‘ಸಾಗರದಲ್ಲಿ ಸಾಹಸಿ’ -ಪುಸ್ತಕ ವಿಮರ್ಶೆಗಳು -ಭಾಗ ೧ – ಡಾ. ದಾಕ್ಷಾಯಿಣಿ ಗೌಡ, ಮತ್ತಿತರರು

 (Map of the journey is shown above. Credit: WTR)
ಈ ಸಲದ ಅನಿವಾಸಿಯಲ್ಲಿ ಒಂದು ಪುಸ್ತಕದ ಬಗ್ಗೆ (ಸಾಗರದಲ್ಲಿ ಸಾಹಸಿ) ಡಾ ದಾಕ್ಷಾಯಿಣಿ ಮುಂತಾಗಿ ಅನೇಕರ ಅನಿಸಿಕೆಗಳ ಸಂಗ್ರಹವಿದೆ. ಸಂಸ್ಕೃತದಲ್ಲೊಂದು ನುಡಿಗಟ್ಟಿದೆ: ”ಪುತ್ರಾದಿಚ್ಛೇದ್ ಪರಾಜಯಂ.” (ಜಗತ್ತಿನಲ್ಲಿ ಉಳಿದ ಎಲ್ಲರನ್ನೂ ಗೆಲ್ಲ ಬೇಕು, ಆದರೆ ಮಕ್ಕಳಿಂದ ಪರಾಜಿತರಾದರೂ ಅಡ್ಡಿಯಿಲ್ಲ.) ಮಕ್ಕಳು ತಮ್ಮನ್ನೂ ಮೀರಿ ಬೆಳೆಯಬೇಕು, ಉನ್ನತಿ, ಮತ್ತು ಕೀರ್ತಿ ಪಡೆಯ ಬೇಕು ಎನ್ನುವ ಅಭಿಲಾಷೆ ತಂದೆತಾಯಂದಿರದು. (ಪು 11). ಅಂಥ ಒಂದು ಸಾಹಸವನ್ನು, ಅಪರೂಪದ ಸಮುದ್ರಯಾನವನ್ನು (World's Toughest Row -WTR ) ಮಾಡಿದವಳು ಯುಕೆಯ ಶೆಫ಼ೀಲ್ಡ್ ನಗರವಾಸಿ ಅನನ್ಯ ಪ್ರಸಾದ್. 130 ವರ್ಷಗಳಿಂದ ಹುಟ್ಟು ಹಾಕುತ್ತ ಅಟ್ಲಾಂಟಿಕ್ ದಾಟಿದ್ದಾನೆ ಮಾನವ. ಆದರೆ ಆಕೆ ಏಕಾಕಿಯಾಗಿ ಅಟ್ಲಾಂಟಿಕ್ ಸಾಗರವನ್ನು 3,000 ಮೈಲಿ ಹುಟ್ಟು ದೋಣಿಯಲ್ಲಿ ದಾಟಿ 2025 ಫೆ.1ರಂದು ದಡ ಸೇರಿ ಇನ್ನಿತರ ರೀತಿಯ ದಾಖಲೆ ಮಾಡಿದಳು. ಆ ಸುದ್ದಿ ಬರಿ ಯುಕೆ, ಯೂರೋಪಲ್ಲದೆ ಈಗಾಗಲೇ ಭಾರತ, ಕರ್ನಾಟಕದಲ್ಲೂ ಪ್ರಸಿದ್ಧಿ ಪಡೆದಿದೆ. ಅದರ ಹಿನ್ನೆಲೆಯ ಬಗ್ಗೆ, ’ಅಪ್ಪನ ಕಾತರ, ಭಯ, ಉದ್ವೇಗ, ಉತ್ಸಾಹ, ರೋಚಕತೆ, ಕೊನೆಗೆ ಸಂತೋಷ’ (ಹಿನ್ನುಡಿಯಿಂದ) ಇವೆಲ್ಲವುಗಳನ್ನು ಸವಿಸ್ತಾರವಾಗಿ ಮೂಡಿಸಿರುವ ಆಕೆಯ ತಂದೆ ಡಾ ಜಿ ಎಸ್ ಶಿವಪ್ರಸಾದ್ ಅವರ ಈ ಪುಸ್ತಕಕ್ಕಾಗಿ ನನ್ನಂತೆ ಬಹು ಜನರು ಕಾಯುತ್ತಿದ್ದರು.
