ನಾನಾ ಪಾಟೇಕರ್; ವಿಚಿತ್ರಪಾತ್ರಗಳ ನೈಜ ವ್ಯಕ್ತಿತ್ವದ ಚಿತ್ರ – ರಾಧಿಕಾ ಜೋಶಿ.

ಸಿನಿಮಾ ತಾರೆಗಳು ಹಲವಾರು, ಅವರು ಹಿಡಿಸುವ ಹುಚ್ಚು ಹಲವು ವಿಧದ್ದು ಅನ್ನುವುದೇನೋ ಸರಿಯೇ.  ಆದರೆ, ತಮ್ಮ ಸಹಜ ನಟನೆಯಿಂದ ಪಾತ್ರಗಳಿಗೆ ಜೀವ ತುಂಬುವ ನಟರು ಕೆಲವರು ಮಾತ್ರ.  ಆಂಥವರಲ್ಲಿ ಮೊನ್ನೆ ಮೊನ್ನೆ ವಿಧಿವಶರಾದ ವಿಶ್ವನಾಥ "ನಾನಾ" ಪಾಟೇಕರ್ ಒಬ್ಬರು. ಓಂ ಪುರಿ, ಅಮರೀಶ ಪುರಿ, ನಸೀರುದ್ದಿನ್ ಶಾ ಮುಂತಾದವರ ಪಟ್ಟಿಗೆ ಸೇರುವ ನಾನಾ, ಮರಾಠಿ ರಂಗಭೂಮಿಯಿಂದ ಬಂದವರು. ಒಂದು ಪಾತ್ರದ ನಿರ್ವಹಣೆಗೆ ಬೇಕಾದ ತಯಾರಿಯನ್ನು ಸ್ವಲ್ಪ ಹುಚ್ಚೇ ಅನ್ನಿಸುವಷ್ಟು ಮಾಡುವುದು ನಾನಾ ಅವರ ಗುಣ ಅನ್ನಬಹುದೇನೋ - ಉದಾಹರಣೆಗೆ, ಪ್ರಹಾರ್ ಸಿನಿಮಾದ ಸೈನಿಕನಾಗಲು ನಾನಾ ೩ ತಿಂಗಳು ಸೈನಿಕರೊಂದಿಗಿದ್ದು ಅವರಂತೆ ತರಬೇತಿ ಪಡೆದರು - ಅದು ಅವರ ಪಾತ್ರದಲ್ಲಿ ಮೂಡಿಬಂದದ್ದು ಸಹಜವೇ.  ಅನೇಕ ಪ್ರಶಸ್ತಿಗಳೊಂದಿಗೆ ದೊರೆತ ಹಣವನ್ನು ಬಡವರ ಅಭಿವೃದ್ಧಿಗೆ ಬಳಸಿದ ನಾನಾ, ಬರಿಯ ನಟರಾಗಿ ಅಷ್ಟೇ ಅಲ್ಲ, ಒಬ್ಬ ಮಾನವೀಯತೆ ತುಂಬಿದ ಉದಾಹರಣೆಯಂತೆ ಬದುಕಿದರು. ಮರಾಠಾ ಇನ್ಫಂಟ್ರಿಯಲ್ಲಿ ಸೈನಿಕನಾಗಿ ಕಾರ್ಗಿಲ್ ತೊಂದರೆಯ ವೇಳೆ ಯುದ್ಧಕ್ಕೂ ಹೋಗಿಬಂದರು. ಅವರ ನೆನಪುಗಳನ್ನು ಇಲ್ಲಿ ಹಂಚಿಕೊಂಡಿರುವ ರಾಧಿಕಾ ಜೋಶಿಯವರ ಅನುಭವ ನಮ್ಮಲ್ಲನೇಕರದೂ ಆಗಿರಬಹುದು. ಎಂದಿನಂತೆ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸುವಿರೆಂಬ ಆಶಯದೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
ಸಂಗ್ರಹಣೆ: ಲಕ್ಷ್ಮೀನಾರಾಯಣ ಗುಡೂರ್. ಚಿತ್ರಗಳು: ಅಂತರ್ಜಾಲದಲ್ಲಿ ಹುಡುಕಿದವು.

