ವಿಜಯ್ ಖುರ್ಸಾಪೂರ, ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್, ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್-ನಲ್ಲಿ ನೆಲೆ, ಹುಟ್ಟಿದ ಊರು ಶಿಗ್ಗಾವಿ (ಜಿಲ್ಲೆ ಹಾವೇರಿ ), ಓದಿದ್ದು ಧಾರವಾಡ-ಗದಗ, ಬೆಂಗಳೂರು, ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ. (ಚಿತ್ರಕಾರ: ಎಐ)
ಕರ

ಕರವೆಂಬ ಕರು
ಬೆಳೆದು ಹೋರಿಯಾಗಿ
ಖರೀದಿಗೆ ಹೊರೆಯಾಗಿ
ಹೊಟ್ಟೆಗೆ ಬಟ್ಟೆಗೆ
ಕತ್ರಿ ಹಾಕುತ್ತಿದೆ
ತರತರವಾದ ತೆರಿಗೆಗಳು
ಹುಟ್ಟುತ್ತಲೇ ಇವೆ
ಮಧ್ಯಮ ವರ್ಗದವರ
ಕನಸುಗಳು ಮಧ್ಯದಲ್ಲೇ
ಮೊಟಕುಗೊಳ್ಳುತ್ತಲೇ ಇವೆ
ಸುಂಕದ ಭಾರಗಳು
ಸುಖವನ್ನು ಪ್ರಶ್ನೆಯಾಗಿಸಿ
ದುಡಿದ ಕೈಗಳನು
ಮತ್ತಷ್ಟು ಹಿಂಡುತಿವೆ
ಪೊಗದಿಯ ಏರು ಪೇರು
ಸರಕಾರದ ಬೊಕ್ಕಸ ತುಂಬಲು
ಮಾಡಿಕೊಂಡ
ಪಗಡೆ ಆಟವಾಗಿ ಮಾರ್ಪಟ್ಟಿವೆ
ಅಭಿವೃದ್ಧಿ ಮಾತ್ರ ವೃದ್ಧನಾಗಿ
ಕೋಲು ಹಿಡಿದು ಕುಂಟುತಿದೆ
ಕೈಲಾಗದವನ ಕೂಗು

ಕೈಲಾಗದವನ ಕೂಗು ಕೇಳುವರಾರು?
“ಕೈಲಾಗದವನು” ಎಂಬುದು ಬರಿ ಮಾತಷ್ಟೇ.
ದುಡಿಯುವ ಕೈಗಳುಂಟು,
ಕುಟುಂಬಕ್ಕೆ ತ್ಯಾಗ ಮಾಡಿರುವುದು ಉಂಟು,
ಆದರೂ ಇವನು ಕೈಲಾಗದವನೇ ?
ಏಕೆಂದರೆ?
ದೇಶ-ದೇಶಗಳು ತಮ್ಮ ಪ್ರತಿಷ್ಠೆಗೆ,
ಆಧಿಕಾರಕ್ಕೆ ಹೊಡೆದಾಡುವಾಗ
ಅವನ ಕಣ್ಣಿಗೆ ಇದು ಕ್ಷುಲ್ಲಕ.
ಏಕೆಂದರೆ ಅವನಿಗೆ ಏನೇ ಇದ್ದರೂ
ದುಡಿದು ತಿನ್ನುವುದಷ್ಟೇ ಇಷ್ಟ-ಕಷ್ಟ.
ಬುತ್ತಿಗೆ ಶ್ರೇಷ್ಠತೆ ಬೇಕಾಗಿಲ್ಲ,
ಹಸಿವು ನೀಗಿದರೆ ಸಾಕು.
ಬಟ್ಟೆಗೆ ಕೊಳೆ ಹತ್ತಿದರೂ ಪರವಾಗಿಲ್ಲ,
ಮೈ ಮುಚ್ಚಿದರೆ ಸಾಕು.
ಇದನ್ನರಿತ ಮೇಲಿನವರು
ಮತ್ತಷ್ಟು ಇವರನ್ನೇ ಪರೀಕ್ಷೆಗೆ
ಒಡ್ಡುವವರೇ ಎಲ್ಲ.
ನಾಯಕ /ಖಳನಾಯಕ

ಜಗದಲ್ಲಿ ಕದನಗಳು
ಕಮ್ಮಿ ಇಲ್ಲ; ಹಿಂದೇನೂ
ಇದ್ದವು,
ಬಹುಶಃ ಮುಂದೇನೂ
ಇರುತ್ತವೆ.
