ನನ್ನ ಗೋಪಣ್ಣ – ಡಾ ಅರವಿಂದ ಕುಲಕರ್ಣಿ ಬರೆದ ಶ್ರದ್ಧಾಂಜಲಿ

gopal kulkarni
ಡಾ ಗೋಪಾಲ ಕುಲಕರ್ಣಿ (೧೦/೦೫/೧೯೩೦ – ೧೮/೦೫/೨೦೧೬)

ನನ್ನ ಪ್ರೀತಿಯ ಗೋಪಣ್ಣ ದಿನಾಂಕ ೧೮-೦೫-೨೦೧೬ರಂದು ಪುಣೆಯಲ್ಲಿ ನಿಧನರಾದರೆಂದು ತಿಳಿಸಲು ಅಪಾರ ದುಃಖವಾಗುತ್ತದೆ.

ಗೋಪಾಲ ಮತ್ತು ಅಮರಜಾ ಕುಲಕರ್ಣಿ ದಂಪತಿಗಳು `ಕನ್ನಡ ಬಳಗ (ಯು.ಕೆ)`ದ ಸಂಸ್ಥಾಪಕ ಕುಟುಂಬಗಳಲ್ಲಿ ಒಬ್ಬರು. ಡೊಂಕ್ಯಾಸ್ಟರಿನಲ್ಲಿದ್ದ ಅವರ ಮನೆಯಲ್ಲಿಯೇ `ಕನ್ನಡ ಬಳಗ`ದ ನೀಲಿನಕ್ಷೆ ರೂಪತಾಳಿತೆಂದು ದಾಖಲಾಗಿದೆ. ನಂತರದ ೧೯೮೪ರ ಕಾರ್ಯಕಾರಿ ಸಮಿತಿಯಲ್ಲಿ ಸೇರಿ ಹುಮ್ಮಸ್ಸಿನಿಂದ ಮನಮುಟ್ಟಿ ದುಡಿದು ನಿಸ್ವಾರ್ಥ ಸೇವೆಗೈದಿದ್ದನ್ನು ಪ್ರತ್ಯಕ್ಷ ಕಂಡಿದ್ದೇನೆ. ಎಲ್ಲ `ಕನ್ನಡ ಬಳಗ`ದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲುಗೊಳ್ಳುತ್ತಿದ್ದರಲ್ಲದೇ, ಧಾರ್ಮಿಕ ಸಂಪ್ರದಾಯದಲ್ಲಿ ಅಪಾರ ಶ್ರದ್ಧೆಯಿದ್ದದ್ದರಿಂದ ಬಳಗದ ಪ್ರಾರಂಭದ ದಿನಗಳಲ್ಲಿ ಯುಗಾದಿ, ದೀಪಾವಳಿ ಹಬ್ಬದ ಕಾರ್ಯಕ್ರಮಗಳು ಅವರು ನಿರ್ವಹಿಸಿದ ಸಾಂಪ್ರದಾಯಿಕ ಪೂಜೆಗಳಿಂದಲೇ ಆರಂಭವಾಗುತ್ತಿದ್ದವು. ೧೯೮೮ರಲ್ಲಿ ಕನ್ನಡ ಬಳಗವು ಮ್ಯಾಂಚಸ್ಟರಿನಲ್ಲಿ ಪ್ರಪ್ರಥಮ ಕನ್ನಡ ವಿಶ್ವಸಮ್ಮೇಳನವನ್ನು ಯಶಸ್ವಿಯಾಗಿ ಆಚರಿಸಿತು. ಅದರಲ್ಲಿ ಸ್ವಯಂಸೇವಕನಾಗಿ ಪಾಲ್ಗೊಂಡು ಮಾಡಿದ ಕೆಲಸ, ಸಲಹೆ, ಸಹಕಾರ ನಾನಂತೂ ಮರೆತಿಲ್ಲ.

ಅಲಕನೂರು ಅಥಣಿ ಪಟ್ಟಣದ ಪಕ್ಕದಲ್ಲಿಯ ಒಂದು ಹಳ್ಳಿ. ಅಲ್ಲಿಯೇ ಅವರ ಹುಟ್ಟು. ಪೋಷಣೆ ಮತ್ತು ಶಿಕ್ಷಣಕ್ಕೆ ಸೌಲಭ್ಯ ಒದಗಿಸಿಕೊಟ್ಟ ಅವರ ಅಣ್ಣನನ್ನು ದೇವರಂತೆ ಅವರು ಸದಾ ನೆನೆಯುತ್ತಿದ್ದರು. ಮುಂದೆ ಅಹಮದಾಬಾದಿನಲ್ಲಿ ವೈದ್ಯಕೀಯ ಶಿಕ್ಷಣ. ಎಂಬಿಬಿಎಸ್ ಎಂಡಿ ಡಿಗ್ರಿ ಗಳಿಸಿ ಬೆಳಗಾವಿಯಲ್ಲಿ ಕಾರ್ಡಿಯಾಲಾಜಿ ಕನ್ಸಲ್ಟಂಟಾಗಿ ವೈದ್ಯಕೀಯ ವ್ಯವಸಾಯ ಪ್ರಾರಂಭಿಸಿದರು. ಅದರ ಜೊತೆಗೆ ಸಿವಿಲ್ ಆಸ್ಪತ್ರೆಯಲ್ಲಿ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ಹೆಸರುಗಳಿಸಿದರು. ೧೯೭೬ರಲ್ಲಿ ಮೊದಲ ಬಾರಿಗೆ ಅವರು ಇಂಗ್ಲಂಡಿಗೆ ಬಂದಾಗಿನಿಂದ ಅವರ ನನ್ನ ಕುಟುಂಬಗಳ ಮಧ್ಯೆ ಸ್ನೇಹ, ಅಂತಃಕರಣ ಬೆಳೆದು ಗಾಢ ಸಂಬಂಧ ಬೆಸುಗೆ ಹಾಕಿತು. ನನ್ನ ಅವರ ಎರಡೂ ಕುಲಕರ್ಣಿ ಮನೆತನಗಳು ಒಂದಾದವೇನೋ ಅನ್ನುವಷ್ಟು ನಿಕಟವಾದೆವು. ವಯಸ್ಸಿನಿಂದ ಹಿರಿಯರಾಗಿದ್ದು ನನ್ನ ಮೇಲೆ ಅಣ್ಣನಂತೆ ಕೊನೆಯವರೆಗೆ ಪ್ರೀತಿಯ ಮಳೆಗೆರೆದರು. ಅವರಲ್ಲಿ ಪುಟ್ಟಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರನ್ನೂ ಚುಂಬಕದಂತೆ ಎಳೆದು ವಶೀಕರಣ ಮಾಡುವ ಗುಣವಿತ್ತು ಎಂದು ಕೇಳಿದ್ದನ್ನು ನನ್ನ ಮಿತ್ರರಿಂದಲೂ ಕೇಳಿದ್ದೇನೆ. ಅವರ ಫ್ಯಾಮಿಲಿ ಪ್ರಾಕ್ಟೀಸಿನ ರೋಗಿಗಳಲ್ಲೂ ಜನಪ್ರೀಯರಾಗಿ ಸಹೋದ್ಯೋಗಿಗಳ ಆದರಣೀಯ ಮಿತ್ರರಾಗಿ, ವೈದ್ಯಕೀಯ ವೃತ್ತಿ ಮಾಡಿ ೧೯೯೫ರಲ್ಲಿ ನಿವೃತ್ತರಾದರು. ಆಯುರ್ವೇದದ ಡಾಕ್ಟರಾದ ಅವರ ಪತ್ನಿ ಅಮರಜಾ ಮತ್ತು ಅವರು ಮಹಾರಾಷ್ಟ್ರದ ಪುಣೆಯಲ್ಲಿ ಡಾಕ್ಟರ್ ವೃತ್ತಿಯಲ್ಲಿದ್ದ ತಮ್ಮ ಹಿರಿಯ ಮಗನನ್ನು ಸೇರಿದರು. ಅಲ್ಲಿಯೂ ನಿವೃತ್ತ ಎನ್.ಆರ್.ಐ ಸಂಘಟನೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

ಮೊದಲಿನಿಂದಲೂ ಮರಾಠಿ ಭಾಷೆ, ಮರಾಠಿ ಸಂಪರ್ಕವಿದ್ದು ದ್ವಿಭಾಷಿಯಾದರೂ ಕನ್ನಡದ ಬಗ್ಗೆ ಅವರ ಅಭಿಮಾನ ಎಂದೂ ಕುಂದಲಿಲ್ಲ. ಅವರಿಗೆ ಯಾವಾಗಲೂ ಸಾಂಸ್ಕೃತಿಕ, ಧಾರ್ಮಿಕ ವಿಷಯಗಳಲ್ಲಿ ಆಸ್ಥೆ ಇತ್ತು. `ಕನ್ನಡ ಬಳಗ`ದ ಸಂಸ್ಥಾಪನೆಯಾದಾಗ ಪ್ರಥಮ ೧೫ ಅಜೀವ ಸದಸ್ಯರಲ್ಲಿ ಅವರೊಬ್ಬರೆಂಬ ಹೆಗ್ಗಳಿಕೆ ಅವರದು.

