ಈ ಅನಿವಾಸಿ ಮಂದಿ

ಅಲ್ಲಿಯೂ ಸಲ್ಲರು, ಇಲ್ಲಿಯೂ ಸಲ್ಲರು ತ್ರಿಶಂಕುಗಳಾದ ಅನಿವಾಸಿಗಳು. ಸುಖ ಸಂಪತ್ತಿಗಾಗಿ ಊರು ಬಿಟ್ಟ ಅವಕಾಶವಾದಿಗಳೇ? ಹುಟ್ಟೂರನ್ನು, ಹೆತ್ತವರನ್ನು ಮರೆತು ವೈಯಕ್ತಿಕ ಗುರಿ ಸಾಧಿಸುವುದರಲ್ಲೇ ನಿರತರಾದ ಸ್ವಾರ್ಥಿಗಳೇ? ಈ ವಿಚಾರಗಳು ಅನಿವಾಸಿಗಳಿಗೆ ಬರದೇ ಹೋದರೂ ಇಂತಹ ಪ್ರಶ್ನೆಗಳನ್ನು ಪ್ರತಿಯೊಬ್ಬರೂ ಎದುರಿಸುತ್ತಾರೆ. ಬಗೆ-ಬಗೆಯಾದ ಕೊಂಕುಗಳ ದಾಳಿಗೆ ತುತ್ತಾಗಿಯೂ ಹುಸಿ ನಗೆಯಲ್ಲೇ ಮರೆಸಿ ಬರುವವರಿರಬಹುದು; ಎದುರಿಸಿ, ವಾದಿಸಿ, ಮನಸ್ತಾಪಕ್ಕೊಳಗಾಗಿ ಕೆಲವರು ಕೊರಗಬಹುದು. ಅನಿವಾಸಿ ಬಳಗಕ್ಕೆ ಪರಿಚಿತರಾದ ಡಾ. ಉಮೇಶ್ ನಾಗಲೋತಿಮಠ್ ತಮ್ಮ ಲೇಖನಿಯಿಂದ ಹರಿ ಬಂದ ಕವನದಲ್ಲಿ ಅನಿವಾಸಿ ಎಂದರೇನು ಎಂಬ ಅಸ್ಮಿತೆಯನ್ನು ಅವಲೋಕಿಸಿದ್ದಾರೆ .

-ಸಂ

ಈ ಅನಿವಾಸಿ ಮಂದಿ ಖರೆವಂದ್ರ ಏನ ಮಾಡ್ಯಾರ ?

ಇ ಅ -ನಿವಾಸಿಗಳು ದೇಶಾ ಬಿಟ್ಟು ದೂರ ಹೋಗ್ಯಾರ
ಜನಮಾ ಕೊಟ್ಟ ತಾಯಿ ತಂದಿನ ದೂರ ಮಾಡ್ಯಾರ , ಮಾತೃ ಭೂಮಿ ಮರತ ಬಿಟ್ಟಾರ್ ss
ಕಳಿಸಿದ ಸಾಲಿ ಮಾಸ್ತರ ಗೋಳ ನೆನಪ ಹಾರ್ಯಾರ
ಎಲ್ಲಾನು ಬಿಟ್ಟು ವಿದೇಶಕ್ಕ ಹೋಗಿ ಕುಂತ ಬಿಟ್ಟಾರ
ಹಿಂಗ -ಹಂಗ -ಹೆಂಗೋ ಮಂದಿ ಮಾತಾಡತಾರ

ನೋಡೂನು ತಡಿರಿ
ನೋಡೂನು ತಡಿರಿ
ಇವ್ರು ಖರೆವಂದ್ರ ಏನ ಮಾಡ್ಯಾರ ?

ಈ ಅನಿವಾಸಿಗಳು ಸ್ವತಂತ್ರ ಪೂರ್ವದಾಗ
ಭಾರತದಾಗ ಹುಟ್ಟಿಲ್ ಅಂದ್ರು ಸ್ವಾತಂತ್ರಕ್ಕಾ ಬಡದಾಡ್ಯಾರ್

ಅಷ್ಟ ಅಲ್ಲಾ , ಬೋಸರ ಸೈನ್ಯದಾಗ
ಹೋರಾಡಕೊಂತ ಪ್ರಾಣಾ ಬಿಟ್ಟರಾ .

