ಈ ಬಾರಿ ನನ್ನ ಅದೃಷ್ಟ ಖುಲಾಯಿಸಿತು. ಒಂದು ಲೇಖನಕ್ಕೆ ಪರದಾಡುವ ನಾನು ಈ ಬಾರಿ ಎರಡು ದೊರೆತವು.
ಎರಡು ವಿಭಿನ್ನ. ಒಂದು ಪ್ರವಾಸದ ಕಥನವಾದರೆ ಮತ್ತೊಂದು ಬಹುಷಃ ಪ್ರವಾಸದ ಮುಂಚೆ ಮಾಡುವ ಕಾರ್ಯ.
ಓದಿ ಅಭಿಪ್ರಾಯ ಅಥವಾ ಅನುಭವ ಹಂಚಿಕೊಳ್ಳಿ.
ಪ್ರವಾಸದ ಕಥನ
ಒಂದು ನಗರವನ್ನು ಎರಡು ದಿನಗಳಲ್ಲಿ ನೋಡಿ ಮುಗಿಸಲಾಗುವುದಿಲ್ಲ ಎಂಬ ಅರಿವೇ ಉತ್ತಮ ಪ್ರವಾಸದ ಲಕ್ಷಣ. ಯಾರ್ಕ್ ಅಂತಹ ಅರಿವನ್ನು ಮೂಡಿಸುವ ನಗರ.ಇಂಥ ಊರುಗಳು ಎರಡು ಸಾವಿರ ವರ್ಷಗಳ ನಂತರವೂ ಜೀವಂತವಾಗಿರುವುದು ಆಕಸ್ಮಿಕವಲ್ಲ.
ದಾಖಲೆಗಳನ್ನು ಕಾಪಾಡುವ, ಹಳೆಯ ಕಟ್ಟಡಗಳನ್ನು ಜೀರ್ಣೋದ್ಧಾರ ಮಾಡುವ, ಅವುಗಳನ್ನು ಜನರಿಗೆ ಅರ್ಥವಾಗುವಂತೆ ತೋರಿಸುವ ಶ್ರಮ ಅಲ್ಲಿ ದಶಕಗಳಿಂದ ನಡೆದುಬಂದಿದೆ. ನಮ್ಮಲ್ಲೂ ಶತಮಾನಗಳ ಇತಿಹಾಸವಿರುವ ಅನೇಕ ಊರುಗಳಿವೆ. ಆದರೆ ಅವುಗಳ ಕಥೆ ಹೇಳುವ ವ್ಯವಸ್ಥೆ ನಮ್ಮಲ್ಲಿ ಎಷ್ಟಿದೆ ಎಂದು ಕೇಳಿಕೊಳ್ಳುವ ಸಮಯ ಇದು.
ಇತಿಹಾಸದಲ್ಲಿ ಹೆಮ್ಮೆಯ ಅಧ್ಯಾಯಗಳೊಂದಿಗೆ ನೋವಿನ ಅಧ್ಯಾಯಗಳೂ ಇರುತ್ತವೆ. ಎರಡನ್ನೂ ಮುಚ್ಚಿಡದೆ ಪ್ರವಾಸಿಗರ ಮುಂದಿಡುವ ಪ್ರಾಮಾಣಿಕತೆಯೇ ಒಂದು ನಾಡಿನ ಪ್ರಬುದ್ಧತೆಯನ್ನು ತೋರಿಸುತ್ತದೆ.
ಪ್ರವಾಸ ಮನರಂಜನೆಯಾಗುವುದರ ಜೊತೆಗೆ ಕಲಿಕೆಯೂ ಆದರೆ ಪ್ರವಾಸವು ಒಂದು ರೀತಿಯ ಹೊಸ ಉತ್ಸಾಹವನ್ನೇ ಕೊಡುತ್ತದೆ. ಹೊರಡುವ ಮುನ್ನ ಆ ಸ್ಥಳದ ಬಗ್ಗೆ ಸ್ವಲ್ಪ ಓದಿ, ಹೋದಮೇಲೆ ಸಮಯ ಕೊಟ್ಟು ನೋಡಿದರೆ ಪ್ರತಿ ಕಲ್ಲೂ ಕಥೆ ಹೇಳುತ್ತದೆ.
ಪ್ರವಾಸವೆಂದರೆ ಫೋಟೋ ತೆಗೆದು ಮುಂದೆ ಸಾಗುವ ಧಾವಂತವಾಗಿರುವ ಇಂದಿನ ದಿನಗಳಲ್ಲಿ, ರಾಮಮೂರ್ತಿಯವರ ಈ ಬರಹ ನಿಧಾನವಾಗಿ ನೋಡುವ, ಇತಿಹಾಸವನ್ನು ಓದಿ ಅರಿಯುವ ಪ್ರವಾಸದ ಮಹತ್ವವನ್ನು ನೆನಪಿಸುತ್ತದೆ.
ಈ ಸುಂದರ ಊರಿಗೆ ಸಾಧ್ಯವಾದರೆ ಭೇಟಿ ಕೊಡಿ .
ನಮ್ಮ ಅಡುಗೆಮನೆಯಲ್ಲೇ ಅಡಗಿದೆಯಂತೆ ಸೌಂದರ್ಯದ ಗುಟ್ಟು!
