ಒಂದು ಎರಡು
ಪ್ಲೇನಿನಲ್ಲಿ ಹೊರಡು
ಮೂರು ನಾಲ್ಕು
ನೆಂಟರ ಕಲೆ ಹಾಕು
ಐದು ಆರು
ಎಲ್ಲರ ಜೊತೆ ಸೇರು
ಏಳು ಎಂಟು
ಕಟ್ಟು ನೆನಪುಗಳ ಗಂಟು
ಒಂಬತ್ತು ಹತ್ತು
ಮತ್ತೆ ಪ್ಲೇನ್ ಹತ್ತು
ಒಂದರಿಂದ ಹತ್ತು ಹೀಗಿತ್ತು, ಭಾರತ ಪ್ರವಾಸ ಮುಗಿದಿತ್ತು.
ಇದರ ಒಂದು ಕಿರು ನೋಟ ಕೆಳಗಿನ ಲೇಖನ.
ನಮ್ಮ ಈ ಬಾರಿಯ ಭಾರತ ಪಯಣ ಜುಲೈ ತಿಂಗಳ ಎರಡನೇ ವಾರದಲ್ಲಿ ಆರಂಭವಾಯಿತು. ಭಾರತಕ್ಕೆ ಹೊರಡುವ ಮುನ್ನವೇ ಮನಸ್ಸಿನಲ್ಲಿ ಒಂದು ದೊಡ್ಡ ಪಟ್ಟಿ ಸಿದ್ಧವಾಗಿತ್ತು — ಏನೇನು ನೋಡಬೇಕು, ಏನೆಲ್ಲಾ ತಿನ್ನಬೇಕು, ಯಾರನ್ನೆಲ್ಲಾ ಭೇಟಿ ಮಾಡಬೇಕು, ಯಾವ ಊರಿಗೆ ಹೋಗಬೇಕು, ಎಲ್ಲಿ ಒಂದಷ್ಟು ಸಮಯ ಕಳೆಯಬೇಕು… ಹೀಗೆ ಪಯಣ ಆರಂಭವಾಗುವ ಮೊದಲೇ ನಮ್ಮ ಮನಸ್ಸು ಭಾರತ ಸುತ್ತಿ ಬಂದಿತ್ತು.
ನೆಂಟರ/ ಗೆಳೆಯರ ಮನೆಗೆ ಹೋದಾಗ ಮಾತು ಆರಂಭವಾಗುದು — “ಮೊದಲು ತಿಂಡಿ ತಿನ್ನಿ!” ಎಂಬ ಒತ್ತಾಯದೊಂದಿಗೆ. ತಿಂಡಿ ಮುಗಿದ ಮೇಲೆ, “ಊಟಕ್ಕೆ ಇನ್ನೂ ಸಮಯ ಇದೆ, ಕಾಫಿ ತೆಗೆದುಕೊಳ್ಳಿ” ಎನ್ನುವ ಮತ್ತೊಂದು ಪ್ರೀತಿ. ಕಾಫಿ ಮುಗಿಸುವಷ್ಟರಲ್ಲಿ ಊಟದ ಸಮಯವೇ ಬಂದಿರುತ್ತದೆ. ಹೀಗೆ ಸಂಬಂಧಿಕರ ಪ್ರೀತಿಯ ಆತಿಥ್ಯದಲ್ಲಿ ಹೊಟ್ಟೆ ತುಂಬುತ್ತಾ ಹೋದಂತೆ, ಹೊರಗಡೆ ಹೋಗಿ ಹೊಸಹೊಸ ತಿಂಡಿಗಳನ್ನು ಸವಿಯಬೇಕೆಂಬ ನಮ್ಮ ಯೋಜನೆಗಳು ಒಂದೊಂದಾಗಿ ಕೈಚೆಲ್ಲತೊಡಗಿದವು. ನಮ್ಮ ಬೆಂಗಳೂರಿನ ಟ್ರಾಫಿಕ್ — ಅದು ನಮ್ಮ ಪ್ರವಾಸದ ಇನ್ನೊಬ್ಬ ಅನಧಿಕೃತ ಸದಸ್ಯನಾಗಿ ಪ್ರತಿಯೊಂದು ಯೋಜನೆಯಲ್ಲೂ ತನ್ನ ಪಾಲನ್ನು ಪಡೆದುಕೊಂಡಿತು. ಹೋಗಬೇಕಾದ ಜಾಗಕ್ಕಿಂತ, ಅಲ್ಲಿಗೆ ಹೋಗುವ ದಾರಿಯಲ್ಲೇ ಅರ್ಧ ದಿನ ಕಳೆಯುವಂತಾಯಿತು. ಒಂದು ಕಡೆ ಭೇಟಿಯಾಗಬೇಕಾದವರ ಪಟ್ಟಿ, ಇನ್ನೊಂದು ಕಡೆ ಸಮಯದ ಅಭಾವ; ಮಧ್ಯದಲ್ಲಿ ಟ್ರಾಫಿಕ್ ತನ್ನದೇ ಆದ ನಿಯಮಗಳನ್ನು ಹೇರಿಕೊಂಡು ನಮ್ಮ ಪಯಣದ ಅರ್ಧ ಸಮಯವನ್ನು ನುಂಗಿಬಿಟ್ಟಿತು.
ಕಳೆದ ವರ್ಷ ನಮ್ಮ ಸನಿಹದ ಸಂಬಂಧಿಕರೆಲ್ಲ ಒಂದು ನಿರ್ಧಾರಕ್ಕೆ ಬಂದಿದ್ದೆವು — ಎಲ್ಲರೂ ಒಂದೇ ಕಡೆ ಸೇರಿ ಒಂದಷ್ಟು ಸಮಯವನ್ನು ಒಟ್ಟಾಗಿ ಕಳೆಯೋಣ ಎಂದು. ಹಳೆತಲೆಮಾರಿಗೆ ಈ ಭೇಟಿ ನೆನಪುಗಳನ್ನು ಮೆಲಕು ಹಾಕುವ ಅವಕಾಶ ಕೊಟ್ಟರೆ, ಹೊಸ ತಲೆಮಾರಿಗೆ ಇದು ಜೊತೆಗೂಡುವ ಮತ್ತು ಸಂಬಂಧ ಬೆಳೆಸುವ ಅವಕಾಶ ಕೊಡುತ್ತದೆ. ಹೋದ ವರ್ಷ ನಾವು ಬಾದಾಮಿ–ಬಾಗಲಕೋಟೆಯಲ್ಲಿ ಒಂದೆಡೆ ಸೇರಿದ್ದೆವು, ಈ ವರ್ಷವೂ ಅದೇ ಸಂಪ್ರದಾಯ ಮುಂದುವರಿಸೋಣ ಎಂದು ತೀರ್ಮಾನಿಸಿ, ಈ ಬಾರಿ ನಮ್ಮ ಭೇಟಿಯ ತಾಣವಾಗಿ ಶ್ರೀರಂಗಪಟ್ಟಣವನ್ನು ಆಯ್ಕೆ ಮಾಡಿಕೊಂಡೆವು. ಕಾವೇರಿ ನದಿಯ ತೀರದಲ್ಲಿರುವ ಕರ್ನಾಟಕ ಸರ್ಕಾರದ ವಸತಿಗೃಹದಲ್ಲಿ ನಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಂಡೆವು. ನಗರಗಳ ಗದ್ದಲದಿಂದ ಸ್ವಲ್ಪ ದೂರ, ಕಾವೇರಿಯ ಹರಿವಿನ ಸದ್ದು, ಹಸಿರಿನ ನಡುವೆ ನೆಲೆಸಿರುವ ಆ ಸುಂದರ ಪರಿಸರ — ನಮ್ಮೆಲ್ಲರ ಮನಸ್ಸಿಗೂ ಬಹಳ ಇಷ್ಟವಾಯಿತು. ಕಾವೇರಿಯ ಹರಿವನ್ನು ನೋಡುತ್ತಾ, ನನ್ನನ್ನೇ ನಾನು ಮರೆತಾಗ ಅನಿಸಿದ್ದು,
