ಶಾಲೆಗಳಲ್ಲಿ ನಮಗಿರುವ ಆಯ್ಕೆ – ವಿನತೆ ಶರ್ಮ ಬರೆದ ಲೇಖನ

 

ಮಕ್ಕಳ ಪರ/ಸ್ನೇಹಿ, ಪ್ರಗತಿಪರ, ಅನುಭವಕಲಿಕಾ ಪರ್ಯಾಯ ವಿಧಾನ ಶಿಕ್ಷಣ  ಒಂದು ನೋಟ

 

ನೀವೊಂದು ಮಧ್ಯಾನ್ಹದ ಕೊನೆ ಹೊತ್ತಿಗೆ ಈ ಶಾಲೆಯ ಆವರಣವನ್ನು ಹೊಕ್ಕಿದ್ದೀರಿ. ಗೇಟು ದಾಟುತ್ತಿದ್ದಂತೆ ನಿಮಗೆ ಕಾಣುವುದು ಪ್ರೈಮರಿ ಮಕ್ಕಳ ಚಿಕ್ಕ ಚಿಕ್ಕ ಗುಂಪುಗಳು. ಕೆಲವರು ಓಡಾಡಿ ಜೂಟಾಟ ಆಡುತ್ತಿದ್ದಾರೆ; ಕೆಲವರು ಆ ದೂರದಲ್ಲಿ ಸಾಂಘಿಕ, ಸಹಕಾರದ ಆಟಗಳನ್ನು ಆಡುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಅಲ್ಲಲ್ಲಿ ಚದುರಿದ್ದು ಬಣ್ಣ ಹಚ್ಚುವುದೋ, ಮರಳಿನ ಆಟವೋ, ಇಲ್ಲಾ ಅಲ್ಲೇ ಇರುವ ಮರದ ಮೇಲಿನ ಮನೆಯಲ್ಲಿ ಆಟವಾಡುತ್ತಿದ್ದಾರೆ. ಅಗೋ ಅಲ್ಲಿ ನೋಡಿ ಆ ಮರದ ಮೇಲೆ ಕೆಲವು ಮಕ್ಕಳು ಜೋತಾಡುತ್ತಿದ್ದಾರೆ. ಶಾಲೆಯ ಒಳಗಡೆ ದೃಷ್ಟಿ ಹರಿಸಿದರೆ ಅಲ್ಲಿ ಕೆಲ ಮಕ್ಕಳು ಆರಾಮಾಗಿ ನೆಲದ ಮೇಲೆ ಕೂತು, ಮರದ ಬ್ಲಾಕ್ ತುಂಡುಗಳನ್ನು ಜೋಡಿಸಿ ಏನನ್ನೋ ಕಟ್ಟುತ್ತಿದ್ದಾರೆ. ಹಾಗೆ ಅಲ್ಲಿ ಇಲ್ಲಿ ಕೆಲವು ತಂದೆ ತಾಯಿಯರು ಶಾಲೆಗೆ ಸಂಬಂಧ ಪಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಶಿಕ್ಷಕರು ತಮ್ಮ ತರಗತಿಯಲ್ಲಿನ ಕಲಿಕಾ ಸಾಮಗ್ರಿಗಳನ್ನು ಎತ್ತಿ ಜೋಡಿಸಿಡುತ್ತಿದ್ದಾರೆ. ನೀವು ಮಗು ಎಲ್ಲಿ ಎಂದು ಹುಡುಕಾಡುತ್ತಿರುವಾಗ ಓಡೋಡಿ ಬರುವ ಹುಡುಗಿಯೊಬ್ಬಳು “ನಿಮ್ಮ ಮಗ ಅಲ್ಲಿ ಆ ಮರದ ತುತ್ತತುದಿಯ ಕೊಂಬೆಯ ಮೇಲಿದ್ದಾನೆ” ಎಂದು ಎಂದೇ ಉಸಿರಿನಲ್ಲಿ ಪಟ್ಟನೆ ಹೇಳಿ ಮತ್ತೆ ಮರದ ಬಳಿಗೆ ಓಡುತ್ತಾಳೆ.  ನೀವು ನಸುನಗತ್ತಾ ಶಿಕ್ಷಕರ ಬಳಿ “ನಿಮ್ಮ ಈ ದಿನ ಹೇಗಿತ್ತು, ಏನೇನು ಚಟುವಟಿಕೆಗಳನ್ನು ನಡೆಸಿದಿರಿ?” ಎಂದು ಕೇಳಿ, ಆ ಶಿಕ್ಷಕರ ಬಳಿಯಿಂದ ಸಮಾಧಾನದ ಉತ್ತರವನ್ನು ಪಡೆಯುತ್ತೀರ. ನಂತರ ಮಗನನ್ನು ಕರೆಯಲು ಮರದ ಬಳಿ ಹೋದರೆ, ಮಗರಾಯ “ಉಹುಂ, ಇಷ್ಟು ಬೇಗ ಮನೆಗೆ ಹೋಗಲ್ಲ, ನಾನು ಇನ್ನೂ ಆಟವಾಡಬೇಕು” ಎನ್ನುತ್ತಾನೆ. ಮರುದಿನ ಶನಿವಾರವಾದರೂ ಸಹ ಮಕ್ಕಳು “ಇವತ್ತೂ ಕೂಡ ನಾವು ಶಾಲೆಗೆ ಹೋಗಬಹುದಾ?” ಎಂದು ಕೇಳುತ್ತಾರೆ.

ಇದೇನಪ್ಪಾ, ಅದು ಶಾಲೆಯಾ, ಇವರೆಂತಾ ಪೋಷಕರು, ಮಗು ಮರದ ಮೇಲಾ? ಈ ಶಾಲೆಯಲ್ಲಿ ಏನಾದರೂ ಪಾಠ ಹೇಳಿ ಕೊಡುತ್ತಾರೋ ಇಲ್ಲವೋ ಎಂದು ನೀವು ಕೇಳಿ ಹುಬ್ಬೇರಿಸಬಹುದು. ಹೌದು, ಅದು ನನ್ನ ಮಕ್ಕಳು ಹೋಗುತ್ತಿದ್ದ ಶಾಲೆಯ ಪ್ರತಿದಿನದ ದೃಶ್ಯ. ಅದೊಂದು ಡೆಮೊಕ್ರಾಟಿಕ್ ಎಜುಕೇಶನ್ (Democratic Education) ಅಥವಾ ಮಕ್ಕಳ-ಸ್ನೇಹಿ, ಪ್ರಜಾಸಮಾನತೆಯುಳ್ಳ ಶಿಕ್ಷಣ ವ್ಯವಸ್ಥೆಯ ಪರ್ಯಾಯ ಶಾಲೆ. ಹೆಚ್ಚು ಜನರಿಗೆ ಹೊತ್ತಿರುವ ಹಾಗೆ ಅದು ಆಲ್ಟರ್ನೇಟಿವ್ ಸ್ಕೂಲ್ (alternative school). ಅಥವಾ ಕೆಲವು ಶಾಲೆಗಳು ಅನುಭವ ಕಲಿಕೆ ಶಾಲೆಗಳು (Experiential) ಎಂದೂ ಕರೆಯಲ್ಪಡುತ್ತವೆ.

ಮುಖ್ಯವಾಹಿನಿ ಶಾಲೆಗಳಿಗಿಂತ ಭಿನ್ನವಾಗಿರುವ ಇಂತಹ ಮಕ್ಕಳ-ಸ್ನೇಹಿ (child-friendly), ಪ್ರಜಾತಂತ್ರ/ ಸಮಾನತೆಯ (democratic, equality, radical, progressive) ಮೌಲ್ಯವುಳ್ಳ ಪರ್ಯಾಯ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಬಹು ಮುಖ್ಯ ಅಂಶವೆಂದರೆ ಮಕ್ಕಳನ್ನೊಳಗೊಂಡ, ಮಕ್ಕಳ ಪರವಾಗಿ ಇರುವ, ಅನುಭವದಿಂದ ಶಿಕ್ಷಣವನ್ನು ಪಡೆಯುವ ಪರಿ.  ಯೂನಿಫಾರ್ಮ್ ಇಲ್ಲದ, ಮಕ್ಕಳು ತಮ್ಮ ದೈಹಿಕ/ಮಾನಸಿಕ ಶಕ್ತಿಗನುಸಾರವಾಗಿ, ತಮ್ಮದೇ ವೇಗದಲ್ಲಿ ಶಿಕ್ಷರರ ನೆರವಿಂದ ಇಚ್ಛಾಪೂರ್ವಕವಾಗಿ ವಿಷಯಗಳನ್ನು ಕಲಿಯುವ, ಅಗತ್ಯವಿದ್ದಲ್ಲಿ ಮಾತ್ರ ಪರೀಕ್ಷೆಗಳನ್ನು ಬರೆಯುವ ಶಾಲೆಗಳು ಇವು. ಮಕ್ಕಳು ಶಿಕ್ಷರನ್ನು ಅವರ ಮೊದಲ ಹೆಸರಿಟ್ಟು ಕರೆಯುತ್ತಾರೆ. ಪರಸ್ಪರ ಗೌರವ, ಸ್ನೇಹ, ಬಾಂಧವ್ಯ, ಕಾಳಜಿ, ಅನುಸರಣೆ ಇಲ್ಲಿ ಸಹಜ.

