ಪ್ರಿಯ ಓದುಗರಿಗೆ,
“ಆಳಿದ ಮೇಲೆ ಉಳಿಯುವದೇನು?” ಬಹು ಚರ್ಚಿತವಾದ ವಿಷಯ. ಕೆಲವರಿಗೆ ಶಿವರಾಂ ಕಾರಂತರ ” ಅಳಿದ ಮೇಲೆ “
ಕಾದಂಬರಿಯ, ಯಶವಂತರಾಯರ ನೆನಪೂ ಸಹ ಬರಬಹುದು. ಎಲ್ಲರೂ ಒಂದು ದಿನ ಅಳಿಯುವುದು ಪ್ರಕೃತಿಯ ನಿಯಮ. ಆದರೆ,
ಜೀವಿತದಲ್ಲಿ ನಾವು ಯಾರ ಜೀವನಗಳನ್ನು ಸ್ಪರ್ಶಿದ್ದೆಯೆಯೋ ಅವರ ಬದುಕಿನಿಂದ ನಾವು ಎಂದಿಗೂ ಸಂಪೂರ್ಣವಾಗಿ
ಮಾಯವಾಗುವದಿಲ್ಲ. ಆದಾಗ್ಯೂ, ಅವರ ನೆನಪುಗಳಲ್ಲಿ ಉಳಿದುಕೊಂಡಿರುವ ವ್ಯಕ್ತಿಯು ವಾಸ್ತವದಲ್ಲಿ ನಾವಾಗಿದ್ದ ವ್ಯಕ್ತಿಗಿಂತ
ಬಹಳೇ ಭಿನ್ನವಾಗಿರಬಹುದು. ನನ್ನ ಬಾಲ್ಯಜೀವನದಲ್ಲಿ ೧೦೦೦ ಜನರಿದ್ದ ನನ್ನ ಕುಗ್ರಾಮದಲ್ಲಿ , ನನಗೆ ಪ್ರಿಯನಾಗಿದ್ದ
ಬೋಳಜ್ಜನು ಆಳಿದ ಮೇಲೆ ಅವನಿಗೆ ಉಳಿದಿದ್ದೇನು ಎಂಬುದರ ಕುರಿತು ಕಥೆಯೊಂದನ್ನು ಬರೆದಿರುವೆ. ಒಂದು ರೀತಿಯಲ್ಲಿ
ಅಜ್ಜನಿಗೂ ನನಗೂ ಬಹಳೇ ನಂಟು ಇತ್ತು. ಅವನಿಗೆ ಬಂದಿದ್ದ ಬ್ಯಾಂಕ ಒಲೆಗಳನ್ನು ಓದಿ ಬಡ್ಡಿಯ ಮೊತ್ತವನ್ನು ಹೇಳಿದಾಗಲೋ,
ಅಥವಾ ಅವನಿಗೆ ಪ್ರಿಯವಾಗಿದ್ದ ‘ಸಿಂಧನೂರ ಬೀಡಿ’ಯ ಕಟ್ಟನ್ನು,ಕೆಲಸದವನಾಗಿ ದೂರದಲ್ಲಿದ್ದ ಅಂಗಡಿಯಿಂದ ತಂದು ಕೊಟ್ಟಾಗ, ನನಗೂ ಐದು ಪೈಸೆಯ ಬಹುಮಾನ ದೊರೆಯುತ್ತಿದ್ದದರ ನೆನಪು ಇಂದೂ ಹಸಿರು. ದಯವಿಟ್ಟು ಓದಿ ಅಭಿಪ್ರಾಯ ತಿಳಿಸಿ
—— ಇಂತಿ ಸಂಪಾದಕ
“ಬಡ್ಡಿಮನಿ ಬೋಳಶೆಟ್ಟಿ ಭೂತ ಆಗ್ಯಾನಂತ”
ಎಲ್ಲಿಂದಲೋ ಹುಟ್ಟಿ, ಸುಂಟರ ಗಾಳಿಯಂತೆ ಸುತ್ತುತ್ತಾ, ಆಲದ ಕಟ್ಟಿಯ ಮೇಲೆ ಕುಳಿತಿದ್ದ ಸೋಮಾರಿಗಳ ಚರ್ಚೆಯ
ವಿಷಯವಾಗಿ, ವಟಾರಿನಲ್ಲಿ ವಕ್ಕರಿಸಿದ್ದ ಹೆಂಗಸರ ಮಧ್ಯಾಹ್ನದ ಹರಟೆಗೆ ಆಹಾರವಾಗಿ, ಹಜರತ ಸಾಬನ ಚಹಾದ
ಅಂಗಡಿಯಿಂದ, ಮೂಲಿ ಲಕ್ಷ್ಮಣನ ಹಜಾಮತಿ ಕೋಣೆಯವರೆಗೂ ಇದೇ ಸುದ್ದಿ ಎಡಬಿಡದೆ ಊರಲ್ಲಿ ಸದ್ದು ಮಾಡುತ್ತಲಿತ್ತು. ಕುರ್ಚಿ ಮೇಲೆ ಕುಳಿತ್ತಿದ್ದ ಕುಂಟಪ್ಪನ ಕುರುಚಲು ಗಡ್ಡವನ್ನು ತನ್ನ ಹಜಾಮತಿ ಕತ್ತಿಯಿಂದ ಹದವಾಗಿ ಕೆರೆಯುತ್ತಿದ್ದ ಲಕ್ಷ್ಮಣನೆಂದ,
“ಶೆಟ್ರು, ವಯಸ್ಸಿನಾಗ ತೊಂಭತ್ತ ದಾಟಿ ಶಂಭರ್ ಹೊಡ್ಯಾಕ ಸಮೀಪ ಮಾಡಿದಾಂಗಿತ್ತು. ಸತ್ತ ಸ್ವರ್ಗಾ ಸೇರುದು ಬಿಟ್ಟ, ದೆವ್ವ ಆಗಿ
ಯಾಕ ಓಡ್ಯಾಡಾಕತ್ತಾರ ಅಂತ ಯಾರಿಗೂ ತಿಳಿಯಾಕತ್ತಿಲ್ಲ”
ಗಡ್ಡದ ಮೇಲೆ ಓಡಾಡುತ್ತಿದ್ದ ಅವನ ಕತ್ತಿಗೆ ಸ್ವಲ್ಪ ವಿಶ್ರಾಂತಿ ಕೊಡಿಸಿ, ಬೊಚ್ಚು ಬಾಯಿ ಬಿಚ್ಚಿ ಕುಂಟಪ್ಪನೆಂದ,
“ಜೀವನದಾಗ ಚಲೋ ಕೆಲಸಾ ಮಾಡಿದರಲ್ಲ ಸ್ವರ್ಗಾ ಸೇರುದು? ಶೆಟ್ಟಿ ಅಂತಾದ ಏನ ಮಾಡಿದ್ದ? ಬದಕಿನಾಗ ಇನ್ನ ಭಾಳ ಆಸೆ
ಇಟ್ಟಕೊಂಡವರ ಆತ್ಮಾ, ಸ್ವರ್ಗಾ ಮತ್ತು ನರಕದ ನಡುವ ನೆಲಿ ಇಲ್ದ, ಸುಂಟರ ಗಾಳಿಯಂಗ ಪಿಶಾಚಿ ಆಗಿ ಸುತ್ತತದ ಅಂತ. ಶೆಟ್ಟಿ
ಕಣ್ಣು ಯಾವಾಗಿದ್ರೂ ಆಸ್ತಿ ಮ್ಯಾಲನ. ವಯಸ ಆದ್ರೂ, ಗಂಟ ಬೆಳಸಬೇಕನ್ನು ಆಸೆ ಮಾತ್ರ ತಗ್ಗಿರಲಿಲ್ಲ. ಅದಕ್ಕ ದೆವ್ವ ಆಗ್ಯಾನ”
ಎಂದು, ಶೆಟ್ಟರ ಮೇಲಿದ್ದ ಸಿಟ್ಟನ್ನೆಲ್ಲಾ ತನ್ನ ಬೊಚ್ಚು ಬಾಯಿಯಿಂದ ಕಕ್ಕಿಸಿ, ಊರಲ್ಲೆಲ್ಲ ಉತ್ತರವಿಲ್ಲದೆ ಸುತ್ತುತ್ತಿದ್ದ ಪ್ರಶ್ನೆಗೆ ತನ್ನದೇ ರೀತಿಯಲ್ಲಿ ಉತ್ತರ ಕಂಡುಕೊಂಡು ಸಂತುಷ್ಟನಾದ.
