ಏನಿಲ್ಲ, ಎಲ್ಲವೂ ಬರೀ ಮೊಸರನ್ನ!

ಏನಾದರೂ ಬರೆಯಬೇಕು, ಬರೆಯಲೇಬೇಕು ಎಂದು ಪಟ್ಟಿ ಮಾಡಿ ಇಟ್ಟುಕೊಂಡ, ಅರ್ಧ ಬರೆದು ಡ್ರಾಫ್ಟ್‌ನಲ್ಲಿ ಹೆಪ್ಪು ಹಾಕಿಟ್ಟ ಲೇಖನಗಳನ್ನು ವಾರಕ್ಕೊಂದರಂತೆ ಬರೆದರೂ ಸಾಕು, ಅದೆಷ್ಟು ಪುಸ್ತಕಗಳಿಗೆ ಸರಕಾಗುತ್ತದೆಯೋ ಎಂಬ ಆಲೋಚನೆಯನ್ನು ಮನಸ್ಸಿನಲ್ಲೇ ಮಥಿಸುತ್ತ, ಕೈಗೆ ಸಿಗದ ಕನಸಿನ ನವನೀತ ಕೂಡಿಟ್ಟು, ಅದು ಹೇಳಹೆಸರಿಲ್ಲದೆ ಕರಗಿಯೂ ಹೋಗಿದೆ.

ಯಾಕೆ ಬರೆಯಲು ಸಾಧ್ಯವಾಗುತ್ತಿಲ್ಲ? ಉತ್ತರ ನನ್ನ ಬಳಿಯೂ ಇಲ್ಲ. ರಾತ್ರಿ ಹಾಸಿಗೆಗೆ ಬೆನ್ನು ತಾಗಿಸುತ್ತಲೇ ಒಂದು ಜಾದೂ ಘಟಿಸುತ್ತದೆ. ಕಣ್ಣು ಸೀಲಿಂಗ್ ನೋಡುತ್ತಲೇ ಮನಸ್ಸು ಆ ಮಂದಗತ್ತಲಿನಲ್ಲೇ ಸ್ಪುಟವಾಗಿ ಬರೆಯಲು ಶುರುಮಾಡುತ್ತದೆ.

ಛೇ! ಎಷ್ಟು ಚಂದದ ಸಾಲು ಇದು, ನನ್ನ ದೃಷ್ಟಿಯೇ ತಾಕುವಷ್ಟು ಚಂದದ ವಿಷಯ ಮಂಡನೆ. ಆಗಿದ್ದಾಗಲಿ, ಈಗಲೇ ಎದ್ದು ಕುಳಿತು ಸೀಲಿಂಗ್ ಮೇಲೆ ಗೀಚಿದ್ದನ್ನು ಪೇಪರ್ ಮೇಲೋ ಕಿಲೀಮಣೆಯನ್ನೇ ತಟ್ಟುತ್ತ ಕುಟ್ಟುತ್ತ ಬರೆದೇ ಬಿಡೋಣ ಅಂತ ಅನಿಸುತ್ತದೆ. ಆದರೂ ಮತ್ತದೇ ಉದಾಸೀನದ ಅಪರಾವತಾರದಂತಿರುವ ಅಮಿತೆಯ ಮನಸು, `ಅಯ್ಯೋ ಮಲ್ಕೊಳಮ್ಮ ಸುಮ್ಮನೆ ಸಾಕು, ನಾಳೆ ಸಾವಿರ ಕೆಲಸ ಇದೆ` ಅಂತ ಲಾಲಿಯಂತೆ ರಾಗವಾಗಿ ಹೇಳಿ ಹೇಳಿ ಮಲಗುವಂತೆ ಮಾಡಿಬಿಡುತ್ತದೆ. ನಿದ್ದೆ ಬಂದವರಿಗೆ ಹಾಸಿಗೆ ತೋರಿಸುವುದು ಅನ್ನುವುದು ಇದಕ್ಕೇ ಇರಬೇಕು.

