ಬಾಂಬೆ ಬೇಗಂ; ಅಪೂರ್ಣ ಭಿತ್ತಿಗಳು. ಧಾರಾವಾಹಿಯ ವಿಮರ್ಶೆ – ಡಾ ಜಿ. ಎಸ್. ಶಿವಪ್ರಸಾದ್

ನಮ್ಮ ಸಮಾಜದಲ್ಲಿ ಹೆಣ್ಣಿಗೆ ತನ್ನದೇ ರೀತಿಯ ಪಾರಂಪರಿಕ ಮುಖ್ಯ ಸ್ಥಾನವಿದೆ. ಪ್ರಪಂಚದೆಲ್ಲೆಡೆಯಲ್ಲಿ ಮಹಿಳೆ ತನ್ನ ಮನೆಯಲ್ಲಿ, ಹೊರಜಗತ್ತಿನಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ ಸಮಾನ ಸ್ಥಾನಕ್ಕಾಗಿ, ಹಕ್ಕುಗಳಿಗಾಗಿ ಇಂದಿಗೂ ಹೋರಾಡುತ್ತಲೇ ಇದ್ದಾಳೆ. ಪರಂಪರೆಯ ಚೌಕಟ್ಟಿನಿಂದ ಹೊರಬರಲು ಪ್ರಯತ್ನಿಸುವ ಆಕೆಯ ಹೋರಾಟ, ಪುರುಷ ಪ್ರಧಾನ ಸಮಾಜದಲ್ಲಿ ಸುಲಭದ ಕೆಲಸವಲ್ಲ. ಶತಮಾನಗಳಿಂದ ತನ್ನ ಆಸೆಗಳನ್ನು,ಮಾನಸಿಕ ಮತ್ತು ದೈಹಿಕ ಬಯಕೆಗಳನ್ನು, ವಿಜಯಗಳನ್ನು, ಸೋಲನ್ನು ಹತ್ತಿಕ್ಕಿ ಬದುಕಿದ ಹೆಣ್ಣು, ಈ ಕೆಲ ದಶಕಗಳಲ್ಲಿ ತನ್ನ ಹಕ್ಕುಗಳಿಗಾಗಿ ಮಾಡಿರುವ ಪ್ರಯತ್ನ, ಹೋರಾಟ ಅಗಾಧವಾದದ್ದು. ಈ ಇಂಟರ್ ನೆಟ್ ಯುಗದಲ್ಲಿ ವಿವಿಧ ರೀತಿಯ ಬದುಕು, ಬವಣೆ, ಭಾಗ್ಯ ಎಲ್ಲದರ ಬಗ್ಗೆ ಸಮಾಲೋಚನೆ, ಚರ್ಚೆ, ವಿಮರ್ಶೆಗಳನ್ನು ಹಂಚಿಕೊಳ್ಳುವುದು ಬಹು ಸುಲಭ. ಇದು ಕೆಲವರಿಗೆ ಕಬ್ಬಿಣದ ಕಡಲೆಯೆಂದಿನಿಸಿದರೂ ಆನ್ ಲೈನ್ ಜಗತ್ತಿನಿಂದ ದೂರವಿರುವುದು ಇಂದಿನ ಬದುಕಿನ ಪರಿಯಲ್ಲ. ವಿಶ್ವದೆಲ್ಲೆಡೆಯಲ್ಲಿ ಈಗಿನ ಸಮಾಜದಲ್ಲಿ ಆಗುತ್ತಿರುವ ಎಲ್ಲಾ ರೀತಿಯ ಬದಲಾವಣೆಗಳನ್ನು ಗುರುತಿಸುವ, ಒಪ್ಪಿಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ, ಇದರ ಜೊತೆಗೇ ಅದನ್ನು ಗುರುತಿಸದಿದ್ದರೆ ತಾನಾಗೆ ಅವು ಮಾಯವಾಗಬಹುದೆನ್ನುವ ಪಲಾಯನವಾದಗಳ ಚರ್ಚೆಯೂ ನಡೆಯುತ್ತಿರುತ್ತದೆ.
ಬಾಂಬೆ ಬೇಗಂ ಎನ್ನುವ ನೆಟ್ ಫ಼್ಲಿಕ್ಸ್ ನ ಈ ಸರಣಿಯಲ್ಲಿ ಮುಂಬೈ ಮಹಾನಗರದಲ್ಲಿ ವಾಸಿಸುವ ೫ ಜನ ಆಧುನಿಕ ಮಹಿಳೆಯರು ತಮ್ಮ ಮಾನಸಿಕ, ಸಾಮಾಜಿಕ, ದೈಹಿಕ ಬಯಕೆಗಳನ್ನು ಗುರುತಿಸುವ, ಅದಕ್ಕಾಗಿ ಹೋರಾಡುವ, ಅದರಿಂದ ಸಮಾಜದಲ್ಲಿ ಆಕೆ ಎದುರಿಸುವ ಬದಲಾವಣೆಗಳ, ಸಮಸ್ಯೆಗಳ, ಶೋಷಣೆಗಳ ಚಿತ್ರಣವಿದೆ. ಈ ಮಹಿಳೆಯರ ಬದುಕು, ವಯಸ್ಸು, ಜೀವನಶೈಲಿ, ಆರ್ಥಿಕ ಪರಿಸ್ಥಿತಿ, ವಿಧ್ಯಾಭ್ಯಾಸ, ಮಾಡುವ ಕೆಲಸ ಬೇರೆ, ಬೇರೆ. ಅಂತೆಯೇ ಅವರ ಹೋರಾಟವೂ ವಿವಿಧ ಬಗೆಯದು. ಈ ಸರಣಿ ಮಹಿಳೆಯ ಈ ಹೊಸರೀತಿಯ ಬದುಕುಗಳನ್ನು, ಜೀವನ ಶೈಲಿಯನ್ನು ಗುರುತಿಸಿ, ಒಪ್ಪಿಕೊಂಡು, ಮಡಿವಂತಿಕೆಯ ಚಿಪ್ಪನ್ನೊಡೆದು ಚಿತ್ರಿಸಿರುವುದರಿಂದ ಇದು ವಾದ ವಿವಾದಗಳಿಗೆ ಪಾತ್ರವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇಂತಹ ಕ್ಲಿಷ್ಟವಾದ ವಿಷಯವನ್ನು ಹೊಂದಿರುವ ಸರಣಿಯನ್ನು ವಿಮರ್ಶಿಸುವುದು ಸುಲಭದ ಕೆಲಸವಲ್ಲ. ಡಾ. ಪ್ರಸಾದ್ ರವರು ಮೂಲಪಾತ್ರಗಳಿಗೆ ಧಕ್ಕೆ ಬರದ ಹಾಗೆ, ವೈಯುಕ್ತಿಕ ಅಭಿಪ್ರಾಯಗಳಿಂದ ದೂರನಿಂತು ಬಹು ಚಾತುರ್ಯದಿಂದ ಈ ಸರಣಿಯನ್ನು ವಿಮರ್ಶಿಸಿ ಈ ಲೇಖನವನ್ನು ಬರೆದಿದ್ದಾರೆ. ಓದಿ ಪ್ರತಿಕ್ರಿಯಿಸಿ – ಸಂ.

ಧಾರಾವಾಹಿಯ ವಿಮರ್ಶೆ – ಡಾ ಜಿ. ಎಸ್. ಶಿವಪ್ರಸಾದ್

ಬಾಂಬೆ ಬೇಗಂ‘ ಎಂಬ ನೆಟ್ ಫ್ಲಿಕ್ಸ್ ಧಾರಾವಾಹಿಯು ಕಳೆದ ಕೆಲವು ವಾರಗಳ ಹಿಂದೆ ಬಿಡುಗಡೆಯಾಗಿದೆ. ಈ ಧಾರಾವಾಹಿಯ ನಿರ್ದೇಶಕಿ ಅಲಂಕೃತ ಶ್ರೀವಾತ್ಸವ. ಕತೆಯ ಮೂಲ ಪರಿಕಲ್ಪನೆಯೂ ಕೂಡ ಅಲಂಕೃತ ಅವರದ್ದೇ. ಕೆಲವು ಎಪಿಸೋಡ್ಗಳನ್ನು ಬೋರ್ನಿಲಾ ಚಟರ್ಜೀ ಅವರು ನಿರ್ದೇಶಿಸಿದ್ದಾರೆ. ಈ ಧಾರಾವಾಹಿಯನ್ನು ಅಮೇರಿಕಾದ ಲಾಸ್ ಏಂಜಲೀಸ್ಸಿನ ಚೆರಿನ್ ಎಂಟರ್ ಟೈನ್ಮೆಂಟ್ ಮತ್ತು ಎಂಡಿಮಾಲ್ ಶೈನ್ ಗ್ರೂಪ್ ಗಳು ನಿರ್ಮಾಣಮಾಡಿವೆ. ಈ ಧಾರಾವಾಹಿಯಲ್ಲಿನ ಭಾಷೆ ಇಂಗ್ಲಿಷ್ ಮತ್ತು ಹಿಂದಿಯಿಂದ ಕೂಡಿದ್ದು ಇಂಗ್ಲಿಷ್ ಸಬ್ ಟೈಟಲ್ಸ್ ಗಳಿವೆ.