ಸಿನಿಮಾ ಒಂದು ವಿಚಿತ್ರ ಲೋಕ. ಭಾರತದ ಸಿನಿಮಾ ರಂಗ ವಿಶ್ವದಲ್ಲೇ ಅತಿ ದೊಡ್ಡ ಸಿನಿಮಾ ಉದ್ಯಮ. ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಸಿನಿಮಾಗಳು ತೆರೆ ಕಾಣುತ್ತವೆ. ಇಂತಹ ತೀವ್ರ ಪೈಪೋಟಿಯ ಜಗತ್ತಿನಲ್ಲಿ ತಮ್ಮದೇ ಆದ ಅಸ್ತಿತ್ವ ಮೂಡಿಸುವುದು ಸುಲಭವಲ್ಲ. ಪ್ರತಿಯೊಬ್ಬ ಕಲಾವಿದನಿಗೂ ಅವನದೇ ಆದ ಛಾಪು ಇರುತ್ತದೆ. ಕೆಲ ನಟರ ಸೌಂದರ್ಯ, ಮೈಕಟ್ಟು, ಡಾನ್ಸ್ ಮಾಡುವ ರೀತಿ ಅಥವಾ ಫ್ಯಾಷನ್ ಶೈಲಿ ನಮ್ಮನ್ನು ತಕ್ಷಣ ಆಕರ್ಷಿಸುತ್ತದೆ. ಇನ್ನು ಕೆಲವರು ತಮ್ಮ ಅಭಿನಯ ಮಾತ್ರದಿಂದಲೇ ನೋಡುಗರನ್ನು ಆಕರ್ಷಿಸುತ್ತಾರೆ. ನನಗೆ ನಾನಾ ಪಾಟೇಕರ್ ಅಂಥವರು. ಇಷ್ಟು ವರ್ಷಗಳಿಂದ ಅವರ ಸಿನಿಮಾಗಳನ್ನು ನೋಡುತ್ತಿದ್ದರೂ, ಈ ಮನುಷ್ಯನನ್ನು ಒಂದು ವಾಕ್ಯದಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎಂದೆನಿಸುತ್ತದೆ.

ಅವರ ಹಲವು ಸಿನಿಮಾಗಳನ್ನು ಟಿವಿಯಲ್ಲಿ ನೋಡಿದ್ದರೂ ನನಗೆ ಇನ್ನೂ ಕಣ್ಣ ಮುಂದೆ ಬರುವುದು ಬುಧವಾರದ ಚಿತ್ರಹಾರ್‌ನಲ್ಲಿ ವಾರ ವಾರ ಬರುತ್ತಿದ್ದ ‘ರಾಜೂ ಬನ್ ಗಯಾ ಜೆಂಟಲ್‌ಮ್ಯಾನ್’ ಚಿತ್ರದ ‘ಲವೇರಿಯಾ’ ಹಾಡು. ಅದರಲ್ಲಿ ಶಾರುಖ್ ಖಾನ್‌ನ ಗೆಳೆಯನಾಗಿ ನಾನಾ — ಉದ್ದನೆಯ ಇಂಗ್ಲಿಷ್ ಕೋಟು, ತಲೆಯ ಮೇಲೊಂದು ಟೋಪಿ ಹಾಕಿ, ಮೂಲೆಯಲ್ಲಿ ಕುಳಿತು ದಿನಪತ್ರಿಕೆ ಓದುತ್ತಾ, ತನ್ನದೇ ಆದ ರೀತಿಯಲ್ಲಿ ಹಾಡನ್ನು ಆಲಿಸುತ್ತಿದ್ದರು. ಅದನ್ನು ನೋಡಿ ಎಂಥ ವಿಚಿತ್ರ ವ್ಯಕ್ತಿ ಎನಿಸಿತು. ಯಾಕೋ ಆ ವೇಷ ಅವರಿಗೆ ಹೊಂದುತ್ತಲೇ ಇರಲಿಲ್ಲ. ಆ ಮುಖ, ಆ ಮೈಕಟ್ಟು ಬೇರೆ ಏನನ್ನೋ ಹೇಳುತ್ತಿತ್ತು; ಕೋಟು ಇನ್ನೇನನ್ನೋ. ಆ ಅಸಹಜತೆಯನ್ನೇ ಮುಂದೆ ಅವರಲ್ಲಿ ನಾನು ಮತ್ತೆ ಮತ್ತೆ ಕಾಣಲಿದ್ದೇನೆ ಎಂದು ಆಗ ನನಗೆ ಗೊತ್ತಿರಲಿಲ್ಲ.

