ಯಕ್ಷಗಾನ ‘ಪ್ರಸಂಗ’ದಲ್ಲಿ ಸಾಮಾಜಿಕ ಸಮಸ್ಯೆಗಳು – ರಾಮ್

ಯಕ್ಷಗಾನ ದಕ್ಷಿಣೋತ್ತರ ಜಿಲ್ಲೆಗಳ ಜನರ ನರನಾಡಿಗಳಲ್ಲಿ ಹರಿಯುವ ನೆತ್ತರು. ‘ಆಟ’ ಎಂದರೆ ಯಕ್ಷಗಾನ; ‘ಪ್ರಸಂಗ’- ಆಟದ ಕಥೆ; ತಂಡವೇ ಮೇಳ. ಬೆಳೆಯುವಾಗ ಆಟ ಕುಣಿಯದ ಚಿಣ್ಣರು ನನ್ನ ಬಾಲ್ಯದ ದಿನಗಳಲ್ಲಿರಲಿಲ್ಲ. ರಾತ್ರಿಯಿಡೀ ಕುಳಿತು, ಮಲಗಿ, ನೋಡುತ್ತಿದ್ದ ಆಟ ನಮಗೊಂದು ಥರ ಮಾಟ ಮಾಡಿತ್ತು. ಆ ಅಮಲು ಇಂದೂ ಇಳಿದಿಲ್ಲ. ಕಾಲಕ್ಕೆ ತಕ್ಕಂತೆ ಈಗ ಆಟದ ಅವಧಿ ಪಟ್ಟಣಗಳಲ್ಲಿ 2-3 ತಾಸಿಗೆ ಇಳಿದಿದೆ. ಮೊನ್ನೆ ಊರಿಗೆ ಹೋದಾಗ ಆಟ ನೋಡುವ ಅವಕಾಶ ಸಿಕ್ಕಿತು. ಹೆಕ್ಮೇಳ ಅಂದರೆ ಆರಿಸಿದ ಕಲಾವಿದರ ತಂಡ – hand picked ಅಂತಾರಲ್ಲ, ಹಾಗೆ. ಪ್ರಮುಖ ಪಾತ್ರದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ (ನುರಿತ ಹಿರಿಯ ಕಲಾವಿದ) ಹಾಗೂ ಸ್ತ್ರೀವೇಷದಲ್ಲಿ ನೀಲ್ಕೋಡು ಶಂಕರ ಹೆಗಡೆ (ಭಾವಪೂರ್ಣ ಹಾಗೂ ಅನನ್ಯ ನೃತ್ಯ ಶೈಲಿಗೆ ಪ್ರಸಿದ್ಧ)ಯವರಿದ್ದಾಗ ಸಿಕ್ಕ ಚಾನ್ಸ್ ಬಿಡಲಾದೀತೇ?

ಪ್ರಸಂಗಗಳು  ಪೌರಾಣಿಕ ಕಥೆಗಳನ್ನು ಅವಲಂಬಿಸಿರುವುದೇ ಜಾಸ್ತಿ. ರಾಮಾಯಣ, ಮಹಾಭಾರತಗಳ ಉಪಕಥೆಗಳು ಸಾಮಾನ್ಯ. ‘ಮಾಗದ ವಧೆ’, ‘ರುಕ್ಮಾಂಗದ ಚರಿತೆ’  ಅಥವಾ ‘ಕೀಚಕ ವಧೆ’ ಕೆಲವು ಚಿರಪರಿಚಿತ ಪ್ರಸಂಗಗಳು. ಚಂದಮಾಮದ ಕಥೆಗಳೂ ಪ್ರಸಂಗಗಳಾಗಿವೆ. ನಾನು ನೋಡಿದ ಪ್ರಸಂಗ, ‘ರಾಜಾ ಉಗ್ರಸೇನ’. ನನಗೆ ಈ ಕಥೆಯ ತುದಿ ಬುಡ ಗೊತ್ತಿರಲಿಲ್ಲ. ಯಾವುದೋ ಅಡುಗೂಲಜ್ಜಿ ಕಥೆಯಂತಿತ್ತು ಈ ಶೀರ್ಷಿಕೆ. ಇದರಲ್ಲೇನಿದೆ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆ ಎಂದು ನೀವು ಪ್ರಶ್ನಿಸಿದರೆ ಆಶ್ಚರ್ಯವೇನಿಲ್ಲ. ಮೊದಲು ಕಥೆ ಕೇಳಿ.

