“Every positive integer is a friend of Ramanujan”
ಈ ಮಾತುಗಳನ್ನು ಹೇಳಿದ ವ್ಯಕ್ತಿ ಜಾನ್ ಲಿಟ್ಟಲ್ ವುಡ್, ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನಲ್ಲಿ ರಾಮಾನುಜನ್ ಜೊತೆಯಲ್ಲಿದ್ದ ಒಬ್ಬ ಪ್ರಖ್ಯಾತ ಗಣಿತಜ್ಞ.
ನಮ್ಮಲ್ಲಿ ಗಣಿತವನ್ನು ಬಲ್ಲ, ಗಣಿತದಲ್ಲಿ ಆಸಕ್ತಿಯುಳ್ಳ ಯಾರೇ ಆಗಲಿ, ಶ್ರೀನಿವಾಸ ರಾಮಾನುಜನ್ ಅವರ ಹೆಸರು ಹಾಗೂ ಆತನ ಗಣಿತದ ಪ್ರತಿಭೆಯ ಬಗ್ಗೆ ತಿಳಿಯದಿದ್ದವರು ಬಹಳ ಅಪರೂಪ. ೧೯ನೆಯ ಶತಮಾನದಲ್ಲಿ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಉತ್ತುಂಗದಲ್ಲಿ, ಭಾರತದ ದಕ್ಷಿಣದಲ್ಲಿರುವ ತಮಿಳುನಾಡಿನ ಒಂದು ಸಣ್ಣ ಪಟ್ಟಣದಲ್ಲಿ ಅರಳಿದ ಈ ಅಸಾಧಾರಣ ಗಣಿತದ ಪ್ರತಿಭೆಯೊಂದು, ಮುಂದೆ ಪೂರ್ವ-ಪಶ್ಚಿಮಗಳೆರಡನ್ನೂ ಸಮಾನವಾಗಿ ಬೆರಗುಗೊಳಿಸಿತ್ತು. ಒಬ್ಬ ಸಾಮಾನ್ಯನಾದ, ಅರ್ಥವ್ಯಾಪ್ತಿಗೆ ಸಿಲುಕದ ಮೇಧಾವಿ ರಾಮಾನುಜನ್ ಜೀವನ ವೃತ್ತಾಂತವು, ಒಂದು ನಿಗೂಢ ಹಾಗೂ ಚಮತ್ಕಾರಿಕ ಅಂತಃಸತ್ವದ ಕಥೆಯಾಗಿದ್ದು, ನನಗೆ ಅದರ ಬಗ್ಗೆ ಅಷ್ಟಿಷ್ಟು ತಿಳಿದಿತ್ತು. ೧೯೯೬ರಲ್ಲಿ ಬ್ರಿಟನ್ನಿಗೆ ಬಂದ ನಂತರ, ಒಮ್ಮೆ ನಮ್ಮ ಗೆಳೆಯರಲ್ಲಿ ಹಲವರು ತಾವು ಓದಿದ ಪುಸ್ತಕವೊಂದರ ಬಗ್ಗೆ ಒಮ್ಮೆ ಚರ್ಚೆ ನಡೆಸಿದ್ದರು. ಅವರು ಚರ್ಚಿಸುತ್ತಿದ್ದ ಆ ಪುಸ್ತಕದ ಹೆಸರೇ ನನ್ನ ಈ ಲೇಖನದ ಶೀರ್ಷಿಕೆ The Man Who Knew Infinity. ಅವರೆಲ್ಲಾ ಕೊಂಡಾಡುತ್ತಿದ್ದ ವ್ಯಕ್ತಿಯೇ, ನಾನೀಗ ವಿಶ್ಲೇಷಿಸಲಿರುವ ಚಲನಚಿತ್ರದ ನಾಯಕನೂ ಹೌದು.

ಕಳೆದ ೨೫ ವರ್ಷಗಳಿಂದ ಒಬ್ಬ ಖಭೌತಶಾಸ್ತ್ರಜ್ಞನ ಜೊತೆ ದಾಂಪತ್ಯ ನಡೆಸಿರುವ ನನಗೆ, ಗಣಿತಶಾಸ್ತ್ರದ ಚರ್ಚೆ ಅಪರೂಪದ ವಿಷಯವೇನಲ್ಲ. ರಾಮಾನುಜನ್ ಬಗ್ಗೆ ಆಗಾಗ್ಗೆ ಹಲವಾರು ಆಸಕ್ತಿಪೂರ್ಣ ವಿಷಯಗಳನ್ನು ನನ್ನವರ ಬಾಯಲ್ಲಿ ಕೇಳುತ್ತಲೇ ಇರುತ್ತೇನೆ. ಆದರೆ ೧೯೯೧ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕದ ಲೇಖಕನಾದ ರಾಬರ್ಟ್ ಕಾನಿಗೆಲ್, ಒಬ್ಬ ಅಮೆರಿಕನ್ ಲೇಖಕ. ಈ ಪುಸ್ತಕವನ್ನು ಬರೆಯುವ ಮೊದಲು ಆತನಿಗೆ, ರಾಮಾನುಜನ್ ಬಗ್ಗೆ, ಅವನ ಸಾಧನೆಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲವಂತೆ. ಆದರೆ ಹಲವಾರು ಪುಸ್ತಕಗಳನ್ನು ಬರೆದು ಹೆಸರುವಾಸಿಯಾಗಿದ್ದ ವ್ಯಕ್ತಿ. ೧೯೮೮ರಲ್ಲಿ, ಆತ ರಾಮಾನುಜನ್ ಬಗ್ಗೆ ಓದಿ, ಕೇಳಿ ತಿಳಿದುಕೊಂಡನಂತರ, ತುಂಬಾ ಪ್ರಭಾವಿತನಾಗಿ ರಾಮಾನುಜನ್ ಜೀವನಚರಿತ್ರೆಯನ್ನು ಬರೆಯುವ ನಿರ್ಧಾರ ಮಾಡಿದನೆಂದು ಓದಿದ್ದೆ. ಸುಮಾರು ೨ ವರ್ಷಗಳ ಕಾಲ, ಈತ ಭಾರತದ ದಕ್ಷಿಣದಲ್ಲಿರುವ ತಮಿಳುನಾಡಿಗೆ ಹೋಗಿ, ಅಲ್ಲಿಯೇ ವಾಸಿಸುತ್ತಾ, ರಾಮಾನುಜನ್ ಹುಟ್ಟಿ, ಬೆಳೆದು, ಓದಿ, ಕೆಲಸಮಾಡಿದ್ದ ಸ್ಥಳಗಳಲ್ಲೆಲ್ಲಾ ತಿರುಗಾಡಿ, ಅವರೊಂದಿಗೆ ಒಡನಾಟವಿದ್ದ ವ್ಯಕ್ತಿಗಳು ಮತ್ತು ಅವರ ಕುಟುಂಬದವರೊಡನೆ ಬೆರೆತು ಮಾತನಾಡಿ ಸಂಗ್ರಹಿಸಿದ ವಿಷಯಗಳು, ಹಾಗೂ ಇಂಗ್ಲೆಂಡಿನ ಪ್ರಸಿದ್ಧ ಕೇಂಬ್ರಿಜ್ ವಿಶ್ವವಿದ್ಯಾಲಯದ, ಟ್ರಿನಿಟಿ ಕಾಲೇಜಿನಲ್ಲಿ ರಾಮಾನುಜನ್ ನಡೆಸಿದ ಮಹಾನ್ ಗಣಿತ ಸಂಶೋಧನೆ ಮತ್ತು ರಾಮಾನುಜನ್ ಟಿ.ಬಿ (ಕ್ಷಯ) ರೋಗಕ್ಕೆ ತುತ್ತಾದಾಗ ಅವರು ಅನುಭವಿಸಿದ ಕಷ್ಟಕಾರ್ಪಣ್ಯಗಳ ಬಗ್ಗೆ ಮತ್ತು ತಿರುಗಿ ಭಾರತಕ್ಕೆ ಮರಳಿದ ನಂತರ ಅವರ ಅಲ್ಪಾವಧಿಯ ಜೀವನ ಹಾಗೂ ಅವರ ಅಂತಿಮ ದಿನಗಳ ವರ್ಣನೆ ಇಷ್ಟನ್ನೂ ಸೇರಿಸಿ ಬರೆದಿರುವ ಈ ಪುಸ್ತಕವು, ಬಹುಶಃ ರಾಮಾನುಜನ್ ಬಗ್ಗೆ ಇದುವರೆಗೂ ಪ್ರಕಟವಾಗಿರುವ ಪುಸ್ತಕಗಳಲ್ಲೇ ಅತ್ಯುತ್ತಮವಾದದ್ದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇನೆ.