ಹಿಂದಿ ಸಿನಿಮಾದ ನಾಯಕರು ಎಂದರೆ ನಮಗೆ ಕನಸುಗಳು. ಸ್ವಿಟ್ಜರ್ಲ್ಯಾಂಡ್‌ನ ಹಿಮ, ಹೂವಿನ ತೋಟದಲ್ಲಿ ಹಾಡು, ಕೈ ಚಾಚಿ ನಿಂತ ಪ್ರೇಮಿ. ನಾನಾ ಆ ಲೋಕಕ್ಕೆ ಎಂದೂ ಕಾಲಿಡಲಿಲ್ಲ. ಕನಸು ಕಾಣುವ, ಕಲ್ಪನೆಯಲ್ಲಿ ತೇಲುವ ಪಾತ್ರದಲ್ಲಿ ನಾನು ಅವರನ್ನು ಒಮ್ಮೆಯೂ ನೋಡಿಲ್ಲ. ಅವರು ಯಾವಾಗಲೂ ಸಿಟ್ಟಿನಲ್ಲಿ, ಅಸಮಾಧಾನದಲ್ಲಿ, ಯಾರ ಜೊತೆಗಾದರೂ ಜಗಳಕ್ಕೆ ನಿಂತಂತೆ. ಕಣ್ಣಿನಲ್ಲಿ ಉರಿ, ಧ್ವನಿಯಲ್ಲಿ ಹರಿತ.

ಮನೆಯವರೆಲ್ಲಾ ಹೊರಟರು ಅಂತ ನಾನೂ ಚಿತ್ರಮಂದಿರಕ್ಕೆ ಹೋಗಿ ನೋಡಿದ ಚಿತ್ರ ‘ಪ್ರಹಾರ್’. ಆಗ ನಾನು ಚಿಕ್ಕವಳು; ಕಥೆ ನನಗೆ ಅರ್ಥವಾಗಲೇ ಇಲ್ಲ. ನೆನಪಿನಲ್ಲಿ ಉಳಿದದ್ದು ಒಂದು ಭಾರ ಮಾತ್ರ — ಸೈನಿಕನ ಶಿಸ್ತು, ಅವನ ಕೋಪ. ಅವನೊಳಗಿನ ನೋವು ಆಗ ತಿಳಿಯಲಿಲ್ಲ. ಕೆಲವು ವರ್ಷಗಳ ನಂತರ ಮತ್ತೆ ನೋಡಿದೆ. ಈ ಬಾರಿ ಕಥೆ ಅರ್ಥವಾಯಿತು, ಆದರೆ ಆ ಪಾತ್ರದ ತೀವ್ರತೆ ಇನ್ನೂ ಪೂರ್ತಿ ತಲೆಗೆ ಹೋಗಿಲ್ಲ. ಅದು ನಾನಾ ಸ್ವತಃ ನಿರ್ದೇಶಿಸಿದ ಸಿನಿಮಾ; ಬಹುಶಃ ಅದಕ್ಕೇ ಅದರಲ್ಲಿ ಅಷ್ಟೊಂದು ಕಚ್ಚಾ ಪ್ರಾಮಾಣಿಕತೆ. ಪದರ ಪದರಗಳಲ್ಲಿ ಸುತ್ತಿಕೊಂಡಂತಹ ಪಾತ್ರ ಅದು.

ತಮ್ಮ ಬಿರುಸಾದ, ಜೋರು ಧ್ವನಿಯ ಡೈಲಾಗ್‌ಗಳಿಗೆ ಮತ್ತು ಸ್ವಗತಗಳಿಗೆ ಪ್ರಸಿದ್ಧರಾದ ನಾನಾಗೆ ‘ಖಾಮೋಶಿ’ಯಲ್ಲಿ ಸಿಕ್ಕಿದ್ದು ಒಂದು ಮೂಕ ಪಾತ್ರ. ಮಾತು ಬಾರದ, ಕಿವಿ ಕೇಳದ ತಂದೆ — ಮಗಳ ಮೇಲಿನ ಪ್ರೀತಿ ಹಿಡಿತವಾಗಿ, ಸ್ವಾರ್ಥವಾಗಿ ಬದಲಾಗುವುದನ್ನು ಒಂದು ಮಾತೂ ಇಲ್ಲದೆ ತೋರಿಸಿದರು. ‘ಅಗ್ನಿಸಾಕ್ಷಿ’ಯಲ್ಲಿ ಹೆಂಡತಿಯನ್ನು ತನ್ನ ಸ್ವತ್ತು ಎಂದು ಭಾವಿಸುವ ಗಂಡ; ನೋಡುವಾಗ ಮೈ ಜುಮ್ಮೆನ್ನುತ್ತಿತ್ತು. ವ್ಯಕ್ತಿತ್ವದ ಲೋಪದೋಷಗಳನ್ನು ಎತ್ತಿ ತೋರಿಸಿದ ಈ ಪಾತ್ರಗಳು ಮನುಷ್ಯರ ಸಹಜ ಗುಣಗಳನ್ನು ಬಿಚ್ಚಿಟ್ಟವು.

