
ಯುನೈಟೆಡ್ ಕಿಂಗ್ಡಮ್ ನ “ಅನಿವಾಸಿ” ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ದೀಪಾವಳಿಯನ್ನು ಅಧಿಕೃತವಾಗಿ ಆಚರಿಸಲು ಪ್ರಾರಂಭಿಸಿ ಮೂವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ದೊಡ್ಡ ಸಂಭ್ರಮಾಚರಣೆ ೨೦೧೩ ರ ನವೆಂಬರಿನಲ್ಲಿ ನಡೆದಿತ್ತು. ಹಾಡು-ಕುಣಿತ- ನಲಿವು- ಮಿಲನ- ಊಟ- ಹರಟೆಗೆ ಮೀಸಲಾದ ಈ ಸಮಾರಂಭಗಳಲ್ಲಿ ಭಾಷೆ, ಅದರ ಬೆಳವಣಿಗೆ, ಸಂಸ್ಕೃತಿ ಮತ್ತದರ ಸ್ವರೂಪಗಳ ಕುರಿತ ಕಾರ್ಯ ಚಟುವಟಿಕೆಗಳು ಕೇವಲ ಸಾಹಿತಿಯೊಬ್ಬರ ಭಾಷಣಕ್ಕೆ ಸೀಮಿತವಾಗಿ ಬಿಡುತ್ತಿತ್ತು. ಇದನ್ನು ಮೀರಿ ಕನ್ನಡಿಗರ ವೈರುಧ್ಯಮಯ ಜೀವನ ಹಿಂದಿ ಭಾಷೆಯ ಹಾಡು ಕುಣಿತ ಮಾಡುವಲ್ಲಿ , ಕನ್ನಡಿಗರು ಕನ್ನಡಿಗರೊಂದಿಗೆ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸುವಲ್ಲಿ ಪರ್ಯಾವಸಾನವಾಗುತ್ತಿತ್ತು. ಈ ಕೊರತೆ ಕೆಲವರ ಮನಸ್ಸಿಗೆ ಬಂದದ್ದು ಕಾಕತಾಳೀಯವೇನಲ್ಲ.
ಈ ವೈರುಧ್ಯಮಯ ಬೆಳವಣಿಗೆಗಳ ಮಧ್ಯೆ ಕನ್ನಡಕ್ಕಾಗಿ ಮಿಡಿಯುವ ಹೃದಯಗಳ ಕನಸಿನ ಕೂಸು ಭಗೀರಥ ತಪಸ್ಸಿನ ಫಲದಂತೆ ಗಂಗೆಯ ರೂಪದಲ್ಲಿ ಅಂತರ್ಜಾಲದಲ್ಲಿ ಸಾಕಾರಗೊಂಡಿದ್ದು ಈ ವಿಚಾರ ವೇದಿಕೆಯ ಮೂಲಕ ಎಂದರೆ ತಪ್ಪಾಗಲಾರದು. ಮನಸಿನ ಮರುಭೂಮಿಯಲ್ಲಿ ಕಳೆದು ಹೋಗಲು ಬಿಡದೆ ಉಮಾ, ಶ್ರೀವತ್ಸ , ಶಿವಪ್ರಸಾದ್, ಸುದರ್ಶನ, ಕೇಶವ, ವತ್ಸಲಾ, ಮತ್ತಿತರರು ತಮ್ಮ ತನು ಮನ ಧನಗಳಿಂದ ಬಿತ್ತಿದ ಬೀಜ ಗಿಡವಾಗಿ, ಉಳಿದ ಕನ್ನಡಿಗರು ನೀರೆರೆದು ಬೆಳೆಸಿದ ಪುಟ್ಟ ವೃಕ್ಷವಾಗಿ ಇದೇ ಅಕ್ಟೋಬರ್ ತಿಂಗಳ ೧೮ ರಂದು ಕನ್ನಡದ ಹೆಮ್ಮೆಯ ಕವಿ ಶ್ರೀ ಹೆಚ್.ಎಸ್. ವೆಂಕಟೇಶ ಮೂರ್ತಿಯವರಿಂದ ಅನಾವರಣಗೊಂಡಿದ್ದು ಈ ದೇಶದ, ಅನಿವಾಸಿ ಕನ್ನಡಿಗರ ಪಾಲಿಗೆ ಒಂದು ಮೈಲುಗಲ್ಲು ಎಂದು ಹೇಳಿದರೆ ಉತ್ಪ್ರೇಕ್ಷೆ ಅಲ್ಲ.
