ನಾನು ಓದಿದ ಪುಸ್ತಕ, ನನ್ನ ಅನಿಸಿಕೆಗಳು – ವತ್ಸಲಾ ರಾಮಮೂರ್ತಿ

ಸಾಕ್ಷಾತ್ಕಾರ (ಭಾಗ-೨) – ಶಿವಶಂಕರ ಮೇಟಿ

ಈ ವಾರ ಡಬಲ್ ಧಮಾಕಾ. ವತ್ಸಲಾ ಅವರು ತಾವು ಓದಿದ ಪುಸ್ತಕದ ಪರಿಚಯ ಹಾಗೂ ತಮ್ಮ ಅನಿಸಿಕೆಗಳನ್ನು ತಮ್ಮ ಮುಂದಿಟ್ಟಿದ್ದಾರೆ. ಕಳೆದ ವಾರ ಜಿ.ಎಸ್. ಜಯದೇವ ಅವರು ಸೋಲಿಗರ ಜೊತೆ ಕಳೆದ ದಿನಗಳು, ದೀನಬಂಧು ಸಂಸ್ಥೆ ಹುಟ್ಟಿ ಬೆಳೆದ ಕಥೆಯನ್ನು ಹೃದಯಂಗಮವಾಗಿ ಆಹ್ವಾನಿತರೊಂದಿಗೆ ಹಂಚಿಕೊಂಡರು. ಅವರು ದೀನಬಂಧು ಸಂಸ್ಥೆಯನ್ನು ಕಟ್ಟುವ ಮೊದಲು ಸೋಲಿಗರ ಜೀವನವನ್ನು ಅಧ್ಯಯಿಸಿ, ಅವರ ಒಳಿತಿಗಾಗಿ ಡಾ.ಸುದರ್ಶನ್ ಅವರೊಡನೆ ಪಟ್ಟ ಶ್ರಮದ ಅನುಭವವೇ ವತ್ಸಲಾ ಅವರು ಪರಿಚಯಿಸುತ್ತಿರುವ ಪುಸ್ತಕದ ವಸ್ತು. 

ಅನಿವಾಸಿಯ ಓದುಗರೆಲ್ಲ ಕಾತುರದಿಂದ ಕಾಯುತ್ತಿರುವ ಮೇಟಿಯವರ "ಸಾಕ್ಷತ್ಕಾರ" ಕಥೆಯ ಕೊನೆಯ ಕಂತು ನಿಮ್ಮೆದುರು ಅನಾವರಣವಾಗುತ್ತಿದೆ. ರಾಯರು ಎಲ್ಲಿ ಹೋದರು, ಸಿಕ್ಕಿದರೇ, ರಾಯರ ಮಗನ ಪ್ರತಿಕ್ರಿಯೆಯೇನು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತೆ? 

ಪುಸ್ತಕ: ಸೋಲಿಗರ ಚಿತ್ರಗಳು. 
ಲೇಖಕರು:  ಜಿ. ಎಸ್‌. ಜಯದೇವ.

ಲೇಖಕರ ಪರಿಚಯ ನಾನು ಮಾಡಿಕೊಡಬೇಕಾಗಿಲ್ಲ. ಈಗಾಗಲೆ ಅವರೇ ಬರೆದ ಲೇಖನದಿಂದ ಅನಿವಾಸಿ ಬಳಗಕ್ಕೆ ಪರಿಚಯವಾಗಿದ್ದಾರೆ.  “ಸೋಲಿಗರ ಚಿತ್ರಗಳು” ಪುಸ್ತಕವನ್ನು ದಯವಿಟ್ಟು ಓದಿ. ನಾನು ಓದಿರುವ ಪುಸ್ತಕಗಳಲ್ಲಿ ಒಂದು ಅತ್ಯುತ್ತಮ ಪುಸ್ತಕವೆಂದೇ ಹೇಳುವೆ. ಇತ್ತೀಚೆಗೆ ನಾನು ಈ ಪುಸ್ತಕವನ್ನು  ಆಸಕ್ತಿಯಿಂದ ಓದಿದೆ.  ಸೋಲಿಗರ ಜೀವನವೃತ್ತಾಂತ ಮತ್ತು ಅವರ ಪರಿಸರದೊಂದಿಗೆ ನಿಕಟ ಬಾಂಧವ್ಯ, ಬದುಕನ್ನು ಎದುರುಸುವ ಚಾಣಾಕ್ಷತೆ, ಮನೊಭಾವಗಳು ಅವರನ್ನು ಕಾಡುವ ನಾನಾ ತರಹದ ಜೀವನದ ಘಟನೆಗಳು, ಎಲ್ಲವನ್ನು ನಿಭಾಯಿಸುವ ಅವರ ಜನಾಂಗದ ನಿರಂತರ ಹೋರಾಟ, ಎಲ್ಲವನ್ನು ವ್ಯಕ್ತಿಚಿತ್ರದೊಡನೆ ವಿವರಿಸಿದ್ದಾರೆ.

ಇದರೊಳಗೆ ೧೯ ವ್ಯಕ್ತಿಚಿತ್ರಗಳು ಇವೆ.  ಪ್ರತಿಯೊಂದು ಪ್ರಕರಣದಲ್ಲೂ ಒಬ್ಬ ವ್ಯಕ್ತಿಯ ಜೀವನಚಿತ್ರ. ವಿಶಿಷ್ಟವಾದ ವ್ಯಕ್ತಿಚಿತ್ರವನ್ನು ಕಣ್ಣಮುಂದೆ ಕಟ್ಟಿದಂತೆ ವಿವರಿಸಿದ್ದಾರೆ. ಅದರೊಳಗೆ ನನಗೆ champion in their  own way ಅನ್ನಿಸಿದವರು – ಬೆರೆಸಿ 

೧. ಮಸಣಮ್ಮ ಬಿಚ್ಚಿಟ್ಟ ಮಹಾರಾಜರ ನೆನೆಪುಗಳು.
ಮೈಸೂರು ಮಹಾರಾಜರು ಬೇಟೆಗೆ ಬರುತ್ತಿದ್ದ ಕತೆ. ಮಸಣಮ್ಮನ ಗಂಡ ಮಹಾರಾಜರಿಗೆ ಅಡುಗೆ ಮಾಡಿ ಬಡಿಸುತ್ತಿದ್ದ. ಮಹಾರಾಜರು “ಕಾಡಿಗೆ ಬೇಟೆಗೆ ಪ್ರಾಣಿ ಹಿಂಸೆ ಮಾಡಲು ಬರುತ್ತಿರಲ್ಲಿಲ್ಲ ಸಾರ್‌.  ಅವರು ಕಾಡೆಮ್ಮೆ, ಜಿಂಕೆ , ಆನೆಗಳನ್ನು ನೋಡಲು ಬರುತ್ತಿದ್ದರು. ಪ್ರಕೃತಿ ಸೌಂದರ್ಯ ಆನಂದಿಸಲು ಬರುತ್ತಿದ್ದರು. ಅವರು ಪ್ರಾಣೆಹಿಂಸೆ ಮಾಡಲ್ಲಿಲ್ಲ ಸಾರ್‌”.  ಮಹಾರಾಜರಿಗೆ ಪರಿಸರದ ಬಗ್ಗೆಯಿದ್ದ ಕಳಕಳಿಯನ್ನು ಹೊಗಳಿದ್ದಾಳೆ ಸುಮಾರು ೮೫ರ ಮುದಿಕಿ.  ಅವಳ ಮನಸ್ಸು೧೯೫೦ರಲ್ಲೆ ನಿಂತಿದೆ. ಅವಳಿಗೆ ಮಹಾರಾಜರನ್ನು ಕಂಡರೆ ಇರುವ ಅಪಾರ ಗೌರವ, ವಾತ್ಯಲ್ಯವನ್ನು ಬಹಳ ಲಘು ಹಾಸ್ಯ ಬೆರೆಸಿ ಓದುಗರ ಮನಮುಟ್ಟುವಂತೆ ವರ್ಣಿಸಿದ್ದಾರೆ.  ಮಹಾರಾಜರಿಗಾಗಿ ಸೋಲಿಗರ ರಂಗಣ್ಣ ಮಾಡಿದ ತಿಳಿಸಾರಿನ ಕತೆ ಓದಲೇಬೇಕು.  ಪ್ರೊ. ಜಯದೇವ ಅವರ ಭಾಷೆ ತುಂಬ ಸುಲಲಿತವಾಗಿ, ಸರಳವಾಗಿ, ಅನುಕಂಪದಿಂದ ಕೂಡಿದೆ.

೨. ಸಾರಿ ಮಾದಮ್ಮ
ಅವಳು ಒಬ್ಬ ಅಮಾಯಕ “ಕಾಡು ಸೋಲಿಗ ಹೆಂಗಸು”.  ಅವಳಿಗೆ ಈಗಿನ ವೈದ್ಯರು ಮತ್ತು ಆಧುನಿಕ ಪದ್ಧತಿಯಲ್ಲಿ ನಂಬಿಕೆಯಿಲ್ಲ. ಅವಳು ಎಂತಹ ಅಮಾಯಕಳು ಅಂದ್ರೆ ತನ್ನ ಮನಸ್ಸಿಗೆ ಬಂದದ್ದನ್ನು ಪಟಪಟನೆ ಮುಲಾಜಿಲ್ಲದೆ ಹೇಳಿಬಿಡುತ್ತಿದ್ದಳು.  ಯಾರಿಗೂ ಸೊಪ್ಪು ಹಾಕುವವಳಲ್ಲ.  ಅವಳು ಅಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದು, ಗಂಟೆ ನೋಡಲು ಬರದಿದ್ದರೂ ಕೈಗಡಿಯಾರ ಕೊಂಡಿದ್ದು, ಸಂಬಳವೆಂದರೆ ಏನು ಅಂತ ಗೊತ್ತಿರದವಳು, ಅದೂ ಈ ಕಾಲದಲ್ಲಿ! ಅವಳು ಬಸ್ಸಿನಲ್ಲಿ ಮಾಡಿದ ಮೈಸೂರು ಝೂ ಯಾತ್ರೆ, ಅವಳ ಹಾಸ್ಯಮಯ ಮಾತು, ಜೋರಾದ ವ್ಯಕ್ತಿತ್ವ ಮತ್ತು ಆತ್ಮಸ್ಥೈರ್ಯವನ್ನು ಮನೋಹರವಾಗಿ ವಿವರಿಸಿದ್ದಾರೆ.

