ಈ ವಾರ ಪ್ರಥಮ ಬಾರಿ 'ಅನಿವಾಸಿಗೆ' ಮೂಲತಃ ಮಂಗಳೂರಿನವರಾದ ಹೊಸ ಲೇಖಕಿ ಉಮೈರಾವನ್ನು ಸ್ವಾಗತಿಸುತ್ತಿದ್ದೇವೆ. ಅವರು ಮೂರು ವರ್ಷಗಳಿಂದ ಗ್ಲಾಸ್ಟರಿನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಬಗ್ಗೆ ಅವರಮಾತಿನಲ್ಲೇ ಅವರ ಪರಿಚಯವನ್ನು ಕೇಳೋಣ: "ನಾನು ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಇಲೆಕ್ಟ್ರಾನಿಕ್ & ಕಮ್ಯುನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು ಈಗ UKಯಲ್ಲಿ Aerospace Engineer ಆಗಿ ಕೆಲಸ ಮಾಡುತ್ತಿದ್ದೇನೆ. ಪತಿ ಹನೀಫ್ ಕೂಡ ಇಲ್ಲಿ Aerospace Engineer. ನನಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಮೈಗೂಡಿಸಿಕೊಂಡಿದ್ದೇನೆ. ನನ್ನ ಜೀವನದ ಅನುಭವಗಳನ್ನು, ಮನದಲ್ಲಿ ಮೂಡುವ ಭಾವನಾತ್ಮಕ ವಿಚಾರಗಳನ್ನು ಅಕ್ಷರಗಳಲ್ಲಿ ವ್ಯಕ್ತಪಡಿಸಿ ಬರೆಯುವಲ್ಲಿ ಆಸಕ್ತಳಾಗಿದ್ದೇನೆ. ಪುಸ್ತಕಗಳ ಓದುವುದು ಮತ್ತು ಬರವಣಿಗೆ ನನ್ನ ಪ್ರಮುಖ ಹವ್ಯಾಸಗಳು."
ತಮ್ಮ ನೆರೆಹೊರೆಯಲ್ಲೇ ವಾಸಿಸುವ ವೇದಕ್ಕನ ಹೃದಯಸ್ಪರ್ಶಿ ವ್ಯಕ್ತಿಚಿತ್ರವನ್ನು ಇಲ್ಲಿ ಬರೆದಿದ್ದಾರೆ. ಓದಿ ಪ್ರೋತ್ಸಾಹಿಸಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಸಂಪಾದನೆಗೆ ಸಹಾಯ ಮಾಡಿ, ಸ್ವಲ್ಪೇ ಸಮಯದಲ್ಲಿ ಚಿತ್ರವನ್ನು ಬರೆದು ಶೋಭೆಹೆಚ್ಚಿಸಿದ ಗುಡೂರ್ ಅವರಿಗೆ ಋಣಿ. (-ಸಂ )
******************************************
ಮುಂಜಾನೆ ಹಂಡೆಯಲ್ಲಿ ಕಾದ ಬಿಸಿನೀರ ಸ್ನಾನ ಮುಗಿಸಿ ಬಂದ ನನಗೆ, ಬಿಸಿ ಬಿಸಿಯಾದ ನೀರ್ದೋಸೆ ಮಾಡಿಟ್ಟ ಅಮ್ಮ, ‘ಬೇಗ ರೆಡಿಯಾಗಿ ಇದನ್ನು ತಿಂದು ಹೋಗು’ ಅಂದಾಗ, ‘ಅಮ್ಮಾ…… ನಾನು ಮತ್ತು ಸ್ಮಿತಾ ಒಂದೇ ಬಸ್ಸಲ್ಲಿ ಹೋಗ್ಬೇಕು’ ಅಂತ ಹೇಳಿ ‘ಒಂದೇ ಒಂದು ದೋಸೆ ಸಾಕಮ್ಮ’ ಅಂದು ಬೇಗ ಬೇಗನೆ ತಿಂದು ಬಸ್ಸಿಗೆ ಓಡಿಬಿಟ್ಟೆ.
ಅಮ್ಮ ಏನೋ ಗೊಣಗುತ್ತಿರುವುದು ಕೇಳಿಸ್ತಿತ್ತು. ‘ಇವರಿಬ್ಬರ ಮಾತು ಮುಗಿಯೋದೇ ಇಲ್ಲ ಎಂದಿರಬಹುದು’ ಅಂತ ಮನಸ್ಸಲ್ಲೇ ಮುಸಿಮುಸಿ ನಗ್ತಾ ಓಡಿ ಹೋದೆ.
ನಾನು ಮತ್ತು ಸ್ಮಿತಾ ಇಬ್ಬರೂ ಮಾತಿನಲ್ಲಿ ಒಬ್ಬರನ್ನೊಬ್ಬರು ಮೀರಿಸುವವರು. ನನ್ನ ಮಾತಿನಲ್ಲಿ ನಾನು ಕಂಡದ್ದು, ಕೇಳಿದ್ದು, ಸಂಬಂಧಿಕರು, ನೆರೆಹೊರೆಯವರೆಲ್ಲರ ವಿಷಯವೂ ಒಳಗೊಂಡಿರುತ್ತಿದ್ದರೆ ಅವಳು ನನಗಿಂತಲೂ ಇನ್ನೂ ಎರಡು ಹೆಜ್ಜೆ ಮುಂದೆ. ಅದೆಷ್ಟೋ ವಿಷಯ ತಂದು ಸಾಸಿವೆ ಹುರಿದಂತೆ ಮಾತನಾಡುತ್ತಿದ್ದಳು.
ಆ ದಿನ ಕಾಲೇಜು ಮುಗಿಸಿ ಬರುವಾಗ ನಾನು ಆ ತಿಂಗಳ ‘ತುಷಾರ’ ಎತ್ತಿಕೊಂಡೆ.
ಅದೇನೋ ಮಾತಾಡುವಾಗ ಅವಳು ಕೇಳಿದ್ಲು “ಉಮೈರಾ, ಅದು ಹೇಗೆ ಮೊನ್ನೆ ನೀನು ಮಹಾಭಾರತದ ಕ್ವಿಜ್ ಅಲ್ಲಿ ಬಹುಮಾನ ತಗೊಂಡೆ? ನೀವು ನಮ್ಮ ಹಿಂದೂ ಗ್ರಂಥಗಳನ್ನು ಓದಲ್ಲ ಅಲ್ವಾ?’
‘ಹ್ಮ್, ಹಾಗೇನಿಲ್ಲ ಸ್ಮಿತಾ, ನಮ್ಮ ಕುರಾನಿನ ಮೊದಲ ಸೂಕ್ತವೇ “ಇಖ್ರಅ್” ಅಂದ್ರೆ “ಓದು” ಎಂದಾಗಿದೆ. ನಮ್ಮಜ್ಜಿಯ ಹತ್ರ ಪುರಾಣ ಸೇರಿದಂತೆ ಹಲವಾರು ಪುಸ್ತಕಗಳಿವೆ. ಅದರಲ್ಲಿದ್ದ “ಸಂಕ್ಷಿಪ್ತ ಮಹಾಭಾರತ“ ಅನ್ನುವ ಒಂದು ಪುಸ್ತಕ ನಾನು ಓದಿದ್ದೆ’ ಅಂದೆ.
ಹೀಗೆ ನಮ್ಮ ಮಾತಿನ ಸರಣಿಗಳು ದಿನದಿನವೂ ಇಂತಹ ವಿಭಿನ್ನ ಸಂಪ್ರದಾಯದ ಪರಸ್ಪರರ ನಡುವಿನ ಕೌತುಕದ ನಾನಾ ಸುದ್ದಿಗಳೊಂದಿಗೆ ಸಾಗುತ್ತಲೇ ಇರುತ್ತಿತ್ತು.
‘ಅಜ್ಜಿನೂ ಓದ್ತಾರೆ’ ಅಂತ ಕೇಳಿದಾಗ ಚಕಿತಗೊಂಡಿದ್ದ ಅವಳಿಗೆ ಅವರಿಗಿದ್ದ ಅತಿಯಾದ ಓದಿನ ಹವ್ಯಾಸವನ್ನು ನಾನು ಬಲು ಖುಶಿ ಮತ್ತು ಹೆಮ್ಮೆಯಿಂದ ಹೇಳಿದ ಆ ನೆನಪು ಮೊನ್ನೆ ಮೊನ್ನೆ ನಡೆದಂತಿದೆ.
