ಸಿನಿಮಾ ತಾರೆಗಳು ಹಲವಾರು, ಅವರು ಹಿಡಿಸುವ ಹುಚ್ಚು ಹಲವು ವಿಧದ್ದು ಅನ್ನುವುದೇನೋ ಸರಿಯೇ. ಆದರೆ, ತಮ್ಮ ಸಹಜ ನಟನೆಯಿಂದ ಪಾತ್ರಗಳಿಗೆ ಜೀವ ತುಂಬುವ ನಟರು ಕೆಲವರು ಮಾತ್ರ. ಆಂಥವರಲ್ಲಿ ಮೊನ್ನೆ ಮೊನ್ನೆ ವಿಧಿವಶರಾದ ವಿಶ್ವನಾಥ "ನಾನಾ" ಪಾಟೇಕರ್ ಒಬ್ಬರು. ಓಂ ಪುರಿ, ಅಮರೀಶ ಪುರಿ, ನಸೀರುದ್ದಿನ್ ಶಾ ಮುಂತಾದವರ ಪಟ್ಟಿಗೆ ಸೇರುವ ನಾನಾ, ಮರಾಠಿ ರಂಗಭೂಮಿಯಿಂದ ಬಂದವರು. ಒಂದು ಪಾತ್ರದ ನಿರ್ವಹಣೆಗೆ ಬೇಕಾದ ತಯಾರಿಯನ್ನು ಸ್ವಲ್ಪ ಹುಚ್ಚೇ ಅನ್ನಿಸುವಷ್ಟು ಮಾಡುವುದು ನಾನಾ ಅವರ ಗುಣ ಅನ್ನಬಹುದೇನೋ - ಉದಾಹರಣೆಗೆ, ಪ್ರಹಾರ್ ಸಿನಿಮಾದ ಸೈನಿಕನಾಗಲು ನಾನಾ ೩ ತಿಂಗಳು ಸೈನಿಕರೊಂದಿಗಿದ್ದು ಅವರಂತೆ ತರಬೇತಿ ಪಡೆದರು - ಅದು ಅವರ ಪಾತ್ರದಲ್ಲಿ ಮೂಡಿಬಂದದ್ದು ಸಹಜವೇ. ಅನೇಕ ಪ್ರಶಸ್ತಿಗಳೊಂದಿಗೆ ದೊರೆತ ಹಣವನ್ನು ಬಡವರ ಅಭಿವೃದ್ಧಿಗೆ ಬಳಸಿದ ನಾನಾ, ಬರಿಯ ನಟರಾಗಿ ಅಷ್ಟೇ ಅಲ್ಲ, ಒಬ್ಬ ಮಾನವೀಯತೆ ತುಂಬಿದ ಉದಾಹರಣೆಯಂತೆ ಬದುಕಿದರು. ಮರಾಠಾ ಇನ್ಫಂಟ್ರಿಯಲ್ಲಿ ಸೈನಿಕನಾಗಿ ಕಾರ್ಗಿಲ್ ತೊಂದರೆಯ ವೇಳೆ ಯುದ್ಧಕ್ಕೂ ಹೋಗಿಬಂದರು. ಅವರ ನೆನಪುಗಳನ್ನು ಇಲ್ಲಿ ಹಂಚಿಕೊಂಡಿರುವ ರಾಧಿಕಾ ಜೋಶಿಯವರ ಅನುಭವ ನಮ್ಮಲ್ಲನೇಕರದೂ ಆಗಿರಬಹುದು. ಎಂದಿನಂತೆ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸುವಿರೆಂಬ ಆಶಯದೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
