ರಜೆಯಲ್ಲಿ ದೂರದ ಅಜ್ಜಿ ಮನೆಗೆ ಹೋಗುವಾಗ ಸಿಗುತ್ತಿದ್ದ ದೇವಿಮನೆ ಘಟ್ಟ. ಅದು ನಾನು ನೋಡಿದ ಮೊದಲ ದಟ್ಟ ಅರಣ್ಯ. ಕತೆಯಲ್ಲಿ ಕೇಳುತ್ತಿದ್ದ `ಕಾಡು` ಎಂಬ ಪದದ ಕಲ್ಪನೆಗೆ ದೃಶ್ಯ ರೂಪ ಕೊಟ್ಟ ಜಾಗ ಅದು. ಜಿರ್ರ್ ಜಿರ್ರ್ ಎಂಬ ಝೇಂಕಾರ ಹಕ್ಕಿಗಳ ಸಂಗೀತ, ಕಾಡು ಹೂಗಳ ಘಮ, ಬೆಣ್ಣೆಯಂತೇ ಹರಿಯುವ ಬೆಣ್ಣೆ ಹೊಳೆ ಮತ್ತು ಅಲ್ಲಿ ನೆಲ ಕಾಣಿಸುವ ತಿಳಿನೀರು, ಎಲ್ಲೆಲ್ಲೂ ನೆರಳು, ಅದೆಲ್ಲೋ ಒಂದಷ್ಟು ಕಂಡರೂ ಕಾಣಿಸದಂತೆ ಮುಖ ಮರೆಸಿಕೊಳ್ಳುತ್ತಿದ್ದ ಬಿಸಿಲು. ಹಸಿರು ಹಸಿರು ಹಸಿರು. ಇಲ್ಲಿ ಯಾವ ದೇವಿ ಮನೆ ಮಾಡಿ ನಿಂತರೂ ಆಶ್ಚರ್ಯ ಪಡಬೇಕಿಲ್ಲ!
ಬರೀ ಬಸ್ಸಿನ ಕಿಟಕಿಯಿಂದಲೇ ಈ ದೇವಿಮನೆ ಘಟ್ಟವನ್ನ ನೋಡುತ್ತಿದ್ದ ನನಗೆ, ಇಂತಹ ಕಾಡನ್ನೊಮ್ಮೆ ಅಲೆದು ಬರಬೇಕು ಅದರ ಸನ್ನಿಧಿಯಲ್ಲಿ ಸಮಾಧಾನಿಸಬೇಕು ಎಂಬುದು ಬಾಲ್ಯದಿಂದಲೂ ಮನಸಿನಲ್ಲಿ ಘಟ್ಟಿಯಾಗುತ್ತಿದ್ದ ಕನಸು. ಭಾರತದಲ್ಲಿದ್ದಷ್ಟು ದಿನವೂ ಏನಾದರೊಂದು ಕಾರಣದಿಂದ ಅಂತಹ ಅವಕಾಶ ಕೈ ತಪ್ಪಿ ಹೋಗುತ್ತಿತ್ತು. ಗಣೇಶ ಚವತಿಗೆ ಮಂಟಪ ಸಿಂಗರಿಸಲು ಶತಾವರಿ ಗಿಡಗಳನ್ನು ಹುಡುಕಿಕೊಂಡು ಹೊಲದ ಬದುವಿನಲ್ಲಿದ್ದ ಪುಟ್ಟ ಕಾಡಿಗೆ ಹೋದಾಗ ಅಥವಾ ಮುಂಡಗೋಡ-ಯಲ್ಲಾಪುರದ ನಡುವೆ ಪ್ರಯಾಣಿಸುವಾಗಲೊಮ್ಮೆ ದೇವಿಮನೆ ಸುತ್ತುವ ಆಸೆ ಮತ್ತೆ ಮನದಲ್ಲಿ ಮೂಡುತ್ತಿತ್ತು.
