“ಕೃಷ್ಣಾರೂಷ” – ನಂಬಿಕೆಯೇ ಜೀವನದ ಆಧಾರ

ಹಿಂದಿನ ಲೇಖನದಲ್ಲಿ “ದೇವರ ಅಸ್ತಿತ್ವ ಉಳಿದವರ ಕಣ್ಣಲ್ಲಿ” ಎನ್ನುವ ಬಗ್ಗೆ ಚರ್ಚಿಸಿದ್ದೆ, ಅವನನ್ನು ಹೇಗೆ ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆಂದು ನನ್ನ ವಿಚಾರಗಳನ್ನು ಹಂಚಿಕೊಂಡಿದ್ದೆ. ಈ ಬಾರಿ ಲೇಖನಕ್ಕೆ ಅದೇ ವಿಚಾರ ಮುಂದುವರಿಸುವ ಕುರಿತು ಯೋಚಿಸುತ್ತಿರುವಾಗ, ವಿವಿಡ್ಲಿಪಿ ಪ್ರಕಾಶನದ ಪುಸ್ತಕ “ಕೃಷ್ಣಾರೂಷ” ಬಗ್ಗೆ ವಿಚಾರ ಹಂಚಿಕೊಳ್ಳೋಣ ಅನಿಸಿತು. “ಕೃಷ್ಣಾರೂಷ” ಇಂಗ್ಲಿಷ್ನಲ್ಲಿ ಪ್ರಕಟವಾದ ಒಂದು ಪುಸ್ತಕ, ಅತ್ಯಂತ ಸರಳ ಭಾಷೆಯಲ್ಲಿ ಲೇಖಕರು ಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅನುಭವ ವಿವರಿಸುವಾಗ ಅದಕ್ಕೆ ತಕ್ಕದಾದ ಶ್ಲೋಕ, ಭಗವದ್ಗೀತೆ, ಶ್ರೀಮದ್ಭಾಗವತ ಇತ್ಯಾದಿ ಯಿಂದ ಆಯ್ದು ಆಯಾ ಭಾಗದಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕವನ್ನು ಸತ್ಯೇಶ್ ಬೆಳ್ಳೂರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಲೇಖಕರು ಡಿಂಪಲ್ ಅಗ್ರವಾಲ್, ಇವರು ಕೃಷ್ಣನ ಭಕ್ತರು. ಅವರು ತಮ್ಮ ಅನುಭವಗಳನ್ನು ಮತ್ತು ಕೃಷ್ಣನ ಲೀಲೆಗಳನ್ನು ಇದರಲ್ಲಿ ಬಣ್ಣಿಸಿದ್ದಾರೆ. ಅವರ ಪುಸ್ತಕ ನಮ್ಮ ಪ್ರಕಾಶನದ ಎಂಟನೆಯ ಪುಸ್ತಕ. ಇದು ಆಕಸ್ಮಿಕವೋ ಅಥವಾ ನಮಗೆ ಪ್ರಸಾದದ ರೂಪದಲ್ಲಿ ಬಂದಿದೆಯೋ ಗೊತ್ತಿಲ್ಲ.