ನನ್ನ ಮಾತುಗಳ ನಡುವೆ ಪದೇಪದೇ ಅಜ್ಜಿಯ ವಿಷಯ ಬರುತ್ತಿದ್ದರೆ, ಅವಳ ಮಾತುಗಳ ನಡುವೆ ಪದೇಪದೇ ಬರುತಿದ್ದ ಹೆಸರು ಅವಳ ಇಷ್ಟದ ‘ವೇದಾ’ ಎಂಬ ಹೆಂಗಸಿನದ್ದು.
ಆ ವೇದಕ್ಕನಿಗೂ ಅವಳು ನನ್ನ ಬಗ್ಗೆ ಹೇಳಿ ಹೇಳಿ, ವೇದಕ್ಕನಲ್ಲಿ ನನ್ನ ಬಗ್ಗೆ ಒಂದು ಕುತೂಹಲದ ಪ್ರಪಂಚವನ್ನೇ ಸೃಷ್ಟಿಸಿದ್ದಳು ಸ್ಮಿತಾ.
ನನಗಂತೂ ಆ ವೇದಕ್ಕನ್ನ ಅಲ್ಲೀ ತನಕ ನಾನು ನೋಡದೇ ಇದ್ರೂ, ಅವರಂದ್ರೆ ಅದೇನೋ ತೀವ್ರ ಕುತೂಹಲ ಹುಟ್ಟಿ ಬಿಟ್ಟಿತ್ತು. ವೇದಕ್ಕ ಏನೋ ಒಬ್ಬ ಮಹಾನ್ ಸಾಧಕಿ ಎಂಬ ಮನೋಭಾವ ಬೆಳೆದು ಬಿಟ್ಟಿತ್ತು.
ಒಂದು ದಿನ ಸ್ವಲ್ಪ ಲೇಟಾಗಿ ಶಾಲೆಗೆ ಬಂದ ಸ್ಮಿತ, ನಾನು ಸಿಕ್ಕಿದ ಕೂಡಲೇ ‘ಅಯ್ಯೋ, ಇವತ್ತೇನ್ ಗೊತ್ತ ವೇದಕ್ಕನ ಮಗಳು ಮೊದಲ ಬಾರಿ ಶಾಲೆಗೆ ಹೋಗ್ತಿದ್ದಾಳೆ. ಅವ್ಳು ಹೊರಟು ನಿಂತು ಅಳೋದೇನು, ವೇದಕ್ಕನೂ ಅಳೋದೇನು… ಅದನ್ನು ನೋಡ್ತಾ ಮನೆಯಲ್ಲಿ ನಾವೆಲ್ಲ ತಮಾಷೆ ಮಾಡ್ತಾ ನಿಂತುಕೊಂಡೆವು. ಹಾಗೆ ಸ್ವಲ್ಪ ಲೇಟ್ ಆಯಿತು’ ಅಂದಳು.
ಯಕ್ಷಗಾನದಲ್ಲಿ ಮಹಿಷಾಸುರ, ರಾವಣ ಹೀಗೆ ಯಾವುದೇ ಕಠೋರಹೃದಯಿಯ ಪಾತ್ರವನ್ನು ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸುವ ವೇದಕ್ಕ ಮಾತ್ರ ನಿಜ ಜೀವನದಲ್ಲಿ ಬಲು ಭಾವ ಜೀವಿ. ಬದುಕಿನ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಅರಿತವರಂತೆ ಇರುವ ಅವರ ಆಪ್ತತೆ ಉಕ್ಕಿಸುವ ಮಾತುಗಳು, ಯಾವುದೇ ಕುಹಕ-ಕುತಂತ್ರಗಳಿಲ್ಲದ ಅವರ ನೈಜ ಸಾಧುಸ್ವಭಾವ ಯಾರ ಹೃದಯದಲ್ಲೇ ಆದರೂ ಅವರ ಬಗ್ಗೆ ಪ್ರೀತಿ ಹುಟ್ಟಿಸುವಂತಿತ್ತು. ಮನಸ್ಸಲ್ಲಿರೋದನ್ನೆಲ್ವಾ ಒಮ್ಮೆಲೇ ಸುರಿಯುವ ಮಳೆಯಂತೆ ಅವರ ಮೆಲು ಮಾತುಗಳಲ್ಲೇ ಸುರಿಸಿಬಿಡುತ್ತಿದ್ದರು.
ನನ್ನ ಮತ್ತು ವೇದಕ್ಕನ ಮೊದಲ ಭೇಟಿಯನ್ನಂತೂ ನಾನೆಂದೂ ಮರೆಯಲು ಸಾಧ್ಯವೇ ಇಲ್ಲ.
“ಅಷ್ಟಮಿ ಹಬ್ಬಕ್ಕೆ ನಾವು ಕೊಟ್ಟಿಗೆ ಮಾಡ್ತೇವೆ, ಉಮೈರಾಳನ್ನು ಇನ್ವೈಟ್ ಮಾಡಿದ್ರೆ ಏನು ಅಂದ್ಕೊಂಡೆ ಆಂದ್ರಂತೆ”
ಹಾಗೆ ನಮ್ಮ ಭೇಟಿ ಅವರ ಮನೆಯಲ್ಲಿ ಅಷ್ಟಮಿ ದಿನದಂದಾಗಿತ್ತು .
ಮೂರು ಕಲ್ಲುಗಳ ಆ ಮೂಗುತಿ, ಕಣ್ಣಿಗೆ ಕಾಡಿಗೆ, ದೊಡ್ಡ ಬಿಂದಿ, ಕರ್ಲಿ (ಗುಂಗುರು) ಕೂದಲು ಮತ್ತು ಕಲಾವಿದೆ ಎಂದು ಗುರುತಿಸಲು ಸಾಧ್ಯವಾಗುವ ಅವರ ಚೈತನ್ಯಯುತ ಲವಲವಿಕೆಯ ಮಾತುಗಳು.
ಅದೆಷ್ಟು ಲವಲವಿಕೆ, ಅತಿಯಾದ ಅತಿಥಿ ಸತ್ಕಾರ, ಪ್ರೀತಿ ವಾತ್ಸಲ್ಯ ತುಂಬಿದ ವೇದಕ್ಕನ ಆಗಾಗ ತಾರಕಕ್ಕೇರುವ ನಗು ನಮ್ಮ ಆ ದಿನವನ್ನು ಸಂಪನ್ನವಾಗಿಸಿತು.
“ನಾನೆಷ್ಟು ಮಾತಾಡ್ತೇನೆ ಅಲ್ವಾ? ನನ್ನ ಗಂಡ ಹೇಗೆ ಸಹಿಸಿಕೊಳ್ತಾರೋ ಪಾಪ” ಅಂತ ತನ್ನನ್ನೇ ತಮಾಷೆ ಮಾಡಿಕೊಂಡರು.
“ನಂಗೆ ಮಾಸ್ಟರ್ಸ್ ಮಾಡ್ಬೇಕು ಅಂತ ತುಂಬಾ ಇಷ್ಟ ಇತ್ತು “
“ಇನ್ನೂ ಮಾಡ್ಬಹುದಲ್ವಾ?” ಅಂದೆ.
“ಅಯ್ಯೋ ಈ ಮರುಭೂಮಿಗೆ ಎಷ್ಟು ನೀರು ಸುರಿದರೂ ಸರಿಯೇ ಇನ್ನು” ಅಂತ ಮತ್ತೊಮ್ಮೆ ನಗು.
“ಅಲ್ಲ ಅಕ್ಕ, ಮಕ್ಕಳು ಸ್ಕೂಲ್ಗೆ ಹೋದ್ರೆ ಇಡೀ ದಿನ ನೀವೇನ್ ಮಾಡ್ತೀರ?” ಅಂತ ಅಮ್ಮನನ್ನು ಕೇಳಿದಾಗ “ಬೆಳಗ್ಗೆ ಬಂದ ಉದಯವಾಣಿಯನ್ನು ದಿನದಲ್ಲಿ ೪ ಸಲ ಓದಿ ಮುಗಿಸುತ್ತೇನೆ” ಎಂದರು.
ಯಕ್ಷಗಾನ ಲೋಕದಲ್ಲಿ ಅವರ ಸಾಧನೆಗೆ ಸಂದ ಪ್ರಶಸ್ತಿಗಳನ್ನು ತೋರಿಸಿ ಅವರ ಪ್ರೊಫೆಷನಲ್ ವಲಯದ ಬಗ್ಗೆ ಮಾತಾಡಿಕೊಂಡರು. ಅದು ಹೇಗಪ್ಪ ಆ ತರ ಪಾತ್ರಗಳೆಲ್ಲ ಮಾಡುತ್ತಾರೋ ಈಕೆ ಅಂತ ನಾನು ಯೋಚಿಸುವಂತಾಯಿತು.