೩. ಪುಟ್ಟರಂಗನ ಸಸ್ಯರಂಗ.
ಮೊದಲನೆಯ ಪುಟದಲ್ಲಿ ನಮ್ಮ ಪುಟ್ಟರಂಗನ ಪರಿಚಯ ಹೀಗಿದೆ - “ಕಾಡಿನಲ್ಲಿ ಯಾವ ಮರವನ್ನಾದರೂ ತೋರಿಸಿ, ಅವನು ಆ ಮರದ ಜಾತಕವನ್ನು ಹೇಳಿಬಿಡುತ್ತಾನೆ”.  ಸೋಲಿಗರು ಹೇಳುವ ಹೆಸರು, ನಗರದ ಜನರಿಗೆ ಗೊತ್ತಿರುವ ಹೆಸರು, ಅವುಗಳ ವೈಜ್ಞಾನಿಕ ಹೆಸರು, ಯಾವ ಕುಟುಂಬಕ್ಕೆ ಸೇರಿದೆ ಮತ್ತು ಅದನ್ನೇ ಹೋಲುವ ಮರಗಳು ಎಲ್ಲ ವಿವರವನ್ನೂ ಸಾಂಗೋಪಾಂಗವಾಗಿ ಒಪ್ಪಿಸಿ ಬಿಡುತ್ತಾನೆ.  ಹಾಗೆ ನೋಡಿದರೆ ಅವನಿಗೆ ಯಾವ ಸಸ್ಯಶಾಸ್ತ್ರದ ಪದವಿಯೂ ಇಲ್ಲ. ಸಂಶೋಧಕರು ಮರ, ಗಿಡಗಳನ್ನು ಗುರುತಿಸಲು ಇವನ ಸಹಾಯ ಕೇಳುತ್ತಾರೆ. ಅವನಿಗೆ ಅಗಾಧವಾದ ನೆನಪಿನ ಶಕ್ತಿಯಿದೆ. ಸಸ್ಯಶಾಸ್ತ್ರದ ಪ್ರವೀಣ.  ಅವನಿಗೆ ಪರಿಸರದ ಬಗ್ಗೆ ತುಂಬಾ ಕಳಕಳಿ.  ಇತ್ತೀಚಿಗೆ ಕಾಡು ಕಡಿತದಿಂದ ಕಾಡುಪ್ರಾಣಿಗಳ ಮತ್ತು ಕಾಡಿನ ಸಸ್ಯಗಳ ಮೇಲೆ ಆಗುತ್ತಿರುವ ವ್ಯತಿರಿಕ್ತ ಪ್ರಭಾವದ ಬಗ್ಗೆ ಬೇಸರ ಪಟ್ಟುಕೊಂಡಿದ್ದಾನೆ. ಪುಟ್ಟರಂಗನ ಕಳವಳದ ಮೂಲಕ ಲೇಖಕರು ನಾಗರೀಕರು ಪ್ರಕೃತಿಯನ್ನು ಆರಾಧಿಸುವ ಬದಲು ನಮ್ಮ ಮನಸ್ಸಿಗೆ ಬಂದಹಾಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ ಅನ್ನುವ ಭಾವನೆ ಹೇಳುತ್ತಿದ್ದಾರೆ. (ನನ್ನ ಅನಿಸಿಕೆ)

ಹೀಗೆ ನಾನಾ ಪಾತ್ರಗಳ ಮೂಲಕ ಬುಡಕಟ್ಟಿನ ಜನಾಂಗದ ಮತ್ತು ಪರಿಸರದ ಮೇಲೆ ಆಗುತ್ತಿರುವ ಪರಿಣಾಮ; ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಪರಿಸರಗಳ ನಾಶದ ಬಗೆಗಿನ ನಾಗರೀಕರ ಉದಾಸೀನತೆಗಳನ್ನು ಬಿತ್ತರಿಸಿದ್ದಾರೆ.

ಕಡೆಯದಾಗಿ,  ಸಾಮಾನ್ಯವಾಗಿ  ಸೋಲಿಗರು  ಸ್ವಾತಂತ್ರ್ಯಪ್ರಿಯರು; ಮತ್ತೊಬ್ಬರನ್ನು ಸರಿ-ತಪ್ಪು ತಕ್ಕಡಿಯಲ್ಲಿ ತೂಗುವುದಿಲ್ಲ. ಅವರ ಜೀವನದ ನದಿ ಕೊನೆಯಿಲ್ಲದ ಈ ಕಾಲಪ್ರವಾಹದಲ್ಲಿ ಹರಿಯುತ್ತಿದೆ. ಹರಿಯುವ ನದಿಗೆ ದೋಷವಿಲ್ಲವಂತೆ.

- ವತ್ಸಲಾ ರಾಮಮೂರ್ತಿ 

ಸಾಕ್ಷಾತ್ಕಾರ (ಭಾಗ-೨)

ಛತ್ರಿಯು ಮಾಯವಾಗಿತ್ತು, ಮೂಲೆಯಲ್ಲಿ ಇದ್ದ ಚಪ್ಪಲಿಗಳು ಮಾತ್ರ ಹಾಗೆಯೇ ಬಿದ್ದಿದ್ದವು. ಬರಿಗಾಲಿನಲ್ಲೆಯೇ ಮನೆಯನ್ನು ಬಿಟ್ಟಿದ್ದರು ರಾಯರು. ಫೋನು ಮಾಡಿದರೆ ರಾಯರಿಂದ ಉತ್ತರವೇ ಇಲ್ಲ .

ಎಂದಾದರು ಬೇರೆ ಊರಿಗೆ ಹೋಗಬೇಕಾದರೆ ತನಗೊಂದು ಮಾತು ತಿಳಿಸಿಯೇ ಹೋಗುತ್ತಿದ್ದವರು, ಇಂದೇಕೆ ಹೀಗೆ ಮಾಡಿರಬಹುದು? ಎಂದು ಚಿಂತಿಸತೊಡಗಿದ. ಗುಬ್ಬಿಯ ಗೂಡನ್ನೊಮ್ಮೆ ನೋಡಬೇಕೆನಿಸಿ ತೋಟದೊಳಗೆ ಹೋದ. ಮುದಿ ಗುಬ್ಬಿ ತನ್ನನ್ನೇ ದಿಟ್ಟಿಸಿ ನೋಡುತ್ತಿರುವಂತೆ, ರಾಯರು ಕುಳಿತಿರುತ್ತಿದ್ದ ಕುರ್ಚಿ ಅವರ ಬರುವಿಕೆಗಾಗಿ ಕಾಯುತ್ತಿರುವಂತೆ ಅನಿಸಿತು. ‘ಗುಬ್ಬಿಯು ಹಾರಿಹೋಗುವದಕಿಂತ ಮೊದಲು, ರಾಯರೇ ಹಾರಿಹೋದರಲ್ಲ’ ಎಂದು ಬೇಜಾರಾಯಿತು. ಮನೆಯ ಒಳಗೆ ಬಂದು ಇನ್ನೊಮ್ಮೆ ರಾಯರಿಗೆ  ಫೋನು ಮಾಡಿದ. ಸೂಕ್ಷ್ಮವಾಗಿ ಆಲಿಸಿದಾಗ ಮೊಬೈಲ್ ಫೋನಿನ ಸಪ್ಪಳ ಅವರ ಕೋಣೆಯೊಳಗಿಂದಲೇ ಬರತೊಡಗಿತ್ತು. ‘ಅಯ್ಯೋ ಪಾಪ! ಫೋನನ್ನು ಕೂಡ ಇಲ್ಲೇ ಮರೆತು ಹೋಗಿದ್ದಾರಲ್ಲ, ಮೊದಲು ಸಲ ಫೋನು ಮಾಡಿದಾಗ ನನಗೇಕೆ ಕೇಳಲಿಲ್ಲ?‘ ಎಂದು ಅವರ ಕೋಣೆಯ ಬಾಗಿಲನ್ನು ತೆರೆದ. ರಾಯರು ಓದಲು ಬರೆಯಲು ಉಪಯೋಗಿಸುತ್ತಿದ್ದ ಸಣ್ಣ ಟೇಬಲ್ಲಿನ ಮೇಲೆ ಅವರ ಮೊಬೈಲ್ ಫೋನು ಗುಯ್ಯ್ ಗುಡುತಿತ್ತು. ಪಕ್ಕದಲ್ಲಿಯೇ ಒಂದಿಷ್ಟು ನೋಟಿನ  ಕಂತೆಗಳು ಮತ್ತು ಅವುಗಳ ಕೆಳಗೊಂದು ಸಣ್ಣ ಚೀಟಿ ಕಾಣಿಸಿಕೊಂಡಿತು. ಆತುರದಿಂದ ಚೀಟಿಯನ್ನು ಕೈಗೆತ್ತಿಕೊಂಡ ಸೋಮಣ್ಣ.

‘ ನನ್ನನ್ನು ಹುಡುಕುವ ಪ್ರಯತ್ನ ಬೇಡ. ಮನದ ಇಚ್ಛೆಯಂತೆ ವಾರಣಾಸಿಯ ಮುಕ್ತಿ ಭವನಕ್ಕೆ ಹೊರಟಿದ್ದೇನೆ. ಮರಳಿ ಬರುತ್ತೀನೋ ಇಲ್ಲೋ ಗೊತ್ತಿಲ್ಲ. ನಿನಗೆ ಅವಶ್ಯಕತೆ  ಬೀಳುವಷ್ಟು ಹಣವನ್ನು ಇಟ್ಟಿರುವೆ, ಮುಗಿದಾಗ ರಾಘುನ್ನ ಕೇಳು. ಅವನಂತೂ ಈ ದೇಶಕ್ಕೆ ವಾಪಸ್ಸು ಬರುದಿಲ್ಲ, ಇದ್ದ ಆಸ್ತಿಯನ್ನು ನೀನಿರುವವರೆಗೆ ನೋಡಿಕೊಂಡು ಹೋಗು’ ಎಂದು ಮೂರ್ನಾಲ್ಕು ಸಾಲುಗಳನ್ನು ಚೀಟಿಯಲ್ಲಿ ಗೀಚಿದ್ದರು ರಾಯರು. 

ಚೀಟಿಯನ್ನು ಓದಿ ಸೋಮಣ್ಣನಿಗೆ ಆತಂಕ ಮತ್ತು ದುಃಖವಾಯಿತು.  ಆಗಲೇ ರಾತ್ರಿ ಅವರಿಸತೊಡಗಿತ್ತು. ತನಗೊಬ್ಬನಿಗೇ ಏನು ಮಾಡಲೂ ಧೈರ್ಯವಿಲ್ಲ. ಇನ್ನೊಬ್ಬರ ಜೊತೆ ಬೇಕೆನಿಸಿತು. ಹತ್ತಿರದಲ್ಲಿ ಇದ್ದ ರಾಯರ ರಕ್ತ ಸಂಬಂಧಿಗಳೆಂದರೆ ಅಣ್ಣನ ಮಗ ವೆಂಕಟೇಶ ಮತ್ತು ತಂಗಿ ಸಾವಿತ್ರಮ್ಮ. ಅವರಿಬ್ಬರ ಒಡನಾಟ ರಾಯರ ಜೊತೆಗೆ ಅಷ್ಟಕ್ಕಷ್ಟೆ ಎಂದು ಸೋಮಣ್ಣನಿಗೆ ಅರಿವಿತ್ತು. ಮುಂದೇನಾದರೂ ಮಾಡಲು ತನಗೆ  ಜೊತೆಯಾಗಬಹುದೆಂದು ಅವರಿಬ್ಬರಿಗೂ ಕರೆ ಮಾಡಿದಾಗ, ನಿರೀಕ್ಷೆಯಂತೆ ಕುಂಟು ನೆಪ ಮತ್ತು ಕುಹಕದ ಮಾತುಗಳು ಕೇಳಿಬಂದಿದ್ದವು. ‘ಬರಿ ಸಹಾಯಕ್ಕೆ ಮಾತ್ರ ಸಂಬಂಧಗಳೇ?’ ಎಂದು ಸೋಮಣ್ಣನಿಗೆ ಬೇಜಾರಾಯಿತು. ಅನಿವಾರ್ಯ ಇಲ್ಲದೆ ರಾಘುನಿಗೆ ಕರೆ ಮಾಡಬೇಕೆಂದುಕೊಂಡ. ಎರಡು ಮೂರು ಕರೆಗಳಿಗೂ ಅವನಿಂದ ಉತ್ತರ ಬರದೇ ಇದ್ದಾಗ ಇನ್ನೂ ಬೇಜಾರವಾಯಿತು. ಯಾವಾಗಲೂ  ಜೀವನವನ್ನು ಪ್ರೀತಿಸುತ್ತಿದ್ದ ರಾಯರು ಈ ನಿರ್ಧಾರಕ್ಕೆ ಏಕೆ ಬಂದಿರಬಹುದು? ಜಿಗುಪ್ಸೆಯೇ? ಮಗನ  ಮೇಲಿನ ಸಿಟ್ಟೇ? ಮಾನಸಿಕ ಕಾಯಿಲೆಯ ಪ್ರಭಾವವೇ? ಉತ್ತರ ಸಿಗಲಿಲ್ಲ. ಕಟ್ಟು ನಿಟ್ಟಿನ ಕಟ್ಟಳೆಗಳಲ್ಲಿ ಬರೆದಿದ್ದ ರಾಯರ ಜೀವನದ ಕಾದಂಬರಿಯ ಪುಟಗಳೆಲ್ಲ ಖಾಲಿ ಖಾಲಿ ಎಂದೆನಿಸಿತು. 