ಅವರ ಮೈಕಟ್ಟು, ಬಿಗಿ ವರ್ತನೆ, ಸದಾಕಾಲದ ಸಿಟ್ಟು — ಇವುಗಳಿಂದಾಗಿ ಅನ್ಯಾಯ, ಅಕ್ರಮವನ್ನು ಸಹಿಸದ ಪೊಲೀಸ್ ಅಧಿಕಾರಿಯಾಗಿ ಅಥವಾ ಸಮಾಜ ಸುಧಾರಕನಾಗಿ ಬಹಳ ಚಿತ್ರಗಳಲ್ಲಿ ನಟಿಸಿದರು.

ಅವರು ಭಾರತೀಯ ಸೇನೆಯಲ್ಲೂ ಸಹ ಸೇವೆ ಸಲ್ಲಿಸಿದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಮರಾಠಿ ಲಘು ಪದಾತಿದಳದ ಸೈನಿಕರಾಗಿದ್ದರು.

ಇದೇ ಅವರ ಛಾಪಾಗಿತ್ತು. ಅವರನ್ನು ಬೇರೆ ರೂಪದಲ್ಲಿ ಒಪ್ಪುತ್ತಾರೆಯೋ ಎಂಬ ಸಂದೇಹ ಪ್ರೇಕ್ಷಕರಿಗೆ ಇದ್ದಿರಬಹುದು, ಆದರೆ ನಾನಾಗೆ ಮಾತ್ರ ಇರಲಿಲ್ಲ. ಇದರ ನಿದರ್ಶನವಾಗಿ ಬಂದ ಚಿತ್ರ ‘ವೆಲ್ಕಮ್’. ಅದೇ ಸಿಟ್ಟಿನ ಮುಖ, ಅದೇ ಗಂಭೀರ ಕಣ್ಣುಗಳು — ಆದರೆ ಈ ಬಾರಿ ನಾನು ನಗುವಿನಲ್ಲಿ ಉರುಳುತ್ತಿದ್ದೆ. ಉದಯ್ ಶೆಟ್ಟಿ ಭೂಗತ ಡಾನ್, ಆದರೆ ಅವನ ಆಸೆ ಸಿನಿಮಾದಲ್ಲಿ ನಟಿಸುವುದು. ಮುಗ್ಧ, ನೇರ ಮುಖ; ಚೂರಿಯಂತೆ ಹರಿತವಾದ ಸಂಭಾಷಣೆ. ಅದೇ ಅವರ ಕಾಮಿಡಿ ಟೈಮಿಂಗ್‌ನ ರಹಸ್ಯ ಅನ್ನಿಸುತ್ತದೆ. ಹೇಳಬೇಕೆಂದರೆ, ಅವರು ಮಾಡಿದ ಏಕೈಕ ‘ಕನಸುಗಾರ’ ಪಾತ್ರ ಬಹುಶಃ ಇದೇ — ಸಿನಿಮಾ ಹೀರೋ ಆಗಬೇಕೆಂಬ ಕನಸು ಕಾಣುವ ಡಾನ್! ಪ್ರಹಾರ್‌ನ ಸೈನಿಕ ಮತ್ತು ವೆಲ್ಕಮ್‌ನ ಡಾನ್ ಒಬ್ಬನೇ ನಟ ಎಂದರೆ ಈಗಲೂ ನಂಬಲು ಕಷ್ಟ.

ನಾನಾ ಮೂಲತಃ ಮರಾಠಿ ರಂಗಭೂಮಿಯಿಂದ ಬಂದವರು ಎಂದು ನನಗೆ ಆಮೇಲೆ ತಿಳಿಯಿತು. ಅವರನ್ನು ಸರಿಯಾಗಿ ತಿಳಿಯಬೇಕೆಂದರೆ ಅವರ ಮರಾಠಿ ಕೆಲಸ ನೋಡಲೇಬೇಕು. ‘ನಟಸಮ್ರಾಟ್’ನಲ್ಲಿ ಮಕ್ಕಳಿಂದ ದೂರವಾಗುವ ನಿವೃತ್ತ ರಂಗನಟ ಗಣಪತ್ ಬೆಲ್ವಲ್ಕರ್ — ನೋಡಿದವರು ಸುಲಭವಾಗಿ ಮರೆಯಲಾರರು. ‘ಆಪ್ಲಾ ಮಾಣೂಸ್’ನಲ್ಲಿ ಒಂದು ಸಾವಿನ ತನಿಖೆ ನಡೆಸುವ ಪೊಲೀಸ್ ಅಧಿಕಾರಿ. ಇವುಗಳಲ್ಲೂ ಅದೇ ಬೆಂಕಿ ಇದೆ, ಆದರೆ ಎಲ್ಲೋ ಒಂದು ಮೃದುತ್ವವೂ ಸೇರಿಕೊಂಡಿದೆ.

