‘ಕನ್ನಡದ ಬೆಳವಣಿಗೆಗೆ ಎಷ್ಟು ದುಡಿದರೂ ಕಡಿಮೆಯೇ’ – ಶಿವರಾಂ ಸಂದರ್ಶನ: ಉಮಾ ವೆಂಕಟೇಶ್

ಉಮಾ ವೆಂಕಟೇಶ್: ಶಿವರಾಮ್ ಅವರೆ, ನೀವು ಕನ್ನಡ ಚಲನಚಿತ್ರ ರಂಗದಲ್ಲಿ ಮತ್ತು ರಂಗಭೂಮಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ, ನಟ, ನಿರ್ಮಾಪಕ, ನಿರ್ದೇಶಕನಾಗಿ ಬಹಳ ಒಳ್ಳೆಯ ಕಾರ್ಯಗಳನ್ನು ಈಗಾಗಲೇ ಮಾಡಿದ್ದೀರಿ. ಈ ರಂಗಗಳಲ್ಲಿ ಇನ್ನೂ ನಿಮಗೆ ಮಾಡಬೇಕು ಎಂದು ಅನಿಸಿರುವ ಕಾರ್ಯಗಳು ಇವೆಯೇ?

ಶಿವರಾಂ ಸಂದರ್ಶನದಲ್ಲಿ ಉಮಾ ವೆಂಕಟೇಶ್
ಶಿವರಾಂ ಸಂದರ್ಶನದಲ್ಲಿ ಉಮಾ ವೆಂಕಟೇಶ್

ಶಿವರಾಮ್: ಇನ್ನೂ ಬೇಕಾದಷ್ಟು ಕಾರ್ಯಗಳಿವೆ. ಇನ್ನೂ ಅಪೂರ್ಣವಾಗಿರುವ ಕಾರ್ಯಗಳು ಬೇಕಾದಷ್ಟಿವೆ. ನಮ್ಮ ಜೀವನವೇ ಒಂದು ರೀತಿಯಲ್ಲಿ ಅಪೂರ್ಣ.  ಇನ್ನೂ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಬೇಕು ಎಂಬ ಆಸೆಯಿದೆ, ನಾನು ಮೂಲತಹ ರಂಗಭೂಮಿಯಿಂದ ಬಂದವನು. ರಂಗಭೂಮಿಯಲ್ಲಿ ನಟಿಸುವ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ನಾನು ಸಿನಿಮಾರಂಗಕ್ಕೆ ಹೋದೆ. ನನಗೆ ಇನ್ನೂ ಬಹಳ ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿ, ಆ ನಾಟಕಗಳನ್ನು ರಾಜ್ಯದಾದ್ಯಂತ ಕೊಂಡೊಯ್ದು, ಅದರಿಂದ ಕಡೆಯ ಪಕ್ಷ ಒಂದು ಕೋಟಿ ರೂಪಾಯಿಗಳನ್ನಾದರೂ ಸಂಪಾದಿಸಿ, ಆ ಹಣವನ್ನು ರಂಗಭೂಮಿಯ ಕಲಾವಿದರ ಕ್ಷೇಮ ನಿಧಿಗಾಗಿ ಉಪಯೋಗಿಸ ಬೇಕು ಎನ್ನುವ ಒಂದು ಮಹದಾಸೆಯಿದೆ.  ನಾನು ಒಂದು ಕೋಟಿ ಸಂಪಾದಿಸಿದ ಮೇಲೆ, ನಮ್ಮ ಸರ್ಕಾರವನ್ನು ಕೇಳಿ ಅವರಿಂದ ಒಂದು ಕೋಟಿ ರೂಪಾಯಿಗಳ ಹಣವನ್ನು ಅದಕ್ಕೆ ಸೇರಿಸಿ, ರಂಗ ಭೂಮಿಯ ಕಲಾವಿದರು ಯಾರನ್ನೂ ಹಣ ಬೇಡದಿರುವಂತೆ ಅವರ ಕ್ಷೇಮನಿಧಿಯನ್ನು ಪ್ರಾರಂಭಿಸುವ ಯೋಜನೆ ನನಗಿದೆ.  ನನ್ನ ಜೊತೆಯ ಅನೇಕ ಕಲಾವಿದರು ಅನುಭವಿಸುವ ನೋವನ್ನು IMG_6247ದೂರ ಮಾಡಬೇಕು. ಇತ್ತೀಚೆಗೆ ನಿಧನರಾದ ಗಾಂಧಿ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ ಪ್ರಖ್ಯಾತ ಹಾಲಿವುಡ್ ನಿರ್ದೇಶಕ, ಸರ್ ರಿಚರ್ಡ್ ಅಟೆನ್ಬರೋ, ಭಾರತ ಸರ್ಕಾರಕ್ಕೆ ಒಂದು ಕೋಟಿ ರೂಪಾಯಿಗಳನ್ನು ಕಲಾವಿದರ ನಿಧಿಗೆಂದು ಕೊಟ್ಟರು. ಅದನ್ನು Senior artistes welfare fund of India ಎಂದು ಪ್ರಾರಂಭಿಸಿ, ಅದರಲ್ಲಿ ವಿನಿಯೋಗಿಸಿದ್ದಾರೆ. ಅದಕ್ಕೆ ಕರ್ನಾಟಕದಿಂದ ನನ್ನನ್ನು ಟ್ರಸ್ಟಿಯನ್ನಾಗಿ ಮಾಡಿದ್ದಾರೆ. ಇದಕ್ಕಾಗಿ ನಾನು ಕರ್ನಾಟಕದ ಸುಮಾರು ೨೫ ಅತ್ಯಂತ ಬಡ ಕಲಾವಿದರನ್ನು ಆರಿಸಿದೆ. ಈ ೨೫ ಮಂದಿಯಲ್ಲಿ, ಈಗ ಸುಮಾರು ೧೫ ಕಲಾವಿದರಿಗೆ ಪ್ರತಿ ತಿಂಗಳಿಗೆ ೧೦೦೦ ರೂಪಾಯಿಗಳ ಪಿಂಚಣಿ ಸಿಗುತ್ತಿದೆ.  ಇದರ ಜೊತೆಗೆ ರಂಗಭೂಮಿಯಲ್ಲಿ ಇನ್ನೂ ಅನೇಕ ಪ್ರಯೋಗಗಳನ್ನು ಮಾಡುವ ಆಸೆಯಿದೆ.

