ಕನ್ನಡ ನಾಡು, ಭಾಷೆ, ಉತ್ಸವ, ಮತ್ತು ಹೊಸವರ್ಷ …..

ಅನಿವಾಸಿಯ ಬಳಗಕ್ಕೆ ನಮಸ್ಕಾರ. 2025ರ ಹೊಸವರ್ಷದಲ್ಲಿಯ ನನ್ನ ಮೊದಲ ಸಂಚಿಕೆಗೆ ನಿಮ್ಮೆಲ್ಲರ ಸ್ವಾಗತ.  ಅನಿವಾಸಿ ಬಳಗದ ಉತ್ಸಾಹ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗೆ ನಡೆದ ದಶಮಾನೋತ್ಸವ, ಹೊಸ ಸದಸ್ಯರುಗಳ ಆಗಮನ, ಬರವಣಿಗೆ ಇತ್ತ್ಯಾದಿಗಳೇ ಸಾಕ್ಷಿ.  ಇದರ ಜೊತೆಯಲ್ಲೇ, ಕೆಲವೇ ವಾರಗಳ ಹಿಂದೆ (ಕಳೆದ ವರ್ಷ ಅನ್ನಬಹುದಿತ್ತೇನೋ, ಆದರೆ ಎಷ್ಟೋ ದಿನ ಆದಂತೆ ಅನ್ನಿಸುವುದರಿಂದ ಬೇಡ ಅಂದುಕೊಂಡೆ) ಸಕ್ಕರೆಯ ನಾಡು, ಮಂಡ್ಯದಲ್ಲಿ ಹಿರಿಯ ಸಾಹಿತಿ ಶ್ರೀ ಗೋ ರು ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 87ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದೇ ನಮ್ಮ ಅನಿವಾಸಿ ಬಳಗದ ಪ್ರತಿನಿಧಿಯಾಗಿ ತೆರಳಿದ್ದರು ನಮ್ಮ ನವೀನ್.  ಅವರು ಬರೆದ ವರದಿ ಇಲ್ಲಿ ಕೆಳಗಿದೆ.  ಅವರೇ ತೆಗೆದ ಹಲವು ಚಿತ್ರಗಳೂ ಜೊತೆಯಲ್ಲಿವೆ - ಅದರಲ್ಲಿ ಪರಿಚಿತ ಮುಖಗಳಿವೆ, ನೋಡಿ.

ಜೊತೆಯಲ್ಲಿ ನಮ್ಮ ಗೋಪಾಲಕೃಷ್ಣ ಹೆಗಡೆಯವರ ಒಂದು ಕವನವಿದೆ, ಹೊಸವರ್ಷದ ಆಶಯಗಳೊಂದಿಗೆ. ಅವರದ್ದೇ ಮಾತಿನಲ್ಲಿ ಕವನದ ಹುಟ್ಟಿನ ಪರಿಚಯವೂ ಇದೆ.

ಕೊನೆಯ ಕೊಸರಿನಂತೆ, ಹೆಗ್ಡೆಯವರದೊಂದು ಚಿತ್ರಕ್ಕೆ ನನ್ನದೊಂದು ಕಿರು ಕವನವನ್ನೂ ಹಾಕಿಬಿಟ್ಟಿದ್ದೇನೆ, ತಡೆಯಲಾರದೆ. ಕ್ಷಮೆಯಿರಲಿ.

ಎಂದಿನಂತೆ ಓದಿ, ತಮ್ಮೆಲ್ಲರ ಮನೋಭಿಪ್ರಾಯವನ್ನು ತಿಳಿಸುವುದನ್ನು ಮುಂದುವರೆಸಿ. ಹೊಸವರ್ಷದ ಶುಭಾಶಯಗಳು.
- ಲಕ್ಷ್ಮೀನಾರಾಯಣ ಗುಡೂರ
*******************************************
೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೪, ಮಂಡ್ಯ