“ಇರ್ಲಿ ಬಿಡು ಕುಂಟಪ್ಪಾ, ಸತ್ತವರ ಬಗ್ಗೆ ಹಾಂಗ ಮಾತಾಡಬಾರ್ದು. ಶೆಟ್ಟ್ರು ಬಡ್ಡಿ ತಗೊಂಡ್ರುನೂ, ಕಷ್ಟದಾಗ್ ಇದ್ದ ನನ್ನಂತಾ
ಎಷ್ಟೋ ಮಂದಿಗಿ ಸಹಾಯಾ ಮಾಡ್ಯಾರು. ಊರಿಗೆ ಹಿರಿಯಾ ಆಗಿ ಒಂದಿಷ್ಟು ಉಪಕಾರನ್ನೂ ಮಾಡಿ ಹೋಗ್ಯಾರು ಅನ್ನೂದನ್ನ
ಮರೀಬಾರ್ದು” ಎಂದು ಲಕ್ಷ್ಮಣ ಕುಂಟಪ್ಪನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ.
“ಶೆಟ್ಟಿ ಊರಿಗೆ ಏನ್ ಉಪಕಾರಾ ಮಾಡ್ಯಾನ್? ಪಂಚಾಯ್ತಿ ಚೇರ್ಮನ್ ಗುಡುಂಸಾಬ, ಊರಿಗಿ ಹತ್ತಿದ್ದ ಒಂದ್ ಎಕರೆ ಹೊಲಾನ
ಊರ ಉದ್ದಾರಕ್ಕ ಪಂಚಾಯ್ತಿಗಿ ಬರದಕೊಡು, ಚಲೋ ರೊಕ್ಕಾ ಕೊಡ್ತೀವಿ ಅಂದ್ರನೂ ಜಪ್ಪ ಅನ್ನಲಿಲ್ಲ. ಪ್ಲಾಟ್ ಮಾಡಿ
ಮಾರ್ಕೊಂದ್ರ ಇನ್ನ ರೇಟ್ ಬರತೈತಿ ಅಂತ ಅನ್ಕೊಂಡಿರ್ಬೇಕು. ಇದೆಂತಾ ಉಪಕಾರ ಅಂತಿ?” ಎಂದು ಕುಂಟಪ್ಪ ತನ್ನ
ಉಹಾಪೋಹವನ್ನು ಇನ್ನೂ ಮೇಲು ದನಿಯಲ್ಲಿ ಮಂಡಿಸಿದ.
“ಶೆಟ್ರು ಬಾಳ ವರ್ಷದಿಂದ ಊರನ್ನ ತಿಳಕೊಂಡಿದ್ರು. ಊರ ಮಂದಿ ಜಾತಿ ಕುಲಾ ಮರ್ತು ಒಟ್ಟಿಗೆ ಮೊಹರಂದಾಗ ಮಜಲ್
ಕುಣಿಯುದನ್ನ, ಬೀರಪ್ಪನ ಮೆರವನಿಗಿಯಾಗ ಡೊಳ್ಳ ಬಡಿಯುವದನ್ನ, ಶ್ರಾವಣದಾಗ ಊರ ತುಂಬ ಭಜನಿ ಮಾಡೂವುದನ್ನ, ಕೇರಿ ದುರ್ಗವ್ವನ ಜ್ಯಾತ್ರ್ಯಾಗ ಬೆಂಕಿ ಹಾಯುದನ್ನ ನೋಡಿ, ಊರಿನ ಒಗ್ಗಟ್ಟಿನ್ಯಾಗ ಖುಷಿ ಪಟ್ಟೊವ್ರು. ಗುಡೂಮ್ ಸಾಬಾ ಒಂದ್
ಎಕ್ರೆಹೊಲ್ದಾಗ ಮಸೀದಿ ಕಟ್ಟಿಸ್ತಿನಂತ, ಕುರಬ್ರು ತಮ್ಮ ಬೀರಪ್ಪಗೂ ಒಂದು ಗುಡಿ ಇರ್ಲಿಯಂತ, ಐನಾರು ತಾವೂ ಮಠಾ
ಮಾಡ್ತಿವಿಯಂತ, ಕೇರಿಯವ್ರು ದುರ್ಗವ್ವಗ ದೊಡ್ಡ ಗುಡಿ ಬೇಕಂತ ಪಂಚಾಯ್ತಿಯಾಗ ಜಗಳಾಡಿದ್ದು ನಿನಗೂ ಗೊತ್ತೈತಿ. ಊರಾಗ ನಡದ ಈ ಹೊಸಾ ವರ್ತಮಾನಾ ಶೆಟ್ಟರ್ಗೆ ಯಾಕೋ ಹಿಡಸಲಿಲ್ಲ ಅಂತ ಕಾನಸತೈತಿ,. ಶೆಟ್ಟರದು ಏನ ವಿಚಾರ ಇರ್ಲಿ, ಹೊಲಾ
ಕೊಡುಲೇ ಇದ್ದದ್ದು ಒಂದ್ ರೀತಿಲೇ ಊರಿಗೆ ಚಲೋ ಆತಿ ಅಂತ ನನಗ ಅನ್ನಸತೈತಿ” ಎಂದು ಲಕ್ಷ್ಮಣ ತನ್ನ ಅಭಿಪ್ರಾಯವನ್ನು
ಒಪ್ಪಿಸಿ, ಒಂದು ದಮ್ಮು ಬೀಡಿ ಎಳೆದು ನಿರಾಳನಾದನು.
“ನೀ ಏನ ಅನ್ನು, ಅಂತೂ ಶೆಟ್ಟಿ ಜೀವಂತ ಇದ್ದಾಗನು ಊರಿಗೆ ಉಪಕಾರಾ ಮಾಡಲಿಲ್ಲ, ಈಗ ಸತ್ತ ಮ್ಯಾಲನು ಕಷ್ಟಾ ಕೊಡುದು
ಬಿಡವಲ್ಲ. ಆ ಮ್ಯಾಲ ಕೋಟಿ ಹಣಮಪ್ಪನ ಕಾಪಾಡಬೇಕು” ಎಂದು ನಿಟ್ಟುಸಿರು ಹಾಕಿ, ಅರೆದುಳಿದಿದ್ದ ತನ್ನ ಹರಕಲು ಗಡ್ಡವನ್ನು
ಮತ್ತೆ ಲಕ್ಷ್ಮಣನ ಕತ್ತಿಗೆ ಒಪ್ಪಿಸಿದನು.
ಹಜಾಮತಿಗಾಗಿ ಸರದಿಯಲ್ಲಿ ಕುಳಿತು, ಬಾಯಿಯಲ್ಲಿ ಎಲೆ ಅಡಿಕೆ ಮೆಲ್ಲುತ್ತ, ಆಗಾಗ್ಗೆ ಪಿಚುಕುತ್ತಾ, ಅದೇನೋ ಹೇಳಬೇಕೆಂದು
ಆವಾಗಿನಿಂದಲೂ ಒದ್ದಾಡುತ್ತಿದ್ದ ಗುಳ್ಳನು, ಕುಂಟಪ್ಪನ ಮಾತು ಮುಗಿಯುತ್ತಿದ್ದಂತೆಯೇ, ನಿಧಿ ಕಂಡ ಕಳ್ಳನಂತೆ ಬಲು
ಉತ್ಸುಕನಾಗಿ,
“ದೊಡ್ಡ ದೆವ್ವನ ಅಗ್ಯಾನಂತ. ದೆವ್ವಾ ಮುಗಿಲ ಮುಟ್ಟುವಷ್ಟ ಎತ್ರ ಇತ್ತಂತ, ಬೋಳ ತಲಿ ಮುಚ್ಚಕೊಳ್ಳಾಕ ಜರದ ರುಮಾಲ
ಸುತ್ತಗೊಂಡು, ಕಾಲಾಗ ದೊಡ್ಡ ಜರ್ಕಿ ಚಪ್ಪಲಿ ಹಾಕೊಂಡು, ಬಿಳಿ ಮೀಸಿ ತಿರಿವಿಕೊಂತ, ಬರ ಬರನ ಊರ ಕಡೇನ
ಬರಾಕತ್ತಿದ್ದಂತ. ಕತ್ತಲಾದಾಗ ಅವ್ನ ಎರಡೂ ಕಣ್ಣಗೋಳು ಪಕ ಪಕನ ಲೈಟಿನಂಗ ಹೊಳ್ಯಾಕತ್ತಿದ್ದುವಂತ, ಬಗದಾಳದಂತಾ
ಬಾಯಿ ಬಿಚ್ಚಿ ಜೋರಾಗಿ ಏನೋ ವಟಗುಡಾಕತ್ತಿದ್ದಂತ, ಬಗಲಾಗ ಮಾರಿನಸ್ಟ ಅಗಲ ಬಡ್ಡಿ ಪುಸ್ತಕಾ ಇತ್ತಂತ, ಅವಾ ಇಡಾಕತ್ತಿದ್ದ
ಹೆಜ್ಜಿ ಭಾರಕ್ಕ ಭೂಮಿ ಜುಮ್ಮಂತ ಅದರಾಕತ್ತಿತಂತ. ರಾತ್ರಿ ಹೊಲದಿಂದ ಮನಿಗಿ ಬರುವಾಗ ಅದನ್ನ ನೋಡಿ, ಚೆಡ್ಯಾಗ ಉಚ್ಚಿ
ಹೋಯ್ಕೊಂಡು, ಥರ್ ಥರನ ನಡಗಿ, ಹಾಸಗಿ ಹಿಡಕೊಂಡಿರು ತಳವಾರ ಬಸಪ್ಪಾ ಇನ್ನೂ ಮನಿ ಬಿಟ್ಟ ಹೊರಗ ಬರಾಕ
ತಯ್ಯಾರಿಲ್ಲ” ಎಂದು, ಎಲ್ಲವನ್ನೂ ತಾನೇ ಕಣ್ಣಾರೆ ಕಂಡವನಂತೆ ವರದಿ ಒಪ್ಪಿಸಿದಾಗ, ಅವನ ವರ್ಣನೆಗೆ ತಕ್ಕಂತೆ, ಸುತ್ತಲಿದ್ದ
ಜನರ ಮನದಲ್ಲೊಮ್ಮೆ ಶೆಟ್ಟರ ಭೂತ ಮೂಡಿ, ಮೈಯ್ಯಲ್ಲಿಒಂದು ಕ್ಷಣ ನಡುಕ ಹುಟ್ಟಿಸಿ ಮಾಯವಾಗಿತ್ತು.