ಸಿನಿಮಾ ಒಂದು ವಿಚಿತ್ರ ಲೋಕ. ಭಾರತದ ಸಿನಿಮಾ ರಂಗ ವಿಶ್ವದಲ್ಲೇ ಅತಿ ದೊಡ್ಡ ಸಿನಿಮಾ ಉದ್ಯಮ. ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಸಿನಿಮಾಗಳು ತೆರೆ ಕಾಣುತ್ತವೆ. ಇಂತಹ ತೀವ್ರ ಪೈಪೋಟಿಯ ಜಗತ್ತಿನಲ್ಲಿ ತಮ್ಮದೇ ಆದ ಅಸ್ತಿತ್ವ ಮೂಡಿಸುವುದು ಸುಲಭವಲ್ಲ. ಪ್ರತಿಯೊಬ್ಬ ಕಲಾವಿದನಿಗೂ ಅವನದೇ ಆದ ಛಾಪು ಇರುತ್ತದೆ. ಕೆಲ ನಟರ ಸೌಂದರ್ಯ, ಮೈಕಟ್ಟು, ಡಾನ್ಸ್ ಮಾಡುವ ರೀತಿ ಅಥವಾ ಫ್ಯಾಷನ್ ಶೈಲಿ ನಮ್ಮನ್ನು ತಕ್ಷಣ ಆಕರ್ಷಿಸುತ್ತದೆ. ಇನ್ನು ಕೆಲವರು ತಮ್ಮ ಅಭಿನಯ ಮಾತ್ರದಿಂದಲೇ ನೋಡುಗರನ್ನು ಆಕರ್ಷಿಸುತ್ತಾರೆ. ನನಗೆ ನಾನಾ ಪಾಟೇಕರ್ ಅಂಥವರು. ಇಷ್ಟು ವರ್ಷಗಳಿಂದ ಅವರ ಸಿನಿಮಾಗಳನ್ನು ನೋಡುತ್ತಿದ್ದರೂ, ಈ ಮನುಷ್ಯನನ್ನು ಒಂದು ವಾಕ್ಯದಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎಂದೆನಿಸುತ್ತದೆ.
ಅವರ ಹಲವು ಸಿನಿಮಾಗಳನ್ನು ಟಿವಿಯಲ್ಲಿ ನೋಡಿದ್ದರೂ ನನಗೆ ಇನ್ನೂ ಕಣ್ಣ ಮುಂದೆ ಬರುವುದು ಬುಧವಾರದ ಚಿತ್ರಹಾರ್ನಲ್ಲಿ ವಾರ ವಾರ ಬರುತ್ತಿದ್ದ ‘ರಾಜೂ ಬನ್ ಗಯಾ ಜೆಂಟಲ್ಮ್ಯಾನ್’ ಚಿತ್ರದ ‘ಲವೇರಿಯಾ’ ಹಾಡು. ಅದರಲ್ಲಿ ಶಾರುಖ್ ಖಾನ್ನ ಗೆಳೆಯನಾಗಿ ನಾನಾ — ಉದ್ದನೆಯ ಇಂಗ್ಲಿಷ್ ಕೋಟು, ತಲೆಯ ಮೇಲೊಂದು ಟೋಪಿ ಹಾಕಿ, ಮೂಲೆಯಲ್ಲಿ ಕುಳಿತು ದಿನಪತ್ರಿಕೆ ಓದುತ್ತಾ, ತನ್ನದೇ ಆದ ರೀತಿಯಲ್ಲಿ ಹಾಡನ್ನು ಆಲಿಸುತ್ತಿದ್ದರು. ಅದನ್ನು ನೋಡಿ ಎಂಥ ವಿಚಿತ್ರ ವ್ಯಕ್ತಿ ಎನಿಸಿತು. ಯಾಕೋ ಆ ವೇಷ ಅವರಿಗೆ ಹೊಂದುತ್ತಲೇ ಇರಲಿಲ್ಲ. ಆ ಮುಖ, ಆ ಮೈಕಟ್ಟು ಬೇರೆ ಏನನ್ನೋ ಹೇಳುತ್ತಿತ್ತು; ಕೋಟು ಇನ್ನೇನನ್ನೋ. ಆ ಅಸಹಜತೆಯನ್ನೇ ಮುಂದೆ ಅವರಲ್ಲಿ ನಾನು ಮತ್ತೆ ಮತ್ತೆ ಕಾಣಲಿದ್ದೇನೆ ಎಂದು ಆಗ ನನಗೆ ಗೊತ್ತಿರಲಿಲ್ಲ.