ಇತ್ತೀಚಿಗಷ್ಟೆ ೮೭ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಿತು. ಅದಕ್ಕಂತಲೇ ನಾನು ಭಾರತಕ್ಕೆ ಹೋಗಿದ್ದೆ. ಬಹಳ ವರ್ಷಗಳಿಂದಲೂ ಸಮ್ಮೇಳನದಲ್ಲಿ ಭಾಗಿಯಾಗುವ ತವಕವಿತ್ತು. ಆದರೆ ಆ ಸುಸಂದರ್ಭ ಈಗ ದೊರಕಿತು. ಬಹಳ ನಿರೀಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿದ್ದೆ. ಸಾಹಿತ್ಯ ಸಮಾರೋಪದಲ್ಲಿ ಸಾಕಷ್ಟು ಸಾಹಿತ್ಯದಬಗ್ಗೆ, ಕನ್ನಡ ಭಾಷೆ ಬಗ್ಗೆ ಕೇಳಿಬರುತ್ತದೆ, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಸಾಹಿತಿ, ಕವಿ, ಬರಹಗಾರರ ನಡುವೆ ನಡೆದಾಡಿ, ಅವರನ್ನು ಆಲಿಸಿ ಅವರಿಂದ ಪ್ರೇರಣೆ ಪಡೆಯುವುದಲ್ಲದೆ, ಕನ್ನಡ ಭಾಷಾಕ್ಷೇತ್ರದಲ್ಲಿ ಎಂಥಹ ಬೆಳವಣಿಗೆ ರೂಪಗೊಂಡಿದೆ ಎಂದು ಕಾಣುವ ಹಂಬಲ ಬೆಳಸಿಕೊಂಡಿದ್ದೆ. ಇದಕ್ಕನುಗುಣವಾಗಿ ಲೀಡ್ಸ್ನಲ್ಲಿ ಮಾಡುತಿದ್ದ ಕೆಲಸವನ್ನು ಮೊಟಕುಗೊಳಿಸಿ ಹತ್ತಿದೆ, ಯುನೈಟೆಡ್ ಕಿಂಗ್ಡಮ್ನ ರಾಯಭಾರಿಯಂತೆ ಭಾವಿಸಿ. ಯಾಕಂದರೆ ನನಗೆ ತಿಳಿದಿರಲಿಲ್ಲ ಬೆರ್ಯಾರಾದರು ಇಲ್ಲಿಂದ ಹೋಗುವರೇನೋ ಅಂತ. ಆದರೆ ಅಲ್ಲಿಗೆ ಹೋದಮೇಲೆ ಲಂಡನಿನಿಂದ ಬಂದಿದ್ದ ಇನ್ನಿಬ್ಬರನ್ನು ಭೇಟಿಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿಯವರು ಕೆಲವೇ ದಿನಗಳ ಹಿಂದೆ ಬಂದು ನಮ್ಮೆಲ್ಲರಿಗೂ ಆಮಂತ್ರಣ ಕೊಟ್ಟಿದ್ದರು. ನಮ್ಮ ದೇಶವಲ್ಲದೆ ಕನ್ನಡಿಗರಿರುವ ಹತ್ತಾರು ರಾಷ್ಟ್ರಗಳಿಗೂ ಹೋಗಿ ವೈಯಕ್ತಿಕವಾಗಿ ಅಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಾಹಿತ್ಯ ಸಮ್ಮೇಳನ ಬರೇ ಕರ್ನಾಟಕದ ಕನ್ನಡ ಜನರ ತಾಣವಲ್ಲ, ಅವು ಪ್ರಪಂಚದ ಎಲ್ಲೆಡೆ ನೆಲಸಿ ತಮ್ಮ ತಾಯ್ನಾಡನ್ನ ಮರೆಯದ ಜನಸಮುದಾಯದ ಸಂಸ್ಥೆಗಳು ಎಂದು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಾನು ಗುರುವಾರ ೧೯ನೆ ತಾರೀಖಿನಂದೇ ಮಂಡ್ಯಕ್ಕೆ ಹೊರಟೆ. ವಿದೇಶದಿಂದ ಬರುವ ಎಲ್ಲ ಪ್ರತಿನಿಧಿಗಳಿಗೆಂದೇ ವಿಶೇಷ ವ್ಯವಸ್ಥೆ ಬಹಳ ದಿನಗಳಿಂದಲೇ ರೂಪಗೊಂಡಿತ್ತು. ಮೈಸೂರಿನ ಸಂದೇಶ್ ಪ್ರಿನ್ಸ್ನಲ್ಲಿ ನಮಗೆ ಉಳಿದುಕೊಳ್ಳುವ, ಅಲ್ಲಿಂದ ಪ್ರತಿದಿನ ಸಮ್ಮೇಳನ ನಡೆಯುವ ಮಂಡ್ಯಕ್ಕೆ ಹೋಗಿಬರುವ ಸಾರಿಗೆ ಏರ್ಪಾಟು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ನಿವೇದಿತಾ ಹೊನ್ನತ್ತಿಯವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಯೋಜಿಸಿ ಕಾರ್ಯಗತ ಮಾಡಲಾಗಿತ್ತು. ನನ್ನ ಭಾಷೆಯ ಸಮ್ಮೇಳನಕ್ಕೆ ನಾನೇ ಎಲ್ಲ ಖರ್ಚುಗಳನ್ನ ವಹಿಸಿಕೊಂಡು ಸರ್ಕಾರಕ್ಕಾಗಲಿ ಪರಿಷತ್ತಿಗಾಗಲಿ, ಸಮ್ಮೇಳನ ಸಂಚಾಲಕ ಇಲಾಖೆಗಾಗಲಿ ಋಣಿಯಾಗಬಾರದೆಂದಿದ್ದೆ. ಆದರೆ ನಮಗ್ಯಾವ ಕುಂದುಕೊರತೆಯಾಗದೆ, ಶುಲ್ಕವೂಯಿಲ್ಲದೆ ವಸತಿ, ಊಟ, ಜೊತೆಗೆ ಮನರಂಜನೆ, ಸಾಹಿತ್ಯ ರಸದೌತಣ ಉಣಿಸಿದ ಎಲ್ಲರಿಗೂ ನಾವು ಚಿರಋಣಿಯಾಗಿರಬೇಕು.

ಮಂಡ್ಯದಲ್ಲಿ ಅದೊಂದು ದೊಡ್ಡ ‘ಕುಂಭಮೇಳ’ ಅನ್ನಬೇಕು. ವಿಶಾಲ ಜಾಗ, ಲಕ್ಷಾಂತರ ಜನರು ಕೂರುವಂಥ ಸಭಾಂಗಣ, ಅದಕ್ಕೆ ತಕ್ಕಂಥ ಅದ್ದೂರಿ ಪ್ರವೇಶದ್ವಾರ, ದೃಷ್ಟಿಯಗಲಕ್ಕೂ ಮೀರಿದ ವೇದಿಕೆ, ಮಹಾಮಂಟಪ, ಅಲ್ಲಲ್ಲೇ ನೋಡಲನುಕೂಲವಾಗುವಂಥ ಕ್ಲೋಸ್ಡ್-ಸರ್ಕ್ಯೂಟ್ ಟಿವಿ, ಹೊರಗಿದ್ದರೂ ಕೇಳಿಸಿಕೊಳ್ಳುವಂಥ ಧ್ವನಿ ವ್ಯವಸ್ಥೆ, ಇವೆಲ್ಲ ದೊಡ್ಡ ಪ್ರಮಾಣದ ವಿನ್ಯಾಸವೆಂತಲೇ ಭಾವಿಸಬೇಕು.

ಸಮ್ಮೇಳನದ ವಿಶೇಷತೆ ಅದರ ಸಭಾಧ್ಯಕ್ಷರಾದ ನಾಡೋಜ ಗೊ ರು ಚನ್ನಬಸಪ್ಪನವರು. ೯೪ ವರ್ಷಗಳಾಗಿದ್ದರೂ ಅವರ ಮಾತಿನಲ್ಲಿದ್ದ ಸ್ಪಷ್ಟತೆ, ಶಬ್ದಭಂಡಾರ, ನಿರರ್ಗಳತೆ ಎಂತಹವರನ್ನೂ ಮೋಡಿ ಮಾಡುವಂಥದು. ನೇರವಾಗಿ ಸರ್ಕಾರಕ್ಕೆ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಕರೆ ಕೊಟ್ಟರು. ಕನ್ನಡ ಭಾಷೆ ಉಳಿಯಲು ಬೆಳೆಸಲು ಅವರಿಂದ ಯಾವ ತರಹದ ಉತ್ತೇಜನ ದೊರಕಬೇಕು, ಅದರಲ್ಲೂ ಆರ್ಥಿಕ ಹೊಣೆ ವಹಿಸಿಕೊಳ್ಳಬೇಕೆಂದು. ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿಯನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮೇಲಿದ್ದ ರಾಜಕೀಯ ಮುಖಂಡರಿಗೆ ಮನದಟ್ಟು ಮಾಡಿದರು. ಕನ್ನಡ ಪ್ರಾಚೀನ ಭಾಷೆಯಾಗಿದ್ದರೂ ಇಂದಿನ ತಂತ್ರಜ್ಞಾನ ಅಳವಡಿಸಿಕೊಂಡು, ಎಲ್ಲರಿಗೂ, ಅದರಲ್ಲೂ ಪ್ರಚಲಿತ ಯುವಪೀಳಿಗೆಗೆ ತಟ್ಟುವಂಥ ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಕರೆಯಿತ್ತರು. ಇದರ ಜೊತೆಗೆ ಅವರು ಮತ್ತಿತರ ಮಹತ್ತರ ವಿಷಯಗಳನ್ನೂ ಚರ್ಚಿಸಿದರು. ಶಿಕ್ಷಣ ಮಾಧ್ಯಮ, ಅಂತರ-ರಾಜ್ಯ ಭಾಷಾವಿನಿಮಯ, ಕನ್ನಡ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ, ಧರ್ಮದ ದುರುಪಯೋಗ, ಮಹಿಳಾ ಸಮಾನತೆ ಹಾಗು ಸ್ವಾಯತ್ತತೆ, ಕನ್ನಡಿಗರ ಉದ್ಯೋಗ ಬದುಕು, ಪ್ರವಾಸೋದ್ಯಮ, ಮುಂತಾದ ವಿಚಾರಗಳನ್ನು ಎತ್ತಿ ತೋರಿಸಿ ಆ ದಿಕ್ಕಿನಲ್ಲಿ ಏನೆಲ್ಲಾ ಕೆಲಸಕಾರ್ಯಗಳು ನಡೆಯಬೇಕಾಗಿದೆ ಎಂದು ವಿವರಿಸಿದರು.

ಕೆಲವರ ಭಾಷಣಗಳು ತೀರ್ವವಾಗಿದ್ದವು. ಮುಖ್ಯಮಂತ್ರಿ ಚಂದ್ರುರವರು ಸಭಾಧ್ಯಕ್ಷರು ಉಲ್ಲೇಖಿಸಿದ ವಿಷಯಗಳಲ್ಲಿ ಸರ್ಕಾರ ವರ್ಷದಿಂದ ವರ್ಷಕ್ಕೆ ಅನುಸರಿಸುತ್ತಿರುವ ನಿರ್ಲಕ್ಷರೀತ್ಯಕ್ರಮವನ್ನು ಕಟುವಾಗಿ ರಾಜಕೀಯ ಮುಖಂಡರ ಮುಂದೆಯೇ ಟೀಕಿಸಿದರು. ಪ್ರತಿ ಸಮ್ಮೇಳನದಲ್ಲೂ ದೊಡ್ಡ ದೊಡ್ಡ ಭಾಷಣಗಳು ಆಗುತ್ತವೆ, ಮುಂದೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ನಿರ್ಣಯವೂ ಆಗುತ್ತೆ, ಆದರೆ ಸಮ್ಮೇಳನ ತದನಂತರ ಅವೆಲ್ಲ ಒಣಆಶ್ವಾಸನೆಗಳಾಗೆ ಉಳಿಯುತ್ತವೆ ಎಂದು ಆಕ್ಷೇಪಿಸಿದರು.

ಅನೇಕ ಕವಿಗೋಷ್ಠಿಗಳು, ಉಪನ್ಯಾಸಗಳು, ಸಮಾಲೋಚನೆಗಳು ಮೂರು ದಿನಗಳಲ್ಲೂ ಹಬ್ಬಿಕೊಂಡು ಕಿಕ್ಕಿರಿದು ತುಂಬಿದ ಮಂಡ್ಯ ಜನಸಮೂಹಕ್ಕೆ ಒಂದು ರೀತಿಯ ಜ್ಞಾನೋದಯ ಉಂಟುಮಾಡಿತು. ಬೆಳಿಗ್ಗೆಯಿಂದ ಸಂಜೆವರೆಗೂ ಈ ಕಾರ್ಯಕ್ರಮಗಳಾದ ಮೇಲೆ ಮನರಂಜನೆ ಸಾಗುತಿತ್ತು. ಒಂದು ದಿನ ಸಾಧು ಕೋಕಿಲ, ಮತ್ತೊಂದು ಸಂಜೆ ಅರ್ಜುನ ಜನ್ಯ ನೆರೆದಿದ್ದ ಯುವಕ ಯುವತಿಯರನ್ನು ಕುರ್ಚಿ ಮೇಲೆಯೇ ನಿಂತು ಕುಣಿದಾಡುವಂತೆ ಮಾಡಿದರು.

ಪುಸ್ತಕ ಮಳಿಗೆಗಳು ಮತ್ತೊಂದು ವೈಶಿಷ್ಟತೆ. ಕೊಂಡುಕೊಳ್ಳುವರಿಗಂತೂ ಅದೊಂದುಹಬ್ಬವೇ. ಬಹುಷಃ ಇಲ್ಲಿವರೆಗೆ ಪ್ರಕಟವಾಗಿರುವ ಎಲ್ಲ ಕಾದಂಬರಿಗಳು ನಾಟಕಗಳುಕಾವ್ಯಗಳು, ಇತರೆ ಅನೇಕ ಬರವಣಿಗಗಳು ಮಳಿಗೆಗಳಲ್ಲಿ ರಾರಾಜಿಸುತ್ತಿದ್ದವು. ಪ್ರಕಾಶಕರುಅಲ್ಲಿ ತಮ್ಮ ತಮ್ಮ ಪ್ರಕಟಣೆಗಳನ್ನು ಸಾಲು ಸಾಲು ಅಂಗಡಿಗಳಲ್ಲಿ ಬಿತ್ತರಿಸಿ ೫೦%ಗೂ ಮಿಗಿಲಾಗಿ ರಿಯಾಯಿತಿ ಕೊಟ್ಟು ಓದುಗರನ್ನು ಪ್ರೇರೇಪಿಸುತ್ತಿದ್ದರು. ಅಷ್ಟೊಂದು ಪುಸ್ತಕಗಳು ಒಂದೇ ಜಾಗದಲ್ಲಿ ಪ್ರದರ್ಶನವಾದದನ್ನು ಬಹುಷಃ ನಾನು ನೋಡಿರಲಿಲ್ಲ.

ವಿದೇಶಿ ಕನ್ನಡಿಗರ ಸಂಘಟನೆ ಈ ಸಮ್ಮೇಳನದ ಮತ್ತೊಂದು ವೈಶಿಷ್ಟ್ಯಪೂರ್ಣಕಾರ್ಯಕ್ರಮ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳ ಜೊತೆಗೆ ಅನೇಕ ಏಷ್ಯಾರಾಷ್ಟ್ರಗಳ ಕನ್ನಡಿಗರು ನೆರೆದಿದ್ದರು. ಅವರೊಡನಾದ ಸ್ನೇಹ-ಪರಿಚಯ ಪರಸ್ಪರಕ್ರಿಯೆ ಬಹಳ ಕಾಲ ಉಳಿಯುವಂಥದು. ನಾನು ಬಹಳಷ್ಟು ವಿದೇಶಿ ಕನ್ನಡಿಗರನ್ನು ಪರಿಚಯಿಸಿಕೊಂಡು ಅವರ ದೇಶಗಳಲ್ಲಿ ಜರುಗುತ್ತಿರುವ ಕನ್ನಡ ಕಲಿಸುವಂಥ ಶಾಲೆಗಳ ಬಗ್ಗೆ, ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆ. ನಾವು ರಾಜ್ಯ ದೇಶ ಬಿಟ್ಟುಹೋಗಿದ್ದರೂ, ನಮ್ಮ ಕನ್ನಡ ನಮ್ಮೆಲ್ಲರನ್ನೂ ಒಂದುಗೂಡಿಸುತ್ತಿರುವ ಪರಿ ಎಲ್ಲರಿಗೂ ಅಗಾಧ ಸಂತಸ ತಂದಿರುವುದನ್ನ ಎಲ್ಲರಲ್ಲೂ ಕಂಡೆ. ಮುಂದೆ ನಾವೆಲ್ಲ ಸೇರಿ ಯಾವ ರೀತಿಯ ಕೊಡುಗೆ ಕೊಡಲು ಸಾಧ್ಯ ಅನ್ನುವುದನ್ನು ಕೂಲಂಕಶವಾಗಿ ಚರ್ಚಿಸಿ ಕಾರ್ಯಗತ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ ಕನ್ನಡ ಸಾಹಿತ್ಯ ಸಮ್ಮೇಳನ.