ಬೋಳಶೆಟ್ಟರು ಜೀವಿತವಿರುವವರೆಗೂ ಹಣ್ಣೆಲೆಯಲ್ಲಿಯೇ ಹೊಸ ಚಿಗುರನ್ನು ಕಾಣಬಯಸಿದವರು.
ಬದಲಾಗುತ್ತಿರುವ ಸಮಾಜದೊಂದಿಗೆ ತಾನೂ ಬದಲಾಗಬೇಕೆಂಬ ಪರಿಕಲ್ಪನೆಯಿಲ್ಲದೆ, ಚಿಕ್ಕವರು ದೊಡ್ಡವರ ಹತೋಟಿಯಲ್ಲಿಯೇ ಇರಬೇಕೆಂದುಕೊಂಡು, ಕಲಬೆರಿಯುತ್ತಿರುವ ಪಂಚಾಯತಿಯ ಪದ್ದತಿಯನ್ನು ದಿಕ್ಕರಿಸಿ, ಇನ್ನೂ ಊರಿಗೆ ತಾನೇ ಗೌಡ ಎಂಬ ಊಹೆಯಲ್ಲಿ, ಊರಲ್ಲಿಯ ಎಷ್ಟೋ ಹದಿ ಹರಯದ ಕೆಂಗಣ್ಣುಗಳಿಗೆ ಗುರಿಯಾಗಿದ್ದರು. ಕುಟುಂಬದಲ್ಲಿ ಸೋಮಾರಿ ಮಗನ ವರ್ತನೆಯಿಂದ ಬಲು ನೊಂದಿದ್ದ ಶೆಟ್ಟರಿಗೆ, ಮೊಮ್ಮಗನೂ ಸಹ ಅಪ್ಪನ ಹಾದಿಯನ್ನೇ ತುಳಿದಿದ್ದನ್ನು ಕಂಡು ಇನ್ನೂ ಸಂಕಟವಾಗಿತ್ತು. ತಾನು ಇಷ್ಟೊಂದು ಕಷ್ಟಪಟ್ಟು ಬೆಳೆಸಿದ ಆಸ್ತಿಯನ್ನು, ಈ ಮೂರ್ಖರ ಕೈಯಲ್ಲಿ ಒಂದು ದಿನ ಬಿಟ್ಟು ಹೋಗಬೇಕೆಲ್ಲಾ ಎಂದು ಯೋಚಿಸಿ ಆಗಾಗ್ಯೆ ದುಃಖ ಪಡುತ್ತಿದ್ದರು. ಬಡ್ಡಿ ವ್ಯವಹಾರ ಅವರ ರಕ್ತದಲ್ಲಿ ಹರಿದು ಬಂದ ಕಲೆಯಾಗಿದ್ದರಿಂದ, ವಯಸಾದರೂ ಅದರಿಂದ ಹೊರಬರಲು ಅವರ ಮನಸು ಎಂದೂ ಒಪ್ಪಿರಲಿಲ್ಲ. ಜೀವನದಲ್ಲಿ ಯಾವಾಗಲೂ ಆಶಾವಾದಿಯಾಗಿದ್ದ ಶೆಟ್ಟರು, ಎರಡು ವಾರಗಳ ಹಿಂದೆ ಸತ್ತು, ಮೂರು ದಿನಗಳಾದ ಮೇಲೆ ತಿಥಿ ಮುಗಿಸಿಕೊಂಡು, ಮನೆಯವರಿಂದ ಮೂರು ಕೂಳನ್ನು ಅರ್ಪಿಸಿಕೊಂಡು, ಮಣ್ಣಿನಲ್ಲಿ ಮಣ್ಣಾಗಿ, ಊರ ಕೇರಿಯ ಹತ್ತಿರದ ತಮ್ಮ ಹೊಲದಲ್ಲಿ ಸಮಾಧಿಯಾಗಿ, ಈಗ ಮಂದಿಯ ಅನಿಸಿಕೆಯಲ್ಲಿ ಭೂತವಾಗಿ, ಊರವರ ಮನೆ ಮನೆಗಳಲ್ಲಿ ಆಡಿಕೊಳ್ಳುವ ಮಾತಾಗಿ, ಜನರ ಮನದಲ್ಲಿ ಭಯಂಕರ ಭಯವನ್ನು ಮಡಗಿಸಿ ಮತ್ತೆ ಊರಿಗೆ ಮರಳಿದ್ದರು.
ಎಲ್ಲೆಲ್ಲೋ ಅದೇ ಮಾತು ….
“ಬಡ್ಡಿ ಮನೆ ಬೋಳಶೆಟ್ಟಿ ಭೂತ ಆಗ್ಯಾನಂತ”
“ಇದು ನಮ್ಮಜ್ಜ ಕಟ್ಟಿಸಿದ ಕಟ್ಟಿ. ಈ ಕಟ್ಟಿ ಮ್ಯಾಲ ಇರು ಆಲದ ಮರದ ಒಂದೊಂದು ಹಳೇ ಟೊಂಗಿನೂ ನಮ್ಮಜ್ಜನ ಯಜಮಾನಿಕಿಗಿ ಸಾಕ್ಷಿ ಹೇಳ್ತಾವ. ಈ ಕಟ್ಟಿ ಮ್ಯಾಲ ಕುಂತ ಅವ್ನ ಬಗ್ಗೆ ಏನೇನೋ ಮಾತಾಡಕೋದು ನನಗ ಚಲೊ ಅನಸುದಿಲ್ಲ,”
ಶೆಟ್ಟರ ಬಗ್ಗೆ ಅದೇನೋ ಮಾತಾಡುತ್ತಿದ್ದ ಜನರ ಮೇಲೆ ಹರಿ ಹಾಯ್ದಿದ್ದ ಅವರ ಏಕೈಕ ಮೊಮ್ಮಗ ನಾಗಶೆಟ್ಟಿ. ಜೀವನವಿಡಿ ಕುಳಿತು
ತಿಂದರೂ ತೀರದಷ್ಟು ಅಜ್ಜನ ಹೊಲ,ಮನೆ, ಹಣ ಇರುವಾಗ ತಾನೇಕೆ ಕಷ್ಟಪಡಬೇಕೆಂಬ ನಿರ್ಣಯವನ್ಮು ಆಗಲೇ ತೆಗೆದುಕೊಂಡು, ವಿದ್ಯಾಭ್ಯಾಸಕ್ಕೆ ಚಕ್ಕರ್ ಹೊಡೆದು, ಸೋಮಾರಿಯಾಗಿ ಬೆಳೆದರೂ, ಐಷಾರಾಮ ಜೀವನದ ಕನಸನ್ನು ಮಾತ್ರ ಜೀವಂತ ಇಟ್ಟುಕೊಂಡು, ಅಜ್ಜ ಬದುಕಿರುವವರೆಗೂ ಅದು ನನಸಾಗುವುದು ಅಸಾಧ್ಯವೆಂಬ ಅರಿವಿನಿನೊಂದಿಗೆ, ಅಜ್ಜನ ಅಂತ್ಯಕ್ಕಾಗಿ ಕಾಯುತ್ತ, ಕಾಲ ಕಳೆಯುತ್ತಲಿದ್ದ ನಾಗಶೆಟ್ಟಿಗೆ ಅಲ್ಲಿದ್ದವರ ಮೇಲೆಲ್ಲಾ ಕೋಪ ಬಂದಿತ್ತು.
