ಕೃಷ್ಣೆ – ತುಂಗೆಯರ ನಾಡಿನಲ್ಲಿ ಹರಿದಾಸಸಾಹಿತ್ಯ – ಕೆಲವು ಅಂಶಗಳು.

****************************

ಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತ್ತಗೊಳಿಸುವುದು.  ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ. 

ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.
ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ.

ಕೃಷ್ಣ ತುಂಗೆಯರ ಮಧ್ಯದಲ್ಲಿರುವ ರಾಯಚೂರು ಜಿಲ್ಲೆ ಹಲವು ರೀತಿಯ ಕಲೆ ಸಾಹಿತ್ಯ. ಸಂಸ್ಕೃತಿಗಳ ನೆಲೆಬೀಡಾಗಿದೆ. ಹರಿದಾಸ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಹರಿದಾಸರ ತೊಟ್ಟಿಲು ಎಂದು ಹೆಸರಾಗಿದೆ.

ಹರಿದಾಸ ಸಾಹಿತ್ಯವನ್ನು ವಿದ್ವಾಂಸರು ಹಲವು ರೀತಿಗಳಲ್ಲಿ ವಿಭಾಗಿಸಿದ್ದಾರೆ. ಶ್ರೀ ರಾ. ಸ್ವಾ. ಪಂಚಮುಖಿಯವರ ಪ್ರಕಾರ 4 ಘಟ್ಟಗಳಿವೆ – 1. ಮಧ್ವಾಚಾರ್ಯರ ಶಿಷ್ಯ ನರಹರಿ ತೀರ್ಥರ ಕಾಲ, 2. ಕೃಷ್ಣದೇವರಾಯನ ಕಾಲ, 3. ವಿಜಯದಾಸರ ಮತ್ತು ಅವರ ಶಿಷ್ಯರ ಕಾಲ ಮತ್ತು 4. ನಂತರದ ಕಾಲ.

ಡಾ. ಆರ್ ಜಿ ಗುಡಿಯವರು ಇದನ್ನೇ 1. ಶ್ರೀಪಾದರಾಜಪೂರ್ವ ಯುಗ (ಕ್ರಿಶ 879-1450), 2. ಶ್ರೀಪಾದರಾಜಯುಗ (ಕ್ರಿಶ 1451-1565), 3. ವಿಜಯದಾಸಯುಗ (ಕ್ರಿಶ 1566-1809) ಮತ್ತು 4. ಶಿಷ್ಯ-ಪ್ರಶಿಷ್ಯ ಯುಗ (ಕ್ರಿಶ 1810 ರಿಂದ ಮುಂದೆ) ಎಂದು ವಿಭಾಗಿಸಿದ್ದಾರೆ.

ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ.

ಕನ್ನಡದಲ್ಲಿ ರಚಿತವಾದ ಹರಿದಾಸಸಾಹಿತ್ಯದ ಮೂಲ ಮಧ್ವಾಚಾರ್ಯರ ಶಿಷ್ಯ ನರಹರಿತೀರ್ಥರಿಂದ (ಅಂಕಿತ: ನರಹರಿ / ರಘುಪತಿ) ಆರಂಭವಾದದ್ದು. ಅವರ ರಚನೆಗಳಲ್ಲಿ ನಾಲ್ಕು ಮಾತ್ರ ಈಗ ಲಭ್ಯವಿವೆ (ಎಂತು ಮರುಳಾದೆ, ತಿಳಕೋ ನಿನ್ನೊಳಗೆ ನೀನು, ಹರಿಯೇ ಇದು ಸರಿಯೇ ಮತ್ತು ಎದುರ್ಯಾರೊ ಗುರುವೇ).

ಅದರ ನಂತರದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಂದ ಬತ್ತಿಹೋದಂತೆನಿಸಿದರೂ, ಅರವತ್ತು ಜನ ’ಆದ್ಯ’ರಿಂದ ಮಂದಗಾಮಿಯಾಗಿ ಮುಂದುವರೆಸಲ್ಪಟ್ಟಿತು (ಶ್ರೀ ಗೋರೆಬಾಳು ಹನುಮಂತರಾಯರು / ಕಪಟರಾಳ ಕೃಷ್ಣರಾಯರು). ಸಂಖ್ಯೆಯಲ್ಲಿ ಮಹತ್ವಪೂರ್ಣವಲ್ಲದಿದ್ದರೂ, ಈ ರಚನೆಗಳ ಪ್ರಭಾವ ಪುರಂದರ-ಕನಕರ ಮೇಲೆ ಆಗಿರುವುದಂತೂ ಸತ್ಯ ಎನ್ನುವುದು ವಿದ್ವಾಂಸರ ಅಭಿಪ್ರಾಯ.

ದಾಸಸಾಹಿತ್ಯವಾಹಿನಿ ಅಲ್ಲಿಂದ ಮುಂದೆ ತನ್ನ ಆಳ ವೈಶಾಲ್ಯತೆಗಳನ್ನು ಪಡೆದುಕೊಂಡದ್ದು ಎರಡು ನೂರು ವರ್ಷಗಳ ತರುವಾಯ ಶ್ರೀಪಾದರಾಜರ ಕಾಲದಲ್ಲಿ. ಮುಳುಬಾಗಿಲಿನ ಶ್ರೀಪಾದರಾಜರು ಶ್ರೀರಂಗವಿಟ್ಠಲ ಅನ್ನುವ ಅಂಕಿತದಲ್ಲಿ ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಪೂಜಾವಿಧಾನಗಳ ಅವಿಭಾಜ್ಯ ಅಂಗವಾಗಿ ಹಾಡಿಸಲೂ ಆರಂಭಿಸಿದರು.

ಶ್ರೀಪಾದರಾಜರ ಶಿಷ್ಯ ವ್ಯಾಸರಾಜರದು ಹರಿದಾಸಸಾಹಿತ್ಯದ ಅಭಿವೃದ್ಧಿಯಲ್ಲಿ ವಿಶೇಷ ಸ್ಥಾನವಿದೆ. ಸಿರಿಕೃಷ್ಣ ಅಂಕಿತದಲ್ಲಿ ಅವರು ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಕೀರ್ತನೆಗಳಿಗೆ ಸಂಗೀತ-ನರ್ತನಗಳ ಸಂಯೋಜನೆ ಇವರ ಕಾಲದಲ್ಲಿ ನಡೆದು, ಕೀರ್ತನೆಗಳು ಜನಪ್ರಿಯವಾದವು. ಮಠಾಧಿಪತಿಗಳೂ, ವಿಜಯನಗರದ ರಾಜಗುರುಗಳೂ ಆಗಿದ್ದ ವ್ಯಾಸರಾಜರು ವ್ಯಾಸಕೂಟ (ಸಂಸ್ಕೃತ ಗ್ರಂಥ-ವ್ಯಾಖ್ಯಾನಕಾರರು) ಮತ್ತು ದಾಸಕೂಟ (ಹರಿದಾಸಸಾಹಿತ್ಯಕಾರರು) ಎರಡಕ್ಕೂ ಸಂರಕ್ಷಕರಾಗಿದ್ದರು.