ಇದಲ್ಲದೇ ನನ್ನದೇ ಆದ ಒಂದು ಗ್ರಂಥಾಲಯವಿದೆ. ಇದನ್ನು ಸಾರ್ವಜನಿಕರು ತಮ್ಮ ಪರಾಮರ್ಶೆಯ ಗ್ರಂಥಾಲಯವನ್ನಾಗಿ ಉಪಯೋಗಿಸಬಹುದು. ಇದರಲ್ಲಿರುವ ಪುಸ್ತಕಗಳು ಸಿನಿಮಾ, ರಂಗಭೂಮಿ, ಕ್ರೀಢೆ, ಸಂಗೀತ, ನೃತ್ಯ, ಹಸ್ತಸಾಮುದ್ರಿಕಾಶಾಸ್ತ್ರ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಂಶೋಧನೆಗೆ ನೆರವಾಗುವ ತಾಂತ್ರಿಕ ಪುಸ್ತಕಗಳು. ಇದರ ಜೊತೆಗೆ ನನಗೆ ಸ್ಟಾಂಪ್ ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಛಾಯಾಚಿತ್ರಣ ಅದರಲ್ಲೂ ಪರಿಸರ ಮತ್ತು ವನ್ಯಜೀವಿಗಳ ಛಾಯಾಚಿತ್ರಣದಲ್ಲಿ ವಿಶೇಷವಾದ ಆಸಕ್ತಿಯಿದೆ. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ, ಲಂಡನ್ ಅಥವಾ ಅಮೆರಿಕೆಯ ವಿಶ್ವವಿದ್ಯಾಲಯದಲ್ಲಿ, ರಂಗಮಂಚದ ನಿರ್ಮಾಣ, ರಂಗಸಜ್ಜಿಕೆ ಮತ್ತು ಇನ್ನಿತರ ವಿಭಾಗಗಳನ್ನು ಕುರಿತಾಗಿ ನಡೆಸುವ ಡಿಪ್ಲೋಮಾ ಒಂದಕ್ಕೆ ಅಭ್ಯಸಿಸುವ ಉದ್ದೇಶವಿದೆ. ಈ ಡಿಪ್ಲೋಮಾದ ಸಹಾಯದಿಂದ, ನಮ್ಮ ಕನ್ನಡ ರಂಗಭೂಮಿಯ ನೇಪಥ್ಯದಲ್ಲಿ ನೆರವಾಗಲು ಆಸೆಯಿದೆ. ಈ ಕಾರ್ಯಗಳನ್ನು ಮಾಡಲು ವಯಸ್ಸಿನ ಮಿತಿಯಿಲ್ಲ.