ಬಾಂಬೆ ಬೇಗಂ‘ ಮುಂಬೈಯಿನ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ಪ್ರಪಂಚದಲ್ಲಿ ಉನ್ನತ ಸ್ಥಾನಕ್ಕೇರಿದ ಮತ್ತು ಏರ ಬಯಸುತ್ತಿರುವ ಮಹಿಳೆಯರ ಮತ್ತು ಅವರ ಸುತ್ತ ಇರುವ ಇತರ ಮಹಿಳೆಯರ ಕತೆ. ಪುರುಷ ಪ್ರಧಾನವಾಗಿರುವ ಈ ಒಂದು ಉದ್ಯೋಗದಲ್ಲಿ ಮಹಿಳೆಯರು ಉನ್ನತ ಸ್ಥಾನಕ್ಕೆ ಏರುವಾಗ ಅಲ್ಲಿ ಅವರು ಒಳಗಾಗುವ ಲೈಂಗಿಕ ಶೋಷಣೆ, ಕಿರುಕುಳ, ಲಿಂಗ ಭೇದ, ವೈಯುಕ್ತಿಕ ಹಿನ್ನೆಲೆಗಳು, ವ್ಯಕ್ತಿ ವಿಲಕ್ಷಣಗಳು, ಅವರ ಸ್ವಾಭಿಮಾನ, ಛಲ, ಮತ್ತು ಸಮಾಜದ ನಿರೀಕ್ಷೆ ಹೇಗೆ ಅವರ ಕನಸುಗಳನ್ನು ರೂಪಿಸುತ್ತಾ ವೃತ್ತಿಜೀವನದಲ್ಲಿ ಏರು ಪೇರುಗಳನ್ನು ಒಡ್ಡುತ್ತವೆ ಎಂಬ ವಿಚಾರ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಧಾರಾವಾಹಿಯಲ್ಲಿ ಎದ್ದು ನಿಲ್ಲುವ ವಿಚಾರ “ನಾನೂ ಕೂಡ ಲೈಂಗಿಕ ಶೋಷಣೆಗೆ ಒಳಪಟ್ಟಿದ್ದೇನೆ” (“ಮೀಟೂ”) ಎಂಬ ಕೂಗು. ಲೈಂಗಿಕ ಶೋಷಣೆಗೆ ಒಳಗಾದ ಅದೆಷ್ಟೋ ಮಹಿಳೆಯರು ಸಮಾಜಕ್ಕೆ ಹೆದರಿ ಅಥವಾ ಅದು ತಮ್ಮ ವೃತ್ತಿಗೆ ಅಡ್ಡಿಯಾಗಬಹುದೆಂಬ ಕಾರಣದಿಂದ ಅಥವಾ ನಾಚಿ ತಲೆತಗ್ಗಿಸುವ ವಿಚಾರವೆಂದು ಅದನ್ನು ಗುಟ್ಟಾಗಿರಿಸಿಕೊಂಡು ಸಂಕಟವನ್ನು ಇತರರೊಡನೆ ಹಂಚಿಕೊಳ್ಳದೇ ಆಂತರಿಕ ಹಿಂಸೆಯನ್ನು ಅನುಭವಿಸಿ ಕೊನೆಗೊಮ್ಮೆ ಸೂಕ್ತ ಕಾಲಾವಕಾಶ ಬಂದಾಗ ಕೆಲವು ಧೀಮಂತ ಮಹಿಳೆಯರು ಈ ವಿಚಾರವನ್ನು ಬಹಿರಂಗ ಪಡಿಸಿ ಇಲ್ಲಿ ಒಂದು ನೆಮ್ಮದಿಯನ್ನು ಪಡೆದುಕೊಳ್ಳುತ್ತಾರೆ. ತಮ್ಮನ್ನು ಈ ಹಿಂಸೆಗೆ ಗುರಿಪಡಿಸಿದ ಗಂಡಸಿಗೆ ಶಿಕ್ಷೆಯಾಗಿ ತಮಗೆ ನ್ಯಾಯ ದೊರಕುವುದಷ್ಟೇ ಅಲ್ಲದೆ ಈ ಒಂದು ವಿಚಾರದಲ್ಲಿ ತಾನು ಒಬ್ಬಳೇ ಅಲ್ಲ ತನ್ನಂತೆ ಇನ್ನೂ ಅನೇಕರು ಈ ಶೋಷಣೆಗೆ ಒಳಪಟ್ಟಿದ್ದಾರೆ ಎಂಬ ಅರಿವು ಮಹಿಳೆಗೆ ಸಾಂತ್ವನ ನೀಡಬಹುದು. ಈ “ಮೀಟೂ” ಚಲನೆಯು (ಆಂದೋಲನ ಎಂದು ಕೂಡ ಕರೆಯಬಹುದು) ಮಹಿಳೆಯರಿಗೆ ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ. ಈ “ಮೀಟೂ” ಚಲನೆಯಿಂದ ಲೈಂಗಿಕ ಶೋಷಣೆಯ ಬಗ್ಗೆ ನಮ್ಮ ಸಮಾಜದಲ್ಲಿ ಹೆಚ್ಚಿನ ಅರಿವು ಮೂಡಿದೆ. ಈ ಲೈಂಗಿಕ ಶೋಷಣೆ ಎಂಬ ಪಿಡುಗು ವಿಶ್ವವ್ಯಾಪ್ತಿಯಾದದ್ದು. ನಮಗೆ ಗೋಚರಿಸುತ್ತಿರುವುದು ತೇಲುತ್ತಿರುವ ನೀರ್ಗಲ್ಲು ಬಂಡೆಯ ತುದಿ ಅಷ್ಟೇ. ಈ “ಮೀಟೂ” ಚಲನೆ ಬರಿ ಮಹಿಳೆಯರಿಗಲ್ಲದೆ ಸಮಾಜದ ಇತರ ದುರ್ಬಲ ವರ್ಗದವರಿಗೂ ಅನ್ವಯಿಸುವ ವಿಷಯ. ನಮಗೆ ತಿಳಿದಂತೆ ಕಳೆದ ನೂರು ವರ್ಷದಿಂದ ಇಂಗ್ಲೆಂಡಿನ ಕ್ರೈಸ್ತ ಧಾರ್ಮಿಕ ಸಂಸ್ಥೆಗಳಲ್ಲಿ, ಫುಟ್ಬಾಲ್ ಕ್ಲಬ್ ಗಳಲ್ಲಿ ವ್ಯವಸ್ಥಿತವಾದ ಲೈಂಗಿಕ ಶೋಷಣೆ ನಡೆಯುತ್ತಾ ಬಂದಿದ್ದು ಹಲವಾರು ಪ್ರಸಂಗಗಳು ಈಗ ಬೆಳಕಿಗೆ ಬರುತ್ತಿವೆ. ಈ ವಿಚಾರಗಳು ‘ಬಾಂಬೆ ಬೇಗಂ’ ಧಾರಾವಾಹಿ ಕತೆಯ ಹಿನ್ನೆಲೆಯಲ್ಲಿ ಪ್ರಸ್ತುತವಾಗುತ್ತವೆ.

