ಪ್ರಿಯ ಓದುಗರಿಗೆ,
ಈ ವಾರದ ಸಂಚಿಕೆಯಲ್ಲಿ ದೀಪಾ ಸಣ್ಣಕ್ಕಿಯವರ ಮತ್ತೊಂದು ಭಾವಭರಿತ ಬರಹವಿದೆ. ಅವರ ಬರಹದ ಒಂದೊಂದು
ವಾಕ್ಯದಲ್ಲಿಯೂ ಕವಿತೆಯ ಕಲ್ಪನೆಯಿದೆ, ಭಾವಗಳ ಮಹಾಪೂರವಿದೆ ಮತ್ತು ಹೃದಯದ ಮಿಡಿತವಿದೆ. ಈ ವಾರದ ಬರಹವು,
ಹಿಂದಿನ ಸಂಚಿಕೆಗಳಲ್ಲಿ ಅವರ ಲೇಖನಿಯಿಂದ ಮೂಡಿಬಂದ “ಭಾವನಾ ಗಂಗೋತ್ರಿ” ಮತ್ತು “ಒಲುಮೆಯಿಂದ
ಆತ್ಮಸಾಂಗತ್ಯದತ್ತ”ಗಳ ಅಂತಿಮ ನಿರ್ಣಾಯಕ ಬರಹವಾಗಿದೆ. ಅವರ ಬರಹಗಳು ಓದುವವರ ಮನಸಿಗೆ ಮಧುರವಾದ
ಮುದವನ್ನು ಕೊಡುತ್ತವೆ ಎಂಬುವುದು ನನ್ನ ಅನಿಸಿಕೆ. ನಿಮ್ಮೆಲ್ಲರದೂ ಇದೇ ಅಭಿಪ್ರಾಯವೆಂದು ನಂಬಿರುವೆ. ದಯವಿಟ್ಟು ಓದಿ
ತಮ್ಮ ಅಭಿಪ್ರಾಯವನ್ನು ತಿಳಿಸಿ.
—— ಇಂತಿ ಸಂಪಾದಕ
ಅದೊಂದು ದಿನ ನಿನ್ನ ಪ್ರಭಾವದಿಂದ ಹೊರಬಂದು ನನ್ನ ನೆಲೆಯನ್ನು ಮತ್ತೆ ನಾ ಕಂಡುಕೊಂಡೇನು ಎಂಬ ಆಶಂಕೆಯಿಂದಲೇ
ಇಷ್ಟು ತಿಂಗಳುಗಳನ್ನು ತಳ್ಳಿಹೆನು. ನಿನ್ನ ಜೀವನದ ವಿಸ್ತಾರದಲ್ಲಿ ನನಗೆ ಸ್ಥಾನವಿಲ್ಲವೆಂದರಿತ ಮೇಲೂ ಮನಸು ನಿನ್ನ ಕುರಿತ
ಆಲೋಚನೆಯನ್ನು ಬಿಡಲೊಲ್ಲದು. ಅದೊಂದು ಸಮ್ಮಿಶ್ರ ಭಾವ… ಬಿಟ್ಟುಕೊಡಲು ಬಯಸದಂಥ ಸುಖದಾಯಕ ನೋವು. ಆ
ಭಾವವನ್ನು ನಾನೂ ಕೂಡ ವ್ಯತ್ಯಯಗೊಳಿಸಿದರೆ ನಮ್ಮಿಬ್ಬರ ನಡುವೆ ಮಿಡಿದ ತಂತಿ ಮೌನಸಿದ್ಧವಾಗುವುದಂತೂ ಸತ್ಯ. ಪದೇ
ಪದೇ ಮರುಕಳಿಸಿ ಆ ಕ್ಷಣಗಳನ್ನು ಮತ್ತೇ ಜೀವಿಸದಿದ್ದರೆ ಆ ಭಾವ ಶಾಶ್ವತವಾಗಿಯೇ ನಿಶ್ಚಲವಾಗಿ ಬಿಡುವುದು. ಸದ್ಯಕ್ಕೆ ಆ
ಭಾವದೀಪಕ್ಕೆ ನೆನಪುಗಳ ತೈಲವನೆರೆದು ಸಮಯದ ಬತ್ತಿಯನ್ನು ಸೂಡಿ ಬೆಳಗುತ್ತಿರುವೆನು. ನಿನ್ನಿಂದ ಏನೊಂದನ್ನುಅಪೇಕ್ಷಿಸಿಹೆನು. ಮೊದಮೊದಲು ನೀನು ನನ್ನ ಭಾವನೆಗಳಿಗೆ ತಿಳಿನೀರಿನ ಪ್ರತಿಬಿಂಬವಾಗಿ ತೋರಿದೆ. ನನ್ನ ಧ್ವನಿಗೆ ಪ್ರತಿಧ್ವನಿಯಾಗಿ ನುಡಿದೆ. ಒಲವಿನ ಹೊನ್ನೊಳೆ ನಮ್ಮಿಬ್ಬರ ಮನದಲ್ಲಿ ನಿರಂತರವಾಗಿ ಪ್ರವಹಿಸಿತ್ತು. ನಿನ್ನೊಡನೆಯ ಮಾತುಗಳು ಯಾರೊಂದಿಗೂ ಸಂಭಾಷಿಸಲಾಗದ, ನನ್ನನ್ನು ನಾನೇ ಅರಿಯದ ಯಾವುದೋ ಪ್ರಬುದ್ಧಲೋಕಕ್ಕೆ ಕರೆದೊಯ್ಯುತ್ತಿದ್ದವು. ಸ್ವಯಂಯೋಚನೆಯಿಂದ ಬಗೆಹರಿಯದ ಪ್ರಶ್ನೆಗಳು ನಿನ್ನೊಂದಿಗೆ ವಿವೇಚಿಸುತ್ತಲೇ ತಿಳಿಗೊಳ್ಳುತ್ತಿದ್ದವು. ಜೀವನದ ಎಂದೂ ಕಾಣದೇ ಇದ್ದ ಆಯಾಮಗಳು ನಿನ್ನ ಸನ್ನಿಧಿಯಲ್ಲಿ ಗೋಚರಿಸಿ ಮುಗುಳ್ನಗುತ್ತಿದ್ದವು. ಯಾರಿಗೂ ಅರ್ಥವಾಗದ ನನ್ನ ಕನಸುಗಳು ನಿನಗೆ ಅದ್ಭುತವೆಂದೆನಿಸುತ್ತಿದ್ದವು.ಲೌಕಿಕ ಲೋಕದ ಲಘುತನದಿಂದ ಮೇಲೆಮೇಲೇರಿ ಯಾರೊಂದಿಗೂ ಮೇಳೈಸದ ಆಪ್ತತೆಯನ್ನು ನಿನ್ನಲ್ಲಿ ಕಂಡುಕೊಂಡೆನು. ಜನ್ಮಜನ್ಮಾಂತರದಲ್ಲಿ ಎಲ್ಲೋ ಕಳೆದು ಹೋದ ನನ್ನ ಆತ್ಮದ ಚೂರೊಂದನ್ನು ನಿನ್ನಲ್ಲಿ ಗುರುತಿಸಿದೆನು.
ನಿನ್ನೊಂದಿಗೆ ನಾನು ಭಾವನಾತ್ಮಕ ಲೋಕದಲ್ಲಿ ಬೆರೆತು ಪರಿಪೂರ್ಣಳಾದೆನು, ಸಂಪೂರ್ಣಳಾದೆನು. ನಿನ್ನ ಜೀವನದೆಡೆಗಿನ
ಅಪಾರ ಪ್ರೀತಿ, ನನ್ನ ಸುಪ್ತವ್ಯಕ್ತಿತ್ವವನ್ನೇ ಕೆಣಕಿ ಹೊಡೆದೆಬ್ಬಿಸಿತು. ನಿನ್ನ ಲವಲವಿಕೆ ನನ್ನ ಅಂತರಾಳದ ಕೋಣೆ ಕೋಣೆಗಳನ್ನು
ಶೋಧಿಸುವಂತೆ ಮಾಡಿತು. ನಿನ್ನ ಬ್ರಹ್ಮಾಂಡಸದೃಶವಾದ ವ್ಯಕ್ತಿತ್ವ, ನಾನು ನನ್ನ ಪರಿಧಿಗಳನ್ನು ಉಲ್ಲಂಘಿಸಿ ವಿಶ್ವವಿಸ್ತಾರಗೊಳ್ಳಲು
ಪ್ರೇರೇಪಿಸಿತು. ಪ್ರೀತಿಪ್ರೇಮಪ್ರಣಯಗಳ ಕ್ಷಣಿಕ ಭಾವಗಳಲ್ಲಿ ಎಂದೂ ನಿನ್ನನ್ನು ತುಲನೆ ಮಾಡದೆಯೇ ನನ್ನೊಳಗಿನ
ಸತ್ಯಾನ್ವೇಷಣೆಗೆ ಜೊತೆಗೂಡಾದ ಆತ್ಮಸಂಗಾತಿಯೆಂದೇ ನಿನ್ನನ್ನು ಸಂಕೇತಿಸಿದ್ದೇನೆ. ಅದರ ಸುಳಿವು ಮತ್ತು ಅರಿವು ನಿನಗೆ
ಚೆನ್ನಾಗಿಯೇ ಇರುವುದೆಂದು ನಾನು ಬಲ್ಲೆನು. ಬರೀ ಮಾಂಸಖಂಡಗಳ ಜಡತ್ವದಿಂದ ಸುಚೇತನೆಯಾಗಿ ನಾನು ಮಾರ್ಪಾಡುಗೊಳ್ಳುತ್ತಿರುವ ಭರದಲ್ಲಿ ನೀನಿಟ್ಟ ಹಿನ್ನಡೆಯ ಹೆಜ್ಜೆಯನ್ನು ನಾನು ಗುರುತಿಸದೆಯೇ ಮುಂದುವರೆದ್ದದ್ದೇ ಈ ಪ್ರಸಂಗದ ಅತಿ ದೊಡ್ಡ ಅವಿವೇಕದ ಮತ್ತು ವಿಪರ್ಯಾಸದ ಸಂಗತಿ! ನಿನ್ನ ಪರೋಕ್ಷವಾದ ಇರುವನ್ನು ನನ್ನ ಜೀವನದ ಪ್ರತಿ ನೂಲಿನೊಂದಿಗೆ ನೇಯುತ್ತಲೇ ಹೋದೆ, ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಯಲ್ಲೂ ನಿನ್ನಯ ಕಂಪನವನ್ನು ಗುರುತಿಸಿದೆ. ನಿನಗೆ ಪ್ರಾಣಪ್ರಿಯವಾದ ಪ್ರಕೃತಿಯ ಪ್ರತಿ ಸೋಜಿಗದಲ್ಲೂ ನಿನ್ನ ಉಸಿರನ್ನು ಗ್ರಹಿಸಿದೆ. ದಿನನಿತ್ಯದ ಗೋಜಲಿನ ವ್ಯಾಪಾರದಲ್ಲಿ ನಿನಗೆ ಸಹಜವಾದ ಸಕಾರಾತ್ಮಕವನ್ನೇ ಪ್ರಯೋಗಿಸಿ ಸಫಲಳಾದೆ. ನಿನ್ನ ಸಾಂಗತ್ಯದಿಂದ ಒಸರಿದ ಭಾವೋನ್ಮಾದಕ್ಕೆ ಸೃಜನಶೀಲತೆಗೆ ಪದಗುಚ್ಚ್ಛಗಳ ಆಕಾರ ನೀಡಿದೆ.
ನನ್ನ ಜೀವನದ ಸೆಲೆ ಭೋರ್ಗರೆದು ನಾನು ಉತ್ತುಂಗಕ್ಕೆ ಏರುತ್ತಿದ್ದ ಸರಿಸಮಯದಲ್ಲಿಯೇ ನೀನು ತಣ್ಣಗೆ ನಿರ್ಲಿಪ್ತನಾಗಿದ್ದು ಯಾಕೆ
ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದ ಪ್ರಶ್ನೆಯಾಗಿದೆ. ಈ ಪ್ರಶ್ನೆ ಸಾವಿರ ಕಾಳಿಂಗಸರ್ಪದ ರೂಪದಾಳಿ ತಲೆಯೊಳು
ಹೆಡೆಯೆತ್ತಿ ಉತ್ತರ ದೊರಕದೇ ಸೋತು ನಿಸ್ತೇಜವಾಗುತ್ತದೆ. ವಸಂತದ ಸಂಭ್ರಮದಲ್ಲಿದ್ದ ಜಗತ್ತು ತಕ್ಷಣವೇ ನಿಃವರ್ಣವಾಗಿ
ತೋರಲಾರಂಭಿಸುತ್ತದೆ. ಒಡನಾಡಿದ ಮಾತುಗಳು ಮತ್ತೇ ಮತ್ತೇ ಮನಸಿನಲ್ಲಿ ಅನುರಣಿಸುತ್ತವೆ. ನಮ್ಮಿಬ್ಬರ ಸಮೀಕರಣವು
ಎಲ್ಲಿ ಮುಗ್ಗರಿಸಿತು ಎಂದು ಪದೇಪದೇ ಮನವು ಶೋಧಿಸುತ್ತದೆ. ಆದರೆ ಇದೆಲ್ಲ ಪರಿತಾಪಕ್ಕೆ ನಿರುತ್ತರವೇ ನಿನ್ನ ಮಾರುತ್ತರ. ಪ್ರತಿ
ಸನ್ನಿವೇಶದಲ್ಲಿ ರಂಗವೈಭವವನ್ನು ಮೆರೆಯುತ್ತಿದ್ದ ನಿನ್ನ ಮನಸಿನ ಪರದೆ ಈಗ ಬರೀ ಶ್ವೇತಪತ್ರವಾಗಿ “ಏನು ಬೇಕಾದರೂ
ಉತ್ತರ ಬರೆದುಕೋ” ಎಂದು ಅಣಕಿಸುತ್ತದೆ. ಕಳೆದ ಹಲವಾರು ತಿಂಗಳುಗಳಿಂದ ಈ ದಿನಚರಿಯೂ ಒಗ್ಗಿಹೋಗಿದೆ. ಹಿನ್ನೋಟ ಹರಿಸಿ ನೋಡಿದಾಗ ಈ ಅಸಂಬದ್ಧತೆಯಲ್ಲೂ, ಅನಿಶ್ಚಿತತೆಯಲ್ಲೂ ಅಸ್ಪಷ್ಟ ಸಂಕಲ್ಪವೊಂದು ಮಸುಕು ಮಸುಕಾಗಿ ಗೋಚರಿಸುವುದು. ಸುಲಭಕ್ಕೆ ಅರ್ಥವಾಗದೇ ನನ್ನನ್ನು ಹಣ್ಣುಹಣ್ಣಾಗಿಸಿಹುದು.
