ಇತ್ತೀಚೆಗಷ್ಟೇ ನಮ್ಮ ಸುತ್ತಲಿನ ಜಗತ್ತು ಆಚರಿಸಿದ ‘ಮಾತೆಯರ ದಿನದ’ ಅಂಗವಾಗಿ, ತಾಯಿ ಹಾಗೂ ಅವಳ ಜೀವನದ ಮಹದೋದ್ದೇಶವಾದ ಮಗುವಿನ ಕುರಿತ ಎರಡು ಕವನಗಳು ಇಲ್ಲಿವೆ. ಒಂದು ನಮ್ಮ ಪರಿಚಿತರೇ ಅದ ಪ್ರೇಮಲತಾ ಅವರದ್ದು (ಮಗು-ನಗು). ಇನ್ನೊಂದು ನಮ್ಮ ಅತಿಥಿ ಕವಿ ನವೀನ್ ಗಂಗೋತ್ರಿಯವರದ್ದು (ಅಮ್ಮ). ಓದಿ, ಅಮ್ಮನೆಂಬ ಭಾವ ನದಿಯಲ್ಲಿ ಮುಳುಗೇಳಿ.

ಅಮ್ಮ

ಅಮ್ಮನಂಗುಲಿಗಳಲಿ
ಜಗದೆಲ್ಲ ಒಳಿತುಗಳು
ತುತ್ತಾಗಿ ಕೂರುವವು ಮುತ್ತಿನಂತೆ
ನಂಬುಗೆಯ ಪರ್ವತವೆ
ಅಂಗೈಯಲಿಳಿಯುವುದು
ನಂದಗೋಪನ ಮನೆಯ ಬೆಣ್ಣೆಯಂತೆ
ತಾಯೆಂಬ ಹಿರಿ ಜೀವ
ಜೀವನವನೂಡಿಪುದು
ಮಗುವ ಕಿರಿ ಜೀವಕ್ಕೆ ಜೀವವಾಗಿ
ಜೀವನೆಂಬುದು ಇಲ್ಲಿ
ಜೀವದಿಂದಾಗುವುದು
ಅಮ್ಮನಿರುವಳು ಜೀವದೊರತೆಯಾಗಿ
ಅಂತರಗಳಿಲ್ಲದಿಹ
ಎಲ್ಲದರ ಅರಿವಿರುವ
ಅದ್ವೈತ ಸಂಬಂಧ ತಾಯ್ಗೆ ಮಗುವು
ತನ್ನೊಳಗೆ ತನುಗೊಳಿಸಿ
ಎದೆಯಿಂದ ಹಾಲಿಳಿಸಿ
ಕೈಯಲೂ ತುತ್ತಿಡುವ ಮಮತೆ ಮಡಿಲು
ಶ್ರೀ . ನವೀನ್ ಗಂಗೊತ್ರಿ
++++++++++++++++++++++++++++++++++++++++++++++++++++++++++++
ಪ್ರೇಮಲತಾರ ಈ ಕವನ ಅಮ್ಮನ ಕಣ್ಣಿನಲ್ಲಿ ಮಗುವಿನ ಕೇಕೆಯನ್ನು ಅರಳಿಸುತ್ತಿದೆ. ಈ ಕವನ ಯುಗಾದಿ ಕಾರ್ಯಕ್ರಮದಲ್ಲಿ ಪ್ರಸ್ತುತವಾಗಿತ್ತು.
ಮಗು-ನಗು
ನನ್ನೊಲವಿನ ಮುದ್ದಿನ ಮಗುವೇ
ಸುಮಧುರ ಗಾನ ಏನಂತ ನಗುವೇ!
ಮನೆಯೆಲ್ಲ ಅನುರುಣಿಸಿ ಸಂತಸ
ಈ ಬಾಳಿಗೆ ತಂದೆ ನೀ ಹೊಸ ವಸಂತ!
ಸವಿಜೊಲ್ಲ ಸುರಿಸಿ,ಬೊಚ್ಚು ಬಾಯಿ
ಕಣ್ಣರಳಿಸಿ ನಕ್ಕರೆ, ಉಂಡಂತೆ ಸಿಹಿ!
ಪ್ರತಿಧ್ವನಿಸಿ ನಿನ್ನ ಕೇಕೆಯಲಿ ಮನೆ
ಹರಿಸಿದೆ ಸಂತಸದ ಹೊಸ ಹೊಳೆ!
ನಿನ್ನ ಕಣ್ಣಲ್ಲಿ ಕೌತುಕ ಅರೆಗಳಿಗೆ
ನಕ್ಕು ಮರೆತುಬಿಡುವೆ ಎಲ್ಲ ಮರುಗಳಿಗೆ!
ಹೇಳುವರು ಜನ ನಿನ್ನ ನಗು ಬಲು ಮುಗ್ಢ
ಆದರೆ ನಾ ಕಂಡಿರುವೆ ಅದರಲ್ಲಿ ನೂರು ಅರ್ಥ!
