ದಿನ ನಿತ್ಯ ಬದುಕುಳಿಯುವ ಕಥೆ

ಉಮೈರಾ ಅವರು ಅನಿವಾಸಿಗಳ ದಿನನಿತ್ಯದ ಗೋಳು ಮನಸ್ಸು ಬಿಚ್ಚಿ ನಮ್ಮೊಂದಿದೆ ಹಂಚಿಕೊಂಡಿದ್ದಾರೆ.

ಇದರಿಂಗ ಪ್ರೇರೇಪಿತಳಾದ ನಾನು ತ್ರಿಶಂಕುವಾದ ನನ್ನ ಆಫೀಸಿನ ಗೀಳನ್ನು ಕಾಫಿ ಟಾಕ್ ಸ್ (small talks) – ‘ಚಾ ಜೋಡಿ ಚೂಡಾ’ಅಲ್ಲ ರೀ, ಬರಿ ವಣ ವಣ ಬ್ರೆಡ್ ಗತೆ ಏನು ಸತ್ವವಿಲ್ಲದ, ಮನಸ್ಸು ಬಿಚ್ಚಿ ಮಾತನಾಡಲಾಗದ ದೈನಂದಿನ ದೃಶ್ಯ. ನಿಮ್ಮೆಲ್ಲರ ಅನುಭವಕ್ಕೆ ಈಗಾಗಲೇ ಬಂದಿರುವ ಸನ್ನಿವೇಶಗಳು.
ದಯವಿಟ್ಟು ಓದಿ ನಿಮ್ಮ ಅನುಭವ ಹಂಚಿಕೊಳ್ಳಿ
~ಸಂ

ಅಲ್ಲೊಂದು ಕೋಮು ಗಲಭೆಯಂತೆ
ಕೇಳಿ ಎದೆಯಲ್ಲೊಂದು,
ಬೆಂಕಿ ಇಟ್ಟಂತೆ ಭಾಸ ,
ಅಲ್ಲೊಬ್ಬ ಕೊಲೆಯಾದನಂತೆ,

ಪತ್ರಿಕೆಯೊಳಗೆ ಕಣ್ಣಾಯಿಸಿದೆ ,
ಕೊಲೆ ಮಾಡಿದವನ ಹೆಸರೇನು,
ಜಾತಿಯೇನು,
ಯಾವ ಊರಿನವನು,
ನಮ್ಮ ಜಾತಿಯವನೇ ಆದರೆ,
ಇನ್ನೂ ಚಿಂತೆ ಅಳುಕು

ವಿಧಿ ಸಾಗರದಾಚೆ
ನನ್ನ ಚಿಟಕ್ಕೆಂದು
ಎಳೆದು ತಂದಿತು,
ಈಗ ಹೊಸ ರೀತಿಯ ಗುಲ್ಲು,
ಬೇಲಿ ಹಿಡಿದಂತೆ ಜೀವದ ಮೇಲೆ

ಬೀದಿಯಲ್ಲೊಂದು ಫಲಕ:
“Immigrants, we
don’t need you here”

ಮತ್ತೆ ಕಾಡಿತು ಆ ಗೊಂದಲ,
ನಾನು ಎಲ್ಲಿ ಸಲ್ಲುವವಳು?

ಬಿಡುವಿಲ್ಲದೆ ದುಡಿದು,
ಕೆಲವೊಮ್ಮೆ ಊರ
ಸುಗಂಧ ಕಾಡಿದಾಗ,
ಊರಿಗೆ ಹೊರಟಾಗಲೆಲ್ಲ
ನಮ್ಮವರದೇ ಧ್ವನಿ ,
ಅವರೇನು ಮಾರಾಯ NRI ಗಳು,
ಎಲ್ಲಿ ಹೋದರೂ NRI quota

ಆಗೊಂದು ICICI ಗ್ರಾಹಕ
ಪ್ರತಿನಿಧಿಯ ಕರೆ ,
ನೀವು ನಮ್ಮ
ಪ್ರೀಮಿಯಂ ಗ್ರಾಹಕರು,
ನಿಮಗೆ ಲೋನ್ ಇದೆ,
ಸ್ಪೆಷಲ್ ಕ್ರೆಡಿಟ್ ಕಾರ್ಡ್ ಇದೆ,

ಎಲ್ಲೂ ಸಲ್ಲದಿದ್ದರೂ
ನಾನು,
ಇಲ್ಲಿ ಸಲ್ಲುವೆ ..