ನಾನು ನಾರ್ದರ್ನ್ ಐರ್ಲೆಂಡ್ ಗೆ ಬಂದ ನಂತರ ಈ ದೇಶದಲ್ಲಿ ನನಗೆ ಅತಿಯಾಗಿ ಇಷ್ಟವಾದ ವಿಷಯವೇ ಈ ಹಸಿರು ಶುದ್ಧ ಪರಿಸರ. ಮತ್ತದನ್ನು ಸ್ವಚ್ಛವಾಗಿಡಲು ಸರ್ವ ರೀತಿಯಿಂದಲೂ ಸಹಕರಿಸುತ್ತಿದ್ದ ನಾಗರೀಕರು. ಎಲ್ಲಡೆ ಹಸಿರು ನೀರಿನ ನೀಲಿ ಕಾಣ ಸಿಗುತಿತ್ತು, ಆದರೆ ಇಲ್ಲಿ ಕಾಡು ಇರಬಹುದೇ? ಎಂಬ ಪ್ರಶ್ನೆ ಮನದಲ್ಲಿದ್ದುದು ಸುಳ್ಳಲ್ಲ. ಜುಲೈ ಅಗಸ್ಟ್ ತಿಂಗಳು ಇಲ್ಲಿ ಹೆಸರಿಗೊಂದು ಬೇಸಿಗೆ ಬರುತ್ತದೆ. ಮಕ್ಕಳಿಗೆ ರಜೆ ಇರುವ ಕಾರಣ ನಾವೆಲ್ಲರೂ ಈ ನಾಮಕಾವಾಸ್ತೆ ಬರುವ ಬೇಸಿಗೆಯಲ್ಲಿ ಸ್ಥಳೀಯ ಜಾಗೆಗಳನ್ನ ತಿರುಗಾಡುವ ಪ್ಲಾನ್ ಮಾಡ್ತೀವಿ. ಹಾಗೆ ಬೇಸಿಗೆಯ ಒಂದು ದಿನ ಇಂಟರ್ನೆಟ್ ತಡಕಾಡಿ ಹುಡುಕಿ ತೆಗೆದಿದ್ದು ''ಟೊಲಿಮೊರ್ ಪಾರ್ಕ್''ಎಂಬ ಸ್ಥಳದ ಪೋಸ್ಟ್ ಕೋಡ್. ಹತ್ತಿರ ಇತ್ತಾದ್ದರಿಂದ ಒಂದೇ ದಿನದಲ್ಲಿ ಹಿಂದಿರುಗಲು ಅನುಕೂಲ ಎಂಬ ಕಾರಣದಿಂದ ನಾವು ಅಲ್ಲಿ ಹೊರಟಿದ್ದೆವು. ಪಾರ್ಕ್ ಎಂಬುದನ್ನ ಕೇಳಿದ ಕೂಡಲೇ ಮಕ್ಕಳು ಆಡುವಂತ ಸ್ಥಳ ಅಂದುಕೊಂಡು ಮತ್ತೊಂದಿಷ್ಟು ಪೂರ್ವಾಗ್ರಹದೊಂದಿಗೆ ನಾವು ಹೊರಟಿದ್ದು ನಾರ್ದರ್ನ್ ಐರ್ಲೆಂಡನ ಟೊಲಿಮೊರ ಎಂಬ ಫಾರೆಸ್ಟ್ ಪಾರ್ಕ್ ಗೆ.
ಟೊಲಿಮೊರ ಪಾರ್ಕ್
ಕಲ್ಲಿನ ಮಾಹಾದ್ವಾರದ ಮೇಲೆ ಕೆತ್ತಿದ ೧೭೮೬ ಎಂಬುದನ್ನು ನೋಡಿಯೇ ಇದು ಬಹು ಪುರಾತನ ಐತಿಹಾಸಿಕ ಸ್ಥಳ ಎಂಬುದು ಮನದಟ್ಟಾಗಿತ್ತು. ದ್ವಾರದ ಒಳಗೆ ಹೆಜ್ಜೆ ಇಟ್ಟಂತೆ ನಾವು ಎಲ್ಲಿ ಇದ್ದೇವೆ ಅನ್ನೋದನ್ನ ಮರೆಸಿ ಬಿಡುವ ದಿವ್ಯ ಪರಿಸರ ಹಸಿರು, ತಿಳಿ ಹಸಿರು, ಕಡು ಹಸಿರು. ಗಿಳಿ ಹಸಿರು, ಕೆಂಪು ಹಸಿರು, ಹಸಿರು ಹಸಿರು. ಎದುರಿನಲ್ಲೇ ಅರಣ್ಯ ಇಲಾಖೆಯ ಪುಟ್ಟ ಕುಟೀರ ಇತ್ತು. ಅಲ್ಲಿ ಅರಣ್ಯದ ನಕ್ಷೆ ತೆಗೆದುಕೊಂಡು ನಾವು ನಡಿಗೆ ಶುರು ಮಾಡಿದೆವು. ಕೆಲವು ನಿರ್ದಿಷ್ಟ ಜಾಗೆಗಳಲ್ಲಿ ಟೆಂಟ ಮತ್ತು ಕಾರವನ್ಗಳು ಸುಮಾರು ಸಂಖ್ಯೆಯಲ್ಲಿ ಇದ್ದವು. ಅಲ್ಲೇ ಅಡುಗೆ BBQ ಗಳನ್ನ ಮಾಡಿಕೊಂಡು ಆರಾಮ ಆಗಿ ಕುಳಿತ ಜನರನ್ನ ನೋಡಿದರೆ ನಾವು ರೆಸ್ಟಿಂಗ್ zone ಗೆ ಬಂದಿದ್ದೇವೇನೋ ಅನ್ನೋ ಅನುಮಾನ. ಈ ಸ್ಥಳದ ಪ್ರತಿ ಅಂಗುಲದಲ್ಲೂ ಸಮಾಧಾನ, ನಿಧಾನ, ತಂಪು, ಕಂಪು ತುಂಬಿಕೊಂಡಿದೆ ಅನಿಸುತ್ತಿತ್ತು. ಎಷ್ಟು ಜನರಿದ್ದರು ಅಲ್ಲಿ, ಆದರೂ ಒಂಚೂರು ಗದ್ದಲವಿಲ್ಲ. ಎಲ್ಲಿ ಪ್ರಕೃತಿ ಮಾತೆಯ ಮಂಪರು ಮಾಯವಾಗುವುದೋ ಅನ್ನುವ ಆತಂಕವೇ? ಅಥವಾ ಆ ಮೌನದಲ್ಲೇ ಅವರು ಅಲ್ಲಿಯ ಆನಂದ ಸವಿಯುತ್ತಿದ್ದರೆ? ಒಟ್ಟಿನಲ್ಲಿ ಆ ದಿವ್ಯ ಮೌನ ಬಹಳ ಹಿತ ಕೊಡುತ್ತಿತ್ತು.
