ಯು.ಕೆ ಕನ್ನಡ ಬಳಗದಲ್ಲಿ ‘ಕನ್ನಡ ಪ್ರಜ್ಞೆ’ – ಶಿವಪ್ರಸಾದ್ ಬರೆದ ಲೇಖನ

(ಕನ್ನಡ ಬಳಗ, ಯು.ಕೆ, ಯ ಹಾಲಿ ಕಾರ್ಯದರ್ಶಿಗಳಾದ ಡಾ. ಜಿ ಎಸ್ ಶಿವಪ್ರಸಾದ್ ಅವರು ಇಂಗ್ಲಂಡ್ ಕನ್ನಡಿಗರಿಗೆ ಚಿರಪರಿಚಿತ ಹೆಸರು. ಕನ್ನಡದ ಕೆಲಸಕ್ಕಾಗಿ ಕನ್ನಡ ಬಳಗದಲ್ಲಿ ಇವರು ಮಾಡಿರುವ ಕೆಲಸ ಅಪಾರ. ಕರ್ನಾಟಕದ ಹೆಸರಾಂತ ಸಾಹಿತಿಗಳನ್ನು, ಸಂಗೀತಗಾರರನ್ನು ಒಲಿಸಿ, ಕರೆಸಿ, ಆತಿಥ್ಯ ನೀಡಿ, ಕನ್ನಡ ಬಳಗದ ಕಾರ್ಯಕ್ರಮಗಳಿಗೆ ರಂಗು ತರುವುದರಲ್ಲಿ ಇವರದು ಪ್ರಮುಖ ಪಾತ್ರ, ಆದರೂ ಎಲೆಯ ಮರೆಯ ಕಾಯಿಯಂತೆ ಇರುತ್ತಾರೆ. ಈ ಸಲದ ಕನ್ನಡ ಬಳಗದ ವಿಚಾರ ಸಂಕಿರಣಕ್ಕೆ ಬರೆದ ಭಾಷಣ-ಲೇಖನ ಇಲ್ಲಿದೆ – ಸಂ)

ಯು. ಕೆ ಕನ್ನಡ ಬಳಗ ಮೊದಲುಗೊಂಡು ಸುಮಾರು ೩೪ ವರ್ಷಗಳಾಗಿವೆ. ಇಲ್ಲಿಯ ಕನ್ನಡಿಗರು ತಮ್ಮ ಭಾಷೆಯ ಮೇಲೆ ತಮಗಿರುವ ಅಭಿಮಾನದಿಂದ ಈ ಸಂಘವನ್ನು ಬೆಳಸಿಕೊಂಡು ಬಂದಿದ್ದಾರೆ. ನಮ್ಮ ಈ ಸಂಘದ ಧ್ಯೇಯ ಮತ್ತು ಗುರಿ ಎಂದರೆ; ಭಾಷೆ , ಸಂಸ್ಕೃತಿ ಹಾಗು ಪರಂಪರೆಯನ್ನು ಉಳಿಸುವುದು ಮತ್ತೆ ಬೆಳಸುವುದು. ಕನ್ನಡದ ಆಸಕ್ತಿಯನ್ನು ಸ್ಥಳೀಯ ಸಮುದಾಯದಲ್ಲಿ ಜೀವಂತವಾಗಿಡಲು ನೆರವಾಗುವುದು. ಈ ಹಿನ್ನಲೆಯಲ್ಲಿ ನಮ್ಮ ಸಾಧನೆಯನ್ನು ಒರೆ ಹಚ್ಚಿ ನೋಡಿದಾಗ ನಮ್ಮ ಸಾಧನೆಗಳ ಬಗ್ಗೆ ಸಾಕಷ್ಟು ಹೆಮ್ಮೆ ಪಡಬಹುದು. ಮೊದಲು ಕನ್ನಡ ಪ್ರಜ್ಞೆ ಎಂದರೇನು ಎಂಬುದನ್ನು ವಿಶ್ಲೇಷಿಸುವುದು ಉಚಿತ. ನಮ್ಮ ಮಾತೃ ಭಾಷೆ ಕನ್ನಡದ ಬಗ್ಗೆ ಸಂಸ್ಕೃತಿಯ ಬಗ್ಗೆ ನಮಗಿರುವ ಅರಿವು ಕನ್ನಡ ಪ್ರಜ್ಞೆ ಎಂದು ಸರಳವಾಗಿ ವ್ಯಖ್ಯಾನಿಸಬಹುದು. ಈ ಒಂದು ಅರಿವು ವಿಶ್ವಾಸ ಬದ್ಧತೆಗಳು ‘ಎಲ್ಲಾದರೂ ಇರು ಎಂತಾದರು ಇರು’ ಎಂಬ ಕವಿ ವಾಣಿಯಂತೆ ಪ್ರಪಂಚದ ಯಾವ ಮೂಲೆಯಲ್ಲಿ ನೆಲಸಿದರು ಅದು ಅನ್ವಯವಾಗುವಂತಹುದು. ಹೊರದೇಶದಲ್ಲಿ ನೆಲಸಿದ್ದು ನಮ್ಮ ಸುತ್ತ ಆಂಗ್ಲ ಭಾಷೆ ಸಂಸ್ಕೃತಿ ಹರಡಿ ಕೊಂಡಿದ್ದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮಗೆ ಮತ್ತೆ ನಮ್ಮ ಮುಂದಿನ ಪೀಳಿಗೆಗೆ ಪ್ರಸ್ತುತವಾಗಿರಬೇಕು ಎಂಬುದು ಮುಖ್ಯವಾದ ವಿಚಾರ.