ಈ ಮೊದಲ ಕಂತಿನಲ್ಲಿ ಐದು ಬರಹಗಳಿವೆ - ಡಾ ದಾಕ್ಷಾಯಿಣಿ, ಶ್ರೀವತ್ಸ ದೇಸಾಯಿ, ಎಚ್. ಡುಂಡಿರಾಜ್, ಎಮ್ ಆರ್ ಕಮಲ, ದೀಪಾ ಸಣ್ಣಕ್ಕಿ. ಅವುಗಳನ್ನು ಸ್ವೀಕರಿಸಿದ ಕ್ರಮದಲ್ಲಿಯೇ ಪ್ರಕಟಿಸಿದ್ದೇವೆ. ಇನ್ನೂ ಹಲವಾರು ಜನರ ಬರಹಗಳೂ ಬಂದಿವೆ. ಮುಂದಿನ ವಾರ ಕೆಲವನ್ನು ಪ್ರಕಟಿಸುವ ಯೋಜನೆಯಿದೆ. ಚಿತ್ರಗಳು ಬಹುತೇಕವಾಗಿ ಎಲ್ಲವೂ WTR ಕೃಪೆಯಿಂದ. ಕೊನೆಯಲ್ಲಿ ಒಂದು ವಿಡಿಯೋದ ಕೊಂಡಿಯಿದೆ. ಅದು ನೇರವಾಗಿ ಫೇಸ್ ಬುಕ್ಕಿಗೆ (FB) ಒಯ್ಯುತ್ತದೆ ಎಂದು ಸ್ಪಷ್ಟಪಡಿಸುತ್ತೇನೆ. (ಸಂ)
"ಸಾಗರದಲ್ಲಿ ಸಾಹಸಿ"
ನನ್ನ ಅನಿಸಿಕೆಗಳು --ಡಾ ಶ್ರೀವತ್ಸ ದೇಸಾಯಿ, ಲೆಸ್ಟರ್ UK

ಬರೀ ನೂರೇ ಪುಟಗಳ ಈ ಕಿರುಪುಸ್ತಕ ನನ್ನ ನಿಮ್ಮ ಮನದಲ್ಲಿ ಮತ್ತು ಸಾಹಿತ್ಯ ವಲಯದಲ್ಲಿ ಅಲೆಗಳನ್ನೆಬ್ಬಿಸುವದು ಖಚಿತ. ಇಂಥ ಬರವಣಿಗೆ ಓದುವ ಅವಕಾಶ ಸಿಗುವದು ಅಪರೂಪ. ಇದು ಅದ್ವಿತೀಯ ಸಾಹಸ ಅಂದ ಮೇಲೆ! ಇದನ್ನುಬರೆದ ಯು ಕೆ ವಾಸಿ ಡಾ ಪ್ರಸಾದ್ ಅವರ ಕುಟುಂಬದವರನ್ನು, ಮುಖ್ಯವಾಗಿ ಇದರ ಯುವ ನಾಯಕಿ (34) ಅನನ್ಯಳನ್ನು ನಾವು ಯು.ಕೆ.ದ ಯಾರ್ಕ್ ಶೈರಿನಲ್ಲಿ ವಾಸಿಸುವ ಹಲವಾರು ಕನ್ನಡಿಗರು ಚೆನ್ನಾಗಿ ಬಲ್ಲವರಾಗಿದ್ದೆವು. ಆಕೆಯ ಅಟ್ಲಾಂಟಿಕ್ ಸಾಹಸವನ್ನು ಮೊದಲಿಂದ ಕೊನೆಯ ವರೆಗೆ ಟಿವಿ, ಸ್ಮಾರ್ಟ ಫೋನಿನ ಆಪ್ ಮೇಲೆ ಐವತ್ತೆರಡೂ ದಿನಗಳನ್ನು ಅನುಸರಿಸಿದ್ದೆವು. ಆದುದರಿಂದ ಆ ಯಶಸ್ವಿ ಯಾನದ ಹಿನ್ನೆಲೆ, ಆಕೆಯ ನಿರ್ಧಾರದ ಗುಟ್ಟು ಮತ್ತು ಸಮುದ್ರಯಾನದ ಅನುಭವದ ವಿವರಗಳನ್ನು ಓದಲು ಕಾತುರದಿಂದ ಎದುರು ನೋಡುತ್ತಿದ್ದೆವು. ನಮ್ಮನ್ನು ಕಾಡುತ್ತಿದ್ದ ಅನೇಕ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರ ಸಿಕ್ಕಿವೆ. ಕ್ರಿಕೆಟ್ ಮ್ಯಾಚಿನ ಬಾಲ್ -ಬೈ -ಬಾಲ್ ಕಾಮೆಂಟರಿ ತರಹ ಪ್ರತಿ ಘಟ್ಟದಲ್ಲಾದ ವಿವರಗಳು ಇಲ್ಲಿವೆ. ಅವು ಓದುಗನಲ್ಲಿ ವಿಸ್ಮಯ, ಆತಂಕ, ಕಳವಳ, ಅಂಜಿಕೆ, ಈ ತರದ ಭಾವನೆಗಳೆಬ್ಬಿಸಿದರೆ ಆಶ್ಚರ್ಯವಿಲ್ಲ!
ಕೊನೆಯ ಭಾಗದಲ್ಲಿ (ಇದರ ಆರನೆಯ ಅಧ್ಯಾಯದಲ್ಲಿ) ಅನನ್ಯ World’s Toughest Row ಮುಗಿಸಿ 52ದಿನ 5 ತಾಸು 44 ನಿಮಿಷಗಳ ನಂತರ ಕೈಯಲ್ಲಿ ದೀವಟಿಗೆ ಹಿಡಿದು victory lap ಮಾಡಿದ ನಂತರವೂ ಸ್ವಲ್ಪವೂ ಓಲಾಡದೆ ಭೂಮಿಯ ಮೇಲೆ ಮೊದಲ ಹೆಜ್ಜೆಯನ್ನಿಟ್ಟಾಗ ಕರತಾಡನ ಮಾಡುತ್ತ ನೆರೆದ ಜನಸಮುದಾಯದ ಮುಂಚೂಣಿಯಲ್ಲಿ ಆನಂದ ಬಾಷ್ಪ ಸುರಿಸುತ್ತ ನಿಂತ ತಂದೆತಾಯಿಯವರ ಸಂತೋಷವನ್ನು ಅನುಭವಿಸುವದಲ್ಲಿ ಸಂದೇಹವಿಲ್ಲ. (ವಿಡಿಯೋವನ್ನು ನೋಡಿರಿ- ಕೊಂಡಿ ಕೊನೆಯಲ್ಲಿ)
ಈ ಸಾಹಸ ಬಗ್ಗೆ ಯೋಚಿಸುತ್ತಿದ್ದಾಗ ನನಗೆ ನೆನಪಾದದ್ದು ತಮಿಳಿನ ತಿರುವಳ್ಳುವರ್ ಮುನಿ ತಿರುಕ್ಕುರಳ್ (#70) ದಲ್ಲಿ ಹೇಳುವಮಾತು: ಜನ್ಮ ಕೊಟ್ಟ ತಂದೆಗೆ ಮಗನು (ಅಥವಾ ಮಗಳು) ಮಾಡಬಹುದಾದ ಪ್ರತ್ಯುಪಕಾರವೇನು? ಎಂದು ಚರ್ಚಿಸುತ್ತ: "ಈತನನ್ನುಪಡೆಯಲು ತಂದೆ (ಹಡೆದ ತಂದೆತಾಯಿಗಳು) ಎಂಥ ತಪಸ್ಸು ಮಾಡಿರಬಹುದು ಎಂದು ಜನರು ಕೊಂಡಾಡುವುದು." ಅನನ್ಯಳ ಧೃಡನಿರ್ಧಾರ, ಅದರ ಬಗ್ಗೆ ಆದ ಚರ್ಚೆ, ತಂದೆತಾಯಿಗಳ ಆತಂಕ, ಅವರ ಒಪ್ಪಿಗೆ, ಆಕೆಯ ೩ ವರ್ಷಗಳ ಪೂರ್ವಸಿದ್ಧತೆ, ಇವುಗಳುಮೊದಲ ೪ ಅಧ್ಯಾಯಗಳ ೩೦ ಪುಟಗಳಲ್ಲಿ, ನಂತರದ ಸುದೀರ್ಘ ಭಾಗದಲ್ಲಿ "ದೈತ್ಯ ಅಲೆಗಳ ನಡುವೆ ಅನನ್ಯ" ಎದುರಿಸಿದ ಯಾನದ ಸಾಹಸದ ವಿವಿಧ ಹಂತ ಒಡ್ಡಿದ ಸಮಸ್ಯೆಗಳು, ಕಳಕೊಂಡ ಮೊಬೈಲ್, ಅಲೆಗಳು ದೋಣಿಯನ್ನು ಮಗುಚಿಹಾಕಿದ ಪ್ರಸಂಗ, ಮುರಿದ ಚುಕ್ಕಾಣೆ, ಮತ್ತು