ಅಷ್ಟರಲ್ಲಿಯೇ ಅವನ ಫೋನು ಗುಯ್ಯ ಗುಡತೊಡಗಿತು. “ಸೋಮಣ್ಣ, ಆಸ್ಪತ್ರೆಲಿದ್ದೆ ಅದಕ ನಿನ್ನ ಫೋನ್ ಎತ್ತಾಕ್ ಆಗಲಿಲ್ಲ. ಎಲ್ಲಾ ಆರಾಮ್ ಐತಿ ಅಲ್ಲ? ” ಅಂದ ರಾಘಪ್ಪ. ಸೋಮಣ್ಣನಿಗೆ ಇದನ್ನೆಲ್ಲ ಹೇಗೆ ಹೇಳಬೇಕೆಂದು ತಕ್ಷಣವೇ ಹೊಳೆಯಲಿಲ್ಲವಾದರೂ, ” ರಾಘಪ್ಪ , ರಾಯರು ಹೇಳದ ಕೇಳದ ನಾಪತ್ತೆ ಆಗಿ ಬಿಟ್ಟಾರ. ಏನೇನೋ ಚೀಟಿ ಬರೆದಿಟ್ಟ ಹೋಗ್ಯಾರ. ಎಲ್ಲಾ ಓದಿದರ ಅವರು ವಾರಣಾಸಿಗೆ ಹೋಗಿರಬೇಕೆಂದ ಅನಸತೈತಿ, ಅದರಲ್ಲೂ ಅದೇನೋ ಮುಕ್ತಿ ಭವನ ಅಂತ “ ಎಂದು ಒಂದೇ ಉಸುರಿನಲ್ಲಿ ಒದರಿ ಬಿಟ್ಟ. ಸುದ್ದಿಯನ್ನು ಕೇಳಿ ರಾಘುನಿಗೆ ಆಕಾಶವೇ ಕಳಚಿದಂತಾಯಿತು. ಸಾವಿರಾರು ಮೈಲು ದೂರದಲ್ಲಿರುವ ತಾನು ಈಗ ಏನು ಮಾಡಬಹುದೆಂದು ಯೋಚಿಸತೊಡಗಿದ. ಏನೋ ಉಪಾಯ ಹೊಳೆದಂತಾಯಿತು. ” ಸೋಮಣ್ಣ, ಬೆಂಗಳೂರಿನಲ್ಲಿ ನನ್ನೊಬ್ಬ ಖಾಸಾ ಗೆಳೆಯ ಡಾ. ರವಿ ಅದಾನ. ನೀನು ಬೆಂಗಳೂರಿಗೆ ಬಂದು ಬಿಡು, ಅವನು ನಿನ್ನನ್ನ ವಾರಣಾಸಿ ರೈಲಿಗೆ ಹತ್ತಸತಾನ. ನಾನೂ ನಾಳೇನೇ ಇಲ್ಲಿಂದ ಬಿಡತೀನಿ, ನಿನ್ನನ್ನ ವಾರಣಾಸಿ ರೈಲ್ ನಿಲ್ದಾಣದಾಗ ಭೇಟಿ ಆಗ್ತೀನಿ” ಎಂದು ಫೋನು ಇಟ್ಟು ಮುಂದಿನ  ತಯಾರಿ ನಡೆಸಿದ. 

ಸೋಮಣ್ಣನನ್ನು ಹೊತ್ತ ರೈಲು ವಾರಣಾಸಿಯನ್ನು ತಲುಪಿದಾಗ ಬೆಳಗಿನ ಎಂಟು ಗಂಟೆಯಾಗಿತ್ತು. ಬೋಗಿಯ ಎದುರೇ ನಿಂತಿದ್ದ ರಾಘುನನ್ನು ಕಂಡು ಸೋಮಣ್ಣನ ಮನಸಿಗೆ ಹಗುರು ಎನಿಸಿತು. ರೈಲು ನಿಲ್ದಾಣದಲ್ಲಿ ಏರಿದ ಟ್ಯಾಕ್ಸಿಯು, ಸುಮಾರು ಹದಿನೈದು ನಿಮಿಷಗಳಲ್ಲಿ ಅವರಿಬ್ಬರನ್ನು ಎರಡು ಅಂತಸ್ತಿನ ಹಳೆಯ ಮನೆಯ ಮುಂದೆ ಬಂದು ತಲುಪಿಸಿತ್ತು. ಟ್ಯಾಕ್ಸಿಯವನಿಗೆ ದುಡ್ಡು ಕೊಟ್ಟು ರಾಘು ಹೇಳಿದ ” ಸೋಮಣ್ಣ! ಇದೇ ಮುಕ್ತಿ ಭವನ ” ಎಂದು. ಒಳಗಡೆ ಹೋದಾಗ ಟೇಬಲ್ಲಿನ ಮುಂದೆ ಕುಳಿತಿದ್ದ ಇಳಿ ವಯಸ್ಸಿನ ಮನುಷ್ಯ ಹಿಂದಿ ಭಾಷೆಯಲ್ಲಿ ಮಾತನಾಡತೊಡಗಿದ 

” ನನ್ನ ಹೆಸರು ಶುಕ್ಲಾ, ಈ ಭವನದ ಮ್ಯಾನೇಜರು. ತಮಗೇನು ಆಗ ಬೇಕಾಗಿದೆ ?”

ರಾಯರ ಫೋಟೋ ತೋರಿಸಿ ರಾಘು ಹೇಳಿದ, ” ಇವರು ನಮ್ಮ ತಂದೆ. ಹೆಸರು ರಘೋತ್ತಮ ರಾವ್ ಅಂತ , ವಯಸು ಎಪ್ಪತ್ತು. ಈ ಭವನವನ್ನು ಸೇರಬೇಕೆಂಬ ಇಚ್ಛೆಯಿಂದ ಬೆಂಗಳೂರಿನಿಂದ ಬಂದಿದ್ದಾರೆ. ಅವರನ್ನು ಭೇಟಿಯಾಗಬೇಕಿತ್ತು ” ಎಂದು ಮಾತು ಮುಗಿಸಿದ. 

” ನಮ್ಮಲ್ಲಿ ಇರುವುದು ಕೇವಲ ಹನ್ನೆರಡು ಕೋಣೆಗಳು ಆದರೆ ಈ ಹೆಸರಿನವರು ಯಾರೂ ಅವುಗಳಲ್ಲಿ ಇಲ್ಲ. ಆದರೆ ನಿನ್ನೆ ಬೆಳಿಗ್ಗೆ ಇದೇ  ತರಹದ  ವ್ಯಕ್ತಿಯೊಬ್ಬರು ಬಂದಿದ್ದರು, ನಮ್ಮ ಭವನದ ನಿಯಮಗಳಿಗೆ ಅರ್ಹರಿರಲಿಲ್ಲವಾದ್ದರಿಂದ ಅವರಿಗೆ ಕೋಣೆಯನ್ನು ಕೊಡಲಾಗಲಿಲ್ಲ. ಪಕ್ಕದಲ್ಲಿ ಇರುವ ಮುಮುಕ್ಷು ಭವನಕ್ಕೆ ಹೋಗಿ ಎಂದು ಹೇಳಿದೆ ” ಎಂತಂದ. 

ಭವನದ ನಿಯಮಗಳು ಏನಿರಬಹುದೆಂದು ರಾಘು ಯೋಚಿಸುತ್ತಿರುವಾಗಲೇ ಶುಕ್ಲಾ ಮಾತು ಮುಂದುವರೆಸಿದ್ದ. ” ಭವನದಲ್ಲಿ ಇರಲು ಕೇವಲ ಎರಡೇ ವಾರ ಅವಕಾಶ. ಅಷ್ಟರಲ್ಲಿಯೇ ಅವರು ಜೀವ ತೊರೆದು ಮುಕ್ತಿ ಹೊಂದಬೇಕು, ಇಲ್ಲವಾದರೆ ಮರಳಿ ಮನೆಗೆ ಹೋಗಬೇಕು. ಪ್ರತಿ ದಿನದ ಬಾಡಿಗೆ ಇಪ್ಪತ್ತು ರೂಪಾಯಿ ಮಾತ್ರ  —–” ಎಂದು ಇನ್ನೂ ಮಾತನ್ನು  ಮುಂದುವರೆಸಿದ್ದ. ಕೌತುಕದಿಂದ ಅವನ ಮಾತುಗಳನ್ನೇ ಆಲಿಸುತ್ತಿದ್ದ ಸೋಮಣ್ಣನಿಗೆ ಭವನದ ಒಳಗಡೆ ನೋಡಬೇಕು ಎಂಬ ಕುತೂಹಲ ಉಂಟಾಗಿ ಅವನನ್ನು ಕೇಳಿದ, ” ನಾವು ಭವನದ ಒಳಗಡೆ ಒಮ್ಮೆ ಸುತ್ತಾಡಬಹುದೆ ?” ” ಏನೂ ತೊಂದರೆಯಿಲ್ಲ ” ಎಂದು ಶುಕ್ಲಾ ಅವರನ್ನು ಒಳಗಡೆ ಕರೆದುಕೊಂಡು ಹೋದ. ಭವನದ ಮಧ್ಯದಲ್ಲಿ ಒಂದು ಸಣ್ಣ ದೇವಸ್ಥಾನವಿತ್ತು. ಬೆಳಗುತ್ತಿದ್ದ ಆರತಿಯ ಜೊತೆಗೆ ಜೋರಾಗಿ ಘಂಟೆ ಬಾರಿಸುತಲಿತ್ತು. ಅಷ್ಟೇ ಜೋರಾಗಿ ಅರ್ಚಕನು ಮಂತ್ರವನ್ನು ಪಠಿಸುತ್ತಿದ್ದನು. ತೆರೆದಿದ್ದ ಬಾಗಿಲಿನ ಕೋಣೆಗಳಿಂದ, ಕೊನೆಯ ಉಸುರಿನಲ್ಲಿ ಮುಕ್ತಿಯನ್ನು ಕಾಣುವ  ಸಲುವಾಗಿ ಕಾಯುತಲಿದ್ದ ಜೀವಿಗಳು, ಸಣಕಲು ಕಣ್ಣುಗಳಿಂದ ಪೂಜೆಯನ್ನು ವೀಕ್ಷಿಸುತಲಿದ್ದವು. ಇನ್ನೊಬ್ಬ ಅರ್ಚಕನು ಆ ಜೀವಿಗಳ ಬಾಯಲ್ಲಿ ಗಂಗಾ ಜಲವನ್ನು ಸುರಿದು ಬಿಲಪತ್ರಿಯನ್ನು ತಿನ್ನುಸಿತಲಿದ್ದನು. ಕೆಳಗಿನ  ಕೋಣೆಯಲ್ಲಿ ಇಹಲೋಕ ತೊರೆದಿದ್ದ ದೇಹವೊಂದಕ್ಕೆ ಅಂತಿಮ ಸಂಸ್ಕಾರದ ಸಿದ್ಧತೆಗಳು ನಡೆದಿದ್ದವು. ಮೃತ ದೇಹದ ಜೊತೆಗಿದ್ದ ಸಂಬಂಧಿಯೊಬ್ಬ, ಹೊರಬರಲು ಹಾತೊರೆಯುತ್ತಿದ್ದ ಕಣ್ಣೀರನ್ನು ತಡೆದು, ಕೊನೆಗೂ ದೇಹಕ್ಕೆ ಮುಕ್ತಿ ಸಿಕ್ಕಿತಲ್ಲ ಎಂಬ ನೆಮ್ಮದಿಯ ಉಸಿರನ್ನು ಹಾಕಲು ಪ್ರಯತ್ನಿಸುತ್ತಿದ್ದನು. ಶುಕ್ಲಾ ಇನ್ನೂ ಏನನ್ನೋ ಹೇಳುತ್ತಲೇ ಇದ್ದನು ಆದರೆ, ಬಾಯಿ ತೆರೆದು ವಿಚಿತ್ರ ದೃಷ್ಟಿಯಿಂದ ಇದನ್ನೆಲ್ಲಾ ನೋಡುತ್ತಿದ್ದ ಸೋಮಣ್ಣ ಮತ್ತು ರಾಘುವಿಗೆ ಅವನ ಮಾತಿನ ಕಡೆಗೆ ಲಕ್ಷ್ಯ ಇರಲಿಲ್ಲ. ಕೊನೆಗೂ ಮೌನ ಮುರಿದು ಸೋಮಣ್ಣ ಕೇಳಿದ, ” ರಾಘಪ್ಪ ಇವರಿಗೆಲ್ಲ ಮುಕ್ತಿ ಸಿಗತೈತಾ ?” ” ನನಗೇನು ಗೊತ್ತು? ಅವರವರ ನಂಬಿಕೆ, ಅದರ ವಿರುದ್ಧವಾಗಿ ಮಾತಾಡೋಕೆ ನಾವ್ಯಾರು?” ಎಂದ ರಾಘು. ಶುಕ್ಲಾನಿಗೆ ಧನ್ಯವಾದವನ್ನು ಹೇಳಿ ಇಬ್ಬರೂ ಮುಮುಕ್ಷು ಭವನದತ್ತ ನಡೆದರು. 