IMG_8308
ವಸಂತಾಗಮನವನ್ನು ಆನಂದಿಸುವ ವೃಷಸೇನೆ

ಒಂದಾನೊಂದು ಕಾಲದಲ್ಲಿ ಒಂದೂರು. ಅಲ್ಲಿಯ ರಾಜ ಉಗ್ರಸೇನ. ಅವನ ಪಟ್ಟದರಸಿ ವೃಷಸೇನೆ. ರಾಜನಿಗೆ ಸುಮಾರು ಮಧ್ಯಮ ವಯಸ್ಸು. ರಾಣಿ ಇನ್ನೂ ಯುವತಿ.  ಇಬ್ಬರಿಗೂ ಮಕ್ಕಳಿಲ್ಲ. ಈ ನೋವು ರಾಣಿಯನ್ನು ಕಾಡುತ್ತಿದೆ. ಆಗಷ್ಟೇ ವಸಂತ ಕಾಲಿಡುತ್ತಿದ್ದಾನೆ. ಎಲ್ಲೆಲ್ಲೂ ಚಿಗುರೊಡೆದು ಮರಗಿಡಗಳು ನವಯೌವ್ವನ ಪಡೆದಿವೆ; ಗಿಳಿಗೊರವಂಕಗಳ ಸಂಗೀತ ಎಲ್ಲೆಡೆ ಪಸರಿಸಿ ನೋವೋತ್ಸಾಹವನ್ನು ತುಂಬುತ್ತಿದೆ. ವೃಷಸೇನೆಗೆ ತಾಯ್ತನದ ಆಸೆ ಉಕ್ಕುತ್ತಿದೆ. ಆಕೆ ರಾಜನನ್ನು ವನ ವಿಹಾರಕ್ಕೆ ಆಹ್ವಾನಿಸುತ್ತಾಳೆ. ರಾಜನಲ್ಲಿ ಯಾವುದೇ ಉಲ್ಲಾಸವಿಲ್ಲ. ರಾಜ್ಯಭಾರದ ನೆವ ಹೇಳಿ, ಸಖಿಯರೊಡನೆ ಜಲಕ್ರೀಡೆಯಾಡಲು ಕಳಿಸಿ, ಸಂಜೆಯಾಗುವುದರಲ್ಲಿ ಬಂದು ಕೂಡುವೆನೆಂದೂ ಭರವಸೆ ನೀಡುತ್ತಾನೆ.

ಅದೇ ಸಮಯದಲ್ಲಿ ಕಾಡಿನಲ್ಲಿ ರಕ್ಕಸನೊಬ್ಬ ಹಸಿವೆಯಿಂದ ಚಡಪಡಿಸುತ್ತಾ ಆಹಾರದ ಹೊಂಚು IMG_8281ಹಾಕುತ್ತಿರುತ್ತಾನೆ. ಅವನ ಕೈಗೆ ಪ್ರಪಂಚ ಪರ್ಯಟನೆಗೆ ಹೋರಟ ನಾರದರು ಸಿಕ್ಕಿಬೀಳುತ್ತಾರೆ. ತಿನ್ನಲು ಬಂದ ರಾಕ್ಷಸನ ಹಸಿವೆಯನ್ನು ಮಂತ್ರ ಶಕ್ತಿಯಿಂದ ಪರಿಹರಿಸುತ್ತ, ಋಷಿಯೊಬ್ಬನ ಶಾಪಕ್ಕೊಳಗಾಗಿ ಅಸುರನಾಗಿರುವ ಯಕ್ಷ ನೀನು ಎಂಬ ಕಥೆಯನ್ನೂ ಹೇಳುತ್ತಾರೆ. ನೀನು ಸ್ತ್ರೀಯೊಬ್ಬಳನ್ನು ಕೂಡಿ, ಗರ್ಭದಾನ ಮಾಡಿ ಅದೇ ಸ್ತ್ರೀಯ ಪತಿಯಿಂದ ಹತನಾದರೆ ಮಾತ್ರ ನಿನಗೆ ಶಾಪ ಮುಕ್ತಿ ಎಂಬ ಪರಿಹಾರವನ್ನು ತಿಳಿಸುತ್ತಾರೆ. ರಾಕ್ಷಸ ಶಾಪ ಮುಕ್ತಿಯ ಹಾದಿ ಹುಡುಕುತ್ತ ಸಾಗುತ್ತಾನೆ.