ಒಟ್ಟಿನಲ್ಲಿ ಈ ಸಮ್ಮೇಳನ ನನಗೊಂದು ಅಪೂರ್ವ ಅನುಭವ!

- ನವೀನ
*******************************************
ಆಕಾಶದ  ಆಶೆ -ಹೊಸ ವರುಷಕೆ!

(ಮುನ್ನುಡಿ: ಹೊಸವರ್ಷವೆಂದರೆ ನನಗೆ ಅದರಲ್ಲಿ ಕಂಡಿದ್ದು ಬರೇ ಅಂದಿನ ಮೈಮರೆತಂತ ಗಳಿಗೆಗಳಲ್ಲ; ಆದರೆ ಹಿಂದಿನ ದಿನಗಳ ನೋವು, ಮುಂದಿರುವ ಅನಿರ್ದಿಷ್ಟದ ಚಿಂತೆ. ಹಾಗೆಯೇ ಸಮತೋಲನದಲ್ಲಿ ಅವಲೋಕಿಸಿದಾಗ, ನನ್ನ ಮನಸ್ಸಿನಲ್ಲಿ ಆನಂದದಕ್ಕಾಗಿ ಆಕಾಶ ಬಯಸಿದ್ದೇನಿರಬಹುದೆಂಬ ಆ ಅವಲೋಕನದ ಚಿತ್ರಣ ಇಲ್ಲಿರಬಹುದು, ನೋಡಿ ತಿಳಿಸಿ; ಆದಿ-ಅಂತ್ಯಗಳ ನಡುವೆ ತುಂಬಿ ಸಂಬಂಧ ಕಲ್ಪಿಸಿದ್ದು ಅಂತರಂಗದ ಗಂಗೆ ಹರಿದು ಮಂದಹಾಸದಲ್ಲಿ ಮನೆಮಾಡಿದಂತಿತ್ತು, ಎನ್ನುವ ಭಾವವನ್ನು ಹಿಡಿಯಲು ಮಾಡಿದ ನನ್ನ ಕಿರು ಪ್ರಯತ್ನ, ನಿಮಗೆ ಹೇಗನ್ನಿಸಿತೋ ಕೇಳುವ ಕುತೂಹಲ! ಸಹನೆಯಿಂದ ಓದಿ ಪ್ರತಿಕ್ರಿಯಿಸುವಿರೆಂದು ನಂಬಿದ್ದೇನೆ – ಗೋಪಾಲಕೃಷ್ಣ ಹೆಗ್ಡೆ)

*****************************

ನೋವಿನಲ್ಲಿ ಕೂಡಿತ್ತೆ ೨೪ರ ಇತಿಹಾಸ?
ಮತ್ತೆ
ನಾಡೆಲ್ಲ ನೋಡಲಿಕ್ಕಿದೆ ೨೫ರ ಪರದೆ-
೨೬ಕ್ಕೆ ಮೊದಲು ಪರದಾಟ,
ನಂಬಲಾರದ ಸತ್ಯ
ಗೊತ್ತಿದ್ದರೂ
ಮೊದಲ ದಿವಸವೇ ಹೊಸವರುಷವನ್ನೆಲ್ಲ
ಬೊಗಸೆಯಲ್ಲಿ ಬಿಗಿದಿಟ್ಟ- ಒಂದನೇ ( ಒಂದೇ)
ದಿನದ ಇದು ಎಂಥಾ ವಿಪರ್ಯಾಸ-ಆಭಾಸ
ಸುಗ್ಗಿ ಕೋಲಾಟ !

ಯಾಕೋ ಈ ಮೌನದಲಿ
ಮೂಡಿದೆ ಮಂದಹಾಸ
- ಹಾರಿರುವೆ ಗರಿಬಿಚ್ಚಿ ಅರಳಿದ
ನೀ,
ನನ್ನ ನೀಲಿ ಆಕಾಶದ ಆಶೆ
ತೋರಿಸಿದೆ ದಿಗಂತ- ಅವಕಾಶ
ಮತ್ತೆ- ಮತ್ತೆ
ಹೀಗೆ
ಆಶಿಸಿಸಿದೆ ನೀಲಿತುಂಬಿರಲಿ - ಶುಭ್ರ
ಅಂತರಂಗ ಅದು
ನಿತ್ಯಾನಂದ, ಕಾವ್ಯಾನಂದದಂತಿರಲಿ
ಸದಾ ಈ ಬ್ರಹ್ಮಾಂಡ ಗುಂಡಿ
ಬಂಡಿ -
ಉಕ್ಕುತ್ತಿರಲಿ
ಸದಾ ಚೆಂದ ತಂದ ಅದು
ಬ್ರಹ್ಮಾನಂದ ಆಗಲಿ,
ಆದಿ - ಅಂತ್ಯಗಳ
ನಡುವೆ
ತುಂಬಿ ಈ,
ಅಂತರಂಗ - ಗಂಗೆ
ಹರಿಯಲಿ ಹರಿದ್ವಾರ
ವರ್ಷತುಂಬ 🙏💐🎊

- ಗೋಪಾಲಕೃಷ್ಣ ಹೆಗ್ಡೆ
*******************************************
ದೇವ - ದಾನವರಿಲ್ಲ, ಸಮುದ್ರಮಥನವೂ ಇಲ್ಲ;
ಹಾಲಾಹಲವಂತೂ ಮೊದಲೇ ಇಲ್ಲ.
ಲಕ್ಷ್ಮೀ ಚಂದ್ರರು ಇಲ್ಲ,
ಧನ್ವಂತರಿಯ ಸುಳಿವಿಲ್ಲ;
ಅಮೃತ ಕಲಶವದೊಂದೇ ಇರುವುದಲ್ಲ!
ಕೇಳು ಜನಮೇಜಯ, ಒಳ್ಳೆಯದ ಹೊರತರಲು ಉಳಿದೆಲ್ಲ ಬೇಕಿಲ್ಲ,
ಮನವದೊಂದಿದ್ದರೆ ಸಾಕಲ್ಲ!