ನಮ್ಮ ಪೀಳಿಗೆಯ ಮಟ್ಟಿಗೆ ಹೇಳುವುದಾದರೆ ನಾವು ಯು.ಕೆ ಕನ್ನಡ ಬಳಗದಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿ ಕನ್ನಡ ಪ್ರಜ್ಞೆಯನ್ನು ಜಾಗೃತಿ ಗೊಳಿಸಿದ್ದೇವೆ. ಮುಂದಿನ ಪೀಳಿಗೆಯ ವಿಚಾರ ಬಂದಾಗ ನಾವು ಇನ್ನು ಹೆಚ್ಚಿನ ಸಾಧನೆಗಳ ಮೂಲಕ ಅವರಿಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪ್ರಸ್ತುತವಾಗುವಂತೆ ಮಾಡಬೇಕಾಗಿದೆ.

ಹಾಗೆ ನೋಡಿದರೆ ಹಿಂದೆ ನಮ್ಮ ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಇಂಗ್ಲಿಷ್ ಬಳಕೆ ಸಾಮಾನ್ಯವಾಗಿತ್ತು. ನಮ್ಮ ಯುವ ಪೀಳಿಗೆಗೆ ಕನ್ನಡ ಅರ್ಥವಾಗುವುದಿಲ್ಲ ಎಂಬ ನೆಪದಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಮರ್ಥಿಸಿ ಕೊಂಡಿದ್ದೆವು. ಕನ್ನಡ ಬಳಗದ ಕಾರ್ಯಕ್ರಮಕ್ಕೆ ಸ್ಥಳೀಯ ಮೇಯರ್ ಗಳನ್ನೂ ಕರೆದು ಇಂಗ್ಲಿಷಿನಲ್ಲಿ ಭಾಷಣಗಳನ್ನು ಕಾರ್ಯಾಲಾಪ ಗಳನ್ನು ನಡೆಸಿದ್ದೇವೆ. ಆದರೆ ಕಳೆದ ಹಲವು ವರ್ಷಗಳಿಂದ ಸತತವಾಗಿ ಕರ್ನಾಟಕದಿಂದ ಸಾಹಿತಿ, ಕವಿ ಹಾಗು ಕಲಾವಿದರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದೇವೆ ಹಾಗೆ ಸನ್ಮಾನಿಸಿದ್ದೇವೆ.