ಹಲವಾರು ಓದುಗರು ಈ ಧಾರಾವಾಹಿಯನ್ನು ನೋಡಿಲ್ಲವೆಂದು ಭಾವಿಸಿ ಅವರ ಆಸಕ್ತಿಗೆ ಕುಂದು ತರದಂತೆ ಕತೆಯನ್ನು ಸಂಪೂರ್ಣವಾಗಿ ಬಿತ್ತರಿಸದೆ ಕತೆಯಲ್ಲಿರುವ ಪ್ರಧಾನ ಪಾತ್ರಗಳನ್ನು ಪರಿಚಯಿಸುವ ಪ್ರಯತ್ನ ನನ್ನದಾಗಿದೆ. ಕತೆಯ ಮುಖ್ಯ ಪಾತ್ರ ರಾಣಿಯದು. ಈ ಕತೆಯಲ್ಲಿ ಐದು ಬೇಗಂಗಳಿದ್ದು ರಾಣಿ ಮೊದಲನೇ ಬೇಗಂ. ಇಲ್ಲಿ ಬೇಗಂ ಎಂದರೆ ಮುಸ್ಲಿಂ ಮನೆಯ ಹಿರಿಯಳು ಎನ್ನುವ ಅರ್ಥದಲ್ಲಿ ಪರಿಗಣಿಸದೆ ಒಬ್ಬ ಅಸಮಾನ್ಯ ಮಹಿಳೆ ಎಂದು ಭಾವಿಸಬೇಕು. ಮುಂಬೈಯಿನ ಪ್ರತಿಷ್ಠಿತ ಬ್ಯಾಂಕ್ ಸಂಸ್ಥೆಯಲ್ಲಿ ರಾಣಿ ಕಾರ್ಯ ನಿರ್ವಾಹಕಿ. (ಸಿ.ಇ. ಓ) ಬ್ಯಾಂಕಿನ ಪುರುಷ ಪ್ರಧಾನವಾದ ಬೋರ್ಡ್ ಅವಳ ಮೇಲೆ ನಿಗಾ ಇಟ್ಟು ಅವಳನ್ನು ನಿಯಂತ್ರಿಸುತ್ತದೆ. ರಾಣಿ ತನ್ನ ಐವತ್ತರಲ್ಲಿದ್ದು ಹೆಂಡತಿ ಕಳೆದುಕೊಂಡಿರುವ ನೌಷಾದನ ಎರಡನೇ ಹೆಂಡತಿಯಾಗಿ ಅವನ ಎರಡು ಮಕ್ಕಳಿಗೆ ಮಲತಾಯಿಯಾಗಿ ಕತೆಯನ್ನು ಪ್ರವೇಶಮಾಡುತ್ತಾಳೆ. ಬಹಳ ಉನ್ನತಿಗೆ ಏರುವ ಮಹಿಳೆಯರು ಮದುವೆಯನ್ನು ಮುಂದೂಡಿ ಕೊನೆಗೆ ಬೇರೊಬ್ಬನ ಎರಡನೇ ಹೆಂಡತಿಯಾಗುವ ಪ್ರಮೇಯ ಇಲ್ಲಿ ತರಲಾಗಿದೆ. ಅದು ಕಾಕತಾಳೀಯವೂ ಇರಬಹುದು. ಮದುವೆ, ಸಂಸಾರ ಮತ್ತು ವೃತ್ತಿಪರ ಜೀವನದಲ್ಲಿ ಬಡ್ತಿ ಉನ್ನತಿ ಇವೆರಡೂ ಎಲ್ಲ ಮಹಿಳೆಯರಿಗೆ ದಕ್ಕುವುದಿಲ್ಲ, ವೃತ್ತಿ ಜೀವನದಲ್ಲಿ ಮುನ್ನಡೆಯ ಬೇಕಾಗಿದ್ದಲ್ಲಿ ಇವೆರಡರಲ್ಲಿ ಒಂದನ್ನು ಮಹಿಳೆ ಆಯ್ಕೆಮಾಡಿ ಕೊಳ್ಳಬೇಕು ಎಂಬುದು ಒಂದು ಸಾರ್ವತ್ರಿಕ ಅಭಿಪ್ರಾಯ. (ಇದಕ್ಕೆ ಹಲವಾರು ಹೊರತುಗಳ ನಿದರ್ಶನವಿದೆ). ವೃತ್ತಿ ಜೀವನದಲ್ಲಿ ಮೇಲಕ್ಕೇರ ಬಯಸುವ ಹೆಂಗಸರು ತಮ್ಮ ವೈವಾಹಿಕ ಜೀವನದಲ್ಲಿ ಹಲವಾರು ಹೊಂದಾಣಿಕೆಗಳನ್ನು ಗಂಡನ ಸಹಕಾರದಿಂದ ಮಾಡಬೇಕಾಗಬಹುದು. ಈ ಒಂದು ಹಿನ್ನೆಲೆಯಲ್ಲಿ ವೃತ್ತಿಪರ ಮಹಿಳೆಯರು ಮದುವೆಯ ಪ್ರಸ್ತಾಪವನ್ನು ಮುಂದೂಡುವುದು ಸಾಮಾನ್ಯ. ಉದ್ಯೋಗಸ್ಥ ಯುವತಿಯರು ಈ ನಡುವೆ ೩೦ ವರ್ಷದ ಆಸುಪಾಸಿನಲ್ಲಿ ವಿವಾಹಿತರಾಗುತ್ತಿದ್ದಾರೆ. ಇದು ನಮ್ಮ ಸಮಾಜದಲ್ಲಿ ಇತ್ತೀಚಿಗೆ ಕಂಡುಬರುವ ಗಮನಾರ್ಹ ಬದಲಾವಣೆ.

ರಾಣಿಗೆ ತನ್ನ ಮುಟ್ಟು ನಿಲ್ಲುವ ಶಾರೀರಿಕ ಮತ್ತು ಮಾನಸಿಕ ಕ್ರಿಯೆಯಲ್ಲಿ ಅವಳಿಗೆ ಒದಗಿ ಬರುವ ಮುಜುಗುರ ಮತ್ತು ದೇಹದೊಂದಿಗೆ ಅವಳ ಸೆಣಸಾಟ ಬಹಳ ಪರಿಣಾಮಕಾರಿಯಾಗಿದೆ. ರಾಣಿ ತನಗೆ ಸರಿಸಾಟಿಯಲ್ಲದೆ ಗಂಡ ನೌಷಾದನಲ್ಲಿ ಅಡಗಿರುವ ಪ್ರೀತಿಯನ್ನು ಮೊದಲು ಗುರುತಿಸುವಲ್ಲಿ ವಿಫಲವಾಗುತ್ತಾಳೆ. ಅವನ ಜೊತೆ ಲೈಂಗಿಕ ಪರಿಪೂರ್ಣತೆಯನ್ನು ಕಾಣದೆ ತನ್ನ ಪ್ರತಿಸ್ಪರ್ದ್ಧಿ ಬ್ಯಾಂಕ್ ಸಂಸ್ಥೆಯ ವಿವಾಹಿತ ಹಿರಿಯ ಎಕ್ಸಿಕ್ಯೂಟಿವ್ ಜೊತೆ ಪ್ರೇಮಾಂಕುರವಾಗಿ ದೈಹಿಕ ಸಂಬಂಧಕ್ಕೆ ತೊಡಗುತ್ತಾಳೆ. ರಾಣಿ, ನೌಷಾದನ ಮಗಳಾದ ಶೇಗೆ ತಾಯ್ತನವನ್ನು ನೀಡ ಬಯಸಲು ಬಂದಾಗ ಶೇ ರಾಣಿಯನ್ನು ಮಲತಾಯಿ ಎಂಬ ನಿಲುವಿನಲ್ಲಿ ತಿರಸ್ಕರಿಸುತ್ತಾಳೆ. ಇವರಿಬ್ಬರ ನಡುವೆ ಹಲವಾರು ವಿಚಾರಗಳಲ್ಲಿ ಸಂಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ರಾಣಿ ತನ್ನ ತಾಳ್ಮೆಯನ್ನು ಎಲ್ಲೂ ಕಳೆದುಕೊಳ್ಳುವುದಿಲ್ಲ. ಮಲಮಗಳು ಎಂಬ ಭೇದವನ್ನು ತರುವುದಿಲ್ಲ. ಎಷ್ಟಾದರೂ ರಾಣಿ ವಿದ್ಯಾವಂತೆ ಅನುಭವಸ್ಥೆ.

ರಾಣಿ ವೈಯುಕ್ತಿಕ ಜೀವನದಲ್ಲಿ ಸಂಕಷ್ಟಗಳನ್ನು ನುಂಗಿಕೊಳ್ಳಬೇಕಾದ ಪರಿಸ್ಥಿಯ ಜೊತೆ ವೃತ್ತಿ ಜೀವನದಲ್ಲಿ ಕಾರ್ಪೊರೇಟ್ ಪ್ರಪಂಚದ ರಾಜಕೀಯವನ್ನೂ ಎದುರಿಸಬೇಕಾಗುತ್ತದೆ. ಉಳಿವಿಗಾಗಿ ನಿರಂತರ ಹೋರಾಟ ನಡೆಸುತ್ತ ಸಾಗುತ್ತಾಳೆ. ರಾಣಿ ತನ್ನ ಬ್ಯಾಂಕಿನಲ್ಲೇ ತನ್ನ ಕೈಕೆಳಗೆ ನಡೆಯುತ್ತಿರುವ ಸ್ತ್ರೀಯರ ಶೋಷಣೆಯನ್ನು ಕಂಡೂ ಕಾಣದಂತಿದ್ದು ಪರಿತಪಿಸಿ ಕೊನೆಗೆ ಒಂದು ನಿರ್ಧಾರಕ್ಕೆ ಬರುತ್ತಾಳೆ. ಅವಳು ಹಿರಿಯ ತಾಯಿಯ ಸ್ಥಾನದಲ್ಲಿ ನಿಲ್ಲುತ್ತಾಳೆ. ರಾಣಿಯ ವ್ಯಕ್ತಿತ್ವದಲ್ಲಿ ಸಾಕಷ್ಟು ದ್ವಂದಗಳು ಗೊಂದಲಗಳೂ ಇವೆ. ರಾಣಿಯ ಪಾತ್ರವನ್ನು ಬಾಲಿವುಡ್ಡಿನ ಹಿರಿಯ ನಟಿ ಪೂಜಾಭಟ್ ಅವರು ಬಹಳ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಕತೆಯಲ್ಲಿನ ಎರಡನೇ ಬೇಗಂ ಫಾತಿಮಾ ಅದೇ ಬ್ಯಾಂಕಿನಲ್ಲಿ ಬಡ್ತಿ ಪಡೆದು ರಾಣಿಯ ಅಸಿಸ್ಟೆಂಟ್ ಆಫೀಸರ್ ಆಗಿ ಕೆಲಸ ಮಾಡುತ್ತಾಳೆ. ಫಾತಿಮಾ ಗಂಡ ಅರೀಜೆ ಇದೆ ಬ್ಯಾಂಕಿನಲ್ಲಿ ಅವಳ ಸಹೋದ್ಯೋಗಿ. ಅವನು ಬಡ್ತಿಗೆ ಅರ್ಹನಾಗದೇ ಹೆಂಡತಿಯ ಕೈಕೆಳಗೆ ದುಡಿಯವ ಪ್ರಮೇಯ ಒದಗಿಬರುತ್ತದೆ. ಆಗ ಗಂಡ ಹೆಂಡಿರ ನಡುವೆ ಬಿಕ್ಕಟ್ಟುಗಳು ತೆರೆದು ಕೊಳ್ಳುತ್ತವೆ. ಫಾತಿಮಾ ಅನುಸರಿಸಿಕೊಂಡು ಹೋದರು ಅರೀಜೆಗೆ ತನ್ನ ಸ್ವಾಭಿಮಾನ ಕೆಣಕಲು ಮೊದಲಾಗುತ್ತದೆ. ಫಾತಿಮಾಗೆ ಗರ್ಭಧರಿಸಲು ಸಾಧ್ಯವಾಗುವುದಿಲ್ಲ, ಕೊನೆಗೊಮ್ಮೆ ಗರ್ಭ ಕಟ್ಟಿದ್ದಾಗ ಕೆಲವೇ ವಾರಗಳಲ್ಲಿ ಗರ್ಭಪಾತವಾಗುತ್ತದೆ. ಅರೀಜೆ ಕಾಲ ಕ್ರಮಣೆ ಪರಿವರ್ತನೆ ಹೊಂದಿ “ಮನೆ ಗಂಡನಾಗಿ” ವಿವಾಹ ಉಳ್ಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಫಾತಿಮಾಗೆ ಕೃತಕ ಗರ್ಭಧಾರಣೆ (ಸರೊಗೆಸಿ) ಮೂಲಕ ಮಕ್ಕಳ ಪಡೆಯುವ ಅವಕಾಶ ಬಂದಾಗ ಅವಳು ಸಮ್ಮತಿಯನ್ನು ನೀಡಲು ಒಪ್ಪುವುದಿಲ್ಲ. ಇಲ್ಲಿ ಹುಟ್ಟುವ ಮಗುವಿಗೆ ತಂದೆ ಅರೀಜೆಯಾಗಿದ್ದರೂ ಜೈವಿಕ ತಾಯಿ ಬೇರೊಬ್ಬಳು ಅನ್ನುವ ಕಾರಣಗಳು ಮತ್ತು ನೈತಿಕ ಪ್ರಶ್ನೆಗಳು ಈ ದಂಪತಿಗಳ ಅಭಿಲಾಷೆಯನ್ನು ಅಲ್ಲಾಡಿಸುತ್ತದೆ. ವೃತ್ತಿ ಜೀವನದಲ್ಲಿ ವಿಜೇತಳಾದ ಫಾತಿಮಾಗೆ ವೈಯುಕ್ತಿಕ ಜೀವನದಲ್ಲಿ ತಾಯಿಯಾಗಲಾರದ ಸೋಲು ಅವಳನ್ನು ಕಾಡುತ್ತದೆ. ಅರೀಜೆ ಫಾತಿಮಾಳ ನಿರಾಕರಣೆಯನ್ನು ಅರಿತ್ತಿದ್ದರೂ ಅವಳನ್ನು ಎಮೋಷನಲ್ ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸುತ್ತಾನೆ. ಇದರ ನಡುವೆ ಲಂಡನ್ನಿನಿಂದ ತಾತ್ಕಾಲಿಕವಾಗಿ ಬಂದ ಆಂಗ್ಲ ಫೈನ್ಯಾನ್ಸ್ ಆಫೀಸರ್ ಜಫ್ರಿಯ ಪರಿಚಯವಾಗಿ ಫಾತಿಮಾ ಅವನೊಡನೆ ದೈಹಿಕ ಸಂಬಂಧ ಬೆಳಸುತ್ತಾಳೆ. ಜಫ್ರಿ ತನ್ನ ದೇಶಕ್ಕೆ ಹಿಂತಿರುಗಬೇಕಾಗಿದ್ದು ಅವಳ ಮತ್ತು ಜಫ್ರಿಯ ಸಂಬಂಧ ಅಲ್ಲಿಗೆ ಮುಗಿಯುತ್ತದೆ. ಯಾವುದೊ ಒಂದು ಸಿಟ್ಟಿನ ಘಳಿಗೆಯಲ್ಲಿ ಫಾತಿಮಾ ತಾನು ಜಫ್ರಿಯೊಡನೆ ಮಲಗಿದ್ದ ವಿಚಾರವನ್ನು ಅರೀಜೆಗೆ ತಿಳಿಸಿ ಅವನ ಮೇಲೆ ತನಗಿದ್ದ ಸಿಟ್ಟನ್ನು ತೀರಿಸಿಕೊಳ್ಳುತ್ತಾಳೆ. ಅವಳ ಮತ್ತು ಆರೀಜೆಯ ವಿವಾಹ ಮುರಿದು ಬೀಳುತ್ತದೆ.

ಕತೆಯ ಮೂರನೆ ಬೇಗಂ ಐಶಾ ಇಪ್ಪತೈದು ದಾಟಿದ ಯುವಕಿ. ಇದೇ ಬ್ಯಾಂಕಿನಲ್ಲಿ ಅವಳು ಕಿರಿಯ ಉದ್ಯೋಗಿ. ತಾನೂ ಮುಂದಕ್ಕೆ ರಾಣಿ ರೀತಿಯಲ್ಲಿ ಸಿ. ಇ. ಒ ಆಗಬೇಕೆಂಬ ಕನಸ್ಸಿನಲ್ಲಿ ಬದುಕಿರುತ್ತಾಳೆ. ಅವಳಿಗೆ ಆ ಉತ್ಸಾಹ ಛಲ ಎರಡೂ ಇರುತ್ತದೆ. ಆದರೆ ಐಶಾಗೆ ತನ್ನ ವೈಯುಕ್ತಿಕ ಬದುಕಿನಲ್ಲಿ ತನ್ನ ಲೈಂಗಿಕ ನಿಲುವುಗಳ ಬಗ್ಗೆ ಸಂಶಯಗಳಿರುತ್ತದೆ. ಅವಳು ಬೈ ಸೆಕ್ಷುಯಲ್ ಆಗಿ ಎರಡೂ ಮಾರ್ಗಗಳನ್ನು ಅನುಸರಿಸಿ ಹಲವಾರು ಅವಕಾಶಗಳಲ್ಲಿ ಪ್ರಯತ್ನಿಸಿದರೂ ಅವಳಿಗೆ ತನ್ನ ಲೈಂಗಿಕ ಬದುಕಿನ ಬಗ್ಗೆ ಖಚಿತತೆ ಮೂಡುವುದಿಲ್ಲ. ಅದನ್ನು ಗುಟ್ಟಾಗಿಟ್ಟುಕೊಂಡು ಕೊನೆಗೊಮ್ಮೆ ಅದನ್ನು ಬಹಿರಂಗಪಡಿಸುವ ಅನಿವಾರ್ಯ ಸನ್ನಿವೇಶ ಬಂದಾಗ ಅವಳು ಪಡುವ ಸಂಕಟ ಮತ್ತು ಹಿಂಜರಿಕೆ ಬಹಳ ಸೂಕ್ಷ್ಮವಾಗಿ ನಿರೂಪಣೆಯಾಗಿದೆ. ಐಶಾ ಬ್ಯಾಂಕಿನ ಹಿರಿಯ ಅಧಿಕಾರಿ ಮಹೇಶ್ ಅವರನ್ನು ಆದರ್ಶಪ್ರಾಯರಾಗಿ ಕಂಡು ಅವರೊಡನೆ ಕೆಲಸ ಕಲಿಯಲು ಕಾತುರರಾಗಿರುತ್ತಾಳೆ. ಇದೇ ಮಹೇಶ್ ಒಂದು ರಾತ್ರಿ ಪಾರ್ಟಿ ಮುಗಿದ ಮೇಲೆ ಅವಳನ್ನು ಲೈಂಗಿಕ ಶೋಷಣೆಗೆ ಒಳಪಡಿಸುತ್ತಾನೆ. ಐಶಾ ಈ ಒಂದು ಪ್ರಕರಣವನ್ನು ಬಹಿರಂಗ ಪಡಿಸಲು ಮೊದಲಿಗೆ ಅಂಜುತ್ತಾಳೆ. ನಂತರದಲ್ಲಿ ಅವಳು ಒಂದು ಮೀಟಿಂಗಿನಲ್ಲಿ ಬಹಿರಂಗ ಪಡಿಸಿದಾಗ ಸಂಸ್ಥೆಯ ಹಿತದೃಷ್ಟಿಯಿಂದ ರಾಣಿ ಮತ್ತು ಫಾತಿಮಾರೆ ಅವಳ ಬಾಯಿ ಮುಚ್ಚಿಸಲು ಪ್ರಯತ್ನಿಸುವ ಸನ್ನಿವೇಶ ಲೈಂಗಿಕ ಶೋಷಣೆಯ ಬಗ್ಗೆ ನಮ್ಮ ಸಮಾಜ ಮತ್ತು ವ್ಯವಸ್ಥೆಯು ಎಷ್ಟು ಸಡಿಲ ನಿಲುವಿನಲ್ಲಿ ನಿಂತಿದೆ ಎಂಬುದಕ್ಕೆ ಪ್ರತೀಕವಾಗಿದೆ. ಇದಲ್ಲದೇ ಮುಂಬೈಯಿಯಲ್ಲಿ ಐಶಾ ಬಾಡಿಗೆ ಮನೆ ಹುಡುಕಾಟದಲ್ಲಿ ತೊಡಗಿದಾಗ ಉದ್ಭವಿಸುವ ಪರದಾಟಗಳು ದೊಡ್ಡ ಶಹರಿನ ಬಾಡಿಗೆ ನಿವಾಸ ಸಮಸ್ಯೆಗಳ ಬಗ್ಗೆ ಬೆಳಕನ್ನು ಚೆಲ್ಲಿದೆ.

