ಯು.ಕೆ ಕನ್ನಡ ಬಳಗದಲ್ಲಿ ‘ಕನ್ನಡ ಪ್ರಜ್ಞೆ’ – ಶಿವಪ್ರಸಾದ್ ಬರೆದ ಲೇಖನ

(ಕನ್ನಡ ಬಳಗ, ಯು.ಕೆ, ಯ ಹಾಲಿ ಕಾರ್ಯದರ್ಶಿಗಳಾದ ಡಾ. ಜಿ ಎಸ್ ಶಿವಪ್ರಸಾದ್ ಅವರು ಇಂಗ್ಲಂಡ್ ಕನ್ನಡಿಗರಿಗೆ ಚಿರಪರಿಚಿತ ಹೆಸರು. ಕನ್ನಡದ ಕೆಲಸಕ್ಕಾಗಿ ಕನ್ನಡ ಬಳಗದಲ್ಲಿ ಇವರು ಮಾಡಿರುವ ಕೆಲಸ ಅಪಾರ. ಕರ್ನಾಟಕದ ಹೆಸರಾಂತ ಸಾಹಿತಿಗಳನ್ನು, ಸಂಗೀತಗಾರರನ್ನು ಒಲಿಸಿ, ಕರೆಸಿ, ಆತಿಥ್ಯ ನೀಡಿ, ಕನ್ನಡ ಬಳಗದ ಕಾರ್ಯಕ್ರಮಗಳಿಗೆ ರಂಗು ತರುವುದರಲ್ಲಿ ಇವರದು ಪ್ರಮುಖ ಪಾತ್ರ, ಆದರೂ ಎಲೆಯ ಮರೆಯ ಕಾಯಿಯಂತೆ ಇರುತ್ತಾರೆ. ಈ ಸಲದ ಕನ್ನಡ ಬಳಗದ ವಿಚಾರ ಸಂಕಿರಣಕ್ಕೆ ಬರೆದ ಭಾಷಣ-ಲೇಖನ ಇಲ್ಲಿದೆ – ಸಂ)

ಯು. ಕೆ ಕನ್ನಡ ಬಳಗ ಮೊದಲುಗೊಂಡು ಸುಮಾರು ೩೪ ವರ್ಷಗಳಾಗಿವೆ. ಇಲ್ಲಿಯ ಕನ್ನಡಿಗರು ತಮ್ಮ ಭಾಷೆಯ ಮೇಲೆ ತಮಗಿರುವ ಅಭಿಮಾನದಿಂದ ಈ ಸಂಘವನ್ನು ಬೆಳಸಿಕೊಂಡು ಬಂದಿದ್ದಾರೆ. ನಮ್ಮ ಈ ಸಂಘದ ಧ್ಯೇಯ ಮತ್ತು ಗುರಿ ಎಂದರೆ; ಭಾಷೆ , ಸಂಸ್ಕೃತಿ ಹಾಗು ಪರಂಪರೆಯನ್ನು ಉಳಿಸುವುದು ಮತ್ತೆ ಬೆಳಸುವುದು. ಕನ್ನಡದ ಆಸಕ್ತಿಯನ್ನು ಸ್ಥಳೀಯ ಸಮುದಾಯದಲ್ಲಿ ಜೀವಂತವಾಗಿಡಲು ನೆರವಾಗುವುದು. ಈ ಹಿನ್ನಲೆಯಲ್ಲಿ ನಮ್ಮ ಸಾಧನೆಯನ್ನು ಒರೆ ಹಚ್ಚಿ ನೋಡಿದಾಗ ನಮ್ಮ ಸಾಧನೆಗಳ ಬಗ್ಗೆ ಸಾಕಷ್ಟು ಹೆಮ್ಮೆ ಪಡಬಹುದು. ಮೊದಲು ಕನ್ನಡ ಪ್ರಜ್ಞೆ ಎಂದರೇನು ಎಂಬುದನ್ನು ವಿಶ್ಲೇಷಿಸುವುದು ಉಚಿತ. ನಮ್ಮ ಮಾತೃ ಭಾಷೆ ಕನ್ನಡದ ಬಗ್ಗೆ ಸಂಸ್ಕೃತಿಯ ಬಗ್ಗೆ ನಮಗಿರುವ ಅರಿವು ಕನ್ನಡ ಪ್ರಜ್ಞೆ ಎಂದು ಸರಳವಾಗಿ ವ್ಯಖ್ಯಾನಿಸಬಹುದು. ಈ ಒಂದು ಅರಿವು ವಿಶ್ವಾಸ ಬದ್ಧತೆಗಳು ‘ಎಲ್ಲಾದರೂ ಇರು ಎಂತಾದರು ಇರು’ ಎಂಬ ಕವಿ ವಾಣಿಯಂತೆ ಪ್ರಪಂಚದ ಯಾವ ಮೂಲೆಯಲ್ಲಿ ನೆಲಸಿದರು ಅದು ಅನ್ವಯವಾಗುವಂತಹುದು. ಹೊರದೇಶದಲ್ಲಿ ನೆಲಸಿದ್ದು ನಮ್ಮ ಸುತ್ತ ಆಂಗ್ಲ ಭಾಷೆ ಸಂಸ್ಕೃತಿ ಹರಡಿ ಕೊಂಡಿದ್ದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮಗೆ ಮತ್ತೆ ನಮ್ಮ ಮುಂದಿನ ಪೀಳಿಗೆಗೆ ಪ್ರಸ್ತುತವಾಗಿರಬೇಕು ಎಂಬುದು ಮುಖ್ಯವಾದ ವಿಚಾರ.

