ನಾವು ಹೊಂಟೇವ, ನಾವು ಹೊಂಟೇವ, ನಾವ್ ಹೊಂಟೇವ ಚಂದಪ್ಪನ್ ನೋಡಲಿಕ್ಕೆ .. ನೋಡಿ ಬೆನ್ನ ಹಿಂದ ಸುತ್ತಿ ಬರಲಿಕ್ಕೆ ..

ಇತ್ತೀಚಿನ ಆರ್ಟೆಮಿಸ್ ಚಂದ್ರಯಾನದ ಬಗ್ಗೆ ಹಲವು ಕವನಗಳು - ಚುಟುಕ, ಕವನ, ಜನಪದ ಶೈಲಿಯ ಪ್ರಯತ್ನಗಳ ಸಂಕಲನ ಇಂದಿನ ಪ್ರಸ್ತುತಿ.  ಮೆಚ್ಚಿಗೆಯಾದರೆ ಒಂದು ಲೈಕನ್ನೊತ್ತಿ, ಕಾಮೆಂಟ್ ಹಾಕಿದರೆ ಇನ್ನೂ ಚೆನ್ನ.
ಕೇಳಿದೊಡನೆ ಬರೆದು ಕಳಿಸಿದ ಮುರಳಿ ಹತ್ವಾರ್, ವೆಂಕಟೇಶ್ವರ ರೆಡ್ಡಿ, ರವಿರಾಜ್ ಉಪ್ಪೂರ್ ಭಟ್ ಅವರಿಗೆ ನಾನು ಆಭಾರಿ.
ಮುರಳಿ ಹತ್ವಾರರ ಪರಿಚಯ ಎಲ್ಲರಿಗೂ ಇದ್ದೇ ಇದೆ, ರವಿರಾಜ್ ಅವರೂ ಮುಂಚೆ ಅನಿವಾಸಿಗೆ ಬರೆದವರೇ. ವೆಂಕಟೇಶ್ವರ ರೆಡ್ಡಿಯವರ ಕವನ ಅನಿವಾಸಿಗೆ ಮೊದಲನೆಯ ಕವನ. ಪ್ರೆಸ್ಟನ್ನಿನಲ್ಲಿ ವಾಸವಾಗಿರುವ ವೆಂಕಿ, ಉದ್ಯೋಗದಿಂದ ಕಂಪ್ಯೂಟರ್ ಅಡ್ಮಿನ್ ಆಗಿದ್ದಾರೆ. ಕೊನೆಯಲ್ಲಿ, ಜಾನಪದ ಶೈಲಿಯಲ್ಲಿ ಬರೆಯುವ ಒಂದು ಬಾಲಿಶ ಪ್ರಯತ್ನ ನಾನೂ ಮಾಡಿದ್ದೇನೆ (ಕ್ಷಮೆಯಿಟ್ಟು ಓದಿರಿ!).
- ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ)
******************************************
ಮುರಳಿ ಹತ್ವಾರ್:

ಸುತ್ತು ಸುತ್ತುವ
ನೌಕೆಯ ನೋಡಿ
‘ಇದೆಲ್ಲಿ ಉಪದ್ರ’
ಎಂದು ಬಿಳಿಚಿಕೊಂಡನಂತೆ
ಚಂದಿರ ನಂದಿ
ಆಹಾ! ಎಂಥ ಚೆಂದದ
ಬೆಳದಿಂಗಳೆಂದು
ಕುಪ್ಪಳಿಸಿದರಂತೆ
ಆರ್ಟೆಮಿಸ್ಸಿನ ಮನೆಯ ಮಂದಿ.
******************************************
ವೆಂಕಟೇಶ್ವರ ರೆಡ್ಡಿ:

ನೀರಲ್ಲಿ ತೇಲೋ ಆಸೆ ನಂದು
ಗಗನದಲಿ ಚಂದ್ರನೆಡೆಗೆ ಹಾರೋ ಕನಸು ನಂದು
ಮುನುಗುವ ಜೀವನ ಎದ್ದೇಳುವುದೆಂದಿಗೋ
ನಕ್ಷತ್ರಗಳ ನಡುವೆ ಕರಗುವ ನನ್ನ ಆಸೆ
ಚಂದ್ರನ ತಲುಪುವ ಕನಸಿನ ಹೆಜ್ಜೆ ನನ್ನದು…