ಈ ವಾರ `ಅನಿವಾಸಿ` ಸಂಚಿಕೆಗೆ ಬರೆಯಬೇಕು, ಏನಿದೆ ಸರಕು? ಎಂಬ ರಿಮೈಂಡರ್ ಶೈಲಿಯ ಪ್ರಶ್ನೆ ಮನಸ್ಸಿನಲ್ಲಿ ಬರುತ್ತಲೇ ಇತ್ತು. ಬರೆಯಲು ಒಲ್ಲದ ಮನಸ್ಸು, ಅದು-ಇದು ಕಥೆ ಹಾರಿಸುತ್ತ ಒಮ್ಮೆಲೇ, `ಅಮಿತಾ, ನೀನು ಅಡುಗೆ ಮಾಡಿಲ್ಲ ಇನ್ನೂ…` ಹಾಗೆಂದು ನೆನಪಿಸಿತು. ಏನು ಬರೆಯಲಿ? ಎಂಬ ಪ್ರಶ್ನೆ ಹೋಗಿ, ಏನಡುಗೆ ಮಾಡಲಿ ಎಂಬ ಪ್ರಶ್ನೆ ಕಾಡತೊಡಗಿತು.

ಇಂದು ಮಕ್ಕಳು, ಮನೆಯವರು ಯಾರೂ ಇಲ್ಲ. ಒಬ್ಬಳಿಗೆಂದು ಏನು ಮಾಡೋದು? ಎಂಬೆಲ್ಲ ಸಬೂಬು ಹೇಳಿ ಏನಾದರೊಂದು ಮಾಡಿ ತಿಂದು ಮುಗಿಸುವ ಜೀವವಲ್ಲ ನನ್ನದು. ಮನೆಯಲ್ಲಿ ಯಾರೂ ಇಲ್ಲ ಅಂತಾದರೆ ಅಮಿತಾಳಿಗೆ ಇಷ್ಟವಿರುವ, ಮನೆಯವರು ಮಕ್ಕಳು ಅಷ್ಟೇನೂ ಇಷ್ಟಪಡದ ಅಡುಗೆಗಳನ್ನು, ತರಹೇವಾರಿ ಪಲ್ಯ, ಚಟ್ನಿ, ಮತ್ತೊಂದು-ಇನ್ನೊಂದು ಮಾಡಿ ಅಚ್ಚುಕಟ್ಟಾಗಿ ತಟ್ಟೆಯಲ್ಲಿ ರಂಗೋಲಿಯಂತೆ ಜೋಡಿಸಿ, ಒಂದೆರಡು ಫೋಟೋ ತೆಗೆದು, ಪ್ರತಿ ತುತ್ತು ತಿನ್ನುವಾಗ ಅಜ್ಜಿ, ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ, ಸೋದರತ್ತೆಯರನ್ನ ನೆನಪು ಮಾಡಿಕೊಳ್ಳುತ್ತ, ಅಡುಗೆ-ಊಟದ ಕುರಿತು ಈ ಪರಿ ಪ್ರೀತಿಯನ್ನು ನನ್ನಲ್ಲಿ ತುಂಬಿದ ಭಗವಂತನಿಗೆ ಥ್ಯಾಂಕ್ಸ್ ಹೇಳುತ್ತಾ ನಿರುಮ್ಮಳವಾಗಿ ಊಟ ಮಾಡುತ್ತೇನೆ.

ಇವತ್ತು ಅಂಥದ್ದೇ ಒಂದು ಸುದಿನ. ಆದರೆ ಇವತ್ತು ಮನಸ್ಸು, ನಾಲಿಗೆ, ಬುದ್ಧಿ, ಹೃದಯ ಎಲ್ಲರ ಬಯಕೆ ಒಂದೇ! ಮೊಸರು ಬುತ್ತಿ. ಇದು ಸರ್ವಸಮ್ಮತವಾಗಿ ನಿರ್ಧಾರವಾದ ಅಡುಗೆ. ಆದ್ದರಿಂದ ಅಡುಗೆಮನೆಯಲ್ಲಿಯೂ ನನ್ನೊಳಗೂ ಒಂದು ಬಗೆಯ ಉಲ್ಲಾಸ ತುಂಬಿ, ಖುಷಿಯಲ್ಲಿ ಹಾಡುಗಳು ತನ್ನಿಂದತಾನೇ ಒಂದೊಂದಾಗಿ ಅಪ್ರಯತ್ನಪೂರ್ವಕವಾಗಿ ಹೊಮ್ಮತೊಡಗಿದವು. ಅಕ್ಕಿ ತೊಳೆದು ಒಂದಷ್ಟು ಹೆಚ್ಚಿಗೆಯೇ ನೀರಿಟ್ಟು ಮಿಜ್ಜಿ ಅನ್ನದ ತಯಾರಿ ಶುರುಮಾಡಿದೆ. ಅದರ ಜೊತೆಗೆ ಒಂದಷ್ಟು ಮಜ್ಜಿಗೆ ಮೆಣಸು, ಬೆಳ್ಳುಳ್ಳಿ ಸಂಡಿಗೆ, ಹುರುಳಿ ಹಪ್ಪಳ ಹುರಿದು ಗಾಳಿಯಾಡದ ಡಬ್ಬದಲ್ಲಿ ಪೇರಿಸಿದೆ.