ಇಕ್ಕಟ್ಟಾದ ಬೀದಿಗಳೆಲ್ಲ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು. ಅಲ್ಲಲ್ಲಿ ಹೂವಿನ ಅಂಗಡಿಗಳು, ಶಿವನಾಮ ಜಪಿಸುತ್ತ ಸಾಗುತ್ತಿದ್ದ ಸಾಧುಗಳು, ಶಿವ ಸ್ತೋತ್ರ ಹಾಡುತ್ತಿದ್ದ ಧ್ವನಿವರ್ಧಕಗಳು ಮತ್ತು ಇದನ್ನೆಲ್ಲಾ ತುಂಬು ಕಣ್ಣುಗಳಿಂದ ಸವಿಯುತ್ತಿದ್ದ ಸಾವಿರಾರು ಯಾತ್ರಿಕರು. ಮುಕ್ತಿ ಭವನದಿಂದ  ಹೊರ ಬಂದ ಸೋಮಣ್ಣನಿಗೆ ಇದೊಂದು ಬೇರೆ ಲೋಕವೆ ಅನಿಸಿತು. ಈ ಜನ ಜಂಗುಳಿಯಲ್ಲಿ ರಾಯರೂ ಕೂಡ ಒಬ್ಬರಿರಬಹುದೆ ? ಎಂದು ಇಬ್ಬರ ಕಣ್ಣುಗಳು ಹದ್ದಿನಂತೆ ವೀಕ್ಷಿಸುತ್ತಿದ್ದವು. ಅರ್ಧ ಗಂಟೆಯ ನಡುಗೆಯ ನಂತರ ಮುಮುಕ್ಷು ಭವನಕ್ಕೆ ಬಂದು ಸೇರಿದ್ದರು. 

ಅದೊಂದು ವಿಶಾಲವಾದ ಕಟ್ಟಡ, ಬಾಗಿಲ ಬಳಿಯಲ್ಲಿಯೇ ಸ್ವಾಗತಕಾರನೊಬ್ಬ ಕುಳಿತ್ತಿದ್ದನು. ರಾಘು ರಾಯರ ಫೋಟೋ ತೋರಿಸಿ ವಿವರಗಳನ್ನು ಕೊಟ್ಟಾಗ ಅವನು ರಜಿಸ್ಟ್ರಿ ಪುಸ್ತಕವನ್ನು ಹುಡುಕಿ, ” ಹೌದು ನಿನ್ನೆ ಮಧ್ಯಾಹ್ನ ೨೦೦ ನಂಬರಿನ ಕೋಣೆಯನ್ನು ತೆಗೆದುಕೊಂಡಿದ್ದಾರೆ. ಆದರೆ ಬೆಳಿಗ್ಗೆ ಬೀಗವನ್ನು ಕೊಟ್ಟು ಎಲ್ಲೋ ಹೋಗಿದ್ದಾರೆ ಆಮೇಲೆ ಬರಬಹುದು” ಎಂದ. ಅವರಿಬ್ಬರಿಗೂ ಅತೀವ ಸಂತೋಷವಾಯಿತು ಆದರೆ ಹೋದವರು ಮರಳಿ ಬರದಿದ್ದರೆ ಏನು ಗತಿ ? ಎಂಬ ಭಯದಲ್ಲಿ, ತಮ್ಮ ಶೋಧನೆಯನ್ನು ಮುಂದುವರೆಸುವದೇ ಒಳ್ಳೆಯದೆನಿಸಿ, ಗಂಗೆಯ ತಟದೆಡೆ ಸಾಗಿದರು. 

ಗಂಗಾ ಮಾತೆಯು ಶಾಂತವಾಗಿ ಹರಿಯುತ್ತಿದ್ದಳು. ಆದರೆ ದಡದ ತುಂಬೆಲ್ಲ ಜನರೇ ಜನರು. ರಾಯರು ಇಲ್ಲೇ ಎಲ್ಲಾದರೂ ಸಿಗಬಹುದೆಂಬ ಆಸೆಯಿಂದ ಸಾಗುತ್ತಿದ್ದ ಅವರು ಕೆಲವೇ ನಿಮಿಷಗಳಲ್ಲಿ ಮಣಿಕರ್ಣಿಕಾ ಮಹಾ ಸ್ಮಶಾನವನ್ನು ತಲುಪಿದ್ದರು. ಅದೊಂದು ಸಾವಿನ ಸಂತೆ ಎನಿಸಿತು. ಸಾಲು ಸಾಲುಗಳಲ್ಲಿ ಮೃತದೇಹಗಳು ಉರಿಯುತ್ತಿದ್ದವು. ಚಿತೆಗಳಿಂದ ಉಕ್ಕುತ್ತಿದ್ದ ಅಗ್ನಿಯು ಆಕಾಶವನ್ನೇ ನುಂಗಲು ಹೊರಟಿದೆ ಎಂದು ಭಾಸವಾಗುತ್ತಿತ್ತು.  ತಲೆಬುರುಡೆಗಳನ್ನೇ ಹಾರವನ್ನಾಗಿ ಕೊರಳಲ್ಲಿ ಹಾಕಿಕೊಂಡು, ತುಂಡು ಬಟ್ಟೆಯ ಲಂಗೋಟಿಯನ್ನು ಸುತ್ತಿಕೊಂಡು, ಸುಟ್ಟು ಹೋದ ಹೆಣದ ಬೂದಿಯನ್ನು ಮೈ ತುಂಬಾ ಭಸ್ಮದಂತೆ ಬಡಿದುಕೊಂಡು, ಸಾವಿನಲ್ಲೂ ಸಂತೋಷದ ಕೇಕೆಯನ್ನು ಹಾಕುತಲಿದ್ದರು ಅಘೋರಿಗಳು. ಇಂಥ ಕಂಡರಿಯದ ದೃಶ್ಯವನ್ನು ನೋಡಲು ಜನರು ಗುಂಪು ಗುಂಪಾಗಿ ಸೇರಿದ್ದರು ತಾವೂ ಒಂದು ದಿನ ಈ ಅಘೋರಿಗಳ ಮೈಮೇಲಿನ ಭಸ್ಮವಾಗಬಹುದು ಎಂಬುವದನ್ನು ಮರೆತು. ಸೋಮಣ್ಣನಂತೂ ಮೂಕ ಶಿಲೆಯಾಗಿ ನಿಂತು ಬಿಟ್ಟಿದ್ದನು. ರಾಘು ವಾಸ್ತವಕ್ಕೆ ಬಂದು ಸೋಮಣ್ಣನನ್ನು ಎಚ್ಚರಿಸಿದ “ಸೋಮಣ್ಣ! ಗುಂಪಿನಲ್ಲಿ ಅಪ್ಪಾ ಏನಾದರು  ಕಂಡ್ರ ?” ಮಾತು ಬರದೆ ಸೋಮಣ್ಣ ಇಲ್ಲವೆಂದು ತಲೆಯಾಡಿಸಿದನು. ಇಷ್ಟು ವಿಶಾಲವಾದ ಜನ ಸಾಗರದಲ್ಲಿ ರಾಯರನ್ನು ಹೇಗೆ ಹುಡುಕುವದು ಎಂಬ ಪ್ರಶ್ನೆ ಇದ್ದರೂ, ಎದೆಗುಂದದೆ ಮತ್ತೆ ಮುಂದೆ ಸಾಗಿದರು. ಅನತಿ ದೂರದಲ್ಲಿ ಛತ್ರಿ ಹಿಡಿದು ಕುಳಿತಿದ್ದ ವ್ಯಕ್ತಿಯೊಬ್ಬ ಕಾಣಿಸಿದ. ಸೋಮಣ್ಣ  ಹಿಗ್ಗಿನ ಬುಗ್ಗೆಯಲ್ಲಿ ಚೀರತೊಡಗಿದ ” ಸಿಕ್ಕರು , ರಾಯರು ಸಿಕ್ಕರು ” ಎಂದು. 

