ಹೀಗೊಂದು (ಹಾಳು) ಹರಟೆ

ನಮಸ್ಕಾರ ಅನಿವಾಸಿ ಬಂಧುಗಳಿಗೆ. ತಮಗೆಲ್ಲ  ಅಕ್ಷಯತೃತೀಯಾ ಹಾಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
‘ಭಕ್ತಿ ಇಲ್ಲದ ಬಡವನು ನಾನಯ್ಯ
ಕಕ್ಕಯ್ಯನ ಮನೆಯಲೂ ಬೇಡಿದೆ,
ದಾಸಯ್ಯನ ಮನೆಯಲೂ ಬೇಡಿದೆ,
ಚೆನ್ನಯ್ಯನ ಮನೆಯಲೂ ಬೇಡಿದೆ,
ಎಲ್ಲ ಪುರಾತನರು ನೆರೆದು
ಭಕ್ತಿ ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು
ಕೂಡಲ ಸಂಗಮದೇವಾ’.
ವಚನದಲ್ಲಿ ನಾಮಾಮೃತ ತುಂಬಿದ ಬಸವಣ್ಣನವರನ್ನು ತುಂಬು ಮನದಿಂದ ನೆನೆಯೋಣ. ಲೋಕದ ಡೊಂಕ ತಿದ್ದುವ ಉಸಾಬರಿ ಬಿಟ್ಟು ನಮ್ಮ ನಮ್ಮ ತನುವ- ಮನವ ಸಂತೈಸಿಕೊಂಡು , ಇವನಾರವ ಎನ್ನದೇ ಇವ ನಮ್ಮವ ಎಂದು ಜಗವನಪ್ಪಿಕೊಂಡು ಜಗದೀಶನಿಗೆ ಪ್ರಿಯರಾಗೋಣ. ಏನಂತೀರಿ?
ಇಂದಿನ ಓದಿಗಾಗಿ ಹಳೆಯ ಹರಟೆಯೊಂದನ್ನು ನಾನು ಹಂಚಿಕೊಳ್ಳುತ್ತಿರುವೆ. ಓದಿ ನಿಮ್ಮ ಅನಿಸಿಕೆಗಳನ್ನು ನೀವು ಹಂಚಿಕೊಳ್ಳಿ.

~ ಸಂಪಾದಕಿ

ಆಕಳಿಕೆ – ತೂಕಡಿಕೆ

‘ಸಮಯಾ ಸಮಯವುಂಟೇ ಭಕ್ತವತ್ಸಲ ನಿನಗೆ’ಅಂತ ಕನಕದಾಸರು ಹಾಡಿದ್ಹಂಗ ಈ ಆಕಳಿಕಿಗೆ ಸಮಯಾಸಮಯ ಅಂತ ಏನೂ ಇಲ್ಲ...ಕಾರ್ಯಕಾರಣ ಸಂಬಂಧವೂ ಇಲ್ಲ.ಎಲ್ಲೆ ಬೇಕಾದರೂ ಯಾವಾಗ ಬೇಕಾದ್ರೂ ಬಂದಬಿಡತಾವ;ಮಾನ ಕಳೆದುಬಿಡತಾವ.ಯಾವುದರೇ ಕಾರ್ಯಕ್ರಮದಾಗ ಭಾಷಣಕಾರರು ಗಂಭೀರವಾಗಿ ವಿಷಯ ಮಂಡಸೂ ಮುಂದ ಮುಂದಿನ ಸೀಟಿನಾಗ ವಕ್ಕರಿಸಿದ ನೀವು  ‘ಆsss’ಅಂತ ಆಕಳಿಸಿ ಬಾಯಾಗs ವಿಶ್ವರೂಪ ತೋರಿಸಿದ್ರ ಎದುರಿಗಿನವರು ಕಕ್ಕಾಬಿಕ್ಕಿ ಆಗಿಬಿಡತಾರರೀ..ಕ್ಲಾಸ್ ರೂಮ್ ನಾಗ ಟೀಚರ್ ಏನೋ ಗಹನವಾದ ವಿಷಯವನ್ನು ನಿಮ್ಮ ತಲೆಬುರುಡಿನಾಗ ತುಂಬಲಿಕ್ಕೆ ಅಂತ ಹರಸಾಹಸ ಮಾಡಕೋತ ಹೆಣಗಾಡತಿರಬೇಕಾದ್ರ ನೀವು’ಆsss’ ಅಂತ ಆಕಳಿಸಿದ್ರ ಅವರ ಸಿಟ್ಟು ನೆತ್ತಿಗೇರಿ ನಿಮ್ಮನ್ನು ಸ್ಟ್ಯಾಂಡ್ ಅಪ್ ಆನ್ ದ ಬೆಂಚೋ ಇಲ್ಲ ಗೆಟ್ ಔಟ್‌ ಫ್ರಾಮ್ ಮೈಕ್ಲಾಸೋ ಖಂಡಿತ ಮಾಡಿಬಿಡತಾರರೀ. ಇನ್ನ ಕೆಲವೊಮ್ಮೆ ವಯಸ್ಸಾದ ಹಿರಿಯರು ನೀವು ಮಾತಿಗೆ ಸಿಕ್ಕದ್ದೇ ತಡ ತಮ್ಮ ಪುರಾನಾ ಜಮಾನಾದ ಪುರಾಣದ ಕಂತಿ ಬಿಚ್ಚಿದ್ರು ಅಂದ್ರ...ನಿಮ್ಮೂ ಶುರುವಾಗತಾವ ಆಕಳಿಕಿ ಸಾಲಾಗಿ.ಆದ್ರ ಪಾಪ! ಕೆಲವೊಬ್ಬರಂತೂ ಅವನ್ನ ಸಂಪೂಣ೯ ದಿವ್ಯನಿಲ೯ಕ್ಷ್ಯ ಮಾಡಿ ತಮ್ಮ ಕಥಿ ಹಂಗೇ ಮುಂದುವರೆಸಿರತಾರ ಅನ್ರಿ..ನೀವೋ ಆಕಳಿಸಿ ಆಕಳಿಸಿ ಬಾಯಿನೋವು ಬಂದು ಕಣ್ಣೀರು ಕಪಾಳಕ್ಕ ಹರಿಸಿ ದಣಿಯುತ್ತೀರಿ.ಮತ್ತ ಯಾವಾಗರೇ ಯಾರದರೇ  ಪರಿಚಿತರ ಮನಿಗೆ ಹೋಗಿರತೀರಿ ಅಂತಿಟ್ಟುಕೋರಿ.ಅವರ ಮನ್ಯಾಗ ಆಗಷ್ಟೇ  ಮಗಂದೋ ,ಮಗಳದೋ ಮದುವಿ ಆಗಿರತದ..ಮದುವಿ ಫರಾಳ ತಿನ್ನಲಿಕ್ಕೆ ಕೊಡದಿದ್ದರೂ ಸರಿ ಮದುವಿ ಆಲ್ಬಂ- ವಿಡಿಯೋ ತಪ್ಪಲಾರದ ತೋರಸತಾರ.ಆ ಹುಡುಗನೋ ಹುಡುಗಿನೋ ಬಿಟ್ರ ನಿಮಗ ಯಾರೂ ಗೊತ್ತಿರಂಗಿಲ್ಲ..ಆದ್ರೂ ಮೂರಮೂರ ತಾಸು ಕೂತ ಅದನ್ನ ನೋಡ ಅಂದ್ರ ಆಕಳಿಕಿ ಬರದ s ಬಿಟ್ಟಾವ?!
ಹೀಂಗ ಆಕಳಿಸೋದು ಸಭ್ಯತೆ ಅಲ್ಲ ಅಂತ ನಾನೂ ಒಪ್ಪಗೋತಿನಿ.ಆದ್ರ ಅವುಗಳ ನಿಯಂತ್ರಣ ನಮ್ಮಕೈಯಾಗ ಇಲ್ಲ ಅಲ್ರೀ.ತಮ್ಮ ಮನಸ ಬಂದಾಗ ಹಿಂದಮುಂದ ಏನೂ ಸೂಚನೆ ಕೊಡದ ಧಬಕ್ ಅಂತ ಬಂದಿಳಿಯೋ ಅತಿಥಿಗಳಗತೆ ನುಗ್ಗಿ ಬಂದ್ರ ಅದರಾಗ ನಮ್ಮ ತಪ್ಪೇನದ ಅಲ್ಲೇನ್ರಿ? ಇದೆಲ್ಲ ಎಲ್ಲಾರಿಗೂ ಗೊತ್ತಿದ್ರೂ ನಾವು ಮಾತಾಡೂಮುಂದ ಎದುರಿಗಿನವರು ಆಕಳಿಸಿದ್ರ ನಮ್ಮ ಕಣ್ಣು ಕೆಂಪಾಗೋದಂತೂ ಗ್ಯಾರಂಟಿ .ಎಷ್ಟೋ ಸಲ ನಾನೇ ನನ್ನ ಮಕ್ಕಳಿಗೆ ಬಯ್ಯತಿರತೀನಿ...’ನಾನಿಲ್ಲೆ ಗಂಟಲ ಒಣಗಿಸಿಕೊಂಡು ,ತಲಿ ಕೆಡಿಸಿಕೊಂಡು ಇಷ್ಟ ಸೀರಿಯಸ್ಸಾಗಿ ಏನೋ ಹೇಳಲಿಕ್ಹತ್ತೀನಿ..ನೀವು ಆಕಳಿಸಕೋತ ಹೆಂಗ ಕೂತೀರಿ ನೋಡ್ರಿ ನಿಲ೯ಜ್ಜರ ಹಂಗ ‘ಅಂತ.