ಹಿಂದಿ ಸಿನಿಮಾದ ನಾಯಕರು ಎಂದರೆ ನಮಗೆ ಕನಸುಗಳು. ಸ್ವಿಟ್ಜರ್ಲ್ಯಾಂಡ್ನ ಹಿಮ, ಹೂವಿನ ತೋಟದಲ್ಲಿ ಹಾಡು, ಕೈ ಚಾಚಿ ನಿಂತ ಪ್ರೇಮಿ. ನಾನಾ ಆ ಲೋಕಕ್ಕೆ ಎಂದೂ ಕಾಲಿಡಲಿಲ್ಲ. ಕನಸು ಕಾಣುವ, ಕಲ್ಪನೆಯಲ್ಲಿ ತೇಲುವ ಪಾತ್ರದಲ್ಲಿ ನಾನು ಅವರನ್ನು ಒಮ್ಮೆಯೂ ನೋಡಿಲ್ಲ. ಅವರು ಯಾವಾಗಲೂ ಸಿಟ್ಟಿನಲ್ಲಿ, ಅಸಮಾಧಾನದಲ್ಲಿ, ಯಾರ ಜೊತೆಗಾದರೂ ಜಗಳಕ್ಕೆ ನಿಂತಂತೆ. ಕಣ್ಣಿನಲ್ಲಿ ಉರಿ, ಧ್ವನಿಯಲ್ಲಿ ಹರಿತ.
ಮನೆಯವರೆಲ್ಲಾ ಹೊರಟರು ಅಂತ ನಾನೂ ಚಿತ್ರಮಂದಿರಕ್ಕೆ ಹೋಗಿ ನೋಡಿದ ಚಿತ್ರ ‘ಪ್ರಹಾರ್’. ಆಗ ನಾನು ಚಿಕ್ಕವಳು; ಕಥೆ ನನಗೆ ಅರ್ಥವಾಗಲೇ ಇಲ್ಲ. ನೆನಪಿನಲ್ಲಿ ಉಳಿದದ್ದು ಒಂದು ಭಾರ ಮಾತ್ರ — ಸೈನಿಕನ ಶಿಸ್ತು, ಅವನ ಕೋಪ. ಅವನೊಳಗಿನ ನೋವು ಆಗ ತಿಳಿಯಲಿಲ್ಲ. ಕೆಲವು ವರ್ಷಗಳ ನಂತರ ಮತ್ತೆ ನೋಡಿದೆ. ಈ ಬಾರಿ ಕಥೆ ಅರ್ಥವಾಯಿತು, ಆದರೆ ಆ ಪಾತ್ರದ ತೀವ್ರತೆ ಇನ್ನೂ ಪೂರ್ತಿ ತಲೆಗೆ ಹೋಗಿಲ್ಲ. ಅದು ನಾನಾ ಸ್ವತಃ ನಿರ್ದೇಶಿಸಿದ ಸಿನಿಮಾ; ಬಹುಶಃ ಅದಕ್ಕೇ ಅದರಲ್ಲಿ ಅಷ್ಟೊಂದು ಕಚ್ಚಾ ಪ್ರಾಮಾಣಿಕತೆ. ಪದರ ಪದರಗಳಲ್ಲಿ ಸುತ್ತಿಕೊಂಡಂತಹ ಪಾತ್ರ ಅದು.
ತಮ್ಮ ಬಿರುಸಾದ, ಜೋರು ಧ್ವನಿಯ ಡೈಲಾಗ್ಗಳಿಗೆ ಮತ್ತು ಸ್ವಗತಗಳಿಗೆ ಪ್ರಸಿದ್ಧರಾದ ನಾನಾಗೆ ‘ಖಾಮೋಶಿ’ಯಲ್ಲಿ ಸಿಕ್ಕಿದ್ದು ಒಂದು ಮೂಕ ಪಾತ್ರ. ಮಾತು ಬಾರದ, ಕಿವಿ ಕೇಳದ ತಂದೆ — ಮಗಳ ಮೇಲಿನ ಪ್ರೀತಿ ಹಿಡಿತವಾಗಿ, ಸ್ವಾರ್ಥವಾಗಿ ಬದಲಾಗುವುದನ್ನು ಒಂದು ಮಾತೂ ಇಲ್ಲದೆ ತೋರಿಸಿದರು. ‘ಅಗ್ನಿಸಾಕ್ಷಿ’ಯಲ್ಲಿ ಹೆಂಡತಿಯನ್ನು ತನ್ನ ಸ್ವತ್ತು ಎಂದು ಭಾವಿಸುವ ಗಂಡ; ನೋಡುವಾಗ ಮೈ ಜುಮ್ಮೆನ್ನುತ್ತಿತ್ತು. ವ್ಯಕ್ತಿತ್ವದ ಲೋಪದೋಷಗಳನ್ನು ಎತ್ತಿ ತೋರಿಸಿದ ಈ ಪಾತ್ರಗಳು ಮನುಷ್ಯರ ಸಹಜ ಗುಣಗಳನ್ನು ಬಿಚ್ಚಿಟ್ಟವು.