ಹುಟ್ಟು, ಅವುಗಳ ರಿಪೇರಿ, ಬೋಟಿ (boat)ನಿಂದ ಹೊರಗಿಳಿದು ಬಾರ್ನಕಲ್ಲುಗಳನ್ನು (barnacles) ಸವರಿ ಅದರ ಹೊರಮೈಯನ್ನು ಸ್ವಚ್ಛಗೊಳಿಸಿದ ಕಷ್ಟ, ಇವೆಲ್ಲವನ್ನೂ ಓದುವಾಗ ಮೈನವಿರೇಳುತ್ತದೆ. ಡಿಸೇಂಬರ್ 11, 2024 ರಂದು ಕ್ಯಾನರಿ ದ್ವೀಪದ ಲಾ ಗೋಮೆರೋ ಬಂದರದಿಂದ ಭಾವಪೂರಿತ ಬಿಳ್ಕೊಡುಕೆವಿಕೆಯ ನಂತರ 3,000 ಮೈಲು ಏಕಾಕಿಯಾಗಿ ಹುಟ್ಟು ಹಾಕುತ್ತ 52 ದಿನಗಳ ಕೊನೆಯಲ್ಲಿ ಕೆರಿಬಿಯನ್ ದ್ವೀಪ ಆಂಟಿಗಾವನ್ನು ಸೇರುವ ವಿಜೃಂಭಣೆಯ ವರ್ಣನೆಯಂತೂ ಬಹಳ ಹೃದಯಸ್ಪರ್ಶಿ!
ಒಬ್ಬ ಕವಿಯ ಪುತ್ರ, ಮತ್ತು ಸ್ವತಃ ಕವಿಯಾದ ಡಾ ಪ್ರಸಾದ್ ಅವರ ಬರವಣಿಗೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಿಕ ಉಲ್ಲೇಖಗಳು, ಅಲ್ಲಲ್ಲಿ ಪುಟ್ಟ ಪುಟ್ಟ ಸುಂದರ ವಾಕ್ಯಗಳುಂಟು: ಕನಸಿಗೆ ಕಡಿವಾಣವಿಲ್ಲ(ಪು 18); ಈ ಯಾನದ ಹಾದಿಯಲ್ಲಿ ನಿಲುಗಡೆ ತಾಣ ಅಥವಾ ದ್ವೀಪಗಳಿಲ್ಲ; ನಡುನೀರಿಗೆ ಇಳಿದವರು ಈಜಲೇಬೇಕಲ್ಲವೆ? (ಪು 36) (ಇಲ್ಲಿ ಹುಟ್ಟು ಹಾಕಲೇ ಬೇಕಲ್ಲವೇ?); ಕಳ್ಳರು ಗೊಜ್ಜವಲಕ್ಕಿ, ಕೋಡುಬಳೆಯನ್ನಷ್ಟೇ ಅವಳಿಂದ ಕದಿಯ ಬಹುದಿತ್ತು (ಪು 67 ). ಈ ಸಮುದ್ರ ಸಾಹಸ ಹಿನ್ನೆಲೆಯಲ್ಲಿ ಹೆಚ್ಚು ಮಾಹಿತಿಈ ಮೊದಲೇ ಗೊತ್ತಿರದ ವಿದೇಶಿ ಓದುಗರಿಗೆ ಅಂಕಿ ಸಂಖ್ಯೆಗಳುಂಟು. ಅನನ್ಯಳ ಪೂರ್ವ ನಿರ್ಧಾರ, ಕೊನೆಗೆ ಯುವಪೀಳಿಗೆಗೆ ಆಕೆಯ ಸಂದೇಶ ಮನತಟ್ಟುವಂತಿದೆ. ಅಟ್ಲಾಂಟಿಕ್ ಸಾಗರವನ್ನು ಈ ರೀತಿ ಹುಟ್ಟುಹಡಗಿನಲ್ಲಿ ದಾಟಿ ದಾಖಲೆ ಮಾಡಿದ ಪ್ರಪ್ರಥಮ ವರ್ಣೀಯ (non-white) ಮಹಿಳೆ ಕನ್ನಡಿತಿ ಎನ್ನುವ ಮಾತು ನಮಗೆಲ್ಲ ಹೆಮ್ಮೆ ಅಲ್ಲವೇ? ಯಾನದ ವಿವರದ ಓದಿಗೆ ಅಡ್ಡಬರದಂತೆ ಸಂಬಂಧಿಸಿದ ೨೦ (B& W) ಕಪ್ಪು ಬಿಳುಪು ಚಿತ್ರಗಳನ್ನುಕೊನೆಯಲ್ಲಿ ಕೊಟ್ಟಿದ್ದಾರೆ.

