ನನ್ನ ಗೋಪಣ್ಣ – ಡಾ ಅರವಿಂದ ಕುಲಕರ್ಣಿ ಬರೆದ ಶ್ರದ್ಧಾಂಜಲಿ

gopal kulkarni
ಡಾ ಗೋಪಾಲ ಕುಲಕರ್ಣಿ (೧೦/೦೫/೧೯೩೦ – ೧೮/೦೫/೨೦೧೬)

ನನ್ನ ಪ್ರೀತಿಯ ಗೋಪಣ್ಣ ದಿನಾಂಕ ೧೮-೦೫-೨೦೧೬ರಂದು ಪುಣೆಯಲ್ಲಿ ನಿಧನರಾದರೆಂದು ತಿಳಿಸಲು ಅಪಾರ ದುಃಖವಾಗುತ್ತದೆ.

ಗೋಪಾಲ ಮತ್ತು ಅಮರಜಾ ಕುಲಕರ್ಣಿ ದಂಪತಿಗಳು `ಕನ್ನಡ ಬಳಗ (ಯು.ಕೆ)`ದ ಸಂಸ್ಥಾಪಕ ಕುಟುಂಬಗಳಲ್ಲಿ ಒಬ್ಬರು. ಡೊಂಕ್ಯಾಸ್ಟರಿನಲ್ಲಿದ್ದ ಅವರ ಮನೆಯಲ್ಲಿಯೇ `ಕನ್ನಡ ಬಳಗ`ದ ನೀಲಿನಕ್ಷೆ ರೂಪತಾಳಿತೆಂದು ದಾಖಲಾಗಿದೆ. ನಂತರದ ೧೯೮೪ರ ಕಾರ್ಯಕಾರಿ ಸಮಿತಿಯಲ್ಲಿ ಸೇರಿ ಹುಮ್ಮಸ್ಸಿನಿಂದ ಮನಮುಟ್ಟಿ ದುಡಿದು ನಿಸ್ವಾರ್ಥ ಸೇವೆಗೈದಿದ್ದನ್ನು ಪ್ರತ್ಯಕ್ಷ ಕಂಡಿದ್ದೇನೆ. ಎಲ್ಲ `ಕನ್ನಡ ಬಳಗ`ದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲುಗೊಳ್ಳುತ್ತಿದ್ದರಲ್ಲದೇ, ಧಾರ್ಮಿಕ ಸಂಪ್ರದಾಯದಲ್ಲಿ ಅಪಾರ ಶ್ರದ್ಧೆಯಿದ್ದದ್ದರಿಂದ ಬಳಗದ ಪ್ರಾರಂಭದ ದಿನಗಳಲ್ಲಿ ಯುಗಾದಿ, ದೀಪಾವಳಿ ಹಬ್ಬದ ಕಾರ್ಯಕ್ರಮಗಳು ಅವರು ನಿರ್ವಹಿಸಿದ ಸಾಂಪ್ರದಾಯಿಕ ಪೂಜೆಗಳಿಂದಲೇ ಆರಂಭವಾಗುತ್ತಿದ್ದವು. ೧೯೮೮ರಲ್ಲಿ ಕನ್ನಡ ಬಳಗವು ಮ್ಯಾಂಚಸ್ಟರಿನಲ್ಲಿ ಪ್ರಪ್ರಥಮ ಕನ್ನಡ ವಿಶ್ವಸಮ್ಮೇಳನವನ್ನು ಯಶಸ್ವಿಯಾಗಿ ಆಚರಿಸಿತು. ಅದರಲ್ಲಿ ಸ್ವಯಂಸೇವಕನಾಗಿ ಪಾಲ್ಗೊಂಡು ಮಾಡಿದ ಕೆಲಸ, ಸಲಹೆ, ಸಹಕಾರ ನಾನಂತೂ ಮರೆತಿಲ್ಲ.