ನಮ್ಮ ಹಿಂದಿನ ಕಾರ್ಯಕಾರಿ ಸಮಿತಿ ಹಾಗು ಆಡಳಿತ ವರ್ಗದವರು ವಿಶ್ವ ಕನ್ನಡ ಸಮ್ಮೇಳನಗಳನ್ನು ಹಾಗು ಮಹೋತ್ಸವಗಳನ್ನು ಆಚರಿಸಿ ನಮಗೆ ಒಳ್ಳೆ ಬುನಾದಿಯನ್ನು ಹಾಕಿ ಕೊಟ್ಟಿದ್ದಾರೆ. ನಾವು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದೇವೆ. ಕನ್ನಡ ಬಳಗ ದ ೩೦ ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾವು ಕೆಲವು ಸಾಹಿತ್ಯಾಸಕ್ತರು ಸೇರಿಕೊಂಡು ಒಂದು ಸ್ಮರಣ ಸಂಚಿಕೆಯನ್ನು ಹೊರತಂದೆವು. ಅದೇ ಗುಂಪಿನ ಸದಸ್ಯರು ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ಎಂಬ ಒಂದು ಹೆಸರಿನಲ್ಲಿ , ಕನ್ನಡ ಬಳಗದ ಆಶ್ರಯದಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿದೆವು. ಕೊನೆಗೆ ‘ಅನಿವಾಸಿ’ ಎಂಬ ಕನ್ನಡದ ಜಾಲಾಜುಗುಲಿಯನ್ನು ಸ್ಥಾಪಿಸಿ ಕನ್ನಡ ಬರವಣಿಗೆಗಳನ್ನು ಪ್ರಕಟಿಸಿ ಹಾಗೆ ‘ಅನಿವಾಸಿ ಅಂಗಳದಿಂದ’ ಎಂಬ ಚೊಚ್ಚಲ ಪುಸ್ತಕವನ್ನು ಹೊರತಂದೆವು. ಇದು ನಮ್ಮ ಹೆಗ್ಗಳಿಕೆ.

ದೀಪಾವಳಿ ೨೦೧೪ ಸಮಾರಂಭದಲ್ಲಿ ‘ಅನಿವಾಸಿ’ಯ ಉದ್ಘಾಟನೆಯನ್ನು ಖ್ಯಾತ ಕವಿ ಡಾ. ಎಚ್ಚಸ್ವೀ ಮಾಡಿ ಯು.ಕೆ ಕನ್ನಡ ಬಳಗದಲ್ಲಿ ಕನ್ನಡ ಪ್ರಜ್ಞೆ ಜಾಗೃತವಾಗಿರುವ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಅಂದು ನಾವುಗಳು ಕಂಪ್ಯೂಟರ್, ಮೊಬೈಲ್ ಫೋನ್ ಹಾಗು ಇತರ ಮಾಧ್ಯಮಗಳಲ್ಲಿ ಕನ್ನಡ ಬರೆಯುವದರ ಬಗ್ಗೆ ಒಂದು ಕಮ್ಮಟವನ್ನು ಏರ್ಪಡಿಸಿದ್ದೆವು. ಕನ್ನಡ ಭಾಷೆಯ ಉಳಿವಿನ ಬಗ್ಗೆ ಭಾಷಣಗಳಾಗಿ ನೆರದಿದ್ದ ಸದಸ್ಯರು ಕನ್ನಡ ಬಳಗಕ್ಕೆ ಕನ್ನಡವನ್ನು ಮತ್ತೆ ತಂದಿರುವ ಸಾಧನೆಯನ್ನು ಮೆಚ್ಚಿಕೊಂಡರು.