ಮಾತಲ್ಲಿ ಪ್ರೀತಿ, ವಾತ್ಸಲ್ಯ ತುಂಬಿಕೊಂಡೇ ಮಾತಾಡುವ ಅವರ ಜೊತೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.
ಮನುಷ್ಯರಿಗೇನು ಬೇಕು ಮತ್ತೆ – ತನ್ನ (ಸುತ್ತಲೂ) ಸರೌಂಡಿಂಗ್ನಲ್ಲಿ ಪ್ರೀತಿ, ಕರುಣೆ, ವಾತ್ಸಲ್ಯ ತೋರುವವರಿದ್ದರೆ ಎಲ್ಲವನ್ನೂ ಜಯಿಸಿದಂತೆ ಖುಷಿ ಅಲ್ಲವೇ?
ಅದೆಷ್ಟೋ ಭೇಟಿಗಳು; ಆ ನಂತರದ ದಿನಗಳಲ್ಲಿ ನಮ್ಮದು ನಡೆಯುತ್ತಲೇ ಇತ್ತು. ಮನೆಯಲ್ಲಿ ಏನಾದ್ರೂ ತರಕಾರಿ ಬೆಳೆದ್ವಿ ಅಂದ್ರೆ ವೇದಕ್ಕನ ಮನೆಗೂ ಕಳುಹಿಸಿಕೊಡುವ ಪದ್ದತಿ ಇತ್ತು.
ಪಿಯುಸಿ ಮುಗಿದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರುವ ದಿನವೊಂದು ಬಂದಿತ್ತು. ಮನೆಯವರ ಬೀಳ್ಕೊಡುಗೆಯ ಜೊತೆಗೆ ನಮ್ಮ ಆಪ್ತರಾಗಿದ್ದ ವೇದಕ್ಕ ಕೂಡ ಬೀಳ್ಕೊಡಲು ಬಂದಿದ್ದರು. ನಮ್ಮನ್ನು ನೆನಪಿಸ್ಕೊಳ್ತಾ ಇರು, ಕಾಲ್ ಮಾಡು ನಂಗೆ, ಲ್ಯಾಂಡ್ಲೈನ್ ನಂಬರ್ ಗೊತ್ತಿದೆ ಅಲ್ವಾ ಅಂದಿದ್ದರು.
ಅದೊಂದು ದಿನ ಅಮ್ಮ ಕಾಲ್ ಮಾಡಿದವರು ’ವೇದಕ್ಕನಿಗೆ ತುಂಬಾ ಹುಷಾರಿಲ್ಲ, ಕ್ಯಾನ್ಸರ್ ಅದೇನೋ ಫೈನಲ್ ಸ್ಟೇಜಲ್ಲಿ ಇದೆ ಅಂತೆ’, ಅಂತ ಆಘಾತಕಾರಿ ಸುದ್ದಿಯನ್ನು ಹೇಳಿದ್ರು. ನನ್ನ ಮನಸ್ಸಲ್ಲೇನೋ ವೇದಕ್ಕನಿಗೇನಾಗುತ್ತೋ ಅನ್ನುವ ಭಯ. ಆ ದಿನದಿಂದ ಹಾಸ್ಟೆಲಲ್ಲಿ ಅವರದ್ದೇ ನೆನಪು, ಫ್ರೆಂಡ್ ಒಬ್ಬಳತ್ರ ನನ್ನ ದುಗುಡವನ್ನು ಹಂಚಿಕೊಂಡಿದ್ದೆ ಕೂಡ.
ದೇವ್ರೇ ಅವ್ರು ಬೇಗ ಗುಣಮುಖರಾಗಿ ಬರಲಿ ಅಂತ ಮನಸ್ಸು ಪೂರ್ತಿಯಾಗಿ ಬೇಡ್ಕೊಂಡಿದ್ದೆ.
ಕೆಲವೇ ದಿನದ ಪರಿಚಯವಾದ್ರೂ, ಮರೆಯಲಾಗದಂತಹ ಆಪ್ತತೆ ಇತ್ತು ನಮ್ಮಲ್ಲಿ.
ಮತ್ತಿನ ದಿನಗಳಲ್ಲಿ ಕಿಮೊತೆರಪಿ ಮಾಡಿಸಿಕೊಂಡ ವೇದಕ್ಕನನ್ನು ನೋಡಲು ಅಮ್ಮ ಹೋಗಿದ್ರಂತೆ.
ಆದ್ರೆ ಕೆಲವೇ ದಿನಗಳಲ್ಲಿ ವೇದಕ್ಕ ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ಬಂದಾಗ ಅರಗಿಸಿಕೊಳ್ಳಲು ಆಗಲಿಲ್ಲ. ಕೂದಲು ಎಲ್ಲ ಹೋಯ್ತಕ್ಕ, ಟೋಪನ್ ಹಾಕಿ ಆದ್ರೂ ನಿಮ್ಮ ಮಗಳ ಮದುವೆಗೆ ಬರ್ತೇನೆ ಅಮ್ಮನಿಗೆ ಹೇಳಿದ ಅವರ ಮಾತು, ಇನ್ನೂ ನೆನಪಾಗಿಯೇ ಉಳಿದಿದೆ.
- ಉಮೈರಾ.
“ಕಾವ್ಯವೆನ್ನುವುದು ಎಚ್.ಎಸ್.ವಿ.ಯವರ ಉಸಿರು. ಅದು ಅವರ ಭಾವ- ಬುದ್ಧಿ-ಕನಸು-ದರ್ಶನಗಳನ್ನು ಏಕತ್ರ ಹಿಡಿದಿಡುವ, ಅವರ ಸ್ಮೃತಿ ಮತ್ತು ಆಧುನಿಕ ಜ್ಞಾನಗಳನ್ನು ಹದವಾಗಿ ಬೆಸೆದಿರುವ ಸೂತ್ರವೆಂದರೆ ಅತಿಶಯೋಕ್ತಿಯಾಗಲಾರದು. ಕಾವ್ಯವೆನ್ನುವುದು ಅವರಿಗೆ ಕೇವಲ ಸಾಹಿತ್ಯದ ಒಂದು ಪ್ರಕಾರವಲ್ಲ; ಅದು,ಅವರು ಜೀವನವನ್ನು ನೋಡುವ, ಗ್ರಹಿಸುವ, ಅರ್ಥೈಸುವ, ವ್ಯಾಖ್ಯಾನಿಸುವ ಒಂದು ಕ್ರಮ.” ~ ಟಿ. ಪಿ. ಅಶೋಕ್.
ನಮಸ್ಕಾರ ಅನಿವಾಸಿ ಬಂಧುಗಳೇ. ಇಂದಿನ ಈ ಸಂಚಿಕೆ ನಮ್ಮೆಲ್ಲರ ಭಾವ ಜಗತ್ತನ್ನು ದೀಪ್ತಗೊಳಿಸಿದಂಥ ಎಚ್. ಎಸ್. ವೆಂಕಟೇಶ ಮೂರ್ತಿಯವರ ಭಾವನಮನಕ್ಕೆ ಮೀಸಲಾಗಿದೆ. ವೆಂಕಟೇಶ ಮೂರ್ತಿಯವರಿಗೂ , ಅನಿವಾಸಿಗೂ ಅದೊಂದು ಹಳೆಯ ಅತ್ಮೀಯ ಬಂಧ. ಈ ನಮ್ಮ ಅನಿವಾಸಿಗೆ ಅಧಿಕೃತ ಚಾಲನೆ ನೀಡಿ ಅದನ್ನು ಲೋಕಾರ್ಪಣಗೊಳಿಸಿದವರೇ ನಮ್ಮ HSV ಯವರು. ಅವರ ಷೆಫೀಲ್ಡ್ ಕವಿತೆಗಳ ಹುಟ್ಟಿಗೆ ಕಾರಣರಾಗಿದ್ದು ಹಾಗೂ ಹಿರಿಯ ಕವಿಗಳಿಂದ ಅದರ ಅರ್ಪಣೆಯ ಭಾಗ್ಯ ಲಭಿಸಿದ್ದು ನಮ್ಮ ಅನಿವಾಸಿಯ ಹೆಮ್ಮೆಯ ಸದಸ್ಯರಾದ ಪ್ರಸಾದ್ ಹಾಗೂ ಅವರ ಶ್ರೀಮತಿ ಪೂರ್ಣಿಮಾ ಅವರಿಗೆ.