- ಲಕ್ಷ್ಮೀನಾರಾಯಣ ಗುಡೂರ.
*******************************************

ದಶಮಾನೋತ್ಸವವನ್ನು ಆಚರಿಸಿದ ಯು ಕೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವಿಚಾರ ವೇದಿಕೆ (KSSVV)

ಅದೊಂದು ಮಹತ್ವದ ಮೈಲಿಗಲ್ಲು. ಆ ನವೆಂಬರ್ ೨೪, ೨೦೨೪ರ ವಾರಾಂತ್ಯದಲ್ಲಿ  ಹವಾಮಾನ ಬಿಗಡಾಯಿಸುವ ಚಂಡಮಾರುತ ಬರುವ ಎಚ್ಚರಿಕೆಯಿತ್ತು! ಅದಕ್ಕೆ ಬರ್ಟ ಎನ್ನುವ ಅಂದದ ನಾಮಧೇಯವನ್ನೂ ಕೊಟ್ಟಿದ್ದರು. ಶೆಫಿಲ್ಡ್ ದಿಂದ, ದೂರದ ‘ಟಿ ಸೈಡ್ ‘ದಿಂದ, ಲಂಡನ್ ಮತ್ತು ಲಿಂಕನ್ ನಗರಗಳ ಆಸುಪಾಸಿನಿಂದ ಹೊರಟ ಜಿಗುಟಿನ ಸಾಹಿತ್ಯಾಸಕ್ತರು ಮಳೆ ಬಿರುಗಾಳಿಯನ್ನು ಲೆಕ್ಕಿಸದೆ, ಮೋಟರ್ವೆದಲ್ಲಿ ಉರುಳಿ ಬಿದ್ದು ಎರಡೆರಡು ರಸ್ತೆಗಳನ್ನು ಬಂದು ಮಾಡಿದ್ದರೂ ಧೃತಿಗೆಡದೆ ತಡಮಾಡದೆ ಯುಕೆದ ಮಧ್ಯವರ್ತಿ ನಗರವಾದ ಲೆಸ್ಟರಿಗೆ ಬಂದದ್ದೂ ಒಂದು ಸಾಹಸದ ಕಥೆಯೇ ಆಗಿತ್ತು. ಆಗಲೇ ಅಲ್ಲಿ ನೆರೆದಿದ್ದ ಮತ್ತಿತರ ಕನ್ನಡಿಗರಲ್ಲಿ ಎಲ್ಲಿಲ್ಲದ ಉತ್ಸಾಹ!  ಅವರೆಲ್ಲ ಕೂಡಿ ಹತ್ತು ವರ್ಷ ಸತತವಾಗಿ ವಾರಂಪ್ರತಿ ಕನ್ನಡದಲ್ಲಿ ಒಂದು ಬ್ಲಾಗ್ ಅಂಕಣ ಪ್ರಕಟಿಸುತ್ತ ಬಂದಿದ್ದಾರೆ. ಈಗ ಅಂಕಣಗಳ ಸಂಖ್ಯೆ ೬೦೦ ನ್ನೂ ಮೀರಿದೆ! ಯುಕೆ ಕನ್ನಡ ಬಳಗದ ಯುಗಾದಿಯು ಮತ್ತು ದೀಪಾವಳಿ ಸಮಾರಂಭಗಳಲ್ಲಿ ಸಿಕ್ಕ ಸ್ವಲ್ಪೇ ಸಮಯದಲ್ಲೂ ಗಂಭೀರ ಸಾಹಿತ್ತ್ಯದ ಚರ್ಚೆ, ಕವಿ ಗೋಷ್ಠಿ, ನಾಟಕ ಇತ್ಯಾದಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದವರು. ಆ ದಿನ ಹಿರಿಯ ಕಿರಿಯ ಸದಸ್ಯರು ನಂತರ ಬಂದವರನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

ಆ ದಿನ ಅವರು ರಾಜಶ್ರೀ ಮತ್ತು ವೀರೇಶ್ ಅವರ ಮನೆಯಲ್ಲಿ ಸೇರಿ ಬೆಳಿಗ್ಗೆ ೧೧ರಿಂದ ಸಂಜೆ ನಾಲ್ಕು ಗಂಟೆಯವರೆಗಿನ  ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದರು. ಸ್ವಾಗತ ಮತ್ತು  ಉಭಯ ಕುಶಲೋಪರಿ ಆಗುತ್ತಿದ್ದಂತೆಯೇ ಅಪರೂಪದ ಬಿಸಿ ಬಿಸಿ ಮದ್ದೂರು ವಡೆ, ರುಚಿಯಾದ ಚಟ್ನಿ ಮತ್ತು ಕಾಫಿ ಅವರಿಗಾಗಿ ಕಾಯುತ್ತಿದ್ದವು.  ಹಲವಾರು ಹಿರಿಯರು ಯುಕೆಗೆ ಬಂದು ನಾಲ್ಕು ಅಥವಾ ಐದು ದಶಕಗಳೇ ಸಂದಿದ್ದವು. ಕೆಲವರು ಇನ್ನೂ ಎರಡು ದಶಕ ಕಳೆಯದ ಹಸುಳೆಗಳು. ಎಲ್ಲರೂ ಒಂದಿಲ್ಲೊಂದು ರೀತಿಯ ಬರಹಗಾರರು. ಕೆಲವರು ಐದೈದು ಪುಸ್ತಕಗಳನ್ನು ಪ್ರಕಟಿಸಿದ ಸರಸ್ವತಿ ಪುತ್ರರು. ಒಂದಿಬ್ಬರು ಹತ್ತಾರು ಪುಟಗಳ ಲೇಖಕರು, ಆದರೆ ಒಳ್ಳೆಯ ಓದುವ ಆಸ್ಥೆ ಉಳ್ಳವರು. ಎಲ್ಲರೂ ಕುವೆಂಪು ಹೇಳಿದ ‘ಎಲ್ಲಾದರೂ ಇರು, ಎಂತಾದರೂ ಇರು, ಆದರೆ ಕನ್ನಡವಾಗಿರು’ ಎನ್ನುವದನ್ನು ಇವರನ್ನುದ್ದೇಶಿಸಿಯೇ ಹಾಡಿದರೋ ಏನೋ ಅನ್ನುವಂತೆ ಜೀವಿಸುವವರು. ಹೊಟ್ಟೆ ಪಾಡಿಗೆ ವೈದ್ಯರೇ ಆಗಿರಲಿ, ಐಟಿ ಪಟುವೆ ಆಗಿರಲಿ  ಕನ್ನಡವೇ ಉಸಿರು, ಕನ್ನಡವೇ ಜೀವನ ಅನ್ನುವಂತೆ ಬದುಕುವವರು. ತಮ್ಮನ್ನು ಸಲುಹಿದ ಕನ್ನಡ ನುಡಿಯನ್ನು ಮರೆಯದಂತೆ, ಮುಂದಿನ ಪೀಳಿಗೆಗೂ ಸ್ವಲ್ಪವಾದರೂ ಪರಿಚಯಿಸುತ್ತ ಜೀವಂತವಾಗಿಡುತ್ತ  ತಮ್ಮ ಅಳಿಲು ಸೇವೆಯನ್ನು ಮಾಡುತ್ತಿರುವವರು. ಕೆಲವರು ಅನೇಕ ಸಲ ಭೇಟಿಯಾದವರು ಒಂದಿಬ್ಬರು ಎಲ್ಲರನ್ನೂ ಭೇಟಿ ಮಾಡುವದು ಇದೆ ಮೊದಲ ಸಲ. ಅಂದರೆ ಒಂದು ರೀತಿಯಿಂದ ‘ಅನಿವಾಸಿ ಈ-ಪೇಪರಿನ’ ಪ್ರಸ್ತುತಿಗಳಂತೆ ಕಲಸುಮೇಲೋಗರ!  