ರಾಜನ ಅಸಡ್ಡೆಯಿಂದ ನೊಂದ ರಾಣಿ ಅರಣ್ಯದಲ್ಲಿ ವಿಹರಿಸುತ್ತಿರುವಾಗ, ಮುದಿ ಬ್ರಾಹ್ಮಣನೊಬ್ಬ IMG_8347ಎದುರಾಗುತ್ತಾನೆ. ಉಭಯಕುಶಲೋಪರಿಯ ಬಳಿಕ ಮಾತು ಮುಂದುವರೆಯುತ್ತ, ವೃಷಸೇನೆ ಮನದಿಚ್ಛೆ, ದುಗುಡ-ದುಮ್ಮಾನಗಳನ್ನು ಅಪರಿಚಿತನೆದುರು ಬಿಚ್ಚಿಡುತ್ತಾಳೆ. ಬ್ರಾಹ್ಮಣ ಅವಳಿಗೆ ಸಮಾಧಾನ ಹೇಳಿ, ಆಶೀರ್ವದಿಸಿ ತನ್ನ ದಾರಿ ಹಿಡಿದು ಹೋಗುತ್ತಾನೆ. ಅಂತೆಯೇ ಅಲ್ಲಿಗೆ ಉಗ್ರಸೇನ ಆಗಮಿಸುತ್ತಾನೆ.  ವೃಷಸೇನೆಗೆ ಆನಂದಾಶ್ಚರ್ಯ! ನಿರೀಕ್ಷೆಗಿಂತ ಮೊದಲೇ ಬಂದ ಗಂಡನನ್ನು ಕಂಡ ಆಕೆಯ ಸಂತೋಷಕ್ಕೆ ಮೇರೆಯೇ ಇರುವುದಿಲ್ಲ. ರಾಜ ಪ್ರವೇಶಿಸುತ್ತಿದ್ದಂತೇ ಅವರ ಏಕಾಂತಕ್ಕೆ ಧಕ್ಕೆ ಬರದಿರಲೆಂದು ಸಖಿಯರು ಅರಮನೆಗೆ ತೆರಳುತ್ತಾರೆ. ಮೈಮರೆತ ವೃಷಸೇನೆ, ರಾಜನನ್ನು ಬಲು ಸಂಭ್ರಮದಿಂದ ಕೂಡುತ್ತಾಳೆ.

ರಾಸಕ್ರಿಯೆ ಮುಗಿದಂತೇ, ಉಗ್ರಸೇನನ ರೂಪದಲ್ಲಿದ್ದ ರಾಕ್ಷಸ ನಿಜ ರೂಪ ತೋರಿಸುತ್ತಾನೆ. ಪತಿಯ ವೇಷದಲ್ಲಿ ಬಂದವನ ಜೊತೆ ಮೋಸ ಹೋದೆನಲ್ಲ ಎಂಬ ಹತಾಶೆ ವೃಷಸೇನೆಗೆ ಒಂದೆಡೆ; ತನ್ನ ಅಸಹಾಯಕತೆಯ  ಬಳಸಿಕೊಂಡನಲ್ಲ ಎಂಬ ಕ್ರೋಧ ಇನ್ನೊಂದೆಡೆ. ದುಃಖ-ಕ್ರೋಧಗಳ ಉನ್ಮಾದದಲ್ಲಿ IMG_8321ಆಕೆ ಮೂರ್ಛೆ ಹೋಗುತ್ತಾಳೆ. ತಾನು ಮಾಡಿದ ಪ್ರಮಾದದ ಅರಿವೂ ಇಲ್ಲದ ರಾಕ್ಷಸನೋ ತನ್ನ ಕಾರ್ಯವಾದ ಸಂತಸದಲ್ಲಿ ಬೀಗುತ್ತ ವಿಶ್ರಮಿಸುತ್ತಾನೆ. ಅತ್ತ, ಅರಮನೆಗೆ ತೆರಳಿದ ಸಖಿಯರಿಗೆ ದಿಗ್ಭ್ರಾಂತಿ ; ತಾವು ಕಾಡಿನಲ್ಲಿ ಕಂಡ ಅರಸ ಅರಮನೆಯಲ್ಲೇ ಇದ್ದಾನೆ! ವೃತ್ತಾಂತ ಕೇಳಿದ ಉಗ್ರಸೇನ ನಖಶಿಖಾಂತ ಕೋಪದಿಂದ ಕುದಿಯುತ್ತ ಅರಣ್ಯಕ್ಕೆ ಧಾವಿಸುತ್ತಾನೆ. ಹಮ್ಮಿನಲ್ಲಿ ಕುಳಿತ ದುರುಳನ ಕತ್ತನ್ನು ‘ಖಚಕ್’ ಎಂದು ಕತ್ತರಿಸುತ್ತಾನೆ. ಸ್ಮೃತಿ ಬಂದ ವೃಷಸೇನೆ, ಗಂಡನಿಗೆ ಆದ ಕಥೆಯನ್ನೆಲ್ಲ ಹೇಳಿ, ತಿಳಿಯದೇ ಆದ ತಪ್ಪನು ಮನ್ನಿಸೆನೆಂದು ಗೋಗರೆಯುತ್ತಾಳೆ. ಉಗ್ರಸೇನನಿಗೆ ಉಭಯಸಂಕಟ. ಆತ ವೃಷಸೇನೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರೂ, ಸಮಾಜದ ಕೊಂಕುನೋಟವನ್ನು ಎದುರಿಸಲಾರೆನಲ್ಲ ಎಂದು ಅಲವತ್ತುಕೊಳ್ಳುತ್ತಾನೆ. ಬೇರೆ ದಾರಿ ಕಾಣದೇ  ವೃಷಸೇನೆ ಇನ್ನೇನು ಆತ್ಮಹತ್ಯೆಯ ಮೊರೆಹೋಗಬೇಕೆನ್ನುವಾಗ, ನಾರದರು ಪ್ರತ್ಯಕ್ಷರಾಗುತ್ತಾರೆ. ಇಬ್ಬರಿಗೂ ಬುದ್ಧಿ ಹೇಳಿ, ದಂಪತಿಗಳನ್ನು ಒಂದು ಮಾಡಿ ಮಂಗಳ ಹಾಡುತ್ತಾರೆ.