ಸಿನಿಮಾ ಜಗತ್ತಿನಲ್ಲಿರುವವರ ಜೀವನ ಗೋಜಲಿನದು. ವೈಯಕ್ತಿಕ ಜೀವನದಲ್ಲಿ ನಾನಾ ಪಾಟೇಕರ್ ಏರಿಳಿತಗಳನ್ನು ಕಂಡರು. ಅದರ ಬಗ್ಗೆ ನನಗೆ ಪೂರ್ಣ ಸತ್ಯ ಗೊತ್ತಿರದ ಕಾರಣ ಟಿಪ್ಪಣಿ ಮಾಡಲು ಸಾಧ್ಯವಿಲ್ಲ.

ಕೆಲವು ನಟರು ಪರದೆಯ ಮೇಲೆ ಕನಸು ಮಾರುತ್ತಾರೆ. ನಾನಾ ಪಾಟೇಕರ್ ನಿಜವನ್ನು ತೋರಿಸಿದರು — ಕೆಲವೊಮ್ಮೆ ಕಹಿಯಾಗಿ, ಕೆಲವೊಮ್ಮೆ ನಗೆಯಾಗಿ.

ಚಿತ್ರಹಾರ್‌ನ ಉದ್ದ ಕೋಟಿನ ದಿನದಿಂದ ಇಂದಿನವರೆಗೂ ಅವರು ನನಗೆ ಒಂದು ಪ್ರಶ್ನೆಯಾಗಿಯೇ ಉಳಿದಿದ್ದಾರೆ. ಬಹುಶಃ ಅದೇ ಸರಿ. ಒಂದು ನಿಗೂಢತೆ ಉತ್ಸುಕತೆಯನ್ನು ಸೃಷ್ಟಿಸುತ್ತದೆ. ಇಂತಹ ವಿಭಿನ್ನ ಪಾತ್ರಗಳನ್ನು ಇಲ್ಲೇ ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಎನ್ನುವಷ್ಟು ನೈಜವಾಗಿ ನಿಭಾಯಿಸಿದ ಕಲಾವಿದ ನಾನಾ ಪಾಟೇಕರ್. ಅವರ ಕೊಡುಗೆ ಅಪಾರ ಹಾಗೂ ಅಮರ.

– ರಾಧಿಕಾ ಜೋಶಿ.

******************************************************

ನಾವು ಹೊಂಟೇವ, ನಾವು ಹೊಂಟೇವ, ನಾವ್ ಹೊಂಟೇವ ಚಂದಪ್ಪನ್ ನೋಡಲಿಕ್ಕೆ .. ನೋಡಿ ಬೆನ್ನ ಹಿಂದ ಸುತ್ತಿ ಬರಲಿಕ್ಕೆ ..

ಇತ್ತೀಚಿನ ಆರ್ಟೆಮಿಸ್ ಚಂದ್ರಯಾನದ ಬಗ್ಗೆ ಹಲವು ಕವನಗಳು - ಚುಟುಕ, ಕವನ, ಜನಪದ ಶೈಲಿಯ ಪ್ರಯತ್ನಗಳ ಸಂಕಲನ ಇಂದಿನ ಪ್ರಸ್ತುತಿ.  ಮೆಚ್ಚಿಗೆಯಾದರೆ ಒಂದು ಲೈಕನ್ನೊತ್ತಿ, ಕಾಮೆಂಟ್ ಹಾಕಿದರೆ ಇನ್ನೂ ಚೆನ್ನ.
ಕೇಳಿದೊಡನೆ ಬರೆದು ಕಳಿಸಿದ ಮುರಳಿ ಹತ್ವಾರ್, ವೆಂಕಟೇಶ್ವರ ರೆಡ್ಡಿ, ರವಿರಾಜ್ ಉಪ್ಪೂರ್ ಭಟ್ ಅವರಿಗೆ ನಾನು ಆಭಾರಿ.
ಮುರಳಿ ಹತ್ವಾರರ ಪರಿಚಯ ಎಲ್ಲರಿಗೂ ಇದ್ದೇ ಇದೆ, ರವಿರಾಜ್ ಅವರೂ ಮುಂಚೆ ಅನಿವಾಸಿಗೆ ಬರೆದವರೇ. ವೆಂಕಟೇಶ್ವರ ರೆಡ್ಡಿಯವರ ಕವನ ಅನಿವಾಸಿಗೆ ಮೊದಲನೆಯ ಕವನ. ಪ್ರೆಸ್ಟನ್ನಿನಲ್ಲಿ ವಾಸವಾಗಿರುವ ವೆಂಕಿ, ಉದ್ಯೋಗದಿಂದ ಕಂಪ್ಯೂಟರ್ ಅಡ್ಮಿನ್ ಆಗಿದ್ದಾರೆ. ಕೊನೆಯಲ್ಲಿ, ಜಾನಪದ ಶೈಲಿಯಲ್ಲಿ ಬರೆಯುವ ಒಂದು ಬಾಲಿಶ ಪ್ರಯತ್ನ ನಾನೂ ಮಾಡಿದ್ದೇನೆ (ಕ್ಷಮೆಯಿಟ್ಟು ಓದಿರಿ!).
- ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ)
******************************************
ಮುರಳಿ ಹತ್ವಾರ್:

