ಬಾಲಿ ದ್ವೀಪದಲ್ಲೊಂದು ಡೆಸ್ಟಿನೇಷನ್ ವೆಡ್ಡಿಂಗ್!-ಶ್ರೀವತ್ಸ ದೇಸಾಯಿ ಲೇಖನ



ಗಮ್ಯ (ಡೆಸ್ಟಿನೇಷನ್)

Marriage is not a destination but a journey of love and of growth; of curiosity not of criticism.(Anon). ಆದರೆ wedding is just the beginning!
ವರ್ಷಾ-ಗಿಯೋಂ ಅವರ ದಾಂಪತ್ಯ ಪಯಣ ಈಗ ತಾನೆ ಶುರುವಾಗಿದೆ. ಈ ತರಹದ ಡೆಸ್ಟಿನೇಷನ್ ವೆಡ್ಡಿಂಗ್ ಈಗ ಅನೇಕ ಕಾರಣಗಳಿಂದ ಬಹು ಜನಪ್ರಿಯವಾಗುತ್ತಿವೆ. ಆಧುನಿಕ ಮಧ್ಯಮ ವರ್ಗದವರು ಸಹ ಒಂದು ದಿನದ ಮದುವೆಯನ್ನು ಹಿಂದೆ-ಮುಂದೆ ಇನ್ನಿಷ್ಟು ದಿನಗಳ ರಜೆ ಕೂಡಿಸಿ, ವೆಕೇಶನ್ನಿಗೆ ಜೋಡಿಸಿ ’wed-cation’ ಆಗಿ ಪರಿವರ್ತಿಸಿ ಹೊಸ ’ಟ್ರೆಂಡ್’ ಪ್ರಾರಂಭ ಮಾಡಿ ಹಲವು ವರ್ಷಗಳಾದವು. ಮದುಮಕ್ಕಳಿಗೆ, ಅವರ ತಂದೆ ತಾಯಿಗಳಿಗೆ ಅಷ್ಟೇ ಅಲ್ಲ, ಆಮಂತ್ರಿತ ಅತಿಥಿಗಳಿಗೂ ಒಂದು ದೊಡ್ಡ ಆಕರ್ಷಣೆಯಾಗಿದೆ. ಇಟಲಿ, ಫ್ರಾನ್ಸ್, ಮೆಕ್ಸಿಕೊ, ಗ್ರೀಸ್, ಸ್ಪೇನ್ ಮುಂತಾದ ದೇಶಗಳಲ್ಲಿಯ ಪ್ರೇಕ್ಷಣಿಯ ಮತ್ತು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ಥಳಗಳನ್ನು ಸಾಮಾನ್ಯವಾಗಿ ಆಯ್ಕೆ ಮಾಡಿರುತ್ತಾರೆ. ಬಿಸಿಲು, ಬೀಚು, ಮರಳುಗಳ ಹಿನ್ನೆಲೆಯಲ್ಲಿ ಒಳ್ಳೆಯ ಫೋಟೋ, ವಿಡಿಯೋ ಶೂಟ್ ಗಳು. ನಂತರ ಸಾಮಾಜಿಕ ತಾಣಗಳಲ್ಲೆಲ್ಲ ಹರಿಬಿಡಲು ಅನುಕೂಲ ಸಹ. ಮದುಮಕ್ಕಳಿಗೆ ಹನಿಮೂನ್, ಗೆಸ್ಟ್ ಗಳಿಗೆ ಹೊಸ ಜಾಗದ ಹೊಸ ದೇಶದ ಅನ್ವೇಷಣೆ! ಗೆಸ್ಟ್ ಲಿಸ್ಟ್ ನಲ್ಲಿ ಆತ್ಮೀಯರಿಗಷ್ಟೇ ಆಹ್ವಾನ. ಇದ್ದ ಊರಲ್ಲೇ ಮದುವೆ ಮಾಡಿದರೆ ಕುಟುಂಬದ ಎಲ್ಲ ಬಳಗದವರಿಗೂ ಆಹ್ವಾನಪತ್ರಿಕೆ ಕೊಡುವ ಒತ್ತಾಯ ಇರುತ್ತದೆ. ಅದೇ ತರದಲ್ಲಿ ಸಹೋದ್ಯೋಗಿಗಳಲ್ಲಿ ಯಾರನ್ನು ಬಿಡಲಿ ಎನ್ನುವ ದ್ವಂದದಿಂದ ಪಾರಾಗಲಿಕ್ಕಾಗುತ್ತದೆ. ಖರ್ಚು ಮಾಡಿ ಬಂದವರಿಗೂ ಚಿರಪರಿಚಿತ ಮತ್ತು ಹತ್ತಿರದವರೊಡನೆ ನಾಲ್ಕೈದು ದಿನಗಳನ್ನು ಕಳೆಯಲು ಅಪರೂಪದ ಅವಕಾಶ. ಆತಿಥೇಯರಿಗೆ ಖರ್ಚು ಸಹ ಕಡಿಮೆ ಎಂದು ಬಹುಜನರ ಅಂದಾಜು.


ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತ ಗಾದೆಯೇ ಇದೆ. ಮದುವೆ ಬರೀ ಸಡಗರವಲ್ಲದೆ ಎಲ್ಲರನ್ನು ಒಟ್ಟುಗೂಡಿಸಿ, ಖರ್ಚು-ವೆಚ್ಚಗಳನ್ನು ನಿಭಾಯಿಸಿ, ಎಲ್ಲರನ್ನೂ ಸಂತೋಷ ಮತ್ತು ತೃಪ್ತಿಯಲ್ಲಿಡುವ ಜವಾಬ್ದಾರಿ ಸುಲಭದ ಕೆಲಸವಲ್ಲ. ಈ ಮದುವೆಗೆ ಜಗತ್ತಿನ ನಾಲ್ಕು ಖಂಡಗಳಿಂದ, ಎಂಟು ದೇಶಗಳಿಂದ ಬಂಧು ಬಳಗ ಮತ್ತು ಮಿತ್ರರು ಬರುವವರೆಂದ ಮೇಲೆ ಸ್ಥಳೀಯ ಈವೆಂಟ್ ಆರ್ಗನೈಸರ್ ಇಲ್ಲದೆ ಕೆಲಸ ಇನ್ನೂ ಕಷ್ಟಕರವಾಗುತ್ತಿತ್ತು. ನಾನೇ ಎಣಿಕೆ ಹಾಕಿದಂತೆ ಅಟ್ಲಾಂಟಾದಿಂದಲೆ ನಿಕಟವರ್ತಿ ಸ್ನೇಹಿತರು ಬಳಗದವರು ಐವತ್ತಕ್ಕೂ ಹೆಚ್ಚು ಜನ ಬಂದಿದ್ದರು. ವಸತಿ ಹೋಟೆಲ್ಲುಗಳಿಂದ ಐದು ಕಿಲೋಮೀಟರ್ ದೂರದಲ್ಲಿ ಹೊರಾಂಗಣದಲ್ಲಿತ್ತು. ಮದುವೆ ಮಂಟಪ ಉಲುವಾಟು ಹತ್ತಿರದ ವಂಡರ್ ಲ್ಯಾಂಡ್ ನ ಪಕ್ಕದ ಬಿಳಿ ಮರುಳಿನ ಸ್ವಚ್ಛ ಬೀಚಿನ ಸಮುದ್ರದಿಂದ ೭೦ ಮೀಟರ್ ಎತ್ತರದ ಶೃಂಗದ ಮೇಲೆ ರಮಣೀಯವಾದ ಸ್ಥಳದಲ್ಲಿತ್ತು. ಬಸ್ಸಿಗೆ ಕಡಿದಾದ ದಾರಿಯಲ್ಲಿ ಹೋಗಿ ತಲುಪಲು ಒಮ್ಮೊಮ್ಮೆ ಅರ್ಧಗಂಟೆಗಿಂತ ಹೆಚ್ಚು ಸಮಯ ಬೇಕಾಗುತ್ತಿತ್ತು. ಜ್ವಾಲಾಮುಖಿಗಳಿಂದ ಕೂಡಿದ ಗುಡ್ಡ ಕಣಿವೆಗಳ ಪ್ರದೇಶ ಬಾಲಿ. ಕಾಕತಾಳೀಯವೆಂದರೆ ಮದುಮಗನ ಬೋರ್ಜೆ ಕುಟುಂಬ ನೆಲೆಸಿದ್ದ ಊರು ಫ್ರಾನ್ಸಿನ ಲಿಯೋನ್ ಹತ್ತಿರದ ಲಪೂಯಿ ಎನ್ವೆಲೆದ ಅರ್ಥ ಸಹ ಜ್ಯಾಲಾಮುಖಿ ಪರ್ವತ! ಅಲ್ಲಿಂದ ಆತನ ಬಾಲ್ಯ ಮಿತ್ರರು ಮತ್ತು ಸಹೋದ್ಯೋಗಿಗಳು ಸಹ ಬಂದು ಬೀಗರೊಂದಿಗೆ ಬೆರೆತು ಸೆಟ್ಟಾದುದು, ’ಬರಾತ’ದಲ್ಲಿ ಬಾಲಿವುಡ್ಡಿನ ಮೆರವಣಿಗೆಯಲ್ಲಿ ಕಾಣಿಸುವ ದೃಶ್ಯದಂತೆ ಕುಣಿದದ್ದು ಕಣ್ಣಿಗೆ ಹಬ್ಬವಾಗಿತ್ತು.
ಹೀಗಾಗಿ ಅಲ್ಲಿ ಪಾಶ್ಚಿಮಾತ್ಯ ಮತ್ತು ಬಾರತೀಯ ಸಂಸ್ಕೃತಿಗಳ ಮೇಳನವಿತ್ತು. ಎರಡನೆಯ ದಿನ ಅಮೇರಿಕೆಯ ಅತಿಥಿ ಹೆಂಗಳೆಯರು ಹಾಡಿದ ಕರ್ನಾಟಕದ ಸಂಗೀತದ ಶ್ರವಣ ತವರಿನಲ್ಲಿದ್ದ ತವರಿಗೆ ಮನಸ್ಸನ್ನೆಳೆಯಿತು್! ಶಾಸ್ತ್ರೋಕ್ತ ಹಿಂದು ಪದ್ಧತಿಯ ಪ್ರಕಾರ ಮಂತ್ರಘೋಷದೊಡನೆ ತಾಳಿ ಕಟ್ಟಿಸಿದ್ದು ಈಗ ಬಾಲಿಯಲ್ಲೇ ನೆಲೆಸಿದ, ಪೂರ್ವದಲ್ಲಿ ಕನ್ನಡ ಮೂಲದವರೇ ಆಗಿದ್ದ ಶ್ರೀ ರಮೇಶ ಶಾಸ್ತ್ರಿಯವರು. ಇಂಗ್ಲೀಷಿನಲ್ಲಿ ವಿವರಣೆ ಕೊಡುತ್ತ MC (ಮಾಸ್ಟರ್ ಆಫ಼್ ಸೆರಮನೀಸ್) ಕರ್ತವ್ಯವನ್ನೂ ವಹಿಸಿ ಸ್ಥಳಿಯ ಅನುಕೂಲಕ್ಕೆ ಮತ್ತು ಹೆಚ್ಚು ಫೋಟೋಜೆನಿಕ್ಕಾಗಿ ಮಂತ್ರಾಕ್ಷತೆ ಬದಲಾಗಿ ಕೆಂಪುಗುಲಾಬಿ ಪಕಳೆಗಳ ಉಪಯೋಗ ಮಾಡಿದ್ದು ಆಕರ್ಷಕವಾಗಿತ್ತು!

ಕ್ಯಾನಂಗ್ ಸಾರಿ

ಬಾಲಿಯೋ (ವಾಲಿ) ಬಲಿಯೋ?