ಅವರ ಮೈಕಟ್ಟು, ಬಿಗಿ ವರ್ತನೆ, ಸದಾಕಾಲದ ಸಿಟ್ಟು — ಇವುಗಳಿಂದಾಗಿ ಅನ್ಯಾಯ, ಅಕ್ರಮವನ್ನು ಸಹಿಸದ ಪೊಲೀಸ್ ಅಧಿಕಾರಿಯಾಗಿ ಅಥವಾ ಸಮಾಜ ಸುಧಾರಕನಾಗಿ ಬಹಳ ಚಿತ್ರಗಳಲ್ಲಿ ನಟಿಸಿದರು.
ಅವರು ಭಾರತೀಯ ಸೇನೆಯಲ್ಲೂ ಸಹ ಸೇವೆ ಸಲ್ಲಿಸಿದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಮರಾಠಿ ಲಘು ಪದಾತಿದಳದ ಸೈನಿಕರಾಗಿದ್ದರು.
ಇದೇ ಅವರ ಛಾಪಾಗಿತ್ತು. ಅವರನ್ನು ಬೇರೆ ರೂಪದಲ್ಲಿ ಒಪ್ಪುತ್ತಾರೆಯೋ ಎಂಬ ಸಂದೇಹ ಪ್ರೇಕ್ಷಕರಿಗೆ ಇದ್ದಿರಬಹುದು, ಆದರೆ ನಾನಾಗೆ ಮಾತ್ರ ಇರಲಿಲ್ಲ. ಇದರ ನಿದರ್ಶನವಾಗಿ ಬಂದ ಚಿತ್ರ ‘ವೆಲ್ಕಮ್’. ಅದೇ ಸಿಟ್ಟಿನ ಮುಖ, ಅದೇ ಗಂಭೀರ ಕಣ್ಣುಗಳು — ಆದರೆ ಈ ಬಾರಿ ನಾನು ನಗುವಿನಲ್ಲಿ ಉರುಳುತ್ತಿದ್ದೆ. ಉದಯ್ ಶೆಟ್ಟಿ ಭೂಗತ ಡಾನ್, ಆದರೆ ಅವನ ಆಸೆ ಸಿನಿಮಾದಲ್ಲಿ ನಟಿಸುವುದು. ಮುಗ್ಧ, ನೇರ ಮುಖ; ಚೂರಿಯಂತೆ ಹರಿತವಾದ ಸಂಭಾಷಣೆ. ಅದೇ ಅವರ ಕಾಮಿಡಿ ಟೈಮಿಂಗ್ನ ರಹಸ್ಯ ಅನ್ನಿಸುತ್ತದೆ. ಹೇಳಬೇಕೆಂದರೆ, ಅವರು ಮಾಡಿದ ಏಕೈಕ ‘ಕನಸುಗಾರ’ ಪಾತ್ರ ಬಹುಶಃ ಇದೇ — ಸಿನಿಮಾ ಹೀರೋ ಆಗಬೇಕೆಂಬ ಕನಸು ಕಾಣುವ ಡಾನ್! ಪ್ರಹಾರ್ನ ಸೈನಿಕ ಮತ್ತು ವೆಲ್ಕಮ್ನ ಡಾನ್ ಒಬ್ಬನೇ ನಟ ಎಂದರೆ ಈಗಲೂ ನಂಬಲು ಕಷ್ಟ.