ಪ್ರಾರಂಭದಲ್ಲಿ ಎಲ್ಲರನ್ನೂ “ನನ್ನ ಊರಿಗೆ, ನನ್ನ ಸೂರಿಗೆ” ಸ್ವಾಗತಿಸುತ್ತಾ ರಾಜಶ್ರೀ ಪಾಟೀಲ್ ಅವರು ಕುವೆಂಪು ಅವರ ‘ಕನ್ನಡಕ್ಕಾಗಿ ಹೋರಾಡು ಕಂದ’ ಎನ್ನುವ ಜೋಗುಳದ ಹರಕೆಯನ್ನು ನೆನಪಿಸಿ ನಾವಿಲ್ಲಿ ಮಾಡುತ್ತಿರುವುದೂ ಅದನ್ನೇ ಎನ್ನುವುದನ್ನು ಒತ್ತಿ ಹೇಳಿದರು. ಈ ದಶಮಾನೋತ್ಸವ ಶತಮಾನೋತ್ಸವದತ್ತ ಧಾಪು ಕಾಲಿಂದ ನಡೆಯಲಿ ಅಂತ ಶುಭ ಹಾರೈಕೆಗಳನ್ನು ಹೇಳಿ ಮುಂದಿನ ಕಾರ್ಯಕಲಾಪಗಳಿಗೆ ಚಾಲನೆ ಕೊಟ್ಟರು.

ಬೆಳಗಿನ ಸಿಂಹಾವಲೋಕನದಲ್ಲಿ ‘ಅನಿವಾಸಿ ನಡೆದು ಬಂದ ದಾರಿ’ಯನ್ನು ಮೂವರು ಪರಿಚಯಿಸಿದರು. ಜಿ ಎಸ ಪ್ರಸಾದ್ ಅವರು ಯುಕೆ ಕನ್ನಡ ಬಳಗದೊಡನೆಯ ಸಂಬಂಧವನ್ನು ತಿಳಿಹೇಳಿ ಮುಂದಿನ ಚರ್ಚೆಗೂ ಪೀಠಿಕೆ ಕೊಟ್ಟದ್ದು ವಿಶೇಷ. (* ಹಿಂದಿನ ಮೈಲಿಗಲ್ಲಿನ ಲೇಖನಗಳಿಗೆ ಇದರ ಕೊನೆಯಲ್ಲಿ ಕೊಟ್ಟ ಕೊಂಡಿ ನೋಡಿರಿ )

ನಂತರ ಫೋಟೋ: ನೆನಪಿಗಾದರೂ ಇರಲೇಬೇಕಲ್ಲವೇ, ಅನಿವಾರ್ಯ ಆದರೂ ಆವಶ್ಯಕವೆನ್ನುವ ‘ದಶಕದ ಕೇಕ್” ತರಲಾಯಿತು. ಇದರ ವಿಶೇಷತೆಯೆಂದರೆ ಅದನ್ನು ‘ಬೇಕ್’ ಮಾಡಿದವಳು ಆತಿಥೇಯ ದಂಪತಿ ರಾಜಶ್ರೀ ಮತ್ತು ವೀರೇಶರ ಹದಿನಾಲ್ಕು ವರ್ಷದ ಮಗಳು ಖುಷಿ. ಅದರ ಮೇಲೆ ಬರೆದ  ಸುಂದರ ಕನ್ನಡ ಅಕ್ಷರಗಳು ಇಲ್ಲಿಯ ಕೇಕುಗಳಲ್ಲಿ ಅಪರೂಪ. ಇದು ‘ಹೇಳಿ ಮಾಡಿಸಿದ’ commissioned cake! ದೀಪ ಬೆಳಗಿ ಉದ್ಘಾಟನೆ ಮಾಡಿ ಕೇಕ್ ಹಂಚಿದ್ದಾಯಿತು. ಕೇಕ್ ರುಚಿಯಾಗಿದೆ ಅಂದರು ಎಲ್ಲರೂ!
ಉಪನ್ಯಾಸಗಳು

ನಂತರದ ಮುಖ್ಯ ಉಪನ್ಯಾಸವನ್ನು ಕೊಟ್ಟವರು ಯೋಗಿಂದ್ರ ಮರವಂತೆ. ಅವರು ಒಬ್ಬ ಗಣನೀಯ ಪ್ರಬಂಧಕಾರರು. ಪ್ರಬಂಧದ ಇತಿಹಾಸವನ್ನು ಫ್ರಾನ್ಸ್ ದೇಶದ ತತ್ವಜ್ಞಾನಿ ಮೈಕೆಲ್ ಮೊಂಟೇನ್ ನಿಂದ ಶುರುಮಾಡಿ ಇಂಗ್ಲೆಂಡಿನ ಜಾರ್ಜ್ ಆರ್ವೆಲ್ ನಂತರ ಕನ್ನಡದ ಪ್ರಬಂಧಬ್ರಹ್ಮ ಎ  ಎನ್ ಮೂರ್ತಿರಾಯರ ಬರವಣಿಗೆಯ ಪರಿಚಯ ಮಾಡಿಕೊಟ್ಟು ನಾನು ಏಕೆ ಮತ್ತು ಹೇಗೆ  ಬರೆಯುತ್ತೇನೆ ಅಂತ ವರ್ಣಿಸಿದರು. ಸುಪ್ರಸಿದ್ಧ ಲೇಖಕ ಎಸ್  ದಿವಾಕರ್ ಅವರ ಪ್ರಬಂಧ ಬರಹಗಳನ್ನೂ ಉಲ್ಲೇಖಿಸಿದರು.