“ಸಮಯ, ಸಾಗುವ ಗತಿಯ, ತಡೆಯುವ ಪರಿಯ ನಾ ಕಾಣೆನು
ಕಳೆವ, ಸನಿಹದ ಕ್ಷಣವ, ಮೌನದ ಸ್ವರವ ಕೂಡಿಡುವೆನು”
ಶ್ರೀರಂಗಪಟ್ಟಣದಿಂದ ಹೊರಟ ನಂತರ ನಮ್ಮ ಮುಂದಿನ ಪೂರ್ವಯೋಜಿತ ಕಾರ್ಯಕ್ರಮ ನಮ್ಮ ತಂದೆಯ 90 ವರುಷದ “ಸೌರಿ ಶಾಂತಿ” ಕಾರ್ಯಕ್ರಮ. ಮನೆಯ ಹಿರಿಯರು ತಮ್ಮ 90 ವರುಷದ ಆಯುಷ್ಯನ್ನು ಕಳೆದಾಗ ಹೊರಹೊಮ್ಮುವ ಮನದ ಮಾತು “ನೀವು ಬದುಕಿದಿರಿ; ನಮ್ಮನ್ನು ಬೆಳೆಸಿದಿರಿ; ನಮ್ಮ ಕುಟುಂಬವನ್ನು ಕಟ್ಟಿದಿರಿ; ನಿಮ್ಮ ಅನುಭವದಿಂದ ನಮ್ಮ ಬದುಕಿಗೆ ದಾರಿ ತೋರಿದಿರಿ — ನಿಮ್ಮ ಈ ದೀರ್ಘ ಜೀವನಕ್ಕೆ ನಮ್ಮ ಕೃತಜ್ಞತೆಯ ನಮನ”. ಅವರು ಕಳೆದ ಆಯುಷ್ಯ, ಬರಿಯ ವಯಸ್ಸಲ್ಲ… ಅದು ಅವರು ಕಲೆತು ಹಾಕಿದ ಕುಟುಂಬದ, ಜೀವನದ ನೆನಪುಗಳು… ಪಾಲಿಸಿದ ಮತ್ತು ಮುಂದಿನ ತಲೆಮಾರಿಗೆ ತಿಳಿಸಿದ ಸಂಪ್ರದಾಯಗಳ ಕೊಂಡಿ… ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಸಂಬಂಧಿಕರಿಗೆ ತಿಳಿಸಿದ ಪಾಠಗಳು. ಇಂತಹ ಒಂದು ಅವಕಾಶ ಎಲ್ಲರಿಗೂ ಸಿಗುವದಿಲ್ಲ, ಅದು ನಮ್ಮ ಕುಟುಂಬಕ್ಕೆ ಒದಗಿ ಬಂದ ಸೌಭಾಗ್ಯ. ಪೂಜೆ, ಹವನ, ತುಲಾಭಾರ ಮಾಡುವದನ್ನು ನೋಡಿ ನೆರೆದ ಜನ ಪಟ್ಟ ಸಂತೋಷ ನಮ್ಮ ಕಾರ್ಯ ಸಫಲ ಎನಿಸಿತು. ನಿಮ್ಮ ಕುಟುಂಬಕ್ಕೆ ಸಿಕ್ಕ ಅವಕಾಶದಲ್ಲಿ ನಮ್ಮನ್ನೂ ಸೇರಿಸಿಕೊಂಡಿರಿ ಎಂದು ತುಂಬು ಹೃದಯದಿಂದ ಹೇಳಿದಾಗ ನಮ್ಮ ಮನೆಯವರಿಗೆಲ್ಲ ಆದ ಸಂತೋಷ ಅಷ್ಟಿಷ್ಟಲ್ಲ.