ಕೆಲವು ದಿನಗಳ ಹಿಂದೆ ನಮ್ಮ ಪರಿಚಿತರೊಬ್ಬರೊಂದಿಗೆ ಮಾತನಾಡುವಾಗ ತಾವು ನಾಸ್ತಿಕರೆಂದು ತಿಳಿಸುತ್ತಾ ಅದಕ್ಕೆ ದೇವೆರೇ ಕಾರಣ ಎಂದರು. ವಿಚಾರಿಸಿದಾಗ ಗೊತ್ತಾಯಿತು ಅವರ ಪ್ರೀತಿಯ ವ್ಯಕ್ತಿ ಕೋವಿಡ್ ಇಂದ ಅಸ್ವಸ್ಥರಾದಾಗ ಇವರು ದೇವರಲ್ಲಿ ಬೇಡಿಕೊಂಡರೂ ಅವರು ಉಳಿಯಲಿಲ್ಲ. ಅವರವರ ಪರಿಸ್ಥಿತಿ ಅನುಗುಣವಾಗಿ ಜನರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ, ಯಾರೂ ತಪ್ಪಲ್ಲ. ಈ ಲೇಖನದಲ್ಲಿ ಹಂಚಿಕೊಂಡ ಪುಸ್ತಕದ ಮೂಲ ಲೇಖಕರು ಕ್ಯಾನ್ಸರ್ನಿಂದ ತಮ್ಮ ಜೀವನ ಅಸ್ತವ್ಯಸ್ತವಾದಾಗ ಕೃಷ್ಣನನ್ನೇ ತಮ್ಮ ಮಗನೆಂದು ಪ್ರೀತಿಸಿ, ಪೂಜಿಸಿ ಜೀವಿಸಿದರು. ಆಗ ಅವರಿಗೆ ಮಾನಸಿಕವಾಗಿ ದೊರೆತ ಆಸರೆ ಮುದ್ದು ಕೃಷ್ಣ. ಈ ಪುಸ್ತಕದ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಅರೋಷ್ ಎಂಬ ಪದದ ಅರ್ಥ ಸೂರ್ಯನ ಮೊದಲ ಕಿರಣ; ಅರೋಷ್ ಮತ್ತು ಕೃಷ್ಣ ನನ್ನಿಬ್ಬರು ಮಕ್ಕಳ ಹೆಸರುಗಳು. ಮೊದಲನೆಯವ ನನ್ನ ಕರುಳ ಬಳ್ಳಿ – ನನ್ನ ರಕ್ತ ಹಂಚಿಕೊಂಡು ಹುಟ್ಟಿದವ, ಎರಡನೆಯವನು ನನ್ನ ಭಾವಬಳ್ಳಿ – ನನ್ನ ಶ್ರದ್ದೆಯಿಂದ ಜನಿಸಿದ (ಇದು ಲೇಖಕರ ಮಾತು). ಇವರ ಜೀವನದ ಅನುಭಗಳು ಪ್ರಾರಂಭ ಆಗುವುದು ಅವರ ಭಿಲಾಯ್ ನಗರದಿಂದ, ಅವರ ತಂದೆ ಮತ್ತು ತಾಯಿ ವಿವರ ಹಾಗು ಮಧ್ಯಮ ವರ್ಗದ ಕುಟುಂಬದೊಂದಿಗೆ. ಇವರ ವಿವರಣೆಯಲ್ಲಿ ಕಂಡು ಬರುವ ಮುಖ್ಯ ವಿಷಯ ಹೇಗೆ ಸರಳ ಜೀವನದಲ್ಲಿ ಬೆಳೆದು ಬಂದದ್ದು, ಪ್ರೀತಿಯಿಂದ ಬೆಸೆದ ಕುಟುಂಬ ಮತ್ತು ಅವರ ಬಾಲ್ಯದಿಂದಲೇ ಭಕ್ತಿ ಜೀವನದ ಒಂದು ಅಂಗವಾಗಿದ್ದು. ಇಂತಹ ವಿವರಣೆ ಕೇಳಿದೊಡನೆ ನೆನಪಾಗುವುದು ಕೆಳಗಿನ ಸಾಲುಗಳು