ಈಗ ೪ ವರ್ಷಗಳ ಹಿಂದೆ, ೨೦೧೧ರಲ್ಲಿ, ಈ ಮಹಾನ್ ಗಣಿತಜ್ಞನ ೧೨೫ ನೆಯ ಜನ್ಮ-ಶತಾಬ್ದಿಯ ಸಂದರ್ಭದಲ್ಲಿ, ರಾಬರ್ಟ್ ಕಾನಿಗೆಲ್ ಪುಸ್ತಕವನ್ನು ಭಾರತದ ಹಲವಾರು ಭಾಷೆಗಳಿಗೆ ತರ್ಜುಮೆ ಮಾಡುವ ಕಾರ್ಯಕ್ರಮವನ್ನು ಪ್ರಖ್ಯಾತ ಪ್ರಕಾಶನ ಸಂಸ್ಥೆ, National Book Trust of India ಕೈಗೊಂಡಿತ್ತು. ನನ್ನ ಆತ್ಮೀಯ ಸ್ನೇಹಿತ ಹಾಗೂ ಗಣಿತಶಾಸ್ತ್ರ ಪ್ರಾಧ್ಯಾಪಕನಾದ ಡಾ ಅರವಿಂದ ಶಾಸ್ತ್ರಿ, ತಾನು ಗಣಿತಜ್ಞ ರಾಮಾನುಜನ್ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯಕ್ಕೆ, ಪ್ರತಿಷ್ಟಿತ ಪ್ರಕಾಶಕರಾದ ನ್ಯಾಶನಲ್ ಬುಕ್ ಟ್ರಸ್ಟ್ ವತಿಯಿಂದ ನೇಮಿಸಲ್ಪಟ್ಟಿದ್ದೇನೆ, ಹಾಗೂ ಆ ಕಾರ್ಯವನ್ನು ಪ್ರಾರಂಭಿಸಿ ನಡೆಸುತ್ತಿರುವೆ ಎಂದು ತಿಳಿಸಿದ್ದನು. ಆ ವಿಷಯ ತಿಳಿದ ಕೂಡಲೆ, ನಾನೂ ಅದರಲ್ಲಿ ಭಾಗವಹಿಸಿ, ಅಲ್ಪಸ್ವಲ್ಪವಾದರೂ ನನ್ನ ಕೈಲಾಗುವ ಸಹಾಯ ಮಾಡಬೇಕೆಂಬ ಅಭಿಲಾಷೆ ಹುಟ್ಟಿತು. ನನ್ನ ಉತ್ಸಾಹವನ್ನು ಕಂಡ ಅರವಿಂದ, ನನಗೆ ಪುಸ್ತಕವನ್ನು ಓದಲು ತಿಳಿಸಿದ. ಸರಿ ಅಮೆಝಾನ್ ಮೂಲಕ ಥಟ್ಟನೆ ಪುಸ್ತಕ ತರಿಸಿ ಓದಲು ಪ್ರಾರಂಭಿಸಿದೆ. ಈ ಪುಸ್ತಕ ಒಂದೇ ದಿನದಲ್ಲಿ ನನ್ನ ಮನವನ್ನು ಸಂಪೂರ್ಣವಾಗಿ ಅಪಹರಿಸುವುದರಲ್ಲಿ ಯಶಸ್ವಿಯಾಗಿತ್ತು. ಅದನ್ನು ಕೆಳಗಿಡುವ ಮನಸ್ಸೇ ಇರಲಿಲ್ಲ. ಇಂತಹ ಅಸಾಧಾರಣ ಮೇಧಾವಿಯ ಜೀವನದಲ್ಲಿ ಇಷ್ಟೊಂದು ಕಷ್ಟಕಾರ್ಪಣ್ಯಗಳಿದ್ದವೇ? ಅದೆಲ್ಲವನ್ನೂ ಎದುರಿಸಿ ಆತ ನಡೆಸಿದ್ದ ಅಸಾಮಾನ್ಯ ಸಂಶೋಧನೆ, ಆತನ ಜೀವಿತದ ಸಮಯದಲ್ಲಿ ಅಂದಿನ ಬಹುತೇಕ ಮಂದಿಗೆ ತಿಳಿಯದೇ ಅಜ್ಞಾತವಾಗೇ ಉಳಿದಿತ್ತು ಎನ್ನುವ ಸಂಗತಿ ಮನಸ್ಸನ್ನು ಬಹಳ ನೋಯಿಸಿತ್ತು. ಎಲ್ಲದಕ್ಕಿಂತಲೂ, ಅಂತಹ ಅಸಾಧಾರಣ ಪ್ರತಿಭೆಗೆ ಅಷ್ಟು ಕಡಿಮೆ ಆಯಸ್ಸೇ? ಕೇವಲ ೩೨ ವರ್ಷಗಳ ತನ್ನ ಜೀವಿತಾವಧಿಯಲ್ಲಿ ಆತ ಬರೆದ ಪ್ರಮೇಯಗಳು, ಸೂತ್ರಗಳ ಬಗ್ಗೆ ಇಂದಿಗೂ ಪ್ರಪಂಚದ ಅನೇಕ ಗಣಿತಜ್ಞರು ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದಾರೆ. ಆತನ ಕಾರ್ಯಗಳು ಇನ್ನೂ ಗಣಿತಜ್ಞರನ್ನು ಆಶ್ಚರ್ಯಗೊಳಿಸತ್ತಲೇ ಇದೆ, ಮತ್ತು ಆತನ ಹಲವಾರು ಪ್ರಮೇಯಗಳು ಮತ್ತು ಸೂತ್ರಗಳನ್ನು ಇಂದು ಭೌತಶಾಸ್ತ್ರಜ್ನರು ತಮ್ಮ ಸಂಶೋಧನೆಗಳಲ್ಲಿ ಮತ್ತು ತಂತ್ರಜ್ನಾನದಲ್ಲಿ ಅಳವಡಿಸುತ್ತಿದ್ದಾರೆ ಎನ್ನುವುದು ಹೆಮ್ಮೆ ಮತ್ತು ಬೆರಗುಗೊಳಿಸುವ ಸಂಗತಿಯಲ್ಲವೇ!
ಇಂತಹ ಮಹಾನ್ ವ್ಯಕ್ತಿಯ ಜೀವನಚರಿತ್ರೆಯನ್ನಾಧರಿಸಿ ಚಲನಚಿತ್ರವೊಂದನ್ನು ನಿರ್ಮಿಸಲಾಗುತ್ತಿದೆ ಎನ್ನುವ ವಿಷಯ ನನಗೆ ತಿಳಿದಾಗ, ಅದನ್ನು ಬಹಳ ಕಾತುರದಿಂದ ನಿರೀಕ್ಷಿಸುತ್ತಿದ್ದೆ. ಪುಸ್ತಕದಲ್ಲಿ ಮುದ್ರಿತವಾದ ವಿಷಯಗಳು ನಮ್ಮನ್ನು ಎಷ್ಟೇ ಪ್ರಭಾವಿತಗೊಳಿಸಿದರೂ, ದೃಶ್ಯ ಮಾಧ್ಯಮ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎನ್ನುವುದರಲ್ಲಿ ಸಂದೇಹವಿಲ್ಲ. ಸಿನಿಮಾ ಮಾಧ್ಯಮವು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲಪುವುದು ಎನ್ನುವುದು ಒಂದು ವಾಸ್ತವ ಸಂಗತಿ. ಹಾಗಾಗಿ ರಾಮಾನುಜನ್ ಚಲನಚಿತ್ರವನ್ನು ನಾವು ಎದಿರುನೋಡುತ್ತಿದ್ದೆವು. ಕಡೆಗೆ ನಾವು ನಿರೀಕ್ಷಿಸುತ್ತಿದ್ದ ಘಳಿಗೆ ಬಂದು, ಬ್ರಿಟನ್ನಿನ ನಿರ್ದೇಶಕ ಮ್ಯಾಥ್ಯು ಬ್ರೌನ್ ನಿರ್ದೇಶನದಲ್ಲಿ, ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸಿದ ಈ ಮೇಲಿನ ಶೀರ್ಷಿಕೆಯ ಚಲನಚಿತ್ರ ಕಳೆದ ವಾರ ಬಿಡುಗಡೆಯಾಯಿತು. ಸುಮಾರು 1:54 ನಿಮಿಷಗಳ ಅವಧಿಯ ಈ ಚಿತ್ರವನ್ನು ವೀಕ್ಷಿಸಿದ ನಂತರ, ಈ ಸಿನಿಮಾ ಬಗ್ಗೆ ನನ್ನ ವಿಶ್ಲೇಷಣೆ ಇಂತಿದೆ.

CC:Wiki
ಇದೊಂದು ಅಲ್ಪಾವಧಿಯ ಚಲನಚಿತ್ರವಾದ್ದರಿಂದ, ಇಲ್ಲಿ ರಾಮಾನುಜನ್ ಅವರ ಬಾಲ್ಯ, ಶಾಲಾ-ಕಾಲೇಜಿನ ದಿನಗಳನ್ನು ಪೂರ್ಣವಾಗಿ ಕೈಬಿಡಲಾಗಿದೆ. ಕೇವಲ ಗಣಿತದಲ್ಲಿ ಮಾತ್ರಾ ಆಸ್ಥೆಯಿದ್ದ ರಾಮಾನುಜನ್ ಬೇರೆ ವಿಷಯಗಳಲ್ಲಿ ಎಂದಿಗೂ ಆಸಕ್ತಿ ತೋರಲೇ ಇಲ್ಲ. ಹಾಗಾಗಿ ಅವರು ಎಷ್ಟೇ ಪ್ರಯತ್ನಿಸಿದ್ದರೂ ಕೂಡಾ, ಅವರಿಗೆ ವಿಶ್ವವಿದ್ಯಾಲಯದ ಪದವಿಯನ್ನು ಸಂಪಾದಿಸಲಾಗಲಿಲ್ಲ. ಬ್ರಿಟಿಷ್ ವಸಾಹತು ಆಳ್ವಿಕೆಯ ಉತ್ತುಂಗದ ಆ ದಿನಗಳಲ್ಲಿ, ಸರ್ಟಿಫ಼ಿಕೇಟ್ ಇಲ್ಲದ ಜ್ಞಾನಕ್ಕೆ ಎಲ್ಲಿಯೂ ಬೆಲೆ ಇರಲಿಲ್ಲ. ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನದೆದಿರು ಹೋರಾಡುತ್ತಿದ್ದ ರಾಮಾನುಜನ್, ಕೆಲಸಕ್ಕಾಗಿ ಅಲೆಯುವ ದೃಶ್ಯ ನಿಜಕ್ಕೂ ದಾರುಣವೆನಿಸುತ್ತದೆ. ಅವರ ಗಣಿತದ ಪ್ರಾವಿಣ್ಯತೆಯ ಬಗ್ಗೆ ಅರಿವಿದ್ದ ಪರಿಚಿತ ನಾರಾಯಣ ಅಯ್ಯರ್ ಅವರ ಶಿಫ಼ಾರಸಿನ ಫಲವಾಗಿ, ಕಡೆಗೊಮ್ಮೆ ಅವರಿಗೆ ಮದ್ರಾಸಿನ ಪೋರ್ಟ್ ಟ್ರಸ್ಟ್ ಆಫ಼ೀಸಿನಲ್ಲಿ ಲೆಕ್ಕಿಗನ ಕಾರ್ಯ ದೊರಕುತ್ತದೆ. ಈ ಚಲನಚಿತ್ರವನ್ನು ಅಲ್ಲಿಂದ ಪ್ರಾರಂಭಿಸಿದ್ದಾರೆ. ತನ್ನ ಲೆಕ್ಕಿಗನ ಕೆಲಸಗಳ ಜೊತೆಗೆ, ಬಿಡುವಿನ ಸಮಯದಲ್ಲಿ ಗಣಿತದ ಪ್ರಮೇಯಗಳು, ಸೂತ್ರಗಳು, ಸಮೀಕರಣಗಳನ್ನು ಸೃಷ್ಟಿಸಿ ಬಿಡಿಸುವ ರಾಮಾನುಜನ್ (ಚಿತ್ರದಲ್ಲಿ- Dev Patel), ಪೋರ್ಟ್ ಟ್ರಸ್ಟ್ ಅಧಿಕಾರಿ ಸರ್ ಫ಼್ರಾನ್ಸಿಸ್ ಸ್ಪ್ರಿಂಗನ (ಚಿತ್ರದಲ್ಲಿ- Stephen Fry) ಮೂಲಕ, ಅಂದು ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನಲ್ಲಿದ್ದ ಪ್ರಖ್ಯಾತ ಗಣಿತಶಾಸ್ತ್ರಜ್ಞನೆಂದೆನಿಸಿದ್ದ ಗಾಡ್ಫ಼್ರೆ ಹೆರಾಲ್ಡ್ ಹಾರ್ಡಿಗೆ, ರಾಮಾನುಜನ್ ತಾವು ಸೃಷ್ಟಿಸಿದ್ದ ಗಣಿತದ ಪ್ರಮೇಯಗಳು ಮತ್ತು ಸೂತ್ರಗಳಿದ್ದ ಕಾಗದಗಳನ್ನು ಕಳಿಸಿಕೊಡುತ್ತಾರೆ. ಆ ಕಾಗದ ಮತ್ತು ಪುಸ್ತಕಗಳಲ್ಲಿದ್ದ ಗಣಿತದ ಪ್ರಮೇಯಗಳನ್ನು ನೋಡಿ ದಿಗ್ಬ್ರಮೆಗೊಂಡ ಹಾರ್ಡಿ ಮತ್ತು ಅವನ ಸ್ನೇಹಿತ ಮತ್ತು ಸಹೋದ್ಯೋಗಿ ಜಾನ್ ಲಿಟ್ಟಲ್ ವುಡ್, ರಾಮಾನುಜನ್ ಒಬ್ಬ ಮೇಧಾವಿ ಇರಬೇಕು, ಇಲ್ಲವೇ ಒಬ್ಬ ಕುಯುಕ್ತಿಯವನಿರಬೇಕೆಂದು ತೀರ್ಮಾನಿಸುತ್ತಾರೆ. ಆದರೆ ಮೇಲಿಂದ ಮೇಲೆ ರಾಮಾನುಜನ್ ಕಳಿಸಿದ ಮತ್ತಷ್ಟು ಗಣಿತದ ಸಮಸ್ಯೆಗಳನ್ನು ನೋಡಿದ ಹಾರ್ಡಿ (ಚಿತ್ರದಲ್ಲಿ-Jeremy Irons) ಅವನೊಬ್ಬ ಅಸಾಧಾರಣ ಪ್ರತಿಭೆಯ ಗಣಿತಜ್ಞನೇ ಇರಬೇಕೆಂದು, ಅವನಿಗೆ ಟ್ರಿನಿಟಿ ಕಾಲೇಜಿನ ವಿದ್ವತ್ ವೇತನವಿತ್ತು, ಅವನನ್ನು ಕೇಂಬ್ರಿಜ್ಜಿಗೆ ಬರಲು ಆಹ್ವಾನಿಸುತ್ತಾರೆ. ಅಂದು ಸಮುದ್ರ ದಾಟುವ ಪದ್ಧತಿ ಬ್ರಾಹ್ಮಣರಲ್ಲಿ ಇರಲಿಲ್ಲ. ಸಮುದ್ರ ದಾಟಿದವರನ್ನು ಸಮಾಜದಿಂದ ಬಹಿಷ್ಕಾರ ಹಾಕುತ್ತಿದ್ದ ಆ ಕಾಲದಲ್ಲಿ, ತಾಯಿ ಮತ್ತು ಕುಟುಂಬದವರನ್ನು ಕಷ್ಟಪಟ್ಟು ಮನವೊಲಿಸಿದ ರಾಮಾನುಜನ್, ತನ್ನ ಗಣಿತ ಪ್ರತಿಭೆಯನ್ನು ಪಶ್ಚಿಮ ದೇಶದಲ್ಲಿ ಬೆಳಗುವ ಮಹತ್ವಾಕಾಂಕ್ಷೆಯನ್ನು ಹೊತ್ತು, ಹಡಗನ್ನೇರಿ ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಹೆಸರಾಗಿದ್ದ, ಬ್ರಿಟಿಷ್ ದ್ವೀಪಗಳತ್ತ ಪ್ರಯಾಣ ಬೆಳಸುತ್ತಾರೆ.
ಅಂದಿನ ಸಮಯದಲ್ಲಿ ಪ್ರಪಂಚದ ಅತ್ಯುತ್ತಮ ಜ್ಞಾನಸಂಪಾದನೆಯ ಕೇಂದ್ರವೆನಿಸಿದ್ದ ಕೇಂಬ್ರಿಜ್ಜ್ ವಿಶ್ವವಿದ್ಯಾಲಯದ, ಟ್ರಿನಿಟಿ ಕಾಲೇಜನ್ನು ಪ್ರವೇಶಿಸುವ ರಾಮಾನುಜನ್, ಅಲ್ಲಿನ ಪ್ರವೇಶ ಪ್ರಾಂಗಣದಲ್ಲಿ ಇರಿಸಿದ್ದ ಸರ್ವಕಾಲಿಕ ಮೇಧಾವಿ ಸರ್ ಆಲ್ಬರ್ಟ್ ಐಸ್ಯಾಕ್ ನ್ಯೂಟನ್ ಪ್ರತಿಮೆಯನ್ನೇ ಆರಾಧನಾಭಾವದಿಂದ ನೋಡುತ್ತಾರೆ. ರಾಮಾನುಜನ್ ಈಗಾಗಲೇ ಕಳಿಸಿದ್ದ ಪ್ರಮೇಯಗಳು, ಸೂತ್ರಗಳನ್ನು ನೋಡಿದ್ದ ಹಾರ್ಡಿ, ಈ ಪ್ರಮೇಯಗಳಿಗೆ ಸಾಕ್ಷ್ಯಾಧಾರಗಳನ್ನು ಒದಗಿಸದಿದ್ದಲ್ಲಿ, ಅವನ್ನು ಇತರ ಗಣಿತಜ್ಞರು ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂದು ಪದೇ ಪದೇ ಒತ್ತಿ ಹೇಳುತ್ತಾರೆ. ಸ್ವಲ್ಪ ಅಹಂಕಾರದಿಂದಲೇ ರಾಮಾನುಜನ್, ಆ ಪ್ರಮೇಯಗಳೆಲ್ಲಾ ಸರಿಯಾಗಿವೆ, ತನ್ನ ಸಂಶೋಧನೆ ಪರಿಪೂರ್ಣ ಎನ್ನುವ ವಾದವನ್ನು ಪಟ್ಟುಹಿಡಿದು ಮುಂದಿಟ್ಟಾಗ, ಸಿಟ್ಟಿಗೇಳುವ ಹಾರ್ಡಿಯ ಹತಾಶೆಯ ಭಾವನೆಗಳನ್ನು ನಟ ಜೆರಮಿ ಐರನ್ಸ್ ಬಹಳ ಚೆನ್ನಾಗಿ ವ್ಯಕ್ತಪಡಿಸಿದ್ದಾನೆ. ತಾನು ಸಾವಿರಾರು ಮೈಲಿ ಪ್ರಯಾಣಿಸಿ, ಕೇಂಬ್ರಿಜ್ಜಿಗೆ ಬಂದಿರುವುದು ತನ್ನ ಕಾರ್ಯವನ್ನು ಪ್ರಕಟಿಸುವ ಸಲುವಾಗಿ ಎಂದು ತನ್ನ ವಾದವನ್ನು ಮುಂದುವರೆಸುವ ರಾಮಾನುಜನ್, ಮತ್ತು ಅದನ್ನು ವಿರೋಧಿಸುವ ಇತರ ಗಣಿತಜ್ಞರ ನಡುವಿನ ಕಲಹ ಮುಂದುವರೆದಾಗ, ಇದರ ಮಧ್ಯದಲ್ಲಿ ಸಿಲುಕುವ ಹಾರ್ಡಿ ಮತ್ತು ಲಿಟ್ಟಲ್ ವುಡ್ (ಚಿತ್ರದಲ್ಲಿ- Toby Jones) ಪರಿಸ್ಥಿತಿ ಪ್ರೇಕ್ಷಕರಲ್ಲಿ ಅನುಕಂಪವನ್ನುಂಟು ಮಾಡುತ್ತದೆ.
ರಾಮಾನುಜನ್ ಬಂದ ಕೆಲವೇ ತಿಂಗಳಲ್ಲಿ, ಮೊದಲ ಮಹಾಯುದ್ಧ ಪ್ರಾರಂಭವಾಗಿ, ಟ್ರಿನಿಟಿ ಕಾಲೇಜಿನ ಆವರಣವನ್ನು ತಾತ್ಕಾಲಿಕ ಸೈನಿಕ ಶಿಬಿರ ಮತ್ತು ಆಸ್ಪತ್ರೆಯಾಗಿ ಪರಿವರ್ತನೆಗೊಳ್ಳುತ್ತದೆ. ಮೊದಲೇ ಸಸ್ಯಾಹಾರಿಯಾದ ರಾಮಾನುಜನ್, ಅಲ್ಲಿ ಸರಿಯಾದ ಪೌಷ್ಟಿಕ ಆಹಾರವಿಲ್ಲದೆ ಪರದಾಡುತ್ತಿದ್ದಾಗ, ಯುದ್ಧದ ರೇಶನ್ ಸಮಸ್ಯೆಯೂ ಸೇರಿ, ಊಟವಿಲ್ಲದೇ ಕೇವಲ ಅನ್ನ ಮತ್ತು ನಿಂಬೆಹಣ್ಣಿನ ರಸವನ್ನು ತಿನ್ನುವ ದೃಶ್ಯ ಮನಕಲಕುತ್ತದೆ. ಪೌಷ್ಟಿಕತೆಯ ಕೊರತೆಯಿಂದಾಗಿ ದುರ್ಬಲಗೊಂಡ ರಾಮಾನುಜನ್, ಬಹುಬೇಗನೆ ಟಿ.ಬಿ ವ್ಯಾಧಿಗೆ ತುತ್ತಾಗುತ್ತಾರೆ. ರೋಗದ ಬಗ್ಗೆ ಯಾರಿಗೂ ಸುಳಿವು ಕೊಡದೆ, ಕಡೆಗೊಮ್ಮೆ ಹಾರ್ಡಿಯ ಒತ್ತಾಯದ ಮೇರೆಗೆ ತನ್ನ ಪ್ರಮೇಯಗಳಿಗೆ ಹಂತ ಹಂತವಾಗಿ ಸಾಕ್ಷ್ಯಾಧಾರಗಳನ್ನು ಒದಗಿಸುವ ಕಾರ್ಯವನ್ನು ರಾಮಾನುಜನ್ ಹಗಲೂ ರಾತ್ರಿಯೆನ್ನದೆ ಕುಳಿತು ನಡೆಸುತ್ತಾರೆ. ಅವರ ಈ ಸಂಶೋಧನೆಯನ್ನು ಕಂಡು ತೃಪ್ತಿಗೊಂಡ ಹಾರ್ಡಿ, ಅದನ್ನು ಪ್ರಕಟಿಸುವ ನಿರ್ಧಾರ ತಿಳಿಸಿದಾಗ, ಅವರಿಬ್ಬರ ಮಧ್ಯೆ ನಡೆಯುತ್ತಿದ್ದ ಶೀತಲ ಯುದ್ಧ ಮುಗಿದು ವಾತಾವರಣ ತಿಳಿಯಾಗುತ್ತದೆ. ಅವರ ನಡುವಿನ ಸಮರಕ್ಕೆ ಸಾಕ್ಷಿಯಾಗಿದ್ದ ಲಿಟ್ಟಲ್ ವುಡ್ ಮಹಾಯುದ್ಧದಲ್ಲಿ ಕ್ಷಿಪಣಿಗಳನ್ನು ಹಾರಿಸುವ ಕಾರ್ಯದ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಯುದ್ಧಭೂಮಿಗೆ ತೆರಳಿದಾಗ, ರಾಮಾನುಜನ್ ಅವರ ಒಡನಾಡಿತ್ವವೂ ಇಲ್ಲದೇ ಒಂಟಿಯಾಗುತ್ತಾರೆ.