ಕನ್ನಡ ಪ್ರಜ್ಞೆ ಎಂದರೆ ಬರಿ ಭಾಷೆ ಹಾಗೂ ಸಾಹಿತ್ಯಕ್ಕೆ ಸೀಮಿತವಾಗದೆ ಅದು ಸಂಸ್ಕೃತಿ ಹಾಗೂ ಕಲೆಗಳನ್ನು ಕೊಡ ಒಳಗೊಂಡಿರುತ್ತದೆ. ಹಿಂದೊಮ್ಮೆ ಕನ್ನಡ ಬಳಗದ ಕಾರ್ಯ ಕ್ರಮಗಳಲ್ಲಿ ಹಿಂದಿ ಬಾಲಿವುಡ್ ಹಾಡುಗಳಿಗೆ ಕೊನೆಯಿಲ್ಲದೆ ತರುಣಿಯರು ತಲೆ ಚಿಟ್ಟು ಹಿಡಿಸುವಷ್ಟು ಕುಣಿದಿದ್ದುಂಟು. ಇತ್ತೀಚಿನ ದಿನಗಳಲ್ಲಿ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಮಾತ್ರ ಆದ್ಯತೆ ಕೊಡಲಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಹಾಗೆ ಕರ್ನಾಟಕ ದರ್ಶನ , ಮೈಸೂರು ದಸರಾ , ಕನ್ನಡ ಕವಿಗೋಷ್ಠಿ , ವಿಚಾರ ಗೋಷ್ಠಿ , ಭರತನಾಟ್ಯ ಮುಂತಾದ ಕಾರ್ಯಕ್ರಮಗಳು ಭಾಷೆ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಾ ಕ್ರಿಯಾತ್ಮಕವಾಗಿ ಒಳ್ಳೆ ಗುಣ ಮಟ್ಟ ತಲುಪಿದೆ ಎನ್ನಬಹುದು.

ಕನ್ನಡ ಬಳಗದಲ್ಲಿ ಒಂದು ಪುಸ್ತಕ ಭಂಡಾರವಿರಿವುದು ಹೆಚ್ಚಿನ ಸದಸ್ಯರಿಗೆ ಗೊತ್ತಿಲ್ಲದಿರಬಹುದು. ಈ ಪುಸ್ತಕ ಭಂಡಾರವನ್ನು ನಿಭಾಯಿಸುವ ಅವಶ್ಯಕತೆ ಇದೆ. ಹಲವಾರು ಸದಸ್ಯರು ಪುಸ್ತಕಗಳನ್ನು ನೀಡಿದ್ದಾರೆ ಆದರೂ ಅದಕ್ಕೆ ಒಂದು ಸುಭದ್ರ ವಾದ ನೆಲೆಯಿಲ್ಲ ಹಾಗೆ ವಿತರಣೆಗೆ ಅನೂಕೂಲಗಳಿಲ್ಲ. ಹಲವು ವರ್ಷಗಳ ಹಿಂದೆ ಕರ್ನಾಟಕ ಸರಕಾರ ಹೊರ ದೇಶಗಳಲ್ಲಿ ಕನ್ನಡ ಕಲಿಸಲು ‘ಕನ್ನಡ ಕಲಿ’ ಎಂಬ ಒಂದು ಕಾರ್ಯಕ್ರಮಕ್ಕೆ ಧನ ಸಹಾಯವನ್ನು ನೀಡಿದ್ದು ಸ್ವಲ್ಪ ಸಮಯದ ವರೆಗೆ ನಡೆಸಿಕೊಂಡು ಬಂದಿದ್ದರೂ ಅದು ಅಷ್ಟರ ಮಟ್ಟಿಗೆ ಯಶಸ್ವಿಯನ್ನು ಕಂಡಂತಿಲ್ಲ. ಈ ಕಾರ್ಯಕ್ರಮದ ಪುನರುತ್ಥಾನದ ಬಗ್ಗೆ ಚಿಂತಿಸಬೇಕಾಗಿದೆ.

