‘ಅನಿವಾಸಿ’ಯಲ್ಲಿ ಅಕ್ಷರ ದೀಪಾವಳಿ!

ಹೂವು ಬಳ್ಳಿಗೆ ದೀಪ ;
ಹಸಿರು ಬಯಲಿಗೆ ದೀಪ ;
ಮುನಿಸು ಒಲವಿಗೆ ದೀಪ ;
ಕರುಣೆ ನಂದಾದೀಪ ಲೋಕದಲ್ಲಿ.

ಕತ್ತಲೆಯ ಪುಟಗಳಲಿ ;
ಬೆಳಕಿನ ಅಕ್ಷರಗಳಲಿ
ದೀಪಗಳ ಸಂದೇಶ ಥಳಥಳಿಸಲಿ !
- ಕೆ ಎಸ್ ನರಸಿಂಹಸ್ವಾಮಿ 

ಆತ್ಮೀಯ ಓದುಗರೇ, 
ದೀಪಾವಳಿ ಸಂಚಿಕೆ ಓದಿಗೆ ನಿಮಗೆ ಸ್ವಾಗತ, ಈ ಬಾರಿ ನಿಜಕ್ಕೂ ಅನಿವಾಸಿಯಲ್ಲಿ ಅಕ್ಷರ ದೀಪಾವಳಿ! 
ಡಾ ಜಿ ಎಸ್ ಶಿವಪ್ರಸಾದ್ ಅವರ - ''ಕಾರ್ತೀಕದ ಕತ್ತಲೆಯಲ್ಲಿ ''ಎಂಬ ಸಮಯೋಚಿತ ಕವನ. 
ಡಾ ಮುರಳಿ ಹತ್ವಾರ್ ಅವರ - ದೀಪಾವಳಿಯ ಆಶಯ ಹೊಮ್ಮಿಸುವ ಸುಂದರ ಕವನ. 
ಯೋಗೀಂದ್ರ ಮರವಂತೆ ಅವರ ಅನನ್ಯ ಶೈಲಿಯ ಬರಹ - ''ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು''
'ಅನಿವಾಸಿ' ಗೆ ಮೊದಲ ಬಾರಿಗೆ ಬರೆಯುತ್ತಿರುವ ಮಂಜುನಾಥ ಶ್ರೀನಿವಾಸಮೂರ್ತಿ ಮತ್ತು ಶಶಿಕಾಂತ್ ಅವರು ದೀಪಾವಳಿ ಹಬ್ಬದ ನೆನಪುಗಳನ್ನ ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
'ಅನಿವಾಸಿ'ಯ ಅಕ್ಷರ ಕಣಜ ಅಕ್ಷಯವಾಗಲಿ ಎಂಬ ಆಶಯದೊಂದಿಗೆ,ತಮ್ಮೆಲ್ಲರಿಗೂ ಮತ್ತೊಮ್ಮೆ ದೀಪಾವಳಿ ಹಬ್ಬದ ಶುಭಾಶಯಗಳು. 

- ಸಂಪಾದಕಿ    

ಕಾರ್ತೀಕದ ಕತ್ತಲೆಯಲ್ಲಿ – ಡಾ ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್, ಯು.ಕೆ

ಕಾರ್ತೀಕದ ಕತ್ತಲೆಯಲ್ಲಿ, ಮನೆ ಮನೆಗಳಲ್ಲಿ 
ದೀಪಗಳಿಂದ ದೀಪಗಳು ಬೆಳಗುವಲ್ಲಿ 
ಕವಿದ ಕತ್ತಲೆಯು ಕಳೆಯುವಲ್ಲಿ 
ಬೆಳಕಿನ ಹಬ್ಬ ದೀಪಾವಳಿ

ಢಮ್ ಎಂದು ಸಿಡಿದ ಅಬ್ಬರದ ಪಟಾಕಿಗಳು ಹಲವು
ಸಿಡಿಯಲಾರದೆ ತುಸ್ಸ್ ಎಂದ ಪಟಾಕಿಗಳು ಕೆಲವು
ನೀರಿಕ್ಷೆಯ ಪರೀಕ್ಷೆಗೆ ನಿಲುಕದ ವಿಫಲ ಯತ್ನಗಳು 
ಎಲ್ಲರನ್ನೂ ರಂಜಿಸಿ ಕೊನೆಗೆ ತಾವೇ ಬೂದಿಯಾದ ಧ್ವನಿಗಳು

ಜ್ವಾಲಾಮುಖಿಯಂತೆ ಬೆಂಕಿ ಉಗುಳುವ 
ಬಣ್ಣ ಬಣ್ಣದ ಕುಡಿಕೆಗಳು, ಅವಕಾಶ ಒದಗಿದಾಗ
ತಮ್ಮೊಡಲೊಳಗಿನ ಕಿಚ್ಚನ್ನು ಕಾರಿ  
ಹಗುರಾದ ಹೃದಯಗಳು 

ಗಿರವಿ ಅಂಗಡಿಯಲ್ಲಿ, ಪಾಲೀಷ್ ಪಡೆದು 
ಥಳ ಥಳಿಸುತ್ತಿರುವ ಬೆಳ್ಳಿ ದೀಪಗಳು 
ಲಕ್ಷ್ಮಿ ಪಟಕ್ಕೆ  ಹೂವಿನಲಂಕಾರಗಳು,
ಧೂಪ, ದೀಪ, ಮಂಗಳಾರತಿಗಳು 

ಅದರ ಕೆಳಗಿಟ್ಟ ವರ್ಷದ ಲೆಕ್ಕ ಪುಸ್ತಕದಲ್ಲಿ, 
ಚುಕ್ತವಾಗದೆ ಉಳಿದ ಹಳೆ ಸಾಲಗಳು 
ಏರುತ್ತಿರುವ ಬಡ್ಡಿ, ಚಕ್ರ ಬಡ್ಡಿಗಳು 
ಅದರ ಹಿಂದಿನ ಕಂಬನಿಗಳು, ಕಥೆಗಳು, ವ್ಯಥೆಗಳು 

ನಮ್ಮ ನಿಮ್ಮ ಮನೆಗಳಲ್ಲಿ 
ಬಣ್ಣ ಬಣ್ಣದ ರಂಗೋಲೆ ಚಿತ್ತಾರಗಳು 
ಶಿವಕಾಶಿ ಪಟಾಕಿ ಉದ್ದಿಮೆಯಲ್ಲಿ ಬತ್ತಿ ಹೊಸೆದ 
ಬಾಲಕರು ಕೈತೊಳೆದರೂ ಅಳಿಸಲಾಗದ 
ಕಪ್ಪು ಮಸಿಗಳು, ನನಸಾಗದ ಕನಸುಗಳು 

ದೇಶದ ಗಡಿ ಕಾಯುವ ಯೋಧರಿಗೆ 
ಆಗೊಮ್ಮೆ ಈಗೊಮ್ಮೆ ಸಿಡಿ ಮದ್ದುಗಳ ಮಧ್ಯೆ 
ಹಿಂದಿನ ದೀಪಾವಳಿಯ ನೆನಪುಗಳು, ನಿಟ್ಟುಸಿರುಗಳು  
ದೇಶದ ಬೆಳಕನ್ನೇ ಕಾಪಾಡುವ ಜವಾಬ್ದಾರಿಗಳು  

ಹಠಾತ್ತಾಗಿ ಬೀಸಿದ ಗಾಳಿಯಲ್ಲಿ,
ಅನಿರೀಕ್ಷಿತವಾಗಿ ಹೊಯ್ದ ಮಳೆಯಲ್ಲಿ, 
ಸೊಡರ ಕುಡಿಗಳು ಅತ್ತ ಇತ್ತ ಬಾಗಿ ದೀಪವಾರಿದಾಗ; 
ತಣ್ಣಗೆ ಮಲಗಿದವು ಹಣತೆಗಳು, 
ಮುಂದಿನ ದೀಪಾವಳಿಯ ನಿರೀಕ್ಷೆಯಲ್ಲಿ 

***************************************************************************************

ದೀಪಾವಳಿ ೨೦೨೧ – ಡಾ ಮುರಳಿ ಹತ್ವಾರ್

ಸಹಜನರ ಸುಕೃತಿಯ
ಗೆಳೆತನದ ಹಿರಿಸಿರಿಯ
ಹಣತೆಗಳ ಕಾಂತಿಯಲಿ
ಸವಿಸವಿಯ ಈ ಮನೆಯ 
ಮತ್ತೆ ಒಂದಾಗಿಸೋಣ!

ಸಹಮತಿಯ ಸಮ್ಮತಿಯ
ಚಿಗುರಿಸುವ ಬೇರುಗಳ
ಹಸಿರುಸಿರ ಶಾಂತಿಯಲಿ
ಸವಿಸವಿಯ ಈ ಧರೆಯ 
ಮತ್ತೆ ಸೊಂಪಾಗಿಸೋಣ!

ಸಮರಸದ ಸಂಪ್ರತಿಯ
ಸಿರಿತನದ ಬೆಳಕುಗಳ
ಹೊಸತನದ ಕ್ರಾಂತಿಯಲಿ
ಸವಿಸವಿಯ ಈ ಭುವಿಯ 
ಮತ್ತೆ ತಂಪಾಗಿಸೋಣ!

ದೀಪಾವಳಿ ಶುಭಾಶಯ.

ದೀಪಾವಳಿ ಆಶಯ: ಮುರಳಿ ಹತ್ವಾರರ ರಚನೆಗೆ ರಾಗ-ಧ್ವನಿ ಕೂಡಿಸಿರುವವರು ಅಮಿತಾ ರವಿಕಿರಣ.