ಅನಿವಾಸಿ ಕನ್ನಡಿಗರ ಮನದ ಮಾತುಗಳನ್ನು ಬರವಣಿಗೆಯ ಮೂಲಕ ಪ್ರಕಟಪಡಿಸುವ ಈ ಜಾಲ ಜಗುಲಿಯ ವೇದಿಕೆಯನ್ನು ”ಅನಿವಾಸಿ” ಎಂದೇ ಇಡಲಾಗಿದೆ.

ಬನ್ನಿ ಈ ತೆರೆಮರೆಯ ಭಗೀರಥರ ಪರಿಚಯ ಮಾಡಿಕೊಳ್ಳೋಣ. ಉಮಾ ಅವರು ಜೀವಶಾಸ್ತ್ರ ಪ್ರವೀಣರು, ಶ್ರೀವತ್ಸ ದೇಸಾಯಿ ನೇತ್ರ ತಘ್ನ್ಯರು, ಕೇಶವ್ ಕುಲಕರ್ಣಿ ವಿಕಿರಣ ಶಾಸ್ತ್ರ ಪ್ರವೀಣರು, ಶಿವಪ್ರಸಾದ್ ನಮ್ಮ ಹೆಮ್ಮೆಯ ರಾಷ್ಟಕವಿ ಜಿ.ಎಸ್.ಶಿವರುದ್ರಪ್ಪ ಅವರ ಚಿರಂಜೀವ ಮತ್ತು ಮಕ್ಕಳ ತಜ್ಞ. ವತ್ಸಲಾ, ಅರವಿಂದ ಕುಲಕರ್ಣಿ, ರಾಜಾರಾಮ ಕಾವಳೆ ಎಲ್ಲರೂ ನಿವೃತ್ತ ವೈದ್ಯರುಗಳು. ಇವರು ನೆಟ್ಟ ಗಿಡಕ್ಕೆ ನೀರೆರೆದು ನೆರವಾದವರು ಹಲವರು, ಇಳಿಸಿದ ಗಂಗೆ ಹರಿಯುವ ಜಾಡನ್ನು ತಿದ್ದಿದವರು ಕೆಲವರು. ಪ್ರೇಮಲತಾ, ದಾಕ್ಷಾಯಿಣಿ,ರಾಮ್ ಶರಣ್, ಗಿರಿಧರ, ಆನಂದ್ ಕೇಶವಮೂರ್ತಿ, ಅನ್ನಪೂರ್ಣಾ, ಬಸವರಾಜ್, ಸುದರ್ಶನ , ಶಶಿಧರ ಮತ್ತು ಇತರರು.
ಉದ್ಘಾಟನೆಗೆ ಮೊದಲು ಮೂರು ಬಾರಿ ವಿವಿಧ ಜಾಗಗಳಲ್ಲಿ ಸೇರಿ ಸಭೆ ನಡೆಸಿದ್ದು ಈ ಯೋಜನೆಗೆ ರೂಪುರೇಷೆ ನೀಡುವಲ್ಲಿ ಸಹಕಾರಿಯಾಯಿತು.
ಈ ಸಾರಿ ಸಾಹಿತ್ಯ ವೇದಿಕೆಯ ಉದ್ಘಾಟನೆಯ ಜೊತೆಯಾಗಿ ಕನ್ನಡವನ್ನು ವಿದ್ಯುನ್ಮಾನ(electronic) ಮಾಧ್ಯಮಗಳಲ್ಲಿ ಬಳಸುವ ಮಾಹಿತಿ ಮತ್ತು ತರಬೇತಿಯನ್ನು ಜನಸಾಮಾನ್ಯರಿಗೆ ಕೊಡುವುದು, ಕನ್ನಡ ಭಾಷೆಯ ಇಂದಿನ ಸ್ಥಿತಿಗತಿಗಳನ್ನು ಪರಿಚಯಿಸಿ ಭಾಷೆಯ ಬಳಕೆಯ ಸಾಧ್ಯತೆಗಳನ್ನು ಉತ್ತೇಜಿಸುವುದು, ನಮ್ಮ ಈ ಜಾಲಜಗುಲಿಯ ಕಾರ್ಯ ವ್ಯಾಪ್ತಿಯನ್ನು ಪ್ರಚಾರಗೊಳಿಸಿ ಸುಪ್ತ ಲೇಖಕರನ್ನು ಮತ್ತವರ ಪ್ರತಿಭೆಯನ್ನು ಆಹ್ವಾನಿಸುವ ಕಾರ್ಯ ಕಲಾಪಗಳನ್ನು ಹಮ್ಮಿಕೊಂಡಿದ್ದೆವು.