ಹಿಂದೊಮ್ಮೆ ಕನ್ನಡ ಚಲನ ಚಿತ್ರಗಳು ಹಲವಾರು ವರ್ಷಕೊಮ್ಮೆ ಪ್ರದರ್ಶಿತವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯಾರ್ಕ್ ಶೈರ್ ಶಾಖೆ ಕೆಲವು ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿ ಕೊಟ್ಟಿದೆ. ಡಿಸ್ಟ್ರಿಬ್ಯುಟರ್ ಹತೋಟಿಯಲ್ಲಿರುವ ಕನ್ನಡ ಚಿತ್ರಗಳನ್ನು ನಿಯಂತ್ರಿಸುವುದು ಕನ್ನಡ ಬಳಗಕ್ಕೆ ಸ್ವಲ್ಪ ಕಷ್ಟದ ಕೆಲಸವೇ ಸರಿ, ಆದರೂ ಪ್ರಯತ್ನ ಮಾಡ ಬಹುದು.

ಈ ಹಿಂದೆ ಯು.ಕೆ ಯಲ್ಲಿ ಒಂದು ಅಧಿಕೃತವಾದ ಕನ್ನಡ ಬಳಗವಿದ್ದು ಈಗ ಹಲವಾರು ಅನಧಿಕೃತ ಕನ್ನಡ ಸಂಘಗಳು ಹುಟ್ಟಿಕೊಂಡಿವೆ. ಈ ಸಂಘಗಳಲ್ಲಿ ಮನೋರಂಜನೆ ಪ್ರಧಾನವಾದ ಕಾರ್ಯಕ್ರಮಗಳನ್ನು ಕಾಣಬಹುದು. ಇಲ್ಲಿ ಕನ್ನಡ ಪರ ಶೈಕ್ಷಣಿಕ ಕಾರ್ಯಕ್ರಮಗಳು ಕಾಣದಾಗಿವೆ. ಉತ್ತಮ ಮಟ್ಟದ ಕಾರ್ಯಕ್ರಮಗಳನ್ನು ಮಾಡಲು ಹೆಚ್ಚಿನ ಸಂಖ್ಯಯ ಕನ್ನಡಿಗರು ಒಂದಾಗಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ.

ಅನಿವಾಸಿಗಳಾದ ನಾವು ಆಂಗ್ಲ ಭಾಷೆ ಮತ್ತು ಸಂಸ್ಕೃತಿಯ ಛಾಯೆಯಲ್ಲಿ ಬದುಕುತ್ತಿದ್ದೇವೆ. ಇಂಗ್ಲಿಷ್ ಭಾಷೆ ಅಂತರ್ ರಾಷ್ಟ್ರೀಯ ಹಾಗು ಶ್ರೀಮಂತ ದೇಶಗಳಲ್ಲಿ ಬಳಕೆ ಇರುವ ಭಾಷೆ. ಇಂಗ್ಲಿಷ್ ವ್ಯಾಮೋಹಕ್ಕೆ ಒಲಿಯುವುದು ಸುಲಭ. ಭಾಷೆಯ ಬಗ್ಗೆ ಅಭಿಮಾನವನ್ನು ನಾವು ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ದೇಶದವರಿಂದ ಕಲಿಯಬೇಕು. ಇತ್ತೀಚಿಗೆ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಪ್ರಸಿಡೆಂಟ್ ಟ್ರಂಪ್ ಅವರನ್ನು ಶ್ವೇತ ಭವನದಲ್ಲಿ ಭೇಟಿಯಾದಾಗ ಪ್ರೆಸ್ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದ್ದು ತಮ್ಮ ಮಾತೃ ಭಾಷೆಯಲ್ಲಿ ಎಂಬುದನ್ನು ಗಮನಿಸಬೇಕು.