“ಹಳೇ ಟೊಂಗಿ ಕೂಡ ಹೊಸಾ ರೆಂಬಿನೂ ಸೇರಿದ್ರನ ಆಲದ ಮರ ಚಂದ ಕಾನತೈತಿ. ಏನ ಅನ್ನು! ಬೋಳಜ್ಜ ಕಾಲಕ್ಕ ತಕ್ಕಂಗ
ಬದಲಿ ಆಗಲಿಲ್ಲ. ಮನ್ಯಾನವರ ಮಾತೂ ಕೇಳತಿರಲಿಲ್ಲ, ಊರಾಗಿನ ಮಂದಿಗೂ ಕ್ಯಾರೇ ಅನ್ನಲಿಲ್ಲ. ಲಕ್ಷಗಂಟಲೇ ಖರ್ಚ ಮಾಡಿ
ಪಂಚಾಯ್ತಿ ಮೆಂಬರ ಆದವ್ರು ಸುಮ್ನ ಮಾತ ಕೇಳ ಅಂದರ ಹ್ಯಾಂಗ್ ಕೇಳ್ತಾರು? ಹೋಗ್ಲಿ ಬಿಡು, ನಿನ್ಯಾಕ ಸಿಟ್ಟ ಮಾಡ್ಕೋತಿ”
ಎಂದು ಎಷ್ಟೋ ಜನರು ನಾಗಶೆಟ್ಟಿಗೆ ಸಾಂತ್ವನ ನುಡಿದಿದ್ದರು. ಆಲದ ಕಟ್ಟೆಯ ಮೇಲೆ ನಡೆದಿದ್ದ ಸಂಭಾಷಣೆಯಲ್ಲಿ, ತನ್ನಜ್ಜನ
ವಿಷಯ ಚರ್ಚೆಯವಾಗಿ, ಅಪಮಾನದೊಂದಿಗೆ ಅಸಹ್ಯವೆನಿಸಿ, ಅಜ್ಜ ಭೂತವಾಗಿರುವುದಕ್ಕೆ ಭಯವೂ ಮೂಡಿ, ಕಟ್ಟೆಯನ್ನು ಬಿಟ್ಟು ಲಗುಬಗೆಯಿಂದ ಮನೆಯ ಕಡೆಗೆ ಕಾಲು ಕಿತ್ತಿದ್ದಾ ನಾಗಶೆಟ್ಟಿ.
ಪಟ್ಟಣಶೆಟ್ಟಿ ಎಂಬ ತಮ್ಮ ಮನೆಯ ಹೆಸರು ಅಜ್ಜನ ಭರ್ಜರಿ ಬಡ್ಡಿ ವ್ಯವಹಾರದ ಫಲವಾಗಿ ಬಡ್ಡಿ ಮನೆ ಎಂದು ಬದಲಾಗಿದ್ದು, ಬಸು ಶೆಟ್ಟಿಯಾಗಿದ್ದ ಜನ್ಮ ಹೆಸರು ಬಡ್ಡಿ ನೆಪದಲ್ಲಿ ಬೇರೆಯವರ ಹಣ ಬೋಳಿಸುತ್ತಿದ್ದ ಕಾರಣದಿಂದ ‘ಬೋಳಶೆಟ್ಟಿ’ ಎಂದು ಜನರಿಂದ ಮರು ನಾಮಕರಣವಾಗಿದ್ದನ್ನು ಮನದಲ್ಲಿ ನೆನಪಿಸಿಕೊಂಡು ಇನ್ನಷ್ಟು ಮುಜುಗುರವಾಗಿ, ಸತ್ತ ಮೇಲಾದರೂ ನಾಲ್ಕು ಜನರಿಂದ ಒಳ್ಳೆಯ ಮಾತು ಅನಿಸಿಕೊಳ್ಳದ ಅಜ್ಜನ ಬದುಕು, ಅದೆಂತ ಬದುಕು? ಇಂತ ಜೀವನ ಯಾರಿಗೆ ಬೇಕಾಗಿತ್ತು? ಎಂದು
ಹಳಿದುಕೊಳ್ಳುತ್ತಾ, ಮನೆಯನ್ನು ಸೇರಿ, ಅವಸರದಲ್ಲಿ ಅವ್ವನನ್ನು ಕೂಗಿದ,
“ಯವ್ವಾ, ಯವ್ವಾಬೇ …”
ಅಣ್ಣನ ಮನೆಯಿಂದ ಆಗ ತಾನೇ ಮರಳಿ, ಮಾವನ ಆಸ್ತಿಯಾಗಿದ್ದ ಹಳೆಯ ಬಡ್ಡಿಯ ಪುಸ್ತಕದ ಹೊಸ ಯಜಮಾನಿ ತಾನೇ
ಎಂದುಕೊಂಡು, ವೈದ್ಯ ಲಿಪಿಗಿಂತಲೂ ಕಷ್ಟವಾಗಿದ್ದ ಶೆಟ್ಟರ ಕೈ ಬರಹವನ್ನು ಅರ್ಥಮಾಡಿಕೊಳ್ಳಲು, ತನ್ನ ಏಳನೆಯ
ತರಗತಿಯವರೆಗಿನ ಅಕ್ಷರ ಜ್ನ್ಯಾನವನ್ನೆಲ್ಲಾ ಉಪಯೋಗಿಸಿ ಒದ್ದಾಡುತ್ತಿದ್ದ ಅವ್ವಳೆಂದಳು, “ಬರೋಬ್ಬರ್ ಟೈಮಿಗೆ ಬಂದಿ, ಇನ್ನ ಮ್ಯಾಲ ಶೆಟ್ಟರ್ ಆಸ್ತಿಗೆ ನೀನ ಯಜಮಾನಾ. ಈ ಪುಸ್ತಕಾ ಒಮ್ಮೆ ಓದು. ಎಷ್ಟ ಮಂದಿ ನಿಮ್ಮಜ್ಜನ ಗಂಟಿನ್ಯಾಗನಿಂದ ಬಡ್ಡಿ ರೊಕ್ಕಾ ಎತ್ತಿಕೊಂಡ ಹೋಗ್ಯಾರ್, ಇದನ್ನೆಲ್ಲಾ ವಸೂಲಿ ಮಾಡುದು ಹ್ಯಾಂಗ್?”
“ಸಾಲಾ ಕೊಟ್ಟವ್ನ ಸತ್ತ ಹೋದಾಗ, ತಂಗೊಂಡಿದ್ದಕ್ಕ ಸಾಕ್ಷಿ ಏನೈತಿ? ಅಜ್ಜ, ನಮಗೇನಾದ್ರು ಹೇಳಿ ಸತ್ತನೇನ? ಈಗ ಬರೀ ಚಂಬು
ತಗೋಬೇಕು”
“ಅಯ್ಯೋ ಶಿವನ! ನಿಮ್ಮಜ್ಜಾ ಎಂಥಾ ಬದಕ ಮಾಡಿ ಹ್ವಾದಾ? ಒಂದ್ ಚಲೋದು ತಿನ್ನಲಿಲ್ಲಾ, ಉಡಲಿಲ್ಲಾ. ಬರೇ ಗಂಟ
ಮಾಡಕೊಂತ ಗೊಟಕ ಅಂದ. ನಿಮ್ಮಜ್ಜ ಕಟ್ಟಿದ್ದ ಆಸ್ತಿಯ ಗಂಟನ್ನ ಮನಸಿನಾಗನ ನೆಕ್ಕೊಂತ, ಈ ಹಳೆ ಮೂರ ಗೇಣಿನ ಮನ್ಯಾಗ
ಮೂವತ್ತ ವರ್ಷ ಮಲಗಿದ್ದಾತು. ಎರಡ ಅಂತಾಸಿನ ಗಚ್ಚಿನ ಮನಿ ಕಟ್ಟಸ್ತೀನಿ ಅಂತ ಕಾಯ್ಕೊಂತ, ನಮ್ಮಪ್ಪ ಮ್ಯಾಲ ಹೋಗಿ
ಮೂರ ವರ್ಷಾತಿ.ಇನ್ನ ಎಲ್ಲಿ ಕುಂತೈತೋ ಆ ನನ್ನ ಹೊಸಾ ಮನಿ.”