ನಾನಾ ಮೂಲತಃ ಮರಾಠಿ ರಂಗಭೂಮಿಯಿಂದ ಬಂದವರು ಎಂದು ನನಗೆ ಆಮೇಲೆ ತಿಳಿಯಿತು. ಅವರನ್ನು ಸರಿಯಾಗಿ ತಿಳಿಯಬೇಕೆಂದರೆ ಅವರ ಮರಾಠಿ ಕೆಲಸ ನೋಡಲೇಬೇಕು. ‘ನಟಸಮ್ರಾಟ್’ನಲ್ಲಿ ಮಕ್ಕಳಿಂದ ದೂರವಾಗುವ ನಿವೃತ್ತ ರಂಗನಟ ಗಣಪತ್ ಬೆಲ್ವಲ್ಕರ್ — ನೋಡಿದವರು ಸುಲಭವಾಗಿ ಮರೆಯಲಾರರು. ‘ಆಪ್ಲಾ ಮಾಣೂಸ್’ನಲ್ಲಿ ಒಂದು ಸಾವಿನ ತನಿಖೆ ನಡೆಸುವ ಪೊಲೀಸ್ ಅಧಿಕಾರಿ. ಇವುಗಳಲ್ಲೂ ಅದೇ ಬೆಂಕಿ ಇದೆ, ಆದರೆ ಎಲ್ಲೋ ಒಂದು ಮೃದುತ್ವವೂ ಸೇರಿಕೊಂಡಿದೆ.
ಸಿನಿಮಾ ಜಗತ್ತಿನಲ್ಲಿರುವವರ ಜೀವನ ಗೋಜಲಿನದು. ವೈಯಕ್ತಿಕ ಜೀವನದಲ್ಲಿ ನಾನಾ ಪಾಟೇಕರ್ ಏರಿಳಿತಗಳನ್ನು ಕಂಡರು. ಅದರ ಬಗ್ಗೆ ನನಗೆ ಪೂರ್ಣ ಸತ್ಯ ಗೊತ್ತಿರದ ಕಾರಣ ಟಿಪ್ಪಣಿ ಮಾಡಲು ಸಾಧ್ಯವಿಲ್ಲ.
ಕೆಲವು ನಟರು ಪರದೆಯ ಮೇಲೆ ಕನಸು ಮಾರುತ್ತಾರೆ. ನಾನಾ ಪಾಟೇಕರ್ ನಿಜವನ್ನು ತೋರಿಸಿದರು — ಕೆಲವೊಮ್ಮೆ ಕಹಿಯಾಗಿ, ಕೆಲವೊಮ್ಮೆ ನಗೆಯಾಗಿ.
ಚಿತ್ರಹಾರ್ನ ಉದ್ದ ಕೋಟಿನ ದಿನದಿಂದ ಇಂದಿನವರೆಗೂ ಅವರು ನನಗೆ ಒಂದು ಪ್ರಶ್ನೆಯಾಗಿಯೇ ಉಳಿದಿದ್ದಾರೆ. ಬಹುಶಃ ಅದೇ ಸರಿ. ಒಂದು ನಿಗೂಢತೆ ಉತ್ಸುಕತೆಯನ್ನು ಸೃಷ್ಟಿಸುತ್ತದೆ. ಇಂತಹ ವಿಭಿನ್ನ ಪಾತ್ರಗಳನ್ನು ಇಲ್ಲೇ ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಎನ್ನುವಷ್ಟು ನೈಜವಾಗಿ ನಿಭಾಯಿಸಿದ ಕಲಾವಿದ ನಾನಾ ಪಾಟೇಕರ್. ಅವರ ಕೊಡುಗೆ ಅಪಾರ ಹಾಗೂ ಅಮರ.
– ರಾಧಿಕಾ ಜೋಶಿ.
******************************************************

ಲಕ್ಷ್ಮೀನಾರಾಯಣ ಗುಡೂರ್ ಅವರ ಸಂಪಾದಕೀಯ ಟಿಪ್ಪಣಿ ಮತ್ತು ರಾಧಿಕಾ ಜೋಶಿಯವರ ಲೇಖನ ನಾನಾ ಪಾಟೇಕರನ ನೆನಪುಗಳನ್ನು ಮತ್ತೆ ಹಸಿರಾಗಿಸಿದವು.