ಕೊನೆಯ ದಿನಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಈ ವರ್ಷ ನಮ್ಮನಗಲಿದ ಡಾ. ಗೋಪಾಲ ಕುಲಕರ್ಣಿಯವರಿಗೆ, ಪತ್ನಿ ಮತ್ತು ಪುಣೆಯಲ್ಲಿರುವ ಮಗನಲ್ಲದೇ, ಈ ದೇಶದಲ್ಲಿ ವಾಸಿಸುವ ಇನ್ನೊಬ್ಬ ಮಗ ಮತ್ತು ಮಗಳು ಇದ್ದಾರೆ.

ನನಗೆ ಆತ್ಮೀಯರಾಗಿದ್ದ `ನನ್ನ ಗೋಪಣ್ಣ`ನ ಚೇಷ್ಟೆ ಹರಟೆ ಸದಾ ನೆನಪಾಗುತ್ತದೆ. ಅವರ ಹಸನ್ಮುಖ ಇಂದಿಗೂ ನನ್ನ ಕಣ್ಣೆದುರು ಕಾಣುತ್ತಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಕೇಳಿಕೊಳ್ಳುತ್ತೇನೆ.

The Man Who Knew Infinity- ಅನಂತದ ಒಡನಾಟದಲ್ಲಿ ಅರಳಿದ ಅಸಾಧಾರಣ ಗಣಿತ ಪ್ರತಿಭೆ ರಾಮಾನುಜನ್– ಡಾ ಉಮಾ ವೆಂಕಟೇಶ್

“Every positive integer is a friend of Ramanujan”

ಈ ಮಾತುಗಳನ್ನು ಹೇಳಿದ ವ್ಯಕ್ತಿ ಜಾನ್ ಲಿಟ್ಟಲ್ ವುಡ್, ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನಲ್ಲಿ ರಾಮಾನುಜನ್ ಜೊತೆಯಲ್ಲಿದ್ದ ಒಬ್ಬ ಪ್ರಖ್ಯಾತ ಗಣಿತಜ್ಞ.

ನಮ್ಮಲ್ಲಿ ಗಣಿತವನ್ನು ಬಲ್ಲ, ಗಣಿತದಲ್ಲಿ ಆಸಕ್ತಿಯುಳ್ಳ ಯಾರೇ ಆಗಲಿ, ಶ್ರೀನಿವಾಸ ರಾಮಾನುಜನ್ ಅವರ ಹೆಸರು ಹಾಗೂ ಆತನ ಗಣಿತದ ಪ್ರತಿಭೆಯ ಬಗ್ಗೆ ತಿಳಿಯದಿದ್ದವರು ಬಹಳ ಅಪರೂಪ. ೧೯ನೆಯ ಶತಮಾನದಲ್ಲಿ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಉತ್ತುಂಗದಲ್ಲಿ, ಭಾರತದ ದಕ್ಷಿಣದಲ್ಲಿರುವ ತಮಿಳುನಾಡಿನ ಒಂದು ಸಣ್ಣ ಪಟ್ಟಣದಲ್ಲಿ ಅರಳಿದ ಈ ಅಸಾಧಾರಣ ಗಣಿತದ ಪ್ರತಿಭೆಯೊಂದು, ಮುಂದೆ ಪೂರ್ವ-ಪಶ್ಚಿಮಗಳೆರಡನ್ನೂ ಸಮಾನವಾಗಿ ಬೆರಗುಗೊಳಿಸಿತ್ತು. ಒಬ್ಬ ಸಾಮಾನ್ಯನಾದ, ಅರ್ಥವ್ಯಾಪ್ತಿಗೆ ಸಿಲುಕದ ಮೇಧಾವಿ ರಾಮಾನುಜನ್ ಜೀವನ ವೃತ್ತಾಂತವು, ಒಂದು ನಿಗೂಢ ಹಾಗೂ ಚಮತ್ಕಾರಿಕ ಅಂತಃಸತ್ವದ ಕಥೆಯಾಗಿದ್ದು, ನನಗೆ ಅದರ ಬಗ್ಗೆ ಅಷ್ಟಿಷ್ಟು ತಿಳಿದಿತ್ತು. ೧೯೯೬ರಲ್ಲಿ ಬ್ರಿಟನ್ನಿಗೆ ಬಂದ ನಂತರ, ಒಮ್ಮೆ ನಮ್ಮ ಗೆಳೆಯರಲ್ಲಿ ಹಲವರು ತಾವು ಓದಿದ ಪುಸ್ತಕವೊಂದರ ಬಗ್ಗೆ ಒಮ್ಮೆ ಚರ್ಚೆ ನಡೆಸಿದ್ದರು. ಅವರು ಚರ್ಚಿಸುತ್ತಿದ್ದ ಆ ಪುಸ್ತಕದ ಹೆಸರೇ ನನ್ನ ಈ ಲೇಖನದ ಶೀರ್ಷಿಕೆ The Man Who Knew Infinity. ಅವರೆಲ್ಲಾ ಕೊಂಡಾಡುತ್ತಿದ್ದ ವ್ಯಕ್ತಿಯೇ, ನಾನೀಗ ವಿಶ್ಲೇಷಿಸಲಿರುವ ಚಲನಚಿತ್ರದ ನಾಯಕನೂ ಹೌದು.