ಅದೇ ವಿಭಾಗದಲ್ಲಿದ್ದ ಮೇಜರ್ ಮ್ಯಾಕಮಹಾನ್ ಎಂಬ ಮತ್ತೊಬ್ಬ ಗಣಿತಜ್ಞನು, Partitions ಎಂಬ ಸಮಸ್ಯೆಯನ್ನು ತಾನು ಅತ್ಯಂತ ಯಶಸ್ವಿಯಾಗಿ ಬಿಡಿಸಿದ್ದೇನೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಸಮಯದಲ್ಲಿ, ರಾಮಾನುಜನ್ ಅದನ್ನು ಅತ್ಯಂತ ಸರಳವಾಗಿ ಬಿಡಿಸುವ ಸೂತ್ರವೊಂದನ್ನು ಕಂಡುಹಿಡಿದ್ದಾನೆ ಎನ್ನುವ ವಿಷಯವನ್ನು ಹಾರ್ಡಿ ಆತನಿಗೆ ತಿಳಿಸುತ್ತಾನೆ. ಮ್ಯಾಕಮಹಾನ್ ಅದರಲ್ಲಿ ವಿಶ್ವಾಸ ತೋರದೆ ಇದ್ದಾಗ, ಒಂದು ನಿಗದಿ ಪಡಿಸಿದ ದಿನ ಮತ್ತು ಸಮಯದಂದು ಅವರಿಬ್ಬರೂ ಮುಖಾಮುಖಿ ತಾವು ನಡೆಸಿದ್ದ ಲೆಕ್ಕಾಚಾರಗಳನ್ನು ಹೋಲಿಸಿ ನೋಡಿದಾಗ, ಮ್ಯಾಕಮೋಹನ್ ಆ ಸಮಸ್ಯೆಯನ್ನು ಬಿಡಿಸಲು ಒಂದು ತಿಂಗಳ ಕಾಲ ಎಡಬಿಡದ ಪರಿಶ್ರಮ ನಡೆಸಿರುತ್ತಾನೆ, ಆದರೆ ರಾಮಾನುಜನ್ ತನ್ನ ಮೇಧಾವಿತನದಿಂದ ಕಂಡುಹಿಡಿದ ಕೇವಲ ಒಂದು ಸೂತ್ರದ ಸಹಾಯದಿಂದ, ಅದೇ ಸಮಸ್ಯೆಯನ್ನು ಅಲ್ಪಾವಧಿಯಲ್ಲಿ ಅತ್ಯಂತ ಪರಿಪೂರ್ಣವಾಗಿ ಬಿಡಿಸುವುದರಲ್ಲಿ ಯಶಸ್ವಿಯಾಗಿದ್ದರು. ಈ ಸನ್ನಿವೇಶವನ್ನು ನಿರ್ದೇಶಕ ಅತ್ಯಂತ ಚಾಕಚಕ್ಯತೆಯಿಂದ ಚಿತ್ರೀಕರಿಸಿ, ಕೇವಲ ಆ ಒಂದೇ ದೃಶ್ಯದಲ್ಲಿ ರಾಮಾನುಜನ್ ಅವರಿಗಿದ್ದ ಪ್ರತಿಭೆಯನ್ನು ಪ್ರೇಕ್ಷಕರಿಗೆ ತೋರಿಸುವುದರಲ್ಲಿ ಯಶಸ್ವಿಯಾಗಿದ್ದಾನೆ.
ಈ ಎಲ್ಲಾ ಸನ್ನಿವೇಶಗಳ ನಡುವೆ, ರಾಮಾನುಜನ್ ತನ್ನ ಕುಟುಂಬದವರಿಂದ, ಅದರಲ್ಲೂ ತಮ್ಮ ಪತ್ನಿಯಿಂದ ಯಾವ ಕಾಗದವೂ ಬರದಿದ್ದರಿಂದ ಬಹಳ ಖಿನ್ನರಾಗಿ, ಒಂದು ದುರ್ಬಲ ಘಳಿಗೆಯಲ್ಲಿ ಲಂಡನ್ನಿನಲ್ಲಿ ರೈಲಿನ ಕೆಳಗೆ ಬಿದ್ದು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ. ಪ್ರಕಟವಾಗದ ತಮ್ಮ ಗಣಿತದ ಫಲಿತಾಂಶ, ಕಾಡುತ್ತಿದ್ದ ಒಂಟಿತನ, ಸರಿಯಾಗಿ ಮಾತನಾಡಲು ಸಿಕ್ಕದ ಸ್ನೇಹಿತರು, ಅಪೌಷ್ಟಿಕ ಆಹಾರ ಹೀಗೆ ಹಲವು ಹತ್ತು ಸಮಸ್ಯೆಗಳಿಂದ ನರಳುವ ರಾಮಾನುಜನ್ ಸ್ಥಿತಿ ನಿಜಕ್ಕೂ ಮನಮಿಡಿಯುತ್ತದೆ. ಅವರಿಗೆ ಅಂಟಿದ್ದ ಟಿ.ಬಿ ರೋಗವು ದಿನದಿನಕ್ಕೆ ವಿಷಮಿಸಿದಾಗ, ಅವರ ಸ್ಥಿತಿಯನ್ನು ಕಂಡ ಹಾರ್ಡಿ, ಅವರ ಆರೋಗ್ಯ ಸರಿಯಿಲ್ಲವೆಂದು ತಿಳಿದಾಗ ಬಹಳ ವ್ಯಥೆಪಡುತ್ತಾರೆ. ಲಂಡನ್ನಿನ ಪಟ್ನಿಯಲ್ಲಿರುವ ಒಂದು ಸ್ಯಾನಿಟೋರಿಯಮ್ಮಿನಲ್ಲಿ ನರಳುತ್ತಾ ಮಲಗಿದ್ದ ರಾಮಾನುಜನ್ ಅವರನ್ನು ಹಾರ್ಡಿ ಭೇಟಿಯಾಗಲು ಹೋದಾಗ, ಅವರು ಕುಳಿತ ಟಾಕ್ಸಿಯ ನಂಬರ್ 1729 ಆಗಿರುತ್ತದೆ. ಅವರು ರಾಮಾನುಜನ್ ಜೊತೆ ಆ ನಂಬರ್ ಬಹಳ ಸಪ್ಪೆಯಾದ ಸಂಖ್ಯೆ ಎಂದಾಗ, ರಾಮಾನುಜನ್ ತನ್ನ ಖಾಯಿಲೆಯ ಸ್ಥಿತಿಯಲ್ಲೂ ಕೂಡಾ ಆ ಸಂಖ್ಯೆಯ ವೈಶಿಷ್ಟ್ಯತೆಯನ್ನು ವಿವರಿಸುತ್ತಾ, ಕ್ಷಣಾರ್ಧದಲ್ಲಿ ಆ ಸಂಖ್ಯೆ ಬಹಳ ಆಸಕ್ತಿಪೂರ್ಣವಾದ ಸಂಖ್ಯೆ ಎನ್ನುತ್ತಾ ಅದರ ಮಹತ್ವವನ್ನು ವಿವರಿಸುತ್ತಾ, “ಅದು ಎರಡು ರೀತಿಯಲ್ಲಿ, ಎರಡು ಘನಗಳ ಮೊತ್ತದಂತೆ ನಿರೂಪಿಸಬಹುದಾದ ಅತಿ ಚಿಕ್ಕ ಸಂಖ್ಯೆ” ಎಂದು ತಿಳಿಸಿದಾಗ, ಹಾರ್ಡಿ ಈ ಹಿಂದೆ ಲಿಟ್ಟಲ್ ವುಡ್ “ಪ್ರತಿಯೊಂದು ಧನಾತ್ಮಕ ಪೂರ್ಣಾಂಕವೂ, ರಾಮಾನುಜನನ ಸಂಗಾತಿಗಳು”, ಎಂದು ಹೇಳಿದ್ದ ಸಂಗತಿಯನ್ನು ಜ್ಞಾಪಿಸಿಕೊಳ್ಳುತ್ತಾರೆ. ಇಂದು ಆ ಸಂಖ್ಯೆಯನ್ನು ಹಾರ್ಡಿ-ರಾಮಾನುಜನ್ ನಂಬರ್ ೧೭೨೯ ಎಂದೇ ಕರೆಯಲಾಗುತ್ತದೆ. ಆ ಸನ್ನಿವೇಶವನ್ನು ಚಿತ್ರದಲ್ಲಿ ತೋರಿಸಿರುವ ಸಮಯ ಮತ್ತು ಸನ್ನಿವೇಶ ಸ್ವಲ್ಪ ಬೇರೆಯಿದ್ದರೂ, ರಾಮಾನುಜನ್ ಮೇಧಾವಿತನಕ್ಕೆ ಸಾಕ್ಷಿಯಾದ ಈ ಪ್ರಸಂಗ ಪ್ರೇಕ್ಷಕರನ್ನು ಬೆರಗಾಗಿಸುತ್ತದೆ.