ಕಳೆದ ಸಲ ವಲ್ಡ್೯ ಕಪ್ ಮ್ಯಾಚ್ ನಡದಾಗ ಪಾಕಿಸ್ತಾನದ ಕ್ರಿಕೆಟ್ ಟೀಮಿನ ಕಪ್ತಾನ್ ಸರಫರಾಜ್ ಆಕಳಿಸಕೋತ ಕೂತಿದ್ದು ಒಂದು ಬ್ರೇಕಿಂಗ್ ನ್ಯೂಸೇ ಆಗಿಬಿಟ್ಟಿತ್ತಲಾ....ಪಾಪ! ಅವರೂ ಮನಷಾರೇ.ಇಷ್ಟೆಲ್ಲಾ ಹಗಲೂ ರಾತ್ರಿ ಪ್ರಾಕ್ಟೀಸ್ ಮಾಡಿ ಆಡೂಮುಂದಾಗ ಸೋಲೂ ಹಂತದಾಗ ಬ್ಯಾಸರಕೀಲೇ ಒಂದು ಆಕಳಿಸೋ ಸ್ವಾತಂತ್ರ್ಯನೂ ಅವರಿಗಿಲ್ಲ ಅಂದ್ರ ಹೆಂಗರೀ?
ಇನ್ನ ಆಫೀಸಿನಾಗ ಬಾಸ್ ಏನರೇ ಲೆಕ್ಚರ್ ಕೊಡೂಮುಂದ ಆಕಳಿಸಿದ್ರೋ ಮುಗೀತು.ನಿಮ್ಮ ಭತ್ಯೆ ಕಟ್ ಅಂತನೇ ಲೆಖ್ಖ.ಮುಂದ ನಿಮಗ್ಯಾವ ಸಿ.ಎಲ್.ಸ್ಯಾಂಕ್ಷನ್ ಆಗಂಗಿಲ್ರಿ.ನಿಮ್ಮ ಆಕಳಿಕೆ ಸೀದಾ ಅವನ ಅಹಂನ್ನೇ ನುಂಗಿಬಿಟ್ಟಿರತದ.ಅದಕ್ಕಽ ಎಚ್ಚರಿಕೆಲೆ ಇರಬೇಕು.ಆದ್ರ ಮಜಾ ಅಂದ್ರ ಯಾವಾಗ ನೀವು ಎಚ್ಚರಕಿಲೇ ಇರಬೇಕು ಅನಕೋತಿರೋ ಅವಾಗೇ ಇವುಗಳ ಹಾವಳಿ ಭಾಳ ಇರತದ.ಬೆಳತನಕಾ ದೋಸ್ತ್ ರ ಜೋಡಿ ಹರಟಿ ಹೊಡಿಯೂಮುಂದ ,ರಾತ್ರೆಲ್ಲ ನಿದ್ದಿಗೆಟ್ಟು ಓಣ್ಯೋಣಿ ತಿರಗೂಮುಂದ,ಟಿವಿ ಮುಂದ ಕೂತು ಸುಟ್ಟು ಸುಡುಗಾಡು ಸಿನೆಮಾ ನೋಡೂಮುಂದ,ಮೊಬೈಲ್ ನಾಗ ಕ್ಯಾಂಡಿಕ್ರಷ್ ,ಪಬ್ಜಿ ಆಡೂಮುಂದ ತಪ್ಪಿನೂ ಒಂದರೇಽ ಆಕಳಿಕಿ ಬಂದ್ರ ಕೇಳ್ರಿ.
ಸೂರ್ಯೋದಯಕ್ಕ ಮುಂಚೆ ಅರುಣನ ಆಗಮನ ಆಗೂಹಂಗ ನಿದ್ದಿ ಬರೂದರ ಮುನ್ಸೂಚನೆ ಈ ಆಕಳಿಕೆಗಳು ಅನ್ನಬಹುದು.ಆದ್ರ ಇದಕ್ಕ ತೀರ ವಿರುದ್ಧವಾಗಿ ಒಂದೊಂದುಸಲ ಮಧ್ಯಾಹ್ನಮೂರಮೂರು ತಾಸು ಮಲಕೊಂಡು ಎದ್ದಮ್ಯಾಲೂ ಒಂದರಹಿಂದ ಒಂದು ಹಂಗೇ ಸಾಲುಹಿಡದು ಬರತಿರತಾವ.ಕೆಲವೊಮ್ಮೆ ಬ್ಯಾಸರ ಆಗಿದ್ರನೂ ಬರತಾವ.ಕೆಲವೊಮ್ಮೆ ವಿಪರೀತ ದಣಿದಾಗ,ದೇಹ ಬಳಲಿದಾಗ ಬಂದ್ರ ಕೆಲವೊಮ್ಮೆ ಏನೂ ಕೆಲಸ ಇಲ್ಲದಽ ಸೋಮಾರಿಗಳಾಗಿ ಸೋಫಾದ ಮ್ಯಾಲೆ ಮೈ ಚೆಲ್ಲಿದಾಗನೂ ಬರತಾವ...ಅತೀ ಬ್ಯಾಸಗ್ಯಾಗ..ಅತೀ ಥಂಡ್ಯಾಗ....ಹೀಂಗs ಅಂತ ಹೇಳಲಿಕ್ಕೆ ಬರಂಗಿಲ್ರಿ .
ಯಾರರೇ ಪ್ರೀತಿಪಾತ್ರರು ಭೆಟ್ಟಿ ಆಗಿ ವಾಪಸ್ ಹೋದಾಗನೂ ಹೀಂಗಽ ಆಕಳಿಕಿ ಬರತಾವ.ಮೈತುಂಬ ,ಮನಿತುಂಬ ಕೆಲಸ ನೋಡಿ ತಲಿ ದಿಮ್ ಅಂದನೂ ಆಕಳಿಕಿ ಬರತಾವ.ಕೆಲವೊಮ್ಮೆ ಸುಮ್ಮೇ ನಮ್ಮ ಬಾಜೂಕಿನವರು ಆಕಳಿಸತಾರ ಅಂತ ನಮಗೂ ಆಕಳಿಕಿ ಬರತಾವ.ಇನ್ನ ಕೆಲವೊಮ್ಮೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಾಗ ,ಹರಿದಾಸರ ಹರಿಕಥಿಯೊಳಗ,ಸತ್ಯನಾರಾಯಣ ಕಥಿ ಅಂತಹ ದೀರ್ಘ ಪೂಜಾಕಥಿಗಳನ್ನು ಕೇಳೂಮುಂದ ಎಲ್ಲಿರತಾವೋ ಏನೋ ಓಡೋಡಿ ಬರತಾವ.ಅದಕ್ಕಽ ಅಂಥಾ ಕಾರ್ಯಕ್ರಮದಾಗೆಲ್ಲ ನಾ ಆದಷ್ಟು ಹಿಂದಿನ ಸೀಟೇ ಪ್ರಿಫರ್ ಮಾಡತೀನ್ರಿ.ನಂಗ ಈ ಪೂಜಾವಿಧಿಗಳೆಲ್ಲ ಝಟ್ ಪಟ್ ಅಂತ ಮುಗದ್ರ ಭಾಳ ಭಕ್ತಿ,ಏಕಾಗ್ರತೆ ಎಲ್ಲಾ ಇರತದರಿ.ಅದೇನರೆ ಅಧ೯ತಾಸಕಿಂತ ಜಾಸ್ತಿ ಇತ್ತೋ ....ಆಕಳಿಕಿ ಶುರುನೇ.ಸತ್ಯನಾರಾಯಣ ಪೂಜಾದ ಆ ಕಲಾವತಿ – ಲೀಲಾವತಿ ಕಥಿ ಕೇಳಕೋತ ಆಕಳಿಕಿ ಬಂದ್ರ ಒಳಗೊಳಗೇ ಪುಕಪುಕ ಆಗತಿರತದ್ರಿ.’ನನ್ನ ಕಥಿ ಕೇಳೂಮುಂದ ಆಕಳಿಸಿ ನನಗ ಅಪಮಾನ ಮಾಡಿದಿ’ ಅಂತ ಸತ್ಯನಾರಾಯಣ ಎಲ್ಲರೇಽ ಸಿಟ್ಟಿಗೆದ್ದು ಹಡಗಿನಲ್ಲಿದ್ದ ಧನಕನಕಗಳನ್ನು ಎಲಿ-ತೊಪ್ಪಲು-ಕಲ್ಲುಗಳನ್ನಾಗಿ ಪರಿವತ೯ನೆ ಮಾಡಿದ್ಹಂಗ ಇರೋ ಒಂದೆರಡು ನನ್ನ ಬಂಗಾರದೊಡವೆಗಳನ್ನುಹಿತ್ತಾಳೆಯನ್ನಾಗಿ,ಇರೋ ಒಂದೆರಡು ರೇಶ್ಮೆಸೀರೆಗಳನ್ನು ಹಳೆಯ ಹರಿದ ಸೀರೆಗಳನ್ನಾಗಿ ಮಾಡಿಬಿಟ್ಟ್ರ.....ಅಂತ ಗಾಭರಿ ಆಗತಿರತದ.ಆದ್ರ ಆ ಗಾಭರಿಗೆ ಇನ್ನೊಂದೆರಡು ಆಕಳಿಕೆ ಹೆಚ್ಚಿಗೆ ಬರತಾವು ನೋಡ್ರಿ...

ನಿಮಗೊಂದು ಮಜಾ ಸುದ್ದಿ ಗೊತ್ತೇನ್ರಿ? ತಾಯಿ ಗಭ೯ದಾಗಿರೋ ಮಗು ಸಹಿತ ಆಕಳಸತದಂತ.ವೈದ್ಯಕೀಯ ಶಾಸ್ತ್ರದ ಪ್ರಕಾರ ಅದು ಮೆದುಳಿನ ಒಳ್ಳೆಯ ಬೆಳವಣಿಗೆಯ ಲಕ್ಷಣ ಅಂತ.ಈ ಆಕಳಿಸೋ ಪ್ರಕ್ರಿಯೆ ಬರೇ ನಮ್ಮ ಮನುಷ್ಯ ಜಾತಿಯೊಳಗ ಅಲ್ರೀ...ಭಾಳಷ್ಟು ಪ್ರಾಣಿಗಳೊಳಗೂ ಅದ ಅಂತ.
