ಫೋಟೋ ಕವನ ಸಂಚಿಕೆ ೨

ಹನಿಗಳು ಮತ್ತು ಹಾದಿಗಳು

ಕಾವ್ಯ ಕಟ್ಟುವ ಕೆಲಸ ಬಹಳ ಮೌಲಿಕವಾದದ್ದು. ಕವಿತೆಗಳು  ಏಕಾಂತದ ಕವಿತೆಗಳಾಗಿರಬಹುದು, ಲೋಕಾಂತದ ಕವಿತೆಗಳಾಗಿರಬಹುದು.  ಭಾವನಾತ್ಮಕ,  ಉತ್ಪ್ರೇಕ್ಷಿತ, ವೈಚಾರಿಕ, ವರ್ಣನಾತ್ಮಕ, ಪ್ರಾಮಾಣಿಕ ಯಾವುದೂ ಆಗಿರಬಹುದು. ಬಂಡಾಯ, ಖಂಡನೆ, ನೋವು, ವಿಡಂಬನೆ, ಹಾಸ್ಯ , ಶೃಂಗಾರ, ಪ್ರೀತಿ ವಿರಹ, ವಿದಾಯ, ವೇದನೆ, ಭಕ್ತಿ, ಬಿನ್ನಹದ ಕೇಂದ್ರಗಳನ್ನು ಹೊಂದಿರಬಹುದು. ಹೋಲಿಕೆ, ವೈರುಧ್ಯಗಳ ಹಾದಿಯನ್ನು ತುಳಿಯಬಹುದು. ಓದುಗರಿಗೆ ಲೌಕಿಕ, ಅಲೌಕಿದ ಅನುಭಗಳನ್ನು ನೀಡಬಲ್ಲದು.

ಕಾವ್ಯ ಓದುಗರನ್ನು ಮುದಗೊಳಿಸಬಲ್ಲವು. ಚಿಂತನೆಗೆ ತಳ್ಳಬಹುದು. ಭಾವ ಪರವಶತೆಯ ಅನುಭವ
ನೀಡಬಲ್ಲವು, ಸುಖಿಸುವಂತೆ ಮಾಡಬಲ್ಲವು, ನಗಿಸಬಲ್ಲವು, ಅಳಿಸಬಲ್ಲವು, ಅಚ್ಚರಿಗೆ ತಳ್ಳಬಹುದು, ಎಚ್ಚರಿಕೆಯನ್ನು ನೀಡಬಲ್ಲವು. ಜೀವನ ಪ್ರೀತಿಯನ್ನು ಹೆಚ್ಚಿಸಬಲ್ಲವು. ಕಾವ್ಯಕ್ಕೆ ಇರುವ ಹರವು ವಿಸ್ತಾರವಾದದ್ದು.ಅವುಗಳು ಹುಟ್ಟುವ ಸಮಯವನ್ನು ಕವಿ ಸಮಯ ಎನ್ನುತ್ತಾರೆ.

ವಾರದ ಛಾಯಾಗ್ರಾಹಕ ರಾಮಶರಣ ಲಕ್ಷ್ಮೀನಾರಾಯಣ ಮತ್ತು ಕವಿ ಕೇಶವ ಕುಲಕರ್ಣಿ. ಕವಿತ್ವವನ್ನು ಉದ್ದೀಪನಗೊಳಿಸಿ ಒರೆಗೆ ಹಚ್ಚಿರುವುದು  ರಾಮಶರಣರ  ಕ್ಯಾಮರಾ ಹಿಂದಿನ ಕಣ್ಣುಗಳು.  ಕಣ್ಣಿಗೆ ಕಂಡದ್ದನ್ನು ಹೀಗೇ ಸೆರೆಹಿಡಿಯಬೇಕೆನ್ನುವುದು. ಫೋಟಾಗ್ರಫಿ ಪ್ರಿಯರ ಆಸೆ.  ಅಂತಹ ಕ್ಷಣವನ್ನು ಸೆರೆಹಿಡಿದಾಗಿನ ಅದ್ಭುತ  ರೋಮಾಂಚನ ಅವರಿಗೆ ಕಾವ್ಯವನ್ನು ಬರೆದಷ್ಟೇ ಸಂತೋಷ ನೀಡಬಲ್ಲುದು.  ನೋಡಿದಾಗೆಲ್ಲ ಮತ್ತೆ,ಮತ್ತೆ ಅವರಲ್ಲಿ ಸಂತಸವನ್ನು ಹೆಚ್ಚಿಸಿ, ಹೆಮ್ಮೆಯ ಭಾವವನ್ನು ಮೂಡಿಸಬಲ್ಲವು.

ಛಾಯಾಚಿತ್ರ ತೆಗೆಯುವವರು ಒಂದು ಚಿತ್ರದ ಮೂಲಕ ಕೇವಲ ಒಂದು ದೃಶ್ಯವನ್ನು ಒದಗಿಸಿದರು,
ಅದನ್ನು ಕವಿಗಳ ಮುಂದೆ ಹಿಡಿದಾಗ ಕವಿಗೆ ಕಾಣುವ ನೋಟಗಳು ಅನೇಕ. ವಾರದ ವಿಶೇಷ ಕೂಡ
ಅದೇ.

 ರಾಮಶರಣರ ಅಚ್ಚರಿ ತರುವ ನಿಖರತೆ, ನಿಚ್ಚಳತೆ,  ತಾಂತ್ರಿಕತೆ, ಸೌಂದರ್ಯ ಮತ್ತು ಭಾವಗಳನ್ನು ತುಂಬಿದ  ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅವೇ ಚಿತ್ರಗಳು ಕೇಶವರಿಗೆ ಕವಿ ಸಮಯವನ್ನು ಒದಗಿಸಿವೆ.  ಕೆಲವು ಚಿತ್ರಗಳಂತೂ ಕವಿ ಮನಸ್ಸಿನಲ್ಲಿ ಹಲವು ಭಾವಗಳನ್ನು ಹೊಮ್ಮಿಸಲು ಸಮರ್ಥವಾಗಿವೆ.

ರಾಮಶರಣ್‌ ಒಂದೇ ವಿಷಯಕ್ಕೆ ಸಂಬಂಧಿಸಿದಂತ ಹಲವು ಚಿತ್ರಗಳನ್ನು ಒದಗಿಸಿ ಸರಣಿಗೆ ಒಂದು
ಶೀರ್ಷಿಕೆಯನ್ನು ನೀಡಿದ್ದರು. ಅದನ್ನೇ ಇಲ್ಲಿ ನೀಡಿದ್ದೇನೆ. ಕೇಶವ್‌ ಸರಣಿಯ ಒಂದು ಅಥವಾ ಹಲವು ಚಿತ್ರಗಳನ್ನು ಆಯ್ದು ಕವನಗಳನ್ನು ರಚಿಸಿದ್ದಾರೆ. ಇನ್ನೂ ವಿಶೇಷವೆಂದರೆ ತಾವೇ ಪೀಠಿಕೆಯ ಕಿರು ಗವನಗಳನ್ನು ಬರೆಯುತ್ತ ಒಂದು ಚಿತ್ರ ಹೇಗಿರಬೇಕೆಂದು ಹೇಳುತ್ತ ಜೊತೆಗೆ ಚಿತ್ರಕ್ಕೆ ಬರೆದ ಕವನದಲ್ಲಿ ಏನಿರಬಾರದೆಂದೂ ವಿವರಿಸಿದ್ದಾರೆ. ಅದು ಅವರ ಕುಶಲಮತಿ ಪ್ರತಿಭೆಗೆ ಸಾಕ್ಷಿಯಾಗಿದೆ.