ತಿನ್ನುವ ಪದಾರ್ಥಗಳಿಗೂ ತಿನ್ನುವುದನ್ನು ಬಿಟ್ಟು ಬೇರೆ ಕೆಲಸಗಳಿವೆಯಂತೆ! ಕೆಲವು ಪ್ರಯೋಗಗಳನ್ನು ಕೇಳಿದರೆ ಆಶ್ಚರ್ಯ, ಇನ್ನು ಕೆಲವನ್ನು ಕೇಳಿದರೆ ಅಯ್ಯೋ ದೇವರೇ ಎನ್ನುವಂತಿದೆ! ನಮ್ಮ ಹಿರಿಯರ ಮನೆಮದ್ದುಗಳಿಂದ ಹಿಡಿದು ಇಂದಿನ ಆಧುನಿಕ ಸೌಂದರ್ಯ ಪ್ರಯೋಗಗಳವರೆಗೆ ಒಂದು ಸುತ್ತು ಹಾಕಿ ಬಂದರೆ, ಫ್ರಿಜ್ ತೆರೆಯುವ ಮುನ್ನವೂ ಎರಡು ಬಾರಿ ಯೋಚಿಸುವಂತಾಗಬಹುದು! ಏನಿರಬಹುದು ಆ ವಿಚಿತ್ರ ಪ್ರಯೋಗಗಳು? ಗುಡೂರ್ ಅವರ ಲೇಖನ ಓದಿ ನೋಡಿ… ನಗುವಿಗೂ ಅಚ್ಚರಿಗೂ ಸಿದ್ಧರಾಗಿ!
-ಸಂ
ಯಾರ್ಕ್ ನಗರದಲ್ಲಿ ಕಳೆದ ಎರಡು ದಿನಗಳು
ಈ ಸುಂದರವಾದ ಮತ್ತು ಐತಿಹಾಸಿಕ ಯಾರ್ಕ್ ನಗರದಲ್ಲಿ ಎರಡು ದಿನಗಳನ್ನು ಕಳೆದ ಮೇಲೆ, ಇನ್ನೂ ಎರಡು ದಿನಗಳು ಇಲ್ಲಿ ಕಳೆಯಬಹುದಾಗಿತ್ತು ಅನ್ನಿಸಿತು. ಈ ದೇಶದ ಅನೇಕ ಹಳ್ಳಿ, ಊರು ಮತ್ತು ಪಟ್ಟಣಗಳಲ್ಲಿ ಚರಿತ್ರೆಗೆ ಸಂಬಂಧಿಸಿದ ವಿಷಯಗಳನ್ನು ತಿಳಿಯುವ ಸಾಧ್ಯತೆ ಇದೆ; ಕಾರಣ, ನೂರಾರು ವರ್ಷಗಳ ದಾಖಲೆಗಳನ್ನು ಎಚ್ಚರಿಕೆಯಿಂದ ಸಂರಕ್ಷಿಸಲಾಗಿದೆ. ಯಾರ್ಕ್ನ ಇತಿಹಾಸ ಸುಮಾರು ೨೦೦೦ ವರ್ಷಗಳದ್ದು. ರೋಮನ್ನರ ಆಡಳಿತ ಕ್ರಿ.ಶ. ೭೦/೭೧ರಲ್ಲಿ, ವೈಕಿಂಗರ ವಶಕ್ಕೆ ಬಂದದ್ದು ಕ್ರಿ.ಶ. ೮೬೬ರಲ್ಲಿ, ನಾರ್ಮನ್ ಆಡಳಿತ ೧೦೬೬ರಲ್ಲಿ; ನಂತರ ೧೨–೧೫ನೇ ಶತಮಾನಗಳಲ್ಲಿ ಅನೇಕ ಯುದ್ಧಗಳಾದ ನಂತರ ಇಂಗ್ಲೆಂಡಿನ ರಾಜಮನೆತನದವರು ಆಳಿದರು.
ಈ ಪಟ್ಟಣ ಮೂರು ಹೆಸರುಗಳಿಂದ ಪ್ರಸಿದ್ಧವಾಗಿತ್ತು:
Eboracum – ರೋಮನ್ನರ ಕಾಲದಲ್ಲಿ
Jorvik – ವೈಕಿಂಗರ ಹೆಸರು
York – ಈಗಿನ ಹೆಸರು
ಇಲ್ಲಿ ನೋಡಬೇಕಾದದ್ದು ಹಳೆಯ ಕಟ್ಟಡಗಳು ಮಾತ್ರವಲ್ಲ; ಯಾರ್ಕ್ನಲ್ಲಿರುವ ಕೆಲವು ರಸ್ತೆಗಳಲ್ಲಿ ಓಡಾಡಿದರೆ ಈ ಊರು ನೂರಾರು ವರ್ಷಗಳ ಹಿಂದೆ ಹೇಗಿತ್ತು ಅನ್ನುವುದರ ಭಾವನೆ ಬರುತ್ತದೆ. ಉದಾಹರಣೆಗೆ, The Shambles ಅನ್ನುವ ಪ್ರದೇಶ ೪೦೦–೫೦೦ ವರ್ಷಗಳ ಹಿಂದೆ ಮಾಂಸ ಮಾರುವ ರಸ್ತೆಯಾಗಿತ್ತು. ಈಗಲೂ ಈ ರಸ್ತೆಯಲ್ಲಿ ಪ್ರಾಚೀನ ಕಟ್ಟಡಗಳನ್ನು ನೋಡಬಹುದು. ಪಾದಚಾರಿಗಳಿಗೆ ಮಾತ್ರ ಪ್ರವೇಶವಿರುವ ಈ ರಸ್ತೆ ಕಲ್ಲು ಚಪ್ಪಡಿಯಿಂದ ಮಾಡಿದ್ದು ಮತ್ತು ಕಿರಿದಾಗಿದೆ.
ಜೆ.ಕೆ. ರೌಲಿಂಗ್ ಬರೆದ Harry Potter ಪುಸ್ತಕದಲ್ಲಿರುವ Diagon Alley ಗೆ ಈ ರಸ್ತೆ ಸ್ಫೂರ್ತಿ ನೀಡಿದೆ ಅನ್ನುವುದು ಕೆಲವರ ಅಭಿಪ್ರಾಯ. ಸುಮಾರು ೬೦೦ ವರ್ಷಗಳ ಹಿಂದೆ ಕಟ್ಟಿದ, Timber-framed ಆಗಿರುವ Little Shambles ಅನ್ನುವ ಪುರಾತನ ಕಟ್ಟಡವನ್ನು ೧೯೫೦ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ; ಇದನ್ನು ನೋಡಲೇಬೇಕು.
