ಫೋಟೋ ಕವನ ಸಂಚಿಕೆ ೨

ಹನಿಗಳು ಮತ್ತು ಹಾದಿಗಳು

ಕಾವ್ಯ ಕಟ್ಟುವ ಕೆಲಸ ಬಹಳ ಮೌಲಿಕವಾದದ್ದು. ಕವಿತೆಗಳು  ಏಕಾಂತದ ಕವಿತೆಗಳಾಗಿರಬಹುದು, ಲೋಕಾಂತದ ಕವಿತೆಗಳಾಗಿರಬಹುದು.  ಭಾವನಾತ್ಮಕ,  ಉತ್ಪ್ರೇಕ್ಷಿತ, ವೈಚಾರಿಕ, ವರ್ಣನಾತ್ಮಕ, ಪ್ರಾಮಾಣಿಕ ಯಾವುದೂ ಆಗಿರಬಹುದು. ಬಂಡಾಯ, ಖಂಡನೆ, ನೋವು, ವಿಡಂಬನೆ, ಹಾಸ್ಯ , ಶೃಂಗಾರ, ಪ್ರೀತಿ ವಿರಹ, ವಿದಾಯ, ವೇದನೆ, ಭಕ್ತಿ, ಬಿನ್ನಹದ ಕೇಂದ್ರಗಳನ್ನು ಹೊಂದಿರಬಹುದು. ಹೋಲಿಕೆ, ವೈರುಧ್ಯಗಳ ಹಾದಿಯನ್ನು ತುಳಿಯಬಹುದು. ಓದುಗರಿಗೆ ಲೌಕಿಕ, ಅಲೌಕಿದ ಅನುಭಗಳನ್ನು ನೀಡಬಲ್ಲದು.

ಕಾವ್ಯ ಓದುಗರನ್ನು ಮುದಗೊಳಿಸಬಲ್ಲವು. ಚಿಂತನೆಗೆ ತಳ್ಳಬಹುದು. ಭಾವ ಪರವಶತೆಯ ಅನುಭವ
ನೀಡಬಲ್ಲವು, ಸುಖಿಸುವಂತೆ ಮಾಡಬಲ್ಲವು, ನಗಿಸಬಲ್ಲವು, ಅಳಿಸಬಲ್ಲವು, ಅಚ್ಚರಿಗೆ ತಳ್ಳಬಹುದು, ಎಚ್ಚರಿಕೆಯನ್ನು ನೀಡಬಲ್ಲವು. ಜೀವನ ಪ್ರೀತಿಯನ್ನು ಹೆಚ್ಚಿಸಬಲ್ಲವು. ಕಾವ್ಯಕ್ಕೆ ಇರುವ ಹರವು ವಿಸ್ತಾರವಾದದ್ದು.ಅವುಗಳು ಹುಟ್ಟುವ ಸಮಯವನ್ನು ಕವಿ ಸಮಯ ಎನ್ನುತ್ತಾರೆ.

ಈ ವಾರದ ಛಾಯಾಗ್ರಾಹಕ ರಾಮಶರಣ ಲಕ್ಷ್ಮೀನಾರಾಯಣ ಮತ್ತು ಕವಿ ಕೇಶವ ಕುಲಕರ್ಣಿ. ಕವಿತ್ವವನ್ನು ಉದ್ದೀಪನಗೊಳಿಸಿ ಒರೆಗೆ ಹಚ್ಚಿರುವುದು  ರಾಮಶರಣರ  ಕ್ಯಾಮರಾ ಹಿಂದಿನ ಕಣ್ಣುಗಳು.  ಕಣ್ಣಿಗೆ ಕಂಡದ್ದನ್ನು ಹೀಗೇ ಸೆರೆಹಿಡಿಯಬೇಕೆನ್ನುವುದು. ಫೋಟಾಗ್ರಫಿ ಪ್ರಿಯರ ಆಸೆ.  ಅಂತಹ ಕ್ಷಣವನ್ನು ಸೆರೆಹಿಡಿದಾಗಿನ ಅದ್ಭುತ  ರೋಮಾಂಚನ ಅವರಿಗೆ ಕಾವ್ಯವನ್ನು ಬರೆದಷ್ಟೇ ಸಂತೋಷ ನೀಡಬಲ್ಲುದು.  ನೋಡಿದಾಗೆಲ್ಲ ಮತ್ತೆ,ಮತ್ತೆ ಅವರಲ್ಲಿ ಸಂತಸವನ್ನು ಹೆಚ್ಚಿಸಿ, ಹೆಮ್ಮೆಯ ಭಾವವನ್ನು ಮೂಡಿಸಬಲ್ಲವು.

ಛಾಯಾಚಿತ್ರ ತೆಗೆಯುವವರು ಒಂದು ಚಿತ್ರದ ಮೂಲಕ ಕೇವಲ ಒಂದು ದೃಶ್ಯವನ್ನು ಒದಗಿಸಿದರು,
ಅದನ್ನು ಕವಿಗಳ ಮುಂದೆ ಹಿಡಿದಾಗ ಕವಿಗೆ ಕಾಣುವ ನೋಟಗಳು ಅನೇಕ. ಈ ವಾರದ ವಿಶೇಷ ಕೂಡ
ಅದೇ.

 ರಾಮಶರಣರ ಅಚ್ಚರಿ ತರುವ ನಿಖರತೆ, ನಿಚ್ಚಳತೆ,  ತಾಂತ್ರಿಕತೆ, ಸೌಂದರ್ಯ ಮತ್ತು ಭಾವಗಳನ್ನು ತುಂಬಿದ  ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅವೇ ಚಿತ್ರಗಳು ಕೇಶವರಿಗೆ ಕವಿ ಸಮಯವನ್ನು ಒದಗಿಸಿವೆ.  ಕೆಲವು ಚಿತ್ರಗಳಂತೂ ಕವಿ ಮನಸ್ಸಿನಲ್ಲಿ ಹಲವು ಭಾವಗಳನ್ನು ಹೊಮ್ಮಿಸಲು ಸಮರ್ಥವಾಗಿವೆ.

ರಾಮಶರಣ್‌ ಒಂದೇ ವಿಷಯಕ್ಕೆ ಸಂಬಂಧಿಸಿದಂತ ಹಲವು ಚಿತ್ರಗಳನ್ನು ಒದಗಿಸಿ ಆ ಸರಣಿಗೆ ಒಂದು
ಶೀರ್ಷಿಕೆಯನ್ನು ನೀಡಿದ್ದರು. ಅದನ್ನೇ ಇಲ್ಲಿ ನೀಡಿದ್ದೇನೆ. ಕೇಶವ್‌ ಆ ಸರಣಿಯ ಒಂದು ಅಥವಾ ಹಲವು ಚಿತ್ರಗಳನ್ನು ಆಯ್ದು ಕವನಗಳನ್ನು ರಚಿಸಿದ್ದಾರೆ. ಇನ್ನೂ ವಿಶೇಷವೆಂದರೆ ತಾವೇ ಪೀಠಿಕೆಯ ಕಿರು ಗವನಗಳನ್ನು ಬರೆಯುತ್ತ ಒಂದು ಚಿತ್ರ ಹೇಗಿರಬೇಕೆಂದು ಹೇಳುತ್ತ ಜೊತೆಗೆ ಚಿತ್ರಕ್ಕೆ ಬರೆದ ಕವನದಲ್ಲಿ ಏನಿರಬಾರದೆಂದೂ ವಿವರಿಸಿದ್ದಾರೆ. ಅದು ಅವರ ಕುಶಲಮತಿ ಪ್ರತಿಭೆಗೆ ಸಾಕ್ಷಿಯಾಗಿದೆ.