ಉಮಾ ವೆಂಕಟೇಶ್: ಈಗ ನೀವು ಸಾಮಾಜಿಕರಂಗದಲ್ಲಿ ನಿಮ್ಮನ್ನು ತೊಡಗಿಸಿಕೊಂಡು, “ಸುನಾದ ಮತ್ತು ಸಮರ್ಥನಂ” ನಂತಹ ಅಂಗವಿಕಲ ಸಂಸ್ಥೆಗಳಲ್ಲಿ, ಅವರ ಏಳಿಗೆಗಾಗಿ ಸೇವೆ ಸಲ್ಲಿಸುತ್ತಿದ್ದೀರಿ. ಈ ಕಾರ್ಯದ ಹಿಂದಿನ ಪ್ರೇರಣೆಯೇನು?

ಶಿವರಾಮ್: “ಪರೋಪಕಾರಾರ್ಥಂ ಇದಂ ಶರೀರಂ” ಎನ್ನುವುದೇ, ನನ್ನ ಜೀವನದ ಒಂದು ತತ್ವ ಮತ್ತು ಮಂತ್ರವಾಗಿದೆ. ಭಗವಂತ ಕೊಟ್ಟ ಶರೀರವನ್ನು, ಮಾನುಷ ರೂಪದಲ್ಲಿರುವ ಅವನ ಎಲ್ಲಾ ಜೀವಿಗಳ ಸೇವೆಯಲ್ಲಿ ತೊಡಗಿಸುವುದು.  ನಮ್ಮೆಲ್ಲರ ಮನೆ ಮತ್ತು ಮನಗಳು ಒಂದಾಗಬೇಕು. ನಮ್ಮ ಕನ್ನಡದ ರಾಷ್ಟ್ರ ಕವಿ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಕಷ್ಟದಲ್ಲಿರುವವರು ಆತ್ಮಾಭಿಮಾನವನ್ನು ಹೊಂದಿರುತ್ತಾರೆ. ಅಂತಹವರನ್ನು ನಾವು ಹುಡುಕಿ ಅವರಿಗೆ ಸಹಾಯ ಮಾಡಬೇಕು.

ಉಮಾ ವೆಂಕಟೇಶ್: ಕನ್ನಡ ಚಲನಚಿತ್ರ ರಂಗದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬೆಳವಣಿಗೆಗೆ ನೀವು ಯಾವ ರೀತಿಯಲ್ಲಿ ನೆರವಾಗುತ್ತಿದ್ದೀರಿ? ಬೆಂಗಳೂರಿನಲ್ಲಿ ಕುಸಿಯುತ್ತಿರುವ ಕನ್ನಡವನ್ನು ಉಳಿಸಿ ಬೆಳಸುವ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು?