ಯಾವುದೇ ಪಂದ್ಯವಿಲ್ಲ, ಹೋರಾಟವಿಲ್ಲ –  ಬದಲಾಗಿ ಇಲ್ಲಿರುವುದು ಸಹಕಾರ. ನೀನು ಕಡಿಮೆ, ನಾನು ಹೆಚ್ಚು ಎಂಬ ಸ್ಪರ್ಧಾತ್ಮಕ ಮನೋಭಾವವನ್ನು ತಿರಸ್ಕರಿಸಿ ಎಲ್ಲರೂ ಸಮಾನ, ಎಲ್ಲರಿಗೂ ಅವರ ಇಷ್ಟದಂತೆ ಕಲಿಯುವ ಹಕ್ಕಿದೆ, ನಾವೆಲ್ಲರೂ ಒಟ್ಟಾಗಿ ಕಲಿಯೋಣ  ಎನ್ನುವುದು ಪ್ರಗತಿಪರ ಶಾಲೆಯ ತತ್ವ. ಹೊರಾಂಗಣದಲ್ಲಿ, ಅನೇಕ ಚಿಕ್ಕ-ಗುಂಪು ಸನ್ನಿವೇಶದಲ್ಲಿ, ಇಡೀ ಶಾಲೆಯಾಗಿ, ಕಲೆ/ಸಾಹಿತ್ಯ/ಕರಕುಶಲ ಕೈಗೆಲಸಗಳು/ ಮಗು ಆರಿಸಿಕೊಳ್ಳುವ ವಿಶೇಷ ವಿಷಯಗಳು … ಹೀಗೆ ಪ್ರತಿಯೊಂದು ಶಾಲೆಯಲ್ಲೂ ವಿಶಿಷ್ಟವಾದ ಅಂಶಗಳು, ಅಂಗಗಳಿರುತ್ತವೆ.

ಅನುಸಂಧಾನ, ಹಂಚಿಕೊಳ್ಳುವಿಕೆ, ಪರಸ್ಪರ ಬೆಂಬಲ ಹಾಗೂ ಪ್ರತಿಯೊಬ್ಬರನ್ನೂ ಅರ್ಥ ಮಾಡಿಕೊಳ್ಳುವ ಪರಿಸರ ಇದು. ಆದರೆ ಇಂತಹ ಶಾಲೆಗಳು ಸರಕಾರದಿಂದ ಹೆಚ್ಚು (ಅಥವಾ ಸೊನ್ನೆ ಸಹಾಯ) ಹಣಸಹಾಯವನ್ನು ಪಡೆಯದೇ ತಮ್ಮದೇ ಅನುಭವ-ಕಲಿಕಾ ಪೂರ್ವಕವಾದ ಪಾಟ ಪಟ್ಯಕ್ರಮವನ್ನು ಅಳವಡಿಸಿಕೊಂಡಿರುತ್ತವೆ. ಹಾಗಾಗಿ ಮಕ್ಕಳು ಕೊಡುವ ಶಾಲಾ ಫೀಸ್ ಜಾಸ್ತಿ. ಕೆಲ ಶಾಲೆಗಳು ಬಹಳಾ ದುಬಾರಿಯಾಗಿರಬಹುದು, ಮತ್ತೆ ಕೆಲವು ಸುಮಾರು ದುಬಾರಿಯಾಗಬಹುದು. ಅನೇಕ ಕುಟುಂಬಗಳಿಗೆ ಇಂತಹ ಶಾಲೆಗಳು ಕೈಗೆಟುಕಲಾರದ  ಹಣ್ಣು. ಇಂತಹ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಕಡಿಮೆ. ಶಿಕ್ಷರ ಸಂಖ್ಯೆ ಜಾಸ್ತಿ. ಕೆಲಬಾರಿ ಪೋಷಕರು ಕೂಡ ಮಕ್ಕಳ ಬಳಿ ತಮಗೆ ವಿಶೇಷವಾಗಿ ತಿಳಿದಿರುವ ವಿಷಯಗಳನ್ನು, ಕಲೆಗಳನ್ನು, ಸಾಮರ್ಥ್ಯಗಳನ್ನು ಹಂಚಿಕೊಳ್ಳುತ್ತಾರೆ. ಮಕ್ಕಳು/ ಪೋಷಕರು ಶಾಲಾ ಕಮಿಟಿಗಳಲ್ಲಿ, ಬೋರ್ಡ್ ಗಳಲ್ಲಿ ಸಕ್ರಿಯವಾಗಿ ಪಾತ್ರ ವಹಿಸಿ, ಶಾಲೆ ಸರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ತೊಡಗಿರುತ್ತಾರೆ.  ಪ್ರತಿ ದಿನ ಶಾಲೆ ನಡೆಯುವತ್ತ ಬೇಕಿರುವ ಸಾಮಗ್ರಿಗಳನ್ನು, ಸಂಪನ್ಮೂಲಗಳನ್ನು, ಹಣ ಸಹಾಯ ಇತ್ಯಾದಿಗಳನ್ನು ಹುಡುಕಿ/ಪಡೆದು/ಹಂಚುವ/ಸಂಪಾದಿಸುವ ಕೆಲಸಗಳಲ್ಲಿ ಎಲ್ಲರೂ ಇರುತ್ತಾರೆ. ಎಲ್ಲರ ಒಗ್ಗಟ್ಟಿನ ಬಲದಿಂದ ಸಾಂಘಿಕವಾಗಿ  ಇಂತಹ ಶಾಲೆ ನಡೆಯುತ್ತದೆ.

ಮಕ್ಕಳ ಹಕ್ಕುಗಳಿಗೆ ಇಲ್ಲಿ ಪ್ರಾಧಾನ್ಯತೆ. ಮಕ್ಕಳಿಗೆ ಮತ್ತು ಶಿಕ್ಷರಿಗೆ ಸಮಾನ ಅಧಿಕಾರ. ಮಕ್ಕಳನ್ನು ದರ್ಪದಿಂದ, ಅಧಿಕಾರದ ದನಿಯಿಂದ ಮಾತನಾಡಿಸುವ ದೃಶ್ಯಗಳು ಕಾಣುವುದಿಲ್ಲ. ವರ್ತನ-ಸಂಬಂಧಪಟ್ಟ ವೈಪರೀತ್ಯಗಳಿರುವ ಮಕ್ಕಳು, ಕಲಿಕೆಗೆ ಸಂಬಂಧಿಸಿದ ವೈಪರೀತ್ಯಗಳಿರುವ ಮಕ್ಕಳು ಮತ್ತು ಅಂತಹ ಸಮಸ್ಯೆಗಳು/ವೈಪರೀತ್ಯಗಳು ಇಲ್ಲದ ಮಕ್ಕಳು ಎಲ್ಲರೂ ಒಟ್ಟಾಗಿ ಬೆರೆತು ಕಲಿಯುವ ವಾತಾವರಣ ಇಲ್ಲಿ ಕಾಣುವುದು ಸಾಮಾನ್ಯ. ಇಂತಹ ವಾತಾವರಣ ಪ್ರತಿಯೊಂದು  ಪ್ರಗತಿಪರ/ಪರ್ಯಾಯ ಶಾಲೆಯಲ್ಲಿ ಇರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಹಾಗಾಗಿ ಎಷ್ಟೋ ವಿಷಯಗಳ ನಿರ್ಧಾರ ಆಯಾ ನಿರ್ದಿಷ್ಟ ಶಾಲೆಗೇ ಸೇರಿರುತ್ತದೆ. ಇಂತಹ ‘ಪ್ರತಿಯೊಂದು ಶಾಲೆಯೂ ಭಿನ್ನ’ ಎಂಬ ಸನ್ನಿವೇಶ ಮುಖ್ಯವಾಹಿನಿಗೆ ತದ್ವಿರುದ್ಧವಾದುದು.

ಅಂತಹ ಭಿನ್ನತೆಯೇ ಕೆಲ ಬಾರಿ ಶಾಲೆಗೆ ಶತ್ರುವಾಗಬಹುದು. ಶಾಲೆಯ ಕೆಲಮಂದಿ ಅಥವಾ ಶಾಲೆಯನ್ನು ಶುರುಮಾಡಿದ ಮಂದಿ ಸೇರಿಕೊಂಡು ಕಣ್ಣಿಗೆ ಕಾಣದ ರೀತಿ ಅಧಿಕಾರವನ್ನು ಚಲಾಯಿಸಬಹುದು, ಯಾವ ಮಗು/ಕುಟುಂಬ ಶಾಲೆಗೆ ಸೇರಬಹುದು ಎಂಬ ನಿರ್ಧಾರ ಕೂಡ ಆ ಕೆಲವರೇ ತೀರ್ಮಾನಿಸಬಹುದು. ಶಾಲೆಗೇ ಗೂಟ ಹೊಡೆದುಕೊಂಡು ವರ್ಷಗಳ ಕಾಲ ಕೂತ ಹಿರಿಯರು ಆ ಸ್ಥಾನದಿಂದ ಇಳಿಯದೆ ಕಿರಿಕಿರಿ ಮಾಡಿ, ಹೊಸ ನೀರು ಹರಿಯದಂತೆ ತಡೆಯಬಹುದು. ಅಥವಾ ಹೊಸದಾಗಿ ನೇಮಕಗೊಂಡ ಮುಖ್ಯಸ್ಥರು ಪ್ರಜಾತಂತ್ರ ವಿಧಾನಕ್ಕೆ, ಮಕ್ಕಳ/ಪೋಷಕರ ದನಿಗೆ ಬೆಲೆಕೊಡದೇ ಶಾಲೆಗೆ ಕೆಟ್ಟ ಹೆಸರನ್ನು ತರಬಹುದು. ಸರಕಾರದಿಂದ ಬರುವ ಅನೇಕಾನೇಕ ಕಿರಿಕಿರಿಯನ್ನು ತಾಳದೆ ಹೋಗಬಹುದು. ಇಂತಹ ಅನೇಕ ಸಂಧರ್ಭಗಳು ನಡೆದ ಉದಾಹರಣೆಗಳೂ ಇವೆ. ಶಾಲೆಗಳು ಮುಚ್ಚಿವೆ,  ಮರು ತೆರೆದಿವೆ; ಹೊಸ ರೂಪವನ್ನು ಪಡೆದಿವೆ, ಹೆಸರನ್ನು ಬದಲಾಯಿಸಿಕೊಂಡಿವೆ. ನೆಲ ಕಚ್ಚಿ ಹೋದರೂ ಪುನರ್ ಜನ್ಮ ಪಡೆದು ಹಕ್ಕಿಯಂತೆ ಹಾರಿವೆ. ಮಕ್ಕಳು/ಕುಟುಂಬಗಳು ತಂಡೋಪ ತಂಡವಾಗಿ ಬಿಟ್ಟುಹೋದ ಎಷ್ಟೋ ಸಂದರ್ಭಗಳು ಇವೆ. ಹಾಗಾಗಿ ಇಂತಹ ಶಾಲೆಗಳನ್ನು ನಡೆಸುವುದೇ ಬಹು ಕಷ್ಟ ಎನ್ನುವ ಮಾತೂ ಇದೆ.

ಇಂತಹ ಮಕ್ಕಳ-ಕೇಂದ್ರಿತ ಅನುಭವ-ಕಲಿಕಾ ಶಾಲೆಗಳನ್ನು ಹಲವೇ ಹಲವು ಪೋಷಕರು ಸೇರಿಕೊಂಡು ಕೆಲ ನಿರ್ದಿಷ್ಟ ಮೌಲ್ಯಗಳನ್ನು ಅನುಸರಿಸುತ್ತಾ ಅವನ್ನು ಹುಟ್ಟು ಹಾಕಿದ ಸಂದರ್ಭಗಳು ಇವೆ. ಉದಾಹರಣೆಗೆ ನಾನು ಮೇಲೆ ವಿವರಿಸಿದ ನಮ್ಮ ಮಕ್ಕಳು ಹೋಗುತ್ತಿದ್ದ ಆಸ್ಟ್ರೇಲಿಯಾದ  ಬ್ರಿಸ್ಬನ ನಗರದ ಪಯ್ನ್ ಕಮ್ಯೂನಿಟಿ ಶಾಲೆ. ಅಥವಾ ಒಬ್ಬ ವ್ಯಕ್ತಿ ತನ್ನ ಮೌಲ್ಯಗಳನ್ನು ನಂಬಿಕೆಗಳನ್ನು ಅನುಸರಿಸಿ ತಾನೇ ಶಾಲೆಯೊಂದನ್ನು ಆರಂಭಿಸಿದ ಉದಾಹರಣೆಯೂ ಇದೆ. ಉದಾಹರಣೆಗೆ ಇಂಗ್ಲೆಂಡಿನ ಸಮ್ಮರ್ ಹಿಲ್ ಶಾಲೆ (A.S.Neill’s Summerhill school)  ಮತ್ತು ಈಗಿರುವ ಸಾನ್ದ್ಸ್ ಸ್ಕೂಲ್ (Sands School).

ಇಂದು ಹಲವಾರು ಪಾಶ್ಚಾತ್ಯ ದೇಶಗಳಲ್ಲಿರುವ ಪರ್ಯಾಯ ಶಿಕ್ಷಣ /ಡೆಮೊಕ್ರಾಟಿಕ್ ಶಾಲೆಗಳ ಪಟ್ಟಿಯಲ್ಲಿ ಸಮ್ಮರ್ ಹಿಲ್ ಶಾಲೆ ಮಾದರಿ ಶಾಲೆ ಎಂದು ಗುರುತಿಸಲ್ಪಟ್ಟಿದೆ. ಎ. ಎಸ್. ನೀಲ್ ಎಂಬಾತ  1921 ರಲ್ಲಿ ಆರಂಭಿಸಿದ ಈ ಸಮ್ಮರ್ ಹಿಲ್ ಶಾಲೆ ಅತ್ಯಂತ ವಿದ್ಯಾರ್ಥಿ-ಸ್ನೇಹಿ, ಪ್ರಗತಿಪರ ಶಿಕ್ಷಣಕ್ಕೆ ಅತ್ಯುತ್ತಮ ಹೆಸರನ್ನು ಹೊಂದಿರುವ ಶಾಲೆ. ಬ್ರಿಟಿಷ್ ಸರಕಾರ ಈ ಶಾಲೆಯನ್ನು ಮುಚ್ಚಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಅನೇಕ ಸರಕಾರೀ ಮತ್ತು ಜನಸಾಮಾನ್ಯರ, ಪೋಷಕರ, ಪ್ರಗತಿಪರ ಚಿಂತಕರ ಬೆಂಬಲದಿಂದ ಶಾಲೆ ಮತ್ತೆ ಮತ್ತೆ ಪುಟಿದೆದ್ದು, ಈಗ ಪ್ರಪಂಚ ವಿಖ್ಯಾತವಾಗಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ ನನ್ನ ಕಣ್ಣ ಮುಂದೆ ಬರುವುದು ರವೀಂದ್ರನಾಥ್ ಟಾಗೋರ್ ರ ಶಾಂತಿ ನಿಕೇತನ. ಅವರು ಶಿಕ್ಷಣದಲ್ಲಿ ಅಳವಡಿಸಿದ ಹೊರಾಂಗಣ ಪರಿಸರದಲ್ಲಿ ಪಾಟಕಲಿಕೆ, ನಾಟ್ಯ, ಸಂಗೀತ, ಕಲೆಗಳು, ಮರಕೆಲಸ, ಒಂದೇ ಎರಡೇ! ಹಿಂದೆ ಕರ್ನಾಟಕದಲ್ಲಿ ಶಿವರಾಮ ಕಾರಂತರು ಆರಂಭಿಸಿ ನಡೆಸಿದ  ಬಾಲವನ ಮತ್ತೊಂದು ಅತ್ಯುತ್ತಮ ಉದಾಹರಣೆ. ಮತ್ತೊಂದು ಉದಾಹರಣೆಯೆಂದರೆ ಇಂಗ್ಲೆಂಡಿನ ಪೈಲಟ್ ಡೇವಿಡ್ ಹೊರ್ಸಬುರ್ಗ್ಹ್ ಕೆಲಸ ಬಿಟ್ಟು, ಇಂಗ್ಲೆಂಡ್ ಬಿಟ್ಟು ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿ ಹಳ್ಳಿ ಮಕ್ಕಳಿಗೆಂದು ಆರಂಭಿಸಿದ ಪ್ರಾಯೋಗಿಕ ಶಿಕ್ಷಣ ಶಾಲೆ ನೀಲ್ ಭಾಗ್ . ಅವರ ಬಳಿ ಅವರ ಹೊಸ ಪ್ರಯೋಗ ಶಿಕ್ಷಣದ ರೀತಿಯನ್ನು ಕಲಿತು ಅರಿತು ಅವರ ಶಿಷ್ಯಂದಿರು ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಸಿದ ಶಿಕ್ಷಣ ಪ್ರಯೋಗಗಳು. ಇವುಗಳಲ್ಲಿ ಬೆಂಗಳೂರಿನ ಕನಕಪುರ ರಸ್ತೆಯ ಬದಿಯಿರುವ ಮಾಲತಿ ಅಕ್ಕನ ‘ವಿಕಸನ’ ಕೇಂದ್ರ ದೇಶ ವಿದೇಶಗಳಿಂದ ಪರ್ಯಾಯ ಶಿಕ್ಷಣದಲ್ಲಿ ಆಸಕ್ತಿಯಿರುವವರನ್ನು ಆಕರ್ಷಿಸುತ್ತದೆ.

ಮತ್ತೊಂದು ರೀತಿಯ ಪ್ರಾಯೋಗಿಕ, ಪ್ರಗತಿಪರ, ಭಿನ್ನತೆಯುಳ್ಳದ್ದು ಜಿದ್ದು ಕೃಷ್ಣಮೂರ್ತಿ ತತ್ವವನ್ನು ಅನುಸರಿಸುವ ವ್ಯಾಲಿ ಶಾಲೆಗಳು. ಹಿಂದೊಂದು ಕಾಲದಲ್ಲಿ ಬೆಂಗಳೂರಿನ ಹೊರಪ್ರದೇಶದ ವ್ಯಾಲಿ ಶಾಲೆಯೆಂದರೆ (The Valley School)  ನಮಗೆಲ್ಲಾ ಅದೊಂದು ತರಹದ ಮಾಂತ್ರಿಕ ಶಾಲೆ, ಉಳ್ಳವರಿಗೆ ಮಾತ್ರ ಲಭ್ಯ, ಸಮಾಜದ ಮೇಲ್ವರ್ಗದ ಜನರ ಮಕ್ಕಳು ಮಾತ್ರ ಹೋಗುವ ಶಾಲೆ, ಅಥವಾ ‘ನಮ್ಮಂತಿರದ’ ಬೇರೆ ಥರ ಬದುಕುವ ಜನರು ಮಾತ್ರ ಹೋಗುವ ಶಾಲೆ ಎಂಬ ಭಾವನೆ. ಇಂದಿರಾ ಗಾಂಧಿಯ ಮೊಮ್ಮಗ ವರುಣ್ ಗಾಂಧೀ ಆ ವ್ಯಾಲಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ ಎನ್ನುವುದು ದೊಡ್ಡ ವಿಷಯವಾಗಿತ್ತು.

ನಾನು ಶಾಲೆಯಲ್ಲಿ ಓದುತ್ತಿದ್ದಾಗ ಪತ್ರಿಕೆಗಳಲ್ಲಿ ವ್ಯಾಲಿ ಸ್ಕೂಲ್ ಬಗ್ಗೆ ಓದಿದ್ದೆ. ನನಗೆ ಅಂತಹ ಶಾಲೆಗಳ ಬಗ್ಗೆ ಕುತೂಹಲದ ಜೊತೆಗೆ ಆಸಕ್ತಿ ಕೂಡ ಬೆಳೆಯಿತು. ಹಾಗಾಗಿ ಮಾಲತಿ ತಮ್ಮ ವಿಕಸನ ಕೇಂದ್ರವನ್ನು ಆರಂಭಿಸಿದ್ದ ಹೊಸತರಲ್ಲಿ ಒಮ್ಮೆ ಹೋಗಿ ನೋಡಿದೆ, ಪರ್ಯಾಯ/ಪ್ರಗತಿಪರ ಶಾಲೆಗಳ ಮೋಹಕ್ಕೆ ಬಿದ್ದೆ! ಕಲಿಕೆಯೆಂದರೆ ಹೀಗಿರಬೇಕು, ಯಾವುದೇ ನಿರ್ಬಂಧ, ಚೌಕಟ್ಟುಗಳಿಲ್ಲದೆ ಮಕ್ಕಳು ತಮ್ಮ ಕುತೂಹಲವನ್ನು ಅನುಸರಿಸಿ, ಮುಕ್ತ ವಾತಾವರಣದಲ್ಲಿ ಕಲಿಯುವ ಅಂತಹ ಶಾಲೆಗಳೆಂದರೆ ನನಗೆ ಬಹಳ ಅಚ್ಚುಮೆಚ್ಚು. ಅವುಗಳ ಹುಟ್ಟು, ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವುದೆಂದರೆ ನನಗೆ ಬಹಳಾ ಪ್ರೀತಿ. ಅವಕಾಶ ಸಿಕ್ಕಿದಾಗೆಲ್ಲಾ ಅಥವಾ ಅವಕಾಶ ಮಾಡಿಕೊಂಡು ಪ್ರಗತಿಪರ ಶಾಲೆಗಳಿಗೆ ಭೇಟಿ ಕೊಟ್ಟು ಅವುಗಳ ಬಗ್ಗೆ ಕಲಿಯುವುದು ನನಗಿರುವ ಒಂದು ರೀತಿಯ ಪರಿಪಾಠ.

ಈಗ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಅನೇಕ ಪ್ರಗತಿಪರ, ಪರ್ಯಾಯ ಶಾಲೆಗಳಿವೆ. ಉದಾಹರಣೆಗೆ ಮಾಗಡಿಯ ಹತ್ತಿರ ಇರುವ ಸೆಂಟರ್ ಫಾರ್ ಲರ್ನಿಂಗ್ (Centre for Learning) , ಕನಕಪುರ ರಸ್ತೆಯ ಶಿಬುಮಿ (Shibumi) ಶಾಲೆ. ಜಿದ್ದು ಕೃಷ್ಣಮೂರ್ತಿ ತತ್ವವನ್ನು ಅಲ್ಪ ಸ್ವಲ್ಪ ಬದಲಿಸಿಕೊಂಡು ಜನ್ಮ ತಳೆದ ಹೊಸ ಹೊಸ ಶಾಲೆಗಳು, ಪರಿಸರ ಪ್ರೇಮಿಗಳಿಗೆ ಬೇಕಾದ ಶಾಲೆ, ಆರ್ಟ್ಸ್ ವಿಷಯಗಳನ್ನು ಮುಖ್ಯವಾಗಿಟ್ಟುಕೊಂಡ ಶಾಲೆ, ಯಾವುದೇ ಯಾರದೇ ತತ್ವವನ್ನು ಅನುಸರಿಸದ ತೀರ ಪ್ರಾಯೋಗಿಕ ಫಿಲೋಸೋಫಿಯುಳ್ಳ ಶಾಲೆ, ಹೀಗೆ ಬೇಕಾದಷ್ಟು ಪ್ರಗತಿಪರ ಪರ್ಯಾಯ ಶಾಲೆಗಳಿವೆ. ಇವು ಹೆಚ್ಚು ಹೆಚ್ಚು ಮಕ್ಕಳ ಆಯ್ಕೆ/ನಿರ್ಧಾರ/ಭಾಗವಹಿಸುವಿಕೆಗಳನ್ನ ಅಳವಡಿಸಿಕೊಂಡು, ವಿದೇಶಗಳ ಇತರೆ ಪರ್ಯಾಯ ಮತ್ತು ಪ್ರಗತಿಪರ ಶಿಕ್ಷಣವನ್ನು ನೋಡಿ, ಗಮನಿಸಿ, ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡ ಶಾಲೆಗಳು.

ಪರ್ಯಾಯ ಶಿಕ್ಷಣದಲ್ಲಿ ಮಾಂಟೆಸರಿ ವಿಧಾನ (Montessori methodology), ಸ್ಟೈನರ್ ವಿಧಾನ (Steiner schools) ಮತ್ತು ರೆಜ್ಜಿಯೋ ಎಮಿಲಿಯಾ (Reggio Emilia methodology) ವಿಧಾನ ಅಳವಡಿಸಿಕೊಂಡಿರುವ ಶಾಲೆಗಳು ಕೂಡ ಬಹಳಷ್ಟು ಇವೆ. ಎಮಿಲಿಯಾ ವಿಧಾನವನ್ನು ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಅನುಸರಿಸುತ್ತಿದ್ದಾರೆ. ಮಕ್ಕಳ ಜೊತೆ ಮಾತು ಕತೆ ಮೂಲಕ ಅವರ ವ್ಯಕ್ತಿ ಚಿತ್ರವನ್ನು ರಚಿಸುತ್ತಾರೆ. ಮಕ್ಕಳ ಡ್ರಾಯಿಂಗ್, ಕಲೆ, ಬಣ್ಣದ ಚಿತ್ರಗಳನ್ನು, ಮಕ್ಕಳ ಬರಹಗಳನ್ನು ಒಪ್ಪ ಮಾಡಿ ಅವುಗಳ ಮೂಲಕ ಮಕ್ಕಳ ಬೆಳವಣಿಗೆ, ಅವರ ಅಭಿರುಚಿಗಳು, ಅವರ ವ್ಯಕ್ತಿತ್ವ, ಆಸಕ್ತಿ ಮುಂತಾದುವುಗಳನ್ನ ತಿಳಿದುಕೊಳ್ಳುವ ವಿಧಾನ ಇದು.  ರುಡೊಲ್ಫ್ ಸ್ಟೈನರ್ ತಾವು ಹಿಂದೂ ಧರ್ಮದ ದಾರ್ಶನಿಕತೆಯಿಂದ ಪ್ರಭಾವಿತರಾಗಿ, ಮರುಚಿಂತನೆ ನಡೆಸಿ ಶುರುಮಾಡಿದ ಸ್ಟೈನರ್ ಶಿಕ್ಷಣ ವಿಧಾನ ಕೂಡ ಭಾರತದಲ್ಲಿ ಪ್ರಸಿದ್ಧಿ.

ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಅಲ್ಲದೆ ನಮ್ಮ ಭಾರತದಲ್ಲೂ ಕೂಡ ಮಾಂಟೆಸರಿ ಶಿಕ್ಷಣ ವಿಧಾನ ಬಹಳಾ ಪ್ರಸಿದ್ಧಿ; ಹಾಗೂ ಅನೇಕರಿಗೆ ಲಭ್ಯ ಕೂಡ. ಬೆಂಗಳೂರಿನಲ್ಲಿರುವ ಭಾರತೀಯ ಮಾಂಟೆಸರಿ ಕೇಂದ್ರ ನಡೆಸುವ ತರಬೇತಿಗಳು, ಕೋರ್ಸ್ ಗಳು ಬಹಳ ಜನರನ್ನು ಮುಟ್ಟಿದೆ. ಮಾರಿಯಾ ಮಾಂಟೆಸರಿ ಭಾರತದಲ್ಲಿ ವಾಸವಿದ್ದುದರಿಂದ ಮತ್ತು ಅವರ ಶಿಕ್ಷಣ ವಿಧಾನವನ್ನು ಹೇಳಿಕೊಟ್ಟು ಅವರೇ ತರಬೇತಿ ಕೊಟ್ಟ ಅನೇಕ ಶಾಲೆಗಳು, ತರಬೇತಿ ಪಡೆದ ಅನೇಕ ಮಾಂಟೆಸರಿ ಹಿರಿಯರು ಆ ವಿಧಾನವನ್ನು ಜನಪ್ರಿಯಗೊಳಿಸಿದ್ದಾರೆ.

ಇದಲ್ಲದೆ, ಇತ್ತೀಚಿನ ಹದಿನೈದು ವರ್ಷಗಳಲ್ಲಿ ಬದಲಾವಣೆಯ ಗಾಳಿ ಎಲ್ಲಾ ಕಡೆ ಬೀಸಿದಂತೆ ಪ್ರಗತಿಪರ/ಪರ್ಯಾಯ ಶಿಕ್ಷಣ ಕ್ಷೇತ್ರದಲ್ಲೂ ಬೀಸಿ, ಅನೇಕ ಆಲ್ಟರ್ನೇಟಿವ್ ಶಾಲೆಗಳು ಹುಟ್ಟಿಕೊಂಡಿವೆ. ಬೆಂಗಳೂರಿನಲ್ಲಿ ಹೊಸ ಬಡಾವಣೆಗಳು ಹುಟ್ಟಿದಂತೆಲ್ಲಾ, ಹೊಸ ಪೀಳಿಗೆಯ ಹೆಚ್ಚು ಓದಿರುವ, ವಿದೇಶಗಳನ್ನು ಸುತ್ತಿರುವ, ಹಣವಿರುವ ಪೋಷಕರಿಗೆ ಬೇಕಾಗಿದ್ದ ಆ ಹೊಸ ಆಲ್ಟರ್ನೇಟಿವ್ ಶಾಲೆಗಳು ಅಂತಹ ಹೊಸ ಬಡಾವಣೆಗಳಲ್ಲಿ ಹೆಚ್ಚು ಕಾಣುತ್ತವೆ.

ಸಮ್ಮರ್ ಹಿಲ್ ಶಾಲೆಯ ಮಾದರಿಯಲ್ಲಿ ಯೂರೋಪಿನಲ್ಲಿ, ಆಸ್ಟ್ರೇಲಿಯಾದಲ್ಲಿ (ಮೇಲ್ಬೋರ್ನ ನಗರದ ಪ್ರೆಶಿಲ್ ಶಾಲೆ, ದಿ ವಿಲೇಜ್ ಸ್ಕೂಲ್, ಸಿಡ್ನಿ ನಗರದ ಕುರುಮ್ಬೀನ ಶಾಲೆ, ಬ್ರಿಸ್ಬನ ನಗರದ ಬ್ರಿಸ್ಬನ ಇಂಡಿಪೆಂಡೆಂಟ್ ಶಾಲೆ), ಇತ್ತೀಚಿಗೆ ಬ್ರೆಜಿಲ್ ನಲ್ಲಿ, ಸ್ಪೇನ್ನಲ್ಲಿ, ಭಾರತ/ಬೆಂಗಳೂರಿನಲ್ಲಿ ಹೀಗೆ ಪ್ರಪಂಚದ ಬೇರೆ ಬೇರೆ ಕಡೆ ಪರ್ಯಾಯ ಪ್ರಗತಿಪರ ಶಿಕ್ಷಣ ಪ್ರಯತ್ನಗಳು ನಡೆಯುತ್ತಿವೆ. ಅತ್ತ ಅಮೆರಿಕೆಯಲ್ಲೂ ಸಹ ಸಡ್ಬರಿ (Sudbury) ಶಾಲೆಯಂತಹ ಅನೇಕ ಪ್ರಗತಿಪರ ಶಿಕ್ಷಣ ಪ್ರಯತ್ನಗಳು ಇವೆ. ಇಂತಹ ಶಾಲೆಗಳ ಬಗ್ಗೆ ಮತ್ತು ಅವರುಗಳು ನಡೆಸುವ ಪ್ರತಿ ವರ್ಷದ ಕಮ್ಮಟಗಳು, ಕಾನ್ಫರೆನ್ಸ್ ಗಳು, ಮೇಳಗಳ ಬಗ್ಗೆ, ಮತ್ತು ಪ್ರಗತಿಪರ ಶಿಕ್ಷಣದಲ್ಲಿ ಬಳಸುವ ಅನೇಕ ಸಂಪನ್ಮೂಲಗಳ ವಿವರಗಳು, ಪುಸ್ತಕಗಳ, ಬರಹಗಳ ಬಗ್ಗೆ ನಿಮಗೆ ಹೆಚ್ಚು ತಿಳಿದುಕೊಳ್ಳಬೇಕೆಂದರೆ ಈ ಅಂತರ್ಜಾಲ ಕೊಂಡಿಗಳನ್ನು ಒತ್ತಿರಿ:  http://www.idenetwork.org/ ; http://www.idec2015.org/#&panel1-2  ಮತ್ತು   http://www.educationrevolution.org

ಈಗ ಪರ್ಯಾಯ/ಪ್ರಗತಿ ಪರ ಶಾಲೆಗಳ ಸಂಖ್ಯೆ ಹೆಚ್ಚುತ್ತಿವೆ. ನಾನಾ ಕಾರಣಗಳಿಂದ ಎಷ್ಟೋ ಮಕ್ಕಳು ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಯಲ್ಲಿ ಇಷ್ಟವಿಲ್ಲದೆ ಸಿಕ್ಕಿಕೊಂಡು ನಲುಗಿದ ಪರಿಸ್ಥಿತಿಯಿದ್ದಾಗ, ಅದರಲ್ಲಿ ಕೆಲವರಿಗೆ ಇಂತಹ ಪ್ರಗತಿಪರ ಶಾಲೆಗಳು ಲಭ್ಯವಾಗಿ ವರದಾನವಾಗಿವೆ. ಹೆಚ್ಚು ಮಂದಿಗೆ ಇಂತಹ ಪ್ರಗತಿಪರ ಶಾಲೆಗಳು ಇಷ್ಟವಾಗುತ್ತಿದೆ.

ಎಷ್ಟೋ ಮಕ್ಕಳು “ಶಾಲೆಗೇ ಹೋಗಲು ಇಷ್ಟವಿಲ್ಲ” ಎನ್ನುವುದನ್ನು ನಾವು ಕೇಳುತ್ತೀವಿ. ಮುಖ್ಯವಾಗಿರುವ ಕಾರಣ ಈಗಿರುವ ಶಿಕ್ಷಣ ವ್ಯವಸ್ಥೆ ಮತ್ತು ವಿಧಾನ ವಯಸ್ಕರಿಂದ ವಯಸ್ಕರಿಗಾಗಿ ಹಿಂದೆ ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಕೆಲಸಗಾರರನ್ನು ತಯಾರಿಸಲು ರಚಿತವಾದದ್ದು. ಈಗಲೂ ಕೂಡ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬರೆಯುವುದು/ಓದುವುದು ಮತ್ತು ಗಣಿತಕ್ಕೆ ಹೆಚ್ಚು ಗಮನ. ಬೇರೆ ವಿಷಯಗಳಿಗೆ ಇಲ್ಲ. ಮಗು ಗಣಿತದಲ್ಲಿ ಕುಂಟಿದರೆ  ಒಂದು ಹಣೆಪಟ್ಟಿ, ಸರಿಯಾಗಿ ಓದುವುದಿಲ್ಲ/ಬರೆಯುವುದಿಲ್ಲ ಎಂದರೆ ಇನ್ನೊಂದು ತರಹದ ಹಣೆಪಟ್ಟಿ. ಮಗುವಿಗೆ ಸಂಗೀತದಲ್ಲಿ ಅಥವಾ ಕಲೆಗಳಲ್ಲಿ ಆಸಕ್ತಿಯಿದ್ದರೂ ಶಾಲೆಗಳಲ್ಲಿ ಆ ವಿಷಯಗಳು ಗೌಣ, ಅವುಗಳಿಗೆ ಪ್ರಾಧಾನ್ಯತೆಯಿಲ್ಲ. ಅನೇಕ ಮಕ್ಕಳು ಬೆಳೆಯುತ್ತಾ ತಮ್ಮ ಶಿಕ್ಷಣವನ್ನು ದ್ವೇಷಿಸುವ ಸಂದರ್ಭಗಳು ನಮ್ಮ ಕಣ್ಣ ಮುಂದಿವೆ. ಕಲಿಕೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ದಿನದಿನವೂ ಹೆಚ್ಚುತ್ತಿವೆ. ಸಹಿಸಲಾರದ ಪೈಪೋಟಿ, ಪಂದ್ಯ, ಗೆಲ್ಲುವುದೇ ಮುಖ್ಯ ಎನ್ನುವ ಈ ಕಾಲದಲ್ಲಿ ಶಿಕ್ಷಣದ ಅನುಭವವೂ ಕೂಡ ಪಂದ್ಯದಾಟ  ಆಗಿರುವುದು ಬಹಳ ದುರಾದೃಷ್ಟಕರ. ಮತ್ತು ಆತಂಕ ಪಡಬೇಕಾದ ವಿಷಯ.

ಪ್ರಗತಿಪರ/ಪರ್ಯಾಯ/ಪ್ರಜಾ ಪ್ರುಭುತ್ವದ ಶಾಲೆಗಳ ತತ್ವವನ್ನು ಸ್ವಲ್ಪ ಮಟ್ಟಿಗೆ ಮುಖ್ಯವಾಹಿನಿ ಶಾಲೆಗಳು ಅನುಸರಿಸಿದರೆ ಹೆಚ್ಚು ಹೆಚ್ಚು ಮಕ್ಕಳು ತಮ್ಮ ಶಿಕ್ಷಣವನ್ನು ಇಷ್ಟಪಡುವ ಹಾಗಾಗುತ್ತದೆ. ಮಕ್ಕಳ ಮಾತಿಗೆ, ದನಿಗೆ, ನಿರ್ಧಾರಗಳಿಗೆ ಮತ್ತು ಭಾಗವಹಿಸುವಿಕೆಗೆ ಮಾನ್ಯತೆ ಮತ್ತು ಮನ್ನಣೆ ಕೊಡುವ ವಾತಾವರಣ ಎಲ್ಲಾ ಶಾಲೆಗಳಲ್ಲೂ ನಿರ್ಮಾಣವಾದರೆ ಕಲಿಕೆಯ  ಅನುಭವಕ್ಕೆ ಹೆಚ್ಚಿನ ಅರ್ಥ ಸಿಗುತ್ತದೆ. ಮಕ್ಕಳು ಅನುಭವ ಕಲಿಕೆಯಿಂದ ಕಲಿತರೆ ಪ್ರತಿ ದಿನದ ಉಪಯೋಗದಲ್ಲೂ ನಮ್ಮ ಶಿಕ್ಷಣವನ್ನು ನಾವು ಕಾಣಬಹುದು. ಆನಂದಿಸಬಹುದು. ದೇಶದ ಆರ್ಥಿಕ ವ್ಯವಸ್ಥೆಯನ್ನು ಸಬಲಗೊಳಿಸಲು, ಸುಭದ್ರತೆಯನ್ನು ಹೆಚ್ಚಿಸಲು ಎಂಬಂತೆ ಇರುವ ಈಗಿನ ಶಿಕ್ಷಣ ವ್ಯವಸ್ಥೆಯನ್ನು ಸ್ವಲ್ಪ ಬದಲಿಸಿ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ, ಸಮಾಜದ, ಪರಿಸರದ, ಪ್ರಪಂಚದ ಏಳಿಗೆಗಾಗಿ ಪುಷ್ಟಿ ಕೊಡುವ, ಸಮಷ್ಟಿ ಸಾಮರ್ಥ್ಯವನ್ನು ನೀಡಬಲ್ಲ ರೀತಿ  ಬಲ ಪಡಿಸಿದರೆ ಸಂತುಷ್ಟ ಭವಿಷ್ಯಕ್ಕಾಗಿ ನಾವು ಎದುರು ನೋಡಬಹುದು.

6 thoughts on “ಶಾಲೆಗಳಲ್ಲಿ ನಮಗಿರುವ ಆಯ್ಕೆ – ವಿನತೆ ಶರ್ಮ ಬರೆದ ಲೇಖನ

  1. Sudarshan,
    Every child can and will do better/reach their potential if they have the right context, nurturing environment and parental support. The outcome of one’s education need not be measurable in terms of producing a “real creative contributor to the society” type of a person. One should not forget the politics of education that reproduces and legitimises the divisions of class, (caste), religion, gender, power and control. Stratification in human societies is nothing new. If people choose an alternative school for their children today they are looking at their own past, perhaps the good old education that they enjoyed with much freedom which is not there any more in the mainstream. Or because they were forced to be part the race, which they reject with thier own conscious choice.

    Like

  2. ಸ್ನೇಹಿತರೆ,
    ನಮಸ್ಕಾರ. ಮತ್ತು, ಕೆಲ ಉತ್ತರಗಳು.
    ಪರ್ಯಾಯ ಶಾಲೆಗಳು ಒಂದಕ್ಕೊಂದರಿಂದ ಬಹು ಭಿನ್ನ. ಬಹಳಷ್ಟು ಪ್ರಾಥಮಿಕ ಶಿಕ್ಷಣವನ್ನು ನೀಡುವುವು. ಕೆಲವು ಹೈಸ್ಕೂಲ್ ಮಟ್ಟವನ್ನು ಹೊಂದಿವೆ. ಹೆಚ್ಚು ಕಡಿಮೆ ಎಲ್ಲಾ ಪರ್ಯಾಯ ಶಾಲೆಗಳ ಮಕ್ಕಳು ಒಂದಲ್ಲಾ ಒಂದು ಬೋರ್ಡ್ ಪರೀಕ್ಷೆಗಳನ್ನು ಬರೆಯುತ್ತಾರೆ, ಹಾಗಾಗಿ ಮುಂದಿನ ಶಿಕ್ಷಣಕ್ಕೆ ನಡೆಯುತ್ತಾರೆ. ಹೈಸ್ಕೂಲ್ ಮುಗಿಸಿದ ಮಕ್ಕಳು ಮುಂದೆ ಪದವಿ ಮತ್ತಿತರ ಉನ್ನತ ಶಿಕ್ಷಣವನ್ನು ಪಡೆದಿರುವ ಸಂಖ್ಯೆ ಹೆಚ್ಚು (ನನ್ನ ಸ್ನೇಹಿತರ ಮಕ್ಕಳು ಹೀಗೆ ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದಾರೆ). ಪ್ರಾಥಮಿಕ ಮಟ್ಟ ಮುಗಿಸಿ ನಂತರ ‘ಮಾಮೂಲು’ ಮುಖ್ಯವಾಹಿನಿ ವಿಧಾನದ ಹೈಸ್ಕೂಲ್ ಗೆ ಹೋಗುವ ಮಕ್ಕಳಿಗೆ ಆರಂಭದ ವರ್ಷದಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಅಥವಾ ಆ ಮಕ್ಕಳು ವಿವಿಧ ರೀತಿಯ ಪರ್ಯಾಯ ವಿಧಾನವನ್ನು ಅನುಸರಿಸುವ ಹಿರಿಯ ಶಾಲೆಗಳಿಗೆ ಕೂಡ ಹೋಗಬಹುದು. ಯಾವುದೇ ವಿಧಾನದ ಶಿಕ್ಷಣವಾದರೂ ಸರಿ, ತಾಯಿತಂದೆಯರ/ಪೋಷಕರ ಸಮರ್ಪಕ ಬೆಂಬಲ, ಸಹಾಯ ಇರಬೇಕೆಂಬುದು ನನ್ನ ನಂಬಿಕೆ – ಆಗ ಮಕ್ಕಳು ಯಾವುದೇ ಥರದ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಅವರಿಗೆ ಸುಲಭವಾಗುವುದಲ್ಲದೆ ಧೈರ್ಯ ಮತ್ತು ಆತ್ಮವಿಶ್ವಾಸವೂ ಹೆಚ್ಚು ಇರುತ್ತದೆ. ಶಾಲೆ/ಸಮುದಾಯ/ಸಮಾಜದ ಹೊಂದಾಣಿಕೆ ಎಲ್ಲಕ್ಕೂ ಸೈ.
    ಪರ್ಯಾಯ ಶಾಲೆಗಳು ಹಣ ಉಳ್ಳವರಿಗೆ ಮಾತ್ರ ಎನ್ನುವ ಕಾಲ ಹೋಗಿದೆ; ಕೆಲ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಫೀಸ್ ದುಬಾರಿಯೇನಲ್ಲ (ಆದರೆ ಫೀಸ್ ಇಲ್ಲದ ಪಬ್ಲಿಕ್ ಶಿಕ್ಷಣ ವ್ಯವಸ್ಥೆ ಇರುವ ಪಾಶ್ಚಾತ್ಯ ದೇಶಗಲ್ಲಿ ಈಗಲೂ ದುಬಾರಿ ಎನ್ನಿಸಬಹುದು – ಕಾರಣಗಳು ಹಲವಾರು). ಸರಕಾರದಿಂದ ಅನುದಾನ ಸಿಗುವುದಿಲ್ಲ/ ಬಹಳಾ ಅಪರೂಪ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸರಕಾರಗಳು ಅವುಗಳ ಬಗ್ಗೆ ಅಸಮಾಧಾನ/ಅಸಮ್ಮತಿ ತೋರಿವೆ. ಇರುವ ಸರಕಾರೀ ಶಾಲೆಗಳನ್ನು ಉತ್ತಮ ಪಡಿಸಿ, ಪರ್ಯಾಯ ಶಾಲೆಗಳನ್ನು ಯಾಕೆ ನಡೆಸುತ್ತೀರಾ ಎಂದು ಕೇಳುತ್ತಿವೆ. ಆದರೆ ನಾಯಿಕೊಡೆಯಂತೆ ತಲೆಯೆತ್ತಿದ, ಇನ್ನೂ ಹಾಗೆ ತಲೆಯೆತ್ತಿ ಹಣ ಸುಲಿಗೆ ಮಾಡುತ್ತಿರುವ ಖಾಸಗಿ ಶಾಲೆಗಳನ್ನು ಒಂದು ಚೌಕಟ್ಟಿನೊಳಗೆ ತಂದು ಶಿಕ್ಷಣದ ಗುಣಮಟ್ಟ ವನ್ನು ಉತ್ತಮಪಡಿಸುವತ್ತ ನಡೆದಿರುವ ಕೆಲಸ ಕಡಿಮೆ, ರಾಜಕೀಯ/ಭ್ರಷ್ಟಾಚಾರ ಹೆಚ್ಚು. ನಾಣ್ಯದ ಎರಡೂ ಮುಖಗಳಿಗೆ ಬೆಲೆ ಇದೆ.
    ಇನ್ನು ಹೋಂ ಸ್ಕೂಲ್ ಬಗ್ಗೆ ಕೇಳಿದ್ದೀರಿ – ನನ್ನ ಕೆಲವು ಸ್ನೇಹಿತರು ತಮ್ಮ ಮಕ್ಕಳನ್ನು ಮನೆ ಶಾಲೆ ವಿಧಾನದಲ್ಲಿ ಬೆಳೆಸುತ್ತಿದ್ದಾರೆ. ಕಾರಣ – ಆ ಮಕ್ಕಳಿಗೆ ಇರುವ ಜಾಣ್ಮೆ, ಆಸಕ್ತಿ, ಬೆಳವಣಿಗೆ ಹಂತಕ್ಕೆ ಸೂಕ್ತವಾದ ಶಾಲಾ ಪಟ್ಯ ಕ್ರಮ ಅವರಿಗೆ ಸಮಾಧಾನವಾಗುವ ಹಾಗೆ ಸಿಕ್ಕಿಲ್ಲ. ಆ ಮಕ್ಕಳು ಹೋಂ ಸ್ಕೂಲ್ ಗುಂಪುಗಳಲ್ಲಿ, ಸಮುದಾಯದಲ್ಲಿ ಸೇರಿದ್ದು, ನಾನಾ ರೀತಿಯ ವಿಷಯಗಳನ್ನು ಕಲಿಯುವುದೇ ಅಲ್ಲದೆ, ಬಹುಷಃ ಇನ್ನೂ ಮುಂದುವರೆದ ಹಂತಗಳನ್ನು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಮುಟ್ಟುತ್ತಿದ್ದಾರೆ. ಇಂತಹ ಅನೇಕ ಹೋಂ ಸ್ಕೂಲ್ ಗುಂಪುಗಳು, ಶಿಕ್ಷಕರು, ಚಳುವಳಿಗಳು (ಉದಾ, Unschooling, Radical Schooling, Humane Education, etc ) ಇರುವುದರಿಂದ ಯಾವುದೇ ಕಾಲದಲ್ಲೂ ಇವರು ಒಬ್ಬಂಟಿಯಲ್ಲ, ಅಥವಾ ಸಮಾಜದಿಂದ ಹೊರಗಾಗಿಲ್ಲ. ಈ ಕಾಲದ ನಿರ್ಬಂಧವಿರುವ, ಹೆಲ್ತ್ ಅಂಡ್ ಸೇಫ್ಟಿ ಅತ್ಯಂತ ಮುಖ್ಯವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಮುಕ್ತ ಅನುಭವವನ್ನು ಒದಗಿಸುವ ವಾತಾವರಣ ಇಲ್ಲ
    ಸಾವಿರಾರು ಖಾಸಗಿ ಶಾಲೆಗಳು ದೇಶದಾದ್ಯಂತ ಇದ್ದು ಹಣ ವಸೂಲಿ ಮಾಡಿ ಅದೇ ಶಿಕ್ಷಣವನ್ನು ಅದೇನೋ ಒಂದು ವಿಶೇಷ ಅನ್ನುವ ರೀತಿಯಲ್ಲಿ ಮಾರುತ್ತಿರುವಾಗ ಇಂತಹ ಕೆಲ ಪರ್ಯಾಯ ಶಾಲೆಗಳು ಹೆಚ್ಚಿನ ಅಥವಾ ಯಾವುದೇ ಪ್ರಚಾರವಿಲ್ಲದೆ ತಮ್ಮ ಪಾಡಿಗೆ ತಾವು ಕೆಲ ಮಕ್ಕಳೊಂದಿಗೆ ಶಿಕ್ಷಣದ ಅನುಭವವನ್ನು ಆನಂದಿಸುತ್ತಿದ್ದಾರೆ. ಸರಕಾರೀ ಶಾಲೆ, ಖಾಸಗಿ ಶಾಲೆಯಂತೆ ಪರ್ಯಾಯ ಶಾಲೆಗಳೂ ಕೂಡ ನಮ್ಮ ಆಯ್ಕೆಗೆ ಸೇರಿದ್ದು.
    ಧನ್ಯವಾದಗಳು. ವಿನತೆ ಶರ್ಮ