******************************************

ರವಿರಾಜ್ ಉಪ್ಪೂರ್ ಭಟ್:

ಶಶಿಯ ಶಿಖೆಗೆ ಆರ್ಟಿಮಿಸ್ ಪಯಣ


ಚಂದಿರನ ಸಂಗವ ಮಾಡಿ ಅರ್ಧ ಶತಕದ ಮೇಲಾಯ್ತು …
ವಿರಹ ವೇದನೆ ಹೆಚ್ಚಾಯ್ತು
ನಾಸಾದ ವಿಜ್ಞಾನಿಗಳೆಲ್ಲರೂ
ಮಾಡೇ ಬಿಟ್ಟರು ಧೃಡ ನಿರ್ಧಾರವ ..
ಚಿಮ್ಮಿಸುವೆವು ನಾಲ್ಕು ಯಾತ್ರಿಗಳನು
ಕಂಡರಿಯಲು ಶಶಿಯ ಬೆನ್ನಹಿಂದಿನ ರಹಸ್ಯಗಳನು

ನಿಗದಿತವಾಯ್ತು ಏಪ್ರಿಲ್ ತಿಂಗಳೊಳ್ 'ತಿಂಗಳ' ಪಯಣದ ಮುಹೂರ್ತ.
ಹತ್ತು ದಿನದ ಈ 'ಪಿಕ್ನಿಕ್' ಪಯಣ
ಭೂಮಿ-ಚಂದಿರನ ಸುತ್ತ.

ಹೊಡೆದರು ಹಲವಾರು ರೌಂಡು
ಆರ್ಟೆಮಿಸ್ ಮಿಷನ್‌ನ ಶಶಿ ಶಿಕಾರಿಗಳ ದಂಡು.

ಸಾವಿರಾರು ಮೈಲಿಗಳ ಪಯಣದಿ ಕಂಡರು ನೀಲಿ ವರ್ಣದ ಹೊಳೆಯುವ ಪ್ಲಾನೆಟ್ ..
ಫ್ಲಶ್ ಆಗದ ಓರಿಯನ್ ಕ್ಯಾಪ್ಸುಲ್‌ನ ಟಾಯ್ಲೆಟ್..
ಹೆಪ್ಪುಗಟ್ಟಿದ ಮಂಜು ಕರಗಿಸಲು ಬಾಹ್ಯಾಕಾಶ ನೌಕೆಯನು ತಿರುಗಿಸಿದರು ಬೆನ್ನು ಮಾಡಿ ಸೂರ್ಯನೆಡೆಗೆ !
ಸುಗಮವಾಯಿತು ಮುಂದಿನ ಪಯಣವು ಚಂದಿರನ ಬೆನ್ನೆಡೆಗೆ.

ಹೆಜ್ಜೆ ಹಾಕದೆಯೂ ಕದ್ದರು
ಸುಧಾಕರನ 'ಕಪ್ಪು ಬಿಳುಪಿನ' ಚಿತ್ರವ
ಜಗತ್ತಿಗೇ ಕಾಣದ ಆ 'ಕಪ್ಪು ಮೊಗವ'
ಕಣ್ತುಂಬ ನೋಡಿ ಕುಣಿದಾಡಿತು ಮನುಕುಲವು
ಕೃತಕ ಗ್ರಹಣವ ಕಂಡೆಲ್ಲರೂ ದಿಗ್ಬ್ರಮೆಗೊಂಡೆವು