ಓದಿರಿ. ಚಿತ್ರಗಳನ್ನು ಕೂಲಂಕುಶವಾಗಿ ಅವಲೋಕಿಸಿ. ಮತ್ತೆ ಓದರಿ. ಮರೆಯದೆ ಕಮೆಂಟಿಸಿ- ಸಂ


ಪೀಠಿಕೆಯ ಕಿರುಗವನಗಳು:

೧

ಒಂದು ಹೈಕುವನ್ನಾದರೂ

ಬರೆಸಿಕೊಳ್ಳದ ಫೋಟೊ

ಫೋಟೋನೇ ಅಲ್ಲ

೨

ಈ ಫೋಟೋದ ಸಂಯೋಜನೆ ಹೇಗೆ

ಎಷ್ಟು ISO

ಎಷ್ಟು ದ್ಯುತಿರಂಧ್ರ

ಎಷ್ಟು ನಾಭಿದೂರ

ಎಷ್ಟು ಸಂಸ್ಕರಣ

ಎಂದು ವಿವರಣೆ ಕೇಳಿದ ದಿನ

ಫೋಟೋದೊಳಗಿನ ಕವಿತೆ

ಸತ್ತುಹೋಗುತ್ತದೆ

ʼಹನಿಗಳು ಸರ್‌ ಹನಿಗಳುʼ ಸರಣಿ: `ಇಬ್ಬನಿಗಳು`

೧
ಜಗದ ಕೊಳೆಯ
ತೊಳೆಯೆ
ಇಳೆಗೆ ಬಂದೇ ಏನೇ
ಇಬ್ಬನಿ?
೨
ರಾತ್ರಿಯೆಲ್ಲ ಬಿಕ್ಕಳಿಸಿ
ಜಾರದೇ ಉಳಿದ ಕಂಬನಿ
ಇಬ್ಬನಿ
೩
ರಾತ್ರಿಯೆಲ್ಲ
ಅಪ್ಪಿತಬ್ಬಿ
ಅಪ್ಪಿತಪ್ಪಿ
ಉಳಿದ ಮುತ್ತಿನ ಹನಿ
ಇಬ್ಬನಿ
೪
ಮುಂಜಾವಿನ ಕೊರಳಿಗೆ
ವಜ್ರದ ಹರಳು
ಇಬ್ಬನಿ
೫
ನೇಸರನ ಸ್ವಾಗತಕೆ
ಥಳಿ ಹೊಡೆದ ನೀರು
ಇಬ್ಬನಿ

೬
ರಾತ್ರಿಯ ಸೆಕೆಗೆ
ಮೂಡಿದ ಬೆವರು
ಇಬ್ಬನಿ
೭
ಪ್ರೇಮಿಯ ಕೂದಲಿನ
ಅಂಚಿಗೆ ಉಳಿದ ಹನಿ
ಇಬ್ಬನಿ
೮
ಕಣ್ಣು ಬಿಟ್ಟ ಮಗು
ಅಮ್ಮನನ್ನು ಕಂಡ ಖುಷಿಯಲ್ಲಿ
ಮೂಡಿದ ಕಣ್ಣಂಚಿನ ಪಸೆ
ಇಬ್ಬನಿ
೯
ಮುಂಜಾವಿನೆದೆಯಿಂದ
ಉ
    ದು
  ರಿ
ಬೀಳುವ ಹನಿ
ಇಬ್ಬನಿ
೧೦
ಮತ್ತೆ ಬೆಳಗಾಯಿತು
ಮತ್ತೆ ಹೊಸಜೀವ ಬಂದಿತು
ನಿಸರ್ಗದ ಆನಂದ ಬಾಷ್ಪ
ಇಬ್ಬನಿ

೧೧
ರಾತ್ರಿ ಹೊತ್ತು
ಯಾವುದೋ ಕೀಟ ಮಾಡಿದ ಗಾಯಕ್ಕೆ
ಎಲೆ ಮೇಲೆ ಮೂಡಿದ ಗುಳ್ಳೆ
ಇಬ್ಬನಿ
೧೨
ಅನಂತದಲಿ ಬಿಂದು
ಬಿಂದುವಿನಲಿ ಅನಂತ
ಒಂದು ಮಂಜಿನ ಹನಿ
ಯೊಳಗೊಂದು ಬ್ರಹ್ಮಾಂಡ
೧೩
ಎಲೆಯ ಮೇಲೆ
ಮುಂಜಾವಿನ
ಮುತ್ತಿನ ಗುರುತು
ಸ್ವಲ್ಪ ಹೊತ್ತು
ಹಾಗೇ ಇರಲಿ ಬಿಡು
೧೪
ಪದಗಳಲ್ಲಿ
ಹುಡುಕಿದರೂ ಸಿಗದ ಕವಿತೆ
ಪುಟ್ಟ ಹುಲ್ಲಿನೆಳೆಯ ಮೇಲೆ
ಮುಂಜಾವಿನ ಮಂಜಿನೊಳಗೆ
ನಗುತ್ತ ಕಣ್ಬಿಡುತ್ತಿತ್ತು