ಸುತ್ತು ಸುತ್ತುವ
ನೌಕೆಯ ನೋಡಿ
‘ಇದೆಲ್ಲಿ ಉಪದ್ರ’
ಎಂದು ಬಿಳಿಚಿಕೊಂಡನಂತೆ
ಚಂದಿರ ನಂದಿ
ಆಹಾ! ಎಂಥ ಚೆಂದದ
ಬೆಳದಿಂಗಳೆಂದು
ಕುಪ್ಪಳಿಸಿದರಂತೆ
ಆರ್ಟೆಮಿಸ್ಸಿನ ಮನೆಯ ಮಂದಿ.
******************************************
ವೆಂಕಟೇಶ್ವರ ರೆಡ್ಡಿ:

ನೀರಲ್ಲಿ ತೇಲೋ ಆಸೆ ನಂದು
ಗಗನದಲಿ ಚಂದ್ರನೆಡೆಗೆ ಹಾರೋ ಕನಸು ನಂದು
ಮುನುಗುವ ಜೀವನ ಎದ್ದೇಳುವುದೆಂದಿಗೋ
ನಕ್ಷತ್ರಗಳ ನಡುವೆ ಕರಗುವ ನನ್ನ ಆಸೆ
ಚಂದ್ರನ ತಲುಪುವ ಕನಸಿನ ಹೆಜ್ಜೆ ನನ್ನದು…

******************************************

ರವಿರಾಜ್ ಉಪ್ಪೂರ್ ಭಟ್:

ಶಶಿಯ ಶಿಖೆಗೆ ಆರ್ಟಿಮಿಸ್ ಪಯಣ


ಚಂದಿರನ ಸಂಗವ ಮಾಡಿ ಅರ್ಧ ಶತಕದ ಮೇಲಾಯ್ತು …
ವಿರಹ ವೇದನೆ ಹೆಚ್ಚಾಯ್ತು
ನಾಸಾದ ವಿಜ್ಞಾನಿಗಳೆಲ್ಲರೂ
ಮಾಡೇ ಬಿಟ್ಟರು ಧೃಡ ನಿರ್ಧಾರವ ..
ಚಿಮ್ಮಿಸುವೆವು ನಾಲ್ಕು ಯಾತ್ರಿಗಳನು
ಕಂಡರಿಯಲು ಶಶಿಯ ಬೆನ್ನಹಿಂದಿನ ರಹಸ್ಯಗಳನು

ನಿಗದಿತವಾಯ್ತು ಏಪ್ರಿಲ್ ತಿಂಗಳೊಳ್ 'ತಿಂಗಳ' ಪಯಣದ ಮುಹೂರ್ತ.
ಹತ್ತು ದಿನದ ಈ 'ಪಿಕ್ನಿಕ್' ಪಯಣ
ಭೂಮಿ-ಚಂದಿರನ ಸುತ್ತ.

ಹೊಡೆದರು ಹಲವಾರು ರೌಂಡು
ಆರ್ಟೆಮಿಸ್ ಮಿಷನ್‌ನ ಶಶಿ ಶಿಕಾರಿಗಳ ದಂಡು.

ಸಾವಿರಾರು ಮೈಲಿಗಳ ಪಯಣದಿ ಕಂಡರು ನೀಲಿ ವರ್ಣದ ಹೊಳೆಯುವ ಪ್ಲಾನೆಟ್ ..
ಫ್ಲಶ್ ಆಗದ ಓರಿಯನ್ ಕ್ಯಾಪ್ಸುಲ್‌ನ ಟಾಯ್ಲೆಟ್..
ಹೆಪ್ಪುಗಟ್ಟಿದ ಮಂಜು ಕರಗಿಸಲು ಬಾಹ್ಯಾಕಾಶ ನೌಕೆಯನು ತಿರುಗಿಸಿದರು ಬೆನ್ನು ಮಾಡಿ ಸೂರ್ಯನೆಡೆಗೆ !
ಸುಗಮವಾಯಿತು ಮುಂದಿನ ಪಯಣವು ಚಂದಿರನ ಬೆನ್ನೆಡೆಗೆ.

