ಗುಪ್ ಚುಪ್ ಕಥೆಗಳು- ವಿನತೆ ಶರ್ಮ

ಕಿಟಕಿ-ಬಾಗಿಲುಗಳಿಲ್ಲದ ಮನೆ/ಕಟ್ಟಡವನ್ನು ಊಹಿಸಿಕೊಂಡೀರಾ? ಸಾಂಕೇತಿಕವಾಗಿ ಇವನ್ನು ಅನಾದಿ ಕಾಲದಿಂದ ಬಳಸುತ್ತಲೇ ಬಂದಿದ್ದೇವೆ. ಇದರಲ್ಲೇನಿದೆ ಹೊಸತನ ಎಂದೀರಿ ನೀವು! ಬನ್ನಿ, ಓದಿ, ಈ ಕಥಾ ಲೇಖನ. ಶೀರ್ಷಿಕೆಯೇನೋ ಕಥೆಗಳು, ಆದರೆ ನನಗನಿಸುತ್ತಿದೆ ಇದರಲ್ಲಿ ಕಥೆಗಳಿಗೂ ಮೀರಿದ ಗಹನ ವಿಚಾರಗಳಿವೆ.  ಅವು ನಿಮ್ಮ ಮನದ ಕಿಟಕಿ-ಬಾಗಿಲುಗಳನ್ನು ತೆರೆದಾವು. ಕಡೆಯಲ್ಲಿ ಕಥೆಗಾರ್ತಿ ಬಿಚ್ಚಿಟ್ಟರೆ ಗುಟ್ಟು?ಇದು ಕಥೆಯೇ, ವೈಚಾರಿಕತೆಯೇ…- ಸಂ

IMGP1013

ನಮ್ಮ ಮನಸ್ಸಿಗೆ ನೂರಾರು ಕಿಟಕಿಗಳು. ಇಟ್ಟುಕೊಂಡಷ್ಟೂ ಇವೆ ಬಾಗಿಲುಗಳು. ಅವು ತೆರೆದುಕೊಂಡಾಗ ಕಥೆಗಳ ತೇರು ಹೊರಡುತ್ತದೆ. ಆಗ ಆಗುತ್ತದೆ ನಮ್ಮ ಮನಸ್ಸು ಒಂದು ರಥಬೀದಿ. ಬೀದಿಬದಿ ಅಂಗಡಿ, ಬೆಂಡು ಬತ್ತಾಸು, ಕಳ್ಳೇಪುರಿ, ಕಜ್ಜಾಯ, ಕಳೆಕಳೆ ಬಣ್ಣದ ಬಳೆಗಳ ಬಳೆಗಾರ, ಅಲ್ಲಲ್ಲಿ ಬಣ್ಣದ ಕೀಲುಕುದುರೆ … ಒಂದೇ, ಎರಡೇ! ಸಾವಿರಾರು ಕಥೆಗಳಿವೆ ಆ ಕಿಟಕಿಗಳಲ್ಲಿ. ಬಾಗಿಲುಗಳಿಂದ ಹೊರಡುತ್ತವೆ ಕೆಲವು. ಮುಚ್ಚಿಕೊಂಡಾಗ ಅವು ಗುಸುಗುಸು, ಪಿಸುಪಿಸು ಹೇಳುವ ಇನ್ನೆಷ್ಟೋ ಕಥೆಗಳು …

IMGP0993ನಾವು ಕಟ್ಟುವ ನಮ್ಮದೇ ಆದ ಮನೆಗೆ ಒಂದೇ ಮುಂಬಾಗಿಲು, ಅಲ್ಲೊಂದು ಹಿಂಬಾಗಿಲು, ಇಗೋ ಆಗೋ ಕಿಟಕಿಗಳು.
ಪ್ರತಿಯೊಂದಕ್ಕೂ ಜಾಗರೂಕತೆಯಿಂದ ಆಯ್ದುಕೊಂಡ ವಿನ್ಯಾಸ, ಚೌಕಟ್ಟು, ಬಣ್ಣ, ಮೇಲ್ಮೈ ಹೊದಿಕೆ, ಅಳವಡಿಸಿದ ಕಲ್ಲು, ಮಣ್ಣು,
ಸಿಮೆಂಟ್ …