ಇತಿಹಾಸ
೧೬೧೧ ರಲ್ಲಿ ಮೆಗನ್ನಿಸ್ ಎಂಬ ಕುಟುಂಬದ ಒಡೆತನದಿಂದ ಇದರ ಇತಿಹಾಸ ಆರಂಭವಾಗುತ್ತದೆ. ಇದು ೧೭೮೬ ರ ತನಕವೂ ದಾಯಾದಿಗಳಲ್ಲೇ ಹಸ್ತಾಂತರ ಗೊಳ್ಳುತ್ತ ಇರುತ್ತದೆ. ಈ ಸ್ಥಳದ ಇತಿಹಾಸದ ಬಗ್ಗೆ ಓದುವಾಗ ನಾನು ಗಮನಿಸಿದ ಒಂದು ವಿಷಯವೆಂದರೆ ಯಾರೇ ಇದರ ಒಡೆತನಕ್ಕೆ ಬಂದಿರಲಿ ಒಂದೇ ಅವರು ಮದುವೆ ಆಗುವುದಿಲ್ಲ, ಆದವರಿಗೆ ಮಕ್ಕಳಾಗುವುದಿಲ್ಲ . ಆಗ ಈ ಕಾಡಿನ ಒಡೆತನ ಸೋದರಿಯ ಸಂತಾನಗಳಿಗೆ ವರ್ಗಾವಣೆ ಆಗುತ್ತದೆ ಇದು ಆ ಸ್ಥಳ ಮಹಿಮೆಯೋ ಏನೋ.
ಟೈಟಾನಿಕ್ ಹಡಗಿನ ಹೆಸರನ್ನು ಕೇಳದವರು ವಿರಳ. ಆ ಹಡಗಿನ ನಿರ್ಮಾಣಕ್ಕೆ ಕಟ್ಟಿಗೆ ಒದಗಿಸಿದ್ದು ಇದೇ ಟೋಲಿಮೋರ ಅರಣ್ಯ. ಇಲ್ಲಿದ್ದ ಒಂದು ಅರಮನೆಯಲ್ಲಿ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಅಮೇರಿಕನ್ ಸೈನಿಕರು ಉಳಿದು ಕೊಂಡಿದ್ದರು, ಆದರೆ ಆ ಸುಂದರ ಕಟ್ಟಡ ಈಗ ನೆಲಸಮ ಮಾಡಲಾಗಿದೆ. ೧೯೩೦ ರಲ್ಲಿ ಅರಣ್ಯ ಇಲಾಖೆಯವರಿಗೆ ಈ ಅರಣ್ಯದ ಮೇಲ್ವಿಚಾರಣೆ ವಹಿಸಿದ ನಂತರ ನಿರಂತರ ಬೆಳವಣಿಗೆ ಕಂಡ ಇದನ್ನು ೧೯೫೫ ರಲ್ಲಿ ನಾರ್ದರ್ನ್ ಐರ್ಲೆಂಡ್ ನ ಮೊದಲ ಅರಣ್ಯ ಉದ್ಯಾನ ಎಂದು ಘೋಷಿಸಲಾಯಿತು.
ವಿಶೇಷ
ಇದು ಮೌರ್ನ ಪರ್ವತ ಶ್ರೇಣಿಯ ಒಡಲಲ್ಲಿ ಇರುವ ಅರಣ್ಯ. ಅದೇ ಕಾರಣಕ್ಕೆ ಇಲ್ಲಿಂದ ಕಾಣುವ ದೃಶ್ಯಗಳು ಪ್ರಕೃತಿ ಪ್ರಿಯರಿಗೆ ರಸದೂಟ, ಛಾಯಾಚಿತ್ರಕಾರರಿಗೆ ಸ್ವರ್ಗ ಸಮ ಅನುಭವ ನೀಡುತ್ತವೆ. ಶಿಮ್ನಾ ಮತ್ತು ಸ್ಪಿಂಕ್ವೀ ನದಿಗಳು ಈ ಅರಣ್ಯದಲ್ಲಿ ಸಂಗಮ ಗೊಳ್ಳುತ್ತವೆ ಮತ್ತು ಈ ನದಿಗಳು ಸಾಲಮನ್ ಮೀನಿನ ಆಗರಗಳು. ಕಾಡನ್ನು ಎರಡು ಭಾಗಗಳಾಗಿ ವಿಭಾಗಿಸಿದ ಈ ನದಿಗಳಿಂದಲೇ ಹುಟ್ಟಿಕೊಂಡ ಮತ್ತೊಂದು ಆಕರ್ಷಣೆ ಇಲ್ಲಿರುವ ಸೇತುವೆಗಳು. ಅರಣ್ಯದಲ್ಲಿ ಒಟ್ಟು ೧೬ ಸೇತುವೆಗಳು ಇವೆ. ಪ್ರತಿ ಸೇತುವೆಯ ಹಿಂದೊಂದು ಕಥೆಯಿದೆ. ಕೆಲವು ಕಲ್ಲಿನ ಸೇತುವೆಗಳು ಕೆಲವು ತೂಗು ಸೇತುವೆ, ಮತ್ತೆ ಕೆಲವು ಕಟ್ಟಿಗೆಯವು.
ಹರ್ಮಿಟೆಜ್ ಇದರಲ್ಲಿ ಮುಖ್ಯವಾದುದು ಈ ಸೇತುವೆಯ ಪಕ್ಕ ಒಂದು ಸುಂದರ ಕಲ್ಲಿನ ಸೂರು ಇದೆ,ಆಗ ಇಲ್ಲಿ ವಾಸಿಸುತ್ತಿದ್ದ ಜೇಮ್ಸ್ ಹಾಮಿಲ್ಟನ್ ವಿರಾಮ ಸಮಯದಲ್ಲಿ ಇಲ್ಲಿ ಮೀನು ಹಿಡಿಯಲು ಬರುತ್ತಿದ್ದರು ಮತ್ತು ಅವರ ಪತ್ನಿ ಆಕೆಯ ಸ್ನೇಹಿತೆಯರು ಈ ಕಲ್ಲಿನ ಸೂರಿನಡಿಯಲ್ಲಿ ಕಸೂತಿ ಮಾಡುತ್ತ, ಹರಟೆ ಹೊಡೆಯುತ್ತ ಪ್ರಕೃತಿ ಸೌಂದರ್ಯ ಆಸ್ವಾಧಿಸುತ್ತಿದ್ದರು. ಈ ಕಾರಣಕ್ಕೆ ಈ ಸೇತುವೆ ಈ ಕಲ್ಲಿನ ಸೂರನ್ನು ಕಟ್ಟಲಾಗಿತ್ತು ಎಂಬುದು ಈ ಸ್ಥಳದ ಇತಿಹಾಸಬಗೆಗೆ ಇರುವ ಲೇಖನಗಳು ತಿಳಿಸುತ್ತವೆ. ಒಂದೆರಡು ಕಡೆ ನದಿಯ ನಡುವೆ ಚಂದದ ಕಲ್ಲುಗಳನ್ನು ಜೋಡಿಸಿ ನೀರು ಕಡಿಮೆ ಇದ್ದ ಕಡೆ ನಡಿಗೆಯಲ್ಲೇ ನದಿಯನ್ನು ದಾಟಬಹುದಾದ ಚಂದದ ವಿನ್ಯಾಸ ಕೂಡ ಕಾಣಬಹುದು. ನಮ್ಮದು ಭಾರತೀಯ ಮನಸ್ಸು ಆ ಸುಂದರ ತಿಳಿನೀರನ್ನು ಕಂಡ ಮೇಲೆ ಕೊನೆಪಕ್ಷ ಕಾಲು ಮುಳುಗಿಸಿ ಸ್ವಲ್ಪ ಆಟ ಆಡಿ ಬರೋಣ ಅನ್ನಿಸಿತು. ನೀರಲ್ಲಿ ಕಾಲಿಟ್ಟರೆ ಅಲ್ಲೇ ಫ್ರೀಜ್ ಆಗಿ ಹೋಗುವೆನೋ ಎಂಬ ಭಾವ ಬಂದಿದ್ದು ಸುಳ್ಳಲ್ಲ. ಬಿರು ಬೇಸಿಗೆಯಲ್ಲೂ ಅಷ್ಟು ತಂಪಿತ್ತು ಆ ನೀರು
ದ್ವಾರದಿಂದಲೇ ಕಾಣುವ ಮೌರ್ನ್ ಪರ್ವತ ಶೃಂಗಗಳ ವಿಹಂಗಮ ನೋಟ, ಚಾರಣ ಮಾಡಿದರೆ ಪರ್ವತದ ತುದಿಯಿಂದ ಕಾಣುವ ಅಟ್ಲಾಂಟಿಕ್ ಸಾಗರ, ಐರಿಷ್ ಸಮದ್ರ ಸನ್ನಿಧಿ, ಪರ್ವತವೇರಿದ ಆಯಾಸವನ್ನು ತಣಿಸುತ್ತವೆ. ಕಾಡಿನ ತುಂಬಾ ಹಲವು ಅಪರೂಪದ ಜೀವವೈವಿದ್ಯಗಳಿವೆ ಕೆಂಪು ಅಳಿಲು ಅವುಗಳಲ್ಲೊಂದು.
ನಡೆದಷ್ಟು ಕಾಡು, ನೋಡಿದಷ್ಟು ನೀರು, ಮೌನದಲ್ಲಿ ಜೀಗುಟ್ಟುವ ಹಲವು ಕೀಟಗಳ ಸಂಗೀತ, ಮುಗಿಲನ್ನು ಮುಟ್ಟುವ ಓಕ್ ಮರಗಳು--ಇದು ನನ್ನ ದೇವಿ ಮನೆ. ಅದೇ ನನ್ನೆಡೆಗೆ ನಡೆದು ಬಂದಿದೆ ಅಂತ ನನಗೆ ಅನ್ನಿಸಿಬಿಟ್ಟಿತ್ತು. ಹಸಿರು, ಈ ತಂಪಲು, ಹಸಿವು ನೀರಡಿಕೆ ಎಲ್ಲವನ್ನೂ ಮರೆಸುತ್ತವೆ. ಪ್ರತಿ ಋತುವಿನಲ್ಲೂ ತನ್ನ ರೂಪವನ್ನು ಬದಲಿಸಿಕೊಳ್ಳುವ ಈ ಕಾಡು, ಒಮ್ಮೆ ಹಳದಿ ಎಲೆಗಳಿಂದ ಕೂಡಿ ಅಂದವಾದರೆ, ಮತ್ತೊಮ್ಮೆ ಚಿಗುರು ಕೆಂಪು ಸೀರೆಯುಟ್ಟು ಮಗಮಗಿಸುತ್ತದೆ. ತಿಳಿ ನೀರು ಅಲ್ಲಲ್ಲಿ ಪುಟ್ಟ ಪುಟ್ಟ ಜಲಪಾತ ನಿರ್ಮಿಸುತ್ತಾ ನಡೆಯುವ ಶಿಮ್ನಾ -ಸ್ಪಿಂಕ್ವೀ ನದಿಗಳು, ಆ ಸೀರೆಗೊಂದು ಥಳಥಳಿಸುವ ಅಂಚು ಹೊಲಿದಿದ್ದಾವೆ ಅನ್ನಿಸುತ್ತದೆ.
ಕಾಡು ಅಲೆಯಬೇಕು ಅನ್ನೋ ಎಷ್ಟೋ ವರ್ಷದ ಕನಸನ್ನು ನನಸು ಮಾಡಿದ ಶ್ರೇಯ ಈ ಟೊಲಿಮೊರ ಅರಣ್ಯಕ್ಕೆ ಸಲ್ಲುತ್ತದೆ. ಹತ್ತಿರದಲ್ಲೇ ಸೈಲೆಂಟ್ ವ್ಯಾಲಿ, ಟೈಟಾನಿಕ್ ತಯಾರಾದ ಊರು ಬೆಲ್ಫಾಸ್ಟ್, Newcastle, ಜಗತ್ತಿನ ಅಧ್ಬುತಗಳಲ್ಲಿ ಒಂದಾದ Giant's causeway ಗಳಿವೆ.
ನಾನು ಈ ಸ್ಥಳವನ್ನು ಮೊದಲಬಾರಿ ನೋಡಿದ್ದು ೨೦೧೧ ರಲ್ಲಿ. ಆ ನಂತರ ಲೆಕ್ಕವಿಲ್ಲದಷ್ಟು ಬಾರಿ ಭೇಟಿ ನೀಡಿದ್ದೇನೆ, ಎಷ್ಟೋ ಸಲ ದಾರಿ ತಪ್ಪಿ ಕಳೆದು ಹೋಗಿದ್ದೇನೆ, ನೀರಿನಲ್ಲಿ ಕಾಗದದ ದೋಣಿ ಬಿಟ್ಟು ಮಕ್ಕಳೊಂದಿಗೆ ಆಟವಾಡಿದ್ದೇನೆ. ಪ್ರತಿಬಾರಿಯೂ ಮತ್ತೆ ಹೋಗಬೇಕು ಅನ್ನುವ ಆಸೆಯೊಂದಿಗೆ ಮರಳುತ್ತೇನೆ. ಈ ವರ್ಷದ ಬೇಸಿಗೆಯಲ್ಲಿ ಭೇಟಿ ಕೊಟ್ಟಾಗ ಒಂದು ರಾಶಿ ಕಾಡು ಬೆಳ್ಳುಳ್ಳಿ ಸೊಪ್ಪು ಕಿತ್ತುಕೊಂಡು ಬಂದು ಒಳ್ಳೆಯ ಅಕ್ಕಿರೊಟ್ಟಿ, ಪಲ್ಯ,ಚಟ್ನಿ ಮಾಡಿ ಸವಿದಿದ್ದೆ. ಈಗ Autumn ಬಣ್ಣಗಳನ್ನ ನೋಡಲು ಹೋಗಬೇಕು.
ನೀವು Northern Ireland ಗೆ ಭೆಟ್ಟಿ ಕೊಟ್ಟರೆ ಈ ಕಾಡನ್ನ ನೋಡೋದು ಮರೆಯಬೇಡಿ.
ಫೋಟೋಗಳು ಮತ್ತು ಲೇಖನ :-ಅಮಿತಾ ರವಿಕಿರಣ
ಪ್ರಾಚೀನವೂ ಪ್ರಬುದ್ಧವೂ ಆದ ಭಾರತೀಯ ನಾಟ್ಯ ಪದ್ಧತಿಯ ವೃಕ್ಷದ ಶಾಖೆಗಳು ಹಲವು. ದಕ್ಷಿಣ ಭಾರತದಲ್ಲೇ ಭಾರತ ನಾಟ್ಯ, ಕುಚಿಪುಡಿ ಹಾಗೂ ಮೋಹಿನಿ ಅಟ್ಟಂ ಎಂಬ ಮೂರು ಪ್ರಮುಖ ಪ್ರಕಾರಗಳನ್ನು ಕಾಣುತ್ತೇವೆ. ವಿದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಭಾರತೀಯ ನೃತ್ಯ ಪದ್ಧತಿಯ ಪರಿಚಯವಾಗುವುದು ಸುಲಭವಲ್ಲ. ಪರಿಚಯವಾದರೂ ಅದರಲ್ಲಿ ತರಬೇತಿಗೆ ಸಿಗುವ ಅವಕಾಶ ಕಡಿಮೆ. ಅವಕಾಶ ಸಿಕ್ಕರೂ ಅದರ ಪ್ರಯೋಜನ ಪಡೆದುಕೊಳ್ಳಲು ಹಲವಾರು ಅಡೆತಡೆಗಳು ಬರುವುದು ಸಹಜ, ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸಿಕ್ಕ ಅವಕಾಶದ ಸದುಪಯೋಗ ಪಡೆದುಕೊಂಡು, ಪರಿಣತಿ ಪಡೆದ ಯುವತಿಯ ಪರಿಚಯ ಮಾಡಿಕೊಡುವ ಸುಯೋಗ ನನ್ನದು. ರಂಗಪ್ರವೇಶದ ಒಂದು ವಿಡಿಯೋ ತುಣುಕು, ಮನಮೋಹಕ ಸಂಗೀತದ ಧ್ವನಿಮುದ್ರಿಕೆಯನ್ನು ಕೂಡ ನಿಮ್ಮೊಡನೆ ಹಂಚಿಕೊಳ್ಳಲಾಗಿದೆ. ಒಟ್ಟಂದದಲ್ಲಿ ನಿಮಗೆ ಕಾರ್ಯಕ್ರಮದ ಒಳ ನೋಟ ಕೊಡುವ ಪ್ರಯತ್ನವಿದು.
ಅಭಿನಯ ಪ್ರಧಾನವಾದ ಕುಚಿಪುಡಿ ನೃತ್ಯ ಪ್ರಕಾರದಲ್ಲಿ ಹಲವಾರು ವರ್ಷ ತರಬೇತಿ ಪಡೆದು, ಪರಿಣತಿಯನ್ನು ಹೊಂದಿ ರಂಗಪ್ರವೇಶ ಮಾಡಿರುವ ಅದಿತಿಯ ರಂಗ ಪ್ರವೇಶದ ಒಲ್ಮೆಯ ಆಮಂತ್ರಣ ಕೈ ಸೇರಿದಾಗ ಆದ ಸಂತೋಷ, ಹೆಮ್ಮೆ; ಕನ್ನಡತಿ, ಅನಿವಾಸಿ ಬಳಗದ ಲಕ್ಷ್ಮೀನಾರಾಯಣ ಗುಡೂರ್ ಅವರ ಮಗಳು ಎಂದರೆ KSSVVಯ ಹೊಸ ಚಿಗುರು, ಬಾಲ್ಯದಿಂದ ಕಂಡ ಸಿರಿ ಎಂಬ ಹಲವು ಮಟ್ಟದ್ದಾಗಿತ್ತು.
ಐದು ವರ್ಷದ ಅದಿತಿ ಮೊದಲ ದಿನ ನೃತ್ಯ ಕಲಿಯಲು ಹೋದಂದು ತೋರಿದ ಉತ್ಸಾಹ ಗುಲಗಂಜಿಯಷ್ಟೂ ಬತ್ತಿಲ್ಲ ಎಂದು ಅದಿತಿಯ ಅಮ್ಮ ವಿದ್ಯಾ ಹೇಳಿದ ವಿಷಯ ಅದಿತಿಯ ಶಬ್ದಗಳಲ್ಲೂ ಪ್ರತಿಧ್ವನಿಸುತ್ತದೆ. ಶಾಸ್ತ್ರೀಯ ನೃತ್ಯ ಕಷ್ಟಕರವಾದರೂ ತನ್ನನ್ನು ಪರಿಚಯಿಸಿದ್ದಕ್ಕೆ ಅದಿತಿ ಸದಾ ತನ್ನ ತಾಯಿಗೆ ಕೃತಜ್ಞಳು. ನೃತ್ಯವಿಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದುದು ಅಸಾಧ್ಯವೆಂದು ಹೇಳುತ್ತಾಳೆ. ನೃತ್ಯ ಇಂದು ಅದಿತಿಗೆ ತನ್ನ ಬಾಲ್ಯದ ಸಾಕಾರ ರೂಪ, ತನ್ನನ್ನೇ ಅರಿಯಲು ಸಿಕ್ಕ ಅವಕಾಶ, ಭಾರತೀಯ ಸಂಸ್ಕೃತಿಗೆ ಸಂಪರ್ಕ ಕಲ್ಪಿಸಿದ ಸೇತು. ಇವು ಕೇವಲ ಸಂದರ್ಶನಕ್ಕೆ ಬಳಸಿದ ಪೊಳ್ಳು ಶಬ್ದಗಳಲ್ಲ, ಹೃದಯಾಳದಿಂದ ಹೊಮ್ಮಿದ ಅಪ್ಪಟ ಭಾವನೆಗಳೆಂಬುದು ಆಕೆಯ ನೃತ್ಯ ಪ್ರದರ್ಶನ ನೋಡಿದವರೆಲ್ಲರಿಗೂ ಅನಿಸಿದ್ದರೆ ಆಶ್ಚರ್ಯವಲ್ಲ.
ರಂಗಪ್ರವೇಶದಂದು ಹಬ್ಬದ ವಾತಾವರಣವಿತ್ತು. ಅದಿತಿಯ ನರ್ತನ ಭಂಗಿಯ ಚಿತ್ರ ಅತಿಥಿಗಳನ್ನು ಸ್ವಾಗತಿಸುತ್ತಿದ್ದರೆ, ಅವರ ದಾಹ ನಿವಾರಣೆಗೆ ನೀರು-ಬೆಲ್ಲ ಸಾಂಪ್ರದಾಯಿಕ ಮೆರುಗನ್ನು ನೀಡುತ್ತಿದ್ದವು. ಸಮಯಕ್ಕೆ ಸರಿಯಾಗಿ, ಪದ್ಧತಿಯಂತೆ ಗಣಪತಿ, ನಂತರ ಅರ್ಧನಾರೀಶ್ವರನ ಪ್ರಾರ್ಥನೆಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪುರಂದರ ದಾಸರ “ಗಜವದನಾ ಬೇಡುವೆ” ಭಜನೆ ರಂಗಪ್ರವೇಶದ ಮೊದಲ ನೃತ್ಯವಾಗಿದ್ದು ಮಾತೃಭಾಷೆಯಾದ ಕನ್ನಡದವನ್ನು ಸರಾಗವಾಗಿ ಬಳಸಬಲ್ಲ ಅದಿತಿಯ ಕನ್ನಡ ಪ್ರೇಮಕ್ಕೆ ದ್ಯೋತಕವಾಗಿತ್ತು. ಕುಚಿಪುಡಿ ಪದ್ಧತಿಗೆ ವಿಶೇಷವಾದ ತಟ್ಟೆಯ ಮೇಲೆ ನಿಂತು ತಲೆಯ ಮೇಲೆ ತಂಬಿಗೆಯನ್ನಿಟ್ಟುಕೊಂಡು ಮಾಡುವ “ತರಂಗಂ” ನೃತ್ಯದ ತಾಂತ್ರಿಕತೆ ವೀಕ್ಷಕರನ್ನು ಮೋಡಿ ಮಾಡಿತು.
“ಕೃಷ್ಣಾ ನೀ ಬೇಗನೆ ಬಾರೋ” ಚಿಕ್ಕಂದಿನಿಂದಲೂ ನನ್ನ ಮೆಚ್ಚಿನ ಭಜನೆಗಳಲ್ಲೊಂದು. ವಂಶಿಕೃಷ್ಣರ ಹಾಡುಗಾರಿಕೆ ಪದ್ಯದ ಭಾವವನ್ನು, ವಾತಾವರಣವನ್ನು ಸೃಷ್ಟಿಸಿದರೆ; ಅದಿತಿಯ ಮನಮೋಹಕ ಭಾವಪೂರ್ಣ ಅಭಿನಯ ಯಶೋದೆಯ ಮಾತೃತ್ವ, ಕೃಷ್ಣನ ತುಂಟತನಗಳನ್ನು ನಮ್ಮ ಮುಂದೆ ಮೂರ್ತಗೊಳಿಸಿದ್ದಲ್ಲದೆ, ಮಂತ್ರಮುಗ್ಧರನ್ನಾಗಿಸಿತು. ತನ್ನ ಅಚ್ಚು ಮೆಚ್ಚಿನ ಭಜನೆಯನ್ನು ನಮ್ಮ ಮುಂದೆ ಸಾಕಾರಗೊಳಿಸಿದ ಯಶಸ್ಸಿಗೆ ತನ್ನ ಬದುಕಿನ ಅನುಭವಗಳೇ ಸ್ಫುರ್ತಿಯೆನ್ನುತ್ತಾಳೆ ಅದಿತಿ. ತನ್ನ ತಂಗಿಯ ತುಂಟತನದಲ್ಲಿ ಕೃಷ್ಣನ ತುಂಟತನವನ್ನು ಕಾಣುವ ಅದಿತಿ, ಎಲ್ಲ ವಯಸ್ಸಿನವರಿಗೂ, ಕಾಲಕ್ಕೂ ಅನ್ವಯವಾಗುವ ಕೃಷ್ಣನ ವ್ಯಕ್ತಿತ್ವ ತನಗೆ ಅಪ್ಯಾಯಮಾನ ಎನ್ನುತ್ತಾಳೆ. ಅವಳ ನಾಟ್ಯ-ನಟನಾ ಪರಿಣತಿ ಸಂಪೂರ್ಣವಾಗಿ ಈ ನೃತ್ಯದಲ್ಲಿ ಅಭಿವ್ಯಕ್ತವಾಗಿತ್ತು. ಅಂದು ನಿಸ್ಸಂದೇಹವಾಗಿ “ಕೃಷ್ಣ ನೀ ಬೇಗನೆ ಬಾರೋ” ಸಭಿಕರೆಲ್ಲರ ಮೆಚ್ಚಿನ ನೃತ್ಯವಾಗಿತ್ತೆಂಬುದು ಕರತಾಡನದಲ್ಲೇ ಅರ್ಥವಾಗಿತ್ತು.