ಕತೆಯ ನಾಲ್ಕನೇ ಬೇಗಂ ಲಿಲ್ಲಿ, ಇದು ಅವಳ ಅಡ್ಡ ಹೆಸರು. ಲಿಲ್ಲಿಯ ಮೂಲ ಹೆಸರು ಲಕ್ಷ್ಮಿ. ಅವಳು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು ಕತೆಯ ಒಂದು ತಿರುವಿನಿಂದ ರಾಣಿಯ ಸಂಪರ್ಕ ಒದಗಿ ಅವಳ ಬ್ಯಾಂಕಿನಿಂದ ಸಾಲ ಪಡೆದು ವೇಶ್ಯಾವೃತ್ತಿಯನ್ನು ಬಿಟ್ಟು ಹೊರಬಂದು ಒಂದು ಮೆಟಲ್ ಫ್ಯಾಕ್ಟರಿ ತೆರೆಯುವ ಸುವರ್ಣ ಅವಕಾಶ ತೆರೆದುಕೊಳ್ಳುತ್ತದೆ. ಸಾಲ ಮಂಜೂರಾದರೂ ಸ್ಥಳೀಯ ರಾಜಕೀಯ, ಮಾಫಿಯಾ ದಾದಾಗಳ ಕಾಟದಿಂದ ಸಾಕಷ್ಟು ಅಡಚಣೆಗಳನ್ನು ಅವಳು ಎದುರಿಸಬೇಕಾಗುತ್ತದೆ. ಲಿಲ್ಲಿಗೆ ತಾನು ಲಕ್ಷ್ಮಿಯಾಗಿ ಮತ್ತೆ ತಲೆಯೆತ್ತಿ ಸ್ವಾಭಾಮಾನದಿಂದ ಮತ್ತು ಗೌರವದಿಂದ ಬದುಕುವ ಹಂಬಲ. ಆದರೆ ಸಮಾಜ ಅವಳ ಪ್ರಯತ್ನಕ್ಕೆ ಅಡ್ಡ ಬಂದು ಅವಳು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವಳು ವೇಶ್ಯಾವೃತ್ತಿಯ ಜಾಲದಿಂದ ಹೊರಬರಲು ಹೆಣಗುತ್ತಾಳೆ. ಲಿಲ್ಲಿಗೆ ಒಬ್ಬ ಮಗನನ್ನು ಕೊಟ್ಟ ಅವಳ ಹಿಂದಿನ ಪ್ರಿಯಕರ ಮತ್ತೆ ಕತೆಯಲ್ಲಿ ಕಾಣಿಸಿಕೊಂಡು ಲಿಲ್ಲಿಯನ್ನು ದುಬೈಗೆ ಕರೆದುಕೊಂಡು ಹೋಗುವ ಸುಳ್ಳು ಆಶ್ವಾಸನೆ ನೀಡಿ, ಆಸೆಯನ್ನು ತೋರಿಸಿ ಮಧ್ಯದಲ್ಲೇ ಅವಳನ್ನು, ಮಗನನ್ನು ಕೈ ಬಿಡುತ್ತಾನೆ.

ಕತೆಯ ಐದನೇ ಬೇಗಂ ರಾಣಿಯ ಮಲಮಗಳಾದ ಶೇ. ಇವಳು ಹದಿಮೂರು ವರ್ಷದ ಬಾಲಕಿ. ಅವಳ ಶಾಲೆಯಲ್ಲಿ ಸಹಪಾಠಿಗಳಿಗೆ ಹೋಲಿಸಿದರೆ ಶೇ ದೈಹಿಕವಾಗಿ ಎಳಸು ಆದರೆ ಮಾನಸಿಕವಾಗಿ ಬಹಳ ಚುರುಕು. ಅವಳಿಗೆ ಬ್ರಾ ಹಾಕಿಕೊಂಡು, ಋತುಮತಿಯಾಗಿ, ಇತರ ಬೆಳೆದ ಹುಡುಗಿಯರಂತಾಗಬೇಕೆಂಬ ಹಂಬಲ. ಬಾಲ್ಯಾವಸ್ಥೆಯಿಂದ ಹೆಣ್ಣಾಗಿ ಮಾರ್ಪಾಡಾಗುವ ತೀವ್ರ ಆಸೆ ಮತ್ತು ಅವಳ ಮುಗ್ಧತೆಯನ್ನು ತೋರುವ ಸನ್ನಿವೇಶಗಳು ಲಘು ಹಾಸ್ಯದಿಂದ ತುಂಬಿದೆ. ಎಳೆಯರಿಗೆ ಬೇಗ ಬೆಳೆದು ದೊಡ್ಡವರಾಗುವ ಆಸೆ ಹಾಗೆ ವಯಸ್ಸಾದವರಿಗೆ ಕಿರಿಯರಾಗುವ ಆಸೆ! ಪ್ರಕೃತಿಯ ನಿಯಮವನ್ನು ತ್ವರಿತಗೊಳ್ಳಿಸುವ ಅಥವಾ ಸ್ಥಬ್ದ ಗೊಳಿಸುವ ಪ್ರಯತ್ನ ನಾವು ನಾಗರೀಕತೆಯಿಂದ ಗಳಿಸಿಕೊಂಡ ವಿಚಿತ್ರ ಆಧುನಿಕ ಮನೋಪ್ರವೃತ್ತಿ ಇರಬಹುದು. ಅದು ಬದುಕೆಂಬ ಸ್ಪರ್ಧೆಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಒಂದು ಅಗತ್ಯವೂ ಆಗಿರಬಹುದು. ಐಶಾಳಿಗೆ ಲೈಂಗಿಕ ಐಡೆಂಟಿಟಿ ಕ್ರೈಸಿಸ್ ಆಗಿದ್ದರೆ ಶೇಗೆ ತನ್ನ ವ್ಯಕ್ತಿತ್ವದ ಶಾರೀರಿಕ ಐಡೆಂಟಿಟಿ ಕ್ರೈಸಿಸ್ ಎನ್ನಬಹುದು. ಅಂದ ಹಾಗೆ ಶೇ ಇಡೀ ಕತೆಯ ನಿರೂಪಕಿ. ತನ್ನ ಮುಗ್ಧ ಮನಸ್ಸಿನಿಂದ ಅವಳು ತನ್ನ ಸುತ್ತ ಪ್ರಪಂಚದ ಆಗು-ಹೋಗುಗಳನ್ನು, ಜನರ ಭಾವನೆಗಳನ್ನು ಅಳೆಯಲು ಪ್ರಯತ್ನಿಸುತ್ತಾಳೆ. ಶೇ ಮತ್ತು ರಾಣಿ ಈ ಇಬ್ಬರ “ಮಲತಾಯಿ-ಮಗಳು” ಸಂಬಂಧದ ಹಲವಾರು ಘರ್ಷಣೆಗಳು ಭಾವುಕ ಪ್ರಸಂಗಗಳಾಗದೆ ಬಹಳ ಸಹಜವಾಗಿ ಮೂಡಿಬಂದಿದೆ.

ಸ್ತ್ರೀ ಪ್ರಧಾನವಾದ ಕತೆಯಲ್ಲಿ ಗಂಡಸರ ಪಾತ್ರಬೆಳೆಸುವ ಗೋಜಿಗೆ ನಿರ್ದೇಶಕರು ಹೋಗಿಲ್ಲ. ಹಾಗೆ ನೋಡಿದರೆ ಅದರ ಅವಶ್ಯಕತೆಯೂ ಇಲ್ಲ. ಧಾರಾವಾಹಿಯಲ್ಲಿ ಹಲವಾರು ಚುಂಬನ ಮತ್ತು ಸೆಕ್ಸ್ ದೃಶ್ಯಗಳು ಯೆಥೇಚ್ಛವಾಗಿದೆ. ಅವುಗಳು ಅಶ್ಲೀಲವೆನಿಸುವುದಿಲ್ಲ ಮತ್ತು ಕತೆಗೆ ಪೂರಕವಾಗಿ ಬಳಸಲಾಗಿದೆ. ಕೌಟುಂಬಿಕವಾಗಿ ಮನೆಮಂದಿಯೆಲ್ಲಾ ಕೂತು ನೋಡಲು ಸೂಕ್ತವಾಗಿಲ್ಲ ಎನ್ನಬಹುದು. ಈ ಧಾರಾವಾಹಿಗೆ ‘ವಯಸ್ಕರಿಗೆ ಮಾತ್ರ’ ಎಂಬ ೧೮ರ ಸರ್ಟಿಫಿಕೇಟ್ ದೊರೆತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳು ಆದರ್ಶಪ್ರಾಯರಾಗಿ ಭಾರತೀಯತೆಯ ಸಾಂಸ್ಕೃತಿಕ ಪ್ರತಿನಿಧಿಗಳಾಗಿರಬೇಕು ಎಂಬ ನಿರೀಕ್ಷೆ ಉಳ್ಳ ಸಂಪ್ರದಾಯಸ್ಥರಿಗೆ ‘ಬಾಂಬೆ ಬೇಗಂ’ ಸ್ವಲ್ಪಮಟ್ಟಿಗೆ ಸಾಂಸ್ಕೃತಿಕ ಆಘಾತವನ್ನು (ಕಲ್ಚರಲ್ ಶಾಕ್) ನೀಡಬಹುದು. ಧಾರಾವಾಹಿಯ ರಾಣಿ ಮತ್ತು ಇತರ ನಾರಿಯರು ಯಾರೂ ಆದರ್ಶ ಪ್ರಾಯರಲ್ಲ. ಎಲ್ಲರಿಗೂ ತಮ್ಮ ತಮ್ಮ ಅಪೂರ್ಣತೆ ಮತ್ತು ಕುಂದು ಕೊರತೆಗಳಿರುತ್ತವೆ. ಮಹಿಳೆಯರ ಬದುಕಿನಲ್ಲಿ ಖಾಸಗಿ ಮತ್ತು ಬಹಿರಂಗ ಎನ್ನುವ ಗಡಿ ರೇಖೆಗಳಿಲ್ಲ. ಅವರ ವ್ಯಕ್ತಿತ್ವದ ಖಾಸಗಿ ಎನ್ನುವ ವಿಚಾರ ಬಹಿರಂಗವಾಗಿ, ಬಹಿರಂಗ ಎನ್ನುವ ವಿಚಾರ ಖಾಸಗಿಯಾಗಿ ಪ್ರಸ್ತುತವಾಗುತ್ತದೆ. ಈ ಮಹಿಳೆಯರ ವ್ಯಕ್ತಿತ್ವವನ್ನು ಪರಿಶೀಲಿಸಿದಾಗ ಸರಿ ತಪ್ಪುಗಳು ಅಥವಾ ಕಪ್ಪು ಬಿಳುಪು ಎಂಬ ಪರಿಕಲ್ಪನೆಗಳ ನಡುವಿನ ಸೀಮಾರೇಖೆ ಮಬ್ಬಾಗುತ್ತದೆ. ಸರಿ- ತಪ್ಪುಗಳನ್ನು ಪರಿಸ್ಥಿಯ ಹಿನ್ನೆಲೆಯು ನಿರ್ಧರಿಸುತ್ತದೆ.

