ಒಂದು “ಜಾಮ್‌”ನ ಕಥೆ

“ಜಾಮ್” ಅಂದಾಕ್ಷಣ ಮೊದಲು ನೆನಪಾಗೋದು ಟ್ರಾಫಿಕ್ ಜಾಮ್! ಅದರಲ್ಲೂ ಬೆಂಗಳೂರಿನವರಾದ್ರೆ, “ಜಾಮ್” ಅಂದಾಕ್ಷಣ ಮೆದುಳು ನೇರವಾಗಿ ಸಿಲ್ಕ್ ಬೋರ್ಡ್ ಕಡೆಗೆ ಹೋಗುತ್ತೆ.

ಒಮ್ಮೆ ನನಗೆ ಸಿಲ್ಕ್ ಬೋರ್ಡ್ ಹತ್ತಿರ ಕೆಲಸವಿತ್ತು. “ಬೆಳಗ್ಗೆ ಹೋಗಿ ಮಧ್ಯಾಹ್ನಕ್ಕೆ ವಾಪಸ್” ಅಂತ ಮನೆಯಲ್ಲಿ ಹೇಳಿ ಟ್ಯಾಕ್ಸಿ ಹತ್ತಿದೆ, ರಜೆಗೆಂದು ಬಂದಿದ್ದರಿಂದ ಮಗನೂ ಜೊತೆಗೂಡಿದ. ಬೇಗ ಬರುತ್ತೇನೆ ಅಂತ ಹೇಳುವಾಗ ನನಗೆ ನನ್ನದೇ ಆದ ದೃಢ ನಂಬಿಕೆ ಇತ್ತು… ಆದರೆ ಸಿಲ್ಕ್ ಬೋರ್ಡ್‌ ಟ್ರಾಫಿಕ್ ಎಲ್ಲರ ನಂಬಿಕೆ ಅಲ್ಲಾಡಿಸುತ್ತೆ.

ಟ್ರಾಫಿಕ್‌ಗೆ ಹೊಕ್ಕ ಮೇಲೆ ಗೊತ್ತಾಯ್ತು—ಇದು ರಸ್ತೆ ಅಲ್ಲ, ಮಹಾಭಾರತದ ಚಕ್ರವ್ಯೂಹ! ಒಳಗೆ ಹೋಗೋದು ಸುಲಭ… ಹೊರಗೆ ಬರೋದು ದೇವರ ದಯೆ. ಒಂದು ಗಂಟೆ ಆದ್ರೂ ಕಾರು ಮುಂದೆ ಸರಿತಾ ಇಲ್ಲ. ಕಿಟಕಿಯಿಂದ ಹಿಂದೆ ನೋಡಿದ್ರೆ—ಅದೇ ರಸ್ತೆ…ಕಟ್ಟಡ… ಮುಂದೆ ನಿಂತ ವಾಹನಗಳು ಕುರುಕ್ಷೇತ್ರ ಯುದ್ಧದ ಅತಿರಥ, ಮಹಾರಥರಂತೆ ಕಾಣುತ್ತಿದ್ದವು.

ಮೊದಲು ಕಾರಿನಲ್ಲಿ ಕುಳಿತುಕೊಂಡು ಮಜಾ ಮಾಡ್ತಿದ್ದೆವು. ಆದರೆ ಸ್ವಲ್ಪ ಸಮಯದ ಮೇಲೆ ಜೈವಿಕ ಅಗತ್ಯಗಳು “ನಾವು ಇದ್ದೀವಿ!” ಅಂತ ಸದ್ದು ಮಾಡ್ತಾ ಶುರುಮಾಡಿದವು. ನಾವು ಕೆಳಗೆ ಇಳಿದು ಅಗತ್ಯ ಪೂರೈಸಿಕೊಂಡು ಬಂದಾಗಲೂ ನಮ್ಮ ರಥ ತೆವಳುವ ಮಗುವಿನಂತೆ ಮುಂದೆ ಸರಿಯುತ್ತಿತ್ತು.

