ಗಮ್ಯ ತಲುಪದ ಕವಿತೆಗಳು!

ಅನಿವಾಸಿ ಓದುಗರಿಗೆಲ್ಲ ನಮಸ್ಕಾರ,
ನಾಳೆ ಪ್ರೇಮಿಗಳ ದಿನಾಚರಣೆ. ಹಳೆಯ ಡೈರಿಯಲ್ಲಿ ಎಂದೋ ಬರೆದಿಟ್ಟ, ಮತ್ತು ಅಲ್ಲೇ ಉಳಿದು ಹೋದ ಒಂದಷ್ಟು ಬಾಲಿಶ ಕವಿತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಬಿಡುವಾದಾಗ ಓದಿ, ಎಂದಿನಂತೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸುವುದ ಮರೆಯಬೇಡಿ
ವಂದನೆಗಳು
ಅಮಿತಾ ರವಿಕಿರಣ್


ವರವಾಗಿ ದಕ್ಕಿದ ಮನಸೇ

ಇದೀಗ ಮತ್ತೆ ನಿನ್ನ ಕನಸೊಂದು ಬಿತ್ತು
ಮಳೆ ಬಿದ್ದು ಮಿದುವಾದ ಕೆಮ್ಮಣ್ಣ
ನೆಲೆದಮೇಲೆ, ಪಾರಿಜಾತವೊಂದು ಬಿದ್ದು
ಮೈ ನೋಯಿಸಿಕೊಂಡಂತೆ

ನೀ ಕದ್ದು ಲೂಟಿ ಮಾಡಿ
ಕೂಡಿಟ್ಟ ನನ್ನ ನಿದ್ದೆಯ ರಾಶಿಯಲ್ಲಿ
ಒಮ್ಮೆಯಾದರೂ ಇಣುಕಿದ್ದೀಯ ?
ಎಂತೆಂಥ ಅದ್ಬುತ ಕನಸುಗಳಿವೆ ಗೊತ್ತೇ ಅಲ್ಲಿ?
ಎಲ್ಲವೂ ನಿನ್ನವೇ,
ಆದರೆ
ನನಗೆ ಲೆಕ್ಕ ಬರದು,
ನಿನಗೆ ಎಣಿಸಲು ಸಮಯವಿರದು

ನಿನ್ನ ನೋಡಬೇಕು ಎನಿಸುವುದೇ
ಈ ಹಾಳು ರಾತ್ರಿಗಳಲ್ಲಿ
ಆಗೆಲ್ಲ ಬಾನ ಸುತ್ತಗಲ ಅಳೆಯುತ್ತೇನೆ
ಕಣ್ಣಿನಳತೆಗೆ ಸಿಗುವ ಚಿಕ್ಕಿ ತಾರೆಗಳನ್ನೆಲ್ಲ
ನಿಟ್ಟಿಸುತ್ತೇನೆ
ನಿನ್ನ ಕೋಣೆಯ ಆ ಕೊನೆಯ
ಕಿಟಕಿಯಿಂದ ಇವೇ
ನಕ್ಷತ್ರ ಕಾಣುತ್ತವೆ, ನೀನೂ
ನೋಡುತ್ತಿರಬಹುದೇನೋ
ಅಂದುಕೊಂಡು
ನನ್ನ ಹುಚ್ಚಿಗೆ ನಾನೇ ನಗುತ್ತೇನೆ

ಒಮ್ಮುಖ ಪ್ರೀತಿಯ
ಚಲುವೆ ಇದು,
ಕಲ್ಪನೆಯ ಕಟ್ಟಡಕ್ಕೆ
ಪಾಯ ಗೋಡೆಯೂ
ಬೇಡ,

ಇಷ್ಟಕ್ಕೂ ನಾನು ಪ್ರೀತಿಸುತ್ತಿರುವುದು
ನಿನ್ನನ್ನೋ,
ನಿನ್ನ ಕುರಿತು
ನಾನೇ ರೂಪಿಸಿಕೊಂಡ
ನನ್ನ ಕಲ್ಪನೆಯನ್ನೋ
ಇನ್ನೂ ನಿಚ್ಚಳವಾಗಿಲ್ಲ!
ಈ ಸಲ ನಿದ್ದೆ ಮಾಡಲು ಬಿಟ್ಟರೆ
ಖಂಡಿತ ಉತ್ತರ ಹುಡುಕಿಕೊಂಡು
ಬರುವೆ
- ಸಖಿ
(picture; Nandini MB/ Amita Ravikirana

ರಂಗೋಲಿಯಂಥ ಹುಡುಗ...