ಹೌದು, ಇದೊಂದು ಅಡಗೂಲಜ್ಜಿ ಕಥೆಯೇ ಸರಿ. ಅಪ್ರತಿಮ ಕಲಾವಿದರ ಅಭಿನಯ ನಮ್ಮನು ತಾಸೆರಡು ತಾಸು ಮೈಮರೆಸಿತ್ತು. ಹಾಗೇ  ಮೆಲಕು ಹಾಕಿದಾಗ, ಪ್ರತಿ ಮಜಲಿನಲ್ಲಿ ಈ ಕಥೆ ಜೀವನದ ಮೌಲ್ಯಗಳನ್ನು ತೆರೆದಿಡುತ್ತ ಹೋಗುವುದು ಭಾಸವಾಗುತ್ತದೆ. ಇಲ್ಲೊಬ್ಬ ಮಧ್ಯ ವಯಸ್ಸಿನ ಪುರುಷ, ಆತನ ಮಡದಿ ಇನ್ನೂ ತರುಣಿ. ಆತನಿಗೆ ಜೀವನದಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ, ಅದರೊಟ್ಟಿಗೆ ಅವನಿಗೆ ಹಲವು ಸ್ತ್ರೀಯರ ಸಂಪರ್ಕವೂ ಇದೆ ಎಂದು ಸೂಕ್ಷ್ಮವಾಗಿ ಅರಹುತ್ತಾನೆ. ಇದು ತಲತಲಾಂತರಗಳಿಂದ ನಡೆದು ಬಂದಿರುವ ಶೋಷಣೆಯ ಪ್ರತಿಬಿಂಬ. ಉಗ್ರಸೇನ, ವೃಷಸೇನೆಯ ಬಯಕೆಗಳನ್ನು ಪತಿಯಾಗಿ ಪೂರ್ತಿಗೊಳಿಸಲಾರ; ಆದರೆ ಆಕೆಗೆ ಅವನ್ನು ಬಯಸುವ ಹಕ್ಕಿಲ್ಲ. ತಿಳಿಯದೇ ತಪ್ಪು ಮಾಡಿ, ಪ್ರಾಯಶ್ಚಿತ್ತ ಅನುಭವಿಸಿದರೂ, ಕ್ಷಮಿಸಿ ಮಡದಿಯನ್ನು ಸಂತೈಸುವ ಉದಾರ ಮನೋಭಾವ ಆತ ತೋರಲಾರ. ಇದೇನು ವಿರೋಧಾಭಾಸ? ಶತಮಾನಗಳು ಉರುಳಿದರೂ  ಅಂದಿಗೂ-ಇಂದಿಗೂ ಯಾವ ವ್ಯತ್ಯಾಸವೂ ಇಲ್ಲ.