“ಆಯ್ತ ಬೇ ಕಟ್ಟಸುನು, ಆದರ …”
“ಆದರ್ ಏನು? ನೀ ಅದೇನೋ ಎಝಡಿ ಗೀಝಡಿ ಅನ್ನೋ ಮೋಟರ್ ಸೈಕಲ್ ತಗೋಬೇಕಲ್ಲಾ? ತಗೊಂಡ ಬಿಡು, ಊರಾಗ ಬರ್
ಅಂತ ಓಡಿಸಿ, ಸಾವಕಾರ್ಕಿ ಧೂಳ ಎಬ್ಬಿಸಿ, ನಾ ಬೋಳಶೆಟ್ಟಿ ಅಲ್ಲಾ, ಸಾವಕಾರ ಶೆಟ್ಟಿ ಅಂತ ತೋರ್ಸು. ಹೇಳಿದ ಹತ್ತು ಲಕ್ಷಕ್ಕ
ಒಂದ್ ಎಕ್ರೆ ಹೊಲಾನ್ ಪಂಚಾಯ್ತಿಗಿ ಕೊಟ್ಟ ಬಿಡ್ತೀವಿಯಂತ ಗುಡೂಮ್ ಸಾಬ್ಗ ತಿಳಿಸ್ಬಿಡು. ಯಾರಾದ್ರೂ ಏನರಾ ಕಟ್ಟಿಸಿಕೊಳ್ಲಿ
ನಮಗೇನಾಗ್ಬೇಕೈತಿ”
“ಅದಲ್ಲಬೇ, ನನ್ನ ಮಾತ ಸ್ವಲ್ಪ ಕೇಳು …”
“ಇಷ್ಟ ವರ್ಷ ಬಾಯಿ ಮುಚ್ಚಕೊಂಡು ನಿಮ್ಮಜ್ಜನ ಮಾತ ಕೇಳಿ ಸಾಕಾಗೈತಿ, ಇನ್ನ ಮ್ಯಾಲ ಎಲ್ಲಾರೂ ನನ್ನ ಮಾತ ಕೇಳಬೇಕು”
ಹೊಸ ಮನೆ, ದೊಡ್ಡ ಟಿ ವಿ, ಫ್ರಿಜ್ಜು, ಸೋಫಾ, ಗಾಡಿ, ಬ್ಯಾಂಕಿನಲ್ಲಿ ಭದ್ರತೆಗಾಗಿ ಇಟ್ಟಿದ್ದ ಚಿನ್ನದ ವಡುವೆ …. ಹೀಗೆಯೇ ಅವ್ವನ
ಆಸೆಯ ಪಟ್ಟಿ ಬೆಳೆಯುತ್ತಲೇ ಇತ್ತು. ಶೆಟ್ಟರು ಬದುಕಿರುವವರೆಗೂ ಕಟ್ಟಿ ಹಾಕಿದ್ದ ಆಕೆಯ ಆಶೆ ಎಂಬ ಕುದುರೆ, ಈಗ ಲಂಗು
ಲಗಾಮು ಇಲ್ಲದೇ ಹುಚ್ಚೆದ್ದು ಓಡತೊಡಗಿತ್ತು. ಎಡ ಬಿಡದೇ ವಟಗುಡುತ್ತಿದ್ದ ಅವ್ವನ ಬಾಯಿಗೆ ತಡೆ ಹಾಕಿ, ನಾಗಶೆಟ್ಟಿ ಅಂದ,
”ಏ ನಿಮ್ಮೌನ, ನಾ ಮಾತಾಡಾಕ್ ಸ್ವಲ್ಪ ಬಿಡ. ನನಗೂ ಎಲ್ಲಾ ಮಜಾ ಮಾಡಬೇಕಂತ ಆಸೆ ಐತಿ, ಆದರ …. ಆದರ, ಅಜ್ಜಾ ದೆವ್ವ
ಆಗಿ ಮತ್ತ ವಾಪಸ್ ಬಂದಾನಂತ, ಊರ ಮಂದಿಯೆಲ್ಲಾ ಮಾತಾಡಾಕತ್ತಾರ”
ಮಗನು ಹೇಳಿದ ಸುದ್ದಿಯಿಂದ ಮನಸ್ಸಿಗಾದ ಆಘಾತವನ್ನು ನುಂಗಿ, ಕಣ್ಣಂಚಿನಲ್ಲಿ ಕಾಣಿಸಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ,
“ಮಾಡಿಟ್ಟ ಮೂರ ಕೂಳನ್ನ ಆ ಕಾಗಿ ತಿನ್ನೂಲೇ ಹೋದಾಗನ ನನಗ ಅನಿಸಿತ್ತು, ಇವಾ ದೆವ್ವ ಆಗ್ತಾನ ಅಂತ. ಅಯ್ಯೋ
ಪರಮಾತ್ಮಾ! ಬದಕಿರುತನಕಾ ಗಂಟ ಕಾದಿದ್ದು ಸಾಕಾಗಿಲ್ಲಾಂತ ಈಗ ಪಿಶಾಚಿ ಆಗಿ ಮತ್ತ ವಾಪಸ್ ಬಂದನಾ? ನನ್ನ
ಜೀವನದಾಗ ಆಸ್ತಿ ಅನಭೋಸುದನ್ನ ಆ ದೇವ್ರಾ ಬರದಿಲ್ಲ ಅಂತ ಕಾನಸತೈತಿ” ಎಂತೆಂದು ಗೋಗರಿಸುತ್ತ, ಬಡ್ಡಿ ಪುಸ್ತಕವನ್ನು
ಮುಚ್ಚಿ ಮೇಲೆದ್ದಳು
“ನೀ ಅಳುದು ಸಾಕ ಮಾಡೀಗ, ಅಪ್ಪ ಎಲ್ಲಿ ಹಾಳಾಗಿ ಹೋಗ್ಯಾನ?” ಎಂದು ಸಿಟ್ಟಿನಲ್ಲಿ ಕೇಳಿದ ನಾಗಶೆಟ್ಟಿ.
“ಆವಾ ಎಲ್ಲಿ ಹೋಗಿರ್ತಾನ? ಕಳ್ಳ ಬಟ್ಟಿ ಕುಡದು, ಕಚ್ಚಿ ಬಿಚ್ಚಕೊಂಡು ಯಾರೋ ಕೆಲಸದಾಕಿ ಕೂಡ, ಹೊಲದಾಗ ಚಕ್ಕಂದ
ಹೊಡಿತಿರಬೇಕ! ಸಾವಕಾರ ಶೆಟ್ಟಿ ಕೂಡ ಬೀಗತಾನ ಮಾಡಿ ನಮ್ಮಪ್ಪ ಸಾಯುತನಕ ಒದ್ದಾಡಿದ. ಎಲ್ಲಾ ನನ್ನ ಹಣೇಬರಾ” ಎಂದು
ಜೋರಾಗಿ ಅಳುತ್ತಿರುವಾಗಲೇ, ಹೊರಗಡೆ ಯಾರೋ ಕೂಗಿದಂತಾಯಿತು.
“ಮುತ್ತ್ಯಾ … ಮುತ್ತ್ಯಾ …”
ಡಗಳಾ ಅಂಗಿ, ಉದ್ದಾನ ಚಡ್ಡಿ ಹಾಕೊಂಡಿದ್ದ, ಮಂದ ಬುದ್ದಿಯ ಮ್ಯಾಲಿನ ಕೇರಿಯ ಮಾದಪ್ಪನು ಬಾಗಿಲ ಮುಂದೆ ನಿಂತು
ಜೋರಾಗಿ ಒದರುತ್ತಿದ್ದ. ಜೊತೆಗಿದ್ದ ನಾಯಿಯೂ ಕೂಡಾ ಅವನ ಧ್ವನಿಯಲ್ಲಿ ತನ್ನದೂ ಸ್ವಲ್ಪ ಪಾಲು ಇರಲೆಂದು, ಸಣ್ಣಗೇ ಬೊಗಳಿ ತನ್ನ ಇರುವಿಕೆಯನ್ನು ಅರುಹಿತ್ತು. ಅಲ್ಪ ಮಟ್ಟಿಗೆ ಮತಿ ಹೀನನಾಗಿದ್ದರೂ, ಬಾಲ್ಯದಿಂದಲೂ ಶೆಟ್ಟರು ಹೇಳಿದ ಮಾತಿಗೆ ಎಂದೂ ಎರಡನ್ನದೆ, ಭೂಮಿಯಲ್ಲಿ ಬೆವರು ಸುರಿಸಿ, ಶೆಟ್ಟರ ಮೆಚ್ಚುಗೆಗೆ ಪಾತ್ರವಾಗಿದ್ದ ಮಾದಪ್ಪನು, ಕೇರಿಯ ದುರ್ಗವ್ವನ ಜೊತೆಗಿದ್ದ ಶೆಟ್ಟರ ಕಚ್ಚೆಹರಕ ಮಗನ ಅನೈತಿಕ ಸಂಬಂಧದ ಪಾಪದ ಪಿಂಡವೆಂದು ಊರಿನ ಬಲು ಜನರು ಬಲವಾಗಿ ನಂಬಿದ್ದ ವಿಷಯ ಶೆಟ್ಟರಿಗೂ ಗೊತ್ತಿತ್ತು. ತಮ್ಮ ವಂಶದ ಅನಾಮಧೇಯ ಕುಡಿಯೆಂದೂ ಮತ್ತು ಅವನ ದುಡಿಮೆಯ ಪ್ರತಿಫಲಕ್ಕೆಂದೂ, ಕೇರಿಯ ಹತ್ತಿರವಿದ್ದ ತಮ್ಮ ಜಮೀನಿನಲ್ಲಿ ಎರಡು ಎಕರೆ ಭೂಮಿಯನ್ನು ಮತ್ತು ಮನೆಯನ್ನು ಮಾದಪ್ಪನ ಹೆಸರಿಗೆ ಬರೆದುಕೊಟ್ಟಿದ್ದಷ್ಟೇ ಅಲ್ಲದೆ, ಅವನ ಊಟ, ಬಟ್ಟೆ, ತಲಬಿನ ಖರ್ಚನ್ನೂ ತಾವೇ ಭರಿಸುತ್ತಿದ್ದರು.