ಇಂದು ನಿನ್ನ ಆ ಮಾತಿನ ಚುಕ್ಕಿಯಿಂದ
ಈ ಮಾತಿನ ಚುಕ್ಕಿಗೆ ಎಳೆಯುತ್ತಿದ್ದ
ಸರಳ ವಕ್ರ ರೇಖೆಗಳನ್ನು
ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ಯಾಕೆ ಹೀಗೆ?
ನಿನಗೀಗ ಬೆಳಗಿನ ಜಾವದ ಸಿಹಿ ನಿದ್ದೆ
ಕನಸಿನಲ್ಲಿ ನಗ್ತಿದ್ದೀಯಾ ?
ಏನೋ ಕನವರಿಸುತ್ತಾ ಇರಬಹುದು ನೀನೀಗ,
ನನಗೊಂದು ದಿವ್ಯಶಕ್ತಿ ಇದ್ದಿದ್ದರೆ
ನಾನೀಗ ಒಮ್ಮೆ ನಿನ್ನ ಕೋಣೆಯನೊಮ್ಮೆ ಹೊಕ್ಕು
ನಿನ್ನ ಹಣೆ ನೇವರಿಸಿ ಬರುತ್ತಿದ್ದೆ.
ಹ್ಮ್ ಅಷ್ಟೇ!ಅದಕ್ಕಿಂತ ಹೆಚ್ಚು ಕಡಿಮೆ
ಏನೂ ಇಲ್ಲ...

ನೀ ಕಾಡುವುದಿಲ್ಲ ಪ್ರೇಮಿಯಂತೆ,
ನೀ ಬೇಡುವುದಿಲ್ಲ ಯಾಚಕನಂತೆ
ನೀ ನಿರ್ಲಿಪ್ತ, ನಿತ್ಯತೃಪ್ತ
ಗದರಬೇಕು ಅನ್ನಿಸುತ್ತದೆ
ನೀ ಎಲ್ಲರಂತೆ ಯಾಕಿಲ್ಲ ಎಂದು,
ನೀ ನನ್ನ ಕಾಡಿದಷ್ಟು ನೆನಪಾದಷ್ಟು
ನಿನಗೆ ನನ್ನ ನೆನಪಾಗುವುದಿಲ್ಲ ಗೊತ್ತು
ಅದು ನಿನ್ನ ಸಮಸ್ಯೆ ಅಲ್ಲ ಬಿಡು!
ನೀನು ಇರುವುದಕ್ಕೇ ನಾನು ಮಾತ್ರ ಶ್ರಾವಣದ ನವಿಲು
ಚೈತ್ರದ ಚಿಗುರು, ಒಗರು ಒಗರು
ಈ ಪ್ರೀತಿಯಲ್ಲಿ ನನ್ನದೊಂದು ಅವಸ್ಥೆ
ಯಾಕೆಂದರೆ ನಾನು ಸದಾ ಕಾಲ ನಿನ್ನ ಧ್ಯಾನಸ್ಥೆ

- ಸಖಿ

ಹೇ ಕೇಳಿಲ್ಲಿ,

ಬಾನ ಮಲ್ಲಿಗೆಯ ಹೂಗಳನ್ನು ಹೆಕ್ಕಿ
ಒಂದು ಚಂದದ ದಂಡೆ ಕಟ್ಟಿ
ಮುಡಿಯಬೇಕು ಎನಿಸಿದೆ
ನೀನೂ ಬರ್ತೀಯ ಜೊತೆ?
ಹೂ ಹೆಕ್ಕೋಣ!

ಈ ಕಾಲದಲ್ಲೇ ನೋಡು
ಹಾಡಿಯ ಅಂಚಲ್ಲಿ
ಬೆಣಸು, ಚೂರಿ, ಮುಳ್ಳಣ್ಣು
ರಾಶಿ ರಾಶಿ ಸಿಗುತ್ತವೆ ,
ಆ ಹುಳಿ ಬೋರೆ ಹಣ್ಣುಕೂಡ ಹಳದಿಯಿಂದ
ಮೆತ್ತಗೆ ಕಂದು ಬಣ್ಣಕ್ಕೆ ತಿರುಗಿರುತ್ತದೆ
ಎಲ್ಲವನ್ನೂ ಆಯ್ದು ಆ ಪುಟ್ಟ ಕುಕ್ಕೆಯಲ್ಲಿ
ಹಾಕಿಕೊಂಡು, ಯಾರಿಗೂ ಕೊಡದೆ
ತಿನ್ನಬೇಕು ಅನ್ನಿಸಿದೆ, 
ಬರ್ತೀಯ ಜೊತೆಗೆ? 
ನೀ ಬಂದರೆ ಕವಳಿ ಹಣ್ಣೂ ಕೊಯ್ಯಬಹುದು
ಬುಟ್ಟಿ ಇನ್ನಷ್ಟು ತುಂಬುತ್ತದೆ!
ದಾರಿಯೂ ಬೇಗ ಸವೆಯುತ್ತದೆ.