ಮಗನ ಊಟ, ನಿದ್ದೆ—all-in-one package—ಕಾರಿನಲ್ಲೇ ಮುಗಿದುಹೋಯ್ತು. ಕೆಲಸ ಮುಗಿಸಿ ಮನೆ ತಲಪುವ ತನಕ ಸಂಜೆ ೬ ಗಂಟೆ. ಬೆಳಿಗ್ಗೆ ೧೦ಕ್ಕೆ ಹೊರಟಿದ್ದವನಿಗೆ ಇದು ಒಂದು ದಿನದ ಪ್ರವಾಸವೇ ಆಯ್ತು! “ನನ್ನ ಪ್ರೀತಿಯ ಹುಡುಗಿ” ಸಿನಿಮಾದ “ಕಾರ್ ಕಾರ್” ಹಾಡು ಈ ದಿನದ ಸನ್ನಿವೇಶಕ್ಕೆ ಸರಿಯಾಗಿ ಹೊಂದುತ್ತದೆ —ಜೀವನವೇ ಕಾರಿನಲ್ಲಿ, ಟ್ರಾಫಿಕ್‌ನಲ್ಲಿ!

ಸಿಗ್ನಲ್-ಅಲ್ಲೇ ಶೇವಿಂಗ್ ಮಾಡಿ, ಟ್ರಾಫಿಕ್-ಅಲ್ಲೇ ಮೇಕ್-ಅಪ್ ಮಾಡಿ ಪಾರ್ಕಿಂಗ್ ಲಾಟ್ -ಅಲ್ ಪ್ರೀತಿ ಮಾಡತಾರೋ
ನಮ್ಮೂರಲ್ಲಿ ಬೇರೆ ತರ, ಸಿಲ್ಕ್ ಬೋರ್ಡ್ ಟ್ರಾಫಿಕ್ನಲ್ಲಿ ಊಟ ಮಾಡಿ, ದಿನದ ಅವಶ್ಯಕತೆ ಪೂರಾ ಮಾಡಿ, ಒಂದು ಸಣ್ಣ ನಿದ್ದೆ ಮಾಡತಾರೋ

ಇನ್ನೊಂದು ಜಾಮ್ ಕಥೆ ಹೇಳ್ಬೇಕು. ಬಹಳ ವರ್ಷಗಳ ಹಿಂದೆ ಬೆಂಗಳೂರಿನ ರಜೆ ಮುಗಿಸಿ ದೆಹಲಿ ಪ್ರಯಾಣಕ್ಕೆ ಹೊರಡುವ ಸಿದ್ಧತೆ ಮಾಡಿಕೊಂಡು ಮನೆಯಿಂದ ಹೊರಟೆ, ಬಿಡಲು ನನ್ನ ತಮ್ಮ ಕಾರ್ ತೆಗೆದು ಕೊಂಡು ಬಂದಿದ್ದ. ನನ್ನ ಹಣೆಬರಹ ಸರಿ ಇರಲಿಲ್ಲ, ಅಂದು ಕರ್ನಾಟಕದ ರಾಜಕೀಯ ಪಕ್ಷದ ಯುವರಾಜನ ಪಟ್ಟಾಭಿಷೇಕದ ದಿನ. ಆ ದಿನ ರಸ್ತೆ ಮೇಲೆ ವಾಹನಗಳ ಸಾಲು ಹಾಗು ಜನಸಾಗರ…ಪಟ್ಟಾಭಿಷೇಕ ಕಾರ್ಯಕ್ರಮ ರಸ್ತೆಯ ವಾಹನ, ಜನ, ಎಲ್ಲವನ್ನೂ ಸ್ಥಿರ ಮಾಡಿಬಿಟ್ಟಿತ್ತು.

ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡು ತಿನ್ನೋಕೆ ಏನೂ ಇಲ್ಲ, ಕುಡಿಯೋಕೆ ಏನೂ ಇಲ್ಲ. ಅತ್ಯಾವಶ್ಯಕ ಅಗತ್ಯಗಳು “ಈಗ ಆಗಲೇ ಬೇಕು!” ಅಂತ ಒತ್ತಾಯ ಮಾಡ್ತಿವೆ… ಆದರೆ ಹೋಗೋಕೆ ಜಾಗ ಇಲ್ಲ! ಒಂದು ಕಡೆ ನಾಚಿಕೆ, ಇನ್ನೊಂದು ಕಡೆ ಕಷ್ಟದ ಪರಿಸ್ಥಿತಿ— ಅವಶ್ಯಕತೆ ಪೂರೈಸಲು ಹೋಗಬೇಕೋ, ಬಿಡಬೇಕೋ ಅನ್ನೋ ಗೊಂದಲ!

ಅದರ ಮೇಲೆ ಮೊಬೈಲ್ ಸಿಗ್ನಲ್ ಕೂಡ ಜಾಮ್. “ನಾನು ಲೇಟ್ ಆಗ್ತಿದ್ದೀನಿ” ಅಂತ ಹೇಳೋ ಅವಕಾಶವೂ ಇಲ್ಲ. ರಾತ್ರಿ ಆಗೋಷ್ಟರಲ್ಲಿ ಟ್ರಾಫಿಕ್ ಸ್ವಲ್ಪ ಕದಲಿ … ನಾವು ಮುಂದಕ್ಕೆ ಹೋದೆವು. ಆದರೆ ದೆಹಲಿ ವಿಮಾನ ಮಾತ್ರ ನನ್ನನ್ನು ಕಾಯದೆ ಹಾರಿಹೋಗಿತ್ತು. ಇನ್ನೂ ಸ್ವಲ್ಪ ಹೊತ್ತು ಅಲ್ಲಿ ಉಳಿದಿದ್ದರೆ, ಬೇರೊಂದು ವಿಮಾನ ಹತ್ತ ಬೇಕಾಗುತ್ತಿತ್ತು!

ಹೋದ ವಾರ ದಿನಸಿ ಖರೀದಿಗೆ ಅಂಗಡಿಗೆ ಹೋದಾಗ ಮತ್ತೊಂದು ಜಾಮ್ ಎದುರಾಯ್ತು. ಹಣ ಪಾವತಿಸಲು ಹೋಗ್ತಿದ್ದೆ… ಮುಂದೆ ಜಾಮ್! ಕ್ಷಮಿಸಿ—ಈ ಬಾರಿ ಟ್ರಾಫಿಕ್ ಜಾಮ್ ಅಲ್ಲ… ಜಾಮ್ ಬಾಟಲಿಗಳ ಜಾಮ್!
ಜಾಮ್ ಬಾಟಲಿಗಳ ಕಥೆಯೂ ಸ್ವಾರಸ್ಯಕರವಾಗಿದೆ

ಸುಮಾರು ೧೯೩೦ರ ಸಮಯ. ಫ್ರಾನ್ಸಿಸ್ ಜೆ. ಮಿಚೆಲ್ ಅನ್ನೋ ವ್ಯಕ್ತಿ ತನ್ನೆಲ್ಲ ಆಸ್ತಿ ಕಳೆದುಕೊಂಡು ಸ್ಕಾಟ್ಲೆಂಡ್ ನಿಂದ ಭಾರತಕ್ಕೆ ಬರುತ್ತಾನೆ. ರೆನಾಲಾ ಖುರ್ದ್ (ಈಗ ಇದು ಪಾಕಿಸ್ತಾನ ನಲ್ಲಿ ಇದೆ) ಅನ್ನೋ ಊರ ಹತ್ತಿರ ಹೊಲ ಗದ್ದೆ ಗುತ್ತಿಗೆಗೆ ತೆಗೆದುಕೊಂಡು ತೋಟಗಾರಿಕೆ ಶುರುಮಾಡ್ತಾನೆ. ದೇಶದಲ್ಲಿ ರೈಲು ಸಂಪರ್ಕ ಒದಗಿಸುವ ಕೆಲಸ ನಡೆಯುತ್ತಿರುತ್ತದೆ, ರೈಲು ಹಳಿ ಅವನ ತೋಟದ ಮಧ್ಯದಿಂದ ಹಾಕುವ ವಿಚಾರ ರೈಲು ಇಲಾಖೆ ಮಾಡಿ ಅಲ್ಲಿನ ನಿಲ್ದಾಣಕ್ಕೆ ಹೆಸರು ಇಡೋಕೆ ಅವಕಾಶ ಕೊಡುತ್ತಾರೆ, ಆಗ ಅವನು ನಿಲ್ದಾಣಕ್ಕೆ ಇಟ್ಟ ಹೆಸರು—”ಕಿಸಾನ್”!