***************************************************************************************

ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು – ಯೋಗೀಂದ್ರ ಮರವಂತೆ 

ಬ್ರಿಟನ್ನಿನ ಸದ್ಯದ ಪ್ರಾಕೃತಿಕ ಗುಂಗನ್ನು “ಬೋಳು, ವಣ, ಚಳಿ, ಖಾಲಿ, ಮೌನ” ಇತ್ಯಾದಿ ಶಬ್ದಗಳಿಂದ ವರ್ಣಿಸುತ್ತ ಬೇಸರ ಪಡುವ ಹೊತ್ತಲ್ಲಿ ಐದು ಸಾವಿರ ಮೈಲಿ ದೂರದ ನನ್ನೂರು ಮರವಂತೆಯ ಗದ್ದೆ ಬಯಲುಗಳು ಭತ್ತದ ಗಿಡಗಳಿಂದ ತುಂಬಿಸಿಕೊಂಡು ಗರ್ಭವತಿಯ ಕಳೆಯಲ್ಲಿ ಕುಳಿತಿರುತ್ತವೆ. ಮಾಗಿ ಚಿನ್ನದ ಬಣ್ಣಕ್ಕೆ ಬದಲಾದ ಭತ್ತದ ಗಿಡಗಳು ತೆನೆ ಹೊತ್ತು ಸಣ್ಣ ನಾಚಿಕೆಗೆ ಮತ್ತು ಸ್ವಲ್ಪ ಭಾರಕ್ಕೆ ತಲೆ ತಗ್ಗಿಸಿ, ಆಗಾಗ ಬೀಸುವ ಗಾಳಿಗೆ ಮಂದಹಾಸ ಬೀರುತ್ತಿರುತ್ತವೆ.  ಅಕಾಲದ  ಮಳೆಗೆ ತೊಯ್ದರೂ, ಗುಡುಗು ಸಿಡಿಲುಗಳ ಸದ್ದು ಬೆಳಕುಗಳಿಗೆ ಒಮ್ಮೆ ನಡುಗಿದರೂ ಮತ್ತೆ ಸಾವರಿಸಿಕೊಂಡು ಮಣ್ಣಿನ ಮಕ್ಕಳಲ್ಲಿ ಆಸೆಯನ್ನು ಹುಟ್ಟಿಸಿ ಆತಂಕ ನಿರೀಕ್ಷೆಗಳನ್ನು ಜೀವಂತವಾಗಿ ಇಟ್ಟಿರುತ್ತದೆ. ದಿನದ ಹೆಚ್ಚಿನ ಸಮಯವನ್ನು ಬ್ರಿಟನ್ ಕತ್ತಲೆಯನ್ನು ಧರಿಸಿ ಕಳೆಯುವ ಈ ಕಾಲದಲ್ಲಿ, ಭಾರತ ಬೆಳಕಿನ ಹಬ್ಬಕ್ಕೆ ಮತ್ತೆ ಸಜ್ಜಾಗುತ್ತಿರುವ ವೇಳೆಯಲ್ಲಿ, ಹೀಗೆಲ್ಲ ಹಗಲು ರಾತ್ರಿ ಎನ್ನದೆ ಕಾಡಿ ಸತಾಯಿಸುವ ಮರವಂತೆಯನ್ನು ಒಮ್ಮೆ ನೋಡಿ ಬರೋಣ ಎಂದು ಹೊರಟವನು ನಾನು. ನಾನು ವಾಸಿಸುವ ಬ್ರಿಸ್ಟಲ್ ನಿಂದ ಪ್ಯಾರಿಸ್ ಮುಖಾಂತರ ನದಿ ಸಾಗರ ಕಾಡು ಮರುಭೂಮಿ  ಪರ್ವತ ಕಂದರಗಳನ್ನು ಏರಿ ಹಾರಿ ಬೆಂಗಳೂರನ್ನು ತಲುಪುವ ವಿಮಾನವೊಂದರಲ್ಲಿ  ಟಿಕೇಟು ತೆಗೆಸಿಯಾಗಿದೆ. ಇದು ದೀಪಾವಳಿಯ ಆಸುಪಾಸಿನ ಸಮಯವಾದ್ದರಿಂದ “ಹಬ್ಬದ ಸೀಸನ್” ನ ಉತ್ಸಾಹ ಉನ್ಮಾದ, ಕರ್ನಾಟಕದ ನಗರಗಳಿಂದ ದಿಕ್ಕು ದೆಸೆಗಳಲ್ಲಿರುವ ಹಳ್ಳಿ ಊರುಗಳಿಗೆ ಓಡಾಡುವ ಬಸ್ಸುಗಳಷ್ಟೇ ವಿಮಾನಕ್ಕೂ ಅನ್ವಯಿಸುತ್ತದೇನೋ. ಕಿಕ್ಕಿರಿದು ತುಂಬಿದ ವಿಮಾನದಲ್ಲಿ ಮುಂದಲ್ಲದ, ಕಿಟಕಿಯ ಬದಿಗಲ್ಲದ ಕೊನೆಯ ಸಾಲಿನ ಸೀಟು ನನ್ನದಾಗಿದೆ. ಮತ್ತೆ ಕೊನೆಯ ಸೀಟುಗಳ ಅನುಭವ ಬಸ್ಸುಗಳಷ್ಟೇ ವಿಮಾನಗಳಲ್ಲಿ ಕೂಡ ಮಧುರ ಮತ್ತು ಭಯಂಕರ ಎನ್ನುವುದು ಈಗ ಗೊತ್ತಾಗಿದೆ. ವಾತಾವರಣದ ಪ್ರಕ್ಷುಬ್ದತೆ, ಗಾಳಿಯ ವೇಗ, ಒತ್ತಡಗಳ ಬದಲಾವಣೆಗೆ ವಿಮಾನದ ಬಾಲದ ಕಡೆಗಿರುವ ಸೀಟುಗಳು ಹೆಚ್ಚು ಸ್ಪಂದಿಸುತ್ತವೆ ಎನ್ನುವ ಪುಸ್ತಕದ ಸಿದ್ಧಾಂತಗಳೆಲ್ಲ ಇದೀಗ ಪ್ರಾಯೋಗಿಕವಾಗಿ ಮನದಟ್ಟಾಗಿವೆ. ಇಲ್ಲಿಂದ ಪ್ಯಾರಿಸ್ ಇಂದ ಬೆಂಗಳೂರಿನವರೆಗಿನ ಒಂಭತ್ತು ಘಂಟೆಗಳ ಪ್ರಯಾಣ ನಿದ್ರೆ, ಅಲುಗಾಟ, ಭಯ, ಕಾತರಗಳ ಸಾಂಗತ್ಯದಲ್ಲೇ ಕಳೆದು ಹೋಗಿದೆ.

ಮುಂದೆ ಬೆಂಗಳೂರಿನಿಂದ ಊರಿನ ತನಕದ ಪ್ರಯಾಣದ ಹೊಣೆ ಹೊತ್ತ  ನಮ್ಮ ಬಸ್ಸು ಸೂರ್ಯ ಮೂಡುವ ಮೊದಲೇ ಶಿರಾಡಿ ಘಾಟಿ ಇಳಿದು ಕರಾವಳಿಯ ಸೆಖೆ ವಲಯದೊಳಗೆ ಹೊಕ್ಕಿದೆ. ರಸ್ತೆಯ ಎರಡೂ ಕಡೆಗಳಲ್ಲಿ ಕೋಟೆಯಂತೆ ನಿಂತ ಸಾಲು ತೆಂಗಿನ ಮರಗಳು, ಅವುಗಳ ಹಿಂದೆ ಮರೆಯಲ್ಲಿ ಭತ್ತದ ಗದ್ದೆಗಳು. ನಡು ನಡುವೆ ರಸ್ತೆಯ ಏಕತಾನವನ್ನು ಭಂಗಗೊಳಿಸುವ ನದಿಗಳು ಸೇತುವೆಗಳು. ನಸುಕಿನಲ್ಲೇ ಹೊಳೆಯಿಂದ ಮರಳು ಎತ್ತಿ ದೋಣಿಯಲ್ಲಿ ತುಂಬಿಸುವ ಕಾಯಕ. ಈ ಎಲ್ಲ ನೋಟಗಳನ್ನು ಬೆಂಗಳೂರಿನಿಂದ ಜನರನ್ನು ಹತ್ತಿಸಿಕೊಂಡು ಬಂದು ಕರಾವಳಿಯ ವಿವಿಧ ಊರುಗಳಿಗೆ ತಲುಪಿಸುವ ದುರ್ಗಾಂಬ, ಸುಗಮ, ಕಾಮತ್, ವಿ ಆರ್ ಎಲ್ ಇತ್ಯಾದಿ ಬಸ್ಸುಗಳು ಕಿಟಕಿ ಕಣ್ಣುಗಳಲ್ಲಿ  ತುಂಬಿಕೊಳ್ಳುತ್ತ ಚಲಿಸುತ್ತಿವೆ. ತೆಂಗಿನ ತೋಪಿನ ಒಳಗಿಂದ ಆಗಷ್ಟೇ ಒಂದು ಚಂದದ ನಿದ್ರೆ ಮುಗಿಸಿ ಎದ್ದ ಬಿಸಿ ಕೆನ್ನೆಯ ಮಗುವಿನಂತೆ ಸೂರ್ಯ ಆಕಾಶದ ಏಣಿ ಹತ್ತುತ್ತಿದ್ದಾನೆ. ಇನ್ನು ಆ ಏಣಿ ಊರಿದ ನೆಲದ ಮೇಲೆ, ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳ ಕಡೆಗೆ ಸಾಗುವ  ರಸ್ತೆಗಳಲ್ಲಿ ಪ್ರತಿವರ್ಷದಂತೆ ಮಳೆಗಾಲದ ಅಖೇರಿಗೆ ಬಿದ್ದ ಹೊಂಡಗಳು ತಮ್ಮನ್ನು ಹಾದು ಹೋಗುವ ಎಲ್ಲರನ್ನೂ ಉಪಚರಿಸಿ ಮಾತನಾಡಿಸುವಂತೆ ನನ್ನನ್ನೂ ವಿಚಾರಿಸಿವೆ. ದಶಕದ ಹಿಂದೆ ಮಾದರಿ ರಸ್ತೆಯೆಂದು ಹೊಗಳಿಕೆ ಅಸೂಯೆಯನ್ನು ಪಡೆಯುತ್ತಿದ್ದ ಈ ರಾಷ್ಟ್ರೀಯ ಹೆದ್ದಾರಿ ವರ್ಷವೂ ವಿರೂಪಗೊಳ್ಳುವುದು  ಸಂಪ್ರದಾಯ ಆಗಿಬಿಟ್ಟಿದೆ. ಬಸ್ಸಿನ ಕೊನೆಯ ಸೀಟುಗಳಲ್ಲಿ ಆಸೀನರಾದವರು ತಮ್ಮ ಸುತ್ತಲಿನ ಯಾವ ಅಂದವನ್ನೂ ಗಮನಿಸದೆ, ತಡವಾಗಿ ಟಿಕೇಟು ತೆಗೆಸಿ ಈ ಸೀಟು ದೊರಕಿಸಿದ ತಮ್ಮ ಗೆಳಯನಿಗೂ, ವಾಯುವೇಗದಲ್ಲಿ ಗುಂಡಿಗಳನ್ನು ಲಂಘಿಸಿದ ಬಸ್ಸಿನ ಚಾಲಕನಿಗೂ, ಮತ್ತೆ ರಸ್ತೆಯ ಈ ಪರಿಸ್ಥಿತಿಗೆ ಕಾರಣೀಕರ್ತರು ಎನ್ನಲಾದ ವಾಹನ ದಟ್ಟಣೆ, ಅಧಿಕಾರಿಗಳು, ಮಂತ್ರಿ, ಸರಕಾರ ಎಲ್ಲರಿಗೂ ಬೈಯುತ್ತ ತಮ್ಮ ನಿಲ್ದಾಣ ಎಂದು ಬರುವುದೋ ಎಂದು ಕಾಯುತ್ತಿದ್ದಾರೆ. ಮರವಂತೆಯೊರೆಗಿನ ಬಸ್ಸು ಪ್ರಯಾಣದ “ಕೊನೆಯ ಸೀನ್” ಮತ್ತು “ಶುಭಂ”ನಂತೆ  ಎಡ ಬದಿಯಲ್ಲಿ ಸಮುದ್ರ ಭುಸುಗುಟ್ಟಿ ಹೆಡೆ ಎತ್ತಿ ನೊರೆ ಉಕ್ಕಿಸಿ ಮಾತಾಡಿಸುತ್ತಿದೆ, ಬಲಗಡೆಯಲ್ಲಿ ಸೌಪರ್ಣಿಕೆಯ ಎಂದಿನ ಪ್ರಶಾಂತತೆ ಮನಸ್ಸು ತುಂಬುತ್ತಿದೆ .

ಮುಂಜಾನೆ ಎದ್ದು ಬಲೆ, ದೋಣಿ, ತೊಳೆ, ಕೊಚ್ಚಕ್ಕಿ ಗಂಜಿಯ ಬುತ್ತಿ ಊಟ ಕಟ್ಟಿಕೊಂಡು ಮನೆಬಿಟ್ಟ ಮೀನುಗಾರರು, ಸಮುದ್ರದಲ್ಲಿ ಮೀನು ಹಿಡಿಯುವ ದೋಣಿಗಳ ವ್ಯೂಹ ರಚಿಸಿಕೊಂಡು ಶಿಕಾರಿಯಲ್ಲಿ ತೊಡಗಿದ್ದಾರೆ.  ಬ್ರಿಸ್ಟಲ್ ನಿಂದ ಹಾರಿದ ವಿಮಾನ, ಬೆಂಗಳೂರಿನಿಂದ ಹೊರಟ ಬಸ್ಸು, ದಾರಿಯುದ್ದಕ್ಕೂ ಕಂಡ ತೆಂಗಿನ ತೋಟ, ಗದ್ದೆ, ನದಿ ಸಮುದ್ರ ಇವುಗಳೊಟ್ಟಿಗೆ ಹೀಗೆ ನಿತ್ಯ ಕಾಯಕದ ಸಂಬಂಧ ಹೊಂದಿದವರ ನಡುವೆ ಜಗತ್ತಿನಲ್ಲಿ ನಾನೊಬ್ಬನೇ ನಿರುದ್ಯೋಗಿಯಂತೆ ಮರವಂತೆಯಲ್ಲಿ ಇಳಿದಿದ್ದೇನೆ.