ನಟನೆಯ ಬಗ್ಗೆ ಅವರಿಗಿದ್ದ ಬದ್ಧತೆ, ಪಾತ್ರಕ್ಕಾಗಿ ಅವರು ಮಾಡಿಕೊಳ್ಳುತ್ತಿದ್ದ ತಯಾರಿ, ಅವರ ಸಾಮಾಜಿಕ ಕಳಕಳಿಗಳನ್ನು ಸಂಪಾದಕರು ಚೆನ್ನಾಗಿ ನೆನಪಿಸಿದ್ದಾರೆ. ರಾಧಿಕಾ ಅವರ ಲೇಖನದಲ್ಲಿ ನಾನಾ ಅವರ ವಿಭಿನ್ನ ಪಾತ್ರಗಳ ವಿಶ್ಲೇಷಣೆಯ ಜೊತೆಗೆ ತಮ್ಮದೇ ಆದ ನೆನಪುಗಳೂ ಬೆರೆತಿರುವುದು ಆಪ್ತವೆನಿಸಿತು.
ರಾಧಿಕಾ ಅವರು ಹೇಳಿದಂತೆ, ನಾನಾ ಪಾಟೇಕರ್ ಎಂದರೆ ಕೇವಲ ಸಿಟ್ಟು, ಆಕ್ರೋಶ, ಗಡುಸು ಧ್ವನಿ ಮಾತ್ರವಲ್ಲ. ಆ ಗಡುಸಿನ ಹಿಂದಿನ ಮೃದುತ್ವ, ನೋವು, ಅಸಹಾಯಕತೆ, ಹಾಸ್ಯಪ್ರಜ್ಞೆ ಎನ್ನೂ ವ್ಯಕ್ತಪಡಿಸಬಲ್ಲ ಅಪರೂಪದ ಕಲಾವಿದ. ವೆಲ್ಕಮ್ ಚಿತ್ರ ನೋಡಿದರೆ, ಇದೇ ನಟ ಪ್ರಹಾರ್ ಮತ್ತು ಖಾಮೋಶಿ ಚಿತ್ರಗಳಲ್ಲೂ ನಟಿಸಿದ್ದಾರೆಯೇ ಎಂದು ಆಶ್ಚರ್ಯವಾಗುತ್ತದೆ!
ಅವರ ಲೇಖನ ಓದುತ್ತಿದ್ದಂತೆ ನನ್ನ ನೆನಪುಗಳೂ ಒಂದೊಂದಾಗಿ ತೆರೆದುಕೊಂಡವು.
ನಾನಾ ಪಾಟೇಕರ್ ಅವರನ್ನು ನಾನು ಮೊದಲು ನೋಡಿದ್ದು ಅಂಕುಶ್ ಚಿತ್ರದಲ್ಲಿ. ಆ ಸಿಡುಕು ಮುಖ, ಕಣ್ಣಲ್ಲಿನ ಕೋಪ, ಮಾತಿನಲ್ಲಿನ ಆಕ್ರೋಶ, ಅಭಿನಯದಲ್ಲಿನ ತೀವ್ರತೆ ನನ್ನನ್ನು ಬೆರಗುಗೊಳಿಸಿದ್ದವು. ಯಾರೀತ ನಟ ಎಂದು ಕುತೂಹಲ! ಅಲ್ಲಿಂದ ಆರಂಭವಾಯಿತು ನಾನಾ ಚಿತ್ರ ಅಬ್ಭಿಯಾನ.