Robert Kanigel CC:Wiki
Robert Kanigel CC:Wiki

ಕಳೆದ ೨೫ ವರ್ಷಗಳಿಂದ ಒಬ್ಬ ಖಭೌತಶಾಸ್ತ್ರಜ್ಞನ ಜೊತೆ ದಾಂಪತ್ಯ ನಡೆಸಿರುವ ನನಗೆ, ಗಣಿತಶಾಸ್ತ್ರದ  ಚರ್ಚೆ ಅಪರೂಪದ ವಿಷಯವೇನಲ್ಲ. ರಾಮಾನುಜನ್ ಬಗ್ಗೆ ಆಗಾಗ್ಗೆ ಹಲವಾರು ಆಸಕ್ತಿಪೂರ್ಣ ವಿಷಯಗಳನ್ನು ನನ್ನವರ ಬಾಯಲ್ಲಿ ಕೇಳುತ್ತಲೇ ಇರುತ್ತೇನೆ. ಆದರೆ ೧೯೯೧ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕದ ಲೇಖಕನಾದ ರಾಬರ್ಟ್ ಕಾನಿಗೆಲ್, ಒಬ್ಬ ಅಮೆರಿಕನ್ ಲೇಖಕ. ಈ ಪುಸ್ತಕವನ್ನು ಬರೆಯುವ ಮೊದಲು ಆತನಿಗೆ, ರಾಮಾನುಜನ್ ಬಗ್ಗೆ, ಅವನ ಸಾಧನೆಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲವಂತೆ. ಆದರೆ ಹಲವಾರು ಪುಸ್ತಕಗಳನ್ನು ಬರೆದು ಹೆಸರುವಾಸಿಯಾಗಿದ್ದ ವ್ಯಕ್ತಿ. ೧೯೮೮ರಲ್ಲಿ, ಆತ ರಾಮಾನುಜನ್ ಬಗ್ಗೆ ಓದಿ, ಕೇಳಿ ತಿಳಿದುಕೊಂಡನಂತರ, ತುಂಬಾ ಪ್ರಭಾವಿತನಾಗಿ ರಾಮಾನುಜನ್ ಜೀವನಚರಿತ್ರೆಯನ್ನು ಬರೆಯುವ ನಿರ್ಧಾರ ಮಾಡಿದನೆಂದು ಓದಿದ್ದೆ. ಸುಮಾರು ೨ ವರ್ಷಗಳ ಕಾಲ, ಈತ ಭಾರತದ ದಕ್ಷಿಣದಲ್ಲಿರುವ ತಮಿಳುನಾಡಿಗೆ ಹೋಗಿ, ಅಲ್ಲಿಯೇ ವಾಸಿಸುತ್ತಾ, ರಾಮಾನುಜನ್ ಹುಟ್ಟಿ, ಬೆಳೆದು, ಓದಿ, ಕೆಲಸಮಾಡಿದ್ದ ಸ್ಥಳಗಳಲ್ಲೆಲ್ಲಾ ತಿರುಗಾಡಿ, ಅವರೊಂದಿಗೆ ಒಡನಾಟವಿದ್ದ ವ್ಯಕ್ತಿಗಳು ಮತ್ತು ಅವರ ಕುಟುಂಬದವರೊಡನೆ ಬೆರೆತು ಮಾತನಾಡಿ ಸಂಗ್ರಹಿಸಿದ ವಿಷಯಗಳು, ಹಾಗೂ ಇಂಗ್ಲೆಂಡಿನ ಪ್ರಸಿದ್ಧ ಕೇಂಬ್ರಿಜ್ ವಿಶ್ವವಿದ್ಯಾಲಯದ, ಟ್ರಿನಿಟಿ ಕಾಲೇಜಿನಲ್ಲಿ ರಾಮಾನುಜನ್ ನಡೆಸಿದ ಮಹಾನ್ ಗಣಿತ ಸಂಶೋಧನೆ ಮತ್ತು ರಾಮಾನುಜನ್ ಟಿ.ಬಿ (ಕ್ಷಯ) ರೋಗಕ್ಕೆ ತುತ್ತಾದಾಗ ಅವರು ಅನುಭವಿಸಿದ ಕಷ್ಟಕಾರ್ಪಣ್ಯಗಳ ಬಗ್ಗೆ ಮತ್ತು ತಿರುಗಿ ಭಾರತಕ್ಕೆ ಮರಳಿದ ನಂತರ ಅವರ ಅಲ್ಪಾವಧಿಯ ಜೀವನ ಹಾಗೂ ಅವರ ಅಂತಿಮ ದಿನಗಳ ವರ್ಣನೆ ಇಷ್ಟನ್ನೂ ಸೇರಿಸಿ ಬರೆದಿರುವ ಈ ಪುಸ್ತಕವು, ಬಹುಶಃ ರಾಮಾನುಜನ್ ಬಗ್ಗೆ ಇದುವರೆಗೂ ಪ್ರಕಟವಾಗಿರುವ ಪುಸ್ತಕಗಳಲ್ಲೇ ಅತ್ಯುತ್ತಮವಾದದ್ದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇನೆ.

Mathematics Genius
Mathematics Genius, CC: Wiki

ಈಗ ೪ ವರ್ಷಗಳ ಹಿಂದೆ, ೨೦೧೧ರಲ್ಲಿ, ಈ ಮಹಾನ್ ಗಣಿತಜ್ಞನ ೧೨೫ ನೆಯ ಜನ್ಮ-ಶತಾಬ್ದಿಯ ಸಂದರ್ಭದಲ್ಲಿ, ರಾಬರ್ಟ್ ಕಾನಿಗೆಲ್ ಪುಸ್ತಕವನ್ನು ಭಾರತದ ಹಲವಾರು ಭಾಷೆಗಳಿಗೆ ತರ್ಜುಮೆ ಮಾಡುವ ಕಾರ್ಯಕ್ರಮವನ್ನು ಪ್ರಖ್ಯಾತ ಪ್ರಕಾಶನ ಸಂಸ್ಥೆ, National Book Trust of India ಕೈಗೊಂಡಿತ್ತು. ನನ್ನ ಆತ್ಮೀಯ ಸ್ನೇಹಿತ ಹಾಗೂ ಗಣಿತಶಾಸ್ತ್ರ ಪ್ರಾಧ್ಯಾಪಕನಾದ ಡಾ ಅರವಿಂದ ಶಾಸ್ತ್ರಿ, ತಾನು ಗಣಿತಜ್ಞ ರಾಮಾನುಜನ್ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯಕ್ಕೆ, ಪ್ರತಿಷ್ಟಿತ ಪ್ರಕಾಶಕರಾದ ನ್ಯಾಶನಲ್ ಬುಕ್ ಟ್ರಸ್ಟ್ ವತಿಯಿಂದ ನೇಮಿಸಲ್ಪಟ್ಟಿದ್ದೇನೆ, ಹಾಗೂ ಆ ಕಾರ್ಯವನ್ನು ಪ್ರಾರಂಭಿಸಿ ನಡೆಸುತ್ತಿರುವೆ ಎಂದು ತಿಳಿಸಿದ್ದನು. ಆ ವಿಷಯ ತಿಳಿದ ಕೂಡಲೆ, ನಾನೂ ಅದರಲ್ಲಿ ಭಾಗವಹಿಸಿ, ಅಲ್ಪಸ್ವಲ್ಪವಾದರೂ ನನ್ನ ಕೈಲಾಗುವ ಸಹಾಯ ಮಾಡಬೇಕೆಂಬ ಅಭಿಲಾಷೆ ಹುಟ್ಟಿತು. ನನ್ನ ಉತ್ಸಾಹವನ್ನು ಕಂಡ ಅರವಿಂದ, ನನಗೆ ಪುಸ್ತಕವನ್ನು ಓದಲು ತಿಳಿಸಿದ. ಸರಿ ಅಮೆಝಾನ್ ಮೂಲಕ ಥಟ್ಟನೆ ಪುಸ್ತಕ ತರಿಸಿ ಓದಲು ಪ್ರಾರಂಭಿಸಿದೆ. ಈ ಪುಸ್ತಕ ಒಂದೇ ದಿನದಲ್ಲಿ ನನ್ನ ಮನವನ್ನು ಸಂಪೂರ್ಣವಾಗಿ ಅಪಹರಿಸುವುದರಲ್ಲಿ ಯಶಸ್ವಿಯಾಗಿತ್ತು. ಅದನ್ನು ಕೆಳಗಿಡುವ ಮನಸ್ಸೇ ಇರಲಿಲ್ಲ. ಇಂತಹ ಅಸಾಧಾರಣ ಮೇಧಾವಿಯ ಜೀವನದಲ್ಲಿ ಇಷ್ಟೊಂದು ಕಷ್ಟಕಾರ್ಪಣ್ಯಗಳಿದ್ದವೇ? ಅದೆಲ್ಲವನ್ನೂ ಎದುರಿಸಿ ಆತ ನಡೆಸಿದ್ದ ಅಸಾಮಾನ್ಯ ಸಂಶೋಧನೆ, ಆತನ ಜೀವಿತದ ಸಮಯದಲ್ಲಿ ಅಂದಿನ ಬಹುತೇಕ ಮಂದಿಗೆ ತಿಳಿಯದೇ ಅಜ್ಞಾತವಾಗೇ ಉಳಿದಿತ್ತು ಎನ್ನುವ ಸಂಗತಿ ಮನಸ್ಸನ್ನು ಬಹಳ ನೋಯಿಸಿತ್ತು. ಎಲ್ಲದಕ್ಕಿಂತಲೂ, ಅಂತಹ ಅಸಾಧಾರಣ ಪ್ರತಿಭೆಗೆ ಅಷ್ಟು ಕಡಿಮೆ ಆಯಸ್ಸೇ? ಕೇವಲ ೩೨ ವರ್ಷಗಳ ತನ್ನ ಜೀವಿತಾವಧಿಯಲ್ಲಿ ಆತ ಬರೆದ ಪ್ರಮೇಯಗಳು, ಸೂತ್ರಗಳ ಬಗ್ಗೆ ಇಂದಿಗೂ ಪ್ರಪಂಚದ ಅನೇಕ ಗಣಿತಜ್ಞರು ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದಾರೆ. ಆತನ ಕಾರ್ಯಗಳು ಇನ್ನೂ ಗಣಿತಜ್ಞರನ್ನು ಆಶ್ಚರ್ಯಗೊಳಿಸತ್ತಲೇ ಇದೆ, ಮತ್ತು ಆತನ ಹಲವಾರು ಪ್ರಮೇಯಗಳು ಮತ್ತು ಸೂತ್ರಗಳನ್ನು ಇಂದು ಭೌತಶಾಸ್ತ್ರಜ್ನರು ತಮ್ಮ ಸಂಶೋಧನೆಗಳಲ್ಲಿ ಮತ್ತು ತಂತ್ರಜ್ನಾನದಲ್ಲಿ ಅಳವಡಿಸುತ್ತಿದ್ದಾರೆ ಎನ್ನುವುದು ಹೆಮ್ಮೆ ಮತ್ತು ಬೆರಗುಗೊಳಿಸುವ ಸಂಗತಿಯಲ್ಲವೇ!