ಯಾರೂ ಅನಾಮದೇಯ ಬರೆದ ಒಂದು ಕವನ ಇಲ್ಲಿ ಹಂಚಿಕೊಳ್ಳುತ್ತೇನೆ
ಆ ಕವನದಲ್ಲಿ ಬಾಲ್ಯದ ನಗು ಇದೆ.
ಯೌವನದ ಕನಸು ಇದೆ.
ಕುಟುಂಬದ ಜವಾಬ್ದಾರಿ ಇದೆ.
ಮಕ್ಕಳ ಭವಿಷ್ಯದ ಚಿಂತೆ ಇದೆ.
ಮೊಮ್ಮಕ್ಕಳ ನಗುವಿನ ಸಂತೋಷ ಇದೆ.
ಸ್ನೇಹಿತರ ಅಗಲಿಕೆಯ ನೋವು ಇದೆ.
ಕಾಲ ಬದಲಾಗುವುದನ್ನು ಕಣ್ಣಾರೆ ಕಂಡ ಅನುಭವವಿದೆ.
ಇದು ತೊಂಬ್ಬತ್ತು ವರುಷದ ಅನುಭವದ ಕವನ.
ನಂತರದ ಪ್ರವಾಸದಲ್ಲಿ ಸಮಯದ ಮುಳ್ಳು ತನ್ನದೇ ಆದ ಲಯದಲ್ಲಿ ಮುಂದೆ ಸರಿಯುತ್ತಿದ್ದಂತೆ, ನಾನು ಕೂಡ ನನ್ನ ಇರುವ ಜಾಗದಿಂದ ಮತ್ತೊಂದು ಜಾಗದತ್ತ, ಒಂದು ಅನುಭವದಿಂದ ಮತ್ತೊಂದು ಅನುಭವದತ್ತ ಸಾಗುತ್ತಲೇ ಇದ್ದೆ. ಹಿಂದೆ ತಿರುಗಿ ನೋಡಿದಾಗ ಸುತ್ತಿಬಂದ ಊರುಗಳಿಗೆ ಲೆಕ್ಕವಿಲ್ಲ, ಕಂಡ ದೃಶ್ಯಗಳಿಗೆ ಕೊನೆಯಿಲ್ಲ, ಮನಸ್ಸಿನಲ್ಲಿ ಉಳಿದ ಅನುಭವಗಳಿಗೆ ಅಳತೆಯೇ ಇಲ್ಲ. ದಾರಿಯಲ್ಲಿ ಕೇಳಿದ ಹಾಡುಗಳನ್ನೂ ಎಣಿಸಲು ಸಾಧ್ಯವಾಗಲಿಲ್ಲ; ಕೆಲವು ಹಾಡುಗಳು ದಾರಿಯ ಸಂಗಾತಿಗಳಾದರೆ, ಕೆಲವು ಕ್ಷಣಗಳು ನೆನಪಿನ ಸಂಗೀತವಾಗಿ ಉಳಿದುಬಿಟ್ಟವು.