ಇನ್ನ ಈ ಆಕಳಿಕೆಗಳಿಗೂ ಮತ್ತ ಪರೀಕ್ಷಾಗೂ ನೇರಾನೇರ ಸಂಬಂಧ ಅದನೋಡ್ರಿ.ಪರೀಕ್ಷಾ ಟೈಮದಾಗ ಕೈಯಾಗ ಪುಸ್ತಕ ಹಿಡದ್ರ ಸಾಕು ಆಕಳಿಕಿ ಶುರು..ನಂಗಂತೂ ಗಣಿತದ ಪ್ರಶ್ನೆಪತ್ರಿಕೆ ನೋಡಿದರ ಸಾಕು..ಅದರಾಗ ಎಷ್ಟು ಲೆಖ್ಖ ಮಾಡಲಿಕ್ಕೆ ಕೊಟ್ಟಾರೋ ಅದರ ದುಪ್ಪಟ್ಟು ಆಕಳಿಕೆ ಬರೂವರೀ.
ನಿಮಗೆಲ್ಲ ರಾಮಾಯಣದ ಕಥಿ ಗೊತ್ತೇ ಇರತದ.ಅದರಾಗ ನಮ್ಮಹನುಮಂತ ಲಂಕಾಪ್ರವೇಶ ಮಾಡೂಮುಂದ ಸುರಸಾ ಎಂಬ ರಕ್ಕಸಿಯ ಕಥಿ ಬರತದ.ನನ್ನ ಬಾಯಲ್ಲಿ ಪ್ರವೇಶಿಸಿ ಹೊರಬಂದರೆ ಮಾತ್ರ ನಿನಗೆ ಲಂಕಾಪ್ರವೇಶ ಅಂತ ಹೇಳಿದ ಅಕಿ ಆ ಅಂತ ಆಕಳಿಸತಾಳ.ಹನುಮ ತನ್ನ ಗಾತ್ರವನ್ನುಬೃಹದಾಕಾರವಾಗಿ ಬೆಳೆಸತಾನ.ಅದಕ್ಕ ತಕ್ಕಂಗ ‘ಆ’ಅಂತ ಬಾಯಿ ಅಗಲಿಸಿದ ಅಕಿನ ಬಾಯೊಳಗೆ ಹೋದ ಹನುಮ ತಕ್ಷಣವೇ ಪೂತಿ೯ ಸಣ್ಣವನಾಗಿ ಅಕಿ ಬಾಯಿ ಮುಚ್ಚುವುದರೊಳಗಾಗಿ ಹೊರಬಂದುಬಿಡುವ ಕಥಿ ಭಾಳ ಸ್ವಾರಸ್ಯಕರವಾಗೇದ.ಅಂದ್ರ ಜೀವನ-ಮೃತ್ಯುಗಳೆರಡೂ ಒಂದು ಆಕಳಕಿ ಅಳತೀ ಒಳಗಽ ಅವ ಅನ್ನೂ ತತ್ವ ನಮಗ ಅಥ೯ ಆಗತದ.
ಆಕಳಿಕಿ ಸುದ್ದಿ ಆತು..ಇನ್ನ ತೂಕಡಿಕಿ ಸುದ್ದಿನೂ ಒಂಚೂರು ಮಾತಾಡೇ ಬಿಡೂಣು.ಇವೆರಡೂ ಒಂಥರಾ ಅವಳಿ ಸೋದರರು ಇದ್ಹಂಗ. ಈ ತೂಕಡಿಕಿನೂ ಅಷ್ಟೇ ...ಯಾವ ಮಾಯದಾಗ ಬರತದೋ ಗೊತ್ತೇ ಆಗಂಗಿಲ್ಲರೀ.ಒಂಥರಾ ಗಾಢನಿದ್ದೆನೂ ಅಲ್ಲದ,ಎಚ್ಚರಿಕೆನೂ ಅಲ್ಲದ ಈ ತೂಕಡಿಕಿ ಮಜಾ ಅನುಭವಿಸಿದವರಿಗೇ ಗೊತ್ತು..ಎಷ್ಟೋ ಸಲ ಸಂತ್ಯಾಗ ತೂಕಡಿಸೋ ಮಂದಿನೂ ಇರತಾರ.ಕೆಲವು ಸಲ ನಮ್ಮ ಮನ್ಯಾಗ ಟಿವಿ ಜೋರ್ ದನಿ ತಗದು ಒದರತಿರತದ್ರಿ.ಅಡಿಗಿ ಮನ್ಯಾಗ ನನ್ನ ಮಿಕ್ಸಿ,ಕುಕ್ಕರ್ ಸೀಟಿ ಧಾಂಧಲೆ ನಡದಿರತದ.ನನ್ನ ಅವಳಿ ಮಕ್ಕಳದು ಯಾವುದೋ ಸಣ್ಣ ವಿಷಯಕ್ಕೆ ಜೋರ ಜಗಳ ನಡದಿರತದ.ಆದ್ರ ನಮ್ಮ ಮನಿಯವರು ಹಂಗಽ ಸೋಫಾಕ್ಕೊರಗಿ ತೂಕಡಿಸತಿರತಾರ. ಕೆಲವೊಬ್ಬರಿಗೆ ಈ ಗದ್ದಲದ ಬ್ಯಾಗ್ರೌಂಡ್ ನಾಗ ಭಾಳ ಛಂದ ನಿದ್ದಿ ಬರತದರಿ....ಪುಷ್ಪಕ ವಿಮಾನದ ಕಮಲಹಾಸನಗತೆ.ಈ ಬಸ್ಸು-ಟ್ರೇನುಗಳ ಪ್ರವಾಸ ಅಂತೂ ತೂಕಡಿಕೆಯ ತವರು ಎನ್ನಬಹುದು.ನಾ ಅಂತೂ ಎಷ್ಟೋ ಸಲ ಸಿಟಿ ಬಸ್ ನಾಗೂ ತೂಕಡಿಸಕೋತ ಓಡಾಡಿ ಎರಡೆರಡು ಸ್ಟಾಪ್ ದಾಟಿ ಇಳಿದ ಪ್ರಸಂಗಗಳೂ ಭಾಳ ಅವರೀ.ಎಷ್ಟೋ ಸಲ ನಮ್ಮ ಬಾಜೂಕ ಕೂತವರು ತೂಕಡಿಸಕೋತ ನಮ್ಮ ಮೈಮ್ಯಾಲ ತಮ್ಮ ಭಾರ ಹಾಕಿ ,ಎಷ್ಟೋ ಸಲ ನಾವು ತೂಕಡಿಸಕೋತ ಅವರ ಮ್ಯಾಲೆ ಜೋಲಿ ಹೊಡೆದು ಭಯಂಕರ ಮುಜುಗರದ ಪ್ರಸಂಗಗಳನ್ನೂ ಅನುಭವಿಸುವುದಾಗತದ.ಇನ್ನಽ ಎಷ್ಟೋ ಬಾಲಿವುಡ್ ಮೂವಿಗಳೊಳಗ ಹೀಂಗಽ ಬಸ್ ನಾಗ ತೂಕಡಿಸಿ ಹಿರೋನ ಹೆಗಲ ಮೇಲೆ ತಲೆಯಿಡೋ ಹಿರೋಯಿನ್ ,ಅವಳ ಹಾರಾಡುತ್ತಿರೋ ಮುಂಗುರುಳನ್ನು ನೇವರಿಸೋ ಹಿರೋ ..ಹಿನ್ನೆಲೆಯಲ್ಲಿ ಒಂದು ಹಾಡು...ಲವ್ ಸ್ಟೋರಿಗೆ ನಾಂದಿ ಆಗಿಬಿಡತದ್ರಿ ಈ ತೂಕಡಿಕಿ.
ಆದ್ರ ಎಷ್ಟೋ ಸಲ ಈ ತೂಕಡಿಕಿಯಿಂದ ಅವಘಡಗಳೂ ಆಗತಾವ.ರಾತ್ರಿ ಬಸ್ ಡ್ರೈವ್ ಮಾಡುತ್ತಿರುವ ಡ್ರೈವರ್ ತೂಕಡಿಸಿದರ ಮುಗೀತು..ಲಕ್ಷ್ಮಿ ರಮಣ ಗೋವಿಂದ..ನೈಟ್ ಡ್ಯೂಟಿ ಮಾಡುವ ನಸ್೯ ಡಾಕ್ಟರ್ ತೂಕಡಿಸಿದ್ರ ಪೇಶಂಟ್ ಗಳ ಗತಿ ಅಧೋಗತಿ.ತೂಕಡಿಸುತ್ತ ಮಗುವಿಗೆ ಹಾಲೂಡಿಸಿದ ತಾಯಿ...ಉಸಿರುಗಟ್ಟಿದ ಮಗು ಇಂಥವೆಲ್ಲ ಸುದ್ದಿಗಳನ್ನು ಆಗಾಗ ಕೇಳಕೋತನ ಇರತೀವಿ.ತೂಕಡಿಸಿಕೋತ ಕೂತ ಸೆಕ್ಯೂರಿಟಿ ಗಾಡ್೯ಗಳ ಮುಂದೆನೇ ಮನೆ ,ATM ಗಳ ಕಳ್ಳತನಗಳೂ ನಡೆಯುವುದುಂಟು.
ತೂಕಡಿಕಿ ಮಾತು ಬಂದಾಗ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮರೆಯುವ ಹಾಗೆಯೇ ಇಲ್ಲ.ಸಭೆ -ಸಮಾರಂಭಗಳಲ್ಲಿ ,ಸದನದ ಕಲಾಪಗಳಲ್ಲಿ ಅವರು ತೂಕಡಿಸಿ ಸುದ್ದಿಯಾಗುವುದು ಸವೇ೯ಸಾಮಾನ್ಯವಾಗಿತ್ತು.ಅದಕ್ಕಽ ಬಲ್ಲವರು ‘ತೂಕಡಿಸಿ ತೂಕಡಿಸಿ ಬೀಳದಿರೋ ತಮ್ಮಾ ...ಓ ಮಂಕುತಿಮ್ಮಾ ‘ಅಂತ ಹಾಡಿರಬೇಕು.