ಚುಕ್ಕಾಣಿ ಹಿಡಿದವರ
ಅಧಿಕಾರದ ದಾಹ
ತುಂಬುವುದಿಲ್ಲ,
ಕಾಯಕವ ನಂಬಿ
ದುಡಿದವರ ಹೊಟ್ಟೆ
ತುಂಬುವುದಿಲ್ಲ.
ಇತಿಹಾಸದಲ್ಲಿ ನಡೆದುಹೋದ
ಪ್ರತಿ ಕದನಗಳಲ್ಲೂ ಸತ್ತವರು
ಸಾಮಾನ್ಯರೇ!
ಸೋತರು ಗೆದ್ದರು
ಉಳಿದವರು ಮಾತ್ರ
ಪಟ್ಟದ ಮೇಲೆ ಕುಳಿತವರೇ!
ಎಲ್ಲಾ ಕದನಗಳೂ
ಪದೇ ಪದೇ ಕಲಿಸುವುದು
ಒಂದೇ ಪಾಠ, ಏನೆಂದರೆ
ಮುಗ್ದರು ನಂಬಿ ಮಾಡಿದ ನಾಯಕನೇ
ನಾಳೆ ಅವರಿಗೇ ಕಾಡುವ ಖಳನಾಯಕ.
ಒಮ್ಮೆ ಅಸಹಾಯಕರಿಗೆ ಹಸ್ತ ನೀಡಿದ
ಕೈಗಳು ಪದವಿಗೆ ಏರಿದ ಮೇಲೆ
ಬದಲಾಗುವುದೇಕೆ?
ಇಂತಹ ಇತಿಹಾಸಗಳೇ
ಇಂದಿಗೂ ಮರುಕಳಿಸುತ್ತಿರುವುದೇಕೆ?
ಪ್ರಕೃತಿ ಇನ್ನು ಎಷ್ಟು
ಸಲ ತೋರಿಸಬೇಕು,
ಅತಿಯಾದ ಅಧಿಕಾರವನು
ಜನ ಸಾಮಾನ್ಯರು
ಯಾರಿಗೂ ಎಂದಿಗೂ
ಕೊಡಬಾರದೆಂದು,
ಕೊಡಬಾರದೆಂದು.
ಮೂರು ಕವನಗಳಿದ್ದರೂ, ಒಂದೇ ವಸ್ತುವಿನ ಮೂರು ವಿಭಿನ್ನ ಕೋನಗಳಂತಿವೆ. ಕೈಲಾಗದವನ ಕೂಗಿಗೆ ನಾಯಕ ಕರವನ್ನು ಕಡಿಮೆಮಾಡದೇ ವರ್ಷ ವರ್ಷ ಹೆಚ್ಚಿಸುತ್ತೆ ಖಳನಾಯಕನಾಗಿದ್ದಾನೆ, ಎಲ್ಲ ದೇಶದಲ್ಲೂ! – ಕೇಶವ
LikeLike
ಆಹಾ ಕರಗಳು! ಕೈಯೆನ್ನುವ ಕರಗಳಲ್ಲ, ಕಟ್ಟಲಾಗದ ಕರಗಳು ಸರಕಾರ, ಅನ್ಯರು ಹೇರಿದ ಕರಗಳು. ಖುರಸಾಪುರ ಅವರ ಮೂರೂ ಕನ್ಗಳು kavangaluನಮ್ಮ, ಪ್ರಜೆಗಳ ಜೀವನದ ಶಾಶ್ವತ ಅಂಶಗಳು. ಅರ್ಥ್ ಶಾಸ್ತ್ರಜ್ಞ ಮಿಲ್ಟನ್ ಫ್ರೀಮನ್ ಅಂದನಂತೆ, ಸರಕಾರದ ತಾತ್ಕಾಲಿಕ ಪ್ರಾಜೆಕ್ಟ್ ನಷ್ಟು ಶಾಶ್ವತ ಯಾವುದೂ ಅಲ್ಲಾಂತ. ಬೆಂಜಮಿನ್ ಫ್ರಾಂಕ್ಲಿನ್ ಹೇಳಬೇಕಾಗಿತ್ತೇ, ನಮಗೆಲ್ಲ ಗೊತ್ತಿಲ್ಲವೇ ಸಾವು ಮತ್ತು ಕರ ಎರಡೇ ಜೀವನದಲ್ಲಿ ಶಾಶ್ವತ ಅಂತ? ಕರ ಮತ್ತು ವಿಷದಲ್ಲಿ ಎರಡೂ ಏರುತ್ತಲೇ ಇರುತ್ತವೆ, ಒಮ್ಮೊಮ್ಮೆ ವಿಷ ಮಾತ್ರ ಇಳಿದೀತು. ಸುಂಕನೂ ಒಂದು ರೀತಿಯ ಕರವೇ. ಆದರೆ ಎಲ್ಲ ಕರಗಳೂ ಸುಂಕವಲ್ಲ. ಇಷ್ಟೇ, ಸುಂಕ ಆಮದಿಗೆ ಕೊಡುತ್ತೇವೆ. ಇಲ್ಲಿಂದ ಎರಡನೆಯ ಕವನಕ್ಕೆ ತಳುಕು. ಪಾಪ ದುಡಿಯುವವನಿಗೆ ಕೈಲಾಗದವ ಅನ್ನುವ ಬಿರುದು ಕೊಟ್ಟು ಶೋಷಣೆ ನಡೆದಿದೆ.ಆತ ಪ್ರಾಮಾಣಿಕ ನೇರ ಮಾರ್ಗದಿ ದುಡಿದು ಹೊಟ್ಟೆಹೊರೆಯಲು ಆಳುವ ಸರಕಾರ- ದೇಶಗಳು ಬಡಿದಾಡುತ್ತಿವೆ? ಅವನು ಕೈಲಾಗದವನಲ್ಲ ‘ಸಾಲದವ’ ಅಂದರೆ ಸಾಲಮಾಡದೆ ಹೊಟ್ಟೆ ತುಂಬಿಸಲು ಮತ್ತು ಕರಕೊಡಲು ಸಾಲುವದಿಲ್ಲ. ಆತನ ಆರ್ತನಾದವನ್ನು ಕೇಳುವವರಾರು?
ವಿಪರ್ಯಾಸವೆಂದರೆ ಮೂರೂ ಕವನಗಳನ್ನು ಹೆಣೆಯುವದು ಇಂದಿನ ಜಾಗತಿಕ, ರಾಜಕೀಯ, ಪರಿಸ್ಥಿತಿ, ಮತ್ತು ಸುಂಕ ಹೇರಿ ಪರೋಕ್ಷವಾಗಿ ಕರಕ್ಕೆ ಕಾರಣನಾದ ಟ್ರಂಪ್ ಮಹಾಶಯ. ಒಂದು ರೀತಿಯಿಂದ ವಿಜಯ್ ಅವರ ಈ ಎಲ್ಲ ಕವನಗಳು ಸಾರ್ವತ್ರಿಕ ಕಾಲದವು. ಹತಾಶೆಯ ಛಾಯೆ ಇರುವದು ಸಹಜವೇ. ಒಬ್ಬನಲ್ಲ ಇಬ್ಬರು ನಾಯಕರ whim ನಿಂದ ಬಿಲಿಯ ಜನಗಳ ಜೀವನ ಅಲ್ಲೋಲ ಕಲ್ಲೋಲ! ಅತಿಯಾದ ಅಧಿಕಾರವನ್ನು ಯಾರಿಗೂ ಎಂದಿಗೂ ಕೊಡಬಾರದು ಎಂದೆರಡೆರಡು ಸಲ ಎನ್ನುವ ಕವಿಗೆ ವಾಸ್ತವಿಕತೆ ಗೊತ್ತಿಲ್ಲವೆಂದಲ್ಲ, ಪ್ರಜಾಪ್ರಭುತ್ವದ ಅಸಹಾಯಕತೆಯೇ, ಇನ್ನೊಂದೆಡೆ ಮಾನವನ ಮಹತ್ವಾಕಾಂಕ್ಷೆ. ಮೂೂರೂ ಕವನಗಳನ್ನು ಇನ್ನೊಂದು ಸೂತ್ರ ಜೋಡ್ಸಿದೆ- AI pencil sketch ಚಿತ್ರಗಳು. ಒಳಗೊಳಗೆ ಎಷ್ಟೊಂದು ಅರ್ಥಪೂರ್ಣ ಆಕೃತಿಗಳು, ಅದಕ್ಕೆ ಕೇಶವ ಅವರಿಗೂ ಅಭಿನಂದನ್ನೆಗಳು, ಕೊನೆಯ ಚ್ತ್ರಡ್ಸ್ ತುದಿಯಲ್ಲಿಯ ಬಾಲಕನಂತೆ ಕವಿಗೂ ಸೆಲ್ಯೂಟ್ ಮಾಡುವೆ! ಶ್ರೀವತ್ಸ ದೇಸಾಯಿ
LikeLike