-ಉಮೈರ
Gloucester

Coffee with Karen (kitchen + Random office person)

ಬೆಳಿಗ್ಗೆ 9:07ಕ್ಕೆ ನಾನು ಒಂದು ದೊಡ್ಡ ತಪ್ಪು ಮಾಡಿದೆ.

ಆಫೀಸ್ ಕಿಚನ್‌ಗೆ ಹೋದೆ.

ಕೆಟಲ್ ಈಗಾಗಲೇ ಆನ್ ಆಗಿತ್ತು. ಒಳಗೆ ಇನ್ನೊಬ್ಬ ಸಹೋದ್ಯೋಗಿ ನಿಂತಿದ್ದರು.
ಅಷ್ಟೇ… ಏನೋ ದಿಗಿಲು.
ಯಾಕಂದ್ರೆ ಕೆಲಸದ ಜಾಗದ ಸ್ಮಾಲ್ ಟಾಕ್ ಅಂದರೆ ಸುಮ್ಮನೆ ಮಾತಾಡೋದು ಅಲ್ಲ.
ಅದು ಒಂದು ಕಲೆ. ಒಂದು ವಿಧಿ.
ಕೈಯಲ್ಲಿ ಕಾಫಿ ಮಗ್ಗು ಹಿಡಿದು ಮಾಡುವ ಸಾಮಾಜಿಕ ಪರೀಕ್ಷೆ.

“ಗುಡ್ ಮಾರ್ನಿಂಗ್,” ನಾನು ಹೇಳಿದೆ.

ನನ್ನ ಧ್ವನಿಯಲ್ಲಿದ್ದ ಆತ್ಮವಿಶ್ವಾಸ ಕೇಳಿ ನನಗೇ ಅನುಮಾನ ಬಂತು.

“ಗುಡ್ ಮಾರ್ನಿಂಗ್,” ಅವರು ಉತ್ತರಿಸಿದರು.
ನ್ಯೂಟ್ರಲ್. ಸೇಫ್.
ಇಬ್ಬರೂ ಮೊದಲ ಹಂತವನ್ನು ಯಶಸ್ವಿಯಾಗಿ ದಾಟಿದ್ದೆವು.
ಆಮೇಲೆ ಮೊದಲ ಪ್ರಶ್ನೆ ಬಂತು.
” Guess ! it ‘s a busy day today?

ಆಹಾ… ಸ್ಮಾಲ್ ಟಾಕ್‌ನ ಮೊದಲ ನಿಯಮ.

ಈ ಪ್ರಶ್ನೆಗೆ ಯಾರೂ ನಿಜವಾದ ಉತ್ತರ ಕೊಡುವುದಿಲ್ಲ.

“Yeah ! It has been busy off late ” ಎಂದು ನಾನು ತಲೆಯಾಡಿಸಿದೆ.

ನನಗೆ ಏನೂ ಗೊತ್ತಿಲ್ಲ.
ಅವರಿಗೆ ಏನೂ ಗೊತ್ತಿಲ್ಲ.
ಆದರೂ ಇಬ್ಬರೂ ಅರ್ಥ ಮಾಡಿಕೊಂಡಂತೆ ತಲೆ ಆಡಿಸಿದ್ದೇವೆ.

ಅಷ್ಟರಲ್ಲಿ ಕೆಟಲ್ “ಕ್ಲಿಕ್” ಅಂತ ಆಫ್ ಆಯ್ತು.
ತುಂಬಾ ಬೇಗ ನೀರು ಕುದಿಯಿತು ಅನಿಸಿತು.
ಮಾತುಕತೆ ಇನ್ನೂ ಮುಗಿದಿರಲಿಲ್ಲ.

ಮುಂದಿನ obvious ಪ್ರಶ್ನೆ “ಭಯಂಕರ ಶೆಕೆ?” ಅವರು ಕೇಳಿದರು.

ಅಯ್ಯೋ ಹೌದು ತಡೆಯಲಾರದಷ್ಟು ಬಿಸಿಲು ಧಗೆ ಅಂದೇ.

ಇಂಗ್ಲೆಂಡಿನಲ್ಲಿ ಹವಾಮಾನ ಅಂದ್ರೆ ಹವಾಮಾನ ಅಲ್ಲ.

ಅದು ಸಂಭಾಷಣೆ ಶುರು ಮಾಡುವ ಅಧಿಕೃತ ವಿಷಯ.

“ಹೌದು,” ನಾನು ಹೇಳಿದೆ.
“ನಿನ್ನೆ ಚಳಿ ಇತ್ತು. ಇವತ್ತು ಕೂಡ ಎಲ್ಲಿ ಚಳಿ ಆಗತ್ತೋ ಅಂತ ಇಂದು ತಪ್ಪು ಜಾಕೆಟ್ ಹಾಕಿಕೊಂಡು ಬಂದಿದ್ದೀನಿ.”