ಪೂಜಾ ಭಟ್ ಮತ್ತು ಅಲಂಕೃತ ಅವರು ಹಿಂದೆ ನಿರ್ದೇಶಿಸಿದ ಚಿತ್ರಗಳು ವಿವಾದಗಳಿಗೆ ಒಳಪಟ್ಟಿವೆ. ಈ ನಿಟ್ಟಿನಲ್ಲಿ ‘ಬಾಂಬೆ ಬೇಗಂ’ ಹೊರತೇನಲ್ಲ. ಮಕ್ಕಳ ಹಕ್ಕುಗಳನ್ನು ಕಾಯ್ದಿರಿಸುವ ರಾಷ್ಟೀಯ ಭಾರತ ಸಂಸ್ಥೆ ‘ಬಾಂಬೆ ಬೇಗಂ’ ಪ್ರದರ್ಶನವನ್ನು ನಿಲ್ಲಿಸುವಂತೆ ನೆಟ್ ಫ್ಲಿಕ್ಸ್ ಕಂಪನಿಗೆ ಆದೇಶ ನೀಡಿದೆ. ಇದಕ್ಕೆ ಕಾರಣ ಧಾರಾವಾಹಿಯಲ್ಲಿನ ಶೇ, ತನ್ನ ಸಹಪಾಠಿ ಇಮ್ರಾನನ್ನು ಪ್ರೀತಿಸಿ ಅವನು ತಿರಸ್ಕರಿಸಿದಾಗ ಉಂಟಾಗುವ ಮಾನಸಿಕ ಆಘಾತವನ್ನು ಹತ್ತಿಕ್ಕಲು ಅಂದಿನ ಪಾರ್ಟಿಯಲ್ಲಿ ಇತರರೊಡನೆ ಮದ್ಯಪಾನ ಮಾಡಿ ಕೊಕೇನ್ ಮಾದಕವಸ್ತುಗಳನ್ನು ಉಪಯೋಗಿಸಿ ಮತ್ತಳಾಗಿ ಆಸ್ಪತ್ರೆಸೇರಿ ಪ್ರಾಣಾಪಾಯದಿಂದ ಬಚಾವಾಗುತ್ತಾಳೆ. ಅವಳ ಶಾಲೆಯಲ್ಲಿ ಬೆಳೆದ ಹೆಣ್ಣು ಮಕ್ಕಳು ತಮ್ಮ ಎದೆಯ ಉಬ್ಬುಗಳ ಚಿತ್ರವನ್ನು (ನಗ್ನವಲ್ಲದ) ತಮ್ಮ ಪ್ರೀತಿಯ ಹುಡುಗರೊಂದಿಗೆ ಮೊಬೈಲಿನಲ್ಲಿ ಹಂಚಿಕೊಳ್ಳುವ ದೃಶ್ಯವಿದೆ. ಈ ರೀತಿಯ ಸನ್ನಿವೇಶಗಳು ಅಸಹಜ ಮತ್ತು ನಮ್ಮ ಮಕ್ಕಳ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಕಾರಣಕ್ಕಾಗಿ ಈ ಧಾರಾವಾಹಿಯನ್ನು ಬ್ಯಾನ್ ಮಾಡಲು ಕರೆ ನೀಡಲಾಗಿದೆ. ನೆಟ್ ಫ್ಲಿಕ್ಸ್ ನಿರ್ದಿಷ್ಟವಾದ ಉತ್ತರ ಕೊಟ್ಟಿಲ್ಲವಾದರೂ ಧಾರಾವಾಹಿಗೆ ೧೮ ವಯಸ್ಸು ಮಿತಿ ನೀಡಿರುವುದರಿಂದ ಮಕ್ಕಳು ಈ ಧಾರಾವಾಹಿಯನ್ನು ನೋಡುವ ಪ್ರಮೇಯವಿಲ್ಲವೆಂದು ಹೇಳಿಕೆ ನೀಡಿದೆ. ನಮ್ಮ ಭಾರತದಲ್ಲಿ ಮಕ್ಕಳಿಗೆ ಈ ಮೊಬೈಲ್ ಯುಗದಲ್ಲಿ, ಏಡ್ಸ್ ಮತ್ತು ಇತರ ಗುಪ್ತ ರೋಗಗಳ ಹಿನ್ನೆಲೆಯಲ್ಲಿ, ಸಲಿಂಗಕಾಮವನ್ನು ಒಪ್ಪಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಲೈಂಗಿಕ ಶಿಕ್ಷಣದ ಅಗತ್ಯವಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ಶಿಕ್ಷಣ ನೀತಿಯಲ್ಲಿ ಈ ವಿಚಾರದ ಬಗ್ಗೆ ಮಡಿವಂತಿಕೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿರುವ ಲೈಂಗಿಕ ಸ್ವಚ್ಛಂದ ಈಗ ನಮ್ಮಲ್ಲಿ ಇಲ್ಲವಾದರೂ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಯುವ ಪೀಳಿಗೆಗೆ ಈ ಶಿಕ್ಷಣ ಪ್ರಸ್ತುತವಾಗಬಹುದು.

ಒಟ್ಟಾರೆ ‘ಬಾಂಬೆ ಬೇಗಂ’ ಹಲವಾರು ಸಾಮಾಜಿಕ ವಿಷಯಗಳ ಬಗ್ಗೆ ಚಿಂತನೆ ಮಾಡಲು ಅನುವು ಮಾಡಿಕೊಡುತ್ತದೆ. ಬದಲಾಗುತ್ತಿರುವ ಭಾರತೀಯ ಸಾಮಾಜಿಕ ಮೌಲ್ಯಗಳನ್ನು, ಬದುಕಿನ ರೀತಿಯನ್ನು, ಹಿಂದೆ ನಿಷಿದ್ಧವೆಂದು ಮಾತನಾಡದೆ ಹೋದ ಹಲವಾರು ವಿಚಾರಗಳನ್ನು ಬಹಿರಂಗಕ್ಕೆ ತಂದು ವಿಮರ್ಶೆಗೆ ಒಳಪಡಿಸಿದೆ.

ಡಾ ಜಿ. ಎಸ್. ಶಿವಪ್ರಸಾದ್

ಕು.ಚಿ. ಸುರಂಗಗಳು-ದಾಕ್ಷಾಯಿಣಿ ಗೌಡ

ಪ್ರಿಯ ಮಿತ್ರರೆ, ಕೋವಿಡ್ ಮಹಾಮಾರಿಯ ಹಾವಳಕ್ಕೆ ತುತ್ತಾಗಿ ಹೆಣಗುತ್ತಿರುವ ಪ್ರಪಂಚಲ್ಲಿ ವಿದೇಶಗಳ ಪ್ರಯಾಣ ಕಳೆದ ವರ್ಷದಲ್ಲಿ ಬಹು ಕಡಿಮೆಯಾಗಿದೆ. ಶೀಘ್ರದಲ್ಲೇ ಆರಂಭವಾಗಲೆನ್ನುವ ಆಶಾವಾದದೊಂದಿಗೆ, ನಮ್ಮ ಕಳೆದ ವರ್ಷದ ವಿಯಟ್ನಾಮ್ ಭೇಟಿಯನ್ನು ನೆನಪಿಸಿಕೊಳ್ಳುವ ಮತ್ತು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನನ್ನದು – ದಾಕ್ಷಾಯಿಣಿ

ಕು.ಚಿ. ಸುರಂಗಗಳು ( Cu.Chi tunnels in Vietnam)