ಹತ್ತಿರದಲ್ಲಿ Bettys ಅನ್ನುವ ಹಳೆಯ ಕೆಫೆ ಇದೆ (೧೯೧೯). ಇದು ಬಹಳ ಪ್ರಸಿದ್ಧವಾದ ಸ್ಥಳ. ಇಲ್ಲಿ ಕಾಫಿ ಅಥವಾ ಚಹಾ ಮತ್ತು ಕೇಕ್ಗಳನ್ನು ಸೇವಿಸಿ.
THE SHAMBLES
ಇಂಗ್ಲೆಂಡ್ನ ಮುಖ್ಯವಾದ ಚರ್ಚುಗಳಲ್ಲಿ ಯಾರ್ಕ್ ಮಿನ್ಸ್ಟರ್ ಒಂದು. ಈ ಜಾಗದಲ್ಲಿ ಕ್ರಿ.ಶ. ೬೨೭ರಲ್ಲಿ ಮರದ ಕಟ್ಟಡ ಇತ್ತಂತೆ. ನಂತರ ೧೦೮೦ರಲ್ಲಿ ಆರಂಭವಾಗಿ, ೪೦೦ ವರ್ಷಗಳ ನಂತರ ಈಗ ನೋಡುವ ಕಟ್ಟಡ ಮುಕ್ತಾಯಗೊಂಡಿತು. ಪ್ರವೇಶ ದರ £೨೦. ಸಾಯಂಕಾಲ Evensong ಅನ್ನುವ ಪ್ರಾರ್ಥನೆ ನಡೆಯುತ್ತದೆ; ಬೇಕಾದರೆ ಇದರಲ್ಲಿ ಭಾಗವಹಿಸಬಹುದು. ಗಾಜಿನ ಮೇಲೆ stained glass ವಿನ್ಯಾಸ ಚಿತ್ರಿಸಿರುವುದನ್ನು ನೋಡಲು ಅದ್ಭುತವಾಗಿದೆ. ೨೭೫ ಮೆಟ್ಟಿಲುಗಳನ್ನು ಹತ್ತಲು ಸಿದ್ಧರಿದ್ದರೆ, ಮೇಲಿನಿಂದ ಯಾರ್ಕ್ ನಗರದ Panoramic view ನೋಡಬಹುದು. ಯಾರ್ಕ್ನ ಆರ್ಚ್ಬಿಷಪ್ (Archbishop), ಚರ್ಚ್ ಆಫ್ ಇಂಗ್ಲೆಂಡ್ನ ಎರಡನೇ ಮುಖ್ಯಸ್ಥರು; ಮೊದಲನೆಯವರು ಆರ್ಚ್ಬಿಷಪ್ ಆಫ್ ಕ್ಯಾಂಟರ್ಬರಿ.
೧೮೩೯ರಲ್ಲಿ ಯಾರ್ಕ್ ರೈಲು ನಿಲ್ದಾಣ ನಿರ್ಮಾಣವಾಯಿತು. ಈಗ ಯಾರ್ಕ್ ಬಹುದೊಡ್ಡ ರೈಲು ಕೇಂದ್ರವಾಗಿದೆ. ಇಲ್ಲಿ National Railway Museum ನೋಡಬಹುದು; ಪ್ರವೇಶ ಉಚಿತ. ಇದು ೧೯೨೭ರಲ್ಲಿ ಮೊದಲು ಶುರುವಾಗಿ, ೧೯೭೫ರಲ್ಲಿ ಹೊಸ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಥಾಪಿತವಾಯಿತು.
Jorvik Viking Centre
Time Travel Guide (ಕಾಲದ ಪಯಣ) ನೋಡಲೇಬೇಕಾದ ಸಂಗ್ರಹಾಲಯ. ಈ ಪ್ರದೇಶದಲ್ಲಿ ನಡೆಸಿದ ಪುರಾತತ್ವ ಸಂಶೋಧನೆಯ ಆಧಾರದ ಮೇಲೆ ಇದನ್ನು ಸ್ಥಾಪಿಸಿದ್ದಾರೆ. ಸುಮಾರು ೧೨೦೦ ವರ್ಷಗಳ ಹಿಂದೆ ಇಲ್ಲಿ ವಾಸವಾಗಿದ್ದ ವೈಕಿಂಗ್ ಜನರ ಜೀವನ ಹೇಗಿತ್ತು ಅನ್ನುವುದನ್ನು ಸೊಗಸಾಗಿ ತೋರಿಸಿದ್ದಾರೆ. ಅವರಿದ್ದ ಮನೆಗಳು, ರಸ್ತೆಗಳು ಅಥವಾ ಗಲ್ಲಿಗಳು ಅನ್ನಬಹುದು; Animatronic ಗೊಂಬೆಗಳನ್ನು ಸರಿಯಾದ ಪ್ರಮಾಣದಲ್ಲಿ ಮಾಡಿ, ಜನರು ತಮ್ಮ ಕೆಲಸದಲ್ಲಿ ತೊಡಗಿರುವುದನ್ನು ನೋಡಬಹುದು. ಅಲ್ಲದೆ ಆ ಕಾಲದ ಶಬ್ದ ಮತ್ತು ವಾಸನೆಯೂ ಸೇರಿ, ಅವರ ಜೀವನ ಶೈಲಿ ಹೇಗಿತ್ತು ಅನ್ನುವುದನ್ನು ನೋಡಬಹುದು. ಸುರಂಗದಲ್ಲಿ ರಚಿಸಿದ ಈ ಭವ್ಯವಾದ ದೃಶ್ಯಗಳನ್ನು ನೋಡಲು ಸ್ಕೀ ಕ್ಯಾಬಿನ್ (Ski cabin) ಮಾದರಿಯ ವ್ಯವಸ್ಥೆ ಇದೆ; ನಡೆಯಬೇಕಿಲ್ಲ. ಈ ಸುತ್ತಾಟ ಸುಮಾರು ಒಂದು ಗಂಟೆ. ಒಂದು ಸಲಹೆ: ಪ್ರವೇಶಕ್ಕೆ ಹೆಚ್ಚು ಒತ್ತಡ ಇರುವುದರಿಂದ ಮುಂಚೆಯೇ reserve ಮಾಡಬೇಕು.