ಶೂನ್ಯದ ಮಧ್ಯೆ ಅದೆಷ್ಟು ಅಂದವಾಗಿ ಮಿಂಚುತ್ತಿತ್ತು,
ಯಾರೋ ಎಸೆದ ಹೊಳೆಯುವ ಗಾಜಿನ ಗೋಲಿಯಂತೆ!
ಹಸಿರು ನೀಲಿಯ ಧರೆ ಬಾನಂಗಳದ ಮುತ್ತು
ಜಗದ ಸಂಸಾರ, ಸಮರಗಳೆಲ್ಲಾ ಅಡಗಿದೆ ಅದರೊಳು ನಾಣ್ಗೆಟ್ಟು ..
ಚಂದ್ರನ ಬಂಜರು ನೆಲದಿಂದ ನೋಡಿದರೆ ಎಲ್ಲವೂ ಬಲು "ಸೈಲೆಂಟ್"
ವಿಶ್ವದ ಅಗಾಧತೆಗೆ ಹೋಲಿಸಿದರೆ ನಾವೆಲ್ಲರೂ ಲಿಲಿಪುಟ್
ಭೂಮಿಯೇ ನಮಗೆಲ್ಲರಿಗೂ ದಕ್ಕಿದ ಏಕೈಕ ಅಪಾರ್ಟ್‌ಮೆಂಟ್

ಚಂದಿರನ ಸ ಕ್ಕುಗಟ್ಟಿದ ಬೆನ್ನಹಿಂದಿನ ದುರ್ಬೀನು ನೋಟಕೆ
ಮನುಕುಲದ ತಾಣವಾಯ್ತು ಬರೀಯ ನೀಲಿ ಚುಕ್ಕೆ
ಅಗಾಧ ಶೂನ್ಯದಿ ಹುಡುಕಿದೆ ಮಚ್ಚೆ!

ಸದಾ ಒಂದೇ ಮೊಗವ ತೋರಿಸಿ ಮುಗುಳು ನಗುತಿಹನು ಶಶಿಯು
ಇಳೆಯೊಡನೆ ಅತೀತ ಪ್ರೀತಿಯ ನಾಟ್ಯಾಭಿನಯವು
ಎಂದೆಂದೂ ತೋರುವನು ತನ್ನ ನಗು ಮುಖವ ಅನವರತ

ಹದಿನಾಲ್ಕು ದಿನದ ಸುಡುಬಿಸಿಲು ಈ ‘ಮೂನಿಗೆ'
ಮತ್ತೆ ಹದಿನಾಲ್ಕು ದಿನದ ಮೈ ನಡುಗುವ ಕಗ್ಗತ್ತಲೆ
ಸೂರ್ಯನ ಶಾಖಕೆ ಹಿಮವಾಗಿ ಸುಟ್ಟು ಕರಗುವ ಹಣೆಬರಹ!

ಆಕಾಶದಂಗಳದಿ ನಾಗಾಲೋಟವ ಮುಗಿಸಿ
ಭೂಮಿಯ ಮಡಿಲಿಗೆ ಮರಳಿತು ಒರಿಯನ್ ಕವಚ
ಬೆಂಕಿಯ ಉಂಡೆಯಂತೆ ನುಗ್ಗಿತು ಭೂ ಮಂಡಲದೊಳಗೆ
ನೀಲಿ ಕಡಲ ಮೇಲೆ ಮೆಲ್ಲನೆ ತೇಲಿತು ಆ ಕವಚ
"ಸ್ಪ್ಲ್ಯಾಶ್ ಡೌನ್" ಅಂತು ಪೆಸಿಫಿಕ್ ಸಮುದ್ರ

ಪುಳಕಿತ ವಾಯ್ತು ಈ ಮನುಕುಲವು
ಎಲ್ಲವೂ ಮಂಗಳವಾಯ್ತು
'ತಿಂಗಳಿನ' ಪಯಣ

ಮುಂದಿನ ಗುರಿಯು 'ಮಂಗಳನ' ಅಂಗಳಕೆ!
******************************************
ಲಕ್ಷ್ಮೀನಾರಾಯಣ ಗುಡೂರ್: 

ಸುತ್ತಿ ಬರೋಣು ನಮ್ ಚಂದಪ್ಪನ್ನ ..