 ದನ ಕರುಗಳು ಕೊಟ್ಟಿಗೆಯಿಂದ “ಅಂಬಾ” ಎಂದು ಕೂಗುವುದು, ಛಂಗನೆ ನೆಗೆಯುತ್ತ ಅಂಗಳದ ಸುತ್ತ ಬರುವುದು, ಕೋಳಿಗಳು ಗುಂಪಿನಲ್ಲಿ ಹುಂಜ ಹೆಂಟೆಗಳು ಚಳ್ಳೆ ಪಿಳ್ಳೆಗಳು ಒಬ್ಬರ ಮನೆಯ ತೋಟದಿಂದ ಇನ್ನೊಬ್ಬರ ಮನೆಯ ತೋಟಕ್ಕೆ ಹಾರುವುದು, ತೆಂಗಿನ ಕಟ್ಟೆಗಳನ್ನು ಕೆದುರುವುದು ಮತ್ತೆ ನಾಯಿಗಳು ಈ ಕೋಳಿ ಗುಂಪನ್ನು ಅವುಗಳ ಮನೆಯ ತನಕವೂ ಅಟ್ಟಿಸಿಕೊಂಡು ಹೋಗುವುದು – ಹತ್ತು ಘಂಟೆಗಳ ಹಿಂದೆ  ಬಿಟ್ಟು ಬಂದ ಪ್ರಪಂಚವನ್ನು ಪೂರ್ಣ  ಒರೆಸಿ ಮರೆಸಿವೆ . ಮಳೆಗಾಲದ ಕೊನೆಯಲ್ಲಿ ಕಂಡುಬರುವ ಹಚ್ಚಹಸಿರು ಗಿಡ ಮರಗಳ ರಾಶಿಯ ನಡುವೆ, ಕಳೆ ಗಿಡಗಳು, ನಾಚಿಕೆ ಮುಳ್ಳಿನ ಗಿಡಗಳೂ ಸೊಂಪಾಗಿ ಬೆಳೆದಿವೆ ಉಳಿದಿವೆ. ಇವರ ಇವುಗಳ ನಡುವೆ ನಾನು ಕೆಲವು ದಿನಗಳ ಕಾಲ ಬನಿಯನ್, ಪಂಚೆ ಉಟ್ಟು ಓಡಾಡುವ ಸುಖ,ಸ್ವಾತಂತ್ರ್ಯ, ಭೋಗವನ್ನು  ನೆನೆದು ಖುಷಿಯಲ್ಲಿದ್ದೇನೆ.

ನಮ್ಮೂರಿನ ಬಹುಪಾಲು ಜನರು ಒಂದೋ ಬೇಸಾಯಗಾರರು ಅಲ್ಲದಿದ್ದರೆ ಮೀನುಗಾರರು. ಭತ್ತದ ಗದ್ದೆಗಳು, ತೆಂಗಿನ ತೋಟಗಳು, ಸಮುದ್ರದ ಒಡಲೊಳಗಿನ ಮತ್ಸ್ಯಗಳೇ ಇವರ ಸಂಪತ್ತು. ಬೇಸಾಯಗಾರರ ಮಕ್ಕಳೆಲ್ಲ ಊರುಬಿಟ್ಟು ಬೊಂಬಾಯಿ ಬೆಂಗಳೂರಿಗೆ ಎಂದೋ ಜಾರಿದ್ದಾರೆ. ಮೀನುಗಾರರ ಮಕ್ಕಳು ಹಲವರು ಊರಲ್ಲೇ ನಿಂತಿದ್ದಾರೆ.ಜೀವನ ಶೈಲಿ, ಕುಲಕಸುಬು ನೀಡುವ ಪ್ರತಿಫಲ, ಬದುಕಿನ ಸವಾಲುಗಳಲ್ಲಿ ಮಳೆಯನ್ನು ನಂಬಿದವರಿಗೂ, ಸಮುದ್ರವನ್ನು ನಂಬಿದವರಿಗೂ ಬಹಳ ವ್ಯತ್ಯಾಸ. ಈ ವ್ಯತ್ಯಾಸದ ನಡುವೆಯೇ ವ್ಯವಸಾಯಗಾರರು ಮತ್ತು ಮೀನುಗಾರರಲ್ಲಿ ಬಹಳ ಜನ ಸೂರ್ಯ ಕಂತಿದ ಮೇಲೆ ಒಂದೇ ಸೂರಿನಡಿ ಕುಳಿತು ಮದ್ಯ ಹೀರುತ್ತಾರೆ. ಇವರನ್ನು ನೆನೆಯುತ್ತ “ಸಾಯಂಕಾಲ ಕುಡ್ಕಂದು ಕುಣಿಯುದು ಚಂದ, ಬೆಳಗಾತ ಎದ್ಕಂಡು ದುಡಿಯುದು ಚಂದ” ಅಂತ ಕುಂದಾಪ್ರದ ಕವಿಯೊಬ್ಬರು ಹೇಳಿದ್ದಿದೆ. ಕೆಲಸಕ್ಕೆಂದು ಊರು ಬಿಟ್ಟವನು ಹೀಗೆ ನೆಂಟನ ಹಾಗೆ ವರ್ಷಕ್ಕೊಮ್ಮೆ ಊರಿಗೆ ಬಂದಿಳಿಯುವ ನನ್ನ ಬಳಿ ಕೆಲವರು ಬೊಂಬಾಯಿ ಬೆಂಗಳೂರಲ್ಲಿರುವ ನನ್ನ ಸಹಪಾಠಿಗಳಾಗಿದ್ದ ತಮ್ಮ ಮಕ್ಕಳ ಬಗ್ಗೆ ಹೇಳಿಕೊಂಡು ಮೆತ್ತಗಾಗುತ್ತಾರೆ. ನನ್ನನ್ನೂ ಅವರ ಮಾತಿನಲ್ಲಿ ಕಟ್ಟಿ ನೆನಪಿನೊಡನೆ ಅಲೆಸಿ ಸುತ್ತಿಸಿ ದಣಿಸುತ್ತಾರೆ.  ಅಂತಹ ಕೆಲವು ಸಹಪಾಠಿ ಮಿತ್ರರು ಬೊಂಬಾಯಿಯಿಂದ ದೀಪಾವಳಿ ರಜೆಗೆಂದೋ, ದೈವದ ಹರಕೆ ತೀರಿಸಲೆಂದೋ ಊರಿಗೆ ಬಂದು, ಬಿಳಿ ಅಂಗಿ ತೊಟ್ಟು ಮೇಲಿನ ಎರಡು ಬಟನ್ ತೆಗೆದು ಮರಾಠಿ ಮಿಶ್ರಿತ ಹಿಂದಿ ಮಾತಾಡಿಕೊಂಡು ಈ ಸಲವೂ ಓಡಾಡುತ್ತಿದ್ದಾರೆ. ಬೊಂಬಾಯಿ ಹತ್ತಿರ ಆದದ್ದರ ಸಂಕೇತವೋ, ಮರವಂತೆ ಬೆಳೆಯುತ್ತಿರುವುದರ ಕುರುಹೋ ಈ ಮಕ್ಕಳ ಅಮ್ಮಂದಿರಾದ ರೈತ ಹೆಂಗಸರು “ಮಜ್ಜಿಗೆ, ರಜೆ” ಎನ್ನುವ ಕನ್ನಡದ ಶಬ್ದಗಳನ್ನು ಸಂಪೂರ್ಣ ಮರೆತು “ದಹಿ”, “ಚುಟ್ಟಿ” ಎನ್ನುವ ಶಬ್ದಗಳನ್ನು ಮಾತಿನಲ್ಲಿ ಬಳಸಲು ಆರಂಭಿಸಿದ್ದಾರೆ .

ದೀಪಾವಳಿಯಂತಹ ಹಬ್ಬಕ್ಕೆ, ದೈವದ ಹರಕೆಗೆ ಅಲ್ಲದಿದ್ದರೆ ಹೀಗೆ ಸುಮ್ಮನೆ, ರಜೆಗೆ ಊರಿಗೆ ಬಂದಿಳಿಯುವವರನ್ನು ಗಮನಿಸದೆ ಲೆಕ್ಕಿಸದೆ ಮೀನು ಹಿಡಿಯುವ ದೋಣಿಗಳು ಪ್ರತಿ ಮುಂಜಾನೆಯೂ ಸಮುದ್ರದಲ್ಲಿ ವ್ಯೂಹ ರಚಿಸುತ್ತಿವೆ; ತೆಂಗಿನ ತೋಟಗಳು ತೂಗಿ ಹಾಡಿ ಗುನುಗಿ ರಮಿಸುತ್ತಿವೆ.  ಭತ್ತದ ಕೊಯ್ಲಿಗೆ ಬೆಳಿಗ್ಗೆಯೇ ಹೋದವರು ಸೊಂಟದಲ್ಲಿ ಕತ್ತಿ ಸಿಕ್ಕಿಸಿಕೊಂಡು ತಲೆಯ ಮೇಲೆ ಹುಲ್ಲಿನ ಹೊರೆ ಹೊತ್ತು ಗದ್ದೆಯ ಸಪೂರ ಅಂಚಿನ ಮೇಲೆ ಹೆಜ್ಜೆ ಇಡುತ್ತ ಸಂಜೆಯಾಗುವಾಗ ಮನೆಗೆ ಮರಳುತ್ತಿದ್ದಾರೆ. ಕತ್ತಲಾಗುವುದರೊಳಗೆ ಹುಲ್ಲು ಕಟ್ಟುಗಳನ್ನು ಅಡಿಮಂಚಕ್ಕೆ ಬಡಿದು ಭತ್ತ ಉದುರಿಸಿ ತಿರಿ ಕಟ್ಟಿ ಶೇಖರಿಸುತ್ತಿದ್ದಾರೆ. ಬಲೆಯಲ್ಲಿ ಸಿಕ್ಕಿಬಿದ್ದ ಮೀನುಗಳ ಸಮೂಹ, ಅಂಗಳದಲ್ಲಿ ಗುಡ್ಡೆಯಾದ ಭತ್ತದ ರಾಶಿಯ ಚಿತ್ರ ಮೂಡುವ ಸಮಯದಲ್ಲೇ ಅಂಗಡಿಗಳ ಮುಂದೆ ನೇತು ಹಾಕಿದ್ದ ಆಕಾಶ ದೀಪಗಳು ಗೂಡು ದೀಪಗಳು ಒಂದೊಂದಾಗಿ, ಮನೆಮನೆಯ ಕಂಬ ಗೇಟು ಗೋಡೆಗಳ ಮೇಲೆ ಜೋತುಬೀಳುತ್ತಾ ಬೆಳಕಿನ ಹಾಡುಹಾಡುತ್ತ ಮೈಮರೆಯುತ್ತಿವೆ. ದೀಪಾವಳಿಯ ಆಗಮನವನ್ನು ಸಾರಿ ಹೇಳಿವೆ.  ಎಲ್ಲೋ ದೂರದಲ್ಲಿ ಕೇಳುವ “ಢಮ್ ಢಮ್” ಸದ್ದು ಕೇಳಿ, ಅಂಗಡಿಯ ಬದಿಗೆ ಕಟ್ಟಿರುವ ಪಟಾಕಿಗಳ ಚಿತ್ರ ಇರುವ ಬ್ಯಾನರ್ ಕಂಡು ನಮ್ಮೂರಿನ ಮಕ್ಕಳ ಕಣ್ಣಲ್ಲಿ ಮಿಂಚು  ಹೊಳೆಯುತ್ತಿದೆ. ಹಾಗಂತ ಈ ಮಕ್ಕಳ ಹೆತ್ತವರು ಹಿರಿಯರು, ಒಂದು ಮುಂಜಾವಿಗೆ ಬಲೆಯೊಂದರ ತುಂಬ ಮೀನು, ವರ್ಷವಿಡೀ ದಣಿದು ಬೀಜ ಬಿತ್ತಿ  ಬೆಳೆದು ಕೊಯ್ಯುವವರಿಗೆ ಬಯಸಿದಷ್ಟು ಬೆಳೆ, ತೆಂಗಿನ ಕೊನೆಗಳು ಹುಳ ಬೀಳದೆ ಬಲಿತು ಮಾರುಕಟ್ಟೆಯಲ್ಲಿ ಸೂಕ್ತ ದರ, ಇವೆಲ್ಲ ದೊರೆಯುವುದೇ ದೀಪಾವಳಿ ಮತ್ತು ಉಡುಗೊರೆ ಎಂದು ಹಾರೈಸುತ್ತಿದ್ದರೆ, ಇವರ ದೈನಿಕದ ಕಾತರ, ನಿರೀಕ್ಷೆ, ದುಗುಡ, ನೆಮ್ಮದಿ, ಸುಖ, ಸಾಂತ್ವನಗಳ ತಳಹದಿಯ ಮೇಲೆ ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ.  