ಇಂತಹ ಮಹಾನ್ ವ್ಯಕ್ತಿಯ ಜೀವನಚರಿತ್ರೆಯನ್ನಾಧರಿಸಿ ಚಲನಚಿತ್ರವೊಂದನ್ನು ನಿರ್ಮಿಸಲಾಗುತ್ತಿದೆ ಎನ್ನುವ ವಿಷಯ ನನಗೆ ತಿಳಿದಾಗ, ಅದನ್ನು ಬಹಳ ಕಾತುರದಿಂದ ನಿರೀಕ್ಷಿಸುತ್ತಿದ್ದೆ. ಪುಸ್ತಕದಲ್ಲಿ ಮುದ್ರಿತವಾದ ವಿಷಯಗಳು ನಮ್ಮನ್ನು ಎಷ್ಟೇ ಪ್ರಭಾವಿತಗೊಳಿಸಿದರೂ, ದೃಶ್ಯ ಮಾಧ್ಯಮ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎನ್ನುವುದರಲ್ಲಿ ಸಂದೇಹವಿಲ್ಲ. ಸಿನಿಮಾ ಮಾಧ್ಯಮವು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲಪುವುದು ಎನ್ನುವುದು ಒಂದು ವಾಸ್ತವ ಸಂಗತಿ. ಹಾಗಾಗಿ ರಾಮಾನುಜನ್ ಚಲನಚಿತ್ರವನ್ನು ನಾವು ಎದಿರುನೋಡುತ್ತಿದ್ದೆವು. ಕಡೆಗೆ ನಾವು ನಿರೀಕ್ಷಿಸುತ್ತಿದ್ದ ಘಳಿಗೆ ಬಂದು, ಬ್ರಿಟನ್ನಿನ ನಿರ್ದೇಶಕ ಮ್ಯಾಥ್ಯು ಬ್ರೌನ್ ನಿರ್ದೇಶನದಲ್ಲಿ, ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸಿದ ಈ ಮೇಲಿನ ಶೀರ್ಷಿಕೆಯ ಚಲನಚಿತ್ರ ಕಳೆದ ವಾರ ಬಿಡುಗಡೆಯಾಯಿತು. ಸುಮಾರು 1:54 ನಿಮಿಷಗಳ ಅವಧಿಯ ಈ ಚಿತ್ರವನ್ನು ವೀಕ್ಷಿಸಿದ ನಂತರ, ಈ ಸಿನಿಮಾ ಬಗ್ಗೆ ನನ್ನ ವಿಶ್ಲೇಷಣೆ ಇಂತಿದೆ.

British-Hollywood film CC:Wiki
British-Hollywood film
CC:Wiki

ಇದೊಂದು ಅಲ್ಪಾವಧಿಯ ಚಲನಚಿತ್ರವಾದ್ದರಿಂದ, ಇಲ್ಲಿ ರಾಮಾನುಜನ್ ಅವರ ಬಾಲ್ಯ, ಶಾಲಾ-ಕಾಲೇಜಿನ ದಿನಗಳನ್ನು ಪೂರ್ಣವಾಗಿ ಕೈಬಿಡಲಾಗಿದೆ. ಕೇವಲ ಗಣಿತದಲ್ಲಿ ಮಾತ್ರಾ ಆಸ್ಥೆಯಿದ್ದ ರಾಮಾನುಜನ್ ಬೇರೆ ವಿಷಯಗಳಲ್ಲಿ ಎಂದಿಗೂ ಆಸಕ್ತಿ ತೋರಲೇ ಇಲ್ಲ. ಹಾಗಾಗಿ ಅವರು ಎಷ್ಟೇ ಪ್ರಯತ್ನಿಸಿದ್ದರೂ ಕೂಡಾ, ಅವರಿಗೆ ವಿಶ್ವವಿದ್ಯಾಲಯದ ಪದವಿಯನ್ನು ಸಂಪಾದಿಸಲಾಗಲಿಲ್ಲ. ಬ್ರಿಟಿಷ್ ವಸಾಹತು ಆಳ್ವಿಕೆಯ ಉತ್ತುಂಗದ ಆ ದಿನಗಳಲ್ಲಿ, ಸರ್ಟಿಫ಼ಿಕೇಟ್ ಇಲ್ಲದ ಜ್ಞಾನಕ್ಕೆ ಎಲ್ಲಿಯೂ ಬೆಲೆ ಇರಲಿಲ್ಲ. ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನದೆದಿರು ಹೋರಾಡುತ್ತಿದ್ದ ರಾಮಾನುಜನ್, ಕೆಲಸಕ್ಕಾಗಿ ಅಲೆಯುವ ದೃಶ್ಯ ನಿಜಕ್ಕೂ ದಾರುಣವೆನಿಸುತ್ತದೆ. ಅವರ ಗಣಿತದ ಪ್ರಾವಿಣ್ಯತೆಯ ಬಗ್ಗೆ ಅರಿವಿದ್ದ ಪರಿಚಿತ ನಾರಾಯಣ ಅಯ್ಯರ್ ಅವರ ಶಿಫ಼ಾರಸಿನ ಫಲವಾಗಿ, ಕಡೆಗೊಮ್ಮೆ ಅವರಿಗೆ ಮದ್ರಾಸಿನ ಪೋರ್ಟ್ ಟ್ರಸ್ಟ್ ಆಫ಼ೀಸಿನಲ್ಲಿ ಲೆಕ್ಕಿಗನ ಕಾರ್ಯ ದೊರಕುತ್ತದೆ. ಈ ಚಲನಚಿತ್ರವನ್ನು ಅಲ್ಲಿಂದ ಪ್ರಾರಂಭಿಸಿದ್ದಾರೆ. ತನ್ನ ಲೆಕ್ಕಿಗನ ಕೆಲಸಗಳ ಜೊತೆಗೆ, ಬಿಡುವಿನ ಸಮಯದಲ್ಲಿ ಗಣಿತದ ಪ್ರಮೇಯಗಳು, ಸೂತ್ರಗಳು, ಸಮೀಕರಣಗಳನ್ನು ಸೃಷ್ಟಿಸಿ ಬಿಡಿಸುವ ರಾಮಾನುಜನ್ (ಚಿತ್ರದಲ್ಲಿ- Dev Patel), ಪೋರ್ಟ್ ಟ್ರಸ್ಟ್ ಅಧಿಕಾರಿ ಸರ್ ಫ಼್ರಾನ್ಸಿಸ್ ಸ್ಪ್ರಿಂಗನ (ಚಿತ್ರದಲ್ಲಿ- Stephen Fry) ಮೂಲಕ, ಅಂದು ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನಲ್ಲಿದ್ದ ಪ್ರಖ್ಯಾತ ಗಣಿತಶಾಸ್ತ್ರಜ್ಞನೆಂದೆನಿಸಿದ್ದ ಗಾಡ್ಫ಼್ರೆ ಹೆರಾಲ್ಡ್ ಹಾರ್ಡಿಗೆ, ರಾಮಾನುಜನ್ ತಾವು ಸೃಷ್ಟಿಸಿದ್ದ ಗಣಿತದ ಪ್ರಮೇಯಗಳು ಮತ್ತು ಸೂತ್ರಗಳಿದ್ದ ಕಾಗದಗಳನ್ನು ಕಳಿಸಿಕೊಡುತ್ತಾರೆ. ಆ ಕಾಗದ ಮತ್ತು ಪುಸ್ತಕಗಳಲ್ಲಿದ್ದ ಗಣಿತದ ಪ್ರಮೇಯಗಳನ್ನು ನೋಡಿ ದಿಗ್ಬ್ರಮೆಗೊಂಡ ಹಾರ್ಡಿ ಮತ್ತು ಅವನ ಸ್ನೇಹಿತ ಮತ್ತು ಸಹೋದ್ಯೋಗಿ ಜಾನ್ ಲಿಟ್ಟಲ್ ವುಡ್, ರಾಮಾನುಜನ್ ಒಬ್ಬ ಮೇಧಾವಿ ಇರಬೇಕು, ಇಲ್ಲವೇ ಒಬ್ಬ ಕುಯುಕ್ತಿಯವನಿರಬೇಕೆಂದು ತೀರ್ಮಾನಿಸುತ್ತಾರೆ. ಆದರೆ ಮೇಲಿಂದ ಮೇಲೆ ರಾಮಾನುಜನ್ ಕಳಿಸಿದ ಮತ್ತಷ್ಟು ಗಣಿತದ ಸಮಸ್ಯೆಗಳನ್ನು ನೋಡಿದ ಹಾರ್ಡಿ (ಚಿತ್ರದಲ್ಲಿ-Jeremy Irons) ಅವನೊಬ್ಬ ಅಸಾಧಾರಣ ಪ್ರತಿಭೆಯ ಗಣಿತಜ್ಞನೇ ಇರಬೇಕೆಂದು, ಅವನಿಗೆ ಟ್ರಿನಿಟಿ ಕಾಲೇಜಿನ ವಿದ್ವತ್ ವೇತನವಿತ್ತು, ಅವನನ್ನು ಕೇಂಬ್ರಿಜ್ಜಿಗೆ ಬರಲು ಆಹ್ವಾನಿಸುತ್ತಾರೆ. ಅಂದು ಸಮುದ್ರ ದಾಟುವ ಪದ್ಧತಿ ಬ್ರಾಹ್ಮಣರಲ್ಲಿ ಇರಲಿಲ್ಲ. ಸಮುದ್ರ ದಾಟಿದವರನ್ನು ಸಮಾಜದಿಂದ ಬಹಿಷ್ಕಾರ ಹಾಕುತ್ತಿದ್ದ ಆ ಕಾಲದಲ್ಲಿ, ತಾಯಿ ಮತ್ತು ಕುಟುಂಬದವರನ್ನು ಕಷ್ಟಪಟ್ಟು ಮನವೊಲಿಸಿದ ರಾಮಾನುಜನ್, ತನ್ನ ಗಣಿತ ಪ್ರತಿಭೆಯನ್ನು ಪಶ್ಚಿಮ ದೇಶದಲ್ಲಿ ಬೆಳಗುವ ಮಹತ್ವಾಕಾಂಕ್ಷೆಯನ್ನು ಹೊತ್ತು, ಹಡಗನ್ನೇರಿ ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಹೆಸರಾಗಿದ್ದ, ಬ್ರಿಟಿಷ್ ದ್ವೀಪಗಳತ್ತ ಪ್ರಯಾಣ ಬೆಳಸುತ್ತಾರೆ.