ಅಲಕನೂರು ಅಥಣಿ ಪಟ್ಟಣದ ಪಕ್ಕದಲ್ಲಿಯ ಒಂದು ಹಳ್ಳಿ. ಅಲ್ಲಿಯೇ ಅವರ ಹುಟ್ಟು. ಪೋಷಣೆ ಮತ್ತು ಶಿಕ್ಷಣಕ್ಕೆ ಸೌಲಭ್ಯ ಒದಗಿಸಿಕೊಟ್ಟ ಅವರ ಅಣ್ಣನನ್ನು ದೇವರಂತೆ ಅವರು ಸದಾ ನೆನೆಯುತ್ತಿದ್ದರು. ಮುಂದೆ ಅಹಮದಾಬಾದಿನಲ್ಲಿ ವೈದ್ಯಕೀಯ ಶಿಕ್ಷಣ. ಎಂಬಿಬಿಎಸ್ ಎಂಡಿ ಡಿಗ್ರಿ ಗಳಿಸಿ ಬೆಳಗಾವಿಯಲ್ಲಿ ಕಾರ್ಡಿಯಾಲಾಜಿ ಕನ್ಸಲ್ಟಂಟಾಗಿ ವೈದ್ಯಕೀಯ ವ್ಯವಸಾಯ ಪ್ರಾರಂಭಿಸಿದರು. ಅದರ ಜೊತೆಗೆ ಸಿವಿಲ್ ಆಸ್ಪತ್ರೆಯಲ್ಲಿ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ಹೆಸರುಗಳಿಸಿದರು. ೧೯೭೬ರಲ್ಲಿ ಮೊದಲ ಬಾರಿಗೆ ಅವರು ಇಂಗ್ಲಂಡಿಗೆ ಬಂದಾಗಿನಿಂದ ಅವರ ನನ್ನ ಕುಟುಂಬಗಳ ಮಧ್ಯೆ ಸ್ನೇಹ, ಅಂತಃಕರಣ ಬೆಳೆದು ಗಾಢ ಸಂಬಂಧ ಬೆಸುಗೆ ಹಾಕಿತು. ನನ್ನ ಅವರ ಎರಡೂ ಕುಲಕರ್ಣಿ ಮನೆತನಗಳು ಒಂದಾದವೇನೋ ಅನ್ನುವಷ್ಟು ನಿಕಟವಾದೆವು. ವಯಸ್ಸಿನಿಂದ ಹಿರಿಯರಾಗಿದ್ದು ನನ್ನ ಮೇಲೆ ಅಣ್ಣನಂತೆ ಕೊನೆಯವರೆಗೆ ಪ್ರೀತಿಯ ಮಳೆಗೆರೆದರು. ಅವರಲ್ಲಿ ಪುಟ್ಟಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರನ್ನೂ ಚುಂಬಕದಂತೆ ಎಳೆದು ವಶೀಕರಣ ಮಾಡುವ ಗುಣವಿತ್ತು ಎಂದು ಕೇಳಿದ್ದನ್ನು ನನ್ನ ಮಿತ್ರರಿಂದಲೂ ಕೇಳಿದ್ದೇನೆ. ಅವರ ಫ್ಯಾಮಿಲಿ ಪ್ರಾಕ್ಟೀಸಿನ ರೋಗಿಗಳಲ್ಲೂ ಜನಪ್ರೀಯರಾಗಿ ಸಹೋದ್ಯೋಗಿಗಳ ಆದರಣೀಯ ಮಿತ್ರರಾಗಿ, ವೈದ್ಯಕೀಯ ವೃತ್ತಿ ಮಾಡಿ ೧೯೯೫ರಲ್ಲಿ ನಿವೃತ್ತರಾದರು. ಆಯುರ್ವೇದದ ಡಾಕ್ಟರಾದ ಅವರ ಪತ್ನಿ ಅಮರಜಾ ಮತ್ತು ಅವರು ಮಹಾರಾಷ್ಟ್ರದ ಪುಣೆಯಲ್ಲಿ ಡಾಕ್ಟರ್ ವೃತ್ತಿಯಲ್ಲಿದ್ದ ತಮ್ಮ ಹಿರಿಯ ಮಗನನ್ನು ಸೇರಿದರು. ಅಲ್ಲಿಯೂ ನಿವೃತ್ತ ಎನ್.ಆರ್.ಐ ಸಂಘಟನೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