    Like

  3. Premalatha has raised the questions of my mind. What was happening as a natural process when we were children , now the all round learning is to be bought at a cost and sometimes quite steeply. Yes, we do not know the outcome of the pupils attending these schools. How many of them have gone on to become real creative contributors to the society?
    When I was a child in school we did learn core subjects and all the other interactions and life like learning happened in the ground,in the society, going to fields,climbing the trees, swimming in wells and streams. Now all of that need to be an organised.
    Even if these children do well, is it because of the background ,affordability,parental support at home, high teachers to pupils ratio.
    While it is good to have options,it would create stratification in society.

    Like

  4. ಮುಖ್ಯವಾಹಿನಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅದಕ್ಕೆ ತಮ್ಮನ್ನು ಅಳವಡಿಸಿಕೊಳ್ಳಲಾಗದೆ ನಲುಗುವ ಮಕ್ಕಳನ್ನು ಕಂಡಿದ್ದೇವೆ. ಜೊತೆಗೆ ಗಣಿತ, ವಿಘ್ನಾನದಂತಹ ವಿಷಯಗಳಲ್ಲಿ ಒಲವನ್ನು ತೋರದ ಮಕ್ಕಳ ಬಗ್ಗೆ ಅನಾಸರದ ಭಾವನೆಯನ್ನು ತೋರುವ ಜನರನ್ನೂ ಕಂಡಿದ್ದೇವೆ. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ರೂಪಿಸಿದ ವ್ಯವಸ್ಥೆಯನ್ನೇ ಮುಂದಿಟ್ಟುಕೊಂಡು ಇನ್ನೂ ಅದನ್ನೇ ಅನುಸರಿಸುವ ನಮ್ಮ ಶೈಕ್ಷಣಿಕ ವ್ಯವಸ್ಥೆಯ ಶಾಲೆಗಳು ತಮ್ಮ ಚಿಂತನೆಯನ್ನು ಬದಲಿಸಿಕೊಳ್ಳುವುದು ಒಳ್ಳೆಯದು. ಪರ್ಯಾಯ ಶಿಕ್ಷಣ ವ್ಯವಸ್ಥೆಯಲ್ಲಿ ಅರಳುವ ಪ್ರತಿಭೆಗಳೂ ಕೂಡಾ, ದೇಶದ ಏಳಿಗೆಯಲ್ಲಿ ಪ್ರಮುಖ ಕೊಡುಗೆಯನ್ನು ನೀಡಬಲ್ಲವು ಎಂಬುದನ್ನು ನಮ್ಮ ಸಮಾಜ ಅರಿತುಕೊಳ್ಳುವ ದಿನಗಳು ಹತ್ತಿರವಾಗಿವೆ. ಆದರೆ ಈ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ, ಆರ್ಥಿಕ ಸುಭಧ್ರತೆ ಇರಬೇಕೆನ್ನುವುದೂ ಒಂದು ವಾಸ್ತವದ ಸಂಗತಿ. ಒಟ್ಟಾರೆ, ಪರ್ಯಾಯ ಶಿಕ್ಷಣದಲ್ಲೂ ಉತ್ತಮ ಅಂಶಗಳಿವೆ, ಮಕ್ಕಳ ಸ್ವಂತ ಚಿಂತನೆ ಅಭಿಪ್ರಾಯಗಳಿಗೆ ಬೆಲೆಕೊಡುವ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದರಲ್ಲಿ ಯಾವ ಹಾನಿಯೂ ಕಾಣುವುದಿಲ್ಲ. ಪ್ರತಿಯೊಂದು ಮಗುವೂ ಭಿನ್ನವಾದ ಸ್ವಭಾವ, ಚಿಂತನೆ ಮತ್ತು ಪ್ರತಿಭೆಯನ್ನು ಹೊಂದಿರುತ್ತದೆ ಎನ್ನುವ ಅಂಶವನ್ನು ಗಮನದಲ್ಲಿಟ್ಟುಕೊಂಡರೆ, ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಸ್ವತಃ ಶಿಕ್ಷಣ ತಗ್ನ್ಯರಾದ ವಿನುತೆ ಅವರ ಈ ಲೇಖನ ನಮಗೆ ಪರ್ಯಾಯ ಶಿಕ್ಷಣಕ್ರಮದ ಬಗ್ಗೆ ಉತ್ತಮವಾದ ಮಾಹಿತಿಯನ್ನು ಕೊಡುವುದರಲ್ಲಿ ಸಫಲವಾಗಿದೆ.
    ಉಮಾ ವೆಂಕಟೇಶ್

    Like

  5. ಮತ್ತೊಂದು ಉತ್ತಮ ಶೈಕ್ಶಣಿಕ ಲೇಖನ.
    ಇಂತಹ ಶಾಲೆಗಳಿಗೆ ಹೋಗುವ ಮಕ್ಕಳನ್ನು ಮತ್ತು ಮನೆಯಲ್ಲೇ ತರಭೇತಿ ಪಡೆಯುವ (Home school ) ಮಕ್ಕಳನ್ನು ಸಂಧಿಸಿದ್ದೇನೆ. ಇಂತಹ ಶಾಲೆಗಳಿಂದ ಹೊರಬಂದ ನಂತರ ಈ ಮಕ್ಕಳ ಮುಂದಿನ ದಿನಗಳು ಮತ್ತು ಪ್ರಗತಿ ಹೇಗೆ? ಕರ್ನಾಟಕದಲ್ಲಿ ಸರ್ಕಾರ ಇದಕ್ಕೆ ನೀಡೀರುವ ಮಾನ್ಯತೆ ?
    ಇತರೆ ಸ್ಪರ್ಧಾತ್ಮಕ ರಂಗಗಳಲ್ಲಿ ಈ ಮಕ್ಕಳು ಸರಿಸಮವಾಗಿ ಭಾಗವಹಿಸಲು ಸಾಧ್ಯವೇ? ಅಥವಾ ಉಳ್ಳವರ ಮಕ್ಕಳಾದ ಕಾರಣ ಇವರು ತಮ್ಮದೇ ವಹಿವಾಟು ನಡೆಸುವರೆ?
    ಯಾರಾದರು ಉತ್ತಮ ಉದಾಹರಣೆಯಾಗಿದ್ದಾರೆಯೇ?
    ಈ ಅಂಶಗಳನ್ನುಸೇರಿಸಿದರೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬಲ್ಲದೇ?

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.