- ಉದ್ಘಾಟನೆ ಸಾಂಕೇತಿಕವಾಗಿ ಕಂಪ್ಯೂಟರಿನ ಕೀಲಿಗುಂಡಿಯನ್ನು ಒತ್ತುವುದರ ಮೂಲಕ ಶ್ರೀ ವೆಂಕಟೇಶಮೂರ್ತಿ ಉದ್ಘಾಟಿಸಿದರು.
- ಕೇಶವ ಅವರು ದೃಶ್ಯ ಶ್ರಾವ್ಯ ಮಾಧ್ಯಮದ ಮೂಲಕ ವೇದಿಕೆಯ ಪರಿಚಯ ಸ್ಥೂಲವಾಗಿ ವಿವರಿಸಿದರು.
- ಸುದರ್ಶನ ಕನ್ನಡದ ಸ್ಥಿತಿ ಗತಿಗಳು, ಸವಾಲುಗಳು ಮತ್ತು ಅವಕಾಶಗಳನ್ನು ಕುರಿತಾಗಿ ಮಾತನಾಡಿದರು. ಕನ್ನಡವನ್ನು ಉಳಿಸುವಲ್ಲಿ ಯುವಪೀಳಿಗೆಯ ಮಹತ್ವ ಕುರಿತಾಗಿ ಇಲ್ಲಿ ವಿವರಿಸಲಾಯಿತು.
- ಪ್ರೇಮಲತಾ ಹಾಗೂ ಗಿರಿಧರ ಅವರು ಸಾಂಸ್ಕೃತಿಕ ಕಾರ್ಯ ಕಲಾಪಗಳ ನಿರೂಪಣೆಯನ್ನು ನಿಭಾಯಿಸಿದರು.
- ಉಮಾ, ಶ್ರೀವತ್ಸ ದೇಸಾಯಿ, ದಾಕ್ಷಾಯಣಿ, ರಾಮ್ ಶರಣ್, ಕೇಶವ್ ಹಾಗೂ ಸುದರ್ಶನ ಅವರುಗಳು ಕನ್ನಡ ಕಮ್ಮಟಗಳನ್ನು ನಡೆಸಿದರು.
ಕರಪತ್ರಗಳನ್ನು ಮುದ್ರಿಸಿ ಹಂಚಲಾಗಿತ್ತು, ಸಲಹೆ ಸೂಚನೆಗಳನ್ನೂ, ಕನ್ನಡ ಬೆರಳಚ್ಚಿನ ಮಾಹಿತಿಯನ್ನು ಜಾಲಜಗುಲಿಯಲ್ಲಿಯೂ ಕೊಡಮಾಡಲಾಗಿತ್ತು. ಸುಮಾರು ಹತ್ತಕ್ಕೂ ಹೆಚ್ಚು ಜನ ಬಂದು ಈ ಬಗೆಗೆ ತಮ್ಮ ಸಂಶಯ ನಿವಾರಣೆ ಮಾಡಿಕೊಂಡರು ಮತ್ತು ತರಬೇತಿಯನ್ನೂ ಪಡೆದರು.
ಮರುದಿನ ಅಂದರೆ ಭಾನುವಾರ ಬೆಳಗಿನ ಉಪಹಾರದ ನಂತರ, ಕನ್ನಡದ ಆಹ್ವಾನಿತ ಅತಿಥಿಗಳ ಸಂದರ್ಶನವನ್ನು ತೆಗೆದುಕೊಳ್ಳಲಾಯಿತು. ಉಮಾ ಅವರು ನಟ ಶಿವರಾಂ ಅವರದ್ದು, ದಾಕ್ಷಾಯಿಣಿಯವರು ಮುದ್ದುಕೃಷ್ಣ ಅವರದ್ದು ಹಾಗೂ ಪ್ರೇಮಲತಾ ಅವರು ಎಚ್ ಎಸ್ ವಿ ಅವರ ಸಂದರ್ಶನ ಕೈಗೊಂಡು ಕನ್ನಡವನ್ನು ಬೆಳೆಸುವಲ್ಲಿ ನಾವು ಮಾಡಬಹುದಾದ ಕಾರ್ಯಸಾಧ್ಯತೆಗಳ ಮಾಹಿತಿ ಪಡೆದರು.