***************************************************************************************

ನನ್ನೂರ ದೀಪಾವಳಿ – ಶಶಿಕಾಂತ್  ಹೆಚ್ ಟಿ 

ಶಶಿಕಾಂತ ಅವರು ಹುಟ್ಟಿ ಬೆಳೆದಿದ್ದು ಬೀರೂರಿನಲ್ಲಿ. ಫೋಟೋಗ್ರಫಿ, ಚಿತ್ರಕಲೆ, ಬರವಣಿಗೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಅವರು ಪ್ರಾಚ್ಯವಸ್ತು ಸಂಗ್ರಹಕಾರರು. – ಸಂ.

ದೀಪಾವಳಿ ಎಂದರೆ ದೀಪಗಳ ಹಬ್ಬ. ಹಬ್ಬದ ಹಿಂದಿನ ದಿನ ದೀಪಗಳನ್ನು ತಂದು ಬೆಳಗೆದ್ದು, ಎಣ್ಣೆ ಹಚ್ಚಿಕೊಂಡು ಅದರಲ್ಲೇ ಕ್ರಿಕೆಟ್ ಆಡಿ ಮಧ್ಯಾಹ್ನ ಸ್ನಾನ ಮಾಡಿ ನೆಕ್ಸ್ಟ್ ಸ್ಕೆಚ್ಚು ಪಟಾಕಿ.  ಮನೇಲಿ ಅಮ್ಮ ಅವರೆಲ್ಲ ಸ್ನಾನ ಮಾಡಿ ಬೆನಕನ ಮಾಡಿ ಎಲ್ಲಾ ಬಾಗಿಲುಗಳಿಗೆ ಬೆನಕನಿಟ್ಟು ಪೂಜೆ ಮಾಡುತ್ತಾರೆ.  ಊಟಕ್ಕೆ ಒಬ್ಬಟ್ಟು, ಸೀಕರಣೆ,  ಪಲ್ಯ, ಹಪ್ಪಳ, ಸೆಂಡಿಗೆ, ಬೋಂಡಾ, ಚಿತ್ರಾನ್ನ ಮಾಡುತ್ತಾರೆ.  ರಾತ್ರಿ ನಮ್ಮ ಚಿಕ್ಕಮಗಳೂರಿನ ದೇವಿರಮ್ಮನ ಬೆಟ್ಟಕ್ಕೆ ಆರತಿ ಮಾಡಿ, ಎಲ್ಲಾ ಹಿರಿಯರ ಕಾಲುಗಳಿಗೆ ನಮಸ್ಕಾರ ಮಾಡಿ, ಮಾಡಿರುವ ಸಿಹಿತಿಂಡಿಗಳನ್ನು ದೇವತೆಗೆ ನೈವೇದ್ಯ ಮಾಡಿ ರಾತ್ರಿ ಊಟ ಮಾಡ್ತಾರೆ.  ಊಟ ಆದ ಮೇಲೆ ಇರೋದು ಮಜಾ, ಅದೇ ಪಟಾಕಿ!  ಯಾರ್ ಮನೆಯಲ್ಲಿ ಜಾಸ್ತಿ ಪಟಾಕಿ ತಂದಿದ್ದಾರೆ, ರಾಕೆಟ್ ಎಷ್ಟಿದವೆ, ಆನೆ ಪಟಾಕಿ ಎಷ್ಟಿದವೆ, ಭೂಚಕ್ರ ಸುಸುರ್ಬತ್ತಿ ಇವನ್ನೆಲ್ಲ ಒಂದೊಂದಾಗಿ ಹಚ್ಚುತ್ತಾ ಬಂದರೆ ಬಹಳ ಚೆನ್ನಾಗಿರುತ್ತೆ.  ನಮ್ಮನೇಲಿ ಮಕ್ಕಳು ಜಾಸ್ತಿ ಇರೋದ್ರಿಂದ ಪಟಾಕಿ ಜಾಸ್ತಿ ಇರುತ್ತೆ.  ಪೂಜೆ ಮಾಡುವಾಗ ಹೂಕುಂಡ ಹಚ್ಚಿದರೆ ಮಜಾನೇ ಬೇರೆ. ಎಲ್ಲರ ಮನೆ ಮುಂದೆ ದೀಪಗಳನ್ನು ಪೂಜಿಸಿ ಇಟ್ಟಾಗ ದೀಪಗಳಿಂದ ಕಂಗೊಳಿಸುತ್ತಿರುವ ಬೀದಿಯನ್ನು ನೋಡೋಕೆ ಚೆಂದ.

****************************************************************************************

ದೀಪಾವಳಿ ನೆನಪುಗಳು – ಮಂಜುನಾಥ್ ಶ್ರೀನಿವಾಸಮೂರ್ತಿ. ಬೆಲ್ಫಾಸ್ಟ್ 

ಮಂಜುನಾಥ್ ಶ್ರೀನಿವಾಸಮೂರ್ತಿ ಮೂಲತಃ ಬೆಂಗಳೂರಿನವರು. ಸದ್ಯಕ್ಕೆ ಬೆಲ್ಫಾಸ್ಟ್ ನಲ್ಲಿ ವೃತ್ತಿ ಮತ್ತು ವಾಸ. ಸಂಗೀತ ಕೇಳುವುದು, ಪುಸ್ತಕ ಓದುವುದು, ಬರವಣಿಗೆ ಮತ್ತು ಚಾರಣ ಮೆಚ್ಚಿನ ಹವ್ಯಾಸಗಳು – ಸಂ.

ದೀಪಾವಳಿ ಭರತಖಂಡದಾದ್ಯಂತ ಆಚರಿಸುವ ದೊಡ್ಡ ಹಬ್ಬಗಳಲ್ಲೊಂದು.  ನಮ್ಮ ಎಲ್ಲಾ ಹಬ್ಬಗಳು ಸಂಭ್ರಮದ ಹಬ್ಬಗಳೇ.  ಆದರೆ  ಐದು ದಿನಗಳ ಈ ದೀಪಾವಳಿಯ ಸಂಭ್ರಮ, ಸಡಗರವೇ ಬೇರೆ.

ಬಾಲ್ಯದ ದಿನಗಳ ದೀಪಾವಳಿಯನ್ನ ಮೆಲುಕು ಹಾಕೋದೇ ಒಂದು ಆನಂದ.  ಆಗ ದೀಪಾವಳಿ ಅಂದ್ರೆ ನೆನಪಾಗುತ್ತಿದ್ದುದು ಹೊಸ ಬಟ್ಟೆ, ಕಜ್ಜಾಯ, ನೆರೆಹೊರೆಯರು-ಬಂಧುಗಳೊಂದಿನ ಒಡನಾಟ ಮತ್ತು ಪಟಾಕಿಯ ಸಂಭ್ರಮ.

ದೀಪಾವಳಿ ಬಂತೆಂದರೆ ಶಾಲೆಗಂತೂ ಮೂರು ದಿನ ರಜ.  ಆಹಾ ಸಂತೋಷವೋ ಸಂತೋಷ!  ಮೊದಲನೇ ದಿನ, ಬೆಳಗಾಗುತ್ತಲೇ  ಅಮ್ಮ ಬಂದು ನನ್ನನ್ನು,  ಅಕ್ಕನನ್ನು ಎಬ್ಬಿಸಿ ‘ಬಾವಿಯಿಂದ ನೀರು ಸೇದಿ, ಮನೇಲಿರೋ ಅರ್ಧ ತೊಟ್ಟಿ ನೀನು ತುಂಬು.. ಇನ್ನರ್ಧ ಇವಳು ತುಂಬಿಸಲಿ’ ಎಂದು ಕೆಲಸ ಹಚ್ಚಿಬಿಡುತ್ತ್ದಿದ್ದರು.  ಆಮೇಲೆ ಅವರು ಮನೆಯನ್ನು ಅಚ್ಚುಕಟ್ಟಾಗಿಸಿ, ಮನೆ ಮುಂದೆ ಗುಡಿಸಿ, ನೀರು ಹಾಕಿ, ಸ್ವಚ್ಛ ಮಾಡಿ, ರಂಗೋಲಿ ಹಾಕಿ ಅಲಂಕಾರ ಮಾಡುತ್ತಿದ್ದರು.  ಎಷ್ಟು ಬಿಂದಿಗೆ ನೀರು ಸೇದಿ ಸುರಿದರೂ ಆಪೋಷಣೆ ತೆಗೆದುಕೊಂಡು ಬಿಡುತ್ತಿದ್ದ ತೊಟ್ಟಿಯು ನಿಜಕ್ಕೂ ಅಕ್ಷಯ ಪಾತ್ರೆಯ ಅನುಭವ ಕೊಡುತ್ತಿತ್ತು.  ತುಂಬಿ ಮುಗಿಸುವ ಹೊತ್ತಿಗೆ ಅಪ್ಪ ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟಿ ಮುಗಿಸುತ್ತಿದ್ದರು.  ಮನೆಯೋ ಮದುವಣಗಿತ್ತಿಯೋ ಎಂಬಂತೆ ಇರುತ್ತಿತ್ತು ಮನೆಯ ಅಲಂಕಾರ.

ಮೊದಲ ದಿನವೇ ಪಟಾಕಿ ಡಬ್ಬದ ಉದ್ಘಾಟನೆಯಾಗಿ, ಮುಂದಿನ ಮೂರು ದಿನಕ್ಕೂ (ಆಸ್ತಿ ಹಂಚಿಕೆಯಂತೆ) ನನಗೂ, ಅಕ್ಕನಿಗೂ ಸರಿಯಾಗಿ ಪಟಾಕಿ ಹಂಚಿಕೆಯಾಗಿ ಬಿಡುತಿತ್ತು.

ಮರುದಿನ ಅಡಿಯಿಂದ ಮುಡಿಯವರೆಗೆ ಎಣ್ಣೆ ಹಚ್ಚಿಕೊಂಡು, ಹಿಂದಿನ ದಿನ ತುಂಬಿದ್ದ ತೊಟ್ಟಿಯ ನೀರಿನಿಂದ, ಗಂಗಾಸ್ನಾನ ಮುಗಿಸಿ, ಹೊಸ ಬಟ್ಟೆ ಧರಿಸಿ ಬರುವಷ್ಟರಲ್ಲಿ, ತುಪ್ಪದ ದೀಪಗಳ ಬೆಳಕಲ್ಲಿ ದೇವರ ಮನೆ ಮಿಗಿ ಮಿಗಿ ಹೊಳೆಯುತಿತ್ತು.  ದೇವರಿಗೆ ನಮಸ್ಕಾರ ಹಾಕಿ, ಊಟ ತಯಾರಾಗುವ ಮೊದಲೇ, ಹೊಟ್ಟೆ ಊಟಕ್ಕೆ ತಯಾರಾಗಿ ಬಿಡುತ್ತಿತ್ತು .

ಸಂಜೆಯಾಗುತ್ತಿದ್ದಂತೆಯೇ ಮನೆಯ ಮುಂದೆ ಹಚ್ಚಿದ್ದ ದೀಪಗಳು ಮತ್ತು ಹೂ ಕುಂಡ, ಸುರ್ ಸುರ್ ಬತ್ತಿ , ಭೂ ಚಕ್ರಗಳು ಕತ್ತಲನ್ನು ನುಂಗಿಹಾಕಿಬಿಡುತ್ತಿದ್ದವು.