ಶಾಂತವಾಗಿ ಗಂಗಾ ಮಾತೆಯ ಮಡಿಲನ್ನು ವೀಕ್ಷಿಸುತ್ತ ಕುಳಿತಿದ್ದರು ರಾಯರು. ಇವರನ್ನು ಕಂಡು ” ಅರೆ! ನೀವು ಯಾವಾಗ ಬಂದ್ರಿ? ನೀವೂ ಬರುವಂಗ ಇದ್ದಿದ್ದರ ಎಲ್ಲಾರೂ ಒಟ್ಟಿಗೇನೇ ಬರಬಹುದಾಗಿತ್ತಲ್ಲಾ” ಅಂತ ಅಂದರು. ಇವರಿಗೇನು ಹೇಳುವುದು ಎಂಬುವದು ಅರಿಯದೆ ಸೋಮಣ್ಣನೆಂದ “ರಾಯರೇ, ನೀವು ಇಲ್ಲಿಗೆ ಬರೂದನ್ನ  ನಮಗ ಹೇಳಿದರ ತಾನೇ?” ಬರೆದಿಟ್ಟ ಚೀಟಿಯ ಅರಿವಿಲ್ಲದೆ ರಾಯರೆಂದರು, “ಹಾಂಗೇನು! ನನಗ ಗೊತ್ತ ಆಗಿಲ್ಲ ನೋಡ. ರೈಲಿನಾಗ ಕುಳತ ಮ್ಯಾಲ ಫೋನು ಮಾಡಬೇಕಂದರ ಫೋನ ಸಿಗಲಿಲ್ಲ ” 

” ರಾಯರೇ, ಫೋನನ್ನ ಮನ್ಯಾಗ ಬಿಟ್ಟ ಬಂದ ಮ್ಯಾಲ ರೈಲಿನಾಗ ಹ್ಯಾಂಗ ಸಿಗತೈತಿ ?” ಅಂತ ಅಂದ ಸೋಮಣ್ಣ. ಏನೂ ಆಗಿಲ್ಲ ಅನ್ನುವಂತೆ ರಾಯರು ಅಂದರು, “ಇರಲಿ ಬಿಡ, ಊಟ ಮಾಡೀರಿಲ್ಲೋ? ಆ ಮುಮುಕ್ಷು ಭವನದಾಗ ಸಾತ್ವಿಕ ಊಟ ಭಾಳ ಚಲೋ ಐತಿ.” ಇವರ ನಡೆಗೆ ನಗಬೇಕೋ ಅಥವಾ ಅಳಬೇಕೊ ಎಂದು ತೋರಲಿಲ್ಲ ರಾಘುನಿಗೆ. ” ಅಪ್ಪಾ! ಎಲ್ಲ ಆಗೈತಿ ಬಿಡು. ನೀ ಹ್ಯಾಂಗದಿ?” ನದಿಯಲ್ಲಿ ಏನೋ ನೋಡುತ್ತಿದ್ದ ರಾಯರೆಂದರು, ” ನನಗೇನ ಆಗೈತಿ ಎಲ್ಲಾ ಆರಾಮನ ಅದಿನಲ್ಲಾ” ಎಂದು ಹೇಳಿ ಮಾತನ್ನು ಬದಲಿ ಮಾಡಿದರು. “ಸೋಮಣ್ಣ ಅಲ್ಲಿ ನೋಡಿದ್ಯೇನ?” ಎಂದರು. ಸೋಮಣ್ಣನಿಗೆ ರಾಯರು ಏನು ನೋಡುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಕೆಲವರು ನದಿಯಲ್ಲಿ ಭಸ್ಮದ ಕುಂಡಿಯನ್ನು ಬಿಡುತ್ತಿದ್ದರು, ಕೆಲವರು ಚಿತೆಗೆ ಅರ್ಪಿಸುವ ಮುನ್ನ ಹೆಣದ ಮೈಯನ್ನು ತೊಳೆಯುತ್ತಿದ್ದರು, ಇನ್ನೂ ಕೆಲವರು ನದಿಯಲ್ಲಿ ಮುಳುಗಿ ಏಳುತ್ತಿದ್ದರು. ” ಏನೂ ನೋಡಿಲ್ಲ ರಾಯರೇ” ಅಂತ ಮಾತು ಮುಗಿಸಿದ. “ಮಾಡಿದ ಪಾಪ ಎಲ್ಲಾ ಹೋಗಲಿ ಅಂತ ನೀರಾಗ ಹ್ಯಾಂಗ ಮುಳಗಿ ಎಳತಾರು ನೋಡು. ಗಂಗಮ್ಮನ ಮಡಿಲು ಇವರ ಪಾಪದಿಂದ ತುಂಬಿ ಹೋಗಿರಬಹುದು. ಅದಕ ನಾನು ಸ್ನಾನ ಮಾಡಿಲ್ಲ. ಇಲ್ಲಿಯವೆರೆಗೂ ಏನು ಮಾಡೀನಿ ಅಂತ ಗೊತ್ತಿಲ್ಲ. ಆದರ ಇನ್ನ ಮ್ಯಾಲಾದರೂ ಒಳ್ಳೆಯ ಕೆಲಸಾ ಮಾಡಿ ಮರಳಿ ಬಂದು, ಸ್ವಲ್ಪ ಪುಣ್ಯವನ್ನು ಗಂಗಮ್ಮನ ಮಡಿಲಾಗ ಹಾಕಬೇಕು ಅಂತ ನಿರ್ಧಾರ ಮಾಡಿದೀನಿ. ನೀವು ಹೇಳಿದಾಂಗ ನನಗ ಮರುವಿನ ಖಾಯಿಲೆ ಇದ್ದರೂ ಇರಬಹುದು ಆದರ ಇನ್ನೂ ಮನಸು ದೇಹ ಗಟ್ಟಿ ಐತಿ. ನಡೀರಿ ಊರಿಗೆ ಮರಳಿ ಹೋಗುನು ” ಅಂತ ಅಂದರು. ರಾಯರು ಅಷ್ಟು ಸುಲಭವಾಗಿ ಮರಳಿ ಬರುವ ವಿಚಾರವನ್ನು ಕೇಳಿ ಅವರಿಬ್ಬರಿಗೂ ವಿಪರೀತ ಖುಷಿ ಆಯಿತು. ಅಪ್ಪನಿಗೇನೋ ಜ್ನಾನೋದಯ ಆದ ಹಾಗೆ ಇದೆ, ಅದಕ್ಕೂ ಒಂದು ಕಾರಣವಿರಬಹುದೆಂದು ರಾಘು ಅಂದುಕೊಂಡನು. ಕಳಿಂಗ ಯುದ್ಧದಲ್ಲಿ ಅಸ್ತ್ರ ತ್ಯಾಗವನ್ನು ಮಾಡಲು ಸಾಮ್ರಾಟ ಅಶೋಕನಿಗೂ ಒಂದು ಕಾರಣವಿತ್ತು. ಸಿದ್ಧಾರ್ಥ ನಡು ರಾತ್ರಿಯಲ್ಲಿ ಅರಮನೆಯನ್ನು ಬಿಟ್ಟು ಕಾಡನ್ನು ಸೇರಿ ಬುದ್ಧನಾಗಲೂ  ಒಂದು ಕಾರಣವಿತ್ತಲ್ಲವೇ? ಎಂದು ಸಮಾಧಾನಮಾಡಿಕೊಂಡನು. 

ರಾಯರು ಇನ್ನೂ ಏನನ್ನೋ ಹೇಳುತಲಿದ್ದರು “ಮುಕ್ತಿ ಭವನದಲ್ಲಿ ಇರುವ ಆ ಶುಕ್ಲಾನಿಗೆ ಬುದ್ದಿ ಕಡಿಮೆ ಅಂತ ಅಣಿಸತೈತಿ. ಅವನು ಹೇಳಿದಾಂಗ ಎರಡು ವಾರದಲ್ಲಿ ಜೀವ ಬಿಡಾಕ ಹ್ಯಾಂಗ ಸಾಧ್ಯ ಐತಿ ? ಸಾವು ನಮ್ಮ ಕೈಯ್ಯಾಗ ಐತೇನು? ಭವನದ ಬಗ್ಗೆ ಭಾಳ ಓದಿದ್ದೆ, ಒಂದೆರಡು ದಿನ ಅಲ್ಲಿ ಇರಬೇಕಂದರ ಆ ಮನುಷ್ಯ ಇರಾಕ  ಬಿಡಲಿಲ್ಲ”. “ಇರಲಿ ಬಿಡಪ್ಪಾ, ಅವನು ತನ್ನ ಭವನದ ನಿಯಮವನ್ನು ಪಾಲಿಸಿದಾನ, ಅವನದೇನು ತಪ್ಪು?” ಎಂದು ರಾಘು ರಾಯರನ್ನು ಸರಿಪಡಿಸಲು ಪ್ರಯತ್ನಿಸಿದ. ವಾರಣಾಸಿಯಿಂದ ಬೆಂಗಳೂರಿಗೆ ಬರುವ ರೈಲು ನಿಧಾನವಾಗಿ ಚಲಿಸತೊಡಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ನಿದ್ದೆಯೇ ಇರದ ಸೋಮಣ್ಣನು ಮಲಗಲು ಯತ್ನಿಸುತ್ತಿದ್ದ. ಆದರೆ ಅವನ ಕಣ್ಣುಗಳ ಮುಂದೆ ಪದೇ ಪದೇ ಅದೇ ಮುಕ್ತಿ ಭವನ, ವಾರಣಾಸಿಯ ಇಕ್ಕಟ್ಟಾದ ಬೀದಿಗಳು, ಮಣಿಕರ್ಣಿಕಾ ಸ್ಮಶಾನದ ಚಿತ್ರಣಗಳು ಮತ್ತು ಗಂಗಾ ನದಿಯಲ್ಲಿ ನಡೆಯುತ್ತಿದ್ದ ವಿವಿಧ ಕಾರ್ಯಗಳು ಸುತ್ತತೊಡಗಿದ್ದವು. ಜೀವನದ ಎಲ್ಲ ಮುಖಗಳನ್ನು ಒಂದೇ ದಿವಸದಲ್ಲಿ ಕಂಡುಕೊಂಡಿದ್ದ ಸೋಮಣ್ಣ, ಮನಸ್ಸಿನಲ್ಲಿಯೇ ಅಂದು ಕೊಂಡ ‘ಇದೆಂತ ಅದ್ಭುತ ನಗರ’ ಎಂದು. ಮೇಲಿನ ಬರ್ತಿನಲ್ಲಿದ್ದ ರಾಘು ರಾಯರಿಗೇನೋ ಹೇಳುತಲಿದ್ದ 

” ಅಪ್ಪಾ, ನೀನು ತಂದೆಯಾಗಿ ನನಗೆ ಏನು ಮಾಡಬೇಕಾಗಿತ್ತೋ ಅದನ್ನೆಲ್ಲಾ ಮಾಡಿಬಿಟ್ಟಿದಿ. ಈಗ ಮಗನಾಗಿ ನಾನು ನಿನಗ ಏನು ಮಾಡಬೇಕು ಎಂಬುದಕ್ಕ ಅವಕಾಶ ಕೊಡು. ನನ್ನ ಆಸೆಗೆ ನೀನು ಎಂದೂ ಅಡ್ಡ ಬಂದಿಲ್ಲ. ಹಾಂಗ ನಾನೂ ನೀನು ಮಾಡಬೇಕಿಂದಿರುವ ಕೆಲಸಗಳಿಗೆ ಅಡ್ಡ ಬರುದಿಲ್ಲ. ಮುಂದಿನ ತಿಂಗಳು ಊರಿಗೆ ಬರಾಕತಿನಿ, ನಿನ್ನ ಮೊಮ್ಮಗ ಕ್ರಿಷ್ ( ಕ್ರಿಷ್ಣ ) ನ ಮುಂಜವಿ ಮಾಡಾಕ. ನೀನೂ ನಮ್ಮ ಕೂಡ ಇಂಗ್ಲೆಂಡಿಗೆ ಬಂದು ಬಿಡು. ನಿನ್ನ ಸೊಸಿ ಬಿಳಿಯವಳಾದರೂ ನಮ್ಮ ಸಂಸ್ಕೃತಿ ಎಲ್ಲ ಕಲತಾಳು. ದಿನಾಲೂ ಪೂಜಾ ಮಾಡತಾಳು. ಬೇಜಾರಾದಾಗ ಒಂದಷ್ಟು ದಿನ ಊರಿಗೆ ಬಂದು ಸೋಮಣ್ಣನ ಕೂಡ ಇರು —–“

ಇನ್ನೂ ಏನನ್ನೋ ಹೇಳುತ್ತಲೇ ಇದ್ದನು. ಅವನ ಮಾತುಗಳಿಗೆ  ತಿರಿಗುತ್ತರಿಸದೆ ಸುಮ್ಮನೆ ಹೂಂ ಗುಡುತ್ತಿದ್ದ ರಾಯರು ಹಾಗೆಯೇ ನಿದ್ದೆ ಹೋಗಿ, ಜೋರಾಗಿ ಏನನ್ನೋ ಬಡ ಬಡಿಸುತ್ತಿದ್ದರು “ದಾನ ಧರ್ಮ…ಪುಣ್ಯ ಪಾಪ…ಮುಕ್ತಿ ಮೋಕ್ಷ…” ನಗರವನ್ನು ದಾಟಿದ್ದ ರೈಲು, ಆವರಿಸಿದ ಕತ್ತಲೆಯನ್ನು ಸೀಳಿಕೊಂಡು ಜೋರಾಗಿ ಓಡತೊಡಗಿತು, ತನ್ನ ಕೊನೆಯ ನಿಲ್ದಾಣವನ್ನು ಮುಟ್ಟಲು. 