ನಮ್ಮ ಪೀಳಿಗೆಯ ಮಟ್ಟಿಗೆ ಹೇಳುವುದಾದರೆ ನಾವು ಯು.ಕೆ ಕನ್ನಡ ಬಳಗದಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿ ಕನ್ನಡ ಪ್ರಜ್ಞೆಯನ್ನು ಜಾಗೃತಿ ಗೊಳಿಸಿದ್ದೇವೆ. ಮುಂದಿನ ಪೀಳಿಗೆಯ ವಿಚಾರ ಬಂದಾಗ ನಾವು ಇನ್ನು ಹೆಚ್ಚಿನ ಸಾಧನೆಗಳ ಮೂಲಕ ಅವರಿಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪ್ರಸ್ತುತವಾಗುವಂತೆ ಮಾಡಬೇಕಾಗಿದೆ.

ಹಾಗೆ ನೋಡಿದರೆ ಹಿಂದೆ ನಮ್ಮ ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಇಂಗ್ಲಿಷ್ ಬಳಕೆ ಸಾಮಾನ್ಯವಾಗಿತ್ತು. ನಮ್ಮ ಯುವ ಪೀಳಿಗೆಗೆ ಕನ್ನಡ ಅರ್ಥವಾಗುವುದಿಲ್ಲ ಎಂಬ ನೆಪದಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಮರ್ಥಿಸಿ ಕೊಂಡಿದ್ದೆವು. ಕನ್ನಡ ಬಳಗದ ಕಾರ್ಯಕ್ರಮಕ್ಕೆ ಸ್ಥಳೀಯ ಮೇಯರ್ ಗಳನ್ನೂ ಕರೆದು ಇಂಗ್ಲಿಷಿನಲ್ಲಿ ಭಾಷಣಗಳನ್ನು ಕಾರ್ಯಾಲಾಪ ಗಳನ್ನು ನಡೆಸಿದ್ದೇವೆ. ಆದರೆ ಕಳೆದ ಹಲವು ವರ್ಷಗಳಿಂದ ಸತತವಾಗಿ ಕರ್ನಾಟಕದಿಂದ ಸಾಹಿತಿ, ಕವಿ ಹಾಗು ಕಲಾವಿದರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದೇವೆ ಹಾಗೆ ಸನ್ಮಾನಿಸಿದ್ದೇವೆ.

ನಮ್ಮ ಹಿಂದಿನ ಕಾರ್ಯಕಾರಿ ಸಮಿತಿ ಹಾಗು ಆಡಳಿತ ವರ್ಗದವರು ವಿಶ್ವ ಕನ್ನಡ ಸಮ್ಮೇಳನಗಳನ್ನು ಹಾಗು ಮಹೋತ್ಸವಗಳನ್ನು ಆಚರಿಸಿ ನಮಗೆ ಒಳ್ಳೆ ಬುನಾದಿಯನ್ನು ಹಾಕಿ ಕೊಟ್ಟಿದ್ದಾರೆ. ನಾವು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದೇವೆ. ಕನ್ನಡ ಬಳಗ ದ ೩೦ ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾವು ಕೆಲವು ಸಾಹಿತ್ಯಾಸಕ್ತರು ಸೇರಿಕೊಂಡು ಒಂದು ಸ್ಮರಣ ಸಂಚಿಕೆಯನ್ನು ಹೊರತಂದೆವು. ಅದೇ ಗುಂಪಿನ ಸದಸ್ಯರು ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ಎಂಬ ಒಂದು ಹೆಸರಿನಲ್ಲಿ , ಕನ್ನಡ ಬಳಗದ ಆಶ್ರಯದಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿದೆವು. ಕೊನೆಗೆ ‘ಅನಿವಾಸಿ’ ಎಂಬ ಕನ್ನಡದ ಜಾಲಾಜುಗುಲಿಯನ್ನು ಸ್ಥಾಪಿಸಿ ಕನ್ನಡ ಬರವಣಿಗೆಗಳನ್ನು ಪ್ರಕಟಿಸಿ ಹಾಗೆ ‘ಅನಿವಾಸಿ ಅಂಗಳದಿಂದ’ ಎಂಬ ಚೊಚ್ಚಲ ಪುಸ್ತಕವನ್ನು ಹೊರತಂದೆವು. ಇದು ನಮ್ಮ ಹೆಗ್ಗಳಿಕೆ.

ದೀಪಾವಳಿ ೨೦೧೪ ಸಮಾರಂಭದಲ್ಲಿ ‘ಅನಿವಾಸಿ’ಯ ಉದ್ಘಾಟನೆಯನ್ನು ಖ್ಯಾತ ಕವಿ ಡಾ. ಎಚ್ಚಸ್ವೀ ಮಾಡಿ ಯು.ಕೆ ಕನ್ನಡ ಬಳಗದಲ್ಲಿ ಕನ್ನಡ ಪ್ರಜ್ಞೆ ಜಾಗೃತವಾಗಿರುವ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಅಂದು ನಾವುಗಳು ಕಂಪ್ಯೂಟರ್, ಮೊಬೈಲ್ ಫೋನ್ ಹಾಗು ಇತರ ಮಾಧ್ಯಮಗಳಲ್ಲಿ ಕನ್ನಡ ಬರೆಯುವದರ ಬಗ್ಗೆ ಒಂದು ಕಮ್ಮಟವನ್ನು ಏರ್ಪಡಿಸಿದ್ದೆವು. ಕನ್ನಡ ಭಾಷೆಯ ಉಳಿವಿನ ಬಗ್ಗೆ ಭಾಷಣಗಳಾಗಿ ನೆರದಿದ್ದ ಸದಸ್ಯರು ಕನ್ನಡ ಬಳಗಕ್ಕೆ ಕನ್ನಡವನ್ನು ಮತ್ತೆ ತಂದಿರುವ ಸಾಧನೆಯನ್ನು ಮೆಚ್ಚಿಕೊಂಡರು.