ಹೀರಬೇಕೆಂದು ನಿನ್ನ ನಗುವಿನ ಸಿಹಿ
ಹಾತೊರೆವುದು ಮನವಾಗಿ ಒಂದು ದುಂಬಿ!
ಕನಸಲ್ಲೂ ಪಕ್ಕನೆ ನೀ ನಕ್ಕು ಬಿಡುವೆ
ಎದೆಯುಬ್ಬಿ ಸಂತಸದ ಹಬ್ಬ ನನಗೆ!
ಡಾ ಪ್ರೇಮಲತ ಬಿ
ನಂದಕುಮಾರ್ ಅವರು ಹೇಳಿದಂತೆ, ಈ ಕವಿತೆಯನ್ನು ನಾನು ಓದಿದಾಗ ನನಗಾದ ಹಿಗ್ಗು ಅಷ್ಟಿಷ್ಟಲ್ಲ. ಕನ್ನಡದಲ್ಲಿ ಇಂದಿಗೂ ಇಂತಹ ಅಪೂರ್ವ ಲಯಬದ್ಧವಾದ ಕವಿತೆಗಳನ್ನು ಭಾವಪೂರ್ಣವಾಗಿ ಅಭಿವ್ಯಕ್ತಿಸಿ ಬರೆಯಬಲ್ಲ ಕವಿಗಳಿದ್ದಾರೆಂಬುದೇ ಒಂದು ಸಂತೋಷದ ವಿಷಯ. ಒಂದು ಚಿತ್ರ (ಬಹಳ ಸುಂದರವಾಗಿದೆ ಅದು) ವನ್ನು ನೋಡಿ, ತಾಯಿ ಮಗುವಿನ ಅವಿನಾಭಾವ ಸಂಬಂಧವನ್ನು ಅದ್ವೈತಕ್ಕೆ ಹೋಲಿಸಿ ಬರೆಯಬಹುದೆಂಬುದೇ ನವೀನ್ ಅವರ ಸಾಹಿತ್ಯ ಹಾಗೂ ಭಾಷಾ ಪ್ರೌಢಿಮೆಗೆ ಸಾಕ್ಷಿ.
ನಂಬುಗೆಯ ಪರ್ವತವೆ
ಅಂಗೈಯಲಿಳಿಯುವುದು
ನಂದಗೋಪನ ಮನೆಯ ಬೆಣ್ಣೆಯಂತೆ !!
ಎನ್ನುವುದು ಎಂತಹ ದಿವ್ಯ ಕಲ್ಪನೆ!!
ಇನ್ನು ಸಾಹಿತ್ಯ ಗೋಷ್ಠಿಯನ್ನು ತಪ್ಪಿಸಿಕೊಂಡ ನನಗೆ ಪ್ರೇಮಲತಾ ಅವರ ಕವನ ಓದುವ ಆಸಕ್ತಿ, ಈ ಸಂದರ್ಭದಿಂದಾಗಿ ಬೇಗನೆ ಪೂರ್ತಿಯಾಯ್ತು.
LikeLike
ಆತ್ಮೀಯ ಉಮಾ, ನವೀನ್ ಗಂಗೋತ್ರಿ ಅವರ ಕವನ ಅದ್ಭುತವಾಗಿದೆ. ನಮ್ಮನ್ನು ನಮ್ಮಗಳ ಬಾಲ್ಯಕ್ಕೆ ಕೊಂಡೊಯ್ದು ಅಮ್ಮನ ಬಳಿ ಬಿಡುಟ್ಟಿರುವ ಭಾವನೆ ಬರುತ್ತದೆ. ಡಾ ಪ್ರೇಮಲತಾ ಅವರ ಕವನವೂ ನಮ್ಮ ಭಾವನೆಗಳನ್ನು ಹೊರತರುವಲ್ಲಿ ಸಫಲವಾಗಿದೆ. ನಿಮ್ಮ ಅನಿವಾಸಿ ಬ್ಲಾಗಿನ ಲೇಖನಗಳನ್ನು ಓದಿ ನಿಜಕ್ಕೂ ಸಂತೋಷವಾಯಿತು. ಧನ್ಯವಾದಗಳು. ಇದು ಲಂಡನ್ನಿನ ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಡಾ ನಂದಕುಮಾರ್ ಅವರ ಅನಿಸಿಕೆ.
LikeLike
ನವೀನ ಗಂಗೋತ್ರಿಯವರ ಈ ಸಾಲುಗಳಲ್ಲಿ —
”ತನ್ನೊಳಗೆ ತನುಗೊಳಿಸಿ
ಎದೆಯಿಂದ ಹಾಲಿಳಿಸಿ
ಕೈಯಲೂ ತುತ್ತಿಡುವ ಮಮತೆ ಮಡಿಲು”
ಮತ್ತು ಪ್ರೆಮಲತಾ ಅವರ ಈ ಸಾಲುಗಳಲ್ಲಿ–
“ಹೇಳುವರು ಜನ ನಿನ್ನ ನಗು ಬಲು ಮುಗ್ಢ
ಆದರೆ ನಾ ಕಂಡಿರುವೆ ಅದರಲ್ಲಿ ನೂರು ಅರ್ಥ!”