ಅವಕಾಶವಾದಿಗಳು ಸದಾಕಾಲ ನಮ್ಮ ಸುತ್ತ ಹೊಂಚು ಹಾಕುತ್ತಿರುತ್ತಾರೆ. ಈ ಪ್ರಸಂಗದಲ್ಲಿನ ರಾಕ್ಷಸ ಇದಕ್ಕೆ ಸರಿಯಾದ ಉದಾಹರಣೆ. ತನ್ನ ಮರೆಮಾಚುವಿಕೆಯ ಪರಿಣತಿಯನ್ನು ಬಂಡವಾಳವನ್ನಾಗಿಸಿ, ಬ್ರಾಹ್ಮಣನಾಗಿ ತನಗೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಆಧುನಿಕ ಯುಗದ ಮಾಹಿತಿ ಕಳುವು/ ಕಟಾವು (data theft/harvest) ನಮ್ಮ ಮುಂದೆ ಅನಾವರಣಗೊಳ್ಳುತ್ತದೆ. ಅಂತೆಯೇ ಸಿಕ್ಕ ವಿವರಗಳಿಂದ ಉಗ್ರಸೇನನ ಗುರುತನ್ನೂ ನಕಲಿಸಿ ತನ್ನ ಲಾಭಕ್ಕಾಗಿ ದುರುಪಯೋಗಿಸಿಕೊಳ್ಳುತ್ತಾನೆ.

ಕ್ಷಣಕಾಲದ ಮೈಮರೆವು ವೈಯಕ್ತಿಕ ಹಂತದಲ್ಲಿ ಯಾವ ರೀತಿ ಪ್ರತಿಕೂಲ ಪರಿಣಾಮ ಬೀರಬಲ್ಲದು! ನಮ್ಮ ವೈಯಕ್ತಿಕ ವಿವರಗಳು ರಹಸ್ಯವಷ್ಟೇ ಅಲ್ಲ, ಪವಿತ್ರ ಕೂಡ ಇಂದಿನ ಗಣಕ/ಅಂತರ್ಜಾಲ ಯುಗದಲ್ಲಿ. ಅನಾಮಧೇಯರೊಂದಿಗೆ, ಅಪರಿಚಿತರೊಂದಿಗೆ ಅವನ್ನು ಹಂಚಿಕೊಂಡರೆ ಮುಂದೆರಗುವ ಆಘಾತ ಅದೆಷ್ಟು ಗಂಭೀರ ಎಂದು ಅರಿವಾಗುವುದಲ್ಲವೇ? ದಿನ ನಿತ್ಯ ನಮ್ಮ ಸುತ್ತ ಮುತ್ತ ಹಾಗೂ  ಪ್ರಪಂಚದಾದ್ಯಂತ ನಡೆದ, ನಡೆಯುತ್ತಿರುವ ವಿದ್ಯಮಾನಗಳಿಗೆ, ಮಾಮೂಲಿ ಎನಿಸುವ ಕಥೆ ಎಷ್ಟು ಸರಳವಾಗಿ, ಸುಂದರವಾಗಿ ಕನ್ನಡಿ ಹಿಡಿದಿದೆಯಲ್ಲ! ಸೊಗಸಾದ ಮನೋರಂಜನೆಯೊಂದಿಗೆ, ಜ್ವಲಂತ ಸಮಸ್ಯೆಗಳನ್ನು ಚಿಂತಿಸುವಂತೆ ಮಾಡಿದ ಪ್ರಸಂಗ, ಕಳೆದ ಸಂಜೆಯ ಸಮಯ ಸಾರ್ಥಕವಾಯಿತೆಂಬ ಧನ್ಯತೆ ಮೂಡಿಸಿತ್ತು ಕೊನೆಯಲ್ಲಿ.

ಲೇಖನ, ವಿಡಿಯೋ ಮತ್ತು ಚಿತ್ರಗಳು: ರಾಂಶರಣ್

Video link: https://www.youtube.com/watch?v=P0uwHxLk1Z4&feature=youtu.be

 

7 thoughts on “ಯಕ್ಷಗಾನ ‘ಪ್ರಸಂಗ’ದಲ್ಲಿ ಸಾಮಾಜಿಕ ಸಮಸ್ಯೆಗಳು – ರಾಮ್

 1. ಸಂಗ್ಯಾಬಾಳ್ಯಾ ಮತ್ತು ಬಯಲಾಟ ಮಾತ್ರ ನೋಡು ಗೊತ್ತಿದ್ದ ನಮಗೆ ಯಕ್ಷಗಾನದ ಲೋಕವನ್ನೂ ತೋರಿಸಿದವರು ನಮ್ಮ ಊರಿನಲ್ಲಿದ್ದ ದ ಕದ ಹೊಟೇಲ್ ಓನರುಗಳು. ಯಕ್ಷಗಾನಕ್ಕೆ ಮರುಳಗದವರಿಲ್ಲ.

  ಈ ಕತೆ ಹಿಂದೆ ಎಲ್ಲೋ ಓದಿದ್ದೆ. ಯಕ್ಷಗಾನ್ ಪ್ರಯೋಗ ಗೊತ್ತಿರಲಿಲ್ಲ.