ರಮೇಶ ಶಾಸ್ತ್ರಿಗಳು ನನಗೆ ತಿಳಿಸಿದಂತೆ ಬಾಲಿ ದ್ವೀಪದಲ್ಲಿ ನೂರಕ್ಕೆ ೯೦ ಪ್ರತಿಶತ ಜನರು ಹಿಂದುಗಳಂತೆ. ನಾನೂ ಕಂಡಂತೆ ಅಲ್ಲಿಯ ಹೆಸರು, ಭಾಷೆಗಳಲ್ಲಿ ಸಂಸ್ಕೃತ ಮೂಲದ ನಾಮಪದಗಳು ಅಲ್ಲಲ್ಲಿ ಕಾಣಿಸುತ್ತವೆ ಮತ್ತು ಅವರ ಆಚಾರದಲ್ಲಿ ಸಹ ಭಾರತೀಯ ಸಂಸ್ಕೃತಿಯ ಪ್ರಭಾವ ಕಾಣಿಸುತ್ತದೆ. ಬಾಲಿಯ ವ್ಯುತ್ಪತ್ತಿ ಏನು? ಅದು ಬಲಿಯ ಅಪಭ್ರಂಶ. ಬಲಿ ಎಂದರೆ ಅರ್ಪಣೆ ಅಥವಾ ನಮ್ಮ ಮಂತ್ರಗಳಲ್ಲಿ ಬರುವ ಸಮರ್ಪಣೆ ಅಂತ ಅವರು ತಿಳಿಸಿದರು. ಪ್ರತಿದಿನ ಬಾಲಿಯಲ್ಲಿ ದಿನಕ್ಕೆ ಮೂರು ಸಲ ಗಾಯತ್ರಿ ಮಂತ್ರದ ಘೋಷಣೆ ಧ್ವನಿವರ್ಧಕದಲ್ಲಿ ಪ್ರಸಾರವಾಗುತ್ತದೆ. ಪ್ರತಿದಿನ ಒಂದು ಅಥವಾ ಎರಡು ಸಲ ಪೂಜೆಯಾಗುತ್ತದೆ. ಇದನ್ನು ಕ್ಯಾನಂಗ್ ಸಾರಿ ಎಂದು ಕರೆಯಲಾಗುತ್ತದೆ. ಇದರ ಕುರುಹನ್ನು ನಾನು ಸಹ ಪ್ರತ್ಯಕ್ಷ ನೋಡುವ ಅವಕಾಶ ಸಿಕ್ಕಿತು. ಬೆಳಿಗ್ಗೆ ತೆಂಗಿನ ಎಲೆಗಳಿಂದ ರಚಿತವಾದ ಚೌಕಾದ ದೊನ್ನೆಯಲ್ಲಿ (ceper) ವಿಳೆದೆಲೆ, ಬಣ್ಣ ಬಣ್ಣದ ಹೂ, ಅಕ್ಕಿ, ನಾಣ್ಯ ಧೂಪಗಳನ್ನು ಜೋಡಿಸಿ, (ಮೇಲಿನ ಚಿತ್ರ ನೋಡಿರಿ)ತೀರ್ಥವನ್ನು ದೇವರಿಗೆ ಪ್ರೋಕ್ಷಣೆ ಮಾಡುತ್ತ ಒಂದರಿಂದ ಇನ್ನೊಂದು ದೇವರ ಮಾಡಕ್ಕೆ ಹೆಂಗಳೆಯರು ಹೋಗಿ ಮನೆಯಂಚಿನ ಹೊಸ್ತಿಲದಲ್ಲಿ ಸಹ ಇಡುತ್ತ ಹೋಗುತ್ತಾರೆ. ( ಲೇಖನದ ಕೊನೆಯಲ್ಲಿ ವಿಡಿಯೋ ಇದೆ, ಕೆಳಗೆ). ಈ ಪುಟ್ಟ ಪೂಜೆ ಅಚಿಂತಕ ಎನ್ನುವ ಹೆಸರಿನ ದೇವರು, ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಾಮರಸ್ಯದ ದ್ಯೋತಕ ಎಂದು ಇಲ್ಲಿಯ ಜನರು ನಂಬುತ್ತಾರೆ. ಸುವಾಸನೆಯುಕ್ತ ಧೂಪ ಪ್ರಾರ್ಥನೆಯನ್ನು ದೇವರ ಬಳಿಗೆ ಕೊಂಡೊಯ್ಯುತ್ತದೆ ಎನ್ನುವ ನಂಬಿಕೆ.
