‘ಪೂರ್ವ-ಪಶ್ಚಿಮ’ ಡಾ. ದಾಕ್ಷಾಯಿಣಿ ಗೌಡ ಅವರ ಕವನ

ಪೀಠಿಕೆ:

ಪ್ರೀತಿಗೆ ಗಡಿ,ದೇಶ,ಭಾಷೆ,ಬಣ್ಣ, ಜಾತಿ, ಧರ್ಮಗಳ ಹಂಗು ಇರುವುದಿಲ್ಲ, ಪ್ರೀತಿ ಹೇಗೆ ಹುಟ್ಟುತ್ತದೆ ಎಂದು ಹೇಳುವುದು, ತಾರ್ಕಿಕ ಉತ್ತರ ಕೊಡುವುದು ಸಾಧ್ಯವಿಲ್ಲ, ಅದು ಒಂದು ಸುಂದರ ನಗುವಿವಿನಿಂದ, ಮೌನದ ಭಾಷೆಯಿಂದ, ಕಣ್ಣುಗಳ ಮಿಲನದಿಂದ, ಭಾವನೆಗಳ ವಿನಿಮಯದಿಂದ, ಪರಸ್ಪರ ಗೌರವದಿಂದ, ಕರುಣೆಯಿಂದ, ಆಕರ್ಷಣೆಯಿಂದ, ಹೇಗಾದರೂ ಹುಟ್ಟಬಹುದು.
ಡಾ.ದಾಕ್ಷಾಯಿಣಿ ಗೌಡ ಅವರು ಈ ಕವನದಲ್ಲಿ ಪೂರ್ವ- ಪಶ್ಚಿಮದ ಸಮಾಗಮದಂತೆ ಈ ಪ್ರೀತಿ, ಎಂದಿಗೂ ನವ್ಯ, ಭವ್ಯ ಎಂದು ವರ್ಣಿಸಿದ್ದಾರೆ.
ಕೆ.ಎಸ್.ಎಸ್.ವಿ.ವಿ. (ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ) ಹೊರತಂದ ‘ಪ್ರೀತಿ ಎಂಬ ಚುಂಬಕ’ ಧ್ವನಿ ಮುದ್ರಿಕೆಯಲ್ಲಿ ಈ ’ಡೂಯೆಟ್’ ಸೊಗಸಾಗಿ ಮೂಡಿಬಂದಿದೆ, ನೀವೂ ಕೇಳಿ, ಓದಿ ಆನಂದಿಸಿ.

 

east-west.jpg

ಹೆಣ್ಣು – ನನ್ನ, ನಿನ್ನ ಈ ಹೊಸ ಬಾಂಧವ್ಯ

            ನಲ್ಲ, ಈ ಸಮಾಗಮ ಇದು ನವ್ಯ.

 

           ನನ್ನ ಗೋದಿಬಣ್ಣ, ಚಿನ್ನಕ್ಕಿ೦ತ ಚೆನ್ನ,

           ಕಪ್ಪುಕೇಶ ಮೋಡಿ ಮಾಡಿತ೦ತೆ ನಿನ್ನ.

           ಭಾಷೆ, ಮತ, ವರ್ಣ ನಿಲುಕದು ನಮ್ಮನ್ನ

           ಕವಿ ಕರೆದನೆ ಇದ, ಪೂರ್ವ ಪಶ್ಚಿಮಗಳ ಮಿಲನ // ೧//

 

ಗ೦ಡು – ನನ್ನ ನಿನ್ನ ಈ ಹೊಸ ಭಾ೦ಧವ್ಯ

            ನಲ್ಲೆ, ಈ ಸಮಾಗಮ ಇದು ನವ್ಯ.

 

           ಕೇಳಿರದ ಊರಿ೦ದ, ಅರಿಯದ ನಾಡಿ೦ದ ಬ೦ದ ಗೆಳತಿ,

           ಮಿ೦ಚು ನಗೆಯ, ಸ೦ಚು ಮೌನದ ಜ್ಞಾನದೊಡತಿ

           ನಿನ್ನ ದನಿಗೆ, ಹರ್ಷವುಕ್ಕಿ ಕುಣಿವುದೇಕೊ ನನ್ನ ಮನ

           ಕವಿ ಕರೆದನೆ ಇದ ಪೊರ್ವ ಪಶ್ಚಿಮಗಳ ಮಿಲನ

 

ಗ೦ಡು ಮತ್ತು ಹೆಣ್ಣು – ನನ್ನ ನಿನ್ನ ಹೊಸ ಬಾಂಧವ್ಯ

                                     ಈ ಸವಿ ಸಮಾಗಮ ಇದು ಭವ್ಯ.