ಕೆಂಪು ಈರುಳ್ಳಿ, ಹಸಿಮೆಣಸು, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿಟ್ಟುಕೊಂಡು, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಲ್ಬತ್ತಿನಲ್ಲಿ ಜಜ್ಜಿಕೊಂಡೆ. ಅನ್ನ ಆಗಲು ಇನ್ನೂ ಸಮಯವಿತ್ತು. ಮತ್ತೇನು ಮಾಡೋದು? ನಾನು ನನ್ನೊಂದಿಗೇ ಹರಟೆ ಹೊಡೆಯಲು ಶುರು ಮಾಡಿದೆ. ಈ ಮೊಸರನ್ನ ಎಂಬುದು ಅದೆಷ್ಟು ಸರಳ ಅಲ್ವಾ? ಜೀವಕ್ಕೂ ಹಿತ ಮಾಡಲೂ ಸುಲಭ. ಹಾಗೆ ನೋಡಿದರೆ ಮೊಸರನ್ನ ಆಧ್ಯಾತ್ಮದ ತತ್ವವನ್ನು ತಟ್ಟೆಯಲ್ಲಿದ್ದೇ ಮೌನವಾಗಿಯೇ ಬೋಧಿಸುತ್ತದೆ.

`ಅಯ್ಯೋ ಮೊಸರನ್ನವಾ? ಮಕ್ಕಳೂ ಕಲಸಬಹುದು.` ಹಾಗಾದರೆ ಎಷ್ಟೊಂದು ಸರಳ ಮಸರನ್ನ ಇರುವಾಗ ನಾವ್ಯಾಕೆ ಸಂಕೀರ್ಣತೆಯ ಹಿಂದೆ ಬಿದ್ದು ಒದ್ದಾಡುತ್ತೇವೆ? ನಿಜಕ್ಕೂ ಈ ಜೀವನಕ್ಕೆ ಬೇಕಾಗಿರೋದು ಒಂದು ತಟ್ಟೆ ಮೊಸರನ್ನ ಅಷ್ಟೇ! ಹೀಗೆಲ್ಲ ನನ್ನ ತಲೆ ಮಾತಾ ಅಮಿತಾನಂದಮಯಿಯಂತೆ ಪ್ರವಚನ ಕೊಡುತ್ತಿರುವಾಗ, ನಾನು ಎದ್ದು ಅನ್ನ ಬೆಂದಿದೆ ಹೇಗೆ ಬೇಕೋ ಹಾಗೇ ಎಂದು ನನ್ನಷ್ಟಕ್ಕೆ ಖುಷಿ ಪಟ್ಟೆ.

ಈ ಬುತ್ತಿ ಅನ್ನ ಉಳಿದ ಮೊಸರನ್ನದ ರೀತಿಯಲ್ಲ. ಉತ್ತರ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮಂದಿಗೆ, ಅಥವಾ ಉತ್ತರ ಕರ್ನಾಟಕ ಭಾಗದ ಆತ್ಮೀಯ ಸ್ನೇಹಿತರು ನಿಮಗಿದ್ದರೆ ಮಾತ್ರ ಈ ವಿಧದ ಮೊಸರನ್ನದ ರುಚಿ ನಿಮಗೆ ಗೊತ್ತಿರುತ್ತದೆ ಅಥವಾ ದಕ್ಕಿರುತ್ತದೆ.

ಮೆತ್ತಗೆ ಬೇಯಿಸಿಕೊಂಡ ಅನ್ನ, ಕೆನೆ ಮೊಸರು, ಒಂಚೂರು ಹಾಲು, ಉಪ್ಪು, ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸು, ಜಜ್ಜಿಕೊಂಡ ಬೆಳ್ಳುಳ್ಳಿ ಮತ್ತು ಶುಂಠಿ ಇಷ್ಟನ್ನೂ ಸೇರಿಸಿ ಅನ್ನವನ್ನು ನುರಿಯುತ್ತ, ಉಂಡೆ ಕಟ್ಟುವ ಹದಕ್ಕೆ ಬಂದಾಗ ರಾಗಿ ಮುದ್ದೆಯ ಅಳತೆಯ ಉಂಡೆ ಕಟ್ಟಬೇಕು.