ಏನ ಇರಲಿ ,ಮನಷಾ ಅಂದಮ್ಯಾಲೆ ದಿನಕ್ಕ ಒಮ್ಮೆರೆ ಆಕಳಿಸಲಾರದ,ತೂಕಡಿಸಲಾರದ ಇರಲಿಕ್ಕೆ ಆದೀತ?ಈಗ ಈ ಬರಹವನ್ನು ಓದಕೋತ ನೀವೆಲ್ಲಾರೂ ಅದೆಷ್ಟು ಸಲ ಆಕಳಿಸಿ..ತೂಕಡಿಸಿರತೀರೋ ಭಗವಂತಗಽ ಗೊತ್ತು.
ಇತಿ ಶ್ರೀ ಮಾನವೇತಿಹಾಸ ವತ೯ಮಾನ ಪುರಾಣೇ ಆಕಳಿಕಿ-ತೂಕಡಿಕಿ ಅಧ್ಯಾಯಂ ಸಂಪೂರ್ಣಂ..


~ ಗೌರಿಪ್ರಸನ್ನ

ಯುಕೆ ದ ಜಲಮಾರ್ಗಗಳಲ್ಲಿ ಹಾಸ್ಯದ ಹೊನಲು -ಶ್ರೀವತ್ಸ ದೇಸಾಯಿ

ಶೀರ್ಷಿಕೆಯನ್ನೋದಿದಾಗ ನಿಮ್ಮ ತಲೆಯಲ್ಲಿ ಅನೇಕ ಅಲೆಗಳ ತಾಕಲಾಟವಾಗುತ್ತಿರಬೇಕು! ಇದೇನು ಪ್ರವಾಸ ಕಥನವೋ, ಇತಿಹಾಸವೋ, ಹರಟೆಯೋ, ಪುಸ್ತಕ ವಿಮರ್ಶೆಯೋ, ನೋಸ್ಟಾಲ್ಜಿಯಾವೋ - ಅಂತ. ಇವು ಯಾವೂ ಪ್ರತ್ಯೇಕವಾಗಿರದೇ ಅವೆಲ್ಲವುಗಳ ಸಂಗಮವಿದೆ ಇಲ್ಲಿ. ಅಂತೆಯೇ ಅವೆಲ್ಲವನ್ನೂ ಒಂದೇ ಉಸಿರಿನಲ್ಲಿ ಓದುವ, ಅಗಸ್ತ್ಯನಂತೆ ಕುಡಿದು ನುಂಗುವ ಅವಶ್ಯಕತೆಯಿಲ್ಲ. ಕಂತು ಕಂತಾಗಿ ಓದಲೂ ಬಹುದು, ಇಂಗ್ಲೆಂಡಿನಕಾಲುವೆಗಳಲ್ಲಿ ಸಂಚರಿಸುವ ಸಪೂರ ದೋಣಿಗಳು (ನ್ಯಾರೋ ಬೋಟ್) ಜಲಬಂಧಗಳಲ್ಲಿ (locks) ನಿಂತು ನಿಂತು ಏಣಿಯೇರಿ ಮುಂದೆ ಸಾಗಿದಂತೆ!
ಎಲ್ಲಿಂದ ಶುರು ಮಾಡಲಿ? ನದಿಯಂತೆ ಉಗಮದಿಂದಲೇ ಪ್ರಾರಂಭಿಸುವೆ. ಕಳೆದ ವಾರದ ಅನಿವಾಸಿ ಸಂಚಿಕೆಯಲ್ಲಿ ಅಮಿತಾ ಅವರು ವರ್ಣಿಸಿದಂತೆ, ಯುಕೆ ಕನ್ನಡ ಬಳಗದ ಯುಗಾದಿ ೨೦೨೪ರ ಸಂಭ್ರಮ ಲೆಸ್ಟರ್ ನಗರದಲ್ಲಿ ನೆರವೇರಿತು. ಹಿಂದಿನ ದಿನವೇ ನಾವಿಬ್ಬರೂ ಲೆಸ್ಟರ್ ತಲುಪಿದ್ದೆವು. ರಾಜಶ್ರೀ ಮತ್ತು ವೀರೇಶ ಅವರ ಒಲವಿನ ಆಮಂತ್ರಣದ ಮೇರೆಗೆ ಮಧ್ಯಾಹ್ನದ ಸ್ವಾದಿಷ್ಠ ಭೋಜನವನ್ನು ಅವರ ಅತಿಥ್ಯದಲ್ಲಿ ಸವಿದು ಅನತಿ ದೂರದಲ್ಲಿದ್ದ ಹತ್ತು ಲಾಕ್ಸ್(locks) ಗಳ ಏಣಿಗೆ ಪ್ರಸಿದ್ಧವಾದ ಫಾಕ್ಸ್ಟನ್  ಕಾಲುವೆಯನ್ನು ನೋಡಲು ಹೊರಟೆವು. ಅದು ಗ್ರಾಂಡ್ ಯೂನಿಯನ್ ಕೆನಾಲಿನ ಲೆಸ್ಟರ್ ಭಾಗ. ಈ ಮೊದಲು ಇಂಗ್ಲೆಂಡಿನ ಆದ್ಯಂತ ಪಸರಿಸಿರುವ ೭೦೦೦ ಮೈಲುದ್ದದ್ದ ಕಾಲುವೆಗಳ ಜಾಲದ ಪರಿಚವಿರದವರಿಗೆ ಅದೊಂದು ಅವಿಸ್ಮರಣೀಯ ದೃಶ್ಯ ಮತ್ತು ಅನುಭವ. ಈ ಕಾಲುವೆಗಳು ಏಳರಿಂದ ಹತ್ತು ಮೀಟರ್ ಅಗಲವಿರುತ್ತವೆ. ಅದಕ್ಕೇ ಸುಮಾರು ಏಳು ಅಡಿ ಅಗಲ ಮತ್ತು ಎಪ್ಪತ್ತು ಅಡಿಗಳ ಈ ಸಪೂರ ನ್ಯಾರೋ ಬೋಟ್ ಗಳಿಗಷ್ಟೇ ಇಲ್ಲಿ ಸಂಚರಿಸಲು ಅನುಮತಿಯಿದೆ. ಬಣ್ಣ ಬಣ್ಣದ ಸುಂದರ ದೋಣಿಗಳೊಳಗೆ ವಾಸಿಸಲು ಸಹ ಬರುವಂಥ ಅನೇಕ ಸೌಕರ್ಯಗಳನ್ನೊಳಗೊಂಡವವು ಇವು. ಛತ್ತಿನ ಮೇಲೆ ಪುಟ್ಟ ಪುಟ್ಟ ಹೂವಿನ ತೊಟ್ಟಿಗಳನ್ನು ಹೊತ್ತು ಸಾಗುತ್ತ ಮಧ್ಯದಲ್ಲಿ ಸಿಗುವ ಲಾಕ್ ಗಳಲ್ಲಿ ಒಂದರ ನಂತರ ಒಂದಾಗಿ ೭೫ ಅಡಿ ಏರಿ ಮಾರ್ಕೆಟ್ ಹಾರ್ಬರಾದತ್ತ ಸಾಗುವದನ್ನು ನೋಡಿದೆವು. ಇಕ್ಕೆಲಗಳಲ್ಲಿ ಜಲಮಾರ್ಗಗಳನ್ನು ಸುಸ್ಥಿತಿಯಲ್ಲು ಕಾಪಾಡುವ ಲಾಕ್ ಕೀಪರ್‌ಗಳ  ಪುಟ್ಟ ಪುಟ್ಟ ಮನೆಗಳು, ಪಕ್ಕದಲ್ಲೇ ವಿಹಾರಕ್ಕೆ ಬಂದವರ ತೃಷೆ ತಣಿಸುವ ಇನ್ ಅಥವಾ ಪಬ್; ಹಿಂದಿನ ಕಾಲದಲ್ಲಿ ದೋಣಿಗಳನ್ನು ಎಳೆಯುತ್ತಿದ್ದ ಜನರ ಅಥವಾ ಕುದೆರೆಗಳಿಗಾಗಿ ಕಟ್ಟಿದ ಪಥಗಳು (Tow paths) ಇವೆಲ್ಲ ಸಾಯಂಕಾಲದ ಬೆಳಕಿನಲ್ಲಿ ರಮಣೀಯವಾಗಿ ಕಂಡವು. ಅವುಗಳನ್ನು ವಿವಿಧ ಕೋನಗಳಲ್ಲಿ ಅಮಿತಾ ಸೆರೆಹಿಡಿಯುತ್ತಿದ್ದರು. ಎತ್ತರದಿಂದ ವಿಹಂಗಮ ನೋಟ, ಬಗ್ಗಿ ನೆಲಕ್ಕೆ ಕ್ಯಾಮರಾ ತಾಗಿಸಿ ಪಿಪೀಲಿಕಾ ನೋಟ (Ant's eye view) ಎಲ್ಲಾ ಮೂಡಿಸಿದರು! ಅಲ್ಲಿ ವಿಹಾರಕ್ಕೆ ಹೊರಟ ದೋಣಿಗಳನ್ನು ನೋಡಿ ನಾನಗೋ ಶಾಲೆಯಲ್ಲಿದ್ದಾಗ  ”ಥ್ರೀ ಮೆನ್ ಇನ್ ಯ ಬೋಟ್’ ಓದಿ ನನ್ನ ಅಣ್ಣಂದಿರೊಂದಿಗೆ ಹೊಟ್ಟೆ ತುಂಬ ನಕ್ಕ ದಿನಗಳ ನೆನಪಾಯಿತು!
Capturing Ant’s eye view of Foxton Locks, Leicestershire
ಥೇಮ್ಸ್ ನದಿ ವಿಹಾರಕ್ಕೆ ಹೊರಟ ಮೂರು ಗೆಳೆಯರು ಯಾರು?