“ ಷೆಫೀಲ್ಡಿನ ಡಾಕ್ಟರ್ ಪ್ರಸಾದರ ಮನೆಯಲ್ಲೊಂದು ಸಣ್ಣ ಕನ್ನಡ ಕನಸು. ಅದು ಬಂದದ್ದು ವಯಾ ಅಬುದಾಬಿಯೇ? ವೀಸಾ ಅಧಿಕಾರಿಗಳ ಹದ್ದುಕಣ್ಣಿಗೆ ಬೀಳಲಾರದೇ ಇದು ನನ್ನ ನಿದ್ದೆಗೆ ಬಂದದ್ದಾದರೂ ಹೇಗೆ?”
ಎಂದೇ ಅವರ ಪೆಫೀಲ್ಡ್ ಕವಿತೆಗಳು ಆರಂಭವಾಗುತ್ತವೆ. ಕವಿವರ್ಯರೊಂದಿಗನ ತಮ್ಮ ಅಪೂರ್ವ-ಆತ್ಮೀಯ ಅನುಭವಗಳನ್ನು ಇಂದಿಲ್ಲಿ ನಮ್ಮೊಡನೆ ಹಂಚಿಕೊಂಡಿದ್ದಾರೆ ಪ್ರಸಾದ್ ಅವರು. ಅದೇ ಸಮಯದಲ್ಲಿ ಅಂದರೆ 2014 ರಲ್ಲಿ ಅನಿವಾಸಿಯ ಮತ್ತೋರ್ವ ಹೆಮ್ಮೆಯ ಸದಸ್ಯೆ, ಕತೆಗಾರ್ತಿ ಪ್ರೇಮಲತಾ ಅವರು HSV ಯವರೊಡನೆ ನಡೆಸಿಕೊಟ್ಟ ಸಂದರ್ಶನದ ವೀಡಿಯೋವನ್ನು ಶ್ರೀವತ್ಸ ದೇಸಾಯಿಯವರು ಹಂಚಿಕೊಂಡಿದ್ದಾರೆ. ಅದರ ಲಿಂಕ್ ನ್ನು ಕೆಳಗೆ ಕೊಡಲಾಗಿದೆ. ಆಸಕ್ತರು ಸವಿಯಬಹುದು.
ಸುಮಾರು 2003 -04 ರ ಕಾಲಘಟ್ಟ...ದೆಹಲಿಯ ಕರ್ನಾಟಕ ಭವನದ ಅಡಿಟೋರಿಯಂ.. ಕನ್ನಡ ಸಂಘದ ಕಾರ್ಯಕ್ರಮ.. HSV ಯವರ ‘ಉರಿಯ ಉಯ್ಯಾಲೆ’ ದ್ರೌಪದಿಯ ಏಕಪಾತ್ರಾಭಿನಯನವನ್ನು ಅಭಿನಯಿಸುತ್ತಿರುವ ಹಿರಿಯ ರಂಗ ಕಲಾವಿದೆ ಬಿ. ಜಯಶ್ರೀಯವರು..ಪದರ ಪದರವಾಗಿ ಬಿಚ್ಚಿಕೊಳ್ಳುತ್ತ ಹೋಗುವ ದ್ರೌಪದಿಯ ಅಂತರಂಗ..ಅಗ್ನಿಕನ್ಯೆಯ ಹೃದಯದಲ್ಲಿ ಮಡುಗಟ್ಟಿದ್ದ ವಿಷಾದ, ನೋವು, ಆರ್ದ್ರತೆಗಳು..ಪ್ರೇಕ್ಷಕನನ್ನು ಸೀದಾ ದ್ವಾಪರಕ್ಕೊಯ್ದಿದ್ದವು. ಹೀಗೆ ಪರಕಾಯ ಪ್ರವೇಶ ಮಾಡಿ ಹೆಣ್ಣೊಬ್ಬಳ ಆಂತರಂಗಿಕ ಭಾವ ಮಿಡಿತಗಳಿಗೆ ಸ್ಪಂದಿಸಿದ ಕವಿಯ ಸಹೃದಯತೆ, ಅಂತ:ಕರಣಗಳಿಗೆ ಮನ ಮಾರುಹೋಗಿತ್ತು; ಶರಣಾಗಿತ್ತು. ಈಗ 3-4 ವರುಷಗಳ ಕೆಳಗೆ ನನ್ನ ಅವಳಿ ಮಕ್ಕಳಿಂದ ಉರಿಯ ಉಯ್ಯಾಲೆಯ ಆಯ್ದ ಭಾಗಗಳ ಭಾವಾಭಿನಯ ಮಾಡಿಸಿದ್ದೆ ಕವಿಯ ಜನುಮದಿನದ ಸಂದರ್ಭದಲ್ಲಿ. ಈ ಮಕ್ಕಳ ತೊದಲು- ತೊಡರು ಇಲ್ಲಿ ಹಂಚಿಕೊಳ್ಳುವುದು ಅದೆಷ್ಟು ಸಮಂಜಸ ಎಂದು ಯೋಚಿಸುತ್ತಿದ್ದಾಗ HSV ಯವರ ‘ ತಾವರೆಯ ಬಾಗಿಲು’ ಪುಸ್ತಕದ ‘ಸ್ಪಿರಿಟ್ ಈಜ್ ದ ಸೇಮ್’ ಎನ್ನುವ ಲೇಖನದಲ್ಲಿ ಅವರು ಉಲ್ಲೇಖಿಸಿದ ಅವರ ಗುರುವರ್ಯರ ಸಾಲು ನನಗಿಲ್ಲಿ ಅದನ್ನು ಹಾಕಲು ಧೈರ್ಯ ಕೊಟ್ಟಿದೆ. ಆ ಸಾಲು ಹೀಗಿದೆ – “ ತೇನ್ಸಿಂಗನ ಮೌಂಟ್ ಎವರೆಸ್ಟ್ ಆರೋಹಣ ಮತ್ತು ಮನೆಯ ಮಗು ಹೊಸ್ತಿಲು ದಾಟಿದ್ದು ಗುಣಾತ್ಮಕತೆ ಆತ್ಮಿಕ ನೆಲೆಯಲ್ಲಿ ಸಮಾಸಮ” ಎಂದು ಜಿ.ಎಸ್.ಎಸ್. ಒಂದು ಪದ್ಯದಲ್ಲಿ ಹೇಳುತ್ತಾರಲ್ಲ – ಹಾಗೆ. ಅಗಲಿದ ಹಿರಿಯ ಚೇತನಕ್ಕೆ ಕಿರಿಯರಾದ ಅಕ್ಷತಾ ಹಾಗೂ ಚಿನ್ಮಯಿಯಿಂದ ಭಾವಾಭಿನಯದ ಭಾವನಮನ.