ಪರುಷಮಣಿಯ ಸ್ಪರ್ಷಮಹಿಮೆದಂತೆ ನಿನ್ನ ಸಾಂಗತ್ಯ, ನನ್ನಯ ಅತ್ಯುತ್ತಮ ಆವೃತ್ತಿಯನ್ನು ಹೊರಡಿಸಲೋಸುಗ ನನ್ನ ನೆಲೆಯಲ್ಲಿ ತತ್ಕಾಲಕ್ಕೆ ನೀನು ಬಂದು ಅಂಕುರಿಸರಬೇಕು. ಇಲ್ಲವೇ, ಇದೆಲ್ಲ ನಾನಾಗಿಯೇ ಕಟ್ಟಿಕೊಂಡ ಭ್ರಮಾಲೋಕದಲ್ಲಿ ನೀನೊಬ್ಬ ಪಾತ್ರಧಾರಿಯಷ್ಟೇ, ಇವನಿಗೂ ನಿಜ ಜೀವನದ ನಿನಗೂ ಎಳ್ಳು ಮಾತ್ರದಷ್ಟೂ ಸಂಬಂಧವಿರಲಿಕ್ಕಿಲ್ಲ. ನನ್ನ ಭಾವಭರಿತ ಒಳದೃಷ್ಟಿಗೆ ಮಹನೀಯನಂತೆ ತೋರುವ ನೀನು, ಅಸಲಿನಲ್ಲಿ ನನ್ನ ಹಾಗೆ ಯಕಶ್ಚಿತ್ ಒಬ್ಬ ಸಾಧುಮನುಷ್ಯನೇ ಆಗಿರಬಹುದು. ಹಾಗೆ ಸುಮ್ಮನೆ ತನ್ನ ಪಾಡಿಗೆ ಹರಿದು ಹೋಗೊ ನೀರಿಗೆ, ಗಾಳಿಗೆ, ಮೋಡಕ್ಕೆ ಆಕಾರ ಮತ್ತೂಉದ್ದೇಶ ನೀಡಿ ಸಂಭ್ರಮಿಸುವ ನನ್ನ ಮುಗ್ಧಮನಸಿನ ಕವಿಯ ಹಂಬಲಿಕೆಯೇ ನೀನಾಗಿರಬಹುದು. ಅಥವಾ ಮುಂದೊಂದು ದಿನ ಸಂಭವಿಸಲಿರುವ ಮಹತ್ಕಾರ್ಯಕ್ಕೆ ನಮ್ಮಿಬ್ಬರ ತೀರದೇ ಉಳಿದ ಋಣಾನುಬಂಧವೇ ಮೊಟ್ಟ ಮೊದಲನೆಯ ಸೋಪಾನವಾಗಿರಬಹುದು, ಯಾರು ಬಲ್ಲರು? ಬಾಳಿನ ಪ್ರತಿ ಘಟಿತಗಳೆಲ್ಲವೂ ಸಂಕ್ಷಿಪ್ತ ವಿವರಣೆಯೊಂದಿಗೆ ಪ್ರಕಟಿತವಾಗುತ್ತಿದ್ದರೆ ಜೀವನ ಸುಲಭವಾದೀತೆ ಅಥವಾ ನೀರಸವೋದೀತೆ?
ಉತ್ತರ ಅವರವರು ಕಂಡಂತೆ!
———- ದೀವಿ (ದೀಪಾ ಸಣ್ಣಕ್ಕಿ)