*****

ʼಹೋದಲೆಲ್ಲ ಹಾದಿ ʼ ಸರಣಿ: 

೧. ಬೆಂಚಿನ ಸ್ವಗತ

೧
ಮುಂಜಾವಿನ ಬಾಗಿಲು ಅದೇ ತೆರೆದಿತ್ತು
ಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆ
ಬಂದು ನನ್ನ ಮೇಲೆ ಕೂತರು ಇಬ್ಬರು
ವಯಸ್ಸು ಎಪ್ಪತ್ತೋ ಎಂಬತ್ತೋ
ಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನು
ಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ
‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.
ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು
೨
ಕಾಲೇಜಿಗೆ ಚಕ್ಕರ್
ನನ್ನ ಮೇಲೆ ಹಾಜರ್
ಕಿಲಿಕಿಲಿ ನಗು
ಚಿಲಿಪಿಲಿ ಮಾತು
ಕದ್ದು ಕದ್ದು ಮುತ್ತು
ಹುಸಿಮುನಿಸು
ಅಳುನಟನೆ
ತುಂಟನಗು
‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು
‘ಈ ಬೆಂಚು ಇಲ್ಲಿರುವವರೆಗೂ,’ ಎಂದ
ಅವನ ಕೆನ್ನೆಗೊಂದು ಮುತ್ತು ಸಿಕ್ಕಿತು
೩
ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದು
ಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನು
ಇವನ ಡಬ್ಬ ಅವಳು ಹಂಚಿಕೊಂಡರು
ಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳು
ಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ
‘ನಮ್ಮ ಬದುಕು ಈ ಬೆಂಚಿನಂತೆ
ಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರು
ಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು
೪
ಈಗ ರಾತ್ರಿಯ ನೀರವಮೌನದಲ್ಲಿ
ಬೀದಿದೀಪಗಳ ಮಬ್ಬುಬೆಳಕಲ್ಲಿ
ಒಂಟಿಯಾಗಿ
ದಿನದ ನೂರಾರು ಕತೆಗಳ ನೆನೆಯುತ್ತ
ದಿನದ ಸಾವಿರಾರು ಕವನಗಳ ಕನವರಿಸುತ್ತ
ನಿದ್ದೆ ಬರದೇ
ಕೂತೇ ಇದ್ದೇನೆ

೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ

ಕಲ್ಲು ಮುಳ್ಳಿನ ಹಾದಿಯ
ನೆನಪುಗಳು ಕಳೆದಿಲ್ಲ
ಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳು
ಚುಚ್ಚಿಸಿಕೊಂಡ ಅಪಮಾನಗಳು

ಇಲ್ಲಿ ಎಲ್ಲ ಒಳ್ಳೆಯವರು
ಎಂಬ ನಂಬಿಕೆಯಲ್ಲಿ
ಹಲ್ಲು ಕೊರೆದ ಹಾದಿಯಲ್ಲಿ
ಜೊತೆಗೆ ಬಂದವರು
ನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರು

ಹೂವಿನ ದಾರಿಯ ಮೇಲೆ
ನಡೆಸುವೆ ಎಂದು ಭರವಸೆ ಕೊಟ್ಟವರು
ಹೂವಿನ ಜೊತೆ ಮುಳ್ಳೂ ಇರುತ್ತದೆ
ಎಂದು ಹೇಳುವುದನ್ನು ಮರೆತರು
ನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲ

ಅಲ್ಲಿಯೂ ಸಲ್ಲಲಿಲ್ಲ
ಇಲ್ಲಿಗೂ ಒಗ್ಗಿಕೊಳ್ಳಲಿಲ್ಲ
ದೇಶಬಿಟ್ಟ ಪರದೇಸಿ
ಕಲ್ಲಿಗಿಂತ ಕಲ್ಲಾಗಿ
ಪರಸಿಕಲ್ಲಿನ ಹಾದಿಯ ಮೇಲೆ
ಅಂಗಡಿ ಅಂಗಡಿಗಳಲ್ಲಿ
ನಡೆವ ಜನರ ಮುಖಗಳಲ್ಲಿ
ಸುಖ ಸಂತೋಷ ಹುಡುಕುತ್ತೇನೆ
ಹಾದಿಹೋಕ ನಾನು
ಹಾದಿಹೋಕನಾಗಿಯೇ ಉಳಿದಿದ್ದೇನೆ

ವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆ
ಹುಲ್ಲುಹಾಸಿನ ಹಾದಿಯ
ಫೋಟೋ ತೆಗೆದು
ಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆ

ಹೈವೇಯ ಸೈನ್-ಬೋರ್ಡುಗಳು
ಈಗ ನನ್ನ ಮಿತ್ರರು
ನನ್ನ ಕಾರಿನ ದಾರಿ ಹೇಳಿಕೊಡುವವರು
ಹಗಲು ಸಂಜೆ ಅದೇ ಹಾದಿ
ಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ
*
ಕಾಲ ಮಾಗುತಿದೆ
ದಾರಿ ಸವೆಯುತಿದೆ
ತಾಣದ ಮರೀಚಿಕೆ
ಹಾಗೇ ಉಳಿದಿದೆ
ಹಾಗೇ ಉಳಿದರೇ ಬದುಕೆ?

ಆಮಿಷ ಮತ್ತು ದರ್ಪಣ ಸುಂದರಿ       

ವಿಜಯ್ ಅವರ 'ಆಮಿಷ' ಮತ್ತು ಡಾ ಗುಡೂರ್ ಅವರ 'ದರ್ಪಣ ಸುಂದರಿ' ಎಂಬ ಎರಡು ಕವಿತೆಗಳು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕಂಡುಬರುವ ಶೃಂಗಾರ ರಸದ ಪ್ರತಿನಿಧಿಗಳಾಗಿವೆ. ಒಂದುವರೆ ಸಾವಿರ ವರುಷಗಳ ಹಿಂದೆ ಕಾಳಿದಾಸನ ಕೃತಿಗಳಲ್ಲಿ ಮೂಡಿಬಂದಿರುವ ಶೃಂಗಾರ ರಸ ಇಂದಿಗೂ ಕಾವ್ಯವಸ್ತುವಾಗಿ ಎಲ್ಲರ ಆಸಕ್ತಿಯನ್ನು ಕೆರಳಿಸಿದೆ. ಡಿವಿಜಿ ಅವರ ಅಂತಃಪುರಗೀತೆಗಳಲ್ಲಿ ಶೃಂಗಾರ ರಸ ಚೆನ್ನಕೇಶವನನ್ನು ಒಲಿಸುವ ಭಕ್ತಿ ಭಾವವೂ ಆಗಿ ಪರಿಣಮಿಸಿದೆ. ಈ ಗೀತೆಗಳಲ್ಲಿ ತರುಣಿಯ ಹಾವ, ಭಾವ, ನಟನೆ, ನೃತ್ಯ, ಕೇಶ, ವೇಷ, ಲಾವಣ್ಯಗಳು ಸುಂದರವಾಗಿ ಅಭಿವ್ಯಕ್ತಗೊಂಡಿದೆ. ಬೇಲೂರಿನ ದೇವಸ್ಥಾನದಲ್ಲಿ ಶಿಲ್ಪಕಲೆಯ ರೂಪದಲ್ಲಿ ಇದೆ ಶೃಂಗಾರ ರಸ ಇನ್ನೊಂದು ಆಯಾಮವನ್ನು ಪಡೆದುಕೊಂಡಿವೆ. ಪ್ರೇಮ, ಕಾಮ, ಪ್ರಕೃತಿ-ಪುರುಷ ಸಮ್ಮಿಲನ ವಿಷಯಗಳನ್ನು ಕುರಿತು ಕನ್ನಡದ ಅನೇಕ ಖ್ಯಾತ ಕವಿಗಳು ಬರೆದಿದ್ದರೆ. 