 ಪುರಾತತ್ತ್ವ ದಾಖಲೆ
ಬಾಲಿಯಲ್ಲಿ ನಾನು ಉಳಿದುಕೊಂಡಿದ್ದ ಸನೂರ್ ಎನ್ನುವ ಊರ ಬಳಿಯ ಬೆಲಾನ್ಜಾಂಗ್ ಕಂಬದ ಮೇಲೆ ಕ್ರಿ ಶ ೯೪೧ರಲ್ಲಿ (ಶಾಲಿವಾಹನ ಶಕ ೮೩೫) ದಂಡೆತ್ತಿ ಬಂದ ರಾಜ ಕೇಸರಿವರ್ಮದೇವ ಬರೆಯಿಸಿದ ಶಿಲಾಶಾಸನದಲ್ಲಿ ಬಾಲಿಯ ಉಲ್ಲೇಖವಿದೆ. ಶಾಸನ ಸಂಸ್ಕೃತ ಮತ್ತು ಬಾಲಿನೀಸ್ ಭಾಷೆಗಳಲ್ಲಿ (ಮೇಲಿನ ಎಡಗಡೆಯ ಚಿತ್ರ) ಮತ್ತು ನಾಗರಿ ಮತ್ತು ಕಾವಿ ಲಿಪಿಯಲ್ಲಿದೆ. ಶಿಲಾಮುಖ ಛಿನ್ನವಾಗಿ ಕೆಲವು ಅಕ್ಷರಗಳು ಅಳಿಸಿಹೋಗಿವೆಯಾದರೂ, ಹಿಂದು ಮತ್ತು ಬೌದ್ಧ ಮತಗಳೆರದೂ ಇದ್ದ ಪುರಾವೆ ಕೊಡುತ್ತದೆಯೆಂದು ಪಂಡಿತರ ತರ್ಕ. ಅದರಲ್ಲಿ ’ವಾಲಿ ದ್ವೀಪ’ದ ಉಲ್ಲೇಖವಿದೆ. ಆಗಿನ ಭಾಷೆಯಲ್ಲಿ ವ-ಬ ಅಕ್ಷರಲಿಪ್ಯಂತರ ಸಾಮಾನ್ಯವಂತೆ. ಬಲಿ-ಬಾಲಿ-ವಾಲಿ ಏನೇ ಇರಲಿ, ರಾಮಾಯಣ ಮತ್ತು ಮಹಾಭಾರತ ಇಲ್ಲಿಯವರ ಸಂಸ್ಕೃತಿಯಲ್ಲಿ ಬೆಸೆದು ಹೋಗಿದೆ. ಅವರ ಶಿಲೆಗಳು ಊರ ಮಧ್ಯದಲ್ಲಿ ಮತ್ತು ಉದ್ಯಾನಗಳಲ್ಲಿ ಕಾಣಸಿಗುತ್ತವೆ. ಸಂಸ್ಕೃತ ಹೆಸರುಗಳು, ಶಬ್ದಗಳು ಸರ್ವವ್ಯಾಪಿ. ಹನುಮನುದಯಿಸಿದ ನಾಡಲ್ಲದಿದ್ದರೂ ವಾನರಗಳಿಗೆ ಇಲ್ಲಿ ವಿಶೇಷ ಸ್ಥಾನವಿದೆ.
ಉಲುವಾಟಿನ ದೇವಾಲಯ ಮತ್ತು ವಾನರಗಳ ಉಪಟಳ.