ಓದಿರಿ. ಚಿತ್ರಗಳನ್ನು ಕೂಲಂಕುಶವಾಗಿ ಅವಲೋಕಿಸಿ. ಮತ್ತೆ ಓದರಿ. ಮರೆಯದೆ ಕಮೆಂಟಿಸಿ- ಸಂ


ಪೀಠಿಕೆಯ ಕಿರುಗವನಗಳು:

ಒಂದು ಹೈಕುವನ್ನಾದರೂ

ಬರೆಸಿಕೊಳ್ಳದ ಫೋಟೊ

ಫೋಟೋನೇ ಅಲ್ಲ

ಈ ಫೋಟೋದ ಸಂಯೋಜನೆ ಹೇಗೆ

ಎಷ್ಟು ISO

ಎಷ್ಟು ದ್ಯುತಿರಂಧ್ರ

ಎಷ್ಟು ನಾಭಿದೂರ

ಎಷ್ಟು ಸಂಸ್ಕರಣ

ಎಂದು ವಿವರಣೆ ಕೇಳಿದ ದಿನ

ಫೋಟೋದೊಳಗಿನ ಕವಿತೆ

ಸತ್ತುಹೋಗುತ್ತದೆ

ʼಹನಿಗಳು ಸರ್‌ ಹನಿಗಳುʼ ಸರಣಿ: `ಇಬ್ಬನಿಗಳು`

ಜಗದ ಕೊಳೆಯ
ತೊಳೆಯೆ
ಇಳೆಗೆ ಬಂದೇ ಏನೇ
ಇಬ್ಬನಿ?
ರಾತ್ರಿಯೆಲ್ಲ ಬಿಕ್ಕಳಿಸಿ
ಜಾರದೇ ಉಳಿದ ಕಂಬನಿ
ಇಬ್ಬನಿ
ರಾತ್ರಿಯೆಲ್ಲ
ಅಪ್ಪಿತಬ್ಬಿ
ಅಪ್ಪಿತಪ್ಪಿ
ಉಳಿದ ಮುತ್ತಿನ ಹನಿ
ಇಬ್ಬನಿ
ಮುಂಜಾವಿನ ಕೊರಳಿಗೆ
ವಜ್ರದ ಹರಳು
ಇಬ್ಬನಿ
ನೇಸರನ ಸ್ವಾಗತಕೆ
ಥಳಿ ಹೊಡೆದ ನೀರು
ಇಬ್ಬನಿ

ರಾತ್ರಿಯ ಸೆಕೆಗೆ
ಮೂಡಿದ ಬೆವರು
ಇಬ್ಬನಿ
ಪ್ರೇಮಿಯ ಕೂದಲಿನ
ಅಂಚಿಗೆ ಉಳಿದ ಹನಿ
ಇಬ್ಬನಿ
ಕಣ್ಣು ಬಿಟ್ಟ ಮಗು
ಅಮ್ಮನನ್ನು ಕಂಡ ಖುಷಿಯಲ್ಲಿ
ಮೂಡಿದ ಕಣ್ಣಂಚಿನ ಪಸೆ
ಇಬ್ಬನಿ
ಮುಂಜಾವಿನೆದೆಯಿಂದ
    ದು
  ರಿ
ಬೀಳುವ ಹನಿ
ಇಬ್ಬನಿ
೧೦
ಮತ್ತೆ ಬೆಳಗಾಯಿತು
ಮತ್ತೆ ಹೊಸಜೀವ ಬಂದಿತು
ನಿಸರ್ಗದ ಆನಂದ ಬಾಷ್ಪ
ಇಬ್ಬನಿ

೧೧
ರಾತ್ರಿ ಹೊತ್ತು
ಯಾವುದೋ ಕೀಟ ಮಾಡಿದ ಗಾಯಕ್ಕೆ
ಎಲೆ ಮೇಲೆ ಮೂಡಿದ ಗುಳ್ಳೆ
ಇಬ್ಬನಿ
೧೨
ಅನಂತದಲಿ ಬಿಂದು
ಬಿಂದುವಿನಲಿ ಅನಂತ
ಒಂದು ಮಂಜಿನ ಹನಿ
ಯೊಳಗೊಂದು ಬ್ರಹ್ಮಾಂಡ
೧೩
ಎಲೆಯ ಮೇಲೆ
ಮುಂಜಾವಿನ
ಮುತ್ತಿನ ಗುರುತು
ಸ್ವಲ್ಪ ಹೊತ್ತು
ಹಾಗೇ ಇರಲಿ ಬಿಡು
೧೪
ಪದಗಳಲ್ಲಿ
ಹುಡುಕಿದರೂ ಸಿಗದ ಕವಿತೆ
ಪುಟ್ಟ ಹುಲ್ಲಿನೆಳೆಯ ಮೇಲೆ
ಮುಂಜಾವಿನ ಮಂಜಿನೊಳಗೆ
ನಗುತ್ತ ಕಣ್ಬಿಡುತ್ತಿತ್ತು

*****

ʼಹೋದಲೆಲ್ಲ ಹಾದಿ ʼ ಸರಣಿ: 

೧. ಬೆಂಚಿನ ಸ್ವಗತ

ಮುಂಜಾವಿನ ಬಾಗಿಲು ಅದೇ ತೆರೆದಿತ್ತು
ಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆ
ಬಂದು ನನ್ನ ಮೇಲೆ ಕೂತರು ಇಬ್ಬರು
ವಯಸ್ಸು ಎಪ್ಪತ್ತೋ ಎಂಬತ್ತೋ
ಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನು
ಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ
‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.
ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು
ಕಾಲೇಜಿಗೆ ಚಕ್ಕರ್
ನನ್ನ ಮೇಲೆ ಹಾಜರ್
ಕಿಲಿಕಿಲಿ ನಗು
ಚಿಲಿಪಿಲಿ ಮಾತು
ಕದ್ದು ಕದ್ದು ಮುತ್ತು
ಹುಸಿಮುನಿಸು
ಅಳುನಟನೆ
ತುಂಟನಗು
‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು
‘ಈ ಬೆಂಚು ಇಲ್ಲಿರುವವರೆಗೂ,’ ಎಂದ
ಅವನ ಕೆನ್ನೆಗೊಂದು ಮುತ್ತು ಸಿಕ್ಕಿತು
ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದು
ಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನು
ಇವನ ಡಬ್ಬ ಅವಳು ಹಂಚಿಕೊಂಡರು
ಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳು
ಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ
‘ನಮ್ಮ ಬದುಕು ಈ ಬೆಂಚಿನಂತೆ
ಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರು
ಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು
ಈಗ ರಾತ್ರಿಯ ನೀರವಮೌನದಲ್ಲಿ
ಬೀದಿದೀಪಗಳ ಮಬ್ಬುಬೆಳಕಲ್ಲಿ
ಒಂಟಿಯಾಗಿ
ದಿನದ ನೂರಾರು ಕತೆಗಳ ನೆನೆಯುತ್ತ
ದಿನದ ಸಾವಿರಾರು ಕವನಗಳ ಕನವರಿಸುತ್ತ
ನಿದ್ದೆ ಬರದೇ
ಕೂತೇ ಇದ್ದೇನೆ

೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ

ಕಲ್ಲು ಮುಳ್ಳಿನ ಹಾದಿಯ
ನೆನಪುಗಳು ಕಳೆದಿಲ್ಲ
ಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳು
ಚುಚ್ಚಿಸಿಕೊಂಡ ಅಪಮಾನಗಳು

ಇಲ್ಲಿ ಎಲ್ಲ ಒಳ್ಳೆಯವರು
ಎಂಬ ನಂಬಿಕೆಯಲ್ಲಿ
ಹಲ್ಲು ಕೊರೆದ ಹಾದಿಯಲ್ಲಿ
ಜೊತೆಗೆ ಬಂದವರು
ನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರು

ಹೂವಿನ ದಾರಿಯ ಮೇಲೆ
ನಡೆಸುವೆ ಎಂದು ಭರವಸೆ ಕೊಟ್ಟವರು
ಹೂವಿನ ಜೊತೆ ಮುಳ್ಳೂ ಇರುತ್ತದೆ
ಎಂದು ಹೇಳುವುದನ್ನು ಮರೆತರು
ನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲ

ಅಲ್ಲಿಯೂ ಸಲ್ಲಲಿಲ್ಲ
ಇಲ್ಲಿಗೂ ಒಗ್ಗಿಕೊಳ್ಳಲಿಲ್ಲ
ದೇಶಬಿಟ್ಟ ಪರದೇಸಿ
ಕಲ್ಲಿಗಿಂತ ಕಲ್ಲಾಗಿ
ಪರಸಿಕಲ್ಲಿನ ಹಾದಿಯ ಮೇಲೆ
ಅಂಗಡಿ ಅಂಗಡಿಗಳಲ್ಲಿ
ನಡೆವ ಜನರ ಮುಖಗಳಲ್ಲಿ
ಸುಖ ಸಂತೋಷ ಹುಡುಕುತ್ತೇನೆ
ಹಾದಿಹೋಕ ನಾನು
ಹಾದಿಹೋಕನಾಗಿಯೇ ಉಳಿದಿದ್ದೇನೆ

ವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆ
ಹುಲ್ಲುಹಾಸಿನ ಹಾದಿಯ
ಫೋಟೋ ತೆಗೆದು
ಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆ

ಹೈವೇಯ ಸೈನ್-ಬೋರ್ಡುಗಳು
ಈಗ ನನ್ನ ಮಿತ್ರರು
ನನ್ನ ಕಾರಿನ ದಾರಿ ಹೇಳಿಕೊಡುವವರು
ಹಗಲು ಸಂಜೆ ಅದೇ ಹಾದಿ
ಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ
*
ಕಾಲ ಮಾಗುತಿದೆ
ದಾರಿ ಸವೆಯುತಿದೆ
ತಾಣದ ಮರೀಚಿಕೆ
ಹಾಗೇ ಉಳಿದಿದೆ
ಹಾಗೇ ಉಳಿದರೇ ಬದುಕೆ?