ಈ ಬುತ್ತಿಯನ್ನ ಮದುವೆಯ ಮೊದಲು, ಮದುವೆಯ ನಂತರ, ಶುಭಕಾರ್ಯಗಳು ಇದ್ದಾಗ ನೆಂಟರ ಮನೆಗೆ, ಬೀಗರ ಮನೆಗೆ ರೊಟ್ಟಿ, ವಿಧವಿಧದ ಪಲ್ಯ, ಚಟ್ನಿ, ಪುಡಿ, ಸಿಹಿ, ಝುಣುಕದ ವಡಿ, ಉಂಡಿ, ಕರ್ಜಿಕಾಯಿ, ಕರಿದ ಸಂಡಿಗೆ, ವಡೆ, ಹಪ್ಪಳಗಳೊಂದಿಗೆ ಕಳಿಸಿಕೊಡಲಾಗುತ್ತದೆ. ಹಾಗೆ ಆ ಊರಿನಿಂದ ಬಂದು ಸೇರಿದ ಬುತ್ತಿಯನ್ನು ಈ ಊರಿನ ಪರಿಚಿತ, ಆತ್ಮೀಯರೊಂದಿಗೆ ಹಂಚಿಕೊಂಡು ಸಂಭ್ರಮಿಸಿದಾಗಲೇ ಆ ಊಟಕ್ಕೊಂದು ಮೆರಗು ಬರುವುದು.

ನನ್ನ ತವರುಮನೆ ಮುಂಡಗೋಡದಲ್ಲಿ ನಮಗೆ ಎಲ್ಲರೂ ಪರಿಚಿತರಾಗಿರುವುದಕ್ಕೆ ಇಂಥ ಅಸಂಖ್ಯಾತ ಬುತ್ತಿ ಊಟಗಳನ್ನು ಆಸ್ವಾಧಿಸಿದ್ದೇನೆ. `ಇನ್ನೂ ಬುತ್ತಿ ತಂದುಕೊಟ್ಟಿಲ್ವೇ?` ಎಂದು ಕಾತರತೆಯಿಂದ ಕಾದು ಕುಳಿತದ್ದು ಇದೆ. ಒಂದು ರೀತಿಯಲ್ಲಿ `ಅಜ್ಜಿಗೆ ಅಜ್ಜನ ಚಿಂತೆಯಾದರೆ ಮೊಮ್ಮಗಳಿಗೆ ಕಜ್ಜಾಯದ ಚಿಂತೆ` ಎಂಬ ಗಾದೆಮಾತು ನನಗೆಂದೇ ರಚನೆಯಾಗಿದ್ದು ಎಂದು ಎಷ್ಟೋ ಸಲ ಅನಿಸಿದ್ದಿದೆ.

ಆದರೆ ನನ್ನ ಅಮ್ಮನಿಗೆ ಮಾತ್ರ ಈ ಬುತ್ತಿ ಅನ್ನ ಇಷ್ಟವಾಗದು. ಒಂದು, ಅದರಲ್ಲಿ ಬೆಳ್ಳುಳ್ಳಿ ಹಾಕುತ್ತಾರೆ ಎಂದು. ಮತ್ತೊಂದು, ಅನ್ನದ ಉಂಡೆ ಕಟ್ಟುವುದು ಪಿಂಡ ಇಡುವಾಗ ಮಾತ್ರ ಎಂಬುದು ಅವಿಭಜಿತ ದಕ್ಷಿಣ ಕನ್ನಡ ಮೂಲದ ಅಮ್ಮನ ಬಲವಾದ ನಂಬಿಕೆ. ಅದಕ್ಕೆ ಉಂಡೆ ಕಟ್ಟಿರುವ ಮೊಸರು ಬುತ್ತಿ ಅಮ್ಮ ತಿನ್ನುವುದಿಲ್ಲ.

ಹೇಗೂ ಮೊಸರನ್ನದ ಶ್ರುತಿ ತೀಡಿಯಾಗಿದೆ. ಇನ್ನೊಂದಿಷ್ಟು ಅದರ ಬಗ್ಗೆಯೇ ಹೇಳಿ ಬಿಡುವೆ. ಮೊಸರನ್ನ ಎಂಬ ಹೆಸರು ಒಂದೇ ಆದರೂ ಪ್ರಕಾರಗಳು ಹಲವು.

