ಐದು ಕವನಗಳು – ಕೇಶವ ಕುಲಕರ್ಣಿ

ಈ ವಾರ ನಾನು ಬರೆದ ಐದು ಕವನಗಳಿವೆ. ವಿಭಿನ್ನ ರೀತಿಯ ಪ್ರಯತ್ನದ ಕವನಗಳು ಎಂದು ನನ್ನ ಅನಿಸಿಕೆ. ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಮತ್ತು ವಿಮರ್ಶೆಗಳನ್ನು ಮರೆಯಬೇಡಿ. ಇಲ್ಲಿರುವ ಎಲ್ಲ ಚಿತ್ರಗಳನ್ನು ಬರೆದದ್ದು ಕೃತಕ ಬುದ್ಧಿಮತ್ತೆ (AI)! – ಕೇಶವ ಕುಲಕರ್ಣಿ

ಸ್ಕ್ರಿಪ್ಟ್

ನನಗೆ ಬೇಕಾದಂತೆ
ನನ್ನ ಬದುಕಿನ ಸ್ಕ್ರಿಪ್ಟ್  ಬರೆಯಬೇಕು 
ಆದರೆ ನನ್ನೊಳಗಿನ ಕತೆಗಾರನ ಪಕ್ಕದಲ್ಲಿ
ಕೂತಿದ್ದಾನೆ ನಿರ್ಮಾಪಕ
He needs a hit.
BLOCK BUSTER!
M-O-N-E-Y-S-P-I-N-N-E-R !!
ಹೇಳುತ್ತಾನೆ ಕತೆಗಾರನಿಗೆ,

“ನಿನ್ನಂತೆ ಬರೆದರೆ
ಒಂದೇ ಒಂದು ಥೇಟರು ಸಿಗುವುದಿಲ್ಲ
ಸಿಕ್ಕರೂ ಎರಡನೇ ದಿನ ನೊಣ ಹೊಡೆಯಲೂ ಜನ ಸಿಗುವುದಿಲ್ಲ 
ಅವಾರ್ಡು ಬರುತ್ತೆ ಅನ್ನುತ್ತೀಯಾ?
ಆ ಕಾಲವೂ ಮುಗಿಯಿತಯ್ಯಾ
ಅಲ್ಲಿ ಕೂತವರೂ ನನ್ನಂಥವರೇ
ನಿನ್ನ ಭಾಷೆ ನಮಗೆ ಅರ್ಥವಾಗುವುದಿಲ್ಲ
ಅಪ್ಪಿ ತಪ್ಪಿ ಅವಾರ್ಡು ಬಂತು ಅಂದುಕೋ
ಹೊಟ್ಟೆಗೆ ಏನು ಮಾಡ್ತೀಯಾ?
ಹಾಕಿದ ದುಡ್ಡು ಹೇಗೆ ವಾಪಸ್ಸು ತೆಗೀತೀಯಾ?
ಮಾಡಿದ ಸಾಲ ಹೇಗೆ ತೀರಸ್ತೀಯಾ?”

ಕತೆಗಾರ ಬರೆಯುತ್ತಿದ್ದಾನೆ
ನಿರ್ಮಾಪಕ ಹೇಳಿದಂತೆ…

ಪೆಂಡಾಲು ಕಟ್ಟುವ ಹುಡುಗ

ಕತ್ತಲಿನ ಕೊಳಕಲ್ಲಿ ಚರಂಡಿ ಗಲ್ಲಿಗಳಲ್ಲಿ ಚಿಂದಿ ಬಟ್ಟೆಗಳಲ್ಲೇ ಬೆಳೆದ ನನ್ನ
ಕಾಯಿಸಿದೆ ಪ್ರೀತಿಸಿದೆ ಚುಂಬಿಸಿದೆ ಕಾಮಿಸಿದೆ ನಿನ್ನ ಪ್ರೀತಿಗೆ ನನ್ನೇ ಎರಕಹೊಯ್ದೆ