ಕನ್ನಡ ಪ್ರಜ್ಞೆ ಎಂದರೆ ಬರಿ ಭಾಷೆ ಹಾಗೂ ಸಾಹಿತ್ಯಕ್ಕೆ ಸೀಮಿತವಾಗದೆ ಅದು ಸಂಸ್ಕೃತಿ ಹಾಗೂ ಕಲೆಗಳನ್ನು ಕೊಡ ಒಳಗೊಂಡಿರುತ್ತದೆ. ಹಿಂದೊಮ್ಮೆ ಕನ್ನಡ ಬಳಗದ ಕಾರ್ಯ ಕ್ರಮಗಳಲ್ಲಿ ಹಿಂದಿ ಬಾಲಿವುಡ್ ಹಾಡುಗಳಿಗೆ ಕೊನೆಯಿಲ್ಲದೆ ತರುಣಿಯರು ತಲೆ ಚಿಟ್ಟು ಹಿಡಿಸುವಷ್ಟು ಕುಣಿದಿದ್ದುಂಟು. ಇತ್ತೀಚಿನ ದಿನಗಳಲ್ಲಿ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಮಾತ್ರ ಆದ್ಯತೆ ಕೊಡಲಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಹಾಗೆ ಕರ್ನಾಟಕ ದರ್ಶನ , ಮೈಸೂರು ದಸರಾ , ಕನ್ನಡ ಕವಿಗೋಷ್ಠಿ , ವಿಚಾರ ಗೋಷ್ಠಿ , ಭರತನಾಟ್ಯ ಮುಂತಾದ ಕಾರ್ಯಕ್ರಮಗಳು ಭಾಷೆ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಾ ಕ್ರಿಯಾತ್ಮಕವಾಗಿ ಒಳ್ಳೆ ಗುಣ ಮಟ್ಟ ತಲುಪಿದೆ ಎನ್ನಬಹುದು.

ಕನ್ನಡ ಬಳಗದಲ್ಲಿ ಒಂದು ಪುಸ್ತಕ ಭಂಡಾರವಿರಿವುದು ಹೆಚ್ಚಿನ ಸದಸ್ಯರಿಗೆ ಗೊತ್ತಿಲ್ಲದಿರಬಹುದು. ಈ ಪುಸ್ತಕ ಭಂಡಾರವನ್ನು ನಿಭಾಯಿಸುವ ಅವಶ್ಯಕತೆ ಇದೆ. ಹಲವಾರು ಸದಸ್ಯರು ಪುಸ್ತಕಗಳನ್ನು ನೀಡಿದ್ದಾರೆ ಆದರೂ ಅದಕ್ಕೆ ಒಂದು ಸುಭದ್ರ ವಾದ ನೆಲೆಯಿಲ್ಲ ಹಾಗೆ ವಿತರಣೆಗೆ ಅನೂಕೂಲಗಳಿಲ್ಲ. ಹಲವು ವರ್ಷಗಳ ಹಿಂದೆ ಕರ್ನಾಟಕ ಸರಕಾರ ಹೊರ ದೇಶಗಳಲ್ಲಿ ಕನ್ನಡ ಕಲಿಸಲು ‘ಕನ್ನಡ ಕಲಿ’ ಎಂಬ ಒಂದು ಕಾರ್ಯಕ್ರಮಕ್ಕೆ ಧನ ಸಹಾಯವನ್ನು ನೀಡಿದ್ದು ಸ್ವಲ್ಪ ಸಮಯದ ವರೆಗೆ ನಡೆಸಿಕೊಂಡು ಬಂದಿದ್ದರೂ ಅದು ಅಷ್ಟರ ಮಟ್ಟಿಗೆ ಯಶಸ್ವಿಯನ್ನು ಕಂಡಂತಿಲ್ಲ. ಈ ಕಾರ್ಯಕ್ರಮದ ಪುನರುತ್ಥಾನದ ಬಗ್ಗೆ ಚಿಂತಿಸಬೇಕಾಗಿದೆ.

ಹಿಂದೊಮ್ಮೆ ಕನ್ನಡ ಚಲನ ಚಿತ್ರಗಳು ಹಲವಾರು ವರ್ಷಕೊಮ್ಮೆ ಪ್ರದರ್ಶಿತವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯಾರ್ಕ್ ಶೈರ್ ಶಾಖೆ ಕೆಲವು ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿ ಕೊಟ್ಟಿದೆ. ಡಿಸ್ಟ್ರಿಬ್ಯುಟರ್ ಹತೋಟಿಯಲ್ಲಿರುವ ಕನ್ನಡ ಚಿತ್ರಗಳನ್ನು ನಿಯಂತ್ರಿಸುವುದು ಕನ್ನಡ ಬಳಗಕ್ಕೆ ಸ್ವಲ್ಪ ಕಷ್ಟದ ಕೆಲಸವೇ ಸರಿ, ಆದರೂ ಪ್ರಯತ್ನ ಮಾಡ ಬಹುದು.

ಈ ಹಿಂದೆ ಯು.ಕೆ ಯಲ್ಲಿ ಒಂದು ಅಧಿಕೃತವಾದ ಕನ್ನಡ ಬಳಗವಿದ್ದು ಈಗ ಹಲವಾರು ಅನಧಿಕೃತ ಕನ್ನಡ ಸಂಘಗಳು ಹುಟ್ಟಿಕೊಂಡಿವೆ. ಈ ಸಂಘಗಳಲ್ಲಿ ಮನೋರಂಜನೆ ಪ್ರಧಾನವಾದ ಕಾರ್ಯಕ್ರಮಗಳನ್ನು ಕಾಣಬಹುದು. ಇಲ್ಲಿ ಕನ್ನಡ ಪರ ಶೈಕ್ಷಣಿಕ ಕಾರ್ಯಕ್ರಮಗಳು ಕಾಣದಾಗಿವೆ. ಉತ್ತಮ ಮಟ್ಟದ ಕಾರ್ಯಕ್ರಮಗಳನ್ನು ಮಾಡಲು ಹೆಚ್ಚಿನ ಸಂಖ್ಯಯ ಕನ್ನಡಿಗರು ಒಂದಾಗಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ.