–   ಶಿವಶಂಕರ ಮೇಟಿ 

ಸಾಕ್ಷಾತ್ಕಾರ

ಬದುಕು ತಾವೆಂದುಕೊಂಡಂತೆ ನಡೆಯಲಾರದೆ , ಅಸಹಾಯಕರಾಗಿದ್ದ ತಂದೆ ಮತ್ತು ಮಗನ ನಡುವೆ ಕೊಂಡೆಯಾಗಿದ್ದನು ಸೋಮಣ್ಣ. ರಾಯರ ಬದುಕಿನ ಹೆಜ್ಜೆಯನ್ನು ಹಿಂಬಾಲಿಸಿದ ಅವನಿಗೆ ಕೊನೆಗೂ ಜೀವನದ ಸಾಕ್ಷಾತ್ಕಾರವಾಯಿತು. ವಿಷಯ ಹಳೆಯದು ಆದರೆ ಕಥೆ ಹೊಸದು . ಸಾಧ್ಯವಾದರೆ ಓದಿ ತಮ್ಮ ಅಭಿಪ್ರಾಯವನ್ನು ತಿಳಿಸಿ.

– ಇಂತಿ ಸಂಪಾದಕ

ವಿಶಾಲವಾದ ಹೊರದೋಟದ ಮೂಲೆಯೊಂದರಲ್ಲಿ ಕುಳಿತಿದ್ದ ‘ರಾಯರು’ ತದೇಕದಿಂದ ಗಿಡದ ಮೇಲಿದ್ದ ಗುಬ್ಬಿಯ ಗೂಡನ್ನೇ ವೀಕ್ಷಿಸುತ್ತಿದ್ದರು. ತೋಟದ ಕೆಲಸದಲ್ಲಿ ಮಗ್ನನಾಗಿದ್ದ ಸೋಮಣ್ಣನನ್ನು ಕರೆದು ” ಸೋಮಣ್ಣ ಅದನ್ನು ನೋಡಿದೀಯಾ?” ಎಂದರು.
ಅವರೇನು ಕೇಳುತಿದ್ದಾರೆ ಎಂದರಿಯದೆ ಕಕ್ಕಾಬಿಕ್ಕಿಯಾದ ಸೋಮಣ್ಣನು ” ರಾಯರೆ ನೋಡಿದೆ, ಆ ಗುಲಾಬಿ ಕಂಟಿಯನ್ನು ಚನ್ನಾಗಿ ಕಟ್ಟು ಮಾಡಬೇಕು , ನಾಳೆ ಮಾಡುತ್ತೀನಿ ” ಎಂದನು.
” ನಿನಗೆ ಗುಲಾಬಿ ಕಂಟಿಯ ಮೇಲೆ ಧ್ನ್ಯಾನ , ನನಗೆ ಆ ಗುಬ್ಬಿಯ ಗೂಡಿನ ಮೇಲೆ. ಇರಲಿ ಬಿಡು, ಅವರವರ ಲಕ್ಷ ಅವರವರ ಅಭಿರುಚಿಯಂತೆ. ಭಾಳ ದಿನದಿಂದ ಆ ಗೂಡನ್ನ ನೋಡತಾ ಇದ್ದೆ. ಮರಿ ಗುಬ್ಬಿ, ತಂದೆ ಮತ್ತು ತಾಯಿ ಗುಬ್ಬಿ ಎಲ್ಲ ಸೇರಿ ಚಿವಗುಡುತಿದ್ದವು. ಈಗ ನೋಡು ಧ್ವನಿ ಇಲ್ಲದ ಆ ಮುದಿ ಗುಬ್ಬಿ ಮಾತ್ರ ಉಳಿದುಕೊಂಡಿದೆ, ಇಷ್ಟರಲ್ಲಿಯೇ ಅದೂ ಕೂಡ ಹಾರಿಹೋಗಬಹುದು”
ಅವರೇಕೆ ಈ ಮಾತನ್ನು ಆಡುತ್ತಿದ್ದಾರೆ ಎಂಬ ಅರಿವಿನೊಂದಿಗೆ ಸೋಮಣ್ಣ ಅಂದ “ಇರಲಿ ಬಿಡಿ ರಾಯರೆ, ಪ್ರಾಣಿ
ಪಕ್ಷಿಗಳಾದರೇನು ಮನುಷ್ಯರಾದರೇನು ಎಲ್ಲರಿಗೂ ಒಂದೇ ಪ್ರಕೃತಿಯ ನಿಯಮ. ಕೂಡಿದವರು ಒಂದು ದಿನ ಅಗಲುವದು ಸಹಜ ತಾನೇ ?“
” ಅರೆ ಹೌದಲ್ಲ , ನಾನು ದಡ್ಡ ನೀನು ಎಷ್ಟೊಂದು ಚನ್ನಾಗಿ ಅರ್ಥ ಮಾಡಿಕೊಂಡಿದಿ, ಇರಲಿ ಬಿಡು ಸಕ್ಕರೆ ಇಲ್ಲದ ಲೋಟಾ ಕಾಫಿ ತಗೊಂಡು ಬಾ ” ಅಂತೆಂದರು.
ಸೋಮಣ್ಣ ರಾಯರ ಮನೆಯಲ್ಲಿ ಕೆಲಸಕ್ಕೆಂದು ಸೇರಿ ಸುಮಾರು ಇಪ್ಪತ್ತೈದು ವರುಷಗಳಾಗಿದ್ದವು. ಕಾಲ ಬದಲಾಗಿದ್ದರೂ ಅವರ ಮನೆಯಲ್ಲಿಯೇ ತನ್ನ ಬದುಕನ್ನು ಕಟ್ಟಿಕೊಂಡ ಅವನಿಗೆ, ಆ ಮನೆಯನ್ನು ಬಿಟ್ಟು ಬೇರೆ ಕಡೆಗೆ ಹೋಗಬೇಕೆಂದು ಎಂದೂ ಅನಿಸಿರಲಿಲ್ಲ. ಆ ಮನೆಯಲ್ಲಿ ನಡೆದು ಹೋದ ಎಲ್ಲ ಆಗು ಹೋಗುಗಳಿಗೆ ಅವನೊಬ್ವ ಜೇವಂತ ಸಾಕ್ಷಿ. ಇತ್ತೀಚಿನ ದಿನಗಲ್ಲಿ ರಾಯರ ನಡುವಳಿಕೆಯಲ್ಲಿ ಬಹಳೇ ಬದಲಾವಣೆ ಆಗಿದ್ದನ್ನು ಸೂಕ್ಷ್ಮವಾಗಿ ಗಮಿನಿಸಿದ್ದ. ಒಮ್ಮೊಮ್ಮೆ ಹಳೆಯ ನೆನಪಿನ ಕಂತೆಯನ್ನು ಬಿಚ್ಚಿ ತಾಸುಗಟ್ಟಲೆ ಮಾತನಾಡುತ್ತ ಕೂಡ್ರುತ್ತಾರೆ, ಹೇಳಬೇಕಿದ್ದಿದ್ದನ್ನು ಮರೆತು ಇನ್ನೇನೋ ಹೇಳಿಬಿಡುತ್ತಾರೆ, ಸರಿಪಡಿಸಿದಾಗ ‘ಹೌದಲ್ಲ! ನೀನೇ ಖರೆ ಬಿಡು’ ಎಂದು ಮಾತು ಮುಗಿಸುತ್ತಾರೆ . ನಡೆದು ಹೋದ ಘಟನೆಗಳು ತಮಗೆ ಗೊತ್ತೇ ಇಲ್ಲ ಎಂಬುವಂತೆ
ವರ್ತಿಸುತ್ತಾರೆ. ರಾಯರಿಗೇನಾದರೂ ‘ ಅರಳು ಮರಳು ‘ ಆರಂಭ ಆಗಿದೆಯೇನೋ ಎಂದು ಅನಿಸಿದರೂ, ಛೆ! ಅವರಿಗೆ ಇನ್ನೂ ಅಷ್ಟೊಂದು ವಯಸಾಗಿಲ್ಲ ಬಿಡು, ಎಂದು ತನ್ನಷ್ಟಕ್ಕೆ ತಾನೇ ಸಮಾಧಾನ ಮಾಡಿಕೊಂಡಿದ್ದನು.
ಸೋಮಣ್ಣ ಅವರ ಮೆಚ್ಚಿನ ಕಾಫಿಯೊಂದಿಗೆ ಮರಳಿ ಬಂದಾಗ ರಾಯರು ಇನ್ನೂ ಗುಬ್ಬಿಯ ಗೂಡಿನಲ್ಲಿಯೇ ಮಗ್ನರಾಗಿದ್ದರು.
” ಬಿಸಿ ಕಾಫಿ ರಾಯರೆ ” ಎಂದಾಗ
” ಎಷ್ಟ ಜಲ್ದಿ ಬಂದು ಬಿಟ್ಟೆ, ನಿನಗೂ ಒಂದು ಲೋಟ ತಂದಿಯಲ್ಲ? ಕೂತಕೊ ನಿನಗ ಒಂದು ಮಾತು ಹೇಳಬೇಕೆಂದಿದ್ದೆ —“
ಎಂದು ಪೀಠಿಕೆ ಹಾಕಿದಾಗ ಸೋಮಣ್ಣನಿಗೆ ಅನಿಸಿತು, ಕನಿಷ್ಠ ಇನ್ನೊಂದು ಗಂಟೆಯವರೆಗೂ ಇಲ್ಲಿಂದ ಮುಕ್ತಿಯಿಲ್ಲವೆಂದು. ಮನಸು ಗಟ್ಟಿಮಾಡಿಕೊಂಡು ಕೇಳಿದ “ಅದೇನು ರಾಯರೆ ಹೊಸ ಮಾತು?” ಎಂದು.