ರದ್ದಿಹಾಳೆಯ ಖಾಲಿ ಜಾಗಗಳ ಮೂಲೆಯಲಿ ನಿನ್ನದೇ ಕನಸುಗಳ ಕವಿತೆಗಾಗಿ
ಬರೆದ ಪದಗಳ ಮೇಲೇ ಪದಗಳನು ಬರೆಬರೆದು ಹಾಳೆಹರಿದಿತ್ತು ಮಸಿಯ ನುಂಗಿ

ನಿನ್ನ ಪ್ರೀತಿಗೆ ನನ್ನ ಮಾತುಗಳ ಮುತ್ತುಗಳು, ನುಣುಪು ಕೊರಳಿಗೆ ನನ್ನ ತೋಳು ಸರಮಾಲೆ
ನಿನ್ನ ಪ್ರೇಮದ ಮದಕೆ ನಾ ಮದಿರೆಯಾದೆ, ನಿನ್ನಿಷ್ಟದಂತೆ ನಾ ಎಲ್ಲ ಮುಚ್ಚಿಟ್ಟೆ

ನನ್ನ ಬಳಿಯಿದ್ದ ಹಣ ವಿದ್ಯೆ ಜಾತಿಗಳಿಂದ ನಿಮ್ಮಪ್ಪ ಬಗ್ಗುವುದೇ ಇಲ್ಲವೆಂದು…

ಅವರಿವರ ಬಳಿಯಿದ್ದ 
ಅವುಗಳನ್ನು ಗಳಿಸಲು 
ಏನನ್ನೂ ಕದಿಯಲಿಲ್ಲ

ಬಾಗಿಸಲಿಲ್ಲ ಬೆನ್ನನ್ನು
ಮಂಡೆಯೂರಿ ಬಿಕ್ಕಿ ಬೇಡಲಿಲ್ಲ
ಗೋಗೆರೆಯಲಿಲ್ಲ, ಅಳಲಿಲ್ಲ, ಕನಿಕರವ ಬೇಡಲಿಲ್ಲ

ನೀನದನ್ನು ಸೊಕ್ಕಾದರೂ ಅನ್ನು
ತಿಕ್ಕಲುತನವಾದರೂ ಅನ್ನು

ನಿನ್ನ ಮದುವೆಯ ದಿನ 
ಯಾವ ಮುಜುಗರವಿಲ್ಲದೇ ಪೆಂಡಾಲು ಕಟ್ಟಿದ್ದೇನೆ

’ಎಲ್ಲ ಮಾನವ ನಿರ್ಮಿತ, ಇದೆಲ್ಲ ಮಾಯೆ’ 
ಎನ್ನುವ ನಿಮ್ಮಪ್ಪನ ವೇದಾಂತ
ಮಾಡಿದ ಕೆಲಸಕ್ಕೆ ದುಡ್ಡು ಎಣಿಸುವಾಗ ಚೌಕಾಸಿಗಿಳಿದಿತ್ತು

ಅದೇ ಮೊಟ್ಟಮೊದಲ ಬಾರಿಗೆ 
ನಾನು ಮುಖವನೆತ್ತಿ ನಿಮ್ಮಪ್ಪನ
ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ್ದು
ಮುಖಕ್ಕೆ ಉಗಿದು ಬಾಯಿ ಒರೆಸಿಕೊಂಡಿದ್ದು

ನಮ್ಮ ಮನೆಯ ನಾಯಿ

ನಮ್ಮ ಮನೆಯ ನಾಯಿ  
ಅಂಗಳದಲ್ಲಿ  
ಬಿಸಿಲನ್ನು ಕಾಯಿಸಿಕೊಳ್ಳುತ್ತ
ನೆರಳಿನ ಜೊತೆ ಜಗಳವಾಡುತ್ತ
ಕಿವಿ ಕೆರೆದುಕೊಳ್ಳುತ್ತ 
ಮುಚ್ಚಿದ ಗೇಟಿನವರೆಗೂ ಓಡುತ್ತ
ಮತ್ತೆ ತಲಬಾಗಿಲವರೆಗೂ ತೇಗುತ್ತ
ನಾಲಗೆಯಿಂದ ಮೈಯನ್ನೆಲ್ಲ ನೆಕ್ಕಿಕೊಳ್ಳುತ್ತ
ಆಗಾಗ  ಆಕಳಿಸಿತ್ತ, ಮೈಮುರಿಯುತ್ತ, ಮೈಕೊಡವುತ್ತ

