ಲಿ ಸಾಗಿಸಲಾಗುತ್ತಿತ್ತು. ಆ ಮಾರಾಟಗಾರರ ಲಯಬದ್ಧ ಬೀದಿ ಕೂಗುಗಳು ಸಾಹಿತ್ಯ ಮತ್ತು ಕಲೆಗಳಲ್ಲಿ ಸೇರಿ ಅಮರವಾಗಿವೆ; ವ್ಯಾಪರಿಗಳ ಅಂತಹ ಕೂಗುಗಗಲ್ಲಿ ಒಂದಾಗಿದ್ದ ‘ಹಾಟ್ ಕ್ರಾಸ್ ಬನ್ಸ್’ ನಂತಹ ಸಾಲುಗಳನ್ನು ಇಂದಿಗೂ ಹಲವು ದೇಶಗಳಲ್ಲಿ ಯಾಂತ್ರಿಕವಾಗಿ ಕಂಠಪಾಠ ಮಾಡಿಸಿ ಶಾಲೆಗಳಲ್ಲಿ ಹೇಳಿಸಲಾಗುತ್ತದೆ.
ಕಾದಂಬರಿ ಕವಿತೆ ಸಿನೆಮಾ ಜನಪದಗೀತೆ ಚಿತ್ರಕಲೆಗಳು ಬೀದಿ ವ್ಯಾಪಾರಿಗಳ ವಾಸ್ತವ ಮತ್ತು ಇತಿಹಾಸವನ್ನು ಬಿಚ್ಚಿಡುವಂತೆಯೇ ನಗರ ಜೀವನಚರಿತ್ರೆಕಾರರ ಬರಹ ಮತ್ತು ಸಂಶೋಧನೆಗಳಲ್ಲಿಯೂ ಆಸಕ್ತಿದಾಯಕ ವಿಚಾರಗಳು ದೊರೆಯುತ್ತವೆ. ನಗರ ಜೀವನದ ಸಂಕೀರ್ಣತೆ ಲಕ್ಷಣಗಳನ್ನು ಅಭ್ಯಾಸ ಮಾಡುವ ಆಸಕ್ತರಿಗೆ ಮುಂಬೈ ಮತ್ತು ಕೋಲ್ಕತ್ತಗಳು ಯಥೇಚ್ಛ ವಿಷಯಗಳನ್ನು ಒದಗಿಸುತ್ತವೆ . ೧೯ನೆಯ ಶತಮಾನದ ನಗರ ಜೀವನಚರಿತ್ರೆಕಾರ ಗೋವಿಂದ ನಾರಾಯಣ್ , ಮುಂಬೈ ನಗರದ ಮುಂಜಾನೆಯ ಶಬ್ದಗಳನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ. ಬೀದಿ ವ್ಯಾಪಾರಿಗಳ ಲಯಬದ್ಧ ಕೂಗುಗಳು, ಪ್ರತಿಯೊಂದು ಕೂಗೂ ‘ನಾಲಿಗೆಯ ವಿಶಿಷ್ಟ ಹೊರಳಾಟ’ ದಿಂದ ಹುಟ್ಟುವುದು , ಮುಂಜಾನೆಯ ಚರ್ಚ್ ಗಂಟೆಗಳ ಮೊಳಗು ಮತ್ತು ಪ್ರಾರ್ಥನಾ ಗೀತೆಗಳು ಆರಂಭವಾಗುವ ಮೊದಲೇ ಅವರು ತಾವು ಮಾರಾಟಮಾಡ ಬಯಸುವ ಸಿಹಿ ಉಪ್ಪು ರುಚಿಯ ” ನೀರಾ”ದ ಕಡೆ ಗಮನ ಸೆಳೆಯಲು ಯತ್ನಿಸುವುದು ಅವರ ಚಿತ್ರಣದಲ್ಲಿ ಬರುತ್ತವೆ . ಬೀದಿ ವ್ಯಾಪಾರಿಗಳು ಮತ್ತು ಅವರ ಕೂಗುಗಳ ಇತಿಹಾಸವನ್ನು ಕೋಲ್ಕತ್ತದಲ್ಲಿ ಹುಡುಕಿದರೆ ಲಿಖಿತ ದಾಖಲೆಗಳು ೧೮೬೦-೭೦ ದಶಕದ ಪುಸ್ತಕಗಳಲ್ಲಿ ಸಿಗುತ್ತವೆ. ೧೯೮೪ರಲ್ಲಿ, “ಕೋಲ್ಕತಾರ್ ಫೆರಿಯೋಲಾರ್ ಡಾಕ್ ಆರ್ ರಸ್ತಾರ್ ಆವಾಜ್” ( ದಿ ಕ್ರೈಸ್ ಆಫ್ ದಿ ಹಾಕರ್ ಅಂಡ್ ಅದರ್ ಸ್ಟ್ರೀಟ್ ಸೌಂಡ್ಸ್ ಆಫ್ ಕೋಲ್ಕತ್ತಾ ) ಎಂಬ ಶೀರ್ಷಿಕೆಯ ಆಕರ್ಷಕ ಪುಟ್ಟ ಕೃತಿಯನ್ನು ರಾಧಾಪ್ರಸಾದ್ ಗುಪ್ತಾ ಎನ್ನುವವರು ಬರೆದಿದ್ದರು , ಬೀದಿ ಧ್ವನಿಗಳ ಸಂಗ್ರಹವನ್ನೂ ಮಾಡಿದ್ದರು. ಮುಂಬೈಯ ಚಲನಚಿತ್ರೋದ್ಯಮವೂ ಬೀದಿಯ ವಿವಿಧ ಕೂಗುಗಳನ್ನು ಮತ್ತು ವ್ಯಾಪಾರಿಗಳನ್ನು ತನ್ನದೇ ರೀತಿಯಲ್ಲಿ ಚಿತ್ರಿಸಿ ಸ್ಮರಿಸುವ ಪ್ರಯತ್ನ ಮಾಡಿದೆ . ಹಿಂದಿ ಚಿತ್ರರಂಗದ ಕಪ್ಪು ಬಿಳುಪು ಯುಗದ ಪ್ರಸಿದ್ಧ ಹಾಸ್ಯ ನಟ ಜಾನಿ ವಾಕರ್, ‘ತೆಲ್ ಮಾಲಿಶ್’ ಸೇವೆಯನ್ನು ಮಾರುವ ಮೂಗಿನ ಧ್ವನಿಯ ಬೀದಿ ವ್ಯಾಪಾರಿಯಾದದ್ದು ಅವುಗಳಲ್ಲೊಂದು .
ಬೀದಿ ಮಾರಾಟಗಾರರು ಮತ್ತು ಅವರು ಹೊರಡಿಸುವ ಸದ್ದುಗಳು ಸಾಲುಗಳು ಎಲ್ಲ ಕಾಲ ಮತ್ತ್ತು ಊರುಗಳಲ್ಲಿ , ಗ್ರಾಹಕ ಸಮುದಾಯಕ್ಕೆ ಅಗತ್ಯ ವಸ್ತುಗಳನ್ನು ಸೇವೆಯನ್ನು ಒದಗಿಸಿದರೆ , ಸಾಹಿತ್ಯ ಮತ್ತು ಸೃಜನಶೀಲ ಕಲೆಗಳಿಗೆ ಅನಿಯಮಿತ ಕಲ್ಪನೆ ಮತ್ತು ಸರಕುಗಳನ್ನು ನೀಡುತ್ತವೆ. ಇನ್ನು ಬೀದಿ ಜಗತ್ತಿನ ಮುಖ್ಯ ಪಾಲುದಾರರಾದ ವ್ಯಾಪಾರಸ್ಥರು , ಸ್ಥಳೀಯ , ದೂರದ ದಾರಿಹೋಕ ಗ್ರಾಹಕರು , ಆಸುಪಾಸಿನ ಮನೆಯವರ ಮಟ್ಟಿಗ ಬೀದಿಯ ನಿತ್ಯದ ವಿದ್ಯಮಾನ ವಿಭಿನ್ನ ಅನುಭವಗಳನ್ನು ನೀಡುತ್ತಿರುತ್ತವೆ ಮತ್ತೆ ಬೇರೆಬೇರೆ ಅಭಿಪ್ರಾಯಗಳನ್ನೂ ರೂಪಿಸುತ್ತವೆ . ಇನ್ನು ರಸ್ತೆ ಮತ್ತು ಕಾಲುಹಾದಿಯ ಆಡಳಿತದ ಜವಾಬ್ದಾರಿ ಹೊತ್ತ ನಗರ ಸಭೆ ಮತ್ತಿತರ ಸರಕಾರಿ ಸಂಸ್ಥೆಗಳು ಕೆಲವೊಮ್ಮೆ ಕಾನೂನು ಸುವವಸ್ಥೆಯ ಕನ್ನಡಕದಿಂದಲೂ ಮತ್ತೆ ಕೆಲವು ಸಲ ಅಸಡ್ಡೆಯಿಂದಲೂ ಇಲ್ಲದಿದ್ದರೆ ವೈಯಕ್ತಿಕ ಲಾಭದ ನಿಟ್ಟಿನಿಂದಲೂ ಎಲ್ಲವನ್ನೂ ನೋಡುತ್ತಾರೆ. ಇವರೆಲ್ಲರೂ ಸೇರಿದ ಬೀದಿ ವ್ಯಾಪಾರದ ಜಗತ್ತು, ಸರಳ ಸುಲಲಿತ ಕವಿತೆಗಳಲ್ಲಿ ಪ್ರಬಂಧಗಳಲ್ಲಿ ಬರುವಂತೆ ರಮ್ಯ ಆಗಿರುವುದು ಸಾಧ್ಯ ಇಲ್ಲ. ಹಾಗಾಗಿ ಬೀದಿ ವ್ಯಾಪಾರದ ಬಗ್ಗೆ ಪರ ವಿರೋಧಗಳು ಉದ್ಭವಿಸುತ್ತಿರುತ್ತವೆ, ಮತ್ತೆ ಇತಿಹಾಸದಲ್ಲಿಯೂ ಕುತೂಹಲಕರ ಮತ್ತು ವಿಶಿಷ್ಟ ಪ್ರತಿಕ್ರಿಯೆಗಳು ಹುಟ್ಟಿದ ಸಂದರ್ಭಗಳು ಇವೆ.
ರಾಲ್ಫ್ ಕ್ರೋಶೆಟ್ ಎಂಬಾತ ಡಿಸೆಂಬರ್ ೧೭೧೧ರಲ್ಲಿ ” ದಿ ಸ್ಪೆಕ್ಟೇಟರ್” ಪತ್ರಿಕೆ ಕಾಗದ ಬರೆದು, ಲಂಡನ್‌ನ ನಾಗರಿಕ ಅಧಿಕಾರಿಗಳು “ಪ್ರಸ್ತುತ ಯಾವುದೇ ರೀತಿಯ ನಿಯಮಗಳು ಅಥವಾ ಶಿಸ್ತಿನ ಅಡಿಯಲ್ಲಿ ಇಲ್ಲದ ಲಂಡನ್‌ನ ಕೂಗುಗಳ ಬಗ್ಗೆ ಸಾಮಾನ್ಯ ನಿಯಂತ್ರಕ” ಹುದ್ದೆಯನ್ನು ಸೃಷ್ಟಿಸಬೇಕೆಂದು ತಿಳಿಸಿದ್ದ. ಮತ್ತೆ ಆ ಹುದ್ದೆಗೆ ತಾನೇ ಅತ್ಯುತ್ತಮ ವ್ಯಕ್ತಿ ಎಂದೂ ಘೋಷಿಸಿಕೊಂಡಿದ್ದ, ಅವನದೇ ಆಯ್ಕೆಗೆ ಆತ ನೀಡಿದ್ದ ಕಾರಣಗಳೆಂದರೆ ಅವನಿಗಿದ್ದ ಬಲಿಷ್ಠವಾದ ಶ್ವಾಸಕೋಶಗಳು, ಬ್ರಿಟಿಷ್ ವ್ಯಾಪಾರದ ಬಗೆಗಿನ ಅಪಾರ ಒಳನೋಟ ಮತ್ತು “ಸಂಗೀತದಲ್ಲಿ ಸಮರ್ಪಕ ಪರಿಣತಿ” . ಹಾಗಂತ ಲಂಡನ್ನಿನ ನಾಗರಿಕ ಅಧಿಕಾರಿಗಳು ಅವನ ಕೋರಿಕೆಯನ್ನೇನೂ ಮನ್ನಿಸಿದ ಹಾಗಿಲ್ಲ. ಲಂಡನ್ ಮಾತ್ರವಲ್ಲದೆ ಎಲ್ಲ ನಗರಗಲ್ಲಿ, ಬೀದಿಯ ಸಂಕೀರ್ಣ ವ್ಯಾಪಾರ, ವಾಸ್ತವ್ಯ ಮತ್ತು ಅವುಗಳ ಮೇಲೆ ಅವಲಂಬಿತರಾಗಿರುವ ಸಾವಿರಾರು ಜನರ ಉದ್ಯೋಗಗಳನ್ನು ಅತಿಕ್ರಮಣ, ಕಾನೂನು ಉಲ್ಲಂಘನೆ ಎಂದು ಆಗಾಗ ಕರೆಯುವುದಿದೆ, ಕ್ರಮ ಕೈಗೊಳ್ಳುವುದಿದೆ . ಬೀದಿಗಳು, ಅವುಗಳ ಇಕ್ಕೆಲದಲ್ಲಿರುವ ಕಾಲ್ನಡಿಗೆಯ ಹಾದಿಗಳು ಯಾರಿಗೆ ಸೇರಿದ್ದು, ಅಥವಾ ಯಾರಿಗೆ ಎಷ್ಟು ಸೇರಿದ್ದು ಎನ್ನುವ ಜಿಜ್ಞಾಸೆಯೂ ಮುಂದುವರಿಯುತ್ತಲೇ ಇದೆ.
ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಮಹಾನಗರಗಳನ್ನು ಗಮನಿಸಿದರೆ ಅಲ್ಲಲ್ಲಿನ ನಿರ್ವಾಹಕರು, ಮಂತ್ರಿಗಳು ಕಾಲಕಾಲಕ್ಕೆ ವಿಶ್ವದರ್ಜೆಯ ನಗರವನ್ನು ನಿರ್ಮಿಸುವ ಆಶ್ವಾಸನೆ ನೀಡಿದ ಸಂದರ್ಭಗಳಿವೆ. ಕೊಲ್ಕತ್ತವನ್ನು ಲಂಡನ್ ಮಾಡುವುದು, ಮುಂಬೈಯನ್ನು ಪ್ಯಾರಿಸ್ ಗೆ ಹೋಲಿಸುವುದು ಮತ್ತೆ ಬೆಂಗಳೂರನ್ನು ಸಿಂಗಾಪುರವಾಗಿ ಮಾರ್ಪಡಿಸುವುದು ಇತ್ಯಾದಿ ಚುನಾವಣಾ ಪ್ರಣಾಳಿಕೆಯ ಭಾಗವೂ ಆಗಿರುತ್ತವೆ. ಆ ಭರವಸೆಗಳ ಕೆಲವಂಶವಾದರೂ ಅನುಷ್ಠಾನಕ್ಕೆ ಬರುವಾಗ ತೊಂದರೆ ಅನುಭವಿಸುವುದು ಹೆಚ್ಚಾಗಿ ಬೀದಿ ವ್ಯಾಪಾರಗಳೇ ಆಗಿರುತ್ತಾರೆ. ಯಾಕೆಂದರೆ ಅಂತಹ ಯೋಜನೆಗಳ ಗುರಿ ಎಂದೂ ರಸ್ತೆಗಳ ಗುಣಮಟ್ಟ , ಚರಂಡಿ ಸುವ್ಯವಸ್ಥೆ, ಸಾರಿಗೆ, ಮೂಲಭೂತ ಸೌಕರ್ಯಗಳು,ನಗರಾಡಳಿತಗಳನ್ನು ಉತ್ತಮಗೊಳಿಸುವುದು ಆಗಿರುವುದಿಲ್ಲ. ಬದಲಿಗೆ ಹೆಚ್ಚು ಹೆಚ್ಚು