ಈ ಪಯಣದಲ್ಲಿ ತಿರುಮಲ ವೆಂಕಪ್ಪನ ದರ್ಶನ ಒಂದು ವಿಶಿಷ್ಟ ಅನುಭವ. ಅಲ್ಲಿನ ವ್ಯವಸ್ಥೆ, ದೇವರ ದರ್ಶನಕ್ಕಾಗಿ ದೂರದೂರಿನಿಂದ ಹರಿದುಬರುವ ಜನಸಾಗರ, ಅವರ ಭಕ್ತಿ ಮತ್ತು ಶ್ರದ್ಧೆ — ಇವೆಲ್ಲವೂ ಮನಸ್ಸಿನ ಮೇಲೆ ಒಂದು ವಿಶಿಷ್ಟ ಛಾಪು ಮೂಡಿಸಿದವು. ದೇವರ ಸನ್ನಿಧಿಯಲ್ಲಿ ಕೆಲ ಕ್ಷಣಗಳ ದರ್ಶನವೇ ಇಷ್ಟೊಂದು ಜನರ ಪಯಣಕ್ಕೆ ಅರ್ಥ ನೀಡುತ್ತದೆ ಎಂಬುದನ್ನು ಅಲ್ಲಿ ಮತ್ತೊಮ್ಮೆ ಅನುಭವಿಸಬಹುದು. ಅದರಂತೆಯೇ ದಾರಿಯಲ್ಲಿ ಸಿಕ್ಕ ಇತರ ದೇವಸ್ಥಾನಗಳ ದರ್ಶನವೂ ಭಕ್ತಿಯ ಅನುಭವವನ್ನು ಮತ್ತಷ್ಟು ಗಾಢಗೊಳಿಸಿತು. ಆದರೆ ನಮ್ಮ ಭಾರತೀಯ ಪ್ರವಾಸದ ಸೊಗಸೇ ಬೇರೆ — ದೇವರ ದರ್ಶನದ ಜೊತೆಗೆ ಅಲ್ಲಿನ ತಿನಿಸು, ಊರಿನ ಸೊಗಡು ಮತ್ತು ಪ್ರಕೃತಿಯ ಸೌಂದರ್ಯವೂ ಸೇರಿಕೊಂಡಾಗ ಪ್ರಯಾಣ ಇನ್ನಷ್ಟು ಸಂಪೂರ್ಣವಾಗುತ್ತದೆ.ಕೆಲವು ಸ್ಥಳಗಳು ದೇವರ ನೆನಪಿನಿಂದ ಮನಸ್ಸಿನಲ್ಲಿ ಉಳಿದರೆ, ಕೆಲವು ಸ್ಥಳಗಳು ನಾಲಿಗೆಯ ರುಚಿಯಿಂದ!
ಅಂತಹ ರುಚಿಕರ ನೆನಪುಗಳಲ್ಲಿ ಬೆಂಗಳೂರಿನ ವಿ.ವಿ. ಪುರಂನ ತಿಂಡಿ ಬೀದಿಯೂ ಒಂದು. ಅಲ್ಲಿ ತಿನ್ನುವ ತಿಂಡಿಗಳಷ್ಟೇ ಅಲ್ಲ, ಸೋಡಾ ಕುಡಿಯುವ ಅನುಭವವೂ ಒಂದು ರೀತಿಯ ಸಾಹಸವೇ!
ಸಾಮಾನ್ಯವಾಗಿ ನಾವು ಸೋಡಾ ಎಂದರೆ ಲೋಟದಲ್ಲಿ ತೆಗೆದುಕೊಂಡು ನಿಧಾನವಾಗಿ ಕುಡಿಯುತ್ತೇವೆ. ಆದರೆ ಅಲ್ಲಿ ಕೊಡುವ ಸೋಡಾದ ಕಥೆಯೇ ಬೇರೆ. ತುಸು ಸೋಡಾ ಇರುವ ಲೋಟವನ್ನು ಕೈಗೆ ಕೊಟ್ಟು, ಮೇಲಿನಿಂದ ಸೋಡಾವನ್ನು ಸುರಿಯುತ್ತಲೇ ಹೋಗುತ್ತಾರೆ. ಅದನ್ನು ಒಂದೇ ಉಸಿರಿನಲ್ಲಿ ಮುಗಿಸಬೇಕು. ಸೋಡಾ ಗಂಟಲೊಳಗೆ ಇಳಿಯುತ್ತಿದೆಯೋ, ನಗು ಬರುತ್ತಿದೆಯೋ, ಉಸಿರು ನಿಲ್ಲುತ್ತಿದೆಯೋ — ಆ ಕ್ಷಣದಲ್ಲಿ ಯಾವುದಕ್ಕೂ ಸ್ಪಷ್ಟತೆ ಇರುವುದಿಲ್ಲ… ಆದರೆ ಮುಗಿದ ಮೇಲೆ ಮಾತ್ರ ಒಂದು ವಿಚಿತ್ರವಾದ ಖುಷಿ.