ಡಾ ಶ್ರೀವತ್ಸ ದೇಸಾಯಿ, ಲೆಸ್ಟರ್ UK

ಈ ಪುಸ್ತಕವನ್ನು ಬೆಂಗಳೂರಿನ ವೀರಲೋಕ ಪ್ರಕಾಶನದವರು ಪ್ರಕಟಿಸಿದ್ದಾರೆ--(ರೂ 140)

FREE USE: TODAY at 10:42 local time, UK/India solo ATLANTIC ODYSSEY completed the WORLD’S TOUGHEST ROW – ATLANTIC 2024. Ananya Prasad is the all time second fastest solo woman to have completed this gruelling 3,000 mile race and crossed the finish line into English Harbour in Antigua in 52 days, 5 hours, and 44 minutes.
Credit: World’s Toughest Row
ಸಾಹಿತಿಗಳ ಅಭಿಪ್ರಾಯಗಳು (ಪುಸ್ತಕದ ಲೇಖಕರನ್ನು  ಸಂಬೋಧಿಸಿ ಬರೆದದ್ದು)

ಎಚ್. ಡುಂಡಿರಾಜ್ ಬರೆಯುತ್ತಾರೆ:
ಪ್ರಿಯ ಶಿವಪ್ರಸಾದ್, ಸಾಗರದಲ್ಲಿ ಸಾಹಸ ಚೆನ್ನಾಗಿ ಓದಿಸಿಕೊಂಡು ಹೋಯಿತು. ಮಗಳ ಮಹತ್ವಾಕಾಂಕ್ಷೆಯ ಸಾಹಸ , ಹೆತ್ತವರ ಆತಂಕ, ಉದ್ದಕ್ಕೂ ಜೊತೆಯಾಗಿ ಸಾಗುವ ಪರಿ ಕುತೂಹಲಕಾರಿ. ಅನನ್ಯಳ ಛಲದಷ್ಟೆ , ಸಾಹಸದಷ್ಟೆ, ನಿಮ್ಮಿಬ್ಬರ ನಿರ್ಧಾರವೂ ಪ್ರಶಂಸನೀಯ. ತಾಂತ್ರಿಕ ವಿವರಗಳನ್ನೂ ಓದುಗರಿಗೆ ಜಟಿಲವಾಗದಂತೆ ವಿವರಿಸಿದ್ದೀರಿ. ನೀವು ಉಲ್ಲೇಖಿಸಿದ ಕವನದ ಸಾಲುಗಳು ಅತ್ಯಂತ ಸೂಕ್ತವಾಗಿವೆ. ಒಟ್ಟಿನಲ್ಲಿ ಅನನ್ಯಳ ಸಾಹಸದಂತೆ ಈ ಪುಸ್ತಕವೂ ಕನ್ನಡದ ಓದುಗರಿಗೆ ನಿಮ್ಮ ಅಪೂರ್ವ ಕೊಡುಗೆ. ನೀವು ಮಾತ್ರ ಬರೆಯಬಹುದಾದ ಉತ್ತಮ ಪುಸ್ತಕ. ಅನನ್ಯಳಿಗೆ, ನಿಮಗೆ ಹಾಗೂ ಪೂರ್ಣಿಮಾ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು.