ಮೇಲ್ಸೇತುವೆಗಳನ್ನು ಕಟ್ಟುವುದೋ , ರಸ್ತೆ ಬದಿಯ ಸೌಂದರ್ಯ ಹೆಚ್ಚಿಸಲು ಗಿಡ ನೆಡುವುದೋ ,ಬಣ್ಣ ಹಚ್ಚುವುದೋ, ಹೊಸ ಬಡಾವಣೆಗಳನ್ನು ಎಬ್ಬಿಸುವುದೋ ಆಗಿರುತ್ತವೆ. ಪರಿಣಾಮವಾಗಿ ಬೀದಿಬದಿಯ ಅಂಗಡಿಗಳನ್ನು ಪರ್ಯಾಯ ವ್ಯವಸ್ಥೆ ಇಲ್ಲದೇ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಅಳಿಸಿಹಾಕುವುದು ನಡೆಯುತ್ತದೆ. ಹಾಗಂತ ಬೀದಿ ವ್ಯಾಪಾರಿಗಳಿಂದ ಪಾದಚಾರಿ ಮಾರ್ಗಗಳು ಪೂರ್ತಿ ಮುಚ್ಚಿ ಹೋಗಿ ಅಸುರಕ್ಷತೆಯನ್ನು ಅನಾನುಕೂಲವನ್ನು ತಂದೊಡ್ಡುವ ಉದಾಹರಣೆಗಳೂ ಹಲವು ಇವೆ. ಬೀದಿ ವ್ಯಾಪಾರ ಎಲ್ಲಿ ಹೇಗೆ ಇರಬೇಕು ಎನ್ನುವುದು ಒಂದು ಏಕಪಕ್ಷೀಯ ಸವಾಲು ಅಥವಾ ಚರ್ಚೆ ಅಲ್ಲ. ಬೀದಿ ವ್ಯಾಪಾರ ಯಾವ ನಗರದ ಯಾವ ಯಾವ ಬೀದಿಗಳಲ್ಲಿ ಎಷ್ಟು ಹೇಗಿರಬೇಕು , ಎಲ್ಲರಿಗೂ ಹೊಂದುವ, ಸಮತೋಲಿತ ಪರಿಹಾರಕ್ಕೆ ಎಂತಹ ಚಿಂತನೆ , ತಯಾರಿ ಮತ್ತು ಅನುಷ್ಠಾನ ಬೇಕು ಎನ್ನುವ ಅರಿವು ನಗರಾಧಿಕಾರ ಅಥವಾ ಸರಕಾರಕ್ಕೆ ಇದ್ದಂತಿಲ್ಲ. ಜಗತ್ತಿನ ಪ್ರತಿ ಜೀವಿಗೂ ಸೇರಬೇಕಾಗಿರುವ ನೆಲ ಜಲ ಗಾಳಿ ಇನ್ನಿತರ ಮೂಲಭೂತ ವಿಷಯಗಳಲ್ಲಿ ಯಾರ ಹಕ್ಕು ಎಷ್ಟು ಹೇಗೆ ಎನ್ನುವುದನ್ನು ತೀರ್ಮಾನಿಸಿ ವ್ಯವಹರಿಸುವ ಮನೋಧರ್ಮ , ವೈಶಾಲ್ಯ , ಸುಲಲಿತ ಪ್ರಕ್ರಿಯೆ ಮತ್ತು ಇಚ್ಚಾಶಕ್ತಿಯ ಕೊರತೆ ಇರುವುದರಿಂದ , ಬೀದಿ ವ್ಯಾಪಾರಿಗಳಿಗೆ ಸೂಕ್ತ ಸಂಘಟನೆ ,ಪ್ರಾತಿನಿಧ್ಯವೂ ಇಲ್ಲದ ಕಾರಣ ಹಾಗೊಂದು ನ್ಯಾಯಯುತ ಚರ್ಚೆ, ಪರಾಮರ್ಶೆ ನಡೆಯುವುದು ಸಾಧ್ಯ ಆಗಿಲ್ಲ.