ಜೆರೋಮ್ ಕೆ ಜೆರೋಮ್ (ಪುಸ್ತಕದಲ್ಲಿ ಆತನ ಹೆಸರು ’ಜೆ’) ಬರೆದ ೧೮೮೯ರಲ್ಲಿ ಮೊದಲ ಬಾರಿಗೆ ಪ್ರಕಟವಾದ Three Men in a Boat (To say nothing of the Dog)ಎನ್ನುವ ಈ ಕಿರುಪುಸ್ತಕ ಎರಡೂವರೆ ಶತಮಾನದಲ್ಲಿ ಭಾರತವನ್ನೊಳಗೊಂಡು ಇಂಗ್ಲಿಷ್ ಬಲ್ಲ ಜಗತ್ತಿನ ಎಲ್ಲ ದೇಶಗಳಲ್ಲಿ ಜನಪ್ರಿಯವಾಗಿದೆ. ಅವರ ವಿಶಿಷ್ಠ ಶೈಲಿ ಮತ್ತು ಹೊಸತರದ ದೃಷ್ಟಿಕೋನದ ಹಾಸ್ಯ ಪಿ ಜಿ ವುಡ್ ಹೌಸ್ ಪೂರ್ವದ್ದು. ಇಂಗ್ಲೆಂಡಿನ ವಾಲ್ಸಾಲ್ ದಲ್ಲಿ ಹುಟ್ಟಿದ ಆತನ ಕಾಲ: (2 May 1959 – 14 June 1927). ಈ ಪುಸ್ತಕ ಮೊದಲು ಸರಣಿರೂಪದಲ್ಲಿ ಪ್ರಕಟವಾದಾಗ ಕೆಲವು ವಿಮರ್ಶಕರಿಂದ ಕಟುವಾಗಿ ಟೀಕಿಸಲ್ಪಟ್ಟರೂ ( ‘that the British Empire was in danger,’ ಆತನನ್ನು ಕೆಳ ದರ್ಜೆಯವನು ಅಂತ ಕರೆದು ‘ಹ’ಕಾರ ತೊರೆದು ‘Arry K. ‘Arry ಅಂತ ಹೀಯಾಳಿಸಿದರು! ಹಕಾರ- ಅಕಾರ ಅದಲುಬದಲು ಆಂಗ್ಲರಲ್ಲೂ ಪ್ರಚಲಿತ ದುಃಶ್ಚಟ!)  ಸಾಮಾನ್ಯ ಓದುಗರು ಮಾತ್ರ ಬಹಳ ಮೆಚ್ಚಿಕೊಂಡು ಒಂದು ಸಾವಿರ ಪ್ರತಿಗಳು ಖರ್ಚಾಗಳು ಸಮಯ ಹಿಡಿಯಲಿಲ್ಲ. ಅದರಿಂದಾಗಿ ಅಮೇರಿಕೆಯಲ್ಲಿ ಅದರ ಅನಧಿಕೃತ ಕಾಪಿಗಳು ಮಾರಾಟವಾಗಿ ಆತನಿಗೆ ಸಿಗಬೇಕಾದ ಸಂಭಾವನೆ ಸಿಗದಿದ್ದು ದುರ್ದೈವ ಏಕೆಂದರೆ ಅದು ಕಾಪಿರೈಟ್ ನಿಯಮಗಳು ಜಾರಿ ಬರುವ ಪೂರ್ವ ಕಾಲದ್ದು ಮತ್ತು ಆತನೇನೂ ಆಗ ಅಷ್ಟು ಅನುಕೂಲಸ್ಥನಾಗಿರಲಿಲ್ಲ. ಮೊದಲು ಅದೊಂದು ಪ್ರವಾಸಕಥನ ಎಂದು ಬರೆಯಲು ಶುರುಮಾಡಿದ್ದ, ಆಮೇಲೆ ವಿಡಂಬನೆಯುಕ್ತ ಅಡ್ಡಕತೆಗಳು ಸೇರಿ ಕಥೆಯನ್ನು ಸಮೃದ್ಧಗೊಳಿಸಿತು.

ಜೆರೋಮನ ಸಂಗಡಿಗರು ಜಾರ್ಜ್ ಮತ್ತು ಹ್ಯಾರಿಸ್. ಜೊತೆಗೆ ಅವರ್ ನಾಯಿ - ಮಾನ್ಟ್ ಮೊರೆನ್ಸಿ ಅವರು ಆತನ ನಿಜ ಜೀವನದ ಗೆಳೆಯರೆಂದು ಗುರುತಿಸಲಾಗಿದೆಯಾದರೂ ಎಲ್ಲ ಕಥೆಗಳು ನಿಜವಾಗಿ ನಡೆದ ಘಟನೆಗಳನ್ನಾಧರಿಸಿವೆಯಾದರೂ ಕಾಲಕ್ರಮವನ್ನು ಬದಲಾಯಿಸಲಾಗಿದೆ ಮತ್ತು ಹಾಸ್ಯಕ್ಕಾಗಿ ಅಲ್ಲಲಿಇ ಉತ್ಪ್ರೇಕ್ಷೆ ಇಣುಕಿರಬಹುದು. ಅತಿಯಾದ ಕೆಲಸದಿಂದ ಬಳಲಿದ್ದೇವೆಂದು ಅಂದುಕೊಂಡು (ಬ್ರಿಟಿಶ್ ಮ್ಯೂಸಿಯಮ್ ಲೈಬ್ರರಿಯಲ್ಲಿ ಓದಿ ರೋಗಿಷ್ಟನಾದದ್ದು ಖಾತ್ರಿಯಾಗಿ) ವಿಹಾರಕ್ಕಾಗಿ ಲಂಡನ್ ಹತ್ತಿರದ ಕಿಂಗ್ಸ್ಟನ್ನಿನಿಂದ ಹೊರಟು ಥೇಮ್ಸ್ ನದಿಯ ಪ್ರವಾಹದ ವಿರುದ್ಧ ಆಕ್ಸ್ಫರ್ಡ್ ವರೆಗೆ ಬಾಡಿಗೆಗೆ ತೊಗೊಂಡ ನ್ಯಾರೋ ಬೋಟ್ ಅಲ್ಲದಿದ್ದರೂ ಸ್ಕಿಫ್ (skiff) ಎನ್ನುವ ಹುಟ್ಟು ದೋಣಿಯಲ್ಲಿ ಎರಡು ವಾರ ಕಳೆದ ಕಥೆಯಿದು. ಕಾಲಕ್ಷೇಪದಂತೆ ಮುಖ್ಯ ಪ್ರವಾಸದ ವಿವರಣೆಗಿಂತ ಎರಡು ಪಟ್ಟು ಉಪಕಥೆಗಳೇ ಹೆಚ್ಚು. ದಿನದ, ಶುಷ್ಕ ಜೀವನದ ಘಟನೆಗಳನ್ನು ನೋಡುವ ದೃಷ್ಟಿ, ನಿತ್ಯ ಸತ್ಯಗಳನ್ನು ಅಲ್ಲಲ್ಲಿ ಚೆಲ್ಲಿದ ರೀತಿ ಮತ್ತು ಹಾಸ್ಯ ಇವನ್ನು ಕೇಂಬ್ರಿಜ್ಜಿನಲ್ಲಿದ್ದಾಗ ಓದಿ ಮೆಚ್ಚಿದ ಆಗಿನ ಪ್ರಧಾನ ಮಂತ್ರಿ ”ಜೆರೋಮ್ ಕೆ ಜೆರೋಮ್ ನ ಬರವಣಿಗೆ ನನ್ನ ಮಟ್ಟಿಗೆ ವಿನೋದದ ಪರಾಕಾಷ್ಠೆ!” ಎಂದು ಉದ್ಗರಿಸಿದ್ದು ಈಗಲೂ ನೆನಪಿದೆ. ತಾನು ಬರೆದ ೧೫೦ ಪುಟಗಳಲ್ಲಿ ಅವರು ’ದಾರಿ’ಯಲ್ಲಿ ಕಂಡ, ತಂಗಿದ ಸ್ಥಳಗಳ ಬಗ್ಗೆ, ಮತ್ತು ಬರೀ ಈ ದೇಶದ ಇತಿಹಾಸವನ್ನಷ್ಟೇ ಅಲ್ಲ ಬೇರೆ ಜಗತ್ತನ್ನೇ ತೆರೆದಿಡುತ್ತಾನೆ ಲೇಖಕ. ಅದು ಗಾರ್ಡಿಯನ್ ಪತ್ರಿಕೆಯ ನೂರು ಬೆಸ್ಟ್ ನಾವೆಲ್ಸ್ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ, ಒಂದು ವರ್ಷ.
’ಥ್ರೀ ಮೆನ್’ ಹಿಂದಿನ ನಿಜವಾದ ಮೂವರು: ಕಾರ್ಲ್ ಹೆನ್ಚೆಲ್ (ಹ್ಯಾರಿಸ್), ಜಾರ್ಜ್ ವಿನ್ಗ್ರೇವ್ (ಜಾರ್ಜ್) ಮತ್ತು ಕಾರ್ಲ್ ಹೆನ್ಚೆಲ್ (ಹ್ಯಾರಿಸ್)Picture Courtesy: Jerome K Jerome Society

ಜಲಪ್ರಯಾಣ ಸಿದ್ಧತೆಗೆಂದು ಪ್ಯಾಕ್ಕಿಂಗ್ ಮಾಡಲು ಪ್ರಾರಂಭ.