ಬೇಳೆ ಹೂವಿನ ಸಾರುಮಾಡಿ
ಬಳ್ಳಿ ಸೊಪ್ಪಿನ ಪಲ್ಯಮಾಡಿ
ಕೆಂಪಕ್ಕಿಅನ್ನಕ್ಕೆ ಒಂದು ಚೂರೇ ಚೂರು
ತುಪ್ಪ ಹಾಕುವೆ, ಊಟ ಮುಗಿಸು
ಕಡೆದ ಮಜ್ಜಿಗೆ ಕುಡಿದು
ಕಣ್ಣು ಎಳೆದು ಬರುವಾಗ,
ಇನ್ನೇನು ನಿನ್ನ ಬಾಯಿಂದ ಅನ್ನದಾತೆ ಸುಖಿಯಾಗಿರು
ಎನ್ನುವ ಮಾತು ಬರುವ ಮೊದಲೇ,

ಮತ್ತೆ ಊರ ತಿರುಗಲು
ನನ್ನೂರ ಇಂಚಿಂಚು ಸುತ್ತಿಬರಲು
ನಿನ್ನ ಎಳೆದುಕೊಂಡು
ಹೋಗಬೇಕಿದೆ,
ಬರ್ತೀಯ?

ನಿನಗೆ ಪ್ರೀತಿ ಎಂದರೆ ಹೇಗೋ ಏನೋ
ನನಗೆ ಗೊತ್ತಿಲ್ಲ,
ನನಗೆ ಮಾತ್ರ
ನನ್ನಿಷ್ಟದ ಎಲ್ಲ ಗಳಿಗೆಗಳಿಗೂ
ನಿನ್ನನ್ನು ಪರಿಚಯಿಸುವುದು
ನನ್ನ ಬದುಕಿನ ಎಲ್ಲ
ಖುಷಿ, ಬೆರಗು, ನೆಮ್ಮದಿಯಲ್ಲಿ
ನನ್ನ ಜೊತೆ ನಿನ್ನ ಹೆಜ್ಜೆಯೂ
ಇರುವುದೇ
ಪ್ರೀತಿ

3 thoughts on “ಗಮ್ಯ ತಲುಪದ ಕವಿತೆಗಳು!

  1. ಅಮಿತಾ ಅವರ ಲೇಖನಗಳೇ ಕವಿತೆಯ ತರಹ ಇರುತ್ತವೆ. ಇನ್ನು ಕವಿತೆಗಳು ಹೇಗಿರಬೇಡ? ಅವರ ಕವಿತೆಗಳನ್ನು ಓದುತ್ತಿದ್ದರೆ ಈರ್ಷೆಯಾಗುತ್ತದೆ. ಮನಸಿನ ಅದೃಶ್ಯ ಭಾವಗಳನ್ನು, ಅನೂಹ್ಯ ತಳಮಳಗಳನ್ನು, ಅಮೂರ್ತ ಕಲ್ಪನೆಗಳನ್ನು ಸರಳ ಶಬ್ದಗಳಲ್ಲಿ ಇಷ್ಟೊಂದು ಆಪ್ತವಾಗಿ ಒಂದೇ ಗುಟುಕಿನಲ್ಲಿ ಹೇಳಿಬಿಡುತ್ತಾರೆ!

    ೧) ವರವಾಗಿ ದಕ್ಕಿದ ಮನಸೇ:

    ಈ ಕವಿತೆಯ ಆರಂಭವೇ ಅದ್ಭುತ ರೂಪಕ: “ಮಳೆ ಬಿದ್ದು ಮಿದುವಾದ ಕೆಮ್ಮಣ್ಣ ನೆಲೆದಮೇಲೆ, ಪಾರಿಜಾತವೊಂದು ಬಿದ್ದು ಮೈ ನೋಯಿಸಿಕೊಂಡಂತೆ” ಪಾರಿಜಾತ ಹಗುರದಲ್ಲಿ ಹಗುರ, ಮಿದುವಾದ ಮಣ್ಣಿನಲ್ಲಿ ಬಿದ್ದರೂ ಮೈನೋವು! ಮೃದುವಾದ ಗಾಯ.

    ನನಗೆ ಲೆಕ್ಕ ಬರದು,
    ನಿನಗೆ ಎಣಿಸಲು ಸಮಯವಿರದು
    ವ್ಹಾ ವ್ಹಾ! ಎಂಥ ಚಂದದ ವಿರೋಧಾಭಾಸ!

    ಚುಕ್ಕೆ ನಕ್ಷತ್ರಗಳನ್ನು ‘ಮೆಸೇಜ್’ ಆಗಿ ಬಳಸುವ ಪ್ರೀತಿ ಇದು. “ನನ್ನ ಹುಚ್ಚಿಗೆ ನಾನೇ ನಗುತ್ತೇನೆ”; ಪ್ರೀತಿಯಲ್ಲಿ ಬಿದ್ದವರೆ ಹಣೆಬರಹವೇ ಇದಲ್ಲವೇ?

    `ಕಲ್ಪನೆಯ ಕಟ್ಟಡಕ್ಕೆ ಪಾಯಯೂ ಬೇಡ ಗೋಡೆಯೂ ಬೇಡ` ಎಂಥ ಚಂದದ ಕಲ್ಪನೆ!

    ಪ್ರೀತಿಸುವುದು ಪ್ರೀತಿ ಎನ್ನುವ ಕಲ್ಪನೆಯನ್ನೋ ನಿನ್ನನ್ನೋ? ಎನ್ನುವ ಪ್ರಶ್ನೆಗೆ ಉತ್ತರ ಕೊಡದೆ “ಈ ಸಲ ನಿದ್ದೆ ಮಾಡಲು ಬಿಟ್ಟರೆ… ಉತ್ತರ ಹುಡುಕಿಕೊಂಡು ಬರುವೆ” ಎನ್ನುವ ತಿರುವು ಪ್ರೀತಿಯನ್ನೇ ಹುಟ್ಟಿಸುತ್ತದೆ.

    ೨) “ರಂಗೋಲಿಯಂಥ ಹುಡುಗ…”:

    ರಂಗೋಲಿಯಂಥ ಹುಡುಗ! ಅಚ್ಚ ಹೊಸ ರೂಪಕ! ಇದುವರೆಗೂ ಯಾರೂ ಹುಡುಗನನ್ನು/ಪ್ರೀತಿಸಿದವರನ್ನು ರ್ಂಗೋಲಿಗೆ ಹೋಲಿಸಿದ್ದೆ ಇಲ್ಲ! ಇದಕ್ಕೆ ಏನೆಲ್ಲ ಅರ್ಥ ಮಾಡಿಕೊಳ್ಳಬಹುದು! ಸಣ್ಣ ಸಣ್ಣ ಚುಕ್ಕಿಗಳನ್ನು ಮೊದಲು ಹಾಕಬೇಕು, ಆಮೇಲೆ ಆ ಕ್ಷಣ ಹೇಳಿದಂತೆ ಆ ಚಿಕ್ಕೆಗಳನ್ನು ಸೇರಿಸಬೇಕು, ರಂಗೋಲಿ ಬಿಡಿಸಬೇಕು. ಒಂದು ಸಲ ಬಿಡಿಸಿದ ರಂಗೋಲಿಯಂತೆ ಮತ್ತೊಂದು ರಂಗೋಲಿ ಮೂಡುವುದಿಲ್ಲ. ರಂಗೋಲಿ ತುಂಬ ಹೊತ್ತು ಉಳಿಯುವುದೂ ಇಲ್ಲ.

    ೩) “ಹೇ ಕೇಳಿಲ್ಲಿ,” — ಪ್ರೀತಿ ಎಂದರೆ ಜೊತೆಯಲ್ಲಿ ನಡೆದು ಹಂಚಿಕೊಳ್ಳುವುದು

    ಬಾನ ಮಲ್ಲಿಗೆಯ ಹೂಗಳನ್ನು ಹೆಕ್ಕಿ
    ಒಂದು ಚಂದದ ದಂಡೆ ಕಟ್ಟಿ
    ಮುಡಿಯಬೇಕು ಎನಿಸಿದೆ
    ನೀನೂ ಬರ್ತೀಯ ಜೊತೆ?
    ಹೂ ಹೆಕ್ಕೋಣ!

    ಈ ಮೇಲಿನ ಸಾಲುಗಳನ್ನು ಓದುತ್ತಿದ್ದರೆ ಅಲ್ಲೊಂದು ಚಿತ್ರ ಮೂಡುತ್ತದೆ, ಅದೂ ಎಂಥ ಚಂದದ ಚಿತ್ರ!