ಕನ್ನಡ ಬಳಗದ ಹುಟ್ಟು ಮತ್ತು ಬೆಳವಣಿಗೆ-ರಾಮಮೂರ್ತಿ

       ಶ್ರೀಯುತ  ರಾಮಮೂರ್ತಿ

ಒಂದು ಸಂಸ್ಥೆಯನ್ನು ಕಟ್ಟಿ  ಬೆಳೆಸುವುದು ಹಲವರ ಜೀವನ ಪೂರ್ತಿಯ ಸಾಧನೆ . ಅದನ್ನು ಬೆಳೆಸಿಕೊಂಡು ಹೋಗುವುದು ಮುಂದಿನ ತಲೆಮಾರಿನವರ ಹೊಣೆ. ಯುನೈಟೆಡ್ ಕಿಂಗ್ಡಮ್ ನ  ಮೊಟ್ಟ ಮೊದಲ ಕನ್ನಡ ಸಮುದಾಯದ ಸಂಸ್ಥೆ ಕನ್ನಡ ಬಳಗ, ಯು.ಕೆ . ( KBUK )

ಇದರ  ಹುಟ್ಟು ಮತ್ತು ಬೆಳವಣಿಗೆಯನ್ನು ಅತ್ಯಂತ ಹತ್ತಿರದಿಂದ ನೋಡುತ್ತ ಅದಕ್ಕಾಗಿ ಶ್ರಮದಾನವನ್ನು ಮಾಡುತ್ತ ಬಂದವರಲ್ಲಿ ರಾಮಮೂರ್ತಿಯವರು ಕೂಡ ಒಬ್ಬರು. ಈ ವಾರ ಅದೆಲ್ಲದರ ನೆನಪಿನ ಸುರಳಿಯನ್ನು ನಮ್ಮ ಮುಂದೆ ಬಿಚ್ಚಿಡುವ ಮೂಲಕ ಅವರು ಬರಿಯ  ಒಂದು ಲೇಖನವನ್ನು ಮಾತ್ರ  ಬರೆದಿಲ್ಲ. ಬದಲಿಗೆ ಕೆ.ಬಿ.ಯು.ಕೆ ಗಾಗಿ ಒಂದು ಉತ್ತಮ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇಂದಿನ ತಲೆಮಾರಿನವರಿಗೆ ಒಂದು ಸಂಸ್ಥೆಯ ಆಸ್ಥೆಯನ್ನು ಕಾಪಾಡಿಕೊಳ್ಳುವ ಅಗತ್ಯದ ಬಗ್ಗೆ ತಿಳಿಸಿದ್ದಾರೆ. ಬಳಗದ ಶ್ರೀಮಂತ ಚರಿತ್ರೆಯ ನೆನಪುಗಳನ್ನು ನಮ್ಮ ಮುಂದಿಟ್ಟು ಸಂಸ್ಥೆಯ ಮಹತ್ವವನ್ನು ಸಾರಿದ್ದಾರೆ.

ಕಳೆದ ವಾರ  ಇಂಗ್ಲೆಂಡಿಗೆ ಬಂದ ಕನ್ನಡ ಜನರ ಬದುಕು ೬೦-೭೦ ರ ದಶಕದಲ್ಲಿ ಹೇಗಿತ್ತು ಎನ್ನುವ ಬಗ್ಗೆ ಬರೆದಿದ್ದರು. ಅದನ್ನು ಓದಿದ ನಂತರ, ಅಲ್ಲಿಂದ ಇಲ್ಲಿಗೆ ಆಗಿರುವ ಎಲ್ಲ ಬದಲಾವಣೆಗಳನ್ನು ನಾವು ಗ್ರಹಿಸಬಹುದು. ಆ ಲೇಖನದ ಲಿಂಕ್ ಇಲ್ಲಿದೆ. https://wp.me/p4jn5J-2o6.

ಇವತ್ತು ಹಲವು ಕನ್ನಡ ಸಂಸ್ಥೆಗಳು ಈ ಆಂಗ್ಲನಾಡಿನಲ್ಲಿ ಹುಟ್ಟಿವೆ. ಆದರೆ ಅವೆಲ್ಲದರ ತಾಯ್ಬೇರು ಕೆ.ಬಿ.ಯು.ಕೆ ಎನ್ನುವುದರಲ್ಲಿ ಸಂಶಯವೇ ಇಲ್ಲ.ಈ ಲೇಖನ ಅದಕ್ಕೆ ಪೂರ್ಣ ಸಾಕ್ಷಿಯಾಗಿ ನಿಲ್ಲುತ್ತದೆ- ಡಾ. ಪ್ರೇಮಲತ ಬಿ.


 ಕನ್ನಡ ಬಳಗದ ಆರಂಭ

೩೦ ಅಕ್ಟೊಬರ್ ೧೯೮೨ ದಿನ ದೀಪಾವಳಿ ಹಬ್ಬ ಆಚರಿಸಲು ಡಾನ್ಕ್ಯಾಸ್ಟರ್ ನಲ್ಲಿದ್ದ  ಗೋಪಾಲ್ ಕುಲ್ಕರ್ಣಿ ಅವರ ಮನೆಯಲ್ಲಿ ಕೆಲವು ಕನ್ನಡಿಗರು ಸೇರಿದ್ದರು. ಅರವಿಂದ್ ಮತ್ತು ಸ್ನೇಹ ಕುಲ್ಕರ್ಣಿ, ಶ್ರೀವತ್ಸ ದೇಸಾಯಿ, ಪಾಂಡುರಂಗಿ ಮತ್ತು ಅಗಳಗಟ್ಟಿ ದಂಪತಿಗಳು ಮುಂತಾದವರು.  ಈ ದೇಶದಲ್ಲಿ  ನೆಲಸಿರುವ ಕನ್ನಡ ಕುಟುಂಬಗಳನ್ನು ಸೇರಿಸುವ ಉದ್ದೇಶದಿಂದ  ಇಲ್ಲಿ ಒಂದು ಸಂಸ್ಥೆ ಬೇಕು ಅನ್ನಿಸಿ ಕೊನೆಗೆ ಕನ್ನಡ ಬಳಗ (extended family ) ಅಂತ ನಾಮಕರಣ ಮಾಡಿದರು . ಇದಕ್ಕೆ ಬೇಕಾದ ಖರ್ಚಿಗೆ ತಲಾ £೫ ಹಾಕಿ ನಮ್ಮ ಬಳಗ ಪ್ರಾರಂಭ ವಾಯಿತು.  ಅವಾಗ internet ಅಥವಾ ಮೊಬೈಲ್ ಫೋನ್ ಇರಲಿಲ್ಲ. ಸಂಪರ್ಕ ’word of mouth’ ಮಾತ್ರ. ಹಲವಾರು ವೈದ್ಯರು ಇದ್ದದ್ದರಿಂದ Pulse ಎನ್ನುವ ವಾರ ಪತ್ರಿಕೆಯಲ್ಲೂ ಕನ್ನಡ ಬಳಗದ  ಬಗ್ಗೆ ಪ್ರಚಾರ ಮಾಡಿದರು.