ಆತನ ಇಬ್ಬರು ಸಹಪ್ರಯಾಣಿಕರೆಂದರೆ ಜಾರ್ಜ್ ಮತ್ತು ಹ್ಯಾರಿಸ್. (ಹುಟ್ಟು ಹಾಕಲು ಬೇಕಲ್ಲ, ಕೂಲಿಗಳು!)”ಜೆ’ ಜಂಬದಿಂದ ಹೇಳುತ್ತಾನೆ. ”ನನಗೆ ಪ್ಯಾಕಿಂಗ್ ಎಂದರೆ ಗರ್ವ.ಅದರ ಬಗ್ಗೆ ನನಗೆ ಗೊತ್ತಿದ್ದಷ್ಟು ಯಾರೂ ಇಲ್ಲ. ಇಂಥ ಅನೇಕ ಕಲೆಗಳುಂಟು ಅಂತ ನನಗೇ ಅಚ್ಚರಿ. ಎಲ್ಲವನ್ನೂ ನನಗೇ ಬಿಟ್ಟು ಬಿಡಿ ಅಂತ ಅವರಿಬ್ಬರಿಗೆ ಹೇಳಿದ ಕ್ಷಣ ಗ್ಜಾರ್ಜ್ ಪೈಪ್ ಹೊತ್ತಿಸಿ ಈಸಿ ಚೇರ್ ಮೇಲೆ ವ್ಯಾಪಿಸಿಬಿಟ್ಟ; ಹ್ಯಾರಿಸ್ ಟೇಬಲ್ ಮೇಲೆ ಕಾಲು ಇಳಿಬಿಟ್ಟು ಸಿಗಾರ್ ಸೇದಲಾರಂಭಿಸಿದ. ನಾನಂದುಕೊಂಡಿದ್ದರ ವಿರುದ್ಧವಾಯಿತು ಇದು. ನಾನು ಬಾಸ್ ಅವರು ನನ್ನ ಆರ್ಡರ್ ಪ್ರಕಾರ ಓಡಾಡಬೇಕೆಂದು ನಾನು ತಿಳಿದಿದ್ದೆ. ನನಗೆ ಇದು ಬೇಸರ ತಂದಿತು. ನಾನು ಕೆಲಸ ಮಾಡುವಾಗ ಉಳಿದವರು ಕುಳಿತು ನೋಡುವದಕ್ಕಿಂತ ಹೀನ ಕೆಲಸ ಜಗತ್ತಿನಲ್ಲಿಲ್ಲ ...!” ಇದು ಸಾರ್ವಕಾಲಿಕ ಸತ್ಯವಲ್ಲವೆ? ಆದರೂ ಆತ ಹೇಳೋದು: ”ನನಗೆ ಪರಿಶ್ರಮ ಇಷ್ಟ. ಅದು ನನ್ನನ್ನು ಬಹಳ ಅಕರ್ಷಿಸುತ್ತದೆ.(it fascinates me.) ನಾನದನ್ನು ಇಡೀ ದಿನ ಕುಳಿತು ನೋಡ ಬಲ್ಲೆ!”
ಹ್ಯಾಂಪ್ಟನ್ ಕೋಟ್ ಪ್ಯಾಲೆಸ್, ನೀರಿನಲ್ಲಿ ಪ್ರತಿಬಿಂಬ ಮತ್ತು ಎಡಗಡೆ Maze : photo by author
ನಿರರ್ಗಳವಾಗಿ ಹರಿವ ಇತಿಹಾಸ
ಲಂಡನ್ ಗೊತ್ತಿದ್ದವರಿಗೆ ಕಿನ್ಗ್ ಸ್ಟನ್ (Kingston upon Thames) ಅಂದಕೂಡಲೇ ನೆನಪಾಗುವುದು ಆರು ರಾಣಿಯರನ್ನು ಮದುವೆಯ ಖ್ಯಾತಿಯ ಎಂಟನೆಯ ಹೆನ್ರಿ ಮತ್ತು ಅವನ ಭವ್ಯ ಪ್ಯಾಲೆಸ್ ಮತ್ತು ಹನ್ನೆರಡು ಮೀಟರ್ ಸುತ್ತಳತೆಯ ಹಳೆಯ ’ವೈನ್’’ ದ್ರಾಕ್ಷೆ ಬಳ್ಳಿ ಇದ್ದ ಹ್ಯಾಂಪ್ಟನ್ ಕೋರ್ಟ್. ಅದು ಥೇಮ್ಸ್ ದಂಡೆಯ ಮೇಲೆಯೇ ಇದೆ. ಆಗಿನಂತೆ ಈಗಲೂ ಪ್ರೇಕ್ಷಕರು ಮುಗಿ ಬೀಳುತ್ತಾರೆ. ಆತನ ಆಳಿಕೆಯ ನಂತರ ಕೊನೆಯ ಟ್ಯೂಡರ್ ರಾಣಿ ಒಂದನೆಯ ಎಲಿಝಬೆತ್ ಸಹ ಅಲ್ಲಿ ಕೆಲಕಾಲ ಸೆರೆಯಾಳಾಗಿದ್ದಳು. ಮಾರ್ಲೋ ಊರು, ಕಿಂಗ್ ಜಾನ್ ಮತ್ತು ಆತ ಸಹಿ ಮಾಡಿದ ಮ್ಯಾಗ್ನಾ ಕಾರ್ಟಾ ಐಲಂಡ್ ಇವುಗಳ ವರ್ಣನೆ ಸಹ ಬರುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಊಟಿಯಲ್ಲಿದ್ದಾಗ ನಾವು ಮೂವರು ಅಣ್ಣತಮ್ಮಂದಿರನ್ನು ಆಕರ್ಷಿಸಿದ್ದು ಆ ಪುಸ್ತಕದಲ್ಲಿ ಬರುವ ಹ್ಯಾಂಪ್ಟನ್ ಕೋರ್ಟ್ ಮೇಝ್ (Maze of hedges) -ಹೂದೋಟದಲ್ಲಿ ಪೊದೆಗಳಿಂದ ರಚಿಸಿದ ಸಿಕ್ಕು ದಾರಿ. ಅದನ್ನು ಹಿಂದಿಯಲ್ಲಿ ಭೂಲ್ ಭುಲಯ್ಯ ಎನ್ನುವರು. ಅದರಲ್ಲಿ ಹೊಕ್ಕರೆ ದಾರಿ ತಪ್ಪಿಸಿಕೊಂಡು ಹೊರಬರುವದೇ ಕಷ್ಟ. ಒಂದು ರೀತಿಯ ಪದ್ಮವ್ಯೂಹ ಎನ್ನ ಬಹುದು. ನಾನು ಇತ್ತೀಚೆಗೆ ಹ್ಯಾಂಪ್ಟನ್ ಕೋರ್ಟ್ ಗೆ ಭೆಟ್ಟಿ ಕೊಟ್ಟಾಗ ಆ ಮೇಝಿಗೂ ಹೋಗಿ ಬಂದೆ. ಮೊದಲ ಸಲ ಹ್ಯಾರಿಸ್ ಹೇಳಿದ ಕಥೆಯನ್ನು ಮೆಲಕು ಹಾಕಿದೆ. ಮನೆಗೆ ಬಂದು ಅದನ್ನು ಓದಿದೆ. ಅದರ ಝಲಕ್ ಇಲ್ಲಿದೆ:
ಉಪಕಥೆಗಳಲ್ಲದೆ ನೇರವಾಗಿ ನೀರಿನ ಪ್ರವಾಸದ ಬಗೆಗಿನ ತಮಾಷೆಯ ವಿಷಯಗಳೂ ಅನೇಕ.  ನೀರಿನ ಪಾತಳು ಸಮ ಪಡಿಸಲು ಒಮ್ಮೆ ಲಾಕ್ ಒಳಗೆ ಹೊಕ್ಕ ಅವರ ಬೋಟಿನ ಕಿರಿಮೂಲೆಯ ಮುಂಬದಿ (nose of the boat) ದ್ವಾರದ ಸಂದಿಯಲ್ಲಿ ಸಿಕ್ಕಿಕೊಂದು ದೋಣಿಯ ತುದಿ ಏರುತ್ತಿರುವಾಗ ಅದರ ಪರಿವೆಯಿಲ್ಲದೆ ಫೋಟೊಗ್ರಾಫರನ ಮೇಲೆ ಪೂರ್ತಿ ಲಕ್ಷ್ಯವಿಟ್ಟು ''Nose! Nose!'' ಅಂತ ಜನ ಎಚ್ಚರಿಸಿದಾಗಲೂ ಮೂಗು ಮುಟ್ಟಿಕೊಂಡು ಎಲ್ಲ ಸರಿಯಾಗಿದೆ ಅಂತ ಗಂಡಾಂತರದಿಂಅ ಸ್ವಲ್ಪದರಲ್ಲೇ ಪಾರಾದದ್ದು, ಮತ್ತು ಟಿನ್ ಓಪನರ್ ಇಲ್ಲದೆ ಅನಾನಸ್ ಹಣ್ಣಿನ ಟಿನ್ನನ್ನು ಭೇದಿಸಲು ಪಟ್ಟ ಕಷ್ಟ, ಜಜ್ಜಿ ಪಚ್ಚೆ ಮಾಡಿದ ಕಥೆ ...ಅದರ ತುಂಬ ಹರಿಯುವದು ಥೇಮ್ಸ್ ಅಲ್ಲ, ಹಾಸ್ಯ.