ಅಷ್ಟಿಷ್ಟು ಪಟಾಕಿ ಸಿಡಿಸಿ ಮುಗಿಸಿದ ಮೇಲೆ ಕೊನೆಯಲ್ಲಿ ರಾಕೆಟ್ ಹಚ್ಚುವ ಕಾರ್ಯಕ್ರಮದ ಸರದಿ.  ಆಕಾಶದ ಕಡೆ ಮುಖ ಮಾಡಿ ಇಟ್ಟ ರಾಕೆಟ್ ಇನ್ನೇನು ಮೇಲೆ ಹಾರುವ ಸಮಯಕ್ಕೆ ಸರಿಯಾಗಿ, ನಿದ್ದೆ ಸಾಲದೇ ತರಗತಿಯಲ್ಲಿ  ತೂಕಡಿಸಿ  ಬೀಳುವ ತಲೆಯಂತೆ, ಬಲಕ್ಕೆ ಬಾಗಿ

ಪಕ್ಕದ ಮನೆಗೆ ನುಗ್ಗಿ  ಪಕ್ಕದ ಮನೆಯ ಆಂಟಿಯ ಸೀರೆಯಿಂದ ನುಸುಳಿ ಹೋದ  ಸಾಹಸಗಾಥೆಯೂ ಉಂಟು.

ದೀಪಾವಳಿ ಅಮಾವಾಸ್ಯೆ ದಿನ, ಲಕ್ಷ್ಮಿ ಪೂಜೆ ಜೋರು.  ಅಕ್ಕ ಪಕ್ಕದ ಸೇಟು ಮನೆಯವರಿಂದ ಸ್ವೀಟ್ ಬಾಕ್ಸುಗಳ ಆಗಮನ.  ಸಂಜೆ ಆಗುತ್ತಿದ್ದಂತೆ ಮನೆಯ ಸುತ್ತ ಮಣ್ಣಿನ ದೀಪ ಹಚ್ಚುವ ಕಾರ್ಯಕ್ರಮ ಶುರು.

ಪಾಡ್ಯಮಿ ದಿನ ಬಲೀಂದ್ರನ ಪೂಜೆ ಮತ್ತು ಗೋವಿಗೆ ನಮಸ್ಕಾರ ಹಾಕಿ ಬರುವ ವಾಡಿಕೆ.  ನಂತರ ಆನಂದಿಸುತ್ತಾ ಬಹು ಪ್ರಿಯವಾದ ಭೋಜನ ಸೇವನೆಯಿಂದ ಹೊಟ್ಟೆಯೊಳಗಿನ ಅಗ್ನಿದೇವನಿಗೆ ಆಹುತಿ ಕೊಡುವ ಕಾರ್ಯ.  ಕೊನೆಯ ದಿನ ದೊಡ್ಡಮ್ಮನ ಮನೆಯಲ್ಲಿ ಅಕ್ಕಂದಿರ ಔತಣದ ಊಟ.

ಪ್ರಸ್ತುತದಲ್ಲಿ,  ಅನಿವಾಸಿ ಭಾರತೀಯನಾಗಿದ್ದರೂ, ಆ ನೆನಪು, ಪ್ರತಿ ಸಂಪ್ರದಾಯದ ಅನುಸರಣೆಯ ಹಿನ್ನೆಲೆ, ಅರ್ಥ ಮತ್ತು ಮಹತ್ವ ಮನದಲ್ಲಿ ಅಚ್ಚಳಿಯದೆ ಉಳಿದಿದೆ.  ಬೆಂಗಳೂರಲ್ಲಿ ಆಚರಿಸುತ್ತಿದ್ದ ದೀಪಾವಳಿ ಮತ್ತು ಬೆಲ್ಫಾಸ್ಟ್ ನಲ್ಲಿ ಆಚರಿಸೋ ದೀಪಾವಳಿಯಲ್ಲಿ ಎಲ್ಲಿ ವ್ಯತ್ಯಾಸವಿದೆಯೋ ಗೊತ್ತಿಲ್ಲ; ಹಬ್ಬದ ಸಂಭ್ರಮ, ಸಂತೋಷದಲ್ಲಂತೂ ಎಳ್ಳಷ್ಟೂ ವ್ಯತ್ಯಾಸವಿಲ್ಲ.

ಮೊದಲ ದಿನ ನೀರು ತುಂಬುವುದು; ಎರಡನೆಯ ದಿನ ನರಕ ಚತುರ್ದಶಿಯ ದಿನ ದುಷ್ಟ ಸಂಹಾರದ ಸಂಕೇತ ಪಟಾಕಿ ಸಿಡಿಸಿ ಸದ್ದು ಮಾಡಿ ಸಂಭ್ರಮ; ಮೂರನೆಯ ದಿನ ಸಮುದ್ರ ಮಂಥನದಿಂದ ಲಕ್ಷ್ಮಿ ಉದಯಿಸಿದ ದಿನವಾದ್ದರಿಂದ ದೀಪಾವಳಿ-ಅಮಾವಾಸ್ಯೆಯಂದು ಧನ ಲಕ್ಷ್ಮಿ ಪೂಜೆ; ನಾಲ್ಕನೆಯ ದಿನ ಬಲಿಪಾಡ್ಯಮಿ – ಬಲಿಚಕ್ರವರ್ತಿಯ ಭಕ್ತಿ, ದಾನಶೀಲತೆಗೆ ಮೆಚ್ಚಿ ಭಗವಂತ ಪ್ರಸನ್ನನಾದ ದಿನ ಹಾಗೂ ಶ್ರೀ ಕೃಷ್ಣ  ಗೋವರ್ಧನ ಗಿರಿಯನ್ನೆತ್ತಿ ಗೋಸಮೂಹವನ್ನು ರಕ್ಷಿಸಿದ ದಿನ.  ಹಾಗೂ ಐದನೆಯ ದಿನ ಸೋದರರ ದಿನ ಅಥವಾ ಯಮದ್ವಿತೀಯ.

ಹೀಗೆ ದೀಪಾವಳಿಯ ಹಿನ್ನೆಲೆ, ಮಹತ್ವ ಮೆಲುಕು ಹಾಕುತ್ತಾ, ಈ ಸಲದ ದೀಪಾವಳಿಗೆ ನಿಮ್ಮೆಲ್ಲರಿಗೆ ಶುಭ ಕೋರುತ್ತೇನೆ.

ಕೊನೆಗೆ, ಕವಿ ಡಿ ಎಸ್ ಕರ್ಕಿಯವರ ಸಾಲುಗಳನ್ನು ನೆನೆಯುತ್ತಾ, ‘ನರನರವನ್ನೆಲ್ಲ ಹುರಿಗೊಳಿಸಿ ಹೊಸೆದು, ಹಚ್ಚೇವು ಕನ್ನಡ ದೀಪ’ ಎಂದು ಹಾಡುತ್ತಾ, ಕನ್ನಡ ರಾಜ್ಯೋತ್ಸವದ ಈ ಮಾಸದಲ್ಲಿ ಸಂತೋಷ ಸಂಭ್ರಮದಿಂದ ಸಿಹಿನುಡಿಯ ದೀಪಗಳ ಹಬ್ಬ ಆಚರಿಸೋಣ.

ಧನ್ಯವಾದಗಳು .

****************************************************************************************

ದೀಪಾವಳಿ …. ದೀಪಾವಳಿ …. ಬಂತು ಬೆಳಕಿನ, ಸಿಹಿತಿಂಡಿಗಳ, ನಗುಮೊಗಗಳ ದೀಪಾವಳಿ..

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಎನಿತು ಇನಿದು ಈ ಕನ್ನಡ ನುಡಿಯು 

ಮನವನು ತಣಿಸಿದ ಮೋಹನ ಸುಧೆಯು

 ಗಾನವ ಬೆರೆಯಿಸಿ ವೀಣೆಯ ದನಿಯೊಳು

ವಾಣಿಯ ನೇಪುರ ನುಡಿಸುತೆ ಕುಣಿಯಲು

 ಮಾಣದೆ ಮೆರೆಯುವ ಮಂಜುಲ ರವವೋ

 ಎನಿತು ಇನಿದು ಈ ಕನ್ನಡ ನುಡಿಯು

 – ಆನಂದಕಂದ 
ಇಂಥ ಮಧುರವಾದ ಭಾಷೆಯನ್ನು ಬಳುವಳಿಯಾಗಿ ಪಡೆದ ನಾವೇ ಧನ್ಯರು! ಅನಿವಾಸಿಯಲ್ಲಿ ರಾಜ್ಯೋತ್ಸವ ವಿಶೇಷ ಸಂಚಿಕೆಗೆಂದು ಲೇಖನ, ಕವನ,ನಾಡಗೀತೆ,ಅನುಭವ ಕಥನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದೇ ಎಂದು ಕೇಳಿದಾಗ ಪ್ರೀತಿ ಅಭಿಮಾನದಿಂದ ಬರೆದು,ಹಾಡಿ ಕಳಿಸಿದ ಅನಿವಾಸಿ ಓದುಗರೆಲ್ಲರಿಗೂ ವಂದನೆಗಳು. 
ಈ ಸಂಚಿಕೆಯಲ್ಲಿ ಗೌರಿ ಪ್ರಸನ್ನ ಮತ್ತು ಗಿರೀಶ್ ಪ್ರಸಾದ್ ಅವರು ರಾಜ್ಯೋತ್ಸವದ ನವಿರು ನೆನಪುಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಡಾ ರಾಮಶರಣ್ ಅವರು ಬರೆದ ”ಕಂಡಲ್ಲಿ ಕನ್ನಡ”ಎಂಬ ಸುಂದರ ಕವನವಿದೆ. ಜೊತೆಗೆ ‘ಅನಿವಾಸಿ’ಗೆ ಇದೇ  ಮೊದಲ ಬಾರಿ ಬರೆಯುತ್ತಿರುವ ಡಾ ಶ್ರೀಕಾಂತ ಕೃಷ್ಣಮೂರ್ತಿ ಅವರು ತಾಯಿ ‘ಕಾವೇರಿ’ ಯನ್ನು ತ್ರಿಪದಿಯಲ್ಲಿ ಪೋಣಿಸಿ ತಂದಿದ್ದಾರೆ. ಇದಲ್ಲದೆ ಈ ಸಂಚಿಕೆಯಲ್ಲಿ ತಮ್ಮರಾಜ್ಯೋತ್ಸವದೆನಪುಗಳನ್ನು ಬರೆಯುತ್ತಾ ಕನ್ನಡದ ಹಿರಿಯ ಕವಿಗಳಾದ ಸಾಲಿ ರಾಮಚಂದ್ರ ರಾಯರ – ಕನ್ನಡದ ನೆಲದ ಪುಲ್ಲೆನಗೆ. ಈ ಗೀತೆಯ ಹಿನ್ನೆಲೆ, ಇತಿಹಾಸವನ್ನ ಕವಿಯ ಮೊಮ್ಮಗ ಡಾ ಶ್ರೀವತ್ಸ ದೇಸಾಯಿ ಅವರು ಬರೆದಿದ್ದಾರೆ. ಮತ್ತು ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪನವರು ಅನಿವಾಸಿ ಕನ್ನಡಿಗರಿಗೆಂದೆ ಬರೆದಿರುವ – ”ಕಡಲಾಚೆಯ ಕನ್ನಡಿಗರ ಸ್ವಗತ” ಎನ್ನುವ ಎರಡು ಕನ್ನಡ ಗೀತೆಗಳಿವೆ. ಇವೆರಡನ್ನೂ ಈ ಸಂಚಿಕೆಗಾಗಿಯೇ ಹಾಡಿದ ವಿಡಿಯೋಗಳನ್ನು ಕೊಂಡಿಯನ್ನೊತ್ತಿ ’ಅನಿವಾಹಿನಿ’ಯಲ್ಲಿ ಕೇಳಿರಿ.