ಮೊದಲಿನಿಂದಲೂ ಮರಾಠಿ ಭಾಷೆ, ಮರಾಠಿ ಸಂಪರ್ಕವಿದ್ದು ದ್ವಿಭಾಷಿಯಾದರೂ ಕನ್ನಡದ ಬಗ್ಗೆ ಅವರ ಅಭಿಮಾನ ಎಂದೂ ಕುಂದಲಿಲ್ಲ. ಅವರಿಗೆ ಯಾವಾಗಲೂ ಸಾಂಸ್ಕೃತಿಕ, ಧಾರ್ಮಿಕ ವಿಷಯಗಳಲ್ಲಿ ಆಸ್ಥೆ ಇತ್ತು. `ಕನ್ನಡ ಬಳಗ`ದ ಸಂಸ್ಥಾಪನೆಯಾದಾಗ ಪ್ರಥಮ ೧೫ ಅಜೀವ ಸದಸ್ಯರಲ್ಲಿ ಅವರೊಬ್ಬರೆಂಬ ಹೆಗ್ಗಳಿಕೆ ಅವರದು.

ಕೊನೆಯ ದಿನಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಈ ವರ್ಷ ನಮ್ಮನಗಲಿದ ಡಾ. ಗೋಪಾಲ ಕುಲಕರ್ಣಿಯವರಿಗೆ, ಪತ್ನಿ ಮತ್ತು ಪುಣೆಯಲ್ಲಿರುವ ಮಗನಲ್ಲದೇ, ಈ ದೇಶದಲ್ಲಿ ವಾಸಿಸುವ ಇನ್ನೊಬ್ಬ ಮಗ ಮತ್ತು ಮಗಳು ಇದ್ದಾರೆ.

ನನಗೆ ಆತ್ಮೀಯರಾಗಿದ್ದ `ನನ್ನ ಗೋಪಣ್ಣ`ನ ಚೇಷ್ಟೆ ಹರಟೆ ಸದಾ ನೆನಪಾಗುತ್ತದೆ. ಅವರ ಹಸನ್ಮುಖ ಇಂದಿಗೂ ನನ್ನ ಕಣ್ಣೆದುರು ಕಾಣುತ್ತಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಕೇಳಿಕೊಳ್ಳುತ್ತೇನೆ.

11 thoughts on “ನನ್ನ ಗೋಪಣ್ಣ – ಡಾ ಅರವಿಂದ ಕುಲಕರ್ಣಿ ಬರೆದ ಶ್ರದ್ಧಾಂಜಲಿ

 1. ಡಾ. ಅರವಿಂದ್ ಕುಲಕರ್ಣಿಯವರಿಗೆ ,ನಮಸ್ಕಾರ.
  ನನ್ನ ಅನಿಸಿಕೆಗೆ ನಿಮ್ಮ ವಿಶ್ವಾಸದ ,ಅಭಿಮಾನದ ಪ್ರತಿಕ್ರಿಯೆಗೆ ನಾನು ಕೃತಜ್ಞತೆಯಿಂದ ಮೂಕಳಾಗಿದ್ದೇನೆ. ನಾನು ಬೆಳಗಾವಿ ಜಿಲ್ಲೆಯವಳು.ನನ್ನ ತಾಯಿ ಅಥಣಿ ಹತ್ತಿರ ಐನಾಪೂರದವರು .ಹೀಗಾಗಿ ಅದು ನನ್ನಜ್ಜಿಯೂರು .ಅಲ್ಲಿ ಸುತ್ತ ಎಲ್ಲ ಸಂಬಂಧದ ಬಳ್ಳಿ.ಗೋಪಾಲ್ ಕುಲಕರ್ಣಿಯವರಂಥ ಹಿರಿಯ ಚೇತನದ ಮೂಲ ಅಲ್ಲಿಯೇ ,ಪಕ್ಕದಲ್ಲಿಯೇ ಅಂದರೆ ಅಭಿಮಾನವಲ್ಲವೇ? ನಿಮ್ಮ ಲೇಖನದಿಂದ ಈ ವಿಷಯ ತಿಳಿದು ,ನನ್ನ ಹೆಮ್ಮೆಗೆ ಕಾರಣವಾದ ನಿಮಗೆ ಅನಂತ ಧನ್ಯವಾದಗಳು.
  ವಿಶ್ವಾಸಿ
  ಸರೋಜಿನಿ ಪಡಸಲಗಿ