ಬಾಲಿ ದ್ವೀಪದ ನಕಾಶೆ ನೋಡಿದರೆ ಅದರ ದಕ್ಷಿಣಕ್ಕೆ ಪದಕದಂತೆ ಜೋತು ಬಿದ್ದಂತಿರುವ ಪ್ರದೇಶದ ನೈಋತ್ಯಕ್ಕೆ ಸಮುದ್ರದಿಂದ ೭೦ ಮೀಟರ್ ಎತ್ತರದ ಮೇಲಿನ ಕಡಿದಾದ ಜಾಗದಲ್ಲಿದೆ ಉಲುವಾಟು ಪ್ರದೇಶ . ಆ ದೇವಾಲಯವನ್ನು ಡಾಂಗ್ ಹ್ಯಾಂಗ್ ದ್ವಿಜೇಂದ್ರ ಎನ್ನುವವನು ಸ್ಥಾಪಿಸಿದನೆಂದು ಹೇಳುತ್ತದೆ ದಂತ ಕಥೆ. ಆತನ ಮೂರ್ತಿ ಅಲ್ಲಿದೆ. ಆತನು ಅಲ್ಲಿಯೇ ಮೋಕ್ಷ ಪಡೆದನೆಂದೂ ಆತ ದೇವಾಲಯವನ್ನು ಕಾಯಲು ತನ್ನ ಜೊತೆಗೆ ತಂದಿದ್ದ ಸೈನಿಕರ ಪ್ರತೀಕವಾಗಿಯೇ ಈಗ ದೇವಾಲಯದ ತುಂಬೆಲ್ಲ ಕಾಣುವ ಮೆಕಾಕ್ ಜಾತಿಯ ಉದ್ದ ಬಾಲದ ’ಬಿಳಿ’ ಮಂಗಗಳು ಮತ್ತು ಅವು ದೇವಾಲಯವನ್ನು ರಕ್ಷಿಸುತ್ತವೆ ಎಂದು ಜನರು ನಂಬಿ ಅವುಗಳಿಗೆ ಕೊಟ್ಟ ಗೌರವ ಮತ್ತು ವಿಶೇಷ ಸ್ಥಾನ ಟೂರಿಸ್ಟುಗಳಿಗೆ ಉಪಟಳವಾಗಿ ಮಾರ್ಪಟ್ಟಿದೆ. ಹಿಂಡು ಹಿಂಡಾಗಿ ಜೊತೆಯಲ್ಲಿ ಚಲಿಸುತ್ತಾ ಜನರನ್ನು ಮುಕುರುತ್ತವೆ. ಟೂರಿಸ್ಟ್ ಗಳು ಹೆಜ್ಜೆ ಹೆಜ್ಜೆಗೆ ಕಾಣುವ ನೋಟೀಸಿನಲ್ಲಿ ನಿಮ್ಮ ಸಾಮಾನುಗಳನ್ನು ಭದ್ರವಾಗಿಡಿ, ಕನ್ನಡಕ, ಮೋಬೈಲುಗಳನ್ನು ಬಚ್ಚಿಡಿ ಎಂದು ಎಚ್ಚರಿಸಿದ್ದನ್ನೆಲ್ಲ ಕಡೆಗಾಣಿಸಿ ಅಥವಾ ಓದದೆ ಅವುಗಳನ್ನು ಕಳೆದುಕೊಂಡು ಪರಿತಪಿಸಿದವರು ನೂರಾರು. ನಮ್ಮ ಪ್ರತ್ಯಕ್ಷ ಅನುಭವವನ್ನು ಹೇಳುತ್ತೇನೆ, ಕೇಳಿ. ಕಣ್ಣು ಮಿಟುಕಿಸುವದರಲ್ಲಿ ಅವರ ಕನ್ನಡಕ, ಹ್ಯಾಂಡ್ ಬ್ಯಾಗ್, ಮೋಬೈಲ್ಗಳು ಗಾಯಬ್! ತಮ್ಮ ಕೈಚಳಕದಿಂದ ಕ್ಷಣಾರ್ಧದಲ್ಲಿ ಕೈಯಿಂದಲೇ ಕಸಿದುಕೊಂಡೆತ್ತಿ ಮರ ಹತ್ತಿಕೂಡುತ್ತವೆ. ಗೈಡು, ಕಾಯುವವರು ತಿಂಡಿ ಹಾಕಿ ವಾಪಸ್ ಪಡೆದಿದ್ದು ಕೆಲವೇ. ತಿರುಗಿ ಕೊಡಲು ಚೌಕಾಸಿ ಮಾಡುತ್ತವೆ. ಚೀರ ದನಿಯಲ್ಲಿ ಕಿರಚುತ್ತವೆ ತಮಗೆ ಅದು, ಇದು ಬೇಕೆಂದು