ಬುತ್ತಿ ಅನ್ನದ ನಂತರ ನನಗೆ ನೆನಪಿರುವ ಮತ್ತೊಂದು ಮೊಸರನ್ನದ ರುಚಿ ಎಂದರೆ ಆಂಧ್ರ ಮೂಲದ ಮಂದಿ ಮಾಡುವ ಉದ್ದಿನಬೇಳೆ, ಕಡಲೆಬೇಳೆ, ಶುಂಠಿ, ಚೂರೇ ಚೂರು ಅರಿಶಿನ ಹಾಕಿ ಚಂದದ ಒಗ್ಗರಣೆ ಕೊಟ್ಟು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಾಡಿದ, ಬಾಯಲ್ಲಿಟ್ಟರೆ ಕರಗಿಯೇ ಹೋಯಿತು ಅನ್ನುವಷ್ಟು ಹಗುರ-ಹಗುರವಾದ ಮೊಸರನ್ನ. ಇದರ ರುಚಿ ನೋಡುವ ಅವಕಾಶ ಸಿಕ್ಕಿದ್ದು ಪುಟ್ಟಪರ್ತಿಯಲ್ಲಿ. ಆಹಾ! ಅದೆಂಥ ಚಂದದ ಅನುಭೂತಿ ಅದು!

ನನ್ನ ಹೈಸ್ಕೂಲ್ ದಿನಗಳಲ್ಲಿ ಮೆತ್ತಗೆ ಮಾತನಾಡುವ, ಅಷ್ಟೇ ಚುರುಕು ಹುಡುಗಿ ಒಬ್ಬಳಿದ್ದಳು. ಆಕೆಯ ಹೆಸರು ನೇತ್ರಾವತಿ. ನಾವು ಸುಮಾರು ಎಂಟು ಸ್ನೇಹಿತೆಯರು ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುತ್ತಿದ್ದೆವು. ಊಟವನ್ನು ಹಂಚಿಕೊಳ್ಳುತ್ತಿದ್ದೆವು ಕೂಡ. ನೇತ್ರಾವತಿಯ ಅಮ್ಮ ಕಟ್ಟಿ ಕಳಿಸುತ್ತಿದ್ದ ಆ ಮೊಸರನ್ನ ತುಂಬಾ ವಿಭಿನ್ನವಾಗಿತ್ತು. ಆಕೆ ಮೊಸರನ್ನ ತಂದರೆ ಅರ್ಧ ಡಬ್ಬಿ ನನಗೆ ಎಂದು ಫಿಕ್ಸ್ ಆಗಿಬಿಟ್ಟಿತ್ತು. ಆಕೆಯನ್ನು ಕಾಡಿಸಿ ಪೀಡಿಸಿ ಆ ರೆಸಿಪಿಯನ್ನು ನಮ್ಮ ಮಸ್ತಿಷ್ಕದೊಳಗೆ ಸೇರಿಸಿಕೊಳ್ಳಲಾಯಿತು.

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು, ಅದಕ್ಕೆ ಹದ ಬಿಸಿಮಾಡಿದ ತೆಂಗಿನ ಎಣ್ಣೆ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ, ಅದಕ್ಕೆ ಮೊಸರು ಬೆರೆಸಿ, ಅದಕ್ಕೆ ತಣಿದ ಅನ್ನವನ್ನು ಬೆರೆಸಿ ಚೆನ್ನಾಗಿ ಕಲಸಿದರೆ ಆಯಿತು. ಇದರ ಜೊತೆ ಒಂದು ಹೋಳು ನಿಂಬೆ ಉಪ್ಪಿನಕಾಯಿ ಇದ್ದರಂತೂ ಊಟ ಸ್ವರ್ಗದ ಹಿತ್ತಲಿನಲ್ಲಿ ಕುಳಿತು ಸವಿದಷ್ಟು ರುಚಿ.