ಬರ್ರೇ ಅಕ್ಕಂದ್ರ, ಬರ್ರೋ ಅಣ್ಣಂದ್ರ
ಜಲ್ದಿ ಜಲ್ದಿ ಬರ್ರಿ ಎಲ್ಲ ಕೂಡ್ರಿ ಬಂದ
ಚಂದ್ರನ ಸುತ್ತ ಹೋಗಿ ಬಂದಂಥ
ಸುದ್ದಿ ಹೇಳತೀನಿ ನಿಮ್ಮ ಮುಂದ...
ಹೊಸ ಸುದ್ದಿ ಹೇಳತೀನಿ ಕೇಳ ಮುಂದ ||

ಅರವತ್ತರಿಂದನ ದೊಡ್ಡ ದೇಶಗಳು
ಮಾಡಿ ರಾಕೆಟು ಬಿಟ್ಟಾರಂತ
ಆಕಾಶದಾಗ ಹಾರಿ ಚಂದ್ರನ ಹಿಡಿಲಿಕ್ಕೆ
ನಾನಾ ನೀನಾ ಅನ್ನ ಹಠ ತೊಟ್ಟಾರಂತ ...
ದೊಡ್ಡ ಪಟಾಕಿಯಂಥವು ಮಾಡಿ ಸುಟ್ಟಾರಂತ ||

ನಮ್ ಟ್ರಂಪಣ್ಣನ ಅಮೆರಿಕಾದಾಗ
ಸಂಸ್ಥಿ ಒಂದೈತಿ ನಾಸಾಂತ
ಚಂದ್ರನ ಮ್ಯಾಲ ಮನಿ ಮಾಡಲಿಕ್ಕೆ
ಪ್ಲಾನೊಂದ ಮಾಡ್ಯಾರ ಪಾಸಂತ ...
ಕೋಟಿ ಇಟ್ಟಾರ ಅದಕ್ಕ ಕಾಸಂತ ||

ಸುಮ್ಮನ ಹೋಗಿ ನೋಡಿ ಬರೋದಕ್ಕ
ಕಳಿಸ್ಯಾರ ಹಾರೋದೊಂದು ಬಸ್ಸಂತ
ನಾಕ ಮಂದಿ ಇರೋ ವಾಹನಕಿಟ್ಟಾರ
ಹೆಸರು ಕೇಳ್ರಿ ಆರ್ಟಿಮಿಸ್ಸಂತ ....
ನೆನಪಿರಲಿ .... ಆರ್ಟಿಮಿಸ್ ಅಂತ ||

ಹತ್ತು ದಿನ ರಾತ್ರಿ ಕಡುಗತ್ಲ ಹಾದ್ಯಾಗ
ಹಾರಿಕೋತ ಹೋಗ್ಯಾರ ಜುಂಯಂತ
ಹುರುಪಿನ ಹೊಸ ಹೊಸ ಪ್ರಯೋಗ ಮಾಡಲಿಕ್ಕೆ
ಎರಡು ಲಕ್ಷ ಮೈಲು ಕುಣಕೊಂತಾ ...
ಕಟ್ಟಿಕೊಂಡ ಬುತ್ತಿ ಉಣಕೊಂತ ||

ಚಂದಪ್ನ ಸುತ್ತೊಮ್ಮೆ ಸುತ್ತಿ ಬರುವಾಗ
ತೆಗದ ಕ್ಯಾಮರಾ ನೋಡ್ಯಾರಂತ
ಕತ್ತಲ ಮುಗದ ಮ್ಯಾಲ ಏನ ಕಾಣತದ
ಫೋಟುತೆಗಿಯೋ ತಯಾರಿ ಮಾಡ್ಯಾರಂತ ...
ಕಿಡಿಕಿಗೆ ತೇಲಿಕೊಂಡು ಓಡ್ಯಾರಂತ ||

ಕಗ್ಗ ಕತ್ತಲಾಗ ನೀಲಿ ವಜ್ರಧಂಗ
ಹೊಳೆಹೊಳೆ ಭೂಮಿನ್ನ ಕಂಡಾರಂತ
ಹೊನ್ನ ಸ್ವರ್ಗಕಿಂತ ನನ್ನ ಊರೇ ಚಂದ
ಚನ್ನಚಂದ್ರಂಗಿಂತ ನನ್ನ ಭೂಮಿ ಅಂದ ಅಂದಾರಂತ
ಹವಣಿಲೆ ಬಂದು ಇಳದಾರಂತ ...
ಭೂಮಿಗ್ ನಕ್ಕೋತ ಬಂದು ಕುಣದಾರಂತ ||
******************************************