ಸೋಮಾರಿಗಳ ಕೂಟವಾಗಿದ್ದ ಮನೆಯಲ್ಲಿ ಮೈ ಮುರಿದು ದುಡಿಯುತ್ತಿದ್ದವನು ಅವನೊಬ್ಬನೇ ಎಂದು ನಂಬಿದ್ದ ಶೆಟ್ಟರಿಗೆ ಅವನನ್ನು ಹಾಗೂ ಅವನ ನಾಯಿಯನ್ನು ಕಂಡರೆ ಬಲು ಪ್ರೀತಿ ಇತ್ತು. ನಾಯಿಯನ್ನು ʼಮೈಲಾರಯ್ಯ’ ಎಂದು ಕರೆದು, ಮೈದೊಡವಿ ಖುಷಿ ಪಡೆಯುತ್ತಿದ್ದರು. ತನ್ನ ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕಿರುವುದೆಂದು ನಂಬಿ, ತನಗಿರುವ ಬುದ್ದಿಗೆ ಬೇರೆ ಯಾವ ಕೆಲಸವೂ ಬೇಡವೆಂದು ನಿರ್ಧರಿಸಿ, ತಾನೂ ಸಹ ಹೊಲದ ಮಾಲೀಕನೆಂದು ಖುಷಿಯಾಗಿದ್ದ ಮಾದಪ್ಪನು, ಬೇರೆ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ, ಶೆಟ್ಟರನ್ನು ಯಾವಾಗಲೂ “ಮುತ್ಯಾ” ಎಂದು ತನ್ನ ಮನದಾಳದಿಂದ ಕರೆದು ಮನ್ನಿಸುತ್ತಿದ್ದನು.
“ಲಾ ಬಾಡ್ಯಾ ನಿಮ್ಮಜ್ಜ ಮ್ಯಾಲ ಹೋಗಿ ಎರ್ಡ ವಾರ ಆಗೈತಿ, ಇನ್ನ ಅವ್ನ ಹೆಸರನ್ನ ಬಡ ಬಡಸಾಕತ್ತಿಯಲ್ಲ, ನಿನಗೇನ ಖಬರ್
ಐತಿಲ್ಲೋ?” ಎಂದು ಸಿಡಿಮಿಡಿಗೊಂಡು, ಶೆಟ್ಟರ ಮೇಲಿನ ಸಿಟ್ಟನ್ನೆಲ್ಲಾ ಅವನ ಮೇಲೆ ವಕ್ಕರಿಸಿ, ಕಟ್ಟಿದ ಊಟದ ಗಂಟನ್ನು ಅವನ
ಮುಂದೆ ಕುಕ್ಕರಿಸಿದಳು. ಅವಳ ಸಿಟ್ಟಿಗೆ ಮಿಸುಕಾಡದೆ ಅಷ್ಟೇ ಶಾಂತವಾಗಿ ಮಾದಪ್ಪನೆಂದ,
“ಮುತ್ತ್ಯಾ ಮೂರಕೂಳ ಮುಟ್ಟುಲೆ ಹೋಗ್ಯಾನಬೇ, ಒಂದೆರಡು ರೊಟ್ಟಿ ಹೆಚ್ಚಿಗಿ ಕಟ್ಟು, ನಾನೂ ಒಮ್ಮೆ ಇಟ್ಟ ನೋಡ್ತೀನಿ” ಅವನ
ಮುಗ್ದ ಮನಸಿಗೆ ಏನು ಹೇಳಬೇಕೆಂದು ತೋಚದೆ. ಕಟ್ಟಿದ ಗಂಟಲ್ಲಿ ಇನ್ನೆರಡು ರೊಟ್ಟಿಗಳನ್ನು ತುರುಕಿ ಒಳಗೆ ಬಂದಿದ್ದ ಅವ್ವಳನ್ನು ಸಮಾಧಾನಪಡಿಸಿ, ಮುಂದೇನು ಮಾಡಬೇಕೆಂದು ಮನದಲ್ಲಿಯೇ ವಿಚಾರಿಸತೊಡಗಿದನು ನಾಗಶೆಟ್ಟಿಯು. ಚೇರ್ಮನ್ ಗುಡೂಮ್ಸಾ ಬನಿಗೆ ಭೇಟಿಯಾಗಿ, ಹೊಲದ ವಿಷಯವನ್ನು ಎತ್ತಿದಾಗ “ಯಪ್ಪಾ ನಿಮ್ಮ ಹೊಲದ ವಿಚಾರನು ಬ್ಯಾಡಾ, ಬೋಳ ಶೆಟ್ಟರ ದೆವ್ವದ ಸಹವಾಸ್ನು ಬ್ಯಾಡಾ” ಎಂದು ಗುಡೂಮ್ ಸಾಬನು ಖಡಾಖಂಡಿತವಾಗಿ ನಿರಾಕರಿಸಿದಾಗ, ನಿರಾಶೆಯಿಂದ ಮನೆಗೆ ಮರಳಿದ್ದನು ನಾಗಶೆಟ್ಟಿಯು.
ಊರಲ್ಲಿ ಭುಗಿಲೆದ್ದಿದ್ದ ಸುದ್ದಿಗೆ ತುಪ್ಪವನ್ನು ಸುರಿದಂತೆ, ಮತ್ತೊಂದು ರಹಸ್ಯ ಊರಲ್ಲೀಗ ಪಸರಿಸಿಕೊಂಡಿತ್ತು. ದಿನಾಲೂ
ರಾತ್ರಿಯಾದಂತೆ ಶೆಟ್ಟರ ಸಮಾಧಿಯ ಕಡೆಯಿಂದ, ಬೀದಿ ನಾಯಿಗಳು ಜೋರಾಗಿ ಅರಚುತ್ತಾ ಊರ ಕಡೆಗೆ ಓಡಿ
ಬರತೊಡಗಿದ್ದವು. ಅವುಗಳ ಕಿರುಚಾಟ ಕೇಳಿದರೂ, ಪ್ರತ್ಯಕ್ಷವಾಗಿ ಪರಿಶೀಲಿಸುವ ಧೈರ್ಯವಿಲ್ಲದ ಊರ ಜನರ ಮನದಲ್ಲಿ, ಶೆಟ್ಟರು
ಭೂತವಾಗಿರುವುದು ಈಗಲಂತೂ ಖಚಿತವಾಗಿತ್ತು. ಶೆಟ್ಟರು ಬದುಕಿರುವಾಗ ಸಾಲ ತೆಗೆದುಕೊಂಡವರು, ಅವರು ಸತ್ತ ಮೇಲೆ
ಹಿಂತಿರಿಗುಸುವ ಗೋಜಿಗೆ ಹೋಗದೆ, ಸಂತೋಷದ ನಿಟ್ಟುಸಿರನ್ನು ಹಾಕಿದ್ದರು. ಶೆಟ್ಟರ ಭೂತ ಊರಲ್ಲಿ ಅಲಿಯುತ್ತಿರುವ
ಸುದ್ದಿಯಂದೀಗ ಕಳವಳಿತರಾಗಿ, ಭೂತ ತಮ್ಮನ್ನೇದಾರೂ ಬಡಿದುಕೊಂಡೀತೆಂದು ಭಯ ಭೀತರಾಗಿ, ಬಡ್ಡಿ ಸಮೇತ
ತೆಗೆದುಕೊಂಡ ಸಾಲವನ್ನು ಶೆಟ್ಟರ ಮನೆಗೆ ಹಿಂತುರಿಗಿಸತೊಡಗಿದ್ದರು. ಕೇಳದೆಯೇ ಹಿಂತುರಿಗಿ ಬರತೊಡಗಿದ್ದ ಹಣವನ್ನು ಕಂಡು, ನಾಗಶೆಟ್ಟಿ ಮತ್ತು ಅವನಮ್ಮನಿಗೆ ಖುಷಿಯಾಗಿದ್ದರೂ, ಅಜ್ಜನ ಹಣಕ್ಕೆ ಕೈ ಹಾಕಿದರೆ ಅಲಿಯುತ್ತಿರುವ ಭೂತದ ಸ್ಪರ್ಷ ತಮಗೂ ಆಗಬಹುದೇನೋ ಎಂಬ ಭಯದಿಂದ ಚಿಂತಾಕ್ರಾಂತರೂ ಆಗಿದ್ದರು. ಬಿಸಿ ತುಪ್ಪವನ್ಮು ನುಂಗಲಾಗದೆ ಹಾಗೆಯೇ ಉಗುಳಲಾಗದೆ ಮುಂದೇನೆಂದು ಯೋಚಿಸುತ್ತಿರುವಾಗಲೇ, ಮಂತ್ರವಾದಿ ಮಂಗಯ್ಯನು ಅವರಿಗೊಂದು ಉಪಾಯವನ್ನು ಅರುಹಿದ್ದನು,
“ಯಪ್ಪಾ ಏನೂ ಹೆದರ್ಕೋಬ್ಯಾಡ, ಶೆಟ್ಟ್ರು, ಸತ್ತ ಗಳಿಗಿ ಸರಿ ಇರಲಿಲ್ಲಾ ಅದಕ್ಕ ಹಿಂಗ ದೆವ್ವ ಆಗಿ ಸುತ್ತಾಕತ್ತಾರು. ಮಾರೆಮ್ಮನ ಮಂತ್ರಾ ಪಠಿಸಿ ಒಂದು ಲಿಂಬಿ ಹಣ್ಣನ ಕೊಡ್ತೀನಿ, ಅಮಾಸಿ ರಾತ್ರ್ಯಾಗ ಶೆಟ್ಟರ್ ಸಮಾಧಿಗಿ ಸೇರಿಸಿ ಬಿಡು. ಪ್ರೇತ ಆಗಿ ಅಲಿಯಾಕತ್ತಿರು ಅವರ ಆತ್ಮಾ ಪಂಚಭೂತಿನ್ಯಾಗ ಐಕ್ಯ ಆಗಿ ಶಾಂತವಾಗಿ ಬಿಡತೈತಿ” ಎಂತೆಂದು, ನಾಗಶೆಟ್ಟಿಯ ಮನದಲ್ಲಿ ಧೈರ್ಯವನ್ನು ತುಂಬಿದ್ದನು.