ಆ ಸ್ಟೇಷನ್‌ನಲ್ಲಿ ಅವನು ಹಣ್ಣು ಮತ್ತು ಹಣ್ಣಿನ ಸಂರಕ್ಷಿತ ಪದಾರ್ಥಗಳು ಮಾರಾಟ ಶುರುಮಾಡ್ತಾನೆ. ನಿಧಾನವಾಗಿ ಹಣ್ಣಿನ ಸಂರಕ್ಷಿತ ಪದಾರ್ಥಗಳು ಜನಪ್ರಿಯವಾಗುತ್ತೆ. ಕಿಸಾನ್ ನಿಲ್ದಾಣದಿಂದ ಖರೀದಿ ಮಾಡಿದ ಪದಾರ್ಥಗಳಿಗೆ ಎಲ್ಲರೂ ನಿಲ್ದಾಣದ ಹೆಸರೇ ಉತ್ಪನ್ನದ ಗುರುತು ಮಾಡುತ್ತಾರೆ, ಹೀಗೇ ಕಿಸಾನ್ ಬ್ರಾಂಡ್ ಭಾರತದೆಲ್ಲೆಡೆ ಹರಡುತ್ತದೆ. ಬ್ರಿಟಿಷರ ಐಷಾರಾಮಿ ಟೇಬಲ್‌ನಿಂದ ಹೊರಬಂದು ಮಕ್ಕಳ ಟಿಫಿನ್ ಬಾಕ್ಸ್‌ಗೆ ಬಂದು ಸೇರುತ್ತದೆ. ಬಣ್ಣಬಣ್ಣದ ಜಾಮ್—ಎಲ್ಲರ ಅಚ್ಚುಮೆಚ್ಚು !

ಆದ್ರೆ ೧೯೪೭ರಲ್ಲಿ ದೇಶ ವಿಭಜನೆಯಾಗುವಾಗ, ಮಿಚೆಲ್ ಕಂಪನಿಯೂ ವಿಭಜನೆಯಾಯಿತು. ಪಾಕಿಸ್ತಾನದಲ್ಲಿ “ಮಿಚೆಲ್”, ಭಾರತದಲ್ಲಿ “ಕಿಸಾನ್” ಆಗಿ ಉಳಿದವು. ಒಂದೇ ಬೇರು… ಕೊನೆಗೆ ಕವಲು

ಕೆಲವೊಮ್ಮೆ ನಾವು ಸಿಕ್ಕಿಕೊಳ್ಳೋ ಜಾಮ್‌ಗಳು ಕಿರಿಕಿರಿ ಕೊಡುತ್ತವೆ… ಕೆಲವೊಮ್ಮೆ ಕಥೆ ಕೊಡುತ್ತವೆ!

ಲಗೂ, ಲಗೂ ಬರೆದ ಈ ಲಘು ಲೇಖನ ನಿಮ್ಮ ತಲೆ ಜಾಮ್ ಮಾಡದಿರಲಿ.

Leave a comment