ದಕ್ಷಿಣ ಭಾರತದ ಇತರ ಭಾಷೆಗಳಾದ ತಮಿಳು ಮಲೆಯಾಳಂಗೆ ಹೋಲಿಸಿದಾಗ ಭೂಗೋಳಿಕವಾಗಿ ಕನ್ನಡದ ನೆಲದ ಸುತ್ತ ತಮಿಳು ತೆಲುಗು ಮರಾಠಿ ಕೊಂಕಣಿ ತುಳು ಕೊಡವ ಮಲೆಯಾಳಂ ಹೀಗೆ ಹತ್ತಾರು ಭಾಷೆಗಳು ಕನ್ನಡವನ್ನು ಆವರಿಸಿದ್ದು ಹಾಗೆ ಇಂಗ್ಲಿಷ್ ಭಾಷೆಯ ಪ್ರಭುತ್ವದಲ್ಲಿ ಮತ್ತು ಇತರ ಭಾಷೆಗಳ ಪೈಪೋಟಿಯಲ್ಲಿ ಇಷ್ಟರ ಮಟ್ಟಿಗೆ ಕನ್ನಡ ಭಾಷೆ ಉಳಿದು ಕೊಂಡಿರುವುದು ಹೆಮ್ಮೆಯ ವಿಚಾರ.

ಕನ್ನಡ ಭಾಷೆ ಸುಮಾರ ೮೦೦ ವರ್ಷಗಳಿಂದ ಪ್ರಚಲಿತವಾಗಿ ಶರಣರು, ದಾಸರು, ಜೈನರು ಕನ್ನಡದಲ್ಲಿ ತಮ್ಮ ಸಂದೇಶಗಳನ್ನು ನೀಡಿ ಮುಂದಕ್ಕೆ ಪಂಪ ರನ್ನರಂಥ ಕವಿಗಳು ಅದನ್ನು ಸಮೃದ್ಧಿಗೊಳಿಸಿ ೨೦ -೨೧ನೇ ಶತಮಾನದಲ್ಲಿ ಭಾರತದ ಇತರ ಭಾಷೆಗಳನ್ನು ಮೀರಿ ಪರಾಕಾಷ್ಠೆಯನ್ನು ತಲುಪಿ ೮ ಜ್ಞಾನ ಪೀಠ ಪುರಸ್ಕಾರಗಳನ್ನು ಗಳಿಸಿಸಿದ ನಮ್ಮ ಭಾಷೆ ಬಗ್ಗೆ ನಮಗೆ ಪ್ರೀತಿ ಅಭಿಮಾನವಿರಬೇಕು, ಆತ್ಮ ವಿಶ್ವಾಸವಿರಬೇಕು, ಛಲ, ಧ್ಯೇಯ, ಒಮ್ಮತ ಹಾಗು ಒಗ್ಗಟ್ಟಿರಬೇಕು ಆಗ ಸಹಜವಾಗಿ ನಮ್ಮ ಭಾಷೆ ಮತ್ತು ಸಂಸ್ಕೃತಿ ನಮಗೆ ಹತ್ತಿರವಾಗುತ್ತದೆ. ಇತರ ಭಾಷೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು ವೃದ್ಧಿಸುವುದರಲ್ಲಿ ತಪ್ಪಿಲ್ಲ ಆದರೆ ಪರ ಭಾಷೆ ಮತ್ತು ಸಂಸ್ಕೃತಿಯನ್ನು ಸಂಪೂರ್ಣವಾಗಿ ಅವಲಂಬಿಸುವುದು ಅನುಕರಿಸುವುದು ಗುಲಾಮಗಿರಿಯ ಸಂಕೇತ.