ಬನ್ನಿ; ಓದಿ, ನೋಡಿ. ನೀವೂ ಕೆಲ ಸಾಲಿನ ಅಕ್ಷರ ನಮನವನ್ನು ಕವಿಗೆ ಸಲ್ಲಿಸಿ. ~ ಸಂಪಾದಕಿ
ಎಚ್ಚೆಸ್ವಿ ಕೆಲವು ಆತ್ಮೀಯ ನೆನಪುಗಳು
ಎಚ್ಚೆಸ್ವಿ ಅವರು ನನ್ನ ತಂದೆ ಜಿ ಎಸ್ ಎಸ್ ಅವರ ಪ್ರತಿಭಾವಂತ ಮತ್ತು ಆಪ್ತ ಶಿಷ್ಯರು. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ ವಿದ್ಯಾರ್ಥಿಯಾದ ಮೇಲೆ (1971-1973) ನಮ್ಮ ಕುಟುಂಬಕ್ಕೆ ಪರಿಚಿತರಾದರು. ಕುವೆಂಪು ಅವರಿಗೆ ವೆಂಕಣಯ್ಯ ನವರು ಹೇಗೋ, ಜಿ ಎಸ್ ಎಸ್ ಅವರಿಗೆ ಕುವೆಂಪು ಹೇಗೋ , ಹಾಗೆ ಎಚ್ಚೆಸ್ವಿ ಅವರಿಗೆ ಜಿ ಎಸ್ ಎಸ್ ಪೂಜ್ಯ ಗುರುಗಳು. ಅದು ಅನನ್ಯವಾದ ಗುರು ಶಿಷ್ಯ ಸಂಬಂಧ. ಅಲ್ಲಿ ಪರಸ್ಪರ ಪ್ರೀತಿ, ಗೌರವ, ಸಲಿಗೆ, ಗೆಳೆತನ ಒಂದು ಹದದಲ್ಲಿ ಇರುವಂತಹ ಒಡನಾಟ. ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವುದಾದರೆ "ಅಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ. ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಹತ್ತಿರವಾದದ್ದು ಬರಿಯ ವಿದ್ಯಾರ್ಥಿ ದೆಸೆಯಿಂದಲ್ಲ, ಅದಕ್ಕೆ ಮುಖ್ಯಕಾರಣ ಎಚ್ಚೆಸ್ವಿ ಒಬ್ಬ ಸೃಜನಶೀಲ ಕವಿ, ಅವರು ಸ್ನೇಹಪರರು ಮತ್ತು ಮೃದು ಸ್ವಭಾವದವರು. ಗುರು ಶಿಷ್ಯರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಸಮ್ಮೇಳನಗಳಲ್ಲಿ ಒಟ್ಟಿಗೆ ಭಾಗವಹಿಸಿದವರು. ಒಬ್ಬರ ಕವಿತೆಯನ್ನು ಇನ್ನೊಬ್ಬರು ಮೆಚ್ಚಿಕೊಂಡವರು. ಕಾಲಕ್ರಮೇಣ ಎಚ್ಚೆಸ್ವಿ ಅವರು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಪಕರಾಗಿದ್ದಾಗ ನಾವು ವಾಸವಾಗಿದ್ದ ಬನಶಂಕರಿ ಎರಡನೆಹಂತದ ೧೮ನೇ ಮುಖ್ಯ ರಸ್ತೆಯಲ್ಲಿ, ಪಕ್ಕದಲ್ಲೇ ಅವರೂ, ಮಡದಿ ರಾಜಲಕ್ಷ್ಮಿ ಮತ್ತು ಮಕ್ಕಳ ಜೊತೆ ಒಂದು ಬಾಡಿಗೆ ಮನೆಯಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ವಾಸವಾಗಿದ್ದರು. ಗುರು ಶಿಷ್ಯರು ಸಾಹಿತ್ಯ ಸಮ್ಮೇಳನಗಳ ನಡುವೆ ಹಲವಾರು ಪ್ರವಾಸವನ್ನು ಕೈಗೊಳ್ಳುತ್ತಿದ್ದರು, ಕೆಲವೊಮ್ಮೆ ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಸೂರ್ಯದಯವನ್ನು ಒಟ್ಟಿಗೆ ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ಎಚ್ಚೆಸ್ವಿ ಏನಾದರೂ ಹರಟೆಗೆ ತೊಡಗಿದರೆ, ಜಿ ಎಸ್ ಎಸ್ ಅವರು 'ಶುಶ್ ಸುಮ್ಮನಿರಿ ಸೂರ್ಯೋದಯವನ್ನು ನಿಶಬ್ದದಲ್ಲಿ ನೋಡೋಣ' ಎನ್ನುತ್ತಿದ್ದರಂತೆ! (ಇದರ ಬಗ್ಗೆ ಎಚ್ಚೆಸ್ವಿ ಅವರು ಒಂದು ಕಡೆ ಬರೆದಿದ್ದಾರೆ) ವಾಕಿಂಗ್ ಬಳಿಕ ಗುರು ಶಿಷ್ಯರು ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿ ಮಸಾಲೆ ದೋಸೆ ಕಾಫಿ ಸವಿದು ಬರುತ್ತಿದ್ದರು. ಜಿ ಎಸ್ ಎಸ್ ಅವರೇ ವಿದ್ಯಾರ್ಥಿಭವನದ ಬಿಲ್ಲು ಕಟ್ಟುತ್ತಿದ್ದರೆಂದು ಎಚ್ಚೆಸ್ವಿ "ಬಿಲ್ಲೋಜ ಜಿ ಎಸ್ ಎಸ್ " ಎಂಬ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಾರಸ್ಯಕರವಾದ ಸಂಗತಿ ಎಂದರೆ ಗುರು ಶಿಷ್ಯರಿಬ್ಬರೂ ತಮ್ಮ ಪತ್ನಿಯರಿಗೆ ವಿದ್ಯಾರ್ಥಿ ಭವನಕ್ಕೆ ಹೋಗುತ್ತಿದ್ದೇವೆ ಎಂಬ ಸುಳಿವು ಕೊಡುತ್ತಿರಲಿಲ್ಲವಂತೆ. (ಹೋಟೆಲ್ಗೆ ಹೋಗಿ ಯಾಕೆ ತಿನ್ನ ಬೇಕು ಕೇಳಿದ್ದರೆ ಮನೆಯಲ್ಲೇ ಮಾಡಿಕೊಡುತ್ತಿದ್ದೆವಲ್ಲ ಎಂಬ ಮಡದಿಯ ಆಕ್ಷೇಪಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ) ನಮ್ಮ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಗೆ ಮಾವಿನ ಹಣ್ಣಿನ ಸೀಸನ್ ಮಧ್ಯದಲ್ಲಿ ಅಪ್ಪ, ಅವರ ಆತ್ಮೀಯ ಸಾಹಿತಿ ಮಿತ್ರರನ್ನು ಹೋಳಿಗೆ ಸೀಕರಣೆ ಊಟಕ್ಕೆ ಆಹ್ವಾನಿಸುತ್ತಿದ್ದರು, ಅದರಲ್ಲಿ ಎಚ್ಚೆಸ್ವಿ ಅವರು ಇದ್ದೇ ಇರುತ್ತಿದ್ದರು. ಅಪ್ಪ ಶುರುವಿನಲ್ಲಿ ಎಚ್ಚೆಸ್ವಿ ಅವರಿಗೆ ಹೇಗೆ ಹೋಳಿಗೆಗೆ ತುಪ್ಪಕಲೆಸಿ ನಂತರ ಸೀಕರಣೆಯನ್ನು ಕಿವುಚಿ ಒಂದು ಹದದಲ್ಲಿ ಮಿಕ್ಸ್ ಮಾಡಿ ತಿನ್ನಬೇಕು ಎಂಬುದನ್ನು ತಿಳಿಸಿಕೊಟ್ಟದ್ದನ್ನು ಎಚ್ಚೆಸ್ವಿ ತಮ್ಮ ಒಂದು ಬರಹದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಗುರು ಶಿಷ್ಯರಿಬ್ಬರು ತಮ್ಮ ಕೃತಿಗಳನ್ನು ಪರಸ್ಪರ ವಿಮರ್ಶೆ ಮಾಡಿದ್ದಾರೆ. ಎಚ್ಚೆಸ್ವಿ ಅವರು 'ಜಿ ಎಸ್ ಎಸ್ ಬದುಕು ಬರಹ' ಎಂಬ ವಿಮರ್ಶೆ ಕೃತಿಯನ್ನು ೨೦೧೨ರಲ್ಲಿ ಪ್ರಕಟಿಸಿದ್ದಾರೆ. 'ಎಚ್ಚೆಸ್ವಿ ಸಮಗ್ರ ಕವಿತೆಗಳು' ಎಂಬ ಬೃಹತ್ ಕೃತಿಯನ್ನು ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಅರ್ಪಣೆಮಾಡಿರುವುದು ಆ ಗುರು ಶಿಷ್ಯರ ಅನ್ಯೋನ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಿ ಎಸ್ ಎಸ್ ಅವರೂ ಎಚ್ಚೆಸ್ವಿ ಅವರ ಕೃತಿಗಳನ್ನು ಕುರಿತು ಅನೇಕ ಬರಹಗಳನ್ನು ಬರೆದಿದ್ದಾರೆ.