ಇದಂತೂ ಹಸಿ ಸುಳ್ಳು.

ನಾನು ಪ್ರತಿದಿನ ಅದೇ ಜಾಕೆಟ್ ಹಾಕುತ್ತೇನೆ.

ಆದರೆ ಸ್ಮಾಲ್ ಟಾಕ್‌ನಲ್ಲಿ ಸ್ವಲ್ಪ ಗೊಂದಲ ಇರಬೇಕು ಅನ್ನೋದು ನಿಯಮ.

ನಾವು ಇಬ್ಬರೂ ನಕ್ಕೆವು.

ಜೋರಾಗಿ ಅಲ್ಲ.

ಬಾಯಲ್ಲಿ ಮಾತ್ರ ಕಾಣಿಸುವ, ಕಣ್ಣಿಗೆ ತಲುಪದ ನಗು.

ಆಮೇಲೆ ಅತ್ಯಂತ ಅಪಾಯಕಾರಿ ಪ್ರಶ್ನೆ.

“ವೀಕೆಂಡ್‌ಗೆ ಏನಾದರೂ ಪ್ಲ್ಯಾನ್ಸ್ ಇದೆಯಾ?”

ಈ ಪ್ರಶ್ನೆ ಒಂದು ಬಲೆ. ಸ್ವಲ್ಪ ಯೋಚಿಸಿ ಉತ್ತರ ಕೊಡಬೇಕು.

“ಏನೂ ಇಲ್ಲ” ಅಂದ್ರೆ ಬೋರ್.

“ಮನೆಲ್ಲೇ ರೆಸ್ಟ್ ಮಾಡ್ತೀನಿ” ಅಂದ್ರೆ ಸೋಮಾರಿ.

ತುಂಬಾ ಗ್ರ್ಯಾಂಡ್ ಪ್ಲ್ಯಾನ್ ಹೇಳಿದ್ರೆ ಶೋಆಫ್.

ಹಾಗಾಗಿ ನಾನು ಸುರಕ್ಷಿತ ಉತ್ತರ ಕೊಟ್ಟೆ.

“ಏನೋ… ಬ್ಯುಸಿಯಾಗೇ ಇರುತ್ತೀನಿ.”

(ಅಂದ್ರೆ ? ಅಂತ ಮಾತ್ರ ಕೇಳಬೇಡಿ. ಯಾಕಂದ್ರೆ ಯಾರಿಗೂ ಗೊತ್ತಿಲ್ಲ.

ಬಹುಶಃ ಮನೆ ಸ್ವಚ್ಛತಾ ಕಾರ್ಯಕ್ರಮ. ಲಾಂಡ್ರಿ, ದಿನಸಿ ಸಾಮಾನು ಶಾಪಿಂಗ್.

ಅಥವಾ ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನೇ ಮರುಪರಿಶೀಲಿಸುತ್ತಿರಬಹುದು.)

ಅವರು ತಲೆಯಾಡಿಸಿದರು.

ಸರಿಯಾದ ಉತ್ತರ ಸಿಕ್ಕಂತಾಯಿತು.

ಮಗ್ಗಿಗೆ ಹಾಲು ಸುರಿಯಿತು.ಕಾಫಿ ತಯಾರಾಯಿತು.ಮಗ್ಗುಗಳು ತುಂಬಿದವು.

ಆದರೆ ಮೌನ ಮಾತ್ರ ಇನ್ನೂ ತುಂಬಲೇ ಇಲ್ಲ.ಹಾಗಾಗಿ ಕೊನೆಯ ಹಂತ ಶುರುವಾಯಿತು.

“ಈ ವರ್ಷ ಎಷ್ಟು ಬೇಗ ಹೋಗ್ತಿದೆ ಅಲ್ವಾ?”

ಹೌದು.

ಸಮಯ ಯಾವಾಗಲೂ ವೇಗವಾಗಿಯೇ ಹೋಗುತ್ತದೆ.

ಇದು ಎಲ್ಲರಿಗೂ ಗೊತ್ತಿರುವ ಸತ್ಯ.

“ನಂಬೋಕಾಗಲ್ಲ,” ಎಂದು ನಾನು ಉತ್ತರಿಸಿದೆ.

ಜನವರಿಯನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿದ್ದವನಂತೆ ಗಂಭೀರವಾಗಿ ತಲೆಯಾಡಿಸುತ್ತಾ.