 ನೆರೆದವರಲ್ಲಿ ಐದೈದು ಪುಸ್ತಕಗಳನ್ನು ಪ್ರಕಟಿಸಿದ ಮೂವರು ಲೇಖಕರು ತಂತಮ್ಮ ಕೃತಿಗಳನ್ನು ತಂದು ಪ್ರದರ್ಶಿಸಿದ್ದಲ್ಲದೆ, ಈಗ ವಿದೇಶದಲ್ಲಿ ವಾಸಿಸುತ್ತಿರುವ ಇಬ್ಬವು ಮಹಿಳಾ ಲೇಖಕರು ಈ ವೇದಿಕೆಯ ಭಾಗವಾಗಿರುವದರಿಂದ ಅವರ ಮೂರರಲ್ಲಿ ಎರಡು ಕೃತಿಗಳೂ ಲಭ್ಯವಿದ್ದವು ಮಧ್ಯಂತರದಲ್ಲಿ.

 ಮಧ್ಯಾಹ್ನದ ಭೋಜನ ನಂತರ ಕವಿತೆಗಳ ಬಗೆಗಿನ ಭಾಷಣ ಮತ್ತು ಸ್ಥಳೀಯ ಬರಹಗಾರರ ಎರಡು ಹೊಸ ಕವನ ಸಂಕಲನಗಳ ವಿಮರ್ಶೆ ಕೇಶವ ಅವರು ನಡೆಸಿ ಕೊಟ್ಟರು. ಸ್ವತಃ ಹೊಸತಲೆಮಾರಿನ ಕವಿಯಾಗಿ ವಿವಿಧ ಪ್ರಕಾರದ ಕವಿತೆಗಳ ಛಂದಸ್ಸು ಮತ್ತು ಅಲಂಕಾರಗಳನ್ನು ಚರ್ಚಿಸಿದರು.

ಕವಿಗೋಷ್ಠಿ
ಅದರ ನಂತರ ಚಿಕ್ಕ ಕವಿಗೋಷ್ಠಿಯಲ್ಲಿ. ನೆರೆದ ‘ಅನಿವಾಸಿ’ಯ ೮  ಕವಿಗಳು ತಮ್ಮ (ತಾವು ಬರೆದ) ವಿವಿಧ ಅಭಿರುಚಿಯ ಕವಿತೆಗಳನ್ನೋದಿದರು. ಕೆಲವು ಚುಟುಕಪಟಾಕಿಗಳಾಗಿದ್ದರೆ ಇನ್ನು ಕೆಲವು ‘ಮನ್ ಕಿ ಬಾತ್’ ಹೇಳುವ ಅನಿವಾಸಿ ದೇವಿಗರ್ಪಿಸಿದ ಹೃದಯಾಳದ ಸ್ಪಂದನಗಳ ಪದ್ಯಮಾಲೆಗಳು! ನೆರೆದವರಲ್ಲಿ ಯಾರೂ ಅರಸಿಕರಾಗಿರಲಿಲ್ಲವಾದ್ದರಿಂದ ಈ ಕವಿತ್ವ ನಿವೇದನಕ್ಕೆ  ಯಾರೂ ‘ಮಾ ಲಿಖ x3 ಸಲ’ ಅನ್ನಲಿಲ್ಲ! (ಅರಸಿಕೇಷು ಕಾವ್ಯ ನಿವೇದನಂ ಶಿರಸಿ ಮಾ ಲಿಖ, ಮಾ ಲಿಖ, ಮಾ ಲಿಖ ಎನ್ನುವ ಸಂಸ್ಕೃತ ಬೇಡಿಕೆ!)   
ಕೊನೆಗೆ ಈ ವೇದಿಕೆಯ ಭವಿಷ್ಯತ್ತಿನ ಬಗ್ಗೆ ಮುಕ್ತ ಚರ್ಚೆಯಾಗಿ ಉಪಯುಕ್ತ ನಿರ್ಣಯಗಳ ಅನುಮೋದನೆಯೊಂದಿಗೆ ದಶಮಾನೋತ್ಸಮದ ಸಂಭ್ರಮ ಅಪ್ರತಿಮ ಆತಿಥೇಯ ರಾಜಶ್ರೀ ಮತ್ತು ವೀರೇಶ, ಮತ್ತಿತರಿಗೆ ವಂದನಾರ್ಪಣೆಯೊಂದಿಗೆ ಮುಕ್ತಾಯವಾಗಿ ಎಲ್ಲರೂ ಗೂಡಿಗೆ ಮರಳಿದರು! ಈಗ ಪ್ರಕೃತಿಯ ಅಬ್ಬರ ಕಡಿಮೆಯಾಗಿತ್ತು. ಮನಸ್ಸಿನಲ್ಲೊಂದು ಉಲ್ಲಾಸವಿತ್ತು.

ಲೇಖನ: ಶ್ರೀವತ್ಸ ದೇಸಾಯಿ      ಛಾಯಾಚಿತ್ರ ಕೃಪೆ : ಅನೇಕ ಸದಸ್ಯರಿಂದ;      ರೇಖಾಚಿತ್ರ: ಲಕ್ಷ್ಮಿನಾರಾಯಣ ಗುಡೂರ

ಕವಿಗೋಷ್ಠಿಯಲ್ಲಿ ಓದಿದ ಕವನಗಳು 

1 ರಾಧಿಕಾ ಜೋಶಿ
ಅಕ್ಷರಗಳನ್ನು ವಾರಾಂತ್ಯವಾರ ಪೋಣಿಸಿ
ಎಂದೆಂದೂ ಬಾಡದ ಒಂದು ಸುಂದರ
ಮುತ್ತಿನ ಮಾಲೆಯನ್ನಾಗಿಸಿ
ಗದ್ಯ ಪದ್ಯ ಕಾಲ್ಪನಿಕ ನೈಜ
ಎಲ್ಲವಾಯಿತು ಇಲ್ಲಿ ನಿಜ
ಪರೀಕ್ಷೆ ನಿರೀಕ್ಷೆಗಳ ಲೆಕ್ಕಿಸದ ಹುಲಿ
ಅವಕಾಶಗಳ ಪ್ರೋತ್ಸಾಹದ ಜಗುಲಿ
ಹೇಳಹೊರಟ ಹೊಸ ಹಳೆಯ ಸಂಗತಿ
ಸದಾ ಮೀಟುತ್ತಿರುವ ಅನಿವಾಸಿ ಎಂಬ ೪ ತಂತಿ

ಬರೆಯುವ ಕೌತುಕತೆ ಓದುವ ಆತುರತೆ
ಹೊರತರಲು ಪ್ರತಿಯೊಬ್ಬರಲ್ಲಿವು ಉತ್ತಮತೆ

ಹತ್ತು ಅಧ್ಯಾಯಗಳನ್ನು ಪ್ರತಿಬಿಂಬಿಸುವ
ಈ ದಿನ ಮುಂಬರುವ ಹತ್ತು
ಅಧ್ಯಾಯಗಳಿಗೆ ನಾಂದಿಯಾಗಲಿ
-Radhika Joshi

2 ಲಕ್ಷ್ಮೀನಾರಾಯಣ ಗುಡೂರ್
(1)
ಭಾವಗಳ ಹೂರಣವ ಪದಗಳಲಿ ಸುತ್ತಿಟ್ಟು
ಹದನಾದ ಛಂದಗಳ ಬಿಸಿಹಂಚಲಿಟ್ಟು
ಬೇಯಿಸುತ ಹೋಳಿಗೆಯ, ಹಾಕಿ ರಾಗದ ತುಪ್ಪ
ಸಂಗೀತದೊಡೆ ಬಡಿಸೆ ಅದುವೇ ಬಲು ಒಪ್ಪ!