-ಎಚ್. ಡುಂಡಿರಾಜ್, ಪ್ರಸಿದ್ಧ ಕವಿ, ಸಾಹಿತಿ, ಬೆಂಗಳೂರು

ಎಮ್ ಆರ್ ಕಮಲ ಪ್ರಸಿದ್ಧ ಸಾಹಿತಿ, ಕವಯಿತ್ರಿ, ಅನುವಾದಕಿ, ಬೆಂಗಳೂರು 

'ಸಾಗರದಲ್ಲಿ ಸಾಹಸಿ’ ಓದಿದೆ. ಒಂಟಿಯಾಗಿ ಸಮುದ್ರದಲ್ಲಿ ಯಾನ ಮಾಡುವುದನ್ನು ಕನಸುವುದಕ್ಕೂ ಆತಂಕ ಪಡುವ ನಮ್ಮಂಥವರಿಗೆ ಅನನ್ಯಳ ಈ 'ಅನನ್ಯ' ಸಾಹಸ ಅಸಾಧಾರಣ ಅನ್ನಿಸಿದ್ದು ಸುಳ್ಳಲ್ಲ.
ಇಂತಹ ಸಾಹಸಕ್ಕೆ ಮಗಳು ಕೈ ಹಾಕಿದಾಗ ಅದನ್ನು ಅರಗಿಸಿಕೊಳ್ಳುವುದು ಅದೆಷ್ಟು ಕಷ್ಟವಾಗಿತ್ತು ಎಂಬುದನ್ನು ನಿಮ್ಮ ಬರಹ ಎದೆಗಿಳಿಸುತ್ತದೆ. ಅದು ನನ್ನನ್ನು ತಟ್ಟಿದ್ದಕ್ಕೆ ಕಾರಣವೂ ಇದೆ. ನನ್ನ ಮಗಳು ಮೈಕ್ರೊ ಬಯಾಲಜಿ ಎಂಎಸ್ಸಿ ಮಾಡಿದ ನಂತರ ಸಂಶೋಧನೆಗೆ ಹೋಗುತ್ತಾಳೆಂದು ಭಾವಿಸಿದ್ದೆ. ಇದ್ದಕ್ಕಿದ್ದಂತೆ ಅವಳು ಉಳಿದವರು ಅಷ್ಟಾಗಿ ಆರಿಸಿಕೊಳ್ಳದ ಕಂಠದಾನ, ಹಾಡು ಎಂದೆಲ್ಲ ಹೊರಟಾಗ ಕೊಂಚ ಆತಂಕವಾಗಿದ್ದು ನಿಜ. ಒಪ್ಪಿಕೊಳ್ಳುವುದು ಸಲೀಸಾಗಿರಲಿಲ್ಲ.
ಆದರೆ ಅನನ್ಯ ಆರಿಸಿಕೊಂಡದ್ದು ಜೀವವನ್ನೇ ಪಣಕ್ಕಿಡುವ ಸಾಗರ ಯಾನ. ಬಹುಶಃ ತಂದೆ ತಾಯಿಯರನ್ನು ಅಲುಗಾಡಿಸುವ ನಿರ್ಧಾರ. ಆದರೂ ನೀವಿಬ್ಬರೂ ಬೆಂಬಲವಾಗಿ, ಅವಳ ಕನಸುಗಳಿಗೆ ಬಣ್ಣ ತುಂಬಲು ಮಾಡಿದ ಪ್ರಯತ್ನ ಅವಳ ಸಾಗರ ಯಾತ್ರೆಯಷ್ಟೇ ಅನುಪಮ ಅನ್ನಿಸಿತು.