ಅಂದಿನ ಸಮಯದಲ್ಲಿ ಪ್ರಪಂಚದ ಅತ್ಯುತ್ತಮ ಜ್ಞಾನಸಂಪಾದನೆಯ ಕೇಂದ್ರವೆನಿಸಿದ್ದ ಕೇಂಬ್ರಿಜ್ಜ್ ವಿಶ್ವವಿದ್ಯಾಲಯದ, ಟ್ರಿನಿಟಿ ಕಾಲೇಜನ್ನು ಪ್ರವೇಶಿಸುವ ರಾಮಾನುಜನ್, ಅಲ್ಲಿನ ಪ್ರವೇಶ ಪ್ರಾಂಗಣದಲ್ಲಿ ಇರಿಸಿದ್ದ ಸರ್ವಕಾಲಿಕ ಮೇಧಾವಿ ಸರ್ ಆಲ್ಬರ್ಟ್ ಐಸ್ಯಾಕ್ ನ್ಯೂಟನ್ ಪ್ರತಿಮೆಯನ್ನೇ ಆರಾಧನಾಭಾವದಿಂದ ನೋಡುತ್ತಾರೆ. ರಾಮಾನುಜನ್ ಈಗಾಗಲೇ ಕಳಿಸಿದ್ದ ಪ್ರಮೇಯಗಳು, ಸೂತ್ರಗಳನ್ನು ನೋಡಿದ್ದ ಹಾರ್ಡಿ, ಈ ಪ್ರಮೇಯಗಳಿಗೆ ಸಾಕ್ಷ್ಯಾಧಾರಗಳನ್ನು ಒದಗಿಸದಿದ್ದಲ್ಲಿ, ಅವನ್ನು ಇತರ ಗಣಿತಜ್ಞರು ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂದು ಪದೇ ಪದೇ ಒತ್ತಿ ಹೇಳುತ್ತಾರೆ. ಸ್ವಲ್ಪ ಅಹಂಕಾರದಿಂದಲೇ ರಾಮಾನುಜನ್, ಆ ಪ್ರಮೇಯಗಳೆಲ್ಲಾ ಸರಿಯಾಗಿವೆ, ತನ್ನ ಸಂಶೋಧನೆ ಪರಿಪೂರ್ಣ ಎನ್ನುವ ವಾದವನ್ನು ಪಟ್ಟುಹಿಡಿದು ಮುಂದಿಟ್ಟಾಗ, ಸಿಟ್ಟಿಗೇಳುವ ಹಾರ್ಡಿಯ ಹತಾಶೆಯ ಭಾವನೆಗಳನ್ನು ನಟ ಜೆರಮಿ ಐರನ್ಸ್ ಬಹಳ ಚೆನ್ನಾಗಿ ವ್ಯಕ್ತಪಡಿಸಿದ್ದಾನೆ. ತಾನು ಸಾವಿರಾರು ಮೈಲಿ ಪ್ರಯಾಣಿಸಿ, ಕೇಂಬ್ರಿಜ್ಜಿಗೆ ಬಂದಿರುವುದು ತನ್ನ ಕಾರ್ಯವನ್ನು ಪ್ರಕಟಿಸುವ ಸಲುವಾಗಿ ಎಂದು ತನ್ನ ವಾದವನ್ನು ಮುಂದುವರೆಸುವ ರಾಮಾನುಜನ್, ಮತ್ತು ಅದನ್ನು ವಿರೋಧಿಸುವ ಇತರ ಗಣಿತಜ್ಞರ ನಡುವಿನ ಕಲಹ ಮುಂದುವರೆದಾಗ, ಇದರ ಮಧ್ಯದಲ್ಲಿ ಸಿಲುಕುವ ಹಾರ್ಡಿ ಮತ್ತು ಲಿಟ್ಟಲ್ ವುಡ್ (ಚಿತ್ರದಲ್ಲಿ- Toby Jones) ಪರಿಸ್ಥಿತಿ ಪ್ರೇಕ್ಷಕರಲ್ಲಿ ಅನುಕಂಪವನ್ನುಂಟು ಮಾಡುತ್ತದೆ.

ರಾಮಾನುಜನ್ ಬಂದ ಕೆಲವೇ ತಿಂಗಳಲ್ಲಿ, ಮೊದಲ ಮಹಾಯುದ್ಧ ಪ್ರಾರಂಭವಾಗಿ, ಟ್ರಿನಿಟಿ ಕಾಲೇಜಿನ ಆವರಣವನ್ನು ತಾತ್ಕಾಲಿಕ ಸೈನಿಕ ಶಿಬಿರ ಮತ್ತು ಆಸ್ಪತ್ರೆಯಾಗಿ ಪರಿವರ್ತನೆಗೊಳ್ಳುತ್ತದೆ. ಮೊದಲೇ ಸಸ್ಯಾಹಾರಿಯಾದ ರಾಮಾನುಜನ್,  ಅಲ್ಲಿ ಸರಿಯಾದ ಪೌಷ್ಟಿಕ ಆಹಾರವಿಲ್ಲದೆ ಪರದಾಡುತ್ತಿದ್ದಾಗ, ಯುದ್ಧದ ರೇಶನ್ ಸಮಸ್ಯೆಯೂ ಸೇರಿ, ಊಟವಿಲ್ಲದೇ ಕೇವಲ ಅನ್ನ ಮತ್ತು ನಿಂಬೆಹಣ್ಣಿನ ರಸವನ್ನು ತಿನ್ನುವ ದೃಶ್ಯ ಮನಕಲಕುತ್ತದೆ. ಪೌಷ್ಟಿಕತೆಯ ಕೊರತೆಯಿಂದಾಗಿ ದುರ್ಬಲಗೊಂಡ ರಾಮಾನುಜನ್, ಬಹುಬೇಗನೆ ಟಿ.ಬಿ ವ್ಯಾಧಿಗೆ ತುತ್ತಾಗುತ್ತಾರೆ. ರೋಗದ ಬಗ್ಗೆ ಯಾರಿಗೂ ಸುಳಿವು ಕೊಡದೆ, ಕಡೆಗೊಮ್ಮೆ ಹಾರ್ಡಿಯ ಒತ್ತಾಯದ ಮೇರೆಗೆ ತನ್ನ ಪ್ರಮೇಯಗಳಿಗೆ ಹಂತ ಹಂತವಾಗಿ ಸಾಕ್ಷ್ಯಾಧಾರಗಳನ್ನು ಒದಗಿಸುವ ಕಾರ್ಯವನ್ನು ರಾಮಾನುಜನ್ ಹಗಲೂ ರಾತ್ರಿಯೆನ್ನದೆ ಕುಳಿತು ನಡೆಸುತ್ತಾರೆ. ಅವರ ಈ ಸಂಶೋಧನೆಯನ್ನು ಕಂಡು ತೃಪ್ತಿಗೊಂಡ ಹಾರ್ಡಿ, ಅದನ್ನು  ಪ್ರಕಟಿಸುವ ನಿರ್ಧಾರ ತಿಳಿಸಿದಾಗ, ಅವರಿಬ್ಬರ ಮಧ್ಯೆ ನಡೆಯುತ್ತಿದ್ದ ಶೀತಲ ಯುದ್ಧ ಮುಗಿದು ವಾತಾವರಣ ತಿಳಿಯಾಗುತ್ತದೆ. ಅವರ ನಡುವಿನ ಸಮರಕ್ಕೆ ಸಾಕ್ಷಿಯಾಗಿದ್ದ ಲಿಟ್ಟಲ್ ವುಡ್ ಮಹಾಯುದ್ಧದಲ್ಲಿ ಕ್ಷಿಪಣಿಗಳನ್ನು ಹಾರಿಸುವ ಕಾರ್ಯದ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಯುದ್ಧಭೂಮಿಗೆ ತೆರಳಿದಾಗ, ರಾಮಾನುಜನ್ ಅವರ ಒಡನಾಡಿತ್ವವೂ ಇಲ್ಲದೇ ಒಂಟಿಯಾಗುತ್ತಾರೆ.