ವ್ಯಾಸರಾಜರ ಶಿಷ್ಯ ವಾದಿರಾಜರು ಸಂಸ್ಕೃತವಲ್ಲದೇ, ಕನ್ನಡದಲ್ಲೂ ಅನೇಕ ಕೃತಿಗಳನ್ನು ಹಯವದನ ಎಂಬ ಅಂಕಿತದಲ್ಲಿ ರಚಿಸಿದರು. ಜಾನಪದ ಸಾಹಿತ್ಯ ಪ್ರಕಾರಗಳನ್ನೂ ಅಳವಡಿಸಿಕೊಂಡರು ಅಲ್ಲದೇ ತುಳು ಭಾಷೆಯಲ್ಲೂ ರಚನೆಗಳನ್ನು ಮಾಡಿದರು.

ಈ ಹಂತದಲ್ಲಿದ್ದಾಗ, ದಾಸಸಾಹಿತ್ಯವನ್ನು ಶಿಖರಪ್ರಾಯವಾಗಿಸಿದ ಕೀರ್ತಿ ಪುರಂದರದಾಸರು ಮತ್ತು ಕನಕದಾಸರಿಗೆ ಸಲ್ಲಬೇಕು. ಅನೇಕ ಆಯಾಮಗಳಲ್ಲಿ ದಾಸಸಾಹಿತ್ಯದ ಬೆಳವಣಿಗೆ, ಜನಪ್ರಿಯತೆಗೆ ಕಾರಣವಾದ ವಿಜಯನಗರದ ಉಚ್ಛ್ರಾಯದ ಈ ಕಾಲ ’ದಾಸಸಾಹಿತ್ಯದ ಸುವರ್ಣಯುಗ’ ಎನ್ನಿಸಿಕೊಂಡಿತು.

ಅಪಾರ ಕೀರ್ತನೆಗಳನ್ನು, ಸುಳಾದಿಗಳನ್ನು, ಉಗಾಭೋಗ ಮತ್ತಿತರ ಪ್ರಕಾರಗಳನ್ನು ರಚಿಸುವ ಮೂಲಕ ಪುರಂದರದಾಸರು (ಪುರಂದರವಿಟ್ಠಲ) ದಾಸಸಹಿತ್ಯ-ಸಂಗೀತಕ್ಕೆ ಅಪಾರ ಕೊಡುಗೆ ನೀಡಿ ’ಕರ್ನಾಟಕ ಸಂಗೀತದ ಪಿತಾಮಹ’ ಎನ್ನಿಸಿದರು. ತಮ್ಮ ರಚನೆಗಳಲ್ಲಿ ಬುಡುಬುಡುಕೆ ಪದ, ಲಾವಣಿಯಂತಹ ಜಾನಪದ ಮಟ್ಟುಗಳನ್ನು ಧಾರಾಳವಾಗಿ ಬಳಸಿಕೊಂಡರು. ವೇದಾಂತ ಮತ್ತು ಜನಸಾಮಾನ್ಯರನ್ನು ಬೆಸೆದರು.

ಇವರ ಸಮಕಾಲೀನರಾದ ಕನಕದಾಸರು (ಕಾಗಿನೆಲೆಯಾದಿಕೇಶವ) ತಮ್ಮ ವಿಶಿಷ್ಟ ವ್ಯಕ್ತಿತ್ವ, ಕ್ರಾಂತಿಕಾರಿ ಧೋರಣೆ ಹಾಗೂ ಕಾವ್ಯಶಕ್ತಿಗಳಿಂದ ಮಹತ್ವದ ಸ್ಥಾನ ಪಡೆದವರು. ಒಗಟಿನಂತಿರುವ ’ಮುಂಡಿಗೆ’ ಎಂಬ ಹೊಸ ಕಾವ್ಯಪ್ರಕಾರವನ್ನು ದಾಸಸಾಹಿತ್ಯದಲ್ಲಿ ಸೇರಿಸಿದ್ದಲ್ಲದೇ, ಡೊಳ್ಳಿನ ಹಾಡು ಮತ್ತು ಕಣಪದಗಳ ರಚನೆಯಿಂದ ಜಾನಪದದ ಸೊಗಡನ್ನೂ ತಂದರು.

ವಿಜಯನಗರ ಸಾಮ್ರಾಜ್ಯದ ಪತನಾನಂತರ ದಾಸಸಾಹಿತ್ಯವು ತನ್ನ ಅವನತಿಯತ್ತ ಸಾಗಿತು. ಆ ಕಾಲದ ರಾಜಕೀಯ, ಸಾಮಾಜಿಕ ಅಸ್ಥಿರತೆಗಳ ಕಾವು ತಟ್ಟಿದರೂ, ಈ ಸಾಹಿತ್ಯವಾಹಿನಿಯು ಪೂರ್ತಿ ಬತ್ತದೇ ಹರಿಯುತ್ತಿತ್ತು ಅನ್ನುವುದಕ್ಕೆ ಬಿಜಾಪುರ (ಈಗಿನ ವಿಜಯಪುರ) ಪ್ರಾಂತದ ಕಾಖಂಡಕಿ ಮಹಿಪತಿರಾಯರು ಮತ್ತು ಅವರ ಮಗ ಕೃಷ್ಣರಾಯರಿಂದ ರಚಿತವಾದ ಅನೇಕ ಕೃತಿಗಳೇ ಸಾಕ್ಷಿ. ಕೋಲಾಟದ ಪದ, ಕೊರವಂಜಿಯ ಪದ, ಸುಗ್ಗಿಪದಗಳಂತಹ ಜಾನಪದ ಮಟ್ಟುಗಳು ಇವರ ರಚನೆಗಳಲ್ಲಿ ಕಂಡುಬರುತ್ತವೆ.

ಇಲ್ಲಿಂದ ಮುಂದೆ ಹರಿದಾಸಸಾಹಿತ್ಯಕ್ಕೆ ಮತ್ತೆ ಚಾಲನೆ ದೊರೆತದ್ದು ಮಂತ್ರಾಲಯದ ರಾಘವೇಂದ್ರರ (ಕೃಷ್ಣ) ಕಾಲದಲ್ಲಿ. ಹಂಪಿಯಲ್ಲಿ ಕೇಂದ್ರಿತವಾಗಿದ್ದ ಹರಿದಾಸಪಂಥದ ಕೇಂದ್ರ ಮಾನ್ವಿ, ಲಿಂಗಸೂಗೂರು, ಕಾಖಂಡಿಕಿ, ಮಳಖೇಡ ಮೊದಲಾದ ಊರುಗಳಿಗೆ ಹಬ್ಬಿ ಮತ್ತೆ ಬೆಳೆಯತೊಡಗಿತು. ಈ ಸಾಹಿತ್ಯಪ್ರಕಾರವನ್ನು ಮತ್ತೆ ವೈಭವಯುತವಾಗಿಸಿದ್ದು ರಾಯಚೂರು ಜಿಲ್ಲೆಯ ಚೀಕಲಪರವಿ ಗ್ರಾಮದ ವಿಜಯದಾಸರು (ವಿಜಯವಿಟ್ಠಲ). ಭಾವನಾಪ್ರಧಾನವಾಗಿದ್ದ ದಾಸಸಾಹಿತ್ಯ, ಇವರ ಕೃತಿಗಳಲ್ಲಿ ತತ್ವಪ್ರಧಾನವಾಗಿ ಕಂಡುಬರುತ್ತದೆ.

ವಿಜಯದಾಸರ ಸಮಕಾಲೀನರಾದ ಕಾಖಂಡಿಕಿ ಪ್ರಸನ್ನವೆಂಕಟದಾಸರು (ಪ್ರಸನ್ನವೆಂಕಟ), ಶಿಷ್ಯರಾದ ಭಾಗಣ್ಣ (ಗೋಪಾಲವಿಟ್ಠಲ), ತಿಮ್ಮಣ್ಣ (ವೇಣುಗೋಪಾಲ), ಮೋಹನದಾಸರು (ಮೋಹನವಿಠಲ), ಮತ್ತು ಕಲ್ಲೂರು ಸುಬ್ಬಣ್ಣ (ವ್ಯಾಸವಿಠಲ) ಇವರೆಲ್ಲ ತಮ್ಮ ತಮ್ಮ ಕೊಡುಗೆಗಳಿಂದ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಇವರಲ್ಲಿ ಗೋಪಾಲದಾಸರು (ಭಾಗಣ್ಣ) ವಿಜಯದಾಸರ ತಾತ್ವಿಕವಿಚಾರಧಾರೆಯನ್ನು ಮುಂದುವರಿಸಿದ್ದಲ್ಲದೇ ಸಂಗೀತ, ನರ್ತನ, ಚಿತ್ರಕಲೆಗಳನ್ನೂ ಬಳಸಿಕೊಂಡರು. ಗೋಪಾಲದಾಸರಿಂದ ಪ್ರಭಾವಿತರಾದ ಅವರ ತಮ್ಮಂದಿರಾದ ಸೀನಪ್ಪ (ವರದಗೋಪಾಲವಿಠಲ), ದಾಸಪ್ಪ (ಗುರುಗೋಪಾಲವಿಠಲ), ರಂಗಪ್ಪ (ತಂದೆಗೋಪಾಲವಿಠಲ) ಮತ್ತು ಶಿಷ್ಯ ಐಜಿ ವೆಂಕಟರಾಮಾಚಾರ್ಯ (ವಾಸುದೇವವಿಠಲ) ಅವರೂ ಸಹ ತಮ್ಮನ್ನು ಸಾಹಿತ್ಯಸೇವೆಯಲ್ಲಿ ತೊಡಗಿಸಿಕೊಂಡರು.

ಗೋಪಾಲದಾಸರ ಹೆಸರನ್ನು, ಪರಂಪರೆಯನ್ನು ಉಳಿಸಿದವರಲ್ಲಿ ಜಗನ್ನಾಥದಾಸರು (ಜಗನ್ನಾಥವಿಠಲ) ಪ್ರಮುಖರು. ದಾಸಸಾಹಿತ್ಯ ಪ್ರಕಾರಗಳನ್ನಲ್ಲದೆ ಕನ್ನಡದಲ್ಲಿ ದೊಡ್ಡ ಗ್ರಂಥಗಳನ್ನೂ ರಚಿಸಿದ್ದಾರೆ.

ಅಲ್ಲಿಂದ ಮುಂದೆ, ಹರಿದಾಸಪರಂಪರೆ ಸಾಗಿಬಂದ ದಾಸಪರಂಪರೆಯಲ್ಲಿ ಅನೇಕರು ತಮ್ಮ ಸೇವೆ ಸಲ್ಲಿಸಿದ್ದಾರೆ, ಅವರಲ್ಲಿ ಪ್ರಾಣೇಶದಾಸರು (ಪ್ರಾಣೇಶವಿಠಲ) ಮತ್ತು ಅವರ ಶಿಷ್ಯರ ಪರಂಪರೆಯನ್ನು ಜೀವಂತವಾಗಿಟ್ಟಿರುವ ಅನೇಕ ಹರಿದಾಸರಿದ್ದಾರೆ - ಎಮ್ ಆರ್ ಗೋವಿಂದರಾವ್ (ಗುರುಗವಿಂದವಿಠಲ), ಆರ್ ರಾಮಚಂದ್ರರಾಯರು (ತಂದೆವೆಂಕಟೇಶವಿಠಲ), ಕೋಸಗಿ ಸ್ವಾಮಿರಾಮಾಚಾರ್ಯ (ಶ್ರೀಗುರುಜಗನ್ನಾಥವಿಠಲ), ವಕೀಲ ಸ್ವಾಮಿರಾಯರು (ವರದೇಶವಿಠಲ), ಜೋಳದಹೆಡಗಿ ಶೇಖ್ ಬಡೇಸಾಬ್ (ರಾಮದಾಸ), ವಕೀಲ ಜಿ ಮಧ್ವರಾವ್ (ಮಧ್ವಮುನಿ), ಹೇರೂರು ರಾಮರಾಯರು (ಮೂಲರಾಮ), ಗುರುರಾಜ ಬೆಣಕಲ್ (ನರಹರಿ) ಮತ್ತಿನ್ನೂ ಅನೇಕರನ್ನು ನಾವು ನೆನೆಯಬಹುದು.
ದಾಸಸಾಹಿತ್ಯದಲ್ಲಿ ಮಹಿಳೆಯರು:
ದೈನಂದಿನ ಕಾರ್ಯಕಲಾಪದೊಂದಿಗೆ ದಾಸರ ರಚನೆಗಳನ್ನು ಹಾಡಿಕೊಂಡು ಉಳಿಸಿಕೊಂಡು ಬಂದಿರುವಂತೆಯೇ, ದಾಸಸಾಹಿತ್ಯದ ರಚನೆಯಲ್ಲೂ ಮಹಿಳೆಯರ ಗಮನಾರ್ಹ ಪಾತ್ರವಿದೆ.
ಮೊದಲ ಘಟ್ಟದಲ್ಲಿ ಪುರಂದರ ದಾಸರ ಹೆಂಡತಿ ಸರಸ್ವತೀಬಾಯಿ (ಸಿರಿಪುರಂದರವಿಠಲ) ಮತ್ತು ಮಗಳು ರುಕ್ಮಿಣೀಬಾಯಿ (ತಂದೆಪುರಂದರವಿಠಲ) ಕೃತಿರಚನೆ ಮಾಡಿದ್ದರೆನ್ನಲಾಗಿದ್ದರೂ, ಅವರ ಕೃತಿಗಳು ಈಗ ಉಪಲಬ್ಧವಿಲ್ಲ.