ವಾರಾಂತ್ಯ ಹತ್ತುಗಂಟೆಯ ನಂತರ ಎಚ್ಚೆಸ್ವಿ ನಮ್ಮ ಮನೆ ಬಾಗಿಲು ಬಡಿದಾಗ ನಾನು ಅಥವಾ ಅಮ್ಮ ಬಾಗಿಲು ತೆರದ ಕೂಡಲೇ 'ಮೇಷ್ಟ್ರು ಇದಾರ' ಎಂದು ಮುಗುಳ್ನಗುತ್ತಿದ್ದರು, 'ಬನ್ನಿ ಒಳಗೆ' ಎಂದಾಗ ಅವರು ನೇರವಾಗಿ ಅಪ್ಪನ ಲೈಬ್ರರಿ/ಸ್ಟಡಿ ಕೋಣೆಯೊಳಗೆ ಕೂತು ಅಪ್ಪನನ್ನು ಭೇಟೆಯಾಗುತ್ತಿದ್ದರು. ಈ ಗುರು ಶಿಷ್ಯರು ಗಂಟೆಗಟ್ಟಲೆ ಸಾಹಿತ್ಯ ಸಂವಾದದಲ್ಲಿ ತೊಡಗುತ್ತಿದ್ದರು. ಕೆಲವೊಮ್ಮೆ ಇವರ ಜೊತೆ ಸಿ ಅಶ್ವಥ್, ಸುಮತೀನ್ದ್ರ ನಾಡಿಗ, ಎಚ್ ಎಸ್ ರಾಘವೇಂದ್ರ ರಾವ್ ಮತ್ತಿತರು ಬಂದು ಸೇರಿಕೊಳ್ಳುತ್ತಿದ್ದರು. ಸಂವಾದ ಮುಗಿದನಂತರ ನಾನು ವೆರಾಂಡದಲ್ಲಿ ಅಥವಾ ಅಂಗಳದ ಗೇಟು ಹಾಕಲು ಬಂದಾಗ ಡಾಕ್ಟ್ರೇ ಹೇಗಿದ್ದೀರಾ, ಕ್ಲಿನಿಕ್ ಹೇಗೆ ನಡೀತಾಯಿದೆ ಇತ್ಯಾದಿ ಸಾಹಿತ್ಯದ ಆಚೆಯ ಮಾತುಗಳನ್ನು ಆಡುತ್ತಿದ್ದರು. ಯೌವ್ವನದಲ್ಲಿ ನನ್ನ ವೈದ್ಯಕೀಯ ವೃತ್ತಿ ನನ್ನನ್ನು ಆವರಿಸಿಕೊಂಡಿದ್ದು ನನಗೆ ಸಾಹಿತ್ಯದ ಬಗ್ಗೆ ಗಮನ ಕೊಡಲು ಸಮಯದ ಅವಕಾಶವೇ ಇರಲಿಲ್ಲ, ಸಾಹಿತ್ಯಾಸಕ್ತಿ ಹಿಂದೆಯೇ ಉಳಿದಿದ್ದ ಕಾಲವದು. ನಾನು ಮತ್ತು ಎಚ್ಚೆಸ್ವಿ ಸಾಹಿತ್ಯ ಸಂವಾದಕ್ಕೆ ತೊಡಗಿದ್ದು ನಾನು ಇಂಗ್ಲೆಂಡಿಗೆ ಬಂದಮೇಲೆ ಎನ್ನ ಬಹುದು. ಆ ಕಾಲಕ್ಕೆ ನನಗೆ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿತ್ತು, ಓದಲು ಬರೆಯಲು ಸಮಯ ಮತ್ತು ಅವಕಾಶ ಎರಡು ದಕ್ಕಿದ್ದವು.
ಅಂದಹಾಗೆ ನನಗೆ ಎಚ್ಚೆಸ್ವಿ ಅವರ ಸಾಹಿತ್ಯ ಪರಿಚಯವಾದದ್ದು ಸುಗಮ ಸಂಗೀತದ ಮೂಲಕವೇ. ನನಗೆ ಅವರು ಹೆಚ್ಚು ಹತ್ತಿರವಾದದ್ದು ನಾನು ಕನ್ನಡದಲ್ಲಿ ಕವನಗಳನ್ನು ಪ್ರಬಂಧಗಳನ್ನು ರಚಿಸಲು ಶುರುವಾದಾಗ. ಈ ವೇಳೆಗೆ ಅಪ್ಪ ತೀರಿಕೊಂಡಿದ್ದರು. ಎಚ್ಚೆಸ್ವಿ ಅವರು ಇಂಗ್ಲೆಂಡಿಗೆ ಕನ್ನಡ ಬಳಗದ ಆಹ್ವಾನದ ಮೇರೆಗೆ ಇಲ್ಲಿ ಬಂದಾಗ ನಮ್ಮ ಬಾಂಧವ್ಯ ಹೆಚ್ಚಾಯಿತು. ನಾನು ಬೆಂಗಳೂರಿಗೆ ಹೋದಾಗ ಎಚ್ಚೆಸ್ವಿ, ಬಿ ಆರ್ ಲಕ್ಷ್ಮಣ ರಾವ್, ಡುಂಡಿರಾಜ್, ಜೋಗಿ ಇವರೊಡನೆ ಅನೇಕ ಕ್ಲಬ್ ಮತ್ತು ಹೋಟೆಲಿನಲ್ಲಿ ಭೋಜನ ಕೂಟಗಳಲ್ಲಿ ಒಡನಾಡುವ ಅವಕಾಶ ಒದಗಿ ಬಂತು. ವಿಸ್ಕಿ ಸೇವೆನಯಲ್ಲೂ ಎಚ್ಚೆಸ್ವಿ ಮಿತವಾಗಿ ಒಂದು ಪೆಗ್ ಸೇವಿಸಿ ನಂತರ ಎರಡನೇ ಪೆಗ್ಗಿಗೆ ಒತ್ತಾಯಿಸಿದಾಗ ಬೇಡವೆಂದು ‘ನನ್ನದು ಅದ್ವೈತ ಫಿಲಾಸಫಿ’ ಎಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದರು. ಎಚ್ಚೆಸ್ವಿ ಉತ್ತಮ ವಾಗ್ಮಿಗಳು, ಸಾಮಾನ್ಯವಾಗಿ ಅವರು ಸಭೆಗಳಲ್ಲಿ ಸುಮಾರು 15-20 ನಿಮಿಷಕ್ಕಿಂತ ಹೆಚ್ಚು ಮಾತನಾಡಿದ್ದನ್ನು ನಾನು ಕೇಳಿಲ್ಲ. ಆ ಮಿತವಾದ ಭಾಷಣದಲ್ಲಿ ಸರಳತೆ, ಸ್ಪಷ್ಟತೆ, ಪದಗಳ ಬಳಕೆ ಮತ್ತು ವಿಚಾರಗಳು ಸೊಗಸಾಗಿರುತ್ತಿತ್ತು. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಸಾಲುಗಳು ನೆನಪಿಗೆ ಬರುತ್ತಿತ್ತು.
ನಾನು ಬರೆಯಲು ಶುರುಮಾಡಿದಾಗ ನನ್ನ ಕೋರಿಕೆಯ ಮೇಲೆ ಎಚ್ಚೆಸ್ವಿ ನನ್ನ ಎಲ್ಲ ಬರಹಗಳನ್ನು ಓದಿ, ಸೂಕ್ತ ಸಲಹೆಗಳನ್ನು ನೀಡಿ, ಪ್ರಕಟಿಸಲು ಉತ್ತೇಜನ ನೀಡುತ್ತಿದ್ದರು. ನನ್ನ ಚೊಚ್ಚಲ ಕವನ ಸಂಕಲನ 'ಇಂಗ್ಲೆಂಡಿನಲ್ಲಿ ಕನ್ನಡಿಗ' ಕೃತಿಗೆ ಮುನ್ನುಡಿಯನ್ನು ಬರೆದು, ನನ್ನ ‘ಪಯಣ’ ಕಾದಂಬರಿಗೆ ಬೆನ್ನುಡಿಯನ್ನು ಕೂಡ ಬರೆದುಕೊಟ್ಟರು. ನಾನು ಒಂದು ರೀತಿ ಅವರ ಶಿಷ್ಯನೂ ಹೌದು. ಅವರಿಗೆ ಕಾಣಿಕೆಯಾಗಿ ನನ್ನ ಇತ್ತೀಚಿನ 'ಮೊನಾಲೀಸಾ' ಎಂಬ ಕವನ ಸಂಕಲನವನ್ನು ಅವರಿಗೆ ಅರ್ಪಿಸಿದ್ದೇನೆ. ಎಚ್ಚೆಸ್ವಿ ಅವರು ಶೆಫೀಲ್ಡ್ ನಗರಕ್ಕೆ ಆಗಮಿಸಿ ಯುಕೆ ಕನ್ನಡ ಬಳಗದ ಆಶ್ರಯದಲ್ಲಿ ನಡೆದ 2013 ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅನಿವಾಸಿ ಸಾಹಿತ್ಯ ಅಂಗದ ಉದ್ಘಾಟನೆ ಮಾಡಿದ್ದನ್ನು ನಾನು ಸ್ಮರಿಸುತ್ತೇನೆ. ಈ ಸಾಹಿತ್ಯ ಅಂಗ ಈಗ ಎತ್ತರಕ್ಕೆ ಬೆಳದಿದೆ. ಆ ಸಂದರ್ಭದಲ್ಲಿ ಎಚ್ಚೆಸ್ವಿ ಅವರು ‘ಬೆಂಗಳೂರಿಗಿಂತ ಇಲ್ಲಿ ಹೆಚ್ಚು ಕನ್ನಡ ಕೇಳಿ ಬರುತ್ತಿದೆ’ ಎಂದು ಮಾತನಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಆ ವಿಚಾರ ನಮ್ಮ ಯುಕೆ ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ವಿಷಯ. ನನ್ನ ಮತ್ತು ಎಚ್ಚೆಸ್ವಿ ನಡುವಿನ ವಾಟ್ಸ್ ಆಪ್ ಸಂದೇಶಗಳನ್ನು ನೆನೆದು ಕೆಳಗೆ ಹಂಚಿಕೊಳ್ಳುತ್ತಿದ್ದೇನೆ. ಸಂದರ್ಭ; ನನ್ನ ‘ಪಯಣ’ ಎಂಬ ಕಾದಂಬರಿ ತಯಾರಾಗುತ್ತಿದ್ದ ಸಮಯ.