  Liked by 1 person

 2. ಕನ್ನಡ ಬಳಗದ ಹುಟ್ಟಿಗೆ ಕಾರಣರಾಗಿ ಕನ್ನಡಿಗರನ್ನು ಒಂದು ಮಾಡಿದ ಹಿರಿ ಜೀವವನ್ನು ಪರಿಚಯಿಸಿದ್ದಕ್ಕೆ ಅರವಿಂದ ಕುಲಕರ್ಣಿಯವರಿಗೆ ಧನ್ಯವಾದಗಳು. ಇಂತಹ ಹಿರಿ ಚೇತನ ಓಗೊಡದ ನಾಡಿಗೆ ತೆರಳಿದ್ದು ಖೇದದ ವಿಷಯವೇ ಸರಿ. ಇವರಂಥ ಮಹಾನುಭಾವರು ನಮಗೆಲ್ಲ ದಾರಿದೀಪ. ಅವರ ಸಮರ್ಪಣಾ ಮನೋಭಾವದಿಂದ ಉದಯಿಸಿದ ಬಳಗದಿಂದಲೇ ನಾವಿಂದು ಅನಿವಾಸಿಯ ಹುಟ್ಟನ್ನು ಕಂಡಿದ್ದೇವೆ; ಈ ಕೂಸನ್ನು ಪೋಷಿಸಿ ಬೆಳೆಸುವುದು ನಮ್ಮ ಗುರಿಯಾಗಿರಲಿ.

  Liked by 1 person

  • ಪ್ರಿಯ ರಾಮಶರಣರಿಗೆ ,
   ನಮಸ್ಕಾರ.
   ನಿಮ್ಮನ್ನು ರಾಮಚರಣರೆಂದು ತಪ್ಪು ಬರೆದಿದ್ದೆ. ಅದಕ್ಕೆ ಕ್ಷಮೆ ಕೇಳುವೆ. ಹಿರಿಯ ಆಗಲಿದ ಡಾಕ್ಟರ್ ಗೋಪಾಲ ಕುಲಕರ್ಣಿಯವರನ್ನು ನೀವು ಆತ್ಮೀಯ ರೀತಿಯಿಂದ ನೆನಿಸಿರುವಿರಿ. ಅದಕ್ಕೆ ಕೃತಜ್ಞತೆ ಸಲ್ಲಿಸುವೆ.ಅವರು ನಮ್ಮ ಕನ್ನಡ ಬಳಗಕ್ಕೆ ಯಾವ ಯಾವ ಬಗೆಯ ಸಲಹೆ,ಸಹಕಾರ ನೀಡಿದ್ದರು ಎಂಬುದನ್ನು ಅವರನ್ನು ಅರಿತ ಗೆಳೆಯರಿಗೆ ಮಾತ್ರ ಗೊತ್ತು ಇದ್ದಿತು. ಊಳಿದ ಸದಾಸ್ಸ್ಯರಿಗೆಲ್ಲ ಇದು ತಿಳಿಯಲಿ ಎಂದು ನಾನು ಹೆಚ್ಚಿಗೆ ವಿವರವಾಗಿ ಈ ಶ್ರೀದ್ಧಾಂಜಲಿಯಲ್ಲಿ ಬರೆದ ಉದ್ದೇಶ .
   ಅರವಿಂದ

   Like

 3. ಪ್ರಿಯ ಜಯತೀರ್ಥರಿಗೆ
  ನಮಸ್ಕಾರ. ನೀವು ಗೋಪಣ್ಣರ ಬಗ್ಗೆ ಬರೆದ ಕಮೆಂಟ್ ಬಹಳ ಚೆನ್ನಾಗಿದೆ. ಕೇಶವನು ಅದನ್ನು ನಮ್ಮ ಅನಿವಾಸಿಯಲ್ಲಿ ಪ್ರಕಟಿಸಿದ್ದುದು ಅತಿ ಸಮಂಜಸ
  ನಿಮ್ಮಿಬ್ಬರಿಗೂ ಹಾರ್ದಿಕ ಕೃತಜ್ಞತೆಗಳು.
  ಅರವಿಂದ

  Like

 4. ಗೋಪಾಲ್ ಕುಲಕರ್ಣಿ ನನ್ನ ತಂದೆಯ ಸೋದರಮಾವ. ಈ ಶ್ರದ್ಧಾಂಜಲಿ ಓದಿದ ನನ್ನ ತಂದೆ ತಮ್ಮ ನೆನಪಿನ ಬುತ್ತಿಯನ್ನು ಹೊರತೆರದರು:

  `ಡಾ. ಗೋಪಿಮಮ ನನ್ನ ತಾಯಿಯ ತಂದೆಯ ಅಣ್ಣನ ಮಗನು. ಅಂದರೆ ನನಗೆ ಸೋದರ ಮಾಮಾ. ಇವರ ತಾಯಿಯನ್ನು `ತಾಯೀ` ಎಂದೇ ಕರೆಯುತ್ತಿದ್ದೆವು. ಇವರ ತಂದೆ ರಾಘುಮುತ್ಯಾ ಧಾರ್ಮಿಕರಾಗಿದ್ದರು.

  ಗೋಪಿಮಾಮಾ ಎಂಬಿಬಿಎಸ್ ಮುಗಿಸಿ ಮುಂಬೈನಲ್ಲಿ ಎಂಡಿಗೆ ಇದ್ದನು. ಆಗ ನಾನು ಆತನಿಗೆ ಭೆಟ್ಟಿ ಆಗಿದ್ದೆನು. ಆತ ಹೇಳಿದ್ದು ನನಗೆ ಇನ್ನೂ ನೆನಪಿದೆ, `ಜಯತೀರ್ಥಾ, ಬಡತನದಿಂದ ಬೆಂದು ಮುಂದ್ ಬರಬೇಕು, ಮುಂದ ಸುಖ, ಎಲ್ಲಾನೂ ಸುಖಾ.` ಆತನು ಎಂಡಿ ಮುಗಿಸಿ ಡಾ ಅಮರಜಾ (ಆಯುರ್ವೇದಿಕ್ ಡಾಕ್ಟರ್) ಇವರನ್ನು ವಿವಾಹವಾಗಿ ಬೆಳಗಾಂವಿಯಲ್ಲಿ ಪ್ರಾಕ್ಟಿಸ್ ಮಾಡಹತ್ತಿದ್ದನು. ನನಗೆ ಬೆಳಗಾಂವಿಗೆ ಬದಲಿ ಆದಾಗ ಟಿಳಕವಾಡಿ ಮಂಗಳವಾರ ಪೇಟದಲ್ಲಿ ಶ್ರೀ ಸಿಧೋರೆಯವರ ಔಟ್-ಹೌಸಿನಲ್ಲಿ ಮನೆಮಾಡಿ ನನ್ನ ತಾಯಿಯವರೊಡನೆ ಇರತೊಡಗಿದೆನು. ಒಂದು ದಿನ ಗೋಪಿಮಾಮಾ ದಾರಿಯಲ್ಲಿ ಭೇಟಿಯಾದನು. ಇಬ್ಬರೂ ಹಳೆಯ ಸಮಾಚಾರ ಮಾತಾಡುತ್ತ, ನನ್ನ ಮನೆಗೆ ನನ್ನ ತಾಯಿಯನ್ನು ಕಾಣಲು ಬಂದನು. ಇಬ್ಬರೂ ಹಿಂದಿನ ಸಂಗತಿಗಳನ್ನು ಮಾತನಾಡಿದರು. ನನ್ನ ತಾಯಿ ಮಾಡಿದ ಭಕ್ಕರಿ ಪಲ್ಯಾ ಉಂಡನು. ನನಗೆ ಏನಾದರೂ ಸಹಾಯ ಬೇಕಿದ್ದರೆ ತನಗೆ ತಿಳಿಸಲು ಹೇಳಿದನು.

  ಮುಂದೆ ನನ್ನ ಬದಲಿ ಹುಬ್ಬಌಗೆ ಆಯಿತು. ಆಗ ಗೋಪಿಮಾಮಾ ಮನೆಗೆ ಬಂದು ತಾನು ಇಂಗ್ಲಂಡಿಗೆ ಹೋಗುವುದಾಗಿ ಹೇಳಿದನು. ಅಲ್ಲಿಂದ ಅವನ ಸಂಪರ್ಕ ಇಲ್ಲದಾಯಿತು.

  ನನ್ನ ಎರಡನೆ ಮಗ ಕೇಶವ ಎಫ್ ಆರ್ ಸಿ ಆರ್ ಓದಲು ಇಂಗ್ಲಂಡಿಗೆ ತೆರಳುವ ಮೊದಲು, ನಾನು ಗೋಪಿಮಾಮಾನ ಪುಣೆಯ ಫೋನ್ ನಂಬರ್ ಪಡೆದು ಅವನಿಗೆ ಈ ವಿಷಯ ತಿಳಿಸಿದೆನು. ಆತನು ಶುಭಾಶಯಗಳನ್ನು ಹೇಳಿದನು. ನಾನು ಇಂಗ್ಲಂಡದಲ್ಲಿ ಯಾರಾದರೂ ನನ್ನ ಮಗನಿಗೆ ಸಹಾಯ ಮಾಡಬಹುದೇ ಎಂದಿ ಕೇಳಿದೆನು. ಆತನು ಇಬ್ಬರ ಫೋನ್ ನಂಬರ ಕೊಟ್ಟು ಹೇಳಿದನು, `ಕಾಳಜೀ ಮಾಡಬ್ಯಾಡ. ಅಲ್ಲಿಗೆ ಹೋದವರು ತಾವs ಹಾದೀ ಹುಡುಕಿ ಸರಿಯಾಗಿ ಇರತಾರ, ಸ್ವಲ್ಪ ಕಷ್ಟ ಪಡಲಿ.`

  ಈ ಬರಹವನ್ನು ಓದಿದೆನು. ಒಂದೆರೆಡು ನಿಮಿಷ ಮೌನ ತಾಳಿದೆನು. ಗೋಪಿಮಾಮಾನ ಹಸನ್ಮುಖ, ಚೇಷ್ಟೆ, ನಿರಾಡಂಬರದ ಜೀವನ ಎಲ್ಲ ನೆನಪಿಗೆ ಬಂದಿತು. ನಾನೂ ಮನಸಾರೆ ಆತನಿಗೆ ನಮಸ್ಕಾರ ಮಾಡಿ, ಆಶ್ರುತರ್ಪಣದ ಶ್ರದ್ಧಾಂಜಲಿಯನ್ನು ಅರ್ಪಿಸಿದೆನು.`

  Liked by 2 people

 5. ಡಾ.ಅರವಿಂದ್ ಕುಲಕರ್ಣಿಯವರು ಬರೆದ ಡಾ.ಗೋಪಾಲ ಕುಲಕರ್ಣಿಯವರ ಪರಿಚಯ ಲೇಖನ ಓದಿ ,ಅವರೊಂದು ಬತ್ತದ ಉತ್ಸಾಹದ ಚಿಲುಮೆಯಾಗಿದ್ದರು ಅಂತ ಯಾರೂ ತಿಳಿಯಬಹುದು.ಅವರ ವ್ಯಕ್ತಿತ್ವದ ಉದಾತ್ತತೆಯ ಕಲ್ಪನೆ ಬರುತ್ತದೆ .ಇಂತಹ ಹಿರಿಯ ಜೀವಿಗಳ ಜೀವನೋತ್ಸಾಹ ,ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಲಿ‌.ಈ ಅದಮ್ಯ ಚೇತನ ನನ್ನ ತವರು ಜಿಲ್ಲೆಯದು.ನನ್ನ ಅಜ್ಜಿಯ ಊರಿನ ಪಕ್ಕದೂರಿನದು ಅಂತ ತಿಳಿದು ನನ್ನೆದೆ ಹೆಮ್ಮೆಯಿಂದ ಬಿಗೀತು .ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನೀಯಲಿ.ಇಂತಹ ಉದಾತ್ತ ವ್ಯಕ್ತಿಯ ಪರಿಚಯ ಲೇಖನ ಕೊಟ್ಟದ್ದಕ್ಕೆ ಅರವಿಂದ ಕುಲಕರ್ಣಿಯವರಿಗೆ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Liked by 2 people

  • ಸರೋಜಿನಿಯವರಿಗೆ
   ನಮಸ್ಕಾರ.
   ಡಾಕ್ಟರ್ ಗೋಪಾಲ ಕುಲಕರ್ಣಿ ಅವರ ಶ್ರದ್ಧಾಂಜಲಿ ಅರ್ಪಿಸಿದ ನನ್ನ ಲೇಖನ ಬಗ್ಗೆ ನೀವು ಆತ್ಮೀಯ ರೀತಿಯ ಪ್ರತಿಕ್ರಿಯೆ ಬರೆದುದಕ್ಕೆ ಕೃತಜ್ಞತೆ ಸಲ್ಲಿಸುವೆ.
   ನೀವು ಕೂಡ ಗೋಪಣ್ಣನವರ ಹತ್ತಿರ ಊರವರೆಂದು ತೆಳಿದು ಇನ್ನೂ ಹೆಚ್ಚಿಗೆ ಆನಂದವಾಯಿತು.
   ವಿಶ್ವಾಸಿ
   ಅರವಿಂದ

   Like

 6. ಗೋಪಾಲ ಕುಲಕರ್ಣಿಯವರ ಪರಿಚಯವನ್ನು ಮಾಡಿಕೊಟ್ಟ ಅರವಿಂದ ಕುಲಕರ್ಣಿಯಯವರಿಗೆ ಧನ್ಯವಾದಗಳು.
  ಕೆಲವು ವ್ಯಕ್ತಿಗಳು ತಮ್ಮ ಚೈತನ್ಯದಿಂದ ಅಜರಾಮರವಾಗಿಬಿಡುತ್ತಾರೆ. ಡಾ ಗೋಪಾಲ ಕುಲಕರ್ಣಿಯವರು ಹಾಗೇ ಎಂದು ಭಾವಿಸುವೆ. ಅವರ ಆತ್ಮಕ್ಕೆ ಶಾಂತಿ ಕೋರುವೆ.