ಅದೇ ರೀತಿಯ ಮತ್ತೊಂದು ಸೋಡಾ ಅನುಭವ ಧರ್ಮಸ್ಥಳದಲ್ಲಿ ಎದುರಾಯಿತು. ಅಲ್ಲಿ ಕಂಡ ಪೋಸ್ಟರ್‌ಗಳಲ್ಲಿ ದೊಡ್ಡದಾಗಿ “ಫುಲ್ಜಾರ್” ಎಂಬ ಹೆಸರನ್ನು ನೋಡಿ ಮೊದಲು ಅದರ ಅರ್ಥವೇನು ಎಂದು ಯೋಚಿಸಿದ್ದೆ. ಕೊನೆಗೆ ಅದು “ಫುಲ್ ಜಾರ್ ಸೋಡಾ” ಎಂಬುದು ಗೊತ್ತಾಯಿತು. ಹೆಸರೇ ಹೇಳುವಂತೆ, ಜಾರ್ ತುಂಬಾ ಸೋಡಾ. ಅದನ್ನೂ ಕುಡಿಯುವ ವಿಧಾನ ಮಾತ್ರ ಅದೇ — ಒಂದೇ ಗುಟುಕಿನಲ್ಲಿ ಮುಗಿಸಬೇಕು! ನಾವು ಸಾಮಾನ್ಯವಾಗಿ ಕುಡಿಯುವ ಸೋಡಾಕ್ಕಿಂತ ಇವುಗಳ ರುಚಿ ಮಾತ್ರವಲ್ಲ, ಕುಡಿಯುವ ರೀತಿಯಲ್ಲೇ ಒಂದು ರೀತಿಯ ಮೋಜಿದೆ. ಪ್ರವಾಸದಲ್ಲಿ ಇಂತಹ ಸಣ್ಣಸಣ್ಣ ಅನುಭವಗಳೇ ಮುಂದೆ ದೊಡ್ಡ ನೆನಪುಗಳಾಗುತ್ತವೆ.
ಇವೆಲ್ಲದರ ನಡುವೆ ನನಗೆ ಎದುರಾದ ಮತ್ತೊಂದು ವಿಚಿತ್ರ ಅನುಭವ — ಫೈರ್ ಪಾನ್…
ಸಾಮಾನ್ಯವಾಗಿ ಎಲೆ, ಅಡಿಕೆ, ಸಿಹಿ ಪದಾರ್ಥಗಳನ್ನು ಹಾಕಿ ಪಾನ್ ತಿನ್ನುವುದನ್ನು ನೋಡಿದ್ದೆ. ಆದರೆ ಇಲ್ಲಿ ಪಾನ್‌ಗೆ ಕೊನೆಯಲ್ಲಿ ಒಂದು ಲವಂಗ ಇಟ್ಟು, ಅದಕ್ಕೆ ಬೆಂಕಿ ಹಚ್ಚಿ ಕೊಡುತ್ತಾರೆ. ಅದನ್ನು ಬಾಯಿಗೆ ಇಡುವಾಗ ಆ ಬೆಂಕಿ ಕ್ಷಣಕಾಲ ಆತಂಕ ಹುಟ್ಟಿಸಿದರೂ, ಬಾಯಲ್ಲಿ ಇಟ್ಟ ನಂತರ ಬೆಂಕಿ ನಂದಿ, ಬಾಯಿಂದ ಹೊಗೆ ಹೊರಬರುವಾಗ ಅದೊಂದು ವಿಚಿತ್ರ ಅನುಭವ. ನನ್ನ ಬಾಯಿಂದ ಹೊಗೆ ಬರುತ್ತಿರುವುದನ್ನು ಕಂಡು, ಬಾಯಿಗೆ ಏನಾದರೂ ಆಗಿಬಿಟ್ಟಿತೇನೋ ಎಂದು ನನ್ನ ಮಗ ಗಾಬರಿಗೊಂಡ. ಅವನ ಮುಖದಲ್ಲಿದ್ದ ಆ ಆತಂಕವನ್ನು ನೋಡಿ ನನಗೆ ನಗಬೇಕೋ, ಅವನಿಗೆ ಸಮಾಧಾನ ಹೇಳಬೇಕೋ ಎಂಬುದೇ ತಿಳಿಯಲಿಲ್ಲ.