ಅದಾದ ನಂತರದಲ್ಲಿ ಸಾಹಿತ್ಯ ಗೋಷ್ಠಿ ಅಧಿಕೃತವಾಗಿ ಆರಂಭವಾಯಿತು. ಶ್ರೀಕೃಷ್ಣ ಎಂಬ ಬಾಲಕನ ಪ್ರಾರ್ಥನೆಯೊಂದಿಗೆ ಶುರುವಾದ ಈ ಕಾರ್ಯಕ್ರಮವನ್ನು ಪ್ರೇಮಲತಾ, ಉಮಾ ಅವರು ನಿರೂಪಿಸಿದರು, ಕೇಶವ ಅವರು ಧ್ಯೇಯೋದ್ದೇಶಗಳ ಮತ್ತು ಈ ಜಗುಲಿಯ ವ್ಯಾಪ್ತಿಗಳ ಪರಿಚಯ ಮಾಡಿದರು. ಎಚ್ ಎಸ್ ವಿ ಸಾಹಿತ್ಯ ಚಾರಿತ್ರಿಕ ಅವಲೋಕನ ಮಾಡಿದರು, ಮುದ್ದು ಕೃಷ್ಣ ಸುಗಮ-ಸಂಗೀತ ಬೆಳೆದು ಬಂದ ಬಗೆ ತಿಳಿಸಿದರು. ಪುತ್ತೂರಾಯರ ಭಾಷಣ ಸಾಹಿತ್ಯದಲ್ಲಿ ಹಾಸ್ಯ ಎಂದಿದ್ದರೂ ಅವರು ಕೇವಲ ಹಾಸ್ಯವನ್ನಷ್ಟೇ ಮಾತನಾಡಿ ಇತಿಹಾಸವನ್ನು ಕೈ ಬಿಟ್ಟದ್ದು ಸ್ವಲ್ಪ ಅನಿರೀಕ್ಷಿತವಾದರೂ, ಸಭಿಕರನ್ನು ನಗಿಸುವಲ್ಲಿ ಯಶಸ್ವಿಯಾದರು. ೫೦-೬೦ ಸಂಖ್ಯೆಯಲ್ಲಿದ್ದ ಸಭಿಕರು ಎರಡು ಗಂಟೆಗಳ ಕಾಲ ನಿಶ್ಯಬ್ಧ ವಾಗಿ ಕುಳಿತಿದ್ದು ಕಾರ್ಯಕ್ರಮದ ಸವಿ ಉಂಡರೆಂದು ನಮ್ಮ ಭಾವನೆ.
ಇದರ ನಂತರ ಕವನ ವಾಚನ ಇದ್ದು ಹಲವಾರು ಕವಿಗಳು ತಮ್ಮ ತಮ್ಮ ಕವನಗಳನ್ನೂ ವಾಚಿಸಿದರು. ಕವನ ವಾಚನವನ್ನು ಕೂಡಾ ಸಭಿಕರು ಆದರ ಅಸಕ್ತಿಗಳಿಂದ ಕೇಳಿ ಮೆಚ್ಚುಗೆ ವ್ಯಕ್ತ ಪಡಿಸಿದರೆಂದು ನನಗೆ ಅನಿಸಿತು.
ಸಮಾರೋಪ ಮಾತುಗಳನ್ನು ಎಚ್ ಎಸ್ ವಿ ಅವರು ಹೇಳಿ” ಹೊರಮುಖವಾದ ಮಾತುಗಳು ಒಳ ಮುಖವಾದಾಗ” ಕವಿತೆ

ಮೂಡುವುದೆಂಬ ಕಿವಿ ಮಾತಿನ ಮೂಲಕ ತಮ್ಮ ಮಾತುಗಳನ್ನು ಮುಗಿಸಿದರು. ಡಾ. ಶ್ರೀವತ್ಸ ದೇಸಾಯಿ ವಂದನಾರ್ಪಣೆ ಅರ್ಪಿಸಿದರು.