  ನಾಗಮಂಡಲ, ಸಿರಿಸಂಪಿಗೆ, ಪಹೇಲಿಯ ಕತೆಯೋ ಇದೇ ಅಲ್ಲವೇ?

  ಸಮಾಜದ ಕಟ್ಟಲೆಗಳನ್ನು ಅಣಕಿಸುವ ಪ್ರೇಮ ಕಾಮಗಳು ಯಾವಾಗಲೂ ಪ್ರಸ್ತುತವೇ!

  ಸುಂದರ ಬರಹ.

  ಕೇಶವ

  Like

 2. ಭೈರಪ್ಪನವರ ಪರ್ವದಲ್ಲೂ ಈ ಕಥೆ ಬಂದಿದೆ. ಭಾಗವತದಲ್ಲೂ ಓದಿದ ನೆನಪು. ಇತಿಹಾಸ ಪುರಾಣಗಳು ಗಾನ,ನೃತ್ಯ ನಾಟಕ ಹಬ್ಬ ಹರಿದಿನಗಳಾಚರಣೆಯಲ್ಲಿ ಹಾಸುಹೊಕ್ಕಾಗಿ ಧರ್ಮಾರ್ಥಕಾಮಮೋಕ್ಷಗಳ ಸಾಧನೆಯನ್ನು ಸಮಾಜಕ್ಕೆ ನೆನಪಿಸುತ್ತಿದ್ದ ವ್ಯವಸ್ಥೆ ಎಷ್ಟು ಸಂಕೀರ್ಣವೋ ಅಷ್ಟೇ ಅದ್ಭುತ.
  ಲೇಖನದ ಆಶಯ ಭಾಷೆ,ನಿರೂಪಣೆ ಎರೆಡರಲ್ಲೂ ಸಶಕ್ತವಾಗಿ ತೋರುತ್ತದೆ.
  ಧನ್ಯವಾದಗಳು.

  Like

 3. ರಾ೦ಶರಣ್, ನಿಮಗೊದಗಿದ ಅವಕಾಶವನ್ನು ನಮಗೆಲ್ಲ ಇಷ್ಟು ಸುಲಲಿತವಾಗಿ ಹ೦ಚಿಕೊ೦ಡಿದ್ದಕೆ್ಕ ಧನ್ಯವಾದ. ನನಗ೦ತೂ, ಬಾಲ್ಯದಲಿ್ಲ ಕೋಟೇಶ್ವರದಲಿ್ಲ ಹಲವಾರು ಬಾರಿ ರಾತಿ್ರಯಿಡೀ ಗೆದ್ದೆ ಬಯಲಿನಲಿ್ಲ ಕುಳಿತು ನೋಡಿದ ಪ್ರಸ೦ಗಗಳ ನೆನಪು ಮತೆ್ತ ಹಸಿ ಯಾಯಿತು.

  Like

 4. ರಾಂಶರಣರ ಯಕ್ಷಗಾನ ದ ಪ್ರಸಂಗ ದ ಲೇಖನ ಒಂದು ಕ್ಷಣ ಬಹಳ ಹಳೆಯ ನೆನಪುಗಳತ್ತ ಸೆಳೆಯಿತು.ನಾವು ಮಲೆನಾಡಿನ ಒಂದೂರಲ್ಲಿ ನನ್ನ ಪತಿಯ ಕೆಲಸ ದ ನಿಮಿತ್ತ ಇದ್ದಾಗ “ಮೋಹಿನಿ-ಭಸ್ಮಾಸುರ”ಯಕ್ಷಗಾನ ದ ಪ್ರಸಂಗ ನೋಡುವ ಅವಕಾಶ ಸಿಕ್ಕಿತ್ತು.ಮರೆಯಲಾಗದ ಸುಂದರ ಅನುಭವ ಅದು.ಆ ನೃತ್ಯ ರೂಪಕ, ಭಾಗವತರ ಹಾಡುಗಾರಿಕೆಯ ಅಲೌಕಿಕ ಅನುಭವ ಬೇರೆಯೇ ಲೋಕಕ್ಕೆ ಕಾಲಿಟ್ಟ ಂಂಂಂ
  ಅನುಭೂತಿ.ಯಾವುದೇ ಕಲೆ , ಸಾಹಿತ್ಯ, ನಾಟಕ, ಬಯಲಾಟ, ಸಿನಿಮಾ , ಯಕ್ಷಗಾನ ಎಲ್ಲಾ ಒಂದಿಲ್ಲೊಂದು ರೀತಿಯಲ್ಲಿ ಸಾಮಾಜಿಕ ಸಮಸ್ಯೆ ಗಳ ಮೇಲೆ ಬೆಳಕು ಚೆಲ್ಲುತ್ತದೆ, ಮನರಂಜನೆ ಜೊತೆ ಅಂತ ಅನಿಸುತ್ತದೆ.ಅಂತೆಯೆ ಇಲ್ಲಿಯೂ.ಇದು ಸಾರ್ವಕಾಲಿಕ, ಪ್ರತಿಯೊಬ್ಬರಿಗೂ ಅನ್ವಯವಾಗುವ ಸಮಸ್ಯೆ ಎಂದರೆ ತಪ್ಪಾಗಲಾರದು.ನಿಜಕ್ಕೂಒಂದು ಎಚ್ಚರಿಕೆ ನೀಡುತ್ತಿದೆ ಈ ಯಕ್ಷಗಾನ ಪ್ರಸಂಗ, ಒಂದು ಸುಂದರ ರೀತಿಯಲ್ಲಿ ಅಂದರೆ ಅತಿಶಯೋಕ್ತಿಯಲ್ಲ.ಇಂಥ ಸಮಯೋಚಿತ ಬರಹ ಜೊತೆಗೆ ಅಪರೂಪದ ಯಕ್ಷಗಾನ ಪ್ರದರ್ಶನ ದ ಲೇಖನ ನೀಡಿದ್ದಕ್ಕೆ ರಾಂಶರಣ್ ಅವರಿಗೆ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Like