"ಪ್ರಿಯ ಡಾ.ಪ್ರಸಾದ್ ನಿಮ್ಮ ಕಾದಂಬರಿಯನ್ನು ಒಂದೇ ಪಟ್ಟಿನಲ್ಲಿ ಓದಿ ಆನಂದಿಸಿದೆ. ಇನ್ನು ನೀವು ವೈದ್ಯಕೀಯದೊಂದಿಗೆ ಸಾಹಿತ್ಯ ಕೃಷಿ ಯಲ್ಲೂ ತೊಡಗಬೇಕು. ಲೀಲಾ ಜಾಲವಾಗಿ, ಎಲ್ಲೂ ಓದುಗರ ಆಸಕ್ತಿ ಕುಂದದಂತೆ ಕಥೆಯನ್ನು ನಿರೂಪಿಸಿದ್ದೀರಿ. ನಾಯಿಯು ಇಲ್ಲಿ ನಮಗೆಲ್ಲ ಆಪ್ತವಾಗುತ್ತದೆ. ಅದರ ನೋವು ನಮ್ಮ ನೋವಾಗುತ್ತದೆ. ಮಕ್ಕಳಿಗೆ ನಾಯಿ ಯಾಕೆ ಪ್ರಿಯವಾಗುತ್ತದೆ ಎಂಬುದು ನನಗೆ ಈಗ ಮನದಟ್ಟಾಯಿತು. ಮುಗ್ಧತೆ ಮತ್ತು ಸಹಜ ಪ್ರೀತಿ ಎರಡು ಜೀವಕ್ಕೂ ಸಮಾನ. ಸಿನಿಮಾಕ್ಕೆ ಲಾಯಕ್ಕಾಗಿದೆ. ಸಿನಿಮೀಯ ಎನ್ನಿಸದು. ಇದೊಂದು ಲೋಕಪ್ರೀತಿಯ ಸಹಜ ಕಲಾಕೃತಿ"
"ಧನ್ಯವಾದಗಳು ಎಚ್ಚೆಸ್ವಿ ತುಂಬಾ ಖುಷಿಯಾಯಿತು. ಈ ಕೃತಿಗೆ ‘ಸಾರ್ಥಕ ಪಯಣ’ ಎಂಬ ಹೆಸರನ್ನು ಆಯ್ಕೆ ಮಾಡಿರುವೆ"
" ಹೆಸರು ತುಂಬಾ ಗದ್ಯಮಯ. ಯಾನ…ಅಷ್ಟೇ ಸಾಕು. ಅಥವಾ ಪಯಣ ಎಂದು ಇಡಬಹುದು"
“ಪಯಣ ಬಹುಶಃ ಸೂಕ್ತವಾಗಿರಬಹುದು. ‘ಯಾನ’ ಎನ್ನುವ ಹೆಸರಲ್ಲಿ ಭೈರಪ್ಪನವರ ಕಾದಂಬರಿ ಇದೆ. ನನ್ನ ಈ ಕಥೆ ಸರಳವಾಗಿರಬಹುದು"
"ಸರಳತೆ ಗುಣವೋ ದೋಷವೋ ಎಂಬ ವಾಗ್ವಾದ ಇನ್ನೂ ಬಗೆಹರಿದಿಲ್ಲ...!"
ಎಚ್ಚೆಸ್ವಿ ಅವರ ಹಲವಾರು ಬರಹಗಳಲ್ಲಿ, ಮಾತುಗಳಲ್ಲಿ ಸರಳತೆ ಇದ್ದುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕಥೆ, ಕವನ ಸಂಕೀರ್ಣವಾಗಿರಬೇಕು, ಆಗ ಅದಕ್ಕೆ ಹೆಚ್ಚು ಬೆಲೆ, ಸರಳತೆ ಒಂದು ದೋಷ ಎಂಬ ನನ್ನಲ್ಲಿದ್ದ ಕಲ್ಪನೆಯ ಹಿನ್ನೆಲೆಯಲ್ಲಿ ಅವರ ಮಾತುಗಳು ಅರ್ಥಪೂರ್ಣವಾಗಿ ತೋರಿದವು. ಸರಳವಾಗಿ ಬರೆಯುವುದೂ ಒಂದು ಕಲೆ ಎಂಬ ಆಲೋಚನೆ ಮೂಡಿಬಂತು. ಎಚ್ಚೆಸ್ವಿ ಅವರು ಬಹಳ ಶ್ರದ್ಧಾವಂತರು. ಅವರು ಶೇಫಿಲ್ಡ್ ನಗರದ ನಮ್ಮ ಮನೆಯಲ್ಲಿ ಒಂದು ವಾರ ತಂಗಿದ್ದಾಗ ‘ಶೆಫೀಲ್ಡ್ ಕವಿತೆಗಳು’ ಎಂಬ ನೀಳ್ಗವನದ ರಚನೆಯಲ್ಲಿ ತೊಡಗಿದ್ದರು. ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕುಳಿತು, ತೀಕ್ಷ್ಣ ಕವಿಸಮಯದಲ್ಲಿ ಮೂಡಿತ್ತಿದ್ದ ಸಾಲುಗಳನ್ನು ದಾಖಲಿಸುತ್ತಿದ್ದರು. ಮುಂದಕ್ಕೆ ‘ಶೆಫೀಲ್ಡ್ ಕವಿತೆಗಳು’ ಎಂಬ ಕೃತಿಯನ್ನು ಅವರು ಹೊರತಂದರು. ಆ ಕೃತಿಯನ್ನು ಕುರಿತು ‘ಎಚ್ಚೆಸ್ವಿ ಅವರ ಶೇಫಿಲ್ಡ್ ಕವಿತೆಗಳ ಬಗ್ಗೆ ಶೆಫೀಲ್ಡ್ ನಿವಾಸಿಯ ಅನಿಸಿಕೆಗಳು’ ಎಂಬ ಬರಹವನ್ನು ನಾನು ‘ಸಮಾಹಿತ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಎಚ್ಚೆಸ್ವಿ ಅವರು ಫೋನ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಆ ಕೃತಿಯನ್ನು ನನಗೆ ಮತ್ತು ನನ್ನ ಶ್ರೀಮತಿ ಪೂರ್ಣಿಮಾಗೆ ಅರ್ಪಣೆಮಾಡಿದ್ದು ಅದು ನನಗೆ ಅತ್ಯಂತ ಗೌರವದ ವಿಷಯ. * ~ ಡಾ ಜಿ ಎಸ್ ಪ್ರಸಾದ್
ಎಚ್ಚೆಸ್ವಿಯವರ ಸಂದರ್ಶನ
ಸಂದರ್ಶಕಿ – ಡಾ. ಪ್ರೇಮಲತಾ
‘ ಉರಿಯ ಉಯ್ಯಾಲೆ’ಯ ಆಯ್ದ ಭಾಗಗಳು
~ ಚಿನ್ಮಯಿ
~ ಅಕ್ಷತಾ
ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿಮಗೆ?