ಕನ್ನಡದ ಒಬ್ಬ ಹಿರಿಯ ಸಾಹಿತಿ ಕನ್ನಡ ಪ್ರಜ್ಞೆಯ ಬಗ್ಗೆ ಒಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಅದು ಹೀಗಿದೆ;
‘ಒಂದು ಭಾಷೆಯ ಅವನತಿ ಒಂದು ಸಂಸ್ಕೃತಿಯ ಅವನತಿ’

ಒಟ್ಟಿನಲ್ಲಿ ಹೇಳಬೇಕಾದರೆ ನಮ್ಮ ಯು.ಕೆ. ಕನ್ನಡ ಬಳಗದಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತ ಗೊಳಿಸಲು ನಾವು ಸಾಕಷ್ಟು ಸಾಧನೆಗಳನ್ನು ಕೈಗೊಂಡಿದ್ದೇವೆ. ಇದು ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ಒಂದು ಸವಾಲನ್ನು ಎದುರಿಸಬೇಕಾಗಿದೆ. ಮುಂದೆ ಕನ್ನಡ ಬಳಗವನ್ನು ನಡೆಸುವ ಕಾರ್ಯಕಾರಿ ಸಮಿತಿಯವರು ಆಡಳಿತವರ್ಗದವರು ಇದೆ ಮುತುವರ್ಜಿಯಿಂದ ಕಾಳಜಿಯಿಂದ ಕನ್ನಡವನ್ನು ಉಳಿಸಿ ಬೆಳಸುವ ಪ್ರಯತ್ನವನ್ನು ಮಾಡುವರೆಂದು ಹಾರೈಸುತ್ತೇನೆ.

5 thoughts on “ಯು.ಕೆ ಕನ್ನಡ ಬಳಗದಲ್ಲಿ ‘ಕನ್ನಡ ಪ್ರಜ್ಞೆ’ – ಶಿವಪ್ರಸಾದ್ ಬರೆದ ಲೇಖನ

  1. ಕನ್ನಡ ಪ್ರಜ್ಞೆಯನ್ನು ಕರ್ನಾಟಕದಲ್ಲಿರುವ ಕನ್ನಡಿಗರಲ್ಲೇ ಮರೆಯಾಗುತ್ತಿರುವಾಗ ಎರಡನೇ ಪೀಳಿಗೆಯ ಕನ್ನಡಿಗರು ಇಂಗ್ಲಂಡಿನಲ್ಲಿ ಉಳಿಸಿ ಬೆಳೆಸುವರೆ? ನಿಮ್ಮ ಲೇಖನ ಹೊರದೇಶದ ಕನ್ನಡಿಗರ ಸಂಘಟನೆಗಳ ಬಗೆಗೆ ತುಂಬ ಸೂಕ್ಷ್ಮವಾಗಿ ಬರೆದು ಎಚ್ಚರಿಸಿದ್ದಾರೆ. – ಕೇಶವ

    Like

  2. ಶಿವಪ್ರಸಾದ್ ಹೇಳಿದಂತೆ ಹಿಂದಿಯ ಭರಾಟೆಯಿಂದ ಕನ್ನಡಕ್ಕೆ ಹೊರಳಿಸುವಲ್ಲಿ ಗೆಲುವಾಗಿದೆ. ಆದರೂ ಮುಂದಿನ ಪೀಳಿಗೆ ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸದೇ ಹೋದಲ್ಲಿ ಅದು ನಮ್ಮ ಸೋಲು,ಸೋಂಬೇರಿತನ ಎಂದೇ ತಿಳಿಯಬೇಕಾಗಿದೆ.

    Like

  3. ನಿಜ. ಈ ದೇಶದಲ್ಲಿ ಎಷ್ಟೊಂದು ಸಂಘಗಳಿದ್ದರೂ ಬರಹದಲ್ಲಿ ಸೃಜನ ಸಾಹಿತ್ಯದಲ್ಲಿ ಉತ್ಸಾಹ ತೋರುವದನ್ನು ನಾನು ಕಂಡಂತಿಲ್ಲ. ಅನಿವಾಸಿಗಳಲ್ಲಿ, ಹೊರನಾಡಿನವರಲ್ಲಿ ಭಾಷೆಯನ್ನು ಉಳಿಸುವ ಪ್ರಯತ್ನ ಸುಲಭ ಸಾಧುವಲ್ಲ. ಆದರೆ ನಡೆಯ ಬೇಕು. ಆ ದಿನ ಮೈ ಶ್ರೀ ನಟರಾಜ ಅವರು ಆಶಾದಾಯಕ ಚಿಹ್ನೆಗಳು ಕಾಣಿಸುತ್ತಿವೆ ಎಂದರು. ಅದು ಅಲ್ಲಿಯ ಅನುಭವವಾದರೂ ಆಶಾವಾದಿಯಾಗಿಯೇ ಇರಬೇಕಲ್ಲವೆ?