ನನ್ನ ಪ್ರವಾಸದ ಅನುಭಗಳನ್ನು ತಾವೂ ಅನುಭವಿಸಿರಬಹುದು, ಇದು ನಿಮ್ಮ ನೆನಪುಗಳನ್ನು ತಾಜಾ ಮಾಡುತ್ತದೆ ಎಂದುಕೊಳ್ಳುತ್ತೇನೆ. ಖುಷಿ ಸಿಕ್ಕರೆ ನಿಮ್ಮ ಅನಿಸಿಕೆ ಬರೆಯಿರಿ, ಇಲ್ಲದಿದ್ದರೊ ನಿಮ್ಮ ಮನದ ವಿಚಾರ ಹಂಚಿಕೊಳ್ಳಿ.
ಜಗತ್ತಿನ ಎಂಥದೇ exotic ಪ್ರದೇಶಕ್ಕೆ ಹೋದರು ಮತ್ತೆ ಮತ್ತೆ ನಮ್ಮ ಸ್ವದೇಶ ಪ್ರಯಾಣ ಕೊಡುವ ಹೊಸ ಅನುಭವ, ಉತ್ಸಾಹ, ಹಳೆಯ ರುಟೀನಿನ ಹೊಸ ಅನುಭವ ಇವುಗಳಿಗೆ ಸಾಟಿಯಲ್ಲಂತ ಮತ್ತೆ ಮತ್ತೆ ಕಂಡಿದ್ದೇವೆ! ನಿಮ್ಮ ಅನುಭವವೂ ಅದನ್ನೇ ಸಾರುತ್ತದೆ. ತೊಂಬತ್ತು ವರ್ಷದ ಹಿರಿಯರ ತುಲಾಭಾರ ನೋಡಲೂ ಪುಣ್ಯ ಪಡೆದಿರಬೇಕು ಎನ್ನುವದನ್ನು ಸಂಬಂಧಿಕರಲ್ಲದಿದ್ದರೂ ಬಂದು ಸೇರಿದ ಪರಿಚಿತರ ಮಾತು ಅಪ್ಪಟ ಭಾರತೀಯ ಸತ್ಯವನ್ನು ತೆರೆದಿಡುತ್ತದೆ. ಮುಂದಿನ ತಲೆಮಾರು ಇಂಥದನ್ನು ಅನುಭವಿಸಲಾರದು ಎನ್ನುವದು ದು:ಖದ ಸಂಗತಿ. ನಿಮ್ಮ ಫುಲ್ ಸೋಡಾ ಮತ್ತು ಫೈರ್ ಪಾನ್ ನ ಮೋಜಿನ ಸಾಹಸ ನಾನೆಂದೂ ಮಾಡಲಾರೆ. ನಿಮ್ಮ ಮಗನಂತೂ ದೂರ ಉಳಿತು. ನಿಮ್ಮ ಅಪರೂಪದ ಪ್ರವಾಸ ಕಥನವನ್ನು (ಹಿಂದೇಟು ಹಾಕುತ್ತ) ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
LikeLike