ಕುವೆಂಪು ಅವರ "ಬಾ ಚಕೋರಿ ಚಂದ್ರ ಮಂಚಕೆ, ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ, ನಿಕುಂಜ ರತಿವನ ಮದನ ಯಾಗಕೆ, ಅನಂಗ ರಕ್ತಿಯ ಬಿಂಬ ಭೋಗಕೆ, ಕಾಂಕ್ಷಿಯಾಗಿದೆ ನಗ್ನ ಯಾಗಕೆ" ಎಂಬ ಸಾಲುಗಳಲ್ಲಿ ಅನುರಕ್ತಿಯ ಆಕಾಂಕ್ಷೆಗಳು ಅಡಗಿವೆ. "ನೀನನಗೆ ನಾನಿನಗೆ ಜೇನಾಗುವ, ರಸದೇವ ಗಂಗೆಯಲಿ ಮೀನಾಗುವ, ರತಿ ರೂಪ ಭಗವತಿಗೆ ಮುಡಿಪಾಗುವ" ಎಂಬ ಕವನ ದಾಂಪತ್ಯ ಜೀವನದ ಸಿಹಿ ಸಂಬಂಧದ ಪ್ರತೀಕವಾಗಿದೆ ಮತ್ತು ಆ ಸಂಬಂಧದಲ್ಲಿನ ಒಂದು ಪಾವಿತ್ರ್ಯತೆಯನ್ನು ತೆರೆದಿಟ್ಟಿದೆ. ಜಿ.ಎಸ್.ಎಸ್ ಅವರ “ನೀನು ಮುಗಿಲು ನಾನು ನೆಲ, ನಿನ್ನ ಒಲವೇ ನನ್ನ ಬಲ, ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ. “ನಾನಚಲದ ತುಟಿಯೆತ್ತುವೆ ನೀ ಮಳೆಯೊಳು ಮುತ್ತನೀಡುವೆ, ಹಸಿರಾಯಿತು ಹೂವಾಯಿತು ಚೆಲುವಾಯಿತು ಈ ನೆಲ”! ಎನ್ನುತ್ತಾ ಗಂಡು ಹೆಣ್ಣುಗಳ ಮಿಲನವನ್ನು ನಿಸರ್ಗದ ಮಿಲನಕ್ಕೆ ಪ್ರತಿಮೆಗಳಾಗಿ ಬಳಸಿದ್ದಾರೆ. 

ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರು 'ಲಿಬಿಡೊ ಬಿಡುವುದಿಲ್ಲ' ಎಂಬ ಬಿಡಿ ಬರಹಗಳಲ್ಲಿ ಪುರುಷ-ಸ್ತ್ರೀ  ಸಂಬಂಧವನ್ನು ಕವಿ- ಕವಿತೆ  ಸಂಬಂಧಕ್ಕೆ ಹೋಲಿಸಿದ್ದಾರೆ. ಅವರದೇ ಒಂದು ಕವಿತೆಯ ಸಾಲು ಹೀಗಿದೆ; "ಕವಿ ವಿಶ್ವಾಮಿತ್ರನಿಗೂ ಖಾತ್ರಿ ತಪೋಭಂಗ, ಕವಿತೆ ಸ್ತ್ರೀ ಲಿಂಗ". 

 ಕೊನೆಯದಾಗಿ, ಪ್ರೇಮ ಕಾಮ ವಿಚಾರಗಳನ್ನು ಸಾಹಿತ್ಯದಲ್ಲಿ ತಂದಾಗ ಸಭ್ಯತೆಗೂ ಮತ್ತು ಅಶ್ಲೀಲಕ್ಕೂ ಇರುವ ಅಂತರ ಅತಿ ಸೂಕ್ಷ್ಮ. ಹೀಗಿರುವಾಗ ನಮ್ಮ ಕವಿಗಳಾದ ವಿಜಯ್ ಮತ್ತು ಡಾ. ಗುಡೂರ್ ಈ ವಿಷಯಗಳನ್ನು ಹದವಾಗಿ ನಿಭಾಯಿಸಿದ್ದಾರೆ. ಗುಡೂರ್ ಅವರು 'ಆಮಿಷ' ಎಂಬ ವಿಜಯ್ ಅವರ ಕವನಕ್ಕೆ ಒಪ್ಪುವ ರೇಖಾಚಿತ್ರವನ್ನು ಬರೆದು ಅಂದಗೊಳಿಸಿದ್ದಾರೆ. ಈ ಕವನ ಗುಚ್ಛ ವ್ಯಾಲಂಟೈನ್ ಡೇ ಸಂಚಿಕೆಗೆ ಸೂಕ್ತವಾಗಿದ್ದಿರಬಹುದು ಅಲ್ಲಿಯವರೆಗೆ ಕಾಯುವ ತಾಳ್ಮೆ ಕವಿಗೂ ಮತ್ತು ಕವಿತೆಗೂ ಇರಲಿಲ್ಲ! ಹೀಗಾಗಿ ಇಂಗ್ಲೆಂಡಿನ ಬೇಸಗೆಯಲ್ಲಿ ತಂಗಾಳಿಯಂತೆ ಇವು ಮೂಡಿಬಂದಿದೆ.