ಬೇಡಿಕೆಯಿಡಲು. ತಮಗೆ ಹಿಡಿಸಿದ ಬಾಳೆ ಹಣ್ಣು ಚಾಕಲೇಟನ್ನು ವಿನಿಮಯ (barter) ಮಾಡಿಕೊಳ್ಳುವ ಈ ಬಂದಿ ವಿಮೋಚನೆ (ransome) ಕಲೆಯನ್ನು, ಹಿರಿಯ ಮಂಗಗಳನ್ನು ನೋಡಿ ಕಲಿತು ತಲೆತಲಾಂತರವಾಗಿ ೩೦ ವರ್ಷಗಳಲ್ಲಿ ದಾಟಿಸಿದ್ದಾರೆ ಅಂತ ಕ್ಯಾನಡಾದ ಲೆತ್ ಬ್ರಿಜ್ (Lethbridge) ವಿಶ್ವವಿದ್ಯಾಲದ ಸಂಶೋಧಕರು ೨೭೩ ದಿನಗಳ ವಿಡಿಯೊ ಅಭ್ಯಾಸ ಮಾಡಿ ೨೦೨೧ರಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಹೊಳೆಯುವ, ಅದರಲ್ಲೂ ಕಪ್ಪು ಕನ್ನಡಕದ ಗ್ಲಾಸು, ಮಕ್ಕಳಿಗೂ ಮಂಗಗಳಿಗೂ ದೊಡ್ಡ ಆಕರ್ಷಣೆ. ನಾನು ನನ್ನ ಕನ್ನಡಕ್ಕೆ ಬಳ್ಳಿ ಕಟ್ಟಿಕೊಂಡಿದ್ದೆ! ’ಅಲ್ಲಿ ಒಂದು ಕೋತಿ ನಿನ್ನ ಹಿಂದೆಯೇ ಕುಳಿತಿದೆ’ ಎಂದು ನನ್ನ ಜೊತೆಗೆ ಬಂದಿದ್ದ ಮೊಮ್ಮಗಳು ಅನುಷ್ಕಾಳನ್ನು ನಾನು ಎಚ್ಚರಿಸುವಷ್ಟರಲ್ಲಿ ನನ್ನ ಮಾತು ಕೇಳದೆ ತನ್ನ ಕನ್ನಡಕದತ್ತ ಲಕ್ಷ್ಯ ಹಾರಿದ ಕ್ಷಣದಲ್ಲಿ, ಬೇಲ್ಸ್ ಹಾರಿಸಿದ ವಿಕೆಟ್ ಕೀಪರ್ನ ಹಾಗೆ ಆಕೆಯ ಮುಖದ ಮೇಲಿನ ಕನ್ನಡಕವನ್ನು ಕಿತ್ತಿಕೊಂಡು ಮರವೇರಿ ಕೂತ ಮಂಗದ ಕೈಯಲ್ಲಿತ್ತು ಆಕೆಯ ಇಡೀ ಕನ್ನಡಕ! ಸದ್ಯ ವಿನಿಮಯಕ್ಕೆಂದು ಏನೋ ವಸ್ತುವನ್ನುಕಾವಲುಗಾರ್ತಿ ಎಸೆದಳು. ಅನುಷ್ಕಳ ’ಲಕ್ಕಿ ಡೇ’ ಅಂದು, ಯಾಕಂದರೆ ಹೆಚ್ಚು ತಿರುಚದೆ, ಮುರಿಯದೆ, ಘಾಸಿ ಮಾಡದೆ ಆ ಹನುಮನ ಬಿಳಿ ಮೆಕಾಕ್ ಅಪರಾವತಾರ ಕೆಳಗೆ ಒಗೆಯಿತು ಕನ್ನಡಕವನ್ನು! ಅಂದು ಸುರಕ್ಷಿತವಾಗಿ ಹೋಟೆಲ್ ಕಂಡು ತೃಪ್ತಿಯಿಂದ ಊಟ ಮಾಡಿದೆವು ಅನ್ನಿ!
Gates of Heaven, Lempuyang, Bali
(ವಿಡಿಯೋ ಮತ್ತು ಫೋಟೊಗಳು ಲೇಖಕರವು; ಉಲುವಾಟು ಕೋತಿ,ಬೆಲಾನ್ಜಾಂಗ್ ಶಿಲಾ ಶಾಸನದ ಕಂಬ ಅಂತರ್ಜಾಲದಿಂದ) 

Leave a Reply