Interview Shivaram Uma
ಶಿವರಾಂ ಜೊತೆ ಉಮಾ ವೆಂಕಟೇಶ್

ಶಿವರಾಮ್: ಕನ್ನಡದ ಬೆಳವಣಿಗೆಗೆ ಎಷ್ಟು ದುಡಿದರೂ ಅದು ಕಡಿಮೆಯೇ. ಈ ಕಾರ್ಯಕ್ಕಾಗಿ ಅನೇಕ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರ ನೇಮಿಸಿರುವ ಅಧಿಕಾರಿಗಳಿದ್ದಾರೆ. ಈ ಕಾರ್ಯ ನಡೆಯುತ್ತಿಲ್ಲ ಎಂದು ನಾನು ಹೇಳಿದರೆ ಅದು ದೂಷಣೆಯಾಗುತ್ತದೆ. ಎಲ್ಲರೂ ಅವರಿಗೆ ತಿಳಿದಂತೆ, ಅವರಿಗೆ ತಿಳಿದ ರೀತಿಯಲ್ಲಿ ಮಾಡುತ್ತಿದ್ದಾರೆ. ಇಂತಹ ಗಂಭೀರವಾದ ವಿಷಯದಲ್ಲಿ, ನಮ್ಮ ರಾಜಕೀಯ ಧುರೀಣರಿಗೆ ಉತ್ತಮ ಆಲೋಚನೆಗಳಿರಬೇಕು. ನಂತರ ಈ ಯೋಚನೆಗಳನ್ನು ಆಧಾರಿಸಿ, ಯೋಜನೆಗಳನ್ನು ತಯಾರಿಸಬೇಕು. ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಈ ಯೋಜನೆ ಮತ್ತು ಅನುಷ್ಠಾನದ ನಡುವೆ ಹೋರಾಟಗಳಾಗಬೇಕು. ಅನಿವಾರ್ಯ ಪರಿಸ್ಥಿತಿ ಬರಬೇಕು.  ನಮ್ಮಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಜನರಿಗೆ ಕನ್ನಡ ಕಲಿಯುವ ಮನಸ್ಸಿದೆ. ಆದರೆ ನಮ್ಮ ಕನ್ನಡಿಗರು ಅವರೊಂದಿಗೆ ಅವರ ಭಾಷೆಯಲ್ಲಿ ಮಾತನಾಡಿ ಅವರ ಕೆಲಸವನ್ನು ಹಗುರಗೊಳಿಸುತ್ತಿದ್ದಾರೆ. ಅವರಿಗೆ ಕನ್ನಡವನ್ನು ಕಲಿಯುವ ಅವಶ್ಯಕತೆಯೇ ಇಲ್ಲವೆಂಬ ಸನ್ನಿವೇಶವನ್ನು ಕಲ್ಪಿಸಿದ್ದಾರೆ. ಇದು ಕನ್ನಡಿಗರ ತಪ್ಪು. ಇದೊಂದು ದೊಡ್ಡ ದುರಂತ. ಇಲ್ಲಿ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸ ಬೇಕು.

ಹೊರನಾಡ ಜನರಿಗೆ, ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಕಲಿಯದಿದ್ದರೆ, ಜೀವಿಸಲು ಬೇರೆ ದಾರಿಯಿಲ್ಲ ಎಂಬ ವಾತಾವರಣವನ್ನು ಉಂಟುಮಾಡಬೇಕು.  ಕನ್ನಡಿಗರು ಕನ್ನಡದ ಬಾವುಟವನ್ನು ತಮ್ಮ ಮನಗಳಲ್ಲಿ ಹಾರಿಸ ಬೇಕು. ಕನ್ನಡದ ದೀಪವನ್ನು ತಮ್ಮ ಹೃದಯಗಳಲ್ಲಿ ಹಚ್ಚಬೇಕು. ಈ ಕಾರ್ಯವನ್ನು ಒಗ್ಗಟ್ಟಿನಿಂದ ಮಾಡಬೇಕು.  ಪರಭಾಷೆಯನ್ನು ಅವಹೇಳನಮಾಡಬಾರದು. ಯಾವುದೇ ಭಾಷೆಯನ್ನು ಕಲಿಯುವುದು ಒಂದು ವಿದ್ವತ್ ಕಲಿತಂತೆ.  ಇತರ ಭಾಷೆಗಳನ್ನು ಟೀಕೆಮಾಡುವುದು ಸಲ್ಲದು. ನಮ್ಮ ಭಾಷೆಯನ್ನು ಉತ್ತಮ ಮಟ್ಟದಲ್ಲಿ ಕಲಿತು ಬೆಳಸುವುದೊಂದೇ ನಮಗಿರುವ ದಾರಿ. ಗೋಮುಖವ್ಯಾಘ್ರ ಬುದ್ಧಿಗಳನ್ನು ಬಿಡಬೇಕು. ನಿಜವಾದ ಹೃದಯವಂತರಾಗಬೇಕು. ಇವತ್ತಿನ ಪರಿಸ್ಥಿತಿಗೆ ಕನ್ನಡಿಗರ ನಿರಭಿಮಾನವೇ ಕಾರಣ. ಇತರ ಭಾಷೆಗಳಿಗೆ ನಮ್ಮ ಸ್ಥಾನವನ್ನು ನಾವೇ ಬಿಟ್ಟುಕೊಟ್ಟಿದ್ದೇವೆ. ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು, ನಮ್ಮ ಮಹಾನ್ ಸಾಹಿತಿಗಳು ಮಾಡಿರುವ ಕಾರ್ಯಗಳನ್ನು ಸ್ಫೂರ್ತಿಯನ್ನಾಗಿ ಇಟ್ಟುಕೊಂಡು ನಮ್ಮ ಭಾಷೆಯನ್ನು ಬೆಳೆಸಿ ಉಳಿಸುವುದೊಂದೇ ದಾರಿ.  ಭಾಷೆ ಮತ್ತು ಸಾಹಿತ್ಯಕ್ಕೆ ಜಾತಿ ಮತಗಳ ಬೇಧವಿರಬಾರದು. ಆ ಭಾವನೆಗಳನ್ನು ಮೀರಿ ಬೆಳೆಯಬೇಕು. ಜಾತ್ಯಾತೀತ ರಾಷ್ಟ್ರದಲ್ಲಿ, ಇನ್ನೂ ನಾವು ಜಾತಿಯನ್ನು ಮೀರಿ ಬೆಳೆದಿಲ್ಲ. ಇದು ನಾವು ಇಂದು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆ.  ನೀವು ಹೊರನಾಡ ಕನ್ನಡಿಗರು ಇಂದು ಕನ್ನಡವನ್ನು ಉಳಿಸಲು, ಈ ಕನ್ನಡದ ಉತ್ಸವಗಳನ್ನು ಆಚರಿಸುತ್ತಿದ್ದೀರಿ. ಅನೇಕ ಇಂತಹ ಉತ್ಸವಗಳಲ್ಲಿ, ಅವಕಾಶಗಳನ್ನು ಕೊಟ್ಟವರಿಗೇ ಕೊಡಲಾಗುತ್ತಿದೆ. ಎಲ್ಲಾ ಪ್ರತಿಭೆಗಳನ್ನೂ ಗುರ್ತಿಸಬೇಕು. ನಮ್ಮ ದೇಶದಲ್ಲಿ ಅಶುಚಿ ಒಂದು ದೊಡ್ಡ ಸಮಸ್ಯೆಯಾಗಿದೆ. ನಮ್ಮವರಿಗೆ ನಾಗರೀಕ ಪ್ರಜ್ಞೆ ಕಡಿಮೆ. ಅದನ್ನು ಬೆಳಸಿಕೊಳ್ಳಬೇಕು. ನಮ್ಮ ಸರ್ಕಾರ ಇದನ್ನು ಗಮನಕ್ಕೆ ತೆಗೆದುಕೊಂಡಿಲ್ಲ.

ಉಮಾ ವೆಂಕಟೇಶ್: ಹೊರನಾಡ ಕನ್ನಡಿಗರು ಕನ್ನಡ ಭಾಷೆಯ ಬೆಳವಣಿಗೆಗೆ ಯಾವ ರೀತಿಯಲ್ಲಿ ಸಹಕಾರವನ್ನು ನೀಡಬಹುದು?

ಶಿವರಾಮ್:  ನಮ್ಮ ರಾಜ್ಯದಲ್ಲಿ ನಿಜವಾಗಿ ಕನ್ನಡಕ್ಕಾಗಿ ಯಾರು ಕಾರ್ಯ ನಿರ್ವಹಿಸುತ್ತಿದ್ದಾರೋ ಅವರನ್ನು ಗುರ್ತಿಸಬೇಕು.  ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಅಂತಹ ಶಾಲೆಗಳನ್ನು ಗುರ್ತಿಸಿ ಅವುಗಳನ್ನು ಜೀರ್ಣೋದ್ಧಾರ ಮಾಡಬೇಕು. ನಿಮ್ಮವರು ಆ ಕಾರ್ಯಗಳಲ್ಲಿ ತೊಡಗಿಸಿಕೊಂಡು, ನಮ್ಮ ಸಂಸ್ಥೆಗಳು ಮತ್ತು ಸರ್ಕಾರದೊಡನೆ ಕಾರ್ಯ ನಡೆಸಬೇಕು.  ಮಕ್ಕಳಿಗಾಗಿ ಆಸ್ತಿ ಕೊಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳಸಿ. ಜೀವನದಲ್ಲಿ ಏನನ್ನಾದರೂ ಸಾಧಿಸಲು, ಜ್ಞಾನದ ಹಸಿವಿರಬೇಕು. ಸಾಧಿಸುವ ಮನೋಭಾವನೆ ಇರಬೇಕು. ನಿಸ್ವಾರ್ಥ ಮನೋಭಾವನೆ ಬೇಕು.

ಉಮಾ ವೆಂಕಟೇಶ್: ಶಿವರಾಮ್ ಅವರೆ, ನೀವು ಚಿತ್ರರಂಗ ಮತ್ತು ರಂಗಮಂಚದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದೀರಿ. ಇದರ ಹಿಂದಿನ ಗುಟ್ಟೇನು?

ಶಿವರಾಮ್:  ಇದು ನನ್ನ ಹೃದಯದಲ್ಲಿ ಕಾರ್ಯದ ಬಗ್ಗೆ ಇರುವ ಒಂದು ಮನೋಭಾವನೆ. ನಾನು ಚಿತ್ರರಂಗದಲ್ಲಿ, ಒಬ್ಬ ನಟ, ನಿರ್ಮಾಪಕ, ನಿರ್ದೇಶಕನಷ್ಟೇ ಅಲ್ಲ, ಅಲ್ಲಿ ಸಮಾರಂಭಗಳನ್ನು ನಡೆಸಿದ್ದೇನೆ, ಕಸವನ್ನೂ ಗುಡಿಸಿದ್ದೇನೆ. ಸರ್ವೋಜನಾ ಸುಖಿನೋ ಭವಂತು! ಎಂಬ ತತ್ವವನ್ನು ಪಾಲಿಸಬೇಕು.  ಕನ್ನಡಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳನ್ನು ಗುರ್ತಿಸಿ, ಆ ಸಂಸ್ಥೆಗಳೊಂದಿಗೆ ಹೊರನಾಡ ಕನ್ನಡಿಗರು ಕೆಲಸ ಮಾಡಿದರೆ, ನಮ್ಮ ಭಾಷೆ ಮತ್ತು ನಾಡಿನ ಬೆಳವಣಿಗೆಯಲ್ಲಿ ಸಹಾಯವಾಗಬಲ್ಲುದು. ಹೊರನಾಡ ಕನ್ನಡಿಗರು ಈ ದಿಶೆಯಲ್ಲಿ ಸಹಕರಿಸುವರೆಂಬ ನಂಬಿಕೆ ನನಗಿದೆ.

4 thoughts on “‘ಕನ್ನಡದ ಬೆಳವಣಿಗೆಗೆ ಎಷ್ಟು ದುಡಿದರೂ ಕಡಿಮೆಯೇ’ – ಶಿವರಾಂ ಸಂದರ್ಶನ: ಉಮಾ ವೆಂಕಟೇಶ್

 1. I was humbled by Shivaram’s desire to learn and serve in spite of having acquired a vast amount of experience and expertise in what he does. Truly a very interesting conversation!

  Like

 2. ಹೃದಯಸ್ಪರ್ಶಿಯಾದ ಸಂವಾದ. ಮನುಷ್ಯನ ಸಂಸ್ಕಾರ ಆತನ ಜೀವನಧ್ಯೇಯವನ್ನು ಹೇಗೆ ರೂಪಿಸುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಆಡಳಿತದಲ್ಲಿರುವ ಬಹುತೇಕರು ಇವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವ ಮನೋ ಸಾಮರ್ಥ್ಯವನ್ನೇ ಹೊಂದಿಲ್ಲ ಇನ್ನು ಕಿವಿಗೊಡುವುದಿಲ್ಲಿ ಬಂತು. ಅವರ ಕಾರ್ಯಕ್ರಮದಿಂದ ಹಾಗೂ ಸಂಭಾಷಣೆಯಿಂದ ನಮ್ಮ ಕಣ್ಣು ತೆರೆದರೆ ಅದೇ ಪುಣ್ಯ.

  Like

 3. ಈ ಸಂದರ್ಶನವನ್ನು ರೆಕಾರ್ಡ್ ಮಾಡುವ ಸುದೈವ ನನ್ನದಾಗಿತ್ತು. ಶಿವರಾಮರ ಮಾತಿನ ಮೋಡಿ, ಇನ್ನೂ ಜೀವನೋತ್ಸಾಹ, ಕನ್ನಡದ ಬಗ್ಗೆ, ಕಲಾವಿದರ ಬಗ್ಗೆ ಕಳಕಳಿ, ನಿಸ್ಪೃಹತೆ ಇವಕ್ಕೆ ಮಾರು ಹೋದೆ. ಅಪರೂಪದ ಭೇಟಿ. ಆ ರಸನಿಮಿಷಗಳ ಸಾರವನ್ನು ಉಮಾ ಅವರು ಇದರಲ್ಲಿ ಹಿಡಿದಿಟ್ಟಿದ್ದಾರೆ. ಧನ್ಯವಾದಗಳು. ಸಮಾಜಕ್ಕೆ, ಆಡಳಿತಕ್ಕೆ ಅವರು ಕೊಟ್ಟ ಕರೆಗೆ ಕಿವಿಗೊಡುವವರುಂಟೇ?

  Like

  • ದೇಸಾಯಿ ಅವರೆ, ಕನ್ನಡ ಚಲನಚಿತ್ರಗಳಲ್ಲಿ ಶಿವರಾಮ್ ಅವರ ಅಭಿನಯವನ್ನು ಕಂಡಿದ್ದ ನನಗೆ, ಅವರ ರಂಗಭೂಮಿಯ ಚಟುವಟಿಕೆಗಳು ಮತ್ತು ಇತ್ತೀಚಿನ ಸಾಮಾಜಿಕ ಕಳಕಳಿಯನ್ನು ಕಂಡು ಬಹಳ ಹೆಮ್ಮೆಯೆನಿಸಿತು. ಅವರ ನಿರರ್ಗಳವಾದ ಕನ್ನಡ ಭಾಷೆಯ ಸೊಗಡು ಇನ್ನೂ ನನ್ನ ಕಿವಿಯಲ್ಲಿ ಗುನುಗುಡುತ್ತಲೇ ಇದೆ. ಇಂತಹ ಅಪರೂಪದ ಕಲಾವಿದರನ್ನು ಸಂದರ್ಶನ ಮಾಡುವ ಸದವಕಾಶ ನನಗೆ ದೊರೆತದ್ದು ನನ್ನ ಅದೃಷ್ಟವೇ ಸರಿ.
   ಉಮಾ ವೆಂಕಟೇಶ್

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.