Clifford Tower
ಗುಡ್ಡದ ಮೇಲೆ ಕಟ್ಟಿದ ಈ ಕಟ್ಟಡ ೧೧ನೇ ಶತಮಾನದಲ್ಲಿ ಮರದಿಂದ (Wooden Structure) ನಿರ್ಮಾಣವಾಗಿತ್ತು. ಕ್ರಿ.ಶ. ೧೦೬೮ರಲ್ಲಿ ವಿಲಿಯಂ (William the Conqueror) ತನ್ನ ಆಡಳಿತವನ್ನು ವಿರೋಧಿಸಿ ದಂಗೆ ಎದ್ದವರನ್ನು ಅಡಗಿಸಿ, ಇಲ್ಲಿ ತನ್ನ ಆಡಳಿತವನ್ನು ಪ್ರಾರಂಭಿಸಿದ. ಕ್ರಿ.ಶ. ೧೧೯೦ರಲ್ಲಿ ಒಂದು ಆಘಾತಕಾರಿ ಘಟನೆ ನಡೆಯಿತು. ಯಾರ್ಕ್ನಲ್ಲಿ ವಾಸವಾಗಿದ್ದ ಸುಮಾರು ೧೫೦ ಯಹೂದಿಗಳನ್ನು ಒಂದು ದೊಂಬಿ ಇಲ್ಲಿ ಕೂಡಿಹಾಕಿ, ಈ ಕಟ್ಟಡಕ್ಕೆ ಬೆಂಕಿ ಹಚ್ಚಿ ಕೊಂದಿತು. ನಂತರ ೧೩ನೇ ಶತಮಾನದಲ್ಲಿ ಈ ಕೋಟೆಯನ್ನು ಕಲ್ಲಿನಿಂದ ಪುನರ್ನಿರ್ಮಿಸಿ, ಖಜಾನೆಯಾಗಿ, ನಂತರ ಕಾರಾಗೃಹವಾಗಿಯೂ ಉಪಯೋಗಿಸಲಾಯಿತು. ಕ್ಲಿಫರ್ಡ್ ಟವರ್ ಅನ್ನುವ ಹೆಸರು ಬಂದದ್ದು ಹೀಗೆ: ಕ್ರಿ.ಶ. ೧೩೨೨ರಲ್ಲಿ ರಾಬರ್ಟ್ ಡಿ ಕ್ಲಿಫರ್ಡ್, ಎರಡನೇ ಎಡ್ವರ್ಡ್ (Edward the Second) ಮೇಲೆ ದಂಗೆ ಎದ್ದ ಕಾರಣಕ್ಕೆ ಅವನ ಶಿರಚ್ಛೇದ ಮಾಡಿ, ಅವನ ಶರೀರವನ್ನು ಈ ಕಟ್ಟಡದ ಮೇಲೆ ಪ್ರದರ್ಶನಕ್ಕೆ ಇಟ್ಟಿದ್ದರಂತೆ!
York City Walls
ಯಾರ್ಕ್ ನಗರದ ಸುತ್ತಲೂ, ಪೂರ್ತಿ ಇಲ್ಲ, ಕಲ್ಲಿನ ಗೋಡೆ ಇದೆ. ಇಂಗ್ಲೆಂಡ್ನಲ್ಲಿ ಇಂತಹ ಗೋಡೆ ಇರುವ ನಗರಗಳು ಅನೇಕ: ಕ್ಯಾಂಟರ್ಬರಿ, ಚೆಸ್ಟರ್ ಮುಂತಾದವು. ರೋಮನ್ನರು ಕ್ರಿ.ಶ. ೭೧ರಲ್ಲಿ ಈ ನಗರದ ಸುತ್ತ ಕಟ್ಟಲು ಪ್ರಾರಂಭಿಸಿದರು. ನಂತರ ಅನೇಕ ರಾಜಮನೆತನದವರು ಇದನ್ನು ವಿಸ್ತರಿಸಿದರು. ಇದು ಸುಮಾರು ಎರಡು ಮೈಲಿ ಉದ್ದವಿದೆ. ದಾರಿಯಲ್ಲಿ ನಾಲ್ಕು Gate House ಗಳನ್ನು ನೋಡಬಹುದು. ಒಂದರಲ್ಲಿ (Mickle Gate) ದೇಶದ್ರೋಹಿಗಳ ಕತ್ತರಿಸಿದ ತಲೆಗಳನ್ನು ಪ್ರದರ್ಶನ ಮಾಡಿದ್ದರಂತೆ!!