ಅನಿವಾಸಿ ಓದುಗರಿಗೆ ೬೬ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 

ಈ ವಿಶೇಷ ಸಂಚಿಕೆಯ ಓದಿಗೆ ನಿಮಗಿದೋ ಸ್ವಾಗತ 

-ಸಂಪಾದಕಿ 

 

ನನ್ನ ರಾಜ್ಯೋತ್ಸವದ ನೆನಪುಗಳು ಮತ್ತು ‘ನಾಡಗೀತೆ’ಯ ಪೂರ್ವೇತಿಹಾಸ – ಡಾ ಶ್ರೀವತ್ಸ ದೇಸಾಯಿ

ಇವೆಲ್ಲ ಹಳೆಯ ಮಾತುಗಳಾದರೂ ಈ ಲೇಖನದಲ್ಲಿ ಕೆಲವು ಎಲ್ಲರಿಗೂ ಗೊತ್ತಿರದ ಒಂದೆರಡು ಹೊಸ ಮಾಹಿತಿಯಿದೆ.

1956 ರಲ್ಲಿ ರಾಜ್ಯ ಏಕೀಕರಣಗೊಂಡರೂ ಕನ್ನಡ ಮಾತಾಡುವ ಈ ನಾಡನ್ನು ಅಧಿಕೃತವಾಗಿ ’ಮೈಸೂರು ಪ್ರಾಂತ ’ ಎಂದೇ ನಾವು ಶಾಲೆಯಲ್ಲಿದ್ದಾಗ ಕರೆಯುತ್ತಿದ್ದೆವು. ಆಗ ಒಂದು ಅಧಿಕೃತ ನಾಡಗೀತೆಯಿರಲಿಲ್ಲ. ’ಹಳೆಯ ಮೈಸೂರಲ್ಲಿ’ ಕುವೆಂಪು ಅವರು ಬರೆದ ’ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಗೀತೆ ಪ್ರಚಲಿತವಿದ್ದರೆ ಬೇರೆ ಕೆಲವು ಕನ್ನಡದ ದೇಶಭಕ್ತಿಯ ಗೀತೆಗಳು ಸಹ ನಾಡಗೀತೆಯೆಂದು ಕೆಲವರಿಂದ ಕರೆಯಲಾಗುತ್ತಿದ್ದವು. ಉದಾಹರಣೆಗಾಗಿ “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ” ಎಂಬ ಮೊದಲ ರಾಷ್ಟ್ರಕವಿ ಗೋವಿಂದ ಪೈ ವಿರಚಿತ ಹಾಡು ನಿರಂತರವಾಗಿ ಕನ್ನಡಿಗರ ತನುಮನ ಗಳಲ್ಲಿ ಮಾರ್ದನಿಸುತ್ತಿದ್ದ ’ನಾಡ ಭಕ್ತಿಗೀತೆ’ಯಾಗಿತ್ತು.  ಆ ಮೊದಲು ಮುಂಬಯಿ ಕರ್ನಾಟಕದಲ್ಲಿ ಸೇರ್ಪಡೆಯಾಗಿದ್ದ ನಾಲ್ಕು ಜಿಲ್ಹೆಗಳಲ್ಲಿ ಹುಯಿಲಗೋಳು ನಾರಾಯಣರಾಯರು ರಚಿಸಿದ ”ಉದಯವಾಗಲಿ ನಮ್ಮ ಕನ್ನಡ ನಾಡು” ಗೀತೆಯನ್ನೇ ಆಗ ನಾಡಗೀತೆಯೆಂದು ಕರೆಯಲಾಗುತ್ತಿತ್ತು ಮತ್ತು ನಾವೆಲ್ಲ ಶಾಲೆಯಲ್ಲಿ ಅದನ್ನು ಉತ್ಸಾಹದಿಂದ ಹಾಡುತ್ತಿದ್ದ ನೆನಪು. ಎಲ್ಲ ಸಾರ್ವಜನಿಕ ಸಮಾರಂಭಗಳಲ್ಲಿಯೂ ಅದನ್ನೇ ಹಾಡಲಾಗುತ್ತಿತ್ತು.  ’ಕರ್ನಾಟಕದ ಗತ ವೈಭವ’ವನ್ನು ಬರೆದು ಉತ್ತರ ಕರ್ನಾಟಕದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ದುಡಿದು ಕರ್ನಾಟಕದ ಕುಲಪುರೋಹಿತರೆಂದೇ ಜನರು ಕರೆಯುತ್ತಿದ್ದ ಆಲೂರು ವೆಂಕಟರಾಯರು ಸಾಧನಕೇರಿಯಿಂದ ಬೆಳಿಗ್ಗೆ ವಾಕಿಂಗ್ಘೋಗುತ್ತಿರುವಾಗ ನಮ್ಮ ಕಣ್ಣಿಗೆ ಬೀಳುತ್ತಿದ್ದರು. ಅವರು ಯಾವಾಗಲೂ ಬಿಳಿ ಗಡ್ಡ, ಶುಭ್ರವಾದ ಬಿಳಿ ನಿಲುವಂಗಿ, ಬಿಳಿ ಧೋತರ ಉಟ್ಟು, ನೆಟ್ಟನೆ ಬೆನ್ನು, ಕೈಯಲ್ಲೊಂದು ಕೋಲು ಹಿಡಿದು ಹೊರತರೆ ಅದೇನು ಗಾಂಭೀರ್ಯ! ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದೆ. ಹುಯಿಲಗೋಳು ನಾರಾಯಣರಾಯರದೋ ತಲೆಗೆ ರುಮಾಲು, ಬಿಳಿ ಕೋಟು ಮತ್ತು ಧೋತರ ಉಟ್ಟು ಒಂದು ಸಮಾರಂಭಕ್ಕೆ ಬಂದಾಗ ನೋಡಿದ ನೆನಪು. ಅವರು ಬರೆದ ನಾಡಗೀತೆಯ ಮೊದಲ ಸಾಲು ’ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’. ಚಲುವ, ಚೆಲುವ ಎರಡೂ ಪದಗಳು ಚಾಲ್ತಿಯಲ್ಲಿದ್ದರೂ ಅವರು ಬರೆದದ್ದು ’ಚಲುವ’. ಅದನ್ನು ತಪ್ಪಾಗಿ ಚೆಲುವ ಅಂತ ಬರೆದವರೇ ಹೆಚ್ಚು. ಅದು ಮೊದಲ ಬಾರಿ ಸ್ವಾಗತಗೀತೆಯಾಗಿ  1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ 43ನೆಯ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಅದರ ಉಗಮದ ಕಥೆ ಸ್ವಾರಸ್ಯಕರವಾಗಿದೆ. ಸ್ವಾಗತ ಕಮಿಟಿಯವರು ಒಂದು ಸ್ಪರ್ಧೆಯನ್ನಿಟ್ಟು ಹಾಡುಗಳನ್ನು ಆಹ್ವಾನಿಸಲಾಯಿತು. ಆಗ ನಾರಾಯಣರಾಯರು ಮಲೇರಿಯಾದಿಂದ ಹಾಸಿಗೆ ಹಿಡಿದಿದ್ದರು. ಅವರ ಮಿತ್ರರು ವೃತ್ತಪತ್ರಿಕೆಯನ್ನು ತೋರಿಸಿ ಅವರ ಗೆಳೆಯರು ’ನೀವು ಏಕೆ ಬರೆಯಬಾರದು’ ಎಂದು ಕೇಳಿಕೊಂಡರಂತೆ. ಅದೇ ಪ್ರೇರಣೆಯಾಗಿ ಅವರು ಬರೆದರು. ಅದು ಆಯ್ಕೆಯಾಯಿತು. ಅದನ್ನು ಅಲ್ಲಿ ಹಾಡಿದವರು ಧಾರವಾಡದ ಗವಯ್ಯಿ ಸುಬ್ಬರಾಯರು, ಸಾಮಾಜಿಕ ತಾಣಗಳಲ್ಲಿ, ವೃತ್ತ ಪತ್ರಿಕೆಗಳಲ್ಲಿ ಕಾಣ ಬರುವ ಹೆಸರು ’ಹನ್ನೊಂದು ವರ್ಷದ ಗಂಗೂ ಬಾಯಿ ಹಾನಗಲ್’ ಎನ್ನುವದು ತಪ್ಪು (ಆಧಾರ: ಡಾ ಜಿ ಡಿ ಜೋಶಿ ಬರೆದ ಪಿ ಹೆಚ್ ಡಿ ಗಾಗಿ ಬರೆದ ಪುಸ್ತಕ -ಮುಂಬಯಿ ವಿಶ್ವ ವಿದ್ಯಾಲಯ,1996). ಅದರಲ್ಲಿ ನಾರಯಣರಾಯರ ಸ್ವಹಸ್ತದಿಂದ ಬರೆದ ಆ ಗೀತೆ ಇದೆ. ಒಮ್ಮೆ ಎನ್ಕೆ ಕುಲಕರ್ಣಿಯವರು ಗಂಗೂಬಾಯಿಯವರ ಸಂದರ್ಶನದಲ್ಲಿ ಬರೆದ ಕೆಲ ಸಾಲುಗಳೆ ಆ ತಪ್ಪು ಗ್ರಹಿಕೆಗೆ ಮೂಲ ಎಂದು ನನಗೆ ತಿಳಿದು ಬಂದಿದೆ.

ಮೇಲೆ ಹೇಳಿದ ಆ 1924 ರ ಬೆಳಗಾವಿಯ ಅಧಿವೇಶನಕ್ಕೆ ಗಾಂಧೀಜಿಯವರು ಪ್ರಥಮ ಬಾರಿ ಕನ್ನಡ ನಾಡಿಗೆ ಬಂದಿದ್ದರು. ಅವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಹೆಮ್ಮೆ (ನನ್ನ ಅಜ್ಜ) ಸಾಲಿ ರಾಮಚಂದ್ರರಾಯರದಾಗಿತ್ತು (1888-1978) . ”ಅವರ ದೇಶಭಕ್ತಿ, ಗಾಂಧೀ ಪ್ರೀತಿ, ಭಾಷಾ ಪರಿಣತಿ ಮತ್ತು ಇತ್ತೀಚೆಗೆ ಸಾಧಿಸಿದ್ದ ಹಿಂದೀಭಾಷಾಜ್ಞಾನಕ್ಕಾಗಿ ಅವರನ್ನು ಆರಿಸಲಾಗಿತ್ತು”. (ಹೇಮಾ ಪಟ್ಟಣಶೆಟ್ಟಿ: ಸಾಲಿ ರಾಮಚಂದ್ರ ರಾಯ, ಸಾಹಿತ್ಯ ಅಕಾದೆಮಿ, 2012). ಅವರು 1939ರಲ್ಲಿ ವಾರ್ಧಕ ಷಟ್ಪದಿಯಲ್ಲಿ ರಚಿಸಿದ  ”ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ” ಎಂದು ಆರಂಭವಾಗುವ ಕವನವನ್ನು ಹಲವುಕಡೆ ’ನಾಡಗೀತೆ’ಯೆಂದು ಉಲ್ಲೇಖಿಸಲಾಗಿದೆ. ಅದಕ್ಕೆ ರಾಗಸಂಯೋಜನೆ ಮಾಡಿ ಅಮಿತಾ ರವಿಕಿರಣ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -1) ಅವರ ಹಸ್ತಾಕ್ಷರದಲ್ಲಿಯೇ ಬರೆದ ಕವನವನ್ನೂ ಇಲ್ಲಿ ಕೊಟ್ಟಿದೆ.