ಹೆಜ್ಜೆ ಹಾಕದೆಯೂ ಕದ್ದರು
ಸುಧಾಕರನ 'ಕಪ್ಪು ಬಿಳುಪಿನ' ಚಿತ್ರವ
ಜಗತ್ತಿಗೇ ಕಾಣದ ಆ 'ಕಪ್ಪು ಮೊಗವ'
ಕಣ್ತುಂಬ ನೋಡಿ ಕುಣಿದಾಡಿತು ಮನುಕುಲವು
ಕೃತಕ ಗ್ರಹಣವ ಕಂಡೆಲ್ಲರೂ ದಿಗ್ಬ್ರಮೆಗೊಂಡೆವು

ಶೂನ್ಯದ ಮಧ್ಯೆ ಅದೆಷ್ಟು ಅಂದವಾಗಿ ಮಿಂಚುತ್ತಿತ್ತು,
ಯಾರೋ ಎಸೆದ ಹೊಳೆಯುವ ಗಾಜಿನ ಗೋಲಿಯಂತೆ!
ಹಸಿರು ನೀಲಿಯ ಧರೆ ಬಾನಂಗಳದ ಮುತ್ತು
ಜಗದ ಸಂಸಾರ, ಸಮರಗಳೆಲ್ಲಾ ಅಡಗಿದೆ ಅದರೊಳು ನಾಣ್ಗೆಟ್ಟು ..
ಚಂದ್ರನ ಬಂಜರು ನೆಲದಿಂದ ನೋಡಿದರೆ ಎಲ್ಲವೂ ಬಲು "ಸೈಲೆಂಟ್"
ವಿಶ್ವದ ಅಗಾಧತೆಗೆ ಹೋಲಿಸಿದರೆ ನಾವೆಲ್ಲರೂ ಲಿಲಿಪುಟ್
ಭೂಮಿಯೇ ನಮಗೆಲ್ಲರಿಗೂ ದಕ್ಕಿದ ಏಕೈಕ ಅಪಾರ್ಟ್‌ಮೆಂಟ್

ಚಂದಿರನ ಸ ಕ್ಕುಗಟ್ಟಿದ ಬೆನ್ನಹಿಂದಿನ ದುರ್ಬೀನು ನೋಟಕೆ
ಮನುಕುಲದ ತಾಣವಾಯ್ತು ಬರೀಯ ನೀಲಿ ಚುಕ್ಕೆ
ಅಗಾಧ ಶೂನ್ಯದಿ ಹುಡುಕಿದೆ ಮಚ್ಚೆ!

ಸದಾ ಒಂದೇ ಮೊಗವ ತೋರಿಸಿ ಮುಗುಳು ನಗುತಿಹನು ಶಶಿಯು
ಇಳೆಯೊಡನೆ ಅತೀತ ಪ್ರೀತಿಯ ನಾಟ್ಯಾಭಿನಯವು
ಎಂದೆಂದೂ ತೋರುವನು ತನ್ನ ನಗು ಮುಖವ ಅನವರತ

ಹದಿನಾಲ್ಕು ದಿನದ ಸುಡುಬಿಸಿಲು ಈ ‘ಮೂನಿಗೆ'
ಮತ್ತೆ ಹದಿನಾಲ್ಕು ದಿನದ ಮೈ ನಡುಗುವ ಕಗ್ಗತ್ತಲೆ
ಸೂರ್ಯನ ಶಾಖಕೆ ಹಿಮವಾಗಿ ಸುಟ್ಟು ಕರಗುವ ಹಣೆಬರಹ!

ಆಕಾಶದಂಗಳದಿ ನಾಗಾಲೋಟವ ಮುಗಿಸಿ
ಭೂಮಿಯ ಮಡಿಲಿಗೆ ಮರಳಿತು ಒರಿಯನ್ ಕವಚ
ಬೆಂಕಿಯ ಉಂಡೆಯಂತೆ ನುಗ್ಗಿತು ಭೂ ಮಂಡಲದೊಳಗೆ
ನೀಲಿ ಕಡಲ ಮೇಲೆ ಮೆಲ್ಲನೆ ತೇಲಿತು ಆ ಕವಚ
"ಸ್ಪ್ಲ್ಯಾಶ್ ಡೌನ್" ಅಂತು ಪೆಸಿಫಿಕ್ ಸಮುದ್ರ

ಪುಳಕಿತ ವಾಯ್ತು ಈ ಮನುಕುಲವು
ಎಲ್ಲವೂ ಮಂಗಳವಾಯ್ತು
'ತಿಂಗಳಿನ' ಪಯಣ

ಮುಂದಿನ ಗುರಿಯು 'ಮಂಗಳನ' ಅಂಗಳಕೆ!
******************************************
ಲಕ್ಷ್ಮೀನಾರಾಯಣ ಗುಡೂರ್: 

ಸುತ್ತಿ ಬರೋಣು ನಮ್ ಚಂದಪ್ಪನ್ನ ..