ಮೊಟ್ಟ ಮೊದಲಿನ ಕನ್ನಡ ಬಳಗದ ಆರಂಭ ನಾಟಿಂಗ್ಹ್ಯಾಮ್ ಹಿಂದೂ ದೇವಸ್ಥಾನದಲ್ಲಿ. ಇದು ೧-೫-೧೯೮೩. ಭಾರತೀಯ ವಿದ್ಯಾ ಭವನದ ಶ್ರೀ ಮತ್ತೂರ್ ಕೃಷ್ಣಮೂರ್ತಿ ಅವರು ಅಧ್ಯಕ್ಯತೆ ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ “ ಕನ್ನಡಿಗರು ಆರಂಭ ಶೂರರು ಎಂಬ ಶಂಕೆ ಇದೆ ಆದರೆ ನೀವೆಲ್ಲ ಸೇರಿ ಇದನ್ನು ಅಳಿಸಬೇಕು “ ಅಂತ ಮನವಿ ಮಾಡಿದರು. ಸುಮಾರು ೧೫೦ ಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದರು.ಬಹಳ ವರ್ಷದ ನಂತರ  ಮನೋರಂಜನಾ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಒದಗಿ ಬಂದಿತ್ತು. ಎಲ್ಲರಿಗೂ ಒಂದು ಸಂಭ್ರಮ ಮತ್ತು ಉತ್ಸಾಹ ಎದ್ದು ಕಾಣಿಸುತ್ತಿತ್ತು. ಊಟದ ವ್ಯವಸ್ಥೆ ಈಗಿನ ತರ ಹೊರಗಿನಿಂದ ಅಡಿಗೆಯವರದಲ್ಲ. ಬಂದಿದ್ದ ಅನೇಕ ಸ್ವಯಂಸೇವಕರು ಸೇರಿ ಅಷ್ಟು ಜನಕ್ಕೂ ಅಡಿಗೆ ಮಾಡಿದ್ದರು.

ಈ ಪ್ರಥಮ ಸಮ್ಮಿಲನದಲ್ಲಿ ಬಳಗದ ಮೊದಲನೆಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಡಾ. ಸ್ನೇಹ ಕುಲ್ಕರ್ಣಿ –   ಅಧ್ಯಕ್ಯರು
ಡಾ. ವಿಭೂತಿ           –   ಕಾರ್ಯದರ್ಶಿ
ಡಾ. ಕುರುವತ್ತಿ        –    ಕೋಶಾಧಿಕಾರಿ
ಶ್ರೀಮತಿ ವಿಜಯಾ ಆನಿಖಿಂಡಿ   – ಸಾಂಸ್ಕತಿಕ  ಕಾರ್ಯದರ್ಶಿ

ಮ್ಯಾನ್ಸ್ ಫೀಲ್ಡ್ ನಲ್ಲಿ ವಕೀಲ ರಾಗಿದ್ದ ಶ್ರೀ ಎಡ್ವರ್ಡ್ಸನ್ ಅವರಿಂದ ಸಲಹೆ ಪಡೆದು  ಪ್ರಥಮ ಸಂವಿಧಾನವನ್ನು (Constitution) ನ್ನು ರಚಿಸಲಾಯಿತು

ಇದರ ಮುಖ್ಯ ಅಂಶ , ಆಂಗ್ಲದೇಶದಲ್ಲಿ ನೆಲಸಿರುವ ಕನ್ನಡ ಅಭಿಮಾನಿಗಳ ಒಕ್ಕೂಟದ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಪಾಲನೆ ಮಾಡುವುದು, ರಾಜಕೀಯ, ಜಾತಿ ಮತ್ತು ಮತಗಳ ಬೇಧಭಾವನೆಗಳಿಂದ ದೂರವಾಗಿರುವುದು ಇತ್ಯಾದಿ. ಸಮಿತಿಯ ಅವಧಿ ಎರಡು ವರ್ಷ( ಈಗ ಮೂರು ವರ್ಷಕ್ಕೆ ಬದಲಾವಣೆ ಆಗಿದೆ) ಯುಗಾದಿ ಮತ್ತು ದೀಪಾವಳಿ ಆಚರಣೆ ಮತ್ತು  ಯುಗಾದಿ ಸಮಯದಲ್ಲಿ ಸದ್ಯಸರ ಸಭೆ, ಧರ್ಮ ಕಾರ್ಯಗಳನ್ನು  ಬೆಂಬಲಿಸುವುದು  ಮತ್ತು ನೂತನ ಸಮಿತಿಯ ಆಯ್ಕೆ ಇತ್ಯಾದಿ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದೆವು.

ಲಂಡನ್ನಿನಲ್ಲಿ ಆಗಸ್ಟ್  ೧೯೮೩ ನಲ್ಲಿ  ಭಾರತೀಯ ವಿದ್ಯಾ ಭವನಲ್ಲಿ ನಡೆದ ಸಮಾರಂಭಕ್ಕೆ  ಸುಮಾರು ೨೦೦ ಕ್ಕೂ ಹೆಚ್ಚು ಕನ್ನಡಿಗರು ಸೇರಿ  ಅನೇಕ ಸಾಂಸ್ಕೃತಿಕ  ಕಾರ್ಯಕ್ರಗಳಲ್ಲಿ ಭಾಗವಹಿಸಿ ಆನಂದಿಸಿದರು ಮತ್ತು  ಇತರೆ ಕನ್ನಡದವರನ್ನು ಪರಿಚವನ್ನು ಮಾಡಿಕೊಂಡರು.

ಮೊಟ್ಟಮೊದಲನೆಯ ಎ.ಜಿ.ಎಮ್. ಸ್ಟಾಕ್ಪೋರ್ಟ್ ನಲ್ಲಿ ೧೯೮೪ ನಲ್ಲಿ ನಡೆದು ಮುಂದಿನ ಕಾರ್ಯಕಾರಿ ಸಮಿತಿ ಚುನಾವಣೆಯಿಂದ ಆರಿಸಬೇಕೆಂದು ನಿರ್ಧಾರವಾಗಿ   ೧೯೮೫ ನಲ್ಲಿ  ೧೫ ಜನರ ಸಮಿತಿಯನ್ನು ಆರಿಸಲಾಯಿತು. ಬಳಗದ ಹಿರಿಯ ಸದಸ್ಯೆ  ಡಾ.ಅಭಯಾಂಬ ಈ ಸಮಿತಿಯ ಕಾರ್ಯದರ್ಶಿಗಳಾಗಿ ಬಹಳ ಶ್ರದ್ಧೆ ಇಂದ ಕೆಲಸ ಮಾಡಿ ಅನೇಕರನ್ನು ಸದಸ್ಯರನ್ನಾಗಿ ಮಾಡಿದರು.

೧೯೮೭ ನಲ್ಲಿ (೨೬-೦೯-೧೯೮೭ )  ಉತ್ತರ ಲಂಡನ್ Enfield ನಲ್ಲಿ ನವರಾತ್ರಿ ಸಂಭ್ರಮಕ್ಕೆ ಕರೆಯೋಲೆಯನ್ನು ಕನ್ನಡ ಟೈಪ್ ರೈಟರ್ ನಲ್ಲಿ ರಾಜಾರಾಮ್ ಕಾವಳೆ ಅವರು ತಯಾರಿಸಿದರು.ಸುಮಾರು ೩೦೦ ಕನ್ನಡದ ಕುಟುಂಬದವರಿಗೆ ಕಳಿಸಲಾಯಿತು. ಇಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಆಟಗಳನ್ನು ಏರ್ಪಡಿಸಿ ಮಧ್ಯಾನ್ಹ ೧೮೯೮ ರಲ್ಲಿ ನಡೆಯುತ್ತಿರುವ ವಿಶ್ವ ಕನ್ನಡಿಗರ ಸಮ್ಮೇಳನ ಬಗ್ಗೆ ಚರ್ಚೆ ನಡೆಯಿತು. ಈ ಕಾರ್ಯಕ್ರಮಕ್ಕೆ ಹಣ ಕೂಡಿಸಲು ನಾನು ಮತ್ತು ಕಾವಳೆ ಅವರು Ealing road ನಲ್ಲಿರುವ ಅಂಗಡಿಗಳಿಗೆ ಭೇಟಿ ಕೊಟ್ಟು ಜಾಹಿರಾತುಗಳನ್ನು ಕೊಡಿ ಅಂತ ಮನವಿ ಮಾಡಿ ಸ್ವಲ್ಪ ಸಂಪಾದಿಸಿದೆವು.

೧೯೮೮ ವಿಶ್ವ ಕನ್ನಡ ಸಮ್ಮೇಳನ 

೧೯೮೭ರಲ್ಲಿ  ಇಲ್ಲಿ ಮತ್ತು ಇತರ ದೇಶದಲ್ಲಿ ನೆಲಸಿರುವ ಕನ್ನಡಿಗರನ್ನು ಸೇರಿಸಿ ವಿಶ್ವ ಕನ್ನಡ ಸಮ್ಮೇಳವನ್ನು ನಡೆಸುವ  ಉದ್ದೇಶದಿಂದ  ಡಾ. ಭಾನುಮತಿ ಈ ವರ್ಷದ ಚುನಾವಣೆಯಲ್ಲಿ ಭಾಗವಹಿಸಿ ಅಧ್ಯಕ್ಷರಾದರು.  ಅದೇ ಸಮಯದಲ್ಲಿ ಅಂದಿನ ಕರ್ನಾಟಕದ ಮಖ್ಯ  ಮಂತ್ರಿಗಳಾಗಿದ್ದ ಶ್ರೀ ರಾಮಕೃಷ್ಣ  ಹೆಗ್ಗಡೆ ಲಂಡನ್ ಭೇಟಿಮಾಡಿದಾಗ (ಮೇ ೧೯೮೭) ಕನ್ನಡ ಬಳಗದವರು ಅವರಿಗೆ ಸನ್ಮಾನ ಮಾಡಿ ವಿಶ್ವ ಕನ್ನಡಿಗರ ಸಮ್ಮೇಳನ ನಡೆಸುವ ಉದ್ದೇಶವನ್ನು ಭಾನುಮತಿ  ಹೆಗ್ಗಡೆ ಅವರ ಮುಂದೆ ಇಟ್ಟು  ಅವರ ಸರಕಾರದಿಂದ ಸಹಾಯ ಕೋರಿದರು, ಮುಖ್ಯ ಮಂತ್ರಿಗಳು ಈ ಸಲಹೆ ಅತ್ಯಂತ ಒಳ್ಳೆಯದು ಮತ್ತು ತಮ್ಮ ಸರಕಾರದ ಸಂಪೂರ್ಣ ಬೆಂಬಲ ಇದೆ ಅಂತ ಭರವಸೆ ಕೊಟ್ಟರು.  ಆದರೆ,ಕೆಲವು ತಿಂಗಳ ನಂತರ ಕರ್ನಾಟಕದ ರಾಜಕೀಯದ ಪರಿಸ್ಥಿತಿ ಬದಲಾಗಿತ್ತು. ಹೆಗ್ಗಡೆ ಮುಖ್ಯಮಂತ್ರಿ ಸ್ಥಾನದಿಂದ ಹೊರಗೆ ಬಂದಿದ್ದರು, ನಮ್ಮ ಸಮ್ಮೇಳನದ ಬಗ್ಗೆ ಹೊಸದಾಗಿ ಅವರ ಜಾಗಕ್ಕೆ ಬಂದಿದ್ದ ಶ್ರೀ ಬೊಮ್ಮಾಯಿಯವರಿಗೆ ಗೊತ್ತಿರಲಿಲ್ಲ, ಆದ್ದರಿಂದ ಈ  ಸಮ್ಮೇಳನ ನಡೆಯುವುದೇ ಅನ್ನುವ ಸಂಶಯ  ಇತ್ತು.  ಆದರೆ  ಡಾ.ಭಾನುಮತಿ  ಕರ್ನಾಟಕ್ಕೆ ಭೇಟಿ ಕೊಟ್ಟು ಮಂತ್ರಿಗಳನ್ನು ಮತ್ತು ಅಧಿಕಾರಿಗಳನ್ನು ಭೇಟಿಮಾಡಿ ಅವರಿಂದ ಬೆಂಬಲ ಪಡೆದರು. ಇಬ್ಬರ ಅಧಿಕಾರಿಗಳ ಸಹಾಯ ಇಲ್ಲಿ ಮರೆಯಬಾರದು.  ವಾರ್ತಾ  ಇಲಾಖೆಯಲ್ಲಿದ್ದ ಡಾ.ಕೃಷ್ಣಮೂರ್ತಿ ಮತ್ತು ಕನ್ನಡ ಮತ್ತು ಸಂಸ್ಕೃತಿಯ ನಿರ್ದೇಶಕ ಶ್ರೀ ವಿಠ್ಠಲಮೂರ್ತಿ. ಈ ಮಹನೀಯರು ಇಂದಿಗೂ ನಮ್ಮ ಸಂಪರ್ಕದಲ್ಲಿದಾರೆ.

ಆಗಸ್ಟ್ ೧೯೮೮ ಮ್ಯಾಂಚೆಸ್ಟರ್ ನ UMIST ಆವರಣದಲ್ಲಿ ನಲ್ಲಿ ಮೂರು ದಿನ ಈ ಸಮ್ಮೇಳವನ್ನು ನಡೆಸಬೇಕೆಂದು ನಿರ್ಧಾರ ಮಾಡಿ  ಅನೇಕ ಸದಸ್ಯರ ಸಮಿತಿ ಯನ್ನು ಮಾಡಿ ಕೆಲಸ ಎಲ್ಲರೂ ಉತ್ಸಾಹದಿಂದ ದುಡಿದರು. ನನ್ನ ಅಭಿಪ್ರಾಯದಲ್ಲಿ  ಕನ್ನಡ ಬಳಗದಲ್ಲಿ ಅನೇಕ ಕುಟುಂಬಗಳು ಮೊಟ್ಟ  ಮೊದಲು  ಭೇಟಿಯಾಗಿ  ಮೂರು ದಿನ ಒಟ್ಟಿಗೆ ಇದ್ದು  ಭಾಂದವ್ಯ ಬೆಳಸಿದ್ದು  ಈ ಸಮಯದಲ್ಲೇ .  ಇಲ್ಲಿಬೆಳೆದ ಸಂಪರ್ಕಗಳು  ೩೨ ವರ್ಷದ ನಂತರವೂ ಸ್ಥಿರವಾಗಿದೆ.  ಅನೇಕ ಮಕ್ಕಳು ಇಲ್ಲಿ ಭಾಗವಹಿಸಿ, ಪರಸ್ಪರ ಸ್ನೇಹವನ್ನು ಇನ್ನೂ ಇಟ್ಟು್ಕೊಂಡು  ಈಗ ಅವರ ಮಕ್ಕಳ ಜೊತೆ ಕನ್ನಡ ಬಳಗಕ್ಕೆ ಬರುವುದನ್ನು ನೋಡಿದರೆ  ಈ ನಮ್ಮ ಸಂಸ್ಥೆ ಮುಂದೆವರಿಯುವುದರಲ್ಲಿ ಸಂದೇಹವೇ ಇಲ್ಲ ಎನಿಸುತ್ತದೆ.

ಇಲ್ಲಿ ಹಣಕಾಸು ಹೊಂದಿಸುವ ಕೊರತೆ ಇಂದ ಈ ಸಮ್ಮೇಳನ ನಡೆಯುತ್ತಾ ಅನ್ನುವ ಸಂಶಯ ಬಂದಿತ್ತು, ಹೆಸರಿಗೆ ಹಣಕಾಸಿನ ಸಮಿತಿ ಇತ್ತು ಆದರೆ  ಯಾರಿಂದಲೂ ಆರ್ಥಿಕ ಸಹಾಯ ಬರಲಿಲ್ಲ. ಯಾರನ್ನು ಕೇಳಬೇಕು ಅನ್ನುವುದು  ಸಹ ಸರಿಯಾಗಿ ಗೊತ್ತಿರಲಿಲ್ಲ. ಈ ಸಂದರ್ಭದಲ್ಲಿ ಕನ್ನಡ ಬಳಗದ ಸದಸ್ಯ ದಿವಂಗತ ಶ್ರೀ ವಿಶ್ವೇಶ್ವರಯ್ಯ ಮಾಡಿದ ಸಹಾಯ ಮರೆಯುಬಾರದು. ಇವರು V.W. Car ಕಂಪನಿ ಮಿಲ್ಟನ್ ಕಿನ್ಸ್  ನಲ್ಲಿ ಕೆಲಸದಲ್ಲಿದ್ದರು, ನಮ್ಮ ಪರಿಸ್ಥಿತಿ ಕೇಳಿ ಅವರ ಕಂಪನಿ ಇಂದ ಸಹಾಯ ಸಿಗಬಹುದು ಎಂದು ಭರವಸೆ ಕೊಟ್ಟು ಸಮ್ಮೇಳನದ ಬಗ್ಗೆ  Presentation ಮಾಡಿ ಅಂತ ಸಲಹೆ ಕೊಟ್ಟರು. ಈಗಿನ ಹಾಗೆ Power Point ಇರಲಿಲ್ಲ. ಮುಖ್ಯವಾದ ಅಂಶಗಳನ್ನು ಆ ಕಂಪನಿಯ ಮುಖ್ಯಸ್ಥರ ಮುಂದೆ ಭಾನುಮತಿ ಅವರು ಮತ್ತು ನಾನು  ಇಟ್ಟು  ೩೦೦೦ ಪೌಂಡ್ ಗಳಸ್ಟು ಸಹಾಯ ಬೇಕು ಅಂತ ಮನವಿ ಮಾಡಿಕೊಂಡವಿ. ನಾವು ಕೈಗೊಂಡ ಕಾರ್ಯ ಯಶಸ್ವಿ ಆಗಲಿ ಅಂತ ಹಾರೈಸಿ ೨೦೦೦ ಪೌಂಡುಗಳ ಸಹಾಯ ಮಾಡುತ್ತೇವೆ ಅಂತ  ಆ ಕಂಪನಿಯ ಮುಖ್ಯಸ್ಥರು ಭರವಸೆ ಕೊಟ್ಟರು. ಇದು ನಮ್ಮ ಬಳಗದ ಮೊದಲೆಯ Commercial Sponsorship ! ಮುಂದೆ NW Arts ಮತ್ತು ಬಿಸಿಸಿಐ ಇಂತಹ ಸಂಸ್ಥೆಗಳಿಂದ ಸ್ವಲ್ಪ ಸಹಾಯ ಬಂತು.