ಅದೇ ವಿಭಾಗದಲ್ಲಿದ್ದ ಮೇಜರ್ ಮ್ಯಾಕಮಹಾನ್ ಎಂಬ ಮತ್ತೊಬ್ಬ ಗಣಿತಜ್ಞನು, Partitions ಎಂಬ ಸಮಸ್ಯೆಯನ್ನು ತಾನು ಅತ್ಯಂತ ಯಶಸ್ವಿಯಾಗಿ ಬಿಡಿಸಿದ್ದೇನೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಸಮಯದಲ್ಲಿ, ರಾಮಾನುಜನ್ ಅದನ್ನು ಅತ್ಯಂತ ಸರಳವಾಗಿ ಬಿಡಿಸುವ ಸೂತ್ರವೊಂದನ್ನು ಕಂಡುಹಿಡಿದ್ದಾನೆ ಎನ್ನುವ ವಿಷಯವನ್ನು ಹಾರ್ಡಿ ಆತನಿಗೆ ತಿಳಿಸುತ್ತಾನೆ. ಮ್ಯಾಕಮಹಾನ್ ಅದರಲ್ಲಿ ವಿಶ್ವಾಸ ತೋರದೆ ಇದ್ದಾಗ, ಒಂದು ನಿಗದಿ ಪಡಿಸಿದ ದಿನ ಮತ್ತು ಸಮಯದಂದು ಅವರಿಬ್ಬರೂ ಮುಖಾಮುಖಿ ತಾವು ನಡೆಸಿದ್ದ ಲೆಕ್ಕಾಚಾರಗಳನ್ನು ಹೋಲಿಸಿ ನೋಡಿದಾಗ, ಮ್ಯಾಕಮೋಹನ್ ಆ ಸಮಸ್ಯೆಯನ್ನು ಬಿಡಿಸಲು ಒಂದು ತಿಂಗಳ ಕಾಲ ಎಡಬಿಡದ ಪರಿಶ್ರಮ ನಡೆಸಿರುತ್ತಾನೆ, ಆದರೆ ರಾಮಾನುಜನ್ ತನ್ನ ಮೇಧಾವಿತನದಿಂದ ಕಂಡುಹಿಡಿದ ಕೇವಲ ಒಂದು ಸೂತ್ರದ ಸಹಾಯದಿಂದ, ಅದೇ ಸಮಸ್ಯೆಯನ್ನು ಅಲ್ಪಾವಧಿಯಲ್ಲಿ ಅತ್ಯಂತ ಪರಿಪೂರ್ಣವಾಗಿ ಬಿಡಿಸುವುದರಲ್ಲಿ ಯಶಸ್ವಿಯಾಗಿದ್ದರು. ಈ ಸನ್ನಿವೇಶವನ್ನು ನಿರ್ದೇಶಕ ಅತ್ಯಂತ ಚಾಕಚಕ್ಯತೆಯಿಂದ ಚಿತ್ರೀಕರಿಸಿ, ಕೇವಲ ಆ ಒಂದೇ ದೃಶ್ಯದಲ್ಲಿ ರಾಮಾನುಜನ್ ಅವರಿಗಿದ್ದ ಪ್ರತಿಭೆಯನ್ನು ಪ್ರೇಕ್ಷಕರಿಗೆ ತೋರಿಸುವುದರಲ್ಲಿ ಯಶಸ್ವಿಯಾಗಿದ್ದಾನೆ.

ಈ ಎಲ್ಲಾ ಸನ್ನಿವೇಶಗಳ ನಡುವೆ, ರಾಮಾನುಜನ್ ತನ್ನ ಕುಟುಂಬದವರಿಂದ, ಅದರಲ್ಲೂ ತಮ್ಮ ಪತ್ನಿಯಿಂದ ಯಾವ ಕಾಗದವೂ ಬರದಿದ್ದರಿಂದ ಬಹಳ ಖಿನ್ನರಾಗಿ, ಒಂದು ದುರ್ಬಲ ಘಳಿಗೆಯಲ್ಲಿ ಲಂಡನ್ನಿನಲ್ಲಿ ರೈಲಿನ ಕೆಳಗೆ ಬಿದ್ದು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ. ಪ್ರಕಟವಾಗದ ತಮ್ಮ ಗಣಿತದ ಫಲಿತಾಂಶ, ಕಾಡುತ್ತಿದ್ದ ಒಂಟಿತನ, ಸರಿಯಾಗಿ ಮಾತನಾಡಲು ಸಿಕ್ಕದ ಸ್ನೇಹಿತರು, ಅಪೌಷ್ಟಿಕ ಆಹಾರ ಹೀಗೆ ಹಲವು ಹತ್ತು ಸಮಸ್ಯೆಗಳಿಂದ ನರಳುವ ರಾಮಾನುಜನ್ ಸ್ಥಿತಿ ನಿಜಕ್ಕೂ ಮನಮಿಡಿಯುತ್ತದೆ. ಅವರಿಗೆ ಅಂಟಿದ್ದ ಟಿ.ಬಿ ರೋಗವು ದಿನದಿನಕ್ಕೆ ವಿಷಮಿಸಿದಾಗ, ಅವರ ಸ್ಥಿತಿಯನ್ನು ಕಂಡ ಹಾರ್ಡಿ, ಅವರ ಆರೋಗ್ಯ ಸರಿಯಿಲ್ಲವೆಂದು ತಿಳಿದಾಗ ಬಹಳ ವ್ಯಥೆಪಡುತ್ತಾರೆ. ಲಂಡನ್ನಿನ ಪಟ್ನಿಯಲ್ಲಿರುವ ಒಂದು ಸ್ಯಾನಿಟೋರಿಯಮ್ಮಿನಲ್ಲಿ ನರಳುತ್ತಾ ಮಲಗಿದ್ದ ರಾಮಾನುಜನ್ ಅವರನ್ನು ಹಾರ್ಡಿ ಭೇಟಿಯಾಗಲು ಹೋದಾಗ, ಅವರು ಕುಳಿತ ಟಾಕ್ಸಿಯ ನಂಬರ್ 1729 ಆಗಿರುತ್ತದೆ. ಅವರು ರಾಮಾನುಜನ್ ಜೊತೆ ಆ ನಂಬರ್ ಬಹಳ ಸಪ್ಪೆಯಾದ ಸಂಖ್ಯೆ ಎಂದಾಗ, ರಾಮಾನುಜನ್ ತನ್ನ ಖಾಯಿಲೆಯ ಸ್ಥಿತಿಯಲ್ಲೂ ಕೂಡಾ ಆ ಸಂಖ್ಯೆಯ ವೈಶಿಷ್ಟ್ಯತೆಯನ್ನು ವಿವರಿಸುತ್ತಾ, ಕ್ಷಣಾರ್ಧದಲ್ಲಿ ಆ ಸಂಖ್ಯೆ ಬಹಳ ಆಸಕ್ತಿಪೂರ್ಣವಾದ ಸಂಖ್ಯೆ ಎನ್ನುತ್ತಾ ಅದರ ಮಹತ್ವವನ್ನು ವಿವರಿಸುತ್ತಾ, ಅದು ಎರಡು ರೀತಿಯಲ್ಲಿ, ಎರಡು ಘನಗಳ ಮೊತ್ತದಂತೆ ನಿರೂಪಿಸಬಹುದಾದ ಅತಿ ಚಿಕ್ಕ ಸಂಖ್ಯೆ” ಎಂದು ತಿಳಿಸಿದಾಗ, ಹಾರ್ಡಿ ಈ ಹಿಂದೆ ಲಿಟ್ಟಲ್ ವುಡ್ “ಪ್ರತಿಯೊಂದು ಧನಾತ್ಮಕ ಪೂರ್ಣಾಂಕವೂ, ರಾಮಾನುಜನನ ಸಂಗಾತಿಗಳು”, ಎಂದು ಹೇಳಿದ್ದ ಸಂಗತಿಯನ್ನು ಜ್ಞಾಪಿಸಿಕೊಳ್ಳುತ್ತಾರೆ. ಇಂದು ಆ ಸಂಖ್ಯೆಯನ್ನು ಹಾರ್ಡಿ-ರಾಮಾನುಜನ್ ನಂಬರ್ ೧೭೨೯ ಎಂದೇ ಕರೆಯಲಾಗುತ್ತದೆ. ಆ ಸನ್ನಿವೇಶವನ್ನು ಚಿತ್ರದಲ್ಲಿ ತೋರಿಸಿರುವ ಸಮಯ ಮತ್ತು ಸನ್ನಿವೇಶ ಸ್ವಲ್ಪ ಬೇರೆಯಿದ್ದರೂ, ರಾಮಾನುಜನ್ ಮೇಧಾವಿತನಕ್ಕೆ ಸಾಕ್ಷಿಯಾದ ಈ ಪ್ರಸಂಗ ಪ್ರೇಕ್ಷಕರನ್ನು ಬೆರಗಾಗಿಸುತ್ತದೆ.