೧೯೭೦-೮೦ರ ದಶಕದಲ್ಲಿ ನಡೆದ ಬೀದಿ ವ್ಯಾಪಾರಿಗಳ ಹಿಂಸಾತ್ಮಕ ತೆರವುಗಳ ನಂತರ, ಭಾರತದಲ್ಲಿನ ಮಾರಾಟಗಾರರ ಸಂಘಗಳು ಪೀಡಕ ಕಾನೂನುಗಳು ಮತ್ತು ಸಾಮಾಜಿಕ ಅಪಪ್ರಚಾರವನ್ನು ತಡೆಯಲು ದೀರ್ಘ ಕಾನೂನು ಹೋರಾಟಗಳನ್ನು ನಡೆಸಿದ್ದವು. ಪರಿಣಾಮವಾಗಿ ಬೀದಿ ವ್ಯಾಪಾರ ಹಂತಹಂತವಾಗಿ ಕಾನೂನಿನ ಚೌಕಟ್ಟಿನಲ್ಲಿ ಗುರುತು ಪಡೆಯುವಂತಾಯಿತು. National Association of Street Vendors of India ಮತ್ತು Self Employed Women’s Associationಗಳ ದಶಕಕ್ಕಿಂತ ಮಿಕ್ಕಿದ ಹೋರಾಟದ ಬಳಿಕ, Protection of Livelihoods and Regulation of Street Vending (PLRSV) ಮಸೂದೆಯನ್ನು ೨೦೧೪ರಲ್ಲಿ ಕಾನೂನಾಗಿ ಅಂಗೀಕರಿಸಲಾಯಿತು. ಈ ಕಾನೂನಿಗೆ ಮಿತಿಗಳಿದ್ದರೂ, ಬೀದಿ ಮಾರಾಟಗಾರರಿಗೆ ಅದೊಂದು ಮಹತ್ವದ ವಿಜಯವಾಗಿತ್ತು. ಈ ಕಾಯ್ದೆಯು ಬೀದಿ ಮಾರಾಟವನ್ನು , ನಿರ್ಬಂಧಿಸಿ ತಡೆಯಬೇಕಾದ ವ್ಯವಹಾರವಲ್ಲ , ರಕ್ಷಿಸಿ ಉತ್ತೇಜಿಸಬೇಕಾದ ಮಾನ್ಯ ವೃತ್ತಿಯಾಗಿ ಗುರುತಿಸಿತು. ಈಗ ನಗರದ ಜನಸಂಖ್ಯೆಯ ೨.೫% ವರೆಗೆ ಮಾರಾಟ ಪರವಾನಿಗೆಗಳನ್ನು ನೀಡಬಹುದಾಗಿದೆ. ಮಾರಾಟಗಾರರ ಸಮಿತಿಗಳಲ್ಲಿ ಸಂಘಗಳಿಗೆ ವ್ಯಾಪಕ ಪ್ರಾತಿನಿಧ್ಯ ದೊರೆತಿದೆ. ಮಾರಾಟಗಾರರು ಮತ್ತು ಖರೀದಿದಾರರು ಸಾಮಾನ್ಯವಾಗಿ ಸೇರುವ ಸ್ಥಳಗಳನ್ನು, ‘natural markets’ ಎಂದೂ ಕರೆಯಲಾಗುತ್ತದೆ. ಆದರೆ ಇತರ ಹಲವು ಕಾಯ್ದೆಗಳ ಫಲಾನುಭವಿಗಳಿಗೆ ಆದಂತೆ ಈ ಕಾಯ್ದೆಗೂ ಅಂಗೀಕಾರ ಸಿಕ್ಕಿ ಹಲವು ವರ್ಷಗಳಾದರೂ, ಬೀದಿ ವ್ಯಾಪಾರಿಗಳಿಗೇನೂ ಬಹಳ ಬಲ ಬಂದಂತೆ ಅನಿಸುವುದಿಲ್ಲ. ಕಾಯಿದೆಯ ಅನುಷ್ಠಾನದಲ್ಲಿ ನಿಧಾನ ಪ್ರಗತಿಯಷ್ಟೇ ಕಾಣುತ್ತಿದೆ. ತೆರವುಗೊಳಿಸುವಿಕೆ, ಕಾನೂನುಬಾಹಿರ ವಶಪಡಿಸಿಕೊಳ್ಳುವಿಕೆ ಮತ್ತು ಸರಕುಗಳ ನಾಶ ಮುಂದುವರಿದಿದೆ. ಪರವಾನಿಗೆ ಇಲ್ಲದೇ ವ್ಯವಹರಿಸುವವರನ್ನು ಸರಕಾರೀ ಯಂತ್ರದ ಆಲಸ್ಯ ಅಸಡ್ಡೆಯ ಕಾರಣಕ್ಕೋ ಲಂಚದ ಆಸೆಗೋ , ಕಾಲುಹಾದಿಯಲ್ಲಿ ಮೊದಲಿಗೆ ನೆಲೆ ಊರಲು ಬಿಡುವುದು , ಆಮೇಲೆ ಅಲ್ಲಿ ಅವರು ಬದುಕು ಕಟ್ಟಿಕೊಂಡ ನಂತರ ಅಚಾನಕ್ ಆಗಿ ಒಂದು ದಿನ ಗುಳೆ ಹೊರಡಿಸುವುದು ನಡೆಯುತ್ತಲೇ ಇದೆ . ಬೀದಿ ವ್ಯಾಪಾರದ ಸಂಕೀರ್ಣ ಪ್ರಪಂಚದಲ್ಲಿ ಹೊಸ ಸವಾಲುಗಳು ಆಯಾಮಗಳು ಸೇರಿಕೊಳ್ಳುತ್ತಲೇ ಇವೆ.