“ ಕಥೆ ಮುಗಿಯುವಾಗ ಚಡಪಡಿಕೆ ಪಾತ್ರಕ್ಕಷ್ಟೇ. ಕೃತಿ ಮುಗಿದ ತೃಪ್ತಿ ಬರೆದವಗೆ. ಇಷ್ಟು ದಿನ ಎಡೆಬಿಡದೇ ಬರೆದ ಬೆರಳಿಗೆ ಬಿಡುವು. ಹೊರೆ ಇಳಿದ ಗೆಲುವು ಮುಖದೊಳಗೆ.” ( ಒಂದು ಕಥೆ – ಉತ್ತರಾಯಣ ಮತ್ತು...) HSV ಹೋದರಂತೆ.. ಎಂಬ ಸುದ್ದಿ ಕೇಳಿದಾಗಿನಿಂದ ಅದೇನೋ ನನ್ನ ಮನದ ಭಾವಗಳೆಲ್ಲ ಹೆಪ್ಪುಗಟ್ಟಿದಂಥ ಅನುಭವ. ಎರಡಕ್ಷರದ ಶ್ರದ್ಧಾಂಜಲಿಯನ್ನೂ ಬರೆಯಲಾಗದ ಭಾವ ಜಡತೆ. ಬರೆದು ಮುಗಿಸಿಬಿಟ್ಟರೆ ಅದೆಲ್ಲಿ ಕವಿಯೊಡನೆಯ ಕೊನೆಯ ಋಣವೂ ಹರಿದುಕೊಂಡು ಬಿಡುತ್ತದೋ ಎನ್ನುವ ತಳಮಳ..ಆತಂಕ. ಬರೆಯದೇ ಹೋದರೆ ಅತೀ ಮಹತ್ವದ ಕಾರ್ಯವನ್ನೇನೋ ಬೇಕೆಂದೇ ಅಲಕ್ಷ್ಯ ಮಾಡುತ್ತಿರುವ ಚಡಪಡಿಕೆ..ಅಪರಾಧೀ ಭಾವ. ಅಂತೂ ಕೊನೆಗೂ ಪ್ರೀತಿಯ ಕಣ್ಣ ಕಂಬನಿಯಷ್ಟೇ ಅವರಿಗೆ ನಾವು ನೀಡಬಹುದಾದ ಕಾಣಿಕೆ. ಜೀವ-ಜೀವನ ಪ್ರೀತಿ, ಜಗದ ಚೆಲುವು- ಒಲವು, ಅತೀ ಸೂಕ್ಷ್ಮ ಅಷ್ಟೇ ಬಲವತ್ತರವಾದ ಮಾನವ ಭಾವಲೋಕದ ಅನಾವರಣ, ತಾಳುವಿಕೆ, ಒಗ್ಗುವಿಕೆ ತನ್ಮೂಲಕ ಮಾಗುವಿಕೆ ಈ ಕವಿಯ ಸಾಹಿತ್ಯದ ಮುಖ್ಯ ಪ್ರತಿಪಾದನೆಗಳು. ಈ ಜೀವ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಗೂ ಇವರು ಕಿವಿಯಾಗುತ್ತಾರೆ; ಕಣ್ಣಾಗುತ್ತಾರೆ; ದನಿಯಾಗುತ್ತಾರೆ; ಹಾಡಾಗುತ್ತಾರೆ. ‘ಶ್ರೀ ಸಂಸಾರಿ’ಯ ಶ್ರೀರಾಮಚಂದ್ರನನ್ನು, ‘ ಆಪ್ತ ಗೀತೆ’ ಯ ಶ್ರೀಕೃಷ್ಣನನ್ನು, ‘ ಬುದ್ಧ ಚರಣದ’ ತಥಾಗತನನ್ನು ಎಷ್ಟು ಮಣ್ಣಿನ ಮಕ್ಕಳನ್ನಾಗಿ ಮಾಡಿ ಮರ್ತ್ಯರಾದ ನಮಗೆ ಅವರೆಲ್ಲರನ್ನು ಅತ್ಯಾಪ್ತರಾಗಿಸುತ್ತಾರೆ.ಧನುರ್ಧಾರಿ ರಾಮನ ಹೆಗಲಮೇಲಿನ ಬಿಲ್ಲು-ಬಾಣ ಕೆಳಗಿಳಿಸಿ ಅಲ್ಲೊಂದು ಪುಟ್ಟ ಅಳಿಲನ್ನು ಕೂಡಿಸುತ್ತಾರೆ. ರಾಜಸೇವೆಗಷ್ಟೇ ಮಿಗಿಲಾದ ‘ ಪುಷ್ಪಕ’ ದಲ್ಲಿ ವಾನರ – ಭಲ್ಲೂಕಾದಿಗಳಿಗೂ ಸೀಟು ಕೊಡಿಸಿಬಿಡುತ್ತಾರೆ. ಗೊಲ್ಲರ ಹುಡುಗ ‘ ಯಾದವ’, ‘ಕಾದವ’, ‘ ಸೇವಕ’ , ಶ್ರಾವಕ’ ನಾದ ಕಥೆ ಬಣ್ಣಿಸುತ್ತಾರೆ. ಲೋಕದ ಕಣ್ಣಿಗೆ ಕೇವಲ ಹೆಣ್ಣಾದ ರಾಧೆಯನ್ನು ಕೃಷ್ಣನನ್ನು ಕಾಣಿಸುತ್ತಾರೆ. ದ್ರೌಪದಿ, ಪೃಥೆ, ಮಂಥರೆ, ಊರ್ಮಿಳೆಯರ ಎದೆಯಾಳಕ್ಕಿಳಿದು ಮಂಥನ ನಡೆಸುತ್ತಾರೆ; ಹೃದಯ ಸಮುದ್ರದ ಹಾಲಾಹಲ - ಸುಧಾರಸಗಳನ್ನು ಹೊರ ಚೆಲ್ಲುತ್ತಾರೆ. “ ಕೊಂದವನದಲ್ಲ ಕಾದವನದ್ದು ಹಕ್ಕಿಯ ಹಕ್ಕು” ಎಂದು ಹೇಳಿ ಬುದ್ಧನ ಶಾಂತಿ- ಕರುಣೆಗಳಲ್ಲಿ ಮನ ತೊಯ್ಯಿಸುತ್ತಾರೆ. “ ತಾನು ಕರಗದೇ ಮಳೆ ಸುರಿಸುವುದೇ ಶ್ರಾವಣದ ಸಿರಿ ಮುಗಿಲು?”, ‘ ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ’, ‘ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ’, ‘ತಾನೇ ಕಡಲಾಗಲು ಹೊರಟ ಗಂಗೆಗೆ ಆಣೆಕಟ್ಟು ಕಟ್ಟುವರಾರು?’, ‘ ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೇ? ‘....ಎಂಥೆಂಥ ಅದ್ಭುತ ಸಾಲುಗಳನ್ನವರು ಕೊಟ್ಟಿದ್ದು..ಪಟ್ಟಿ ಮಾಡುತ್ತ ಹೋದರೆ ಬೆಳಗಾಗುತ್ತದೆ. ಅವರ ಜೀವನ ಹಾಗೂ ಕೃತಿಗಳ ಕಿರುಪರಿಚಯ ಇಂತಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ. ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್ ಆಗಿ ಉದ್ಯೋಗ ಆರಂಭಿಸಿದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಗಳಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). ಮಹಾಕಾವ್ಯ: ಬುದ್ಧ ಚರಣ ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ). ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು). ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು. ಎಚ್.ಎಸ್. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಕವಿಯ ಭೌತಿಕ ಶರೀರಕ್ಕೆ ಮಾತ್ರ ಕೊನೆ ಯಶ: ಕಾಯಕ್ಕಲ್ಲ ಎನ್ನುವುದು ಸರ್ವವಿದಿತ . ಅಕ್ಷರಗಳ ಅಕ್ಷಯವಾದ ಅಪೂರ್ವ ನಿಧಿಯನ್ನು ನಮಗಾಗಿ ಬಿಟ್ಟು ಹೋದ ನೆಚ್ಚಿನ ಕವಿಗೆ ಅಶ್ರುಪೂರ್ಣ ಭಾವನಮನ. “ ಮುಳುಗಿದರೆ ಮುಳುಗಬೇಕೀ ರೀತಿ ಹತ್ತು ಜನ ನಿಂತು ನೋಡುವ ಹಾಗೆ.. ಗೌರವ ಬೆರೆತ ಬೆರಗಲ್ಲಿ. ಸೂರ್ಯ ಮುಳುಗುವ ಮುನ್ನ, ಓಡೋಡಿ ಬರುವ ಜನ ಕೈ ಮುಗಿವ ಹಾಗೆ ಮುಳುಗಲ್ಲಿ ಮುಳುಗಿ” ( ಆಗುಂಬೆಯ ಸೂರ್ಯಾಸ್ತ ). ಓಂ ಶಾಂತಿರಸ್ತು ~ ಗೌರಿಪ್ರಸನ್ನ