ವಿದೇಶದಾಗ ನಮ್ಮ ಆಚಾರ – ವಿಚಾರ
ಹಬ್ಬ ಹರಿದಿನ ಎಲ್ಲಾ ಬೆಳಿಸ್ಯಾರ
ನೂರಾರು ಗುಡಿ-ಗೋಪುರಾ ಕಟ್ಟಿ ಬಿಟ್ಟಾರ
ಆ ನೆಲದಾಗ ಸಂಗೀತ- ಸಾಹಿತ್ಯ
ಮಕ್ಕಳಿಗೆ ಹೇಳಿ ಕೊಟ್ಟರಾ
ಅಲ್ಲಿ ಮಂದಿಗೆ ಯೋಗಾ ಸೂತ್ರಾ ಕಲಿಸಿ ಕೊಟ್ಟಾರಾ

ಅಲ್ಲೇ ದೊಡ್ಡ ದೊಡ್ಡ ಹುದ್ದೆ ಹಿಡಕೊಂಡ ಕುಂತಾರ
ವಿದೇಶದಾಗ MLA ಮತ್ತ MP ನೂ ಆಗ್ಯಾರ
೨೦೦ ವರ್ಷ ನಮ್ಮನ್ನ ಆಳಿದ – ಇಂಗ್ಲೆಂಡ್ ದೇಶದ ಪ್ರಧಾನಿ ಆಗ್ಯಾರ
ಸದ್ದಿಲ್ಲದ ಐರ್ಲೆಂಡ್ ಪ್ರಧಾನಿ ಆಗಿ ಮುಗಿಸ್ಯಾರ

ಅಮೆರಿಕಾದ ದೊಡ್ಡ-ದೊಡ್ಡ ಸಾಫ್ಟ್ ವೇರ್ ಕಂಪನಿ
ಎಲ್ಲಾನು ಮುಟ್ಟ್ಯಾಗ ಹಿಡದಾರಾ
ಹೋದ್ ವರ್ಷ ಭಾರತಕ್ಕ ಬರೇ ೧೩೫ ಬಿಲಿಯನ್ ಡಾಲರ್ ರೊಕ್ಕಾ ಕಳಸ್ಯಾರ
ಕರ್ಮ ಭೂಮಿ ಬ್ಯಾರೆ ಇದ್ದರೂ
ಕರ್ಮ ಭೂಮಿ ಬ್ಯಾರೆ ಇದ್ದ್ರೂ
ಜನ್ಮ ಭೂಮಿಗೆ ಚೊಲೋ ಆಗ್ಲಿ ಅಂತ ಏನಾರ ಮಾಡ್ತಾರಾ

ಆಗಸ್ಟ ೧೫ ಮತ್ತು ಜನೆವರಿ ೨೬ ಕ್ಕ
ವಿದೇಶಿ ನೆಲದಾಗ ಜಿಗಿದಾಡಿ ಜಿಗದಾಡಿ , ಜೇಂಡಾ ಹಾರಸ್ತಾರ
ವಿದೇಶಿ ಮಂದಿಗೆ ಇಡ್ಲಿ ದ್ವಾಸಿ
ಕರಿ ಪರಾಟಾದ ನಶಾ ಏರಿಸ್ಯಾರ
ಲಕ್ಷಾಂತರ ವಿದೇಶಿ ಮಂದಿಗೆ ಭಾರತ ನೋಡಿ ಬರ್ರಿ ಅಂತ ಹೇಳಿ ಕಳಿಸ್ಯಾರ

ವಿದೇಶದಾಗ ಮೈ ಮುರುದ ಕೆಲಸಾ ಮಾಡಿ
ರೊಕ್ಕಾ ಮಾಡ್ಯಾರಾ
ವಿದೇಶಿಗರಿಗೆ ಭಾರತೀಯರು ಅಂದ್ರ ಗೌರವ ಬರು ಹಂಗ ಮಾಡ್ಯಾರ

ಈ ಅನಿವಾಸಿ ಮಂದಿ ವಿದೇಶದಾಗ ಕನ್ನಡ ಸಾಹಿತಿ , ಗಾಯಕ ಗಾಯಕಿ , ಭಾಷಣಕಾರ ಇವ್ರನ್ನ ಎಲ್ಲಾ ಕರೆಸಿ
ದೊಡ್ಡ ಸಮ್ಮೇಲನಾ ಮಾಡತಾರ
ಆ ಸಮ್ಮೇಳನಾದಾಗ ಹೋಳಿಗಿ, ಕಡುಬಾ , ಹುಗ್ಗಿ , ಕತ್ತಿನ ಸಾರಾ , ಮಿರ್ಚಿ ಭಜಿ ಎಲ್ಲಾನು ಹೊಡಿತಾರಾ

ಅಷ್ಟ ಅಲ್ಲಾ
ಆ ಅನಿವಾಸಿ ಮಂದಿ ವಿದೇಶದಾಗ ಕನ್ನಡ ಲೇಖನಾ ಸಾಹಿತ್ಯಾ ಬರಕೊಂತ ತಮ್ಮದ ಗುಂಪು ಮಾಡ್ಯಾರ

ಈ ಅನಿವಾಸಿಗಳ ಕಥಿ ಭಾರತದ ನಿವಾಸಿಗೊಳ ಮುಂದ ಹೇಳ್ಕೋತ ಹೋದ್ರ ಇದೊಂದ ಮಹಾ ಭಾರತ ಅಂತಾರ

  • ಡಾ.ಉಮೇಶ್ ನಾಗಲೋತಿಮಠ

Leave a Reply