ಸಾಗರ ಯಾನದ ಇತಿಹಾಸ, ಸಾಧಕ ಬಾಧಕ ವಿಚಾರಗಳು, ಯಾನಕ್ಕೆ ಬೇಕಾದ ಸಿದ್ಧತೆ ಇತ್ಯಾದಿಗಳ ಮಹತ್ವಪೂರ್ಣ ಮಾಹಿತಿಗಳನ್ನು ಒದಗಿಸಿರುವುದರಿಂದ ಪುಸ್ತಕಕ್ಕೆ ತಾನಾಗಿಯೇ ಮಹತ್ವ ಬಂದಿದೆ. ಅಲ್ಲಲ್ಲಿ ಕವಿತೆ, ಕಾದಂಬರಿಗಳ ವಿಷಯವನ್ನು ಪೂರಕವಾಗಿ ಬಳಸಿಕೊಂಡಿರುವುದು ವಿಶೇಷ. (Old man and the sea ನನಗೆ ಎಂ.ಎ. ನಲ್ಲಿ ಪಠ್ಯವಾಗಿತ್ತು.) ಅನನ್ಯಳ ಯಾನದ ವಿವರಗಳಂತೂ ನಾವೇ ಅವಳೊಂದಿಗೆ ಈ ಸಾಹಸದಲ್ಲಿ ಪಾಲ್ಗೊಳ್ಳುತ್ತಿದ್ದೇವೇನೋ ಎಂಬ ಭಾವ ಮೂಡಿಸಿತು. ಮೊಬೈಲ್ ಕಳೆದುಕೊಂಡಾಗ, ಚುಕ್ಕಾಣಿಯ ಸಮಸ್ಯೆಯಾದಾಗ ಅವಳ ಆತಂಕ ನಮ್ಮದೇ ಆತಂಕವಾದ ಕಾರಣ ನಿಮ್ಮ ಅಂತಃಕರಣದ
ನಿರೂಪಣೆ. ಮತ್ತೊಬ್ಬರ ಅನುಭವವನ್ನು ಹಿಡಿದಿಡುವುದು ಸುಲಭವೇ ಅಲ್ಲ. ಅಂತಹ ಸಾಹಸವನ್ನು ನೀವೂ ಮಾಡಿದ್ದೀರಿ.
'ಅನನ್ಯ' ನಮ್ಮೆಲ್ಲರ ಹೆಮ್ಮೆ ಎಂಬ ಭಾವದೊಂದಿಗೆ ಪುಸ್ತಕವನ್ನು ಕೆಳಗಿಟ್ಟೆ. ಇದೊಂದು ಭಾವದಲೆಯ ಮೇಲಿನ ಜೀವಯಾನ
... ಅನನ್ಯಳಿಗೆ, ಮುಖ್ಯವಾಗಿ, ಪ್ರೋತ್ಸಾಹಿಸಿದ ತಂದೆತಾಯಿಗಳಿಗೆ ಅಭಿನಂದನೆಗಳು.
ಈ ಪುಸ್ತಕ ಕಳಿಸಿದ್ದಕ್ಕೆ ಧನ್ಯವಾದ.
ಎಮ್ ಆರ್ ಕಮಲ

FREE USE: TODAY at 10:42 local time, UK/India solo ATLANTIC ODYSSEY completed the WORLD’S TOUGHEST ROW – ATLANTIC 2024. Ananya Prasad is the all time second fastest solo woman to have completed this gruelling 3,000 mile race and crossed the finish line into English Harbour in Antigua in 52 days, 5 hours, and 44 minutes.
Credit: World’s Toughest Row
ದೀಪಾ ಸಣ್ಣಕ್ಕಿ ಬರೆಯುತ್ತಾರೆ
"ಸಾಗರದಲ್ಲಿ ಸಾಹಸಿ " ಬರೀ ಅನನ್ಯರವರ ಸಾಹಸಕಥನಕ್ಕೆ ಮತ್ತು ಅವರ ತಂದೆಯ ಸ್ವಾನುಭವದ ಗಾಥೆಗಷ್ಟೇ ಸೀಮಿತವಾದ ಪುಸ್ತಕವಲ್ಲ.