ನಿರಂತರವಾಗಿ ನಡೆಯುತ್ತಲೇ ಇರುವ ಬೀದಿಯ ಹಕ್ಕು ಮತ್ತು ಅವಕಾಶಗಳ ಕುರಿತಾದ ಜಿಜ್ಞಾಸೆಯ ಹೊರತಾಗಿಯೂ ಬೀದಿಗಳು ಅಪಾರ ಸಾಧ್ಯತೆಯ ಸ್ಥಳಗಳಾಗಿಯೇ ಉಳಿದಿವೆ ಉಳಿಯಲಿವೆ. ಪಾದಚಾರಿಗಳು, ಬೀದಿ ವ್ಯಾಪಾರಿಗಳು ಮತ್ತು ಆಡಳಿತ ಯಂತ್ರದ ನಡುವಿನ ಸಂಘರ್ಷವೂ ಮುಂದುವರಿಯಲಿದೆ. ಇಂದಿಗೂ ಭಾರತದ ಬಹುತೇಕ ನಗರಗಳಲ್ಲಿ ಮಾತ್ರವಲ್ಲದೇ ಜಗತ್ತಿನ ಎಲ್ಲ ದೊಡ್ಡ ನಗರಗಳಲ್ಲಿ ವ್ಯಾಪಾರಿಗಳ ಸದ್ದು ಗದ್ದಲ ಕೂಗುಗಳು ಕೇಳಿಸುತ್ತವೆ. ಸಂಚಾರಿ ಗಾಡಿಗಳು , ವಿಧವಿಧದ ಕೂಗುಗಳು ಶಬ್ದಗಳು ಸಂಖ್ಯೆಯಲ್ಲಿ ಇಳಿಯುತ್ತಿದ್ದರೂ ಈಗಲೂ ಹಲವು ನಗರಗಳ ಹಲವು ಬೀದಿಗಳ ವಿಶಿಷ್ಟ ಗುರುತಾಗಿ ಉಳಿದಿವೆ . ಚಾರುಲತಾಳ ಮಹಲಿನ ಕಿಟಕಿಯಿಂದ ಕಾಣಿಸಿದ , ಸರೋಜಿನಿ ನಾಯ್ಡುರ ಕವಿತೆಯಲ್ಲಿ ಹಣ್ಣು ಹೂವನ್ನು ಕೊಂಡುಕೊಳ್ಳಿರೆಂದು ಕೂಗಿ ಕರೆದ , ಬೆಂಗಳೂರು, ಮುಂಬೈ, ಕೋಲ್ಕತ್ತಾ , ಲಂಡನ್, ಡಬ್ಲಿನ್ ಗಳ ಶಬ್ದ ವಾಸನೆ ಚಿತ್ರಗಳನ್ನು ಆಪ್ತವೂ ಸ್ಮರಣೀಯವೂ ಆಗಿಸಿದ ವ್ಯಾಪಾರಿಗಳು ನಗರದ ಬೀದಿಗಳಲ್ಲಿ ಎಷ್ಟು ಕಾಲದಿಂದ ಸಂಚರಿಸುತ್ತಿದ್ದಾರೆ ,ಇನ್ನೆಷ್ಟು ಕಾಲ ಅಲ್ಲೇ ಇರಲಿಕ್ಕಿದ್ದಾರೆ?