ಅನಿವಾಸಿಗಳಾದ ನಾವು ಆಂಗ್ಲ ಭಾಷೆ ಮತ್ತು ಸಂಸ್ಕೃತಿಯ ಛಾಯೆಯಲ್ಲಿ ಬದುಕುತ್ತಿದ್ದೇವೆ. ಇಂಗ್ಲಿಷ್ ಭಾಷೆ ಅಂತರ್ ರಾಷ್ಟ್ರೀಯ ಹಾಗು ಶ್ರೀಮಂತ ದೇಶಗಳಲ್ಲಿ ಬಳಕೆ ಇರುವ ಭಾಷೆ. ಇಂಗ್ಲಿಷ್ ವ್ಯಾಮೋಹಕ್ಕೆ ಒಲಿಯುವುದು ಸುಲಭ. ಭಾಷೆಯ ಬಗ್ಗೆ ಅಭಿಮಾನವನ್ನು ನಾವು ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ದೇಶದವರಿಂದ ಕಲಿಯಬೇಕು. ಇತ್ತೀಚಿಗೆ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಪ್ರಸಿಡೆಂಟ್ ಟ್ರಂಪ್ ಅವರನ್ನು ಶ್ವೇತ ಭವನದಲ್ಲಿ ಭೇಟಿಯಾದಾಗ ಪ್ರೆಸ್ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದ್ದು ತಮ್ಮ ಮಾತೃ ಭಾಷೆಯಲ್ಲಿ ಎಂಬುದನ್ನು ಗಮನಿಸಬೇಕು.

ದಕ್ಷಿಣ ಭಾರತದ ಇತರ ಭಾಷೆಗಳಾದ ತಮಿಳು ಮಲೆಯಾಳಂಗೆ ಹೋಲಿಸಿದಾಗ ಭೂಗೋಳಿಕವಾಗಿ ಕನ್ನಡದ ನೆಲದ ಸುತ್ತ ತಮಿಳು ತೆಲುಗು ಮರಾಠಿ ಕೊಂಕಣಿ ತುಳು ಕೊಡವ ಮಲೆಯಾಳಂ ಹೀಗೆ ಹತ್ತಾರು ಭಾಷೆಗಳು ಕನ್ನಡವನ್ನು ಆವರಿಸಿದ್ದು ಹಾಗೆ ಇಂಗ್ಲಿಷ್ ಭಾಷೆಯ ಪ್ರಭುತ್ವದಲ್ಲಿ ಮತ್ತು ಇತರ ಭಾಷೆಗಳ ಪೈಪೋಟಿಯಲ್ಲಿ ಇಷ್ಟರ ಮಟ್ಟಿಗೆ ಕನ್ನಡ ಭಾಷೆ ಉಳಿದು ಕೊಂಡಿರುವುದು ಹೆಮ್ಮೆಯ ವಿಚಾರ.

ಕನ್ನಡ ಭಾಷೆ ಸುಮಾರ ೮೦೦ ವರ್ಷಗಳಿಂದ ಪ್ರಚಲಿತವಾಗಿ ಶರಣರು, ದಾಸರು, ಜೈನರು ಕನ್ನಡದಲ್ಲಿ ತಮ್ಮ ಸಂದೇಶಗಳನ್ನು ನೀಡಿ ಮುಂದಕ್ಕೆ ಪಂಪ ರನ್ನರಂಥ ಕವಿಗಳು ಅದನ್ನು ಸಮೃದ್ಧಿಗೊಳಿಸಿ ೨೦ -೨೧ನೇ ಶತಮಾನದಲ್ಲಿ ಭಾರತದ ಇತರ ಭಾಷೆಗಳನ್ನು ಮೀರಿ ಪರಾಕಾಷ್ಠೆಯನ್ನು ತಲುಪಿ ೮ ಜ್ಞಾನ ಪೀಠ ಪುರಸ್ಕಾರಗಳನ್ನು ಗಳಿಸಿಸಿದ ನಮ್ಮ ಭಾಷೆ ಬಗ್ಗೆ ನಮಗೆ ಪ್ರೀತಿ ಅಭಿಮಾನವಿರಬೇಕು, ಆತ್ಮ ವಿಶ್ವಾಸವಿರಬೇಕು, ಛಲ, ಧ್ಯೇಯ, ಒಮ್ಮತ ಹಾಗು ಒಗ್ಗಟ್ಟಿರಬೇಕು ಆಗ ಸಹಜವಾಗಿ ನಮ್ಮ ಭಾಷೆ ಮತ್ತು ಸಂಸ್ಕೃತಿ ನಮಗೆ ಹತ್ತಿರವಾಗುತ್ತದೆ. ಇತರ ಭಾಷೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು ವೃದ್ಧಿಸುವುದರಲ್ಲಿ ತಪ್ಪಿಲ್ಲ ಆದರೆ ಪರ ಭಾಷೆ ಮತ್ತು ಸಂಸ್ಕೃತಿಯನ್ನು ಸಂಪೂರ್ಣವಾಗಿ ಅವಲಂಬಿಸುವುದು ಅನುಕರಿಸುವುದು ಗುಲಾಮಗಿರಿಯ ಸಂಕೇತ.

ಕನ್ನಡದ ಒಬ್ಬ ಹಿರಿಯ ಸಾಹಿತಿ ಕನ್ನಡ ಪ್ರಜ್ಞೆಯ ಬಗ್ಗೆ ಒಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಅದು ಹೀಗಿದೆ;
‘ಒಂದು ಭಾಷೆಯ ಅವನತಿ ಒಂದು ಸಂಸ್ಕೃತಿಯ ಅವನತಿ’

ಒಟ್ಟಿನಲ್ಲಿ ಹೇಳಬೇಕಾದರೆ ನಮ್ಮ ಯು.ಕೆ. ಕನ್ನಡ ಬಳಗದಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತ ಗೊಳಿಸಲು ನಾವು ಸಾಕಷ್ಟು ಸಾಧನೆಗಳನ್ನು ಕೈಗೊಂಡಿದ್ದೇವೆ. ಇದು ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ಒಂದು ಸವಾಲನ್ನು ಎದುರಿಸಬೇಕಾಗಿದೆ. ಮುಂದೆ ಕನ್ನಡ ಬಳಗವನ್ನು ನಡೆಸುವ ಕಾರ್ಯಕಾರಿ ಸಮಿತಿಯವರು ಆಡಳಿತವರ್ಗದವರು ಇದೆ ಮುತುವರ್ಜಿಯಿಂದ ಕಾಳಜಿಯಿಂದ ಕನ್ನಡವನ್ನು ಉಳಿಸಿ ಬೆಳಸುವ ಪ್ರಯತ್ನವನ್ನು ಮಾಡುವರೆಂದು ಹಾರೈಸುತ್ತೇನೆ.

ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ – ಡಾ ಉಮಾ ವೆಂಕಟೇಶ್

(ಕಳೆದ ವಾರ ಕನ್ನಡ ಬಳಗ (ಯು ಕೆ)ಯ ಯುಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳಡಿಯಲ್ಲಿ, `ಅನಿವಾಸಿ` ತಾಣದ `ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ`ಯು `ಪರದೇಶದ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ`ಯ ವಿಷಯದ ಬಗ್ಗೆ ಚರ್ಚೆಯನ್ನು, ಅಮೇರಿಕದಿಂದ ಬಂದ ಬಹುಮುಖ ಪ್ರತಿಭೆಯ ಮೈ ಶ್ರೀ ನಟರಾಜರ ಸಮ್ಮುಖದಲ್ಲಿ ಹಮ್ಮಿಕ್ಕೊಳ್ಳಲಾಗಿತ್ತು. ಈ ಚರ್ಚೆಯಲ್ಲಿ ಮುಖತಃ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ, ಉಮಾ ಅವರು ತಮ್ಮ ಅನಿಸಿಕೆಗಳನ್ನು ಕಳಿಸಿಕೊಟ್ಟರು. ಈ ಲೇಖನದಲ್ಲಿ ಉಮಾ ಅವರು ಹೊರದೇಶದ ಕನ್ನಡಿಗರು ಕನ್ನಡ ಪ್ರಜ್ಞೆಯನ್ನು ಯಾಕೆ ಮತ್ತು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಕೂಲಂಕುಷವಾಗಿ ಬರೆದಿದ್ದಾರೆ. ಅವರಿಬ್ಬರ ಮಕ್ಕಳೂ ಇಷ್ಟು ವರುಷ ಹೊರದೇಶದಲ್ಲಿದ್ದರೂ `ಸುಲಿದ ಬಾಳೆಹಣ್ಣಿನಂದದಿ` ಕನ್ನಡದಲ್ಲಿ ವ್ಯವಹರಿಸುವುದೇ ಅವರ ಜಾಗೃತ ಕನ್ನಡ ಪ್ರಜ್ಞೆಗೆ ಸಾಕ್ಷಿ – ಸಂ)

ಕನ್ನಡತನವೆಂದರೇನು? ನಮ್ಮ ಭಾಷೆಯೇ? ನಮ್ಮ ಆಚಾರ-ವಿಚಾರಗಳೇ? ನಮ್ಮ ಅಡುಗೆ-ತಿಂಡಿಗಳೇ? ನಮ್ಮ ಹಬ್ಬ-ಹರಿದಿನಗಳೇ? ನಮ್ಮ ಉಡುಗೆತೊಡುಗೆಯೇ? ನಮ್ಮ ಸಂಗೀತ, ನಾಟಕ ಸಿನಿಮಾಗಳೇ? ಇಲ್ಲಾ ನಮ್ಮಲ್ಲಿ ಬೇರೂರಿರುವ ನಮ್ಮ ಮೌಲ್ಯಗಳೇ? ಕನ್ನಡತನವೆಂಬುದು ಈ ಮೇಲೆ ಹೆಸರಿಸಿರುವ ಯಾವುದೇ ಒಂದು ವಿಷಯಕ್ಕೆ ಸೀಮಿತವಾದದ್ದಲ್ಲ. ಅದೊಂದು ಸಂಕೀರ್ಣವಾದ ಚೌಕಟ್ಟಿನಲ್ಲಿ ಅಡಗಿರುವ ನಮ್ಮತನವೆನಬಹುದು. ಪರದೇಶಗಳಲ್ಲಿ ನೆಲಸಿರುವ ಕನ್ನಡಿಗರು, ಸ್ಥಳೀಯ ಸಂಸ್ಕೃತಿ, ಆಚಾರ-ವಿಚಾರಗಳ ಪ್ರಭಾವಗಳ ನಡುವೆ ಕನ್ನಡತನ ಅಥವಾ ಕನ್ನಡ ಪ್ರಜ್ಞೆಯನ್ನು ಉಳಿಸಿ, ಪೋಷಿಸಿ, ಅದನ್ನು ತಮ್ಮ ಮುಂದಿನ ಪೀಳಿಗೆಯಲ್ಲಿ ಜೀವಂತವಾಗಿಡಬೇಕಾದ ಜವಾಬ್ದಾರಿ ಬಹಳ ಪ್ರಯಾಸದ ಕೆಲಸ.