ನಮ್ಮದೋ, ಅವರದೋ ಮನೆ ಇರುವ ದಿಕ್ಕು, ತಾಣ, ಅದರ ಉದ್ದ, ಅಗಲ, ಸುತ್ತಲೂ ಇರುವ ಅಥವಾ ಇಲ್ಲದಿರುವ ಹೊರಾಂಗಣ ಜಾಗ. ಎಲ್ಲವನ್ನೂ ಗಮನಿಸಿದರೆ ಅಲ್ಲೊಂದು ಇಲ್ಲೊಂದು ಬೇರೆ ಬೇರೆ ಕಥೆಯಿದೆ. ಅವಳದ್ದು, ಅವನದ್ದು, ಅಜ್ಜಿ ತಾತಂದಿರದ್ದು, ಮಕ್ಕಳು ಮೊಮ್ಮಕ್ಕಳು, ಮದುವೆ, ಹುಟ್ಟು, ಸಾವು, ಇನ್ನೂ ಏನೇನೋ…..
ಕಥೆಗಳ ವಿಚಿತ್ರ ಸಂತೆ ಅಲ್ಲಿ ಇದೆ. ಜೀವಗಳಿವೆ. ಜೀವಾತ್ಮಗಳಿವೆ. ನಮಗೆ ನಾವೇ ಆಮಂತ್ರಣವಿಟ್ಟುಕೊಂಡು ಹೊರಟರೆ, ಕಥಾ ಹಂದರಕ್ಕೆ ಹೊಕ್ಕರೆ. ಏನೇನೋ ಸಿಕ್ಕಿಬಿಡುತ್ತದೆ.

ಅಲ್ಲೊಂದು ಜೀವ ಹುಟ್ಟಿತು, ಅಜ್ಜಿ ಬಲು ಜತನದಿಂದ ಆ ಪುಟಾಣಿಗೆ ಮಲ್ಲಿಗೆ ಹೂವ ಮೆತ್ತೆನೆಯ ರಜ್ಹಾಯಿ ತೊಡಿಸಿ, ನೆಟಿಕೆ  IMGP1012ಮುರಿದು, ತೊಟ್ಟಿಲ ತೂಗಿ, ಹಾಡ ಹಾಡಿದ್ದನ್ನು ಕಂಡ ಆ ಕಿಟಕಿಗಳು ನಸು ನಕ್ಕವಂತೆ. ಅಪ್ಪ ಬೇಡೆವೆಂದು ಗದರಿದಾಗ ನೊಂದ ನಾಜೂಕು ಹುಡುಗಿ ತನ್ನ ಪ್ರೀತಿಯ ಹುಡುಗನನ್ನು ಸೇರಲು ಹೊರಟಳಂತೆ. ನಾಜೂಕು
ನಲ್ಲೆ ಕಿಟಕಿಯಿಂದ ಉದ್ದಾನುದ್ದದ ಬಟ್ಟೆಯನ್ನು ಜೋತು ಬಿಟ್ಟು ಧೈರ್ಯ ಮಾಡಿ ಕೆಳಗಿಳಿದು ಮತ್ತೆಂದೂ ಈ ಮನೆಗೆ ನಾ
ಕಾಲಿಡಲಾರೆನೆಂಬ ಸತ್ಯ ಗೊತ್ತಿದೆ ಎಂದು ಕತ್ತೆತ್ತಿ ತನ್ನ ಕಿಟಕಿಯನ್ನು ದಿಟ್ಟಿಸಿ ನೋಡಿದಳಂತೆ. ಅದನ್ನು ನೋಡಿದ ಹಿಂಬಾಗಿಲು ಮುಸಿ ಮುಸಿ ನಕ್ಕಾಗ ಕೇಳಿಸಿಕೊಂಡ ಹೆಬ್ಬಾಗಿಲು ನಿಟ್ಟುಸಿರು ಬಿಟ್ಟಿತಂತೆ – “ಹುಡುಗಿ ತನ್ನನ್ನು ಇನ್ನೆಂದೂ ಸವರಿಕೊಂಡು ದಾಟಿ
ಹೋಗಲಾರಳು, ಆಹಾ ವಿಧಿಯೇ!” ಎಂದು ಮರುಕ ಹುಟ್ಟಿಸಿತಂತೆ.
ಆಗೋ ಆ ಬಡ ಹುಡುಗ ತನ್ನ ಚೆಲುವರಸಿಗೆ ಬರೆದ ಪ್ರೇಮ ಸಂದೇಶವನ್ನ ರವಾನಿಸಿದ್ದು ಈ ಕಿಟಕಿಯೇ. ನೋಡಿ ನಾಚಿದ್ದು ಆ
ಕಿಟಕಿಯೇ. ಇಬ್ಬರನ್ನು ಗದರಿಸಿದ್ದು ಅಹೋ ಆ ವಯಸ್ಸಾದ ನಡುಬಾಗಿಲು.