  ಭಾಷಾವಾರು ಪ್ರಾಂತಗಳ ವಿಂಗಡನೆಯಾದ ನಂತರ ಹೊಸ ಹೆಸರಿಡುವ ಆಂದೋಲನ ಶುರುವಾಯಿತು. ವಿಧಾನ ಸಭೆಯಲ್ಲಿ ’ಕರ್ನಾಟಕ’ ಎಂದು ಹೆಸರಿಡುವ ಬಗ್ಗೆ ಚರ್ಚೆ ನಡೆದಾಗ ದಕ್ಷಿಣ ಭಾಗದ ಸದಸ್ಯರು ವಿರೋಧಿಸಿ ಮಾತಾಡಿದ್ದು ನೆನಪಿದೆ. ಒಬ್ಬರ ವಾದ ಈಗಲೂ ಹಾಸ್ಯಾಸ್ಪದವೆನಿಸುತ್ತದೆ: ’ತಮಿಳಿನಲ್ಲಿ ಕರ್ನಾಡಗಮ್ ಎಂದರೆ ಹಳ್ಳಿ ಗಮಾರ ಎಂದು ಅಭಿಪ್ರಾಯ” ಎನ್ನುವ ನೆಪ. ಕರ್ನಾಟಕ ಎನ್ನುವ ಹೆಸರು ಅಧಿಕೃತವಾಗಿ ಅಂಗೀಕಾರವಾದದ್ದು 1973 ರಲ್ಲಿ. 1971-72 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಅವರ ಗೀತೆಯನ್ನು ’ನಾಡಗೀತೆ’ ಎಂದು ಘೋಷಿಸಿಯಾಗಿತ್ತು. ಆದರೆ ಸರಕಾರ ಹಾಗೆ ಮಾಡಿದ್ದು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ 2004 ರಲ್ಲಿ. ಆನಂತರವೂ ಆಗಿಂದಾಗ ಚರ್ಚೆ ವಿವಾದ ನಡೆದಿವೆ. ಅದು ಈ ಕಿರುಲೇಖನದ ವಸ್ತು ಅಲ್ಲವೆಂದು ಕೈಬಿಟ್ಟಿದ್ದೇನೆ.

( Govind Pai’s handwritten poem : “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ”By Mysore University Declaration certificate.pdf – Mysore University Declaration certificate.pdf, CC BY-SA 3.0, https://commons.wikimedia.org/w/index.php?curid=33265882 below

ಕವಿಗಳ ಹಸ್ತಾಕ್ಷರಗಳಲ್ಲಿ

ಕಡಲಾಚೆಯ ಕನ್ನಡ ಕುಲ ನಾವು – ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ಎರಡು ವರ್ಷಗಳ ಹಿಂದೆ ಕುವೈತ್ ನಿಂದ ಸ್ನೇಹಿತೆಯೊಬ್ಬರು ನನಗೆ ರಾಗ ಸಂಯೋಜನೆ ಮಾಡಿಕೊಡಲಾದೀತೇ ಎಂದು ಒಂದು ಕವಿತೆಯನ್ನು ಕಳಿಸಿದ್ದರು.ಕಡಲಾಚೆಯ ಕನ್ನಡಿಗರ ಸ್ವಗತ ಎನ್ನುವ ಈ ಕವಿತೆಯನ್ನು ಮೊದಲಬಾರಿ ಓದಿದಾಗಲೇ ತುಂಬಾ ಇಷ್ಟವಾಗಿತ್ತು. ಅನಿವಾಸಿ ಕನ್ನ್ನಡಿಗರ ಮನಸ್ಥಿತಿ, ವ್ಯಾಕುಲತೆ, ದೂರವಿದ್ದು ನಾಡಿನ ಗುಂಗಿನಲ್ಲಿರುವ ನಮ್ಮೆಲ್ಲರ ಮನದ ಮಾತಿನಂತಿದೆ ಈ ಕವಿತೆ. ನನ್ನ ಸಂಯೋಜನೆಯನ್ನ ‘ಅನಿವಾಸಿ’ಯ ಹೊಸ ಸದಸ್ಯೆ ಲೇಖಕಿ – ಗಾಯಕಿ ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -2)

 -ಅಮಿತಾ ರವಿಕಿರಣ್ 

ರಾಜ್ಯೋತ್ಸವದ ಸವಿ ನೆನಪು – ಗೌರಿ ಪ್ರಸನ್ನ

ಮತ್ತೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ. ಹೊರನಾಡಿನ ಕನ್ನಡಿಗರು, ಕನ್ನಡ ಸಂಘಗಳು ನಾಡು-ನುಡಿಯ ಪ್ರೇಮದಲ್ಲಿ ಮತ್ತೆ ಮಿಂದೇಳುವ ಶುಭ ಸಮಯ. ಎಲ್ಲರಿಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

     ‘ಅ ಆ ಇ ಈ ಕನ್ನಡದ ಅಕ್ಷರಮಾಲೆ -ಅಮ್ಮಾ ಎನುವುದೇ ಕಂದನ ಕರುಳಿನ ಕರೆಯೋಲೆ’ ಎನ್ನುವ ಗೀತೆ ಕೇಳುತ್ತಲೇ ಬಾಲ್ಯ ಕಳೆದದ್ದು. ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ‘ ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ’ ಹಾಡಿಗೆ ಮಾರುಹೋಗಿ ಏನೇ ಆದರೂ ಕನ್ನಡ ನಾಡಿನಿಂದ ಹೊರಗೆ ಹೋಗೆನೆಂಬ ಧೃಢಸಂಕಲ್ಪವನ್ನು ಮಾಡಿದ್ದೆಷ್ಟು ಬಾರಿಯೋ? ‘ಕೃಷ್ಣ  ಶರಾವತಿ ತುಂಗಾ ಕಾವೇರಿಯ ವರರಂಗಾ’ ಎಂದು ಮಧ್ಯಾಹ್ನ 11:00 ಗಂಟೆಗೆ ಶಾಲೆಯ ಪ್ರಾರ್ಥನೆಯಲ್ಲಿ  ನಾಡಗೀತೆಯನ್ನು ಹಾಡುತ್ತಿರುವಾಗ ಬಿಜಾಪೂರದ ಬಿರುಬಿಸಿಲಿನಲ್ಲೂ ಎದೆಯಲ್ಲಿ ತಣ್ಣನೆಯ ನದಿಯ ಪ್ರವಾಹವೊಂದು ಹರಿಯುತ್ತಿದ್ದುದು ಸುಳ್ಳಲ್ಲ. ನಿತ್ಯೋತ್ಸವದ ಕ್ಯಾಸೆಟ್ ‘ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ’ ಎಂದು ಹಾಡುತ್ತಿದ್ದರೆ ಮೈಯೆಲ್ಲ ಮುಳ್ಳೆದ್ದು ಹೃದಯದ ತುಂಬ ಹೆಮ್ಮೆಯ ಸಂಚಾರ.

  ಜೀವನದ ಮೊದಲ ಮೂರು ದಶಕಗಳಲ್ಲಿ ನಾಡು-ನುಡಿಗಳಿಂದ ದೂರವಾಗಬಹುದಾದ ಕಿಂಚಿತ್ ಕಲ್ಪನೆಯೂ ಇರಲಿಲ್ಲ. ಆದರೆ ನೆಲ-ನೀರು-ಅನ್ನದ ಋಣಗಳು ನಮ್ಮನ್ನು ಒಂದೆಡೆ ಇರಗೊಡುವುದಿಲ್ಲವೇನೋ? ನಾಡಿನಿಂದ ದೂರ ಬಹುದೂರವಿದ್ದರೂ ನುಡಿ ಮಾತ್ರ ಈಗಲೂ ಜೀವನಾಡಿ ಎಂಬುದೇ ಸಧ್ಯಕ್ಕಿರುವ ಸಮಾಧಾನ. ಕನ್ನಡದ ಹೊರತೆನಗೆ ಮತಿಯಿಲ್ಲ-ಗತಿಯಿಲ್ಲ.ನನ್ನ ಮಟ್ಟಿಗೆ ನನ್ನ ಇರವು,ಅರಿವು, ಖೂನು ಗುರುತು, ಮೂಲ ಬೇರು ಎಲ್ಲವೂ ಕನ್ನಡವೇ. ಕನ್ನಡದಿಂದ ಪ್ರತ್ಯೇಕಿಸಿಕೊಳ್ಳುವುದು ಸಾಧ್ಯವೇ ಇಲ್ಲವೇನೋ?

  ಕನ್ನಡವನ್ನು ನಾವು ಉಳಿಸಬೇಕು, ಬೆಳೆಸಬೇಕು ಅನ್ನುವುದು ಬಾಲಿಶವೆನಿಸುತ್ತದೆ ಒಮ್ಮೊಮ್ಮೆ. ನಮ್ಮನ್ನು ಉಳಿಸಿದ್ದು,ಬೆಳೆಸಿದ್ದು, ಬಾಳಿಸಿದ್ದೇ ಕನ್ನಡವೆನ್ನವುದು ಸೂಕ್ತವೆನ್ನಬಹುದೇನೋ?

 ಸಧ್ಯಕ್ಕೆ ನನ್ನಾಶೆ..’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ಬದುಕಿದರೆ ಕನ್ನಡ ನೆಲದಲ್ಲೇ ಬದುಕಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಮತ್ತದೇ ಮಣ್ಣಲ್ಲಿ ಮಣ್ಣಾಗಬೇಕು.’

“ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.”

*******************************************************************

ನನ್ನೂರಿನ ರಾಜ್ಯೋತ್ಸವದ ನೆನಪು ಗಳು – ಗಿರೀಶ ಪ್ರಸಾದ್

ನವೆಂಬರ್ ತಿಂಗಳಿಗೂ ನನಗೂ ಬಹಳ ವಿಶೇಷವಾದ ನಂಟು. ನಾನೊಬ್ಬ ಕನ್ನಡಿಗ ಎಂಬುದು ಒಂದು ಮುಖ್ಯ ಕಾರಣವಾದರೆ, ಆ ತಿಂಗಳಲ್ಲಿ ನನ್ನ ಹುಟ್ಟಿದ ದಿನ ಎಂಬುದು ಮತ್ತೊಂದು ಕಾರಣವಿರಬಹುದು. ರಾಜ್ಯೋತ್ಸವವೆಂದರೆ ನನಗೆ ಹುಟ್ಟಿದ ದಿನವಿದ್ದಂತೆ. ಹೇಗೆ ನಾವು ಕೇವಲ ಒಂದು ದಿನ ನಮ್ಮ ಹುಟ್ಟಿದ ದಿನ ಆಚರಿಸಿದರೂ ಪ್ರತಿ ನಿತ್ಯ ಜೀವನವನ್ನು ಸಂಭ್ರಮಿಸುತ್ತೇವೆಯೋ ಹಾಗೇ ರಾಜ್ಯೋತ್ಸವ ಕೂಡ. ಭಾಷೆಯನ್ನು ಸಂಭ್ರಮಿಸುವ, ಪ್ರೀತಿಸುವ , ಆಚರಿಸುವ ದಿನ. ನಾನು ಕಂಡಿರುವ ಸಂಭ್ರಮಿಸಿರುವ ರಾಜ್ಯೋತ್ಸವವೇ ಬೇರೆ ರೀತಿಯದು. “ನಾನು ನವೆಂಬರ್ ಕನ್ನಡಿಗನಲ್ಲ ” ಎಂದು ಹೇಳುವ ಪ್ರಮೇಯವೇ ಬರದಂಥ ಸ್ಥಳದಲ್ಲಿ ಹುಟ್ಟಿದವನು ನಾನು. ಅನೇಕ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು, ಒಂದೇ ಒಂದು ಆಂಗ್ಲ ಮಾಧ್ಯಮ ಶಾಲೆ ಇದ್ದ ಊರು ನನ್ನದು. ಸ್ವಾಭಾವಿಕವಾಗಿ ಕನ್ನಡವೇ ಪ್ರಧಾನ ವ್ಯವಹಾರ ಭಾಷೆ. ಯಾರಿಗೂ ಬೇರೆ ಭಾಷೆ ಕಲಿಯುವ ಧಾವಂತ ಇದ್ದಂತೆ ಕಾಣದ ಕಾಲವದು. ಇಂಥ ಒಂದು ಊರಲ್ಲಿ ಕನ್ನಡ ರಾಜ್ಯೋತ್ಸವ ಕೇವಲ ರಾಜ್ಯ ರಚನೆ ಆದ ದಿನ ಆಗದೆ, ನಮ್ಮತನವನ್ನ ಆಚರಿಸುವ ಹಬ್ಬದಂತಿರುತಿದ್ದುದು ವಿಶೇಷ. ಇಡೀ ಊರಿಗೇ ಊರೇ ಸೇರಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದುದ್ದು , ಎಲ್ಲಾ ಬಸ್ ಮಾಲೀಕರು, ಆಟೋ ಚಾಲಕರು ತಮ್ಮ ವಾಹನಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಊರಲೆಲ್ಲಾ ಓಡಾಡುತ್ತಿದ್ದುದ್ದು ನನ್ನ ಮನಸಲ್ಲಿ ಅಚ್ಚಳಿಯದೆ ಉಳಿದಿದೆ.