CLIFFORD CASTLE/tower
ಈ ನಗರವನ್ನು ಚಾಕೊಲೇಟ್ ನಗರ ಅಂತಲೂ ಕರೆಯಬಹುದು. ಪ್ರಸಿದ್ಧ Rowntree ಮತ್ತು Terry ಕಂಪನಿಗಳು ೧೯ನೇ ಶತಮಾನದಿಂದ ಇಲ್ಲಿ ತಯಾರಿಕೆ ಮಾಡುತ್ತಿದ್ದವು. ಇಲ್ಲಿ ಮುಖ್ಯವಾದವರು Rowntree ಮನೆತನದವರು. ಅವರು ಕ್ರಿಶ್ಚಿಯನ್ Quaker ಪದ್ಧತಿಯ ಪಂಗಡಕ್ಕೆ ಸೇರಿದವರು ಮತ್ತು ಕೆಲಸಗಾರರನ್ನು ಮಾನವೀಯತೆಯಿಂದ ನೋಡಿದವರು. ಮೊಟ್ಟಮೊದಲ ಬಾರಿಗೆ ಸೋಶಿಯಲ್ ವೆಲ್ಫೇರ್ (Social Welfare) ಅಂದರೆ ಸಮಾಜ ಕಲ್ಯಾಣ ಇವರ ಸಂಸ್ಥೆಯಲ್ಲಿ ಪ್ರಾರಂಭವಾಯಿತು. ದಿನಕ್ಕೆ ೮ ಗಂಟೆ ಕೆಲಸ ಮಾತ್ರ, ಕಂಪನಿ ಆಸ್ಪತ್ರೆ, ಪಿಂಚಣಿ ಯೋಜನೆ, ಮಕ್ಕಳಿಗೆ ಶಾಲೆಗಳು ಇತ್ಯಾದಿ ಸೌಕರ್ಯಗಳನ್ನು ಮೊದಲ ಬಾರಿಗೆ ಕೊಟ್ಟವರು ಈ ಮನೆತನದವರು.
ಇವರು ಸ್ಥಾಪಿಸಿದ Rowntree Foundation ಇಂದಿಗೂ ಒಂದು ಪ್ರಮುಖ ಸ್ವತಂತ್ರ ಸಾಮಾಜಿಕ ಬದಲಾವಣೆ ಸಂಸ್ಥೆಯಾಗಿದೆ. ಬಡತನಕ್ಕೆ ಕಾರಣವಾಗುವ ಮೂಲ ಸಮಸ್ಯೆಗಳನ್ನು ಹುಡುಕಿ ಅವುಗಳನ್ನು ಬಗೆಹರಿಸುವುದು ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೂ ಸಮಾನತೆ ಮತ್ತು ನ್ಯಾಯ ಸಿಗಬೇಕು ಅನ್ನುವುದು ಇದರ ಮುಖ್ಯ ಗುರಿಯಾಗಿದೆ.
ಇನ್ನೂ ನೋಡಬೇಕಾದ ಸ್ಥಳಗಳು ಅನೇಕ.
ಮೇಲೆ ಹೇಳಿದಂತೆ, ಈ ನಗರದಲ್ಲಿ ಇನ್ನೂ ಎರಡು ದಿನಗಳನ್ನು ಕಳೆಯಬಹುದಾಗಿತ್ತು. ಯಾರ್ಕ್ ಕ್ಯಾಸಲ್ ಸಂಗ್ರಹಾಲಯ, ನದಿ ದೋಣಿ ಪ್ರಯಾಣ ಇತ್ಯಾದಿಗಳನ್ನು ಬಹುಶಃ ಮುಂದಿನ ಸಲ ಹೋದಾಗ ನೋಡಬೇಕು.
ರಾಮಮೂರ್ತಿ
ಕಾಂಗಲ್ಟನ್
ಚೆಶೈರ್
YORK MINSTER
ಚಿತ್ರ ಕೃಪೆ – ಅಂತರ್ಜಾಲ
*********************************************************************************************************
ತಿನ್ನುವ ಪದಾರ್ಥಗಳ ಬೇರೆಯ ಬಳಕೆಗಳು – ಲಕ್ಷ್ಮೀನಾರಾಯಣ ಗುಡೂರ್
ಆಹಾರ ಪದಾರ್ಥಗಳ ಮುಖ್ಯಬಳಕೆ, ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂತೆ ತಿನ್ನಲು ಉಪಯೋಗಿಸುವುದು. ಇದು ಪ್ರಾಣಿಗಳ ವಿಕಾಸದೊಂದಿಗೆ ಅರ್ಥವಾಗಿ, ಬೆಳೆದು ಬಂದಿರುವ ಜ್ಞಾನ. ಹೊಟ್ಟೆಗೆ ಹಾಕಲು ವ್ಯವಸ್ಥೆ ಮಾಡಿಕೊಳ್ಳುವುದರ ಮಹತ್ವ ಒಂದು ಕೋಶದ ಅಮೀಬಾದ ಬಂಧುಬಾಂಧವರಿಗೂ ಗೊತ್ತಾಗಿಬಿಟ್ಟಿತ್ತು. ಆದರೆ, ಈ ಪದಾರ್ಥಗಳ ಅಥವಾ ಅದರ ಭಾಗಗಳ ಬಳಕೆ ಬೇರೆಯ ಕೆಲಸಕ್ಕೂ ಬರುವುದರ ಬಗ್ಗೆ ನೀವೆಲ್ಲ ತಿಳಿದಿರಬಹುದು, ಅದು ಕೈಯಲ್ಲೇ ಅಡ್ವರ್ಟೈಸ್ಮೆಂಟು, ರೀಲು, ಟಿಕ್ ಟಾಕುಗಳ ನೋಡುವಿಕೆಯಿಂದ ಬರುವ ಮಾಡರ್ನ್ ಯುಗದ ಸಾಮಾನ್ಯ ಜ್ಞಾನ. ನನಗೇನೂ ಇವತ್ತು ಬೇರೆ ಕೆಲಸವಿಲ್ಲದ್ದರಿಂದ ಈ ಬಗ್ಗೆ ಸ್ವಂತ-ಸಂಶೋಧನೆ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಅದರ ಬಗ್ಗೆ ಬರೆದು, ಗೊತ್ತಿರುವವರಿಗೂ ಗೊತ್ತಿಲ್ಲದವರಿಗೂ ತಿಳಿಯಪಡಿಸುವ ಆಶಯದೊಂದಿಗೆ ಆರಂಭಿಸಿರುವೆ. ಇದು ಮಾನವಕಲ್ಯಾಣಕ್ಕಾಗಿ ಮಾಡುತ್ತಿರುವ ಕಾರ್ಯವಾಗಿರುವ ಕಾರಣದಿಂದ, ನೀವೆಲ್ಲರೂ ಕೈಗೂಡಿಸುವ ಮನಸ್ಸು ಮಾಡಿ, ಸೂಪರ್ ಸಕ್ಸೆಸ್ಸು ತಂದುಕೊಡಬಹುದು. ಮಾಡಲು ನಿಮಗೇನೂ ಬೇರೆ ಕೆಲಸವಿಲ್ಲದಿದ್ದರೆ!