    Like

  4. ಧನ್ಯವಾದಗಳು ಅರವಿಂದ್ ಅವರೆ
    ಕನ್ನಡ ಬಳಗವಲ್ಲದೆ ಇನ್ನು ಹತ್ತಾರು ಕನ್ನಡ ಸಂಘಗಳು ಇಲ್ಲಿ ಹುಟ್ಟಿಕೊಂಡಿರುವುದು ಕನ್ನಡ ಪ್ರಜ್ಞೆ ಜಾಗೃತವಾಗಿರುವ ಸಂಕೇತ ಎಂದು ನಾನು ಭಾವಿಸುತ್ತೇನೆ. ಬಹುಶ ಆ ಕನ್ನಡ ಪ್ರಜ್ಞೆ ಹರಿದು ಹಂಚಿದಂತೆ ತೋರುತ್ತದೆ. ಮಕ್ಕಳನ್ನು ಬಳಗದ ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವ ಪ್ರಯತ್ನವನ್ನು ನಾವೆಲ್ಲಾ ಒಂದು ಹಂತದಲ್ಲಿ ಮಾಡಿದ್ದೇವೆ ಬೆಳದ ಮಕ್ಕಳು ಬರುವುದು ಬಿಡುವುದು ಅವರ ನಿರ್ಧಾರ

    Like

  5. ಶಿವಪ್ರಸಾದವರೇ
    ನಮಸ್ಕಾರ.

    ನಿಮ್ಮ ಕನ್ನಡ ಪ್ರಜ್ಞೆ ಬಗ್ಗೆ ಬರೆದ ಲೇಖನ ಸಮಂಜಸ ,ಮನ ತಲಪುವ ಹಾಗಿದೆ. ನೀವು ಕಳೆದ ದೀಪಾವಳಿಯ ಕಾರ್ಯಕ್ರಮದಲ್ಲಿ ಈರದೇ ಇದ್ದರೂ ಈ ಲೇಖನ ನಿಮ್ಮಲ್ಲಿದ್ದ
    ಕನ್ನಡ ಅಭಿಮಾನ,ಹುಮ್ಮಸ ,ನಿರಂತರ ಶ್ರಮಿಸುವ ಧೃಢ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿದೆ. ಎಲ್ಲ ಕನ್ನಡಿಗರು ಯಾವ ಇಂಗ್ಲೆಂಡಿನ ಮೂಲೆಯಲ್ಲಿ ನೆಲಿಸಿದರೂ ಪ್ರತಿ ವರುಷ
    ಕೆ.ಬಿ .ಉ.ಕೆ. ಆಚರಿಸುತ್ತ ಬಂದಿರುವ ಯುಗಾದಿ,ದೀಪಾವಳಿ ಕಾರ್ಯಕ್ರಮಗಳಲ್ಲಿ ಆಗಮಿಸಿ,ಭಾಗವಹಿಸಿ,ಆನಂದ ಪಡೆಯಲು ಮುನ್ನುಗ್ಗಬೇಕು .ಇದರಿಂದ ಅವರೆಲ್ಲ ಮಕ್ಕಳಲ್ಲಿ ಕನ್ನಡ ಪ್ರಜ್ಞೆ ಹೆಚ್ಚಿಸಲು ಸಾಧ್ಯವಿದೆ. ಇದಕ್ಕೆಲ್ಲ ಮನಸ್ಸು ಬೇಕಲ್ಲವೇ?

    ಡಾಕ್ಟರ ಅರವಿಂದ ಕುಲ್ಕರ್ಣಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.