ಬಹುರಾಷ್ಟ್ರೀಯ ಸಂಸ್ಕೃತಿಯ ನಡುವಿನಲ್ಲಿ ಬದುಕುವ ಇಂದಿನ ಪೀಳಿಗೆಯ ತಾಯಿತಂದೆಯರು ಮತ್ತು ಅವರ ಮಕ್ಕಳ ಜೀವನ ಸರಳವಲ್ಲ. ಪೋಷಕರಿಗೆ ಮಕ್ಕಳಲ್ಲಿ ನಮ್ಮತನವನ್ನು ಉಳಿಸಿ, ನಮ್ಮ ಭಾಷೆ, ಆಚಾರ-ವಿಚಾರಗಳನ್ನು ಕಲಿಸಿ ಮುಂದುವರೆಸುವ ಕಾರ್ಯ ನಿಜಕ್ಕೂ ಕ್ಲಿಷ್ಟವಾದದ್ದು. ನನ್ನ ಮಟ್ಟಿಗೆ ನಮ್ಮ ಕನ್ನಡತನ ನಮ್ಮ ಭಾಷೆಯಲ್ಲಿದೆ. ಭಾಷೆಯ ಮಾಧ್ಯಮವೇ ಅವರಲ್ಲಿ ನಮ್ಮ ಸಂಸ್ಕೃತಿಯನ್ನು, ನಮ್ಮತನವನ್ನು ಜೀವಂತವಾಗಿಡಲು ಸಾಧ್ಯ. ನಮ್ಮ ಕನ್ನಡದ ಜೀವನವೈಖರಿ, ನಡೆನುಡಿ, ಸಾಹಿತ್ಯ-ಸಂಗೀತ ಎಲ್ಲವೂ ಭಾಷೆಯಲ್ಲಿ ಅಡಗಿದೆ. ಕನ್ನಡ ಭಾಷೆಯನ್ನು ಆಡುಭಾಷೆಯನ್ನಾಗಿ ನಮ್ಮ ಮನೆಗಳಲ್ಲಿ ಉಳಿಸಿಕೊಂಡು ಬರುವ, ಬಂದಿರುವ ಅನಿವಾಸಿ ಮನೆಗಳ ಮಕ್ಕಳಲ್ಲಿ, ಹೆಚ್ಚುಹೆಚ್ಚಾಗಿ ಕನ್ನಡದ ಪ್ರಜ್ಞೆಯನ್ನು ಕಾಣಬಹುದು. ಇದು ನನ್ನ ಸ್ವಂತ ಅನುಭವ. ಭಾಷೆಯನ್ನು ಮರೆತ ಜನಗಳು, ನಮ್ಮ ಸಂಸ್ಕೃತಿಯ ಇನ್ನಾವುದೇ ಮಾಧ್ಯಮವನ್ನು ಬಳಸಿದರೂ, ಕನ್ನಡ ಭಾಷೆಯ ಪ್ರಭಾವವಿಲ್ಲದ ಅವರ ಚಟುವಟಿಕೆಗಳು ರಸಹೀನವಾದ ಕಬ್ಬಿನಂತೆ ಎಂದೆನಿಸುತ್ತದೆ. ಕನ್ನಡ ಭಾಷೆಯ ಅರಿವಿಲ್ಲದ ನಮ್ಮವರ ಮಕ್ಕಳು, ನಮ್ಮ ಶಾಸ್ತ್ರೀಯ ನೃತ್ಯದ ಅಭಿನಯದಲ್ಲಿ, ಭಾಷೆಯ ಪದಗಳಲ್ಲಿ ಅಡಗಿರುವ ಲಾಲಿತ್ಯವನ್ನು ಪ್ರದರ್ಶಿಸಲು ಅಸಮರ್ಥರಾಗಿ ಹೆಣಗಾಡುವುದನ್ನು ಅನೇಕ ಬಾರಿ ಕಂಡು ಮರುಗಿದ್ದೇನೆ.

ಕನ್ನಡದಲ್ಲಿ ಮಾತನಾಡಲು ತಿಳಿಯದ ಅನಿವಾಸಿ ಕನ್ನಡಿಗರ ಮಕ್ಕಳು ತಾಯ್ನಾಡಿಗೆ ಭೇಟಿ ನೀಡುವ ಸಂಧರ್ಭದಲ್ಲಿ, ಆಂಗ್ಲಭಾಷೆಯಲ್ಲಿ ಸಮರ್ಥವಾಗಿ ಸಂಭಾಷಿಸಲಾಗದ ಮನೆಯ ಹಿರಿಯರೊಡನೆ ತಮ್ಮ ಯಾವುದೇ ಭಾವನೆಗಳನ್ನು ಅವರಿಗೆ ತಲುಪಿಸಲು ಕಷ್ಟಪಡುವುದನ್ನು ಕಂಡಿದ್ದೇನೆ. ನಮ್ಮ ಶಾಸ್ತ್ರೀಯ ಸಂಗೀತದಲ್ಲಿನ ಶ್ರೀಮಂತ ಸಾಹಿತ್ಯದ ಅರ್ಥ ತಿಳಿಯದೆ, ಅದರ ಪದಗಳ ಉಚ್ಚಾರಣೆಯನ್ನೂ ಅರಿಯದ ಮಕ್ಕಳು ನಗೆಪಾಟಲಿಗೀಡಾಗುವ ಸಂಧರ್ಭಗಳೇ ಹೆಚ್ಚು. ಒಂದು ಭಾಷೆ ಅಳಿಸಿಹೋದರೆ, ಅದರಲ್ಲಿ ಅಡಗಿರುವ ಒಂದು ಸಂಸ್ಕೃತಿಯ ಸಮಸ್ತ ವಿಚಾರಗಳೂ ಅದರೊಂದಿಗೆ ಅಳಿಯುತ್ತವೆ. ಇದು ಒಂದು ದೊಡ್ಡ ದುರಂತ. ಹಾಗಾಗಿ ನಮ್ಮತನದ ಪ್ರಜ್ಞೆ ಬಹುತೇಕ ನಮ್ಮ ಭಾಷೆಯಲ್ಲಿದೆ. ನಮ್ಮ ಅಸ್ತಿತ್ವವೇ ಅದರಲ್ಲಡಗಿದೆ ಎನ್ನುವುದು ನನ್ನ ಅಭಿಮತ.