ಇಲ್ಲಿ,
ಬದುಕಿನ ಹಲವಾರು ಮಗ್ಗಲುಗಳನ್ನು ನೋಡಿದ ಅನುಭವಿಯ ಜೀವನಪಾಠಗಳಿವೆ. ಪರಿಸ್ಥಿತಿಯನ್ನು ಸಮಚಿತ್ತದಿಂದ ನಿಭಾಯಿಸಿದ ಸಂಯಮಿಯ ಮಾತುಗಳಿವೆ. ಕಾಲಘಟ್ಟದಲ್ಲಿ ಹಿಂದೆ ಸರಿಯುತ್ತಿರುವ ಹಿರಿ ಜೀವಗಳ ಬಗ್ಗೆ ತುಂಬುಗೌರವವಿದೆ. ಜೊತೆಗೆ ಮುಂಬರುವ ಸಂತಾನಗಳ ಭದ್ರ ಬುನಾದಿಯ ಬಗೆಗೆ ಕಳಕಳಿಯಿದೆ. ಜೀವಿತದ ಪರಿಧಿಯೊಂದಿಗೆ ಮನೋವೈಶಾಲ್ಯವನ್ನು ವಿಸ್ತರಿಸಿಕೊಳ್ಳಬೇಕಾದ ಹಿತವಚನವಿದೆ. ಇವೆಲ್ಲವುಗಳನ್ನು ಮೀರಿ ವಿಶ್ವಮಾನವತೆಯ ಪ್ರಜ್ಞೆಗೆ ನೀಡಿದ ಕರೆ, ಪುಸ್ತಕಕ್ಕೆ ಕಲಶಪ್ರಾಯವಾಗಿದೆ.
ಬರಹ,
ಕಡಲಯಾನದ ಓಡಿಷಿಯಸ್ಸ್ ದೋಣಿಯಂತೆ ಗತಿಗೆಟ್ಟು ಓಲಾಡದೇ ಸಮಸ್ಥಿತಿಯಲ್ಲಿ ನಿರಂತರವಾಗಿ ಓದಿಸಿಕೊಂಡು ಹೋಗುತ್ತದೆ.‌
ವಿಷಯಸಂಬಂಧಿತ ಅಂಕಿ ಸಂಖ್ಯೆಗಳ ಮಾಹಿತಿಯಾಗಲಿ, ಮಗಳ ಬಗೆಗಿನ ಸಮತೋಲಿತ ಹೆಮ್ಮೆ ಪ್ರಶಂಸೆಗಳಾಗಲಿ, ಕುಟುಂಬಕ್ಕೆ ದಕ್ಕಿದ ಆಂತರಿಕ ತುಮುಲಗಳಾಗಲಿ ಅಥವಾ ಸಾಹಸದ ಬಗೆಗಿರುವ ಸ್ವಂತ ದೃಷ್ಟಿಕೋನವಾಗಲಿ ಯಾವುದೂ ಓದುಗನಿಗೆ ಭಾರವೆಂದೆನಿಸುವುದಿಲ್ಲ. ಇಲ್ಲಿ ಭಾವಗಳು ಕೂಡ ವಾಸ್ತವಾಂಶಗಳಷ್ಟೇ ಪ್ರಾಮಾಣಿಕವಾಗಿವೆ ಮತ್ತು ನೈಜಶೀಲವಾಗಿವೆ."ಸಾಗರದಲ್ಲಿ ಸಾಹಸಿ"ಯನ್ನು ಓದಿದ ಒಂದೇ ಒಂದು ಜೀವ, ಸ್ವಯಂ ವಿಧಿತ ನಿರ್ಭಂಧಗಳನ್ನು ತೊಡೆದು ಜೀವನೋತ್ಸಾಹದಿಂದ ಕೊನೆಗಲ್ಲನ್ನು ಮುಟ್ಟಿದರೆ ಪುಸ್ತಕದ ಗರಿಮೆಯ ಪ್ರತಿಮೆಗೆ ಹೂವು ಸಲ್ಲಿಸಿದಂತೆಯೇ ಸರಿ!

ದೀಪಾ ಸಣ್ಣಕ್ಕಿ, ಯು ಕೆ
Video of Successful Completion: Connects to Facebook 

Leave a comment