ಕರ್ನಾಟಕ ಸರ್ಕಾರದಿಂದ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಡಾ. ಕೃಷ್ಣಮೂರ್ತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಯ ನಿರ್ದೇಶಕರಾಗಿದ್ದ ಶ್ರೀ ವಿಠ್ಠಲಮೂರ್ತಿ  ತಂದಿದ್ದರು. ಆದರೆ ಇದು ಕಸ್ಟಮ್ ನಲ್ಲಿ ಹಿಡಿದು ಸುಮಾರು ೨೦೦೦೦ ಪೌಂಡ್ ಮೇಲೆ VAT ಕೊಡದಿದ್ದರೆ ಈ ವಸ್ತುಗಳನ್ನು ಬಿಡುವುದಿಲ್ಲ ಎಂದು ಬೆದರಿಸಿದರು, ಆಗ ಡಾ. ಅಪ್ಪಾಜಿ ಗೌಡರು  ಅಧಿಕಾರಿಗಳನ್ನು ಕಂಡು ತಮ್ಮ ವೈಯಕ್ತಿಕ  ಗ್ಯಾರಂಟಿ ಕೊಟ್ಟು ಈ ಸಾಮಾನುಗಳನ್ನು ಬಿಡಿಸಿ UMIST ಗೆ ತಂದರು. ಈ ತರಹ ಸನ್ನಿವೇಶಗಳು ಬಹಳ ನಡೆಯಿತು. ನಮಗ್ಯಾರಿಗೂ ಇಷ್ಟು ದೊಡ್ಡ ಸಮಾರಂಭ ನಡೆಸಿದ್ದ ಅನುಭವ ಇರಲಿಲ್ಲ. ಆದರೆ ಇದು ನಮಗೆಲ್ಲ ಒಂದು unique experience ಅಂತ ಹೇಳಿದರೆ ಏನೂ ತಪ್ಪಿಲ್ಲ.

UMIST ನ ವಿದ್ಯಾರ್ಥಿ ಕೊಠಡಿಗಳು ಮತ್ತು ಹತ್ತಿರದ ಹೋಟೆಲ್ ಗಳಲ್ಲಿ ಹೊರನಾಡಿನಿಂದ ಬಂದವರಿಗೆ ಮತ್ತು ನಮ್ಮ ಸದಸ್ಯರಿಗೆ ಉಳಿಯುವುದಕ್ಕೆ ಏರ್ಪಾಡಾಗಿತ್ತು,   ಕೆಲವು ರಾಜಕಾರಣಿಗಳು ವಿದೇಶಕ್ಕೆ ಬರುವುದು ಅವರ ವೈಯಕ್ತಿಕ ಕಾರಣಗೋಸ್ಕರ  ಅಂತ ಕಾಣಿಸುತ್ತೆ. ಮುಖ್ಯ ಮಂತ್ರಿಗಳು ಸಮ್ಮೇಳನವನ್ನು ಉದ್ಘಾಟಿಸಿ ಅವತ್ತೇ ಲೇಕ್ ಡಿಸ್ಟ್ರಿಕ್ಟ್ ಗೆ ಹೊರಟರು !! ಅವತ್ತು ಸಾಯಂಕಾಲ ಅವರಿಂದ ಭಾಷಣವು ಇರಬೇಕಿತ್ತು  ಆದರೆ ಅವರ ಅಜೆಂಡಾ ಬೇರೆ ಇತ್ತು ಅಂತ ಕಾಣತ್ತೆ,

ಅಮೇರಿಕ, ಯೂರೋಪ್ ಮತ್ತು ಭಾರತದಿಂದ ಅನೇಕರು ಭಾಗವಿಸಿದ್ದರು . ಕರ್ನಾಟಕದಿಂದ ಶ್ರೀ ಶಿವರಾಮ ಕಾರಂತರು . ಜಸ್ಟಿಸ್ ನಿಟ್ಟೂರು ಶ್ರೀನಿವಾಸ ರಾಯರು, ಮುಖ್ಯಮಂತ್ರಿ ಚಂದ್ರು, ಸಿ ಅಶ್ವಥ್, ಜಿ ಆರ್ ವಿಶ್ವನಾಥ್,

ಬಿ ಕೆ ಯಸ್  ಅಯಂಗಾರ್, ಶಂಕರ್ ನಾಗ್, ನಟ ಶ್ರೀನಾಥ್ ಮುಂತಾದವರು ೬೦ ಮಂದಿ, ೩೦ ಜನ ಅಮೆರಿಕದಿಂದ ಮತ್ತು ಮೂವರು  ಯೂರೋಪ್ ನಿಂದ ಮತ್ತು ನಮ್ಮ ಬಳಗದ ಸದ್ಯಸ್ಯರು ಸೇರಿ  ಸುಮಾರು ೫೦೦ ಜನರು ಭಾಗವಹಿಸಿದ್ದರು

ಕಾರಂತರ ಮತ್ತು ಎಂ. ಪಿ .ಪ್ರಕಾಶ್ ಅವರ ಭಾಷಣಗಳು  ಶಂಕರ್ ನಾಗ್  ಮತ್ತು ಶ್ರೀನಾಥ್ ತಂಡದವರಿಂದ ನಗೆ ನಾಟಕ, ಬೆಂಗಳೂರಿನ ಸರಳಯ್ಯ ಸಹೋದರಿಯರ ಸಂಗೀತ ಮತ್ತು ಕನ್ನಡ ಬಳಗದ ಸದಸ್ಯರಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ಮನೋರಂಜಿಸಿತು. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಶಿವರಾಂ ಕಾರಂತರು ಬಿಡುಗಡೆ ಮಾಡಿದರು.ಈ ಸಮ್ಮೇಳನ ನಮ್ಮ ಕನ್ನಡ ಬಳಗದ ಮುಂದಿನ ಬೆಳವಣಿಗೆಗೆ ಅಡಿಪಾಯ ಹಾಕಿ ಇಲ್ಲಿನ ಕನ್ನಡದವರನ್ನು ಒಂದುಗೂಡಿದ್ದು ಮಾತ್ರ ಅಲ್ಲ, ಬೇರೆ ದೇಶದಲ್ಲೂ ಕನ್ನಡ ಸಂಸ್ಕೃತಿ ಬೆಳೆಯಲು ಸಹಕಾರಿಯಾಯ್ತು.

ಈ ಸಮ್ಮೇಳನದ ಬಗ್ಗೆ ಕರ್ನಾಟಕದಲ್ಲಿ ರೇಡಿಯೋ, ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಚಾರವಾಗಿ ಕನ್ನಡ ಬಳಗ ಯು.ಕೆ. ಹೆಸರು ಪ್ರಸಿದ್ಧವಾಯಿತು ಇಂತಹ ಸಮ್ಮೇಳನ ಹೊರದೇಶದಲ್ಲಿ ನಡದಿದ್ದು ಇಲ್ಲೇ ನಮ್ಮ ಕನ್ನಡ ಬಳಗದ ಆಶ್ರದಲ್ಲಿ ಎಂದು ಇಂದು ಹೆಮ್ಮೆಯಿಂದ ಹೇಳಬಹುದು. ಆದರೆ ಈಗ ಅಮೇರಿಕಾದ ಅಕ್ಕ ಸಂಸ್ಥೆ  ಹೆಚ್ಚಿನ ಹೆಸರನ್ನು ಪಡೆ್ದಿದೆ..