IMGP0999ಮನೆ ಕಟ್ಟಿ, ಚೆಂದನೆ ಮುಂಬಾಗಿಲ ಇಟ್ಟು, ಗೃಹ ಪ್ರವೇಶ ಮಾಡಿ ದ್ರಾಕ್ಷಾರಸದ ಹೊಳೆ, ಸಂಗೀತದ ಸಂಜೆಯ ಸರದಾರ ಆ ಒಡೆಯ ಇಗೋ ಅದೇ ತನ್ನ ನೆಚ್ಚಿನ ಬಾಗಿಲಿನಿಂದ ಅಂತಿಮಯಾತ್ರೆಗೆ ಹೊರಟ. ಅಂದು ಮೌನಪಥ ಧರಿಸಿದ ಬಾಗಿಲು ಹಾಗೇ ಇದೆ, ಅದರ ತಲೆಗೆ ಹಾಕಿದ ಆ ಕರ್ಟನು ಮುಚ್ಛೇ ಇದೆ. ಇಲ್ಲಿ ಬನ್ನಿ. ಈ ಬಾಗಿಲು ನೋಡಿ. ಹಲವರನ್ನು ನೋಡಿ ಅವು ಉಹು ನಿಮ್ಮನ್ನು ನಾನು ಬಿಟ್ಟುಕೊಳ್ಳಲಾರೆ ಎಂದು ಸಿಡುಕಿ ಧಡಕ್ಕನೆ
ಮುಚ್ಚಿಕೊಂಡಿರಬಹುದು. ಅಹೋ ಎಲ್ಲಿ ನೋಡಿ. ಬೇಡದಿದ್ದರೂ ಕೆಲವರಿಗೆ ತೆರೆದುಕೊಳ್ಳುವ ಪಾಡು ಆ ಕಿಟಕಿಗಳಿಗೆ ಬಂದಿರಬಹುದು.

ಇನ್ನು ಈ ಬೀದಿಯ ಕೆಲ ಬಾಗಿಲುಗಳಂತೂ ಸದಾ ಸಂತೋಷದ ಬುಗ್ಗೆಗಳು. ಆ ಬಾಗಿಲುಗಳು, ಕಿಟಕಿಗಳು ನೋಡಿದ ನಲಿವು, IMGP0817ನಗೆ, ಉಲ್ಲಾಸ, ಸಂಭ್ರಮ, ಹರ್ಷ ಪಟ್ಟನೆ ಕಾಣಿಸಿಕೊಳ್ಳುತ್ತವೆ. ಅದು ನಮಗೆ ಪಟಕ್ಕನೆ ಅರ್ಥವಾಗಿಬಿಡುತ್ತದೆ ಅಲ್ಲವೇ! ಬಾಗಿಲುಗಳ, ಕಿಟಕಿಗಳ ಕಥೆಗಳ ಸಂತೆಯಲ್ಲಿ ಸಿಕ್ಕುವ ನಮಗೆ ಬೇಕಿದ್ದ ಪದಾರ್ಥಗಳು, ಕುತೂಹಲ ಹುಟ್ಟಿಸುವ ವಸ್ತುಗಳು, ‘ಚೆನ್ನಾಗಿದ್ದೀರಾ?’ ಎಂದು ನಾವು ಮಾತನಾಡಿಸುವ ಮಂದಿ, ಮುಖ ಮುಚ್ಚಿಕೊಂಡ ಕೆಲವರು, ಬಚ್ಚಿಟ್ಟ ನೋವು, ಕೇಳಿಸಿದ ನಗು,
ಜೋಪಾನವಾಗಿ ಅಡಗಿಸಿದ್ದ ಗುಟ್ಟುಗಳು, ಎಲ್ಲವೂ ಸಿಕ್ಕಿಬಿಡುತ್ತವೆ. ಕಥೆಗಳೇ ಹಾಗೆ.  ಆ ಆವರಿಸಿಕೊಂಡುಬಿಡುತ್ತವೆ. ಅವುಗಳಲ್ಲಿ ಎಲ್ಲೋ ನಾವೂ ಕೂಡ ಕೊಂಚ ಇದ್ದೀವಿ ಅನ್ನಿಸಿಬಿಡುವುದೂ ಆಗಬಹುದು.