ಸಣ್ಣ ತೊರೆಯೊಂದು ಒರತೆಯಿಂದ ಮುಂದೆ ಹರಿದು ನದಿಯಾಗುವ ಮುನ್ನ ತೊರೆಯಾಗಿರುವ ನಮ್ಮ ಈ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಗೆ ಕೃಷಿಯ, ಉದ್ಯಮಶೀಲತೆಯ ಅವಶ್ಯಕತೆ ಇದೆ. “ಕನ್ನಡಕ್ಕಾಗಿ ಕೈ ಎತ್ತಿ, ಅದು ಕಲ್ಪವೃಕ್ಷವಾಗುತ್ತದೆ,” ಎಂಬ ಕುವೆಂಪು ಅವರ ಕರೆಯಂತೆ ಬನ್ನಿ ಎಲ್ಲರೂ ಕೈ ಎತ್ತಿ !
ಸೂರ್ಯನ ಚಲುವಿಗೆ ಸುರ್ಯನೇ ಸಾಟಿ, ಸುದರ್ಶನರಿಗೆ ಅವರೊಬ್ಬರೇ ಸಾಟಿ. ಅದೆಷ್ಟು ಬೇಗ ವರದಿಯನ್ನು ಬರೆದಿದ್ದೀರಿ. ಅದರಲ್ಲಿ ತುಂಬ ಸುಂದರವಾಗಿ ಕಲಾಪಗಳನ್ನು ಬರೆದಿದ್ದೀರಿ. ಯು.ಕೆ ಕನ್ನಡಿಗರಿಗೆ ಕರೆಯೋಲೆಯಿದು.
LikeLike
ಸುದರ್ಶನ್ ಅವರೆ, ಸಮಾರಂಭದ ವಿವರಗಳನ್ನು ನಿಖರವಾಗಿ ಆಸಕ್ತಿಪೂರ್ಣ ರೀತಿಯಲ್ಲಿ ದಾಖಲಿಸಿದ್ದೀರಿ. ಕನ್ನಡಕ್ಕಾಗಿ ಕೈಯೆತ್ತುವ ನಮ್ಮ ಹೊರನಾಡ ಕನ್ನಡಿಗರ ಮನಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಇರುವ ಅಭಿಮಾನ ಮತ್ತು ಕಾಳಜಿಗಳಿಗೆ ಹಿಡಿದ ಕನ್ನಡಿಯಂತಿದೆ ನಿಮ್ಮ ವರದಿ. ನಿಮ್ಮ ಕನ್ನಡದ ಅಭಿಮಾನ ಮತ್ತು ಹುರುಪುಗಳು, ನಿಮ್ಮ ಬರಹಗಳ ಮೂಲಕ ಹೀಗೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.
ಉಮಾ ವೆಂಕಟೇಶ್
LikeLike
ನಮ್ಮ ವೇದಿಕೆಯ ಆರಂಭಕ್ಕೂ ಮೊದಲಿಂದ ಇಲ್ಲಿಯವರೆಗಾದ ಘಟನೆಗಳಷ್ಟೇ ಅಲ್ಲ, ಈ ದೀಪವಳಿ ಸಮಾರಂಭದ ವಿಷಯಗಳನ್ನೂ ಸ್ಥೂಲವಾಗಿ ಬಳಗದ ಸದಸ್ಯರಿಗೆ, ಉಪಸ್ಥಿತರಿದ್ದ, ಬರಲಾಗದ ಕನ್ನಡ ಬಳಗದ ಎಲ್ಲ ಸದಸ್ಯರಿಗೂ ತಿಳಿಸಿದ್ದೀರಿ. ಇದು ಮೊದಲ ಹೆಜ್ಜೆ. ಇನ್ನು ಮುಂದೆ ಉತ್ಸಾಹಿಗಳಿಗೆ ಆದರದ ಸ್ವಾಗತವಿಯೆಂದೂ ತಿಳಿಸಿದ್ದೀರಿ. ಕಾಯುವಾ. ಬೇಗನೆ ವರದಿ ಸಮರ್ಪಿಸಿದ್ದಕ್ಕೆ ಧನ್ಯವಾದಗಳು.
ಶ್ರೀವತ್ಸ
LikeLike