ತಾಯಿ-ಮಗುವಿನ ಸಂಬಂಧಗಳನ್ನು ಸುಂದರವಾಗಿ, ಅರ್ಥವತ್ತಾಗಿ ಬರೆದಿದ್ದಾರೆ, ಇಬ್ಬರೂ. ’’ಕನಸಲ್ಲೂ ಪಕ್ಕನೆ ನೀ ನಕ್ಕು ಬಿಡುವ” ಎಂದು ಮಗುವನ್ನುಒಂಬತ್ತು ತಿಂಗಳು ಹೊತ್ತು, ಎತ್ತಿದ ತಾಯಿಯ ಅನುಭವದಿಂದ ಉದುರಿದ ಮಾತುಗಳು. ಮೊನ್ನೆ ತಾನೇ ಹುಟ್ಟಿದ ನನ್ನ ಮೊಮ್ಮಗನ ಮೊದಲ ನಗುವನ್ನು ಕಂಡು ನೀರಾದ ನನ್ನ ಅನುಭವವೇ ಹೀಗಿದ್ದರೆ, ತಾಯಿಯದು ಹೇಗಿರಬೇಡ? ಅವಳು ಸಹ ಅದನ್ನು ಶಬ್ದಗಳಲ್ಲಿ ಹಿಡಿದಿಡಲಾರಳೆನೋ! ಎರಡನೆಯ ಕವನ ಇತ್ತೀಚಿನ ಕನ್ನಡ ಬಳಗದ ಯುಗಾದಿ ಸಮಾರಂಭದಲ್ಲಿ ಓದಿದ್ದು. ಈ ಎರಡು ಚಂದದ ಕವನಗಳನ್ನು ಒತ್ತುಗೂಡಿಸಿದ, ಅತಿಥಿ ಕವಿ ನವೀನರನ್ನು ಪರಿಚಯಿಸಿದ ಸಂಪಾದಕರ ಯತ್ನವೂ ಸಫಲವಾಗಿದೆ.
LikeLike
ತಾಯಿಯ ಪ್ರೀತಿ ಮಮತೆಗಳನ್ನು ತಮ್ಮ ಕವನದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ ನಮ್ಮ ಅತಿಥಿ ಕವಿ ಶ್ರೀ. ನವೀನ್ ಗಂಗೋತ್ರಿ ಅವರು. ಅಂತರಗಳಿಲ್ಲದಿಹ
ಎಲ್ಲದರ ಅರಿವಿರುವ
ಅದ್ವೈತ ಸಂಬಂಧ ತಾಯ್ಗೆ ಮಗುವು ಎಂಬ ಸಾಲುಗಳಲ್ಲಿ , ತಾಯಿಗೆ ಮಗುವಿನೊಡನೆ ಇರುವ ಸಂಬಂಧ್ದದ ಮಹತ್ವವೇನು ಎನ್ನುವುದನ್ನು ಬಹಳ ಅರ್ಥವತ್ತಾಗಿ ಬರೆದಿದ್ದಾರೆ. ಧನ್ಯವಾದಗಳು ನವೀನ್ ಅವರೆ. ನಮ್ಮ ಅನಿವಾಸಿ ವೇದಿಕೆಯಲ್ಲಿ ನಿಮ್ಮ ಕವನವನ್ನು ನಮ್ಮೊಡನೆ ಹಂಚಿಕೊಂಡು, ನಮ್ಮ ಓದುಗರಿಗೆ, ತಾಯಿ-ಮಗುವಿನ ಸುಂದರ ಸಂಬಂಧದ ಚಿತ್ರವನ್ನು ನಮಗೆ ಕೊಟ್ಟಿದ್ದೀರಿ.
ಪ್ರೇಮಲತಾ ಅವರ ಕವನದಲ್ಲಿನ ಮಗುವಿನ ನಗೆಯ ಸೊಬಗನ್ನು ಇಷ್ಟು ಸೊಗಸಾಗಿ ವರ್ಣಿಸಲು, ಒಂದು ತಾಯಿಯ ಹೃದಯಕ್ಕಷ್ಟೆ ಸಾಧ್ಯ. ತನ್ನ ಕಂದನ ಈ ಸುಂದರ ಕ್ಷಣಗಳಲ್ಲಿ ಸದಾ ಭಾಗಿಯಾಗುವ ಒಂದು ಸೌಭಾಗ್ಯ ಅವಳಿಗೆ ದೊರೆತಾಗ ಅದನ್ನು ಅವಳು ಮನಸಾರೆ ಅನುಭವಿಸಿ ನಲಿಯುವ ದೃಶ್ಯ ವನ್ನು ತಮ್ಮ ಕವಿತೆಯ ಸಾಲುಗಳಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ.
ಉಮಾ ವೆಂಕಟೇಶ್
LikeLike