ರಾಮಾನುಜನ್ ತನ್ನ ಸ್ಥಿತಿಯಲ್ಲಿ ಇನ್ನು ಹೆಚ್ಚು ದಿನ ತನಗೆ ಬದುಕುವ ಅವಕಾಶವಿಲ್ಲ ಎಂದು ತಿಳಿದು, ಹಾರ್ಡಿಯೊಡನೆ ತಾನು ಮರಳಿ ಮದ್ರಾಸಿಗೆ ಹೋಗುವುದಾಗಿ ತಿಳಿಸುತ್ತಾರೆ. ಮಹಾಯುದ್ಧ ಆಗತಾನೆ ಕೊನೆಗೊಂಡು ಯೂರೋಪಿನ ಜನ ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಹಾರ್ಡಿ ಹೇಗಾದರೂ ಮಾಡಿ ರಾಮಾನುಜನ್ ಮಾಡಿದ ಅಪ್ರತಿಮ ಕಾರ್ಯಕ್ಕೆ ದಕ್ಕಬೇಕಾದ ಗೌರವವನ್ನು ಅವನಿಗೆ ಕೊಡಿಸಲೇ ಬೇಕು ಎನ್ನುವ ದೃಢನಿರ್ಧಾರ ಮಾಡಿ, ಟ್ರಿನಿಟಿ ಕಾಲೇಜ್ ಮತ್ತು ರಾಯಲ್ ಸೊಸೈಟಿಯ ಫ಼ೆಲೋ ಎಂಬ ಗೌರವ ಸದಸ್ಯತ್ವಕ್ಕೆ ಅವನ ಹೆಸರನ್ನು ಸೂಚಿಸುತ್ತಾರೆ. ಆ ಎರಡೂ ಸಂಸ್ಥೆಗಳಲ್ಲಿದ್ದ ಅಧಿಕಾರಿಗಳು, ಅಂದಿನ ಸನ್ನಿವೇಶದಲ್ಲಿ ಯಾವುದೇ ರೀತಿಯ ವಿಶ್ವವಿದ್ಯಾಲಯದ ಪದವಿ ಸಂಪಾದಿಸಿಲ್ಲದ ರಾಮಾನುಜನ್ ಅವರಿಗೆ, ಈ ಗೌರವ ನೀಡಲು ಬಹಳ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಆದರೆ ಹಾರ್ಡಿಯೂ ತಾನು ಹಿಡಿದ ಪಟ್ಟನ್ನು ಬಿಡದೆ, ರಾಮಾನುಜನ್ ಪ್ರತಿಭೆಯನ್ನು, ಅವರ ಕಾರ್ಯಗಳನ್ನು ಸದಸ್ಯರ ಮುಂದಿಟ್ಟು, ಅದರ ಪರವಾಗಿ ಇನ್ನೂ ಹಲವು ಸದಸ್ಯರ ಬೆಂಬಲ ಪಡೆದು ಅಂತಿಮವಾಗಿ ಅವರಿಗೆ ಈ ಎರಡೂ ಸಂಸ್ಥೆಗಳ ಗೌರವ ಸದಸ್ಯತ್ವವನ್ನು ಕೊಡಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಹಾರ್ಡಿ, ರಾಮಾನುಜನ್ ಪರವಾಗಿ ಈ ಸಂಸ್ಥೆಗಳ ಎದಿರು ಮಾಡುವ ವಾದ ನಿಜಕ್ಕೂ ಪರಿಣಾಮಕಾರಿಯಾಗಿದೆ. ಜೆರಮಿ ಐರನ್ಸ್ ಈ ದೃಶ್ಯದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ರಾಮಾನುಜನ್ ಆರೋಗ್ಯ ಸ್ವಲ್ಪ ಉತ್ತಮಗೊಂಡು, ಅವರು ಕಾಲೇಜಿಗೆ ಮರಳಿದಾಗ ಟ್ರಿನಿಟಿ ಕಾಲೇಜಿನ ಸದಸ್ಯತ್ವ ಅವರಿಗೆ ನೀಡುವ ಸಂದರ್ಭವನ್ನು ತೋರಿಸಿದಾಗ, ಪ್ರೇಕ್ಷಕರ ಕಣ್ಣುಗಳು ಒದ್ದೆಯಾದರೆ ಯಾವ ಆಶ್ಚರ್ಯವೂ ಇಲ್ಲ. ಆ ಮಹಾನ್ ಪ್ರತಿಭೆಗೆ ಸಂದ ಗೌರವ, ಇಡೀ ಗಣಿತದ ಪ್ರಪಂಚಕ್ಕೆ ಸಂದ ಗೌರವ ಎನ್ನುವ ಭಾವನೆ ಹುಟ್ಟುವುದು.
ರಾಮಾನುಜನ್ ಮರಳಿ ಮದ್ರಾಸಿಗೆ ಬಂದ ಹಲವೇ ತಿಂಗಳುಗಳಲ್ಲೇ, ಅವರ ಸ್ಥಿತಿ ವಿಷಮಿಸಿ ಅವರು ತೀರಿಕೊಂಡ ಸುದ್ದಿ ಹಾರ್ಡಿಯನ್ನು ತಲುಪಿದಾಗ, ಹಾರ್ಡಿಯ ದುಃಖ ಉಕ್ಕಿ ಕಣ್ಣಿರಾಗಿ ಹರಿಯುತ್ತದೆ ಎನ್ನುವಲ್ಲಿಗೆ ಈ ಚಿತ್ರವನ್ನು ಅಂತ್ಯಗೊಳಿಸಲಾಗಿದೆ.
“ದೈವದ ಒಂದು ಚಿಂತನೆಯನ್ನು ಪ್ರತಿನಿಧಿಸದ ಯಾವುದೇ ಸಮೀಕರಣವೂ, ನನ್ನ ಹೃದಯವನ್ನು ತಟ್ಟುವುದಿಲ್ಲ,” ಎಂದು ಹೇಳುತ್ತಿದ್ದ ರಾಮಾನುಜನ್, ಒಬ್ಬ ಕಟ್ಟಾ ದೈವಭಕ್ತನಾಗಿದ್ದರು. ತಮ್ಮ ಕುಲದೇವತೆ ನಾಮಕಲ್ಲಿನ ದೇವಿ ತಮ್ಮ ಕನಸಿನಲ್ಲಿ ಬಂದು, ತಮ್ಮ ನಾಲಿಗೆಯ ಮೇಲೆ ಸೂತ್ರಗಳನ್ನು ಬರೆಯುತ್ತಾಳೆ ಎಂದು ಒಮ್ಮೆ ಅವರು ನೀಡಿದ್ದ ವಿವರಣೆಯನ್ನು, ನಾಸ್ತಿಕನಾಗಿದ್ದ ಹಾರ್ಡಿಗೆ ನಂಬಲು ಅಸಾಧ್ಯವಾಗಿತ್ತು. ಹೀಗೆ ಸಾಂಸ್ಕೃತಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಇತರ ಚಿಂತನೆಗಳಲ್ಲಿ ಅಪಾರವಾದ ಭಿನ್ನತೆಯನ್ನು ಹೊಂದಿದ್ದ ಈ ವ್ಯಕ್ತಿಗಳ ನಡುವೆ ಇದ್ದ ಬಾಂಧವ್ಯದ ಒಂದೇ ಒಂದು ಸಂಪರ್ಕ ಕೊಂಡಿ ಕೇವಲ ಗಣಿತವಾಗಿತ್ತು. ತಮ್ಮ ಜೀವನದಲ್ಲಿ ಕಂಡ “ಅತ್ಯಂತ ಪ್ರತಿಭಾಶಾಲಿ ಹಾಗೂ ಸೃಜನಶೀಲ ಗಣಿತಶಾಸ್ತ್ರಜ್ಞನೆಂದರೆ ರಾಮಾನುಜನ್”, ಎಂದಿದ್ದ ಹಾರ್ಡಿ, ತನ್ನ ಜೀವನದ ಅತ್ಯಂತ ಮಹತ್ವದ ಅನ್ವೇಷಣೆಯೂ ಆತನೇ ಎಂದಿದ್ದರು. ಇಂದು ಪ್ರಪಂಚದಲ್ಲಿ ರಾಮಾನುಜನ್ ಮತ್ತು ಆತನ ಗಣಿತೀಯ ಸಾಧನೆಗಳು ಗಳಿಸಿರುವ ಅತ್ಯುನ್ನತ ಸ್ಥಾನ ಮತ್ತು ಹೆಗ್ಗಳಿಕೆಗಳಿಗೆ ಕಾರಣಕರ್ತನೆಂದರೆ, ಗಾಡ್ಫ಼್ರೆ ಹೆರಾಲ್ಡ್ ಹಾರ್ಡಿ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ರಾಮಾನುಜನ್ ನಂತಹ ಒಂದು ಅಮೂಲ್ಯ ವಜ್ರವನ್ನು, ಗಣಿತ ಪ್ರಪಂಚದ ರತ್ನಹಾರಕ್ಕೆ ಸೇರಿಸಿದ ಕೀರ್ತಿ ಆತನಿಗೇ ಸಲ್ಲಬೇಕು.
ಈ ಚಲನಚಿತ್ರದಲ್ಲಿ ರಾಮಾನುಜನ್ ಮತ್ತು ಹಾರ್ಡಿಯ ನಡುವಣದ ಬಾಂಧವ್ಯವನ್ನು ಅತ್ಯಂತ ಸೂಕ್ಷ್ಮವಾಗಿ, ನವಿರಾಗಿ ಚಿತ್ರಿಸಲಾಗಿದೆ. ರಾಮಾನುಜನ್ ಪಾತ್ರದ ದೇವ್ ಪಟೇಲ್, ಹಾರ್ಡಿ ಪಾತ್ರದ ಜೆರಮಿ ಐರನ್ಸ್ ತಮ್ಮ ಅಭಿನಯದಲ್ಲಿ ಮಿಂಚಿದ್ದಾರೆ. ಲಿಟ್ಟಲ್ ವುಡ್ ಪಾತ್ರದಲ್ಲಿ ಅಭಿನಯಿಸಿರುವ ಟೋಬಿ ಜೋನ್ಸ್, ತಮಗೆ ಸಿಕ್ಕ ಅಲ್ಪ ಸಮಯದಲ್ಲೇ ತಮ್ಮ ಪ್ರತಿಭೆ ತೋರಿದ್ದಾರೆ ಎನ್ನಬಹುದು. ಗಣಿತದ ಬಗ್ಗೆ, ರಾಮಾನುಜನ್ ಬಗ್ಗೆ ಅಭಿಮಾನ ಉಳ್ಳ ಪ್ರೇಕ್ಷಕರು ಬಹಳ ನಿರೀಕ್ಷೆಗಳನ್ನು ಹೊತ್ತು ಈ ಚಿತ್ರ ನೋಡಲು ಹೋದರೆ, ಸಮಯ ಮತ್ತು ಹಣದ ಅಭಾವದಿಂದಾಗಿ, ಚಿತ್ರದಲ್ಲಿನ ಹಲವಾರು ನ್ಯೂನತೆ ಮತ್ತು ಕೊರತೆಗಳು ಅವರನ್ನು ನಿರಾಸೆಗೊಳಿಸಬಹುದು. ಆದರೂ ರಾಮಾನುಜನ್ ಕುರಿತಾಗಿ ನಿರ್ಮಿಸಿರುವ ಈ ಚಲನಚಿತ್ರ, ಒಂದು ಮೈಲುಗಲ್ಲೆಂದೇ ನನ್ನ ಅಭಿಪ್ರಾಯ.