ನಾನು ಯೂನಿವರ್ಸಿಟಿಯಲ್ಲಿ ಇರುವಾಗ ಸೋಷಿಯಾಲಜಿ ಡಿಪಾರ್ಟ್ಮೆಂಟ್‌ನಲ್ಲಿ ಓದುತ್ತಿದ್ದ ಸರಸ್ವತಿ ಜೋಶಿ ಆತ್ಮೀಯ ಸ್ನೇಹಿತೆಯಾಗಿದ್ದಳು. ಪರೀಕ್ಷೆಗಳಿರುವಾಗ, ಅಥವಾ ಬೇಗನೆ ಕಾಲೇಜ್ ತಲುಪಬೇಕಾದ ದಿನಗಳಲ್ಲಿ ನಾನು ಸರಸ್ವತಿಯ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅವರ ಅಮ್ಮ ನನ್ನನ್ನು ತಮ್ಮ ಮಗಳಂತೆಯೇ ನೋಡಿಕೊಳ್ಳುತ್ತಿದ್ದರು. ಅವರು ಮಾಡುತ್ತಿದ್ದ ಮೊಸರನ್ನವೂ ವಿಶಿಷ್ಟ. ಅನ್ನ ಮತ್ತು ಮೊಸರನ್ನು ಉಪ್ಪಿನೊಂದಿಗೆ ಹದವಾಗಿ ಕಲಸಿ, ತುಪ್ಪದಲ್ಲಿ ಜಜ್ಜಿದ ಲವಂಗ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹದವಾಗಿ ತಾಳ್ಮೆಯಿಂದ ಹುರಿದು ಅನ್ನಕ್ಕೆ ಒಗ್ಗರಣೆ ಕೊಡುತ್ತಿದ್ದರು. ತುಪ್ಪದಲ್ಲಿ ಕರಿದ-ಹುರಿದ ಆ ಲವಂಗ ಹಲ್ಲಿಗೆ ಸಿಕ್ಕಾಗ `ಕುರ್ರುಮ್` ಎಂದು ನಮಗಷ್ಟೇ ಕೇಳುವ ಹಿತವಾದ ಸದ್ದು, ಒಣದ್ರಾಕ್ಷಿ ಕೊಡುತ್ತಿದ್ದ ಸಿಹಿಯಾದ `ಪಂಚ್`. ಜೊತೆಗೆ ಒಂದಷ್ಟು ಗೋಡಂಬಿಯ ಶ್ರೀಮಂತಿಕೆ! ಆ ಮೊಸರನ್ನದ ಚಂದವೇ ಬೇರೆ.

ಇನ್ನು ಹಣ್ಣುಗಳನ್ನು ಸೇರಿಸಿ ಮೊಸರನ್ನ ಕಲಸಿದ್ದನ್ನು ನಾನು ಮೊದಲು ತಿಂದಿದ್ದು, `Zee Sa Re Ga Ma Pa` ಎಂಬ ರಿಯಾಲಿಟಿ ಶೋಗೆ ಹೋದಾಗ. ಸ್ನೇಹಿತೆ, ಮತ್ತೀಗ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿರುವ ಶ್ರುತಿ ಪ್ರಶಾಂತ್ ಅವರ ಅಮ್ಮ ಎಲ್ಲ ಸ್ಪರ್ಧಿಗಳಿಗಾಗಿ ತಾವೇ ಅಡುಗೆ ಮಾಡಿಕೊಂಡು ಬಂದು, ಅಕ್ಕರೆಯಿಂದ ಉಣಬಡಿಸಿದಾಗ. ಅಲ್ಲೊಂದು-ಇಲ್ಲೊಂದು ಸಿಗುವ ದ್ರಾಕ್ಷಿ, ಹಾಗೇ ಬಾಯಲ್ಲಿ ಊಟೆಯಾಗುವ ದಾಳಿಂಬೆ ಕಾಳು, ಸಣ್ಣದಾಗಿ ಹೆಚ್ಚಿ ಹಾಕಿದ ಸೇಬು. ಅದಕ್ಕೆಲ್ಲ ಕಿರೀಟವಿಟ್ಟಂತೆ ಇದ್ದ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಉದ್ದಿನಬೇಳೆ, ಸಾಸಿವೆ, ಇಂಗಿನ ಒಗ್ಗರಣೆ. ದೇವರೇ, ಅದೆಷ್ಟು ರುಚಿಯಾಗಿತ್ತು! ಜೊತೆಗೆ ಬದನೆಕಾಯಿ ಎಣ್ಣೆಗಾಯಿ ಕೂಡ ಇತ್ತು.