2 thoughts on “ನಾವು ಹೊಂಟೇವ, ನಾವು ಹೊಂಟೇವ, ನಾವ್ ಹೊಂಟೇವ ಚಂದಪ್ಪನ್ ನೋಡಲಿಕ್ಕೆ .. ನೋಡಿ ಬೆನ್ನ ಹಿಂದ ಸುತ್ತಿ ಬರಲಿಕ್ಕೆ ..

  1. Excellent collection of poems on such an unusual bur current event topic. Gudur’s poem is the highlight with Uttara Karnataka Kannada dialect and almost made me sing a song. We can ask Amita to tune and sing it in folk style! – Keshav

    Like

  2. ಎಲ್ರೂ ಜಲ್ದಿ ಬಂದ ಕ್ಯಾಸ ಸುತ್ತ ಅರ್ಧವೃತ್ತದಾಗ ಕುಂತು ಕೇಳ್ರಿ ,
    ಆಗಸದಲ್ಲಿ, (ಅಲ್ಲ ವ್ಯೋಮದಲ್ಲನಬೇಕೆ?) ನಾಲ್ಕು ಚಂದ್ರಭಮಣರು; ಇಲ್ಲಿ ನಾಲ್ಕು ಕವನಗಳು. Equation ಸರಿಯಾಗಿದೆ. ಅವುಗಳೊಳಗಿನ ವಸ್ತು, ಸಾಲುಗಳ ಸಂಖ್ಯೆ, ಶೈಲಿ ಸಹ! ಆರ್ಟೆಮಿಸ್ಸಿನಂತೆ ತಪ್ಪದೆ ಸಮಯಕ್ಕೆ ಸರಿಯಾಗಿ ಸಿದ್ಧತೆಯೊಂದಿಗೆ ಕ್ಷಿಪಣಿ ಹತ್ತಿ ಹಾರಿ ಇಳಿದು ಪ್ರಕಟವಾದದ್ದಕ್ಕೆ ಸಹ ಫುಲ್ ಮಾರ್ಕ್ಸ್! ಎಂದಿನಂತೆ ವಾರದ ಕಮೆಂಟಿನಂತೆ ಮುರಳಿಯವರ ಕವಿತೆ, ಕ್ಷಿಪಣಿಯ ಮೂಗಿನಂತೆ ಮೊನಚಾದ ‘ವೆಂಕಿಯವರ’ ಕೊಂಕಿಲ್ಲದ ಪ್ರಸ್ತುತಿ, ರವಿರಾಜರ ರೈಟ್ ರಾಯಲ್ ಲಾಂಚ್, ಕೊನೆಗೆ ನನಗಂತೂ ಬೇಂದ್ರೆಯವರ ಶೈಲಿಯನ್ನು ನೆನಪಿಸುವ ಗುಡೂರವರ ನೀಳ್ಗವನ- ಜಾನಪದ, ಶಿಶುಗೀತಗಳ ಘಮಲು ಕೂಡಿದೆ.ಆರ್ಟೆಮಿಸ್ಸಿಗೆ ಬಸ್ಸಿನ ಪ್ರಾಸ ಹೊತ್ತು, ‘ವಜ್ರದಂಥ ಹೊಳೆ ಹೊಳೆ ಭೂಮಿ ಗೆ ಹವಣಿಲೆ’ ಬಂದಿಳಿಸಿ ನಮ್ಮೂರ ಚಂದ ಅನ್ನೋಹಂಗ ಭೂಮಿ ಪ್ರೀತಿ ತೋರಿಸಿದ್ದು ಹಿಡಿಸಿತು. ಈ ಶೈಲಿ ನಿಮಗ ಒಪ್ಪತದ ಎಲ್ಲೆನ್ನರೇ! ಇನ್ನಷಿಟು ಬರೀರಿ, ನಾವು ತಮಟೆ ಬಾರಿಸತೀವಿ!

    Like

Leave a comment