(ವಿಸೂ: ಈ ಬರಹದಲ್ಲಿರುವ ಮಾಹಿತಿಗೆ ಯಾವುದೇ ಆಧುನಿಕ ವಿಜ್ಞಾನದ ಆಧಾರ ಇಲ್ಲದೇ ಇರಬಹುದಾದ್ದರಿಂದ, ಮಾನವ ಪ್ರಯೋಗಗಳ ಸಪೋರ್ಟ್ ಇದ್ದರೂ, ಸ್ವತಃ ಬಳಸುವ ಅಥವಾ ನಿಮಗೆ ಗೊತ್ತಿರುವವರಿಗೆ ಹೇಳುವುದರೆಲ್ಲದರ ಸಂಪೂರ್ಣ ಜವಾಬ್ದಾರಿ ನಿಮ್ಮದೇ, ನನ್ನದಲ್ಲ – ಲೇ.)
ಹಲವು ಹತ್ತು ಸಾವಿರ ವರ್ಷಗಳ ಹಿಂದೆ ಆದಿಮಾನವನೊಬ್ಬ, ಹೊಡೆದು ತಂದ ಪ್ರಾಣಿಯನ್ನು ತಿನ್ನುವಷ್ಟು ತಿಂದಾದ ಮೇಲೆ, ಗುಹೆಯಲ್ಲಿ ತನ್ನ ಜಗುಲಿಯ ಮೇಲೆ ಹಾಗೆಯೇ ಅಡ್ಡಾದನಂತೆ. ಪ್ರಾಣಿಯ ಉಳಿದ ಭಾಗಗಳನ್ನು ಏನು ಮಾಡುವುದು, ಸುಮ್ಮನೆ ಯಾಕೆ ವೇಷ್ಟು ಮಾಡುವುದು ಅನ್ನುವುದೊಂದು ವಿಚಾರ ಅವನ ಆದಿತಲೆಯಲ್ಲಿ ಉದ್ಭವಿಸಿತಂತೆ. ಪ್ರಾಣಿಗಳು ಚಳಿಯಲ್ಲೂ ಬೆಚ್ಚಗೆ ಓಡಾಡುವುದನ್ನು ನೋಡಿದ್ದನಾಗಿ, ಅದರ ಚರ್ಮವನ್ನು ಸುತ್ತಿಕೊಂಡು ಎಕ್ಸ್ಪೆರಿಮೆಂಟು ಮಾಡಿದನಂತೆ. ಸುತ್ತಿಕೊಂಡು ಹೊರಗೆಲ್ಲ ಆರಾಮವಾಗಿ ಓಡಾಡಿ ಬಂದನಂತೆ. ವಾಸನೆ ತಡೆಯಲಾಗದಿದ್ದರೂ, ಚಳಿಯನ್ನು ತಡೆದದ್ದರಿಂದ ಆ ಚರ್ಮದ ಹೊದಿಕೆ ಅಪ್ಯಾಯವೆನಿಸಿತೆನ್ನಿ. ಇದನ್ನು ನೋಡಿದ ಅವನ ಗುಂಪಿನ ಇತರೆ ಸದಸ್ಯರೂ ಚರ್ಮ ಸುತ್ತಿಕೊಂಡು ಪೀರ್ ರಿವ್ಯೂ ಮಾಡಿದ್ದರಿಂದ ಲೆದರ್ ವೇರ್ ಜನಪ್ರಿಯವಾಗತೊಡಗಿತು. ಆಗಿನ್ನೂ ಪೇಟೆಂಟ್ ಹಾವಳಿ ಇರಲಿಲ್ಲವಾಗಿ, ಎಲ್ಲರೂ ತಮ್ಮ ಪ್ರಾದೇಶಿಕ, ಹವಾಮಾನ ಮತ್ತು ರೆಟ್ಟೆಯ ಬಲಕ್ಕೆ ಅನುಗುಣವಾಗಿ (ಹೊಡೆಯುವ ಪ್ರಾಣಿ ಬದಲಾಗುತ್ತದಲ್ಲ!) ವಸ್ತ್ರ ಧರಿಸುವವರಾದರು.
ಇನ್ನು ಉಳಿದ ಕೊಬ್ಬಿನಲ್ಲಿ ಹೊರಳಾಡಿದವನೊಬ್ಬನ ಹೊಳೆಹೊಳೆಯುವ ಮೈಕಾಂತಿಗೆ ಮನಸೋತವರಾರೋ ಅದನ್ನು ಸ್ವಲ್ಪ ಸ್ವಲ್ಪವೇ ಮೈಗೆ ಉಜ್ಜಿಕೊಂಡು ಮಾಯಿಶ್ಚರೈಸರಿನ ಜನನಕ್ಕೆ ಕಾರಣರಾದರು.