  -ಸಂಪಾದಕ 
ಆಮಿಷ
ರೇಖಾ ಚಿತ್ರ – ಡಾ. ಗುಡೂರ್ ಅವರಿಂದ
ಆಮಿಷ - ಕವನ 
ಕವಿ - ವಿಜಯ್ ನರಸಿಂಹ
 
ನಿನ್ನ 
ಹಣೆಗೊಂದು ಮುತ್ತನಿಟ್ಟೆ
ಕಂಗಳು ಮುನಿದವು 
ಕಂಗಳಿಗೆ ಮುತ್ತನಿಟ್ಟೆ 
ಕೆನ್ನೆಗಳು ಮುನಿದವು 
ಕೆನ್ನೆಗೆ ಮುತ್ತನಿಟ್ಟೆ 
ಗದ್ದ ಮುನಿಯಿತು 
ಗದ್ದಕೆ ಮುತ್ತನಿಟ್ಟೆ 
ತುಟಿಗಳು ಮುನಿದವು 
ತುಟಿಗಳ ಜೇನ ಸವಿದೆ 
ಕೊರಳು ಮುನಿಯಿತು 
ಕೊರಳ ಕಂಬಕೆ ಮುತ್ತನಿಟ್ಟೆ

ಮುನಿ-ಮುತ್ತಿನ ಮತ್ತಿನಾಟದಲಿ
ಮುಂದೇನಾಯಿತೆಂದು ತಿಳಿವಷ್ಟರಲ್ಲಿ 
ನಿನ್ನೊಳಗೆ ನಾನು
ನನ್ನೊಳಗೆ ನೀನು

********************************************************

ದರ್ಪಣ ಸುಂದರಿ - ಕವನ 
 
ಕವಿ - ಡಾ. ಲಕ್ಷ್ಮೀನಾರಾಯಣ ಗುಡೂರ್ 

ಮೊಗವ ತೋರು ಬಾರೆ ಸಖಿ, ಕನ್ನಡಿಯೊಳೆನ್ನ
ಮೊಗವ ತೋರು ಬಾರೆ ಸಖಿ ||
ಪ್ರಿಯಕರನ ಆಗಮನದ ನಿರೀಕ್ಷೆಯಲಿ ಕೆಂಪಾದ ||

ನಾಚಿಕೆಯೋ ಉತ್ಸಾಹವೋ ಒಂದೂ 
ನಾನು ಅರಿಯೆ |
ಇರಲಾರೆ ಒಂದೆಡೆಗೆ ಅದುರುತಿದೆ
ಮೈ ಬರಿಯೆ ||

ಪ್ರಿಯನ ತುಟಿ ಮುಟ್ಟದೆಯೇ ಕೆನ್ನೆ
ಏತಕೆ ಕೆಂಪು |
ಬರುವ ಮುನ್ನವೆ ನಾಸಿಕದಿ ಏಕೆ
ನಲ್ಲನ ಕಂಪು ||

ಇರು ನೀನು ಹತ್ತಿರದಿ ಸಖಿ, ಅವ
ಬರುವ ವರೆಗೆ |
ಹೆಜ್ಜೆ ಸದ್ದಾದೊಡನೆ, ಎಳೆ ಪರದೆ, ಹೋಗು
ನೀ ಹೊರಗೆ ||

***********************************************************