ಹೋದ ವರ್ಷ (೨೦೨೦) ಮಾರ್ಚ್ ತಿಂಗಳ ಮೊದಲ ೧೦ ದಿನಗಳನ್ನು, ವಿಯಟ್ನಾಮ್ ದೇಶದಲ್ಲಿ ಕಳೆಯುವ ಅವಕಾಶ ನಮ್ಮದಾಗಿತ್ತು. ನಾವು ಕಾಂಬೋಡಿಯಾದ ಸಿಯಮ್ ರೀಪ್ ನಗರದಿಂದ, ವಿಯಟ್ನಾಮ್ ನ ರಾಜಧಾನಿ ಹನಾಯ್ ತಲುಪಿ, ನಂತರ ಅಲ್ಲಿನ ಇನ್ನೆರಡು ನಗರಗಳಲ್ಲಿ ಕೆಲ ದಿನ ಕಳೆದು, ಕೊನೆಯ ಭಾಗದ ಪ್ರಯಾಣದಲ್ಲಿ ದಕ್ಷಿಣದ ಮುಖ್ಯ ನಗರ ಸೈಗಾನ್ ಗೆ ಭೇಟಿಯಿತ್ತೆವು. ಈ ದೇಶದಲ್ಲಿ ಕೆಲವಾರು ಜಾಗಗಳಿಗೆ ಭೇಟಿಯಿತ್ತಿದ್ದರೂ, ನನ್ನ ಮನದಲ್ಲಿ ತನ್ನದೇ ರೀತಿಯ ಅಚ್ಚುಹೊತ್ತಿದ ಕು.ಚಿ. ಸುರಂಗಕ್ಕೆ ಭೇಟಿಯಿತ್ತ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಹೊ.ಚಿ.ಮಿನ್ ನಗರ ಅಥವಾ ಅದರ ಹಳೆಯ ಹೆಸರಿನಿಂದ ಜನಪ್ರಿಯವಾದ ಸೈಗಾನ್ ನಗರ, ಈ ದೇಶದ ಆರ್ಥಿಕ ರಾಜಧಾನಿಯೆಂದು ಹೇಳಬಹುದು. ಸೈಗಾನ್ ನಿಂದ ಕು.ಚಿ. ಜಿಲ್ಲೆಗೆ ಒಂದು ಘಂಟೆಯ ಪಯಣ. ಪ್ರವಾಸದ ಎಜೆಂಟ್ ನಮ್ಮಿಬ್ಬರಿಗೆಂದೆ ಹೋಟೆಲಿನಿಂದ, ಕಾರು ಮತ್ತು ಆಂಗ್ಲ ಭಾಷೆ ತಿಳಿದಿರುವ ಗೈಡ್ ನ ಮುಂಚೆಯೆ ಯೋಜಿಸಿದ್ದರಿಂದ ಈ ಯಾತ್ರೆಯಲ್ಲಿ ನಮಗೆ ಯಾವ ರೀತಿಯ ತೊಂದರೆಯಾಗಲಿಲ್ಲ.

ನಾನು ಬಹಳಷ್ಟು ಅಮೆರಿಕೆಯ ಚಲನಚಿತ್ರಗಳಲ್ಲಿ ” ವಿಯಟ್ನಾಮ್ ಯುದ್ಧ” ಬಗ್ಗೆ ನೋಡಿದ್ದೆ ಮತ್ತು ಕೇಳಿದ್ದೆನಾದರೂ, ಅದರ ನಿಜವಾದ ಅರ್ಥ ಈ ” ಕು.ಚಿ ಟನ್ನಲ್ಸ್” ನ ವೀಕ್ಷಿಸಿದಾಗಲೆ ತಿಳಿದಿದ್ದು. ನಿಮಗೆ ತಿಳಿದ೦ತೆ ಈ ದೇಶದ ನೆಲ ಮೇಲಿಂದ ಕೆಳಗೆ ಒಂದು ಚಿಕ್ಕ ಪಟ್ಟಿಯಂತಿದೆ. ಆರ್ಥಿಕ, ಗಾತ್ರ, ಸೈನ್ಯಬಲ ಮತ್ತೆಲ್ಲದರಲ್ಲೂ ಚಿಕ್ಕದಾದ ಈ ದೇಶ, ಅತಿ ಭಲಾಡ್ಯವಾದ, ಶ್ರೀಮಂತವಾದ, ಮುಂದುವರಿದ ಅಮೆರಿಕೆಯಂತಹ ದೇಶವನ್ನು ಎದುರಿಸಿ ಯುದ್ಧಮಾಡಿರುವುದು ಒಂದು ರೀತಿಯ ಪವಾಡವೆ ಸರಿ. ಈ ಯುದ್ಧದಲ್ಲಿ ಗೆಲ್ಲಲಾರದೆ, ಪ್ರಂಪಚದ ಖಂಡನೆಗೆ ಪಾತ್ರವಾಗಿ ಅಮೆರಿಕ ರಾಜಿ ಮಾಡಿಕೊಳ್ಳಬೇಕಾಯಿತು. ಈ ಭಾಗದ ಪ್ರಪಂಚದಲ್ಲಿ ಬೆಳೆಯುತ್ತಿರುವ ”ಕಮ್ಯೂನಿಸಂ” ಮತ್ತು ಚೀನಾ ದೇಶದ ಪ್ರಭಾವವನ್ನು ತಡೆಗಟ್ಟುವ ಉದ್ದೇಶದಿಂದ ಇಂತಹ ಯುದ್ಧವನ್ನು ವರ್ಷಾನುಗಟ್ಟಲೆ ಕಾದ ಅಮೆರಿಕಾ, ಈ ಯುದ್ಧದಲ್ಲಿ ಮಾಡಿದ ಪಾಪಕೃತ್ಯಕ್ಕೆ, ಅಪರಾಧಕ್ಕೆ ಮತ್ತು ಅನ್ಯಾಯಕ್ಕೆ ಯಾವ ರೀತಿಯ ಶಿಕ್ಷೆ ಕೊಟ್ಟರೂ ಕಡಿಮೆಯೆ. ಆದರೆ ಪ್ರಪಂಚದಲ್ಲಿ ಶ್ರೀಮಂತರಿಗೆ ಸಿಗುವ ನ್ಯಾಯವೆ ಬೇರೆಯಲ್ಲವೆ?

ಅರವತ್ತರ ದಶಕದಲ್ಲಿ ಶುರುವಾದ ಈ ಯುದ್ಧ ೧೯೭೫ ರ ತನಕ ನಡೆಯಿತು. ಈ ಗೆರಿಲ್ಲಾ ಯುದ್ಧವನ್ನು ಮಾಡಿದ ವಿಯಟ್ನಾಮ್ ಜನರ, ಕಷ್ಟಸಹಿಷ್ಣುತೆ, ಧೃಢನಿಶ್ಚಯದ ಅಗಾಧತೆ, ಶಕ್ತಿಗಳು ವರ್ಣನೆಗೆ ನಿಲುಕದ್ದು. ಅಮೆರಿಕ, ಫ್ರಾನ್ಸ್, ಜಪಾನ್ ಮುಂತಾದ ದೇಶಗಳ ಪತ್ರಕರ್ತರು ಇಲ್ಲಿಗೆ ಭೇಟಿಕೊಟ್ಟು, ಇಲ್ಲಿ ನೆಡೆದ ಅಮಾನುಷತೆಯ ಚಿತ್ರಗಳನ್ನು, ಲೇಖನಗಳನ್ನು ಪ್ರಕಟಿಸಲು ಶುರುಮಾಡಿದಾಗ, ಪ್ರಪಂಚದಾದ್ಯಂತ ಇದನ್ನು ಖಂಡಿಸಿ ಮುಷ್ಕರಗಳು ನಡೆದು, ಅಮೆರಿಕ ಎಲ್ಲಾ ದೇಶಗಳ ಅವಹೇಳನಕ್ಕೆ ಗುರಿಯಾಗಿ, ನಾಚಿಕೆಯಿಂದ ತಲೆಬಾಗಿ ಈ ಜಾಗ ಖಾಲಿ ಮಾಡಬೇಕಾಯಿತು. ಆ ಯುದ್ಧದಲ್ಲಿ ಹೋರಾಡಿದ ಅಮೆರಿಕೆಯ ಸೈನಿಕರಿಗೆ, ಅಮೆರಿಕೆಯ ಪ್ರವಾಸಿಗರಿಗೆ ಇದು ಜನಪ್ರಿಯ ಗಮ್ಯಸ್ಥಾನ.

Photos from Personal album

ಈ ಕು.ಚಿ ಸುರಂಗಗಳನ್ನು, ನಮ್ಮ ಲಂಡನ್ ಟ್ಯುಬ್ ತರಹ, ವಿಭಿನ್ನ ಮಟ್ಟದಲ್ಲಿ ಕೊರೆಯಲಾಗಿದೆ. ಇದಕ್ಕೆ ಯಾವರೀತಿಯ ಬೆಳಕು ಬೀಳುವುದು ಸಾಧ್ಯವಿಲ್ಲ. ಬಹಳ ಎತ್ತರವಿಲ್ಲದ, ತೆಳುಮೈಕಟ್ಟಿನ ಇಲ್ಲಿಯ ಜನರೆ ಇದರಲ್ಲಿ ಬಗ್ಗಿ ನಡೆಯಬೇಕು ಮತ್ತು ಕೆಲವಡೆ ತೆವಳಬೇಕು. ಬೆಳಿಗ್ಗೆಯಿಡೀ ಈ ಸುರಂಗದಲ್ಲಿದ್ದು, ಅಲ್ಲಿಯೆ ಅಡುಗೆ ಮಾಡಿ, ಅದರಲ್ಲೇ ಬಾವಿ ತೆಗೆದು ನೀರಿನ ವ್ಯವಸ್ಥೆಯನ್ನು ಸಹ ಮಾಡಿಕೊಂಡು, ರಾತ್ರಿಯ ವೇಳೆ ಮಾತ್ರ ಹೋರಾಡಲು ಈ ಜನ ಹೊರಗೆ ಬರುತ್ತಿದ್ದರು. ಇದರಲ್ಲೆ ಯುದ್ಧದ ಗಾಯಾಳುಗಳಿಗೂ ಚಿಕಿತ್ಸೆ ಮಾಡಲಾಗುತ್ತಿತ್ತು. ಮಕ್ಕಳ ಹೆರಿಗೆಯೂ ಈ ಕಗ್ಗತ್ತಲ ಸುರಂಗದಲ್ಲೇ ಆಗುತ್ತಿತ್ತೆಂದು ಊಹಿಸಲೂ ಕಷ್ಟವಾಗುತ್ತದೆ. ಸುರಂಗದಲ್ಲಿ ಒಂದೆಡೆ ಅಡಿಗೆ ಮಾಡಿದರೆ ಅದರ ಹೊಗೆ ಬೇರೆಕಡೆಯೆ ಬರುತ್ತದೆ. ಇದು ವೈರಿಗಳನ್ನು ದೂರವಿಡುವ ಜಾಣತನದ ಬಹು ತಂತ್ರಗಳಲ್ಲಿ ಒಂದು.