ಪ್ರಹಾರ್ ಚಿತ್ರಕ್ಕೆ ನನ್ನ ರೂಮ್ಮೇಟ್ನನ್ನು ಕರೆದುಕೊಂಡು ಹೋಗಿದ್ದೆ. ಅವನು ಸಿನಿಮಾ ನೋಡುವುದೇ ಅಪರೂಪ. ನೋಡಿದರೂ ಕಲಾತ್ಮಕ ಚಿತ್ರಗಳನ್ನು ಮಾತ್ರ ಇಷ್ಟಪಡುತ್ತಿದ್ದ. ಮಧ್ಯಂತರದಲ್ಲಿ ಅವನು ನನ್ನತ್ತ ತಿರುಗಿ, “ಈ ಆರ್ಮಿಯವನಿಗೆ ನಟನೆಯೂ ಚೆನ್ನಾಗಿ ಬರುತ್ತಲ್ಲ!” ಎಂದ! ಅವನಿಗೆ ನಾನಾ ಪಾಟೇಕರ್ ಒಬ್ಬ ನಟ ಎಂಬುದೇ ಗೊತ್ತಿರಲಿಲ್ಲ! ಸೈನಿಕನೊಬ್ಬ ಸಿನಿಮಾದಲ್ಲಿ ನಟಿಸುತ್ತಿದ್ದಾನೆ ಎಂದುಕೊಂಡಿದ್ದ! ಒಬ್ಬ ನಟನ ಅಭಿನಯಕ್ಕೆ ಇದಕ್ಕಿಂತ ದೊಡ್ಡ ಪ್ರಶಂಸೆ ಬೇಕೇ?
ಪರಿಂದಾ ಚಿತ್ರದಲ್ಲಿ ನಾನಾ ಅವರ ಅಭಿನಯವನ್ನು ಯಾರು ತಾನೇ ಮರೆಯಲು ಸಾಧ್ಯ? ಅವರ ಹಾವಭಾವಗಳು, ವಿಚಿತ್ರ ವರ್ತನೆ, ಸಂಭಾಷಣೆಗಳನ್ನು ಹೇಳುವ ರೀತಿ, ಧ್ವನಿಯ ಏರಿಳಿತಗಳು!
ಕ್ರಾಂತಿವೀರ್ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ಕನಿಷ್ಠ ಐದು ಬಾರಿಯಾದರೂ ನೋಡಿರಬೇಕು! ಚಿತ್ರದ ಕೊನೆಯ ಆ ಸುದೀರ್ಘ ಮಾತು ನನಗೆ ಬಾಯಿಪಾಠವಾಗಿತ್ತು. ನಾನಾ ಅವರ ಸಂಭಾಷಣೆಯ ಶೈಲಿ, ಆಕ್ರೋಶ, ಧ್ವನಿಯಲ್ಲಿನ ತೀವ್ರತೆ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು.
ತಮ್ಮ ಪ್ರಖರ ಸಂಭಾಷಣೆಗಳಿಗೇ ಹೆಸರಾದ ನಟನಿಗೆ ಮಾತೇ ಬಾರದ ಕಿವಿ ಕೇಳದ ತಂದೆಯ ತಂದೆಯ ಪಾತ್ರ ಖಾಮೋಶಿಯಲ್ಲಿ!
ಅಹಂಕಾರ, ಪ್ರೀತಿ, ನೋವು, ಅಸಹಾಯಕತೆ, ಮುಪ್ಪಿನ ಒಂಟಿತನಗಳ ಭಾವವನ್ನು ನಟಸಮ್ರಾಟ್ ಚಿತ್ರದಲ್ಲಿ ಅವರು ಅಭಿವ್ಯಕ್ತಿಸಿದ ರೀತಿ ಅನನ್ಯ. ನಾನಾ ನಿಜಕ್ಕೂ ನಟಸಮ್ರಾಟ್!
ಇವುಗಳ ನಡುವೆ ತ್ರಿಶಾಗ್ನಿ, , ದೀಕ್ಷಾ, ಯಾತ್ರಾ (ಯಾತ್ರಾ ಚಿತ್ರದಲ್ಲಿ ಉಸ್ತಾದ್ ರಶೀದ್ ಖಾನ್ ಅವರ ಹಿಂದುಸ್ಥಾನಿ ಬಂದಿಶ್-ಗಳಿವೆ) ಹೆಚ್ಚು ಚರ್ಚೆಗೆ ಬಾರದ ಚಿತ್ರಗಳು, ಚಿತ್ರರತ್ನಗಳು. ನೋಡಿಲ್ಲದಿದ್ದರೆ ಖಂಡಿತ ನೋಡಿ.
– ಕೇಶವ
LikeLike