ರಾಮಾನುಜನ್ ತನ್ನ ಸ್ಥಿತಿಯಲ್ಲಿ ಇನ್ನು ಹೆಚ್ಚು ದಿನ ತನಗೆ ಬದುಕುವ ಅವಕಾಶವಿಲ್ಲ ಎಂದು ತಿಳಿದು, ಹಾರ್ಡಿಯೊಡನೆ ತಾನು ಮರಳಿ ಮದ್ರಾಸಿಗೆ ಹೋಗುವುದಾಗಿ ತಿಳಿಸುತ್ತಾರೆ. ಮಹಾಯುದ್ಧ ಆಗತಾನೆ ಕೊನೆಗೊಂಡು ಯೂರೋಪಿನ ಜನ ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಹಾರ್ಡಿ ಹೇಗಾದರೂ ಮಾಡಿ ರಾಮಾನುಜನ್ ಮಾಡಿದ ಅಪ್ರತಿಮ ಕಾರ್ಯಕ್ಕೆ ದಕ್ಕಬೇಕಾದ ಗೌರವವನ್ನು ಅವನಿಗೆ ಕೊಡಿಸಲೇ ಬೇಕು ಎನ್ನುವ ದೃಢನಿರ್ಧಾರ ಮಾಡಿ, ಟ್ರಿನಿಟಿ ಕಾಲೇಜ್ ಮತ್ತು ರಾಯಲ್ ಸೊಸೈಟಿಯ ಫ಼ೆಲೋ ಎಂಬ ಗೌರವ ಸದಸ್ಯತ್ವಕ್ಕೆ ಅವನ ಹೆಸರನ್ನು ಸೂಚಿಸುತ್ತಾರೆ. ಆ ಎರಡೂ ಸಂಸ್ಥೆಗಳಲ್ಲಿದ್ದ ಅಧಿಕಾರಿಗಳು, ಅಂದಿನ ಸನ್ನಿವೇಶದಲ್ಲಿ ಯಾವುದೇ ರೀತಿಯ ವಿಶ್ವವಿದ್ಯಾಲಯದ ಪದವಿ ಸಂಪಾದಿಸಿಲ್ಲದ ರಾಮಾನುಜನ್ ಅವರಿಗೆ, ಈ ಗೌರವ ನೀಡಲು ಬಹಳ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಆದರೆ ಹಾರ್ಡಿಯೂ ತಾನು ಹಿಡಿದ ಪಟ್ಟನ್ನು ಬಿಡದೆ, ರಾಮಾನುಜನ್ ಪ್ರತಿಭೆಯನ್ನು, ಅವರ ಕಾರ್ಯಗಳನ್ನು ಸದಸ್ಯರ ಮುಂದಿಟ್ಟು, ಅದರ ಪರವಾಗಿ ಇನ್ನೂ ಹಲವು ಸದಸ್ಯರ ಬೆಂಬಲ ಪಡೆದು ಅಂತಿಮವಾಗಿ ಅವರಿಗೆ ಈ ಎರಡೂ ಸಂಸ್ಥೆಗಳ ಗೌರವ ಸದಸ್ಯತ್ವವನ್ನು ಕೊಡಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಹಾರ್ಡಿ, ರಾಮಾನುಜನ್ ಪರವಾಗಿ ಈ ಸಂಸ್ಥೆಗಳ ಎದಿರು ಮಾಡುವ ವಾದ ನಿಜಕ್ಕೂ ಪರಿಣಾಮಕಾರಿಯಾಗಿದೆ. ಜೆರಮಿ ಐರನ್ಸ್ ಈ ದೃಶ್ಯದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ರಾಮಾನುಜನ್ ಆರೋಗ್ಯ ಸ್ವಲ್ಪ ಉತ್ತಮಗೊಂಡು, ಅವರು ಕಾಲೇಜಿಗೆ ಮರಳಿದಾಗ ಟ್ರಿನಿಟಿ ಕಾಲೇಜಿನ ಸದಸ್ಯತ್ವ ಅವರಿಗೆ ನೀಡುವ ಸಂದರ್ಭವನ್ನು ತೋರಿಸಿದಾಗ, ಪ್ರೇಕ್ಷಕರ ಕಣ್ಣುಗಳು ಒದ್ದೆಯಾದರೆ ಯಾವ ಆಶ್ಚರ್ಯವೂ ಇಲ್ಲ. ಆ ಮಹಾನ್ ಪ್ರತಿಭೆಗೆ ಸಂದ ಗೌರವ, ಇಡೀ ಗಣಿತದ ಪ್ರಪಂಚಕ್ಕೆ ಸಂದ ಗೌರವ ಎನ್ನುವ ಭಾವನೆ ಹುಟ್ಟುವುದು.

ರಾಮಾನುಜನ್ ಮರಳಿ ಮದ್ರಾಸಿಗೆ ಬಂದ ಹಲವೇ ತಿಂಗಳುಗಳಲ್ಲೇ, ಅವರ ಸ್ಥಿತಿ ವಿಷಮಿಸಿ ಅವರು ತೀರಿಕೊಂಡ ಸುದ್ದಿ ಹಾರ್ಡಿಯನ್ನು ತಲುಪಿದಾಗ, ಹಾರ್ಡಿಯ ದುಃಖ ಉಕ್ಕಿ ಕಣ್ಣಿರಾಗಿ ಹರಿಯುತ್ತದೆ ಎನ್ನುವಲ್ಲಿಗೆ ಈ ಚಿತ್ರವನ್ನು ಅಂತ್ಯಗೊಳಿಸಲಾಗಿದೆ.