ಅಮಾವಾಸೆಯಂದು ರಾತ್ರಿಗೂ ಕಾಯದೆ, ಮಂಗಯ್ಯನ ಮಂತ್ರಪಟಿತ, ಲಿಂಬೆ ಹಣ್ಣಿನ ರಕ್ಷಾ ಕವಚದೊಂದಿಗೆ, ಇರುಳಂಚಿನಲ್ಲಿಯೇ ಹೊಲದ ಮನೆಯನ್ನು ಸೇರಿ, ಈ ರಾತ್ರಿ ಮನೆಯಲ್ಲಿಯೇ ವಾಸವಾಗುವುದಾಗಿ ಮಾದಪ್ಪನಿಗೆ
ತಿಳಿಸಿ, ನಡು ರಾತ್ರಿಯ ಕತ್ತಲೆಗಾಗಿ ಕಾಯತೊಡಗಿದನು ನಾಗಶೆಟ್ಟಿ. ಅವನಿಗೆ ಮನೆಯ ಬೀಗದ ಕೈಯನ್ನು ನೀಡಿ, ಬಾಳೆಯ
ತೋಟಕ್ಕೆ ನೀರು ಹಾಯಿಸುವುದರಲ್ಲಿ ನಿರತನಾಗಿದ್ದ ಮಾದಪ್ಪನು, ಸುಮಾರು ರಾತ್ರಿ ಹತ್ತು ಗಂಟೆಗೆ ಮನೆಗೆ ಮರಳಿದ್ದನು.
ಒಲೆಯನ್ನು ಹೊತ್ತಿಸಿ ಅದೇನೋ ಮಾಡಿಕೊಂಡು ತಿಂದು, ಮೈಲಾರಯ್ಯನಿಗೂ ತಿನಿಸಿ, ಕೈಯಲ್ಲೇನೋ ಹಿಡಿದುಕೊಂಡು
ಮೈಲಾರನ ಜೊತೆಗೆ ಹೊರಗೆ ನಡೆದನು. ಇದೇ ತಕ್ಕ ಸಮಯವೆಂದು ನಂಬಿ ನಾಗಶೆಟ್ಟಿಯೂ ಕೂಡಾ ಮನೆಯನ್ನು ಬಿಟ್ಟನು.
ಮಾದಪ್ಪನು ನಾಯಿಯ ಜೊತೆಗೆ ಅಜ್ಜನ ಸಮಾಧಿಯ ಕಡೆಗೆನೇ ಸಾಗಿರುವುದನ್ನು ಕಂಡು, ಕುತೂಹಲದೊಂದಿಗೆ ಅನತಿ ದೂರದಿಂದ, ನಾಗಶೆಟ್ಟಿಯು ಅವರನ್ನೇ ಹಿಂಬಾಲಿಸಿದನು. ಮಾದಪ್ಪನು ಅಜ್ಜನ ಸಮಾಧಿಯ ಮುಂದೆ ತಾನು ಕಟ್ಟಿಕೊಂಡು ಬಂದಿದ್ದ, ಶೆಟ್ಟರಿಗೆ ಪ್ರಿಯವಾಗಿದ್ದ, ವಿಧ ವಿಧವಾದ ತೋಟದ ಹಣ್ಣುಗಳನ್ನು ಮುಂದಿಟ್ಟು
“ಮುತ್ತ್ಯಾ — ಊಟಾ ಮಾಡು, ಸೆಟಗೊಂಡು ಹೋಗಬ್ಯಾಡಾ” ಎಂದು ಅಜ್ಜನಿಗೆ ವಿನಂತಿಸಿ ಮರಳಿ ನಡೆದನು. ಅವನ ಜೊತೆಗೇನೆ ಬಂದಿದ್ದ ಮೈಲಾರಯ್ಯನೂ ಕೂಡಾ ಹಿಂತಿರುಗಿ, ಸ್ವಲ್ಪ ದೂರ ನಡೆದು ಕತ್ತಲಲ್ಲಿ ನಿಂತು, ಅದೇತಕ್ಕೋ ಕಾಯತೊಡಗಿದಂತಿತ್ತು.
ನಾಯಿಯು ಮಾಯವಾಗುವುದನ್ನೇ ಕಾಯುತ್ತಲಿದ್ದನು ನಾಗಶೆಟ್ಟಿಯು. ಆದರೆ, ಅಷ್ಟರಲ್ಲಿಯೇ ಸಮಾಧಿಯ ಮುಂದಿಟ್ಟಿದ್ದ
ಆಹಾರವನ್ನು, ಎಲ್ಲಿಂದಲೋ ಚಂಗನೆಯೆಂದು ಜಿಗಿದು ಬಂದಿದ್ದ ನರಿಯೊಂದು ಸರಾಗವಾಗಿ ಎತ್ತಿಕೊಂಡು ಓಡತೊಡಗಿತು.
ಯಜಮಾನನಿಗೆ ಸೇರಬೇಕಿದ್ದ ಆಹಾರವು ಬೇರೆಯವರ ಪಾಲಾಗುವದನ್ನು ಸಹಿಸಿಕೊಳ್ಳದ ಪ್ರೀತಿಯ ನಾಯಿಯು ಅದನ್ನು
ಅಟ್ಟಿಸಿಕೊಂಡು ಬೊಗಳುತ್ತ ಬೆನ್ನೆಟ್ಟಿತು. ಕಪಟ ನರಿಯು, ದಪ್ಪವಾದ ತನ್ನ ಬಾಲದಿಂದ ಕುತಂತ್ರವಾದ ಚಾಲವನ್ನು ಬಳಸಿ,
ನಾಯಿಯ ಕಣ್ಣಿಗೆ ಮಣ್ಣೆರಚುತ್ತ, ಕೇರಿಯ ಕಡೆಗೆ ಓಡಿ ಎಲ್ಲೋ ಮಾಯವಾದಂತಿತ್ತು. ಮೋಸಹೋದ ಮೈಲಾರಯ್ಯನು, ನರಿಯ
ಅನ್ವೇಷಣೆಯಲ್ಲಿ ಜೋರಾಗಿ ಬೊಗಳುತ್ತಿರುವುದನ್ನು ಕಂಡು, ಕೇರಿಯಲ್ಲಿದ್ದ ನಾಯಿಗಳೆಲ್ಲಾ ಅವನ ಸಹಾಯಕ್ಕೆ ಜೊತೆಗೂಡಿ, ಇನ್ನೂ ಜೋರಾಗಿ ಬೊಗಳುತ್ತ, ಕಣ್ಮರೆಯಾದ ಕುತಂತ್ರ ನರಿಯ ಜಾಲವನ್ನು ಪತ್ತೆ ಹಚ್ಚಲು ಊರ ಕಡೆಗೆ ಓಡತೊಡಗಿದವು.