ಒಂದು ತಿಂಗಳಿಂದಲೇ ಎಲ್ಲಾ ೧೫ ಶಾಲೆಗಳಲ್ಲೂ ಕವಾಯಿತು , ವಿಶೇಷ ವೇಷ ಭೂಷಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ದತೆಗಳು ಜೋರಾಗಿರುತ್ತಿದ್ದವು. ಹಬ್ಬದ ದಿನ ಬೆಳಿಗ್ಗೆ ೭ ಗಂಟೆಗೆ ಎಲ್ಲಾ ಶಾಲೆಗಲ್ಲಿ ಧ್ವಜಾರೋಹಣದ ನಂತರ ಸಾಲಾಗಿ ಊರಿನ ಕೋಟೆ ಮೈದಾನದಲ್ಲಿ ಒಟ್ಟಿಗೆ ಸೇರಿ ಮತ್ತೊಮ್ಮೆ ಅಲ್ಲಿ ಧ್ವಜಾರೋಹಣದ ನಂತರ ಊರಿನ ಎಲ್ಲಾ ರಾಜಬೀದಿಗಳಲ್ಲಿ ಕವಾಯಿತು ನಡೆಸುವ ಸಂಭ್ರಮ ನೋಡಿಯೇ ತಿಳಿಯಬೇಕು. ಶಾಲಾ ಮಕ್ಕಳ ಕವಾಯಿತಿನ ಜೊತೆಗೆ ಅನೇಕ ಜಾನಪದ ಕಲೆ ಪ್ರಕಾರಗಳು ಅನಾವರಣ ಗೊಳ್ಳುತ್ತಿದ್ದ ರೀತಿ ಬಹಳ ವಿಸ್ಮಯಕಾರಿಯಾಗಿರುತಿತ್ತು .
ಒಂದು ವರ್ಷದ ವೇಷಭೂಷಣ ಸ್ಪರ್ಧೆಯಲ್ಲಿ ನನ್ನ ಕೃಷ್ಣ ದೇವರಾಯ ವೇಷಕ್ಕೆ ಬಹುಮಾನ ವಿಜೇತನಾಗಿದ್ದಲ್ಲದೆ ನನ್ನ ವೇಷದ ವೈಖರಿಗೆ ಮನಸೋತ ಆಯೋಜಕರು ನಮ್ಮ ಇಡೀ ಊರಿನಲ್ಲಿ ಆನೆಯ ಮೇಲೆ ನನ್ನ ಮೆರವಣಿಗೆ ನಡೆಸಿದ್ದು ಮನಸ್ಸಲ್ಲಿ ಅಚ್ಚ ಹಸಿರಾಗಿ ಉಳಿದಿರುವ ರಾಜ್ಯೋತ್ಸವ ನೆನಪುಗಳಲ್ಲೊಂದು .
ಬಹುಷಃ ಕಳೆದ 20 ವರ್ಷಗಳಲ್ಲಿ ನನ್ನೂರು ಬದಲಾಗಿರಬಹುದು .ಅಲ್ಲಿನ ಆಚರಣೆಗಳು ಬದಲಾಗಿರಬಹುದು, ಆದರೆ ಊರಿನ ಜನರ ಮನದಲ್ಲಿ ಈಗಲೂ ಭಾಷೆಯ ಬಗ್ಗೆ ಇರುವ ಒಲವು ಕಡಿಮೆ ಆಗಿಲ್ಲ.

ಈಗೀಗ ನನ್ನ ನಿರೂಪಣೆಯನ್ನು ನೋಡಿ, ಕೇಳಿ ಯಾರಾದರೂ ಬಂದು, ನಿಮ್ಮ ಕನ್ನಡ ಬಹಳ ಚೆನ್ನಾಗಿದೆ, ಭಾಷೆಯನ್ನ ಕಾಪಾಡಿಕೊಂಡಿದ್ದೀರಿ ಎಂದರೆ, ಹೆಮ್ಮೆ ಹಾಗೂ ಬೇಸರ ಎರಡೂ ಒಟ್ಟಿಗೆ ಆಗುತ್ತೆ. ಭಾಷೆಯ ಬಗ್ಗೆ ಹೆಮ್ಮೆ ಎನಿಸಿದರೆ, ಎಲ್ಲರ ಮನಸಲ್ಲಿ, ಮನೆಯಲ್ಲಿ ಮುಕ್ತವಾಗಿ, ಸುಲಲಿತವಾಗಿ ಹರಿದಾಡ ಬೇಕಿರುವ ಭಾಷೆಯನ್ನು ಕಾಪಾಡಿಕೊಳ್ಳುವ ಪ್ರಮೇಯ ಬಂದಿದೆಯಲ್ಲ ಎನ್ನುವುದು. ಅದೇನೇ ಇರಲಿ ಭಾಷೆಯ ಬಳಕೆ ನಿತ್ಯ ಮಂತ್ರವಾಗಿ ಮನ ಮನಗಳಲ್ಲಿ ಕನ್ನಡದ ಬೆಳಕು ಪಸರಿಸಲಿ .

ಜೈ ಕನ್ನಡಿಗ

ಕಂಡಲ್ಲಿ ಕನ್ನಡ – ಡಾ ರಾಮ್ ಶರಣ್

ದೂರದೂರಿನಲಿ ಮಿಡಿಯುತಿದೆ ಮನ
ಬೇಕೆಲ್ಲೆಲ್ಲೂ ಕನ್ನಡ ಪ್ರತಿದಿನ
ಕನ್ನಡಿಯಲ್ಲೇ ಕನ್ನಡ ಪ್ರತಿಫಲನ?
ಬಂದಿರುವುದೇಕೆಂಬುದೇ ನಿತ್ಯ ಮಥನ


ಮಂಜು ಹಾಕಿದ ಮುಸುಕಿನಲಿ
ಬಾಗಿ ಮರಗಳ ಸಾಲಿನಲಿ
ಚೆಲ್ಲಿ ಹರಡಿದ ಎಲೆಗಳಲಿ
ನಾಡ ಬಣ್ಣಗಳು ಕಂಡವಲ್ಲಿ


ಹಗುರು ಬಿಸಿಲಿನ ಕಾವಿನಲಿ
ರೆನ್, ರಾಬಿನ್ನುಗಳ ಇಂಚರದಿ
ವೀಕೆಂಡ್ ಕನ್ನಡ ಸಾಲೆಯಲಿ
ಚಿಣ್ಣರ ಕನ್ನಡ ಕಂಠದಲಿ


ದೂರದೂರಿನಲಿ ಮಿಡಿಯುತಿದೆ ಮನ
ದಿಟ್ಟಿಸಿದಲ್ಲಿಹುದು ಕನ್ನಡತನ
ಇರುವಲ್ಲಿ ಬಿತ್ತಿ ಬೆಳೆಯುವೆ ಅಣ್ಣ
ಕಂಡಲ್ಲಿ ಕನ್ನಡದ ಬಣ್ಣ
-ರಾಂ

( ಚಿತ್ರ ; ಡಾ ರಾಮ್ ಶರಣ್ )

*********************************************************************************

ಶ್ರೀಕಾಂತ್ ಕೃಷ್ಣಮೂರ್ತಿ ಅವರು ಬರ್ಮಿಂಗಹ್ಯಾಮ್ನಲ್ಲಿ consultant psychiatrist ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಗೀತದ ವಾಗ್ಗೇಯಕಾರರಾಗಿರುವ ಶ್ರೀಕಾಂತ್ ಅವರು ಕನ್ನಡ, ತಮಿಳು, ಸಂಕೇತಿ ಭಾಷೆಗಳಲ್ಲಿ ಹಾಡುಗಳನ್ನು ಬರೆದು ಸಂಯೋಜಿಸಿದ್ದಾರೆ. ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನ ಸಂಕೇತಿ ಅನುವಾದ ಮಾಡಿದ್ದಾರೆ. ಹೈಕು ಕವಿಗಳಾಗಿರುವ ಇವರು ಎರಡುವರ್ಷಗಳ ಕಾಲ British Haiku Society ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.”ephemere” ಎಂಬ ಹೈಕು ಪತ್ರಿಕೆಯನ್ನು ಕೂಡ ಪ್ರಕಟಿಸಿದ್ದಾರೆ.-ಸಂ

ಕಾಯೇ ಕಾವೇರೀ! – ಡಾ ಶ್ರೀಕಾಂತ್ ಕೃಷ್ಣಮೂರ್ತಿ

ಕುಣಿಯುತ್ತ ಸಾಗಿದ ಫಣಿವೇಣಿ ಹೆಣ್ಣಿಗೆ
ಮಣಿದು ತಾ ಬಂದು ಮಳೆರಾಯ ಕೂಡಿದ
ಅಣಿಯಾಗಾಷಾಡ ಮಾಸದಿ

ಅಮ್ಮ ನೀನೀವಾಗ ಬಿಮ್ಮನಸೆಯು ಜೋಕೆ
ಧುಮ್ಮಿಕ್ಕುವಾಗ ದುಡುಕೇಕೆ ದಯೆಮಾಡೆ
ನಮ್ಮಯ ಬಾಳು ನಲಿಯೋಕೆ

ಜಂಬವ ಬಿಟ್ಟೀಗ ತುಂಬಿದ ಬಸುರಿ ನೀ
ಅಂಬೋಧಿ ಕಡೆಗೆ ಹಾಯಾಗಿ ಎಲ್ಲರಿ-
ಗುಂಬುದಕಿತ್ತು ಹೊರಟೆಯಾ

ತಡೆದುಕೋ ದಮ್ಮಯ್ಯ ಮಿಡುಕದಿರಮ್ಮಯ್ಯ
ಹಡೆವಾಗ ನಮ್ಮ ಭಾಗ್ಯವನಾಚೀಚೆ
ದಡಗಳನೊಡೆದು ದಾಟೀಯ

ಹಸುಗೂಸು ಹುಟ್ಟಿದೆ ಹಸುರನು ತೊಟ್ಟಿದೆ
ತುಸು ಈಗ ತಲೆಯನೆತ್ತಿದೆ ತೊಡೆಮೇಲೆ
ಸಿಸುವಿಟ್ಟು ಉಣಿಸಿ ಹರಸಮ್ಮ

ಹೆಚ್ಚಿಗೆ ಕೊಟ್ಟೀಯ ಉಚ್ಚಿಕೊಂಡಾಮೇಲೆ
ಕೊಚ್ಚಿ ಹೋದೀತು ಕೂಸೆಮ್ಮ ಭಾಗ್ಯಕೆ
ಕಿಚ್ಚಿಡ ಬೇಡ ಕಾವೇರಿ

*********************************************************************

ಕೃಪೆ: ಹುಯಿಲಗೋಳ ನಾರಾಯಣರಾಯರ ಕವಿತೆಯ ಫೋಟೋ ಮತ್ತು ಮಾಹಿತಿ: ಹರ್ಷ ಡಂಬಳ್ ಅವರಿಂದ

1. ’ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ ’ -ಅಮಿತಾ ರವಿಕಿರಣ ಅವರು ಹಾಡಿದ್ದಾರೆ

2 ‘ಕಡಲಾಚೆಯ ಕನ್ನಡಿಗರ ಸ್ವಗತ” – ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