    ಹಳ್ಳಿಯ ಗಾಳಿ, ಹೂ-ಹಣ್ಣು-ಸಾರು-ತುಪ್ಪ-ಮಜ್ಜಿಗೆ ಎಲ್ಲವೂ ಪ್ರೀತಿಯಾಗುತ್ತವೆ.

    ಪ್ರೀತಿ ಎಂದರೆ – ಕವಳಿ ಹಣ್ಣೂ ಕೊಯ್ಯಬಹುದು, ಬುಟ್ಟಿ ಇನ್ನಷ್ಟು ತುಂಬುತ್ತದೆ, ದಾರಿಯೂ ಬೇಗ ಸವೆಯುತ್ತದೆ. ” ಇದು ಪ್ರೀತಿಯ ಅತ್ಯಂತ ಪ್ರಾಕ್ಟಿಕಲ್ ವ್ಯಾಖ್ಯಾನ.

    ಅದ್ಭುತವಾಗಿ ಊಟದ ದೃಶ್ಯ: “ಬೇಳೆ ಹೂವಿನ ಸಾರು, ಬಳ್ಳಿ ಸೊಪ್ಪಿನ ಪಲ್ಯ, ಕೆಂಪಕ್ಕಿ ಅನ್ನಕ್ಕೆ ತುಪ್ಪ”; ಓದುಗರ ಕಣ್ಣ ಮುಂದೆ ಮನೆಯ ಅಡುಗೆಮನೆಯನ್ನೇ ತಂದು ನಿಲ್ಲಿಸುತ್ತದೆ. ಅನ್ನದಾತೆ ಸುಖಿಯಾಗಿರು ಎನ್ನುವ ಥ್ಯಾಂಕ್ಸ್ ಗೆ ಕೂಡ ಕಾಯದೇ ಮತ್ತೆ ಹೊರಗೆ ಕರೆದೊಯ್ಯಲು ಬಯಸುತ್ತಾಳೆ, ಮತ್ತೆ ಊರ ತಿರುಗಲು.

    “ನನ್ನಿಷ್ಟದ ಎಲ್ಲ ಗಳಿಗೆಗಳಿಗೂ ನಿನ್ನನ್ನು ಪರಿಚಯಿಸುವುದು… ನನ್ನ ಜೊತೆ ನಿನ್ನ ಹೆಜ್ಜೆಯೂ ಇರುವುದೇ ಪ್ರೀತಿ.” ಪ್ರೀತಿ ಎಂದರೆ ಇದೇ ಅಲ್ಲವೇ? ಜೀವನದ ಸಣ್ಣ ಸಣ್ಣ ಗಳಿಗೆಗಳನ್ನು ಒಟ್ಟಿಗೆ ಕಳೆಯುವುದು!

    ಅಮಿತಾ ಒಂದು ಚಂದದ ಕವನ ಸಂಕಲನ ಮಾಡಿ.

    – ಕೇಶವ

    Liked by 1 person

    • ಕೇಶವ ಅವರೇ, ನಿಮ್ಮ ಹತ್ತಿಯ ಎಳೆ ಎಳೆಗಳನ್ನು ಬಿಡಿಸಿ ವಿಶ್ಲೇಷಿಸಿ ಬರೆದ ವಿಮರ್ಶೆಯನ್ನೋದಿ ಮತ್ತೆ ಮತ್ತೆ ಅಮಿತಾ ಅವರ ಕವನಗಳನ್ನು ಓದಿ ಏನೆಲ್ಲಾ ಮಿಸ್ ಮಾಡಿಕೊಂಡಿದ್ದೇನಲ್ಲ ಅಂತ ಅನಿಸಿತು. ಒಂದೊಂದು ಸಾಲಿನ ಆಳಕ್ಕೂ ಹೊಕ್ಕು ಇನ್ನಷ್ಟು ಅರ್ಥದ ಅನುಭೂತಿಯಾಯಿತು. ನೀವಂದಂತೆ ಬಹು ಚಂದದ ಕವಿತೆಗಳು. ಅವರಿಂದ ಬರೆಸಿಕೊಳ್ಳಲು ಪ್ರೇಮಿಗಳೆಲ್ಲ ಕ್ಯೂದಲ್ಲಿ ನಿಂತಂತಿದೆ!

      Like

Leave a Reply to Ln Gudur Cancel reply

Your email address will not be published. Required fields are marked *