ಈಗ ಇದೆಲ್ಲ ಯಾಕೆ ಅಂದರೆ, ಮೊನ್ನೆ ಮಾತಾಡುವಾಗ ನಮ್ಮ ಬಾಲ್ಯದ ಒಂದು ಘಟನೆ ನೆನಪಾಯಿತು. ನಮ್ಮ ಕಸಿನ್ ಒಬ್ಬಳಿಗೆ ಈ ರೀತಿಯ ಮನೆಯಲ್ಲೇ ಮಾಡಬಹುದಾದ ಸೌಂದರ್ಯವರ್ಧನ ಕಾರ್ಯಕ್ರಮಗಳ ಹುಚ್ಚಿತ್ತು. ಒಂದಿನ ಬೆಳಗ್ಗೆ ಅವಳ ಅಜ್ಜಿ ಎಬ್ಬಿಸಲು ಬಂದಾಗ ತಲೆ ಯಾವುದು, ಯಾವುದು ಗೊತ್ತಾಗದಂತೆ ಕಪ್ಪು ರಾಶಿಯಲ್ಲಿ ಮುಚ್ಚಿ ಹೋಗಿತ್ತು. ಅಜ್ಜಿಗೆ ಗಾಬರಿಯಾಗಿ ಮುಟ್ಟಿನೋಡಿದರೆ, ಅದು ಲಕ್ಷಗಟ್ಟಲೆ ಇರುವೆಗಳ ರಾಶಿ! ಹೌಹಾರಿ ಅವಳನ್ನು ಕೂಗಿ ಎಬ್ಬಿಸಿ ಬಚ್ಚಲಿಗೆ ಓಡಿಸಲಾಯಿತು. ಅವಳೂ ಹೆದರಿ ಮೂರ್ಛೆ ಹೋಗುವುದೊಂದು ಬಾಕಿ. ತಲೆ ತೊಳೆದುಕೊಂಡು, ಹೇನು ತೆಗೆಯುವ ಹಣಿಗೆಯಲ್ಲಿ ಇರುವೆಯೆಲ್ಲ ತೆಗೆದು, ಸುಸ್ತಾಗಿ ಬಂದ ಮೇಲೆ ಅವಳು ಹೇಳಿದ್ದು – ರಾತ್ರಿ ಮಲಗುವಾಗ ಕೂದಲು ಮೆತ್ತಗೆ, ಹೊಳೆಯುವಂತೆ ಆಗಲೆಂದು ಮೊಟ್ಟೆಯ ಲೋಳೆಯನ್ನು ಮೆತ್ತಿಕೊಂಡು ಮಲಗಿದ್ದಳಂತೆ! ಕಲಬುರ್ಗಿಯ ಬೇಸಗೆಯಲ್ಲಿ, ನೆಲದ ಮೇಲೆ ಮಲಗುವಾಗ ಇರುವೆಗಳ ಬಗ್ಗೆ ಯೋಚನೆ ಬರಲಿಲ್ಲ, ಅನ್ನುವುದು ಆಶ್ಚರ್ಯ! ನೀರಿಗೇ ಇರುವೆ ಹತ್ತುವಾಗ, ಮೊಟ್ಟೆಗೆ ಹತ್ತದೇ ಇರುವುದೇ? ಅದಾದ ಮೇಲೆ ತಿಂಗಳುಗಟ್ಟಲೆ, ಈ ವಿಷಯದ ಬಗ್ಗೆ ಅವಳನ್ನು ಚುಡಾಯಿಸಿದ್ದೇ ಬಂತು.
ಮನೆಯಲ್ಲಿ ಇಬ್ಬರು ತಂಗಿಯರು, ಮೂವರು ಅತ್ತೆಯ ಹೆಣ್ಣುಮಕ್ಕಳು ಇದ್ದಾಗ ಇಂತಹ ಸೌಂದರ್ಯವರ್ಧಕಗಳ ಬಳಕೆ ಮತ್ತು ಮಾತು ಇದ್ದದ್ದೇ. ಮಾರನೇ ದಿನ ಬೆಳಗ್ಗೆ ನೋಡಿದರೆ ಗೊತ್ತಾಗಬೇಕು ಹಿಂದಿನ ದಿನ ಯಾವ ಫೇಸ್ ಮಾಸ್ಕ್ ಉಪಯೋಗವಾಗಿತ್ತು ಅಂತ.
ಬೆಳಿಗ್ಗೆಯೇ ಮನೆಯೆಲ್ಲ ಪಕೋಡ – ಬುರುಬುರಿಯ ವಾಸನೆ ಬಂದರೆ ಅದು ಕಡಲೆಹಿಟ್ಟಿನ ಪ್ರಯೋಗದ ಪರಿಣಾಮ. ಕಡಲೆಹಿಟ್ಟನ್ನು ಗಟ್ಟಿಯಾಗಿ ನೀರಿನಲ್ಲಿ, ಕೆಲವೊಮ್ಮೆ ಹಾಲಿನಲ್ಲಿ ಕಲಿಸಿ ಮುಖಕ್ಕೆ ಹಚ್ಚಿ, ಒಂದೆರಡು ಗಂಟೆ ಬಿಟ್ಟು ತೊಳೆದುಕೊಂಡರೆ ಆಯಿತು.
ನಿಂಬೆಹಣ್ಣಿನ ವಾಸನೆಯೇ? ಅಡುಗೆಗೆ ಹಿಂಡಿಯಾದ ಮೇಲೆ ಎಸೆಯುವುದಕ್ಕಿಂತ ಮುಂಚೆ ಮುಖಕ್ಕೆ ಉಜ್ಜಿ, ಮುಖದ ಕಾಂತಿಯನ್ನು ಹೆಚ್ಚಿಸುವ ಪ್ರಯತ್ನ.
ಹಾಲಿನ ಕೆನೆ ಮಾಯವಾಗಿದೆಯೇ? ತಂಗಿಯ ಮುಖ ನೋಡಿದರೆ ಸಾಕು, ಗೊತ್ತಾಗುತ್ತದೆ, ಎಲ್ಲಿ ಹೋಯಿತೆಂದು.