ಅಂದರೆ ಪುಸ್ತಕದಲ್ಲಿ ಋಣಾತ್ಮಕ ಗುಣಗಳೇ ಇಲ್ಲವೆ? ನೆನ್ನೆಗೆ (ಮೇ ೨) ಜೆರೋಮ್ ಹುಟ್ಟಿ ೧೬೫ ವರ್ಷಗಳು ತುಂಬುತ್ತವೆಯೆಂದ ಮೇಲೆ, ಆಗಿನ ಭಾಷೆ ಮತ್ತು ಕಥನ ಶೈಲಿ ಸುಲಲಿತ ಎಂದು ಎಲ್ಲರೂ ಒಪ್ಪುವದಿಲ್ಲ. ಆ ಕಾರನಕ್ಕೇ ಈ ಮೊದಲೇ ಉಲ್ಲೇಖಿಸಿದಂತೆ ’ಅಪ್ಪಿಟಿ’ ವಿಮರ್ಶಕರು ಕೊಟ್ಟಿದ್ದು ಆ ತರದ ಅಭಿಪ್ರಾಯ. ಕಥೆಯ ಓಘಕ್ಕೆ ಅಲ್ಲಲ್ಲಿ ತಡೆಯಿದೆ. ಮತ್ತು ಭಾಷೆ ಪೆಡಸು (clunky ಎನ್ನಬಹುದು). ಆಶ್ಚರ್ಯವೆಂದರೆ ಅದರಲ್ಲಿ ಉಲ್ಲೇಖಿತವಾದ ಐತಿಹಾಸಿಕ ಸ್ಥಳಗಳು, ಪಬ್ ಮತ್ತು ಇನ್ ಗಳು (ಒಂದೆರಡನ್ನು ಬಿಟ್ಟರೆ) ಇನ್ನೂ ಹಾಗೆಯೇ ಇವೆ. ಅವುಗಳ ವ್ಯಾಪಾರಕ್ಕೆ ಈ ಪುಸ್ತಕದ್ದೂ ಸ್ವಲ್ಪ ಪ್ರಭಾವವಿರಲು ಸಾಕು. ಅದಲ್ಲದೆ. ಅನೇಕ ಜನರು ತಾವು ಸಹ ಆ ಪ್ರವಾಸವನ್ನು ಮಾಡಿ ತೋರಿಸಿದ್ದಾರೆ, ಬರೆದಿದ್ದಾರೆ, ಟೆಲಿವಿಜನ್ನಿನಲ್ಲಿ ಸಹ ಅದರ ಒಂದು ಸರಣಿಯನ್ನು ನೋಡಿದ ನೆನಪು.
ಕೊನೆಯಲ್ಲಿ, ಅಂಕಲ್ ಪಾಡ್ಜರನು ಹೊಸದಾಗಿ ಕಟ್ಟು ಹಾಲಿಸಿದ ಚಿತ್ರವೊದನ್ನುನೇತು ಹಾಕುವ ಕಥೆಯನ್ನು ಉಲ್ಲೇಖಿಸದೆ ಯಾವ ’ಥ್ರೀ ಮೆನ್ ’ ಕಥೆಯೂ ಮುಕ್ತಾಯವಾಗೋದಿಲ್ಲಂತ ಅದರ ವರ್ಣನೆಯ ಕೆಲವು ಸಾಲುಗಳೊಂದಿಗೆ ಲೇಖನ ಮುಗಿಸುವೆ. ಅದು ಎಷ್ಟೋ ಶಾಲೆಗಳ ಪಠ್ಯಪುಸ್ತಕದಲ್ಲಿ ಸಹ ಸೇರ್ಪಡೆಯಾಗಿತ್ತಂತೆ. ನಿಮ್ಮಲ್ಲನೇಕರು ತಮ್ಮ ಅವಿಭಕ್ತ ಕುಟುಂಬದಲ್ಲಿ ಇಂತಹ ಒಬ್ಬ ’ದೊಡ್ಡ’ ಅರ್ಭಟ ವ್ಯಕ್ತಿಯನ್ನು ಕಂಡಿರಲಿಕ್ಕೆ ಸಾಕು!

ಅಂಕಲ್ ಪಾಡ್ಜರ್ ನೇತು ಹಾಕಿದ ಚಿತ್ರ

ಒಂದು ಸಾಯಂಕಾಲದ ಮಬ್ಬುಗತ್ತಲೆಯಲ್ಲಿ ಆಂಟಿ ಪಾಡ್ಜರ್ ಫ್ರೇಮ್ ಹಾಕಿಸಿ ತಂದ ಚಿತ್ರವನ್ನು ನೇತು ಹಾಕೋರು ಯಾರು ಅಂತ ಕೇಳಿದಳು. ”ನನಗೆ ಬಿಟ್ಟು ಬಿಡಿರಿ, ಚಿಂತೆ ಬೇಡ. ನಾನು ಮಾಡುತ್ತೇನೆ,” ಅನ್ನುತ್ತ ತನ್ನ ಕೋಟು ಬಿಚ್ಚುತ್ತ ಆರಂಭ ಮಾಡಿದ ಅಂಕಲ್ ಪಾಡ್ಜರ್. ಹಿರಿಯ ಮಗಳನ್ನು ಮೊಳೆಗಳನ್ನು ತರಲು ಕಳಿಸಿದ.ಆಕೆಯೇ ಹಿಂದೆಯೆ ಒಬ್ಬ ಹುಡುಗನ ರವಾನಿ - ಉದ್ದಳತೆ ತಿಳಿಸಲು. ಅವು ಬರೀ ಪ್ರಾರಂಭದ ಆರ್ಡರ್ಗಳು, ಇಡೀ ಮನೆ ತುಂಬ ಕೋಲಾಹಲ. ”ನನ್ನ ಸುತ್ತಿಗೆ ತೊಗೊಂಡು ಬಾ, ವಿಲಿಯಮ್,” ಅಂತ ಕೂಗಿದ. ”ನನ್ನ ರೂಲರ್ ಎಲ್ಲಿ, ಟಾಮ್, ಮತ್ತು ನನ್ನ ಏಣಿಯನ್ನು ತರಲು ಮರೆಯ ಬೇಡ. ಕುರ್ಚಿ ಸಹ ಇರಲಿ, ಬೇಕಾದೀತು. ಹ್ಞಾ, ಜಿಮ್, ಸ್ವಲ್ಪ ನಯವಾಗಿ ಮಾತಾಡಿಸಿ, ಅವರ ಕಾಲೂತದ ಬಗ್ಗೆ ವಿಚಾರಿಸಿ ಪಕ್ಕದ ಮನೆಯವರಿಂದ ಸ್ಪಿರಿಟ್ ಲೆವಲ್ ಕಡ ತಾರಪ್ಪ! ... ಮರಿಯಾ, ನೀನು ತೊಲಗ ಬೇಡ, ನನಗೆ ದೀಪ ತೋರಿಸ ಬೇಕು.” ಹಿರಿಯ ಮಗಳು ಬಂದ ಮೇಲೆ ಮತ್ತೆ ಓಡಿ ಹೋಗ ಬೇಕು. ಹಗ್ಗ ತರಲು. ಟಾಮ್, ಓ ಟಾಮ್, ಎಲ್ಲಿ ಅವನು? ಟಾಮ್, ಇಲ್ಲಿ ಬಂದು ನಿಲ್ಲು, ನನಗೆ ಆ ಚಿತ್ರವನ್ನು ಎತ್ತಿ ಕೊಡ ಬೇಕು, ಸ್ವಲ್ಪ ವಜ್ಜ ಐತಿ. ಆನಂತರ ಅಂಕಲ್ ಚಿತ್ರವನ್ನು ಕೈಯಲ್ಲಿ ಎತ್ತಿ ಹಿಡಿಯುವಷ್ಟರಲ್ಲಿ ಆತನ ಕೈಯಿಂದ ಜಾರಿ ಬಿತ್ತು. ಫ್ರೇಮು ಸಹ ಬಿಚ್ಚಿದ್ದರಿಂದ ಗಾಜನ್ನು ಉಳಿಸಲು ಹೋಗಿ ಅದು ಕೈ ಕತ್ತರಿಸಿತು. ಕುಣಿಯುತ್ತ, ತತ್ತಿರಿಸುತ್ತ ಕೋಣೆ ತುಂಬ ಪರ್ಯಟನ, ತನ್ನ ಕರವಸ್ತ್ರ ಹುಡುಕುತ್ತ. ಅದು ಸಿಗಲಿಲ್ಲ ಯಾಕಂದರೆ ಅದು ಕೋಟಿನ ಕಿಸೆಯಲ್ಲಿದೆ, ಕೋಟು ಎಲ್ಲಿ ಹಾಕಿದ್ದ ಅಂತ ನೆನಪಿಲ್ಲ. ಮನೆಯವರೆಲ್ಲ ಆತನ ಉಪಕರಣಗಳ ಅನ್ವೇಷಣೆಯಲ್ಲಿ ಎಲ್ಲೆಡೆ ಚೆಲ್ಲಾಪಿಲ್ಲಿಯಾದರು. ಕೆಲವರು ಆತನ ಕೋಟನ್ನು ಹುಡುಕುತ್ತ ಹೊರಟಾಗ ಆತನೋ ಅತ್ತಿತ್ತ ಕುಣಿಯುತ್ತ ಎಲ್ಲರ ಕಾಲಲ್ಲಿ ಸಿಗುತ್ತ ತಿರುಗುತ್ತಿದ್ದ .
”ಇಷ್ಟು ಜನರಲ್ಲಿ, ಯಾರಿಗೂ ನನ್ನ ಕೋಟೆಲ್ಲಿದೆ ಗೊತ್ತಿಲ್ವಾ? ಇಂಥ ನಾಲಾಯಕರನ್ನು ಜನ್ಮದಲ್ಲಿ ಕಂಡಿಲ್ಲ. ನಿಜವಾಗಿಯೂ ನೀವು ಆರು ಜನರಿಗೂ ಐದು ನಿಮಿಷದ ಹಿಂದೆ ಇಟ್ಟ ಕೋಟನ್ನು ಹುಡುಕಲಾಗಲಿಲ್ಲವಲ್ಲ ...” ಅನ್ನುತ್ತ ಕುರ್ಚಿಯಿಂದ ಎದ್ದಾಗ ಅದರ ಮೇಲೆಯೇ ತಾನು ಇಷ್ಟು ಹೊತ್ತು ಕೂತಿದ್ದು ಗೊತ್ತಾಗಿ, ”ಈಗ ಬಿಡ್ರೆಪ್ಪ, ಅಂತೂ ಇದೀಗ ನಾನೇ ಹುಡುಕಿದೆ, ನಮ್ಮ ಸಾಕು ಬೆಕ್ಕು ನಿಮಗಿಂತ ಬೇಗ ಹುಡುಕುತ್ತಿತ್ತೇನೋ.”