“ಕಾಮಾಕ್ಷಿ ಸ್ತುತಿ” ಹಾಗೂ “ನಮೋ ನಮೋ ಲಕ್ಷ್ಮೀ ನರಸಿಂಹ” ನೃತ್ಯಗಳಲ್ಲಿ ಬರುವ ಭಕ್ತಿ, ಶೃಂಗಾರ, ಶಾಂತ, ಕ್ರೋಧ, ಭಯ, ಕರುಣಾ ರಸಗಳ ಪ್ರದರ್ಶನ ಅದಿತಿಯ ನಟನಾ ಪ್ರಬುದ್ಧತೆಗೆ ದ್ಯೋತಕವಾಗಿದ್ದವು. ಅಂತ್ಯದಲ್ಲಿ ಪ್ರದರ್ಶಿಸಿದ ವೇಗ ಪ್ರಧಾನವಾದ ತಿಲ್ಲಾನ ವೀಕ್ಷಕರನ್ನು ಸಂತೃಪ್ತಿಯ ಶಿಖರಕ್ಕೇರಿಸಿತ್ತು.
ಅದಿತಿಯ ಪ್ರತಿಭೆಗೆ ಪುಟ ಕೊಟ್ಟು ಬೆಳಗಿಸಿದ ಗುರು ಅಭಿನಂದನಾ ಕೋದಂಡ ಅವರ ಅಪಾರ ಪರಿಶ್ರಮದ ಅರಿವು ನಮಗೆ ಅಂದಿನ ಪ್ರದರ್ಶನದಲ್ಲಾಯಿತು. ಪ್ರಾರಂಭದಿಂದಲೇ ಅದಿತಿಯ ಪ್ರತಿಭೆಯನ್ನು ಗುರುತಿಸಿ, ಅವಕಾಶ ಕೊಟ್ಟು ಬೆಳೆಸಿದ ಹಿರಿಮೆ ಅವರದ್ದು. ರಂಗಪ್ರವೇಶದ ಯಶಸ್ಸಿಗೆ ಹಿಮ್ಮೇಳದ ಕೊಡುಗೆ ಸರಿಸಮನಾಗೇ ಇರುವುದು ಅತ್ಯವಶ್ಯ. ವಂಶಿಕೃಷ್ಣ ವಿಷ್ಣುದಾಸ್ ಒಬ್ಬ ಅದ್ಭುತ ಹಾಡುಗಾರ ಎಂಬ ಅನುಭವ ಅಂದು ನಮಗಾಯಿತು. ವಿಜಯವೆಂಕಟ್ ಕೊಳಲು ವಾದನದಿಂದ ಕೃಷ್ಣನ ಮೋಡಿ ಹಾಕಿದ್ದರು ಸಭಿಕರ ಮೇಲೆ. ಪ್ರತಾಪ್ ರಾಮಚಂದ್ರರ ಮೃದಂಗ ವಾದನಕ್ಕೆ ವೀಕ್ಷಕರು ಕುಳಿತಲ್ಲೇ ಹೆಜ್ಜೆ ಹಾಕಿದ್ದರು ಕಾರ್ಯಕ್ರಮದುದ್ದ.
ತನ್ನ ನೃತ್ಯ ಪ್ರಯಾಣದ ಹಾದಿಯಲ್ಲಿ ಹಲವು ಗೆಳೆಯರನ್ನು ಪಡೆದಿರುವ ಅದಿತಿಗೆ ಇಂದು ನೃತ್ಯ ಜೀವನದ ಅಂಗವಾಗಿದೆ, ತನ್ನ ಭಾವನೆಗಳ ಅಭಿವ್ಯಕ್ತಿಗೆ ಸಾಧನವಾಗಿದೆ. ಕಲೆ ಆಕೆಗೆ ಜೀವನಾನುಭವಗಳ ಕಿಟಕಿ ತೆರೆಯುವ ಮಾಧ್ಯಮ. ರಂಗಪ್ರವೇಶಕ್ಕೆ ಹಾರೈಸಲು ಬಂದವರನ್ನು, ಅನಾಥ ಮಕ್ಕಳ ಬದುಕನ್ನು ರೂಪಿಸಲು ಹಲವು ವರ್ಷಗಳಿಂದ ನಿರತವಾಗಿರುವ ಚಾಮರಾಜಪೇಟೆಯ ದೀನಬಂಧು ಸಂಸ್ಥೆಗೆ ಕೈಲಾದಷ್ಟು ದಾನ ಮಾಡಿರೆಂಬ ಅದಿತಿಯ ವಿನಂತಿ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗನ್ನು ನೀಡಿತು.
ವಿಡಿಯೋ ಕೃಪೆ: ಶ್ರೀಮತಿ ಶಾಂತಾ ರಾವ್, ಅನ್ನಪೂರ್ಣ ಇಂಡಿಯನ್ ಡಾನ್ಸ್ ಅಕ್ಯಾಡೆಮಿ, ಯುಕೆ.