ನಮ್ಮ ಸಂಸಾರ ಆನಂದ ಸಾಗರ,
ಪ್ರೀತಿಎಂಬ ದೈವವೇ ನಮಗಾಧಾರಾ,
ಆ ದೈವ ತಂದ ವರದಿಂದ,
ಬಾಳೇ ಬಂಗಾರಾ

ತಮ್ಮ ಜೀವನದ ವಿವರಗಳನ್ನು ಹಂಚಿಕೊಳ್ಳುತ್ತ ಲೇಖಕರು ಮದುವೆ ಮತ್ತು ನಂತರ ದಿನಗಳ ಬಗ್ಗೆ ತಿಳಿಸುತ್ತಾರೆ. ಮದುವೆ, ನಂತರ ಗಂಡನ ಮನೆಯ ವಿಷಯ, ಅತ್ತೆ ವಿಷಯ ಎಲ್ಲ ಸಂತೋಷದ ವಿವರ ಹಂಚಿಕೊಂಡು ಮಗನ ಹುಟ್ಟು, ಅರೋಷ್ ಆಗಮನ ಈ ಎಲ್ಲ ಸಂತೋಷದ ಘಳಿಗೆಯಲ್ಲಿ ಬರುವುದು ಆಘಾತವಾದ ವಿಷಯ “ಮಗನ ಕ್ಯಾನ್ಸರ್”. ಅರೋಷ್ಗೆ diffuse pontine glioma, ಒಂದು ಗಡ್ಡೆ ಅವನ ಮೆದುಳಿನಲ್ಲಿ ಇದೆ ಎಂಬುದು ತಿಳಿದು ಅವರ ಜೀವನ ಅಲ್ಲೋಲಕಲ್ಲೋಲವಾಗಿತ್ತು. ಪೂಜೆ, ಪುನಸ್ಕಾರ, ಹೋಮ, ದೇವಸ್ಥಾನ, ದರ್ಗಾ, ಆಯುರ್ವೇದ, ಹೋಮಿಯೋಪಥಿ… ಎಲ್ಲ ಪ್ರಯತ್ನ ನಡೆದರೂ ಕೊನೆಗೆ ಸೂರ್ಯನ ಮೊದಲ ಕಿರಣ ಕಾಣದಾಯಿತು, ಅರೋಷ್ ಅವರನ್ನು ಬಿಟ್ಟು ಹೋದನು. ೨೦೧೪ರಲ್ಲಿ ಬಿಡುಗಡೆಯಾದ “ಹರಿವು” ಚಿತ್ರ ಈ ಒಂದು ಜೀವನದ ತಿರುವಿನಲ್ಲಿ ಬರುವ ಕಠಿಣ ಪಯಣ ಮನ ಮುಟ್ಟುವಂತೆ ಚಿತ್ರಿಸುತ್ತದೆ, ಇದು ನಿಜ ಜೀವನದಲ್ಲಿ ನಡೆದ ಕಥೆಯಾಧಾರಿತ ಚಿತ್ರ. ಸಂಚಾರಿ ವಿಜಯ್ ತಂದೆಯ ಪಾತ್ರದಲ್ಲಿ ಮಾಡಿದ ನಟನೆ ಹೃದಯ ಹಿಂಡುವಂತಿದೆ. ತಾಯಿ ಪ್ರೀತಿಯಂತೆ, ತಂದೆಯ ಪ್ರೀತಿ ಮಗನಿಗೆ ಎಷ್ಟು ಆಳವಾಗಿ ಇರುತ್ತದೆ ಮತ್ತು ಮಗನಿಗಾಗಿ ತಂದೆ ಎಂತಹ ಸಾಹಸಕ್ಕೂ ಸಿದ್ದ ಎಂದು ಇದರಲ್ಲಿ ತೋರಿಸಿದ್ದಾರೆ, ನೋಡಿರದಿದ್ದರೆ ತಪ್ಪದೆ ನೋಡಿ. ಡಿಂಪಲ್ ದಂಪತಿಗಳು ತಮ್ಮ ಮಗ “ಅರೋಷ್” ನ ಕೊನೆಯ ದಿನಗಳ ವಿವರಣೆ ನೀಡುವಾಗ ನನ್ನ ಕಣ್ಣ ಮುಂದೆ ಹರಿವು ಚಿತ್ರ ನೋಡಿದಾಗ ಅದ ಮನ ಕಲುಕುವ ಅನುಭವ ಆಯಿತು. ಇಂತಹದೇ ಕಠಿಣ ಪರಿಸ್ಥಿತಿ ಬಂದಾಗ, ಡಿಂಪಲ್ ದಂಪತಿಗಳಿಗೆ ಬಂದ ಪ್ರಶ್ನೆ “ದೇವರು ಇಂತಹ ಕಠಿಣ ಪರೀಕ್ಷೆ ಯಾವ ಕಾರಣಕ್ಕೆ ಒಡ್ಡುತ್ತಾನೆ”.