ದ್ವಿತೀಯ ಘಟ್ಟದಲ್ಲಿ ಶ್ರೀರಾಮೇಶ ಅಂಕಿತದೊಂದಿಗೆ ಮುಯ್ಯದ ಪದಗಳು, ಬೀಗರಹಾಡು, ಮೋರೆಗೆ ನೀರು ತಂದ ಹಾಡು ಇತ್ಯಾದಿ ಗಲಗಲಿ ಅವ್ವನವರ ಕೊಡುಗೆ. ಅವರ ಶಿಷ್ಯೆಯಾದ ಭಾಗಮ್ಮ ಅಥವಾ ಪ್ರಯಾಗವ್ವ ಕನ್ನಡದಲ್ಲಿ ಭಾಗವತದ 3ನೆಯ ಸ್ಕಂದ ಬರೆದರು.

ದಾಸಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಮಹಿಳೆಯರನ್ನು ನೆನೆಯುವಾಗ, ಹೆಳವನಕಟ್ಟೆ ರಂಗ ಅನ್ನುವ ಅಂಕಿತದಲ್ಲಿ ವಿಪುಲವಾಗಿ ಸಾಹಿತ್ಯಸೃಷ್ಟಿ ಮಾಡಿದ ಗೋಪಾಲದಾಸರ ಶಿಷ್ಯೆಯಾದ ಹೆಳವನಕಟ್ಟೆ ಗಿರಿಯಮ್ಮನವರನ್ನು ಮರೆಯುವ ಹಾಗೆಯೇ ಇಲ್ಲ.

ಭೀಮೇಶಕೃಷ್ಣ ಅಂಕಿತದೊಂದಿಗೆ ಅನೇಕ ರಚನೆಗಳನ್ನು ಮಾಡಿದ ಹರಪನಹಳ್ಳಿ ಭೀಮವ್ವನ ಸರಳ ಶೈಲಿಯ ಜನಪ್ರಿಯ. ಅನೇಕ ಪೌರಾಣಿಕ ಕಥೆಗಳನ್ನು ಸರಳಕನ್ನಡದ ಹಾಡುಗಳಾಗಿ ಪರಿವರ್ತಿಸಿದ ಕೀರ್ತಿ ಭೀಮವ್ವನಿಗೆ ಸಲ್ಲುತ್ತದೆ. ಶ್ರಾವಣ ಶುಕ್ರವಾರದ ಹಾಡು, ಶನಿವಾರದ ಹಾಡು ಇತ್ಯಾದಿ ಭೀಮವ್ವನ ಕೃತಿಗಳು ಶ್ರಾವಣಮಾಸದಲ್ಲಿ ಇಂದಿಗೂ ಹಾಡಲ್ಪಡುತ್ತವೆ.

ಈ ಪಟ್ಟಿಗೆ, ಚೆಲ್ಲಮ್ಮ, ಗಣಪಕ್ಕ, ಸುಂದರಾಬಾಯಿ, ಪನ್ನಿ ಲಕ್ಷ್ಮೀಬಾಯಿ, ಲಕ್ಷ್ಮೀದೇವಮ್ಮ ಮುಂತಾದವರೂ ಸೇರುತ್ತಾರೆ. ತಡವಾಗಿಯಾದರೂ ಸ್ವತಃ ಕೃತಿರಚನೆಗೆ ಕೈಹಾಕಿದ ಮಹಿಳೆಯರ ಕೊಡುಗೆಯಿಂದ ದಾಸಸಾಹಿತ್ಯದ ಹರವು, ಆಳ ಹೆಚ್ಚಿದವು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

********************************

ಒಟ್ಟಿನಲ್ಲಿ ಕನ್ನಡ ಹರಿದಾಸ ಸಾಹಿತ್ಯವು ವಿಷಯ, ರೂಪ, ಭಾಷೆ, ಪರಿಣಾಮಗಳೆಲ್ಲದರಲ್ಲೂ ವೈಶಿಷ್ಟ್ಯತೆಯನ್ನು ಸಾಧಿಸಿ ಇಂದಿಗೂ ಜೀವಂತವಾಗಿದೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಕರ್ನಾಟಕದ ಎಲ್ಲ ಭಾಗಗಳ ಮಹನೀಯರ ಕೊಡುಗೆ ಇದೆಯೆನ್ನುವುದು ಎಷ್ಟು ಸತ್ಯವೋ, ಅದರ ಸಿಂಹಪಾಲು ಕೃಷ್ಣೆ-ತುಂಗೆಯರ ತೀರದ ಪ್ರದೇಶಗಳದ್ದು ಅನ್ನುವುದೂ ಅಷ್ಟೇ ದಿಟ.

ಮೂಲ ಕೃತಿಯ ಲೇಖಕಿ: ಶ್ರೀಮತಿ ಸೀತಾ ಗುಡೂರ್-ಕುಲಕರ್ಣಿ
ಸಾರ ಇಳಿಸಿದವರು: ಲಕ್ಷ್ಮೀನಾರಾಯಣ ಗುಡೂರ್

********************************

ಎರಡು ಕವನಗಳು ಮತ್ತು ಒಂದು ಲೇಖನ – ಕೇಶವ ಕುಲಕರ್ಣಿ

ನೋಡೂಣಂತ

(AI generated image)

ಕೇಳೀನಿ ಮಂದಿ ಅಕಿನ್ನ ಕಣ್ಣ ಪಿಳಕಿಸದs ನೋಡ್ತಾರಂತ
ಹಂಗಾರ ಈ ಊರಾಗ ನಾಕಾರ ದಿನ ಇದ್ದು ನೋಡೂಣಂತ

ಕೇಳೀನಿ ಸೋತವ್ರು ನೊಂದವ್ರಂದ್ರ ಅಕಿ ಕರುಳ ಕರಗತದಂತ
ಹಂಗಾರ ಮನಿ ಮಠಾ ಕಳಕೊಂಡು ಹಾಳಾಗಿ ಹೋಗೂಣಂತ

ಕೇಳೀನಿ ಅಕಿ ನೋಟದಾಗ ಪ್ರೀತಿ ತುಂಬೇತಂತ
ಹಂಗಾರ ಅಕಿ ಮನಿ ಮುಂದ ಫಿರಕಿ ಹೊಡ್ಯೂಣಂತ

ಕೇಳೀನಿ ಅಕಿಗೆ ಹಾಡು ಕವನ ಭಾಳ ಸೇರ್ತಾವಂತ
ಹಂಗಾರ ಒಂದು ಕವನ ಬರದು ಹಾಡೇ ಬಿಡೂಣಂತ

ಕೇಳೀನಿ ಅಕಿ ಮಾತಾಡಿದ್ರ ಮಲ್ಲಿಗಿ ಉದರತಾವಂತ
ಹಂಗಾರ ತಡಾ ಯಾಕ ಮಾತಾಡಿಸಿಯೇ ತೀರೂಣಂತ

ಕೇಳೀನಿ ಅಕಿ ತುಟಿ ಕಂಡ್ರ ಗುಲಾಬಿಗೆ ಹೊಟ್ಟೆಕಿಚ್ಚಂತ
ಹಂಗಾರ ವಸಂತ ಮಾಸದ ಮ್ಯಾಲ ಕಟ್ಲೇ ಹಾಕೂಣಂತ

ಕೇಳೀನಿ ಅಕಿ ನೋಡಿದ್ರ ಸಾಕು ಮಂದಿಗೆ ಹುಚ್ಚ ಹಿಡಿತದಂತ
ಹಂಗಾರ ಹುಚ್ಚರೊಳಗ ದೊಡ್ಡ ಹುಚ್ಚಾಗಿ ಕುಣ್ಯೂಣಂತ

