ಕಿರಣ ಕಿರಣಗಳ ಬೆಡಗು
ಮುತ್ತಚೆಲ್ಲಿದೆ ಇಬ್ಬನಿ
ಆವರಿಸಿದೆ ಹರುಷದ ಧ್ವನಿ
ವೈಶಾಖದ ಮುಂಜಾನೆ ಬಿಸಿಲು
ಹಬ್ಬಿ ಎಬ್ಬಿಸಿದೆ ಎಲ್ಲವನು
ಅರ್ಧ ಕಣ್ತೆರೆದ ಮೊಗ್ಗುಗಳು
ಅರಳುವೆನುತಿವೆ ಪೈಪೋಟಿಯಲಿ
ಹಕ್ಕಿಗಳ ಗಾನ ಹೂವ ಕಂಪು
ಅದರುವ ಎಲೆ ಕ್ಷೇಮ ಕೇಳುತಿವೆ
ಬಿದಿರ ಮೆಳೆಯಲಿ ನಸುಗಾಳಿ ಕೊಳಲು
ವಸಂತದ ಗೀತೆಯನು ಪಸರಿಸುತಿದೆ
ಬಳುಕಿುಣಿದು ಹರಿಯುವ ನದಿ
ಜಲಕ್ರೀಡೆ ಆಡುವ ಬಗೆಬಗೆಯ ಮೀನುಗಳು
ಕಣ್ತುಂಬಿ ಮನತುಂಬಿ ಸ್ವರ್ಗದಲಿ ನಾನು
ಇದಕಿಂತ ಬೇಕೆ ಜೀವನದಲಿ ಜೇನು
ನನ್ನ ಜೋಪಡಿಯು ಎಲ್ಲಿಂದಲೂ ದೂರ
ಏಕಾಂಗಿ ನಾನು ಇಲ್ಲಿಲ್ಲ ಸ್ನೇಹಿತರು
ಪಯಣಿಗರು ಯರೂ ಬಂದಿಲ್ಲ ಬಳಿಯಲ್ಲಿ
ಒಂಟಿಯಲ್ಲ ನಾನು ಈ ನಿಸರ್ಗದ ಸೊಬಗಲ್ಲಿ
— ಬೆಳ್ಳೂರು ಗದಾಧರ
ನಿಸರ್ಗ ಪ್ರೇಮಿ ಗದಾಧರ್ ಅವರು ಮುಂಜಾವಿನ ಸುಂದರ ಪರಿಸರವನ್ನು ತಮ್ಮ ಕವನದಲ್ಲಿ ವರ್ಣಿಸಿ ನಮ್ಮ ಮನಗಳನ್ನು ಮುದಗೊಳಿಸಿದ್ದಾರೆ. ಬಿದಿರ ಮೆಳೆಯಲ್ಲಿ ಸುಳಿಗಾಳಿ ಸುಳಿದಾಗ ಕೊಳಲಿನ ನಾದವನ್ನು ಕೇಳುವ, ವಸಂತದಲ್ಲಿ ಹಾಡುವ ಹಕ್ಕಿಗಳ ಮಧುರ ಗಾನವನ್ನು ತಮ್ಮ ಕವನದ ಸಾಲುಗಳಲ್ಲಿ ವರ್ಣಿಸುವ ಇವರ ಮನ ತಮ್ಮ ತಾಯ್ನಾಡಿನ ವೈಭವವನ್ನು ಹಂಬಲಿಸುತ್ತಿದೆ ಎಂದು ನನಗನ್ನಿಸಿದೆ. ಸ್ಕಾಟಲೆಂಡಿನ ನಿವಾಸಿಯಾದ ಇವರಿಗೆ, ಕೋಗಿಲೆಯ ಕಂಠವಲ್ಲದಿದ್ದರೂ, ಆಂಗ್ಲನಾಡಿನ ಸುಂದರ ಪಕ್ಷಿಗಳ ಕಲರವವೂ ಪ್ರೇರಣೆಯಾಗಿರಬಹುದಲ್ಲವೇ? ಸ್ಕಾಟಲೆಂಡಿನಲ್ಲಿ ನಿಸರ್ಗದ ಚೆಲುವಿಗೆ ಯಾವ ಕೊರತೆಯೂ ಇಲ್ಲ.
ಉಮಾ ವೆಂಕಟೇಶ್
LikeLike
ಸುಂದರವಾದ ಕವನ. ಎಂದೂ ಕುಗ್ಗದ ಪ್ರೇರಣೆ ಕೊಡುವ ನಿಸರ್ಗ ಸೌಂದರ್ಯ ಯಾರನ್ನೂ ಆಕರ್ಷಿಸದೆ ಇರದು. ದೂರದ ಸ್ಕಾಟ್ಲಂಡಿನಲ್ಲಿ ವಾಸಿಸುವ ಈ ಕವಿಯ ಕೊನೆಯ ಸಾಲುಗಳಲ್ಲಿ ಡಾನಿಯಲ್ ಡಿಫೋನ ರಾಬಿನ್ಸನ್ ಕ್ರೂಸೋನ ಮನೋಧರ್ಮದ ಛಾಯೆ ಉಂಟೆ? (ಆ ಕಥೆಯ ಸ್ಫೂರ್ತಿ ಅದೇ ನಾಡಿನ ಲೋಅರ್ ಲಾರ್ಗೋದ ಅಲೆಕ್ಸಾಂಡರ್ ಸೆಲ್ಕರ್ಕನ ಅನುಭವವೇ ಎನ್ನುತ್ತಾರೆ). ಆತನೂ ”ಏಕಾಂಗಿ ನಾನು, ಇಲ್ಲಿಲ್ಲ ಸ್ನೇಹಿತರು (ಮೂಲದಲ್ಲಿ ಹೀಗೆಯೇ ಇತ್ತು), ಪಯಣಿಗರು ಯಾರೂ ಬಂದಿಲ್ಲ ಬಳಿಯಲ್ಲಿ“ ಎಂದು ಹತಾಶನಾಗದೆ ವರ್ಷಗಟ್ಟಲೆ ಆಶಾವಾದಿಯಾಗಿಯೇ ಇದ್ದು ಮಿಮೋಚನೆ ಪಡೆದನಲ್ಲವೇ? ಏಕಾಂಗಿಯ ಸುತ್ತುವರೆದ ಪ್ರಬಲ ನಿಸರ್ಗ ಕಣ್ಣುಗಳನ್ನು, ಹೊಟ್ಟೆಯನ್ನು ತುಂಬಿಸುತ್ತದೆ. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ! ಒಳ್ಳೆಯ ಕವನ ವರ್ಣನೆಯ ಜೊತೆಗೆ ಕೊನೆಯಲ್ಲಿ ಕವಿಯ ದರ್ಶನವನ್ನೂ ತೋರುತ್ತದೆ.
LikeLike
ಸುಂದರವಾದ ಕವನ. ಮತ್ತೊಮ್ಮೆ ತಾಯ್ನಾಡಿನ ಪ್ರಕೃತಿಯ ಸೊಬಗು, ಬಿದಿರ ಮೆಳೆಗಳ ಕೊಳಲ ಗಾನವನ್ನು ಕವನದಲ್ಲಿ ಹರಿಸಿದ್ದೀರಿ.
ಪ್ರಕೃತಿ ಕವಿಯ ಮನಸ್ಸನ್ನು ಕೆದಕಿದಶ್ಟು ಇನ್ಯಾವ ವಿಚಾರಗಳೂ ಕೆದಕಿಲ್ಲ.
ನಿಮ್ಮಿಂದ ಇನ್ನೂ ಬರಹಗಳು ಬರಲಿ.
LikeLike
“ಕನ್ನಡ ಎನೆ ಕುಣಿದಾಡುವುದು ಎನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು.
ಕಾಮನ ಬಿಲ್ಲನು ಕಾಣುವ ಕವಿವೊಲು
ತೆಕ್ಕನೆ ಮನ ಮೈಮರೆಯುವುದು”
ಎಂದು ಕುವೆಂಪು ಅವರು ಹೇಳಿದಹಾಗೆ, ಗದಾಧರ ಅವರ ನಿಸರ್ಗದ ವರ್ಣನೆಯ ಈ ಪದ್ಯದಿಂದ ಓದುಗರ ಮನಸ್ಸೂಕೂಡ ಮೈಮರೆಯುವುದು. ಕನ್ನಡಿಗನು ಎಲ್ಲೇ ಇರಲಿ ಅವನು ಕನ್ನಡಿಗನಾಗಿಯೇ ಇರುವನು, ನಿಸರ್ಗವೂಕೂಡ ಹಾಗೇ, ಎಲ್ಲೇ ಇರಲಿ ಅದು ಎಂದೆಂದೂ ನಿಸರ್ಗವಾಗಿಯೇ ಇರುವುದು. ಅದಕ್ಕೆ ದೇಶ, ಭಾಷೆ, ಎಲ್ಲೆಗಳ ಅಲ್ಲದೆ ಮತ್ತಾವ ಅಡ್ಡಿ ಆತಂಕಗಳೂ ಇರುವುದಿಲ್ಲ. ನಿಸರ್ಗವನ್ನು ಅನುಭವಿಸುವ ಕವಿಯ ಮನಸ್ಸೂ ಕೂಡ ಹಾಗೆ ಯಾವ ಬಂಧನೆಗಳಿಗೂ ಒಳಗಾಗಿರುವುದಿಲ್ಲ. ನಿಷ್ಕಳಂಕ ನಿಸರ್ಗಕ್ಕೆ ನಿಷ್ಕಳಂಕ ಮನಸ್ಸು ಸುಸಂಗತ. ಆ ಅನುಭವ ದೈವಿಕ.
–ರಾಜಾರಾಮ ಕಾವಳೆ.
LikeLike