೧೯೯೭ರಲ್ಲಿ  ಐಲ್ ಆಫ್ ವೈಟ್ ನಲ್ಲಿ ೨ ದಿನದ ವಿಶೇಷ ಸಮ್ಮೇಳನ  ನಮ್ಮ ಸದ್ಯಸರಿಂದ  ಬಹಳ ಮನ್ನಣೆ ಪಡೆಯಿತು. ಬಳಗದ ಅಜೀವ ಸದಸ್ಯ  ಡಾ. ಪ್ರಬಾಕರ ರೆಡ್ಡಿ ಆಗ ಅಲ್ಲಿ ನೆಲಸಿದ್ದರು ಅವರ ಸಹಾಯದಿಂದ  ಈ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಕನ್ನಡ ನಗೆ ನಾಟಕ ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮಗಳು ಮತ್ತು ಆ ವರ್ಷದ ವಾರ್ಶಿಕ ಸಭೆ ಅಲ್ಲಿ ನಡೆಯಿತು

ಕನ್ನಡ ಬಳಗದ ಮೈಲು ಗಲ್ಲುಗಳು

೨೦೦೦ ಸಹಸ್ರಾಬ್ದಿ ಸಮ್ಮೇಳನ – ಆಗಸ್ಟ್ ೨೫/೨೬/೨೭

ಈ ಸಮ್ಮೇಳನ ಉದ್ದೇಶ, “Working to bring together two generations and two cultures “ಅಕ್ಷರ, ಅರೋಗ್ಯ ಮತ್ತು ಆಚರಣೆ.

ಮೊದಲನೆಯದು, ಎರಡು ತಲೆಮಾರು ಮತ್ತು ಎರಡು ಸಂಸ್ಕ್ರತಿಗಳ ಸಮನ್ವಯ ವನ್ನು ರೂಪುಗೊಳಿಸುವುದು.

ಎರಡೆನೆಯದು, ಕರ್ನಾಟಕದ ಸ್ತ್ರೀ ಸಮಾಜಕ್ಕೆ ವಿದ್ಯಾಭ್ಯಾಸ ಸಹಾಯ, ಪಾವಗಡದ ಸ್ವಾಮಿ ವಿವೇಕಾನಂದ ಅರೋಗ್ಯ ಕೇಂದ್ರಕ್ಕೆ Ambulance ಯೋಜನೆಗೆ ಹಣ ಸಹಾಯ ಮತ್ತು ಸಹಸ್ರಾಬ್ಡಿ ಆಚರಣೆ.

೨೦೦೦ ನಲ್ಲಿ ಚೆಶೈರನ ವಾರ್ನರ್ ಸಂಸ್ಥೆಯ  ಅಲ್ವಿಸ್ಟನ್ ಹಾಲ್ ನಲ್ಲಿ ಸಹಸ್ರಾಬ್ಡಿ ಸಮ್ಮೇಳನ ಆಗಸ್ಟ್ ೨೫-೨೮ ಭಾನುಮತಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿಸಿತು . ಕರ್ನಾಟಕ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಶ್ರೀ ಕೆ ಸಿ ರಾಮಮೂರ್ತಿ ಅನೇಕ ಕಲಾವಿದರ ಜೊತೆಯಲ್ಲಿ ಬಂದು ನಮ್ಮ ಕಾರ್ಯಕ್ರವವನ್ನು ನಡೆಸಿಕೊಟ್ಟರು.

ಕರ್ನಾಟಕ ಸರ್ಕಾರದ ಸಚಿವೆ ಶೀಮತಿ ರಾಣಿ ಸತೀಶ್ , ಶ್ರೀ ಯು ಆರ್ ಅನಂತಮೂರ್ತಿ, ಪ್ರೊ ಆ ರಾ ಮಿತ್ರ, ಸಂಗೀತ ಕುಲ್ಕರ್ಣಿ, ರಮೇಶ್ ಅರವಿಂದ್, ಹಾಸ್ಯಗಾರ ಎಂ ಯಸ್ ನರಸಿಂಹಮೂರ್ತಿ, ಸರಕಾರದ ಹಿರಿಯ ಅಧಿಕಾರಿ ಐಮ್ ವಿಠ್ಠಲಮೂರ್ತಿ, ಶತಾವಧಾನಿ ಡಾ ಗಣೇಶ್ ಮತ್ತು ಬಿ ಕೆ ಯಸ್ ವರ್ಮಾ, ಯಕ್ಷಗಾನ ಕಲಾವಿದರು , ಪದ್ಮಶ್ರೀ ಚಿಂದೋಡಿ ಲೀಲ ಮತ್ತು ಡೊಳ್ಳು ಕುಣಿತದ ತಂಡ, ಈ ೪೦ ಗಣ್ಯರು ನಮ್ಮ ಅತಿಥಿಗಳಾಗಿ ಮೂರು ದಿನಗಳು ಕಳೆದಿದ್ದು ಮರೆಯುವ ಹಾಗೆ ಇಲ್ಲ.ಅನೇಕ ವಿವಿಧ ಕಾರ್ಯಕ್ರಮಗಳು ಮತ್ತು ನಮ್ಮ ಯುವ ಸದಸ್ಯರಿಂದ ಅದ್ಭುತವಾದ Fashion Show ಎಲ್ಲರ ಮನ ಸೂರೆಗೊಂಡಿತು.

೨೦೦೩ ರಲ್ಲಿ ಕನ್ನಡ ಬಳಗದ ೨೦ನೇ ವಾರ್ಷಿಕೋತ್ಸವ ಅಲ್ಟ್ರಿಚಾಮ್ ಚೆಶೈರ್ ನಲ್ಲಿ ನವಂಬರ್ ೧ -೨ ವಿಜೃಂಭಣೆಯಿಂದ  ಎರಡು ದಿನಗಳು ನಡೆದವು  ಕರ್ನಾಟಕದಿಂದ ಪ್ರೊ ಆ. ರಾ . ಮಿತ್ರ,  . ಪ್ರೊ ಕೃಷ್ಣೇಗೌಡ ಮತ್ತು ಪ್ರೊ. ಅರಳುಮಲ್ಲಿಗೆ ಪಾರ್ಥಸಾರಥಿ ಮುಖ್ಯ ಅಥಿತಿಗಳಾಗಿ ಬಂದಿದ್ದರು.

ಬಳಗದ ರಜತ ಮಹೋತ್ಸವ

ಆದರೆ ೨೦೦೮ ಆಗಸ್ಟ್ ೨೨-೨೫ ಕನ್ನಡ ಬಳಗದ ರಜತ ಮಹೋತ್ಸವ ಅಲ್ವಿಸ್ಟನ್ ಹಾಲ್ ನಲ್ಲಿ ನಡೆದಿದ್ದು ಮರೆಯುವಹಾಗೆ ಇಲ್ಲ. ಇಪ್ಪತ್ತು ವರ್ಷಗಳ ಹಿಂದೆ ನಡೆದಿದ್ದ ವಿಶ್ವ ಕನ್ನಡ ಸಮ್ಮೇಳನ ನಡೆಸಿದ ಹುಮ್ಮಸ್ಸು ಮತ್ತೆ ನಮ್ಮ ಸದಸ್ಯರಿಗೆ ಬಂದು ಬಹಳ ಅದ್ದೂರಿಯಿಂದ ಆಚರಿಸಲು ಮುಂದೆಬಂದು ದುಡಿದರು.

ಕರ್ನಾಟಕದಿಂದ, ಶ್ರೀ ವಿಠ್ಠಲಮೂರ್ತಿ ಅವರ ನೇತೃತ್ವದಲ್ಲಿ  ಪ್ರೊ ನಿಸಾರ್ ಅಹ್ಮದ್, ಜಯಂತ್ ಕಾಯ್ಕಿಣಿ, ಪ್ರೊ. ಕೃಷೆಗೌಡ, “ರವಿ”(ಕೆ .ಎಲ್. ಎಲ್. ಸ್ವಾಮಿ ) ಸಂಗೀತ ಕುಲ್ಕರ್ಣಿ ಶಂಕರ್ ಶಾನಭೋಗ್ ಮತ್ತು ಅಮೇರಿಕ ದಿಂದ ಕೆಲವು ಕಲಾವಿದರು ಸಹ ಈ ಸಮಾರಂಭದಲ್ಲಿ ಭಾಗವಹಿದ್ದರು್.ಅಧ್ಯಕ್ಷೆ   ಡಾ  ಭಾನುಮತಿ ಬಂದಿದ್ದ ಗಣ್ಯರನ್ನು ಸ್ವಾಗತಿಸಿ  ಕನ್ನಡ ಬಳಗದ ೨೫ ವರ್ಷದ ಬೆಳವಣಿಗೆಯನ್ನು ತಿಳಿಸಿದರು.