“ದೈವದ ಒಂದು ಚಿಂತನೆಯನ್ನು ಪ್ರತಿನಿಧಿಸದ ಯಾವುದೇ ಸಮೀಕರಣವೂ, ನನ್ನ ಹೃದಯವನ್ನು ತಟ್ಟುವುದಿಲ್ಲ,” ಎಂದು ಹೇಳುತ್ತಿದ್ದ ರಾಮಾನುಜನ್, ಒಬ್ಬ ಕಟ್ಟಾ ದೈವಭಕ್ತನಾಗಿದ್ದರು. ತಮ್ಮ ಕುಲದೇವತೆ ನಾಮಕಲ್ಲಿನ ದೇವಿ ತಮ್ಮ ಕನಸಿನಲ್ಲಿ ಬಂದು, ತಮ್ಮ ನಾಲಿಗೆಯ ಮೇಲೆ ಸೂತ್ರಗಳನ್ನು ಬರೆಯುತ್ತಾಳೆ ಎಂದು ಒಮ್ಮೆ ಅವರು ನೀಡಿದ್ದ ವಿವರಣೆಯನ್ನು, ನಾಸ್ತಿಕನಾಗಿದ್ದ ಹಾರ್ಡಿಗೆ ನಂಬಲು ಅಸಾಧ್ಯವಾಗಿತ್ತು. ಹೀಗೆ ಸಾಂಸ್ಕೃತಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಇತರ ಚಿಂತನೆಗಳಲ್ಲಿ ಅಪಾರವಾದ ಭಿನ್ನತೆಯನ್ನು ಹೊಂದಿದ್ದ ಈ ವ್ಯಕ್ತಿಗಳ ನಡುವೆ ಇದ್ದ ಬಾಂಧವ್ಯದ ಒಂದೇ ಒಂದು ಸಂಪರ್ಕ ಕೊಂಡಿ ಕೇವಲ ಗಣಿತವಾಗಿತ್ತು.  ತಮ್ಮ ಜೀವನದಲ್ಲಿ ಕಂಡ “ಅತ್ಯಂತ ಪ್ರತಿಭಾಶಾಲಿ ಹಾಗೂ ಸೃಜನಶೀಲ ಗಣಿತಶಾಸ್ತ್ರಜ್ಞನೆಂದರೆ ರಾಮಾನುಜನ್”, ಎಂದಿದ್ದ ಹಾರ್ಡಿ, ತನ್ನ ಜೀವನದ ಅತ್ಯಂತ ಮಹತ್ವದ ಅನ್ವೇಷಣೆಯೂ ಆತನೇ ಎಂದಿದ್ದರು. ಇಂದು ಪ್ರಪಂಚದಲ್ಲಿ ರಾಮಾನುಜನ್ ಮತ್ತು ಆತನ ಗಣಿತೀಯ ಸಾಧನೆಗಳು ಗಳಿಸಿರುವ ಅತ್ಯುನ್ನತ ಸ್ಥಾನ ಮತ್ತು ಹೆಗ್ಗಳಿಕೆಗಳಿಗೆ ಕಾರಣಕರ್ತನೆಂದರೆ, ಗಾಡ್ಫ಼್ರೆ ಹೆರಾಲ್ಡ್ ಹಾರ್ಡಿ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ರಾಮಾನುಜನ್ ನಂತಹ ಒಂದು ಅಮೂಲ್ಯ ವಜ್ರವನ್ನು, ಗಣಿತ ಪ್ರಪಂಚದ ರತ್ನಹಾರಕ್ಕೆ ಸೇರಿಸಿದ ಕೀರ್ತಿ ಆತನಿಗೇ ಸಲ್ಲಬೇಕು.

ಈ ಚಲನಚಿತ್ರದಲ್ಲಿ ರಾಮಾನುಜನ್ ಮತ್ತು ಹಾರ್ಡಿಯ ನಡುವಣದ ಬಾಂಧವ್ಯವನ್ನು ಅತ್ಯಂತ ಸೂಕ್ಷ್ಮವಾಗಿ, ನವಿರಾಗಿ ಚಿತ್ರಿಸಲಾಗಿದೆ. ರಾಮಾನುಜನ್ ಪಾತ್ರದ ದೇವ್ ಪಟೇಲ್, ಹಾರ್ಡಿ ಪಾತ್ರದ ಜೆರಮಿ ಐರನ್ಸ್ ತಮ್ಮ ಅಭಿನಯದಲ್ಲಿ ಮಿಂಚಿದ್ದಾರೆ. ಲಿಟ್ಟಲ್ ವುಡ್ ಪಾತ್ರದಲ್ಲಿ ಅಭಿನಯಿಸಿರುವ ಟೋಬಿ ಜೋನ್ಸ್, ತಮಗೆ ಸಿಕ್ಕ ಅಲ್ಪ ಸಮಯದಲ್ಲೇ ತಮ್ಮ ಪ್ರತಿಭೆ ತೋರಿದ್ದಾರೆ ಎನ್ನಬಹುದು. ಗಣಿತದ ಬಗ್ಗೆ, ರಾಮಾನುಜನ್ ಬಗ್ಗೆ ಅಭಿಮಾನ ಉಳ್ಳ ಪ್ರೇಕ್ಷಕರು ಬಹಳ ನಿರೀಕ್ಷೆಗಳನ್ನು ಹೊತ್ತು ಈ ಚಿತ್ರ ನೋಡಲು ಹೋದರೆ, ಸಮಯ ಮತ್ತು ಹಣದ ಅಭಾವದಿಂದಾಗಿ, ಚಿತ್ರದಲ್ಲಿನ ಹಲವಾರು ನ್ಯೂನತೆ ಮತ್ತು ಕೊರತೆಗಳು ಅವರನ್ನು ನಿರಾಸೆಗೊಳಿಸಬಹುದು. ಆದರೂ ರಾಮಾನುಜನ್ ಕುರಿತಾಗಿ ನಿರ್ಮಿಸಿರುವ ಈ ಚಲನಚಿತ್ರ, ಒಂದು ಮೈಲುಗಲ್ಲೆಂದೇ ನನ್ನ ಅಭಿಪ್ರಾಯ.

ಇಂತಹ ಮಹಾನ್ ವ್ಯಕ್ತಿಯೊಬ್ಬನನ್ನು ಪ್ರಪಂಚಕ್ಕೆ ಕೊಡುಗೆ ಇತ್ತ ನಮ್ಮ ಭಾರತ ದೇಶದಲ್ಲಿ, ಅಲ್ಲಿನ ಚಲನಚಿತ್ರರಂಗ ಇದುವರೆಗೂ ಈತನ ಮೇಧಾವಿತನದ ಬಗ್ಗೆ ಒಂದು ಉತ್ತಮವಾದ ಸಿನಿಮಾ ಮಾಡಿಲ್ಲ. ೨೦೧೪ರಲ್ಲಿ ಬಿಡುಗಡೆಯಾದ ಒಂದು ತಮಿಳಿನ ಚಿತ್ರ ಭಾರತದಲ್ಲಿ (ಪ್ರಮುಖವಾಗಿ ತಮಿಳುನಾಡಿನಲ್ಲಿ) ಅಲ್ಪಸ್ವಲ್ಪ ಯಶಸ್ಸನ್ನು ಗಳಿಸಿದೆ. ಆದರೆ ರಾಷ್ಟ್ರ ಮಟ್ಟದಲ್ಲಿ, ಭಾರತೀಯರೆಲ್ಲರೂ ಹೆಮ್ಮೆ ಪಡಬಹುದಾದ ಚಿತ್ರವೊಂದನ್ನು ಇನ್ನೂ ನಿರ್ಮಿಸಿಲ್ಲ ಎನ್ನುವುದು ಬಹಳ ವಿಶಾದದ ಸಂಗತಿ. ನಮ್ಮ ರಾಷ್ಟ್ರ ಪಿತಾಮಹ “ಗಾಂಧಿಯ” ಬಗ್ಗೆ ಚಲನಚಿತ್ರ ನಿರ್ಮಿಸದೆ, ೧೯೮೩ರವರೆಗೆ ಸುಮ್ಮನಿದ್ದು,  ಅದರ ಗೌರವ ಮತ್ತು  ಹೆಗ್ಗಳಿಕೆಗಳು ಒಬ್ಬ ಬ್ರಿಟಿಷ್ ಚಿತ್ರ ನಿರ್ಮಾಪಕ, ನಿರ್ದೇಶಕನಾದ ಸರ್ ರಿಚರ್ಡ್ ಅಟೆನಬರೋ ಅವರಿಗೆ  ಸಲ್ಲುವಂತೆ ಮಾಡಿದ ದೇಶ ನಮ್ಮದು.

 ಗಾಂಧಿಯನ್ನೇ ಕಡೆಗಣಿಸಿದ ನಾವು, ರಾಮಾನುಜನ್ ಅವರನ್ನು ಮೂಲೆಗೊತ್ತಿದ್ದರೆ ಆಶ್ಚರ್ಯವೇನು!