(2)
ಹಾಡು ನವ ರಾಗವನು ಕೇಳುವೆನು ನಿಂದು
ಬರೆಯೆ ಕವನವನೊಂದ ಓದುವೆನು ಬಂದು
ಹೇಳು ಹೊಸ ಕಥೆಯನ್ನು ಆಲಿಸುವೆನಿಂದು
ಸಾಹಿತ್ಯಸಿಹಿಯೆರೆಯೆ ಚಪ್ಪರಿಸುವೆನು ತಿಂದು
- Lakshminarayana Gudur

* * * *
3. C ನವೀನ್
ಹಿಂದಿನ ಸಾಲಿನ ಹುಡುಗರು...

ಹಿಂದಿನ ಸಾಲಿನ ಹುಡುಗರಲ್ಲಿ ನಾನೂ ಒಬ್ಬನಾಗಿದ್ದೆ;
ಮರೆಯಾಗಿ ಕುಂತು ಚೆಸ್ ಆಡಿದ್ದೆ!
ಪುಸ್ತಕದ ಹಾಳೆಗಳೆಲ್ಲ ವಿಮಾನಕ್ಕೆ ಮೀಸಲು;
ಅದೆಷ್ಟು ಮೋಜು ಎಸೆದು ಅವಿತುಕೊಳಲು!

ಥಿಯಟರ್ ನಂಥ ಕ್ಲಾಸ್ ರೂಮು;
ಭಯವಿರಲಿಲ್ಲ ನಮಗೆ ಪ್ರೊಫೆಸರ್ ಹಾಕುವ ಲಗಾಮು!
ಕಾಣುತಿರಲಿಲ್ಲ ಅವರಿಗೆ ನಾವು ಮಾಡುವ ಚೇಷ್ಟೆ;
ಅವರ ದೃಷ್ಟಿಗೆ ಮುಂದಿನ ಸಾಲಿನ ಹುಡುಗಿಯರಷ್ಟೆ!!
-C Navin

4. ಶ್ರೀವತ್ಸ ದೇಸಾಯಿ
ವ್ಯತ್ಯಾಸ

ಒಂದು ದಿನ ಕೇಳಿದಳು ನೀಲು
ನಿನ್ನ ಉತ್ತರ ಕರ್ನಾಟಕದ ಭಾಷೆ ಬಲು ಕಷ್ಟ
ಈ ಮುಸಿರಿ ಎಂಜಲು
ವ್ಯತ್ಯಾಸ ಏನು ಹೇಳು?
ಆತ ಹೇಳಿದ --
ಜಳಕ ಮಾಡು ಮೊದಲು
ತೊಳೆದು ಹೋಗುತ್ತೆ ಎಲ್ಲ
ಮೊದಲು ಇಟ್ಟು ಬಿಡು ಒಂದು ಮುತ್ತು
ಅದು ಮುಸಿರೆಯೂ ಅಲ್ಲ
ಎಂಜಲು ಅಂತೂ ಮೊದಲೇ ಅಲ್ಲ!
-Shrivatsa Desai

5) ರಾಜಶ್ರೀ ಪಾಟೀಲ್
ಮುಗಿದರೆನಂತೆ ದಶಕೋತ್ಸವ …

ಮುಂಜಾನೆ ರವಿಗಿರೋ ತಾಳ್ಮೆ
ಸಂಜೆ ರವಿಗುಂಟೆ ?
ಇರು ಎಂದರೂ ಇಳಿದೋಡುವ
ಮರೆಯಾಗದಿರೆಂದರೂ ಮತ್ತೆ ಮುಗಿಲೇರಬೇಕೆಂದು
ಮುಚ್ಚಿಟ್ಟುಕೊಳ್ಳುವ
ಮುಗಿಯದಿರೆಂದರೂ ಮುಗಿದೋಹಿತು, ಅರಿವಾಗೋ ಮುನ್ನ ಅನಿವಾಸಿ ಸಂಭ್ರಮ
ಮುಗಿದರೇನಂತೆ ದಶಕೋತ್ಸವ ಬರಲೇಬೇಕಲ್ಲವೇ ರಜತೋತ್ಸವ,
ಅದಕಾಗಿ ಕಾಯದೆ ನಡು ನಡುವೆ ಮಾಡುತ್ತಿರೋಣ ಸಿಕ್ಕಾಗಲೆಲ್ಲ ಸಭಾಮಹೋತ್ಸವ
- Rajashree Patil

6) ವೀರೇಶ್ ಪಾಟೀಲ್
ನಿನ್ನ ಕಣ್ಣಂಚಿನಿಂದ ಬಂದ ಮಿಂಚಿನ ಬಾಣ

ನಿನ್ನ ಕಣ್ಣಂಚಿನಿಂದ ಬಂದ ಮಿಂಚಿನ ಬಾಣ
ಬರಿ ನನ್ನ ಕಣ್ಣಂಚನೇನು ಹೃದಯದ ಇಂಚು ಇಂಚನ್ನು ಹೊಕ್ಕಿತು.
ಹೃದಯಕ್ಕೇ ನಾಟಿದಮೇಲೆ ಮನಸ್ಸಿನದಿನ್ನೇನು
ಅದುವೋ ಏನೂ ಹೇಳದೆ, ಏನೂ ಕೇಳದೆ
ನಿನ್ನ ಒಪ್ಪಿತು.
-Veeresh Patil

8. ಕೇಶವ ಕುಲಕರ್ಣಿಯವರು ತಾವು ಭಾವಾನುವಾದ ಮಾಡಿ, ಹಿಂದೆ ಪ್ರಕಟಿಸಿದ ಕವನ 'ನೋಡೂಣಂತ' ವನ್ನು ಓದಿದರು.
https://anivaasi.com/2024/05/17/2poems1article/
* KSSVV-Anivaasi ನಡೆದು ಬಂದ ದಾರಿ (ಎರಡು ಭಾಗಗಳು) ಓದಲು ಕೆಳಗಿನ ಎರಡು ಲಿಂಕ್ (Copy & Paste)
https://anivaasi.com/2019/10/25/
https://anivaasi.com/2019/11/01/