ಕೊನೆಗೂ ಆ ಪವಿತ್ರ ವಾಕ್ಯ ಬಂತು.

“ಸರಿ… ಮತ್ತೆ ಕೆಲಸಕ್ಕೆ ಹೋಗ್ಬೇಕು.”

ಇದರ ಅರ್ಥ:

ಸಂಪ್ರದಾಯ ವಿಧಿವತ್ತಾಗಿ ಯಶಸ್ವಿಯಾಯಿತು.

(ಯಾರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹೇಳಲಿಲ್ಲ.ಯಾರೂ ಅಸಹಜ ಪರಿಸ್ಥಿತಿ ಸೃಷ್ಟಿಸಲಿಲ್ಲ.)

ನಾವು ಇಬ್ಬರೂ ಹೊರಗೆ ನಡೆದೆವು.

ಇನ್ನೂ 43 ನಿಮಿಷಗಳಲ್ಲಿ ಮತ್ತೆ ಇದೇ ಕಿಚನ್‌ನಲ್ಲಿ ಭೇಟಿಯಾಗುತ್ತೇವೆ ಅನ್ನೋದು ಗೊತ್ತಿದ್ದರೂ…

ಗೊತ್ತಿಲ್ಲ ಅನ್ನೋ ಹಾಗೆ ನಡೆದೆವು.ನಾಳೆಯೂ ಇದೇ ಕಾರ್ಯಕ್ರಮ.

ಮೊದಲು ಹವಾಮಾನ.

ಆಮೇಲೆ ಬ್ಯುಸಿ ಡೇ.

ನಂತರ ವೀಕೆಂಡ್ ಪ್ಲ್ಯಾನ್ಸ್.

ಕೊನೆಯಲ್ಲಿ…

“ಸರಿ… ಮತ್ತೆ ಕೆಲಸಕ್ಕೆ ಹೋಗ್ಬೇಕು.”

ಯಾಕಂದ್ರೆ ಕೆಲಸದ ಜಾಗದ ಸ್ಮಾಲ್ ಟಾಕ್‌ನ ಉದ್ದೇಶ ಸ್ನೇಹ ಮಾಡೋದು ಅಲ್ಲ.

ಅದರ ಉದ್ದೇಶ ಒಂದೇ:

ನೀವು ಸ್ನೇಹಪರ.ಆದರೆ ಅತಿಯಾಗಿ ಅಲ್ಲ.

ನೀವು ಮನುಷ್ಯ.ಆದರೆ ತುಂಬಾ ಭಾವನಾತ್ಮಕ ಅಲ್ಲ.

ನೀವು ಬದುಕಿದ್ದೀರಿ. ಆದರೆ ಅದನ್ನು ಬೊಬ್ಬಾಟ ಮಾಡುವುದಿಲ್ಲ.

ನಿಜ ಹೇಳಬೇಕಂದ್ರೆ…

ಇದು ಕೂಡ ಒಂದು ಕೌಶಲ್ಯ.

ಸರಿ, ನಾನು ಹೊರಡ್ತೀನಿ.

ನಾಳೆ ಕಿಚನ್‌ನಲ್ಲಿ ಹವಾಮಾನದ ಬಗ್ಗೆ ಹೊಸ ಅಭಿಪ್ರಾಯ ಹೇಳಲು ಈಗಿನಿಂದಲೇ ಅಭ್ಯಾಸ ಮಾಡ್ಬೇಕು.

ಒಂದುವೇಳೆ… ಹವಾಮಾನ ಬದಲಾಗಿದ್ರೆ!

ಒಂದು ಕಿವಿ ಮಾತು.. ನಿಮಗೆ ಇಷ್ಟವೋ ಕಷ್ಟವೋ ಫುಟ್ಬಾಲ್ ಬಗ್ಗೆ ಮಾತ್ರ ಸ್ವಲ್ಪ ಮಾಹಿತಿ ಇಟ್ಟುಕೊಳ್ಳಿ ನಿಮ್ಮ ಆಫೀಸಿನ ಜೀವನ ಸ್ವಲ್ಪ ಸರಾಗವಾಗಬಹುದೇನೋ.