ನಾಗರ ಹೊಳೆಯ ಚಿತ್ರ ಹಾಡಿನ ಸಾಲುಗಳು ನಿಜ ಎನಿಸುತ್ತದೆ

ಇಲ್ಲೇ ಸ್ವರ್ಗ, ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು..
ಹುಟ್ಟು ಸಾವು ಎರಡರ ಮಧ್ಯೆ..
ಮೂರು ದಿನದ ಬಾಳು

“ಅರೋಷ್” ಇಲ್ಲದ ಬರಿದಾದ ಜೀವನದಲ್ಲಿ ಕಷ್ಟದಿಂದ ಜೀವನ ಸವೆಸುತ್ತಿರುವಾಗ ಡಿಂಪಲ್ ದಂಪತಿಗಳಿಗೆ ಆಸರೆಯಾಗಿ ಸಿಕ್ಕಿದ್ದು ಭಗವದ್ಗೀತೆ, ಮತ್ತು ಮುದ್ದು ಕೃಷ್ಣ. ಅವರ ನೆರೆಮನೆಯ ಗೆಳತೀ ಶ್ವೇತಾ ಚತುರ್ವೇದಿ ಅವರು ಪರಿಚಯಿಸಿದ ಇಸ್ಕಾನ್ ಶಿಬಿರ ಅವರಿಗೆ ಹೊಸ ದಾರಿ ಒದಗಿಸಿತು.

ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ |
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ |
(ಭಗವದ್ಗೀತೆ ೪-೧೧)

ವಿವರ: ಯಾರು ತಮ್ಮನು ಯಾವ ರೀತಿಯಲ್ಲಿ ನನ್ನಲ್ಲಿ ಅರ್ಪಿಸಿಕೊಳ್ಳುತ್ತಾರೋ, ಅವರನ್ನು ಅದೇ ರೀತಿಯಲ್ಲಿ ಅನುಗ್ರಹಿಸುತ್ತೇನೆ.

ಭಕ್ತ ಕುಂಬಾರದ ಹಾಡು ಇಲ್ಲಿ ಸೂಕ್ತವೆನಿಸುತ್ತದೆ

ನಾನೂ ನೀನೂ ನೆಂಟರಯ್ಯಾ
ನಮಗೆ ಭೇದ ಇಲ್ಲವಯ್ಯಾ
ಮಾಧವ, ನಿನ್ನ ನಾಮಾಮೃತದ
ಸಾಧನೆ ಒಂದೇ ಸಾಕಯ್ಯ ತಂದೆ

“ಕೃಷ್ಣ ನಿನ್ನ ನಾಮಾಮೃತದ ಪ್ರೀತಿ ಒಂದೇ ಸಾಕಯ್ಯ ಮಗನೆ” ಎನ್ನುವ ಭಾವದಲ್ಲಿ ಡಿಂಪಲ್ ದಂಪತಿಗಳು ಕೃಷ್ಣನನ್ನು ತಮ್ಮ ಮಗನೆಂದು ಆರಾಧಿಸಲು ಆರಂಭಿಸಿದರು. ಕುಳಿತರೆ ಕೃಷ್ಣ, ನಿಂತರೆ ಕೃಷ್ಣ, ಉಂಡರೆ ಕೃಷ್ಣ ಅನ್ನುವ ತನಕ ಕೃಷ್ಣನನ್ನು ಮಗನೆಂದು ಪ್ರೀತಿಸಿದರು, ಪೂಜಿಸದರು. ಅವರಿಗೆ ಕೃಷ್ಣನೇ ಅರೋಷನಾದ, ಮತ್ತು ಅರೋಷ ಕೃಷ್ಣನಾದ. ಅವರ ಈ ಪ್ರೀತಿಗೆ ಅಕಸ್ಕಿವಾಗಿ ಅವರಿಗೆ ಜಗನಾಥಪುರಿಗೆ ಹೋಗುವ ಅವಕಾಶ ದೊರೆಯಿತು, ನಂತರ ಶ್ರೀಮದ್ಭಾಗವತ ಓದುವ ಅವಕಾಶ ದೊರಕಿತು. ತಮ್ಮ ಭಕ್ತಿ ಪಥದ ಅನುಭವಗಳನ್ನು ಮುಂದಿನ ಅಧ್ಯಾಯಗಳಲ್ಲಿ ಸುಂದರವಾಗಿ ವಿವರಿಸಿದ್ದಾರೆ.

ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ |
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ||
ಭವದ್ಗೀತೆ (೯ -೨೯)

ಭಗವಂತನಿಗೆ ಎಲ್ಲರೂ ಸಮಾನರು. ದೇವರಿಗೆ ಅಚ್ಚುಮೆಚ್ಚಿನವರು ಅಥವಾ ದ್ವೇಷಿಸಲ್ಪಡುವವರು ಯಾರೂ ಇಲ್ಲ. ಆದರೆ, ಯಾರು ನಿಷ್ಕಲ್ಮಷ ಭಕ್ತಿಯಿಂದ ಭಗವಂತನನ್ನು ಆರಾಧಿಸುತ್ತಾರೋ, ಭಗವಂತನು ಅಂತಹ ಭಕ್ತರ ಹೃದಯದಲ್ಲಿ ಇರುತ್ತಾನೆ.

ಅವರ ಪ್ರೀತಿ ಮತ್ತು ಭಕ್ತಿಗೆ ಮೆಚ್ಚಿ ಅವರಿಗೆ ಎರಡನೆಯ ಮಗು ಬರುವ ಸುದ್ದಿ ಅವರ ಜೀವನದ ಸಂತೋಷದ ಕ್ಷಣಗಳ ಆಗಮನವಾಯಿತು. ಅವರ ಜೀವನದಲ್ಲಿ ಒಂದರ ನಂತರ ಇನ್ನೊಂದು, ಹೀಗೆ ಎರಡು ಹೆಣ್ಣು ಮಕ್ಕಳ ಸೌಭಾಗ್ಯ ದೊರಕಿತು.

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ಅಂತೆಯೇ ಎರಡು ಮಕ್ಕಳ ಆಗಮನ ಡಿಂಪಲ್ ದಂಪತಿಗಳ ಜೀವನ ಬದಲಾಯಿಸಿತು. ಸಂತೋಷದ ಜೀವನ ಅನುಭವಿಸಿದರು ಆದರೂ ಅದು ಹೆಚ್ಚು ದಿನ ಉಳಿಯಲಿಲ್ಲ. ಜೀವನದ ಮತ್ತೊಂದು ತಿರುವು ಬಂದು, ಮೂಲ ಲೇಖಕರಾದ ಡಿಂಪಲ್ ಅವರಿಗೆ ಕ್ಯಾನ್ಸರ್ ಆಗಿ ಚೇತರಿಸಿಕೊಳ್ಳುತ್ತಿದ್ದಾರೆ.

ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವುದೇನೋ ದೇವ ಸಾಮಾನ್ಯವಲ್ಲಿದು
ಬ್ರಹ್ಮ ಬರೆದ ಬರಹ ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ

ಕೃಷ್ಣನ ಜೊತೆಗಿದ್ದರೂ ದ್ರೌಪದಿ ತನ್ನ ಪಾಲಿನ ಪಡೆದ ಸಂಕಷ್ಟಗಳನ್ನು ಅನುಭವಿಸಬೇಕಾಯಿತು, ಅಂತಹ ಸಂಕಟಗಳ ನಡೆವೆಯೂ ಕೃಷ್ಣನ ಸಾಂಗತ್ಯ ಅವಳಿಗೆ ಬಲದಂತೆ ಇತ್ತು. ಇಂತಹ ಸಾಂಗತ್ಯ ಇದೆ ಎಂಬ ನಂಬಿಕೆ ಎಂತಹ ಕಷ್ಟ ಕಾಲದಲ್ಲೂ ಪರಿಸ್ಥಿತಿ ಎದರಿಸಲು ಧೈರ್ಯ, ಸ್ಥೈರ್ಯ ಕೊಡುತ್ತದೆ. ಈ ನಂಬಿಕೆಯೇ ಜೀವನಕ್ಕೆ ರಕ್ಷಣೆ ನೀಡಿ, ಮಾರ್ಗದರ್ಶಿ ಆಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಕಷ್ಟ ಇದ್ದರೂ ಹೇಗೆ ಅದನ್ನು ಎದುರಿಸಿದರು ಎಂದು ಸಂಕ್ಷಿಪ್ತವಾಗಿ ಅವರ ಜೀವನಗಾಥೆ ವಿವರ ಇಲ್ಲಿ ಹಂಚಿಕೊಂಡಿದ್ದೇನೆ.

Leave a Reply

Your email address will not be published. Required fields are marked *