(ಅಹಮದ್ ಫರಾಜ್ ಬರೆದ `ಸುನಾ ಹೈ ಲೋಗ್ ಉಸೆ ಆಂಖ್ ಭರ್ ಕೆ ದೇಖತೇ ಹೈಂ` ಎನ್ನುವ ಹಾಡು ಓದುತ್ತ ಕೇಳುತ್ತ ನನಗೆ ತಿಳಿದಂತೆ ಕೆಲವು ಸಾಲುಗಳನ್ನು ಭಾವಾನುವಾದ ಮಾಡುವಾಗ ಮೂಡಿದ್ದು)

ಆ ಕತೆಯನ್ನು ತಿನ್ನಲು ಬಿಡಬಾರದಿತ್ತು

(AI generated image)

ನಾನು ಬರೆದ ಆ ಕತೆಯನ್ನು ತಿಂದಳು
ಆ ಕತೆ ತಿಂದಾದ ಮೇಲೆ ನಾ ಬರೆದ
ಎಲ್ಲ ಕವನಗಳನ್ನೂ ಟಿಪ್ಪಣೆಗಳನ್ನೂ
ನನ್ನ ಟೇಬಲ್ಲನ್ನೂ ಸ್ವಚ್ಛ ಮಾಡಿದಳು

ನಾನು ಅವಳನ್ನು ತಡೆಯಹೋದೆ
ನಕ್ಕು ಕಣ್ಣು ಮಿಟುಕಿಸದಳು

ಗೋಡೆಗೆ ಹಾಕಿದ್ದ ಪೋಸ್ಟರುಗಳನ್ನು ಹರಿದಳು
ಸ್ಟಿಕಿ ನೋಟ್ಸುಗಳನ್ನು ಬೀಸಾಕಿದಳು
ನನ್ನ ಬಳಿಯಿದ್ದ ಎಲ್ಲ ಪುಸ್ತಕಗಳನ್ನು
ಗೋಣೀಚೀಲದಲ್ಲಿ ತುಂಬಿ ಕಸದ ತೊಟ್ಟಿಗೆಸೆದಳು

ನಾನು ಅವಳನ್ನು ತಡೆಯಹೋದೆ
ಕೈ ಸವರಿ ಮಾತಿಗಿಳಿದಳು

ನನ್ನ ಎಲ್ಲ ಪಾಸ್ವರ್ಡ್ ಪಡೆದಳು
ನನ್ನ ಬರವಣಿಗೆಯ ಫೈಲುಗಳನ್ನು
ನನ್ನ ಸಾಹಿತ್ಯದ ಗೆಳೆಯರ ಕಾಂಟ್ಯಾಕ್ಟ್ ನಂಬರುಗಳನ್ನು
ಎಲ್ಲ ಸೋಷಿಯಲ್ ಮೀಡಿಯಾಗಳನ್ನು ಅಳಿಸಿದಳು

ನಾನು ಅವಳನ್ನು ತಡೆಯಹೋದೆ
ಕೆನ್ನೆಗೆ ಕೆನ್ನೆ ಕೊಟ್ಟು ಸೆಲ್ಫಿ ತೆಗೆದಳು

ನನ್ನ ಹಳೆಬಟ್ಟೆಗಳನ್ನು ಬೀಸಾಕಿ
ಹೊಸ ಬಟ್ಟೆಗಳ ತಂದಳು
ಗಡ್ಡ ತಲೆಗಳ ಟ್ರಿಮ್ ಮಾಡಿದಳು
ಹೊಸ ಶ್ಯಾಂಪೂ ಪರ್ಫ್ಯೂಮು ತಂದಳು

ನಾನು ಅವಳನ್ನು ತಡೆಯಹೋದೆ
ಗಟ್ಟಿಯಾಗಿ ತಬ್ಬಿ ಚುಂಬಿಸಿದಳು

ಕಿಟಕಿಗೆ ಹೊಸ ಕರ್ಟನ್ನುಗಳನ್ನು ಹಾಕಿ
ನನ್ನ ಕೋಣೆಯ ಬಾಗಿಲಿಗೆ ಅಗುಳಿ ಹಾಕಿದಳು
ಮಲಗುವ ಮಂಚವನ್ನು ಗಟ್ಟಿಗೊಳಿಸಿ
ಹೊಸ ಗಾದೆ ದಿಂಬು ಹಾಕಿದಳು

ನಾನು ಇನ್ನು ತಡೆಯದಾದೆ
ಅವಳ ದೇಹದಲ್ಲಿ ಲೀನವಾದೆ

ಅವಳನ್ನು ನನ್ನ ಕೋಣೆಗೆ ಬಿಟ್ಟುಕೊಡಬಾರದಿತ್ತು
ಬಂದಿದ್ದರೂ ಆ ಕತೆಯನ್ನು ತಿನ್ನಲು ಬಿಡಬಾರದಿತ್ತು
ಅವಳು ತಿಂದ ಆ ಕತೆಯ ಹೆಸರು,
`ನನಗೆಂಥ ಹುಡುಗಿ ಬೇಕು?`

ನಾನು ಕತೆ ಕವನ ಬರೆಯುವುದನ್ನು ಬಿಟ್ಟು
ಈಗ ಹದಿನೈದು ವರ್ಷಗಳಾದವು

ವೈದ್ಯಕೀಯದಲ್ಲಿ ಕೃತಕ ಬುದ್ಧಿಮತ್ತೆ: ಭರವಸೆ ಮತ್ತು ಅಪಾಯ

(AI generated image)

ಕಾಡುಗಳಲ್ಲಿ ಅಲೆಯುತ್ತಿದ್ದ ಮನುಷ್ಯ ವ್ಯವಸಾಯವನ್ನು ಆರಂಭಿಸಲು ಲಕ್ಷಾಂತರ ವರ್ಷಗಳು ಬೇಕಾದವು. ವ್ಯವಸಾಯದ ಕ್ರಾಂತಿಯಿಂದ ಕೈಗಾರಿಕಾ ಕ್ರಾಂತಿಯಾಗಲು ಸಾವಿರಾರು ವರ್ಷಗಳು ಬೇಕಾದವು. ಕೈಗಾರಿಕಾ ಕ್ರಾಂತಿಯಿಂದ ಕಂಪ್ಯೂಟರ್ ಕ್ರಾಂತಿಯಾಗಲು ಕೆಲವೇ ನೂರು ವರ್ಷಗಳು ಸಾಕಾದವು. ಕಂಪ್ಯೂಟರ್ ಕ್ರಾಂತಿಯಿಂದ ಸ್ಮಾರ್ಟ್ ಫೋನ್ ಕ್ರಾಂತಿಯಾಗಲು ಕೆಲವೇ ದಶಕಗಳು! ಸ್ಮಾರ್ಟ್-ಫೋನ್ ಕ್ರಾಂತಿಯಾಗಿ ಇನ್ನೂ ಎರಡು ದಶಕಗಳು ಪೂರ್ತಿ ಮುಗಿದಿಲ್ಲ, ಕೃತಕ ಬುದ್ಧಿಮತ್ತೆಯ ಕ್ರಾಂತಿ ಆರಂಭವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿರುಗಾಳಿಯನ್ನು ಎಬ್ಬಿಸಿದೆ. ವೈದ್ಯಕೀಯ ಕ್ಷೇತ್ರವೂ ಇದಕ್ಕೆ ಹೊರತಲ್ಲ.