ಅನ್ನ ಬೇಡ ಅಂದರೆ, ಮೊಸರವಲಕ್ಕಿಯೂ ಅಷ್ಟೇ ರುಚಿ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಭವನದ ಪಕ್ಕದಲ್ಲಿ ಆಗೊಂದು ಪುಟ್ಟ ಟೀ ಅಂಗಡಿ ಇತ್ತು. ಬಸಣ್ಣನ ಡಬ್ಬಿ ಅಂಗಡಿ ಅಂತಲೇ ಪ್ರಸಿದ್ಧವದು. ಅವಲಕ್ಕಿ, ಮಂಡಕ್ಕಿ, ಪುಲಾವ್, ಉಪ್ಪಿಟ್ಟು ಚಹಾ ಇಷ್ಟೇ ಅಲ್ಲಿಯ ಮೆನು.
ವಿಶೇಷ ಎಂದರೆ ಬಸಣ್ಣನ ನಗು ಮತ್ತು ಆತ್ಮೀಯತೆ.
ಅಕ್ಕಾರ್ ಬರ್ರಿ ಇವತ್ತೆನ್ ಕೊಡುನು ರಿ? ಪಲಾವ್? ಮೊಸರವಲಕ್ಕಿ? ಅನ್ನುತ್ತಲೇ ನನ್ನ ಉತ್ತರ ಸಿಗುವ ಮೊದಲೇ ಅವಲಕ್ಕಿ ತಟ್ಟೆ ಮುಂದೆ ಇಡುತ್ತಿದ್ದರು.
ಬಿಳಿ ಅವಲಕ್ಕಿ ಮೊಸರು, ಅದರಮೇಲೆ ಒಂದಷ್ಟು ಕೇಸರಿ ಬಣ್ಣದ ಪುಟಾಣಿ ಚಟ್ನಿ ಪುಡಿ. ಅಲ್ಲಲ್ಲಿ ತೇಲುತ್ತಿದ್ದ ಹಸಿಮೆಣಸು, ಕೊತ್ತಂಬರಿ ಸೊಪ್ಪು. ಬಿಸಿಲಿಗೆ ಮೊಸರು ಅವಲಕ್ಕಿ ತುಂಬಿದ ಆ ಕೈಅಗಲದ ತಟ್ಟೆ ಅಮೃತ ಸಮಾನವೆನಿಸುತ್ತಿತ್ತು.

ನಮ್ಮ ಹಳೇ ಮನೆಯ ಮುಂದೆ ನಮ್ಮದೇ ಸಾರಸ್ವತ ಸಮುದಾಯದ ಕುಟುಂಬದವರು ವಾಸವಿದ್ದರು. ಆ ಮನೆಯ ಮಕ್ಕಳು ಕರೆವಂತೆಯೇ ನಾವೂ ಆ ಮನೆಯ ಹಿರಿಯರನ್ನು ಆಯಿ ಮತ್ತು ಪಪ್ಪಾ ಅಂತಲೇ ಕರೆಯುತ್ತಿದ್ದೆವು. ಅವರ ಅಡುಗೆ ನಮ್ಮ ಅಡುಗೆ ಒಂದೇ ರೀತಿ ಆದರೂ ಆಯಿಯ ಕೈಯ ಕೆಲವೊಂದು ಅಡುಗೆಗಳು ಅತ್ಯದ್ಭುತವಾಗಿರುತ್ತಿದ್ದವು. ಅದರಲ್ಲಿ ಒಂದು ಈ ಮೊಸರವಲಕ್ಕಿ. ಅವಲಕ್ಕಿಯ ಪ್ರತಿ ಅಗಳು ಕೂಡ ಇಂಗು, ಕರಿಬೇವು, ಒಣಮೆಣಸಿನ ಒಗ್ಗರಣೆಯ ಘಮದಲ್ಲಿ ಮಿಂದು ಉಪ್ಪು ಒಂಚೂರು ಸಕ್ಕರೆಯನ್ನು ಮಯ್ಯಿಗೆ ಮೆತ್ತಿಕೊಂಡು ತುಳಸಿ ಪೂಜೆಯ ನಂತರ ನೈವೇದ್ಯವಾಗಲು ಕಾಯುತ್ತ ಕುಳಿತಿರುತ್ತಿತ್ತು ಮತ್ತು, ನಾವು ಅದನ್ನು ತಿನ್ನಲು. ನೆನೆಸಿಕೊಂಡರೆ ಈಗಲೂ ಬಾಯಿ ನೀರೂರುತ್ತದೆ.