ನಮ್ಮ ನಾಡಿನ ಪ್ರಸಿದ್ಧ ಕವಿ ಪ್ರೊ. ನಿಸಾರ್ ಅಹ್ಮದ್ ಅವರಿಗೆ ಕನ್ನಡ ಬಳಗದಿಂದ ಭಿನ್ನವತ್ತಳೆ ಅರ್ಪಿಸಲಾಯಿತು.  ಈ ಸಮಾರಂಭದಲ್ಲಿ ರಜತ ಸಂಭ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

 

೨೦೧೦ ಮೊದಲನೆಯ ಯುವ ಕನ್ನಡಿಗರ ಮೇಳ ಕಿಂಗ್ಸ್ ಹಾಲ್ ಸ್ಟೋಕ್ ಆನ್ ಟ್ರೆಂಟ್ ನಲ್ಲಿ ಎರಡು ದಿನಗಳ ನಡೆದ ವಿಶೇಷ ಕಾರ್ಯಕ್ರಮಕ್ಕೆ ಅನೇಕ ಎರಡನೇ ಪೀಳಿಗೆಯ ಜನಾಂಗದವರು ಭಾಗವಹಿದ್ದರು.

 ಬಳಗದ ೩೦ ನೇ ವಾರ್ಷಿಕೋತ್ಸವ 

೨೦೧೩ ಕನ್ನಡ ಬಳಗದ ೩೦ ನೇ ಹುಟ್ಟಿದ ಹಬ್ಬವನ್ನು ಆಚರಿಸಲು ಸ್ಟೋಕ್ ಆನ್ ಟ್ರೆಂಟ್ ನಲ್ಲಿರುವ ಕಿಂಗ್ಸ್ ಹಾಲ್ ನಲ್ಲಿ ಮೇ ೨೫-೨೬ ಎರಡು ದಿನಗಳ ಆಚರಣೆ. ನಮ್ಮ ಮುಖ್ಯ ಅಥಿತಿಗಳು ಶ್ರೀಮಾನ್  ಎಸ್ ಎಲ್ ಭೈರಪ್ಪ ನವರು, ಮುಖ್ಯಮಂತ್ರಿ ಚಂದ್ರು  ಮತ್ತು ಪ್ರೊ ಕೃಷ್ಣೆ ಗೌಡರು.  ಇವರಲ್ಲದೆ ಪ್ರಸಿದ್ಧ ಗಾಯನ ಪಟುಗಳಾದ ಅರ್ಚನಾ ಉಡುಪ ಮತ್ತು ಸಂಗೀತ ಸಂಯೋಜಕ  ಪ್ರವೀಣ್ ಡಿ ರಾವ್. ರಂಗ ಭೂಮಿಯ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್. ಜಾನಪದ ಗೀತೆ ಹಾಡುವ ಬಸವಲಿಂಗಯ್ಯ ಮುಂತಾದ ಕಲಾವಿದರು ನಮ್ಮೊಡನೆ ಎರಡು ದಿನಗಳು ಕಳೆದಿದ್ದು ಮರೆಯುಲು ಸಾಧ್ಯವಿಲ್ಲ

ಚೆಸ್ಟರ್ ಫೀಲ್ಡ್ ನಲ್ಲಿ ೧೮/೧೦/೨೦೧೪ ನಲ್ಲಿ ನಡೆದ ದೀಪಾವಳಿ ಹಬ್ಬ ಮಾತ್ರ ಅಲ್ಲ KSSVV (ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ವಿಚಾರ ವೇದಿಕೆ )  ಪ್ರಾರಂಭ. ನಮ್ಮ ಮುಖ್ಯ ಅಥಿತಿಗಳಾಗಿ ಬಂದಿದ್ದ ಶ್ರೀ ವೆಂಕಟೇಶಮೂರ್ತಿ ಅವರಿಂದ “ಅನಿವಾಸಿ “ಉದ್ಘಾಟನೆ  ಆಯಿತು.  ಪ್ರತಿ ಶುಕ್ರವಾರ ಪ್ರಕಟ ವಾಗುವ ಅನಿವಾಸಿಯನ್ನು ಪ್ರತಿವಾರ  ಓದಬಹುದು. (www.anivaasi.com )

ನಮ್ಮ ಬಳಗದ ಯುಗಾದಿ ಮತ್ತು ದೀಪಾವಳಿ ಹಬ್ಬಗಳನ್ನು ದೇಶದ ನಾನಾ ಕಡೆ ಆಚರಿಸಿದೆ, ಸ್ಕ್ಯಾಟ್ಲ್ಯಾಂಡ್ , ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಯೂ ಸೇರಿದಂತೆ.

೩೬ ವರ್ಷದ ನಂತರವೋ ನಮ್ಮ ಸದಸ್ಯರು ಉತ್ಸಾಹದಿಂದ ಎಲ್ಲೇ ಈ ಆಚರಣೆಗಳಾದರೂ ಉತ್ಸಾಹದಿಂದ ಬಂದು ಭಾಗವಹಿಸುತ್ತಾರೆ ಅನ್ನುವುದು ತುಂಬಾ ಹೆಮ್ಮೆಯ ವಿಚಾರ. ಆದರೆ ಈ ದೇಶದಲ್ಲೆ ಹುಟ್ಟಿ ಬೆಳದ ಎರಡನೇ ಪೀಳೆಗೆಯ ಯವರು ಮುಂದೆ ಬಂದು ಪ್ರೋತ್ಸಾಹ ಮಾಡುವುದು ಅಪರೂಪ ಅನ್ನುವುದು ಒಂದು ವಿಷಾದವಾದ ಸಂಗತಿ. ಕರ್ನಾಟಕದಿಂದ ಇತ್ತೀಚಿಗೆ ಬಂದವರು ಹೆಚ್ಚಾದ ಸಂಖ್ಯೆಯಲ್ಲಿ ಬರುತ್ತಾರೆ ನಮ್ಮ ಬಳಗದ ಮುಂದಿನ ಬೆಳವಣಿಗೆ ಇವರ ಮೇಲಿದೆ .

ಈ ದೇಶದಲ್ಲಿ ಈಗ ಸುಮಾರು ೨೦,೦೦೦ಕ್ಕೂ ಹೆಚ್ಚು ಕನ್ನಡ ಮಾತನಾಡುವವರು ನೆಲಸಿದ್ದಾರೆ ಮತ್ತು ಅನೇಕ ಕನ್ನಡ ಸಂಸ್ಥೆಗಳು ಇಲ್ಲಿ ಪ್ರಾರಂಭವಾಗಿದೆ, ಅನೇಕ ಸಂಸ್ಥೆಗಳು ಕನ್ನಡ ಕಲಿ ಯೋಜನೆಯನ್ನು ನಡೆಸುತ್ತಿರುವುದು ಹೆಮ್ಮಯ ಸಂಗತಿ

ಕನ್ನಡ ಬಳಗ ಹಿರಿಯ ಸಂಸ್ಥೆ ಆಗಿರುವುದಿಂದ ಕನ್ನಡ  ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹೊಣೆ ನಮ್ಮದು.

ಅಮೆರಿಕದಲ್ಲಿರುವ ಹಾಗೆ (ಅಕ್ಕ ಸಂಸ್ಥೆ ) ಇಲ್ಲೀಯೂ ಸಹ ಅದೇ ರೀತಿ ಒಂದು ಸಂಸ್ಥೆ ಯನ್ನು ಮಾಡುವುದಕ್ಕೆ ಕನ್ನಡಬಳಗದ  ನಾಯಕತ್ವ ಮತ್ತು ಬೆಂಬಲದ ಅಗತ್ಯವಿದೆ.

                                                                        _ ರಾಮಮೂರ್ತಿ, ಬೇಸಿಂಗ್ ಸ್ಟೋಕ್