~ರಾಧಿಕಾ

One thought on “ದಿನ ನಿತ್ಯ ಬದುಕುಳಿಯುವ ಕಥೆ

  1. ಶೀರ್ಷಿಕೆ ಹೇಳುವಂತೆ ಇವೆರಡೂ ಅನಿವಾಸಿಗಳ ದೈನಂದಿನ ಬದುಕಿನ ಭಿನ್ನ ತುಣುಕುಗಳನ್ನು ಕೇಂದ್ರವನ್ನಾಗಿ ಬರೆದ ಉತ್ತಮ ಪ್ರಸ್ತುತಿಗಳು.
    ಉಮೈರಾ ಅವರ ಕವಿತೆಯಲ್ಲಿ ಬರುವ ಘಟನೆಗಳನ್ನು ಎದುರಿಸುತ್ತಾ ಅನುಭವಿಸುತ್ತಾ ಎಲ್ಲಿ ಸಲ್ಲುತ್ತೇವೆ ಅಂತ ವಿಚಾರ ಮಾಡುತ್ತಲೇ ಇರುತ್ತೇವೆ ‘ಈ’ಅನಿವಾಸಿಗಳ ತಂಗುದಾಣದಲ್ಲಿ!’ ಫೀಡ್ ಬ್ಯಾಕ್ ಪ್ರಶ್ನೆಗಳಲ್ಲಿ ಇರುವಂಥ 1 to 10 scale ನಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಯತ್ತ ಸರಿಯುತ್ತಲೇ ಇರುತ್ತೇವೆ, ( final stop ಎಲ್ಲಿ ಅಂತ), ವರ್ಷಗಳು, ದಶಕಗಳು ಕಳೆದಂತೆ. ಕವಿತೆಯ ಕೊನೆಯ ಸಾಲಿನಲ್ಲಿದ್ದಂತೆ. ಪರವಾಗಿಲ್ಲ, ಇಲ್ಲೇ ಇದ್ದು ಬಿಡುವಾ ಅಂತ ನಿರ್ಧಾರ ಮಾಡಿದರೆ ಸಹಜವೇ, ಅದರಲ್ಲಿ ತಪ್ಪಿಲ್ಲ! ಅಂತ ಸಮಾಧಾನ – ಬಹುತೇಕ ಜನರಿಗೂ, ಬಹುಶಃ! ಈ ಕವಿತೆ ಮೇಲ್ನೋಟಕ್ಕೆ ಕಂಡದ್ದಕ್ಕಿಂತ ಆಳವಾಗಿ ಯೋಚಿಸಲು ಹಚ್ಚುತ್ತದೆ.

    ರಾಧಿಕಾ ಅವರು ಸರಳವಾಗಿ ಕಂಡ ಸ್ಮಾಲ್ ಟಾಕ್ ಸಂವಾದವನ್ನು ಇನ್ನೂ ಪಳಗಿರದವರಿಗೆ ಒಂದು ಕೈಪಿಡಿಯಂತೆ ಬರೆದಿದ್ದಾರೆ. ಎಪ್ಪತ್ತರ ದಶಕದಲ್ಲಿ ಹೊಸತಾಗಿ ಬಂದಾಗ ಡಾಕ್ಟರ್ ಗಳಿಗೆ ಇಂಥ Handbook ಗಳನ್ನು ಪ್ರಕಟಿಸುತ್ತಿದ್ದಿದೆ. ಟಾಕ್ ನಲ್ಲಿ ಹೇಗೆ tightrope walk ಮಾಡಬೇಕು ಅನ್ನುವ ಸತ್ಯವನ್ನು ತಿಳಿಹಾಸ್ಯದ ಜೊತೆಗೆ ವಿಶ್ಲೇಷಿಸಿದ್ದಾರೆ. ಸ್ಮಾಲ್ ಟಾಲ್ಕ್ ನ ಉದ್ದೇಶದ ಆ ಮೂರು ಸಲಹೆಗಳು ನೆನಪಿಡುವಂಥವು.
    “ಮಗ್ಗು ತುಂಬಿದರೂ ಮೌನ ತುಂಬಿರಲಿಲ್ಲ!” ಇದು 10/10 ವಾಕ್ಯ.
    ಕೊನೆಗೆ, ಸದ್ಯ ಇಂದು ಗೆದ್ದೆವು. ಇನ್ನೂ ನಾಳೆ ಇದೆ; ನಾಳೆಯ ನಾಳೆ ಸಹ. ತಯಾರಾಗಿರಿ. ‘ಫುಟೀ’ (football) ಮಾಹಿತಿ ಗಳಿಸಿದ್ದರೆ ಒಳ್ಳೆಯ ಭಂಡವಲು, ನಿಜ.
    Score: ಎರಡಕ್ಕೂ full 3 points! Football ನಲ್ಲಿ ಹೇಳುವಂತೆ!
    ಶ್ರೀವತ್ಸ ದೇಸಾಯಿ

    Liked by 1 person

Leave a comment