ಇರಲು

ಆಚೆ ಓಣಿಯ ಬೀದಿನಾಯೊಂದು
ನಮ್ಮ ಮನೆ ಮುಂದಿನ ರಸ್ತೆಯಲಿ
ವಯ್ಯಾರದಲ್ಲಿ ಬರುತ್ತಿರುವ
ವಾಸನೆ ಮೂಗಿಗೆ

ಬಡಿದದ್ದೇ

ಈ ನಮ್ಮ ನಾಯಿ
ತಲೆಯೆತ್ತಿ 
ಕಿವಿ ನಿಮಿರಿಸಿ 
ಬಾಲ ನಿಗುರಿಸಿ
ಗೇಟಿನವರೆಗೂ ಧಡಪಡಿಸಿ 
ಇಸ್ಟಗಲ ಬಾಯಿ ತೆರೆದು
ಬೊಗಳಿದ್ದೇ ಬೊಗಳಿದ್ದು

ಆದರೆ ಆ ನಾಯಿ 
ಈ ನಮ್ಮ ನಾಯಿಯನ್ನು 
ನೋಡೇ ಇಲ್ಲ ಎನ್ನುವಂತೆ
ತನ್ನ ಪಾಡಿಗೆ ತಾನು
ಕ್ಯಾರೇ ಎನ್ನದೇ 
ಆರಾಮವಾಗಿ ನಮ್ಮ ಓಣಿಯನ್ನು
ದಾಟಿ ಹೊರಟುಹೋಯಿತು

ಆ ನಾಯಿ ಕಣ್ಣಿಂದ ದೂರಾಗುವವರೆಗೂ
ಬೊಗಳಿದ ನಮ್ಮ ನಾಯಿ 
ಮರಳಿ 
ನೆರಳಲ್ಲಿ ಕಾಲು ಚಾಚಿ
ಎಲ್ಲಂದರಲ್ಲಿ ತನ್ನ ಮೈಯ
ನೆಕ್ಕತೊಡಗಿತು 

ಇದೆಲ್ಲ ನಡೆಯುತ್ತಲೇ ಇಲ್ಲ
ಅಥವಾ ನಡೆದರೂ ಏನಂತೆ
ಎನ್ನುವ ದಿವ್ಯ ನಿರ್ಲಿಪ್ತತೆಯಲ್ಲಿ
ಅಂಗಳದಲ್ಲೇ ಕುಳಿತಿದ್ದ ನನ್ನ ಅಜ್ಜಿ 
ಹೂಬತ್ತಿ ಗೆಜ್ಜೆವಸ್ತ್ರ ಬಸಿಯುತ್ತ
ದಾಸರ ಪದ ಒಟಗುಟ್ಟುತ್ತಿದ್ದಳು,

‘ಬಂದದ್ದೆಲ್ಲ ಬರಲಿ
ಗೋವಿಂದನ ದಯವೊಂದಿರಲಿ’

ಬ್ಯೂಟಿಫುಲ್ ಹುಡ್ಗೀರು

ಈ ಬ್ಯೂಟಿಫುಲ್ ಹುಡ್ಗೀರು ಬಿಎಂಟಿಸಿ ಬಸ್ಸಿದ್ದಂಗೆ
ಕಾದಿದ್ದೂ ಕಾದಿದ್ದೇ!
ಅಗೋ ಒಂದು 
ಬಂತು 
ನಿಂತು
ಅನ್ನುತ್ತಿರುವಾಗಲೇ
ಒಂದರ ಹಿಂದೆ ಮತ್ತೊಂದು ಮುಗದೊಂದು!