ಇಂತಹ ಮಹಾನ್ ವ್ಯಕ್ತಿಯೊಬ್ಬನನ್ನು ಪ್ರಪಂಚಕ್ಕೆ ಕೊಡುಗೆ ಇತ್ತ ನಮ್ಮ ಭಾರತ ದೇಶದಲ್ಲಿ, ಅಲ್ಲಿನ ಚಲನಚಿತ್ರರಂಗ ಇದುವರೆಗೂ ಈತನ ಮೇಧಾವಿತನದ ಬಗ್ಗೆ ಒಂದು ಉತ್ತಮವಾದ ಸಿನಿಮಾ ಮಾಡಿಲ್ಲ. ೨೦೧೪ರಲ್ಲಿ ಬಿಡುಗಡೆಯಾದ ಒಂದು ತಮಿಳಿನ ಚಿತ್ರ ಭಾರತದಲ್ಲಿ (ಪ್ರಮುಖವಾಗಿ ತಮಿಳುನಾಡಿನಲ್ಲಿ) ಅಲ್ಪಸ್ವಲ್ಪ ಯಶಸ್ಸನ್ನು ಗಳಿಸಿದೆ. ಆದರೆ ರಾಷ್ಟ್ರ ಮಟ್ಟದಲ್ಲಿ, ಭಾರತೀಯರೆಲ್ಲರೂ ಹೆಮ್ಮೆ ಪಡಬಹುದಾದ ಚಿತ್ರವೊಂದನ್ನು ಇನ್ನೂ ನಿರ್ಮಿಸಿಲ್ಲ ಎನ್ನುವುದು ಬಹಳ ವಿಶಾದದ ಸಂಗತಿ. ನಮ್ಮ ರಾಷ್ಟ್ರ ಪಿತಾಮಹ “ಗಾಂಧಿಯ” ಬಗ್ಗೆ ಚಲನಚಿತ್ರ ನಿರ್ಮಿಸದೆ, ೧೯೮೩ರವರೆಗೆ ಸುಮ್ಮನಿದ್ದು, ಅದರ ಗೌರವ ಮತ್ತು ಹೆಗ್ಗಳಿಕೆಗಳು ಒಬ್ಬ ಬ್ರಿಟಿಷ್ ಚಿತ್ರ ನಿರ್ಮಾಪಕ, ನಿರ್ದೇಶಕನಾದ ಸರ್ ರಿಚರ್ಡ್ ಅಟೆನಬರೋ ಅವರಿಗೆ ಸಲ್ಲುವಂತೆ ಮಾಡಿದ ದೇಶ ನಮ್ಮದು.
ಗಾಂಧಿಯನ್ನೇ ಕಡೆಗಣಿಸಿದ ನಾವು, ರಾಮಾನುಜನ್ ಅವರನ್ನು ಮೂಲೆಗೊತ್ತಿದ್ದರೆ ಆಶ್ಚರ್ಯವೇನು!
A very heartbreaking movie indeed and Uma’s review covers many important aspects. I was particularly moved by a short, yet cleverly shot, scene. Ramanujan reaches Cambridge and enters his quarters to find a ream of paper kept on his desk. He holds the ream with both his hands and looks at it with a sense of revere, appreciation and respect, as though he has found a treasure of invaluable degree. It is not easy to fully understand Ramanujan’s feeling at this instant but I was reminded of my own experiences as a child where we had to write on a slate with chalk until about middle school (age 11), rarely had pen and paper and when we did it was rationed to write the most important things ever. When we finally had ಲೇಖಕ್ notebooks we had inexplicable joy of writing whatever we wanted to, but I remember we would not leave even the margins blank but fill the page end-to-end. Ramanujan’s passion for mathematics is simply mind boggling and incredibly inspirational, a hero for many Indian and international scientists and mathematicians.
LikeLiked by 3 people
aatmeeya Umaa nimma chitra vimarshey bahaLa channaagi moodi bandidey. naa innoo chitravannu noDillavaadaroo eega noDidare nanage adu sampoorNa arthavaaguttade ..kaaraNa nimma savivara vimarshey. videshadallina kannaDigarige nimma saraLa sulalita lekhanagaLu maraLugaaDinalli gangey sikkanteY!
LikeLiked by 2 people
ಧನ್ಯವಾದಗಳು ನಂದಾ. ನನ್ನ ಲೇಖನ ನಿಮ್ಮಂತಹ ಪಂಡಿತರ ಮನಮುಟ್ಟಿದರೆ, ಅದಕ್ಕಿಂತ ಹೆಚ್ಚಿನ ಅಭಿನಂದನೆ ನನಗೆ ಬೇಕಿಲ್ಲ. ನಿಮ್ಮ ಪ್ರೋತ್ಸಾಹ ನನ್ನಲ್ಲಿ ಮತ್ತಷ್ಟು ಉತ್ತಮ ಲೇಖನಗಳನ್ನು ಬರೆಯಲು ಹುರುಪು ನೀಡಿದೆ. ಈ ಚಲನಚಿತ್ರವನ್ನು ಖಂಡೀತಾ ನೋಡಿ ಬನ್ನಿ. ರಘುವಿಗೂ ಹೇಳಿ. ಗಣಿತಶಾಸ್ತ್ರದ ಪದವೀಧರನಾದ ಅವನು, ಈ ಚಿತ್ರವನ್ನು ಬಹಳವಾಗಿ ಮೆಚ್ಚಿಕೊಳ್ಳುವನು.
ಉಮಾ ವೆಂಕಟೇಶ್
LikeLiked by 1 person
ನಿಜಕ್ಕೂ ರಾಮಾನುಜಂ ಗಣಿತ ಶಾಸ್ತ್ರದ ಅಪರೂಪದ ರತ್ನ.ನಮ್ಮ ನೆಲದಲ್ಲಿ ಹುಟ್ಟಿರುವ ಎಷ್ಟೋಂದು ಮೇಧಾವಿಗಳು ಈ ದಾರಿದ್ರ್ಯದ ಕಬಂಧಬಾಹುಗಳಲ್ಲಿ ಸಿಲುಕಿ ಬೆಳಕಿಗೆ ಬಾರದೇ ಹೋಗಿವೆಯೋ ಏನೋ!!ಸರ್ಕಾರ ಅವರನ್ನ ಗುರುತಿಸಿ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ಉತ್ತಮ.ರಾಮಾನುಜಂ ಅವರ ಕಷ್ಟಕಾರ್ಪಣ್ಯಗಳ ಬಗ್ಗೆ ಓದಿದರೆ ಮನ ಭಾರವಾಗುತ್ತದೆ.ಮರಣಶಯ್ಯೆಯಲ್ಲಿಯೂಆತ ವಿಶ್ಲೇಷಿಸಿದ ಪೂರ್ಣಾಂಕದ ಪರಿ!!ಇಂಥ ಮೇಧಾವಿ ಭಾರತೀಯ ಇದು ನಮ್ಮ ಹೆಮ್ಮೆ.ಉಮಾ ಅವರ ಬರವಣಿಗೆಯ ಮುಂದೆ ಏನು ಬರೆದರೂ ಅದು ನೀರಸ ಹೃತ್ಪೂರ್ವಕ ಧನ್ಯವಾದಗಳು ,ಅಭಿನಂದನೆಗಳು ಉಮಾ ಅವರೇ.
ಸರೋಜಿನಿ ಪಡಸಲಗಿ
LikeLiked by 3 people
ಧನ್ಯವಾದಗಳು ಸರೋಜಿನಿ ಅವರೆ. ರಾಮಾನುಜನ್ ಅವರ ಜೀವನ ವೃತ್ತಾಂತದ ಸಂಪೂರ್ಣ ಮಾಹಿತಿ ನನಗೂ ತಿಳಿದಿರಲಿಲ್ಲ. ನಾನು ಈ ಲೇಖನದ ಪೀಠಿಕೆಯಲ್ಲಿ ನಾನು ಬರೆದಿರುವಂತೆ ಅವರ ಜೀವನದ ಚರಿತ್ರೆ ನಾಲ್ಕು ವರ್ಷಗಳ ಹಿಂದಷ್ಟೇ ತಿಳೀಯಿತು. ಅಂದಿನಿಂದ ನಾನು ಅವರ ಕಟ್ಟಾ ಅಭಿಮಾನಿಯಾಗಿದ್ದೇನೆ. ನನ್ನ ಲೇಖನ ಓದಿ ನಿಮ್ಮ ಮನದ ಮಾತುಗಳನ್ನು ನಮ್ಮ ಅನಿವಾಸಿ-ಜಾಲ ಜಗುಲಿಗೆ ಬರೆದಿದ್ದಕ್ಕೆ ಮತ್ತೊಮ್ಮೆ ನನ್ನ ಧನ್ಯವಾದಗಳು. ಸರೋಜಿನಿ ಅವರೆ ಈ ಪುಸ್ತಕದ ಕನ್ನಡ ಅನುವಾದ “ಅನಂತದ ಒಡನಾಟದಲ್ಲಿ“ ವನ್ನು ಖಂಡೀತಾ ಓದಿ. ನಿಮಗೆ ರಾಮಾನುಜನ್ ಮತ್ತು ಹಾರ್ಡಿ ಅವರ ಬಗ್ಗೆ ಮತ್ತಷ್ಟು ಕುತೂಹಲಕರ ವಿಷಯಗಳು ತಿಳಿಯುತ್ತವೆ.
ಉಮಾ ವೆಂಕಟೇಷ್
LikeLiked by 1 person
ಉಮಾ ಅವರೇ ತುಂಬಾ ಧನ್ಯವಾದಗಳು ನಾನು ಆ ಪುಸ್ತಕದ ಹುಡುಕಾಟ ಆರಂಭಿಸಿದ್ದೇನೆ ಖಂಡಿತಾ ಓದುತ್ತೇನೆ.ನಂತರ ನಿಮಗೆ ತಿಳಿಯಬಡಿಸುತ್ತೇನೆ.ನಿಮ್ಮ ಬರವಣಿಗೆ ಗೆ ಇನ್ನೊಮ್ಮೆ ಧನ್ಯವಾದಗಳು
ಸರೋಜಿನಿ
LikeLiked by 2 people
ಸರೋಜಿನಿ ಅವರೆ, ಅನಂತದ ಒಡನಾಟದಲ್ಲಿ ಪುಸ್ತಕದ ಅನುವಾದಕ ಲೇಖಕ ಡಾ ಸಿ.ಎಸ್. ಅರವಿಂದ ಅವರು. ಆತ ಬೆಂಗಳೂರಿನಲ್ಲಿ ಟಿ.ಐ.ಎಫ಼್.ಆರ್ ಸಂಸ್ಥೆಯಲ್ಲಿ ಗಣಿತದ ಪ್ರಾಧ್ಯಾಪಕರು. ಈ ಪುಸ್ತಕದ ಪ್ರಕಾಶಕರು ನ್ಯಾಶನಲ್ ಬುಕ್ ಟ್ರಸ್ಟ್ ಇಂಡಿಯಾ. ಈ ಪುಸ್ತಕದ ಬೆಲೆ ರೂ. ೪೮೦.೦೦. ಇದು ಬಹುಶಃ ಅಮೆಝಾನ್ ಅಂತರ್ಜಾಲಾ ತಾಣದಲ್ಲಿ ದೊರಕುತ್ತದೆ. ನಿಮಗೆ ಇನ್ನೂ ಮಾಹಿತಿ ಬೇಕಿದ್ದಲ್ಲಿ ತಿಳಿಸಿ.
ಉಮಾ ವೆಂಕಟೇಶ್
LikeLiked by 1 person
ಉಮಾ ಅವರೇ ಧನ್ಯವಾದಗಳು ನಾನು ಅಂತರ್ಜಾಲದಲ್ಲಿ search ಮಾಡಿ order ಮಾಡಿ ಆಯ್ತು ಇನ್ನೆರಡು ದಿನದಲ್ಲಿ ಬರಬಹುದು Thank you very much Uma
ಸರೋಜಿನಿ
LikeLiked by 1 person
ಶ್ರೀನಿವಾಸ ರಾಮಾನುಜಂ ನಮ್ಮ ಯುಗದ ಒಂದು ಅಧ್ಭುತ ವಿಸ್ಮಯ ಎಂಬುದರಲ್ಲಿ ಎರಡು ಮಾತಿಲ್ಲ. ಈ ಚಲನ ಚಿತ್ರ ಭಾರತೀಯ ವಿದ್ವತ್ ಪರಂಪರೆಯನ್ನು ಪರಿಚಯಿಸುವ ಒಂದು ಮೊದಲ ಪ್ರಯತ್ನ ಎಂದು ಹೇಳಬಹುದು.ರಾಮಾನುಜಂ ಅವರ ತಾಯಿಗೆ ಸ್ವಪ್ನದಲ್ಲಿ ಬಂದು ದೇವಿಯೊಬ್ಬಳು ಅಸಾಧಾರಣ ಪುತ್ರ ರತ್ನವನ್ನು ಅನುಗ್ರಹಿಸಿದ ಕಥೆಯೂ ದಾಖಲಾಗಿದೆ. ಇದು ಭಾರತೀಯರ ಹೆಮ್ಮೆಯ ಚೇತನ. ಕೀಳರಿಮೆಯನ್ನು ವ್ಯವಸ್ಥಿತವಾಗಿ ನಮ್ಮ ಪಠ್ಯಪುಸ್ತಕಗಳಲ್ಲಿ ತುಂಬುತ್ತಾ ಮಕ್ಕಳ ಮನಸ್ಸಿನಲ್ಲಿ ಭಾರತೀಯತೆಯ ಪರಂಪರೆಯ ಬಗ್ಗೆ ಅಸಡ್ಡೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿರುವ ಎಡ-ಕಾಂಗ್ರೆಸ್ಸ್-ಕಮ್ಯುನಿಷ್ಟ ದೊಂಬರಾಟ ಇನ್ನಾದರೂ ಸ್ವಲ್ಪ ನೇಪಥ್ಯಕ್ಕೆ ಸರಿಸುವಲ್ಲಿ ಈ ಚಲನ ಚಿತ್ರ ಯಶಸ್ವಿಯಾದರೆ ಒಂದು ಧನಾತ್ಮಕ ಬದಲಾವಣೆ ಬಂದಿತು. ಇದರ ಜತೆಗೇ ಇವತ್ತು ಭಾರತದಲ್ಲಿ ಜಾತಿಯಾಧಾರದಲ್ಲಿ ಸಿಗುವ ಸವಲತ್ತುಗಳು ಪ್ರತಿಭೆಯೊಂದನ್ನು ಹೇಗೆ ಮುರುಟಿಹಾಕಬಹುದು ಎಂಬ ಚಿಂತನೆಗೂ ಈ ಕಥೆ ಪ್ರೇರಣೆ ನೀಡಿದರೆ ಅದೂ ಒಂದು ಉತ್ತಮ ಸಾಧನೆಯಾದೀತು. ಬ್ರಾಹ್ಮಣರು ಅವತ್ತಿಗೂ ಇವತ್ತಿಗೂ ಬಹುತೇಕ ಸ್ಥಿತಿವಂತರಾಗಿಯೇ ಇರಲಿಲ್ಲ. ಆದಾಗ್ಯೂ ಇತ್ತೀಚೆಗೆ ಸನಾತನ ಧರ್ಮದ ನಾಶ ಮಾಡಲು ಹಾತೊರೆಯುತ್ತಿರುವ ಹಲವಾರು ಶಕ್ತಿಗಳು ಬ್ರಾಹ್ಮಣ ಪಂಗಡವನ್ನು ಇತರ ಹಿಂದೂ ಪಂಗಡಗಳಿಂದ ಪ್ರತ್ಯೇಕಿಸಲು ಆ ಮೂಲಕ ಧರ್ಮವನ್ನು ಹೊಸಕಿ ಹಾಕಲು ಹೆಚ್ಚು ಹೆಚ್ಚಾಗಿ ಪ್ರಯತ್ನಿಸುತ್ತಿರುವ ವಿದ್ಯಮಾನವನ್ನು ರಾಮಾನುಜಂ ಅವರ ಕಥೆಯ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು. ಬಡತನದಲ್ಲಿ ಬಳಲಿದ ರಾಮಾನುಜಂ ಅವರಂತೆ ಇದು ನನ್ನ ವೈಯಕ್ತಿಕ ಕಥೆಯೂ ಹೌದು. ಯಾರೋ ಒಬ್ಬ ಹೃದಯವಂತ ನನ್ನನ್ನು ಅವರ ತೆಕ್ಕೆಗೆ ತೆಗೆದುಕೊಂಡು ಪಾಠ ಮಾಡಿದ ಕಾರಣ ನಾನಿಂದು ಏನೋ ಆಗಲು ಸಾಧ್ಯವಾಯಿತು.
ರಾಮಾನುಜಂ ಅವರ ಬಗ್ಗೆ ತಿಳಿಯುವಾಗ ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರನ್ನು ನೆನೆಯಲೇ ಬೇಕು. ಇಂದು ರಾಮಾನುಜಂ ಅವರ ಹೆಸರು ಸ್ಥಾಯಿಯಾಗಿ ಉಳಿದಿದ್ದರೆ ಅದು ಈ ಹಿರಿಯ ವಿಜ್ಞಾನಿಯ ಅವಿರತ ಪ್ರಯತ್ನದಿಂದ ಮಾತ್ರವೇ. ಬಡತನದಲ್ಲಿ ಕಳೆದುಹೋಗಿದ್ದ ಅವರ ಪತ್ನಿಯನ್ನು ಸಂಪರ್ಕಿಸಿ ಅವರಿಗೆ ಒಂದು ನೆಲೆ ಕಲ್ಪಿಸಿದವರು ಸಹ ಎಸ್. ಚಂದ್ರಶೇಖರ್ ಅವರೇ.
ಕನ್ನಡದಲ್ಲಿ ರೋಹಿತ್ ಚಕ್ರತೀರ್ಥ ಅವರು ನವಕರ್ನಾಟಕ ಪುಸ್ತಕದ ವತಿಯಿಂಬ ಪ್ರಕಟಿಸಿರುವ ಒಂದು ಕಿರು ಹೊತ್ತಿಗೆ, ಜಿ.ಟಿ ನಾರಾಯಣ ರಾಯರು ಬರೆದಿರುವ ರಾಮಾನುಜಂ ಬಾಳಿದರಿಲ್ಲಿ, ಹಾಗೂ ಸುಬ್ರಮಣ್ಯಮ್ ಚಂದ್ರಶೇಖರ್ ಅವರ ಜೀವನ ವೃತ್ತಾಂತದಲ್ಲಿ ರಾಮಾನುಜಂ ಅವರ ಬಗ್ಗೆ ಬಹಳ ವಿಚಾರಗಳು ಕನ್ನಡದಲ್ಲಿ ಓದಲು ಸಿಗುತ್ತವೆ..
ಉಮಾ ಅವರು ಹೇಳಿದ ಇನ್ನೊಂದು ಪುಸ್ತಕ ನಾನು ಓದಿಲ್ಲ. ಸಿನೆಮಾ ಕೆನಡಾದಲ್ಲಿ ಇನ್ನೂ ಬಂದಿಲ್ಲ. ನೋಡಲು ಕಾತರದಿಂದ ಕಾಯುತ್ತಿದ್ದೇನೆ.
ಉಮಾ ಅವರು ಬರೆದಿರುವ ಹಲವಾರು ಲೇಖನಗಳಲ್ಲಿ ಇದು ತುಂಬ ಚೆನ್ನಾಗಿ ಮೂಡಿಬಂದಿದೆ. ಹಲವು ಪದಗಳಲ್ಲಿ ಚಿತ್ರವನ್ನು ಯಶಸ್ವಿಯಾಗಿ ಕಟ್ಟಿ-ಕೊಟ್ಟಿದ್ದಾರೆ. ಪೀಠಿಕೆ ಕೂಡಾ ಅತೀ ಸೂಕ್ತವಾಗಿ ಮೂಡಿಬಂದಿದೆ..
LikeLiked by 2 people
ನಮಸ್ಕಾರ ಸುದರ್ಶನ್. ರಾಮಾನುಜನ್ ಕಥೆ ಯಾವ ಹೃದಯವನ್ನೂ ತಟ್ಟದಿರಲು ಸಾಧ್ಯವೇ ಇಲ್ಲ. ಅಪರೂಪದ ಮೇಧಾವಿ. ನೀವು ಬರೆದಿರುವಂತೆ, ಖಭೌತಶಾಸ್ತ್ರಗ್ನ ಸುಬ್ರ್ಹಮಣ್ಯ ಚಂದ್ರಶೇಖರ್ ತಾವು ಕೇಂಬ್ರಿಜ್ಜಿನಲ್ಲಿದ್ದಾಗ, ಹಾರ್ಡಿ ಅವರನ್ನು ಭೇಟಿಯಾಗುತ್ತಾರೆ. ಹಾರ್ಡಿ ಅವರ ಅಭಿಲಾಷೆಯಂತೆ, ಅವರು ಬರೆಯುತ್ತಿದ್ದ “ Apologies of a Mathematician” ಪುಸ್ತಕಕ್ಕೆ ರಾಮಾನುಜನ್ ಅವರ ಭಾವಚಿತ್ರ ಬೇಕೆಂದು ಕೇಳಿಕೊಂಡಾಗ, ರಾಮಾನುಜನ್ ಅವರ ಪತ್ನಿಯನ್ನು ಹುಡುಕುತ್ತಾ ಮದ್ರಾಸಿನ ಟ್ರಿಪ್ಲಿಕೇನಿನ ಗಲ್ಲಿ ಮತ್ತು ರಸ್ತೆಗಳಲ್ಲಿ ಅಲೆದಾಡುತ್ತಾರೆ. ಅಲ್ಲಿ ತೀರಾ ಬಡತನದಲ್ಲಿ, ಬಟ್ಟೆಹೊಲೆದು ಜೀವನ ಮಾಡುತ್ತಿದ್ದ ರಾಮಾನುಜನ್ ಅವರ ಪತ್ನಿ ಜಾನಕಿಯನ್ನು ಭೇಟಿಯಾದಾಗ, ತನ್ನ ಜೀವನದಲ್ಲಿ ಕಂಡ ಅತ್ಯಂತ ಮೇಧಾವಿ ಗಣಿತಗ್ನ್ಯನ ಪತ್ನಿ ಇಂತಹ ಕಡುಬಡತನದಲ್ಲಿ ಇದ್ದದ್ದನ್ನು ಕಂಡು, ತಕ್ಷಣವೇ ಅಂದಿನ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ಅವರಿಗೆ ಪತ್ರ ಬರೆದು, ಆಕೆಯ ಪಿಂಚಣಿಯನ್ನು ಹೆಚ್ಚಿಸಬೇಕೆಂದು ಕೋರಿಕೊಳ್ಳುತ್ತಾರೆ. ಅವರ ಮೇಲೆ ಇದ್ದ ಗೌರವ ಅಭಿಮಾನದಿಂದ ನೆಹರು ಜಾನಕಿಯ ಪಿಂಚಣಿಯನ್ನು, ೫೦ ರೂಪಾಯಿಗಳಿಂದ, ೧೫೦ ರೂಗಳಿಗೆ ಹೆಚ್ಚಿಸುತ್ತಾರೆ. ಇದರ ಜೊತೆಗೆ ಚಂದ್ರ, ತಮ್ಮ ವತಿಯಿಂದ ಸ್ವತಃ ಧನ ಸಂಗ್ರಹಿಸಿ ಆಕೆಗೆ ನೀಡಿದರು ಎಂದು ಅವರ ಜೀವನಚರಿತ್ರೆಯಲ್ಲಿ ಪ್ರಕಟಿಸಲಾಗಿದೆ. ಚಂದ್ರಶೇಖರ್ ಅವರು ಬಾಲ್ಯದಿಂದಲೇ, ತಮ್ಮ ಆದರ್ಷ-ಪುರುಷರಾಗಿದ್ದ ರಾಮಾನುಜನ್ ಅವರ ಸಾಧನೆಗಳನ್ನು ಓದುತ್ತಾ ಕೇಳುತ್ತಾ ಬೆಳೆದು, ಮುಂದೆ ಅವರಂತೆಯೇ ತಮ್ಮ ಕ್ಷೇತ್ರದಲ್ಲೂ ಉನ್ನತ ಸಾಧನೆ ಗೈದು, ಟ್ರಿನಿಟಿ ಫ಼ೆಲೋ ಮತ್ತು ರಾಯಲ್ ಸೊಸೈಟಿಯ ಫ಼ೆಲೋ ಗೌರವಗಳನ್ನು ಮತ್ತು ಕೀರ್ತಿಯನ್ನು ಗಳಿಸಿದ್ದರು. ಈ ಎರಡು ಮಹಾವ್ಯಕ್ತಿಗಳೂ, ನಮ್ಮ ಭಾರತದ ಆಪರೂಪದ ಸಾಧಕರು.