  Liked by 1 person

  • ಪ್ರಿಯ ಪ್ರೇಮಲತಾ ಅವರಿಗೆ,

   ನಿಮ್ಮ ಸೌಜನ್ಯದ ಪ್ರತಿಕ್ರಿಯೆಗೆ ಅನಂತ ಕೃತಜ್ಞತೆಗಳು.
   ಅರವಿಂದ

   Like

 7. ನಾನು ಡೋಂಕಾಸ್ಟರಿಗೆ ಬಂದಾಗಲೇ ‘ಜಿ ಆರ್“ ಎಂದೇ ನಮಗೆಲ್ಲ ಪರಿಚಿತರಾಗಿದ್ದ ಗೋಪಾಲ ಕುಲಕರ್ಣಿಯವರನ್ನು ನಾನು ಮೊದಲು ಕಂಡದ್ದು. ಒಬ್ಬ ಹಿರಿಯ ಚೇತನವಾದಿದ್ದ ಅವರ ಬಗ್ಗೆಈಗಿನ ಪೀಳಿಗೆಯವರಿಗೆ ಗೊತ್ತಿರಲಿಕ್ಕಿಲ್ಲ.ಅವರ ಮನೆಯಲ್ಲಿ ಒಂದು ದೀಪಾವಳಿಯಂದು ಕನ್ನಡ ಬಳಗದ ನೀಲಿ ನಕ್ಷೆ ಹಾಕಿದ್ದು. ನಂತರ ಎಷ್ಟೆಲ್ಲ ಜನ ಪೋಷಿಸಿದ್ದಾರೆ ಲೆಕ್ಕವಿಲ; ಮೈಮುರಿದು ದುಡಿದಿದ್ದಾರೆ!,ಅವರೆಲ್ಲರೂ ಪ್ರಾತಃಸ್ಮರಣೀಯರು ಇಂದು. ಆಗ ಸ್ವಯಂಸೇವಕರು ತಾವೇ ಅಡಿಗೆ ಮಾಡಿ ಕನ್ನಡಬಳಗದ ಕೂಟದಲ್ಲಿ ಸದಸ್ಯರಿಗೆ ಉಣಬಡಿಸುವಂತಿತ್ತು. ಆಗ ನಮ್ಮದು ಚಿಕ್ಕ ಸಂಘ. ಅಮರಜಾ ಮತ್ತು ಜಿ ಆರ್ ಅಡುಗೆ ಮನೆಯಿಂದ ವೇದಿಕೆಯ ವರೆಗೆ ಸಕ್ರಿಯವಾಗಿ ಭಾಗವಹಿಸಿತ್ತಿದ್ದುದು ನನಗೆ ನೆನಪಿದೆ. ಈ ಪದ್ಧತಿ ಹಾಗೇ ಮುಂದುವರೆಯಿತು. ಇದೊಂದು ಅವರ ನಿಕಟವರ್ತಿಯಿಂದ ಹೃದ್ಯಂಗ ಶ್ರದ್ಧಾಂಜಲಿ. ಅದಕ್ಕೆ ನನ್ನದೂ ಒಂದು ಅಶ್ರುತರ್ಪಣ ಕೂಡಿಸುವೆ!

  Like

  • ಪ್ರಿಯ ಶ್ರೀವತ್ಸನಿಗೆ
   ನಮಸ್ಕಾರ. ನೀನು ಡಾಕ್ಟರ್ ಗೋಪಾಲ ಕುಲಕರ್ಣಿಯವರ ಶ್ರೀದ್ಧಾಂಜಲಿ ಬಗ್ಗೆ ಬರೆದ ನನ್ನ ಲೇಖನಕ್ಕೆ ಸೂಕ್ತ ಪ್ರತಿಕ್ರಿಯೆ ಕಳುಹಿಸಿರುವಿ. ತುಂಬಾ ಕೃತಜ್ಞತೆಗಳು.
   ನೀನು ಹಾಗು ದಿ.ವಾಣಿ ( ನಿನ್ನ ಮಡದಿ) ಕೂಡ 5 ಕುಟುಂಬಗಳಲ್ಲಿ ವಂದು ಮೂಲ ಕನ್ನಡ ಬಳಗ(ಯು.ಕೆ.) ದ ಸಂಸ್ಥಾಪಕರಲ್ಲಿ ಇದ್ದಿದ್ದಿರಿ ಎಂದು ನಾನು ಹೆಮ್ಮೆಯಿಂದ
   ತಿಳಿಸಲು ಇಚ್ಛಿಸುವೆ. ಗೋಪಣ್ಣನವರು ನಿನ್ನ ಊರಾದ ಡೋಂಕಾಸ್ಟರದಲ್ಲಿ ಹಲವಾರು ವರುಷ ವೈದ್ಯಕಿ ವೃತ್ತಿಯಲ್ಲಿ ಕಾಲಹರಣೆ ಮಾಡಿದ್ದರಿಂದ ನಿನಗೆ ಅವರ ಪರಿಚಯ ಚೆನ್ನಾಗಿ ಆಗಿತ್ತು. ಇದೆ ನಮ್ಮೆಲ್ಲರ ಸ್ನೇಹ ಸಮ್ಮಿಲನಕ್ಕೆ ಕಾರಣವಾಯಿತು. ಇವೆಲ್ಲ ಎಂದಿಗೂ ಮರೆಯಲಾಗದ ಘಟನೆಗಳು.ಗೋಪಣ್ಣನವರಾದರೂ ಕೊನೆಯ ವರೆಗೆ ನಿನ್ನ ಕುಟುಂಬವನ್ನು ನೆನೆಯುತ್ತಿದ್ದರು.
   ಅರವಿಂದ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.