ಯಾವುದು ಫುಲ್ಲು ಯಾವುದು ಎಂಪ್ಟಿ
ಯಾವುದು ಹೋಗೋದು ಎಲ್ಲಿಲ್ಲಿಗೆ
ಟೈಮು ಬಹಳಷ್ಟಿಲ್ಲ ಡಿಸೈಡು ಮಾಡೊಕ್ಕೆ
ಒಂಚೂರು ಮಿಸ್ಟೀಕು ಆಯ್ತೋ
ಆಯ್ತು!
ಏನ್ಮಾಡೋಕಾಗುತ್ತೆ?

ಜಂಪ್ ಮಾಡಿದ್ರೆ ಕಾಲ್ ಮುರೀಬೌದು
ಫುಲ್ ಇದ್ರೆ ನಿಂತು ಕಾಲ್ ನೋಯಬೌದು
ತಪ್ಪು ಬೋರ್ಡಾಗಿದ್ರೆ ಮುಂದಿನ ಸ್ಟಾಪು ಇಳಿಬೌದು
ಖಾಲಿ ಇದ್ರೆ ನಿದ್ದೆ ಮಾಡಬೌದು

ಇಲ್ಲಾ ಕಿಟಕಿಯಿಂದ
ಮಾರುತಿಯಿಂದ ಹಿಡಿದು ಬೆಂಜ್‍ವರೆಗೆ
ಸಾಗುವ ನೂರಾರು ಕಾರುಗಳನ್ನು
ನೋಡುತ್ತ
ಹೊಟ್ಟೆ ಉರಿಸಿಕೊಳ್ಳಬಹುದು

(ಪ್ರೇರಣೆ: Wendy Cope ಬರೆದ ‘Serious Concerns’ ಸಂಕಲನದ ’Bloody men’ ಕವನ)

ಪಾಪ ಪುಣ್ಯ

ಈ ಭೂಮಿಯಾಚೆ ದೂರದೊಂದು ಗ್ರಹದಲ್ಲಿ
ಜನ ಬದುಕಿದ್ದಾರಂತೆ
ಅಲ್ಲಿ ಸತ್ತವರೆಲ್ಲ ಈ ಭೂಮಿ ಮೇಲೆ
ನಾವು ನೀವಾಗಿ ಹುಟ್ಟುತ್ತಾರಂತೆ

ಅಲ್ಲಿ ಪಾಪ ಮಾಡಿದವರು
ಇಲ್ಲಿ ಬದುಕುತ್ತಾರಂತೆ ಕಷ್ಟಪಟ್ಟು
ಸಾಲೊಲ್ಲ ತಿಂಗಳ ಸಂಬಳ ತಿಂಗಳಿಗೆ
ಸೇದಲ್ಲ ಕುಡದಿಲ್ಲ
ಹೆಂಡತಿಯ (ಅಥವಾ ಗಂಡನ)ಬಿಟ್ಟಿನ್ನೊಬ್ಬರನು ಮುಟ್ಟಿಲ್ಲ
ಮಗನಗಿನ್ನೂ ನೌಕರಿಯಿಲ್ಲ
ಮಗಳಿಗೆ ಮದುವೆಯಾಗಿಲ್ಲ
ಜೊತೆಗಿದೆ ಬಿಪಿ ಸಕ್ಕರೆಕಾಯಿಲೆ
ಆಸ್ಪತ್ರೆಯಲ್ಲಿ ನರಳಿ ತಿಂಗಳುಗಟ್ಟಲೇ
ಸಾಲಬಿಟ್ಟು ಸಾಯುತ್ತಾರೆ
ಮತ್ತೆ ಆ ಲೋಕದಲ್ಲಿ ಹುಟ್ಟುತ್ತಾರೆ

ಅಲ್ಲಿ ಪುಣ್ಯ ಗಳಿಸಿದವರು
ಬೆಳ್ಳಿ ಚಮಚ ಬಾಯಲ್ಲಿಟ್ಟು ಇಲ್ಲಿ ಹುಟ್ಟುತಾರಂತೆ
ಬ್ಲ್ಯಾಕ್ ಮನಿ ಮನೆ ತುಂಬಿ
ಮಗನ ಅಮೇರಿಕಕೆ ಕಳಿಸುತ್ತಾರೆ
ನೆಗಡಿಯಾದರೆ ಸಾಕು
ಅಪೋಲೊ ಆಸ್ಪತ್ರೆ ಸೇರುತ್ತಾರೆ
ಹೆಂಡತಿ (ಅಥವಾ ಗಂಡ)ಯ ಹಿಂದಿಂದೆ
ಮಗಳ (ಅಥವಾ ಮಗನ) ವಯಸಿನ ಸುಂದರಿಯ ಸವರಿ
ಎಪ್ಪತ್ತರಲ್ಲಿ ವಯಾಗ್ರ ನುಂಗಿ ಯಯಾತಿಯಾಗುತ್ತಾರೆ

ಜೋಲಿ ವೈಯಾನ್ ಮರಳು ಗಡಿಯಾರ – ಶ್ರೀವತ್ಸ ದೇಸಾಯಿ

‘Timeless’

ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಮ್ಮನ್ನೆಚ್ಚರಿಸುವ ಒಂದು”ಜಿಮ್ನಾಸ್ಟಿಕ್ ಶೋ’ದ ಪರಿಚಯ ಇಲ್ಲಿದೆ.
ಕಳೆದ ವಾರ ನನ್ನ ಪಕ್ಕದ ಊರಿನ ’ರೋದರಂ ಶೋ’ದ (Rotherham Show at Clifton Park) ಒಂದು ಮುಖ್ಯ ಆಕರ್ಷಣೆ ಎಂದರೆ ಮೈದಾನದ ಮಧ್ಯದಲ್ಲಿಯ ಏಳು ಮೀಟರುಗಲ ಉದ್ದದ ಮರಳು ಗಡಿಯಾರದಲ್ಲಿ  ಸಮತೋಲ ಕಾಯಲು ಯತ್ನಿಸುತ್ತಿರುವ ನಾಲ್ವರು. ಅವರು ಭಾಗವಹಿಸಿದ್ದು ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) ಎನ್ನುವ ಶೋ. ಅಷ್ಟು ದೊಡ್ಡ ಮರಳು ಗಡಿಯಾರ (Hour glass) ಯಾಕೆ ಬೇಕಿತ್ತು? ಅದಕ್ಕೂ ಗ್ಲೋಬಲ್ ವಾರ್ಮಿಂಗ್ (ಜಾಗತಿಕ ಉಷ್ಣೋದ್ದೀಪನ)ಗೂ ಏನು ಸಂಬಂಧ? ಲಂಡನ್ನಿನ ಯು ಸಿ ಎಲ್ ದ ಪ್ರೊಫೆಸರ್, ಅಂಕಣ ಮತ್ತು ಪುಸ್ತಕಗಳ, ವೈಜ್ಞಾನಿಕ ಲೇಖನಗಳ ಬರಹಗಾರ ಬಿಲ್ ಮ್ಯಾಗ್ವೈಯರ್ ಅವರ ಈ ವಾರದ ಹೇಳಿಕೆಯ ಪ್ರಕಾರ ನಾವು 2030 ತಲುಪುವ ಮೊದಲೇ  ಜಗತ್ತಿನ ಉಷ್ಣತಾಮಾನದ ಏರಿಕೆ 1.5 ಡಿಗ್ರಿ ಸೆಲ್ಸಿಯಸ್ ಕೆಳಗೆ ಬರುಬೇಕೆಂದು ಪಣ ತೊಟ್ಟ ಗುರಿ ತಲುಪುವದು ಈಗ ಅಸಾಧ್ಯ ಎನಿಸುತ್ತದೆ. ಇತ್ತೀಚೆಗೆಯಷ್ಟೇ ನಾವೆಲ್ಲ ಪಾಕಿಸ್ತಾನದ ಮಹಾಪೂರದಿಂದಾಗಿ ಮೂರೂಕಾಲು ಕೋಟಿಗಿಂತ ಹೆಚ್ಚಿನ ಜನ ಸಂತ್ರಸ್ತರಾದ ಫೋಟೊಗಳನ್ನು ಸಾಕಷ್ಟು ನೋಡಿದ್ದೇವೆ. ಇದೇ ವರ್ಷ ಮೊದಲ ಬಾರಿ ಇಂಗ್ಲೆಂಡಿನ ಉಷ್ಣತಾಮಾನ 40.3 ಸೆ ಮುಟ್ಟಿದ ಹೆಡ್ಲೈನ್ ವರದಿಗಳನ್ನು ಕೇಳಿದ್ದೇವೆ.ಇವು ಗ್ಲೋಬಲ್ ವಾರ್ಮಿಂಗಿನ ಪ್ರತ್ಯಕ್ಷ ಪರಿಣಾಮಗಳೆಂದು ತಿಳಿದು ಬಂದಿದೆ. ಇನ್ನು ’1.5 ಡಿಗ್ರಿ’ ಗುರಿ ಸಾಧಿಸಲು ನಮಗೆ ಸಮಯದ ಅಭಾವವಿದೆ. ಗಡಿಯಾರದ ಮರಳು ಶೀಘ್ರಗತಿಯಲ್ಲಿ ಸೋರಿಹೋಗುತ್ತಿದೆ ಎನ್ನುವ ಸರ್ವವಿದಿತ ಸತ್ಯವನ್ನೇ ಮನದಟ್ಟ ಮಾಡಲು ನೃತ್ಯ, ಸರ್ಕಸ್ ಮತ್ತು ಕಸರತ್ತುಗಳನ್ನು (gymnastics) ಹೆಣೆದು ಜನರಿಗೆ ಪ್ರಸ್ತುತಪಡಿಸುವ ಒಂದು ಕಲಾತ್ಮಕ ಪ್ರದರ್ಶನವೇ ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) - ಕಾಲಾತೀತ ಎನ್ನುವ ಶೋ. ತಾಪೋದ್ದೀಪನದ ಜೊತೆಗೆ ಪರಿಸರ ಮತ್ತು ಪ್ರಾಣಿಸಂಕುಲನದ ಸಂರಕ್ಷಣೆಯೂ ಆಗ ಬೇಕಾಗಿದೆ. ಆಸಿಡ್ ಮಳೆ, ಹವೆಯಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಯಾಕ್ಸೈಡ್ ಇವೆಲ್ಲ ಹಾನಿಕರ. ಇವೆಲ್ಲದರ ಸುಧಾರಣೆಗೆ ಟೈಮ್- ಲೆಸ್, ಸಮಯ ಬಹಳ ಕಡಿಮೆ ಎನ್ನುವ ಸಂದೇಶವೂ ಅದರಲ್ಲಿದೆ. 