ಅರ್ಧ ಗಂಟೆಯೇ ಬೇಕಾಯಿತು, ಆತನ ಬೊಟ್ಟಿಗೆ ಬ್ಯಾಂಡೇಜ್ ಮಾಡಿ, ಹೊಸ ಗಾಜನ್ನು ತರಿಸಿ, ಸಾಧನಗಳು, ಏಣಿ, ಕುರ್ಚಿ, ಮೋಂಬತ್ತಿ, ಎಲ್ಲ ತಂದ ಮೇಲೆ ಮನೆಯವರು, ಕೆಲಸದಾಕೆ, ಆಕೆಯ ಮಗಳು ಇವರೆಲ್ಲ ಕೈಕೊಡಲು ಅರ್ಧ ವರ್ತುಲಾಕಾರದಲ್ಲಿ ನಿಂತಿರಲು ಆತನ ಮತ್ತೊಂದು ಪ್ರಯತ್ನ ಶುರು... ಇಬ್ಬರು ಕುರ್ಚಿಯನ್ನು ಭದ್ರವಾಗಿ ಹಿಡಿಯಲು,ಮೂರನೆಯವ ಅಂಕಲನ್ನು ಮೇಲೆ ಹತ್ತಿಸಿ ಬಿಗಿಯಾಗಿ ಹಿಡಿದಿರಲು, ನಾಲ್ಕನೆಯವರು ಮೊಳೆಯನ್ನು ಆತನ ಕೈಗಿಡಲು, ಐದನೆಯವನು ಸುತ್ತಿಗೆಯನ್ನು ಆತನಿಗೆ ಕೊಡಲು ತುದಿಗಾಲ ಮೇಲೆ ನಿಂತಿರುವ. ಸರಿ, ಅಂಕಲ್ಲೋ ಕೈಯಲ್ಲಿ ಮೊಳೆಯನ್ನು ಹಿಡಿದ ಮರುಕ್ಷಣದಲ್ಲಿ ಕೆಳಗೆ ಬೀಳಿಸಿ ಬಿಟ್ಟ.
”ಅಯ್ಯೊ, ಈಗ ಮೊಳೆ ಬಿತ್ತಲ್ಲ” ಅಂತ ಗಾಯ ಪಟ್ಟವನ ಆರ್ತನಾದ. ಈಗ ಎಲ್ಲರೂ ಮೊಣಕಾಲ ಮೇಲೆ ಸರಿದು ಅದರ ಹುಡುಕಾಟದಲ್ಲಿ ಮಗ್ನರಾಗಿರುವಾಗ ಆತ ಕುರ್ಚಿಯ ಮೇಲೆ ಗೊಣಗುತ್ತ ನಿಂತು, ’ನನ್ನನ್ನು ಇಡೀ ರಾತ್ರಿ ಹಿಂಗ ಕಳೀ ಬೇಕಂತ ಮಾಡೀರೇನು?’ ಅಂತ ಹಂಗಿಸುತ್ತ ಕೂಡುವ. ಕೊನೆಗೆ ಮೊಳೆ ಸಿಕ್ಕಿತು ಆದರೆ ಆತ ಸುತ್ತಿಗೆಯನ್ನು ಅಷ್ಟರಲ್ಲಿ ಎಲ್ಲೋ ಕಳಕೊಂಡಿದ್ದ. “ಎಲ್ಲಿ ಆ ಸುತ್ತಿಗೆ, ಏಳು ಮಂದಿ ಮೂರ್ಖರು ಬಾಯಿ ಕಳಕೊಂಡು ಏನು ಮಾಡುತ್ತಿದ್ರಿ?”
ನಾವು ಸುತ್ತಿಗೆ ಹುಡುಕಿದೆವೇನೋ ಸರಿ, ಆತ ಮೊಳೆ ಹೊಡೆಯಲು ಮಾಡಿದ ಗುರುತು ಸಿಗವಲ್ತು. ಒಬ್ಬೊಬ್ಬರಾಗಿ ನಾವೆಲ್ಲ ಕುರ್ಚಿ ಹತ್ತಿ ಹುಡುಕುತ್ತ ಹೋದಂತೆ ಒಬ್ಬರು ಕಂಡು ಹಿಡಿದ ಜಾಗ ಇನ್ನೊಬ್ಬರೊಂದಿಗೆ ಹೊಂದದೆ ಎಲ್ಲರೂ ಮತ್ತೆ ಮೂರ್ಖರಾದೆವು. ಎಲ್ಲರನ್ನೂ ಸ್ವಸ್ಥಾನಕ್ಕೆ ಕಳಿಸಿ ತಾನೆ ಅಳೆದು ಲೆಕ್ಕ ಹಾಕಿ, ದೂರ ಗೋಡೆಯ ತುದಿಯಿಂದ ಮೂವತ್ತೊಂದು ಮತ್ತು ಮೂರೆಂಟಾಂಶ ಇಂಚು, ಅಂತ ಮನಸ್ಸಿನಲ್ಲೆ ಲೆಕ್ಕ ಹಾಕುತ್ತ ತಲೆ ಬಿಸಿಮಾಡಿಕೊಳ್ಳುವ. ಎಲ್ಲರೂ ತಮ್ಮ ತಲೆಯಲ್ಲೇ ಲೆಕ್ಕ ಹಾಕಿ ಬೇರೆ ಬೇರೆ ಉತ್ತರ ಕೊಟ್ಟರು. ಒಂದೇ ಉಪಾಯ ಅಂದರೆ ಮತ್ತೆ ಅಳೆಯ ಬೇಕೆಂದು ಈ ಸಲ ದಾರ ಹಿಡಿದು ಅಳೆಯಲು ಹೋದಾಗ ಮೂರಿಂಚು ಕೂಡಿಸಿ ಹಿಡಿದ ಗುರುತನ್ನು ಬರೆಯಲು ಇನ್ನಷ್ಟು ಮೈ ಚಾಚಬೇಕಾಗಿ ನಲವತ್ತೈದು ಡಿಗ್ರಿಗಿಂತ ಹೆಚ್ಚಾಗಿ ವಾಲಿದ್ದರಿಂದ ದಾರ ಕೈಯಿಂದ ಜಾರಿ ಬಿತ್ತು, ಜೊತೆಗೆ ತಾನೂ ಸಹ ಕೆಳಗಿದ್ದ ಪಿಯಾನೋ ಮೇಲೆ ಬಿದ್ದಿದ್ದರಿಂದ, ಅಚಾನಕ್ಕಾಗಿ ಆತನ ತಲೆ ಮತ್ತು ಶರೀರ ಕೂಡಿಯೇ ಏಕ ಕಾಲಕ್ಕೆ ಪಿಯಾನೋದ ಅಷ್ಟೂ ಕೀಗಳ ಮೇಲೆ ಒತ್ತಿದ್ದರಿಂದ ಒಂದು ತರದ ಸುಂದರ ಸ್ವರಸಂಗಮ ಉತ್ಪನ್ನವಾಯಿತು.
ಎದ್ದು, ಅಂತೂ ಕೊನೆಗೆ ಗುರುತು ಮಾಡಿದಲ್ಲಿ ಮೊಳೆಯ ಮೊನೆಯನ್ನು ಎಡಗೈಯಿಂದ ಗೋಡೆಯ ಮೇಲಿರಿಸಿ ಬಲಗೈಯಲ್ಲಿ ಸುತ್ತಿಗೆ ಹಿಡಿದ. ಮೊದಲ ಪೆಟ್ಟುಬಿದ್ದಿದ್ದು ಸರಿಯಾಗಿ ಹೆಬ್ಬೊಟ್ಟಿನ ಮೇಲೆ. ಆತ ಚೀರುತ್ತ ಕೆಡವಿದ ಸುತ್ತಿಗೆ ಬಿದ್ದದ್ದು ಯಾರದೋ ಕಾಲ್ಬೆರಳುಗಳ ಮೇಲೆ. ಆಂಟಿ ಮರಿಯಾ ಆಗ ಮೆಲುದನಿಯಲ್ಲಿ ಪಣ ತೊಟ್ಟಿದ್ದು ಮುಂದಿನ ಸಲ ಆತನ ಕೈಯಲ್ಲಿ ಮೊಳೆ-ಸುತ್ತಿಗೆ ಏರುದ ಸಮಯ ಯಾರಾದರೂ ಅವಳಿಗೆ ಮುನ್ಸೂಚನೆ ಕೊಟ್ಟರೆ ತಾನು ಒಂದು ವಾರ ತವರಿಗೆ ಹೋಗಿ ಇರುವ ವ್ಯವಸ್ಥೆ ಮಾಡುತ್ತೇನೆ ಎಂದು.
ಕೊನೆಗೆ, ಮಧ್ಯರಾತ್ರಿಗೆ ಸರಿಯಾಗಿ ಆ ಚಿತ್ರ ಗೋಡೆಯಮೇಲೆ ನೇತು ಹಾಕಲ್ಪಟ್ಟಿತ್ತು - ಸ್ವಲ್ಪ ಸೊಟ್ಟಗೆ ಮತ್ತು ಯಾವ ಕ್ಷಣದಲ್ಲೂ ಕೆಳಗೆ ಸರಿಯುವದೇನೋ ಅನ್ನುವ ಭಂಗಿಯಲ್ಲಿ, ಸುತ್ತಲಿನ ಗೋಡೆ ಮಾತ್ರ ಸುತ್ತಿಗೆ ಪೆಟ್ಟಿನಿಂದ ನುಗ್ಗು ಮುಗ್ಗಾಗಿತ್ತು. ಆ ಹೊತ್ತಿನಲ್ಲಿ ಎಲ್ಲರಿಗೂ ಸುಸ್ತು-ಅಂಕಲ್ ಒಬ್ಬರನ್ನು ಬಿಟ್ಟು!

ಶ್ರೀವತ್ಸ ದೇಸಾಯಿ
Uncle Podger hangs a picture.
(Now out of copyright, Three Men in a Boat is available from many sources including Punguin, Wordworth classics etc.)