ನಾನು ಫ್ರಾನ್ಸ್ ದೇಶದಲ್ಲಿ ಓಡಾಡುತ್ತಿದ್ದಾಗ ಕಥೆಗಳು ಹಾಗೆ ನನ್ನನ್ನು ಆವರಿಸಿಬಿಡುತ್ತಿದ್ದವು. ನನ್ನ ಕಥೆಗಾರರು ಕಟ್ಟಡಗಳು, ಬಾಗಿಲುಗಳು, ಕಿಟಕಿಗಳು. ಇಲ್ಲಿ ನನ್ನನ್ನು ಆಕರ್ಷಿಸಿದ ಫ್ರೆಂಚ್ ಮನೆಗಳ ಕಿಟಕಿ ಬಾಗಿಲುಗಳ ಕೆಲ ಚಿತ್ರಗಳು ಇವೆ.
– ವಿನತೆ ಶರ್ಮ

 

…..ಚಿತ್ರ ಪ್ರಬಂಧವೇ?

3 thoughts on “ಗುಪ್ ಚುಪ್ ಕಥೆಗಳು- ವಿನತೆ ಶರ್ಮ

  1. ವಿನತೆ, ನಿಮಗೆ ಕಿಟಕಿಗಳ ಜೊತೆ ಮಾತಾಡಲು ಅವುಗಳ ಮಾತುಗಳನ್ನು ಕೇಳಲು ಬರುತ್ತದೆ ಎಂದು ಗೊತ್ತಿರಲಿಲ್ಲ. ಭೋ ಪಸಂದಾಗದೆ ನಿಮ್ಮ ಫ್ರಾನ್ಸಿನ ಕಿಟಕಿಗಳ ಕತೆ. – ಕೇಶವ

    Like

  2. ವಿನುತೆ ಮನೆಗಳ ಕಿಟಕಿ ಬಾಗಿಲುಗಳ ಹಿಂದೆ ನಡೆದಿರಬಹುದಾದ ಘಟನೆಗಳು, ಕಥೆಗಳು, ಜೀವನ ವೈಖರಿಗಳನ್ನಾಧರಿಸಿ, ಅನೇಕ ದಶಕಗಳ ತಲೆಮಾರುಗಳ ಜೀವನ ಚಿತ್ರವನ್ನು ಹೆಣೆದಿಟ್ಟಿದ್ದೀರಿ. ನಿಮ್ಮ ಕಲ್ಪನೆಗೆ ನಿಜಕ್ಕೂ ಭೇಷ್ ಎನಲೇ ಬೇಕು. ಈ ಕಲ್ಪನೆ ಕೇವಲ ಮನೆ, ಕಿಟಕಿ ಬಾಗಿಲುಗಳ ರಚನೆ, ವಿನ್ಯಾಸವನ್ನಷ್ಟೇ ಅಲ್ಲ, ಅನೇಕ ಪೀಳಿಗೆಯ ಸಂಬಂಧದ ಚಿತ್ರಗಳನ್ನು ಅನೇಕ ಬಣ್ಣಗಳಲ್ಲಿ ಅದ್ದಿ , ನಿಮ್ಮ ಕಲ್ಪನೆಯ ಕಲಾಕುಂಚದಲ್ಲಿ ಸೊಗಸಾದ ದೃಶ್ಯವನ್ನೇ ಸೃಷ್ಟಿಸಿದ್ದಿರಿ.
    ನೂತನ ಪ್ರಯತ್ನವಿದು.
    ಉಮಾ ವೆಂಕಟೇಶ್

    Like

  3. ಕಥೆಗಳೊಂದಿಗೆ ಆ ಫ್ರೆಂಚ ಕಿಟಕಿ ಬಾಗಿಲುಗಳನ್ನಿರಿಸಿ ರಚಿಸಿದ ವರ್ಣಮಯ mise en scène !

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.