ಇತ್ತೀಚಿನ ದಿನಗಳಿಂದ ಇದು ಪ್ರತಿ ರಾತ್ರಿಯೂ ನಡೆಯುವ ಪರಿಯಾಗಿತ್ತು. ಇಲಿ ಮೊಲ ಹೆಗ್ಗಣ ತಿಂದು ಬದುಕುವ
ನರಿಗೆ ಆಗಾಗ್ಗೆ ಶೆಟ್ಟರ ತೋಟದ ಹಣ್ಣುಗಳನ್ನು ಮೊದಲಿನಿಂದಲೂ ಕದ್ದು ತಿಂದ ಅಭ್ಯಾಸವೂ ಇತ್ತು. ಮುಗ್ದ ಮಾದಪ್ಪನ ಮನಸಿಗೆ ಪ್ರತಿ ರಾತ್ರಿಯೂ ಮುತ್ತ್ಯಾನ ಮುಂದೆ ಕೂಳು ಇಡದಿದ್ದರೆ ಸಮಾಧಾನವಾಗುತ್ತಿರಲಿಲ್ಲ, ಕಪಟ ನರಿಗೆ
ಸಿಗುತ್ತಿರುವ ಬಿಟ್ಟಿ ಕೂಳನ್ನು ಭಕ್ಷಿಸದಿದ್ದರೆ ಸಂತೋಷವಿರಲಿಲ್ಲ, ಮೋಸ ಎಸಗಿ ಯಜಮಾನನ ಆಹಾರವನ್ನು ಕದಿಯುತ್ತಿರುವ
ನರಿಗೆ ತಕ್ಕ ಪಾಠ ಕಲಿಸುವವರೆಗೂ ನಾಯಿ ಮೈಲಾರಯ್ಯನಿಗೆ ನೆಮ್ಮದಿ ಇರಲಿಲ್ಲ.
ಇದನ್ನೆಲ್ಲಾ ಕಣ್ಣಾರೆ ಕಂಡ ನಾಗಶೆಟ್ಟಿಯು, ಚಿದಂಬ ರಹಸ್ಯ ಬಯಲಾಯಿತೆಂದು ಬೀಗುತ್ತ, ಹೊಸ ಮನೆ , ಎಜ್ಡಿ ಗಾಡಿಯ
ಕನಸುಕಾಣುತ್ತಾ, ಆವರಿಸಿದ ಕತ್ತಲೆಯನ್ನು ಮರೆತು, ಜಿಟಿ ಜಿಟಿಯಾಗಿ ಸುರಿಯುತ್ತಿರುವ ಮಳೆಯಲ್ಲಿ, ಮನೆಯ ಕಡೆಗೆ
ಓಡತೊಡಗಿದನು. ಕಪಟ ನರಿಯನ್ನು ಹಿಡಿಯುವುದರಲ್ಲಿ ವಿಫಲವಾಗಿದ್ದ ನಾಯಿಗಳೆಲ್ಲ ಕೋಪದಿಂದ ಕೇರಿಗೆ
ಹಿಂತಿರುಗತೊಡಗಿದ್ದವು ಕತ್ತಲೆಯಲ್ಲಿ ಓಡುತ್ತಿದ್ದ ನಾಗಶೆಟ್ಟಿಯನ್ನು ಕಂಡು, ಅದೇನೋ ಸಿಕ್ಕಿತೆಂಬ ಸಂತೋಷದಲ್ಲಿ ನಾಯಿಗಳೆಲ್ಲ
ಅವನನ್ನು ಅಟ್ಟಿಸಿಕೊಂಡು ಬರತೊಡಗಿದವು. ಅಚಾನಕವಾಗಿ ಎರಗಿದ ನಾಯಿಗಳಿಂದ ತಪ್ಪಿಸಿಕೊಳ್ಳಲು ನಾಗಶೆಟ್ಟಿಯು
ನಾಗಾಲೋಟದಿಂದ ಊರ ಕಡೆಗೆ ಓಡತೊಡಗಿದನು. ಅವನು ಮೆಟ್ಟಿದ ಚಪ್ಪಲಿಗಳು ಚಲ್ಲಾಪಿಲ್ಲಿಯಾಗಿ ಚದುರಿ ಹೋಗಿ,
ದಾರಿಯಲ್ಲಿದ್ದ ಕಲ್ಲಿಗೆ ಬರಿಗಾಲು ತಾಟಿ ಕೆಳಗೆ ಬಿದ್ದಾಗ, ಬೆನ್ನೆಟ್ಟಿದ ನಾಯಿಗಳು ಅವನನ್ನು ತಟ್ಟಿ, ಕಚ್ಚಿ, ಮೈಮೇಲಿದ್ದ ಬಟ್ಟೆಯನ್ನೆಲ್ಲ ಹರಿದು ಹಾಕುವುದರಲ್ಲಿ ಕೊನೆಗೂ ಯಶಶ್ವಿಯಾಗಿದ್ದವು. ಮೈ ತುಂಬ ಮೆತ್ತಿದ್ದ ರಾಡಿ, ಹರಿದಿದ್ದ ಬಟ್ಟೆ, ಸೋರುತ್ತಿದ್ದ ರಕ್ತವನ್ನು ಲೆಕ್ಕಿಸದೆ, ಏದುಸಿರಿನೊಂದಿಗೆ ಏಳು ಬೀಳುತ್ತಾ ಊರನ್ನು ಮುಟ್ಟಿದ್ದನು. ಮುಂದೆ ಮುಂದೆ ಓಡುತ್ತಿದ್ದ ನಾಗಶೆಟ್ಟಿ…. ಹಿಂದೆ ಹಿಂದೆ ಅಟ್ಟಿಸಿಕೊಂಡು ಬೊಗಳುತ್ತ
ಬರುತ್ತಲಿದ್ದವು ನಾಯಿಗಳು.
ಅರೆ ರಾತ್ರಿಯಲ್ಲಿ ಉಚ್ಚೆ ಹೊಯ್ಯಲು ಮನೆಯಿಂದ ಹೊರಗೆ ಬಂದಿದ್ದ ಮಂಗಯ್ಯನು, ಕತ್ತಲೆಯಲ್ಲಿ ಈ ದೃಶ್ಯವನ್ನು ಕಂಡು ಬೆಚ್ಚಿ ಬಿದ್ದು “ಅಯ್ಯೋ, ದೆವ್ವಾ, ದೆವ್ವಾ” ಎಂದು ಬೊಬ್ಬೆ ಹಾಕುತ್ತ ಹಸಿ ಕಚ್ಚೆಯೊಂದಿಗೆ ಮನೆಯೊಳಗೆ ಓಡಿ ಹೋದನು. ಹೇಗೋ ಕೊನೆಗೆ ಮನೆಯನ್ನು ಮುಟ್ಟಿದ ನಾಗಶೆಟ್ಟಿ “ಯವ್ವಾ ಬಾಗಲಾ ತಗಿ …. ಬಾಗಲಾ ತಗಿ” ಎಂದು ಜೋರಾಗಿ
ಕದವನ್ನು ತಟ್ಟತೊಡಗಿದನು. ಅವಸರದಿಂದ ಬಾಗಿಲವನ್ನು ತೆಗೆದ ಅವ್ವ, ಇವನ ಅವತಾರವನ್ನು, ಜೊತೆಗೆ ಬೊಗಳುತ್ತಿದ್ದ
ನಾಯಿಗಳ ಗುಂಪನ್ನು ಕಂಡು ಅವಕ್ಕಾಗಿ, ಹೆದರಿ ನಡಗುತ್ತ,
“ಯಪ್ಪಾ ದೆವ್ವಾ, ಯಪ್ಪಾ ದೆವ್ವಾ, ಯಾರರಾ ಬರ್ರಿಪೋ” ಎಂದು ಜೋರಾಗಿ ಅರುಚತೊಡಗಿದಳು.
“ಯವ್ವಾ, ನಾ ದೆವ್ವಲ್ಲಬೇ ನಾಗಶೆಟ್ಟಿ, ನಿನ್ನ ಮಗಾ ನಾಗಶೆಟ್ಟಿ”
“ಯಪ್ಪಾ ನನ್ನ ಮಗನ್ ಬಿಟ್ಟಬಿಡು. ನಿನ್ನ ಆಸ್ತಿನೂ ಬ್ಯಾಡಾ, ರೊಕ್ಕಾನೂ ಬ್ಯಾಡಾ … ನನ್ನ ಮಗನ್ ಬಿಟ್ಟಬಿಡು…ಅಯ್ಯೋ,
ನಾಗಶೆಟ್ಟಿಗೆ ಬೋಳಜ್ಜನ ದೆವ್ವ ಬಡದೈತಿ ಬರ್ರಿಪೋ, ಯಾರರಾ ಬರ್ರಿಪೋ”ಎಂದು ಸಹಾಯಕ್ಕಾಗಿ ಅವ್ವ ಇನ್ನೂ ಜೋರಾಗಿ
ಕಿರುಚತೊಡಗಿದಳು.
—ಶಿವಶಂಕರ ಮೇಟಿ