ಈ ಸಮಸ್ಯೆಯ ಅರಿವುಳ್ಳ ಅನಿವಾಸಿ ಕನ್ನಡಿಗರು ಜಗದಾದ್ಯಂತ ನಮ್ಮತನದ ಪ್ರತೀಕವಾದ ನಮ್ಮ ಕನ್ನಡ ಭಾಷೆಯನ್ನುಳಿಸಿಕೊಂಡು ಬರಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದಾರೆ. ಇದು ಶುಭಸಮಾಚಾರ. ಆದರೆ ಈ ಪ್ರಯತ್ನವನ್ನು ಸಂಘಸಂಸ್ಥೆಗಳೇ ಕಾರ್ಯರೂಪಕ್ಕಿಳಿಸಲು ಸಾಧ್ಯವಿಲ್ಲ. ಇದು ತಂದೆತಾಯಿಯರ ಜವಾಬ್ದಾರಿ. ಮನೆಯಲ್ಲಿ ನಮ್ಮ ಆಡುಭಾಷೆಯನ್ನಾಡುವ ಕುಟುಂಬಗಳು ಈ ದಿಸೆಯಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಗಳು ಹೆಚ್ಚು. ಜೊತೆಗೆ ಹೊರದೇಶದಲ್ಲಿ ಬಾಳುತ್ತಿರುವ ಕನ್ನಡಿಗರ ಮಕ್ಕಳಿಗೆ, ಸಂಸ್ಕೃತಿಗಳ ಘರ್ಷಣೆಯಲ್ಲಿ ಬದುಕಿ ನಮ್ಮತನವನ್ನು ಉಳಿಸಿಕೊಳ್ಳುವುದು ಕಷ್ಟದ ಕಾರ್ಯ. ತಮ್ಮ ಜೊತೆಯ ಮಕ್ಕಳ ಕೂಡಾ ಬೆರೆತು ಅಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಒತ್ತಡವೂ ಅವರ ಮೇಲೆ ಸದಾಕಾಲ ಇರುತ್ತದೆ. ಹಾಗಾಗಿ ಮನೆಯಲ್ಲಿ ಕನ್ನಡತನ ಉಳಿಸಿಕೊಳ್ಳುವ ಹೋರಾಟದಲ್ಲಿ ತಂದೆತಾಯಿಯರು ಬಹಳ ಎಚ್ಚರಿಕೆಯಿಂದ ಈ ಕಾರ್ಯವನ್ನು ನಿಭಾಯಿಸಬೇಕಾಗಿದೆ. ಇಲ್ಲವಾದರೆ, ಮಕ್ಕಳು ನಮ್ಮ ಪ್ರಜ್ಞೆಯನ್ನುಳಿಸಿಕೊಳ್ಳುವ ಗುರಿಯನ್ನು ತಲುಪಲು ವಿಫಲರಾಗಬಹುದು!  

ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ, ಹೊರನಾಡಿನಲ್ಲಿರುವ ಅನಿವಾಸಿ ಕನ್ನಡಿಗರು ತಮ್ಮತನವನ್ನು ಬಹಳ ಯಶಸ್ವಿಯಾಗಿ ಉಳಿಸಿಕೊಂಡು ಬಂದಿದ್ದಾರೆ ಎನ್ನಬಹುದು. ಇಂದು ಹೊರನಾಡಿನಲ್ಲಿ ಕನ್ನಡದ ಪ್ರತಿ ಇರುವ ಅಭಿಮಾನಗಳನ್ನು, ಕರ್ನಾಟಕದ ಜನವೃಂದವೇ ಕೊಂಡಾಡುವಂತಿದೆ. ಕನ್ನಡ ಸಾಹಿತ್ಯದ ಪರಂಪರೆಯನ್ನು ಉಳಿಸಿ ಬೆಳಸಲು, ಅನಿವಾಸಿ-ಕನ್ನಡಿಗರು ನಡೆಸುತ್ತಿರುವ ಕಾರ್ಯಕ್ರಮಗಳು, ಚಟುವಟಿಕೆಗಳು ನಿಜಕ್ಕೂ ಪ್ರಶಂಸನೀಯವೇ! ಜೊತೆಗೆ ಆಂಗ್ಲಭಾಷೆಯಲ್ಲಿ ಉತ್ತಮ ಪರಿಣಿತಿ ಇರುವ ಅನಿವಾಸಿಗಳು, ಆಂಗ್ಲ ಭಾಷೆಯ ಉತ್ತಮ ಸಾಹಿತ್ಯವನ್ನು ಕನ್ನಡ ಭಾಷೆಗೆ ಅನುವಾದಿಸಿ, ನಮ್ಮ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ. ನಮ್ಮ ನಾಡಿನ ಶ್ರೀಗಂಧದ ಕಂಪನ್ನು ಹೊತ್ತ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದರೆ, ನಮ್ಮ ಕನ್ನಡದ ಪ್ರಜ್ಞೆ ನಮ್ಮಲ್ಲಿ ಸದಾ ಜಾಗ್ರತವಾಗೇ ಇರುತ್ತದೆ. ಇಂದು ನಮಗೆಲ್ಲಾ ಲಭ್ಯವಿರುವ ಆಧುನಿಕ ತಂತ್ರಾಂಶಗಳ ನೆರವಿನಿಂದ ಈ ಕಾರ್ಯವನ್ನು ಸಾಧಿಸುವ ಹಾದಿಯೂ ಸ್ವಲ್ಪ ಸುಗಮವಾಗೇ ಇದೆ. ಜೊತೆಗೆ ಸಂಪರ್ಕಸಾಧನ ಸಂಪನ್ಮೂಲಗಳನ್ನು ಬಳಸಿ, ನಮ್ಮ ನಾಡಿನ ಅತ್ಯುತ್ತಮ ಸಾಹಿತಿಗಳ ಕೃತಿಗಳನ್ನು ಹೊರನಾಡಿನಲ್ಲೂ ತರಿಸಿ ಓದುವ ಸೌಭಾಗ್ಯವಿದೆ. ಜೊತೆಗೆ ಇಲ್ಲಿ ನಡೆಸುವ ಕನ್ನಡ ಸಂಘದ ವೈಭಯುತ ಕಾರ್ಯಕ್ರಮಗಳಲ್ಲಿ ಅವರನ್ನು ಕರೆಸಿ ಅವರಿಂದ ಕಲಿಯುವ ಅವಕಾಶಗಳೂ ಹೇರಳವಾಗಿವೆ.