ಕೃತಕ ಬುದ್ಧಿಮತ್ತೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸುವಲ್ಲಿ ಮುಖ್ಯ ಪಾತ್ರ ಚಾಟ್-ಜಿಪಿಟಿಯದು. ಅದಕ್ಕಿಂತೆ ಮೊದಲಿನಿಂದಲೇ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಢಿಮತ್ತೆಯ ತಂತ್ರಜ್ಞಾನವನ್ನು ತರುವ ಪ್ರಯತ್ನಗಳು ಬಹಳಷ್ಟು ನಡೆದರೂ, ಚಾಟ್-ಜಿಪಿಟಿ ಬಂದ ಮೇಲೆ ವಿಜ್ಞಾನಿಗಳ, ವೈದ್ಯರ ಮತ್ತು ವೈದ್ಯಕ್ಷೇತ್ರಕ್ಕೆ ನೆರವಾಗುವ ಎಲ್ಲ ಉದ್ಯಮಗಳಲ್ಲಿ ಕೃತಕ ಬುದ್ಧಿಮತ್ತೆಯ ಮೇಲಿನ ಗಮನ ಹೆಚ್ಚಾಗಿದೆ. ಇನ್ನೂ ಅಂಬೆಗಾಲಿಡುತ್ತಿರುವ ಕೃತಕ ಬುದ್ಧಿಮತ್ತೆಯ ಬಹುಮುಖಿ ಸ್ವರೂಪಗಳು, ಅದರ ಭರವಸೆಗಳು, ಅಪಾಯಗಳು ಮತ್ತು ಸಂಭಾವ್ಯ ಮಾರ್ಗಗಳನ್ನು ವೈದ್ಯಕೀಯದ ನಿಟ್ಟಿನಲ್ಲಿ ಪರಿಶೀಲಿಸುವುದು ಈ ಲೇಖನದ ಉದ್ದೇಶ.

ಯಂತ್ರಕಲಿಕೆ ಮತ್ತು ಆಳಕಲಿಕೆಗಳು ಕೃತಕ ಬುದ್ಢಿಮತ್ತೆಯ ಕೇಂದ್ರಬಿಂದುಗಳು. ಸಾಮಾನ್ಯ ಮನುಷ್ಯನು ಮಾತನಾಡುವ ಭಾಷೆಯನ್ನು ಅರ್ಥ ಮಾಡಿಕೊಂಡು ಅದನ್ನು ತನ್ನ ಕಲಿಕೆಗೆ ಅಳವಡಿಕೊಳ್ಳುವುದು ಅದರ ಇನ್ನೊಂದು ರೀತಿ. ವೈದ್ಯರ ತಾಂತ್ರಿಕ ಭಾಷೆಯನ್ನು ಮತ್ತು ಸಂಕೀರ್ಣ ರೋಗನಿದಾನವನ್ನು ವೈದ್ಯರ ಟಿಪ್ಪಣೆಗಳನ್ನು ಓದಿ ಅರ್ಥ ಮಾಡಿಕೊಂಡು ತನ್ನ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತ ಹೋಗುವುದು ಈ ಕೃತಕ ಬುದ್ಢಿಮತ್ತೆಯ ಕೆಲಸ. ಜೊತೆಗೆ ರೋಬೋಟಿಕ್ಸ್ ಯಂತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗೆ ಕೃತಕ ಬುದ್ಢಿಮತ್ತೆಯ ಮೆದುಳನ್ನುಅಳವಡಿಸುವುದು ಮುಂದಿನ ಹಂತ.

ಕೃತಕ ಬುದ್ಢಿಮತ್ತೆಯ ಸಂಶೋಧಕರಾದ ಡಾ. ಫೀ-ಫೀ ಲಿ, “ಕೃತಕ ಬುದ್ಢಿಮತ್ತೆಯು ಮಾನವನ ಬುದ್ಧಿಮತ್ತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ನಮ್ಮ ಜಗತ್ತು ಎದುರಿಸುತ್ತಿರುವ ಕೆಲವು ಸವಾಲುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ,” ಎಂದು ಹೇಳುತ್ತಾರೆ. ವೈದ್ಯಕೀಯ ಕ್ಷೇತ್ರದ ಸಕಲ ಅಂಕಿ-ಅಂಶಗಳನ್ನು (ಡೇಟಾ) ಜಾಲಾಡಿಸಿ, ಸೋಸಿ, ಅದರಿಂದ ಉಪಯೋಗವಾಗುವ ಸಂಶೋಧನೆಯನ್ನು ಮಾಡಲು ಈಗ ಕಂಪ್ಯೂಟರುಗಳು ಸಹಾಯ ಮಾಡುತ್ತಿದೆ. ಕೃತಕ ಬುದ್ಢಿಮತ್ತೆಯು ಅದರ ಜೊತೆ ಸೇರಿದಾಗ ವೈದ್ಯಕೀಯ ಸಂಶೋಧನೆಗಳು ಬೇಗ ಪೂರ್ಣವಾಗುತ್ತವೆ ಮತ್ತು ಹೆಚ್ಚು ನಿಖರವಾಗಿರುತ್ತವೆ. ದಿನದಿಂದ ದಿನಕ್ಕೆ ನಾವು ಉತ್ಪಾದಿಸುವ ಡೇಟಾಗಳು ಕೋಟಿ ಕೋಟಿ ಗಿಗಾಬೈಟುಗಳಲ್ಲಿ ಬೆಳೆಯುತ್ತಿವೆ. ಆ ಡೇಟಾವನ್ನು ಪ್ರಕ್ರಿಯೆಗೊಳಿಸಲು, ಒರೆಗೆ ಹಚ್ಚಲು, ಹೊಸ ಮಾದರಿಗಳನ್ನು ಗುರುತಿಸಲು, ಹೊಸ ಔಷಧಿಗಳನ್ನು, ಹೊಸ ಶಸ್ತ್ರಚಿಕಿತ್ಸೆಯ ಉಪಕರಣಗಳನ್ನು ತಯಾರಿಸಲು ಕೃತಕ ಬುದ್ಢಿಮತ್ತೆಯು ಸಹಾಯವನ್ನು ಮಾಡುತ್ತಿದೆ.

ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ, ಕೃತಕ ಬುದ್ಢಿಮತ್ತೆಯು ರೋಗನಿರ್ಣಯ, ಚಿಕಿತ್ಸಾ ಯೋಜನೆ ಮತ್ತು ವೈಯಕ್ತೀಕರಿಸಿದ ಔಷಧವನ್ನು ಕ್ರಾಂತಿಕಾರಿಗೊಳಿಸುವ ಭರವಸೆಯನ್ನು ಹೊಂದಿದೆ. ಹೃದ್ರೋಗಶಾಸ್ತ್ರಜ್ಞರಾದ ಡಾ. ಎರಿಕ್ ಟೋಪೋಲ್, , “ಬುದ್ಢಿಮತ್ತೆ ಚಾಲಿತ ಅಲ್ಗಾರಿದಮ್‌ಗಳು ವೈದ್ಯಕೀಯ ಚಿತ್ರಗಳನ್ನು ಸರಿಸಾಟಿಯಿಲ್ಲದ ನಿಖರತೆಯೊಂದಿಗೆ ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿವೆ, ರೋಗವನ್ನು ಬಹಳ ಮೊದಲೇ ಪತ್ತೆ ಹಚ್ಚಲು ಮತ್ತು ಮತ್ತು ಹೆಚ್ಚು ರೋಗಿಗಳು ಬೇಗ ಗುಣಮುಖರಾಗಲು ಕಾರಣವಾಗುತ್ತದೆ.”

ವೈದ್ಯಕೀಯದಲ್ಲಿ ಕೃತಕ ಬುದ್ಢಿಮತ್ತೆಯು ರೋಗಪತ್ತೆ, ಚಿಕಿತ್ಸೆ ಮತ್ತು ಔಷಧ ಶೋಧನೆಯಲ್ಲಿ ಪ್ರಗತಿಯನ್ನು ಸಾಧಿಸಿದೆ. ರಕ್ತಪರೀಕ್ಷೆಯ ವಿಶ್ಲೇಷಣೆಯಿಂದ ಹಿಡಿದು ವರ್ಚುವಲ್ ಹೆಲ್ತ್ ಅಸಿಸ್ಟೆಂಟ್‌ಗಳವರೆಗೆ, ಕೃತಕ ಬುದ್ಢಿಮತ್ತೆ ಚಾಲಿತ ಆವಿಷ್ಕಾರಗಳು ರೋಗಿಯ ಅನುಭವಗಳನ್ನು ಮರುರೂಪಿಸುತ್ತಿವೆ ಮತ್ತು ಚಿಕಿತ್ಸೆಯನ್ನು ಹೆಚ್ಚು ನಿಖರವಾಗಿಸುತ್ತಿವೆ. ರೇಡಿಯಾಲಾಜಿ, ಜೀನೋಮಿಕ್ಸ್ ಮತ್ತು ಆರೋಗ್ಯ ದಾಖಲೆಗಳಲ್ಲಿ ಕೃತಕ ಬುದ್ಢಿಮತ್ತೆಯು ಈಗಾಗಲೇ ದೊಡ್ಡ ಸಂಚಲನವನ್ನು ಮಾಡಿದೆ.

ಕೃತಕ ಬುದ್ಢಿಮತ್ತೆಯು ಇಸಿಜಿಯನ್ನು ಓದುತ್ತದೆ. ಸ್ತನ ಕ್ಯಾನ್ಸರ್‌ ಕಂಡುಹಿಡಿಯುವ ಮೆಮೋಗ್ರಾಂನಲ್ಲಿ ಕೃತಕ ಬುದ್ಢಿಮತ್ತೆ ಸಹಾಯಮಾಡುತ್ತಿದೆ. ರಕ್ತಪರೀಕ್ಷೆಗಳನ್ನು ವಿಶ್ಲೇಷಿಸಿ, ವೈದ್ಯರಿಗೆ ರೋಗ ಪತ್ತೆ ಹಚ್ಚಲು ಸಹಾಯ ಮಾಡುತ್ತಿದೆ. ಕ್ಯಾನ್ಸರ್ ರೋಗಿಗಳಿಗೆ ಯಾವ ತರಹದ ಕೀಮೋಥಿರಪಿ ಇರಬೇಕು ಎನ್ನುವುದನ್ನು ನಿರ್ಧರಿಸಲು ಸಹಾಯ ಮಾಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಗೂಗಲ್ಲಿನ `ಡೀಪ್ ಮೈಂಡ್`ನ ಕೃತಕ ಬುದ್ಢಿಮತ್ತೆಯು ಕೆಲವು ವಿಷಯಗಳಲ್ಲಿ ನುರಿತವೈದ್ಯರಿಗೇ ಸವಾಲು ಹಾಕಿದೆ. ಬರೀ ಕಣ್ಣಿನ ರೆಟಿನಾದ ಚಿತ್ರವನ್ನು ನೋಡಿ, ವ್ಯಕ್ತಿಯ ವಯಸ್ಸು, ಮಧುಮೇಹ, ಬಿ.ಪಿಗಳ ಬಗ್ಗೆ ನಿಖರ ಮಾಹಿತಿಯನ್ನು ಕೊಡಬಲ್ಲಷ್ಟು ಸಶಕ್ತವಾಗಿದೆ. ಅಷ್ಟೇ ಅಲ್ಲ, ಕೃತಕ ಬುದ್ಢಿಮತ್ತೆಯು ದಿನದ ೨೪ ಗಂಟೆಯೂ ಲಭ್ಯವಿರುತ್ತದೆ, ಅದು ಬೇಸರ ಮಾಡಿಕೊಳ್ಳುವುದಿಲ್ಲ, ಸುಸ್ತಾಗುವುದಿಲ್ಲ.

ಕೈಗಾರಿಕಾ ಕ್ರಾಂತಿಯಾದಾಗ ಹೊಸಯಂತ್ರಗಳು ಹತ್ತು-ನೂರು ಜನರು ಮಾಡುವ ಕೆಲಸವನ್ನು ಒಂದು ಯಂತ್ರ ಮಾಡಲಾರಂಭಿಸಿತು. ಕಂಪ್ಯೂಟರ್ ಕ್ರಾಂತಿಯಾದಾಗ, ಹತ್ತು ಜನ ಗುಮಾಸ್ತರು ಮಾಡುವ ಕೆಲಸವನ್ನು ಒಂದು ಕಂಪ್ಯೂಟರ ಮಾಡಲಾರಂಭಿಸಿತು. ಸ್ಮಾರ್ಟ್-ಫೋನ್ ಯುಗದಲ್ಲಿ ಹತ್ತು ತರಹದ ಸಾಧನಗಳು ಒಂದೇ ಪುಟ್ಟಯಂತ್ರವಾಗಿ ನಮ್ಮ ಸಹಜೀವಿಯಾಗಿ ಹೋಗಿದೆ. ಕೃತಕ ಬುದ್ಢಿಮತ್ತೆಯು ವೈಟ್ ಕಾಲರ್ ಕೆಲಸಗಳನ್ನು, ಬುದ್ಧಿಮತ್ತೆಯ ಕೆಲಸವನ್ನು ಸ್ಥಳಾಂತರಿಸುತ್ತದೆ. ಈ ಭೀತಿಯು ಇನ್ನೂ ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿರದಿದ್ದರೂ, ಇನ್ನೊಂದು ದಶಕದಲ್ಲಿ ವೈದ್ಯರ ಕೆಲಸಗಳಲ್ಲಿ ಸಾಕಷ್ಟು ಪಲ್ಲಟಗಳಾಗಲಿವೆ.