ಬರ್ರೇ ಅಕ್ಕಂದ್ರ, ಬರ್ರೋ ಅಣ್ಣಂದ್ರ
ಜಲ್ದಿ ಜಲ್ದಿ ಬರ್ರಿ ಎಲ್ಲ ಕೂಡ್ರಿ ಬಂದ
ಚಂದ್ರನ ಸುತ್ತ ಹೋಗಿ ಬಂದಂಥ
ಸುದ್ದಿ ಹೇಳತೀನಿ ನಿಮ್ಮ ಮುಂದ...
ಹೊಸ ಸುದ್ದಿ ಹೇಳತೀನಿ ಕೇಳ ಮುಂದ ||

ಅರವತ್ತರಿಂದನ ದೊಡ್ಡ ದೇಶಗಳು
ಮಾಡಿ ರಾಕೆಟು ಬಿಟ್ಟಾರಂತ
ಆಕಾಶದಾಗ ಹಾರಿ ಚಂದ್ರನ ಹಿಡಿಲಿಕ್ಕೆ
ನಾನಾ ನೀನಾ ಅನ್ನ ಹಠ ತೊಟ್ಟಾರಂತ ...
ದೊಡ್ಡ ಪಟಾಕಿಯಂಥವು ಮಾಡಿ ಸುಟ್ಟಾರಂತ ||

ನಮ್ ಟ್ರಂಪಣ್ಣನ ಅಮೆರಿಕಾದಾಗ
ಸಂಸ್ಥಿ ಒಂದೈತಿ ನಾಸಾಂತ
ಚಂದ್ರನ ಮ್ಯಾಲ ಮನಿ ಮಾಡಲಿಕ್ಕೆ
ಪ್ಲಾನೊಂದ ಮಾಡ್ಯಾರ ಪಾಸಂತ ...
ಕೋಟಿ ಇಟ್ಟಾರ ಅದಕ್ಕ ಕಾಸಂತ ||

ಸುಮ್ಮನ ಹೋಗಿ ನೋಡಿ ಬರೋದಕ್ಕ
ಕಳಿಸ್ಯಾರ ಹಾರೋದೊಂದು ಬಸ್ಸಂತ
ನಾಕ ಮಂದಿ ಇರೋ ವಾಹನಕಿಟ್ಟಾರ
ಹೆಸರು ಕೇಳ್ರಿ ಆರ್ಟಿಮಿಸ್ಸಂತ ....
ನೆನಪಿರಲಿ .... ಆರ್ಟಿಮಿಸ್ ಅಂತ ||

ಹತ್ತು ದಿನ ರಾತ್ರಿ ಕಡುಗತ್ಲ ಹಾದ್ಯಾಗ
ಹಾರಿಕೋತ ಹೋಗ್ಯಾರ ಜುಂಯಂತ
ಹುರುಪಿನ ಹೊಸ ಹೊಸ ಪ್ರಯೋಗ ಮಾಡಲಿಕ್ಕೆ
ಎರಡು ಲಕ್ಷ ಮೈಲು ಕುಣಕೊಂತಾ ...
ಕಟ್ಟಿಕೊಂಡ ಬುತ್ತಿ ಉಣಕೊಂತ ||

ಚಂದಪ್ನ ಸುತ್ತೊಮ್ಮೆ ಸುತ್ತಿ ಬರುವಾಗ
ತೆಗದ ಕ್ಯಾಮರಾ ನೋಡ್ಯಾರಂತ
ಕತ್ತಲ ಮುಗದ ಮ್ಯಾಲ ಏನ ಕಾಣತದ
ಫೋಟುತೆಗಿಯೋ ತಯಾರಿ ಮಾಡ್ಯಾರಂತ ...
ಕಿಡಿಕಿಗೆ ತೇಲಿಕೊಂಡು ಓಡ್ಯಾರಂತ ||

ಕಗ್ಗ ಕತ್ತಲಾಗ ನೀಲಿ ವಜ್ರಧಂಗ
ಹೊಳೆಹೊಳೆ ಭೂಮಿನ್ನ ಕಂಡಾರಂತ
ಹೊನ್ನ ಸ್ವರ್ಗಕಿಂತ ನನ್ನ ಊರೇ ಚಂದ
ಚನ್ನಚಂದ್ರಂಗಿಂತ ನನ್ನ ಭೂಮಿ ಅಂದ ಅಂದಾರಂತ
ಹವಣಿಲೆ ಬಂದು ಇಳದಾರಂತ ...
ಭೂಮಿಗ್ ನಕ್ಕೋತ ಬಂದು ಕುಣದಾರಂತ ||
******************************************