ಅಂದು ಇಂಗ್ಲೆಂಡಿನ ರಾಣಿಯ ಮೃತ್ಯುವಿನ ಹಿಂದಿನ ರವಿವಾರ. ಇಂಗ್ಲೆಂಡಿನ ಯಾರ್ಕ್ ಶೈರಿನಲ್ಲಿ ಹರಿಯುವ ಡಾನ್ ನದಿಯ ಉಪನದಿಯಾದ ”ರಾದರ್’ ದಂಡೆಯಮೇಲೆ ಬೆಳೆದ ಲಕ್ಷಕ್ಕಿಂತಲೂ ಜಾಸ್ತಿ ಜನವಸತಿಯ ರಾದರಮ್ಮಿನ ವಿಶಾಲವಾದ ಕ್ಲಿಫ್ಟನ್ ಪಾರ್ಕದ ತುಂಬ ವಿವಿಧ ವಸ್ತುಗಳನ್ನು ಮಾರುವ ಮಳಿಗೆಗಳು, ಫುಡ್ ಸ್ಟಾಲ್ ಗಳು ಹರಡಿಕೊಂಡಿದ್ದವು. ಆ ಮಧ್ಯೆ ವಿಂಟೇಜ್ ಕಾರುಗಳ ಮಾಲಕರು ತಮ್ಮ ’ಕೂಸು’ಗಳನ್ನು ತಂದು ಪ್ರದರ್ಶಿಸಿದರು. ಪ್ರದರ್ಶನಗಳ ಸುತ್ತ ಕಿಕ್ಕಿರಿದು ತುಂಬಿದ ಜನಸಂದಣಿ. ಕಳೆದ 43 ವರ್ಷಗಳಿಂದ ಸಾವಿರಾರು ಮಕ್ಕಳು, ತಂದೆತಾಯಿಗಳೊಂದಿಗೆ ಅನೇಕ ಕುಟುಂಬಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಟ, ಓಡಾಟ ತಿಂಡಿ, ಬರ್ಗರ್, ಪಿಡ್ಝಾ, ಕೋಲಾ, ಪೆಪ್ಸಿ, ಮ್ಯೂಸಿಕ್, ಬ್ಯಾಂಡ್, ಲೌಡ್ ಸ್ಪೀಕರ್, ಇತ್ಯಾದಿಗಳ ಸುತ್ತಲೂ ಜನ. ನೀವು ಊಹಿಸಿರಬಹುದು, ಆ ದೃಶ್ಯವನ್ನು.
’ಟೈಮ್ಲೆಸ್ ’  ಶೋಗೆ ಜೋಲಿ ವಯನ್ ಆರಿಸಿಕೊಂಡಿದ್ದ ಜಾಗ ಸಮತಟ್ಟಾದ ಹುಲ್ಲಿನ ಮೈದಾನದ ಮಧ್ಯದಲ್ಲಿ. ಕಳೆದ ಹತ್ತು ವರ್ಷಗಳಿಂದ ಈ ಪುಟ್ಟ ಸಂಸ್ಥೆ ಅಕ್ರೋಬಾಟಿಕ್ ’ಡೊಂಬರಾಟ’ಯುಕ್ತ ಕಥಾನಕಗಳನ್ನು ಸರ್ಕಸ್-ಡಾನ್ಸ್ ಮತ್ತು ಜಿಮ್ನಾಸ್ಟಿಕ್ಸ್ಗಲ ಮಿಶ್ರಣದ ನಾಲ್ಕು ಹೊರಾಂಗಣದ ಮತ್ತು ಎರಡು ಒಳಾಂಗಣದ ಪ್ರದರ್ಶನಗಳನ್ನು ಈ ದೇಶದಲ್ಲಷ್ಟೇ ಅಲ್ಲದೆ ದಕ್ಷಿಣ ಕೊರಿಯಾದಲ್ಲೂ ಪ್ರದರ್ಶಿಸುತ್ತಿದೆ. ಒಲೀವಿಯಾ ಕೇಲ್ ಮತ್ತು ಯಾನ್ ಪ್ಯಾಟ್ಸ್ಕೀ ಎರಡೂ ಕಲೆಗಳಲ್ಲಿ ನುರಿತವರು.