ಶ್ರೀಲಲಿತಾ ಸಹಸ್ರನಾಮದಲ್ಲಿ ಶ್ರೀಮಾತೆಯನ್ನು ‘ದಧ್ಯನ್ನಾಸಕ್ತಹೃದಯಾ’ ಎಂದು ಕರೆದಿದ್ದಾರೆ, ಜಗನ್ಮಾತೆಯೇ ಮೊಸರನ್ನದಲ್ಲಿ ಆಸಕ್ತಿ ಹೊಂದಿರುವಾಗ, ನಾವೆಲ್ಲ ಮೊಸರನ್ನದ ಮೋಹದಿಂದ ಹೇಗೆ ತಪ್ಪಿಸಿಕೊಂಡೇವು? ನೀವೇ ಹೇಳಿ.

ಈಗಲೂ ಕಣ್ಣು ಮುಚ್ಚಿ ನೆನಪಿಸಿಕೊಂಡರೆ, ಈ ಎಲ್ಲ ದೃಶ್ಯ, ರುಚಿ, ಘಮ ನನ್ನ ಚಿತ್ತಕ್ಕೆ ಬಂದು ಮತ್ತೊಮ್ಮೆ ಈ ಎಲ್ಲ ರಸಾಸ್ವಾಧನೆಗೆ ನನ್ನನ್ನು ಅಣಿಮಾಡುತ್ತವೆ. ಪ್ರಾಯಶಃ ನನಗೆ ಮೊಸರನ್ನ ಕಲಸಿಕೊಟ್ಟ, ಮಾಡಿಕೊಟ್ಟ ಯಾರಿಗೂ ಅದು ಅಂಥಹ ವಿಶೇಷ ತಿನಿಸು, ಖಾದ್ಯ ಆಗಿರಲಿಕ್ಕಿಲ್ಲ. ಆದರೆ ಇವೆಲ್ಲ ರುಚಿಗಳು ನನ್ನ ನೆನಪಿನ ಕೌದಿಯ ರಂಗು-ರಂಗು ಚೌಕಗಳು.

ಸರಿ-ಸರಿ, ನಾನು nostalgic ನಾರೀಮಣಿ ಸಂಪೂರ್ಣವಾಗಿ ಬದಲಾಗುವ ಮುನ್ನ ನನ್ನೇ ನಾನು ಟೈಮ್ ಟ್ರಾವೆಲ್ ಟ್ರ್ಯಾಪ್‌ನಿಂದ ಈಚೆಗೆ ಕರೆದು, ನನ್ನನ್ನು ಮಾತ್ರವಲ್ಲ ನಿಮ್ಮನ್ನೂ ಬಚಾವು ಮಾಡಿದೆ.
ಇಲ್ಲದಿದ್ದರೆ ನನ್ನ ನೆನಪಿನ ಪರಿಷೆ ನಿಲ್ಲುವುದಿಲ್ಲ. ಯಾಕೆಂದರೆ ಹೀಗೆ ಅದೆಷ್ಟು ಲೆಕ್ಕಕ್ಕೆ ಸಿಗದಷ್ಟು ನೆನಪುಗಳಿವೆ ನನ್ನ ಬಳಿ. ಈ ವಿಷಯದಲ್ಲಿ ಮಾತ್ರ ನಾನು ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ ಸೇರಿದರೂ ಆಶ್ಚರ್ಯವಿಲ್ಲ.

ನೋಡಿ, ಏನು ಬರೆಯಲಿ ಎಂದು ಶುರುಮಾಡಿದವಳು, ಎಲ್ಲಿ ನಿಲ್ಲಿಸಲಿ ಎಂದು ಅರ್ಥವಾಗದೆ ನೆನಪುಗಳ ಸುರುಳಿಯನ್ನು ಬಿಚ್ಚಿ ಬಿಚ್ಚಿ ಹಾಕಿದ್ದೇನೆ.

ಪ್ರೀತಿಯಿಂದ ಓದಿ. ನಿಮಗೂ ಈ ನೆನಪುಗಳು ತಂಪು ಅನಿಸಿದರೆ, ಅಲ್ಲೆಲ್ಲೋ ಬದುಕಿನ ದಾರಿಯಲ್ಲಿ ಯಾವುದೋ ಮರೆಯಲಾಗದ ರುಚಿಯನ್ನು ನಿಮ್ಮ ನೆನಪಿನ ಬುಟ್ಟಿಗೆ ಪ್ರೀತಿಯಿಂದ ಬುತ್ತಿ ತುಂಬಿ ಕಳಿಸಿದವರು ನೆನಪಾದರೆ ನನ್ನೊಂದಿಗೂ ಹಂಚಿಕೊಳ್ಳಿ.

ವಂದನೆಗಳು,
ಅಮಿತಾ ರವಿಕಿರಣ್

Leave a comment