ಉಮಾ ವೆಂಕಟೇಶ್
LikeLiked by 2 people
Uma,
My comment in Kannada is now lost. Sorry. Anyway. Thank you very much for the article, giving us readers not only a glimpse into the great mathematician’s biography but also pointing out how film makers within India approach such gems with ‘domesticated’ attitude. Although I don’t support marketisation of everything in life I do think promotion of such people needs a similar strategy by Indians at the global level.
LikeLiked by 1 person
ಖಭೌತಶಾಸ್ತ್ರ ರತ್ನದ ಮತ್ತೊಂದು ವಿಶಾದನೀಯ ಕಥೆ. ಮನಮಿಡಿಯುವ ಬರಹ.
LikeLiked by 1 person
G.T. Narayanarao has written a book ರಾಮಾನುಜಂ ಬಾಳಿದರಿಲ್ಲಿ. ತುಂಬು ಪ್ರೀತಿಯಿಂದ ವಿಶದವಾಗಿ ರಚಿಸಿದ ಪುಸ್ತಕ.
LikeLiked by 2 people
ಸುದರ್ಶನ್, ಜಿ.ಟಿ. ನಾರಾಯಯಣ ರಾವ್ ಅವರನ್ನು ೮೦ರ ಮಧ್ಯಭಾಗದಲ್ಲಿ ಮೈಸೂರಿನಲ್ಲಿ ಆಗಾಗ ಭೇಟಿಯಾಗಿದ್ದೇನೆ. ಆಗಿನ್ನೂ ಎಮ್.ಎಸ್.ಸಿ ಮುಗಿಸಿ ಕೆಲಸ ಹುಡುಕುವದರಲ್ಲಿ ಮಗ್ನಳಾಗಿದ್ದ ನನಗೆ, ನಾರಾಯಣ ರಾವ್ ಸಸ್ಯಶಾಸ್ತ್ರದ ವಿಷಯಗಳನ್ನು ಕನ್ನಡದಲ್ಲಿ ಬರೆದುಕೊಡುವಂತೆ ಕೇಳಿದ್ದರು. ಆಗ ಇನ್ನೂ ಹುಡುಗು ಬುದ್ಧಿ. ಜೊತೆಗೆ ಕೆಲಸ ಸಿಕ್ಕಿರಲಿಲ್ಲ ಎನ್ನುವ ಆತಂಕ. ಹಾಗಾಗಿ ಅವರ ಮನವಿ ನನ್ನ ಕಿವಿಗಳನ್ನು ತಲುಪಲಿಲ್ಲ. ಇಂದು ಅವರ ಮಾತನ್ನು ನೆನೆದು ನನ್ನನ್ನು ನಾನೇ ಶಪಿಸಿಕೊಂಡಿದ್ದೇನೆ. ಆಗಲೇ ಬರೆಯಲು ಪ್ರಾರಂಭಿಸಿದ್ದಲ್ಲಿ, ಇಷ್ಟು ಹೊತ್ತಿಗೆ ಇನ್ನಷ್ಟು ಒಳ್ಳೆಯ ವಿಜ್ನಾನದ ಲೇಖನಗಳನ್ನು ಕನ್ನಡದಲ್ಲಿ ಬರೆಯಬಹುದಿತ್ತಲ್ಲ! ಜಿ.ಟಿ. ನಾರಾಯಣ ರಾವ್ ವಿಜ್ನಾನವನ್ನು ಕನ್ನಡದಲ್ಲಿ ಅಧ್ಭುತವಾಗಿ ಬರೆಯಬಲ್ಲ ಲೇಖಕರಾಗಿದ್ದರು.
ಉಮಾ ವೆಂಕಟೇಶ್
LikeLiked by 1 person
Sorry, my comment was entered through my husband’s blog. My sincere apologies. Can you please remove his name and put in my name – please!
LikeLike
ಸಪ್ಪೆಯಲ್ಲದ ಅಂಕಿ ಮತ್ತು ವಿಮರ್ಶೆ!
ರಾಮಾನುಜಂ ಬಗ್ಗೆ ad infinitum (sic)ತಿಳಿದ, ಪುಟಗಟ್ಟಲೆ ಬರೆಯ ಬಲ್ಲ ಉಮಾ ಅವರು ಮೇಲೆ ಬರೆದ ಮೇಲೆ, ನನ್ನ ವಿಮರ್ಶೆ ಸಪ್ಪೆಯೇ. ಅದಕ್ಕೆಂದಲೇ ನನ್ನ ಚಿಕ್ಕ ಅನುಭವದ ಒಂದು ಮಾತನ್ನು ಹೇಳುವೆ.ಚಿಕ್ಕಂದಿನಲ್ಲಿ ಮಾಹಿತಿ ಜ್ಞಾನ, ಪಸರಿಸುವ ಟಿ.ವಿ, ಇಂಟರ್ನೆಟ್ ಇಲ್ಲದ ದಿನಗಳಲ್ಲಿ ನನ್ನ (ಮೇಧಾವಿ!) ಅಣ್ಣ ಈ ಪೂರ್ಣಾಂಕ 1729 ಬಗ್ಗೆ ಹೇಳಿದ್ದ. ಆಗಿನಿಂದಲೂ ನಮ್ಮ ದೇಶದ, ಈ ಮಹಾನ್ ಗಣಿತಜ್ಞನ ಬಗ್ಗೆ ಕುತೂಹಲ. ನಾವು ಸಹ ಹುಡಿಮಣ್ಣು, ಉಸುಕಿನ ಮೇಲೆ ಗಣಿತದ ಪ್ರಮೇಯಗಳನ್ನು ಬಿಡಿಸುತ್ತಿದ್ದುದು ನೆನಪಾಯಿತು. (ಆದರೆ no comparison!). ನಾನು ಇಲ್ಲಿಗೆ ಬಂದ ಮೇಲೊಂದು ದಿನ ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನ ಬದಿಯಲ್ಲಿ ಹಾಯ್ದು ಹೋದಾಗ ಒಂದು ತರದ ರೋಮಾಂಚನವೇ! ಈ ಚಲನ ಚಿತ್ರ ನನ್ನಲ್ಲಿ ವಿಧವಿಧವಾದ ಭಾವತರಂಗಗಳನ್ನೆಬ್ಬಿಸಿತು. ಹೆಮ್ಮೆ, ಅತೀವ ಆನಂದ, ಆತ ಪಟ್ಟ ಕಷ್ಟಕಾರ್ಪಣ್ಯ ನೋಡಿ ನೋವು, ಅಕಾಲ ಮೃತ್ಯುವಿನಿಂದಾದ ಗಣಿತಕ್ಕಾದ ನಷ್ಟ ಇವೆಲ್ಲವುಗಳನ್ನೂ ಮನದಟ್ಟವಾಗುವಂತೆ, ಮನಮುಟ್ಟುವಂತೆ ಮಾಡುವ ಈ ಚಿತ್ರವನ್ನು ಎಲ್ಲರೂ, ಅದೂ ಇಲ್ಲಿ ನೆಲೆಸಿರುವ ಅನಿವಾಸಿಗಳೆಲ್ಲರೂ ನೋಡಬೇಕಾದ ಚಲನ ಚಿತ್ರ. ದೇವ್ ಪಟೇಲ್ ಇದರ ನಾಯಕನಾದರೂ ಗಾಡ್ಫ್ರಿ ಹಾರ್ಡಿ ಪಾತ್ರ ವಹಿಸಿದ ಜೆರೆಮಿ ಅಯರ್ನ್ ಇದರ ಜೀವಾಳ. ರಾಮಾನುಜಂನ ತಾಯಿಯ ಪಾತ್ರದಲ್ಲಿ ಅರುಂಧತಿ ನಾಗ್ ಸಹ ಒಳ್ಳೆಯ ಅಭಿನಯವಿತ್ತಿದ್ದಾರೆ. ’ಸಮೀಕರಣದ ಚಕ್ರವರ್ತಿ’ಯ ಆ ಘಟನೆಯೊಂದಿಗೆ ಇದನ್ನು ಮುಗಿಸುವೆ: 1729 ರ ಗುಟ್ಟು?
1729 = 1(3) + 12(3) = 9(3) + 10(3)*
*(3) ಅಂದರೆ ಇಲ್ಲಿ ಘನ, ಅದೇ ಅಂಕಿಯನ್ನೇ ಮೂರು ಸಲ ಗುಣಿಸಿದರಾಗುವ ಗುಣಲಬ್ಧ!
LikeLiked by 1 person