ಡೇಟಾ ಗೌಪ್ಯತೆ, ಅಲ್ಗಾರಿದಮಿಕ್ ಪಕ್ಷಪಾತ ಮತ್ತು ನೈತಿಕ ಪರಿಣಾಮಗಳ ಬಗ್ಗೆ ಆರೋಗ್ಯ ಕ್ಷೇತ್ರದಲ್ಲಿ ಕಳವಳಕಾರಿ ಸಂಗತಿಗಳಾಗಿವೆ. ಆರೋಗ್ಯದ ಉಪಚಾರದಲ್ಲಿ ಅಸಮಾನತೆಗಳು ಹೆಚ್ಚಾಗುತ್ತವೆ. ರೋಗಿಗಳಿಗೆ `ಮನುಷ್ಯ` ವೈದ್ಯರ ಮೇಲೆ ನಂಬಿಕೆ ಕಡಿಮೆಯಾಗುತ್ತದೆ. ವೈದ್ಯಕೀಯದಲ್ಲಿ ಕೃತಕ ಬುದ್ಢಿಮತ್ತೆಯ ನವೀನ ಸಂಶೋಧನೆಗಳನ್ನು ಬಳಸಿಕೊಳ್ಳುತ್ತಲೇ ನೈತಿಕ ಪರಿಗಣನೆಗಳನ್ನು ಸಮತೋಲನಗೊಳಿಸುವುದು ಅಗತ್ಯವಾಗಿದೆ.

ಕೃತಕ ಬುದ್ಢಿಮತ್ತೆಯ ನೀತಿಶಾಸ್ತ್ರಜ್ಞರಾದ ಟಿಮ್ನಿಟ್ ಗೆಬ್ರು, “ಕೃತಕ ಬುದ್ಢಿಮತ್ತೆಯ ಅಲ್ಗಾರಿದಮ್‌ಗಳಲ್ಲಿ ಪಕ್ಷಪಾತವನ್ನು ಪರಿಹರಿಸುವುದು ಕೇವಲ ತಾಂತ್ರಿಕ ಸವಾಲಲ್ಲ ಆದರೆ ನೈತಿಕ ಕಡ್ಡಾಯವಾಗಿದೆ,” ಎಂದು ಒತ್ತಿಹೇಳುತ್ತಾರೆ. ಕೃತಕ ಬುದ್ಢಿಮತ್ತೆ ನ್ಯೂಕ್ಲಿಯರ್ ತಂತ್ರಜ್ಞಾನದಷ್ಟೇ ದೈತ್ಯ ಶಕ್ತಿ. ಇಂಥ ದೈತ್ಯಶಕ್ತಿಯೊಂದಿಗೆ ದೊಡ್ಡ ಜವಾಬ್ದಾರಿಯೂ ಬರುತ್ತದೆ. ದೈತ್ಯನನ್ನು ದಾನವನನ್ನಾಗಿಸದಿರಲು ಕೆಲವೇ ಕಾರ್ಪೋರೇಟುಗಳ, ಕೆಲವೇ ದೇಶಗಳ ಬಿಗಿಮುಷ್ಟಿಯಿಂದ, ರಾಜಕೀಯ ಮತ್ತು ಧಾರ್ಮಿಕ ಷಡ್ಯಂತ್ರಗಳಿಂದ ಆದಷ್ಟೂ ದೂರವಿಡುವುದು ಬಹಳ ಮುಖ್ಯವಾಗುತ್ತದೆ. ಐಸಾಕ್ ಅಸಿಮೊವ್‌ನ “ಐ, ರೋಬೋಟ್” ಮತ್ತು ಫಿಲಿಪ್ ಕೆ. ಡಿಕ್‌ನ “ಡು ಆಂಡ್ರಾಯ್ಡಸ್ ಡ್ರೀಮ್ ಆಫ್ ಎಲೆಕ್ಟ್ರಿಕ್ ಶೀಪ್?” ನಂತಹ ಕಾದಂಬರಿಗಳು ಕೃತಕ ಬುದ್ಢಿಮತ್ತೆಯ ಭವಿಷ್ಯದ ಬಗ್ಗೆ ಬರೆದ ಕಾದಂಬರಿಗಳು ಭಯಹುಟ್ಟಿಸುವಂತಿವೆ.

ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ದೊಡ್ಡ ಭರವಸೆ. ಈ ಹೊಸ ಪ್ರಪಂಚದ ಸಂಕೀರ್ಣತೆಗಳನ್ನು ಉಪಯೋಗಿಸುವಾಗ ಮನುಕುಲದ ಮತ್ತು ಈ ಭೂಮಿಯ ಉಳಿವಿನ ಯೋಗಕ್ಷೇಮದ ಶಕ್ತಿಯಾಗಿ ಬಳಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಅಷ್ಟೇ ಅಲ್ಲ, ಅದರ ಪ್ರಯೋಜನಗಳನ್ನು ಸಮಾನವಾಗಿ ವಿತರಿಸಬೇಕಾದ ಸವಾಲೂ ಇದೆ. ಮಾನವನ ವೈಜ್ಞಾನಿಕ ಸಾಧನೆಯ ಹಾದಿಯಲ್ಲಿ ಮನುಷ್ಯನ ಮನಸ್ಸಿನಷ್ಟೇ ಜಟಿಲವಾದ ಕೃತಕ ಬುದ್ಧಿಮತ್ತೆ ಮನುಷ್ಯನ ಬುದ್ಧಿಮತ್ತೆಗೇ ಸವಾಲಾಗುತ್ತಿದೆ. ಪ್ರೊಫೆಸರ್ ಸ್ಟೀಫನ್ ಹಾಕಿಂಗ್, “ಶಕ್ತಿಶಾಲಿ ಕೃತಕ ಬುದ್ಢಿಮತ್ತೆಯು ಉದಯವು ಮಾನವೀಯತೆಗೆ ಸಂಭವಿಸುವ ಅತ್ಯುತ್ತಮ ಅಥವಾ ಕೆಟ್ಟ ವಿಷಯವಾಗಲಿದೆ” ಎಂದು ಎಚ್ಚರಿಸಿದ್ದಾರೆ. ಕೃತಕ ಬುದ್ಢಿಮತ್ತೆಯು ಫ್ರಾಂಕಸ್ಟೀನ್ ಆಗದಂತೆ, ಭಸ್ಮಾಸುರನಾಗದಂತೆ ನೋಡಿಕೊಳ್ಳುವುದು ಈ ಹೊಸ ಜಗತ್ತಿನ ಪ್ರಮುಖ ಸವಾಲಾಗಲಿದೆ.

(ವೈದ್ಯಸಂಪದದಲ್ಲಿ ಮೊದಲು ಪ್ರಕಟಿತ)