” ರಾಘು ದೊಡ್ಡವನಾಗಿ ಬಿಟ್ಟಾನಲ್ಲ ಅವನಿಗೆ ಸಾವಿತ್ರಿ ಮಗಳ ಕೂಡ ಮದುವಿ ಮಾಡಿಬಿಡಬೇಕಲ್ಲ”
ಸೋಮಣ್ಣನಿಗೆ ಸ್ವಲ್ಪ ಆಘಾತವಾದರೂ ತೋರಿಸಿಕೊಳ್ಳದೆ ಅಂದ
“ರಾಯರೇ ರಾಘುನ ಮದುವೆ ಆಗಿ ಹತ್ತು ವರ್ಷವಾಯಿತಲ್ಲ”
ಸ್ವಲ್ಪ ಏನೋ ವಿಚಾರಿಸಿ ತಲೆಕೆರೆದುಕೊಂಡು ರಾಯರೆಂದರು.
” ಅರೆ , ಹೌದಲ್ಲ ಮರತೇ ಹೋಗಿತ್ತು. ನೀನೆ ಖರೆ ನೋಡು . ಹೋದ ವರ್ಷನ ಬಂದಿದ್ದನಲ್ಲ ತನ್ನ ಬಿಳಿ ಹೆಂಡತಿ ಮತ್ತ ಮಗನನ್ನ ಕರಕೊಂಡು. ಅವನಿಗೆ ನಾನೇ ಮದುವೆ ಮಾಡಬೇಕೆಂದು ಅಂದುಕೊಂಡಿದ್ನಲ್ಲ ಅದಕ್ಕ ಇನ್ನೂ ಅದರ ನೆನಪು ಉಳದೈತಿ ನೋಡು” ಎಂದು ಹೇಳಿ ಕಾಫಿಯ ಗುಟುಕನ್ನು ಹೀರಿದರು.
ರಾಘು ರಾಯರ ಒಬ್ಬನೇ ಮಗ. ರಾಯರ ಇಚ್ಛೆಯಂತೆ ಓದಿ ಡಾಕ್ಟರನಾಗಿದ್ದ. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಹೋದವನು ಅಲ್ಲಿಯೇ ಬಿಳಿಯ ಹೆಂಡತಿಯನ್ನು ಕಟ್ಟಿಕೊಂಡು ನೆಲೆ ಊರಿದ್ದ. ರಾಯರಿಗೆ ಮೊದಲಿನಿಂದಲೂ ತಮ್ಮ ತಂಗಿ ಸಾವಿತ್ರಿಯ ಮಗಳನ್ನು ಸೊಸೆಯನ್ನಾಗಿ ಸ್ವೀಕರಿಸುವ ಇಚ್ಛೆಯಿದ್ದರೂ ಸಾಧ್ಯವಾಗದ ಕಾರಣ ತುಂಬಾ ಬೇಜಾರು ಆಗಿತ್ತು. ಆದರೆ ಮಗನ ಮನಸಿಗೆ ನೋವಾಗಬಾರದೆಂದು ಸುಮ್ಮನೆ ಇದ್ದರು.
“ಹೋಗಲಿ ಬಿಡಿ ರಾಯರೆ ಎಲ್ಲಾ ದೈವ ಇಚ್ಛೆಯಂತೆ ನಡೆಯುವದು ತಾನೇ?” ಎಂದು ಹೇಳಿ ಸೋಮಣ್ಣ ಮಾತು ಮುಗಿಸಲು ಯತ್ನಿಸಿದ.
” ಇರಲಿ ಬಿಡು, ಕಸ್ತೂರಿಯ ಹುಟ್ಟು ಹಬ್ಬಕ್ಕೆ ಹೊಸ ಸೀರೆ ತರಬೇಕಲ್ಲ, ನೀನೂ ತಯ್ಯಾರ್ ಆಗು ಇಬ್ಬರೂ ಪೇಟೆಗೆ ಹೋಗಿ ಬಂದು ಬಿಡೋಣ” ಎಂದಾಗ ಸೋಮಣ್ಣನ ಕಣ್ಣಿನಲ್ಲಿ ಒಂದೆರಡು ಹನಿಗಳು ಗೊತ್ತಿಲ್ಲದ ಹಾಗೆ ಮೂಡಿದ್ದವು.
“ರಾಯರೆ ಕಸ್ತೂರಮ್ಮ ಮೇಲೆ ಹೋಗಿ ಎರಡು ವರ್ಷಗಳಾದುವಲ್ಲ” ಎಂದು ಹೇಳಿ ಕಣ್ಣೀರು ವರಸಿಕೊಂಡ.
“ಹೌದಲ್ಲ ಸೋಮಣ್ಣ , ನಾನು ಮರತೇ ಹೋಗಿನ್ನಿ ನೋಡು, ಮನೆಯೊಳಗೆ ರೊಟ್ಟಿ ಸುಡಾಕತ್ತಾಳ ಅಂತ ಅಂದುಕೊಂಡಿದ್ದೆ” ಅಂತ ಹೇಳಿ ರಾಯರು ಗುಬ್ಬಿಯ ಗೂಡಿನತ್ತ ಮತ್ತೊಮ್ಮೆ ನೋಡತೊಡಗಿದರು. ರಾಯರ ಈ ಮರುವಿಕೆಗೆ ಯಾಕೋ ಸೋಮಣ್ಣನಿಗೆ ಭಯವಾಗತೊಡಗಿತು. ಅವರ ಮಗನಿಗೆ ಹೇಳುವುದೇ ಒಳ್ಳೆಯದೆಂದು ಅಂದುಕೊಂಡ.
ಕಸ್ತೂರಮ್ಮ ರಾಯರ ಹೆಂಡತಿ. ಎರಡು ವರ್ಷಗಳ ಹಿಂದೆ ಅದಾವುದೊ ಕ್ಯಾನ್ಸರ್ ರೋಗಿಗೆ ಬಲಿಯಾಗಿ ಇಹಲೋಕ
ತೊರೆದಿದ್ದಳು. ಸೋಮಣ್ಣ ಅವಳನ್ನು ಯಾವಾಗಲೂ ತಾಯಿಯ ಸ್ಥಾನದಲ್ಲಿ ನೋಡಿದವನು, ಅವಳ ಹೆಸರು ಬಂದಾಗ ಅವನಿಗೆ ಗೊತ್ತಿಲ್ಲದೇ ಅವನ ಕಣ್ಣುಗಳು ಒದ್ದೆಯಾಗಿಬಿಡುತ್ತಿದ್ದವು. ಸೋಮಣ್ಣನೂ ಒಂದು ಸಲ ಗೂಡಿನತ್ತ ಕಣ್ಣಾಡಿಸಿದ, ಮುದಿ ಗುಬ್ಬಿಯೊಂದು ಯಾರದೋ ಬರುವಿಕೆಗಾಗಿ ಕಾಯುವಂತಿತ್ತು. ರಾಯರು ಸಣ್ಣಗೆ ಏನನ್ನೋ ವಟಗುಟ್ಟಿದರು ಆದರೆ ಸೋಮಣ್ಣನಿಗೆ ಅರ್ಥವಾಗಲಿಲ್ಲ.
“ಸೋಮಣ್ಣ ಆದರೂ ರಾಘು ಹಿಂಗ ಮಾಡಬಾರದಾಗಿತ್ತು. ತಾಯಿಯ ಚಿತೆಗೆ ಬೆಂಕಿ ಹಚ್ಚದವನು ಅದೆಂತ ಮಗಾ?”
“ಇರಲಿ ಬಿಡಿ ರಾಯರೆ , ಅವನೇನು ಮುದ್ದಾಮಾಗಿ ಮಾಡಲಿಲ್ಲ, ಅವನದೇನು ತಪ್ಪು? ದೂರದ ದೇಶ, ಸಮಯಕ್ಕೆ ಸರಿಯಾಗಿ ಬರಲಿಕ್ಕೆ ಆಗಲಿಲ್ಲ” ಎಂದು ಹೇಳಿ ರಾಯರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ.