 

———–ಡಾ. ದಾಕ್ಷಾಯಿಣಿ ಗೌಡ

 

 

            

 

‘ಮೆಲ್ಲ ಮೆಲ್ಲ’ ಡಾ.ಕೇಶವ ಕುಲಕರ್ಣಿ ಅವರ ಪ್ರಣಯ ಕವನ

ಪ್ರೀತಿ, ಪ್ರೇಮ, ಪ್ರಣಯ ಇವು ಒಲಿದ ಎರಡು ಜೀವಗಳು ಬಯಸಿ ಸೇರುವ, ಸೇರಿ ಆಗುವ ದಿವ್ಯ ಸಂಬಂಧವನ್ನು ಗಟ್ಟಿ ಗೊಳಿಸುವ ಕೊಂಡಿಗಳು. ಪ್ರಣಯಕ್ಕೆ ನಿಜವಾದ ಅರ್ಥಬರಬೇಕಾದರೆ ಮೊದಲು ಪ್ರೀತಿ, ಪ್ರೇಮಗಳು ಪರಾಕಾಷ್ಠೆ ಮೆರೆಯಬೇಕು, ಹೀಗೆ ಆದ ಮಿಲನ ಮಹೋತ್ಸವದಿಂದ ಅವರಿಬ್ಬರ ಸಂಭಂದದ ಪ್ರತೀಕವಾಗಿ ಇನ್ನೊಂದು ಜೀವ ಜನ್ಮ ತಾಳುತ್ತದೆ.

‘ಪ್ರಣಯ’ ಎನ್ನುವುದು ಕಾಳಿದಾಸನ ಕಾಲದಿಂದಲೂ ಕವಿಗಳಿಗೆ ಒಂದು ಕಾವ್ಯದ ವಸ್ತು-ವಿಷಯ. ನಲ್ಲ-ನಲ್ಲೆಯ ಪ್ರಣಯದಾಟದ ಪರಿಯನ್ನು ಅಮೋಘವಾಗಿ, ಉನ್ಮಾದದ ತುತ್ತ ತುದಿಯಲ್ಲಿ ಕೇಶವ ಕುಲಕರ್ಣಿ ಅವರು ಈ ಕವನದಲ್ಲಿ ಕಾವ್ಯ ರಸಿಕರಿಗೆ ಉಣಬಡಿಸಿದ್ದಾರೆ.
ಕೆ.ಎಸ್.ಎಸ್.ವಿ.ವಿ (ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ) ಕಳೆದ ಯುಗಾದಿಯಂದು ಹೊರತಂದ ‘ಪ್ರೀತಿಎಂಬ ಚುಂಬಕ’ ಧ್ವನಿಮುದ್ರಿಕೆಯಲ್ಲಿ ಈ ಕವನವು ಹಾಡಾಗಿ ಹೊರಹೊಮ್ಮಿದ್ದು, ಕೇಳುಗರೆಲ್ಲರ ಮನಗೆದ್ದಿದೆ.ಅದ್ಭುತವಾದ ರಾಗ ಸಂಯೋಜನೆ ಮತ್ತು ಹಾಡುಗಾರಿಕೆ ಮತ್ತೆ ಮತ್ತೆ ಕೇಳಬೇಕೆನಿಸುವಂತೆ ಮತ್ತು ತರುತ್ತದೆ.

‘ಮೆಲ್ಲ ಮೆಲ್ಲ’

 

ಮೆಲ್ಲ ಮೃದುಹಾಸದಲಿ ಪೋಲಿನುಡಿಯುಲಿದ
ಕಿವಿಯ ಬಳಿ ಉಸುರುತ್ತ ಉಸಿರ ಬಿಸಿಯ|ಪ!

ಸರಿಸಿ ಮುಂಗುರುಳ ಕಿವಿಯೋಲೆಯಾಡುತ್ತ
ತುಟಿಯ ಒತ್ತಿದ ಹಣೆಗೆ ಹಚ್ಚಿ ಹಸಿಯ ।ಅ.ಪ!

ತುಂಬು ಖಂಡದ ತೋಳು ಬಿಗಿ ಬಾಹುಬಂಧ
ಮೊರದಗಲದೆದೆಯೊಳಗೆ ಹುದುಗಿ ದೇಹ
ಅಧರವರಳಿದ ಘಳಿಗೆ ಹಾಲ್ಜೇನ ಒಸಗೆ
ಬಿಸಿಬೆವರ ಬೆದರಿನಲಿ ಮಿಲನ ಮೋಹ ।೧।

ಧಮನಿ ಧಮನಿಗಳಲ್ಲಿ ದಾಹ ಧಗಧಗಿಸಿ
ನರನಾಡಿ ಕುಣಿ ಕುಣಿದು ಪುಟಿವ ಹರೆಯ
ರೋಮ ರೋಮಗಳಲ್ಲಿ ಸುಖದ ಚಿಗುರೊಡೆಯೆ
ಉನ್ಮತ್ತದಾಳದಲಿ ಜೀವದುದಯ ।೨।