ಆ ದಿನ ಅಂಗ ಸೌಷ್ಠವವುಳ್ಳ ಧೃಡಕಾಯದ ಇಬ್ಬರು ಗಂಡಸರು ಮತ್ತು ಇಬ್ಬರು ಬೆಡಗಿನ ಯುವತಿಯರು ಪಾಲ್ಗೊಂಡಿದ್ದರು. ಮೊದಲು ಯಾಕೆ ತಾವು ಮನುಕುಲವನ್ನು ಕಾಡುತ್ತಿರುವ ಈ ಸಮಸ್ಯೆಗಳ ಪರಿಹಾರದ ಅವಶ್ಯಕತೆಯನ್ನು ಬಿಂಬಿಸಲು ಮರಳು ಗಡಿಯಾರದ ಆಯ್ಕೆ ಅರ್ಥವತ್ತಾದುದೇ ಅಂತ ಹೇಳಿ ತಮ್ಮ ಅರ್ಧ ಗಂಟೆಯ ’ಆಟ’ವನ್ನು ಪ್ರಾರಂಭಿಸಿದರು. ಮೊದಲು ಒಂದು ಚಿಕ್ಕ ರೂಪಕದಲ್ಲಿ ನಾಲ್ವರೂ ಮಾನವನ ಆದಿಕಾಲದ ಜೀವನದಪರಿಚಯ ಮಾಡಿ ಇಂದಿನ ವರೆಗಿನ ಪ್ರಗತಿಯನ್ನು ನೃತದಲ್ಲಿ ತೋರಿಸಿಕೊಟ್ಟರು. ನಂತರ ಒಬ್ಬೊಬ್ಬ ಗಂಡಸು ಮರಳು ಗಡಿಯಾರದ (hourglass) ಎರಡೂ ಗಾಜಿನ ಗೋಲಕಗಳಲ್ಲಿ ಹೊಕ್ಕು ಸಮತೋಲನ ಸ್ಥಾಪಿಸಿದ ಮೇಲೆ ಇಬ್ಬರು ಹೆಂಗಸರು ಕೋರಿಯೋಗ್ರಫಿಗನುಗುಣವಾಗಿ ನರ್ತಿಸುತ್ತ ಆ ಎರಡು ಗೊಲಕಗಳಲ್ಲಿ ಸೇರಿಕೊಂಡು ಅದರ ಮಧ್ಯದ ಅಚ್ಚಿನ ಸುತ್ತ ಅವರ್ ಗ್ಲಾಸನ್ನು ತಿರುಗಿಸಿದರು. ಕೆಲವಿ ನಿಮಿಷಗಳ ನಂತರ ಅದನ್ನು ನಿಲ್ಲಿಸಿ ಹೊರಬಂದು ಒಂದರಲ್ಲಿ ಮರಳಿನ ಬದಲಾಗಿ ಮರದ ಗೋಲಕಗಳನ್ನು ತುಂಬಿ ಒಂದರಿಂದ ಇನ್ನೊಂದಕ್ಕೆ ಸ್ವಲ್ಪೇ ಸಮದಲ್ಲಿ ಇಳಿದದ್ದನ್ನು ತೋರಿಸಿ ಚಲಿಸುತ್ತಿರುವ ಸಮಯದ ರೂಪಕವಾಗಿ ಪ್ರದರ್ಶಿಸಿದರು. ಆಟದ ಪ್ರದರ್ಶನ ಮುಗಿದಮೇಲೆ ಚಿಕ್ಕ ಪ್ರಶ್ನೋತ್ತರದ ಸಂವಾದದೊಂದಿಗೆ ಆ ಕಾರ್ಯಕ್ರಮ ಮುಕ್ತಾಯವಾಯಿತು.

ಮನುಕುಲಕ್ಕೊದಗಿದ ಈ ಗ್ಲೋಬಲ್ ವಾರ್ಮಿಂಗ್ ಗಂಡಾಂತರವನ್ನು ನಾವು ಹೇಗೆ ಎದುರಿಸುತ್ತೇವೆ ನೋಡಬೇಕಾಗಿದೆ.

ಶ್ರೀವತ್ಸ ದೇಸಾಯಿ

ಚಿತ್ರ ಕೃಪೆ: Luke Witcomb ವಿಡಿಯೋ: ಜೋಲಿ ವೈಯಾನ್