‘ದೂರದ ದೇಶದಲ್ಲಿದ್ದರೆ ಎಲ್ಲರಿಗೂ ಇದೆ ಗತಿ ತಾನೇ ‘ ಎಂದು ತನ್ನ ಮನಸಿನಲ್ಲೊಮ್ಮೆ ವಟಗುಟ್ಟಿಕೊಂಡ. ಕಸ್ತೂರಮ್ಮ ಆಕಷ್ಮಿಕವಾಗಿ ತೀರಿಕೊಂಡಾಗ ರಾಘುನಿಗೆ ಅಂತಿಮ ಸಂಸ್ಕಾರಕ್ಕೆ ಬರಲಾಗಲಿಲ್ಲ. ಕಟ್ಟಾ ಸಂಪ್ರದಾಯಸ್ಥರಾದ ರಾಯರಿಗೆ ಕಸ್ತೂರಿಯ ಕಳೇಬರವನ್ನು ಭಾಳೋತ್ತು ಇಡಲು ಮನಸಿರಲಿಲ್ಲ, ಮನಸ್ಸಿಲ್ಲದಿದ್ದರೂ ಅಣ್ಣನ ಮಗನ ಕಡೆಯಿಂದ ಚಿತಾಧಾರಣೆ ಮಾಡಿಸಿದ್ದರು. ಆ ನೋವನ್ನು ಮಗನ ಜೊತೆಗೆ ಎಷ್ಟೋ ಸಲ ತೋರಿಕೊಂಡಿದ್ದರು. ರಾಘುನಿಗೂ ಅದರ ಬಗ್ಗೆ ಬಹಳೇ ನೋವಿತ್ತು, ಕಾಲದ ಗೊಂಬೆಯಾಗಿ ಸುಮ್ಮನಾಗಿದ್ದ.
” ಸೋಮಣ್ಣ, ನೀನೂ ಅವನಂಗ ಬಾಲಾ ಬಡಿಯಾಕತ್ತಿ ನೋಡು. ಇಲ್ಲಿ ಇಷ್ಟೊಂದು ಆಸ್ತಿ ಐತಿ, ವಯಸಾದ ಅಪ್ಪ ಆದಾನು ಅನ್ನು ಖಬರ ಬ್ಯಾಡ ಅವನಿಗೆ? ಇಲ್ಲೇನು ಕಡಿಮಿ ಐತಿ? ಅವನಿಗೆ ಆಸ್ಪತ್ರೆಯನ್ನು ಕಟ್ಟಿಸಲು ಜಾಗಾ ಕೂಡಾ ನೋಡಿದ್ದೆ, ಇನ್ನೂ ಅಲ್ಲಿ ಕುಳಿತು ಏನು ತೆರಿತಾನ?”
ರಾಯರಿಗೆ ಸಿಟ್ಟು ಬಂದಿರುವುದು ಸೋಮಣ್ಣನಿಗೆ ತಿಳಿಯಿತು.
“ರಾಯರೇ ಗುಬ್ಬಿ ಗೂಡನ್ನ ನೋಡಿದಿರೆಲ್ಲ. ಸ್ವಚ್ಛಂದವಾಗಿ ಮರಿ ಗುಬ್ಬಿ ಹಾರಿ ಹೋಯಿತು, ತನಗೆ ಬೇಕಾದ ಹಾಂಗ ಜೀವನ ಮಾಡಾಕ. ರಾಘುನು ಸ್ವಚ್ಛಂದವಾಗಿ ತನ್ನ ಜೀವನಾ ಮಾಡಾಕತ್ತಾನ. ಅವನಿಗೆ ಅದೇ ದೇಶ ಇಷ್ಟವಾದಾಗ ಅಲ್ಲಿಯೇ ಇರಲಿ ಬಿಡಿ. ನೀವು ಒತ್ತಾಯ ಮಾಡಿದರ ಅವನು ಬರತಾನಂತ ತಿಳಕೊಳ್ಳ ಬ್ಯಾಡ್ರಿ. ಹೋದ ಸಲ ಬಂದಾಗ ನಿಮ್ಮನ್ನ ಕರಕೊಂಡು ಹೋಗಲು ಪ್ರಯತ್ನಿಸಿದ, ನೀವ ಹೋಗಲಿಲ್ಲ. ಅವನದೇನು ತಪ್ಪು?” ಅಂತ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ ಸೋಮಣ್ಣ.
“ಹುಟ್ಟಿ ಬೆಳೆದ ದೇಶಾ ಬಿಟ್ಟು ನಾನು ಅಲ್ಲೇನು ಮಾಡಲಿ ಮಾರಾಯ. ಏನಾದರು ಹಾಳಾಗಿ ಹೋಗ್ಲಿ ಬಿಡು. ಮಗಾ ಅಂತ ಮಮತೆಯಿಂದ ಅವನ ಆಸೆಗೆ ವಿರುದ್ಧ ಹೋಗದೆ ಬೆಳೆಸಿದಿನಲ್ಲ ಅದು ನನ್ನ ತಪ್ಪು, ಈಗ ಪ್ರಾಯಶ್ಚಿತ ಪಡಾಕತ್ತೀನಿ. ನೀನು ಇರುತನಕ ನನಗೇನು ತೊಂದರೆ ಇಲ್ಲ ಬಿಡು” ಅಂತ ಮಾತು ಮುಗಿಸಿ ನಿಟ್ಟುಸಿರೊಂದನ್ನು ಎಳೆದರು.
” ರಾಯರೆ ಅವನಾಸೆಯಂತೆ ಅವನು ಇರಲಿ, ನಿಮ್ಮಾಸೆಯಂತೆ ನೀವು ಇದ್ದು ಬಿಡಿ. ನಾನಂತು ಇದ್ದೀನಲ್ಲ ನಿಮ್ಮ ಮಾತು ಕೇಳಾಕ” ಎಂದು ಮಾತು ಮುಗಿಸಿದ ಸೋಮಣ್ಣ.
ರಾಯರು ಕಾಫಿ ಮುಗಿಸಿ ಹಾಗೆಯೇ ಎಂದಿನಂತೆ ಅದೇ ಹಳೆ ಛತ್ರಿ ಮತ್ತು ಚಪ್ಪಲಗಳೊಂದಿಗೆ ತಮ್ಮ ದಿನ ನಿತ್ಯದ ವಾಕಿಂಗಗೆ ಎದ್ದು ಹೋದರು. ಚಪ್ಪಲಿಗಳನ್ನು ಎಷ್ಟೋ ಸಲ ಮರೆತು ಬಂದಿದ್ದರೂ ಸದಾ ಸಂಗಾತಿಯಾದ ಛತ್ರಿಯನ್ನು ಮಾತ್ರ ಎಂದೂ ಮರೆತವರಲ್ಲ. ಸೋಮಣ್ಣನಿಗೆ ಚನ್ನಾಗಿ ನೆನಪಿತ್ತು, ಕಳೆದ ಸಲ ರಾಘು ಊರಿಗೆ ಬಂದಾಗ ರಾಯರ ಜೊತೆಗೆ ಬಹಳೇ ಮಾತಾಡಿದ್ದ. ತನ್ನಲ್ಲಿಗೆ ಅವರನ್ನು ಕರೆದುಕೊಂಡು ಹೋಗಲು ಪಟ್ಟ ಸಾಹಸ ವ್ಯರ್ಥವಾಗಿತ್ತು. ರಾಘು ಬೇಜಾರು ಮಾಡಿಕೊಂಡು ತನ್ನ ಅಳಿಲನ್ನು ತೋಡಿಕೊಂಡಿದ್ದ.
“ಸೋಮಣ್ಣ, ನನ್ನ ಪರಿಸ್ಥಿತಿಯನ್ನು ಅಪ್ಪಾ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ನಾನೇನು ಮಾಡಲಿ ಎಂದು ನನಗೂ ಗೊತ್ತಾಗ್ತಾ ಇಲ್ಲ. ಅಲ್ಲಿಯೇ ಹುಟ್ಟಿ ಬೆಳೆದ ಹೆಂಡತಿ, ಅದೇ ಸಂಸ್ಕೃತಿಯಲ್ಲಿ ಬೆಳೆದ ಮಗ ಇಲ್ಲಿ ಹೇಗೆ ಬಾಳಿಯಾರು? ನೀನು ಅವರ ಜೊತೆಗೆ ಇರುವವರೆಗೂ ನನಗೇನು ಚಿಂತೆಯಿಲ್ಲ. ಬೆಂಗಳೂರಿನಲ್ಲಿ ಸಾಕಷ್ಟು ವೃದ್ಧಾಶ್ರಮಗಳು ಆಗಿವೆ, ಒಂದಿಬ್ಬರ ಜೊತೆಗೆ ಮಾತಾಡಿದ್ದೀನಿ ಹಾಗೇನಾದರು ಅವಶ್ಯಕತೆ ಬಿದ್ದರೆ ಅವರನ್ನು ಅಲ್ಲಿಗೆ ಕಳಿಸಿದರಾಯಿತು” ಎಂದು.

“ರಾಘಪ್ಪ ಕಾಲ ಬದಲಾಗಿದೆ ಎಂದು ನನಗೂ ಗೊತ್ತು. ಮಕ್ಕಳ ಮೇಲೆ ಅವಲಂಬಿತ ಆಗ ಬಾರದೆಂದು ನಾನೂ ಬಯಸ್ತೀನಿ ಆದರೆ ರಾಯರು ಇನ್ನು ಹಳೆಯ ಸಂಸ್ಕೃತಿಯಲ್ಲಿ ಇದ್ದಾರೆ, ಅವರ ಮನ ಒಪ್ಪಿಸುವದು ಕಷ್ಟ. ಇರಲಿ ಬಿಡು ನಾನಿದ್ದೀನಲ್ಲ” ಎಂದು ಅವನಿಗೆ ಧೈರ್ಯ ಹೇಳಿ ಕಳುಸಿದ್ದ.
ರಾಯರ ವರ್ತನೆ ದಿನೇ ದಿನೇ ಬದಲಿಯಾಗುತ್ತಲಿತ್ತು. ಜಿಲ್ಲಾ ನ್ಯಾಯಾಧೀಶರಾಗಿ ನಿರ್ವುತ್ತಿಯಾಗಿದ್ದ ರಾಯರು ಸುಮಾರು ಸಲ ಟಿ ವಿ ಯಲ್ಲಿ ಬರುತ್ತಿದ್ದ ಪತ್ತೆಧಾರಿ ಸೀರಿಯಲ್ ಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದರು. ಈಗ ಅದನ್ನೂ ನಿಲ್ಲಿಸಿಬಿಟ್ಟಿದ್ದರು. ಯಾವುದೇ ಪುಸ್ತಕಗಳಲ್ಲಿ ಆಸಕ್ತಿ ಇಲ್ಲದವರು ಇತ್ತೀಚಿನ ದಿನಗಳಲ್ಲಿ ತಾಸುಗಂಟೆಲೆ ಧಾರ್ಮಿಕ ಗ್ರಂಥಗಳನ್ನು ಓದಲು ತೊಡಗಿದ್ದರು. ಸಾಯಂಕಾಲದ ಸ್ನೇಹಿತರ ಜೊತೆಗಿನ ಅಲೆದಾಟ ಕೂಡಾ ಕಮ್ಮಿಯಾಗಿತ್ತ . ಸೋಮಣ್ಣನಿಗೆ ಅವರು ಮನೆಯಲ್ಲಿ ಇರುವದು ಇಷ್ಟವಿದ್ದರೂ ಹಠಾತ್ತನೆ ಅವರಲ್ಲಿ ಆದ ಬದಲಾವಣೆಗಳು ಇಷ್ಟವಿರಲಿಲ್ಲ, ಅದರಲ್ಲೂ ಕೂಡ ಅವರ ಮರುವಿಕೆಯು ಕುರಿತು ಬಹಳೇ ಬೇಜಾರಾಗಿತ್ತು.
ಫೋನಿನಲ್ಲಿ ರಾಘುನ ಜೊತೆಗೆ ಮಾತೂ ಆಡಿದ್ದ. ರಾಘು ಏನೋ ಧೈರ್ಯ ಕೊಟ್ಟಿದ್ದ,
” ಸೋಮಣ್ಣ ಹುಬ್ಬಳ್ಳಿಯಲ್ಲಿ ನನ್ನ ಗೆಳೆಯನೊಬ್ಬ ಮಾನಸಿಕ ತಜ್ಞ ಇದ್ದಾನೆ ಅವನಿಗೆ ನೋಡಲು ಹೇಳುತ್ತೇನೆ. ಅವರನ್ನೊಮ್ಮೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಾ” ಎಂದು ಅಂದಿದ್ದ. ” ರಾಯರೆ , ರಾಘು ಫೋನು ಮಾಡಿದ್ದ ನಿಮ್ಮನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗು ಅಂತ ಹೇಳಿದ “
“ಹುಬ್ಬಳ್ಳಿಗೆ ಯಾಕೆ ? ಸಿನೆಮಾ ನೋಡಕೊಂಡ ಬರಾಕೇನು? ಈಗ ಯಾರ ಟಾಕೀಜಿಗೆ ಹೋಕ್ತಾರ ಮಾರಾಯಾ, ಟಿವಿಯಲ್ಲೇ ಎಲ್ಲಾ ಸಿಗತೈತಿ ಅಲ್ಲ” ಎಂದು ಮಾತು ಮುಗಿಸಿದರು ರಾಯರು.
“ಇಲ್ಲ , ಅವನ ಡಾಕ್ಟರ ದೋಸ್ತನ ಭೇಟಿಯಾಗಿ ನಿಮ್ಮ ಆರೋಗ್ಯ ತಪಾಸ ಮಾಡಿಕೊಂಡು ಬಾ ಅಂತ ಹೇಳ್ಯಾನು” ಎಂತೆಂದನು ಸೋಮಣ್ಣ.
” ನಿಮ್ಮಿಬ್ಬರಿಗೂ ಹುಚ್ಚ ಹಿಡದೈತಿ ಏನು ? ನನಗೇನಾಗಿದೆ ? ನಾನು ಇನ್ನೂ ಗಟ್ಟಿ ಮುಟ್ಟಿಯಾಗೆ ಇದ್ದೀನಿ” ಅಂತ ಅವನ ಮಾತನ್ನು ತಿರಸ್ಕರಿಸಿದ್ದರು ರಾಯರು.
ಅದೊಂದು ದಿನ ಮಧ್ಯಾಹ್ನ ಮನೆ ಬಿಟ್ಟ ರಾಯರು ಸಾಯಂಕಾಲವಾದರೂ ಮರಳಿ ಬರಲೇ ಇಲ್ಲ. ಸೋಮಣ್ಣನಿಗೆ
ಭಯವಾಗತೊಡಗಿತು ‘ಎಲ್ಲಿ ಹೋಗಿರಬಹುದೆಂದು?’.

— ಡಾ. ಶಿವಶಂಕರ ಮೇಟಿ

( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು