‘ಕನ್ನಡದ ಬೆಳವಣಿಗೆಗೆ ಎಷ್ಟು ದುಡಿದರೂ ಕಡಿಮೆಯೇ’ – ಶಿವರಾಂ ಸಂದರ್ಶನ: ಉಮಾ ವೆಂಕಟೇಶ್

ಉಮಾ ವೆಂಕಟೇಶ್: ಶಿವರಾಮ್ ಅವರೆ, ನೀವು ಕನ್ನಡ ಚಲನಚಿತ್ರ ರಂಗದಲ್ಲಿ ಮತ್ತು ರಂಗಭೂಮಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ, ನಟ, ನಿರ್ಮಾಪಕ, ನಿರ್ದೇಶಕನಾಗಿ ಬಹಳ ಒಳ್ಳೆಯ ಕಾರ್ಯಗಳನ್ನು ಈಗಾಗಲೇ ಮಾಡಿದ್ದೀರಿ. ಈ ರಂಗಗಳಲ್ಲಿ ಇನ್ನೂ ನಿಮಗೆ ಮಾಡಬೇಕು ಎಂದು ಅನಿಸಿರುವ ಕಾರ್ಯಗಳು ಇವೆಯೇ?

ಶಿವರಾಂ ಸಂದರ್ಶನದಲ್ಲಿ ಉಮಾ ವೆಂಕಟೇಶ್
ಶಿವರಾಂ ಸಂದರ್ಶನದಲ್ಲಿ ಉಮಾ ವೆಂಕಟೇಶ್

ಶಿವರಾಮ್: ಇನ್ನೂ ಬೇಕಾದಷ್ಟು ಕಾರ್ಯಗಳಿವೆ. ಇನ್ನೂ ಅಪೂರ್ಣವಾಗಿರುವ ಕಾರ್ಯಗಳು ಬೇಕಾದಷ್ಟಿವೆ. ನಮ್ಮ ಜೀವನವೇ ಒಂದು ರೀತಿಯಲ್ಲಿ ಅಪೂರ್ಣ.  ಇನ್ನೂ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಬೇಕು ಎಂಬ ಆಸೆಯಿದೆ, ನಾನು ಮೂಲತಹ ರಂಗಭೂಮಿಯಿಂದ ಬಂದವನು. ರಂಗಭೂಮಿಯಲ್ಲಿ ನಟಿಸುವ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ನಾನು ಸಿನಿಮಾರಂಗಕ್ಕೆ ಹೋದೆ. ನನಗೆ ಇನ್ನೂ ಬಹಳ ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿ, ಆ ನಾಟಕಗಳನ್ನು ರಾಜ್ಯದಾದ್ಯಂತ ಕೊಂಡೊಯ್ದು, ಅದರಿಂದ ಕಡೆಯ ಪಕ್ಷ ಒಂದು ಕೋಟಿ ರೂಪಾಯಿಗಳನ್ನಾದರೂ ಸಂಪಾದಿಸಿ, ಆ ಹಣವನ್ನು ರಂಗಭೂಮಿಯ ಕಲಾವಿದರ ಕ್ಷೇಮ ನಿಧಿಗಾಗಿ ಉಪಯೋಗಿಸ ಬೇಕು ಎನ್ನುವ ಒಂದು ಮಹದಾಸೆಯಿದೆ.  ನಾನು ಒಂದು ಕೋಟಿ ಸಂಪಾದಿಸಿದ ಮೇಲೆ, ನಮ್ಮ ಸರ್ಕಾರವನ್ನು ಕೇಳಿ ಅವರಿಂದ ಒಂದು ಕೋಟಿ ರೂಪಾಯಿಗಳ ಹಣವನ್ನು ಅದಕ್ಕೆ ಸೇರಿಸಿ, ರಂಗ ಭೂಮಿಯ ಕಲಾವಿದರು ಯಾರನ್ನೂ ಹಣ ಬೇಡದಿರುವಂತೆ ಅವರ ಕ್ಷೇಮನಿಧಿಯನ್ನು ಪ್ರಾರಂಭಿಸುವ ಯೋಜನೆ ನನಗಿದೆ.  ನನ್ನ ಜೊತೆಯ ಅನೇಕ ಕಲಾವಿದರು ಅನುಭವಿಸುವ ನೋವನ್ನು IMG_6247ದೂರ ಮಾಡಬೇಕು. ಇತ್ತೀಚೆಗೆ ನಿಧನರಾದ ಗಾಂಧಿ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ ಪ್ರಖ್ಯಾತ ಹಾಲಿವುಡ್ ನಿರ್ದೇಶಕ, ಸರ್ ರಿಚರ್ಡ್ ಅಟೆನ್ಬರೋ, ಭಾರತ ಸರ್ಕಾರಕ್ಕೆ ಒಂದು ಕೋಟಿ ರೂಪಾಯಿಗಳನ್ನು ಕಲಾವಿದರ ನಿಧಿಗೆಂದು ಕೊಟ್ಟರು. ಅದನ್ನು Senior artistes welfare fund of India ಎಂದು ಪ್ರಾರಂಭಿಸಿ, ಅದರಲ್ಲಿ ವಿನಿಯೋಗಿಸಿದ್ದಾರೆ. ಅದಕ್ಕೆ ಕರ್ನಾಟಕದಿಂದ ನನ್ನನ್ನು ಟ್ರಸ್ಟಿಯನ್ನಾಗಿ ಮಾಡಿದ್ದಾರೆ. ಇದಕ್ಕಾಗಿ ನಾನು ಕರ್ನಾಟಕದ ಸುಮಾರು ೨೫ ಅತ್ಯಂತ ಬಡ ಕಲಾವಿದರನ್ನು ಆರಿಸಿದೆ. ಈ ೨೫ ಮಂದಿಯಲ್ಲಿ, ಈಗ ಸುಮಾರು ೧೫ ಕಲಾವಿದರಿಗೆ ಪ್ರತಿ ತಿಂಗಳಿಗೆ ೧೦೦೦ ರೂಪಾಯಿಗಳ ಪಿಂಚಣಿ ಸಿಗುತ್ತಿದೆ.  ಇದರ ಜೊತೆಗೆ ರಂಗಭೂಮಿಯಲ್ಲಿ ಇನ್ನೂ ಅನೇಕ ಪ್ರಯೋಗಗಳನ್ನು ಮಾಡುವ ಆಸೆಯಿದೆ.

Read More »