ಸುರಂಗವಾಸಿಗಳು, ಕತ್ತಲಾದ ನಂತರ ಹೊರಬಂದು, ಅಮೆರಿಕೆಯ ಸೈನಿಕರು ಸಿಕ್ಕಿಬೀಳುವಂತೆ ಮತ್ತು ಸಾಯುವಂತೆ ಟ್ರಾಪ್ ಗಳನ್ನು ನಿರ್ಮಿಸುವುದಲ್ಲದೆ, ದವಸಧಾನ್ಯ, ಔಷಧಿ, ಕಟ್ಟಿಗೆಗಳನ್ನು ಶೇಖರಿಸುವುದಲ್ಲದೆ, ವ್ಯವಸಾಯವನ್ನು ಸಹ ಮಾಡುತ್ತಿದ್ದರೆಂದು ಹೇಳುತ್ತಾರೆ. ಇವರು ವೈರಿಗಳಿಗೆ ನಿರ್ಮಿಸಿರುವ ಟ್ರಾಪ್ ಗಳು ನಿಜಕ್ಕೂ ಭಯಾನಕ. ಈ ಸುರಂಗಗಳಲ್ಲಿ ವಿಯ್ಟ್ ಕಾಂಗ್ ಸೈನಿಕರು ಮಾತ್ರವಲ್ಲದೆ, ಹೆಂಗಸರು, ಮಕ್ಕಳೂ ಸಹ ವಾಸವಾಗಿದ್ದರು. ಬಹಳ ಬಾರಿ ಬಾಂಬ್ ಗಳ ದಾಳಿಯಾದಗ ವಿಯ್ಟ್ ಕಾಂಗ್ ಯೋಧರು, ದಿನಗಟ್ಟಲೆ ಈ ಸುರಂಗಳಲ್ಲೆ ಇರಬೇಕಾಗುತ್ತಿತ್ತು. ಕತ್ತಲೆಯ ಜೊತೆಗೆ, ಸೊಳ್ಳೆ, ಇರುವೆ, ಹಾವು, ಚೇಳು, ಜೇಡ ಮತ್ತು ಹೆಗ್ಗಣಗಳ ಕಾಟ ಬೇರೆ. ಬಹಳಷ್ಟು ಜನ ಮಲೇರಿಯಾದ ಬೇಗೆಗೆ ತುತ್ತಾಗಿ ಸಾವನ್ನಪಿದರೆಂದು ಹೇಳುತ್ತಾರೆ

ಅಮೆರಿಕಾದ ಸೈನಿಕರು , ಸುರಂಗದೊಳಗೆ, ಬಿಸಿ ಟಾರ್, ಹೊಗೆ, ನೀರು ಸುರಿದರೂ ಈ ಗೆರಿಲ್ಲಾಗಳು, ಸುರಂಗದ ಕತ್ತಲಿನಲ್ಲಿ,ವಿವಿಧ ದಾರಿ ಹಿಡಿದು, ತಪ್ಪಿಸಿಕೊಳ್ಳುತ್ತಿದ್ದರು. ಅದರ ಜೊತೆ ಈ ಸುರಂಗಗಳನ್ನು ನಿರ್ನಾಮ ಮಾಡಲು ಅಮೆರಿಕಾದವರಿಂದ ಸತತ ಬಾಂಬ್ ಗಳ ದಾಳಿ ಬೇರೆ. ನಂತರದ ವರ್ಷಗಳಲ್ಲಿ ತರಬೇತಿ ಪಡೆದ ಅಮೆರಿಕೆಯ ಸೈನಿಕರು ಬೆಳಕಿನ ದೊಂದಿ, ಕತ್ತಿ ಹಿಡಿದು, ಇಂಚು ಇಂಚಾಗಿ ಈ ಸುರಂಗಗಳನ್ನು ಶೋಧಿಸಲು ಶುರುಮಾಡಿದರು. ಈ ಸೈನಿಕರನ್ನು ”ಸುರಂಗದ ಇಲಿ” ಗಳೆಂದು ಕರೆಯಲಾಗುತ್ತಿತ್ತು.ಈ ರೀತಿ ವರ್ಷಾನುಗಟ್ಟಲೆ ವಾಸಿಸಿ, ಆಧುನಿಕ ಆಯುಧಗಳು, ಬಾಂಬ್ ಗಳನ್ನು ಹೊಂದಿದ ವೈರಿಗಳನ್ನು ಎದುರಿಸಿದ ಈ ವಿಯಟ್ನಾಮ್ ಜನರ ದೃಢನಿಶ್ಚಯಕ್ಕೆ, ಪಟ್ಟಕಷ್ಟಕ್ಕೆ, ಎದುರಿಸಿದ ಸಾವುನೋವುಗಳಿಗೆ ಯಾವ ರೀತಿಯ ಹೋಲಿಕೆಯಿರುವುದೂ ಸಾಧ್ಯವಿಲ್ಲ.

ವಿಯಟ್ನಾಮ್ ಸರ್ಕಾರ ಈಗ ೧೨೧ ಕಿ ಮಿ ( ೭೫ ಮೈಲಿ) ಸುರಂಗವನ್ನು ರಕ್ಷಿಸಿ ಇದನ್ನು ಪ್ರವಾಸಿಗರಿಗೆ ನೋಡಲು ಅನುಕೂಲ ಮಾಡಿಕೊಟ್ಟಿದೆ. ಕೆಲವು ಭಾಗಗಳಲ್ಲಿ ಪ್ರವಾಸಿಗರು ಸುರಂಗದಲ್ಲಿ ಇಳಿದು ತೆವಳಿ ಹೊರಬರಬಹುದು. ಪ್ರವಾಸಿಗರಿಗಾಗಿ ಕೆಲವು ಸುರಂಗಗಳನ್ನು ದೊಡ್ಡದು ಮಾಡಿದ್ದಾರೆ. ಬೆಳಕಿಗಾಗಿ ವಿದ್ಯುತ್ ಅನುಕೂಲತೆಯನ್ನು ಈ ಸುರಂಗಗಳಲ್ಲಿ ಒದಗಿಸಿದ್ದಾರೆ. ವಿಯಟ್ ಕಾಂಗ್ ಯೋಧರು ತಿನ್ನುತ್ತಿದ್ದ ಆಹಾರದ ಸ್ಯಾಂಪಲ್ ಸಹ ಸಿಗುತ್ತದೆ. ಯುದ್ದದ ಬಗೆಗೆ ತಿಳಿಸಲು ಅಲ್ಲಲ್ಲಿ ಟಿ.ವಿ ಗಳ ವ್ಯವಸ್ಠೆಯಿದೆ. ಇದೊಂದು ಅಮೋಘ ರೀತಿಯ ನಿರ್ಮಾಣ, ಈ ಸುರಂಗಳು ಕು.ಚಿ ಜಿಲ್ಲೆಯಲ್ಲಿ ನೂರಾರು ಮೈಲಿಗಟ್ಟಲೆ ಇದೆ ಎನ್ನಲ್ಲಾಗುತ್ತದೆ.

ಇಲ್ಲಿನ ವಾರ್ ಮ್ಯೂಸಿಯಂ ನಲ್ಲಿ ಅಮೆರಿಕ ದೇಶ, ಇಲ್ಲಿಯ ಜನರನ್ನು ವಿಷಗಾಳಿಯಿಂದ, ಬಾಂಬ್ ಗಳಿಂದ, ಗೆರಿಲ್ಲಾ ಸೈನಿಕರಿಗೆ ಸಹಾಯ ಮಾಡುತ್ತಿರಬಹುದೆಂಬ ಸಂಶಯದಿಂದ ಮಕ್ಕಳು, ಹೆಂಗಸರು ಮುಗ್ಧರೆಂಬ ಭೇದಭಾವವಿಲ್ಲದೆ ಕೊಂದಿರುವ ಸಾವಿರಾರು ವಿಯಟ್ನಾಮಿಸ್ ಜನರ ಚಿತ್ರಗಳು ಮತ್ತು ಸಂದೇಶಗಳಿವೆ. ಇದು ಕಟುಕನ ಕಣ್ಣಿನಲ್ಲೂ ಕಂಬನಿ ತರಿಸುತ್ತದೆ.

೧೯೭೫ ರ ತನಕ ಒಂದೇಸಮನೆ ಯುದ್ಧದಲ್ಲಿ ಭಾಗಿಯಾಗಿದ್ದ ಈ ದೇಶ ಇತ್ತೀಚಿನ ವರ್ಷಗಳಲ್ಲಿ ಮಾಡಿರುವ ಪ್ರಗತಿ ನಿಜಕ್ಕೂ ಅಭಿನಂದನಾರ್ಹ.

“I appeal for cessation of hostilities, not because you are too exhausted to fight, but because war is bad in essence. You want to kill Nazism. You will never kill it by its indifferent adoption.”
― Mahatma Gandhi, Gandhi: An autobiography

ಡಾ. ದಾಕ್ಷಾಯಿಣಿ ಗೌಡ