ನಾವು ನೆಲಸಿರುವ ಹೊರನಾಡಿನಲ್ಲಿ, ನಮ್ಮ ಬಳಗದ ಸದಸ್ಯರನ್ನು ಕೂಡಿಕೊಂಡು, ಲೇಖನಗಳನ್ನು ಬರೆದು, ಪ್ರಕಟಿಸಲು ತಂತ್ರಜ್ಞಾನವು ಕಲ್ಪಿಸಿರುವ ಸೌಲಭ್ಯಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವ ಅವಕಾಶವಿದೆ. ಫ಼ೇಸ್-ಬುಕ್, ಟ್ವಿಟ್ಟರುಗಳಂತಹ ಪ್ರಭಾವಿ ಸಾಮಾಜಿಕ ಜಾಲಬಂಧಗಳು, ಖಂಡಗಳ ನಡುವಿನ ಕನ್ನಡಿಗರನ್ನು ಉತ್ತಮವಾಗಿ ಸಂಪರ್ಕಿಸುತ್ತವೆ. ಈ ಮಾಧ್ಯಮಗಳ ಮೂಲಕ ಅವರು ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ವಿನಿಮಯ ಮಾಡಿಕೊಳ್ಳುವ ಅವಕಾಶಗಳಿವೆ. ನನ್ನ ಮಟ್ಟಿಗೆ ಇಷ್ಟೆಲ್ಲಾ ಆಧುನಿಕ ಸೌಲಭ್ಯಗಳ ನಡುವಿರುವ ನಾವು, ಹೊರನಾಡಿನಲ್ಲಿದ್ದರೂ ನಮ್ಮ ಭಾಷೆಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಯಲ್ಲಿ ಜೀವಂತವಾಗಿಡಲು ಸುವರ್ಣಾವಕಾಶಗಳಿವೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜವಾಬ್ದಾರಿ ನಮ್ಮದು.

ಕನ್ನಡ ಪ್ರಜ್ಞೆಯನ್ನು, ಕೇವಲ ನಮ್ಮ ಧರ್ಮದ ಆಚರಣೆ ಅಥವಾ ಹಲವು ಸಾಮಾಜಿಕ ಸಂಪ್ರದಾಯಗಳಿಗೆ ಮಿತಿಗೊಳಿಸದೆ, ಅದನ್ನು ವಿಶಾಲ ಹರವಿನ ವ್ಯಾಪ್ತಿಗೊಳಪಡಿಸಿ ಬೆಳೆಸುವುದರಲ್ಲಿ ಅರ್ಥವಿದೆ. ಹೊರನಾಡಿನಲ್ಲಿ ಹುಟ್ಟಿಬೆಳೆಯುವ ನಮ್ಮ ಮಕ್ಕಳಿಗೆ, ನಮ್ಮವರನ್ನೇ ಮದುವೆಯಾಗಬೇಕು, ನಮ್ಮ ಗುಂಪಿನಿಂದ ಹೊರಗಿನ ಸಮುದಾಯದೊಡನೆ ಸಂಪರ್ಕವಿರಬಾರದು ಎನ್ನುವ ನಿರ್ಬಂಧ ಹೇರಿ ನಮ್ಮತನವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮುಂದುವರೆಸಿದರೆ, ನಮ್ಮ ಪ್ರಜ್ಞೆ ಅವರಲ್ಲಿ ಜಾಗರೂಕವಾಗಿರಲು ಸಾಧ್ಯವಿಲ್ಲ. ಕಟ್ಟುಪಾಡುಗಳಿಂದ ಈ ಬಹುರಾಷ್ಟ್ರ ಸಂಸ್ಕೃತಿಯ ಜಗತ್ತಿನಲ್ಲಿ ಏನನ್ನೂ ಸಾಧಿಸಲಾಗದು. ವಿಶಾಲಮನೊಭಾವನೆಯೇ ಇದಕ್ಕೆ ಸುಲಭವಾದ ದಾರಿ. ಇತರ ಸಂಸ್ಕೃತಿಗಳನ್ನು ಆದರಿಸಿ ಗೌರವಿಸಿದರೆ, ನಮ್ಮ ಕಿರಿಯ ಪೀಳಿಗೆ ತಾನೇತಾನಾಗಿ ನಮ್ಮ ಕನ್ನಡ ಸಂಸ್ಕೃತಿ, ಭಾಷೆಗಳನ್ನೂ ಗೌರವಿಸಿ ಆದರಿಸಿ ಮುಂದುವರೆಸುವ ಸಾಧ್ಯತೆಗಳು ಹೆಚ್ಚು. ನಮ್ಮ ರೀತಿನೀತಿಗಳ ಶ್ರೀಮಂತಿಕೆಯನ್ನು ನಿಧಾನವಾಗಿ, ದೃಢವಾಗಿ, ಜಾಣತನದಿಂದ ಒತ್ತಡ ಹೇರದೆ ಅವರ ಮನಗಳಲ್ಲಿ ಬೇರೂರಿಸಬೇಕು. ಇದಕ್ಕೆ ತಾಳ್ಮೆ ಸಹನೆಗಳು ಅತ್ಯಗತ್ಯ. ನಮ್ಮ ರಕ್ತ ಹಂಚಿಕೊಂಡು, ನಮ್ಮ ಮಾರ್ಗದರ್ಶನದಲ್ಲಿ ಬೆಳೆಯುವ ನಮ್ಮ ಮುಂದಿನ ಕುಡಿಗಳು, ನಮ್ಮ ಸಮೃದ್ಧ ಬೇರಿನ ಪೋಷಣೆಯಲ್ಲಿ ಕನ್ನಡ ಪ್ರಜ್ಞೆಯನ್ನು ಉಳಿಸಿಕೊಳ್ಳುವಂತೆ ಮಾಡುವ ಜಾಣತನ ನಮ್ಮ ಕೈಯಲ್ಲಿದೆ.

ನಮ್ಮ ಕನ್ನಡ ಪ್ರಜ್ಞೆಯನ್ನು ನಾವು ಸದಾಕಾಲ ಜಾಗರೂಕವಾಗಿಟ್ಟು, ಮುಂದುವರೆಸಿದರೆ ಮಾತ್ರಾ ಅದು ಸಾಧ್ಯ!