ಬಚ್ಚಲಲ್ಲಿ ಜಿಗುಟಾದ ಪಾತ್ರೆ ಬಿದ್ದಿದೆಯೇ – ಅದು ಬೆಲ್ಲದ ನೀರಿನದು; ಬೆಲ್ಲ – ನೀರು ತಲೆಗೆ ಕೂದಲು ಉದುರದಂತೆ ತಡೆಯಲು.
ಮುಖ ಹಳದಿಯಾಗಿದೆಯೇ, ಹೆದರಬೇಡಿ! ಕೆನೆ-ಅರಿಶಿಣದ ಮಾಸ್ಕ್ ಬಳಸಿರುವುದು ಖಚಿತ.
ತರಕಾರಿ ಇದೆಯೇ – ಸೌತೆಕಾಯಿಯ ಫೇಸ್ ಮಾಸ್ಕ್, ಕಣ್ಣಿಗೆ ಸೌತೆಕಾಯಿಯ ಬಿಲ್ಲೆ ಉಪಯೋಗಿಸಿ.
ಅಷ್ಟೇ ಅಲ್ಲ, ಜೇನುತುಪ್ಪ, ಮೊಸರು ಇನ್ನಿತರ ಆಹಾರ ಪದಾರ್ಥಗಳ ಬಳಕೆಯೂ ಸಾಮಾನ್ಯವೇ.
ಇದೆಲ್ಲ ನಾನು ನೋಡಿರುವುದು, ಇನ್ನೂ ನೋಡದಿರುವುದು ಕೆಲವಿವೆ – ಕರಗಿಸಿದ ಚೀಸಿನ ಕ್ರೀಮು, ಮೇಯೋನೇಸ್ ಕ್ರೀಮು ಕಣ್ಣಿಗೆ, ಕತ್ತೆಯ ಹಾಲಿನ ಲೇಪಗಳು (ಇದೇನೂ ಹೊಸದಲ್ಲ, ರಾಣಿ ಕ್ಲಿಯೋಪಾತ್ರಾ ದಿನವೂ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳಂತೆ!), ಹುದುಗು ಬರಿಸಿದ ಕಾಳುಗಳ ಲೇಪನ, ಗೋದಿಯ ತೌಡು ಮತ್ತು ಮೊಸರಿನ ಲೇಪ, ಮೀನಿನ ಹುರುಪೆಯಿಂದ ಮಾಡಿದ ಲೇಪಗಳು, ಹಂದಿಯ ದೇಹದ ಭಾಗಗಳಿಂದ ತಯಾರಾದ ಕೊಲೆಜೆನ್ (collagen) ಜೆಲ್ಲಿ ಕ್ರೀಮು, ಮತ್ತು ಹೊಸ ಹುಚ್ಚಾದ ಮಾಚಾ ಲಾಟೆ ಕಣ್ಣಿನ ಕ್ರೀಮು ಇತ್ಯಾದಿ. ಮೆಣಸಿನ ಕಾಯಿಯ ಎಣ್ಣೆಯೂ ಬಳಕೆಯಲ್ಲಿದೆ – ರಕ್ತ ಸಂಚಾರ ಹೆಚ್ಚಿಸುತ್ತದೆಯಂತೆ!!
ಇದೆಲ್ಲ ಎಲ್ಲ ಕಡೆ ಇದೆಯೇ ಎಂದು ನೋಡುತ್ತಿದ್ದಾಗ ಇಂಟರ್ನೆಟ್ಟಿನಲ್ಲಿ ಕಂಡುಬಂದ ಪದಾರ್ಥಗಳು. ಮಿಜಿಮಿಜಿ ಮಾಡಿಕೊಳ್ಳುವವರು ಮುಂದೆ ಓದದಿರುವುದು ವಾಸಿಯೇನೋ!
ಕುದುರೆಯ ಕೊಬ್ಬಿನ ಎಣ್ಣೆ, ಅಸ್ಥಿಮಜ್ಜೆ (bone marrow), ಬಸವನ ಹುಳುವಿನ ಲೋಳೆ, ತಿಮಿಂಗಿಲಿನ ವಾಂತಿ (ಆಂಬರ್ಗ್ರಿಸ್ – ಸುಗಂಧದ್ರವ್ಯಗಳ ತಯಾರಿಯಲ್ಲಿ ಬಳಕೆ), ಕುರಿಗಳ ಪ್ಲಾಸೆಂಟಾ (ಮಾಸು), ಹಾವು ಮತ್ತು ಜೇನುಹುಳುಗಳ ವಿಷ, ಪಕ್ಷಿಗಳ ಗೂಡುಗಳು ಮತ್ತು ಹಿಕ್ಕೆ, ಆಕಳ ಸಗಣಿಯ ಎಕ್ಸ್ಟ್ರಾಕ್ಟ್ (similar to vanilla extract!) ಮತ್ತು ಗೂಳಿಗಳ ವೀರ್ಯ!
ಇಲ್ಲಿಂದ ಮುಂದೆ ಇನ್ನೇನೋ ಗೊತ್ತಿಲ್ಲ!! ಇಲ್ಲಿಗೇ ನಿಲ್ಲಿಸುವ ಅಲ್ಲವೇ?
ನಿಮ್ಮಲ್ಲೂ ಇಂಥದೇನಾದರೂ ಇದ್ದರೆ, ಕಾಮೆಂಟ್ ಮಾಡಿ ಹಂಚಿಕೊಳ್ಳಿ.
– ಲಕ್ಷ್ಮೀನಾರಾಯಣ ಗುಡೂರ್.
ಪ್ರೆಸ್ಟನ್. ಯುಕೆ.

ಚಿತ್ರ ಕೃಪೆ – ಕೃತಕ ಬುದ್ಧಿಮತ್ತೆ