 5. ಧನ್ಯವಾದಗಳು ರಾಮ್ 👍🏻👍🏻.ನೆನಪುಗಳು ಮರುಕಳಿಸುವಂತಾಯಿತು. ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ನಾನು ಊರಿಗೆ ಹೊಗಿದ್ದಾಗ ಇದೇ ಆಖ್ಯಾನ ಅಥವಾ ಪ್ರಸಂಗದಲ್ಲಿ ಅಭಿನಯಿಸಿದ್ದೆ. ಅಂದು ಕೂಡಾ ಕೊಂಡದಕುಳಿಯವರ ಉಗ್ರಸೇನ. ನನ್ನದು ದ್ರುಮಿಳ ಗಂಧರ್ವ. ಈ ಕತೆಯ ಬಗ್ಗಿನ ಇನ್ನು ಕಲವು ವಿವರಗಳು…

  ಇದು ಕಂಸನ ಹುಟ್ಟಿನ ಕತೆ. ದ್ರುಮಿಳನು ತನ್ನ ಉದ್ದಟತನ ಅಂಹಕಾರದಿಂದ ಶಾಪಗ್ರಸ್ತನಾಗಿ ರಾಕ್ಷಸನಾಗಿ ಭೂಮಿಯಲ್ಲಿ ರೂಪಾಂತರಗೊಂಡು ಅಲೆಯುವಾಗ, ನಾರದರು ಶಾಪದ ಉಪಶಮನದ ದಾರಿ ಹೇಳುತ್ತಾರೆ. ಅದರ ಪ್ರಕಾರ ಮೋಸದಿಂದ ಉಗ್ರಸೇನನ ರೂಪದಲ್ಲಿ ಬಂದು ಉಗ್ರಸೇನನ ಹೆಂಡತಿ ( ರುಚಿಮತಿ, ಪ್ರಸಂಗ ಪುಸ್ತಕದಲ್ಲಿರುವ ಹೆಸರು) ಯನ್ನು ಮೋಸದಿಂದ ಕೂಡುವುದು, ಫಲವಾಗಿ ಮುಂದೆ ಮಗು ಹುಟ್ಟುವುದು. ಆ ಮಗುವೇ ಕಂಸ.

  ಕಂಸ ಉಗ್ರಸೇನನ ನಿಜವಾದ ಮಗ ಅಲ್ಲ, ಆದರೆ ಅವನ ಹೆಂಡತಿ ರುಚಿಮತಿಯ ಮಗ ಹೌದು ! ಇದಕ್ಕಾಗಿಯೇ ಕಂಸ ನನ್ನು ಕಂಡರೆ ಉಗ್ರಸೇನನಿಗೆ ತಾತ್ಸಾರ ತಿರಸ್ಕಾರ, ರಾಕ್ಷಸ ಸಂತಾನ ಅಂತ. ಹಾಗಾಗಿ ಯೌವನಸ್ಥ ಕಂಸ ತನ್ನನ್ನು ಆದರಿಸದ ತಂದೆ ತಾಯಿಯರನ್ನು ಸೆರಮನೆಗೆ ತಳ್ಳಿ ಮಧುರೆಯ ಸಿಂಹಾಸನದ ಮೇಲೆ ಕೂಡುವುದು….
  ಯಕ್ಷಗಾನದಲ್ಲಿ ” Double acting ” ಇರುವ ಕತೆ ಇದು ! ಹಿಂದೆ ಚಿಟ್ಟಾಣಿಯವರು ,ಈಗ ಕೊಂಡದಕುಳಿಯವರು ಉಗ್ರಸೇನನ ದ್ವಿಪಾತ್ರ ಅಭಿನಯವನ್ನು ಮನಸ್ಸಿಗೆ ತಟ್ಟುವಂತೆ ಮಾಡುತ್ತಾರೆ.
  ಧನ್ಯವಾದಗಳು.
  -ಯೋಗೀಂದ್ರ ಮರವಂತೆ

  Liked by 1 person

 6. ಬೆಂಗಳೂರಿನಲ್ಲಿ ಬೆಳೆದ ನನಗೆ ಯಕ್ಷಗಾನವೆಂದರೆ ಅದೇನೋ ಒಂಥರಹದ ಮಾಯಾಲೋಕ. ಮುಂದೆ ಮೈಸೂರಿಗೆ ಹೋದಾಗ ಕನ್ನಡ ಅಧ್ಯಯನ ಸಂಸ್ಥೆಯ ಒಬ್ಬರು ಯಕ್ಷಗಾನ ಕಲಿಸುತ್ತಾರೆ ಎಂದು ಗೊತ್ತಾಗಿ ಅವರನ್ನು ಹುಡುಕಿಕೊಂಡು ಹೋಗಿ ಕೇಳಿದರೆ ಕಲಿಸುವುದನ್ನು ಅವರು ನಿಲ್ಲಿಸಿಯಾಗಿತ್ತು. ಮೇಲಾಗಿ ‘ಹುಡುಗಿಯಾಗಿ ನೀವು ಯಕ್ಷಗಾನ ಕಲಿಯುತ್ತೀರಾ’ ಎಂದಿದ್ದರು. ದಕ್ಷಿಣ ಕನ್ನಡದ ಈ ನೃತ್ಯಪ್ರಕಾರ ಕೊಡುವ ಲೋಕದೃಷ್ಟಿ ಬಹು ಭಿನ್ನ. ಅದನ್ನು ನೀವು ಮತ್ತೆ ಖಾತ್ರಿ ಪಡಿಸಿದ್ದೀರಿ, ಧನ್ಯವಾದಗಳು. ವಿನತೆ ಶರ್ಮ

  Like

 7. ಅತ್ಯಂತ ಸಮಯೋಚಿತ ಲೇಖನ. ಯಕ್ಷಗಾನದ ಕಲೆ ಹಳೆಯದಾಗಿರಬಹುದು. ಆದರೆ ಅದರ ನೀತಿ ಇಂದಿಗೂ ಅನ್ವಯಿಸುತ್ತದೆಯಲ್ಲವೆ? ನೆನ್ನೆ ತಾನೆ ಬೇಹುಗಾರಿಕೆಯ ಸಾಮಾಜಿಕ ತಾಣವೊಂದರ ಕುತಂತ್ರ (?) ಹೊರಬಿತ್ತು (ಅಂತ ಅನಿಸುತ್ತದೆ!). ಈಗಿನ ದಿನದಲ್ಲಿ ಸುದ್ದಿ ಯಾವುದು, ಖೊಟ್ಟಿ ಸುದ್ದಿ (fake news), ಸತ್ಯ ಯಾವುದು, ತಿಳಿಯಲು ಕಷ್ಟ. ವೈಯಕ್ತಿಕ ವಿವರಗಳ ಕಳವು ಸರ್ವೇ ಸಾಮಾನ್ಯ., ಯಾವುದೂ ಪವಿತ್ರವಾಗಿ ಉಳಿದೇ ಇಲ್ಲವೆ?. ಇದನ್ನು ಯೋಚಿಸುವಂತೆ ಮಾಡಿದ ಯಕ್ಷಗಾನದ ಪ್ರಸಂಗದ ಪ್ರದರ್ಶನ ಮತ್ತುಅದರ ಸ್ವಾರಸ್ಯಕರ ವೃತ್ತಾಂತ ಬರೆದ ರಾಂ ಶರಣರಿಗೆ ಅಭಿನಂದನೆಗಳು. ಆ ಹೆಕ್ಮೇಳದ ಕಲ್ಲಾವಿದರರೂ ಶ್ಲಾಘನೆಗೆ ಪಾತ್ರರೇ ಎಂಬುದರಲ್ಲಿ ಸಂಶಯವಿಲ್ಲ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.